ನಾನು ಮೆಚ್ಚಿದ ವಾಟ್ಸಪ್

Sunday, September 30, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 30

ಇಂದಿನ ಇತಿಹಾಸ History Today ಸೆಪ್ಟೆಂಬರ್  30
2018: ಜಮ್ಮುಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಇದ್ದ ಪಾಕಿಸ್ತಾನಿ ಹೆಲಿಕಾಪ್ಟರ್  ಗಡಿ ನಿಯಂತ್ರಣ ರೇಖೆಯಲ್ಲಿ ವಾಯು ಪ್ರದೇಶವನ್ನು ಉಲ್ಲಂಘಿಸಿ ಕೆಲ ಕಾಲ ಹಾರಾಟ ನಡೆಸಿದ ಘಟನೆ ಮಧ್ಯಾಹ್ನ ಘಟಿಸಿತು. ಬಿಳಿ ಬಣ್ಣದ ಪಾಕಿಸ್ತಾನಿ ಹೆಲಿಕಾಪ್ಟರ್ ಮಧ್ಯಾಹ್ನ ೧೨.೧೩ರ ವೇಳೆಯಲ್ಲಿ ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿ ಸ್ವಲ್ಪ ಹೊತ್ತು ಹಾರಾಟ ನಡೆಸಿತು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ ಹೇಳಿದರು. ಅದು ನಾಗರಿಕ ಹೆಲಿಕಾಪ್ಟರ್ ಆಗಿರುವ ಸಾಧ್ಯತೆ ಇದೆ ಎಂದು ಸೇನಾ ಅಧಿಕಾರಿ ನುಡಿದರು. ಭಾರತ ಗಡಿಯ ಮುಂಚೂಣಿ ಪ್ರದೇಶದ ಏರ್ ಸೆಂಟ್ರಿಗಳು ಸಣ್ಣ ಶಸ್ತ್ರಗಳಿಂದ ಹೆಲಿಕಾಪ್ಟರಿನತ್ತ ಗುಂಡು ಹಾರಿಸಿದರು. ಪೈಲಟ್ ಗೆ ವಾಯುಪ್ರದೇಶದ ಉಲ್ಲಂಘನೆ ಆಗಿರುವ ಬಗ್ಗೆ ಎಚ್ಚರಿಸಿ ಹಿಂದಕ್ಕೆ ಹೋಗುವಂತೆ ಒತ್ತಡ ಹಾಕುವ ಸಲುವಾಗಿ ಹೆಲಿಕಾಪ್ಟರಿನತ್ತ ಗುಂಡು ಹಾರಿಸಲಾಯಿತು ಎಂದು ಅವರು ನುಡಿದರುಜಮ್ಮು ಮತ್ತು ಕಾಶ್ಮೀರದ ಕೃಷ್ಣಾ ಘಾಟಿ ವಿಭಾಗದಲ್ಲಿ ಗುಲ್ಪುರ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಮಧ್ಯಾಹ್ನ ೧೨.೧೩ರ ವೇಳೆಗೆ ಹೆಲಿಕಾಪ್ಟರ್ ವಾಯು ಗಡಿಯನ್ನು ಉಲ್ಲಂಘಿಸಿ ಭಾರತೀಯ ಪ್ರದೇಶದಲ್ಲಿ ಹಾರಾಟ ನಡೆಸಿತು ಎಂದು ರಕ್ಷಣಾ ಮೂಲಗಳು ಹೇಳಿದವು. ಪ್ರತಿರೋಧದ ಬಳಿಕ ಹೆಲಿಕಾಪ್ಟರ್ ಪಾಕಿಸ್ತಾನಿ ವಾಯುಪ್ರದೇಶಕ್ಕೆ ಹಿಂತಿರುಗಿತು.  ಭಾರತೀಯ ವಾಯುಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿದ ೩೦ ಸೆಕೆಂಡ್ ಗಳ ವಿಡಿಯೋವನ್ನು ಎಎನ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿತು. ನೆರೆ ರಾಷ್ಟ್ರಗಳ ಬಾಂಧವ್ಯ ಕದಡಿರುವ ವೇಳೆಯಲ್ಲಿ ಘಟನೆ ಘಟಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಅದು ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವುದರ ಜೊತೆಗೆ ಅವರನ್ನು ವೈಭವೀಕರಿಸುತ್ತಿದೆ ಎಂದು ಆಪಾದಿಸಿದ್ದರು. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕದೇ ಇದ್ದಲ್ಲಿ ಅದು ಮಹಾಜ್ವಾಲೆಯಾದೀತು ಎಂದೂ ಅವರು ಎಚ್ಚರಿಸಿದ್ದರುಪಾಕ್ ಹೆಲಿಕಾಪ್ಟರ್ ವಾಯುಪ್ರದೇಶ ಉಲ್ಲಂಘಿಸುವುದಕ್ಕೆ ಕೇವಲ ಒಂದು ಗಂಟೆ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕಮನ್ ಕಿ ಬಾತ್ ಮಾಸಿಕ ಬಾನುಲಿ ಕಾರ್ಯಕ್ರಮದಲ್ಲಿ ಶಾಂತಿ ಬಗೆಗಿನ ಭಾರತದ ಬದ್ಧತೆಯನ್ನು ಒತ್ತಿ ಹೇಳಿದ್ದರು. ಇದೇ ವೇಳೆಗೆ ಶಾಂತಿಗಾಗಿ ನಮ್ಮ ರಾಷ್ಟ್ರದ ಆತ್ಮಗೌರವ ಮತ್ತು ಸಮಗ್ರತೆಯನ್ನು ಬಲಿಗೊಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.   ‘ನಮ್ಮ ರಾಷ್ಟ್ರದ ಪ್ರಗತಿ ಮತ್ತು ಶಾಂತಿಯ ಪರಿಸರವನ್ನು ಹಾಳುಗೆಡವಲು ಯಾರೇ ಪ್ರಯತ್ನ ಮಾಡಿದರೂ ಅದಕ್ಕೆ ನಮ್ಮ ಯೋಧರು ತಕ್ಕ ಉತ್ತರ ನೀಡಬೇಕು ಎಂದು ಈಗ ನಿರ್ಧರಿಸಲಾಗಿದೆ ಎಂದು ಮೋದಿ ಸಂದೇಶ ನೀಡಿದ್ದರು. ಮೋದಿ ಅವರ ಎಚ್ಚರಿಕೆ ಪಾಕಿಸ್ತಾನವನ್ನು ಗುರಿಇಟ್ಟೇ ನೀಡಿದ ಎಚ್ಚರಿಕೆ ಎಂದೇ ವ್ಯಾಖ್ಯಾನಿಸಲಾಗಿದೆ ವರ್ಷ ಫೆಬ್ರುವರಿಯಲ್ಲಿ ಪಾಕಿಸ್ತಾನಿ ಸೇನಾ ಹೆಲಿಕಾಪ್ಟರ್ ಒಂದು ಪೂಂಚ್ ಜಿಲ್ಲೆಯ ಖಾರಿ ಕರ್ಮಾರ ಪ್ರದೇಶದಲ್ಲಿ ಅಪಾಯಕಾರಿ ಮಟ್ಟದಲ್ಲಿ ಹಾರಾಟ ನಡೆಸಿತ್ತು. ಜನವರಿ ೧೮ರಂದು ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಭಯೋತ್ಪಾದಕನನ್ನು ಕೊಲ್ಲುವ ಮೂಲಕ ಪಾಕಿಸ್ತಾನದ ಗಡಿ ಕಾರ್ಯಾಚರಣಾ ತಂಡದ (ಬಿಎಟ್) ದಾಳಿಯನ್ನು ವಿಫಲಗೊಳಿಸಿತ್ತು. ಪಾಕಿಸ್ತಾನಿ ಹೆಲಿಕಾಪ್ಟರ್ ಗಡಿ ನಿಯಂತ್ರಣ ರೇಖೆಯನ್ನು ದಾಟಿ ೩೦೦ ಮೀಟರುಗಳಷ್ಟು ಭಾರತೀಯ ವಾಯುಪ್ರದೇಶದಲ್ಲಿ ನುಗ್ಗಿ ಬಂದಿತ್ತು ಎಂದು ಗುಪ್ತಚರ ಅಧಿಕಾರಿಯೊಬ್ಬರು ಆಗ ಹೇಳಿದ್ದರು. ಇದು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಅವರು ಹೇಳಿದ್ದರು.  ಬೆಳಗ್ಗೆ ಕುಪ್ವಾರ ಜಿಲ್ಲೆಯ ತಂಗ್ ಧರ್ ವಿಭಾಗದಲ್ಲಿ ಪಾಕಿಸ್ತಾನಿ ಸೇನೆಯ ಬೆಂಬಲದೊಂದಿಗೆ ನಡೆದ ನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಕದನ ವಿರಾಮ ಉಲ್ಲಂಘನೆ ಮತ್ತು ನುಸುಳುವಿಕೆ ಯತ್ನಕ್ಕೆ ಭಾರತ ಪ್ರಬಲ ಉತ್ತರ ನೀಡಿತ್ತುಭಾರತ-ಪಾಕಿಸ್ತಾನ ನಡುವಣ ಒಪ್ಪಂದದ ಪ್ರಕಾರ ಉಭಯ ದೇಶಗಳ ವಾಯುಪ್ರದೇಶವನ್ನು ಉಲ್ಲಂಘಿಸಿ ಹೆಲಿಕಾಪ್ಟರ್, ವಿಮಾನಗಳು ಹಾರಾಟ ನಡೆಸುವಂತಿಲ್ಲ.

2018: ನವದೆಹಲಿ: ನೈಋತ್ಯ ದೆಹಲಿಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ದಿನವೇ ತನ್ನ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕಾಗಿ ಸೇನಾ ಮೇಜರ್ ಒಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಮಹಿಳೆ ನೀಡಿದ ದೂರನ್ನು ಅನುಸರಿಸಿ ದೆಹಲಿಯ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ ೨೫ರಂದು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಜುಲೈ ೧೨ರಂದು ತನ್ನ ಮೇಲೆ ಮೇಜರ್ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ತನ್ನ ದೂರಿನಲ್ಲಿ ಆಪಾದಿಸಿದ್ದು, ಅದೇ ದಿನ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಕೆಲಸಗಾರರು ವಾಸಿಸುತ್ತಿದ್ದ ಸರ್ವೆಂಟ್ ಕ್ವಾರ್ಟರಿನಲ್ಲಿ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದುದು ತನಿಖೆಯ ಕಾಲದಲ್ಲಿ ಬೆಳಕಿಗೆ ಬಂತು ಎಂದು ಅಧಿಕಾರಿ ಹೇಳಿದರು. ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದರು. ಪೊಲೀಸರು ಸೇನಾ ಮೇಜರ್ ವಿರುದ್ಧ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ತಮಾನ ವರದಿ (ಎಫ್ ಐಆರ್) ದಾಖಲಿಸಿದರು. ಮೇಜರ್ ಗೌರವ್ ಜುಲೈ ೧೨ರಂದು ತಾನು ಅವರ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ರಾತ್ರಿ ೧೦ ಗಂಟೆಯ ವೇಳೆಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಮಹಿಳೆ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೇಜರ್ ಮತ್ತು ಅವರ ಬಂಧುವೊಬ್ಬರು ಸೇರಿ ತನ್ನ ಪತಿಯನ್ನು ಕೊಲೆಗೈದಿರುವುದಾಗಿಯೂ ಮಹಿಳೆ ತನ್ನ ದೂರಿನಲ್ಲಿ ಆಪಾದಿಸಿದ್ದಳು. ಎರಡು ವರ್ಷದ ಮಗನನ್ನೂ ಹೊಂದಿರುವ ಮಹಿಳೆ ನೀಡಿರುವ ದೂರಿನ ಪ್ರಕಾರ, ಮೇಜರ್ ಆದಿನ ರಾತ್ರಿ ತಪ್ಪಿಗಾಗಿ ಪತಿಗೆ ಓಡುವ ಶಿಕ್ಷೆ ವಿಧಿಸಿದ್ದು, ಪತಿ ಹೋದಾಗ ತನ್ನ ಕೊಠಡಿಯೊಳಕ್ಕೆ ಹೋಗುವಂತೆ ಆಕೆಗೆ ಸೂಚಿಸಿದ್ದು, ಆಕೆ ಅದನ್ನು ವಿರೋಧಿಸಿದ್ದಳು. ಮೇಜರ್ ತನ್ನನ್ನು ಥಳಿಸಿ ಕೋಣೆಗೆ ಎಳೆದುಕೊಂಡು ಹೋದುದಾಗಿ ಮಹಿಳೆ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದರು. ಪತಿ ವಾಪಸ್ ಬಂದಾಗ, ಆತನಿಗೆ ಮೇಜರ್ ತನ್ನ ಮೇಲೆ ಮೇಲೆ ಹಲ್ಲೆ ನಡೆಸುತ್ತಿದ್ದುದು ಕಾಣಿಸಿತು. ಇದಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆಯಿತು. ಮೇಜರ್ ಗೌರವ್ ಆತನಿಗೆ ಬೆದರಿಕೆ ಹಾಕಿ ಬಳಿಕ ಕೊಲೆಗೈದಿರುವುದಾಗಿಯೂ, ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ಹೇಳಿರುವುದಾಗಿಯೂ ಮಹಿಳೆ ದೂರಿದಳು. ಮಹಿಳೆ ತನ್ನ ಮಗ ಮತ್ತು ಪತಿಯ ಜೊತೆಗೆ ದೆಹಲಿ ಕಂಟೋನ್ಮೆಂಟಿನ ಮೇಜರ್ ಗೌರವ್ ಮನೆಯ ಸರ್ವೆಂಟ್ಸ್ ಕ್ವಾರ್ಟರಿನಲ್ಲಿ ಕಳೆದ ತಿಂಗಳುಗಳಿಂದ ವಾಸವಾಗಿದ್ದಳು. ಆಕೆ ಗೌರವ್ಗಾಗಿ ಅಡುಗೆ ಮತ್ತು ಕೊಠಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರೆ, ಆಕೆಯ ಪತಿ ಗಿಡಗಳಿಗೆ ನೀರು ಹಾಕುವ ಮತ್ತು ಇತರ ಕೆಲಸಗಳನ್ನು ಮಾಡುತ್ತಿದ್ದ. ಘಟನೆಯ ಬಳಿಕ ಮಹಿಳೆ ತನ್ನ ಪುತ್ರನೊಂದಿಗೆ ಬಂಧುವೊಬ್ಬರ ಮನೆಗೆ ತೆರಳಿದ್ದಳು. ತನ್ನ ಮನೆಸಾಮಗ್ರಿಗಳು ಇನ್ನೂ ದೆಹಲಿ ಕಂಟೋನ್ಮೆಂಟಿನ ಸರ್ವೆಂಟ್ ಕ್ವಾರ್ಟರಿನಲ್ಲೇ ಇವೆ ಎಂದು ಆಕೆ ಪೊಲೀಸರಿಗೆ ತಿಳಿಸಿದಳು. ನಾನು ಬಡವಳಾಗಿದ್ದು, ಪತಿಯೂ ಇಲ್ಲವಾದ್ದರಿಂದ ನನಗೆ ನೆರವಾಗುವವರು ಯಾರೂ ಇಲ್ಲ ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದಳು.

2018: ನವದೆಹಲಿ: ಹನ್ನೆರಡನೇ ಶತಮಾನದ ಶಬರಿಮಲೈ ಅಯ್ಯಪ್ಪ ದೇವಾಲಯಕ್ಕೆ ಮಹಿಳಾ ಭಕ್ತರ ಪ್ರವೇಶ ನಿಷೇಧವನ್ನು ರದ್ದು ಪಡಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮೊದಲ ಕೆಲಸವಾಗಿ ದೇವಾಲಯ ಸಮುಚ್ಚಯದಲ್ಲಿ ಮಹಿಳೆಯರಿಗಾಗಿ ಶೀಘ್ರದಲ್ಲೇ ಹೆಚ್ಚಿನ ಶೌಚಾಲಯ ಸವಲತ್ತುಗಳನ್ನು ಕಲ್ಪಿಸಲು ಟ್ರಾವಂಕೋರ್ ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿತು. ‘ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನಾವು ಕೇರಳ ಮುಖ್ಯಮಂತ್ರಿ ಜೊತೆಗೆ ಮಾತುಕತೆ ನಡೆಸಿದ್ದೇವೆ. ನಿಲಕ್ಕಲ್ನಲ್ಲಿ ನಾವು ಮಹಿಳೆಯರಿಗೆ ಹೆಚ್ಚಿನ ಶೌಚಾಲಯ ಸವಲತ್ತುಗಳನ್ನು ಕಲ್ಪಿಸಲಿದ್ದೇವೆ ಎಂದು ಟಿಡಿಬಿ ಅಧ್ಯಕ್ಷ . ಪದ್ಮಕುಮಾರ್ ಇಲ್ಲಿ ಹೇಳಿದರು. ಎರಡು ತಿಂಗಳುಗಳ ವಾರ್ಷಿಕ ಮಂಡಲಂ- ಮಕರವಿಳಕ್ಕು ಯಾತ್ರೆಯ ಸಂದರ್ಭದಲ್ಲಿ ನಿಲಕ್ಕಲ್ ನಲ್ಲೇ ಮೂಲಶಿಬಿರವನ್ನು ನಿರ್ಮಿಸಲು ಆಡಳಿತ ಮಂಡಳಿ ತಿಂಗಳ ಆದಿಯಲ್ಲಿ ನಿರ್ಧರಿಸಿತ್ತು. ಯಾತ್ರಾ ಋತು ಆರಂಭವಾಗುವ ಕಾಲ ಇದಾಗಿರುವುದರಿಂದ ವಿಸ್ತೃತ ಸವಲತ್ತುಗಳನ್ನು ಮಾಡಲು ಮಿತಿಗಳಿವೆ ಎಂದು ಪದ್ಮಕುಮಾರ್ ನುಡಿದರು. ಮಾಧ್ಯಮ ವರದಿಗಳ ಪ್ರಕಾರ ಟಿಡಿಬಿಯು ಸನ್ನಿಧಾನವರೆಗಿನ . ಕಿಮೀ ಮಾರ್ಗದಲ್ಲಿ ಮಹಿಳಾ ಭಕ್ತರಿಗಾಗಿ ಕೇವಲ ಶೌಚಾಲಯಗಳ ವ್ಯವಸ್ಥೆ ಮಾಡಿದೆ. ಪುರುಷರಿಗಾಗಿ ೨೦ಕ್ಕೂ ಹೆಚ್ಚು ಶೌಚಾಲಯಗಳಿವೆ. ಬಹುತೇಕ ಮಹಿಳಾ ಭಕ್ತರು ೬೦ಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದು ಖಾಸಗಿತನದ ಅಭಾವದ ಕಾರಣಕ್ಕಾಗಿ ಇರುವ ಸವಲತ್ತುಗಳನ್ನೂ ನಿರ್ಲಕ್ಷಿಸುತ್ತಾರೆ. ದೇವಸ್ವಂ ಮಂಡಳಿಯು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಬುಧವಾರದ ವೇಳೆಗೆ ನಿರ್ಧರಿಸಲಿದೆ. ಬಹಳಷ್ಟು ಸಂಖ್ಯೆಯಲ್ಲಿ ಮಹಿಳೆಯರು ಶಬರಿಮಲೈಗೆ ಭೇಟಿ ನೀಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಮರುಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಟ್ರಾವಂಕೋರ್ ದೇವಸ್ವಂ ಮಂಡಳಿಯು ಮಾತುಕತೆ ನಡೆಸಿ ಅಕ್ಟೋಬರ್ ೩ರ ವೇಳೆಗೆ ನಿರ್ಧಾರಕ್ಕೆ ಬರಲಿದೆ ಎಂದು ಪದ್ಮಕುಮಾರ್ ಹೇಳಿದರು.  ಸುಪ್ರೀಂಕೋರ್ಟ್ ತೀರ್ಪು ಬರುವುದಕ್ಕೆ ಮೊದಲು ೧೦ರಿಂದ ೫೦ರ ನಡುವಣ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಲು ನಿಷೇಧವಿತ್ತು. ತನ್ನ ಸಮಾಜ ಸುಧಾರಣಾ ಕಾರ್ಯಸೂಚಿ ಜಾರಿ ನಿಟ್ಟಿನಲ್ಲಿ ಮುಂದುವರೆದ ಸುಪ್ರೀಂಕೋರ್ಟ್ ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೈ ದೇವಾಲಯದ ದಾರಿಯನ್ನು ತೆರೆದಿತ್ತು. ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ೧೦ರಿಂದ ೫೦ರ ನಡುವಣ ವಯಸ್ಸಿನ ಮಹಿಳೆಯರ ದೇಗುಲ ಪ್ರವೇಶ ನಿಷೇಧವನ್ನು ರದ್ದು ಪಡಿಸಿತ್ತುಮಹಿಳಾ ಪ್ರವೇಶ ನಿಷೇಧವನ್ನು ಲಿಂಗ ತಾರತಮ್ಯ. ಮಹಿಳೆಯರು ಋತುಮತಿಯರಾಗುತ್ತಾರೆ ಎಂಬ ಏಕೈಕ ಕಾರಣಕ್ಕೆ ಅವರ ಪ್ರವೇಶ ನಿಷೇಧ ಸಂವಿಧಾನದ ಸಮಾನತೆಯ ಹಕ್ಕಿಗೆ ವಿರುದ್ಧವಾಗುತ್ತದೆ ಎಂದು ಸುಪ್ರೀಂಕೋರ್ಟ್ ಪೀಠ ಹೇಳಿತ್ತು.

2018: ಬೆಂಗಳೂರು: ರಾಷ್ಟ್ರದ ತ್ವರಿತ ಅಭಿವೃದ್ಧಿಗಾಗಿ ಜ್ಞಾನವೃದ್ಧಿಗೊಳಿಸುವ ಚತುರ ವಿವರಣೆ ಕೊಡಲು ಸಾಧ್ಯವಾಗುವಂತೆ ಮಾಡಲು ಸಾಮಾಜಿಕ ಮಾಧ್ಯಮವನ್ನುನಂಜು ಮುಕ್ತಗೊಳಿಸಬೇಕಾದ ಅಗತ್ಯ ಇದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿ ಒತ್ತಿ ಹೇಳಿದರು. ಸಾಮಾಜಿಕ ಮಾಧ್ಯಮವನ್ನು ನಂಜು ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ನಾವು ಮೊದಲಿಗರಾಗಬೇಕು. ಅದು ತೊಡಗಿಸಿಕೊಳ್ಳುವಿಕೆಯ ವೇದಿಕೆಯಾಗಬೇಕು ಆದರೆ ಕಹಿ, ನಂಜು, ನಕಾರಾತ್ಮಕತೆ ಮುಕ್ತ ವೇದಿಕೆಯಾಗಬೇಕು ಎಂದು ಆರನೇ ಸಾಮಾಜಿಕ ಮಾಧ್ಯಮ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಸೀತಾರಾಮನ್ ನುಡಿದರು. ಸರ್ಕಾರೇತರ ಸಂಘಟನೆ ನಮಸ್ತೆ  ಇಂಡಿಯಾ ಸಮಾವೇಶವನ್ನು ಸಂಘಟಿಸಿತ್ತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರೂ ಸಂದರ್ಭದಲ್ಲಿ ಹಾಜರಿದ್ದರು. ಸರ್ಕಾರಿ ಕಾರ್ಯಕ್ರಮಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಚಾರ ಮಾಡುವವರಿಗೆವಾರಿಯರ್ಸ್ ಅಥವಾಯೋಧಾಸ್ ಪದ ಬಳಸುವ ಬಗ್ಗೆ ಅಸಮ್ಮತಿ ವ್ಯಕ್ತ ಪಡಿಸಿದ ಸಚಿವೆ, ಅವರನ್ನು ವಾಸ್ತುಶಿಲ್ಪಿಗಳು ಎಂಬುದಾಗಿ ಕರೆಯಬಹುದು. ಏಕೆಂದರೆ ಅವರು ತಮ್ಮ ಸುತ್ತುಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ಸುಂದರವನ್ನಾಗಿ ಮಾಡುತ್ತಾರೆ ಎಂದು ಹೇಳಿದರು
ವಾಸ್ತುಶಿಲ್ಪಿಗಳು ಪರಿಸರವನ್ನು ಉತ್ತಮಗೊಳಿಸುವಂತಹ ಅದ್ಭುತ ಕೆಲಸಗಳನ್ನು ಮಾಡುತ್ತಾರೆ. ಅವರು ಹೆಚ್ಚು ಗಿಡಗಳನ್ನು ತರುತ್ತಾರೆ. ಸಾಮಾಜಿಕ ಮಾಧ್ಯಮದ ವಾಸ್ತು ಶಿಲ್ಪಿಗಳಾಗಿ ನಾವು ತಂತ್ರಜ್ಞಾನ ಆಧಾರಿತವಾದ, ಸಂವಾದಶೀಲವಾದ ಸುಂದರ ಸಂಸ್ಕೃತಿಯನ್ನು ಇನ್ ಸ್ಟಾಗ್ರಾಮ್ ಇರಲಿ, ವಾಟ್ಸಪ್ ಇರಲಿ ಅಥವಾ ಫೇಸ್ ಬುಕ್ ಇರಲಿ ಅಲ್ಲಿ ರೂಪಿಸಬೇಕು ಎಂದು ಸೀತಾರಾಮನ್ ಹೇಳಿದರು. ವಾಸ್ತವಾಂಶಗಳನ್ನು ತರುವ ಮೂಲಕ ನಾವು ಉತ್ತಮ ಸಂವಹನ ನಡೆಸಬೇಕು. ಚಿತ್ರದಲ್ಲಿ, ಪದಗಳಲ್ಲಿ ವಾಸ್ತವವನ್ನು ನಾವು ತರಬೇಕು ಎಂದು ಅವರು ನುಡಿದರು. ಭಾರತವು ಶತ ಶತಮಾನಗಳಿಂದ ಕೆಲವು ಮೌಲ್ಯಗಳನ್ನು ಬೆಳೆಸುತ್ತಾ ಬಂದಿದೆ. ಅವು ಇಂದು ಕಣ್ಮರೆಯಾಗುತ್ತಿವೆ ಎಂದು ಸಚಿವೆ ನೆನಪಿಸಿದರು. ನಾವೆಲ್ಲರೂ ಇಲ್ಲಿ ಸಾಮಾನ್ಯ ಕಾರಣಕ್ಕಾಗಿ ಸೇರಿದ್ದೇವೆ. ನಾವು ಉತ್ತಮ ಭಾರತವನ್ನು ಬಯಸುತ್ತೇವೆ. ನಗರಗಳಿರಲಿ, ಗ್ರಾಮೀಣ ಭಾರತವಿರಲಿ ನಾಗರಿಕ ಬದುಕು ಹೇಗೆ ಉತ್ತಮ ಗೊಳ್ಳಬೇಕು, ನಮ್ಮ ವೈಯಕ್ತಿಕ ಬದುಕು ಹೇಗೆ ಉತ್ತಮವಾಗಬೇಕು ಎಂಬ ಬಗ್ಗೆ ಬೆಳಕು ಚೆಲ್ಲಬೇಕು. ರಾಷ್ಟ್ರವು ತ್ವರಿತ ಬೆಳವಣಿಗೆ ಸಾಧಿಸಲು ಜ್ಞಾನವೃದ್ಧಿ ಮಾಡುವಂತಹ ಚತುರ ವಿವರಣೆ ನೀಡುವಂತಹ ಕಲೆ ಬೇಕು ಎಂದು ಸೀತಾರಾಮನ್ ಹೇಳಿದರು. ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳು ನಂಜು ಅಥವಾ ವಿಷಕಾರಿ ಅಂಶಗಳಿಂದ ಕೂಡಿದ ಚರ್ಚೆಗಳಿಂದ  ಮುಕ್ತವಾಗಬೇಕು ಎಂದು ಅವರು ಹೇಳಿದರು.

2018: ನವದೆಹಲಿ: ಭಯೋತ್ಪಾದಕರನ್ನು ವೈಭವೀಕರಿಸುತ್ತಿರುವುದಕ್ಕಾಗಿ ಮತ್ತು ಅವರಿಗೆ ಆಶ್ರಯ ನೀಡುತ್ತಿರುವುದಕ್ಕಾಗಿ, ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅವರಿಂದ ತೀವ್ರ ವಾಗ್ದಾಳಿಗೆ ಗುರಿಯಾದ ಪಾಕಿಸ್ತಾನ ಎದಿರೇಟು ನೀಡಲು ಆರೆಸ್ಸೆಸ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆನ್ನಿಗೆ ಬಿದ್ದಿತು. ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಸುಷ್ಮಾ ಸ್ವರಾಜ್ ಅವರು ಮಾಡಿದ ವಾಗ್ದಾಳಿಗೆ ಉತ್ತರ ನೀಡಲು ಯತ್ನಿಸಿದ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಸಾದ್ ವಾರಿಯಚ್ ಅವರುರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರೆಸ್ಸೆಸ್) ’ಫ್ಯಾಸಿಸ್ಟ್ ಎಂಬುದಾಗಿ ಬಣ್ಣಿಸಿಭಯೋತ್ಪಾದನೆ ಹುಟ್ಟುಹಾಕುತ್ತಿರುವ ಸಂಘಟನೆ ಎಂದು ಆಪಾದಿಸಿದರು. ‘ನಮ್ಮ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಬಿತ್ತುತ್ತಿರುವುದು ಆರೆಸ್ಸೆಸ್ಸಿನ ಫ್ಯಾಸಿಸಂ ಕೇಂದ್ರಗಳು. ಧಾರ್ಮಿಕ ಶ್ರೇಷ್ಠತೆ ಪ್ರತಿಪಾದನೆಯ ಅಪರಾಧಕ್ಕೆ ಭಾರತದಾದ್ಯಂತ ಇದು ನೇರ ಬೆಂಬಲ ನೀಡುತ್ತಿದೆ ಎಂದು ಸಾದ್ ವಾರಿಯಚ್ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿತು.   ಭಾರತದ ವಿರುದ್ಧ ಮಾತಿನ ಸಮರ ನಡೆಸುವ ಹತಾಶ ಯತ್ನ ನಡೆಸಿರುವ ವಾರಿಯಚ್ ಅವರು ಅಸ್ಸಾಂನಲ್ಲಿ ಜುಲೈಯಲ್ಲಿ ಬಿಡುಗಡೆ ಮಾಡಲಾಗಿರುವ ರಾಷ್ಟ್ರೀಯ ನಾಗರಿಕರ ನೋಂದಣಿ  ವಿಚಾರವನ್ನೂ ಕೆದಕಿದರು.  ‘ಯಾವ ದೇಶದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ಹಿಂದೂ ಅತ್ಯುತ್ಸಾಹಿಗಳ ಕೈಯಿಂದ ಬಹಿರಂಗವಾಗಿ ಗುಂಪುಹತ್ಯೆ ಮಾಡಿಸಲಾಗುತ್ತದೋ, ಎಲ್ಲಿ ಸಂಜೌತಾ ದಾಳಿಯ ಅಪರಾಧಿಗಳು ರಾಷ್ಟ್ರದ ಬೆಂಬಲ ಪಡೆಯುತ್ತಾರೋ, ಎಲ್ಲಿ ನಾಚಿಕೆಯಿಲ್ಲದ ಹಿಂದೂ ಉಗ್ರಗಾಮಿ, ಹಿಂದುಗಳ ಧಾರ್ಮಿಕ ಶ್ರೇಷ್ಠತೆಯನ್ನು ಬಹಿರಂಗವಾಗಿ ಬೋಧಿಸುವ ಯೋಗಿ ಆದಿತ್ಯನಾಥ್ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶವನ್ನು ಪ್ರತಿನಿಧಿಸಿ ಸೇವೆ ಸಲ್ಲಿಸುತ್ತಿದ್ದಾರೋ, ಎಲ್ಲಿ ಅಸ್ಸಾಮಿನ ಬಂಗಾಳಿಗಳನ್ನು ಏಕಪಕ್ಷೀಯವಾಗಿ ರಾಜ್ಯ ರಹಿತರನ್ನಾಗಿ ಮಾಡಲಾಗುತ್ತದೋ ಮತ್ತು ಅವರನ್ನು ಗೆದ್ದಲುಗಳು ಎಂದು ಕರೆಯುವ ಪ್ರಮುಖ ಭಾರತೀಯ ನಾಯಕನು ಇದ್ದಾನೋ ಮತ್ತು ಎಲ್ಲಿ ಮಸೀದಿಗಳು ಮತ್ತು ಚರ್ಚ್ಗಳಿಗೆ ಬೆಂಕಿ ಹಚ್ಚಲಾಗುತ್ತದೆಯೋ ಅಂತಹ ದೇಶವು ಇತರರಿಗೆ ಉಪನ್ಯಾಸ ನೀಡಲು ಖಂಡಿತವಾಗಿ ಅರ್ಹವಲ್ಲ ಎಂದು ವಾರಿಯಚ್ ಹೇಳಿಕೆಯಲ್ಲಿ ತಿಳಿಸಿದರು. ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಟುಶಬ್ಧಗಳ ಸಂದೇಶ ನೀಡಿದ್ದ ಸುಷ್ಮಾ ಸ್ವರಾಜ್ ಅವರು ಭಯೋತ್ಪಾದನೆ ಕುರಿತ ಪಾಕಿಸ್ತಾನದ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಾಕಿಸ್ತಾನವು ಭಯೋತ್ಪಾದನೆಗೆ ತನ್ನ ಬದ್ಧತೆಯನ್ನು ಅಧಿಕೃತ ನೀತಿಯನ್ನಾಗಿ ಮಾಡಿಕೊಂಡಿದ್ದು, ಅದನ್ನು ಇನ್ನೂ ರದ್ದು ಪಡಿಸಿಲ್ಲ ಎಂದು ಅವರು ಹೇಳಿದ್ದರು.  ನ್ಯೂಯಾರ್ಕ್ನಲ್ಲಿ /೧೧ರ ಭಯೋತ್ಪಾದಕ ದಾಳಿಯ ಅಪರಾಧಿಗಳು ಶಿಕ್ಷಿತರಾಗಿದ್ದರೂ, ೨೦೦೮ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರಿ ಭಯೋತ್ಪಾದಕ ಹಫೀಜ್ ಸಯೀದ್ ಈಗಲೂ ಪಾಕಿಸ್ತಾನದ ಬೀದಿಗಳಲ್ಲಿ ರಾಜಾರೋಷವಾಗಿ ಅಡ್ಡಾಡುತ್ತಿದ್ದಾನೆ. ಭಯೋತ್ಪಾದನೆಗೆ ಬದ್ಧತೆ ವ್ಯಕ್ತ ಪಡಿಸಿರುವ ಪಾಕಿಸ್ತಾನದ ಅಧಿಕೃತ ನೀತಿ ಅಥವಾ ಬೂಟಾಟಕೆ ಮೇಲಿನ ಅದರ ನಂಬಿಕೆ ಒಂದಿಷ್ಟೂ ಬದಲಾಗಿಲ್ಲ ಎಂದು ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಝಾಡಿಸಿದ್ದರುನಮ್ಮ ಯುಗದ ಅತಿದೊಡ್ಡ ಸವಾಲು ಭಯೋತ್ಪ್ಪಾದನೆ ಮತ್ತು ಹವಾಮಾನ ಬದಲಾವಣೆ. ೨೧ನೇ ಶತಮಾನವು ಶಾಂತಿ, ಸಮೃದ್ಧಿಯನ್ನು, ಎಲ್ಲರಿಗೂ ಹಿತವನ್ನು, ಸಹಕಾರವನ್ನು ತರುತ್ತದೆ ಎಂದು ನಾವು ಕಲ್ಪಿಸಿದ್ದೆವು. ಆದರೆ ಇಲ್ಲಿ ನ್ಯೂಯಾರ್ಕ್ನಲ್ಲಿ ಸಂಭವಿಸಿದ /೧೧ರ ಭೀಕರ ದುರಂತ, ಮತ್ತು ಮುಂಬೈ ಮೇಲೆ ನಡೆದ ೨೬/೧೧ರ ಭೀಕರ ದಾಳಿ ನಮ್ಮ ಕನಸುಗಳನ್ನು ನುಚ್ಚುನೂರು ಮಾಡಿದವು ಎಂದು ಸುಷ್ಮಾ ಹೇಳಿದ್ದರು.   ‘/೧೧ರ ದಾಳಿಯ ಸೂತ್ರಧಾರಿ ಒಸಮಾ ಬಿನ್ ಲಾಡೆನ್ ಗೆ ಪಾಕಿಸ್ತಾನದಲ್ಲಿ ಸುರಕ್ಷಿತ ಸ್ವರ್ಗ ನಿರ್ಮಿಸಲಾಗಿತ್ತು ಎಂಬ ವಾಸ್ತವಾಂಶವು ಜಗತ್ತನ್ನೇ ಬೆದರಿಸಬಲ್ಲಂತಹ ಪಾಕಿಸ್ತಾನದ ಇಬ್ಬಗೆ ನೀತಿಗೆ ಅತಿದೊಡ್ಡ ಸಾಕ್ಷ್ಯ ಅಮೆರಿಕದ ವಿಶೇಷ ಪಡೆಗಳಿಂದ ವಿಶ್ವಕ್ಕೆ ಬೇಕಾಗಿದ್ದ ಅತಿ ಭೀಕರ ಭಯೋತ್ಪಾದಕ ಹತನಾದ ಬಳಿಕವೂ ಪಾಕಿಸ್ತಾನವು ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದೂ ಸುಷ್ಮಾ ಜರೆದಿದ್ದರು.


2018: ನವದೆಹಲಿ: ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ಇಸ್ಲಾಮಾಬಾದ್ ನಗರದಲ್ಲಿ ಕುವೈತ್ ನಿಯೋಗದ ಸದಸ್ಯರೊಬ್ಬರ ಕೈಚೀಲ (ವಾಲೆಟ್) ಕದಿಯುತ್ತಿದ್ದುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು ವಿಡಿಯೋ ದೃಶ್ಯಾವಳಿ ಇದೀಗ ವೈರಲ್ ಆಗಿದೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿತು. ಪಾಕಿಸ್ತಾನಿ ಪತ್ರಿಕೆ ಡಾನ್ ಪ್ರಕಾರ ಹಣಕಾಸು ಸಚಿವಾಲಯದಲ್ಲಿ ನಿಯೋಜನೆಗೊಂಡಿದ್ದ ಪಾಕಿಸ್ತಾನ ಆಡಳಿತ ಸೇವಾ ಸಮೂಹದ ಗ್ರೇಡ್ -೨೦ ಅಧಿಕಾರಿ ಕಳವು ಕೃತ್ಯ ಎಸಗಿದ್ದಾರೆ. ಕದ್ದು ಸಿಕ್ಕಿ ಬಿದ್ದ ಅಧಿಕಾರಿಯನ್ನು ಜಂಟಿ ಹೂಡಿಕೆ ಮತ್ತು ಅನುಕೂಲ ಕಾರ್ಯದರ್ಶಿ ಝರಾರ್ ಹೈದರ್ ಖಾನ್ ಎಂಬುದಾಗಿ ಸಮಾ ಟಿವಿ ಸುದ್ದಿ ಚಾನೆಲ್ ಗುರುತಿಸಿದೆ. ಪಾಕಿಸ್ತಾನ- ಕುವೈತ್ ಜಂಟಿ ಸಚಿವಾಲಯ ಆಯೋಗದ ಎರಡು ದಿನಗಳ ಸಭೆಗೆ ಅವರು ಹಾಜರಾಗಿದ್ದರು. ಸಭೆಯ ಬಳಿಕ ಆರ್ಥಿಕ ವ್ಯವಹಾರಗಳ ವಿಭಾಗದ ಸಭಾಂಗಣದಿಂದ ಕುವೈತ್ ನಿಯೋಗದ ಸದಸ್ಯರು ಮತ್ತು ಹಣಕಾಸು ಸಚಿವಾಲಯ ಅಧಿಕಾರಿಗಳು ಹೊರಕ್ಕೆ  ಹೋಗಿದ್ದಾಗ ಟೇಬಲ್ ಮೇಲೆ ಇದ್ದ ಕೈಚೀಲವನ್ನು ಅಧಿಕಾರಿ ಎತ್ತಿಕೊಳ್ಳುತ್ತಿದ್ದುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ ಎಂದು ಪತ್ರಿಕೆ ಹೇಳಿತು. ಕುವೈತ್ ಅಧಿಕಾರಿಗಳು ದೂರು ನೀಡಿದ ಬಳಿಕ ನೌಕರರ ವ್ಯಾಪಕ ಶೋಧ ನಡೆಸಿ ಪ್ರಶ್ನಿಸಲಾಯಿತು, ಬೌತಿಕ ಶೋಧವನ್ನೂ ನಡೆಸಲಾಯಿತು. ಬಳಿಕ ಸಿಸಿಟಿವಿ ದೃಶ್ಯಾವಳಿಯ ಪರಿಶೀಲನೆಯಲ್ಲಿ ಝರಾರ್ ಖಾನ್ ಅವರು ಕೈಚೀಲ ಕದಿಯುತ್ತಿದ್ದುದು ಬೆಳಕಿಗೆ ಬಂತು ಎಂದು ಡಾನ್ ವರದಿ ಮಾಡಿದೆ. ಏನಿದ್ದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಬಳಿ ಯಾವುದೇ ದೂರನ್ನೂ ದಾಖಲಿಸಲಿಲ್ಲ. ಅಧಿಕಾರಿ ವಿರುದ್ಧ ಆಂತರಿಕ ತನಿಖೆಗೆ ಆದೇಶ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯದ ಮೂಲಗಳು ಹೇಳಿರುವುದಾಗಿ ಪತ್ರಿಕಾ ವರದಿ ತಿಳಿಸಿತು. ಪಾಕಿಸ್ತಾನಿ ಅಧಿಕಾರಿಗಳು ಮೊದಲಿಗೆ ಅಪರಾಧಿಯ ಗುರುತನ್ನು ಉದ್ರಿಕ್ತ ಕುವೈತಿ ನಿಯೋಗದ ಸದಸ್ಯರಿಗೆ ಬಹಿರಂಗ ಪಡಿಸಲು ನಿರಾಸಕ್ತರಾಗಿದ್ದರು. ಆದರೆ ಬಳಿಕ ಅಪರಾಧಿಯ ಗುರುತು ತಿಳಿಸಿ, ವಿಡಿಯೋ ದೃಶ್ಯಾವಳಿಯನ್ನೂ ಅವರಿಗೆ ತೋರಿಸಿದರು ಎಂದು ವರದಿ ಹೇಳಿತು. ‘ಬಹುತೇಕ ಹಾಲಿ ಅಧಿಕಾರಿಗಳಿಗೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನೈತಿಕ ತರಬೇತಿ ನೀಡಲಾಗಿತ್ತು ಎಂದು ವಾರ್ತಾ ಸಚಿವ ಫವದ್ ಚೌಧರಿ ಅವರು ಮಾಧ್ಯಮಗಳಿಗೆ ತಿಳಿಸಿದರು ಎಂದೂ ಡಾನ್ ವರದಿ ತಿಳಿಸಿತು.


2017: ಮುಂಬೈ: ಹಿರಿಯ ನಟ,ಪ್ರಖ್ಯಾತ ಲೇಖಕ ಟಾಮ್ ಆಲ್ಟರ್ ಅವರು ಹಿಂದಿನ  ರಾತ್ರಿ ನಿಧನರಾದರು. ಚರ್ಮ ಕ್ಯಾನ್ಸರ್ ನಿಂದ ಬಳಲುತ್ತಿದ್ದ 67 ಹರೆಯದ ಅವರನ್ನು 2 ವಾರಗಳ ಹಿಂದೆ ಸೈಫಿ ಆಸ್ಪತ್ರೆಗೆ ದಾಖಲಿಸಲಾಗಿತ್ತುಉತ್ತರಾಖಂಡದ ಮಸ್ಸೂರಿ ಮೂಲದವರಾದ ಟಾಮ್ ಆಲ್ಟರ್ ಅಮೆರಿಕದಲ್ಲಿ ಜನಿಸಿದ್ದರು. 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ 2006 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತುಶ್ಯಾಮ್ ಬೆನಗಲ್ ನಿರ್ದೇಶನದ 'ಜುನೂನ್'ನಲ್ಲಿ ಕೇಶವ್ ಕಲ್ಸಿ ಎಂಬ ಗ್ಯಾಂಗ್ ಸ್ಟರ್ ಪಾತ್ರ ಅವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತ್ತು. ಹಾಲಿವುಡ್ ನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ್ದರುಕ್ರೀಡೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದ ಅವರು ಕ್ರೀಡಾ ಪತ್ರಕರ್ತರಾಗಿಯೂ ಕೆಲಸ ನಿರ್ವಹಿಸಿದ್ದರು . ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡುವ ಮುನ್ನ ಸಂದರ್ಶನ ನಡೆಸಿದ ಹಿರಿಮೆ ಆಲ್ಟರ್  ಅವರದ್ದು.
2016: ನವದೆಹಲಿ: ಕರ್ನಾಟಕ ಸೇರಿದಂತೆ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದ ರಾಜ್ಯಗಳು
ವಿರೋಧಿಸುತ್ತಾ ಬಂದಿದ್ದ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಮೂರು ದಿನಗಳ ಒಳಗೆ (ಅಕ್ಟೋಬರ್ 4 ಒಳಗೆ) ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆಜ್ಞಾಪಿಸಿತು. ಜೊತೆಗೆ ಅಕ್ಟೋಬರ್ 1ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ (ಒಟ್ಟು 36,000 ಕ್ಯೂಸೆಕ್ಸ್) ನೀರು ಬಿಡುವಂತೆ ಕರ್ನಾಟಕಕ್ಕೆ ಖಡಕ್ ಆದೇಶ ನೀಡಿತು. ಇದರೊಂದಿಗೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಯಿತು. ಮಂಡಳಿ ರಚನೆಯ ಜೊತೆಗೆ ಕಾವೇರಿಗೆ ವಿಷಯಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ಅಧ್ಯಯನ ನಡೆಸುವಂತೆಯೂ ಕೇಂದ್ರಕ್ಕೆ ನಿರ್ದೇಶಿಸಿದ ಸುಪ್ರಿಂಕೋರ್ಟಿನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಉದಯ್ ಲಲಿತ್ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠ, ಎಲ್ಲ ರಾಜ್ಯಗಳಂತೆ ಕರ್ನಾಟಕವೂ ತನ್ನ ಆದೇಶವನ್ನು ಪಾಲನೇ ಮಾಡಲೇಬೇಕು. ಇದು ಕರ್ನಾಟಕಕ್ಕೆ ಕಟ್ಟ ಕಡೆಯ ಎಚ್ಚರಿಕೆ ಎಂದೂ ಹೇಳಿತು. ಸುಪ್ರೀಂಕೋರ್ಟಿನಲ್ಲಿ ಈದಿನ ವಿಚಾರಣೆ ಪ್ರಾರಂಭವಾದಾಗ ಕರ್ನಾಟಕದ ವಕೀಲ ಫಾಲಿ. ನಾರಿಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ವಿಧಾನ ಮಂಡಲ ಕೈಗೊಂಡ ಸರ್ವಾನುಮತದ ನಿರ್ಣಯದ ಕುರಿತ ಟಿಪ್ಪಣಿಯನ್ನು ಓದಿ ಹೇಳಿದರುಕರ್ನಾಟಕ ವಿಧಾನ ಮಂಡಲ ಕೈಗೊಂಡಿರುವ ನಿರ್ಣಯವನ್ನು ಮೀರಲು ಸಾಧ್ಯವಿಲ್ಲ. ತಾವು ಬೇರೆ ಯಾವ ವಾದವನ್ನೂ ಮಂಡಿಸುವುದಿಲ್ಲ ಎಂದು ನಾರಿಮನ್ ಸುಪ್ರೀಂಕೋರ್ಟಿಗೆ ತಿಳಿಸಿದರು. ನ್ಯಾಯಾಲಯಕ್ಕೆ ಹಿಂದಿನ ದಿನ ನಡೆದ ಕರ್ನಾಟಕ ಮತ್ತು ತಮಿಳುನಾಡು ಸಂಧಾನ ಸಭೆ ಕುರಿತ ವಿವರವನ್ನು ಲಿಖಿತವಾಗಿ ಮಂಡಿಸಿದ ಅಟಾರ್ನಿ ಜನರಲ್ ಅವರು ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು. ಮೂರು ದಿನಗಳ ಒಳಗಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರಕ್ಕೆ ಆಜ್ಞಾಪಿಸಿದ ಸುಪ್ರೀಂಕೋರ್ಟ್ ಪೀಠವು .1ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿತು.

2016: ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 25 ವರ್ಗೀಕೃತ ಕಡತಗಳ ಎಂಟನೇ ಕಂತನ್ನು ಈದಿನ ಸಾರ್ವಜನಿಕ ವೀಕ್ಷಣೆಗಾಗಿ ಬಿಡುಗಡೆ ಮಾಡಿ, ಆನ್ ಲೈನ್ ವೆಬ್ ಪೋರ್ಟಲ್.ನಲ್ಲಿ ಪ್ರಕಟಿಸಲಾಯಿತುಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಎನ್.ಕೆ. ಸಿನ್ಹ ಅವರು ಕಡತಗಳನ್ನು ಬಿಡುಗಡೆ ಮಾಡಿದರು. 25 ಕಡತಗಳು 1951ರಿಂದ 2006 ಅವಧಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಪಟ್ಟ ಕಡತಗಳಾಗಿವೆ. ನೇತಾಜಿ ಅವರಿಗೆ ಸಂಬಂಧಿಸಿದ 100 ಕಡತಗಳ ಮೊದಲ ಕಂತನ್ನು 2016 ಜನವರಿ 23ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಅವರ 119ನೇ ಜನ್ಮದಿನದ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದರು. ಬಳಿಕ 2016 ಮಾರ್ಚ್ನಿಂದ ಆಗಸ್ಟ್ವರೆಗಿನ ಅವಧಿಯಲ್ಲಿ 6 ಕಂತುಗಳಲ್ಲಿ 175 ಕಡತಗಳನ್ನು ಬಿಡುಗಡೆ ಮಾಡಲಾಗಿತ್ತು. ಒಟ್ಟಾರೆ 275 ಕಡತಗಳ ಪೈಕಿ ಪ್ರಧಾನ ಮಂತ್ರಿಯವರ ಕಚೇರಿ (58 ಕಡತಗಳು), ಗೃಹ ವ್ಯವಹಾರಗಳ ಸಚಿವಾಲಯ (37 ಕಡತಗಳು), ವಿದೇಶಾಂಗ ವ್ಯವಹಾರಗಳ ಸಚಿವಾಲಯ (171 ಕಡತಗಳು), ಮತ್ತು ಸಂಪುಟ ಸಚಿವಾಲಯದ (9 ಕಡತಗಳು) ಕಡತಗಳು ಸೇರಿವೆ.

2016: ಶ್ರೀನಗರ: ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ (ಸೀಮಿತ) ದಾಳಿ ಕಾರ್ಯಾಚರಣೆ ನಡೆಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಭಾರತದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮೇಲೆ ಈದಿನ ದಾಳಿ ನಡೆಸಿದರು. ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಕುಲಗಮ್ ಜಿಲ್ಲೆಯ ಬೆಹಿ ಬಾಗ್ನಲ್ಲಿ ಸಿಆರ್ಪಿಎಫ್ ಮತ್ತು ಪೊಲೀಸ್ ಪಹರೆ ಪಡೆ ಮೇಲೆ ಗುಂಡು ಹಾರಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.

2016: ಕೊಲಂಬೋ: ಇಸ್ಲಾಮಾಬಾದ್ನಲ್ಲಿ 2016 ನವೆಂಬರ್ 9 ಮತ್ತು 10ರಂದು ಸಾರ್ಕ್ ಶೃಂಗಸಮ್ಮೇಳನ ನಡೆಸಲು ಪ್ರಶಸ್ತವಾದ ಪರಿಸ್ಥಿತಿ ಪ್ರದೇಶದಲ್ಲಿ ಈಗ ಇಲ್ಲದಿರುವುದು ವಿಷಾದದ ಸಂಗತಿ ಎಂದು ಈದಿನ ಹೇಳಿದ ಶ್ರೀಲಂಕಾ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳದೇ ಇರುವ ಇಂಗಿತ ವ್ಯಕ್ತ ಪಡಿಸಿತು. ಭಾರತ ಸೇರಿದಂತೆ 5 ರಾಷ್ಟ್ರಗಳು ಸಾರ್ಕ್ ಶೃಂಗ ಸಮ್ಮೇಳನವನ್ನು ಬಹಿಷ್ಕರಿಸಿರುವ ಹಿನ್ನೆಲೆಯಲ್ಲಿ ಪ್ರಕಟಣೆ ನೀಡಿರುವ ಶ್ರೀಲಂಕಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಸಾರ್ಕ್ ಸಂವಿಧಾನದ ವಿಧಿಗಳ ಪ್ರಕಾರ ಎಲ್ಲ ಹಂತಗಳಲ್ಲೂ ನಿರ್ಧಾರಗಳನ್ನು ಸರ್ವಾನುಮತದ ನೆಲೆಯಲ್ಲೇ ತೆಗೆದುಕೊಳ್ಳಬೇಕು. ಇದು ಸಾರ್ಕ್ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರ ಸಭೆಗಳನ್ನು ಕರೆಯುವ ವಿಚಾರದಲ್ಲೂ ಅನ್ವಯಿಸುತ್ತದೆ ಎಂದು ಹೇಳಿತು. ಶ್ರೀಲಂಕೆಯು ಎಲ್ಲಾ ರೂಪದ ಭಯೋತ್ಪಾದನೆಯನ್ನೂ ಖಂಡಿಸುತ್ತದೆ ಮತ್ತು ಪ್ರದೇಶದಲ್ಲಿನ ಭಯೋತ್ಪಾದನೆ ವಿಚಾರದಲ್ಲಿ ನಿರ್ಣಾಯಕ ನಿರ್ಧಾರದೊಂದಿಗೆ ವ್ಯವಹರಿಸಬೇಕಾದ ಅಗತ್ಯಕ್ಕೆ ಒತ್ತು ನೀಡುತ್ತದೆ ಎಂದೂ ಶ್ರೀಲಂಕಾ ತಿಳಿಸಿತು.

2016: ಢಾಕಾ: 18 ವಯೋಮಿತಿಯ ಏಷ್ಯಾಕಪ್ ಫೈನಲ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತೀಯ ಕಿರಿಯರ ತಂಡ 5-4 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತು. ಮೂಲಕ ನೂತನ ಏಷ್ಯಾ ಸಾಮ್ರಾಟರಾಗಿ ಭಾರತ ಹೊರಹೊಮ್ಮಿತು. ಪ್ರಾರಂಭದಿಂದಲೂ ಶಿಸ್ತು ಬದ್ಧ ಆಟ ಪ್ರದೇಶಿಸಿದ ಭಾರತದ ಕಿರಿಯರು ಬಾಂಗ್ಲಾದೇಶಕ್ಕೆ ಮುನ್ನಡೆ ಕಾಯ್ದುಕೊಳ್ಳಲು ಅವಕಾಶ ನೀಡಲಿಲ್ಲ. ಆಕ್ರಮಣಕಾರಿ ಆಟವಾಡುವ ಮೂಲಕ ಆತಿಥೇಯ ಬಾಂಗ್ಲಾದೇಶಕ್ಕೆ ಸೋಲುಣಿಸಿದರು.ಗುರುವಾರ ನಡೆದ ಸೆಮಿಫೈನಲ್ನಲ್ಲಿ ಭಾರತ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನದ ವಿರುದ್ಧ 3-1 ಗೋಲುಗಳಲ್ಲಿ ಗೆಲುವು ದಾಖಲಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು.

2016: ಪಟನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರವು ಬಿಹಾರ ರಾಜ್ಯದಲ್ಲಿ ಜಾರಿಗೊಳಿಸಿದ ಸಂಪೂರ್ಣ  ಮದ್ಯ (ಪಾನ) ನಿಷೇದವನ್ನು ಪಟನಾ ಹೈಕೋರ್ಟ್ ಅನೂರ್ಜಿತಗೊಳಿಸಿತು. ಕಳೆದ ವರ್ಷ ಅಧಿಕಾರಕ್ಕೆ ಏರುವ ಮುನ್ನ ನೀಡಿದ್ದ ವಚನವನ್ನು ಸಂಪೂರ್ಣ ಪಾನ ನಿಷೇಧ ಜಾರಿಗೆ ತರುವ ಮೂಲಕ ನಿತೀಶ್ ಕುಮಾರ್ ಈಡೇರಿಸಿದ್ದರು. ಬಿಹಾರ ಸರ್ಕಾರವು ಏಪ್ರಿಲ್ 5ರಿಂದ ಜಾರಿಗೊಳಿಸಿದ್ದ 2016 ಬಿಹಾರ ಪಾನ ನಿಷೇಧ ಮತ್ತು ಅಬಕಾರಿ ಮಸೂದೆಯನ್ನು ಅಕ್ರಮ ಎಂದು ಬಣ್ಣಿಸಿದ ಪಟನಾ ಹೈಕೋರ್ಟಿನ ದ್ವಿಸದಸ್ಯ ಪೀಠ, ಇದು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಒದಗಿಸಲಾಗಿರುವ ಮೂಲಭೂತ ಹಕ್ಕಗಳನ್ನ್ನೂ ಉಲ್ಲಂಘಿಸುತ್ತದೆ ಎಂಬುದಾಗಿ ಹೇಳಿ ಮಸೂದೆಯನ್ನು ರದ್ದು ಪಡಿಸಿತು. ಎಲ್ಲ ರೀತಿಯ ಸಾರಾಯಿ, ಮದ್ಯದ ಸಂಗ್ರಹ, ಕುಡಿಯುವುದನ್ನು ನಿಷೇಧಿಸಿದ ಮಸೂದೆ, ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿತ್ತು. ಮಸೂದೆಯನ್ನು ರಾಜ್ಯ ಮದ್ಯ ಮಾರಾಟ ಸಂಘ ಮತ್ತು ಇತರ ಹಲವಾರು ಖಾಸಗಿ ವ್ಯಕ್ತಿಗಳು ತೀವ್ರವಾಗಿ ಖಂಡಿಸಿ, ಅದರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿಗಳ ಸುರಿಮಳೆಗೈದಿದ್ದರು. ಪಾನ ನಿಷೇಧ ಕಾನೂನನ್ನು ಉಲ್ಲಂಘಿಸಿದವರಿಗೆ ಭಾರಿ ದಂಡದ ಜೊತೆಗೆ 10 ವರ್ಷಗಳವರೆಗೆ ಸೆರೆವಾಸದ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಕಾನೂನು ಉಲ್ಲಂಘನೆಯಾದ ಆಸ್ತಿಯ ಮಾಲೀಕರು ಮಾತ್ರವೇ ಅಲ್ಲ ಕುಟುಂಬ ಸದಸ್ಯರನ್ನೂ ಕಾನೂನಿನ ಅಡಿಯಲ್ಲಿ ದಂಡಿಸಬಹುದಾಗಿತ್ತು.

2016: ಚೆನ್ನೈ: ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 40 ಉಗ್ರರನ್ನು ಸದೆಬಡಿದ ಭಾರತೀಯ ಸೇನೆಯ ಸೀಮಿತ ದಾಳಿ ಕಾರ್ಯಾಚರಣೆಗೆ ನೆರವಾದದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ದೇಶೀಯವಾಗಿ ನಿರ್ಮಿಸಿದ ಕಾಟೋಸ್ಯಾಟ್ ಸರಣಿಯ ಉಪಗ್ರಹಗಳ ಚಿತ್ರಗಳು ಎಂಬುದು ಬೆಳಕಿಗೆ ಬಂದಿತು. ಆಗಸದಲ್ಲಿನ ಭಾರತದ ಕಣ್ಣುಗಳು ಎಂಬುದಾಗಿಯೇ ಖ್ಯಾತಿ ಪಡೆದಿರುವ ದೂರ ಸಂವೇದಿ ಅಥವಾ ಭೂ ವೀಕ್ಷಣಾ ಉಪಗ್ರಹಗಳು ಸಶಸ್ತ್ರ ಪಡೆಗಳಿಗೆ ಚಿತ್ರಗಳನ್ನು ರವಾನಿಸುತ್ತಿರುತ್ತವೆ.
ಕಾಟೋಸ್ಯಾಟ್-2, 2, 2ಬಿ ಮತ್ತು 2ಸಿ ಉಪಗ್ರಹಗಳನ್ನು ಆಯಕಟ್ಟಿನ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅದರಲ್ಲೂ ಕಾಟೋಸ್ಯಾಟ್ 2ಸಿ ಉಪಗ್ರಹ ಕಳುಹಿಸುವ ಚಿತ್ರಗಳು ಹೆಚ್ಚು ಸ್ಪಷ್ಟವಾಗಿರುವುದರಿಂದ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇನೆ ಬಳಸುತ್ತದೆ. ಕಾಟೋಸ್ಯಾಟ್ 2ಸಿ ಉಪಗ್ರಹವನ್ನು 2016 ಜೂನ್ ತಿಂಗಳಲ್ಲಿ ಉಡಾವಣೆ ಮಾಡಲಾಗಿತ್ತು. ಇದರ ಜೊತೆಗೆ ಕಾಟೋಸ್ಯಾಟ್ 2ಡಿ ಮತ್ತು 3ನ್ನೂ ಸಶಸ್ತ್ರ ಪಡೆಗಳು ಬಳಸಿಕೊಳ್ಳುತ್ತಿವೆ ಎಂದು ಸುದ್ದಿಮೂಲಗಳು ತಿಳಿಸಿದವು. ಆಯಕಟ್ಟಿನ ಉದ್ದೇಶಗಳಿಗೆ ಉಪಗ್ರಹಗಳನ್ನು ಬಳಸುತ್ತಿರುವ ಬಗ್ಗೆ ಇಸ್ರೋ ಅಧಿಕಾರಿಗಳು ಮೌನವಾಗಿದ್ದಾರೆ. ಆದರೆ ರಕ್ಷಣಾ ಪಡೆಗಳು ಸೇರಿದಂತೆ ಹಲವಾರು ಸಂಸ್ಥೆಗಳು ಬಳಸುತ್ತಿರುತ್ತವೆ ಎಂದು ಇಸ್ರೋ ಹೇಳಿತು.

2016: ನವದೆಹಲಿ: ಗಡಿದಾಟಿ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ 40 ಭಯೋತ್ಪಾದಕರನ್ನು ಬಗ್ಗು ಬಡಿದ ಭಾರತೀಯ ಸೇನೆಯ ದಿಟ್ಟ ಸರ್ಜಿಕಲ್ ದಾಳಿ ಕಾರ್ಯಾಚರಣೆಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈದಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು. ಪ್ರಧಾನಿ ಮೋದಿಯವರ ಬಗ್ಗೆ ಇದೇ ಪ್ರಪ್ರಥಮ ಬಾರಿಗೆ ಶ್ಲಾಘನೆ ವ್ಯಕ್ತ ಪಡಿಸಿದ ರಾಹುಲ್ ಗಾಂಧಿಎರಡೂವರೆ ವರ್ಷಗಳಲ್ಲಿ ಪ್ರಥಮ ಬಾರಿಗೆ ಪ್ರಧಾನಿಗೆ ತಕ್ಕುದಾದ ಕ್ರಮವನ್ನು ಕೈಗೊಂಡಿರುವುದಕ್ಕಾಗಿ ನಾನು ಅವರಿಗೆ (ಪ್ರಧಾನಿ ಮೋದಿ) ಧನ್ಯವಾದ ಅರ್ಪಿಸುತ್ತೇನೆ. ನನ್ನ ಪಕ್ಷ ಮತ್ತು ನಾನು ವಿಚಾರದಲ್ಲಿ ಅವರ ಜೊತೆಗೆ ನಿಲ್ಲುತ್ತೇವೆಎಂದು ಹೇಳಿದರು.

2016: ನವದೆಹಲಿ: ಪ್ರಮಾದವಶಾತ್ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಿದ್ದ ಭಾರತೀಯ ಯೋಧನನ್ನು ಪಾಕಿಸ್ತಾನದ ವಶದಿಂದ ಬಿಡಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಭಾರತೀಯ ಯೋಧನನ್ನು ಪಾಕ್ ಸೈನಿಕರು ವಶಕ್ಕೆ ಪಡೆದಿರುವ ವರದಿಯ ಸಂಬಂಧ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗಿದೆ. ಆತನನ್ನು ಬಿಡಿಸಲು ಸರ್ವ ಪ್ರಯತ್ನ ಮಾಡಲಾಗುವುದು. ಪಾಕ್ ವಶದಲ್ಲಿರುವ ಯೋಧನನ್ನು 37ನೇ ರಾಷ್ಟ್ರೀಯ ರೈಫಲ್ಸ್ಗೆ ಸೇರಿದ 22 ವರ್ಷದ ಚಂದು ಬಾಬುಲಾಲ್ ಚೌಹಾಣ್ ಎಂದು ಗುರುತಿಸಲಾಗಿತ್ತು. ಯೋಧನೋರ್ವ ಗಡಿ ನಿಯಂತ್ರಣ ರೇಖೆ ಬಳಿ ಪಹರೆ ತಿರುಗುತ್ತಿದ್ದಾಗ ಅಚಾನಕ್ಕಾಗಿ ಗಡಿ ದಾಟಿದ್ದರು. ಈಗ ಅವರು ಪಾಕಿಸ್ತಾನದ ವಶದಲ್ಲಿದ್ದಾರೆ, ಪಾಕ್ ಸೇನೆಯೊಂದಿಗೆ ಮಾತುಕತೆ ನಡೆಯುತ್ತಿದ್ದು, ಯೋಧನನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲಾಗುವುದು. ಗಡಿ ನಿಯಂತ್ರಣ ರೇಖೆ ಬಳಿ ಆಗಾಗ್ಗೆ ಯೋಧರು ಮತ್ತು ನಾಗರಿಕರು ಗಡಿ ದಾಟುತ್ತಿರುತ್ತಾರೆ. ನಂತರ ಅವರನ್ನು ಪರಸ್ಪರ ಹಸ್ತಾಂತರಿಸಿಕೊಳ್ಳಲಾಗುತ್ತದೆ ಎಂದು ಸೇನೆಯ ಮೂಲಗಳು ತಿಳಿಸಿದ್ದವು. ಸೆ.28ರ  ರಾತ್ರಿ 1.30 ಸುಮಾರಿಗೆ ಛಂಬ ಸೆಕ್ಟರ್ನಲ್ಲಿ ಗಡಿ ದಾಟಿದ್ದ ಭಾರತೀಯ ಯೋಧನೋರ್ವನನ್ನು ಬಂಧಿಸಿದ್ದೇವೆ ಎಂದು ಪಾಕ್ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗುಂಡಿನ ದಾಳಿಯಲ್ಲಿ ಪಾಕ್ ಸೇನೆ 8 ಭಾರತೀಯ ಯೋಧರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿತ್ತು. ಆದರೆ ಪಾಕಿಸ್ತಾನದ ಹೇಳಿಕೆಯನ್ನು ಭಾರತೀಯ ಸೇನೆ ನಿರಾಕರಿಸಿತು.

2016: ಪೂಂಚ್ (ಜಮ್ಮು ಮತ್ತು ಕಾಶ್ಮೀರ)/ ಬನ್ಬಾಸ (ಉತ್ತರಾಖಂಡ): ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗಡಿ ದಾಟಿ ಭಯೋತ್ಪಾದಕರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಿದ ಬಳಿಕ ಪಾಕ್ ಜೊತೆಗಿನ ಭಾರತದ ಗಡಿಯುದ್ಧಕ್ಕೂ ಕಟ್ಟೆಚ್ಚರ ಘೋಷಿಸಿತು.. ಯಾವುದೇ ಪರಸ್ಥಿತಿ ಎದುರಿಸಲು ಭಾರತೀಯ ಯೋಧರು ಸಜ್ಜಾದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಗಡಿ ಸಮೀಪದ ಗ್ರಾಮಗಳನ್ನು ತೆರವುಗೊಳಿಸಿ ಲಕ್ಷಾಂತರ ಗ್ರಾಮಸ್ಥರನ್ನು ಬೇರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿತು. ಗಡಿ ಸಮೀಪದ ಆಸ್ಪತ್ರೆಗಳನ್ನು ಸುಸಜ್ಜಿತ ಸ್ಥಿತಿಯಲ್ಲಿ ಇರಿಸಿತು. ವರದಿಗಳ ಪ್ರಕಾರ ಭಾರತ-ನೇಪಾಳ ಗಡಿಯಲ್ಲೂ ರೆಡ್ ಅಲರ್ಟ್ ಘೋಷಿಲಾಯಿತು. ಈ ಮಧ್ಯೆ ಟಿವಿ ಮಾಧ್ಯಮಗಳು ಪಾಕ್ ಸೈನಿಕರು ಭಾರತದ ಗಡಿಯತ್ತ ಚಲಿಸುತ್ತಿರುವ ವರ್ತಮಾನಗಳು ಬಂದಿವೆ. ಪಾಕ್ ಸೈನಿಕರ ರಜೆಗಳನ್ನು ಅಧಿಕಾರಿಗಳು ರದ್ದು ಮಾಡಿದ್ದಾರೆ ಎಂದು ವರದಿ ಮಾಡಿದವು.

 

2016: ಚಂಡೀಗಢ: ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪಾಕ್ ಗಡಿಭಾಗದ ಗ್ರಾಮಸ್ಥರನ್ನು ಸ್ಥಳಾಂತರಿಸಲು ಆದೇಶಿಸಿತು.  ಪಂಜಾಬ್ ಸರ್ಕಾರ ಗಡಿ ಭಾಗಗಳ 1000 ಗ್ರಾಮಗಳ ಸುಮಾರು 15 ಲಕ್ಷ ಜನರನ್ನು ಸ್ಥಳಾಂತರಿಸಲಾಯಿತು. ಪಾಕ್ ಗಡಿಗೆ ಹೊಂದಿಕೊಂಡಿರುವ ಫಿರೋಜ್ಪುರ ಜಿಲ್ಲೆಯ 300 ಗ್ರಾಮಗಳು, ಗುರುದಾಸ್ಪುರ ಜಿಲ್ಲೆಯ 290, ಅಮೃತಸರ ಜಿಲ್ಲೆಯ 137, ತ್ರಾನ್ ತರನ್ ಜಿಲ್ಲೆಯ 135, ಪಠಾಣ್ಕೋಟ್ ಜಿಲ್ಲೆಯ 65 ಮತ್ತು ಫಜಿಲ್ಕಾ ಜಿಲ್ಲೆಯ 60 ಗ್ರಾಮಗಳ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ಇದಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸುರಕ್ಷಿತ ಸ್ಥಳಗಳಲ್ಲಿ ಕ್ಯಾಂಪ್ಗಳನ್ನು ತೆರೆದಿದ್ದು, ಗಡಿ ಭಾಗದ ಗ್ರಾಮಗಳ ಜನರಿಗೆ ಅಲ್ಲಿ ತಾತ್ಕಾಲಿಕ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ತಿಳಿಸಿದರು. ಜೊತೆಗೆ ಗಡಿಯಿಂದ 10 ಕಿ.ಮೀ. ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಗಡಿ ಪ್ರದೇಶದ ಎಲ್ಲಾ ಅಧಿಕಾರಿಗಳು ಮತ್ತು ಪೊಲೀಸರ ರಜೆಯನ್ನು ರದ್ದುಗೊಳಿಸಲಾಗಿದ್ದು, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಜತೆಗೆ ಗಡಿ ಭಾಗದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗೆ ನೆರವು ನೀಡಲು ಅಧಿಕಾರಿಗಳನ್ನು ನಿಯೋಜಿಸಲಾಗುವುದು, ಇವರು ಗಡಿ ಭಾಗದ ಜಿಲ್ಲೆಗಳ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಿದ್ದಾರೆ ಮತ್ತು ಗ್ರಾಮಸ್ಥರನ್ನು ಸ್ಥಳಾಂತರಿಸಲಿದ್ದಾರೆ ಎಂದು ಸಿಎಂ ತಿಳಿಸಿದರು.

2016: ನವದೆಹಲಿ: ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ಉಗ್ರರು ನಡೆಸಿದ್ದ ದಾಳಿಯ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯೋಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು. ಇದರೊಂದಿಗೆ ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 19 ಕ್ಕೆ ಏರಿಕೆಯಾಯಿತು. ಸೆಪ್ಟೆಂಬರ್ 18 ರಂದು ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ ನಾಯಕ್ ರಾಜಕಿಶೋರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ದೆಹಲಿಯ ಸೇನಾ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈದಿನ ಮೃತರಾದರು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿದವು. ಉರಿಯಲ್ಲಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 18 ಜನರು ಹುತಾತ್ಮರಾಗಿದ್ದರು ಮತ್ತು ಹತ್ತಾರು ಜನರು ಗಂಭೀರವಾಗಿ ಗಾಯಗೊಂಡಿದ್ದರು.

2016: ಬೆಂಗಳೂರು: ಖ್ಯಾತ ಮನೋವೈದ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕರಾದ ಡಾ. ಅಶೋಕ್ ಪೈ (68) ಅವರು ಸ್ಕಾಟ್ಲೆಂಡ್ನಲ್ಲಿ ನಿಧನರಾದರು. ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸ್ಕಾಟ್ಲೆಂಡ್ಗೆ ತೆರಳಿದ್ದ ಅಶೋಕ್ ಪೈ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದವು. ಅಶೋಕ್ ಪೈ ಅವರುಪ್ರಥಮ ಉಷಾ ಕಿರಿಣ’, ‘ಕಾಡಿನ ಬೆಂಕಿಚಿತ್ರಗಳನ್ನು ನಿರ್ಮಿಸಿದ್ದರು. ಅಶೋಕ್ ಪೈ ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆಯ ಪ್ರಥಮ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.


2016: ಬೆಳಗಾವಿಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಕಮಾಂಡೋಗಳು ತರಬೇತಿ ಪಡೆದಿದ್ದು ಬೆಳಗಾವಿಯ ಕಮಾಂಡೋ ತರಬೇತಿ ಶಾಲೆಯಲ್ಲಿ ಎಂಬುದು ಕರ್ನಾಟಕದ ಹೆಮ್ಮೆ. ಬೆಳಗಾವಿಯ ಮರಾಠಾ ಲಘು ಪದಾತಿ ದಳ(ಎಂಎಲ್ಐಆರ್ಸಿ) ಪ್ರದೇಶದಲ್ಲೇ ಕಮಾಂಡೋ ತರಬೇತಿ ಶಾಲೆಯಿದೆ. ಭಾರತೀಯ ಸೇನೆಯ ಎರಡನೇ ಹಾಗೂ ಏಕೈಕ ಕಿರಿಯ ಕಮಾಂಡೋ ತರಬೇತಿ ಶಾಲೆ ಎಂಬ ಹೆಗ್ಗಳಿಕೆಗೆ ಕೇಂದ್ರ ಪಾತ್ರವಾಗಿದೆ. ಗಡಿಯಲ್ಲಿ ತಂಟೆ ತೆಗೆಯುವ ಪಾಕ್ ಉಗ್ರರನ್ನು ಮಟ್ಟ ಹಾಕಲೆಂದೇ ಬೆಳಗಾವಿಯ ಕಿರಿಯ ಕಮಾಂಡೋ ಶಾಲೆಯಲ್ಲೇ ಭಾರತೀಯ ಸೇನೆಯ ಕಮಾಂಡೋಗಳನ್ನು ಸಿದ್ಧಗೊಳಿಸಲಾಗಿತ್ತು. 21 ವರ್ಷದೊಳಗಿನ ಕಮಾಂಡೋಗಳಿಗೆ ತರಬೇತಿ ನೀಡಲಾಗಿತ್ತು.  ಭಾರತೀಯ ಸೇನೆಯ ಮೊದಲ ಕಮಾಂಡೋ ತರಬೇತಿ ಶಾಲೆಯನ್ನು ಮಧ್ಯಪ್ರದೇಶದ ಮೌವ್ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಬಳಿಕ 1975ರಲ್ಲಿ ಬೆಳಗಾವಿಯ ಎಂಎಲ್ಐಆರ್ಸಿಯಲ್ಲಿ ಕಮಾಂಡೋ ತರಬೇತಿ ಶಾಲೆ ಸ್ಥಾಪಿಸಲಾಯಿತು. ಮೌವ್ ಪ್ರದೇಶದಲ್ಲಿ ಹಿರಿಯ ಕಮಾಂಡೋಗಳಿಗೆ ಮಾತ್ರ ಈಗ ತರಬೇತಿ ನೀಡಲಾಗುತ್ತಿದೆ. ಆದರೆ ಆರಂಭಿಕ ಹಂತದಲ್ಲಿ ಸೇನೆಗೆ ಸೇರುವ ಎಲ್ಲ ಕಮಾಂಡೋಗಳಿಗೆ ಬೆಳಗಾವಿಯ ಕಮಾಂಡೋ ತರಬೇತಿ ಶಾಲೆಯಲ್ಲಿ ಕ್ಲಿಷ್ಟ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿಸುವ ನಿಟ್ಟಿನಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ಭಾರತೀಯ ಸೇನೆಯಲ್ಲಿರುವ ಬಹುತೇಕ ಕಮಾಂಡೋಗಳು ಬೆಳಗಾವಿಯ ಕಮಾಂಡೋ ತರಬೇತಿ ಶಾಲೆಯಲ್ಲೇ ತರಬೇತಿ ಪಡೆದಿದ್ದಾರೆ ಎಂಬುದು ವಿಶೇಷ.

2014:  ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಸಹಚರ ಎನಿಸಿಕೊಂಡ ಚೋಟಾ ಶಕೀಲ್ ಘೋಷಿತ ಅಪರಾಧಿಗಳು ಎಂದು ದೆಹಲಿ ನ್ಯಾಯಾಲಯ ಘೋಷಿಸಿದೆ.  ದೆಹಲಿ ಕೋರ್ಟಿನ ಹೆಚ್ಚುವರಿ ನ್ಯಾಯಾಲಯದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಈ ಇಬ್ಬರೂ ಆರೋಪಿಗಳು ತಪ್ಪಿತಸ್ಥರು ಎನ್ನುವುದು ತನಿಖೆಯ ವೇಳೆ ಸಾಬೀತಾಗಿದೆ. ಅಲ್ಲದೆ ಪೋಲಿಸರು ಸಂಬಂಧಿಸಿದ ಎಲ್ಲಾ ಆಸ್ತಿಗಳಿಗೂ ಮುಟ್ಟುಗೋಲು ಹಾಕಿದ್ದು, ಎಲ್ಲಾ ದಾಖಲೆಗಳಿಂದಲೂ ಇವರು ಅಪರಾಧಿಗಳು ಎನ್ನುವುದು ಸಾಬೀತಾಗಿದೆ ಎಂದು ಹೇಳಿತು. ಇತ್ತೀಚೆಗೆ ಕೋರ್ಟ್ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಈದಿನ ವಿಚಾರಣೆ ವೇಳೆ ದೆಹಲಿ ಪೋಲಿಸರು ವಾರಂಟಿಗೆ ಸಂಬಂಧಿಸಿ ಸಲ್ಲಿಸಬೇಕಾದ ಮಾಹಿತಿ ನೀಡಿದರು. ದಾವೂದ್ ಮತ್ತು ಚೋಟಾ ಶಕೀಲ್​ಗೆ ಸೇರಿದ ಮುಂಬೈನಲ್ಲಿರುವ ಆಸ್ತಿಗಳ ದಾಖಲೆಗಳ ಮುಟ್ಟುಗೋಲಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈಗಾಗಲೇ ನೀಡಿದ್ದಾಗಿದೆ. ಅಲ್ಲದೆ 1993ರ ಮುಂಬೈ ದಾಳಿ ಪ್ರಕರಣದ ಬಳಿಕ ಇಬ್ಬರೂ ತಲೆ ಮರೆಸಿಕೊಂಡಿದ್ದು, ಇನ್ನೂ ಭಾರತಕ್ಕೆ ಮರಳಿಲ್ಲ ಎಂದು ಅವರು ಹೇಳಿದರು.

2014: ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ನೀಡುವ ಮುನ್ನ ಕಟ್ಟಡದ ಪ್ರಮುಖ ಸ್ಥಳಗಳಲ್ಲಿ ನಿರ್ಮಾಣದ  ಬಳಿಕ 'ಧೂಮಪಾನ ನಿಷೇಧಿಸಿದೆ' ಎಂಬ ಫಲಕಗಳನ್ನು ಕಡ್ಡಾಯವಾಗಿ ಹಾಕುವಂತೆ ಸಂಬಂಧಿತರಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ(ಅಗ್ನಿ ಮತ್ತು ತುರ್ತ ಸೇವೆ) ಸುತ್ತೋಲೆ ಹೊರಡಿಸಿದರು. ಸಿಗರೇಟ್ ಮತ್ತು ಇತರ ತಂಬಾಕು ಪದಾರ್ಥಗಳ ಕಾಯ್ದೆ(ಕೊಟ್ಪಾ)ಯ ಸಮರ್ಪಕ ಅನುಷ್ಠಾನ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆ(ಐಪಿಎಚ್) ಸಲ್ಲಿಸಿದ್ದ ಮನವಿ ಮೇರೆಗೆ ಅಗ್ನಿ ಮತ್ತು ತುರ್ತಸೇವೆ ಡಿಜಿಪಿ ಸೆ. 22ರಂದು ಈ ಆದೇಶ ಹೊರಡಿಸಿದ್ದಾರೆ. ಕೊಟ್ಪಾದ ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಆ ಪ್ರಕಾರ ಸರ್ಕಾರಿ-ಖಾಸಗಿ ಕಚೇರಿ, ಕಾರ್ಪೆರೇಟ್ ಹೌಸ್, ಶಾಪಿಂಗ್ ಮಾಲ್, ಥಿಯೇಟರ್, ರೆಸ್ಟೋರೆಂಟ್, ಕಾರ್ಖಾನೆ, ಆಸ್ಪತ್ರೆ, ಮನರಂಜನಾ ಕೇಂದ್ರ, ನ್ಯಾಯಾಲಯದ ಕಟ್ಟಡ ಮತ್ತಿತರ ಸಾರ್ವಜನಿಕ ಕಚೇರಿ-ಕಟ್ಟಡಗಳಲ್ಲಿ 'ಧೂಮಪಾನ ನಿಷೇಧಿಸಿದೆ' ಎಂಬ ಫಲಕಗಳನ್ನು ಹಾಕುವುದು ಕಡ್ಡಾಯ. ಧೂಮಪಾನಿಗಳ ಅಚಾತುರ್ಯದಿಂದಾಗುವ ಅಗ್ನಿ ಅನಾಹುತದಲ್ಲಿ ಇತರ ಅಗ್ನಿ ಅನಾಹುತಗಳಲ್ಲಿ ಉಂಟಾಗುವುದಕ್ಕಿಂತ ಹೆಚ್ಚು ಜೀವ ಹಾಗೂ ಸ್ವತ್ತು ಹಾನಿಗಳಾಗಿರುವುದು ಸಮೀಕ್ಷೆಯಿಂದ ಸಾಬೀತಾಗಿದೆ. ವಿಶ್ವದಲ್ಲಿ ನಡೆಯುತ್ತಿರುವ ಅಗ್ನಿ ಅನಾಹುತಗಳಿಗೆ ಧೂಮಪಾನಿಗಳ ಅಚಾತುರ್ಯವೇ ಪ್ರಮುಖ ಕಾರಣವಾಗಿದ್ದು, ಅದರಿಂದ ಪ್ರತಿವರ್ಷ 500-700 ಜನ ಸಾವಿಗೀಡಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಐಪಿಎಚ್-ಕ್ಯಾನ್ಸರ್ ತಡೆ ಯೋಜನೆ ನಿರ್ದೇಶಕ ಡಾ.ಯು.ಎಸ್.ವಿಶಾಲ್​ರಾವ್ ಮಾ. 8ರಂದು ಡಿಜಿ ಅವರಿಗೆ ಮನವಿ ಸಲ್ಲಿಸಿದ್ದರು. ಆದ್ದರಿಂದ ಕಟ್ಟಡದ ಪ್ರವೇಶ, ಲಿಫ್ಟ್​ನ ಪ್ರವೇಶದ್ವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 'ಧೂಮಪಾನ ನಿಷೇಧಿಸಿದೆ' ಫಲಕಗಳನ್ನು ಹಾಕಲೇಬೇಕು ಎಂದು ನಿರಾಕ್ಷೇಪಣಾ ಪತ್ರ ನೀಡುವ ಮುನ್ನ ಸೂಚನೆ ನೀಡಬೇಕು ಎಂದು ಅಗ್ನಿ ಮತ್ತು ತುರ್ತಸೇವೆ ಡಿಜಿಪಿ ಆದೇಶಿಸಿದ್ದಾರೆ.

2014: ಮಂಗಳನ ಕಕ್ಷೆಯಲ್ಲಿರುವ ಇಸ್ರೋದ ಮಂಗಳ ಯಾನ ಬಾಹ್ಯಾಕಾಶ ನೌಕೆ ಕೆಂಪು ಗ್ರಹದ ನೂತನ ಚಿತ್ರಗಳನ್ನು ಕಳಿಹಿಸಿತು. ಮಂಗಳ ಗ್ರಹದಲ್ಲಿ ಧೂಳಿನ ಸುನಾಮಿ ಬೀಸುತ್ತಿರುವ ದೃಶ್ಯ ಸೆರೆ ಹಿಡಿಯುವಲ್ಲಿ ನೌಕೆ ಯಶಸ್ವಿಯಾಯಿತು.. ಈ ಚಿತ್ರಗಳನ್ನು 74,500 ಕಿ.ಮೀ. ಎತ್ತರದಿಂದ ಕ್ಲಿಕ್ಕಿಸಲಾಯಿತು. ಮಂಗಳನ ಅಧ್ಯಯನಕ್ಕೆ ಈ ಚಿತ್ರ ಸಹಕಾರಿಯಾಗಲಿದೆ ಎಂದು ಇಸ್ರೋ ತಿಳಿಸಿತು.

2014: ಬೆಂಗಳೂರು: ಕನ್ನಡಿಗ ಅಥ್ಲೀಟ್ ವಿಕಾಸ್ ಗೌಡ ಇಂಚೋನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಗೇಮ್ಸ್​ನ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಕಳೆದ ತಿಂಗಳಷ್ಟೆ ಗ್ಲಾಸ್ಗೋನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಸಂಭ್ರಮ ಅನುಭವಿಸಿದ್ದ ವಿಕಾಸ್ ಗೌಡ ಏಷ್ಯನ್ ಗೇಮ್ಸ್​ನಲ್ಲಿ 62.58 ಮೀಟರ್ ದೂರಕ್ಕೆ ಎಸೆದು ಬೆಳ್ಳಿ ಪದಕ ಸಂಪಾದಿಸಿದರು. ಒಲಿಂಪಿಕ್ ಕಂಚಿನ ಪದಕ ವಿಜೇತ ಇರಾನ್​ನ ಇಹ್ಸಾನ್ ಹದಾದಿ 65.11 ಮೀಟರ್ ದೂರಕ್ಕೆಸೆದು ಚಿನ್ನ ಗೆದ್ದರೆ, ಇನ್ನೊಬ್ಬ ಇರಾನಿಯನ್ ಮೊಹಮ್ಮದ್ ಅಹಮ್ಮದ್ ದಾಹೀಬ್ 61.25 ಮೀಟರ್ ದೂರಕ್ಕೆಸೆದು ಕಂಚು ಗೆದ್ದರು.


2014: ಇಂಚೋನ್: ಭಾರತದ ಬಾಕ್ಸರ್ ಪೂಜಾ ರಾಣಿ ಏಷ್ಯನ್ ಗೇಮ್ಸ್​ನ 69-75ಕೆಜಿ ಮಿಡಲ್​ವೇಟ್ ಮಹಿಳಾ ವಿಭಾಗದ ಸೆಮಿಫೈನಲ್​ನಲ್ಲಿ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಪೂಜಾ 02 ಅಂತರದಿಂದ ಚೀನಾದ ಲಿ ಕ್ವಿಯಾನ್ ವಿರುದ್ಧ ಸೋಲನುಭವಿಸಿದರು. ಪುರುಷರ ವಿಭಾಗದಲ್ಲಿ ಸತೀಶ್ ಕುಮಾರ್ 91ಕೆಜಿಗಿಂತ ಮೇಲ್ಪಟ್ಟ ಸೂಪರ್ ಹೆವಿವೇಟ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಕ್ವಾರ್ಟರ್ ಫೈನಲ್​ನಲ್ಲಿ 2-1 ಅಂತರದಿಂದ ಜೋರ್ಡನ್ಸ್ ಹುಸೈನ್ ವಿರುದ್ಧ ಜಯ ಸಾಧಿಸಿದರು. ಇದಕ್ಕೂ ಮೊದಲ ಹಣಾಹಣಿಯಲ್ಲಿ ಶಿವ ಥಾಪಾ 56ಕೆಜಿ ಬ್ಯಾಂಟಮ್ೇಟ್ ವಿಭಾಗದ ಕ್ವಾರ್ಟರ್​ಫೈನಲ್​ನಲ್ಲಿ ಪರಾಭವಗೊಂಡರು. ಹಾಕಿಯಲ್ಲಿ ಫೈನಲ್​ಗೆ: ಆಕಾಶ್​ದೀಪ್ ಸಿಂಗ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಏಷ್ಯಾಡ್ ಫೈನಲ್ ಪ್ರವೇಶಿಸಿತು. ಕೊರಿಯಾ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಳೆದ 12 ವರ್ಷಗಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. 

2008: ಜೋಧಪುರ ಸಮೀಪದ ಮೆಹರಂಗಢ ಮೇಲಿನ ಕೋಟೆಯಲ್ಲಿನ ಚಾಮುಂಡಾ ದೇವಿ ದೇವಸ್ಥಾನದ ಬಳಿ ಬೆಳಗಿನ ಜಾವ 5.30ರ ಸುಮಾರಿಗೆ ಸಂಭವಿಸಿದ ಭಾರಿ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಕನಿಷ್ಠ 177 ಜನರು ಮೃತರಾದರು. ದೇವಾಲಯದಿಂದ ಕೇವಲ 150 ಅಡಿ ದೂರದಲ್ಲೇ ಸಂಭವಿಸಿದ ಈ ಹೃದಯವಿದ್ರಾವಕ ದುರಂತದಲ್ಲಿ ಸುಮಾರು 300 ಜನರು ಗಾಯಗೊಂಡರು. ನವರಾತ್ರಿ ಪೂಜೆಯ ಮೊದಲ ದಿನದ ನಿಮಿತ್ತ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಸಹಸ್ರಾರು ಭಕ್ತರು ಬೆಟ್ಟದ ಮೇಲೆ ಸಾಲುಗಟ್ಟಿ ನಿಂತ್ದಿದರು. ಶರದೃತುವಿನ ಸುಕೋಮಲ ವಾತಾವರಣದಲ್ಲಿ ಬೆಟ್ಟದ ಮೇಲಿನ ದೇವಾಲಯದಿಂದ ಪ್ರಾತಃಕಾಲದ ಮಂತ್ರಘೋಷಗಳು ಮೊಳಗುತ್ತಿದ್ದವು. ಆದರೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಪೂಜೆ ಮುಗಿಸಿಕೊಂಡು ದೇವಸ್ಥಾನದಿಂದ ಮರಳುವಾಗ ಆತುರ ತೋರಿದ್ದೇ ದುರ್ಘಟನೆಗೆ ಕಾರಣವಾಯಿತು. ಈ ಹಿಂದಿನ ಭಕ್ತರ ಸಾವಿನ ಸರಮಾಲೆಗಳ ದಾಖಲೆಗಳು ಈ ಕೆಳಗಿನಂತಿವೆ: (ಆಗಸ್ಟ್ 27, 2003: ಮಹಾರಾಷ್ಟ್ರದ ನಾಸಿಕ್ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಿಕ್ಕಿ 39 ಜನರ ಸಾವು, ಜನವರಿ 25, 2005: ಮಹಾರಾಷ್ಟ್ರದ ಮಾಂಧ್ರಾ ದೇವಾಲಯದಲ್ಲಿ ಸಾಂಪ್ರದಾಯಿಕ ವಾರ್ಷಿಕೋತ್ಸವದಲ್ಲಿ ಉಂಟಾದ ಕಾಲ್ತುಳಿತಕ್ಕೆ 340 ಜನರ ಮೃತ್ಯು, ಆಗಸ್ಟ್ 3, 2008: ಹಿಮಾಚಲ ಪ್ರದೇಶದ ನೈನಾ ದೇವಿ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 162 ಜನರ ಸಾವು. 47 ಜನಕ್ಕೆ ಗಾಯ. ಮೇಲಿನಿಂದ ಬಂಡೆ ಉರುಳಿ ಬೀಳುತ್ತಿದೆ ಎಂಬ ವದಂತಿಯೇ ದುರ್ಘಟನೆಗೆ ಕಾರಣ., ಆಗಸ್ಟ್ 10, 2008: ರಾಜಸ್ಥಾನದ ಕೋಟಾ ಜಿಲ್ಲೆಯ ಮಹಾದೇವ ದೇಗುಲಕ್ಕೆ ಸಾಗುವಾಗ ಉಂಟಾದ ಇಕ್ಕಟ್ಟಿನಲ್ಲಿ ಇಬ್ಬರು ಭಕ್ತರ ಸಾವು.)

2008: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಮರ ಸಾರಿದ ರಾಜ್ಯ ಸರ್ಕಾರ ಅವರ ಅವಧಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದ ಮೂರು ನಿರ್ಣಯಗಳನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಲು ನಿರ್ಧರಿಸಿತು. ಈ ವಿಷಯವನ್ನು ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಸವರಾಜ ಬೊಮ್ಮಾಯಿ ಮತ್ತು ಅರವಿಂದ ಲಿಂಬಾವಳಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಇತ್ತೀಚೆಗಷ್ಟೇ ಮೇವರಿಕ್ ಸಂಸ್ಥೆಗೆ ರಾಜ್ಯ ಸರ್ಕಾರ ನೀಡಿದ್ದ ಈಜಿಪುರ ವಸತಿ ಯೋಜನೆಯನ್ನೂ ಲೋಕಾಯುಕ್ತ ತನಿಖೆಗೆ ಒಪ್ಪಿಸಲು ನಿರ್ಧರಿಸಲಾಯಿತು. ಅಲ್ಲದೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಂಜೂರಾತಿ ನೀಡಿದ್ದ `ಗರುಡಾ ಮಾಲ್' ಕೂಡ ತನಿಖೆ ವ್ಯಾಪ್ತಿಗೆ ಸೇರುವುದು ಎಂದು ಅವರು ಹೇಳಿದರು.

2008: ಶ್ರೀಲಂಕಾದ ಉತ್ತರ ತೀರಕ್ಕೆ ಸಮೀಪದಲ್ಲಿ ಲಂಕಾ ಸೇನೆ ಮತ್ತು ಎಲ್ ಟಿ ಟಿ ಇ ನೌಕಾ ವಿಭಾಗ `ಸೀ ಟೈಗರ್ಸ್' ಮಧ್ಯೆ ಸಮುದ್ರದಲ್ಲಿ ಸಂಭವಿಸಿದ ಕಾಳಗದಲ್ಲಿ ಬಂಡುಕೋರರ ಎರಡು ದೋಣಿಗಳು ಧ್ವಂಸವಾಗಿ, ಎಂಟುಮಂದಿ ಸಾವನ್ನಪ್ಪಿದರು. ಇದೇ ಸಂದರ್ಭದಲ್ಲಿ ಲಂಕಾ ಸೇನೆ ಉತ್ತರ ಭಾಗದ ವಿವಿಧ ಕಡೆ ನಡೆಸಿದ ದಾಳಿಯಲ್ಲಿ 45 ಮಂದಿ ಉಗ್ರರು ಮೃತರಾದರು. ಐವರು ಸೈನಿಕರೂ ಸಾವನ್ನಪ್ಪಿದರು.

2008: ಮಧ್ಯಪ್ರಾಚ್ಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಥಾಚಿತ್ರ ವಿಭಾಗಕ್ಕೆ ಏಕೈಕ ಭಾರತೀಯ ಚಲನಚಿತ್ರವಾಗಿ ಗಿರೀಶ್ ಕಾಸರವಳ್ಳಿ ಅವರ `ಗುಲಾಬಿ ಟಾಕೀಸ್' ಪ್ರವೇಶ ಪಡೆಯಿತು. 2 ಲಕ್ಷ ಡಾಲರ್ ಮೌಲ್ಯದ `ಬ್ಲಾಕ್ ಪರ್ಲ್' ಪ್ರಶಸ್ತಿಗಾಗಿ ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ, ಯೂರೋಪ್ ಹಾಗೂ ಅಮೆರಿಕದ ಇತರ 15 ಚಲನ ಚಿತ್ರಗಳೊಂದಿಗೆ ಈ ಚಿತ್ರ ಸ್ಪರ್ಧಿಸುವುದು.

2007: ಕರ್ನಾಟಕದ 209 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಜನತಾ ದಳ (ಎಸ್) ಅನಿರೀಕ್ಷಿತವಾಗಿ ಭರ್ಜರಿ ಗೆಲುವು ಸಾಧಿಸಿತು. ಆರು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಯಿತು. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಬಿಜೆಪಿ ಕಳೆದ ಸಲಕ್ಕಿಂತ ದುಪ್ಪಟ್ಟು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ಬಹುಮತ ಪಡೆದಿರುವ ಲೆಕ್ಕದಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು. ಚುನಾವಣೆ ನಡೆದ ಆರು ಮಹಾನಗರ ಪಾಲಿಕೆಗಳ ಪೈಕಿ 3ರಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆಯಿತು. ಎರಡರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಯಿತು. 44 ನಗರಸಭೆಗಳ ಪೈಕಿ ತಲಾ 11ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದವು.

 2007: ಬೆಂಗಳೂರು ನಗರದ ಇನ್ ಫೆಂಟ್ರಿ ರಸ್ತೆಯಲ್ಲಿ ನಿರ್ಮಿಸಲಾದ ನೂತನ 'ವಾರ್ತಾ ಸೌಧ' ಕಟ್ಟಡವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಉದ್ಘಾಟಿಸಿದರು.

2007: ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿದ ಇಂಗ್ಲೆಂಡ್ ಈ ಸಂಬಂಧ ಹೊಸ ಕಾನೂನನ್ನು ಜಾರಿ ತರುವುದಾಗಿ ಪ್ರಕಟಿಸಿತು. ಈ ಕಾನೂನಿನ ಅನ್ವಯ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗೆ ರಕ್ಷಣೆ ದೊರೆಯಲಿದೆ. ಸಿಖ್ ಹಾಗೂ ಯಹೂದಿಗಳಿಗೆ ಈಗಾಗಲೇ ಈ ರಕ್ಷಣೆ ನೀಡಲಾಗಿದೆ.

2007: ಭಾರತೀಯರಿಗೆ ಚಿಕ್ಕ ವಯಸ್ಸಿನಲ್ಲೇ ಕಾಡುವ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಅದರಿಂದ ಉಂಟಾಗುವ ಸಾವಿನ ಪ್ರಮಾಣ ಕುರಿತು ಆತಂಕ ವ್ಯಕ್ತಪಡಿಸಿದ ಹೃದಯ ತಜ್ಞರು, ಈ ಕುರಿತು ಜಾಗೃತಿ ಮೂಡಿಸಲು ಜನರಿಗೆ ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಧ್ಯಾನದ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಲು ಸಲಹೆ ನೀಡಿದರು. ಜಗತ್ತಿನಲ್ಲಿ ಹೃದಯ ರೋಗದಿಂದ ಸಾವನ್ನಪ್ಪುವ 7ಮಂದಿಯ ಪೈಕಿ ಒಬ್ಬ ಭಾರತೀಯನಾಗಿರುತ್ತಾನೆ. ಬೊಜ್ಜು, ಧೂಮಪಾನ, ಮಧುಮೇಹ, ಅತಿ ರಕ್ತದೊತ್ತಡದಿಂದಾಗಿ ಪ್ರತಿ ನಿಮಿಷಕ್ಕೆ ಕನಿಷ್ಠ ನಾಲ್ಕು ಭಾರತೀಯ ಹೃದಯ ರೋಗಿಗಳು ಸಾವನ್ನಪ್ಪುತ್ತಾರೆ. ಭಾರತದಲ್ಲಿ 40 ಲಕ್ಷ ಜನರು ಹೃದಯರೋಗಗಳಿಂದ ಸಾವನ್ನಪ್ಪುತ್ತಾರೆ. ಅವರಲ್ಲಿ 25 ಲಕ್ಷ ಜನರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಹೃದಯಾಘಾತಕ್ಕೀಡಾಗಿ ಸಾಯುತ್ತಾರೆ. ಭಾರತದಲ್ಲಿ ಹೃದಯಘಾತಕ್ಕೀಡಾಗುವ ಪುರುಷರ ಸರಾಸರಿ ವಯಸ್ಸು 55 ಇದ್ದರೆ, ಮಹಿಳೆಯರಿಗೆ 56 ವರ್ಷ ಎಂಬುದು ಡಾ. ಅಗರ್ ವಾಲ್ ಅಂಕಿ ಅಂಶ. ಚಿಕ್ಕ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರದಂತಿರಲು ಮಾನವ ದೇಹದಲ್ಲಿನ ಗ್ಲೈಕೊಸೊಲೇಟ್ ಹಿಮೊಗ್ಲೊಬಿನ್ ಪ್ರಮಾಣ ಶೇ. 6.5ಕ್ಕಿಂತ ಕಡಿಮೆ ಇರಬೇಕು. ಎಲ್ ಡಿ ಎಲ್ ಅಥವಾ ಕೊಲೆಸ್ಟ್ರಾಲ್ ಪ್ರಮಾಣ 100ಕ್ಕಿಂತ ಜಾಸ್ತಿ ಇರಬಾರದು. ರಕ್ತದೊತ್ತಡದ ಪ್ರಮಾಣ 120/80ಗಿಂತ ಕಡಿಮೆ ಇರಬೇಕು. ಪುರುಷರ ಹೊಟ್ಟೆಯ ಸುತ್ತಳತೆ 35 ಅಂಗುಲಕ್ಕಿಂತ ಹಾಗೂ ಮಹಿಳೆಯರ ಹೊಟ್ಟೆಯ ಸುತ್ತಳತೆ  32 ಅಂಗುಲಕ್ಕಿಂತ ಹೆಚ್ಚಿರಬಾರದು ಎಂಬುದು ತಜ್ಞರ ಸಲಹೆ. ಮೇಲಿನ ಅಳತೆಗೋಲನ್ನು ಹೊಂದಲು ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಅವಶ್ಯಕ. ಆಹಾರದಲ್ಲಿ ಸಂಸ್ಕರಿತ ಕಾರ್ಬೊಹೈಡ್ರೇಟ್ ಮತ್ತು ಕೊಬ್ಬಿನ ಅಂಶ ಕಡಿಮೆ ಇರಬೇಕು. ಕಡಿಮೆ ಆಹಾರ, ನಾರಿನಾಂಶವುಳ್ಳ ಆಹಾರ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ. ಜೊತೆಗೆ ದೇಹಕ್ಕೆ ಪ್ರತಿನಿತ್ಯ ನಿಯಮಿತ ಪ್ರಮಾಣದ ವ್ಯಾಯಾಮ ಮತ್ತು ಒತ್ತಡ ಕಡಿಮೆಗೊಳಿಸಲು ಯೋಗ-ಧ್ಯಾನ ಅಗತ್ಯ ಎಂಬುದು ತಜ್ಞರ ಕಿವಿಮಾತು.

2006: ಝೆಕ್ ಗಣರಾಜ್ಯದ ಸುಂದರಿ, ಕ್ರೀಡಾಪಟು ಟಟನಾ ಕುಚರೋವಾ ಅವರು ಈ ರಾತ್ರಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 2006ರ ಸಾಲಿನ `ವಿಶ್ವಸುಂದರಿ' ಪ್ರಶಸ್ತಿಗೆ ಪಾತ್ರರಾಗಿ, ಝೆಕ್ ಗಣರಾಜ್ಯಕ್ಕೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಈ ಕಿರೀಟವನ್ನು ತಂದು ಕೊಟ್ಟರು. 200 ರಾಷ್ಟ್ರಗಳಿಂದ ಆಗಮಿಸಿದ್ದ ಭಾರಿ ಸಂಖ್ಯೆಯ ವೀಕ್ಷಕರ ಎದುರಲ್ಲಿ ಅಂತಿಮ ಸ್ಪರ್ಧೆಯಲ್ಲಿ ಟಟನಾ ಕುಚರೋವಾ `ವಿಶ್ವಸುಂದರಿ' ಕಿರೀಟವನ್ನು ಧರಿಸಿದರು. 18ರ ಹರೆಯದ ಕುಚರೋವಾ ಅವರು ರೊಮಾನಿಯಾದ ಐವೊನಾ ವ್ಯಾಲೆಂಟಿನಾ, ಆಸ್ಟ್ರೇಲಿಯಾದ ಸಬ್ರೀನಾ ಹೌಸ್ಸಮಿ, ಆಂಗೋಲಾದ ಸ್ಟಿವಿಂದ್ರಾ ಒಲಿವೀರಾ, ಬ್ರೆಜಿಲ್ಲಿನ ಜಾನೆ ಸೌಸಾ ಬೋರ್ಗೆಸ್ ಒಲಿವೀರಾ ಮತ್ತು ಜಮೈಕಾದ ಸಾರಾ ಲಾರೆನ್ಸ್ ಅವರನ್ನು ಅಂತಿಮ ಸುತ್ತಿನಲ್ಲಿ ಹಿಂದಿಕ್ಕಿದರು. ಭಾರತದ ಸುಂದರಿ ಮುಂಬೈಯ ನತಾಶಾ ಸುರಿ ಸೇರಿದಂತೆ ಒಟ್ಟು 102 ಮಂದಿ ಸ್ಪರ್ಧಿಗಳು ಈ ಸಲ ಕಣದಲ್ಲಿ ಇದ್ದರು. ನತಾಶಾ ಸುರಿ ಅವರು 6ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

2006: ಮುಂಬೈ ಮಹಾನಗರದ ಉಪನಗರ ರೈಲುಗಳಲ್ಲಿ ಜುಲೈ 11ರಂದು ನಡೆದ ಬಾಂಬ್ ಸ್ಫೋಟಗಳ ಹಿಂದಿನ ಸಂಚನ್ನು ಭೇದಿಸಿರುವುದಾಗಿ ಪೊಲೀಸರು ಪ್ರಕಟಿಸಿದರು. ಪಾಕಿಸ್ಥಾನದ ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್ಐ) ಕೈವಾಡ ಇರುವುದು ಸಾಬೀತಾಗಿದೆ ಎಂದು ಪೊಲೀಸರು ಹೇಳಿದರು. ಪೊಲೀಸರ ಪ್ರಕಾರ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐ ಎಸ್ ಐ, ಉಗ್ರಗಾಮಿ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಮತ್ತು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತರ ನೆರವಿನಿಂದ ಒಟ್ಟು ಏಳು ರೈಲುಗಳಲ್ಲಿ ಈ ಬಾಂಬ್ ಸ್ಫೋಟಗಳನ್ನು ನಡೆಸಲಾಯಿತು.

2006: ಇರಾನಿನ ಮೊತ್ತ ಮೊದಲ ತದ್ರೂಪಿ ಜೀವಂತ ಕುರಿಮರಿ ಜನಿಸಿದೆ ಎಂದು ಇರಾನಿ ವಿಜ್ಞಾನಿಗಳು ಪ್ರಕಟಿಸಿದರು. ಇಸ್ಫಹಾನ್ ನಗರದ ರೊವುಯನ ಸಂಶೋಧನಾ ಕೇಂದ್ರದಲ್ಲಿ ಈ ತದ್ರೂಪಿ ಜೀವಂತ ಕುರಿಮರಿಯ ಜನನವಾಗಿದೆ ಎಂದು ಅವರು ಹೇಳಿದರು. ಕಳೆದ ಜುಲೈಯಲ್ಲಿ ಇರಾನಿನ ಪ್ರಥಮ ತದ್ರೂಪಿ ಕುರಿಮರಿ ಜನಿಸಿರುವುದಾಗಿ ವಿಜ್ಞಾನಿಗಳು  ಪ್ರಕಟಿಸಿದ್ದರು. ಆದರೆ ಆ ಮರಿ ಹುಟ್ಟಿದ ಕೆಲ ಕ್ಷಣಗಳಲ್ಲೇ ಸತ್ತಿತ್ತು. ಜಗತ್ತಿನ ಮೊತ್ತ ಮೊದಲ ತದ್ರೂಪಿ ಕುರಿಮರಿ `ಡಾಲಿ' ಸೃಷ್ಟಿಗೆ ಬಳಸಿದ ತಂತ್ರಜ್ಞಾನವನ್ನೇ ಬಳಸಿ ಇರಾನಿನಲ್ಲಿ ತದ್ರೂಪಿ ಕುರಿಮರಿ ಸೃಷ್ಟಿಸಲಾಗಿದೆ.

2005: `ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಚರ್ಚೆ' ಅಂಗವಾಗಿ  12 ವ್ಯಂಗ್ಯಚಿತ್ರಗಳನ್ನು ಡೆನ್ಮಾರ್ಕಿನ ಡ್ಯಾನಿಷ್ ದಿನಪತ್ರಿಕೆ `ಜಿಲ್ಲಾಂಡ್ಸ್- ಪೋಸ್ಟೆನ್' ಪ್ರಕಟಿಸಿತು. ಈ ವ್ಯಂಗ್ಯಚಿತ್ರಗಳು ಹಲವಾರು ಐರೋಪ್ಯ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಮರುಮುದ್ರಣಗೊಂಡದ್ದಲ್ಲದೆ, ಇಟಲಿಯ ಸುಧಾರಣಾ ಸಚಿವ ರಾಬರ್ಟೊ ಕಾಲ್ಡೆರೋಲಿ ಅವರ ಟೀಶರ್ಟಿನಲ್ಲೂ ಮುದ್ರಣಗೊಂಡಿತು. ಪ್ರವಾದಿ ಮಹಮ್ಮದರ ಬಗೆಗಿನ ಈ ವ್ಯಂಗ್ಯಚಿತ್ರಗಳಿಗೆ ವಿಶ್ವದಾದ್ಯಂತ ಮುಸ್ಲಿಮರ ವಿರೋಧ- ಪ್ರತಿಭಟನೆ ವ್ಯಕ್ತಗೊಂಡು ಕೊನೆಗೆ ಪತ್ರಿಕೆಯು ಕ್ಷಮೆ ಯಾಚನೆ ಮಾಡುವುದರೊಂದಿಗೆ ವಿವಾದವು 2006 ಫೆಬ್ರುವರಿಯಲ್ಲಿ ಅಂತ್ಯಗೊಂಡಿತು. ಈ ಅವಧಿಯಲ್ಲಿ ವಿವಿಧೆಡೆ ಸಂಭವಿಸಿದ ಹಿಂಸಾಚಾರಕ್ಕೆ 32 ಮಂದಿ ಬಲಿಯಾದರು. ವಿವಾದದ ಹಿನ್ನೆಲೆಯಲ್ಲಿ ಇಟಲಿಯ ಸಚಿವ ರಾಬರ್ಟೊ ರಾಜೀನಾಮೆ ನೀಡಬೇಕಾಯಿತು.

2000: ವಿಶ್ವ ಸುಂದರಿಯಾಗಿ ಭಾರತದ ಪ್ರಿಯಾಂಕಾ ಚೋಪ್ರಾ ಆಯ್ಕೆ.

1996: ತಮಿಳುನಾಡು ಸರ್ಕಾರವು `ಮದ್ರಾಸ್' ಹೆಸರನ್ನು ಬದಲಾಯಿಸಿ `ಚೆನ್ನೈ` ಎಂಬುದಾಗಿ ಮರು ನಾಮಕರಣ ಮಾಡುವ ನಿರ್ಧಾರವನ್ನು ಕೈಗೊಂಡಿತು.

1980: ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜನನ.

1961: ಮದ್ರಾಸಿನ (ಈಗಿನ ಚೆನ್ನೈ) ನೆಹರೂ ಸ್ಟೇಡಿಯಮ್ಮಿನಲ್ಲಿ ದುಲೀಪ್ ಟ್ರೋಫಿಗಾಗಿ ಮೊತ್ತ ಮೊದಲ ಅಂತರ್ ವಲಯ ಕ್ರಿಕೆಟ್ ಕ್ರೀಡಾಕೂಟದ ಮೊದಲ ಪಂದ್ಯ ಉತ್ತರ ವಲಯ ಮತ್ತು ದಕ್ಷಿಣ ವಲಯದ ಮಧ್ಯೆ ಆರಂಭವಾಯಿತು. ಉತ್ತರ ವಲಯದ ಸುರೇಂದ್ರನಾಥ್ ಮೊದಲ ಚೆಂಡನ್ನು ದಕ್ಷಿಣ ವಲಯದ ಎಂ.ಎಲ್. ಜಯಸಿಂಹರತ್ತ ಎಸೆದರು. ಕ್ರಿಕೆಟಿನ ಮಹಾನ್ ಆಟಗಾರ ರಣಜಿತ್ ಸಿನ್ಹಜಿ ಅವರ ಅಳಿಯ ಕೇಂಬ್ರಿಜ್ ಮತ್ತು ಸಸೆಕ್ಸಿನಲ್ಲಿ ಆಡಿದ್ದ ಕೆ.ಎಸ್. ದುಲೀಪ್ ಸಿನ್ಹಜಿ ಗೌರವಾರ್ಥ ದುಲೀಪ್ ಟ್ರೋಫಿಯನ್ನು ಆರಂಭಿಸಲಾಯಿತು.

1955: ಕ್ಯಾಲಿಫೋರ್ನಿಯಾದ ಕೊಲೇಮಿನಲ್ಲಿ ಎರಡು ಕಾರುಗಳ ಮಧ್ಯ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಚಿತ್ರನಟ ಜೇಮ್ಸ್ ಡೀನ್ (24) ಸಾವನ್ನಪ್ಪಿದರು.

1954: ಅಮೆರಿಕನ್ ನೌಕಾಪಡೆಯ ಮೊತ್ತ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ `ನಾಟಿಲಸ್' ಕಾರ್ಯಾರಂಭ ಮಾಡಿತು.

1947: ಸಾಹಿತಿ ಸು. ರಂಗಸ್ವಾಮಿ ಜನನ.

1943: ಲೇಖಕ ರಮಾನಂದ ಚಟ್ಟೋಪಾಧ್ಯಾಯ ನಿಧನ.

1933: ಸಾಹಿತಿ ಡಾ. ನಿರುಪಮಾ ಜನನ.

1922: ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ಜನ್ಮದಿನ.

1921: ಸಾಹಿತಿ ವರದರಾಜ ಅಯ್ಯಂಗಾರ್ ಜನನ.

1914: ಸಾಹಿತಿ ಟಿ.ಜಿ. ಸಿದ್ದಪ್ಪಾಜಿ ಜನನ.

1908: ರಾಮ್ ಧಾರಿ ಸಿಂಗ್ (1908-74) ಜನ್ಮದಿನ. ಖ್ಯಾತ ಹಿಂದಿ ಕವಿಯಾಗಿದ್ದ ಇವರು `ದಿನಕರ್' ಎಂದೇ ಪರಿಚಿತರಾಗಿದ್ದರು.

1900: ಎಂ.ಸಿ. ಛಾಗ್ಲಾ (1900-81) ಜನ್ಮದಿನ. ಇವರು ಖ್ಯಾತ ನ್ಯಾಯವಾದಿ, ಶಿಕ್ಷಣ ತಜ್ಞ, ರಾಜತಾಂತ್ರಿಕ ಹಾಗೂ ಕೇಂದ್ರ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1894: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ನೇತಾರ, ಸಾಹಿತಿ, ಪತ್ರಕರ್ತ ರಂಗರಾವ್ ರಾಮಚಂದ್ರ ದಿವಾಕರ (ಆರ್. ಆರ್. ದಿವಾಕರ) (30-9-1894ರಿಂದ 15-1-1990) ಅವರು ರಾಮಚಂದ್ರ- ಸೀತಾ ದಂಪತಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು. ಕರ್ಮವೀರ, ಸಂಯುಕ್ತ ಕರ್ನಾಟಕ, ಕಸ್ತೂರಿ ಪತ್ರಿಕೆಗಳ ಸ್ಥಾಪಕ ಸಂಪಾದಕರಾಗಿದ್ದ ಇವರು ಆಗಮ ಮತ್ತು ತಾಂತ್ರಿಕ ಪರಂಪರೆಯನ್ನು ಅಭ್ಯಸಿಸಿ ಭಗವದ್ಗೀತೆ, ಉಪನಿಷತ್ತುಗಳಿಗೆ ಸಂಬಂಧಿಸಿದಂತೆಯೂ ಗ್ರಂಥಗಳನ್ನು ರಚಿಸಿದ್ದಾರೆ.

1881: ಖ್ಯಾತ ಸಂಗೀತ ವಿದ್ವಾಂಸ, ಸಮಾಜ ಸೇವಕ ರಾಜಾ ಅಣ್ಣಾಮಲೈ ಚೆಟ್ಟಿಯಾರ್ ಜನನ.

1846: ಈಥರನ್ನು ಮೊತ್ತ ಮೊದಲ ಬಾರಿಗೆ ಅರಿವಳಿಕೆಯಾಗಿ ಹಲ್ಲು ತೆಗೆಯಲು ಬಳಸಲಾಯಿತು.

1452: ಜೋಹಾನ್ಸ್ ಗುಟನ್ ಬರ್ಗಿನಲ್ಲಿ ಮೊದಲ ಪುಸ್ತಕವಾಗಿ ಬೈಬಲ್ ಪ್ರಕಟವಾಯಿತು.

1773: ಭಾರತೀಯ ಸೇನೆಯ ಅತ್ಯಂತ ಹಳೆಯ ತುಕಡಿಯನ್ನು ವಾರನ್ ಹೇಸ್ಟಿಂಗ್ಸ್ ವಾರಣಾಸಿಯಲ್ಲಿ `ಗವರ್ನರ್ಸ್ ಟ್ರೂಪ್ಸ್ ಆಫ್ ಮೊಘಲ್ಸ್' ಹೆಸರಿನಲ್ಲಿ ಆರಂಭಿಸಿದ. ಈ ತುಕಡಿಗಳು ಶಾಂತಿಕಾಲದಲ್ಲಿ ಗವರ್ನರ್ ಜನರಲ್ ನ ಅಂಗರಕ್ಷಕ ಪಡೆಯಾಗಿಯೂ, ಸಮರ ಕಾಲದಲ್ಲಿ ಕಮಾಂಡರ್- ಇನ್- ಚೀಫ್ ಜೊತೆಗೂ ಸೇವೆ ಸಲ್ಲಿಸಿದವು. ಮುಂದೆ ಇದು `ಪ್ರೆಸಿಡೆಂಟ್ಸ್ ಬಾಡಿ ಗಾರ್ಡ್' ಆಗಿ ಖ್ಯಾತಿ ಪಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ )