Thursday, January 3, 2019

ಇಂದಿನ ಇತಿಹಾಸ History Today ಜನವರಿ 03

ಇಂದಿನ ಇತಿಹಾಸ History Today ಜನವರಿ 03
2019: ತಿರುವನಂತಪುರಂ: ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಲು ಇಬ್ಬರು ಮಹಿಳೆಯರಿಗೆ ಸರ್ಕಾರ ನೆರವು ನೀಡಿದ್ದನ್ನು ವಿರೋಧಿಸಿ ಶಬರಿಮಲೈ ಕರ್ಮ ಸಮಿತಿ ನೀಡಿದ್ದರಾಜ್ಯವ್ಯಾಪಿ ಹರತಾಳವು ಕೇರಳದ ವಿವಿಧ ಕಡೆಗಳಲ್ಲಿ ಹಿಂಸೆಗೆ ತಿರುಗಿದ ಪರಿಣಾಮವಾಗಿ ೩೮ ಪೊಲೀಸರು ಸೇರಿದಂತೆ ೧೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಕರ್ನಾಟಕ ಮತ್ತು ಕೇರಳ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ೯೯ ಬಸ್ಸುಗಳು ಹಾನಿಗೊಂಡವು. ೨೬೬ ಜನರನ್ನು ಬಂಧಿಸಲಾಯಿತು. ಪಂದಳ ಸಿಪಿಎಂ ಕಚೇರಿಯ ಸಮೀಪ ಪ್ರತಿಭಟಿಸುತ್ತಿದ್ದ ಅಯ್ಯಪ್ಪ ಭಕ್ತ ೫೫ರ ಹರೆಯದ ಚಂದ್ರನ್ ಉನ್ನಿತ್ತನ್ ಕಲ್ಲೇಟಿನಿಂದ ತಲೆಗೆ ಗಾಯವಾಗಿ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದರು. ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಮಾಳವೀಯ ಅವರು ಸಾವಿಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ದೂಷಿಸಿದರುವಿವಿಧ ಹಿಂದುತ್ವ ಸಂಘಟನೆಗಳನ್ನು ಒಗ್ಗೂಡಿಸಿದ ಶಬರಿಮಲೈ ಕರ್ಮ ಸಮಿತಿ ನೀಡಿದ್ದ ೧೨ ಗಂಟೆಗಳ ಹರತಾಳ ಕರೆಯ ಮೇರೆಗೆ ಅಂಗಡಿ ಮುಚ್ಚಿಸಲು ಯತ್ನಿಸುತ್ತಿದ್ದ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ತ್ರಿಶ್ಯೂರಿನಲ್ಲಿ ಇರಿಯಲಾಯಿತು. ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ತೀರ್ಪಿನ ವಿರುದ್ಧದ ಪ್ರತಿಭಟನೆಗಳಿಗೆ ಅಂತಾರಾಷ್ಟ್ರೀಯ ಹಿಂದೂ ಪರಿಷದ್ (ಎಎಚ್ಪಿ) ಕೂಡಾ ಬೆಂಬಲ ವ್ಯಕ್ತ ಪಡಿಸಿತ್ತು. ಹಿಂಸಾಚಾರದ ವೇಳೆಯಲ್ಲಿ ನಾಡಬಾಂಬ್ ಎಸೆದ ಬಗೆಗೂ ವರದಿ ಬಂದಿತ್ತು ಸಂಜೆಯ ವೇಳೆಗೆ ಪಾಲಕ್ಕಾಡಿನಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ ಬಿಜೆಪಿ ಕಚೇರಿಯತ್ತ ನಡೆದ ಮೆರವಣಿಗೆ ವೇಳೆಯಲ್ಲಿ ಎರಡನೇ ಸುತ್ತಿನ ಹಿಂಸಾಚಾರ ನಡೆದಿದ್ದು, ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿದ್ದವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಭಾರತೀಯ ಜನತಾ ಪಕ್ಷವು ಹರತಾಳವನ್ನು ಬೆಂಬಲಿಸಿದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ಕರಾಳ ದಿನ ಆಚರಿಸಿತು. ಕೇರಳ, ಮಹಾತ್ಮ ಗಾಂಧಿ, ಕಲ್ಲಿಕೋಟೆ ಮತ್ತು ಕಣ್ಣೂರು ವಿಶ್ವ ವಿದ್ಯಾಲಯಗಳು ಪರೀಕ್ಷೆಗಳನ್ನು ಮುಂದೂಡಿದವು. ಬೆಟ್ಟದ ಮೇಲಿನ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಸುದೀರ್ಘ ಕಾಲದಿಂದ ಅನುಸರಿಸಲಾಗುತ್ತಿದ್ದ ಋತುಮತಿ ವಯೋಮಾನದ ಮಹಿಳೆಯರ ನಿಷೇಧವನ್ನು ಕಳೆದ ವರ್ಷ ಸೆಪ್ಟೆಂಬರ್ ೨೮ರಂದು ಸುಪ್ರೀಂಕೋರ್ಟ್ ರದ್ದು ಪಡಿಸಿದ ಬಳಿಕ ೧೦ರಿಂದ ೫೦ ವರ್ಷ ನಡುವಣ ವಯೋಮಾನದ ಮಹಿಳೆಯರಿಬ್ಬರು ಸ್ವರ್ಣ ಹೊದಿಕೆಯ ದೇಗುಲದಲ್ಲಿ ಬುಧವಾರ ಇದೇ ಮೊದಲ ಬಾರಿಗೆ ಅಡಿ ಇರಿಸಿದ್ದರು. ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಲು ದೇವಾಲಯ ನಿರಾಕರಿಸಿತ್ತು. ಬಳಿಕ ದೇವಾಲಯಕ್ಕೆ ಭೇಟಿ ನೀಡಲು ಯತ್ನಿಸಿದ ಮಹಿಳೆಯರನ್ನು ಸಹಸ್ರಾರು ಮಂದಿ ಉದ್ರಿಕ್ತ ಭಕ್ತರು ಮಾರ್ಗ ಮಧ್ಯದಲ್ಲೇ ಅಡ್ಡಗಟ್ಟಿದ್ದರು. ಪುರುಷರಂತೆ ಸಂಪೂರ್ಣ ಕರಿಯ ಉಡುಪು ಧರಿಸಿದ ಬಿಂಬು ಅಮ್ಮಣಿ ಮತ್ತು ಕನಕದುರ್ಗ ಹಿಂದಿನ ದಿನ ನಸುಕಿನಲ್ಲಿ ಮಫ್ತಿ ಪೊಲೀಸರ ಬೆಂಗಾವಲಿನಲ್ಲಿ ಪ್ರವೇಶ ದ್ವಾರದ ಸಮೀಪದಿಂದ ಭಕ್ತರು ಮತ್ತು ಗಾರ್ಡ್ಗಳ ಕಣ್ತಪ್ಪಿಸಿ ದೇಗುಲ ದೇವಾಲಯ ಪ್ರವೇಶಿಸಿದ್ದರು. ತತ್ ಕ್ಷಣವೇ ದೇವಳದ ಅರ್ಚಕರು ಶುಧ್ಧೀಕರಣ ವಿಧಿಗಳನ್ನು ಪೂರೈಸುವ ಸಲುವಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಿದ್ದರು. ಮಹಿಳೆಯರು ಪ್ರವೇಶಿಸಿದ ಸುದ್ದಿ ಹರಡುತ್ತಿದ್ದಂತೆಯೇ ರಾಜ್ಯದ್ಯಾಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಮುಖ್ಯಮಂತ್ರಿ ಪ್ರತಿಪಾದನೆ: ಪಟ್ಟಣಂತಿಟ್ಟದಲ್ಲಿ ಹಿಂದಿನ ದಿನ ಪ್ರತಿಭಟನೆ ಕಾಲದಲ್ಲಿ ಕಲ್ಲೇಟಿನಿಂದ ಗಾಯಗೊಂಡಿದ್ದ ೫೫ರ ಹರೆಯದ ಕರ್ಮ ಸಮಿತಿ ಕಾರ್ಯಕರ್ತ ಬಳಿಕ ಮೃತನಾಗಿದ್ದು, ಆತನ ಸಾವಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊಣೆ ಎಂದು ಬಿಜೆಪಿ ಹೇಳಿತು. ಆದರೆ ಆತನ ಸಾವು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಆಗಿದೆ ಎಂದು ಪಿಣರಾಯಿ ಪ್ರತಿಪಾದಿಸಿದರು. ಕಲ್ಲೆಸೆತದಲ್ಲಿ ಇತರ ಹಲವರೂ ಗಾಯಗೊಂಡಿದ್ದರು.
ಮಹಿಳೆಯರಿಬ್ಬರಿಗೂ ಶಬರಿಮಲೈ ದೇಗುಲ ಪ್ರವೇಶಕ್ಕೆ ನೆರವು ನೀಡಿದ ಕ್ರಮವನ್ನು ಸಮರ್ಥಿಸಿದ ವಿಜಯನ್, ಸಂಘ ಪರಿವಾರವು ರಾಜ್ಯದಲ್ಲಿ ಗಲಭೆಗೆ ಪ್ರಚೋದನೆ ನೀಡುತ್ತಿದೆ ಎಂದು ಆಪಾದಿಸಿದರು. ಮಹಿಳೆಯರಿಬ್ಬರಿಗೆ ನೆರವಾಗುವುದು ತಮ್ಮ ಸರ್ಕಾರದ ಸಾಂವಿಧಾನಿಕ ಬದ್ಧತೆಯಾಗಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮುಖ್ಯಮಂತ್ರಿಗಲಭೆಕೋರ ಜೊತೆಗೆ ಕಠಿಣವಾಗಿ ವರ್ತಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಂಘ ಪರಿವಾರವು ಸುಪ್ರೀಂಕೋರ್ಟ್ ತೀರ್ಪನ್ನೇ ಹಾಳುಗೆಡವಲು ಯತ್ನಿಸುತ್ತಿದೆ. ನೈಜ ಭಕ್ತರು ಯಾರೂ ತೀರ್ಪಿಗೆ ವಿರುದ್ಧವಾಗಿಲ್ಲ. ಕನಕದುರ್ಗ ಮತ್ತು ಬಿಂದು ಅವರಿಗೆ ಅವರು ದೇವಾಲಯ ಭೇಟಿಗಾಗಿ ಭದ್ರತೆ ಕೋರಿದ ಬಳಿಕ ಭದ್ರತೆ ಒದಗಿಸಲಾಯಿತು. ಅವರನ್ನು ಹೆಲಿಕಾಪ್ಟರಿನಲ್ಲಿ ತಂದು ಇಳಿಸಿಲ್ಲ, ಇತರ ಸಾಮಾನ್ಯ ಭಕ್ತರಂತೆಯೇ ಅವರೂ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಭಕ್ತರು ಯಾರೂ ಪ್ರತಿಭಟಿಸಿಲ್ಲ ಎಂದು ವಿಜಯನ್ ಹೇಳಿದರು.
ತಿರುವನಂತಪುರಂನಲ್ಲಿ ಗುರುವಾರ ಪ್ರತಿಭಟನೆಯ ವರದಿ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯೊಬ್ಬರು ಬಿಜೆಪಿ ಕಾರ್ಯಕರ್ತರ ಹಲ್ಲೆಗೆ ಗುರಿಯಾದರು. ಕೈರಾಲಿ ಟಿವಿಯ ಕ್ಯಾಮರಾವುಮನ್ ಶೈಲಜಾ ಅಲಿಫಾತಿಮ್ ಅವರ ಮೇಲೆ ನಡೆದ ಹಲ್ಲೆಯ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಫಾತಿಮ್ ಅವರು ತಾವು ಬಿಜೆಪಿಗೆ ಹೆದರುವುದಿಲ್ಲ, ಗಲಭೆಗಳ ವರದಿಗಾರಿಕೆ ಮುಂದುವರೆಸುವೆ ಎಂಬುದಾಗಿ ಸುದ್ದಿ ಚಾನೆಲ್ ಒಂದಕ್ಕೆ ತಿಳಿಸಿದರು. ತ್ರಿಶ್ಯೂರಿನಲಿ ಬಿಜೆಪಿ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಕಾರ್ಯಕರ್ತರ ನಡುವಣ ಘರ್ಷಣೆಯಲ್ಲಿ ೩೭ರ ಹರೆಯದ ವ್ಯಕ್ತಿಯೊಬ್ಬರಿಗೆ ಇರಿತದ ಗಾಯಗಳಾದವು. ಘಟನೆಯಲ್ಲಿ ಇತರ ಇಬ್ಬರೂ ಗಾಯಗೊಂಡರುತಿರುವನಂತಪುರಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಹನಕ್ಕೆ ಸಚಿವಾಲಯದ ಸಮೀಪದಲ್ಲಿ ಕರಿಪತಾಕೆ ತೋರಿಸಲು ಯತ್ನಿಸಿದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಯ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಗಾಯಗೊಂಡರು ಬೆಳಗ್ಗೆ ರಾಜ್ಯವ್ಯಾಪಿ ಹರತಾಳ ಆರಂಭವಾದ ಬಳಿಕ ತಿರುವನಂತಪುರಂ, ಕಲ್ಲಿಕೋಟೆ, ಮಲ್ಲಪ್ಪುರಂ ಮತ್ತು ಇತರ ಕಡೆಗಳಲ್ಲಿ ಹಿಂಸಾಚಾರಗಳು ನಡೆದ ವರದಿಗಳು ಬಂದವು. ಐವರು ಸಿಪಿಎಂ ನಾಯಕರ ಮೇಲೆ ಕೂಡಾ ದಾಳಿ ನಡೆದಿದ್ದು, ಮಂದಿ ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಮುಂಜಾಗರೂಕತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು. ಹರತಾಳದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ರಸ್ತೆಗೆ ಬಿಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ತ್ರಿಶ್ಯೂರಿನಲ್ಲಿ ಕೇರಳದ ಬಸ್ಸೊಂದರ ಮೇಲೆ ದಾಳಿ ನಡೆಯಿತು. ಶಬರಿಮಲೈ ವಿವಾದ ಆರಂಭವಾದ ಬಳಿಕ ಬಲಪಂಥೀಯ ಸಂಘಟನೆಗಳು ಕರೆ ನೀಡಿದ ೭ನೇ ಹರತಾಳ ಇದು. ಶಬರಿಮಲೈ ದೇವಳದಲ್ಲಿ ಮಹಿಳಾ ಪ್ರವೇಶದ ಬಳಿಕ ಶುದ್ಧೀಕರಣ ನಡೆಸಿದ್ದನ್ನು ಅಖಿಲ ಭಾರತ ಪ್ರಜಾತಾಂತ್ರಿಕ ಮಹಿಳಾ ಸಂಘವು ತೀವ್ರವಾಗಿ ಆಕ್ಷೇಪಿಸಿತು. ಕೇರಳದಲ್ಲಿ ಹರತಾಳ ಸಂಬಂಧಿ ಹಿಂಸಾಚಾರಕ್ಕಾಗಿ ಈವರೆಗೆ ೨೬೬ ಮಂದಿಯನ್ನು ಬಂಧಿಸಲಾಗಿದ್ದು, ೩೩೪ ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು. ಪ್ರಕರಣಗಳ ತನಿಖೆಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು ವಿಶೇಷ ಪೊಲೀಸ್ ದಳಗಳನ್ನು ರಚಿಸುವರು ಎಂದು ಸರ್ಕಾರಿ ಮೂಲಗಳು ಹೇಳಿದವು.

