ನಾನು ಮೆಚ್ಚಿದ ವಾಟ್ಸಪ್

Sunday, January 27, 2019

ಇಂದಿನ ಇತಿಹಾಸ History Today ಜನವರಿ 27

ಇಂದಿನ ಇತಿಹಾಸ History Today ಜನವರಿ 27
2019: ನವದೆಹಲಿ:ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿ ದೇಶೀಯವಾಗಿ ನಿರ್ಮಾಣಗೊಂಡಿರುವ ತನ್ನಟ್ರೈನ್ ೧೮ಕ್ಕೆ ಭಾರತೀಯ ರೈಲ್ವೇ ಇಲಾಖೆಯುವಂದೇ ಭಾರತ ಎಕ್ಸ್ಪ್ರೆಸ್ ಎಂಬುದಾಗಿ ನಾಮಕರಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ರೈಲಿನ ಹಸಿರು ನಿಶಾನೆ ತೋರಿಸಲಿದ್ದಾರೆ. ರೈಲ್ವೇ ಸಚಿವ ಪೀಯೂಶ್ ಗೋಯೆಲ್ ಅವರು ಇಲ್ಲಿ ವಿಚಾರವನ್ನು ಪ್ರಕಟಿಸಿದರು. ನೂತನ ದೇಶೀ ಎಂಜಿನ್ ರಹಿತ ರೈಲು ದೆಹಲಿ ಮತ್ತು ವಾರಾಣಸಿ ಮಧ್ಯೆ ಗಂಟೆಗೆ ೧೬೦ ಕಿಲೋ ಮೀಟರುಗಳ ಗರಿಷ್ಠ ವೇಗದಲ್ಲಿ ಓಡಲು ಸಜ್ಜಾಗಿದೆ. ರೈಲಿನ ಪರೀಕ್ಷಾ ಚಾಲನೆಗಳು ಮುಗಿದಿದ್ದು, ಸುರಕ್ಷಾ ಆಯುಕ್ತರ ಅನುಮೋದನೆ ಲಭಿಸಿದೆ. ೧೬ ಬೋಗಿಗಳ ರೈಲುಗಾಡಿಯನ್ನು ೯೭ ಕೋಟಿ ರೂಪಾಯಿ ವೆಚ್ಚದಲ್ಲಿ ೧೮ ತಿಂಗಳುಗಳ ಒಳಗಿನ ಅವಧಿಯಲ್ಲಿ ರಾಯ್ ಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿಯು ನಿರ್ಮಿಸಿದೆ. ರಾಷ್ಟ್ರದ ೩೦ ವರ್ಷಗಳಷ್ಟು ಹಳೆಯದಾದ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಉತ್ತರಾಧಿಕಾರಿಯಾಗಿವಂದೇ ಭಾರತ್ ಎಕ್ಸ್ಪ್ರೆಸ್ ಓಡಲಿದೆ. ಇದು ಭಾರತದ ಪ್ರಪ್ರಥಮ ಎಂಜಿನ್ ರಹಿತ ರೈಲು ಕೂಡಾ ಆಗಿರುವುದು ವಿಶೇಷ. ಸಂಪೂರ್ಣ ಹವಾನಿಯಂತ್ರಿತ  ರೈಲುಗಾಡಿಯು ಕಾನ್ಪುರ ಮತ್ತು ಅಲಹಾಬಾದಿನಲ್ಲಿ ಮಾತ್ರ ನಿಲ್ಲುತ್ತವೆ. ಬೋಗಿಯು ಎರಡು ಎಕ್ಸಿಕ್ಯೂಟಿವ್ ಚೇರ್ ಕಾರುಗಳನ್ನು ಹೊಂದಿರುತ್ತದೆರೈಲುಗಾಡಿಯು ಬೆಳಗ್ಗೆ ಗಂಟೆಗೆ ದೆಹಲಿಯಿಂದ ಹೊರಟು ಮಧ್ಯಾಹ್ನ ಗಂಟೆಗೆ ವಾರಾಣಸಿ ತಲುಪುವುದು. ಮಧ್ಯಾಹ್ನ ಗಂಟೆಗೆ ವಾರಾಣಸಿಯಿಂದ ಹೊರಟು ರಾತ್ರಿ ೧೧ ಗಂಟೆಗೆ ದೆಹಲಿ ತಲುಪುವುದು. ಇದು ಸಂಪೂರ್ಣವಾಗಿ ಮೇಡ್ ಇಂಡಿಯಾ. ಸಾರ್ವಜನಿಕರಿಂದ ಇದಕ್ಕೆ ಹಲವಾರು ಹೆಸರುಗಳು ಸೂಚಿಸಲ್ಪಟ್ಟಿದ್ದವು. ಆದರೆ ನಾವು ಇದಕ್ಕೆವಂದೇ ಭಾರತ ಎಕ್ಸ್ಪ್ರೆಸ್ ಹೆಸರು ಇಡಲು ನಿರ್ಧರಿಸಿದೆವು. ಗಣರಾಜ್ಯೋತ್ಸವದ ವೇಳೆಯಲ್ಲಿ ಜನತೆಗೆ ಕೊಡುಗೆಯಾಗಿ ನಾವು ರೈಲುಗಾಡಿಯನ್ನು ಅರ್ಪಿಸುತ್ತಿದ್ದೇವೆ. ರೈಲುಗಾಡಿಗೆ ಹಸಿರು ನಿಶಾನೆ ತೋರುವಂತೆ ನಾವು ಪ್ರಧಾನಿಯವರಿಗೆ ಮನವಿ ಮಾಡಲಿದ್ದೇವೆ ಎಂದು ಗೋಯೆಲ್ ನುಡಿದರು.

2019: ಮಧುರೈಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿವಿಧ ರಾಜಕೀಯ ಪಕ್ಷಗಳು ರಾಷ್ಟ್ರಾದ್ಯಂತ ರೂಪಿಸುತ್ತಿರುವ ಮೈತ್ರಿಕೂಟಗಳ ವಿರುದ್ಧ ತಮಿಳುನಾಡಿನ ಮಧುರೈಯಲ್ಲಿ ಪರೋಕ್ಷ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅವರು ಎಷ್ಟು ದೊಡ್ಡ ಗುಂಪು ರಚಿಸಿದರೂ ತಾವು ಬಡವರ ಪರ ನಿಲ್ಲುವುದನ್ನು ಮುಂದುವರೆಸಿಯೇ ಸಿದ್ಧ ಎಂದು ಘೋಷಿಸಿದರು. ಮಧುರೈಯ ಥೊಪ್ಪುರ್ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪನೆಗಾಗಿ ಶಿಲಾನ್ಯಾಸ ನೆರವೇರಿಸಿದ ಬಳಿಕ ವಾಜಪೇಯಿ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಕೇಂದ್ರ ಸರ್ಕಾರವು ರಾಷ್ಟ್ರವನ್ನು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಮುಕ್ತಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರುರಾಷ್ಟ್ರಕ್ಕೆ ವಂಚಿಸಿದ ಅಥವಾ ರಾಷ್ಟ್ರವನ್ನು ಲೂಟಿ ಮಾಡಿ ಯಾರೇ ವ್ಯಕ್ತಿಯನ್ನು ಕಾನೂನಿನ ಕಟಕಟೆಗೆ ತರಲಾಗುವುದು. ಅವರು ಭಾರತದಲ್ಲಿರಲಿ ಅಥವಾ ವಿದೇಶದಲ್ಲೇ ಇರಲಿ, ಅದನ್ನು ಲೆಕ್ಕಿಸದೆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೋದಿ ಅವರು ಮದ್ಯ ಉದ್ಯಮಿ ವಿಜಯ್ ಮಲ್ಯ, ವಜ್ರಾಭರಣ ಉದ್ಯಮಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರನ್ನು ಉಲ್ಲೇಖಿಸುತ್ತಾ ಹೇಳಿದರು. ಸರ್ಕಾರಿ ಗುತ್ತಿಗೆ ಒಪ್ಪಂದಗಳು, ರಕ್ಷಣಾ ವ್ಯವಹಾರಗಳು, ಕಲ್ಯಾಣ ಕಾರ್ಯಕ್ರಮಗಳಲ್ಲಿಲಾಭದ ವ್ಯವಹಾರಕುದುರಿಸುತ್ತಿದ್ದವರು ಈಗ ಪರಿಣಾಮ ಎದುರಿಸುತ್ತಿದ್ದಾರೆ. ಹೀಗಾಗಿ ಅಂತವಹರೆಲ್ಲ ಈಗ ಬೇರೆಲ್ಲಾ ವಿಚಾರಗಳನ್ನು ಬದಿಗಿಟ್ಟು ಕಾವಲುಗಾರನನ್ನು ಕಿತ್ತು ಹಾಕಲು ಒಂದಾಗುತ್ತಿದ್ದಾರೆ ಎಂದು ಮೋದಿ ನುಡಿದರು.  ‘ಭೀತಿ ಮತ್ತು ನಕಾರಾತ್ಮಕತೆಯ ಭಾವನೆ ಇಟ್ಟುಕೊಂಡು ಅವರು ಅದೆಷ್ಟೇ ದೊಡ್ಡ ಕೂಟ ಕಟ್ಟಿದರೂ, ನರೇಂದ್ರ ಮೋದಿ ಬಡವರ ಜೊತೆಗೆ ದೃಢವಾಗಿ ನಿಲ್ಲುತ್ತಾನೆ. ಮಧುರೈಯ ಜನತೆ ಮತ್ತು ತಮಿಳುನಾಡಿನ ಯುವಕರಿಗೆ ನಕಾರಾತ್ಮಕತೆಯ ಶಕ್ತಿಗಳನ್ನು ತಿರಸ್ಕರಿಸುವಂತೆ ನಾನು ಕರೆ ನೀಡುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.

2019: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಲ್ಲಿ ಉತ್ತಮ ಪ್ರಧಾನಮಂತ್ರಿಯಾಗುವ ಎಲ್ಲ ಗುಣಗಳೂ ಇವೆ ಎಂದು ಇಲ್ಲಿ ನುಡಿದ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಅಧ್ಯಕ್ಷ ತೇಜಸ್ವಿ ಯಾದವ್ ಅವರುಕಾಂಗ್ರೆಸ್ ನಾಯಕನ ವರ್ಚಸ್ಸಿಗೆ ಮಸಿ ಬಳಿಯಲು ಸಹಸ್ರಾರು ಕೋಟಿ ರೂಪಾಯಿಗಳನ್ನು ಬಿಜೆಪಿಯ ಪ್ರಚಾರ ಯಂತ್ರವು ವೆಚ್ಚ ಮಾಡಿದೆ ಎಂದು ಆಪಾದಿಸಿದರು. ಏನಿದ್ದರೂ, ಯಾರು ಪ್ರಧಾನಮಂತ್ರಿಯಾಗಬೇಕು ಎಂಬ ವಿಷಯವನ್ನು ಮಹಾಮೈತ್ರಿಯ ಸದಸ್ಯರು ೨೦೧೯ರ ಚುನಾವಣೆಯ ಬಳಿಕವೇ ಸಾಮೂಹಿಕವಾಗಿ ಇತ್ಯರ್ಥ ಪಡಿಸುತ್ತಾರೆ ಎಂದು ತೇಜಸ್ವಿ ಯಾದವ್ ಒತ್ತಿ ಹೇಳಿದರುಗಾಂಧಿ ಅವರ ನಾಯಕತ್ವದ ವಿಚಾರದಲ್ಲಿ ಎಂದೂ ಪ್ರಶ್ನಾರ್ಥಕ ಚಿಹ್ನೆ ಮೂಡಿರಲಿಲ್ಲ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೃಢ ಪಡಿಸಿದ ಆರ್ಜೆಡಿ ನಾಯಕ, ’ಸುದೀರ್ಘವಾದ ನಕಾರಾತ್ಮಕ ಪ್ರಚಾರದ ಬಳಿಕ ಕೂಡಾ ಅವರು (ರಾಹುಲ್ ಗಾಂಧಿ) ಜನರ ಮನಸ್ಸುಗಳನ್ನು ತಮ್ಮ ಸಹನೆ, ಸ್ನೇಹ ಮತ್ತು ವಿಶಾಲ ಹೃದಯದ ಮೂಲಕ ಗೆದ್ದಿದ್ದಾರೆ. ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಗಾಂಧಿ ನಾಯಕತ್ವದಲ್ಲಿ ಸಾಧಿಸಿರುವ ವಿಜಯವು ಪಕ್ಷದಲ್ಲಿ ಮತ್ತು ೨೦೧೪ರಲ್ಲಿ ನರೇಂದ್ರ ಮೋದಿ ಅವರಿಗೆ ಮತ ನೀಡದ ಶೇಕಡಾ ೬೯ರಷ್ಟು ಜನರ ಮನಸ್ಸುಗಳಲ್ಲಿ ವಿಶ್ವಾಸ ಮತ್ತು ಶಕ್ತಿಯನ್ನು ತುಂಬಿದೆ ಎಂದು ಹೇಳಿದರು. ರಾಹುಲ್ ಗಾಂಧಿ ಅವರಲ್ಲಿ ಉತ್ತಮ ಪ್ರಧಾನಿಯಾಗುವ ಗುಣಲಕ್ಷಣಗಳಿವೆಯೇ ಎಂಬ ಪ್ರಶ್ನೆಗೆ ಬಿಹಾರದ ಮಾಜಿ ಉಪ ಮುಖ್ಯಮಂತ್ರಿಹೌದು, ಅವರಲ್ಲಿ ಎಲ್ಲ ಗುಣಗಳೂ ಇವೆ. ಅವರು ಭಾರತದ ಅತ್ಯಂತ ಹಳೆಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಮತ್ತು ಕಳೆದ ೧೫ ವರ್ಷಗಳಿಂದ ಸಂಸತ್ತಿನಲ್ಲಿ ಇದ್ದಾರೆ. ಅವರ ಪಕ್ಷವು ರಾಷ್ಟ್ರದ ಐದು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಹೊಂದಿದೆ ಮತ್ತು ಅವರನ್ನು ರಾಹುಲ್ ಮುನ್ನಡೆಸುತ್ತಿದ್ದಾರೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ಅವರ (ಗಾಂಧಿ) ನಾಯಕತ್ವ ಮತ್ತು ಗುಣಗಳ ಬಗ್ಗೆ ಯಾವುದೇ ಪ್ರಶ್ನೆ ಕೇಳುವಂತಿಲ್ಲ ಎಂದು ಉತ್ತರಿಸಿದರು. ಕಳೆದ ತಿಂಗಳು ಕಾಂಗ್ರೆಸ್ ಪಕ್ಷದ ದೊಡ್ಡ ಮಿತ್ರಪಕ್ಷವಾದ ಡಿಎಂಕೆಯ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಮೊತ್ತ ಮೊದಲ ಬಾರಿಗೆ ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಪರಾಭವಗೊಳಿಸುವ ಸಲುವಾಗಿ ಸಂಯುಕ್ತ ವಿರೋಧ ಪಕ್ಷವು ಕಾಂಗ್ರೆಸ್ ಮುಖ್ಯಸ್ಥರನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂದು ಹೇಳಿದ್ದರು. ಹೇಳಿಕೆಗಾಗಿ ಸ್ಟಾಲಿನ್ ಅವರನ್ನು ಟೀಕಿಸಲಾಗಿತ್ತು. ಆದರೆ ಸ್ಟಾಲಿನ್ ತಮ್ಮ ಹೇಳಿಕೆಗೆ ಅಂಟಿಕೊಂಡಿದ್ದರು. ಪಾನ್ ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಲು ರಾಹುಲ್ ಗಾಂಧಿ ಅವರು ಅನಿವಾರ್ ಆಯ್ಕೆಯೇ ಎಂಬ ಪ್ರಶ್ನೆಗೆ ತೇಜಸ್ವಿ ಯಾದವ್ ಅವರುಭಾರತ ಪ್ರಜಾಪ್ರಭುತ್ವ ದೇಶ, ಇಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಪ್ರತಿನಿಧಿಗಳು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ. ಅಂತಹ ನಾಯಕ ಪ್ರಧಾನಿಯಾಗುತ್ತಾನೆಎಂದು ಹೇಳಿದರು. ಪ್ರಜಾಪ್ರಭುತ್ವ ಯಾವಾಗಲೂ ಜನ-ಕೇಂದ್ರಿತ. ಅದು ವ್ಯಕ್ತಿ ಕೇಂದ್ರಿತ ಅಲ್ಲ. ನಾವು ಸರ್ವಾಧಿಕಾರಿ ಮಾದರಿಯ ಸರ್ಕಾರವನ್ನು ಬಯಸುವುದಿಲ್ಲ. ಪ್ರಸ್ತುತ ಬಿಜೆಪಿಯ ವ್ಯಕ್ತಿ ಪೂಜೆಯಿಂದ ನರಳುತ್ತಿದೆ. ನಾವು ಸಂಸ್ಕೃತಿಯನ್ನು ಬಯಸುವುದಿಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ೨೯ರ ಹರೆಯದ ಪುತ್ರ ನುಡಿದರು. 

2019: ನವದೆಹಲಿ: ನ್ಯಾಯಮೂರ್ತಿ ಎಸ್ ಬೊಬ್ಡೆ ಅವರ ಅಲಭ್ಯತೆಯ ಕಾರಣ ಜನವರಿ ೨೯ರಂದು ನಡೆಯಬೇಕಾಗಿದ್ದ ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದ ವಿಚಾರಣೆ ಪುನಃ ಮುಂದೂಡಿಕೆಯಾಯಿತು. ನ್ಯಾಯಮೂರ್ತಿ ಎಸ್.. ಬೊಬ್ಡೆ ಅವರು ಲಭ್ಯರಿಲ್ಲದ ಕಾರಣ ಜನವರಿ ೨೯ಕ್ಕೆ ನಿಗದಿಯಾಗಿರುವ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠದ ವಿಚಾರಣೆಯನ್ನು ರದ್ದು ಪಡಿಸಲಾಗಿದೆ ಎಂಬುದಾಗಿ ಸುಪ್ರೀಂಕೋರ್ಟ್ ಅಡಿಷನಲ್ ರಿಜಿಸ್ಟ್ರಾರ್ ಅವರ ಪ್ರಕಟಣೆ ತಿಳಿಸಿತು. ಪ್ರಕರಣದ ಮುಂದಿನ ವಿಚಾರಣೆ ದಿನಾಂಕದ ಬಗ್ಗೆ ಪ್ರಕಟಣೆಯಲ್ಲಿ ಯಾವುದೇ ವಿವರವನ್ನೂ ನೀಡಲಿಲ್ಲ. ತ್ರಿಸದಸ್ಯ ಪೀಠವು ಜನವರಿ ೧೮ರಂದು ಅಯೋಧ್ಯಾ ವಿವಾದ ಪ್ರಕರಣದ ವಿಚಾರಣೆ ನಡೆಸುವುದು ಎಂದು ಸಿಜೆಐ ರಂಜನ್ ಗೊಗೋಯಿ ಅವರು ತಿಳಿಸಿದ್ದರು. ಆದರೆ ಬಳಿಕ ಅವರು ವಿಷಯವು ಅತ್ಯಂತ ಮಹತ್ವದ್ದಾಗಿರುವ ಹಿನ್ನೆಲೆಯಲ್ಲಿ ಪಂಚ ಸದಸ್ಯ ಪೀಠವನ್ನು ಪ್ರಕರಣದ ವಿಚಾರಣೆಗಾಗಿ ರಚಿಸಿದ್ದರು. ತಮ್ಮ ಜೊತೆಗೆ ಪೀಠದ ಇತರ ಸದಸ್ಯರಾಗಿ ನ್ಯಾಯಮೂರ್ತಿಗಳಾದ ಎಸ್.. ಬೊಬ್ಡೆ, ಎನ್ ವಿ ರಮಣ, ಉದಯ್ ಯು ಲಲಿತ್ ಮತ್ತು ಡಿವೈ ಚಂದ್ರಚೂಡ್ ಅವರನ್ನು ಸಿಜೆಐ ನಿಯೋಜಿಸಿದ್ದರು. ಜನವರಿ ೧೮ರಂದು ಪೀಠವು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಷ್ಟರಲ್ಲಿ ಕಕ್ಷಿದಾರರೊಬ್ಬರ ಪರ ವಕೀಲರಾದ ರಾಜೀವ್ ಧವನ್ ಅವರು ಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಉದಯ್ ಯು ಲಲಿತ್ ಅವರು ಸುಮಾರು ಎರಡು ದಶಕಗಳ ಹಿಂದೆ ಪ್ರಕರಣದ ಕಕ್ಷಿದಾರರೊಬ್ಬರನ್ನು ಪ್ರತಿನಿಧಿಸಿದ್ದರು ಎಂಬುದನ್ನು ಗಮನಕ್ಕೆ ತಂದರು. ತತ್ ಕ್ಷಣವೇ ನ್ಯಾಯಮೂರ್ತಿ ಲಲಿತ್ ಅವರು ತಾವು ವಿಚಾರಣೆಯಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತ ಪಡಿಸಿದ್ದರು. ಹೀಗಾಗಿ ಪೀಠದ ಪುನರ್ರಚನೆ ಮತ್ತು ವಿಚಾರಣೆ ಮುಂದೂಡಿಕೆ ಅನಿವಾರ್ಯವಾಗಿತ್ತು. ಹಿನ್ನೆಲೆಯಲ್ಲಿ ಸಿಜೆಐ ಅವರು ಪ್ರಕರಣದ ವಿಚಾರಣೆಯನ್ನು ಜನವರಿ ೨೯ಕ್ಕೆ ಮುಂದೂಡಿದ್ದರು. ಅಕ್ಟೋಬರ್ ೨೯ರಂದು ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆ ಜನವರಿ ತಿಂಗಳಲ್ಲಿ ಸೂಕ್ತ ಪೀಠದ ಮುಂದೆ ವಿಚಾರಣೆಗೆ ಬರುವುದು ಎಂಬುದಾಗಿ ಹೇಳಿತ್ತು. ಬಳಿಕ ಪ್ರಕರಣದ ವಿಚಾರಣೆಯ ದಿನಾಂಕವನ್ನು ಹಿಂದೂಡುವಂತೆ ಕೋರಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ ಮನವಿಯನ್ನು ತಿರಸ್ಕರಿಸಿ, ವಿಷಯದ ವಿಚಾರಣೆಗೆ ಸಂಬಂಧಿಸಿದಂತೆ ತಾನು ಅಕ್ಟೋಬರ್ ೨೯ರಂದೇ ತೀರ್ಪು ನೀಡಿ ಆಗಿದೆ ಎಂದು ಹೇಳಿತ್ತು.

2019: ತ್ರಿಶ್ಯೂರು (ಕೇರಳ): ಶಬರಿಮಲೈ ವಿಷಯಕ್ಕೆ ಸಂಬಂಧಿಸಿದಂತೆ ಕೇರಳದ ಎಡರಂಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಇಲ್ಲಿ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಅವರುಕಮ್ಯೂನಿಸ್ಟರು ಶತಮಾನಗಳಿಂದ ಕಾಲದ ಪರೀಕ್ಷೆಯಲ್ಲಿ ಗೆದ್ದು ನಿಂತಿರುವ ಭಾರತದ ಸಂಸ್ಕೃತಿ ಮತ್ತು ನಾಗರೀಕತೆಯನ್ನು ಗೌಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು. ತ್ರಿಶ್ಯೂರಿನಲ್ಲಿ ಸಮಾವೇಶ ಒಂದರಲ್ಲಿ ಮಾತನಾಡಿದ ಪ್ರಧಾನಿ, ’ಶಬರಿಮಲೈ ದೇವಾಲಯದ ವಿಷಯವು ಇಡೀ ರಾಷ್ಟ್ರದ ಗಮನ ಸೆಳೆದಿದೆ. ಕಮ್ಯೂನಿಸ್ಟ್ ಸರ್ಕಾರ ರಾಜ್ಯದ ಸಂಸ್ಕೃತಿಯನ್ನು ಹೇಗೆ ಅಗೌರವದಿಂದ ಕಾಣುತ್ತಿದೆ ಎಂಬುದನ್ನು ಇಡೀ ದೇಶದ ಜನರು ನೋಡುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವಾಗಲೀ, ಎಡ ಪಕ್ಷಗಳಾಗಲೂ ಮಹಿಳಾ ಸಬಲೀಕರಣದ ಬಗ್ಗೆ ಯಾವುದೇ ಕಾಳಜಿಯನ್ನೂ ಹೊಂದಿಲ್ಲ. ಕಾಳಜಿ ಇದ್ದಿದ್ದರೆ ತ್ರಿವಳಿ ತಲಾಖ್ ಪದ್ಧತಿಯನ್ನು ಕೊನೆಗೊಳಿಸುವ ಎನ್ಡಿಎ ಯತ್ನಗಳನ್ನು ಅವರು ವಿರೋಧಿಸುತ್ತಿರಲಿಲ್ಲ. ಭಾರತವು ಬಹಳಷ್ಟು ಮಹಿಳಾ ಮುಖ್ಯಮಂತ್ರಿಳನ್ನು ಪಡೆದಿತ್ತು. ಅವರಲ್ಲಿ ಒಬ್ಬರಾದರೂ ಕಮ್ಯೂನಿಸ್ಟ್ ನಾಯಕರು ಇದ್ದರೇನು? ಎಂದು ಮೋದಿ ಪ್ರಶ್ನಿಸಿದರು.
ಇಬ್ಬಗೆಯ ಮಾತುಗಳಿಗಾಗಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಿಕ ರಂಗವನ್ನು (ಯುಡಿಎಫ್) ಕೂಡಾ ಟೀಕಿಸಿದ ಪ್ರಧಾನಿಅವರು ದೆಹಲಿಯಲ್ಲಿ ಒಂದು ಹೇಳುತ್ತಾರೆ ಮತ್ತು ಕೇರಳದಲ್ಲಿ ಇನ್ನೊಂದು ಹೇಳುತ್ತಾರೆ. ಇದು ಯಾವ ರೀತಿಯಿಂದಲೂ ಉಪಯೋಗವಾಗುವುದಿಲ್ಲ ಎಂದು ನುಡಿದರು. ಸಂಯುಕ್ತ ವಿರೋಧ ಪಕ್ಷದ ಮೇಲೆ ದಾಳಿ ನಡೆಸಿದ ಪ್ರಧಾನಿ, ’ಇದಕ್ಕಿಂತಲೂ ಹೆಚ್ಚು ಚಿಂತೆ ಹುಟ್ಟಿಸುವ ವಿಷಯ ಏನೆಂದರೆ ಇಡೀ ವಿರೋಧ ಪಕ್ಷ, ಅದು ಕಾಂಗ್ರೆಸ್ ಇರಲಿ ಅಥವಾ ಕಮ್ಯೂನಿಸ್ಟರೇ ಇರಲಿ ಯಾವುದೇ ಸಂಸ್ಥೆ ಬಗ್ಗೆ ಶೂನ್ಯ ಗೌರವ ಹೊಂದಿರುವುದು ಎಂದು ಹೇಳಿದರು. ಕೇರಳದ ಶಬರಿಮಲೈ ದೇವಾಲಯದಲ್ಲಿ ಶತಮಾನಗಳಿಂದ ಆಚರಣೆಯಲ್ಲಿದ್ದ ಋತುಮತಿ ಮಹಿಳಾ ನಿಷೇಧವನ್ನು ರದ್ದು ಪಡಿಸಿ, ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಜಾರಿಗೊಳಿಸಲು ಹೊರಟಿದ್ದ ಸಿಪಿಐ(ಎಂ) ನೇತೃತ್ವದ ಕೇರಳದ ಎಲ್ಡಿಎಫ್ ಸರ್ಕಾರದ ನಿರ್ಧಾರವನ್ನು ವಿರೋಧಿಸ ಭಕ್ತರು ಭಾರೀ ಸ್ವರೂಪದ ಸಾಮೂಹಿಕ ಪ್ರತಿಭಟನೆಗಳನ್ನು ನಡೆಸಿದ್ದರು.  ಬಲಪಂಥೀಯ ಸಂಘಟನೆಗಳು ತಾವು ಭಕ್ತರ ಜೊತೆಗೆ ಇರುವುದಾಗಿ ಹೇಳಿ ಋತುಮತಿ ಮಹಿಳೆಯರ ದೇವಾಲಯ ಪ್ರವೇಶವನ್ನು ವಿರೋಧಿಸಿದ್ದವು.

2019: ಮುಂಬೈ: ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಅವರು ಮುಂಬೈಯಲ್ಲಿ ನಡೆದ ಪಕ್ಷದ ಸಮಾರಂಭ ಒಂದರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಕೊಪ್ಪಿಕರ್ ಅವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಪಕ್ಷಕ್ಕೆ ಸ್ವಾಗತಿಸಿದರು. ಕೊಪ್ಪಿಕರ್ ಅವರನ್ನು ಬಿಜೆಪಿಯ ಮಹಿಳಾ ಸಾರಿಗೆ ದಳದ ಕಾಯಾಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಪಕ್ಷ ಮೂಲಗಳು ತಿಳಿಸಿದವು. ರಾಮ್ ಗೋಪಾಲ್ ವರ್ಮ ಅವರಕಂಪೆನಿ ಮೂಲಕ ೨೦೦೨ರಲ್ಲಿ ಬಾಲಿವುಡ್ ಪ್ರವೇಶಿಸಿದ್ದ ಕೊಪ್ಪಿಕರ್ಡಾನ್ (೨೦೦೬), ’ಏಕ್ ವಿವಾಹ್ ಐಸಾ ಭೀ (೨೦೦೮) ಚಿತ್ರಗಳ ಪಾತ್ರಕ್ಕಾಗಿ ಜನಪ್ರಿಯರಾಗಿದ್ದರು. ಹಲವಾರು ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲೂ ಅವರು ನಟಿಸಿದ್ದರು. ಬಿಜೆಪಿ ಸೇರಿದ ಬಾಲಿವುಡ್ ಚಿತ್ರ ನಟ ನಟಿಯರಲ್ಲಿ ಕೊಪ್ಪಿಕರ್ ಇತ್ತೀಚಿನವರಾಗಿದ್ದಾರೆ. ಹಿಂದೆ ವಿನೋದ್ ಖನ್ನಾ, ಶತ್ರುಘ್ನ ಸಿನ್ಹ, ಧರ್ಮೇಂದ್ರ, ಮತ್ತು ಹೇಮ ಮಾಲಿನಿ ಬಿಜೆಪಿ ಸೇರಿ ಸಂಸದರಾಗಿಯೂ ಆಯ್ಕೆಯಾಗಿದ್ದರು. 

2018: ಕಾಬೂಲ್: ಆಫ್ಘನ್ ರಾಜಧಾನಿ ಕಾಬೂಲ್‌ನ ವಿದೇಶೀ ರಾಜತಾಂತ್ರಿಕ ಕಚೇರಿಗಳು ಮತ್ತು ಸರ್ಕಾರಿ ಕಟ್ಟಡಗಳ ಸಮೀಪದ ಪೊಲೀಸ್ ತಪಾಸಣಾ ಸ್ಥಳದಲ್ಲಿ (ಚೆಕ್ ಪಾಯಿಂಟ್) ಈದಿನ ಅಟ್ಟಹಾಸ ಗೈದ ಭಯೋತ್ಪಾದಕರು  ಆಂಬುಲೆನ್ಸ್ ಒಳಗೆ ಬಾಂಬ್ ಇರಿಸಿ  ಸ್ಫೋಟಿಸುವ ಮೂಲಕ ಕನಿಷ್ಠ ೯೫ ಮಂದಿಯನ್ನು ಬಲಿತೆಗೆದುಕೊಂಡು,  ೧೫೮ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದರು. ಬಾಂಬ್ ಸ್ಫೋಟದ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿತು.  ವಾರದ ಹಿಂದೆ ೨೦ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದ್ದ ಕಾಬೂಲಿನ ಇಂಟರ್ ಕಾಂಟಿನೆಂಟಲ್ ಮೇಲಿನ ದಾಳಿಯ ಹೊಣೆಯನ್ನೂ ತಾಲಿಬಾನ್ ಹೊತ್ತುಕೊಂಡಿತ್ತು.  ‘ಇದೊಂದು ಹತ್ಯಾಕಾಂಡ ಎಂದು ಸಮೀಪದಲ್ಲೇ ಟ್ರೂಮಾ ಆಸ್ಪತ್ರೆಯನ್ನು ನಡೆಸುತ್ತಿರುವ ಇಟಲಿಯ ತುರ್ತು ನೆರವು ಗುಂಪಿನ ಆಫ್ಘಾನಿಸ್ಥಾನದಲ್ಲಿನ ಸಮನ್ವಯಕಾರ ಡೆಜನ್ ಪ್ಯಾನಿಕ್ ಬಣ್ಣಿಸಿದರು. ಸ್ಫೋಟ ಸಂಭವಿಸಿದಾಗ ಸಮೀಪದಲ್ಲೇ ಇದ್ದ ಸಂಸತ್ ಸದಸ್ಯ ಮೀರ್ವಾಹಿಸ್ ಯಾಸಿನಿ ಅವರು  ’ಹೈ ಪೀಸ್ ಕೌನ್ಸಿಲ್ ಕಚೇರಿ ಮತ್ತು  ಹಲವಾರು ವಿದೇಶೀ ರಾಜತಾಂತ್ರಿಕ ಕಚೇರಿಗಳಿಗೆ ಸಮೀಪದ ಚೆಕ್ ಪಾಯಿಂಟ್ ಬಳಿಗೆ ಬರುತ್ತಿದ್ದಂತೆಯೇ ಆಂಬುಲೆನ್ಸ್ ಸ್ಫೋಟಿಸಿತು ಎಂದು ಹೇಳಿದರು. ಹಲವಾರು ಮಂದಿ ಮೈದಾನದಲ್ಲಿ ಬಿದ್ದಿದ್ದು, ಜನ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ ಎಂದು ಅವರು ನುಡಿದರು. ಆಂಬುಲೆನ್ಸುಗಳು ಮತು ಸೈರನ್ನುಗಳೂ ಧಾವಿಸಿದೆ ಎಂದು ಅವರು ನುಡಿದರು. ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ದಟ್ಟ ಹೊಗೆ ವ್ಯಾಪಿಸಿದ್ದು, ಸ್ಫೋಟದ ತೀವ್ರತೆಗೆ ನೂರಾರು ಮೀಟರುಗಳ ಆಚೆಯ ಕಟ್ಟಡಗಳಲ್ಲೂ ಅದುರಿದ ಅನುಭವವಾಗಿದೆ ಎಂದು ವರದಿಗಳು ತಿಳಿಸಿದವು.

2018: ಬೆಂಗಳೂರು: ಹಿರಿಯ ನಟ ಚಂದ್ರಶೇಖರ ಅವರು ಕೆನಡಾದಲ್ಲಿ ಈದಿನ ನಸುಕಿನ  ವೇಳೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಶೀಲಾ ಹಾಗೂ ಪುತ್ರಿ ತನ್ಯಾರನ್ನು ಅಗಲಿದರು. ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಅವರು ಪಡುವಾರ ಹಳ್ಳಿ ಪಾಂಡವರು, ವಂಶವೃಕ್ಷ, ರಾಜ ನನ್ನ ರಾಜ ಸೇರಿದಂತೆ ಕನ್ನಡದ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಪುಟ್ಟಣ್ಣ ಕಣಗಾಲ್ನಿರ್ದೇಶನದ ಎಡಕಲ್ಲು ಗುಡ್ಡದ ಮೇಲೆ ಚಿತ್ರ  ಆವರಿಗೆ ಖ್ಯಾತಿ ತಂದು ಕೊಟ್ಟ ಚಿತ್ರವಾಗಿತ್ತು. ಇತ್ತೀಚೆಗೆ ತೆರೆಕಂಡ 30 ಗಂಟೆ 30ದಿನ 30 ಸೆಕೆಂಡ್ಚಿತ್ರದಲ್ಲಿ ಅವರು ಅಭಿನಯಿಸಿದ್ದರು.

2018: ಚೆನ್ನೈ: ತಮಿಳುನಾಡಿದ ಚಿತ್ರ ಮಂದಿರಗಳಲ್ಲಿ ಚಲನಚಿತ್ರ ಆರಂಭವಾಗುವುದಕ್ಕೆ ಮುನ್ನ ರಾಷ್ಟ್ರಗೀತೆ ನುಡಿಸುವುದನ್ನು ಮುಂದುವರೆಸಲು ಚಲನಚಿತ್ರ ಮಂದಿರಗಳ ಆಡಳಿತವರ್ಗಗಳು ತೀರ್ಮಾನಿಸಿದವು. ಯಥಾಸ್ಥಿತಿಯನ್ನು ಬದಲಾಯಿಸಿದರೆ ಪರಿಣಾಮ ಏನಾಗುತ್ತದೋ ಎಂಬ ಭೀತಿಯಿಂದ ಆಡಳಿತ ಮಂಡಳಿಗಳು ಈ ತೀರ್ಮಾನ ಕೈಗೊಂಡಿದ್ದು ಕಾದು ನೋಡುವ ತಂತ್ರ ಅನುಸರಿಸಿದವು. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವುದು ಕಡ್ಡಾಯ ಎಂಬುದಾಗಿ ನೀಡಿದ್ದ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಜನವರಿ ೯ರಂದು ಪರಿಷ್ಕರಿಸಿ, ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ಸಮಿತಿಯು ನಿರ್ಧಾರ ಕೈಗೊಳ್ಳುವವರೆಗೆ ಚಿತ್ರ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ನುಡಿಸುವುದನ್ನು ಐಚ್ಛಿಕಗೊಳಿಸಿ, ರಾಷ್ಟ್ರಗೀತೆ ನುಡಿಸುವ ಅಥವಾ ನುಡಿಸದೇ ಇರುವ ತೀರ್ಮಾನವನ್ನು ಚಿತ್ರಮಂದಿರಗಳ ಆಡಳಿತವರ್ಗಗಳಿಗೆ ಬಿಟ್ಟು ಬಿಟ್ಟಿತ್ತು. ಚೆನ್ನೈ ಮತ್ತು ಕೊಯಮತ್ತೂರು ಸೇರಿದಂತೆ ದಕ್ಷಿಣ ಭಾರತದ ನಗರಗಳು ಮತ್ತು ಮುಂಬೈಯಲ್ಲಿನ ಮಲ್ಟಿಪ್ಲೆಕ್ಸ್ ಗಳನ್ನು ಒಳಗೊಂಡ ಎಸ್ ಪಿಐ ಸಿನಿಎಮಾಸ್ ನ ಪ್ರತಿನಿಧಿಯೊಬ್ಬರು ಮಾಧ್ಯಮ ಒಂದರ ಜೊತೆಗೆ ಮಾತನಾಡುತ್ತಾ ’ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಆಡಳಿತ ವರ್ಗಗಳು ಚರ್ಚಿಸಿವೆ. ನಮ್ಮ ಪ್ರೇಕ್ಷಕರಿಂದ ಯಾವುದೇ ವಿರೋಧ ಇಲ್ಲದ ಕಾರಣ ರಾಷ್ಟ್ರಗೀತೆ ನುಡಿಸುವುದನ್ನು ಮುಂದುವರೆಸಲು ನಾವು ತೀರ್ಮಾನಿಸಿದೆವು ಎಂದು ಹೇಳಿದರು. ಚೆನ್ನೈ ದಕ್ಷಿಣ ಹೊರವಲಯದ ಕ್ರೋಮೊಪೇಟ್ ನಲ್ಲಿ ಇರುವ ವೆಟ್ರಿ ಥಿಯೇಟರ್‍ಸ್, ಪರಿಸ್ಥಿತಿಯನ್ನು ಅವಲೋಕಿಸುವ ಸಲುವಾಗಿ ರಾಷ್ಟ್ರಗೀತೆ ನುಡಿಸುವುದನ್ನು ಮುಂದುವರೆಸಲು ತಾನು ತೀರ್ಮಾನಿಸಿರುವುದಾಗಿ ಹೇಳಿತು. ’ಕಾದು ನೋಡಲು ನಾವು ಬಯಸಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಜನರ ಅಭಿಪ್ರಾಯ ಹೇಗಿದೆ ಎಂದು ನೋಡುತ್ತಿದ್ದು, ಅದಕ್ಕಾಗಿ ರಾಷ್ಟ್ರಗೀತೆ ನುಡಿಸುವುದನ್ನು ಮುಂದುವರೆಸುತ್ತಿದ್ದೇವೆ ಎಂದು ಚಿತ್ರಮಂದಿರದ ಆಡಳಿತ ವರ್ಗದ ಪ್ರತಿನಿಧಿ ನುಡಿದರು. ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಕೊಯಮತ್ತೂರಿನ ಕೃತಿಕಾ ಸಿನೆಮಾಸ್, ಮಧುರೈಯ ಅಂಬಿಗಾ ಸಿನೆಮಾಸ್ ಕೂಡಾ ರಾಷ್ಟ್ರಗೀತೆ ನುಡಿಸುವುದನ್ನು ಮುಂದುವರೆಸಿವೆ. ಚಿತ್ರ ವೀಕ್ಷಿಸುವವರಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಸಲುವಾಗಿ ರಾಷ್ಟ್ರಗೀತೆ ನುಡಿಸುವುದು ಉತ್ತಮ ಎಂಬುದು ತಮ್ಮ ಭಾವನೆ ಎಂದು ಅಭಿರಾಮಿ ಸಿನೆಮಾಸ್ ಮಾಲೀಕ ತಮಿಳುನಾಡು ಚಿತ್ರಮಂದಿರಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ಅಭಿರಾಮಿ ರಾಮನಾಥನ್ ಹೇಳಿದರು. ನಮ್ಮ ಸಂಘದ ಯಾವ ಸದಸ್ಯರೂ ರಾಷ್ಟ್ರಗೀತೆ ನುಡಿಸುವುದಕ್ಕೆ ವಿರುದ್ಧವಾಗಿಲ್ಲ. ಆದರೆ ನಮಗೆ ಆಯ್ಕೆಯ ಅವಕಾಶ ಇದೆ ಎಂದು ಅವರು ನುಡಿದರು. ರಾಷ್ಟ್ರಗೀತೆ ನುಡಿಸುವುದನ್ನು ನಿಲ್ಲಿಸುವ ಆಯ್ಕೆ ಚಿತ್ರ ಮಂದಿರಗಳ ಆಡಳಿತ ಮಂಡಳಿ ಬಳಿ ಇದ್ದರೂ ’ಮೊದಲು ಗಂಟೆ ಕಟ್ಟುವವರು ಯಾರು?’ ಎಂಬ ಪ್ರಶ್ನೆ ಇದೆ. ಮದ್ರಾಸ್ ಹೈಕೋರ್ಟ್ ವಕಿಲ ವಿ. ಸುರೇಶ್ ಅವರ ಪ್ರಕಾರ ರಾಜಕೀಯ ರಂಗದಲ್ಲಿನ ಅಸಹನೆಯ ಭೀತಿಯ ಪರಿಣಾಮವಾಗಿ ಚಿತ್ರ ಮಂದಿರಗಳ ಮಾಲೀಕರು ನಿರ್ಧಾರ ಕೈಗೊಳ್ಳಲು ಸಮರ್ಥರಾಗಿಲ್ಲ. ಏನಿದ್ದರೂ ರಾಷ್ಟ್ರಗೀತೆ ನುಡಿಸುವುದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಯಾವುದೇ ಒತ್ತಡವೂ ಇಲ್ಲ ಎಂದು ಎಸ್ ಪಿ ಐ ಸಿನೆಮಾಸ ಪ್ರತಿನಿಧಿ ಹೇಳಿದ್ದಾರೆ. ರಾಷ್ಟ್ರಗೀತೆ ನುಡಿಸುವುದನ್ನು ಬೆಂಬಲಿಸುವವರಲ್ಲಿ ಒಬ್ಬರಾದ ಚಿತ್ರ ನಟ ಪಾರ್ಥೀಪನ್ ಅವರು ’ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಹೀಗಾಗಿದೆ. ನೀವು ಅದನ್ನು ಕಡ್ಡಾಯಗೊಳಿಸಬೇಕು ಇಲ್ಲವೇ ಸ್ಥಗಿತಗೊಳಿಸಬೇಕು ಎಂದು ಪಾರ್ಥೀಪನ್ ನುಡಿದರು. ಕಾರ್‍ಯಕ್ರಮಗಳು ಮತ್ತು ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸದೇ ಇರುವುದಕ್ಕೆ ತಾನು ಆದ್ಯತೆ ನೀಡುವುದಾಗಿ ಖ್ಯಾತ ಚಿತ್ರ ನಟ ಕಮಲ ಹಾಸನ್ ಹೇಳಿದರು. ರಾಷ್ಟ್ರಗೀತೆ ನುಡಿಸುವುದನ್ನು ಮತ್ತು ಎಲ್ಲ ವೀಕ್ಷಕರು ಎದ್ದು ನಿಂತು ಗೌರವಿಸುವುದನ್ನು ನೋಡುವಾಗ ಸಂಭ್ರಮದ ಭಾವನೆ ಬರುತ್ತದೆ ಎಂದು ಪ್ರದೀಪ್ ಆರ್ ಎಸ್ ಹೇಳಿದರು.  ಚಿತ್ರ ಮಂದಿರ ಮಾಲೀಕರು ಸೇಫ್ ಕಾರ್ಡ್ ಬಳಸುತ್ತಿದ್ದಾರೆ. ಸಮಸ್ಯೆ ಇರುವುದು ರಾಷ್ಟ್ರಗೀತೆ ಕುರಿತ ಸುಪ್ರೀಂಕೋರ್ಟ್ ತೀರ್ಪಿನಲ್ಲೇ. ಆಯ್ಕೆಯನ್ನು ಪ್ರೇಕ್ಷಕರಿಗೂ ವಿಸ್ತರಿಸಬೇಕಾಗಿತ್ತು. ಚಿತ್ರಮಂದಿರಗಳಲ್ಲಿ ತಮ್ಮ ರಾಷ್ಟ್ರಭಕ್ತಿಯನ್ನು ಪ್ರದರ್ಶಿಸಲು ಜನರು ಆದ್ಯತೆ ನೀಡದೇ ಇದ್ದರೆ ಆಗ ಚಿತ್ರ ಮಂದಿರಗಳನ್ನು ಪ್ರಶ್ನಿಸಬೇಕಾಗಿತ್ತು ಎಂದು ಅವರು ನುಡಿದರು.

2018: ಬಾಗಲಕೋಟೆ: ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ಕೇರಳದ ಭಗವತಿ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ವಿವಾಹದ ವಿಡಿಯೋ ತಮ್ಮ ಬಳಿ ಇರುವ ಹಿನ್ನೆಲೆಯಲ್ಲಿ ಕರಂದ್ಲಾಜೆ ಅವರಿಂದ ತಮಗೆ ಜೀವ ಭಯ ಇದೆ ಎಂದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ ಅವರು ಇಲ್ಲಿ ಕಣ್ಣಿರಿಟ್ಟರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಎಲ್ಲರೂ ತಮ್ಮನ್ನು ಬಳಸಿಕೊಂಡು ಬಿಸಾಡುತ್ತಿದ್ದಾರೆ. ಭದ್ರತೆಯ ಭರವಸೆ ಕೊಟ್ಟರೆ ಈ ವಿಡಿಯೋ ಬಿಡುಗಡೆ ಮಾಡಬಲ್ಲೆ. ಶೋಭಾ ಅವರಿಂದ ತೊಂದರೆಯಾಗಿರುವ ಬಗ್ಗೆ ಪ್ರಕರಣಗಳನ್ನು ದಾಖಲಿಸಿದರೂ ಪ್ರಯೋಜನವಾಗಿಲ್ಲ. ತಮ್ಮ ಮೇಲೆ ಸಾಕಷ್ಟು ಬಾರಿ ಹಲ್ಲೆಗಳು ನಡೆದಿವೆ. ತಮಗೇನಾದರೂ ಆದರೆ ಪತ್ನಿ ಪುತ್ರರ ಗತಿ ಏನು ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿನ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿ ಭದ್ರತೆ ಒದಗಿಸುವಂತೆ ಕೋರಿದ್ದರೂ ಉಪಯೋಗವಾಗಿಲ್ಲ ಎಂದು ಅವರು ನುಡಿದರು. ಶೋಭಾ ಕರಂದ್ಲಾಜೆ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವು ದಾಗಿಯೂ ಅವರು ಹೇಳಿದರು.  ಯಡಿಯೂರಪ್ಪ ಕೆಜೆಪಿಯಲ್ಲಿಯೇ ಇದ್ದರೆ ಈ ಬಾರಿ ಅಧಿಕಾರಕ್ಕೆ ಬರುತ್ತಿತ್ತು. ಪಕ್ಷದ ದುಸ್ಥಿತಿ ಹಾಗೂ ಯಡಿಯೂರಪ್ಪ ಹಾಳಾಗಲು ಶೋಭಾ ಕರಂದ್ಲಾಜೆ ಅವರೇ ಕಾರಣ ಎಂದು ಆರೋಪಿಸಿದ ಪದ್ಮನಾಭ ಪ್ರಸನ್ನ, ಯಡಿಯೂರಪ್ಪ ಮೂಲತಃ ಒಳ್ಳೆಯ ಮನುಷ್ಯ.ಜನಾನುರಾಗಿ.  ಕರಂದ್ಲಾಜೆಯೇ ಅವರನ್ನು ನಾಶ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ರಾಜ್ಯದ ೨೨೪ ಕ್ಷೇತ್ರಗಳಿಂದಲೂ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿದ ಅವರು, ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಶೀಘ್ರವೇ ಹುಬ್ಬಳ್ಳಿಯಲ್ಲಿ ಮನೆ ಮಾಡುವೆ. ಬಾಗಲಕೋಟೆ ಜಿಲ್ಲೆ ತೇರದಾಳ ಹಾಗೂ ಶಿಕಾರಿಪುರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ವತಃ ಸ್ಪರ್ಧಿಸುವೆ ಎಂದು ಪದ್ಮನಾಭ ನುಡಿದರು.

2018: ಲಕ್ನೋ : ಉತ್ತರಪ್ರದೇಶದ ಕಾಸ್‌ಗಂಜ್‌ನಲ್ಲಿ ಗಣರಾಜ್ಯದಿನ ೨೨ ವರ್ಷದ ಯುವಕನೊಬ್ಬನ ಭೀಕರ ಹತ್ಯೆಯ ಬಳಿಕ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ವ್ಯಾಪಕ ಹಿಂಸಾತ್ಮಕ ಘಟನೆಗಳು ಘಟಿಸಿದವು.  ಮೆರವಣಿಗೆ ವೇಳೆ ಚಂದನ್‌ಗುಪ್ತಾ ಎಂಬ ಯುವಕನನ್ನು ಎದೆಗೆ ಗುಂಡಿಟ್ಟು ಹತ್ಯೆಗೈಯಲಾಗಿತ್ತು. ಈ ಕಗ್ಗೊಲೆಯ ಬಳಿಕ ಹಿಂಸಾಚಾರ ಭುಗಿಲೆದ್ದು,  ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು.  ಎರಡು ಕೋಮಿನ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿಕೊಂಡಿದ್ದು ಈ ವೇಳೆ ನೌಶಾದ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಾಸ್‌ಗಂಜ್‌ನಾದ್ಯಂತ  ಕರ್ಫ್ಯೂ ಹೇರಲಾಗಿದ್ದು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿ, ವ್ಯಾಪಕ ಕಟ್ಟೆಚ್ಚರ ವಹಿಸಲಾಯಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿದ್ದು, ಹಿಂಸಾಚಾರದಲ್ಲಿ ತೊಡಗುವ ವ್ಯಕ್ತಿಗಳು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

2018: ದುಬೈ: ಸೌದಿ ಅರೇಬಿಯಾದ ಕೋಟ್ಯಾಧೀಶ ಪ್ರಿನ್ಸ್ ಅಲ್ವಾಲೀದ್ ಬಿನ್ ತಲಾಲ್ ಅವರನ್ನು ಬಂಧಮುಕ್ತಗೊಳಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿದವು.  ಎರಡು ತಿಂಗಳ ಹಿಂದೆ ಭ್ರಷ್ಟಾಚಾರದ ವಿರುದ್ಧ ಕೈಗೊಳ್ಳಲಾದ ವ್ಯಾಪಕ ಕಾರ್ಯಾಚರಣೆ ಸಂದರ್ಭದಲ್ಲಿ ಅಲ್ವಾಲೀದ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ತಾವು ಯಾವುದೇ ತಪ್ಪನ್ನೂ ಮಾಡಿಲ್ಲ ಎಂಬುದು ಸ್ಪಷ್ಟವಾಗಲಿದ್ದು, ಕೆಲವೇ ದಿನಗಳಲ್ಲಿ ಬಂಧಮುಕ್ತನಾಗುವ ನಿರೀಕ್ಷೆ ಇದೆ ಎಂದು ರಿಯಾಧಿನ ಐಷಾರಾಮೀ ರಿಟ್ಜ್ -ಕಾರ್ಲ್‌ಟನ್ ಹೋಟೆಲಿನಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ವಿಶೇಷ ಸಂದರ್ಶನ ನೀಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಮುಕ್ತಗೊಳಿಸಲಾಯಿತು. ಪ್ರಿನ್ಸ್ ಅಲ್ವಾಲೀದ್ ಅವರನ್ನು ಜನವರಿ ೨೭ರಂದು ಬಿಡುಗಡೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ಹೇಳಿದವು.  ’ಅವರು ಮನೆಗೆ ಬಂದಿದ್ದಾರೆ ಎಂದು ಕುಟುಂಬ ಸದಸ್ಯರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು. ಸೌದಿ ಅಧಿಕಾರಿಗಳು ತತ್ ಕ್ಷಣಕ್ಕೆ ಪ್ರತಿಕ್ರಿಯೆಗಾಗಿ ಸಂಪರ್ಕಕ್ಕೆ ಲಭಿಸಲಿಲ್ಲ.  ಬಿಡುಗಡೆಯ ಷರತ್ತುಗಳ ಬಗೆಗೂ ತತ್ ಕ್ಷಣಕ್ಕೆ ಏನೂ ಗೊತ್ತಾಗಲಿಲ್ಲ.  ಪ್ರಿನ್ಸ್ ಅಲ್ವಾಲೀದ್ ಅವರನ್ನು ರಿಟ್ಜ್ -ಕಾರ್ಲ್‌ಟನ್ ಹೋಟೆಲಿನಲ್ಲಿ ೨೦೧೭ರ ನವೆಂಬರ್ ಆದಿಯಿಂದ ಇತರ ಹಲವರ ಜೊತೆಗೆ ದಿಗ್ಬಂಧನದಲ್ಲಿ ಇರಿಸಲಾಗಿತ್ತು. ತೈಲಸಮೃದ್ಧ ಸೌದಿ ಅರೇಬಿಯಾದ ಸುಧಾರಣೆ ಮತ್ತು ಅದರ ಮೇಲಿನ ತಮ್ಮ ನಿಯಂತ್ರಣವನ್ನು ಬಲಪಡಿಸುವ ಯೋಜನೆಯ ಅಂಗವಾಗಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯ ಈ ಕ್ರಮ ಕೈಗೊಂಡಿದ್ದರು.

2018: ನವದೆಹಲಿ:  ದೆಹಲಿ ವಿಧಾನಸಭೆಯಲ್ಲಿ ಅಳವಡಿಸಿರುವ ೭೦ ಸಾಧಕರ ಭಾವಚಿತ್ರಗಳಲ್ಲಿ ಟಿಪ್ಪು ಸುಲ್ತಾನ್ ಚಿತ್ರವನ್ನೂ ಸೇರಿಸಿಕೊಂಡಿರುವುದಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗಣರಾಜ್ಯೋತ್ಸವ ಭಾವಚಿತ್ರಗಳನ್ನು ಅನಾವರಣಗೊಳಿಸಿದ್ದರು. ಆ ಸಾಧಕರಲ್ಲಿ ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚನ್ನಮ್ಮ, ಅಶ್ಫಾಕುಲ್ಲಾ ಖಾನ್, ಭಗತ್ ಸಿಂಗ್, ಬಿರ್ಸಾ ಮುಂಡಾ, ಸುಭಾಷ್ ಚಂದ್ರ ಬೋಸ್ ಮತ್ತಿತರ ನಾಯಕರ ಚಿತ್ರಗಳಿದ್ದವು.
ಟಿಪ್ಪು ಭಾವಚಿತ್ರ ಅಳವಡಿಕೆಗೆ ಬಿಜೆಪಿ ಶಾಸಕರು ಈದಿನ ವಿಧಾನಸಭಾ ಕಲಾಪದಲ್ಲಿ ವಿರೋಧ ವ್ಯಕ್ತಪಡಿಸಿದರು. ‘ವಿವಾದಾತ್ಮಕ ವ್ಯಕ್ತಿಗಳ ಚಿತ್ರಗಳನ್ನು ವಿಧಾನಸಭೆಯಲ್ಲಿ ಹಾಕಬಾರದು ಎಂದು ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮಾ ವಾದಿಸಿದರು. ಇದಕ್ಕೆ ಸಭಾಪತಿ ರಾಮ್ ನಿವಾಸ್ ಗೋಯಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.  ಎಲ್ಲ ವಿಷಯಗಳನ್ನೂ ವಿವಾದ ಮಾಡಲಾಗುತ್ತಿದೆ. ಭಾರತದ ಸಂವಿಧಾನದ ೧೪೪ನೇ ಪುಟದಲ್ಲಿ ಟಿಪ್ಪು ಸುಲ್ತಾನನ ಚಿತ್ರವಿದೆ. ಬ್ರಿಟಿಷರ ವಿರುದ್ಧ ಹೋರಾಡಿದವರನ್ನು ಮತ್ತು ಸಂವಿಧಾನ ರಚಿಸಿದವರನ್ನು ದೇಶದ್ರೋಹಿಗಳು ಎಂದು ಪರಿಗಣಿಸಬೇಕೆ ಅಥವಾ ಬಿಜೆಪಿಯವರನ್ನು ದೇಶದ್ರೋಹಿಗಳು ಎನ್ನಬೇಕೆ  ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಇಂತಹ ಕ್ಷುಲ್ಲಕ ರಾಜಕಾರಣ ಬಿಟ್ಟು ಅಭಿವೃದ್ಧಿಯ ಕಡೆ ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದರು.  ರಾಜೌರಿ ಗಾರ್ಡನ್‌ನ ಬಿಜೆಪಿ-ಎಸ್ ಎಡಿ ಶಾಸಕ ಮನ್ಜಿಂದರ್ ಸಿಂಗ್ ಅವರು ’ ಟಿಪ್ಪು ಸುಲ್ತಾನ್ ಚಿತ್ರ ಹಾಕುವ ಬದಲು ದೆಹಲಿ ಮತ್ತು ಅದರ ಇತಿಹಾಸಕ್ಕೆ ಕಾಣಿಕೆ ನೀಡಿದ ಬೇರೆ ಯಾರಾದರೂ ಒಬ್ಬರ ಚಿತ್ರವನ್ನು ಹಾಕಬಹುದಾಗಿತ್ತು ಎಂದು ಹೇಳಿದರು. ’ಈ ವಿವಾದಾಸ್ಪದ ಚಿತ್ರವನ್ನು ಏಕೆ ಹಾಕುತ್ತೀರಿ? ದೆಹಲಿಗೆ ಅಥವಾ ಅದರ ಚರಿತ್ರೆಗೆ ಕಾಣಿಕೆ ಸಲ್ಲಿಸಿದ ಯಾರಾದರೂ ಒಬ್ಬರ ಚಿತ್ರವನ್ನು ಹಾಕಬಹುದಲ್ಲ?’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಆಮ್ ಆದ್ಮಿ ಪಕ್ಷವು ಬಿಜೆಪಿಗೆ ತಮ್ಮ ಪಕ್ಷದಿಂದ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (ಆರೆಸ್ಸೆಸ್) ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರು ಸಲಹೆ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿತು. ಅರವಿಂದ ಕೇಜ್ರಿವಾಲ್ ಅವರು ತಮ್ಮ ಗಣರಾಜ್ಯೋತ್ಸವ ಭಾಷಣದಲ್ಲಿ , ‘ಬಹಳ ಕಷ್ಟಗಳ ತರುವಾಯ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಉಳಿಸಿಕೊಳ್ಳಲು ನಾವು ಇನ್ನಷ್ಟು ಕಷ್ಟಪಡಬೇಕಾಗಿ ಬಂದಿದೆ. ಹೆಚ್ಚುತ್ತಿರುವ ಹಿಂಸೆಯಿಂದಾಗಿ ಜನರು ನಿಶ್ಚಿಂತೆಯಿಂದ ಜೀವನ ನಡೆಸುವುದು ಇಂದು ದುಸ್ತರವಾಗಿದೆ ಎಂದು ಹೇಳಿದ್ದರು.  ಇಂದು ವಿಭಜಕ ಶಕ್ತಿಗಳು ದೇಶವಿರೋಧಿ ಚಟುವಟಿಕೆ ನಡೆಸುತ್ತಿವೆ. ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಎಲ್ಲ ಸರ್ಕಾರಗಳ ಆದ್ಯತೆ ಆಗಬೇಕು ಎಂದು ಕೇಜ್ರಿವಾಲ್ ಹಾರೈಸಿದ್ದರು.  ವಿಧಾನಸಭೆಯಲ್ಲಿ ಅಳವಡಿಸಿರುವ ಭಾವಚಿತ್ರಗಳು ಎರಡುವರೆ ಅಡಿ ಎತ್ತರ ಮತ್ತು ಒಂದುವರೆ ಅಡಿ ಅಗಲ ಇವೆ. ಅವುಗಳಲ್ಲಿ ಸಾಧಕರು ದೇಶಕ್ಕೆ ನೀಡಿದ ಕೊಡುಗೆಯ ಸಂಕ್ಷಿಪ್ತ ವಿವರವನ್ನೂ ನೀಡಲಾಗಿತ್ತು. ಸ್ವಾತಂತ್ರ್ಯ ಯೋಧರ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿರುವ ಶಹೀದ್ ಸ್ಮೃತಿ ಚೇತನಾ ಸಮಿತಿಯ ಸದಸ್ಯ ಕಲಾವಿದ ಗುರು ದರ್ಶನ್ ಸಿಂಗ್ ಬಿಂಕಲ್ ಅವರು ಈ ಚಿತ್ರಗಳನ್ನು ರಚಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ನವೆಂಬರ್ ೧೦ರಂದು ಮೈಸೂರು ದೊರೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಆರಂಭಿಸಿದಂದಿನಿಂದ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಟಿಪ್ಪು ಸುಲ್ತಾನ್ ವಿವಾದ ಗರಿಗೆದರಿತ್ತು.  ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿತ್ತು. ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅನಂತಕುಮಾರ್ ಹೆಗಡೆ ಅವರು ’ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಎಂದು ಟೀಕಿಸಿದ್ದರು.

2018: ಕರೂರ್:  ಮಾಜಿ ಸಾರಿಗೆ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು  ಈದಿನ ಮಧ್ಯಾಹ್ನ ೬೦ ಮಂದಿ ಬೆಂಬಲಿಗರೊಂದಿಗೆ ಕರೂರಿನಲ್ಲಿ ಬಂಧಿಸಲಾಯಿತು. ಎಂ.ಜಿ. ರಾಮಚಂದ್ರನ್ ಜನ್ಮ ಶತಮಾನೋತ್ಸವ ಸಮಾರಂಭ ಸಂಘಟಿಸಲು ಪೊಲೀಸರು ಅನುಮತಿ ನಿರಾಕರಿಸಿದ್ದನ್ನು ಪ್ರತಿಭಟಿಸಿ ಕರೂರಿನಲ್ಲಿ ರಸ್ತೆ ತಡೆ ನಡೆಸಲು ಯತ್ನಿಸಿದಾಗ ಸೆಂಥಿಲ್ ಅವರನ್ನು ಬಂಧಿಸಲಾಯಿತು. ಮಾಜಿ ಸಚಿವರು ಎಂಜಿಆರ್ ಜನ್ಮಶತಮಾನೋತ್ಸವ ಸಲುವಾಗಿ ಸಭೆ ನಡೆಸಲು ಅನುಮತಿ ಕೋರಿದ್ದರು. ಸಭೆಯನ್ನು ಉದ್ದೇಶಿಸಿ ಭಿನ್ನಮತೀಯ ಎಐಎಡಿಎಂಕೆ ನಾಯಕ ಟಿ.ಟಿ.ವಿ. ದಿನಕರನ್ ಮಾತನಾಡಲಿದ್ದರು. ಮೊದಲಿಗೆ ಸೆಂಥಿಲ್ ಬಾಲಾಜಿ ಮತ್ತು ೪೬ ಮಂದಿಯನ್ನು ಬಂಧಿಸಲಾಯಿತು. ಬಳಿಕ ಪ್ರತಿಭಟನಾ ಸ್ಥಳದಿಂದ ಇನ್ನೂ ೧೪ ಮಂದಿಯನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾಜಿ ಸಚಿವರು ಮತ್ತು ಅವರ ಬೆಂಬಲಿಗರನ್ನು ಮದುವೆ ಹಾಲ್ ಒಂದರಲ್ಲಿ ಇರಿಸಲಾಯಿತು ಎಂದು ಮೂಲಗಳು ಹೇಳಿದವು.

2018: ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಲ್ಲು ತೂರುತ್ತಿದ್ದ ಗುಂಪಿನ ಮೇಲೆ ಸೇನೆ
ಗುಂಡು ಹಾರಿಸಿದಾಗ ಕನಿಷ್ಠ ಇಬ್ಬರು ಸಾವನ್ನಪ್ಪಿ, ಮೂವರು ಗಾಯ ಗೊಂಡರು. ವರದಿಗಳ ಪ್ರಕಾರ ಯುವಕರ ಗುಂಪು ಗಣೋವ್ ಪೋರಾ ಗ್ರಾಮದಲ್ಲಿ ಸರ್ಕಾರಿ ಪಡೆಗಳತ್ತ ಕಲ್ಲು ತೂರಾಟ ನಡೆಸಿದಾಗ ಸೇನಾ ಪಡೆಗಳು ಪ್ರತಿಭಟನಕಾರರತ್ತ ಗುಂಡು ಹಾರಿಸಿದವು. ಪರಿಣಾಮವಾಗಿ ಹಲವರು ಗಾಯಗೊಂಡರು. ಕನಿಷ್ಠ ೩ ಮಂದಿ ಗಾಯಗೊಂಡಿದ್ದಾರೆ, ಒಬ್ಬನಿಗೆ ತಲೆಗೆ ಗಂಭೀರ ಗಾಯಗಳಾದವು ಎಂದು ಪೊಲೀಸರು ತಿಳಿಸಿದರು.  ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಯಾಳುಗಳನ್ನು ಪುಲ್ವಾಮದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಕನಿಷ್ಠ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವೈದ್ಯಕೀಯ ಮುಖ್ಯಾಧಿಕಾರಿ ದೃಢ ಪಡಿಸಿದರು. ಶೋಪಿಯಾನ್ ಜಿಲ್ಲೆಯ ಚಾಯ್ ಗುಂಡ ಪ್ರದೇಶದಲ್ಲಿ ಗಡಿಯಾಚೆಯಿಂದ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಸ್ಥಳೀಯ ಬಾಲಕ ಮೃತನಾಗಿ ನಾಲ್ವರು ಬಾಲಕಿಯರು ಗಾಯಗೊಂಡ ಬಳಿಕ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಉಂಟಾಗಿತ್ತು. ಪ್ರತಿಭಟನಕಾರರು ಮತ್ತು ಭದ್ರತಾ ಪಡೆಗಳ ನಡುವೆ ಕಳೆದರಡು ದಿನಗಳಲ್ಲಿ ಹಲವಾರು ಸಣ್ಣಪುಟ್ಟ ಘರ್ಷಣೆಗಳು ನಡೆದಿದ್ದವು. 

2018: ನವದೆಹಲಿ: ಗುಜರಾತ್ ಚುನಾವಣಾ ಫಲಿತಾಂಶ ಪಕ್ಷಕ್ಕೆ ಇತ್ತೀಚೆಗೆ ಸ್ವಲ್ಪ ಮಟ್ಟಿನ ಆಘಾತ
ನೀಡಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇನ್ನೂ ಜನಪ್ರಿಯತೆಯಲ್ಲಿ ಉತ್ತುಂಗದಲ್ಲಿಯೇ ಇದೆ.  ಈಗ ಸಂಸದೀಯ ಚುನಾವಣೆ ನಡೆದರೆ, ಆಡಳಿತ ವಿರೋಧಿ ಅಲೆ ಹೆಚ್ಚುತ್ತಿರುವುದರ ಹೊರತಾಗಿಯೂ ಪ್ರಧಾನಿ ಮೋದಿ ಅವರು ಇನ್ನೊಂದು ಅವಧಿಗೆ ಲೀಲಾಜಾಲವಾಗಿ ಅಧಿಕಾರ ಪಡೆದುಕೊಳ್ಳುವರು ಎಂದು ಎಬಿಪಿ ನ್ಯೂಸ್-ಲೋಕನೀತಿ-ಸಿಎಸ್ ಡಿಎಸ್ ನಡೆಸಿದ ಸಮೀಕ್ಷೆ ಭವಿಷ್ಯ ನುಡಿಯಿತು. ರಾಷ್ಟ್ರದಲ್ಲಿ ಈಗ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಒಟ್ಟು ೨೯೩ರಿಂದ ೩೦೯ ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿತು.  ಇದು ಎನ್ ಡಿ ಎ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನಗಳಿಗಿಂತ ೩೦ ರಷ್ಟು ಕಡಿಮೆ.
೨೦೧೪ರ ಚುನಾವಣೆಯಲ್ಲಿ ಗೆದ್ದ ೩೩೬ ಸ್ಥಾನಗಳಲ್ಲಿ ೩೦ ಸ್ಥಾನಗಳನ್ನು ಎನ್‌ಡಿಎ ಕಳೆದುಕೊಳ್ಳುವುದು ಎಂದರೆ ಬಿಜೆಪಿಗೆ ೨೭೨ ಸ್ಥಾನಗಳ ಬಹುಮತಕ್ಕೆ ಸ್ವಲ್ಪ ಕೊರತೆಯಾಗುತ್ತದೆ. ಸಮೀಕ್ಷೆಯ ಪ್ರಕಾರ ದೇಶದಲ್ಲಿ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ (ಯುಪಿಎ) ಸ್ಥಾನಗಳ ಸಂಖ್ಯೆ ಮತ್ತು ಕಾಂಗ್ರೆಸ್ ಪಕ್ಷದ ಮತಪಾಲು ಹೆಚ್ಚಲಿದೆ. ೨೦೧೭ರಲ್ಲಿ ನಡೆದಿದ್ದ ಇಂತಹುದೇ ಇನ್ನೊಂದು ಸಮೀಕ್ಷೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ೩೩೧ ಸ್ಥಾನಗಳ ಭವಿಷ್ಯ ನುಡಿದಿತ್ತು. ಬಿಜೆಪಿ ಜನಪ್ರಿಯತೆಯಲ್ಲಿನ ಅಲ್ಪ ಕುಸಿತವು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾಗಿರುವಂತೆ ಕಾಣಿಸುತ್ತಿದೆ. ಸಮೀಕ್ಷೆಯ ಪ್ರಕಾರ ಯುಪಿಎ ೧೨೭ ಸ್ಥಾನಗಳನ್ನು ಮತ್ತು ಇತg ಪಕ್ಷಗಳು ೧೧೫ ಸ್ಥಾನಗಳನ್ನು ಪಡೆಯಲಿವೆ. ಕಾಂಗ್ರೆಸ್ ಪಕ್ಷವು ಪ್ರಸ್ತುತ ಶೇಕಡಾ ೨೫ರಷ್ಟು ಮತಪಾಲು ಹೊಂದಿದ್ದು ಇದು ೨೦೧೭ರ ಮೇ ತಿಂಗಳಿಗೆ ಹೋಲಿಸಿದರೆ ೪ ಪಾಯಿಂಟಿನಷ್ಟು ಹಾಗೂ ೨೦೧೪ರ ಮಹಾಚುನಾವಣೆಯಲ್ಲಿ ಸೋತಾಗ ಪಕ್ಷ ಗಳಿಸಿದ್ದ ಶೇಕಡಾ ೧೯ರಷ್ಟು ಮತಪಾಲಿಗಿಂತ ೬ ಪಾಯಿಂಟಿನಷ್ಟು ಹೆಚ್ಚು. ಕಾಂಗ್ರೆಸ್ಸಿನ ಮಿತ್ರ ಪಕ್ಷಗಳು ಶೇಕಡಾ ೫ರಷ್ಟು ಮತಪಾಲು ಪಡೆಯಲಿದ್ದು, ಇದು ೨೦೧೭ರ ಮೇ ತಿಂಗಳ ಸಮೀಕ್ಷೆಗಿಂತ ಸ್ವಲ್ಪ ಕಡಿಮೆ.  ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಅತ್ಯಂತ ಜನಪ್ರಿಯ ನಾಯರಕಾಗಿಯೇ ಮುಂದುವರೆದಿದ್ದರೂ, ಅವರ ವೈಯಕ್ತಿಕ ಜನಪ್ರಿಯತೆ ಕೂಡಾ ಕಳೆದ ೮ ತಿಂಗಳಲ್ಲಿ ಇಳಿಮುಖಗೊಂಡಿದೆ. ೨೦೧೭ರ ಮೇ ತಿಂಗಳಲ್ಲಿ ಶೇಕಡಾ ೪೪ರಷ್ಟು ಮತದಾರರು ದಿಢೀರ್ ಚುನಾವಣೆ ನಡೆದರೆ ಅವರು ಪ್ರಧಾನಿಯಾಗಿ ಮತ್ತೆ ಬರಬೇಕು ಎಂದು ಬಯಸಿದ್ದರು. ಈಗ ಹೀಗೆ ಬಯಸುವವರ ಸಂಖ್ಯೆ ಶೇಕಡಾ ೭ರಷ್ಟು ಇಳಿಮುಖವಾಗಿದ್ದು, ಶೇಕಡಾ ೩೭ಕ್ಕೆ ಇಳಿಯಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚಿದೆ ಎಂದು ಸಮೀಕ್ಷೆ ಹೇಳಿತು.  ಶೇಕಡಾ ೪೮ರಷ್ಟು ಮಂದಿ ರಾಹುಲ್ ಗಾಂಧಿ ಅವರು ರಾಷ್ಟ್ರದ ಪ್ರಧಾನಿಯಾಗಲು ಅರ್ಹರಾಗಿದ್ದಾರೆ ಎಂದು ಒಪ್ಪಿದ್ದಾರೆ. ೨೦೧೪ರ ಮಾರ್ಚ್ ತಿಂಗಳಲ್ಲಿ ಲೋಕಸಭಾ ಚುನಾವಣೆಗಿಂತ ಮುಂಚೆ ಲೋಕನೀತಿ ನಡೆಸಿದ್ದ ಸಮೀಕ್ಷೆಗೆ ಹೋಲಿಸಿದರೆ ಈ ಪ್ರಮಾಣ ಶೇಕಡಾ ೮ರಷ್ಟು ಹೆಚ್ಚು. ಆಗ ಶೇಕಡಾ ೪೦ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಬಯಸಿದ್ದರು. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಕಾರ್ಯ ನಿರ್ವಹಣೆ ಬಗೆಗಿನ ಅಸಮಾಧಾನ ಈಗ ಹೆಚ್ಚಿದೆ. ಶೇಕಡಾ ೧೭ರಷ್ಟು ಮಂದಿ ಬಿಜೆಪಿ ಸರ್ಕಾರದ ಬಗ್ಗೆ ಸಂಪೂರ್ಣ ಅಸಮಾಧಾನ ಹೊಂದಿದ್ದರೆ, ಶೇಕಡಾ ೨೩ರಷ್ಟು ಮಂದಿ ಅಲ್ಪ ಅಸಮಾಧಾನ ಹೊಂದಿದ್ದಾರೆ. ೨೦೧೭ರ ಸಮೀಕ್ಷೆಗೆ ಹೋಲಿಸಿದರೆ ಇದು ಹೆಚ್ಚಿದೆ. ಆಗ ಅಸಮಾಧಾನ ಹೊಂದಿದವರ ಪ್ರಮಾಣ ಕ್ರಮವಾಗಿ ಶೇಕಡಾ ೧೫ ಮತ್ತು ೧೨ ಆಗಿತ್ತು. ಈ ಅಸಮಾಧಾನ ಎಲ್ಲ ಪ್ರದೇಶಗಳಲ್ಲೂ ಹೆಚ್ಚಿದೆ. ಜನವರಿ ೭ರಿಂದ ೨೦ರವರೆಗಿನ ಅವಧಿಯಲ್ಲಿ ೧೯ ರಾಜ್ಯಗಳ ೧೭೫ ಸಂಸದೀಯ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಪಾಲ್ಗೊಂಡಿದ್ದ ೧೪,೩೩೬ ಜನರ ಪೈಕಿ ಶೇಕಡಾ ೫೧ರಷ್ಟು ಮಂದಿ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಸಮಾಧಾನ ವ್ಯಕ್ತ ಪಡಿಸಿದರೆ, ಶೇಕಡಾ ೪೧ರಷ್ಟು ಮಂದಿ ಅಸಮಾಧಾನ ವ್ಯಕ್ತ ಪಡಿಸಿದರು. ೨೦೧೭ರ ಮೇ ತಿಂಗಳಲ್ಲಿ ಶೇಕಡಾ ೬೪ ಮಂದಿ ಸರ್ಕಾರದ ಕಾರ್ಯ ನಿರ್ವಹಣೆ ಬಗ್ಗೆ ಸಮಾಧಾನ ವ್ಯಕ್ತ ಪಡಿಸಿದ್ದರು.


2017: ಫ್ಲಾರಿಡಾ: ಅಮೆರಿಕದಲ್ಲಿರುವ ಹೆಬ್ಬಾವುಗಳನ್ನು ಹಿಡಿಯಲು ತಮಿಳುನಾಡು ಮೂಲದ ಹಾವು ಹಿಡಿಯುವವರನ್ನು ಫ್ಲಾರಿಡಾ ಅರಣ್ಯ ಇಲಾಖೆ ನೇಮಕ ಮಾಡಿಕೊಂಡಿತು.. ದಕ್ಷಿಣ ಅಮೆರಿಕಾ ಭಾಗದ ಜೌಗು ಪ್ರದೇಶಗಳಲ್ಲಿನ ಹೆಬ್ಬಾವುಗಳನ್ನು ಹಿಡಿಯಲು ತಮಿಳುನಾಡಿನ ಇರುಳಾ ಬುಡಕಟ್ಟು ಜನಾಂಗದ ಸಾದಿಯಾನ್ ಹಾಗೂ ವಡಿವೇಲ್ ಗೋಪಾಲರನ್ನು ನೇಮಕ ಮಾಡಿಕೊಳ್ಳಲಾಯಿತು.  ಇರುಳಾ ಬುಡಕಟ್ಟು ಜನಾಂಗದವರು ತಮ್ಮ ಪ್ರದೇಶಗಳಲ್ಲಿನ ಹೆಬ್ಬಾವುಗಳನ್ನು ಹಿಡಿದು ನಿಪುಣತೆ ಮೆರೆದಿದ್ದಾರೆ. ಇವರ ಹಾವು ಹಿಡಿಯುವ ಕೌಶಲವನ್ನು ಫ್ಲಾರಿಡಾದವರಿಗೂ ಕಲಿಸಲಿದ್ದಾರೆ ಎಂದು ಫ್ಲಾರಿಡಾ ವನ್ಯಜೀವಿ ಆಯೋಗದ ಮುಖ್ಯಸ್ಥ ಕ್ರಿಸ್ಟನ್ ಸೊಮರ್ಸ್  ತಿಳಿಸಿದರು. ಇಬ್ಬರೂ ಪ್ರಾಯೋಗಿಕವಾಗಿ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಕೇವಲ ಒಂದೇ ವಾರದಲ್ಲಿ 13 ಹೆಬ್ಬಾವುಗಳನ್ನು ಹಿಡಿದರು.. ಫ್ಲಾರಿಡಾ ವಿಶ್ವವಿದ್ಯಾಲಯದಲ್ಲಿ ಪಳಗಿದ ನಾಯಿಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದರು. ಇದರಲ್ಲಿ ಕಿ ಲಾರ್ಗೆ ರಾಷ್ಟ್ರೀಯ ಮೊಸಳೆ ಸಂರಕ್ಷಣಾ ಪ್ರದೇಶವೊಂದರಲ್ಲೇ ನಾಲ್ಕು ಹೆಬ್ಬಾವು ಹಾಗೂ 16 ಅಡಿ ಉದ್ದದ ಹಾವನ್ನು ಹಿಡಿದರು.
2009: ತೀವ್ರ ಅಸ್ವಸ್ಥರಾಗಿ ಹದಿನೈದು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿದ್ದ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ (98) ಅವರು ಈದಿನ ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾದರು. ಮೂತ್ರನಾಳದ ಮತ್ತು ಉಸಿರಾಟದ ತೊಂದರೆ ಕಾರಣ ಅವರು ಜನವರಿ 12 ರಂದು ಆಸ್ಪತ್ರೆಗೆ ದಾಖಲಾಗಿದ್ದರು. 1910ರ ಡಿಸೆಂಬರ 4ರಂದು ಜನಿಸಿದ್ದ ಆರ್ ವೆಂಕಟರಾಮನ್ ಅವರು, 1987 ರಿಂದ 1992ರ ವರೆಗಿನ ಅವಧಿಯಲ್ಲಿ ದೇಶದ ಎಂಟನೇ ರಾಷ್ಟ್ರಪತಿಗಳಾಗಿ ಕಾರ್ಯ ನಿರ್ವಹಿಸಿದ್ದರು. ರಾಷ್ಟ್ರಪತಿಗಳಾಗಿ ಚುನಾಯಿತರಾಗುವ ಮುನ್ನ ನಾಲ್ಕು ವರ್ಷಗಳ ಕಾಲ ಅವರು ಉಪರಾಷ್ಟ್ರಪತಿಗಳಾಗಿದ್ದರು. ಸ್ನೇಹಿತರ ಬಳಗದಲ್ಲಿ ಅಕ್ಕರೆಯಿಂದ 'ಆರ್‌ವಿ' ಎಂದೇ ಗುರುತಿಸಿಕೊಂಡಿದ್ದ ರಾಮಸ್ವಾಮಿ ವೆಂಕಟರಾಮನ್ ಅವರು ಸಮ್ಮಿಶ್ರ ಸರ್ಕಾರ ಯುಗದ ಹರಿಕಾರ. ವಿ.ಪಿ.ಸಿಂಗ್, ಚಂದ್ರಶೇಖರ್ ಹಾಗೂ ಪಿ.ವಿ.ನರಸಿಂಹರಾವ್ ಸೇರಿದಂತೆ ಮೂವರು ಪ್ರಧಾನ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದ ಹಿರಿಮೆಯನ್ನು ಕೂಡ ಹೊಂದಿದವರು. 1987 ರ ಜುಲೈ 25 ರಿಂದ 1992 ರ ಜುಲೈ 25 ರ ವರೆಗಿನ ತಮ್ಮ ಅಧಿಕಾರಾವಧಿಯಲ್ಲಿ ದೇಶದ ರಾಜಕೀಯದಲ್ಲಿ ಅತ್ಯಂತ ಸವಾಲಿನ ಘಟ್ಟವನ್ನು ಅವರು ಎದುರಿಸಿದ್ದರು. ಮಂಡಲ್ ಆಯೋಗದ ವರದಿ, ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆಯಲ್ಲಿ ನಡೆದ ಹಿಂಸಾಚಾರ, 1991 ರಲ್ಲಿ ರಾಜೀವ್ ಗಾಂಧಿ ಹತ್ಯೆ... ಹೀಗೆ ವೆಂಕಟರಾಮನ್ ಅವರು ಒಂದಿಲ್ಲೊಂದು ಅಗ್ನಿಪರೀಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳಬೇಕಾಯಿತು. ಲೋಕಸಭೆಯಲ್ಲಿ ಅತ್ಯಧಿಕ ಸಂಖ್ಯಾಬಲ ಹೊಂದಿದ್ದರೂ ಕಾಂಗ್ರೆಸ್ ಪಕ್ಷವು 1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿತು. ಆಗ ವೆಂಕಟ್‌ರಾಮನ್ ಅವರು ಸಂಪ್ರದಾಯದಂತೆ ಲೋಕಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದರು. ವಿ.ಪಿ.ಸಿಂಗ್ ಸರ್ಕಾರ ರಚಿಸುವ ಅವಕಾಶ ಪಡೆದುಕೊಂಡರು. 54 ಸದಸ್ಯ ಬಲದ ಜನತಾದಳಕ್ಕೆ ಕಾಂಗ್ರೆಸ್ ಪಕ್ಷದಿಂದ ಬೆಂಬಲ ದೊರಕಿಸಿಕೊಡುವ ಸಂಬಂಧ ರಾಜೀವ್ ಅವರಿಂದ ಆಶ್ವಾಸನೆ ಪಡೆದಿದ್ದರು. 1990 ರಲ್ಲಿ ವಿ.ಪಿ.ಸಿಂಗ್ ಸರ್ಕಾರ ಪತನಗೊಂಡ ಬಳಿಕ ಚಂದ್ರಶೇಖರ್ ಅವರಿಗೆ ಸರ್ಕಾರ ರಚಿಸುವಂತೆ ಆಹ್ವಾನಿಸಲಾಯಿತು. 1991 ರಲ್ಲಿ  ಪಿ.ವಿ.ನರಸಿಂಹರಾವ್ ಪ್ರಧಾನಿಯಾದರು. ಹೀಗೆ ವೆಂಕಟರಾಮನ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಮೂವರು ಪ್ರಧಾನಿಗಳಿಗೆ ಪ್ರಮಾಣ ವಚನ ಬೋಧಿಸಿದರು. 1910 ರಲ್ಲಿ ತಮಿಳುನಾಡು ತಂಜಾವೂರಿನ ರಾಜಮೇದಂನಲ್ಲಿ ಜನನ. ಚೆನ್ನೈನಲ್ಲಿ ಕಾನೂನು ಪದವಿ. 1938ರಲ್ಲಿ ಜಾನಕಿ ಅವರೊಂದಿಗೆ ವಿವಾಹ. 1942 ಕ್ಷಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. 1952 ರಲ್ಲಿ ಮೊದಲ ಬಾರಿ ಲೋಕಸಭಾಸದಸ್ಯರಾಗಿ ಆಯ್ಕೆ. 1953 ರಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯದರ್ಶಿ. 1957ರಲ್ಲಿ ಮತ್ತೆ ಚೆನ್ನೈಗೆ ಆಗಮನ. ಮುಂದಿನ 10 ವರ್ಷಗಳ ಕಾಲ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಣೆ. 1967ರಲ್ಲಿ ಯೋಜನಾ ಆಯೋಗದ ಸದಸ್ಯರಾಗಿ ನೇಮಕ. 1984ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆ. 1987ರಲ್ಲಿ ರಾಷ್ಟ್ರಪತಿ ಹುದ್ದೆ ಅಲಂಕಾರ.

2009: ಆರೋಗ್ಯ ಕಾರಣಕ್ಕಾಗಿ ಮುಸಿಮ್ಲರು ಯೋಗಾಭ್ಯಾಸ ನಡೆಸುವುದರಲ್ಲಿ ಯಾವುದೇ ತಪ್ಪೂ ಇಲ್ಲ ಎಂದು ಇಸ್ಲಾಮಿನ ಪ್ರಮುಖ ಸಂಸ್ಥೆ ದಾರುಲ್ ಉಲೂಂ ಹೇಳಿತು. 'ಯೋಗಾಭ್ಯಾಸ ಅಥವಾ ಇತರ ಯಾವುದೇ ದೈಹಿಕ ಕಸರತ್ತು ಮಾಡದೆ ಇರಲು ಇಸ್ಲಾಮ್ ಯಾರೊಬ್ಬರನ್ನೂ ನಿಷೇಧಿಸಿಲ್ಲ. ನೀವು ಯಾವ ನಂಬಿಕೆಯಿಂದ ಯೋಗಾಭ್ಯಾಸ ಮಾಡುತ್ತೀರಿ ಎಂಬುದೇ ಇಲ್ಲಿ ಮುಖ್ಯ. ಆರೋಗ್ಯ ಕಾರಣಕ್ಕಾಗಿ ಯೋಗ ಮಾಡಿದರೆ ಅದರಲ್ಲಿ ಯಾವುದೇ ಸಮಸ್ಯೆಯೂ ಇಲ್ಲ' ಎಂದು ದಾರುಲ್ ಉಲೂಂನ ಪರಿಣತ ಖಾರಿ ಉಸ್ಮಾನ್ ಹೇಳಿದರು. ಇಸ್ಲಾಮೇತರ ಧಾರ್ಮಿಕ ಆಚರಣೆಗಳು ಇಲ್ಲದಿದ್ದರೆ ಯೋಗಾಭ್ಯಾಸವೂ ಉತ್ತಮವೇ ಎಂದು ಉತ್ತರ ಪ್ರದೇಶದ ದೇವ ಬಂದ್ ದಾರುಲ್ ಉಲೂಮಿನ ಈ ಧರ್ಮಗುರುಗಳು ಹೇಳಿದರು. ಯೋಗ ಗುರು ರಾಮದೇವ್ ಅವರು ಹಿಂದೂಗಳು 'ಓಂ' ಎಂದರೆ ಮುಸ್ಲಿಮರು 'ಅಲ್ಲಾ' ಎನ್ನಬಹುದು ಎಂದಿರುವ ಬಗ್ಗೆ ಖಾರಿ ಅವರನ್ನು ಕೇಳಿದಾಗ, 'ಯೋಗ ಅಭ್ಯಾಸ ಮಾಡುವುದು ದೈಹಿಕ ಸಾಮರ್ಥ್ಯಕ್ಕಾಗಿ, ಇಲ್ಲಿ ಧಾರ್ಮಿಕ ಮಂತ್ರಗಳನ್ನು ಸೇರಿಸುವುದು ಏಕೆ' ಎಂದು ಪ್ರಶ್ನಿಸಿದರು.

2009: ದಕ್ಷಿಣ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬಳು ಒಂದೇ ಪ್ರಸವಕಾಲಕ್ಕೆ ಎಂಟು ಮಕ್ಕಳನ್ನು ಹೆತ್ತು ದಾಖಲೆ ಸ್ಥಾಪಿಸಿದಳು. ಶಸ್ತ್ರಚಿಕಿತ್ಸೆಯ ಮೂಲಕ ಐದು ನಿಮಿಷಗಳ ಅಂತರದಲ್ಲಿ ಈ ಮಕ್ಕಳನ್ನು ತಾಯಿಯ ಗರ್ಭದಿಂದ ಹೊರತೆಗೆಯಲಾಯಿತು. ಎಂಟು ಶಿಶುಗಳಲ್ಲಿ ಆರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಎಲ್ಲ ಮಕ್ಕಳು ಹಾಗೂ ತಾಯಿಯ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದರು. ಈ ಶಿಶುಗಳು 880 ಗ್ರಾಮಿನಿಂದ 1.47 ಗ್ರಾಮ್‌ವರೆಗೆ ತೂಗುತ್ತಿವೆ. ಮೂರು ಮಕ್ಕಳಿಗೆ ಉಸಿರಾಟದ ತೊಂದರೆಯಿತ್ತು. ಎಲ್ಲ ಮಕ್ಕಳನ್ನು ಎರಡು ತಿಂಗಳುಗಳ ಕಾಲ ಇನ್‌ಕ್ಯುಬೇಟರ್‌ನಲ್ಲಿ ಇಡಲಾಗುತ್ತದೆ. ಒಂದೇ ಬಾರಿ ಎಂಟು ಜೀವಂತ ಶಿಶುಗಳನ್ನು ಹೆತ್ತವರಲ್ಲಿ ಈ ಮಹಿಳೆ ಎರಡನೆಯವಳು. 1998ರಲ್ಲಿ ನೈಜೀರಿಯಾ ಮೂಲದ ಟೆಕ್ಸಾಸ್ ಮಹಿಳೆಯೊಬ್ಬಳು 300 ಗ್ರಾಮಿನಿಂದ 800 ಗ್ರಾಮ್ ತೂಕದ ಎಂಟು ಮಕ್ಕಳನ್ನು ಹೆತ್ತಿದ್ದಳು. ಇವುಗಳಲ್ಲಿ ಅತಿ ಚಿಕ್ಕ ಶಿಶು ಕೆಲ ದಿನಗಳ ನಂತರ ಸಾವನ್ನಪ್ಪಿತ್ತು.

2009: ತುಮಕೂರಿನ ಸಿದ್ಧಗಂಗಾ ಮಠದ ವತಿಯಿಂದ ಪ್ರಥಮ ಬಾರಿಗೆ ನೀಡಲಾಗುವ 'ಸಿದ್ಧ ಗಂಗಾ ಶ್ರೀ' ಪ್ರಶಸ್ತಿಗೆ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಡಾ.ಶಿವಕುಮಾರ ಸ್ವಾಮೀಜಿ ಶತಮಾನೋತ್ಸವ ಸಮಿತಿ ಸಂಚಾಲಕರೂ ಆದ ಶಾಸಕ ವಿ.ಸೋಮಣ್ಣ ಈ ಬಗ್ಗೆ ಮಾಹಿತಿ ನೀಡಿ, 'ಇದೇ ಮೊದಲ ಬಾರಿಗೆ 'ಸಿದ್ಧ ಗಂಗಾಶ್ರೀ' ಪ್ರಶಸ್ತಿ ನೀಡಲಾಗುತ್ತಿದ್ದು, ಡಾ.ಜಿ.ಎಸ್.ಎಸ್. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

2008: ಪ್ರಸ್ತುತ ಸಾಲಿನ ಪದ್ಮಶ್ರೀ ವಿಜೇತರಲ್ಲಿ ಉತ್ತರ ಪ್ರದೇಶದ ಮಾವು ಬೆಳೆಗಾರರೊಬ್ಬರು ಸೇರಿದ್ದು ವಿಶೇಷವಾಗಿ ಗಮನ ಸೆಳೆಯಿತು. ಉತ್ತರ ಪ್ರದೇಶದ ಮಲಿಹಾಬಾದ್ ಪಟ್ಟಣದಲ್ಲಿ ವಾಸಿಸುವ ಮಾವು ಬೆಳೆಗಾರ ಕಲೀಮುಲ್ಲಾ ಖಾನ್ ಅವರಿಗೆ ಪದ್ಮಶ್ರೀ ಬಂದಿತು. ಇವರು ಒಂದೇ ಮಾವಿನ ಮರದಿಂದ 300 ಕ್ಕೂ ಹೆಚ್ಚು ಹೊಸ ತಳಿಗಳನ್ನು ಉತ್ಪಾದಿಸಿದ್ದಾರೆ. ಆರಂಭದಲ್ಲಿ ತಮ್ಮ ತಂದೆಯಿಂದ ಕಲಿತ ಈ ವಿದ್ಯೆಯನ್ನು ಹಾಗೇ ಬೆಳೆಸಿಕೊಂಡಿದ್ದಾರೆ. ಮೊದ ಮೊದಲು ನಾಟಿ ತಳಿಗಳನ್ನು ಬೆಳೆಸುತ್ತಿದ್ದರು. ನಂತರ ಹೈಬ್ರಿಡ್ ತಳಿಗಳನ್ನು ಪ್ರಯೋಗಗಳ ಮೂಲಕ ಬೆಳೆಯಲಾರಂಭಿಸಿದರು. ಕಲಿಮುಲ್ಲಾ ಪರಿಣತಿ ಅರಿತ ಇರಾನ್ ಸರ್ಕಾರ ತಮ್ಮಲ್ಲೇ ಬಂದು ನೆಲಸುವಂತೆ ಆಹ್ವಾನ ನೀಡಿತು. ಈ ಆಹ್ವಾನವನ್ನು ತಿರಸ್ಕರಿಸಿದ ಖಾನ್, ತಮ್ಮ ಕುಟುಂಬದವರು ಮಾವು ಬೆಳೆಸುತ್ತಿದ್ದ ಮಲಿಹಾಬಾದ್ ಪ್ರದೇಶದಲ್ಲಿಯೇ ಇರಲು ಬಯಸಿದರು.

2008: ಮೂರು ದಶಕಗಳ ಕಾಲ ಇಂಡೋನೇಷ್ಯಾವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ಆಡಳಿತ ನಡೆಸಿದ್ದ, ದಶಲಕ್ಷಕ್ಕೂ ಅಧಿಕ ವಿರೋಧಿಗಳನ್ನು ಸಾಯಿಸಿದ್ದ ಆರೋಪ ಹೊತ್ತ ಸರ್ವಾಧಿಕಾರಿ ಎಚ್.ಎಂ.ಸುಹಾರ್ತೋ (86) ಈದಿನ ಜಕಾರ್ತದ ಆಸ್ಪತ್ರೆಯಲ್ಲಿ ನಿಧನರಾದರು. ಸುಹಾರ್ತೋ ಅವರ ನಿಧನವನ್ನು ಪೊಲೀಸ್ ಮುಖ್ಯಸ್ಥರು ಅಧಿಕೃತವಾಗಿ ಘೋಷಿಸಿದರು. ಹೃದಯ, ಮೂತ್ರಪಿಂಡ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಮೂರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1967ರಲ್ಲಿ ಇಂಡೋನೇಷ್ಯಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಹಾರ್ತೋ, ನಿರ್ದಯಿ ಸರ್ವಾಧಿಕಾರಿಯಾಗಿದ್ದರು. ಕಮ್ಯೂನಿಸ್ಟ್ ಪಕ್ಷದ ಕಟ್ಟಾ ವಿರೋಧಿಯಾಗಿದ್ದ ಅವರ ಮೇಲೆ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದಾರೆಂಬ ಆರೋಪವಿತ್ತು. ಕಮ್ಯುನಿಸ್ಟ್ ವಿರೋಧಿ ನೀತಿ ಹಾಗೂ ಆಡಳಿತದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಸಮರ ಸಾರಿದ್ದವು. ಜೊತೆಗೆ 1997ರಲ್ಲಿ ಏಷ್ಯಾದ ಆರ್ಥಿಕ ಬಿಕ್ಕಟ್ಟು ಅವರು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತು.

2008: ಸೇತು ಸಮುದ್ರಂ ಯೋಜನೆಯಿಂದ ನೌಕಾದಳಕ್ಕಾಗಲೀ ಅಥವಾ ಅಂತಾರಾಷ್ಟ್ರೀಯ ನೌಕಾಯಾನ ಸಂಸ್ಥೆಗಳಿಗಾಗಲೀ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಈ ಯೋಜನೆಯನ್ನು ತತ್ ಕ್ಷಣವೇ ಕೈಬಿಡಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಚೆನ್ನೈಯಲ್ಲಿ ಆಗ್ರಹಿಸಿದರು.

2008: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಸೊಸೆ ಐಶ್ವರ್ಯ ರೈ ಬಚ್ಚನ್ ಹೆಸರಿನ ಮಹಿಳಾ ಕಾಲೇಜಿಗೆ ಬಚ್ಚನ್ ಕುಟುಂಬ ಅಡಿಗಲ್ಲು ಹಾಕಿತು. ಭೂ ವಿವಾದ ಕುರಿತು ಅಮಿತಾಬ್ ಬಚ್ಚನ್ ಮೇಲಿದ್ದ ಪ್ರಕರಣವನ್ನು ಎರಡು ತಿಂಗಳ ಹಿಂದೆಯೇ ಅಲ್ಲಿನ ಹೈಕೋರ್ಟ್ ಇತ್ಯರ್ಥ ಪಡಿಸಿತ್ತು.

2008: ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ ಗುಡಗಾಂವ್ ಅಕ್ರಮ ಮೂತ್ರಪಿಂಡ (ಕಿಡ್ನಿ) ಕಸಿ ಹಗರಣ ತಡೆಗಟ್ಟುವಲ್ಲಿ ರಾಜ್ಯ ಪೊಲೀಸರು ವಿಫಲವಾದುದನ್ನು ಹರಿಯಾಣಾದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಒಪ್ಪಿಕೊಂಡರು. ಇದು ರಾಜ್ಯ ಸರ್ಕಾರದ ದೊಡ್ಡ ವೈಫಲ್ಯ ಎಂದು ಹೂಡಾ ಹೇಳಿದರು. ಕಿಡ್ನಿ ಹಗರಣದ ಪ್ರಮುಖ ಆರೋಪಿಯ ಹೆಸರು ಡಾ. ಅಮಿತ್ ಕುಮಾರ್ ಹೌದೇ ಅಥವಾ ಡಾ. ಸಂತೋಷ್ ರಾವುತ್ ಎಂದೇ? ಎಂಬ ಗುಮಾನಿ ಪೊಲೀಸ್ ವಲಯದಲ್ಲಿ ಮನೆ ಮಾಡಿತು. ಮುಂಬೈ ವಿಮಾನ ನಿಲ್ದಾಣದಲ್ಲಿ 14 ವರ್ಷಗಳ ಹಿಂದೆ ಕೆಲವು ಶ್ರೀಮಂತ ಪ್ರಯಾಣಿಕರನ್ನು ಕರೆದೊಯ್ಯುವ ಸಲುವಾಗಿ ಟ್ಯಾಕ್ಸಿ ಚಾಲಕರು ಹಿಡಿದುಕೊಂಡಿದ್ದ ಫಲಕಗಳಲ್ಲಿ ಡಾ. ರಾವುತ್ ಹೆಸರು ಇತ್ತು. 1994ರಲ್ಲಿ ಡಾ. ರಾವುತ್ ನನ್ನು ಬಂಧಿಸಿ ಹಗರಣ ಬಯಲಿಗೆಳೆಯಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಆತ ಮುಂಬೈಯಿಂದ ದೂರ ಹೋಗಿದ್ದರೂ, ಆತನ ಕುಟುಂಬ ಇನ್ನೂ ಮುಂಬೈಯಲ್ಲೇ ಇತ್ತು. ದೇಶದಲ್ಲೇ ಅತಿ ದೊಡ್ಡ ಕಿಡ್ನಿ ಹಗರಣ ನಡೆದದ್ದು ಡಾ. ರಾವುತ್ ನ ಕೌಶಲ್ಯ ನರ್ಸಿಂಗ್  ಹೋಮ್ ನಲ್ಲಿ. ಅದೊಂದು ಆಯುರ್ವೇದ ಆಸ್ಪತ್ರೆಯಾದರೂ ಭಾರಿ ಪ್ರಮಾಣದ ಅಕ್ರಮ ಕಿಡ್ನಿ ಕಸಿ ಅಲ್ಲಿ ನಡೆದಿತ್ತು. ಬಳಿಕ ಮಹಾರಾಷ್ಟ್ರ ರಾಜ್ಯ ಮಾನವ ಅಂಗಾಂಗ ದಾನಕ್ಕೆ ಕಠಿಣ ಶಾಸನ ರೂಪಿಸಿತು. ಆದರೂ ಡಾ. ರಾವುತನ ಜಾಲ ದೇಶದ ಇತರ 5 ಕಡೆಗಳಿಗೆ ವ್ಯಾಪಿಸಿತ್ತು.

2008: ಮಂಗಳೂರಿನ ಮಂಗಳಾ ಮ್ಯಾಜಿಕ್ ಸರ್ಕಲ್ ಆಶ್ರಯದಲ್ಲಿ ನಗರದ ಕದ್ರಿ ಶ್ರೀಗೋರಕ್ಷನಾಥ ಸಭಾಭವನದ ಸಂಸ್ಥಾಪಕ ದಿವಂಗತ ಪ್ರೊ. ಬಾಸ್ ವೇದಿಕೆಯಲ್ಲಿ ನಡೆದ `ಕಣ್ಕಟ್-2008' ಸಮ್ಮೇಳನವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಕಾಸರಗೋಡಿನ ವಾಸುದೇವ ಕೋಟೂರು (ವಾಕೋ), ಉಡುಪಿ ಪ್ರಹ್ಲಾದ ಆಚಾರ್ಯ ಹಾಗೂ ಮಂಗಳೂರಿನ ಪ್ರದೀಪ್ ಸೂರಿ ಜಾದೂತಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ರಾಜ್ಯಮಟ್ಟದ ಜಾದೂ ಸ್ಪರ್ಧೆಯಲ್ಲಿ ಬೆಂಗಳೂರಿನ ಕರುಣ್ ಕೃಷ್ಣ ಹಾಗೂ ಮಂಗಳೂರಿನ ಮಹೇಶ್ ಜಿ.ಎಸ್. ಪ್ರಶಸ್ತಿ ಗಳಿಸಿದರು.

2008: ಗುಲ್ಬರ್ಗ ಜಿಲ್ಲೆ ಶಹಬಾದಿನಿಂದ ಮಹಾರಾಷ್ಟ್ರದ ಕರಾಡ ಪಟ್ಟಣಕ್ಕೆ ಪರಸಿ ಕಲ್ಲು ತುಂಬಿಕೊಂಡು ಹೊರಟಿದ್ದ ಲಾರಿ ನಗರದ ಹೊರವಲಯದ ಡೋಣಿ ನದಿ ಸೇತುವೆ ಬಳಿ ಮಗುಚಿ ಬಿದ್ದು 10 ಜನ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, 13 ಜನರು ಗಾಯಗೊಂಡರು.

2008: ಜಾಮೀನಿನ ಮೇಲೆ ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆಯಾಗಿದ್ದ ರೌಡಿ ಕೊರಂಗು ಕೃಷ್ಣ (46) ಕಾರಿನಲ್ಲಿ ಆಂಧ್ರಪ್ರದೇಶದ ಚಿತ್ತೂರು ಬಳಿ ಪ್ರಯಾಣಿಸುತ್ತಿದ್ದಾಗ ಬಾಂಬ್ ಸ್ಫೋಟಿಸಿ ಗಾಯಗೊಂಡ.

2007: ಖ್ಯಾತ ಮಲಯಾಳಿ ಬರಹಗಾರ, ಸಾಹಿತ್ಯ ವಿಮರ್ಶಕ ಡಾ. ಸುಕುಮಾರ ಅಯಿಕ್ಕೋಡ್ ಅವರು ಗಣರಾಜ್ಯೋತ್ಸವ ಮುನ್ನಾದಿನ ತಮಗೆ ಘೋಷಿಸಲಾದ `ಪದ್ಮಶ್ರೀ' ಪ್ರಶಸ್ತಿಯನ್ನು ತಿರಸ್ಕರಿಸಿದರು. ಇಂತಹ ಪ್ರಶಸ್ತಿಗಳು, ಸಂವಿಧಾನವು ನೀಡಿರುವ ಎಲ್ಲ ನಾಗರಿಕರ ಸಮಾನತೆಯ ತತ್ವಕ್ಕೆ ವಿರುದ್ಧವಾದವುಗಳು ಎಂದು ಅಯಿಕ್ಕೋಡ್ ಹೇಳಿದರು. ಸರ್ಕಾರಗಳು ಆಯ್ದ ವ್ಯಕ್ತಿಗಳಿಗೆ ಈ ರೀತಿ ಪ್ರಶಸ್ತಿ ಪ್ರದಾನ ಮಾಡುವುದು ಸಂವಿಧಾನವು ಖಾತರಿ ಪಡಿಸಿರುವ ಎಲ್ಲ ನಾಗರಿಕರ ಸಮಾನತೆಯ ತತ್ವಕ್ಕೆ ವಿರುದ್ಧವಾದುದು ಎಂದು ತಾವು ಸ್ಪಷ್ಟವಾಗಿ ಪರಿಗಣಿಸುವುದಾಗಿ ಅಯಿಕೋಡ್ ದೃಢಪಡಿಸಿದರು. ಕೇರಳದ ಸಾಂಸ್ಕೃತಿಕ ಪ್ರಪಂಚದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಅಯಿಕ್ಕೋಡ್ ಖ್ಯಾತ ಸಾಹಿತ್ಯ ವಿಮರ್ಶಕ, ಭಾಷಣಕಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದು, ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿದಂತೆ ನೇರ ಅಭಿಪ್ರಾಯ ವ್ಯಕ್ತ ಪಡಿಸುವುದಕ್ಕೆ ಹೆಸರಾಗಿದ್ದಾರೆ.

2007: ಭವಿಷ್ಯನಿಧಿಯ ಬಡ್ಡಿ ದರವನ್ನು ಪ್ರಸ್ತುತ ಹಣಕಾಸು ವರ್ಷದಲ್ಲಿ ಇಳಿಸುವುದಕ್ಕೆ ಸಂಬಂಧಿಸಿದ ವಿವಾದಾತ್ಮಕ ವಿಷಯ ಕುರಿತ ನಿರ್ಧಾರ ಕೈಗೊಳ್ಳಲು ನೌಕರರ ಭವಿಷ್ಯನಿಧಿ ಮಂಡಳಿಯ ಸಭೆ ವಿಫಲಗೊಂಡಿದ್ದು, ಇ ಪಿ ಎಫ್ ನಿಧಿಯ ಶೇಕಡಾ 5ರಷ್ಟು ಹಣವನ್ನು ಈಕ್ವಿಟಿ ಮಾರುಕಟ್ಟೆಯಲ್ಲಿ ತೊಡಗಿಸುವ ಹಣಕಾಸು ಸಚಿವಾಲಯದ ಪ್ರಸ್ತಾವವನ್ನೂ ತಿರಸ್ಕರಿಸಿತು.

2007: ಸಹಸ್ರಮಾನದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಲೀಜನ್ ಡಿ' ಆನರ್'ನ್ನು ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮಿತಾಭ್ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಫ್ರೆಂಚ್ ರಾಯಭಾರಿ ಡೊಮಿನಿಕ್ ಗಿರಾರ್ಡ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸಮಾರಂಭದಲ್ಲಿ ಅಮಿತಾಭ್ ಅವರ ಭಾವಿ ಸೊಸೆ ಐಶ್ವರ್ಯ ರೈ ಸೇರಿದಂತೆ ಅವರು ಕುಟುಂಬದ ಸದಸ್ಯರು ಭಾಗವಹಿಸಿದ್ದರು.

2007: ಬಾಲಿವುಡ್ ನಟ ರಾಹುಲ್ ರಾಯ್ ಭಾರತದ ರಿಯಾಲಿಟಿ ಟಿವಿ ಶೋ `ಬಿಗ್ ಬಾಸ್' ಆಗಿ ಆಯ್ಕೆಯಾದರು.

2007: ಹಿರಿಯ ನೃತ್ಯ ಕಲಾವಿದೆ ಪದ್ಮಿನಿ ರಾವ್ (50) ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಟುವಾಂಗ ನಡೆಸಿಕೊಡುತ್ತಿರುವಾಗಲೇ ತೀವ್ರ ಅಸ್ವಸ್ಥರಾಗಿ ನಿಧನರಾದರು. ತಮ್ಮ ಸಂಸ್ಥೆ ಪೊನ್ನಯ್ಯ ಲಲಿತಕಲಾ ಅಕಾಡೆಮಿ ವತಿಯಿಂದ ಇಡೀ ದಿನ `ಕರುನಾಡ ಪರಂಪರೆ' ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಈ ಘಟನೆ ನಡೆಯಿತು.

2007: ದಕ್ಷಿಣ ಆಫ್ರಿಕಾದ ಇತಿಹಾಸ ತಜ್ಞ ಹಾಗೂ ಆಂಗ್ಲೊ-ಜುಲು ಯುದ್ಧದ ವಿವರ ನೀಡುವ ಪರಿಣತ ಡೇವಿಡ್ ರಾತ್ರೆ ಅವರು ತಮ್ಮ ವಸತಿ ಗೃಹದಲ್ಲೇ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು.

2007; ಮೆಲ್ಬೋರ್ನಿನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ರಷ್ಯಾದ ಮಾರಿಯಾ ಶರಪೋವಾ ಅವರನ್ನು ಅಮೆರಿಕದ ಸೆರೆನಾ ಅವರು ಪರಾಭವಗೊಳಿಸಿದರು. ಈ ಮೂಲಕ 28 ವರ್ಷಗಳ ನಂತರ ಗೆದ್ದ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1978ರಲ್ಲಿ ವಿಶ್ವದ 111ನೇ ರ್ಯಾಂಕ್ ಹೊಂದಿದ್ದ ಕ್ರಿಸ್ ಓನೆಲ್ ಈ ಸಾಧನೆ ಮಾಡಿದ್ದರು.

2006: ಕನ್ನಡದ ಪ್ರಪ್ರಥಮ ಹಾಸ್ಯ ಬರಹಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಟಿ. ಸುನಂದಮ್ಮ (89) ಬೆಂಗಳೂರಿನ ತಮ್ಮ ವೈಯಾಲಿಕಾವಲ್ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಹಾಸ್ಯ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದ್ದ ಸುನಂದಮ್ಮ `ಕೊರವಂಜಿ' ಹಾಸ್ಯಪತ್ರಿಕೆಯ ಮೂಲಕ ಹೆಸರಾದರು. ಇವರ ಸಮಗ್ರ ಹಾಸ್ಯ ಕೃತಿ 1993ರಲ್ಲಿಪ್ರಕಟವಾಗಿತ್ತು. `ಭಂಜದ ಚೀಲ', `ಬಣ್ಣದ ಚಿಟ್ಟೆ' ಹಾಗೂ `ಪೆಪ್ಪರ್ ಮೆಂಟ್' ಇವರ ಇನ್ನಿತರ ಕೆಲವು ಕೃತಿಗಳು. `ರಾಜ್ಯೋತ್ಸವ ಪ್ರಶಸ್ತಿ', `ಕರ್ನಾಟಕ ಸಾಹಿತ್ಯ ಅಕಾಡೆಮಿ' ಪುರಸ್ಕಾರ, `ದಾನಚಿಂತಾಮಣಿ' ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಸುನಂದಮ್ಮ ಭಾಜನರಾಗಿದ್ದರು. ಕರ್ನಾಟಕದಲ್ಲಿ `ಲೇಖಕಿಯರ ಸಂಘ' ಕಟ್ಟುವುದಕ್ಕೆ ಕಾರಣಕರ್ತರಾಗಿದ್ದ ಸುನಂದಮ್ಮ, ಸಂಘದ ಸಂಘಟನೆಯಲ್ಲಿ ಕೊನೆಯವರೆಗೆ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

2006: ರಾಜ್ಯಪಾಲರ ಸೂಚನೆಯ ಪ್ರಕಾರ ಈದಿನ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದ್ದ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಸದನದಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಲು ಮುಂದಾಗದೇ ಇದ್ದುದರಿಂದ ಲೋಕಸಭಾಧ್ಯಕ್ಷ ಕೃಷ್ಣ ಅವರು ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿ ರಾಜ್ಯಪಾಲರಿಗೆ ದಿನದ ಬೆಳವಣಿಗಳ ಬಗ್ಗೆ ವರದಿ ಸಲ್ಲಿಸಿದರು.

2006: ಖ್ಯಾತ ಸಂಗೀತ ನಿರ್ದೇಶಕ ಸರ್ದಾರ್ ಮಲ್ಲಿಕ್ (81) ಹೃದಯಾಘಾತದಿಂದ ನಿಧನರಾದರು. ಖ್ಯಾತ ಸಂಗೀತ ನಿರ್ದೇಶಕ ಅನು ಮಲ್ಲಿಕ್ ಅವರ ತಂದೆಯಾದ ಸರ್ದಾರ್ ಮಲ್ಲಿಕ್ ಕಳೆದ ಹಲವಾರು ವರ್ಷಗಳಿಂದ ಪಾರ್ಕಿನ್ಸನ್ ರೋಗದಿಂದ ಅಸ್ವಸ್ಥರಾಗಿದ್ದರು. ಸಾರಂಗ, ಬಚ್ ಪನ್ ಮುಂತಾದ ಚಿತ್ರಗಳಿಗೆ ಸರ್ದಾರ್ ಅವರು ಮಾಡಿದ್ದ ಸಂಗೀತ ಸಂಯೋಜನೆ ಭಾರಿ ಪ್ರಸಿದ್ಧಿ ಗಳಿಸಿತ್ತು.

2000: ಟೆನಿಸ್ ಆಟಗಾರ ಡೊನಾಲ್ಡ್ ಬಜ್ ಅವರು ತಮ್ಮ 84ನೇ ವಯಸ್ಸಿನಲ್ಲಿ ಮೃತರಾದರು. ಅವರು ಗ್ರ್ಯಾಂಡ್ ಸ್ಲಾಮನ್ನು ಮೊತ್ತ ಮೊದಲ ಬಾರಿಗೆ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1974: ರಾಷ್ಟ್ರಪತಿ ವಿ.ವಿ. ಗಿರಿ ಅವರು ನವದೆಹಲಿಯ ತೀನ್ ಮೂರ್ತಿ ಭವನದಲ್ಲಿನ `ನೆಹರು ಸ್ಮಾರಕ ಮ್ಯೂಸಿಯಂ'ನ್ನು ರಾಷ್ಟ್ರಕ್ಕೆ ಅರ್ಪಿಸಿದರು.

1967: ಫ್ಲಾರಿಡಾದ ಕೇಪ್ ಕೆನಡಿಯಲ್ಲಿ ಅಪೋಲೋ 1 ಬಾಹ್ಯಾಕಾಶ ನೌಕೆಯಲ್ಲಿ ಹಠಾತ್ತನೆ ಅಗ್ನಿ ಅನಾಹುತ ಸಂಭವಿಸಿ ಅದರಲ್ಲಿದ್ದ ಅಮೆರಿಕನ್ ಗಗನಯಾನಿಗಳಾದ ವರ್ಗಿಲ್ ಐ, `ಗಸ್' ಗ್ರಿಸ್ಸೋಮ್, ಎಡ್ವರ್ಡ್ ಎಚ್. ವೈಟ್ ಮತ್ತು ರೋಗರ್ ಬಿ. ಚಾಫೀ ಅವರು ಅಸು ನೀಗಿದರು.

1959: ಕಲಾವಿದ ರಾಮಧ್ಯಾನಿ ಜನನ.

1950: ಚಾರ್ಲ್ಸ್ ಫಿಜರ್ ಮತ್ತು ಕಂಪೆನಿಯು (Charles Pfzer and Company) ಹೊಸ ಆಂಟಿ ಬಯೋಟಿಕ್ ಟೆರ್ರಾಮೈಸಿನನ್ನು ಉತ್ಪಾದಿಸಿರುವುದಾಗಿ ಸೈನ್ಸ್ ಮ್ಯಾಗಜಿನ್ ಪ್ರಕಟಿಸಿತು. ಮಣ್ಣಿನಿಂದ ಅದನ್ನು ಪ್ರತ್ಯೇಕಿಸಲಾಗಿತ್ತು. ನ್ಯೂಮೋನಿಯಾ (pneumonia) ಡೀಸೆಂಟ್ರಿ ಮತ್ತು ಇತರ ಸೋಂಕುಗಳಿಗೆ ಇದು ಪರಿಣಾಮಕಾರಿಯಾಗಿತ್ತು. ಫಿಜರ್ ವಿಜ್ಞಾನಿಗಳಿಂದ ಸಂಶೋಧನೆ ಹಾಗೂ ಅಭಿವೃದ್ಧಿಗೊಂಡ ಮೊತ್ತ ಮೊದಲ ಫಾರ್ಮಸ್ಯೂಟಿಕಲ್ ಇದು.

1945: ಗೀತರಚನೆಕಾರ, ಕವಿ, ಕಥೆಗಾರ, ಕಾದಂಬರಿಕಾರ ಎಂ.ಎನ್ ವ್ಯಾಸರಾವ್ ಅವರು ಈದಿನ ನರಸಿಂಗರಾವ್- ಸುಶೀಲಮ್ಮ ದಂಪತಿಯ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು. ಬೆಂಗಳೂರು ಯುನೈಟೆಡ್ ಕಮರ್ಷಿಯಲ್ ಬ್ಯಾಂಕಿನಲ್ಲಿ 34 ವರ್ಷಗಳ ಸೇವೆ ಬಳಿಕ ಸ್ವಯಂ ನಿವೃತ್ತಿ ಪಡೆದು ನಿರಂತರ ಸಾಹಿತ್ಯ ರಚನೆ, ಸಿನಿಮಾ ಸಾಹಿತ್ಯದ ಬರಹದಲ್ಲಿ ತಲ್ಲೀನರಾಗಿದ್ದಾರೆ.

1927: ಖ್ಯಾತ ಹರಿಕಥೆದಾಸ ಬಿ.ಎನ್. ಭೀಮರಾವ್ ಅವರು ನರಸಪ್ಪ-ಲಕ್ಷ್ಮೀದೇವಿ ದಂಪತಿಯ ಮಗನಾಗಿ ಕೊರಟಗೆರೆ ತಾಲ್ಲೂಕಿನ ಸೋಂಪುರದಲ್ಲಿ ಜನಿಸಿದರು.

1926: ಜಾನ್ ಲಾಗೀ ಬೈರ್ಡ್ ಅವರು ತಮ್ಮ `ಹೊಸ ಟೆಲಿವಿಷನ್ ಯಂತ್ರ'ದ ಮೊತ್ತ ಮೊದಲ ಸಾರ್ವಜನಿಕ ಪ್ರದರ್ಶನ ನೀಡಿದರು. ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಷನ್ನಿನ ಸದಸ್ಯರಿಗೆ ಅವರು ಚಲಿಸುವ ವಸ್ತುಗಳನ್ನು ತಮ್ಮ ಯಂತ್ರದಲ್ಲಿ ತೋರಿಸಿದರು.

1880: ಥಾಮಸ್ ಆಲ್ವಾ ಎಡಿಸನ್ ಅವರಿಗೆ `ಇನ್ ಕಾಂಡಿಸೆನ್ಸ್' ನಿಂದ ಬೆಳಕು ನೀಡುವ ಎಲೆಕ್ಟ್ರಿಕ್ ಲೈಟಿಗೆ ಪೇಟೆಂಟ್ (ನಂಬರ್ 223,898) ನೀಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment