Wednesday, February 5, 2020

ಇಂದಿನ ಇತಿಹಾಸ History Today ಫೆಬ್ರುವರಿ 05

2020: ನವದೆಹಲಿ:   ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ ತಿಂಗಳ ತನ್ನ ಚಾರಿತ್ರಿಕ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನಕ್ಕೆ ಅನುಗುಣವಾಗಿ ರಾಮಮಂದಿರ ನಿರ್ಮಿಸಲು ೧೫ ಸದಸ್ಯರ ಟ್ರಸ್ಟ್‌ನ್ನು ಪ್ರಧಾನಿ ನರೇಂದ್ರ ಮೋದಿ ಅವರು 2020 ಫೆಬ್ರುವರಿ 05ರ ಬುಧವಾರ ಸಂಸತ್ತಿನಲ್ಲಿ ಪ್ರಕಟಿಸಿದರು. ಇದೇ ವೇಳೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಮಸೀದಿಗಾಗಿ ೫ ಎಕರೆ ಭೂಮಿಯನ್ನು  ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗೆ (ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್) ಮಂಜೂರು ಮಾಡಿತು. ಕೇಂದ್ರ ಸರ್ಕಾರವು ಮಂದಿರ ಆಸುಪಾಸಿನ ೬೭ ಎಕರೆ ಭೂಮಿಯನ್ನು ಕೂಡಾ ರಾಮಮಂದಿರ ಟ್ರಸ್ಟಿಗೆ ಮಂಜೂರು ಮಾಡಿದೆ. ‘ಬುಧವಾರ ಬೆಳಗ್ಗೆ ಸಭೆ ಸೇರಿದ್ದ ಸಚಿವ ಸಂಪುಟದ ಸಭೆಯು ಅಯೋಧ್ಯಾ ಟ್ರಸ್ಟ್ ಸಂಬಂಧ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂಬುದಾಗಿ ಪ್ರಕಟಿಸಲು ನನಗೆ ಹರ್ಷವಾಗುತ್ತದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನಾವು ’ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನಲ್ಲಿ ಟ್ರಸ್ಟ್ ರಚಿಸಿದ್ದೇವೆ. ಈ ಟ್ರಸ್ಟ್ ಸ್ವಾಯತ್ತ ಸಂಸ್ಥೆಯಾಗಿರುತ್ತದೆ ಎಂದು ಮೋದಿ ಸಂಸತ್ತಿನಲ್ಲಿ ಹೇಳಿದರು. ‘ಭಾರತದಲ್ಲಿ ಪ್ರತಿಯೊಬ್ಬರೂ, ಅವರು ಹಿಂದುಗಳಿರಲಿ, ಮುಸ್ಲಿಮರಿರಲಿ, ಸಿಕ್ಖರಿರಲಿ, ಕ್ರೈಸ್ತರಿರಲಿ, ಬೌದ್ಧರಿರಲಿ, ಪಾರ್ಸಿಗಳಿರಲಿ ಅಥವಾ ಜೈನರಿರಲಿ ಎಲ್ಲರೂ ’ವಿಶಾಲ ಕುಟುಂಬದ ಭಾಗವಾಗಿದ್ದಾರೆ ಎಂದು ಮೋದಿ ನುಡಿದರು. ‘ರಾಮ ಮಂದಿರ ಯಾತ್ರಾರ್ಥಿಗಳಿಗಾಗಿ ನಾವು ಇನ್ನೊಂದು ದೊಡ್ಡ ಹೆಜ್ಜೆ ಇರಿಸಿದ್ದೇವೆ. ನಾವು ಮಂದಿರ ಸುತ್ತಮುತ್ತಣ ೬೭ ಎಕರೆ ಭೂಮಿಯನ್ನೂ ಟ್ರಸ್ಟ್‌ಗೆ ಮಂಜೂರು ಮಾಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು. ‘ದಲಿತ ಪ್ರತಿನಿಧಿ ಒಬ್ಬರು ಸೇರಿದಂತೆ ೧೫ ಸದಸ್ಯರು ಟ್ರಸ್ಟಿನಲ್ಲಿ ಇರುತ್ತಾರೆ ಮತ್ತು ಈ ಟ್ರಸ್ಟ್ ಸಂಪೂರ್ಣ ೬೭ ಎಕರೆ ಭೂಮಿಯ ಉಸ್ತುವಾರಿ ಹೊಂದಿರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನುಡಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಸಲುವಾಗಿ ಬುಧವಾರ ಸಂಸತ್ತಿನಲ್ಲಿ ಪ್ರಕಟಿಸಿದ ೧೫ ಸದಸ್ಯರ ’ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ದೆಹಲಿಯ ಟೋನಿ ಗ್ರೇಟರ್ ಕೈಲಾಶ್ ಕಾಲೋನಿ ವಿಳಾಸವನ್ನು ಹೊಂದಿದೆ. ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನ ಟ್ರಸ್ಟನ್ನು ರಾಷ್ಟ್ರ ರಾಜಧಾನಿಯ ಆರ್-೨೦, ಜಿಕೆ-೧ ವಿಳಾಸದಲ್ಲಿ ನೋಂದಣಿ ಮಾಡಲಾಗಿದೆ. ಇದು ಹಿಂದೂ ಕಕ್ಷಿದಾರರ ಪರವಾಗಿ ಸುದೀರ್ಘ ಕಾಲ ಹೋರಾಟ ನಡೆಸಿದ್ದ ಸುಪ್ರೀಂಕೋರ್ಟಿನ ಹಿರಿಯ ವಕೀಲ ಕೆ. ಪರಾಶರನ್ ಅವರ ವಿಳಾಸವಾಗಿದೆ.  ರಾಷ್ಟ್ರದ ಅತ್ಯಂತ ಹಳೆಯ ಭೂಮಿಯ ಹಕ್ಕು ಸಂಬಂಧಿತ ಪ್ರಕರಣಗಳಲ್ಲಿ ಒಂದಾಗಿದ್ದ ಆಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣವು ಕಳೆದ ವರ್ಷದ ಕೊನೆಯ ವೇಳೆಗೆ ಇತ್ಯರ್ಥಗೊಂಡಿದ್ದು, ೯೩ರ ಹರೆಯದ ಪರಾಶರನ್ ಅವರು ಈ ಸುದೀರ್ಘ ಕಾನೂನು ಸಮರದ ಮುಂಚೂಣಿಯಲ್ಲಿದ್ದ ವಕೀಲರಾಗಿದ್ದರು. ಮಾಜಿ ಅಟಾರ್ನಿ ಜನರಲ್ ಪರಾಶರನ್ ಅವರು ರಾಮಜನ್ಮಭೂಮಿ - ಬಾಬರಿ ಮಸೀದಿ ಪ್ರಕರಣವು ಸುಪ್ರೀಂಕೋರ್ಟ್ ಮೆಟ್ಟಿಲೇರಿದಂದಿನಿಂದಲೂ ಅದರ ಇತ್ಯರ್ಥಕ್ಕಾಗಿ ನಿರಂತರವಾಗಿ ಶ್ರಮಿಸಿದ್ದರು. ವಕೀಲರಾದ ಪಿವಿ ಯೋಗೇಶ್ವರನ್, ಅನಿರುದ್ಧ ಶರ್ಮ, ಶ್ರೀಧರ ಪೊಟ್ಟರಾಜು, ಅದಿತಿ ದಾನಿ, ಅಶ್ವಿನ್ ಕುಮಾರ್ ಡಿಎಸ್ ಮತ್ತು ಭಕ್ತಿ ವರ್ಧನ್ ಸಿಂಗ್ ಅವರು ಪರಾಶರನ್ ಅವರ ಸಹಾಯಕರಾಗಿ ದುಡಿದಿದ್ದರು.  ಸುಪ್ರೀಂಕೋರ್ಟ್ ೪೦ ದಿನಗಳ ಕಾಲ ದೈನಂದಿನ ವಿಚಾರಣೆ ನಡೆಸಿದಾಗ, ಪರಾಶರನ್ ಅವರು ಒಂದಿಷ್ಟೂ ತಾಳ್ಮೆ ಕಳೆದುಕೊಳ್ಳದೆ ನ್ಯಾಯಾಲಯದಲ್ಲಿ ತಮ್ಮ ವಾದಗಳನ್ನು ಮಂಡಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು
: ದೇಶದ ತೋಟಗಾರಿಕಾ ಕ್ಷೇತ್ರದಲ್ಲಿ  ನಡೆದಿರುವ ಆವಿಷ್ಕಾರ, ಸಂಶೋಧನೆ
ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ರೈತರು ಹಾಗೂ ಸಾರ್ವಜನಿಕರಿಗೆ ಪರಿಚಯಿಸಲು ಬೆಂಗಳೂರಿನ ಹೇಸರಘಟ್ಟದಲ್ಲಿರುವ   ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ(ಐಐಎಚ್ಆರ್‌) ಆವರಣದಲ್ಲಿ  ಹಮ್ಮಿಕೊಳ್ಳಲಾಗಿರುವ ನಾಲ್ಕು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳ  2020 ಫೆಬ್ರುವರಿ 05ರ ಬುಧವಾರ ಅನಾವರಣಗೊಂಡಿತು. ಫೆಬ್ರುವರಿ 5ರಿಂದ 8 ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ತೋಟಗಾರಿಕೆ ಕ್ಷೇತ್ರದ ಒಳ ಹೊರಗನ್ನು ತಿಳಿಸುವ ಮಾಹಿತಿಯು ಒಂದೇ  ಕಡೆಯಲ್ಲಿ ಸಿಗಲಿದೆ. 'ಕೃಷಿಯನ್ನು ಉದ್ದಿಮೆಯಾಗಿಸಲು ತೋಟಗಾರಿಕೆ' ಎಂಬುದು ಈ ಬಾರಿಯ ಮೇಳದ  ಘೋಷ ವಾಕ್ಯವಾಗಿದೆ. ಮೇಳದಲ್ಲಿರೈತರು ಹಾಗೂ ನಾಗರಿಕರಿಗೆ ಭರಪೂರ ಮಾಹಿತಿ ಲಭ್ಯವಾಗಲಿದೆ. ಇದಕ್ಕಾಗಿ ಐಐಎಚ್ಆರ್ವಿಜ್ಞಾನಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಣ್ಣು, ತರಕಾರಿ, ಅಣಬೆ, ಪ್ಲಾಂಟೇಷನ್ಹಾಗೂ ಸಾಂಬಾರ್ಬೆಳೆಗಳ ಉತ್ಪಾದನೆ, ಸಸ್ಯ ಸಂರಕ್ಷಣಾ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಸಂರಕ್ಷಿತ ಬೇಸಾಯ ಪದ್ಧತಿಗಳು, ತೋಟಗಾರಿಕೆ ಆಧಾರಿತ ಮಿಶ್ರ ಬೇಸಾಯ ಪದ್ಧತಿಗಳು, ನರ್ಸರಿ ಹಾಗೂ ಸಸ್ಯ ಪರಿಕರಗಳ ಕುರಿತು ಮಳಿಗೆಗಳಲ್ಲಿವಿವರವಾದ ಮಾಹಿತಿ ಸಿಗಲಿದೆ. ಸರ್ಕಾರೇತರ ಸಂಘ-ಸಂಸ್ಥೆಗಳು, ಸ್ವ ಸಹಾಯ ಸಂಘಗಳು, ಪ್ರಗತಿಪರ ರೈತರು ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಾಧನೆ ಕುರಿತು ನಾಗರಿಕರಿಗೆ ಮಾಹಿತಿ ಲಭ್ಯವಿರಲಿದೆ ಎಂದು ಐಐಎಚ್ಆರ್ನಿರ್ದೇಶಕ ಡಾ.ಎಂ.ಆರ್‌.ದಿನೇಶ್ ಹೇಳಿದ್ದಾರೆ. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ
ಶಿಕ್ಷಿತ ಅಪರಾಧಿಗಳನ್ನೂ ಒಟ್ಟಿಗೇ ಗಲ್ಲಿಗೆ ಏರಿಸಬೇಕು, ಪ್ರತ್ಯೇಕವಾಗಿ ಅಲ್ಲ ಎಂಬುದಾಗಿ 2020 ಫೆಬ್ರುವರಿ 05ರ ಬುಧವಾರ ತೀರ್ಪು ನೀಡಿದ ದೆಹಲಿ ಹೈಕೋರ್ಟ್ ಎಲ್ಲ ಕಾನೂನು ಬದ್ಧ ಪರಿಹಾರದ ಅವಕಾಶಗಳನ್ನು ಬಳಸಿಕೊಳ್ಳಲು ಶಿಕ್ಷಿತರಗೆ ಒಂದು ವಾರದ ಗಡುವು ನೀಡಿತು. ವಿಚಾರಣಾ ನ್ಯಾಯಾಲಯವು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಗೆ ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿದ್ದ ಅರ್ಜಿಯ ಮೇಲೆ ಕಾಯ್ದಿರಿಸಿದ್ದ ತನ್ನ ಆದೇಶವನ್ನು ನೀಡಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ತಾವು ಬಳಸಿಕೊಳ್ಳಲು ಬಯಸಿರುವ ಯಾವುದೇ ಕಾನೂನುಬದ್ಧ ಪರಿಹಾರಕ್ಕಾಗಿ ಒಂದು ವಾರದ ಒಳಗಾಗಿ ಅರ್ಜಿ ಸಲ್ಲಿಸಿ ಎಂಬುದಾಗಿ ಎಲ್ಲ ಶಿಕ್ಷಿತ ಅಪರಾಧಿಗಳಿಗೆ ನಿರ್ದೇಶಿಸಿದರು. ವಾರದ ಬಳಿಕ ಅಧಿಕಾರಿಗಳು ಕಾರ್‍ಯೋನ್ಮುಖರಾಗಬೇಕು ಎಂದು ನ್ಯಾಯಮೂರ್ತಿ ಆಜ್ಞಾಪಿಸಿದರು. ಏನಿದ್ದರೂ, ಶಿಕ್ಷಿತ ಅಪರಾಧಿಗಳ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತು. ತಿಹಾರ್ ಸೆರೆಮನೆಯಲ್ಲಿ ಇರಿಸಲಾಗಿರುವ ಪ್ರಕರಣದ ಶಿಕ್ಷಿತ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಕುಮಾರ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ (೩೧) ಅವರ ಗಲ್ಲು ಶಿಕ್ಷೆಯ ಜಾರಿಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯುವಂತೆ ಸೂಚಿಸಿ ವಿಚಾರಣಾ ನ್ಯಾಯಾಲಯವು ಜನವರಿ ೩೧ರಂದು ನೀಡಿದ ಆದೇಶವನ್ನು ಕೇಂದ್ರ ಮತ್ತು ದೆಹಲಿ ಸರ್ಕಾರ ಪ್ರಶ್ನಿಸಿದ್ದವು. ಫೆಬ್ರುವರಿ ೧ನೇ ದಿನಾಂಕಕ್ಕೆ ನಿಗದಿಯಾಗಿದ್ದ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸುವುದರ ಜೊತೆಗೆ ತಮ್ಮ ಕಾನೂನುಬದ್ಧ ಪರಿಹಾರದ ಅವಕಾಶಗಳನ್ನು ಈಗಾಗಲೇ ಬಳಸಿಕೊಂಡಿರುವ ಮುಕೇಶ್ ಸಿಂಗ್ ಮತ್ತು ವಿನಯ್ ಶರ್ಮ ಅವರನ್ನು ಗಲ್ಲಿಗೇ ಏರಿಸಬೇಕು ಎಂಬುದಾಗಿ ಕೇಂದ್ರ ಸರ್ಕಾರ  ಮನವಿ ಮಾಡಿತ್ತು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


2020: ನವದೆಹಲಿ: ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2020 ಫೆಬ್ರುವರಿ 05ರ ಬುಧವಾರ  ನಾಲ್ವರು ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದರು. ಅಕ್ಷಯ್ ಕುಮಾರ್ ಸಿಂಗ್ ಕೆಲವು ದಿನಗಳ ಹಿಂದೆ ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಿದ್ದು, ಅದು ಈಗ ತಿರಸ್ಕೃತಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ರಾಷ್ಟ್ರಪತಿ ಕೋವಿಂದ್ ಅವರು ಈ ಹಿಂದೆಯೇ ಅಪರಾಧಿಗಳಾದ ಮುಕೇಶ್ ಸಿಂಗ್ ಮತ್ತು ವಿನಯ್ ಶರ್ಮ ಅರ್ಜಿಗಳನ್ನು ತಿರಸ್ಕರಿಸಿದ್ದರು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ಕಲಬುರಗಿ: ಬೇರೆ ರಾಜ್ಯಗಳಿಂದ ಬರುವ ವಲಸಿಗರಿರಲಿ ಅಥವಾ ಈ ನೆಲದಲ್ಲಿ

ವಾಸವಾಗಿರುವವರೇ ಇರಲಿ  ಕರ್ನಾಟಕದಲ್ಲಿ ಎಲ್ಲರಿಗೂ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೆ ಆಗಬೇಕು ಎಂದು ಹಿರಿಯ ಕವಿ, ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ ಅವರು 2020 ಫೆಬ್ರುವರಿ 05ರ ಬುಧವಾರ  ಇಲ್ಲಿ ಆಗ್ರಹಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿನ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಆರಂಭಗೊಂಡ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, ‘ಕನ್ನಡವನ್ನು ಸಂವಹನ ಮತ್ತು ವ್ಯವಹಾರದ ಭಾಷೆಯಾಗಿ ಮಾತ್ರವೇ ಅಲ್ಲ, ಅನ್ನದ ಭಾಷೆಯಾಗಿ ರೂಪಿಸಬೇಕು, ಕನ್ನಡಿಗರಿಗೆ ಗರಿಷ್ಠ ಉದ್ಯೋಗ ಮೀಸಲಿಡಬೇಕಾದದ್ದು ಇಂದಿನ ತುರ್ತು ಅಗತ್ಯ ಎಂದು ಹೇಳಿದರು. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ನಾನು ಬದುಕಲು ಸಾಧ್ಯ ಎಂದು ತಿಳಿಯುವುದು ಬರೀ ಭ್ರಮೆ. ಐನ್‌ಸ್ಟೀನ್ ಅಂತವರಿಗೆ ಇಂಗ್ಲಿಷ್ ಕೇವಲ ಸಂವಹನದ ಭಾಷೆಯಾಗಿತು ಎಂದು ನುಡಿದ ಅವರು, ಮಕ್ಕಳ ಮತ್ತು ಪಾಲಕರ ಬೇಡಿಕೆಯನ್ನು ಮುಂದಿಟ್ಟುಕೊಂಡು ಇಂಗ್ಲಿಷ್ ಮಾಧ್ಯಮ ಕಲಿಕೆಗೆ ಒತ್ತಾಯಿಸುವುದು ಸರಿಯಲ್ಲ ಎಂದು ಹೇಳಿದರು. ‘ಪ್ರಾಥಮಿಕ ಶಿಕ್ಷಣದ ಕಲಿಕೆಯು ಕನ್ನಡ ಮಾಧ್ಯಮದಲ್ಲಿಯೇ ಆಗಬೇಕು ಎಂಬುದಕ್ಕೆ ಕಾನೂನು ತೊಡಕುಗಳನ್ನು ಮುಂದೊಡ್ಡುವುದು ಕೂಡಾ ಸರಿಯಲ್ಲ ಎಂದೂ ಅವರು ನುಡಿದರು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)


2020: ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ
ಅಪರಾಧಿಗಳ ಗಲ್ಲು ಜಾರಿಗೆ ತಡೆಯಾಜ್ಞೆ ನೀಡಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದರ ವಿರುದ್ಧ ಕೇಂದ್ರ ಸರ್ಕಾರ ಮತ್ತು ದೆಹಲಿ ನ್ಯಾಯಾಲಯ 2020 ಫೆಬ್ರುವರಿ 05ರ ಬುಧವಾರ  ಸುಪ್ರೀಂಕೋರ್ಟ್ ಮೆಟ್ಟಿಲೇರಿದವು. ‘ಮರಣದಂಡನೆಗೆ ಗುರಿಯಾಗಿರುವ ಶಿಕ್ಷಿತ ಅಪರಾಧಿಗಳನ್ನು ಒಟ್ಟಿಗೇ ಗಲ್ಲಿಗೇರಿಸಬೇಕು, ಪ್ರತ್ಯೇಕವಾಗಿ ಗಲ್ಲಿಗೇರಿಸಲಾಗದು ಎಂಬುದಾಗಿ ಬುಧವಾರ ಆದೇಶ ನೀಡಿದ ಹೈಕೋರ್ಟ್, ಕೇಂದ್ರ ಮತ್ತು  ದೆಹಲಿ ಸರ್ಕಾರಗಳ ಅರ್ಜಿಗಳನ್ನು ವಜಾಗೊಳಿಸಿತ್ತು. ಅಲ್ಲದೆ, ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಬಳಸಿಕೊಳ್ಳಲು ಒಂದು ವಾರದ ಒಳಗಾಗಿ ಅರ್ಜಿ ಸಲ್ಲಿಸುವಂತೆ ಶಿಕ್ಷಿತ ಅಪರಾಧಿಗಳಿಗೆ ನಿರ್ದೇಶನ ನೀಡಿತ್ತು. ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಗಲ್ಲು ಜಾರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ತುಳಿದ ಬೆಳವಣಿಗೆ ನಡೆಯಿತು. ವಿಚಾರಣಾ ನ್ಯಾಯಾಲಯದ ತಡೆಯಾಜ್ಞೆಯನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ತಿಳಿಸಲಾಗಿದ್ದ ನೆಲೆಯಲ್ಲೇ ಸುಪ್ರೀಂಕೋರ್ಟಿಗೂ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಬೆಳವಣಿಗೆ ಬಗೆಗಿನ ಮಾಹಿತಿಯ ಅರಿವುಳ್ಳ ವಕೀಲರು ತಿಳಿಸಿದರು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)




No comments:

Post a Comment