ನಾನು ಮೆಚ್ಚಿದ ವಾಟ್ಸಪ್

Thursday, March 9, 2017

ಗಿರಿನಗರ ನಿರ್ಮಾತೃ ಬಿ. ಕೃಷ್ಣಭಟ್ ಇನ್ನಿಲ್ಲ B. Krishna Bhat no more

ಗಿರಿನಗರ ನಿರ್ಮಾತೃ ಬಿ. ಕೃಷ್ಣಭಟ್ ಇನ್ನಿಲ್ಲ

ಬೆಂಗಳೂರು: ಹಿರಿಯ ಪರಿಸರವಾದಿ , ಸಾಮಾಜಿಕ ಕಾರ್ಯಕರ್ತ , ಗಿರಿನಗರ ನಿರ್ಮಾತೃ ಬಿ. ಕೃಷ್ಣ ಭಟ್ ಅವರು ಗುರುವಾರ, 09 ಮಾರ್ಚ್ 2017ರ ರಾತ್ರಿ 10 ಗಂಟೆ ಸುಮಾರಿಗೆ ಗಿರಿನಗರದ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.  ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮೂಲತಃ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ವಿಟ್ಲ ಸಮೀಪದ ಬೋಳುಬೈಲಿನವರಾದ ಕೃಷ್ಣಭಟ್ ಅವರು  ಉಡುಪಿಯಲ್ಲಿ ತಮ್ಮ ವ್ಯಾಸಂಗ ಮುಗಿಸಿದ ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು. ದಿವಂಗತ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಲಹೆಯಂತೆ ಬೆಂಗಳೂರಿನಲ್ಲಿ ಸಹಕಾರ ಸಂಘದ ಮೂಲಕ ವಸತಿ ಒದಗಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೃಷ್ಣಭಟ್, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಗಿರಿನಗರ  ಮತ್ತು ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರ ಬಡಾವಣೆಯನ್ನು ಸುಸಜ್ಜಿತವಾಗಿ ನಿರ್ಮಿಸಿದ್ದರು.

 ಗಿರಿನಗರ ಬಡಾವಣೆಯ ಶಂಕುಸ್ಥಾಪನೆಗೆ ಆಗಿನ ರಾಷ್ಟ್ರಪತಿ ವರಾಹ ವೆಂಕಟ ಗಿರಿ ಅವರನ್ನು ಕರೆಸಿ, ಅವರ ಹೆಸರನ್ನೇ ಬಡಾವಣೆಗೆ ಇಟ್ಟಿದ್ದರು.

ಬಡಾವಣೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜೊತೆಗೆ ಸುದೀರ್ಘ ನ್ಯಾಯಾಂಗ ಸಮರ ನಡೆಸಿದ್ದ ಕೃಷ್ಣಭಟ್ ಅವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆಯೂ ಸಾರ್ವಜನಿಕ ಹಿತಾಸಕ್ತಿ ಖಟ್ಲೆಗಳನ್ನು ಹೂಡುವ ಮೂಲಕ ನ್ಯಾಯಾಂಗ ಹೋರಾಟ ನಡೆಸಿದ್ದರು.

ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಬೆಂಗಳೂರಿನಲ್ಲಿ ವಸತಿ ಬಡಾವಣೆ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಭಟ್ ಅವರು ತುರ್ತು ಪರಿಸ್ಥಿತಿ ಕಾಲದಲ್ಲಿ ಎಲ್.ಕೆ. ಅಡ್ವಾಣಿ ಮತ್ತಿತರ ನಾಯಕರ ಜೊತೆಗೆ ಬೆಂಗಳೂರಿನಲ್ಲಿ  ಸೆರೆವಾಸವನ್ನೂ ಅನುಭವಿಸಿದ್ದರು.


ಕೃಷ್ಣ ಭಟ್ ಅವರು ಪತ್ನಿ ರಾಧಮ್ಮ, ಪುತ್ರರಾದ ಪಾರ್ಥಸಾರಥಿ, ಡಾ. ವಿಶ್ವನಾಥ, ಪುತ್ರಿ ತಾರಾ, ಕುಟುಂಬ ಸದಸ್ಯರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.  ಅಂತ್ಯಕ್ರಿಯೆಯನ್ನು ದೊಡ್ಡ ಬಳ್ಳಾಪುರದ ಕಲ್ಲಹಳ್ಳಿಯ ಜಮೀನಿನಲ್ಲಿ ಈದಿನ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

B. Krishna Bhat (86), founder of Girinagar and Sachhidananda Nagar Layouts in Bengaluru, social worke and environmentalist died on Thursday, 9th March 2017 night at his residence in Girinagar, Bangalore.



No comments:

Post a Comment