2019: ತಿರುವಂತಪುರಂ: ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ್ದನ್ನು ಪ್ರತಿಭಟಿಸಿ, ಹಿಂದೂ ಸಂಘಟನೆಗಳು ಕರೆ ನೀಡಿದ್ದ ೧೨ ಗಂಟೆಗಳ ಹರತಾಳ ಕಾಲದಲ್ಲಿ ಸಂಭವಿಸಿದ ವ್ಯಾಪಕ ಹಿಂಸಾಚಾರಗಳ ಬಗ್ಗೆತುರ್ತು ವರದಿ ಸಲ್ಲಿಸುವಂತೆ ರಾಜ್ಯಪಾಲ  ಪಿ. ಸದಾಶಿವಂ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ರಾತ್ರಿ ಸೂಚಿಸಿದರು. ರಾಜ್ಯಾದ್ಯಂತ ಶಾಂತಿ ಕಾಪಾಡುವಂತೆಯೂ ಅವರು ಸಮಾಜದ ಎಲ್ಲ ವರ್ಗಗಳಿಗೆ ಮನವಿ ಮಾಡಿದರು. ಇದೇ ವೇಳೆಗೆ ಕೇರಳದ ನಾಯರ್ ಸೇವಾ ಸಮಾಜವು ಶಬರಿಮಲೈ ದೇಗುಲದ ಪರಂಪರೆ ರಕ್ಷಣೆಗಾಗಿ ಸುಗ್ರೀವಾಜ್ಞೆ ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಆಗ್ರಹಿಸಿತು. ಹಾಲಿ ಸನ್ನಿವೇಶದಲ್ಲಿ ಇದೊಂದೇ ದಾರಿ ಎಂದು ಅವರು ಹೇಳಿದರು.
2019: ನವದೆಹಲಿ: ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ತೀರ್ಪಿನಲ್ಲಿ ಋತುಮತಿ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಶಬರಿಮಲೈ ದೇವಾಲಯ ಪ್ರವೇಶಿಸಿದ ಬಳಿಕ ದೇಗುಲದ ಗರ್ಭಗುಡಿಯ ಬಾಗಿಲನ್ನು ಮುಚ್ಚಿದ ತಂತ್ರಿ (ಮುಖ್ಯ ಅರ್ಚಕ) ವಿರುದ್ಧನಿರಂತರ ನ್ಯಾಯಾಲಯ ನಿಂದನೆ ಮಾಡುತ್ತಿದ್ದಾರೆಂದು ಆಪಾದಿಸಿ ಸಲ್ಲಿಸಲಾದ ನ್ಯಾಯಾಲಯ ನಿಂದನೆ ಅರ್ಜಿಯನ್ನು ತುರ್ತಾಗಿ ಆಲಿಸಲು ಸುಪ್ರೀಂಕೋರ್ಟ್ ನಿರಾಕರಿಸಿತು. ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ರಂಜನ್ ಗೊಗೋಯಿ ಅವರ ಪೀಠದ ಮುಂದೆ ಅರ್ಜಿಯ ವಿಚಾರವನ್ನು ಪ್ರಸ್ತಾಪಿಸಿದ ವಕೀಲ ಪಿ.ವಿ. ದಿನೇಶ್ ಅವರು ತಂತ್ರಿ ಕಂಡಾರರು ರಾಜೀವರು ಅವರು ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ ಬಳಿಕ ಶುದ್ಧೀಕರಣ ವಿಧಿಗಳನ್ನು ಪೂರೈಸುವ ಸಲುವಾಗಿ ಗರ್ಭಗುಡಿಯ ಬಾಗಿಲುಗಳನ್ನು ಮುಚ್ಚಿದರು ಎಂದು ಹೇಳಿದರು
ನವೆಂಬರ್ ೧೬ರಂದು ತಮ್ಮ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಲಯ ನಿಂದನೆ ಅರ್ಜಿಯು ಸುಪ್ರೀಂಕೋರ್ಟಿನಲ್ಲಿ ಇನ್ನೂ ಬಾಕಿ ಇರುವಾಗಲೇ ತಂತ್ರಿಯವರು ಕೃತ್ಯ ಎಸಗಿದ್ದಾರೆ ಎಂದು ದಿನೇಶ್ ನುಡಿದರು. ಶಬರಿಮಲೈ ವಿಚಾರವಾಗಿ ವಿಚಾರಣೆಗೆ ನಾವು ಜನವರಿ ೨೨ರ ದಿನಾಂಕವನ್ನು ನಿಗದಿ ಪಡಿಸಿದ್ದೇವೆ. ಅದಕ್ಕೆ ಅನುಗುಣವಾಗಿ ನಮ್ಮ ಕಾರ್ಯಸೂಚಿಗಳನ್ನು ನಾವು ಸಿದ್ಧ ಪಡಿಸಿಕೊಂಡಿದ್ದೇವೆ. ಇಂತಹ ಆಲಿಕೆಗಳಿಗಾಗಿ ನಮ್ಮ ಕಾರ್ಯಸೂಚಿಯನ್ನು ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ಸಿಜೆಐ ಗೊಗೋಯಿ ಅವರು ವಕೀಲರಿಗೆ ಹೇಳಿದರುಸಂವಿಧಾನ ಪೀಠವು ನೀಡಿದ ಸೆಪ್ಟೆಂಬರ್ ೨೮ರ ತೀರ್ಪಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ೪೯ ಪುನರ್ ಪರಿಶೀಲನಾ ಅರ್ಜಿಗಳ ಬಹಿರಂಗ ವಿಚಾರಣೆಗೆ ಜನವರಿ ೨೨ರ ದಿನಾಂಕವನ್ನು ಸಿಜೆಐ ನೇತೃತ್ವದ ಪಂಚ ಸದಸ್ಯ ಪೀಠವು ಹಿಂದೆಯೇ ನಿಗದಿ ಪಡಿಸಿತ್ತು. ಮಹಿಳೆಯೊಬ್ಬರು ಕಂಡಾರರು ರಾಜೀವರು ವಿರುದ್ಧ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಲು ಅಟಾರ್ನಿ ಜನರಲ್ ಅವರ ಅನುಮತಿ ಕೋರಿದ್ದಾರೆ. ಮಹಿಳೆಯು ಅರ್ಜಿಯು ಅಟಾರ್ನಿ ಜನರಲ್ ಅವರ ಪರಿಗಣನೆಗಾಗಿ ಬಾಕಿ ಉಳಿದಿತ್ತು. ಸುಪ್ರೀಂಕೋರ್ಟ್ ನ್ಯಾಯಾಲಯ ನಿಂದನೆಗೆ ಸಂಬಂಧಿಸಿದ ೧೯೭೫ರ ನಿಯಮಾವಳಿಗಳ ಪ್ರಕಾರ ಸುಪ್ರೀಂಕೋರ್ಟಿನಲ್ಲಿ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಲು ಅಟಾರ್ನಿ ಜನರಲ್ ಅವರು ಒಪ್ಪಿಗೆ ನೀಡಬೇಕಾಗುತ್ತದೆ೪೯ ಪುನರ್ ಪರಿಶೀಲನಾ ಅರ್ಜಿಗಳನ್ನು ಮುಕ್ತ ವಿಚಾರಣೆಗಾಗಿ ಅಂಗೀಕರಿಸಿದ ಸುಪ್ರೀಂಕೋರ್ಟಿನ ಪಂಚ ಸದಸ್ಯ ಪುನರ್ ಪರಿಶೀಲನಾ ಪೀಠವು ಸೆಪ್ಟೆಂಬರ್ ೨೮ರಂದು ನೀಡಿದ್ದ ಬಹುಮತದ ತೀರ್ಪಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಮಹಿಳೆಯರ ಋತುಮತಿ ವಿಚಾರವನ್ನು ಆಧರಿಸಿ, ಮಹಿಳೆಯರನ್ನು ದೇವಾಲಯ ಪ್ರವೇಶಿಸದಂತೆ ನಿಷೇಧಿಸುವುದು ವ್ಯಕ್ತಿಯ ಘನತೆ ಮೇಲಿನ ಕಳಂಕವಾಗುತ್ತದೆ ಎಂದು ಸುಪ್ರೀಂಕೋರ್ಟಿನ ಬಹುಮತದ ತೀರ್ಪು ಘೋಷಿಸಿತ್ತು. ಬಹುಮತದ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟಿನ ಪುನರ್ ಪರಿಶೀಲನಾ ಪೀಠ ನಿರಾಕರಿಸಿದ್ದರಿಂದ ಪುರುಷ ಹಾಗೂ ೧೦ರಿಂದ ೫೦ ವರ್ಷಗಳ ನಡುವಣ ಮಹಿಳಾ ಭಕ್ತರೂ ಶಬರಿಮಲೈಗೆ ಯಾತ್ರೆ ತೆರಳಲು ಅವಕಾಶ ಸಿಕ್ಕಿದಂತಾಗಿದೆ. ಹೀಗಾಗಿ ಹಲವಾರು ಮಹಿಳೆಯರು ದೇವಾಲಯ ಪ್ರಯತ್ನಕ್ಕೆ ಯತ್ನ ನಡೆಸಿದರು. ಆದರೆ ಭಕ್ತರು ಮತ್ತು ಬಲಪಂಥೀಯ ಸಂಘಟನೆಗಳ ಪ್ರತಿಭಟನೆಯ ಪರಿಣಾಮವಾಗಿ ಯಾವ ಮಹಿಳೆಗೂ ದೇವಾಲಯ ಪ್ರವೇಶ ಸಾಧ್ಯವಾಗಿರಲಿಲ್ಲತೀರ್ಪು ನೀಡಿದ್ದ ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, ಡಿ.ವೈ. ಚಂದ್ರಚೂಡ್ ಮತ್ತು .ಎಂ. ಖಾನ್ವಿಲ್ಕರ್ ಮೂವರೂ ಪುನರ್ ಪರಿಶೀಲನಾ ಪೀಠದ ಸದಸ್ಯರಾಗಿರುವುದರ ಹೊರತಾಗಿಯೂ ಬಹುಮತದ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಪ್ರತ್ಯೇಕ ಅಭಿಪ್ರಾಯದಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧವನ್ನು ಈಗ ರದ್ದು ಪಡಿಸಲಾಗಿರುವ ಅಸ್ಪೃಶ್ಯತೆಯ ಆಚರಣೆಗೆ ಹೋಲಿಸಿದ್ದರು. ಭಿನ್ನಮತದ ತೀರ್ಪು: ಪಂಚ ಸದಸ್ಯ ಪುನರ್ ಪರಿಶೀಲನಾ ಪೀಠದ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರು ಮಾತ್ರವೇ ಸೆಪ್ಟೆಂಬರ್ ೨೮ರ ಭಿನ್ನ ಅಭಿಪ್ರಾಯದ ತೀರ್ಪಿನಲ್ಲಿ ಮಹಿಳಾ ನಿಷೇಧಅಗತ್ಯ ಆಚರಣೆ ಎಂದು ಹೇಳಿದ್ದರು. ಧರ್ಮದ ಮೇಲೆ ನ್ಯಾಯಾಲಯದ ನೈತಿಕತೆಯನ್ನು ಹೇರುವುದರಿಂದ ಒಬ್ಬ ವ್ಯಕ್ತಿಯ ಮತ ನಂಬಿಕೆಗಳಿಗೆ ಅನುಗುಣವಾಗಿ ಧರ್ಮ ಆಚರಿಸುವ ಸ್ವಾತಂತ್ರ್ಯವನ್ನು ನಿರಾಕರಿಸಿದಂತಾಗುತ್ತದೆ ಎಂದು ಅವರು ಹೇಳಿದ್ದರು. ಪುನರ್ ಪರಿಶೀಲನಾ ಅರ್ಜಿಗಳೆಲ್ಲವೂ ಬಹುತೇಕ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರು ಅಭಿಪ್ರಾಯದ ಸುತ್ತವೇ ಸುತ್ತಿದ್ದವು. ದೇವಾಲಯದ ತಂತ್ರಿಯಿಂದ ಹಿಡಿದು, ವ್ಯಕ್ತಿಗಳು ಮತ್ತು ಅಯ್ಯಪ್ಪ ಸಂಘಟನೆಗಳು, ಮಹಿಳಾ ಭಕ್ತರ ಸಂಘಟನೆಗಳು ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಗಳುಸುಧಾರಣೆ ಎಂದರೆ ಶಬರಿಮಲೈ ದೇವರನ್ನೇ ನಂಬದ ಮೂರನೇ ಕಕ್ಷಿದಾರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ಆಧಾರದಲ್ಲಿ ಧಾರ್ಮಿಕ ಆಚರಣೆಗಳ ಅಸ್ತಿತ್ವವನ್ನೇ ಅಳಿಸಿಹಾಕುವುದಲ್ಲ ಎಂದು ಪ್ರತಿಪಾದಿಸಿದ್ದವು. ನಡುವೆ ತಲೆಹಾಕುವಅಧಿಕ ಪ್ರಸಂಗಿಗಳಿಗೆ ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನ್ಯಾಯಾಲಯಗಳು ಅವಕಾಶ ನೀಡಬಾರದು ಎಂಬುದಾಗಿ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರು ನೀಡಿರುವ ಅಭಿಪ್ರಾಯವು ಪುನರ್ ಪರಿಶೀಲನಾ ಅರ್ಜಿಗಳಲ್ಲಿನ ಸಾಮಾನ್ಯ ಎಳೆಯಾಗಿತ್ತು. ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಸುಪ್ರೀಂಕೋರ್ಟಿಗೆ ಹೋಗುವ ಹಕ್ಕನ್ನು, ಯಾರ ವೈಯಕ್ತಿಕ ಪ್ರಾರ್ಥನೆಯ ಹಕ್ಕು ಉಲ್ಲಂಘನೆಯಾಗುತ್ತದೋ ಅಂತಹವರಿಗೆ ಮಾತ್ರವೇ ಮೀಸಲಿಡಬೇಕು ಎಂದು ಪುನರ್ ಪರಿಶೀಲನಾ ಅರ್ಜಿದಾರರು ವಾದಿಸಿದ್ದರು. ಮೂರನೇ ವ್ಯಕ್ತಿಗಳು ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸಿ ಸಲ್ಲಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪುರಸ್ಕರಿಸುವುದರಿಂದ ಆಹ್ವಾನಿಸಿಕೊಳ್ಳಬಹುದಾದ ಗಂಡಾಂತರವು ಧಾರ್ಮಿಕ ಅಲ್ಪಸಂಖ್ಯಾತರಿಗೆ ಇನ್ನಷ್ಟು ಅಪಾಯಕಾರಿಯಾಗಬಲ್ಲುದು ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

2019: ನವದೆಹಲಿ:ಸ್ವಾಮೀ ಟ್ರಂಪ್ ಮಹಾಶಯರೇ, ಲೈಬ್ರೆರಿ ಅಷ್ಟೇ ಅಲ್ಲ, ಶಿಕ್ಷಣ, ರಸ್ತೆ, ಅಭಿವೃದ್ಧಿ ನೆರವಿನ ಮೂಲಕ ಸಮರಗ್ರಸ್ತ ಆಫ್ಘಾನಿಸ್ಥಾನದ  ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದೇವೆ ಎಂಬುದಾಗಿ ಭಾರತವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಧಾನಿ ಮೋದಿ ಲೇವಡಿಗೆ ಕಠೋರ ಉತ್ತರ ನೀಡಿತು. ಅಮೆರಿಕದ ಅಧ್ಯಕ್ಷರು ಆಫ್ಘಾನಿಸ್ಥಾನದಲ್ಲಿ ಗ್ರಂಥಾಲಯಕ್ಕಾಗಿ (ಲೈಬ್ರರಿ) ಹಣಕಾಸು ನೆರವು ನೀಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೇವಡಿ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರತ ಪ್ರಬಲ ಎದಿರೇಟು ನೀಡಿತು. ಭಾರತವು ಗ್ರಂಥಾಲಯಕ್ಕಾಗಿ ನೆರವು ನೀಡುವುದನ್ನು ಪ್ರಸ್ತಾಪಿಸಿದ ಟ್ರಂಪ್ಯಾರು ಅದನ್ನು (ಲೈಬ್ರೆರಿಯನ್ನು) ಬಳಸುತ್ತಿದ್ದಾರೆ?’ ಎಂದು ಪ್ರಶ್ನಿಸಿದ್ದರು. ಭಾರತವು ಆಫ್ಘಾನಿಸ್ಥಾನದಲ್ಲಿ ಹಲವಾರು ಬೃಹತ್ ಮೂಲಸವಲತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಜೊತೆಗೇ ಹಲವಾರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಲ್ಲಿನ ಜನರ ಅಗತ್ಯಗಳಿಗೆ ತಕ್ಕಂತೆ ಜಾರಿಗೊಳಿಸುತ್ತಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದರು.  ’ಭಾರತದ ಇಂತಹ ನೆರವುಗಳು ರಾಷ್ಟ್ರವನ್ನು ದೀರ್ಘಾವಧಿಯಲಿ ಆರ್ಥಿಕವಾಗಿ ಸಬಲಗೊಳಿಸಿ ಸುಸ್ಥಿರ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಪ್ರತಿಪಾದಿಸಿದರು. ಆಫ್ಘಾನಿಸ್ಥಾನದಲ್ಲಿ  ’ಗ್ರಂಥಾಲಯಕ್ಕೆ  ನೆರವು ನೀಡುತ್ತಿದ್ದೇವೆ ಎಂಬುದಾಗಿ ಪ್ರಧಾನಿ ಮೋದಿ ಅವರು ನೀಡಿದ ಹೇಳಿಕೆಯನ್ನು ಲೇವಡಿ ಮಾಡಿದ ಟ್ರಂಪ್ಸಮರಗ್ರಸ್ತ ರಾಷ್ಟ್ರಕ್ಕೆ ಇದರಿಂದ ಯಾವ ಉಪಯೋಗವೂ ಇಲ್ಲ ಎಂದು ಹೇಳಿ, ಭಾರತ ಮತ್ತು ಇತರ ರಾಷ್ಟ್ರಗಳು ರಾಷ್ಟ್ರದ ಭದ್ರತೆಗಾಗಿ ಏನೂ ಮಾಡುತಿಲ್ಲ ಎಂದು ಟೀಕಿಸಿದ್ದರು. ಹಿಂದಿನ ದಿನ ಹೊಸ ವರ್ಷದ ದಿನ ನಡೆಸಿದ ತಮ್ಮ ಚೊಚ್ಚಲ ಸಂಪುಟ ಸಭೆಯಲ್ಲಿ ಟ್ರಂಪ್ ಅವರು ಭಾರತ, ರಷ್ಯ, ಪಾಕಿಸ್ತನ ಮತ್ತು ಇತರ ನೆರೆಯ ರಾಷ್ಟ್ರಗಳಿಗೆ ಆಫ್ಘಾನಿಸ್ಥಾನದ ಭದ್ರತೆಯ ಹೊಣೆ ಹೊತ್ತುಕೊಳ್ಳುವಂತೆ ಆಗ್ರಹಿಸಿ, ಸಾಗರದಾಚೆಗಿನ ಅಮೆರಿಕದ ಹೂಡಿಕೆಗಳನ್ನು ಕಡಿತಗೊಳಿಸುವ ತಮ್ಮ ಯತ್ನವನ್ನು ಸಮರ್ಥಿಸಿದರು. ಅಮೆರಿಕ ವೆಚ್ಚ ಮಾಡುತ್ತಿರುವ ಶತಕೋಟಿ ಡಾಲರುಗಳ ನೆರವಿನ ಸನಿಹಕ್ಕೂ ಬಾರದ ರಾಷ್ಟ್ರಗಳ ಜಾಗತಿಕ ನಾಯಕರು ಹೇಗೆ ತಮ್ಮ ಕೊಡುಗೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ವಿವರಿಸಲು ಮೋದಿ ಅವರನ್ನು ಟ್ರಂಪ್ ಉಲ್ಲೇಖಿಸಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಕೂಡಾ ಭಾರತವು ಆಫ್ಘಾನಿಸ್ಥಾನದಲ್ಲಿ ಭಾರತವು ಅಗಾಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದೆ, ಇದಕ್ಕೆ ಸಮರಗ್ರಸ್ತ ರಾಷ್ಟ್ದ ಜನತೆ ನಮಗೆ ಧನ್ಯವಾದ ಹೇಳುತ್ತಿದ್ದಾರೆ, ಇತರರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ ಎಂದು ಟ್ರಂಪ್ ಟೀಕಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರುಮೋದಿ ಅವರ ಜೊತೆಗಿದ್ದಾಗ ಅವರು ನಿರಂತರವಾಗಿ ತಮಗೆ ಆಫ್ಘಾನಿಸ್ಥಾನದಲ್ಲಿ ತಾವು ಹೇಗೆ ಲೈಬ್ರೆರಿ ನಿರ್ಮಿಸುತ್ತಿರುವುದಾಗಿ ನಿರಂತರವಾಗಿ ಹೇಳುತ್ತಿದ್ದರು. ಇದು ಏನು ಎಂಬುದು ನಿಮಗೆ ಗೊತ್ತೆ? ಇದು ನಾವು ಐದು ಗಂಟೆಗಳನ್ನು ಕಳೆಯುವ ಸ್ಥಳ ಎಂದು ನುಡಿದ ಟ್ರಂಪ್, ’ಇದಕ್ಕಾಗಿ ನಾವು . ಲೈಬ್ರೆರಿಗಾಗಿ ಧನ್ಯವಾದಗಳು ಎಂಬುದಾಗಿ ಹೇಳಬೇಕಿತ್ತು ಎಂದು ಹೇಳಿದ್ದರು.  ’ಇದನ್ನು ಆಫ್ಘಾನಿಸ್ಥಾನದಲ್ಲಿ ಯಾರು ಬಳಸುತ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ಟ್ರಂಪ್ ಲೇವಡಿ ಮಾಡಿದ್ದರುಟ್ರಂಪ್ ಲೇವಡಿಗೆ ಪ್ರತಿಕ್ರಿಯಿಸಿದ ರಾಮ್ ಮಾಧವ್ ಅವರುಆಫ್ಘಾನಿಸ್ಥಾನಕ್ಕೆ ಮಾಡುತ್ತಿರುವ ನೆರವನ್ನು ಟೀಕಿಸುವ ಮುನ್ನ, ಭಾರತವು ಅಲ್ಲಿ ಲೈಬ್ರೆರಿಗಳನ್ನಷ್ಟೇ ಅಲ್ಲ, ರಸ್ತೆಗಳು, ಅಣೆಕಟ್ಟುಗಳು, ಶಾಲೆಗಳು ಮತ್ತು ಸಂಸತ್ ಕಟ್ಟಡವನ್ನು ಕೂಡಾ ನಿರ್ಮಿಸುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕಿತ್ತು. ನಾವು ಬದುಕು ಕಟ್ಟಿಕೊಡುತ್ತಿದ್ದೇವೆ. ಅದಕ್ಕಾಗಿ ಆಫ್ಘನ್ನರು ನಮಗೆ ಧನ್ಯವಾದ ಹೇಳುತ್ತಿದ್ದಾರೆ, ಇತರರು ಏನು ಹೇಳುತ್ತಾರೆ ಅಥವಾ ಹೇಳುವುದಿಲ್ಲ ಎಂಬುದು ವಿಷಯವಲ್ಲ ಎಂದು ಟ್ವೀಟ್ ಮಾಡಿದರು. ಆಫ್ಘಾನಿಸ್ಥಾನದಲ್ಲಿನ ಭಾರತದ ಬಹುತೇಕ ಹೂಡಿಕೆಗಳು ಮೂಲಸವಲತ್ತು ಯೋಜನೆಗಳಿಗೆ ಸಂಬಂಧಿಸಿದ ಮಹಾ ಯೋಜನೆಗಳು. ಇವುಗಳಲ್ಲಿ ಝರಾಂಜ್ ನಿಂದ ಡೆಲಾರಂವರೆಗಿನ ೨೧೮ ಕಿಮೀ ರಸ್ತೆ, ಸಲ್ಮಾ ಅಣೆಕಟ್ಟು ಮತ್ತು ಆಫ್ಘಾನಿಸ್ಥಾನದ ಹೊಸ ಸಂಸತ್ ಕಟ್ಟಡ ಕೂಡಾ ಸೇರಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು. ಭಾರತವು ಆಫ್ಘಾನಿಸ್ಥಾನಕ್ಕೆ ಸೇನಾ ಸಲಕರಣೆಗಳ ಜೊತೆಗೆ ನೂರಾರು ಭದ್ರತಾ ಸಿಬ್ಬಂದಿಗೆ ತರಬೇತಿಯನ್ನೂ ನೀಡುತ್ತಿದೆ. ಭಾರತವು ಅಭಿವೃದ್ಧಿಯ ಪಾಲುದಾರನಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ಆಫ್ಘನ್ ಸರ್ಕಾರದ ಅಗತ್ಯಗಳಿಗೆ ಅನುಗುಣವಾದ ಕೆಲಸಗಳಲ್ಲಿ ಪಾಲುದಾರಿಕೆ ನೀಡುತ್ತಿದೆ ಎಂದು ಮೂಲಗಳು  ಹೇಳಿದವು. ಭಾರತವು ಆಫ್ಘನ್ ರಾಷ್ಟ್ರೀಯರ ಮತ್ತು ಅದರ ಸಂಸ್ಥೆಗಳ ಸಾರ್ವಜನಿಕ ಸೇವಾ ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಿದೆ ಮತ್ತು ಬದುಕು ಮತ್ತು ಜೀವನೋಪಾಯಕ್ಕಾಗಿ ಸಾಮಾಜಿಕ ಆರ್ಥಿಕ ಮೂಲಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ನೆರವಾಗಲು ಬಯಸಿದೆ ಎಂದು ಮೂಲ ಹೇಳಿತುಬೃಹತ್ ಮೂಲಸವಲತ್ತು ಯೋಜನೆಗಳಲ್ಲದೆ, ೧೧೬ ಅತ್ಯಂತ ಪರಿಣಾಕಾರಿಯಾದ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಆಫ್ಘಾನಿಸ್ಥಾನದ ೩೧ ಪ್ರಾಂತಗಳಲ್ಲಿ ಭಾರತ ಅನುಷ್ಠಾನಗೊಳಿಸುತ್ತಿದೆ. ಇವುಗಳಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಕುಡಿಯುವ ನೀರು, ನವೀಕರಿಸಲಾಗುವ ಇಂಧನ, ಪ್ರವಾಹ ನಿಯಂತ್ರಣ, ಕಿರು ಜಲ ವಿದ್ಯುತ್, ಕ್ರೀಡಾ ಮೂಲ ಸವಲತ್ತು, ಆಡಳಿತಾತ್ಮಕ ಮೂಲಸವಲತ್ತು ಕ್ಷೇತ್ರಗಳೂ ಸೇರಿವೆ ಎಂದು ಮೂಲಗಳು ತಿಳಿಸಿದವು.

2019: ನವದೆಹಲಿ: ಭಾರತವು ೨೦೧೬ರಲ್ಲಿ ನೋಟು ಅಮಾನ್ಯೀಕರಣ ಕಾಲದಲ್ಲಿ ಚಾಲ್ತಿಗೆ ತಂದ ೨೦೦೦
ರೂಪಾಯಿಗಳ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂದು ಉನ್ನತ ಸರ್ಕಾರಿ ಮೂಲಗಳು ತನಗೆ ತಿಳಿಸಿರುವುದಾಗಿದಿ ಪ್ರಿಂಟ್ ವರದಿ ಮಾಡಿತು. ೨೦೦೦ ರೂಪಾಯಿ ಕರೆನ್ಸಿಯ ಪ್ರಸಾರವನ್ನು ಕ್ರಮೇಣ ತಗ್ಗಿಸುವ ಸಲುವಾಗಿ ಸರ್ಕಾರ ಕ್ರಮ ಕೈಗೊಂಡಿತು. 2೦೦೦ ರೂಪಾಯಿ ನೋಟುಗಳ ಮುದ್ರಣ ಸ್ಥಗಿತದಿಂದ ಚಾಲ್ತಿಯಲ್ಲಿರುವ ನೋಟುಗಳು ಅಮಾನ್ಯವಾಗಿವೆ ಎಂದು ಅರ್ಥವಲ್ಲ. ಅವುಗಳ ಮಾನ್ಯತೆ ಮುಂದುವರೆದಿದೆ. ಆದರೆ ಕ್ರಮೇಣವಾಗಿ ನೋಟುಗಳು ಮಾರುಕಟ್ಟೆಯಿಂದ ಕಣ್ಮರೆಯಾಗುವ ಸಾಧ್ಯತೆ ಇದೆಕಾಳಧನ ಸಂಗ್ರಹ, ಹಣ ವರ್ಗಾವಣೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉನ್ನತ ಮೌಲ್ಯದ ನೋಟುಗಳನ್ನು ಬಳಸಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ಹೇಳಿದವು. ನೋಟು ಮುದ್ರಣ ಸ್ಥಗಿತ ಬಗ್ಗೆ ಮಿಂಚಂಚೆ ಮೂಲಕ ಕೇಳಲಾದ ಸ್ಪಷ್ಟನೆಗೆ ಭಾರತದ ಕೇಂದ್ರೀಯ ಬ್ಯಾಂಕ್ ಹಾಗೂ ಕರೆನ್ಸಿ ವಿತರಣಾ ಸಂಸ್ಥೆಯಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಉತ್ತರ ನೀಡಿಲ್ಲ. ಅದು ಸ್ಪಂದಿಸಿದಾಗ ವರದಿಯನ್ನು ಪರಿಷ್ಕರಿಸಲಾಗುವುದು ಎಂದುದಿ ಪ್ರಿಂಟ್ ವರದಿ ತಿಳಿಸಿತು. ಕಾಳಸಂತೆ, ಕಪ್ಪು ಹಣ ನಿಗ್ರಹಕ್ಕಾಗಿ ಸರ್ಕಾರವು ೨೦೧೬ರಲ್ಲಿ ೧೦೦೦ ರೂಪಾಯಿ ಮತ್ತು ೫೦೦ ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣಗೊಳಿಸಿತ್ತು. ಬಳಿಕ ನವೆಂಬರ್ ತಿಂಗಳಲ್ಲಿ ೨೦೦೦ ರೂಪಾಯಿಗಳ ಹೊಸ ನೋಟನ್ನು ಬಿಡುಗಡೆ ಮಾಡಲಾಗಿತ್ತು

2019: ಪೇಶಾವರ: ಪೇಶಾವರದಲ್ಲಿನ ಪ್ರಾಚೀನ ಹಿಂದೂ ಧಾರ್ಮಿಕ ಸ್ಥಳವಾದಪಂಚ ತೀರ್ಥವನ್ನು (ಪಂಜ್ ತೀರಥ್) ವಾಯವ್ಯ ಪಾಕಿಸ್ತಾನದ ಪ್ರಾಂತೀಯ ಖೈಬರ್ ಫಕ್ತೂನಖ್ವಾ ಸರ್ಕಾರವು ರಾಷ್ಟ್ರೀಯ ಪರಂಪರೆ ತಾಣ ಎಂಬುದಾಗಿ ಘೋಷಣೆ ಮಾಡಿತು. ತಾಳೆ ಮರಗಳ ನೆರಳಿನಲ್ಲಿ ನೀರಿನ ಐದು ಕೊಳಗಳು ಮತ್ತು ಒಂದು ದೇವಾಲಯ ಇರುವುದರಿಂದ ಸ್ಥಳಕ್ಕೆಪಂಚ ತೀರ್ಥ ಎಂಬ ಹೆಸರು ಬಂದಿದೆ. ಐದು ಕೊಳಗಳು ಈಗ ರಾಷ್ಟ್ರೀಯ ಪರಂಪರೆ ತಾಣವಾಗಿದ್ದು ಚಾಚಾ ಯೂನಸ್ ಪಾರ್ಕ್ ಮತ್ತು ಖೈಬರ್ ಫಕ್ತೂನಖ್ವಾ ವಾಣಿಜ್ಯೋದ್ಯಮ ಸಂಸ್ಥೆಯ ವ್ಯಾಪ್ತಿಗೆ ಬರುತ್ತವೆ. ಪುರಾತತ್ವ ಮತ್ತು ಮ್ಯೂಸಿಯಂಗಳ ಕೆಪಿ ನಿರ್ದೆಶನಾಲಯವು ಪಂಚ ತೀರ್ಥವನ್ನು ರಾಷ್ಟ್ರೀಯ ಪರಂಪರೆ ತಾಣ ಎಂಬುದಾಗಿ ಘೋಷಿಸುವ ಅಧಿಸೂಚನೆಯನ್ನು ಹೊರಡಿಸಿತು. ಮಹಾಭಾರತ ಕಾಲದ ಪಾಂಡು ಚಕ್ರವರ್ತಿಗೆ ಸೇರಿದ್ದ ಸ್ಥಳಕ್ಕೆ ಹಿಂದುಗಳು ಕಾರ್ತೀಕ ಮಾಸದಲ್ಲಿ ಬರುತ್ತಿದ್ದರು. ಎರಡು ದಿನಗಳ ಕಾಲ ಕೊಳಗಳಲ್ಲಿ ಸ್ನಾನ ಮಾಡಿ ಮರಗಳ ಕೆಳಗೆ ಪೂಜೆ ನೆರವೇರಿಸುತ್ತಿದ್ದರು ಎಂದು ಹೇಳಲಾಗಿತ್ತು. ೧೭೪೭ರಲ್ಲಿ ಆಫ್ಘನ್ ದುರ್ರಾನಿ ರಾಜವಂಶದ ಕಾಲದಲ್ಲಿ ಹಾನಿಗೊಂಡಿದ್ದ ತಾಣವನ್ನು ೧೮೩೪ರಲ್ಲಿ ಸಿಖ್ ಆಡಳಿತವಿದ್ದಾಗ ಸ್ಥಳೀಯ ಹಿಂದುಗಳು ದುರಸ್ತಿ ಪಡಿಸಿ ಮತ್ತೆ ಪೂಜೆ ಆರಂಭಿಸಿದ್ದರು. ತಾಣಕ್ಕೆ ಅತಿಕ್ರಮ ಪ್ರವೇಶ ಮಾಡಿ ಚಾರಿತ್ರಿಕ ತಾಣಕ್ಕೆ ಹಾನಿ ಉಂಟು ಮಾಡುವವರಿಗೆ ೨೦ ಲಕ್ಷ ರೂಪಾಯಿಗಳವರೆಗಿನ  ದಂಡ ಮತ್ತು ವರ್ಷಗಳ ಸೆರೆವಾಸ ವಿಧಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿತು. 

2018: ನವದೆಹಲಿ: ತ್ರಿವಳಿ ತಲಾಖ್ ಮಸೂದೆ ಎಂಬುದಾಗಿಯೇ ಪರಿಚಿತವಾಗಿರುವ ಅತ್ಯಂತ ನಿರೀಕ್ಷೆಯ ಮುಸ್ಲಿಮ್ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ ೨೦೧೭ ಈದಿನ ರಾಜ್ಯಸಭೆಯಲ್ಲಿ ಚರ್ಚೆಗೆ ಬಂದಿತಾದರೂ  ತೀವ್ರ ಕೋಲಾಹಲ ಎಬ್ಬಿಸಿದ ವಿಪಕ್ಷಗಳು ಮಸೂದೆ ಅಂಗೀಕಾರಕ್ಕೆ ತಡೆ ಹಾಕುವಲ್ಲಿ ಯಶಸ್ವಿಯಾದವು.  ತೀವ್ರ ಕೋಲಾಹಲ, ಆಡಳಿತ-ವಿಪಕ್ಷ ವಾಗ್ಯುದ್ಧದ ನಡುವೆ ಸದನ ಕಲಾಪ ಮುಂದೂಡಿಕೆಯಾದ ಪರಿಣಾಮವಾಗಿ ಮಸೂದೆಯ ಮೇಲೆ ಯಾವುದೇ ಚರ್ಚೆ ನಡೆಯಲಿಲ್ಲ. ತ್ರಿವಳಿ ತಲಾಖ್ ಮಸೂದೆಗೆ ಲೋಕಸಭೆ ಈಗಾಗಲೇ ತನ್ನ ಅನುಮೋದನೆಯನ್ನು ನೀಡಿತ್ತು. ರಾಜ್ಯಸಭೆಯಲ್ಲಿ ಈದಿನ ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದರೆ, ಆಳುವ ಪಕ್ಷ ಹೇಗಿದೆಯೋ ಹಾಗೆಯೇ ಮಸೂದೆಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿತು. ಉಭಯ ಪಕ್ಷಗಳ ನಡುವೆ ತೀವ್ರ ವಾಗ್ಯುದ್ಧ ನಡೆದು ಉಂಟಾದ ಕೋಲಾಹಲದ ಮಧ್ಯೆ ಸದನ ಕಲಾಪಗಳನ್ನು ಸಂಜೆ  ಮುಂದೂಡಲಾಯಿತುಇದಕ್ಕೆ ಮುನ್ನ ವಿರೋಧ ಪಕ್ಷಗಳು ಭೀಮಾ -ಕೋರೆಗಾಂವ್ ಘರ್ಷಣೆಗಳನ್ನು ಪ್ರಸ್ತಾಪಿಸಿ ತೀವ್ರ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ರಾಜ್ಯಸಭಾ ಕಲಾಪಗಳನ್ನು ಮೊದಲು ಮಧ್ಯಾಹ್ನದವರೆಗೆ, ಬಳಿಕ ಗಂಟೆಯವರೆಗೆ ಮುಂದೂಡಲಾಗಿತ್ತು. ಲೋಕಸಭೆಯಲ್ಲೂ ಸದಸ್ಯರು ಮಂಡಿಸಿದ ನಿಲುವಳಿ ಮತ್ತು ಹಕ್ಕುಬಾಧ್ಯತಾ ಗೊತ್ತುವಳಿಗಳನ್ನು ಲೋಕಸಭಾಧ್ಯಕ್ಷರು ತಿರಸ್ಕರಿಸಿದ ಬಳಿಕ ಶೂನ್ಯ ವೇಳೆಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ಯುದ್ಧ ನಡೆಯಿತು. ಮುಂದೂಡಿಕೆಯಾಗಿದ್ದ ರಾಜ್ಯಸಭಾ ಕಲಾಪ ಮಧ್ಯಾಹ್ನ ಗಂಟೆಗೆ ಆರಂಭವಾದಾಗ ರಾಜ್ಯ ಸಭೆಯು ತ್ರಿವಳಿ ತಲಾಖ್ ಮಸೂದೆಯನ್ನು ಚರ್ಚೆಗೆ ಎತ್ತಿಕೊಂಡಿತು. ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಮಸೂದೆಯನ್ನು ಸದನದಲ್ಲಿ ಮಂಡಿಸುತ್ತಿದ್ದಂತೆಯೇ ವಿರೋಧ ಪಕ್ಷಗಳ ಸದಸ್ಯರು ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಲಾರಂಭಿಸಿದರು. ಕಾಂಗ್ರೆಸ್ ಪಕ್ಷದ ಆನಂದ ಶರ್ಮಾ ಅವರು ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂಬ ನಿರ್ಣಯವನ್ನು ಕೋಲಾಹಲದ ಮಧ್ಯೆ ಮಂಡಿಸಿದರು. ಆಡಳಿತ ಪಕ್ಷದ ಸದಸ್ಯರು ಇದನ್ನು ತೀವ್ರವಾಗಿ ಆಕ್ಷೇಪಿಸಿದರು. ಆಳುವ ಪಕ್ಷ ಮತ್ತು ವಿಪಕ್ಷಗಳ ಮಧ್ಯೆ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಬಿಸಿ ಬಿಸಿ ವಾಗ್ವಾದ ನಡೆಯಿತು. ಕಾನೂನು ಸಚಿವರು ಚರ್ಚೆಯಲ್ಲಿ ಮಧ್ಯ ಪ್ರವೇಶ ಮಾಡಿದುದಕ್ಕೆ ವಿರೋಧಿ ಸದಸ್ಯರು ಆಕ್ಷೇಪಿಸಿದಾಗ ಸಭಾಪತಿ ಸ್ಥಾನದಲ್ಲಿದ್ದ ಕುರಿಯನ್ ಅವರು ಸಚಿವರು ಮಧ್ಯ ಪ್ರವೇಶ ಮಾಡಬಹುದು ಎಂದು ತಿಳಿಸಿದರು. ತಲಾಖ್ --ಬಿದ್ದತ್ ನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್ ಇದನ್ನು ಕಾನೂನು ಬಾಹಿರಗೊಳಿಸಲು ಕಾನೂನು ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ಕಾರಣ ಮಸೂದೆ ರೂಪಿಸುವುದು ಅನಿವಾರ್ಯವಾಯಿತು ಎಂದು ಕಾನೂನು ಸಚಿವ ಪ್ರಸಾದ್ ಪ್ರತಿಪಾದಿಸಿದರು. ಈಗ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಿದರೆ, ಅದನ್ನು ಅಂಗೀಕರಿಸಲು ಮತ್ತೆ ತಿಂಗಳು ಬೇಕಾಗುತ್ತದೆ. ನಾವು ಹಲವಾರು ಮುಸ್ಲಿಮ್ ಮಹಿಳೆಯರ ಮನವಿಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಅವರು ನುಡಿದರು. ಸುಪ್ರೀಂಕೋರ್ಟ್ ನಿಷೇಧಿಸಿದ ಬಳಿಕವೂ ತ್ರಿವಳಿ ತಲಾಖ್ ಮುಂದುವರೆದಿದೆ. ಹಾಗಾಗಿ ಮಸೂದೆ ಅಗತ್ಯವಾಗಿದೆ. ಮಸೂದೆಯನ್ನು ಬೆಂಬಲಿಸುವಂತೆ ನಾನು ಕಾಂಗ್ರೆಸ್ ಪಕ್ಷಕ್ಕೆ ಮನವಿ ಮಾಡುವೆ ಎಂದು ವಿಪಕ್ಷ ಸದಸ್ಯರ ಆಕ್ಷೇಪಗಳ ಮಧ್ಯೆ ಸಚಿವರು ನುಡಿದರು. ವೇಳೆಗೆ ಆನಂದ ಶರ್ಮಾ ಅವರು ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂಬ ತಮ್ಮ ನಿರ್ಣಯವನ್ನು ಮತ್ತೊಮ್ಮೆ ಮಂಡಿಸಿದರು. ಸದನವು ಮಹಿಳೆಯರ ಘನತೆಯನ್ನು ಗೌರವಿಸುತ್ತದೆ. ಆದರೆ ಮಸೂದೆ ದೋಷಪೂರಿತವಾಗಿದ್ದು ಅದನ್ನು ಇನ್ನಷ್ಟು ಪರಿಶೀಲಿಸಬೇಕಾಗಿದೆ ಎಂದು ಅವರು ನುಡಿದರು. ಸುಕೇಂದು ಶಂಕರ್ ರಾಯ್ ಅವರೂ ಇದನ್ನು ಬೆಂಬಲಿಸುವ ನಿರ್ಣಯ ಮಂಡಿಸಿದರು. ಒಂದು ಹಂತದಲ್ಲಿ ಮಧ್ಯ ಪ್ರವೇಶ ಮಾಡಿದ ಸದನದ ನಾಯಕ ಅರುಣ್ ಜೇಟ್ಲಿ ಅವರು ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್ ನೀಡುವ ಮೂಲಕ ನೀಡುವ ವಿಚ್ಛೇದನವನ್ನು ರದ್ದು ಪಡಿಸಿರುವ ಸುಪ್ರೀಂಕೋರ್ಟ್ ಅದನ್ನು ರದ್ದು ಪಡಿಸುವ ಕಾನೂನು ರಚಿಸಲು ತಿಂಗಳ ಕಾಲಾವಕಾಶ ನೀಡಿದೆ. ೨೦೧೮ರ ಫೆಬ್ರುವರಿ ೨೨ಕ್ಕೆ ಗಡುವು ಮುಗಿಯುತ್ತದೆ. ಸುಪ್ರೀಂಕೋರ್ಟ್ ತೀರ್ಪನ್ನು ಕಾಯಂಗೊಳಿಸಲು ನಾವು ಮಸೂದೆ ತಂದಿದ್ದೇವೆ ಎಂದು ವಿವರಿಸಿದರು. ಡೆರೆಕ್ ಒಬ್ರಿಯನ್ ಅವರು ಮಸೂದೆ ದೋಷಪೂರಿತವಾಗಿದೆ ಎಂದರು. ‘ಲೋಕಸಭೆಯು ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಿಲ್ಲ. ಆದ್ದರಿಂದ ನಿಯಮಾವಳಿಗಳ ಪ್ರಕಾರ ಸದನ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವಂತಿಲ್ಲ, ಯಾವುದೇ ನಿರ್ಣಯವನ್ನೂ ೨೪ ಗಂಟೆ ಮುಂಚಿತವಾಗಿ ಕಳುಹಿಸಬೇಕು. ಇದೆಂತಹ ಸಂಸದೀಯ ನಿಯಮ? ನಿರ್ಣಯವನ್ನು ತೆಗೆದುಕೊಳ್ಳುವಂತೆಯೇ ಇಲ್ಲ’ ಎಂದೂ ಜೇಟ್ಲಿ ವಾದಿಸಿದರು. ಹಂತದಲ್ಲಿ ವಿಪಕ್ಷಗಳು ಜೇಟ್ಲಿ ಮಾತನಾಡುವುದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರಿಂದ ಅವರು ತಮ್ಮ ಮಾತು ನಿಲ್ಲಿಸಿದರು. ಮಧ್ಯಪ್ರವೇಶ ಮಾಡಿದ ಸಭಾಪತಿಸದನದ ನಾಯಕರಿಗೆ ಮಾತನಾಡಲು ಅವಕಾಶ ನೀಡಿದ್ದೇನೆ. ಅವರಿಗೆ ಮಾತನಾಡಲು ಬಿಡಿ. ಉಳಿದವರಿಗೂ ಬಳಿಕ ಅವಕಾಶ ನೀಡಿ ಆಮೇಲೆ ರೂಲಿಂಗ್ ನೀಡುವೆ ಎಂದು ಸೂಚಿಸಿದರು. ತಮ್ಮ ಮಾತು ಮುಂದುವರೆಸಿದ ಜೇಟ್ಲಿಅವಸರದ ವಿಚ್ಛೇದನವನ್ನು ಸಂವಿಧಾನ ಬಾಹಿರ ಎಂಬುದಾಗಿ ಘೋಷಿಸಲಾಗಿದೆ. ಇಡೀ ದೇಶವೇ ನೀವು ಇದೇ ಮಸೂದೆಗೆ ಒಂದು ಸದನದಲ್ಲಿ ಬೆಂಬಲ ನೀಡಿದ್ದನ್ನು ಮತ್ತು ಇಲ್ಲಿ ವಿರೋಧಿಸುತ್ತಿರುವುದನ್ನು ನೋಡುತ್ತಿದೆ ಎಂದು ಜೇಟ್ಲಿ ಕಾಂಗ್ರೆಸ್ಸಿಗರನ್ನು ತೋರಿಸಿ ಹೇಳಿದರು. ಜೇಟ್ಲಿ ಮಾತನ್ನು ವಿರೋಧಿಸಿದ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಮತವಿಭಜನೆಗೆ ಸಲಹೆ ಮಾಡಿದರು. ಆಳುವ ಪಕ್ಷ ಸದಸ್ಯರು ಅದನ್ನು ತೀವ್ರವಾಗಿ ಆಕ್ಷೇಪಿಸಿದರು. ಬಿಜೆಪಿಗೆ ಸದನದಲ್ಲಿ ಬಹುಮತ ಇಲ್ಲ. ಸದನದಲ್ಲಿ ಬಹುಮತ ಹೊಂದಿದ ಸದಸ್ಯರ ಅಭಿಪ್ರಾಯಗಳನ್ನು ಆಲಿಸಲಾಗುತ್ತಿಲ್ಲ. ಬಹುಮತೀಯರ ಅಭಿಪ್ರಾಯವನ್ನು ಎಲ್ಲಿ ಆಲಿಸುತ್ತೀರಿ?’ ಎಂದು ನಬಿ ಪ್ರಶ್ನಿಸಿದರು. ಎರಡೂ ತಿದ್ದುಪಡಿಗಳು ಸಮಂಜಸವಾಗಿವೆ ಎಂದು ಹೇಳಿದ ಸಭಾಪತಿ, ಸದನವನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ ಗದ್ದಲ ಮುಂದುವರಿದ ಪರಿಣಾಮವಾಗಿ ಕೋಲಾಹಲದ ಮಧ್ಯೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

2018: ಮುಂಬೈ: ಭೀಮಾ-ಕೋರೆಗಾಂವ್ ಕದನದ ದ್ವಿಶತಮಾನೋತ್ಸವದ ವೇಳೆ ಭುಗಿಲೆದ್ದ ಹಿಂಸಾಚಾರವನ್ನು ಪ್ರತಿಭಟಿಸಲು ದಲಿತ ನಾಯಕರು ನೀಡಿದ್ದ ಮಹಾರಾಷ್ಟ್ರ ಬಂದ್ ಕರೆಯ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಬಸ್ಸುಗಳ ಸಂಚಾರ ಸ್ಥಗಿತಗೊಂಡಿತು. ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ೪೮ ಬೆಸ್ಟ್ ಬಸ್ಸುಗಳು ಹಾನಿಗೊಂಡಿದ್ದು, ನಾಲ್ವರು ಚಾಲಕರು ಗಾಯಗೊಂಡರು. ೧೫೦ ಪ್ರತಿಭಟನಕಾರರನ್ನು ಪೊಲಿಸರು ವಶಕ್ಕೆ ತೆಗೆದುಕೊಂಡರು. ಈ ಮಧ್ಯೆ ದಲಿತರ ವಿರುದ್ಧ ಹಿಂಸೆಗೆ ಪ್ರಚೋದಿಸಿದ್ದರೆನ್ನಲಾದ ಮಿಲಿಂದ್ ಎಕಬೋಟೆ ಮತ್ತು ಸಾಂಭಾಜಿ ಬಿಡೆ ಅವರನ್ನು ಬಂಧಿಸುವ ಸಾಧ್ಯತೆಗಳಿದ್ದು, ಬಂದ್ ಕರೆಯನ್ನು ಹಿಂತೆಗೆದು ಕೊಂಡಿರುವುದಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ತಿಳಿಸಿದರು. ಬಂದ್ ಕರೆಯನ್ನು ಹಿಂತೆಗೆದುಕೊಂಡರೂ, ಮುಂಬೈಯಲ್ಲಿ ಪರಿಸ್ಥಿತಿ ಸಂಜೆಯವರೆಗೂ ಮಾಮೂಲಿಗೆ ಹಿಂತಿರುಗಿಲ್ಲ ಎಂದು ವರದಿಗಳು ಹೇಳಿದವು. ರಮಾಭಾಯಿ ನಗರ, ಘಾಟ್ಕೋಪರ್ ನಲ್ಲಿ ಪರಿಸ್ಥಿತಿ ಇನ್ನಷ್ಟು ಪ್ರಕ್ಷುಬ್ಧವಾಗಿತ್ತು.  ಪೂರ್ವ ಎಕ್ಸ್ ಪ್ರೆಸ್ ಮಾರ್ಗವನ್ನು ಪ್ರತಿಭಟನಕಾರರು ಸಂಜೆಯವರೆಗೂ ತಡೆಹಿಡಿದಿದ್ದರು. ಕೋರೆಗಾಂವ್ ನಲ್ಲಿ ದಲಿತ ವಿರೋಧಿ ಹಿಂಸಾಚಾರಕ್ಕೆ ಆರೆಸ್ಸೆಸ್ ಮತ್ತು ಹಿಂದುತ್ವ ಸಂಘಟನೆಗಳು ಕಾರಣ ಎಂದು ಕಾಂಗ್ರೆಸ್ ದೂಷಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಮೌನತಾಳಿದ್ದಾರೆ.ಅವರು ಸದನಕ್ಕೆ ಬಂದು ಮಾತನಾಡಬೇಕು. ನಾವು (ಕಾಂಗ್ರೆಸ್) ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು ಎಂಬುದಾಗಿ ಒತ್ತಾಯಿಸುತ್ತಿದ್ದೇವೆ ಎಂದು ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಮಹಾರಾಷ್ಟ್ರ ಬಂದ್ಗೆ ದಲಿತ ಸಂಘಟನೆಗಳು ನೀಡಿದ ಬಂದ್ ಕರೆಯ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸೆಯಲ್ಲಿ ಸಾರ್ವಜನಿಕ ಸೊತ್ತು ನಾಶ, ನಷ್ಟ ಸಂಭವಿಸಿದ್ದು ಮುಂಬೈಯ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿತು. ಕಲಾನಗರ ಪ್ರದೇಶ (ಬಾಂದ್ರಾ), ಧಾರವಿ, ಕಾಮರಾಜ್ ನಗರ, ಸಂತೋಷ ನಗರ, ದಿನದೋಶಿ ಮತ್ತು ಹನುಮಾನ್ ನಗರ ಪ್ರದೇಶಗಳಲ್ಲಿ ಬೆಸ್ಟ್ ಬಸ್ಸುಗಳ ಮೇಲೆ ದಾಳಿ ನಡೆಯಿತು ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆಯ (ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದರು.

2017: ನವದೆಹಲಿ: ಆಮ್ ಆದ್ಮಿ ಪಕ್ಷದ (ಆಪ್) ರಾಜಕೀಯ ವ್ಯವಹಾರಗಳ ಸಮಿತಿಯು ಪಕ್ಷದ ರಾಜಕೀಯ ವ್ಯವಹಾರಳ ಸಮಿತಿ ಸದಸ್ಯ ಸಂಜಯ್ ಸಿಂಗ್, ವ್ಯಾಪಾರೋದ್ಯಮಿ- ಸಾಮಾಜಿಕ ಕಾರ್ಯಕರ್ತ ಸುಶೀಲ್ ಗುಪ್ತ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಎನ್ ಡಿ ಗುಪ್ತ ಅವರ ಹೆಸರುಗಳನ್ನು ರಾಜ್ಯಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳಾಗಿ ಅಂತಿಮಗೊಳಿಸಿದೆ. ಬೆನ್ನಲ್ಲೇ ಪಕ್ಷದೊಳಗಿನ ಭಿನ್ನಮತ ಮತ್ತೆ ಸ್ಫೋಟಿಸಿತು. ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯ ಅವರು ಆಪ್ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದರುರಾಷ್ಟ್ರಕ್ಕೆ ಕೊಡುಗೆ ನೀಡಿದ ಮೂರು ದೊಡ್ಡ ಹೆಸರುಗಳನ್ನು ನಾವು ಬಯಸಿದ್ದವು. ಮೊದಲ ಹೆಸರು ಸಂಜಯ್ ಸಿಂಗ್. ಸಂಜಯ್ ಸಿಂಗ್ ಅವರು ಪಕ್ಷ ಮತ್ತು ಸಮಾಜಕ್ಕಾಗಿ ದುಡಿದವರು. ಅವರು ಬೀದಿಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡಿದ್ದಾರೆ. ಎರಡನೇ ಹೆಸರು ನಾರಾಯಣ ದಾಸ್ ಗುಪ್ತ. ಅವರು ಆರ್ಥಿಕತೆಯನ್ನು ಬಲಪಡಿಸಲು ಶ್ರಮಿಸಿದ್ದಾರೆ. ಮೂರನೇ ಹೆಸರು ಸುಶೀಲ್ ಗುಪ್ತ. ಅವರು ದೆಹಲಿ ಮತ್ತು ಹರಿಯಾಣದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ದುಡಿದಿದ್ದಾರೆ. ದೆಹಲಿ ಮತ್ತು ಹರಿಯಾಣದ ೧೪ ಜಿಲ್ಲೆಗಳಲ್ಲಿ ಅವರು ದತ್ತಿ ಶಾಲೆಗಳನ್ನು ನಡೆಸುತ್ತಿದ್ದಾರೆ ಎಂದು ಸಿಸೋಡಿಯ ನುಡಿದರು. ಸಿಸೋಡಿಯ ಅವರು ಪಕ್ಷದ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬೆನ್ನಲ್ಲೇ ಆಪ್ ಮಾಜಿ ನಾಯಕ ಯೋಗೇಂದ್ರ ಯಾದವ್ ಅವರು ತಮ್ಮ ಮಾಜಿ ಸಹೋದ್ಯೋಗಿಗಳನ್ನು ತೀವ್ರವಾಗಿ ಟೀಕಿಸಿ ಬೆಳವಣಿಗೆಯಿಂದ ತಮಗೆ ಆಘಾತ ಹಾಗೂ ನಾಚಿಕೆಯಾಗಿದೆ ಎಂದು ಹೇಳಿದರು. ‘ಪಕ್ಷ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ನಾನು ಒಮ್ಮೆ ಈಪಕ್ಷದ ಭಾಗವಾಗಿದ್ದುದಕ್ಕಾಗಿ ನನಗೆ ನಾಚಿಕೆಯಾಗುತ್ತಿದೆ ಎಂದು ಅವರು ಹೇಳಿದರು. ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಕುಮಾರ ವಿಶ್ವಾಸ್ ಅವರು ಸಿಸೋಡಿಯ ಅವರ ಪ್ರಕಟಣೆ ಹೊರಬಿದ್ದ ಬೆನ್ನಲ್ಲೇಸತ್ಯ ಮಾತನಾಡಿದ್ದಕ್ಕೆ ನನ್ನನ್ನು ಶಿಕ್ಷಿಸಲಾಗಿದೆ ಎಂದು ಹೇಳಿದರು. ಒಂದೂವರೆ ವರ್ಷದ ಹಿಂದೆ ಕೇಜ್ರಿವಾಲ್ ಅವರು ನನ್ನತ್ತ ನೋಡಿ ನಗುತ್ತಾ, ’ನಾವು ರಾಜಕೀಯವಾಗಿ ನಿಮಗೆ ಏಟು ಕೊಡುತ್ತೇವೆ. ಆದರೆ ಹುತಾತ್ಮನಾಗುವುದಿಲ್ಲ ಎಂಬುದನ್ನು ಖಾತರಿ ಪಡಿಸಿ ಎಂದಿದ್ದರು. ಈಗ ನಾನು ಹುತಾತ್ಮನಾಗಿದ್ದೇನೆ ಎಂಬುದನ್ನು ಅಂಗೀಕರಿಸಿ. ಹುತಾತ್ಮರ ಪಾಲಿಗೆ ಒಂದು ನಿಯಮವಿದೆ. ಹುತಾತ್ಮರ ದೇಹದ ಜೊತೆಗೆ ಯಾರೂ ಆಟವಾಡುವುದಿಲ್ಲ ಎಂದು ಕುಮಾರ ವಿಶ್ವಾಸ್ ಪ್ರತಿಕ್ರಿಯಿಸಿದರು.

2018: ವಾಷಿಂಗ್ಟನ್: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಉನ್ ಅವರ ಬಳಿ ಇರುವುದಕ್ಕಿಂತ ಸಾಕಷ್ಟು ದೊಡ್ಡದಾದ ಹಾಗೂ ಶಕ್ತಿಶಾಲಿಯಾದನ್ಯೂಕ್ಲಿಯರ್ ಬಟನ್ ತಮ್ಮದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದರು. ಉತ್ತರ ಕೊರಿಯಾದ ಅಣ್ವಸ್ತ್ರ ಕಾರ್ಯಕ್ರಮವನ್ನು ದಮನಿಸಲು ಇರುವ ಎಲ್ಲ ಆಯ್ಕೆಗಳನ್ನೂ ಶ್ವೇತಭವನ ಮುಕ್ತವಾಗಿ ಇರಿಸಿಕೊಂಡಿದೆ ಎಂದು ಅವರು ಹೇಳಿದರು. ಹೊಸವರ್ಷದ ತಮ್ಮ ಭಾಷಣದಲ್ಲಿ ಕಿಮ್ ಅವರು ಉತ್ತರ ಕೊರಿಯಾವು ಅಮೆರಿಕದ ಯಾವುದೇ ಮೂಲೆಗಾದರೂ ಉತ್ತರ ಕೊರಿಯಾದ ಅಣ್ವಸ್ತ್ರಗಳು ತಲುಪಬಲ್ಲವು ಎಂದು ಹೇಳಿದ್ದಲ್ಲದೆ, ’ನ್ಯೂಕ್ಲಿಯರ್ ಬಟನ್ ನನ್ನ ಮೇಜಿನ ಮೇಲೆಯೇ ಇದೆ ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಟ್ರಂಪ್ ಅವರು ಈದಿನ ಖಡಕ್ ಪ್ರತಿಕ್ರಿಯೆ ನೀಡಿದರುಕಳೆದ ವರ್ಷ ಉಭಯ ನಾಯಕರೂ ಪದೇ ಪದೇ ಅಣ್ವಸ್ತ್ರಗಳನ್ನು ಉಲ್ಲೇಖಿಸಿ ಪರಸ್ಪರ ಬೆದರಿಕೆ ಹಾಕಿದ್ದರು. ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರು ಇತ್ತೀಚೆಗಷ್ಟೇ ತನ್ನ ಮೇಜಿನ ಮೇಲೆ ಸದಾ ಕಾಲವೂ ನ್ಯೂಕ್ಲಿಯರ್ ಬಟನ್ ಇರುತ್ತದೆ ಎಂದು ಹೇಳಿದ್ದಾರೆ. ’ಅವರ ಬರಿದಾದ ಮತ್ತು ಆಹಾರದ ಕೊರತೆಯಿಂದ ನರಳುತ್ತಿರುವ ಆಡಳಿತದ ಯಾರಾದರೂ ಒಬ್ಬರು ನಾನು ಕೂಡಾ ಅವರ ಬಳಿ ಇರುವುದಕ್ಕಿಂತ ಸಾಕಷ್ಟು ದೊಡ್ಡದಾದ ಮತ್ತು ಹೆಚ್ಚು ಶಕ್ತಿಶಾಲಿಯದ ನ್ಯೂಕ್ಲಿಯರ್ ಬಟನ್ ಇಟ್ಟುಕೊಂಡಿದ್ದೇನೆ. ಮತ್ತು ನನ್ನ ಬಟನ್ ಕೂಡಾ ಕೆಲಸ ಮಾಡುತ್ತದೆ ಎಂದು ಅವರಿಗೆ ಹೇಳಬಲ್ಲಿರಾ?’ ಎಂದು ಟ್ರಂಪ್ ಟ್ವೀಟ್ ಮೂಲಕ ಪ್ರಶ್ನಿಸಿದರು. ರಾಷ್ಟ್ರವನ್ನು ಉದ್ದೇಶಿಸಿ ಟೆಲಿವಿಷನ್ ಮೂಲಕ ಮಾತನಾಡಿದ್ದ ಕಿಮ್ ಅವರು ಇಡೀ ಅಮೆರಿಕವು ಉತ್ತರ ಕೊರಿಯಾದ ಪರಮಾಣು ಅಸ್ತ್ರದ ದಾಳಿ ವಲಯದಲ್ಲಿದೆ ಎಂದು ಹೇಳಿದ್ದರು. ಅದೇ ಭಾಷಣದಲ್ಲಿ ಉತ್ತರ ಕೊರಿಯಾದ ನಾಯಕ ತಮ್ಮ ರಾಷ್ಟ್ರವು ಪರಮಾಣು ಸಿಡಿತಲೆಗಳನ್ನು ಮತ್ತು ಸಮರ ಕ್ಷಿಪಣಿಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುವ ಅಗತ್ಯವಿದೆ ಎಂದು ತಿಳಿಸಿದ್ದರು. ಉತ್ತರ ಕೊರಿಯಾವುಒಂದು ಜಾಗತಿಕ ಬೆದರಿಕೆ ಎಂದು ಹೇಳಿದ್ದ ಶ್ವೇತಭವನ ಅದರ ವಿರುದ್ಧ ಒತ್ತಡ ಹಾಕುವಂತೆ ಎಲ್ಲ ರಾಷ್ಟ್ರಗಳಿಗೆ ಮನವಿ ಮಾಡಿತ್ತು.


2009: ಮುಂಬೈ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ಥಾನದ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ಕೆಂಡ ಕಾರಿದರು. ಉಗ್ರರ ನಿರ್ನಾಮಕ್ಕೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಭಾರತ ಹಿಂಜರಿಯದು ಎಂಬ ಎಚ್ಚರಿಕೆಯನ್ನೂ ನೀಡಿದರು. ಭಾರತಕ್ಕೆ ಯಾವೊಬ್ಬ ಉಗ್ರನನ್ನೂ ಹಸ್ತಾಂತರಿಸಲು ಪಾಕಿಸ್ಥಾನ ನಿರಾಕರಿಸಿರುವುದಕ್ಕೆ ನವದೆಹಲಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು ಮುಂಬೈ ಮೇಲಿನ ದಾಳಿಗೆ ಹೊಣೆಗಾರರಾದ ಅಪರಾಧಿಗಳನ್ನು ಭಾರತದಲ್ಲಿ ವಿಚಾರಣೆ ನಡೆಸಲು ತಕ್ಷಣವೇ ಹಸ್ತಾಂತರ ಮಾಡುವಂತೆ ಪುನಃ ಆಗ್ರಹಿಸಿದರು.

2009: 2008ರ ವರ್ಷ ಸೆಪ್ಟೆಂಬರ್ 13ರಂದು ನವದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯ ಹಕೀಮ್ ಎಂಬ ಹೆಸರಿನ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಲಖನೌ ಮಹಾನಗರದ ಗುದಾಂಬಾ ಪ್ರದೇಶದಲ್ಲಿ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದರು. ಈತ ಗುಜರಾತ್ ಮತ್ತು ಮುಂಬೈಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಘಟನೆಗಳಿಗೂ ಕಾರಣ ಎಂದು ನಂಬಲಾಗಿದೆ ಎಂದು ಎಟಿಎಸ್ ಮೂಲಗಳು ತಿಳಿಸಿದವು.

2009: ಶ್ರೀಲಂಕಾ ಸೇನಾಪಡೆ 3 ದಿಕ್ಕುಗಳಿಂದ ತೀವ್ರ ಸ್ವರೂಪದ ಸಂಘಟಿತ ದಾಳಿ ನಡೆಸಿ ಪ್ರತ್ಯೇಕತಾವಾದಿ ಸಂಘಟನೆ 'ಎಲ್‌ಟಿಟಿಇ'ಯ ರಾಜಕೀಯ ರಾಜಧಾನಿ ಕೀಲಿನೋಚ್ಚಿ ಪಟ್ಟಣವನ್ನು ಕೊನೆಗೂ ವಶಪಡಿಸಿಕೊಳ್ಳುವಲ್ಲಿ ಸಫಲವಾಯಿತು. 13 ವರ್ಷಗಳ ಹಿಂದೆ ಜಾಫ್ನಾ ದ್ವೀಪವನ್ನು ಎಲ್‌ಟಿಟಿಇ ಹಿಡಿತದಿಂದ ಬಿಡಿಸಲಾಗಿತ್ತು. 2007ರಲ್ಲಿ ಲಂಕಾ ಸೇನೆಯು ಪೂರ್ವ ಶ್ರೀಲಂಕಾದಲ್ಲಿಯೂ ಬಂಡುಕೋರರನ್ನು ನಿರ್ನಾಮ ಮಾಡಿತ್ತು. ಈಗ ಕೀಲಿನೋಚ್ಚಿಯನ್ನೂ ವಶಪಡಿಸಿಕೊಂಡ ಸೇನೆ, ಪ್ರತ್ಯೇಕತಾವಾದಿ ಎಲ್‌ಟಿಟಿಇಗೆ ಭಾರಿ ಹೊಡೆತ ನೀಡಿತು. ದಶಕದ ನಂತರ ಹೋರಾಟ ನಡೆಸಿ ಈ ಪಟ್ಟಣ ವಶಪಡಿಸಿಕೊಳ್ಳುವಲ್ಲಿ ಸೇನಾಪಡೆಗಳು ಯಶಸ್ವಿಯಾದವು. ಇಲ್ಲಿಯೇ ಅಡಗಿಕೊಂಡಿರಬಹುದೆಂದು ಶಂಕಿಸಲಾಗಿದ್ದ ಎಲ್‌ಟಿಟಿಇ ಮುಖ್ಯಸ್ಥ ವಿ. ಪ್ರಭಾಕರನ್ ಪರಾರಿಯಾದ. ಸೇನಾಪಡೆಗಳ ಮುಖ್ಯಸ್ಥರೂ ಆದ ಅಧ್ಯಕ್ಷ ಮಹೀಂದಾ ರಾಜಪಕ್ಸೆ ಅವರು ಕೀಲಿನೋಚ್ಚಿ ಪಟ್ಟಣವು ಸೇನಾಪಡೆಗಳ ವಶವಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು.

2008: `ಶಾಸ್ತ್ರ ನಿಷಿದ್ಧವಾದ ವಿದೇಶಯಾನ ಮಾಡಿರುವ ಪುತ್ತಿಗೆ ಮಠಾಧೀಶರು ಪರ್ಯಾಯ ಸಂದರ್ಭದಲ್ಲಿ ಕೃಷ್ಣಪೂಜೆ ನೆರವೇರಿಸಲು ಸಮ್ಮತಿ ಇಲ್ಲ. ಅದನ್ನು ಮತ್ತೆ ಪುನರುಚ್ಚರಿಸುತ್ತಿದ್ದೇವೆ. ಈ ನಿರ್ಣಯಕ್ಕೆ ಅಷ್ಟಮಠಾಧೀಶರ ಬಹುಮತದ ಬೆಂಬಲ ಇದೆ. ಅಷ್ಟಮಠಾಧೀಶರ ಬಹುಮತದ ನಿರ್ಣಯವನ್ನು ಪುತ್ತಿಗೆ ಮಠಾಧೀಶರು ಗೌರವಿಸಬೇಕು. ಕೃಷ್ಣನ ಗರ್ಭಗುಡಿಗೆ ಸಂಬಂಧಿಸಿದ ಧಾರ್ಮಿಕ ನಿಯಮಗಳನ್ನು ಪಾಲಿಸುವುದರಿಂದ ಸಮಾಜಕ್ಕೆ ಹಾಗೂ ಲೋಕ ಕಲ್ಯಾಣ ದೃಷ್ಟಿಯಿಂದ ಒಳಿತೇ ಹೊರತು ಯಾವ ವಿಧವಾದ ಹಾನಿಯೂ ಇಲ್ಲ. ಈ ಕಟ್ಟುಪಾಡನ್ನು ಸಡಿಲಿಸುವುದು ಧರ್ಮದ ಉಲ್ಲಂಘನೆ ಆಗುತ್ತದೆಯೇ ಧಾರ್ಮಿಕ ಸುಧಾರಣೆ ಎನಿಸವುದಿಲ್ಲ' ಎಂದು ಉಡುಪಿಯ ಅಷ್ಟ ಮಠಗಳ ಪೈಕಿ ಆರು ಮಠಾಧೀಶರು ಅಭಿಪ್ರಾಯ ವ್ಯಕ್ತ ಪಡಿಸಿದರು. `ಶ್ರೀಕೃಷ್ಣಪೂಜೆ ನೀತಿ ಸಂಹಿತೆಯನ್ನು ಉಲ್ಲಂಘಿಸುವುದರಿಂದ ಮುಂದೆ ಆಗಬಹುದಾದ ಅನರ್ಥಗಳಿಗೆ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರೇ ಹೊಣೆಗಾರರಾಗಬೇಕಾಗುತ್ತದೆ' ಎಂದು ಪರ್ಯಾಯ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು ಎಚ್ಚರಿಸಿದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರ್ಯಾಯ ವಿವಾದ ಮತ್ತಷ್ಟು ಬಿಗಡಾಯಿಸಿತು. ಅಷ್ಟಮಠಾಧೀಶರ ಪೈಕಿ ಪರ್ಯಾಯ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು, ಪಲಿಮಾರು ಮಠಾಧೀಶ ವಿದ್ಯಾಧೀಶ ಶ್ರೀಪಾದರು, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರು, ಪೇಜಾವರ ಕಿರಿಯ ಮಠಾಧೀಶ ವಿಶ್ವಪ್ರಸನ್ನ ತೀರ್ಥರು, ಸೋದೆ ಮಠದ ವಿಶ್ವವಲ್ಲಭ ತೀರ್ಥರು, ಹಾಗೂ ಅದಮಾರು ಮಠದ ಪ್ರತಿನಿಧಿಯಾಗಿ ಭಾಗವಹಿಸಿದ್ದ ದಿವಾನರಾದ ವೆಂಕಟ್ರಮಣ ಮುಚ್ಚಿಂತಾಯ ಅವರೊಂದಿಗಿನ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಠಾಧೀಶರ ಅಭಿಪ್ರಾಯ ವಿವರಿಸಿದರು.

2008: ಖ್ಯಾತ ಇಂಗ್ಲಿಷ್ ಲೇಖಕಿ ಕನ್ನಡತಿ ಮಾಲತಿ ರಾವ್ ಅವರನ್ನು 2007ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅವರ `ಡಿಸ್ಆರ್ಡರ್ಲಿ ವುಮೆನ್' ಕಾದಂಬರಿಗೆ ಈ ಪ್ರಶಸ್ತಿ ದೊರಕಿತು.

2008: ಭೋಪಾಲಿನಿಂದ 400 ಕಿ.ಮೀ. ದೂರದ ಜಿಲ್ಲಾ ಕೇಂದ್ರ ಸಾತ್ನಾದಿಂದ 35 ಕಿ.ಮೀ. ದೂರದಲ್ಲಿರುವ ಚೋರ್ಮಾರ್ ಗ್ರಾಮದ ಸರ್ಕಾರಿ ಹೈಸ್ಕೂಲಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ರಾಹುಲ್ ಸಿಂಗ್ ತನ್ನ ಬಳಿ ಇದ್ದ ನಾಡ ಪಿಸ್ತೂಲಿನಿಂದ ಎಂಟನೇ ತರಗತಿಯ ಧರ್ಮು ಕೋಲಿ ಎಂಬ ವಿದ್ಯಾರ್ತಿಯನ್ನು ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ನಡೆಯಿತು. ದೆಹಲಿ ಸಮೀಪ ಗುಡಗಾಂವಿನಲ್ಲಿ ಶಾಲಾ ಬಾಲಕರಿಬ್ಬರು ಶಾಲೆಯಲ್ಲಿಯೇ ಪಿಸ್ತೂಲಿನಿಂದ ತಮ್ಮ ಇಬ್ಬರು ಸಹಪಾಠಿಗಳನ್ನು ಗುಂಡಿಟ್ಟು ಕೊಂದ ಘಟನೆ ನಡೆದು ಇನ್ನೂ ಒಂದು ತಿಂಗಳಾಗುವುದರ ಮೊದಲೇ ಅಂತಹದೇ ಇನ್ನೊಂದು ಘಟನೆ ನಡೆಯಿತು.

2008: ವಿಜಯವಾಡಕ್ಕೆ ಸಮೀಪದ ಶ್ರೀದುರ್ಗಾ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಸ್ನಾನಘಟ್ಟದ ಬಳಿ ಜನಸಂದಣಿ ಮೇರೆ ಮೀರಿ ಕಾಲ್ತುಳಿತಕ್ಕೆ ಐವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿದರು. `ಭವಾನಿ ದೀಕ್ಷೆ'ಯ ಕೊನೆಯ ದಿನ ಬೆಳಿಗ್ಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದೇಗುಲದ ಬಳಿ ಬಂದಿದ್ದರು. ಬಹುತೇಕ ಮಂದಿ ಇಂದ್ರ ಕೀಲಾದ್ರಿ ಬೆಟ್ಟದತ್ತ ದರ್ಶನ ಪಡೆಯಲು ನುಗ್ಗತೊಡಗಿದರು. ಆಗ ಈ ಕಾಲ್ತುಳಿತದ ಘಟನೆ ಸಂಭವಿಸಿತು.

2008: ನಾಗಾಲ್ಯಾಂಡಿನಲ್ಲಿ ಈದಿನ ರಾತ್ರಿ ರಾಷ್ಟ್ರಪತಿ ಆಡಳಿತ ವಿಧಿಸಿ, ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಅಮಾನತಿನಲ್ಲಿ ಇಡಲಾಯಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ರಾಜ್ಯದ ಬಿಜೆಪಿ ಬೆಂಬಲಿತ ಮುಖ್ಯಮಂತ್ರಿ ನೇಫಿಯು ರಿಯೋ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ವಿಧಿಸುವ ಕೇಂದ್ರ ಸಚಿವ ಸಂಪುಟದ ಶಿಫಾರಸಿಗೆ ಸಹಿ ಹಾಕಿದರು.

2008: ಸುಚಿತ್ರ ಫಿಲಂ ಸೊಸೈಟಿಯು ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ `ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' ಕಾರ್ಯಕ್ರಮವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಿದರು. ಖ್ಯಾತ ಚಿತ್ರ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು.

2008: ವಿಧಾನಪರಿಷತ್ ಮಾಜಿ ಸದಸ್ಯ ಎಸ್. ಚನ್ನಬಸವಯ್ಯ ಅವರ ನೆನಪಿನಲ್ಲಿ ನೀಡಲಾಗುವ `ಶ್ರೇಷ್ಠ ಉಪನ್ಯಾಸಕ' ಪ್ರಶಸ್ತಿಗೆ ಸಾಹಿತಿ, ನಗರದ ಅತ್ತಿಗುಪ್ಪೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಲ್.ಎನ್. ಮುಕುಂದರಾಜ್ ಅವರನ್ನು ಆಯ್ಕೆ ಮಾಡಲಾಯಿತು. ಚನ್ನಬಸವಯ್ಯ ಅವರೇ ಸ್ಥಾಪಿಸಿದ್ದ ಈ ಪ್ರಶಸ್ತಿಯನ್ನು ಎಸ್. ಚನ್ನಬಸವಯ್ಯ ಅಭಿಮಾನಿ ಬಳಗ, ಕರ್ನಾಟಕ ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಮತ್ತು ರಂಗೋತ್ರಿ ನಾಟಕ ಶಾಲೆಯ ವತಿಯಿಂದ ನೀಡಲಾಗುತ್ತದೆ.

2007: ದೇಶದಾದ್ಯಂತ ಕುತೂಹಲ ಕೆರಳಿಸಿರುವ ನೊಯಿಡಾ ಮಕ್ಕಳ ಸರಣಿ ಕೊಲೆ ಪ್ರಕರಣದ ತನಿಖೆ ನಡೆಸಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತು. ಪ್ರಕರಣದಲ್ಲಿ ಹಸ್ತಕ್ಷೇಪ ನಡೆಸಲು ಸುಪ್ರೀಂ ಕೋರ್ಟರ್್ ನಿರಾಕರಿಸಿ, ಸಿಬಿಐ ತನಿಖೆಗೆ ಆದೇಶಿಸುವಂತೆ ನ್ಯಾಯವಾದಿಯೊಬ್ಬರು ಮಾಡಿದ ಮನವಿಯನ್ನು ತಳ್ಳಿ ಹಾಕಿದ ಬಳಿಕ ಕೇಂದ್ರ ಈ ಕ್ರಮ ಕೈಗೊಂಡಿತು. ಉತ್ತರ ಪ್ರದೇಶದ ನೊಯಿಡಾ ವಲಯದ ನಿಥಾರಿ ಗ್ರಾಮದಲ್ಲಿ 38 ಮಕ್ಕಳ ಕಣ್ಮರೆ, 17 ಅಸ್ಥಿಪಂಜರಗಳ ಪತ್ತೆ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಈ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಪ್ರಕರಣದ ಕುರಿತು ಸ್ಥಳೀಯ ಆಡಳಿತ ನಡೆಸುತ್ತಿರುವ ತನಿಖೆಯ ಪರಿಶೀಲನೆಯ ಜೊತೆಗೆ ಕಣ್ಮರೆಯಾದ ಮಕ್ಕಳನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ಈ ಸಮಿತಿಗೆ ಹೊರಿಸಲಾಗಿದೆ. ಇಲಾಖೆಯ ಜಂಟಿ ಕಾರ್ಯದರ್ಶಿ ಮಂಜುಳಾಕೃಷ್ಣನ್ ಸಮಿತಿಯ ನೇತೃತ್ವ ವಹಿಸಲಾಯಿತು.

2007: ಕುಂಭಮೇಳದ ಬಳಿಕ ವಿಶ್ವದ ಬೃಹತ್ ಧಾರ್ಮಿಕ ಸಮ್ಮೇಳನ ಎಂದು ಭಾವಿಸಲಾದ 45 ದಿನಗಳ ಅರ್ಧ ಕುಂಭ ಮೇಳವು, ಬೆಳಗಿನ ಜಾವ ಭಕ್ತಾದಿಗಳು ಪುಣ್ಯ ಸ್ನಾನ ಮಾಡುವುದರೊಂದಿಗೆ ಆರಂಭವಾಯಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಪ್ರಾಯಶ್ಚಿತ್ತವಾಗಿ ಒಂದು ತಿಂಗಳು ದೇಹದಂಡನೆಗೆ ಒಳಗಾಗುವ `ಕಲ್ಪವಾಸಿ'ಗಳು ಬೆಳಗಿನ ಜಾವ 4.48 ಗಂಟೆಗೆ ಗಂಗಾ-ಯಮುನಾ ಮತ್ತು ಪೌರಾಣಿಕ ಪ್ರಾಮುಖ್ಯತೆಯುಳ್ಳ ಸರಸ್ವತಿ ಸಂಗಮದ ಸ್ಥಳದಲ್ಲಿ ಸ್ನಾನ ಮಾಡಿದರು.

2007: ಇರಾಕ್ ಸರ್ವಾಧಿಕಾರಿ ಸದ್ದಾಮ್ ಹುಸೇನ್ ಅವರನ್ನು ಗಲ್ಲಿಗೆ ಏರಿಸುತ್ತಿರುವುದನ್ನು ರಹಸ್ಯವಾಗಿ ಮೊಬೈಲ್ ದೂರವಾಣಿಯಲ್ಲಿ ಚಿತ್ರಿಸಿಕೊಂಡು ಇಂಟರ್ನೆಟ್ಟಿನಲ್ಲಿ ಪ್ರಸಾರ ಮಾಡಿದ ಸಂದರ್ಭದಲ್ಲಿ ಹಾಜರಿದ್ದ ಇರಾಕಿ ಕಾವಲುಗಾರನೊಬ್ಬನನ್ನು ಬಂಧಿಸಲಾಯಿತು. ಡಿಸೆಂಬರ್ 30ರ ಬೆಳಗಿನ ಜಾವ ಸದ್ದಾಮ್ ಹುಸೇನ್ ಅವರನ್ನು ಗಲ್ಲಿಗೇರಿಸಲಾಗಿತ್ತು. ನೇಣು ಕುಣಿಕೆಯನ್ನು ಬಿಗಿ ಮಾಡುವ ಮುನ್ನ ಶಿಯಾ ಧಾರ್ಮಿಕ ನಾಯಕ ಮೊಕ್ತಾದಾ ಅಲ್- ಸದ್ರ್ , ಸದ್ದಾಮ್ ಅವರನ್ನು ಮಾತುಗಳಿಂದ ಚುಚ್ಚಿದ್ದನ್ನು ಈ ಚಿತ್ರದ ಮೂಲಕ ಪ್ರಸಾರ ಮಾಡಲಾಗಿತ್ತು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಜೆ.ಎನ್. ಟಾಟಾ ಸಭಾಂಗಣ ಆವರಣದಲ್ಲಿ ನಡೆದ ಉಗ್ರಗಾಮಿ ದಾಳಿ ಪ್ರಕರಣ ಸಂಬಂಧದಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಅಬ್ದುರ್ ರೆಹಮಾನ್ ಎಂಬ ಉಗ್ರಗಾಮಿಯನ್ನು ಪೊಲೀಸರು ಬಂಧಿಸಿದರು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್ (ಸಿ. ಎನ್. ಆರ್ ರಾವ್) ಅವರು ಮೊತ್ತ ಮೊದಲ ಭಾರತ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾದರು. ಹೈದರಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

1980: ಅರಣ್ಯ ಸಂರಕ್ಷಣಾ ತಜ್ಞ ಜಾಯ್ ಅಡಾಮ್ಸನ್ ಅವರನ್ನು ಕೀನ್ಯಾದಲ್ಲಿ ಶಾಬಾ ರಾಷ್ಟ್ರೀಯ ಮೀಸಲು ಅರಣ್ಯದಲ್ಲಿ ಅತೃಪ್ತ ನೌಕರನೊಬ್ಬ ಕೊಲೆ ಮಾಡಿದ.

1979: ಅಮೆರಿಕಾದ ವ್ಯಾಪಾರಿ ಹಾಗೂ ಹಿಲ್ಟನ್ ಹೋಟೆಲುಗಳ ಸಮೂಹದ ಸ್ಥಾಪಕ ಕೊನಾರ್ಡ್ ಹಿಲ್ಟನ್ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು..

1962: ಕಲಾವಿದ ರಾಜಕುಮಾರ್ ಕೆ. ಜನನ.

1952: ಕಲಾವಿದೆ ವನಮಾಲಾ ಕುಲಕರ್ಣಿ ಅವರು ಖ್ಯಾತ ಸಂಗೀತ ಕಲಾವಿದೆ ಇಂದಿರಾಬಾಯಿ ಅವರ ಮಗಳಾಗಿ ಬಳ್ಳಾರಿಯ ಸಂಗೀತ ಕಲಾವಿದರ ಮನೆತನದಲ್ಲಿ ಜನಿಸಿದರು.

1931: ಮೊದಲ ಜಾಗತಿಕ ಯುದ್ಧದಲ್ಲಿ ಪಶ್ಚಿಮ ಭಾಗದಲ್ಲಿ ಫ್ರೆಂಚ್ ಸೇನೆಯ ಮಹಾದಂಡ ನಾಯಕನಾಗಿದ್ದ ಫ್ರೆಂಚ್ ಮಾರ್ಷಲ್ ಜೋಸೆಫ್ ಜಾಕಿಸ್ ಸೀಸೈರ್ ಜಾಫ್ರಿ ನಿಧನರಾದರು.

1925: ಈ ದಿನ ಬೆನಿಟೊ ಮುಸೋಲಿನಿ ಇಟಲಿಯ ಸಂಸತ್ತನ್ನು ವಿಸರ್ಜಿಸಿ ಇಟಲಿಯ ಸಾರ್ವಭೌಮ ದೊರೆಯಾದ. ಜರ್ಮನಿಯ ಹಿಟ್ಲರನಂತೆ ಈತ ಇಟಲಿಯ ಅನಭಿಷಿಕ್ತ ದೊರೆಯಾದ.

1915: ಪೋಲಂಡಿನಲ್ಲಿ ರಷ್ಯನ್ನರ ವಿರುದ್ಧ ಜರ್ಮನ್ನರು ಯುದ್ಧದಲ್ಲಿ ವೊತ್ತ ಮೊದಲ ಬಾರಿಗೆ `ಅಶ್ರುವಾಯು' ಬಳಸಿದರು.

1884: ಕನ್ನಡದ ಕಣ್ವ ಎಂದೇ ಖ್ಯಾತರಾಗಿದ್ದ ಸಾಹಿತಿ ಬಿ.ಎಂ. ಶ್ರೀಕಂಠಯ್ಯ (3-1-1884-5-1-1946) ಹುಟ್ಟಿದ ದಿನ ಇದು. ತುಮಕೂರಿನ ಸಂಪಿಗೆ ಗ್ರಾಮದವರಾದ ಶ್ರೀಕಂಠಯ್ಯ ಅವರ ತಂದೆ ಮೈಲಾರಯ್ಯ, ತಾಯಿ ಭಾಗೀರಥಮ್ಮ. ಮಾಧ್ಯಮಿಕ ಶಾಲೆಯವರೆಗೆ ಶ್ರೀರಂಗಪಟ್ಟಣದಲ್ಲಿ ಓದು. ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಮೈಸೂರು, ಬೆಂಗಳೂರು, ಮದ್ರಾಸು (ಈಗಿನ ಚೆನ್ನೈ) ವಿಶ್ವ ವಿದ್ಯಾಲಯಗಳಲ್ಲಿ ಬಿ.ಎಲ್. ಮತ್ತು ಎಂ.ಎ. ಅಧ್ಯಯನ. ಮೊದಲು ಕಲಿತದ್ದು ಭೌತಶಾಸ್ತ್ರ, ನಂತರ ಇಂಗ್ಲಿಷ್. ಆಂಗ್ಲ ವಿದ್ವಾಂಸರನ್ನೂ ಮೀರಿದ ಇಂಗ್ಲಿಷ್ ವಿದ್ವತ್ತು. ನಾಡಿನ ಜನರನ್ನು ಬಡಿದೆಬ್ಬಿಸಿದ ಕನ್ನಡತನ, ಸಾಹಿತ್ಯಪ್ರಿಯ, ನಾಟಕಕಾರ, ಭಾಷಣಕಾರ, ಸಂಘಟನಾ ಚತುರ. ಧಾರವಾಡದಲ್ಲಿ 1890ರ ಜುಲೈ 20ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯಾದಾಗ ಮೈಸೂರು ಪ್ರತಿನಿಧಿಯಾಗಿ ಬಿ.ಎಂ.ಶ್ರೀ ಆಗಮನ. ಪ್ರಚಂಡ ಭಾಷಣ. ಧನುಷ್ಕೋಟಿ, ಇಂಗ್ಲಿಷ್ ಗೀತಗಳು, ಗದಾಯುದ್ಧ ನಾಟಕಂ, ಅಶ್ವತ್ಥಾಮನ್, ಪಾರಸಿಕರು, ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡದ ಬಾವುಟ (ಸಂಪಾದಿತ), ಹೊಂಗನಸು (ಬಿಡಿ ಕವನಗಳು) ಪ್ರಕಟಿತ ಗ್ರಂಥಗಳು. ಬರೆದದ್ದು ಕಡಿಮೆ. ಆದರೆ ಎಲ್ಲವೂ ಅಪೂರ್ವ ರತ್ನಗಳು. 1928ರಲ್ಲಿ ಕಲಬುರ್ಗಿ (ಗುಲ್ಬರ್ಗ) ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಮೈಸೂರು ಮಹಾರಾಜರಿಂದ ರಾಜ ಸೇವಾಸಕ್ತ ಬಿರುದು. ಗ್ರಂಥ ಸಮರ್ಪಣೆ ಪರಂಪರೆಯ ಮೊದಲ ಗ್ರಂಥ ಸಂಭಾವನೆ ಸಮರ್ಪಣೆ.

1883: ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ (1883-1967) ಹುಟ್ಟಿದ ದಿನ. 1945ರಿಂದ 1951ರ ಅವಧಿಯಲ್ಲಿ ಬ್ರಿಟಿಷ್ ಪ್ರಧಾನಿಯಾಗಿದ್ದ ಇವರು ಭಾರತದ ಸ್ವಾತಂತ್ರ್ಯವನ್ನು ಅನುಮೋದಿಸಿದರು.

1880: `ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ'ದ ಮೊದಲ ಸಂಚಿಕೆ ಬಾಂಬೆಯಲ್ಲಿ (ಈಗಿನ ಮುಂಬೈ) ಪ್ರಕಟಗೊಂಡಿತು. ಟೈಮ್ಸ್ ಆಫ್ ಇಂಡಿಯಾ ಗುಂಪಿನಿಂದ ಸಾಪ್ತಾಹಿಕ ಪುರವಣಿಯಾಗಿ ಅದು `ಟೈಮ್ಸ್ ಆಫ್ ಇಂಡಿಯಾ ಓವರ್ ಲ್ಯಾಂಡ್ ವೀಕ್ಲಿ ಎಡಿಷನ್' ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು. 1929ರಲ್ಲಿ ಅದು `ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ಆಯಿತು.

1861: ಇಂಗ್ಲಿಷ್ ಅವಳಿ ಜವಳಿ ಸಹೋದರರಾದ ವಿಲಿಯಂ ರೇನ್ ಶಾ (1861-1904) ಮತ್ತು ಅರ್ನೆಸ್ಟ್ ರೇನ್ ಶಾ (1861-1899) ಹುಟ್ಟಿದ ದಿನ. ಈ ಅವಳಿ ಜವಳಿ ಸಹೋದರರು 1880ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ನಿನಲ್ಲಿ ಒಟ್ಟಾಗಿ ಟೆನಿಸ್ ಆಟಕ್ಕೆ ಪ್ರವೇಶ ಪಡೆದರು. ವಿಲಿಯಂ ಅವರು ವಿಂಬಲ್ಡನ್ ಸಿಂಗಲ್ಸ್ ಚಾಂಪಿಯನ್ ಶಿಪ್ ನ್ನು 7 ಬಾರಿ (1881-86 ಹಾಗೂ 1889ರಲ್ಲಿ) ಪಡೆದುಕೊಂಡರು. ತನ್ನ ಸಹೋದರನನ್ನೇ ಮೂರು ಬಾರಿ ಫೈನಲ್ಸ್ ನಲ್ಲಿ ಪರಾಭವಗೊಳಿಸಿದರು. ಅರ್ನೆಸ್ಟ್ 1888ರಲ್ಲಿ ಚಾಂಪಿಯನ್ ಶಿಪ್ ಗೆದ್ದರು. ಇವರಿಬ್ಬರೂ ಒಟ್ಟಾಗಿ ಬ್ರಿಟಿಷ್ ಡಬಲ್ಸ್ ಚಾಂಪಿಯನ್ ಶಿಪ್ ನ್ನು ಏಳು ಬಾರಿ ಗೆದ್ದುಕೊಂಡರು. 1888ರಲ್ಲಿ ವಿಲಿಯಂ ಬ್ರಿಟಿಷ್ ಲಾನ್ ಟೆನಿಸ್ ಅಸೋಸಿಯೇಶನ್ನಿನ ಮೊತ್ತ ಮೊದಲ ಬ್ರಿಟಿಷ್ ಅಧ್ಯಕ್ಷರಾಗಿ ಆಯ್ಕೆಯಾದರು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment