Thursday, July 19, 2018

ಇಂದಿನ ಇತಿಹಾಸ History Today ಜುಲೈ 19

ಇಂದಿನ ಇತಿಹಾಸ History Today ಜುಲೈ 19

2018: ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದ ಸ್ವಾಮೀಜಿ ಅವರು ಗುರುವಾರ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಧಿವಶರಾದರು. ಅವರಿಗೆ ೫೫ ವರ್ಷ ವಯಸ್ಸಾಗಿತ್ತು. ವಿಷಾಹಾರ ಹಾಗೂ ಅತಿಸಾರದ ಪರಿಣಾಮವಾಗಿ ರಕ್ತದೊತ್ತಡ ಏರುಪೇರಾಗಿ ಅಸ್ವಸ್ಥರಾದ ಸ್ವಾಮೀಜಿ ಅವರನ್ನು ಕಸ್ತೂರ್ಬಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಹು ಅಂಗಾಂಗ ವೈಫಲ್ಯ ಮತ್ತು ಉಸಿರಾಟದ ತೊಂದರೆಯ ಪರಿಣಾಮವಾಗಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು.  ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದವು. ಅದಮಾರು ಮಠಕ್ಕೆ ಇತ್ತೀಚೆಗೆ ನೀಡಲಾಗಿದ್ದ ಶಿರೂರು ಮಠದ ಪಟ್ಟದ ದೇವರ ವಾಪಸಾತಿಗೆ ಸಂಬಂಧಿಸಿದ ವಿವಾದದ ಪರಿಣಾಮವಾಗಿ ಶಿರೂರು ಶ್ರೀಗಳು ಸುದ್ದಿಯಲ್ಲಿದ್ದರು. ಕೆಲವು ತಿಂಗಳುಗಳ ಹಿಂದೆ ಅಸ್ವಾಸ್ಥ್ಯದ ಹಿನ್ನೆಲೆಯಲ್ಲಿ ತಮ್ಮ ಮಠದ ’ಶ್ರೀ ಅನ್ನ ವಿಠಲ ಪಟ್ಟದ ದೇವರನ್ನು ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಗೆ ಶಿರೂರು ಶ್ರೀಗಳು ಒಪ್ಪಿಸಿದ್ದರು.  ಆರೋಗ್ಯದಲ್ಲಿ ಚೇತರಿಕೆಯಾದ ಬಳಿಕ ಪಟ್ಟದ ದೇವರನ್ನು ಹಿಂದಿರುಗಿಸುವಂತೆ ಶ್ರೀಗಳು ಕೋರಿದ್ದರು. ಆದರೆ ಉಳಿದ ಆರು ಮಠಗಳ ಸ್ವಾಮೀಜಿಗಳು ಶಿರೂರು ಶ್ರೀಗಳು ಯತಿಧರ್ಮವನ್ನು ಪಾಲಿಸುತ್ತಿಲ್ಲ ಎಂದು ಕಾರಣಕ್ಕಾಗಿ ಪಟ್ಟದ ದೇವರನ್ನು ಹಿಂದಿರುಗಿಸಲು ನಿರಾಕರಿಸಿದ್ದರು. ಪಟ್ಟದ ದೇವರನ್ನು ಹಿಂದಿರುಗಿಸಲು ಶಿರೂರು ಶ್ರೀಗಳು ಶಿಷ್ಯ ಸ್ವೀಕಾರ ಮಾಡಬೇಕು ಎಂದು ಅವರು ಶರತ್ತು ಒಡ್ಡಿದ್ದರು.  ಈ ಶರತ್ತು ಶಿರೂರು ಶ್ರೀಗಳಿಗೆ ಸಮ್ಮತವಿರಲಿಲ್ಲ. ಪಟ್ಟದ ದೇವರನ್ನು ಹಿಂದಿರುಗಿಸದೇ ಇದ್ದಲ್ಲಿ ಕ್ರಿಮಿನಲ್ ದಾವೆ ದಾಖಲಿಸುವುದಾಗಿಯೂ ಶ್ರೀಗಳು ಜುಲೈ ೧೬ರಂದು ಎಚ್ಚರಿಸಿದ್ದರು. ಕನ್ನಡ ಟಿವಿ ವಾಹಿನಿಯೊಂದರಲ್ಲಿ ಮಾರ್ಚ್ ೧೩ರಂದು ಪ್ರಸಾರವಾದ ಸಂದರ್ಶನ ಒಂದರಲ್ಲಿ ಶಿರೂರು ಶ್ರೀಗಳು ಅಷ್ಟಮಠಗಳ ಇತರ ಯತಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದರು ಎಂಬ ವಿವಾದವೂ ಎದ್ದಿತ್ತು. ಆದರೆ ಶ್ರೀಗಳು ಬಳಿಕ ತಮ್ಮ ಸಂದರ್ಶನವನ್ನು ತಿರುಚಲಾಗಿದೆ, ತಾವು ಇತರ ಯತಿಗಳ ಬಗ್ಗೆ ಅಂತಹ ಭಾಷೆಯಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.  ಆದರೆ ವಿಡಿಯೋದಲ್ಲಿ ಪ್ರಸಾರವಾಗಿದ್ದ ಟೀಕೆಗಳು ಅಷ್ಟಮಠಗಳ ಇತರ ಯತಿಗಳಲ್ಲಿ ತೀವ್ರ ಅಸಮಾಧಾನವನ್ನು ಹುಟ್ಟು ಹಾಕಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ಸರಣಿ ಸಭೆಗಳನ್ನು ನಡೆಸಿದ್ದ ಇತರ ಯತಿಗಳು ಕಡೆಗೆ ಶಿರೂರು ಮಠದ ಪಟ್ಟದ ದೇವರನ್ನು ಹಿಂದಿರುಗಿಸಬಾರದೆಂಬ ತೀರ್ಮಾನಕ್ಕೆ ಬಂದಿದ್ದರು.  ೨೦೧೮ರ ಮಾರ್ಚ್ ತಿಂಗಳಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಯ ವೇಳೆಯಲ್ಲಿ ತಾವು ಸ್ಪರ್ಧಿಸುವುದಾಗಿ ಶಿರೂರು ಶ್ರೀಗಳು ಮಾಡಿದ್ದ ಪ್ರಕಟಣೆಯೂ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಬಯಸಿದ್ದ ಅವರಿಗೆ ಬಿಜೆಪಿ ಟಿಕೆಟ್ ಸಿಗದೇ ಹೋದಾಗ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಈ ಮೂಲಕ ಚುನಾವಣಾ ಕಣಕ್ಕೆ ಇಳಿದ ಅಷ್ಟ ಮಠಗಳ ಮೊದಲ ಸ್ವಾಮೀಜಿ ಎನಿಸಿದ್ದರು. ಆದರೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಬಗೆಗಿನ ಅಭಿಮಾನದ ಕಾರಣಕ್ಕಾಗಿ ತಾವು ನಾಮ ಪತ್ರ ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿ, ನಾಮಪತ್ರ ಹಿಂತೆಗೆದುಕೊಂಡಿದ್ದರು.  ತಮ್ಮ ಎಂಟನೇ ವಯಸ್ಸಿನಲ್ಲಿ ’ಸನ್ಯಾಸ ಆಶ್ರಮಕ್ಕೆ ಕಾಲಿರಿಸಿದ್ದ ಶಿರೂರು ಶ್ರೀಗಳು ಶಿರೂರು ಮಠದ ಮುಖ್ಯಸ್ಥರಾಗಿದ್ದ ತಮ್ಮ ೪೭ ವರ್ಷಗಳ ಅವಧಿಯಲ್ಲಿ ಮೂರು ಪರ್ಯಾಯಗಳಲ್ಲಿ (೧೯೭೮-೮೦, ೧೯೯೪-೯೬ ಮತ್ತು ೨೦೧೦-೧೨) ಶ್ರೀಕೃಷ್ಣನ ಪೂಜಾ ಕೈಂಕರ್ಯ ನೆರವೇರಿಸಿದ್ದರು. ಶ್ರೀಕೃಷ್ಣ ವಿಗ್ರಹವನ್ನು ವೈವಿಧ್ಯಮಯ ರೀತಿಯಲ್ಲಿ ಸುಂದರವಾಗಿ ಅಲಂಕರಿಸುವುದರಲ್ಲಿ ಶಿರೂರು ಶ್ರೀಗಳು ಖ್ಯಾತಿ ಪಡೆದಿದ್ದರು. ಈಜು, ಡ್ರಮ್ ಬಾರಿಸುವುದರಲ್ಲಿ ಪರಿಣಿತರಾಗಿದ್ದ ಶ್ರೀಗಳೂ ಉತ್ತಮ ಕರಾಟೆ ಪಟುವೂ ಆಗಿದ್ದರು. ಅಂತಾರಾಷ್ಟ್ರೀಯ ಖ್ಯಾತಿಯ ಡ್ರಮ್ ವಾದಕ ಶಿವಮಣಿ ಅವರ ಜೊತೆಗೆ ಶ್ರೀಗಳು ತಿಂಗಳ ಹಿಂದೆಯಷ್ಟೇ ಡ್ರಮ್ ಬಾರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಶಿವಮಣಿ ಅವರ ಸಹಕಾರದೊಂದಿಗೆ ಸಂಗೀತ ಅಕಾಡೆಮಿ ಸ್ಥಾಪಿಸಿ ಸಂಗೀತ ಶಾಲೆ ಆರಂಭಿಸುವ ಗುರಿ ಹೊಂದಿದ್ದ ಶ್ರೀಗಳು ಅಕಾಡೆಮಿಗಾಗಿ ಶಿಲಾನ್ಯಾಸ ನೆರವೇರಿಸಿದ್ದರು.

2018: ನವದೆಹಲಿ: ಮಹಾತ್ಮಾ ಗಾಂಧಿ (ಹೊಸ) ನೋಟುಗಳ ಸರಣಿಯಲ್ಲಿ ೧೦೦ ರೂಪಾಯಿ ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಸಜ್ಜಾಯಿತು. ತನ್ನ ನಿಯಮಿತ ಚಟುವಟಿಕೆಗಳ ಅಡಿಯಲ್ಲಿ ಆರ್ ಬಿ ಐ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ.  ನೂರು ರೂಪಾಯಿ ಮುಖಬೆಲೆಯ ಹೊಸ ಕರೆನ್ಸಿ ನೋಟು ಗುಜರಾತಿನ ಚಾರಿತ್ರಿಕ ರಾಣಿಯ ಕಲ್ಯಾಣಿಯ ಮುದ್ರೆಯನ್ನು ಹೊಂದಿರಲಿದ್ದು ರಾಷ್ಟ್ರದ ಸಾಂಸ್ಕೃತಿಕ ಹಿರಿಮೆಯನ್ನು ಬಿಂಬಿಸಲಿದೆ. ನೀಲಿ, ನೇರಳೆ, ಗುಲಾಬಿ (ಲ್ಯಾವೆಂಡರ್) ಬಣ್ಣಗಳ ಹಿನ್ನೆಲೆಯನ್ನು ಹೊಸ ೧೦೦ ರೂಪಾಯಿ ನೋಟು ಹೊಂದಿರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಕಟಣೆ ತಿಳಿಸಿತು.  ಹೊಸ ೧೦೦ ರೂಪಾಯಿ ನೋಟು, ಹಿಂದಿನ ನೂರು ರೂಪಾಯಿ ನೋಟಿನ ಗಾತ್ರಕ್ಕಿಂತ ಕಿರಿದಾಗಿದ್ದು. ೧೦ ರೂಪಾಯಿ ನೋಟಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ.. ತೂಕ ಹಳೆಯ ೧೦೦ ರೂಪಾಯಿ ನೋಟಿಗಿಂತ ಕಡಿಮೆ ಇರುತ್ತದೆ.  ೧೦೦ ರೂಪಾಯಿಯ ಹೊಸ ನೋಟಿನ ಮುದ್ರಣ ಈಗಾಗಲೇ ದೇವಾಸ್ ಮುದ್ರಣಾಲಯದಲ್ಲಿ ಆರಂಭವಾಗಿದೆ. ನೋಟುಗಳ ಮುದ್ರಣಕ್ಕೆ ದೇಶೀ ನಿರ್ಮಿತ ಶಾಯಿ (ಇಂಕ್) ಬಳಸಲಾಗುತ್ತಿದೆ. ಹೊಸ ನೋಟಿಗೆ ಅನುಗುಣವಾಗಿ ಬ್ಯಾಂಕುಗಳು ತಮ್ಮ ಎಟಿಎಂಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೊಸ ನೋಟಿನಲ್ಲಿ ಹಲವಾರು ಸೂಕ್ಷ್ಮ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ನೇರಳಾತೀತ (ಅಲ್ಟ್ರಾ ವಯೋಲೆಟ್) ಬೆಳಕಿನ ಕೆಳಗೆ ಮಾತ್ರ ಈ ಭದ್ರತಾ ವೈಶಿಷ್ಟ್ಯಗಳನ್ನು ಪತ್ತೆ ಹಚ್ಚಬಹುದು ಎಂದು ಮೂಲಗಳು ಹೇಳಿವೆ.

2018: ನವದೆಹಲಿ: ಕಾನೂನು ಪ್ರಕ್ರಿಯೆಯನ್ನು ತಪ್ಪಿಸಿಕೊಂಡು ವಿದೇಶಕ್ಕೆ ಪರಾರಿಯಾಗುವ ದೇಶಭ್ರಷ್ಟ ಪ್ರಭಾವಿ ವ್ಯಕ್ತಿಗಳ ದೇಶದೊಳಗಿನ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಗೆ (೨೦೧೮) ಲೋಕಸಭೆ ತನ್ನ ಅನುಮೋದನೆ ನೀಡಿತು.  ಈ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ಸರ್ಕಾರ ಬಳಿಕ ಆರ್ಥಿಕ ಅಪರಾಧಿಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಮತ್ತು ಅಂತಹ ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಭಾರತೀಯ ಅಧಿಕಾರಿಗಳಿಗೆ ಅಧಿಕಾರ ನೀಡುವ ಕ್ರಮಗಳನ್ನು ತಾನು ಕೈಗೊಳ್ಳುತ್ತಿರುವುದಾಗಿ ಪ್ರಕಟಿಸಿತ್ತು.  ಪ್ರಸ್ತುತ ಲೋಕಸಭೆಯು ಅಂಗೀಕರಿಸಿರುವ ಮಸೂದೆಯು ’ಆರ್ಥಿಕ ಅಪರಾಧಿಗಳು ಭಾರತೀಯ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳದಂತೆ ಸೂಕ್ತ ಕ್ರಮ ಕೈಗೊಳ್ಳಲು ಭಾರತೀಯ ಅಧಿಕಾರಿಗಳಿಗೆ ಅಧಿಕಾರ ಕಲ್ಪಿಸುವುದು ಮತ್ತು ಅಂತಹ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರ ಒದಗಿಸುವುದು ಎಂದು ಸರ್ಕಾರ ಹೇಳಿತು. ಮಸೂದೆಯು ಹಣ ವರ್ಗಾವಣೆ ತಡೆ ಕಾಯ್ದೆಯ (೨೦೦೨)ರ ಅಡಿಯಲ್ಲಿ ವಿಶೇಷ ನ್ಯಾಯಾಲಯ ರಚನೆಗೆ ಪ್ರಸ್ತಾಪಿಸಿದೆ ಮತ್ತು ಅಂತಹವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿಗಳು ಎಂಬುದಾಗಿ ಘೋಷಿಸಲು ಈ ನ್ಯಾಯಾಲಯಗಳಿಗೆ ಅಧಿಕಾರ ನೀಡುತ್ತದೆ. ನ್ಯಾಯಾಲಯಗಳು ಅಥವಾ ನ್ಯಾಯಾಧಿಕರಣಗಳು (ಟ್ರಿಬ್ಯೂನಲ್) ಇಂತಹ ಅಪರಾಧಿಗಳನ್ನು ಅಥವಾ ಅವರಿಗೆ ಸಂಬಂಧಿಸಿದ ಕಂಪೆನಿಗಳನ್ನು ತನ್ನ ಮುಂದೆ ಸಿವಿಲ್ ಪ್ರತಿಪಾದನೆಗಳ ಅರ್ಜಿ ಸಲ್ಲಿಕೆ ಮತ್ತು ರಕ್ಷಣೆ ಮಾಡಿಕೊಳ್ಳದಂತೆ ನಿರ್ಬಂಧಿಸಬಹುದು. ಹಣಕಾಸು ಸಚಿವಾಲಯದ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ, ೨೦೧೭ರ ಕರಡನ್ನು ಸೆಪ್ಟೆಂಬರ್ ತಿಂಗಳಲ್ಲಿ ಕಾನೂನು ಸಚಿವಾಲಯ ಅನುಮೋದಿಸಿತ್ತು. ಈಗ ಲೋಕಸಭೆಯ ಅನುಮೋದನೆಯಿಂದಾಗಿ ಈ ಮಸೂದೆ ತ್ವರಿತವಾಗಿ ಕಾನೂನಾಗಿ ಪರಿವರ್ತನೆಗೊಳ್ಳುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ಹಿನ್ನೆಲೆಯಲ್ಲಿ ಈ ಕಾನೂನಿನ ತ್ವರಿತ ಜಾರಿಗೆ ನರೇಂದ್ರ ಮೋದಿ ಸರ್ಕಾರವೂ ಆದ್ಯತೆ ನೀಡಿದೆ.

2018: ನವದೆಹಲಿ : ಲೋಕಸಭೆಯಲ್ಲಿ ಜುಲೈ ೨೦ರ ಶುಕ್ರವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಕಲಾಪಕ್ಕೆ ಮುಂಚಿತವಾಗಿಯೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕರೆ ಜತೆಗೆ ಮಾತನಾಡಿ ಶಿವಸೇನೆಯ ಬೆಂಬಲವನ್ನು ಖಾತರಿಪಡಿಸಿಕೊಂಡರು. ಉದ್ಧವ್ ಠಾಕರೆ ಅವರು ಲೋಕಸಭೆಯಲ್ಲಿ ಬಿಜೆಪಿಯನ್ನು  ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಅಮಿತ್ ಶಾ ಸುದ್ದಿಗಾರರಿಗೆ ತಿಳಿಸಿದರು.  ಆದರೆ ಶಿವಸೇನೆಯ ಸಂಸತ್ ಸದಸ್ಯ ಸಂಜಯ್ ರಾವತ್ ಅವರು ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ವೇಳೆಯಲ್ಲಿ ಶಿವಸೇನೆಗೆ ಬಹಳಷ್ಟು ವಿಷಯಗಳನ್ನು  ಹೇಳಲಿಕ್ಕಿದೆ ಎಂದು ಹೇಳಿದರು. "ನೀವು ೨೪ ತಾಸು ಕಾಯಬೇಕು; ಸದನದಲ್ಲಿ ಶುಕ್ರವಾರ ಚರ್ಚೆ ನಡೆಯಲಿ. ಶಿವಸೇನೆಗೂ ಬಹಳಷ್ಟು ವಿಷಯಗಳನ್ನು  ಹೇಳುವುದಕ್ಕಿದೆ. ವಿರೋಧ ಪಕ್ಷಗಳ ಮಾತುಗಳನ್ನು ಸರ್ಕಾರ ಆಲಿಸಬೇಕು; ಪ್ರಜಾಪ್ರಭುತ್ವದಲ್ಲಿ ಇದು ಬಹಳ ಮುಖ್ಯ ಎಂದು ರಾವತ್ ನುಡಿದರು.
ಸಂಖ್ಯಾ ಆಟಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಬಿಜೆಪಿ ಸುಭದ್ರ ಸ್ಥಿತಿಯಲ್ಲಿದೆ. ಲೋಕಸಭೆಯ ಸದನ ಬಲ ಈಗ ೫೩೩ಕ್ಕೆ ಇಳಿದಿದೆ. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಈಚೆಗೆ ಬಿಜೆಡಿ ಸಂಸತ್ ಸದಸ್ಯ ಬೈಜಯಂತ್ ಜಯ ಪಂಡಾ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ ಮತ್ತು ಕೇರಳ ಕಾಂಗ್ರೆಸ್ (ಎಂ) ನ ಜೋಸ್ ಕೆ ಮಾಣಿ ಅವರು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದಾರೆ. ಹತ್ತು ಸ್ಥಾನಗಳು ಖಾಲಿ ಇವೆ; ಹೀಗಾಗಿ ಬಹುಮತಕ್ಕಾಗಿ ಸರ್ಕಾರವು ೨೬೬ ಮತಗಳನ್ನು ಪಡೆಯಬೇಕಾಗುತ್ತದೆ.  ಬಿಜೆಪಿಯ ಕೈಯಲ್ಲಿ ೨೭೪ ಸ್ಥಾನಗಳು ಮತ್ತು  ಶಿವಸೇನೆಯ ಕೈಯಲ್ಲಿ ೧೮ ಸ್ಥಾನಗಳು ಇವೆ. ಎನ್‌ಡಿಎ ಕೂಟದ ಒಟ್ಟು ಸದಸ್ಯ ಬಲ ಸದನದಲ್ಲಿ ೩೧೪.  ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ.   ಈ ಮಧ್ಯೆ ಅವಿಶ್ವಾಸ ನಿರ್ಣಯವನ್ನು ಗೆಲ್ಲಿಸಲು ಸಾಕಷ್ಟು ಬೆಂಬಲ ವಿರೋಧ ಪಕ್ಷಗಳೀಗೆ ಇದೆ ಎಂಬುದಾಗಿ ಕಾಂಗ್ರೆಸ್ ಪಕ್ಷವು ಮಾಡುತ್ತಿರುವ ಪ್ರತಿಪಾದನೆಯನ್ನು ಬಿಜೆಪಿ ತಿರಸ್ಕರಿಸಿತು. ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಗೆಲ್ಲಿಸಲು ಅಗತ್ಯ ಸಂಖ್ಯಾ ಬಲ ಹೊಂದಿವೆ ಎಂಬುದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರತಿಪಾದಿಸಿರುವ ಬಗ್ಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು ’ಸೋನಿಯಾ ಗಾಂಧಿ ಅವರ ಗಣಿತ ತುಂಬ ದುರ್ಬಲವಾದದ್ದು ಎಂದು ಹೇಳಿದರು.  ೧೯೯೯ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ಪತನದ ಬಳಿಕ ಲೋಕಸಭೆಯಲ್ಲಿ ತಮಗೆ ೨೭೨ ಸಂಸತ್ ಸದಸ್ಯರ ಬಹುಮತದ ಬೆಂಬಲ ಇದೆ ಎಂದು ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಸೋನಿಯಾ ಗಾಂಧಿ ಪ್ರತಿಪಾದಿಸಿದ್ದರು ಎಂದು ಅನಂತ ಕುಮಾರ್  ನುಡಿದರು.  ಇಂತಹುದೇ ಭಾವನೆ ವ್ಯಕ್ತ ಪಡಿಸಿದ ಬಿಜೆಪಿ ಪ್ರಧಾನ ಕಾರ್‍ಯದರ್ಶಿ ರಾಮ್ ಮಾಧವ್ ಅವರು ಸರ್ಕಾರವು ಅವಿಶ್ವಾಸ ನಿರ್ಣಯವನ್ನು ಪರಾಭವಗೊಳಿಸಲು ಬೇಕಾದ ಬಲವನ್ನು ಹೊಂದಿದೆ. ಸೋನಿಯಾ ಗಾಂಧಿ ಅವರಿಗೆ ಸ್ವಲ್ಪವಾದರೂ ಗಣಿತ ಗೊತ್ತಿದೆಯೇ? ಎಂದು ಪ್ರಶ್ನಿಸಿದರು.  ಆಳುವ ಪಕ್ಷದ ಮೂಲಗಳ ಪ್ರಕಾರ ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದಾಗ ಸರ್ಕಾರವು ಕನಿಷ್ಠ ೩೧೪ ಸಂಸತ್ ಸದಸ್ಯರ ಬೆಂಬಲವನ್ನು ಗಳಿಸುತ್ತದೆ ಎಂದು ಆಳುವ ಪಕ್ಷದ ಮೂಲಗಳು ಹೇಳಿದವು. ಬಿಜೆಪಿಯ ಸದನ ನಿರ್ವಾಹಕರ ಅಂದಾಜಿನ ಪ್ರಕಾರ, ಸರ್ಕಾರವು ಪಿಎಂಕೆ ಮತ್ತು ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಪಕ್ಷದಂತಹ ಎನ್ ಡಿಎಯ ಹೊರಗಿರುವ ಸಣ್ಣ ಪಕ್ಷಗಳ ಬೆಂಬಲವನ್ನೂ ಪಡೆಯಲಿದೆ.

2018: ನವದೆಹಲಿ: ಏರ್‍ಸೆಲ್ ಮ್ಯಾಕ್ಸಿಸ್ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳವು (ಸಿಬಿಐ) ತನ್ನ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್) ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಆರೋಪಿಗಳು ಎಂಬುದಾಗಿ ಹೆಸರಿಸಿತು. ತನಿಖಾ ಸಂಸ್ಥೆಯು ಪಾಟಿಯಾಲ ಹೌಸ್ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು.  ತಿಂಗಳ ಹಿಂದೆ ಜಾರಿ ನಿರ್ದೇಶನಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಚಿದಂಬರಂ ಅವರು ತಮ್ಮ ಅಧಿಕಾರದ ದುರುಪಯೋಗ ಮಾಡಿದ್ದಾರೆ ಎಂದು ಸಿಬಿಐ ಆಪಾದಿಸಿತು.  ಮೆಸರ್ಸ್ ಗ್ಲೋಬಲ್ ಕಮ್ಯುನಿಕೇಶನ್ ಹೋಲ್ಡಿಂಗ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಗೆ ಏರ್‍ಸೆಲ್ ನಲ್ಲಿ ಹೂಡಿಕೆ ಮಾಡಲು ಅನುಮತಿ ನೀಡುವ ಸಲುವಾಗಿ ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯ ನಿಯಮಾವಳಿಗಳನ್ನು ಚಿದಂಬರಂ ಅವರು ಗಾಳಿಗೆ ತೂರಿದರು ಎಂದು ಸಿಬಿಐ ಆಪಾದಿಸಿತು. ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರನ್ನು ತಪ್ಪಿತಸ್ಥ ಎಂಬುದಾಗಿ ನೇರವಾಗಿ ಹೆಸರಿಸಿದ್ದು ಇದೇ ಮೊದಲು. ಜಾರಿ ನಿರ್ದೇಶನಾಲಯ ಕೂಡಾ ತನ್ನ ದೋಷಾರೋಪ ಪಟ್ಟಿಯಲ್ಲಿ ಹಲವೆಡೆ ಚಿದಂಬರಂ ಅವರ ಹೆಸರುಗಳನ್ನು ಪ್ರಸ್ತಾಪಿಸಿತು, ಆದರೆ ಆರೋಪಿಯಾಗಿ ಎಲ್ಲೂ ನೇರವಾಗಿ ಹೆಸರಿಸಿರಲಿಲ್ಲ.  ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಹೊರತಾಗಿ, ಒಂಬತ್ತು ಮಂದಿ ಸರ್ಕಾರಿ ಸೇವಕರು ಮತ್ತು ಏರ್‍ಸೆಲ್ ಮ್ಯಾಕ್ಸಿಸ್ ಅಧಿಕಾರಿಗಳನ್ನು ಸಿಬಿಐ ಹೆಸರಿಸಿದೆ. ನ್ಯಾಯಾಲಯವು ಜುಲೈ ೩೧ರಂದು ದೋಷಾರೋಪ ಪಟ್ಟಿಯನ್ನು ಪರಿಗಣನೆಗೆ ಎತ್ತಿಕೊಳ್ಳಲಿದೆ.  ಸಿಬಿಐ ಪ್ರಕಾರ, ಮಾರಿಷಸ್ ಮೂಲದ ಗ್ಲೋಬಲ್ ಸರ್ವೀಸಸ್ ಹೋಲ್ಡಿಂಗ್ಸ್ (ಮ್ಯಾಕ್ಸಿಸ್ ನ ಆಧೀನ ಸಂಸ್ಥೆ) ಏರ್‍ಸೆಲ್ ಟೆಲಿಕಾಂ  ಸಂಸ್ಥೆಯಲ್ಲಿ ೮೦೦೦ ಲಕ್ಷ (೮೦ ಕೋಟಿ) ಅಮೆರಿಕನ್ ಡಾಲರುಗಳ ಹೂಡಿಕೆಗೆ ಅನುಮತಿ ಕೋರಿತ್ತು. ಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಿಂದ ಇದಕ್ಕೆ ಒಪ್ಪಿಗೆ ಲಭಿಸಬೇಕಾಗಿತ್ತು. ಆದರೆ ಈ ಒಪ್ಪಿಗೆ ಆಗ ಚಿದಂಬರಂ ಅವರು ಮುಖ್ಯಸ್ಥರಾಗಿದ್ದ ಹಣಕಾಸು ಸಚಿವಾಲಯದಿಂದ ಬಂದಿತ್ತು. ಹಣಕಾಸು ಸಚಿವಾಲಯಕ್ಕೆ ಒಟ್ಟು ೬೦೦ ಕೋಟಿ ರೂಪಾಯಿಗಳವರೆಗಿನ ಹೂಡಿಕೆಗೆ ಅನುಮತಿ ಕೊಡುವ ಅಧಿಕಾರ ಮಾತ್ರ ಇತ್ತು.  ಹೂಡಿಕೆಗೆ ಅನುಮತಿ ಲಭಿಸಿದ ಬಳಿಕ ಏರ್‍ಸೆಲ್ ಟೆಲಿವೆಂಚರ್‍ಸ್ ಲಿಮಿಟೆಡ್ ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಕಂಪೆನಿಗೆ ೨೬ ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿತು ಎಂದು ಸಿಬಿಐ ಆಪಾದಿಸಿದೆ. ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಜಾರಿ ನಿರ್ದೇಶನಾಲಯವು ಕಾರ್ತಿ ಚಿದಂಬರಂ ಅವರಿಗೆ ಸೇರಿದ ಮತ್ತು ಅವರೊಂದಿಗೆ ಸಂಪರ್ಕವಿದ್ದ ಸಂಸ್ಥೆಯೊಂದರಿಂದ ೧.೧೬ ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.  ಚಿದಂಬರಂ ಅವರಿಗೆ ಆಗಸ್ಟ್ ೭ರವರೆಗೆ ನ್ಯಾಯಾಲಯವು ಬಂಧನದಿಂದ ರಕ್ಷಣೆ ಒದಗಿಸಿದೆ. ಕೆಲವೇ ದಿನಗಳ ಹಿಂದೆ ನ್ಯಾಯಾಲಯವು ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಮೂರನೇ ಬಾರಿಗೆ ವಿಸ್ತರಿಸಿತ್ತು. ಚಿದಂಬರಂ ಅವರು ತಮ್ಮ ಮೇಲಿನ ಆಪಾದನೆಗಳನ್ನು ನಿರಾಕರಿಸಿದ್ದರು ಮತ್ತು ಪ್ರಕರಣವನ್ನು ತಮ್ಮ ವಿರುದ್ಧದ ಮಾಟಬೇಟೆ ಹಾಗೂ ತಪ್ಪುಗಳ ಮಿಶ್ರಣ ಎಂದು ಹೇಳಿದ್ದರು.

2018: ನವದೆಹಲಿ: ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಜಟಾಪಟಿ ಮುಗಿಯುವಂತೆ ಕಾಣುತ್ತಿಲ್ಲ. ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರ ವಿಭಜನೆ ಮಾಡಿ ಸುಪ್ರೀಂಕೋರ್ಟ್ ಸಂವಿಧಾನಪೀಠವು ತೀರ್ಪು ನೀಡಿದ ಕೆಲವೇ ದಿನಗಳ ಬಳಿಕ ಕೇಂದ್ರವು ಎರಡನೇ ಸುತ್ತಿನ ಕಾನೂನು ಸಮರವನ್ನು ತೀಕ್ಷ್ಣಗೊಳಿಸಲು ನಿರ್ಧರಿಸಿತು. ಹರೀಶ್ ಸಾಳ್ವೆ, ಸಿಎ ಸುಂದರಂ ಮತ್ತು ರಾಕೇಶ್ ದ್ವಿವೇದಿ ಈ ಮೂವರು ಹಿರಿಯ ವಕೀಲರನ್ನು ಕೇಂದ್ರವು ಸೇವೆಗಳು ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಗಳನ್ನು ಉಳಿಸಿಕೊಳ್ಳುವ ಹೋರಾಟಕ್ಕಾಗಿ ನಿಯೋಜಿಸಿತು. ಮೂವರು ಹಿರಿಯ ವಕೀಲರನ್ನು ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳ ಪೀಠದ ಮುಂದೆ ವಾದಿಸಲು ನಿಯೋಜಿಸಿರುವ ನಿರ್ಧಾರವನ್ನು ತಿಳಿಸಿ ಗೃಹ ವ್ಯವಹಾರಗಳ ಸಚಿವಾಲಯ, ಕೇಂದ್ರಾಡಳಿತ ಡಿವಿಷನ್‌ಗಳು ಮತ್ತು ಕಾನೂನು ಸಚಿವಾಲಯಕ್ಕೆ ಪತ್ರ ಬರೆಯಿತು.  ‘ಸಂಬಂಧಪಟ್ಟ ಕಡತಗಳನ್ನು ಇಲಾಖೆಯ ಕಾನೂನು ವ್ಯವಹಾರಗಳ ವಿಭಾಗಕ್ಕೆ ಕಾಲಾನುಕ್ರಮದಲ್ಲಿ ಕಳುಹಿಸಲಾಗುವುದು ಎಂದು ಪತ್ರ ತಿಳಿಸಿತು. ಅಡಿಷನಲ್ ಸಾಲಿಸಿಟರ್ ಜನರಲ್ ಮಣೀಂದರ್ ಸಿಂಗ್ ಅವರು ಪ್ರಕರಣದಲ್ಲಿ ಈವರೆಗೆ ಕೇಂದ್ರ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಪರವಾಗಿ ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದರು.  ಇನ್ನೊಂದೆಡೆ, ಗೋಪಾಲ ಸುಬ್ರಮಣಿಯಂ, ರಾಜೀವ್ ಧವನ್, ಪಿ. ಚಿದಂಬರಂ, ಶೇಖರ್ ನಫಡೆ ಮತ್ತು ಇಂದಿರಾ ಜೈಸಿಂಗ್ ಸೇರಿದಂತೆ ಹಿರಿಯ ವಕೀಲರ ಸಮೂಹ ಆಪ್ ಸರ್ಕಾರವನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದೆ.  ಸಂವಿಧಾನ ಪೀಠದ ತೀರ್ಪಿನ ಬಳಿಕ ಘಟಾನುಘಟಿ ವಕೀಲರ ತಂಡವನ್ನು ನೇಮಿಸುವ ಮೂಲಕ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಯಾವುದೇ ಆದೇಶ ಬರದಂತೆ ಹಾಗೂ ಅವರು ಯಾವುದೇ ಮುಜುಗರಕ್ಕೆ ಈಡಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿದವು. ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಲಭಿಸಿದ ಪ್ರಮುಖ ವಿಜಯ ಎಂಬುದಾಗಿ ಭಾವಿಸಲಾಗಿರುವ ಜುಲೈ ೪ರ ತೀರ್ಪಿನಲ್ಲಿ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರವಾಗಿ ಕಾರ್‍ಯ ನಿರ್ವಹಿಸುವಂತಿಲ್ಲ, ಚುನಾಯಿತ ಸರ್ಕಾರದ ನೀತಿನಿರ್ಧಾರಗಳಿಗೆ ಅಡ್ಡಿ ಮಾಡುವಂತಿಲ್ಲ ಮತ್ತು ಸರ್ಕಾರದ ನೆರವು ಮತ್ತು ಸಲಹೆಗಳಿಗೆ ಅವರು ಬದ್ಧರಾಗಿರಬೇಕು ಎಂದು ಸಂವಿಧಾನ ಪೀಠವು ಹೇಳಿತ್ತು. ಲೆಫ್ಟಿನೆಂಟ್ ಗವರ್ನರ್ ಮತ್ತು ಸರ್ಕಾರದ ಅಧಿಕಾರಗಳ ನಡುವೆ ಗೆರೆ ಎಳೆದ ಬಳಿಕ ಸಂವಿಧಾನಪೀಠವು ತನ್ನ ತೀರ್ಪಿನ ವಿಶಾಲ ತತ್ವಗಳ ಅಡಿಯಲ್ಲಿ ವೈಯಕ್ತಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸುವಂತೆ ಸೂಚಿಸಿ ಕಿರಿಯ ಪೀಠಕ್ಕೆ ವರ್ಗಾಯಿಸಿತ್ತು.  ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಅಶೋಕ ಭೂಷಣ್ ಅವರ ಪೀಠವು ಬಳಿಕ ವಿಚಾರಣೆಯನ್ನು ಎತ್ತಿಕೊಂಡಿದ್ದು, ಅದು ಲೆಫ್ಟಿನೆಂಟ್ ಗವರ್ನರ್ ಅವರು ಆಪ್ ಸರ್ಕಾರದ ವರ್ಗಾವಣೆ ಮತ್ತು ದೆಹಲಿಯಲ್ಲಿ ಅಧಿಕಾರಿಗಳ ನಿಯೋಜನೆ ಅಧಿಕಾರವನ್ನು ಕಿತ್ತುಕೊಂಡದ್ದಕ್ಕೆ ಸಂಬಂಧಿಸಿದ ಅಧಿಸೂಚನೆಗಳ ವಿಚಾರವನ್ನು ಇತ್ಯರ್ಥಗೊಳಿಸಬೇಕಾಗಿದೆ.  ಅಧಿಕಾರಗಳನ್ನು ಕಿತ್ತುಕೊಂಡದ್ದಲ್ಲದೆ, ದೆಹಲಿ ಪೊಲೀಸರು ಸೇರಿದಂತೆ ಕೇಂದ್ರ ಸರ್ಕಾರಿ ನೌಕರರ ವಿರುದ್ಧದ ಅಪರಾಧಗಳ ವಿಚಾರಣೆಯನ್ನು ಎಸಿಬಿ ನಡೆಸುವಂತಿಲ್ಲ ಎಂದೂ ಅಧಿಸೂಚನೆ ಹೇಳಿತ್ತು.  ಈ ಎರಡು ವಿಷಯಗಳು ಉಭಯ ಕಡೆಗಳ ನಡುವಣ ಘರ್ಷಣೆಯ ಪ್ರಮುಖ ಅಂಶಗಳಾಗಿವೆ ಮತ್ತು ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳುವುದಕ್ಕಾಗಿ ಕೇಂದ್ರವು ಇದೀಗ ಮೂವರು ಹಿರಿಯ ವಕೀಲರನ್ನು ಕಣಕ್ಕೆ ಇಳಿಸಿದೆ. ಕಿರಿಯ ಪೀಠವು ಗುರುವಾರ ವಿಚಾರಣೆಗೆ ಬಂದಾಗ, ಆಪ್ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಪಿ. ಚಿದಂಬರಂ ಅವರು ಸಂವಿಧಾನ ಪೀಠದ ತೀರ್ಪಿನ ಹೊರತಾಗಿಯೂ ನಗರದ ಆಡಳಿತ ಊನಗೊಂಡಿದೆ ಎಂದು ದೂರಿದ್ದರು. ಆಗ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಗೆ ಜುಲೈ ೨೬ರ ದಿನಾಂಕವನ್ನು ನಿಗದಿಪಡಿಸಿತ್ತು.

2018: ಕೋಲ್ಕತ: ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (ಡಬ್ಲ್ಯೂಟಿಒ) ರಫ್ತು ಸಬ್ಸಿಡಿಗಳಿಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಅಮೆರಿಕವು ಹೂಡಿರುವ ಖಟ್ಲೆಯಲ್ಲಿ ಭಾರತವು ಸೋಲುವ ’ನೈಜ ಸಾಧ್ಯತೆಗಳಿವೆ ಎಂದು ವಾಣಿಜ್ಯ ಕಾರ್‍ಯದರ್ಶಿ ರೀಟಾ ಟಿಯೋಷಿಯ ಅವರು ಇಲ್ಲಿ ಹೇಳಿದರು.  ‘ಭಾರತದಲ್ಲಿದ ಆದಾಯ ಮಟ್ಟಗಳು ಸಬ್ಸಿಡಿ ನೀಡಲು ರಫ್ತುಗಳ ಮೇಲೆ ಇರುವ ಮಿತಿಯನ್ನು ದಾಟಿರುವುದು ಇದಕ್ಕೆ ಕಾರಣ ಎಂದು ಅವರು ನುಡಿದರು. ‘ರಫ್ತುಗಳಿಗೆ ಸಬ್ಸಿಡಿ ನೀಡುತ್ತಿರುವುದಕ್ಕೆ ಸಂಬಂಧಿಸಿದಂತೆ ಡಬ್ಲ್ಯೂಟಿ ಒದಲ್ಲಿ ಭಾರತದ ವಿರುದ್ಧ ಅಮೆರಿಕವು ಹೂಡಿರುವ ತಕರಾರಿನಲ್ಲಿ ಭಾರತವು ಸೋಲುವ ನೈಜ ಸಾಧ್ಯತೆಗಳಿವೆ ಎಂದು ಅವರು ಕೋಲ್ಕತದಲ್ಲಿ ನಡೆದ ಐಸಿಸಿ ಸಂವಾದ ಕಾರ್‍ಯಕ್ರಮದಲ್ಲಿ ಹೇಳಿದರು. ಏನಿದ್ದರೂ, ಅಮೆರಿಕದ ಆಪಾದನೆಗಳ ವಿರುದ್ಧ ಭಾರತ ಪ್ರಬಲ ಪ್ರತಿಪಾದನೆ ಮಾಡುತ್ತಿದೆ ಎಂದು ಟಯೋಷಿಯ ಹೇಳಿದರು.  ರಫ್ತಿಗೆ ನೇರ ಸಬ್ಸಿಡಿ ನೀಡಲು ಸಾಧ್ಯವಿಲ್ಲದ ಕಾರಣ, ಸರ್ಕಾರವು ಇತರ ರಾಷ್ಟ್ರಗಳಲ್ಲಿನ ನಿಯಂತ್ರಣಗಳಿಗೆ ಅನುಗುಣವಾಗಿ ಶಾಸನಬದ್ಧ ಬೆಂಬಲವನ್ನು ನೀಡಬಹುದು. ರಫ್ತು ಸೇವೆಗಳಿಗೆ ನೀಡಲಾಗುವ ಸವಲತ್ತುಗಳನ್ನು ಮುಟ್ಟಲು ಸಾಧ್ಯವಿಲ್ಲ ಮತ್ತು ರಫ್ತುದಾರರಿಗೆ ನೀಡಲಾಗುವ ಜಿಎಎಸ್ಟಿ ಮರುಪಾವತಿಗಳು ಅಬಾಧಿತವಾಗಿ ಮುಂದುವರೆಯುತ್ತವೆ ಎಂದು ಅವರು ನುಡಿದರು.  ‘ಒಳಸುರಿ ಸಬ್ಸಿಡಿಗೆ ಬೆಂಬಲ ನೀಡುವುದು ಕೂಡಾ ಶಾಸನಬದ್ಧವೇ ಎಂದು ವಾಣಿಜ್ಯ ಕಾರ್ಯದರ್ಶಿ ಹೇಳಿದರು. ಏನಿದ್ದರೂ ರಫ್ತುಗಳಿಗೆ ಮಾತ್ರವೇ ಪ್ರೋತ್ಸಾಹಕ ನೀಡಿಕೆ ಸಾಧ್ಯವಿಲ್ಲ. ವೆಚ್ಚ ಇರಬೇಕು ಮತ್ತು ಬಳಿಕ ಪರಿಹಾರ ನೀಡಬೇಕು ಎಂದು ಅವರು ಹೇಳಿದರು. ಡಬ್ಲ್ಯೂಟಿ ಒದಲ್ಲಿ ನೀಡಲಾಗಿರುವ ದೂರನ್ನು ಪರಿಶೀಲಿಸಲು ಸರ್ಕಾರವು ಈಗಾಗಲೇ ತಜ್ಞರ ತಂಡವನ್ನು ರಚಿಸಿದೆ. ರಫ್ತಿಗೆ ಬೆಂಬಲ ಮತ್ತು ಕರಡು ಯೋಜನೆಗಳನ್ನು ಚರ್ಚೆಯ ಸಲುವಾಗಿ ಪ್ರಕಟಿಸಲಾಗುವುದು ಎಂದು ಅವರು ನುಡಿದರು.  ವಿವಾದವು ಇನ್ನೂ ಇತ್ಯರ್ಥಗೊಳ್ಳದೇ ಇರುವ ಕಾರಣ ಹಾಲಿ ರಫ್ತು ಸಬ್ಸಿಡಿ ಯೋಜನೆಗಳು ಮುಂದುವರೆಯುತ್ತಿವೆ ಎಂದೂ ಅವರು ಹೇಳಿದರು.  ೨೦೧೮ರ ಮಾರ್ಚ್ ತಿಂಗಳಲ್ಲಿ ಅಮೆರಿಕವು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಭಾರತದ ವಿರುದ್ಧ ದೂರು ನೀಡಿ ರಫ್ತು ಸಬ್ಸಿಡಿಗಳಿಗೆ ಸಂಬಂಧಿಸಿದ ವ್ಯವಸ್ಥೆ ಕುರಿತ ವಿವಾದವನ್ನು ಇತ್ಯರ್ಥ ಪಡಿಸಬೇಕು ಎಂದು ಕೋರಿಕೆ ಸಲ್ಲಿಸಿತ್ತು. ಭಾರತವು ನೀಡುತ್ತಿರುವ ರಫ್ತು ಸಬ್ಸಿಡಿಯು ಅಮೆರಿಕದ ಕಂಪೆನಿಗಳಿಗೆ ಹಾನಿ ಉಂಟು ಮಾಡುತ್ತಿದೆ ಎಂದು ಅಮೆರಿಕ ಆಪಾದಿಸಿತ್ತು. ಭಾರತದಿಂದ ರಫ್ತಾಗುವ ಬಿಕರಿ ಮಾಲು ಸಬ್ಸಿಡಿಯಂತಹ ಯೋಜನೆಗಳನ್ನು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಪ್ರಶ್ನಿಸಿದ ಅಮೆರಿಕ, ಈ ಉಪಕ್ರಮಗಳು ಅಸಮಾನ ಆಟದ ಮೈದಾನವನ್ನು ಸೃಷ್ಟಿಸುವ ಮೂಲಕ ತನ್ನ ಕಂಪೆನಿಗಳಿಗೆ ಹಾನಿ ಉಂಟು ಮಾಡುತ್ತವೆ ಎಂದು ದೂರಿತ್ತು. ಭಾರತದ ಸಹಸ್ರಾರು ಕಂಪೆನಿಗಳು ವಾರ್ಷಿಕ ೭೦೦ ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಲಾಭಗಳನ್ನು ಇಂತಹ ವಿವಿಧ ರಫ್ತು ಅಭಿವೃದ್ಧಿ ಸಬ್ಸಿಡಿ ಯೋಜನೆಗಳ ಮೂಲಕ ಪಡೆಯುತ್ತಿವೆ ಎಂದು ಅಮೆರಿಕ ಆಪಾದಿಸಿತ್ತು.


2017: ಭುವನೇಶ್ವರ : ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಅವರು ರಾಜ್ಯದ ಅತೀ ಉದ್ದದ ಸೇತುವೆಯನ್ನು ಲೋಕಾರ್ಪಣೆಗೈದು ಅದಕ್ಕೆ ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಹೆಸರನ್ನು ಇಟ್ಟರು. ರಾಜ್ಯದ ರಾಜಧಾನಿ ಭುವನೇಶ್ವರವನ್ನು ಕಟಕ್‌ ನೊಂದಿಗೆ ಜೋಡಿಸುವ ಮೂಲಕ ಉಭಯ ನಗರಗಳ ನಡುವಿನ ದೂರವನ್ನು 12 ಕಿ.ಮೀ.ನಷ್ಟು ಕಡಿಮೆ ಮಾಡುವ ಕಠಜೋಡಿ ನದಿಯ ಮೇಲಿನ, ರಾಜ್ಯದ ಈ ಅತೀ ಉದ್ದದ ಸೇತುವೆಯು  2.88 ಕಿ.ಮೀ. ಉದ್ದವಿದೆ. ರಾಜ್ಯದ ಹಾಗೂ ಜನತೆಯ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಆಧುನಿಕ ಮೂಲ ಸೌಕರ್ಯಗಳನ್ನು ಕಲ್ಪಿಸುವ ರಾಜ್ಯ ಸರಕಾರದ ನಿರಂತರ ಪ್ರಯತ್ನಕ್ಕೆ ಈ ಸೇತುವೆಯು ಒಂದು ಸಾಕ್ಷಿಯಾಗಿದೆ ಎಂದು  ಸಿಎಂ ಪಟ್ನಾಯಕ್ ಸೇತುವೆಯನ್ನು ಉದ್ಘಾಟಿಸಿ ಹೇಳಿದರು. 
2017: ಬೀಜಿಂಗ್‌: ಎರಡು ತಿಂಗಳಿಂದ ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್ಲಾಮ್ ಪ್ರದೇಶದಲ್ಲಿ ಭಾರತ - ಚೀನ
ಸೇನೆ ಮುಖಾಮುಖೀಯಾಗಿ ಉದ್ವಿಗ್ನತೆಗೆ ಕಾರಣವಾಗಿರುವ ನಡುವೆಯೇ ಚೀನ ಕಳೆದ ಮಾಸಾಂತ್ಯದಲ್ಲಿ ಡೋಕ್ಲಾಮ್ ಗೆ ಸಮೀಪದ ಟಿಬೆಟ್‌ ಪರ್ವತ ಪ್ರಾಂತ್ಯದಲ್ಲಿ  ಭಾರೀ ಪ್ರಮಾಣದ ತನ್ನ ಸೇನಾ ಘನ ಪರಿಕರಗಳನ್ನು ತಂದಿರಿಸಿರುವುದಾಗಿ ವರದಿಗಳು ತಿಳಿಸಿದವು. ರೈಲು ಮತ್ತು ರಸ್ತೆ ಮಾರ್ಗವಾಗಿ ಈ ಭಾರೀ ಮಿಲಿಟರಿ ಪರಿಕರಗಳನ್ನು ಚೀನ, ಭಾರತದೊಂದಿಗೆ ಯಾವುದೇ ಹೊತ್ತಿನಲ್ಲಿ ಸಂಘರ್ಷಕ್ಕೆ ಸನ್ನದ್ಧನಾಗಿರುವ ಉದ್ದೇಶದಿಂದ ತಂದಿರಿಸಿರುವುದಾಗಿ ಪಿಎಲ್‌ಎ ಮುಖವಾಣಿ ಹೇಳಿಕೊಂಡಿತು. ಚೀನ ತನ್ನ ಘನ ಮಿಲಿಟರಿ ಸೇನಾ ಪರಿಕರಗಳನ್ನು ತಂದು ನಿಲ್ಲಿಸಿರುವುದು ಉತ್ತರ ಟಿಬೆಟ್‌ನಲ್ಲಿರುವ ಕುನ್‌ಲುನ್‌ ಪರ್ವತದ ದಕ್ಷಿಣ ಭಾಗದಲ್ಲಿ. ಚೀನ ಸೇನೆಯ ವೆಸ್ಟರ್ನ್ ಥಿಯೇಟರ್‌ ಕಮಾಂಡ್‌ ಈ ಸನ್ನದ್ಧತೆಯನ್ನು ಅಣಿಗೊಳಿಸಿದೆ ಎಂದು ವರದಿ ಹೇಳಿತು. ಚೀನ ತನ್ನ ಘನ ಮಿಲಿಟರಿ ಪರಿಕರಗಳನ್ನು ಭಾರೀ ಪ್ರಮಾಣದಲ್ಲಿ ತಂದಿರಿಸಿರುವ ಈ ಪ್ರದೇಶವು ಪ್ರಕ್ಷುಬ್ಧ ಟಿಬೆಟ್‌ ಮತ್ತು ಕ್ಸಿಂಜಿಯಾಂಗ್‌ಗೆ ಮುಖ ಮಾಡಿಕೊಂಡಿದೆ.  ಚೀನದ ಸರಕಾರಿ ಒಡೆತನದ ಸುದ್ದಿ ಮಾಧ್ಯಮ ಭಾರತದೊಂದಿಗೆ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಚೀನ ಸೇನೆ ಯಾವುದೇ ಹೊತ್ತಿಗೆ ಮುಂದಾಗುವ ಸಾಧ್ಯತೆ ಇದ್ದು ಭಾರತ ಅದಕ್ಕಾಗಿ ಸಿದ್ಧವಾಗಿರುವುದು ಒಳಿತೆಂಬ ಬುದ್ಧಿವಾದವನ್ನು ಹೇಳುತ್ತಿವೆ. ಹಾಗಿದ್ದರೂ ಚೀನ ತನ್ನ ಸಮರ ನೀತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.  ಕಳೆದ ವಾರವಷ್ಟೇ ಚೀನದ ಪೀಪಲ್ಸ್‌ ಲಿಬರೇಶನ್‌ ಆರ್ಮಿ ಟಿಬೆಟ್‌ ಪೀಠಭೂಮಿಯಲ್ಲಿ  ಸೇನಾ ಕವಾಯತು ನಡೆಸಿ ತನ್ನ ಸಮರ ಸನ್ನದ್ಧತೆ ಮತ್ತು ಕ್ಷಮತೆಯನ್ನು ಪರೀಕ್ಷಿಸಿಕೊಂಡು ಅದರ ಅಧಿಕೃತ ವಿಡಿಯೋವನ್ನು ಬಿಡುಗಡೆಗೊಳಿಸಿತ್ತು.  ಇದೀಗ ಚೀನ ತನ್ನ ಘನ ಮಿಲಿಟರಿ ಸರಕು ಸರಂಜಾಮು ಹಾಗೂ ಶಸ್ತ್ರಾಸ್ತ್ರಗಳನ್ನು ಕಲೆ ಹಾಕಿರುವ ಪ್ರದೇಶವು ಡೋಕ್ಲಾಮ್ ಪ್ರದೇಶಕ್ಕೆ ನಿಕಟದಲ್ಲಿರುವುದೇ ಗಡಿ ಉದ್ವಿಗ್ನತೆ ಹೆಚ್ಚಲು ಕಾರಣವೆಂದು ಹೇಳಲಾಯಿತು.


2017: ನವದೆಹಲಿ: ಎಂಟು ಸಾವಿರ ಕೋಟಿ ಬ್ಯಾಂಕ್‌ ಸಾಲ ಸುಸ್ತಿಗಾರನಾಗಿ ವಿದೇಶಕ್ಕೆ ಪಲಾಯನ ಮಾಡಿರುವ
ಮದ್ಯ ದೊರೆ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳುವ ಕ್ರಮದಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸುವುದಕ್ಕಾಗಿ ಪ್ರಕೃತ ಜಾರಿ ನಿರ್ದೇಶನಾಲಯದ ತಂಡವೊಂದು ಈಗ ಲಂಡನ್‌ನಲ್ಲಿದೆ ಎಂದು ಹಿರಿಯ ಅಧಿಕಾರಿ  ಹೇಳಿದರು. 2 ದಿನ ಹಿಂದೆ ಕಾನೂನು ಸಲಹೆಗಾರ ಸೇರಿದಂತೆ ಇಬ್ಬರು ಸದಸ್ಯರ ತಂಡವು ಲಂಡನ್‌ಗೆ ಎರಡು ದಿನಗಳ ಭೇಟಿಗಾಗಿ ಪ್ರಯಾಣಿಸಿದ್ದು ಇದೇ 20ರಂದು  ದೇಶಕ್ಕೆ ಮರಳಲಿದೆ ಎಂದು ಇಡಿ ಅಧಿಕಾರಿ ಹೇಳಿದರು. ವಿಜಯ್‌ ಮಲ್ಯ ವಿರುದ್ಧ ಸಿದ್ಧಪಡಿಸಲಾಗಿರುವ 5,500 ಪುಟಗಳ ಸುದೀರ್ಘ‌ ಚಾರ್ಜ್‌ ಶೀಟನ್ನು ಲಂಡನ್‌ನ ಕ್ರೌನ್‌ ಪ್ರಾಸಿಕ್ಯೂಶನ್‌ ಕಚೇರಿಯಲ್ಲಿ ಸಲ್ಲಿಸಲು ದ್ವಿಸದಸ್ಯ ಇಡಿ ತಂಡ ಈಗ ಲಂಡನ್‌ನಲ್ಲಿದೆ ಎಂದವರು ಹೇಳಿದರು. 
2017: ನವದೆಹಲಿ: ಆಧಾರ್‌ ಹೊಂದಿರುವವರ ವೈಯಕ್ತಿಕ ಮಾಹಿತಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 210
ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಪಿ.ಪಿ. ಚೌಧರಿ ಲೋಕಸಭೆಗೆ ತಿಳಿಸಿದರು. ‘ವಿವಿಧ ಯೋಜನೆಗಳ ಫಲಾನುಭವಿಗಳ ವೈಯಕ್ತಿಯ ಮಾಹಿತಿಯನ್ನು ಆಧಾರ್‌ ಸಂಖ್ಯೆ ಸಹಿತ ಈ ವೆಬ್‌ಸೈಟ್‌ಗಳಲ್ಲಿ ಹಾಕಲಾಗಿದೆ. ಈ ಮಾಹಿತಿ ಸಾರ್ವಜನಿಕರ ವೀಕ್ಷಣೆಗೂ ಸಿಗುವಂತಿದೆ’ ಎಂದು ಚೌಧರಿ ತಿಳಿಸಿದರು. ‘ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮಾಹಿತಿ ಕಲೆ ಹಾಕಿದ್ದು, ಈ ಎಲ್ಲ ವೆಬ್‌ಸೈಟ್‌ಗಳಿಂದ ಆಧಾರ್‌ ಸಂಖ್ಯೆಯೊಂದಿಗೆ ಹಾಕಿರುವ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕರ ವೀಕ್ಷಣೆಗೆ ಸಿಗದಂತೆ ನಿರ್ಬಂಧಿಸಲಾಗುವುದು’ ಎಂದು ಚೌಧರಿ ಹೇಳಿದರು. ‘ಯುಐಡಿಎಐಯಿಂದ ಆಧಾರ್‌ ಮಾಹಿತಿ ಸೋರಿಕೆಯಾಗಿಲ್ಲ’ ಎಂದು ಇದೇ ವೇಳೆ ಚೌಧರಿ ತಿಳಿಸಿದರು.

2017:  ನವದೆಹಲಿ: ನಮ್ಮೊಂದಿಗೆ ಆಧಾರ್‌ ಇಟ್ಟುಕೊಳ್ಳಲು ಪರ್ಸ್, ಕಾರ್ಡ್‌ ಕವರ್‌ಗಳ ಅಗತ್ಯವಿಲ್ಲ.
ಮೊಬೈಲ್‌ ಇದ್ದರೆ ಆಧಾರ್‌ ಇದ್ದಂತೆ! ನಿತ್ಯದ ಬಹಳಷ್ಟು ವ್ಯವಹಾರಗಳಲ್ಲಿ ಆಧಾರ್‌ ಕಾರ್ಡ್ ಬಳಕೆ ಹೆಚ್ಚಿದೆ. ‘ಎಂಆಧಾರ್‌’ ಆ್ಯಪ್‌ ಬಿಡುಗಡೆಯಾಗಿದ್ದು, ಆಧಾರ್‌  ಸಂಪರ್ಕಿತ ಸೇವೆಗಳಲ್ಲಿ ದೃಢೀಕರಣಕ್ಕಾಗಿ ಕಾರ್ಡ್‌ ತೆಗೆದುಕೊಂಡು ಹೋಗುವ ಅಗತ್ಯತೆ ಕೊನೆಗೊಳ್ಳಲಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಬಿಡುಗಡೆ ಮಾಡಿರುವ ‘ಎಂಆಧಾರ್‌’ ಆ್ಯಪ್‌ ಮೂಲಕ ಸ್ಮಾರ್ಟ್‌ ಫೋನ್‌ನಲ್ಲಿ ಆಧಾರ್‌ ಸಂಖ್ಯೆಯನ್ನು ಒಳಗೊಂಡ ಮಾಹಿತಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಆಧಾರ್‌ ಪ್ರತಿ ತೆಗೆದುಕೊಂಡು ಹೋಗುವ ಅಗತ್ಯವಿರುವುದಿಲ್ಲ. ಆ್ಯಪ್‌ ಡೌನ್‌ಲೋಡ್‌: ಪ್ರಸ್ತುತ ಆ್ಯಂಡ್ರಾಯ್ಡ್‌ ಬಳಕೆದಾರರು ‘ಗೂಗಲ್‌ ಪ್ಲೇ’ ಮೂಲಕ ‘ಎಂಆಧಾರ್‌’ಡೌನ್‌ಲೋಡ್‌ ಮಾಡಿಕೊಳ್ಳಬಹುದು.

2008: ಶಂಕಿತ ಗೆರಿಲ್ಲಾಗಳು ವಾಹನದ ಮೇಲೆ ನಡೆಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಿಂದ ಭಾರತೀಯ ಸೇನಾಪಡೆಗೆ ಸೇರಿದ ಕನಿಷ್ಠ 10 ಸೈನಿಕರು ಮೃತರಾಗಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶ್ರೀನಗರದ ಹೊರವಲಯದಲ್ಲಿ ನಡೆಯಿತು. ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದಿಗೆ ಸಂಪರ್ಕ ಕಲ್ಪಿಸುವ ಶ್ರೀನಗರ- ಬಾರಾಮುಲ್ಲಾ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿತು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಮತ್ತೆ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿತು. ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಟೈಗರ್ ಮೆಮೊನ್ನ ಆಪ್ತರಾದ ಅಸ್ಗರ್ ಮುಕದಮ್, ಷಾನವಾಜ್ ಖುರೇಶಿ ಮತ್ತು ಮೊಹಮದ್ ಶೋಯಿಬ್ ಘನ್ಸಾರ್ಗೆ ಟಾಡಾ ನ್ಯಾಯಾಧೀಶರು ಗಲ್ಲು ಶಿಕ್ಷೆ ಮತ್ತು ತಲಾ ರೂ. 4ಲಕ್ಷ ದಂಡ ವಿಧಿಸಿದರು. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಆರು ಮಂದಿಗೆ ಮರಣದಂಡನೆ ವಿಧಿಸಿದಂತಾಯಿತು. 1992ರಿಂದ ಮೆಮೊನ್ ನ ನೌಕರನಾಗಿದ್ದ ಮುಕದಮ್, ಕಳೆದ ಸೆಪ್ಟೆಂಬರ್ 18ರಂದು ಅಪರಾಧಿ ಎಂದು ತೀರ್ಮಾನವಾಗಿತ್ತು. ಬಾಂಬ್ ಸ್ಫೋಟದ ಸಂಚು ರೂಪಿಸುವಲ್ಲಿಂದ ಹಿಡಿದು ಕಾರ್ಯಾಚರಣೆ ಪೂರ್ತಿಗೊಳ್ಳುವವರೆಗೂ ಸಕ್ರಿಯವಾಗಿ ಪಾಲ್ಗೊಂಡಿದ್ದ ಮುಕದಮ್, ದಾದರಿನ ಪ್ಲಾಜಾ ಚಿತ್ರ ಮಂದಿರದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆರ್ ಡಿ ಎಕ್ಸ್ ಇರಿಸಿದ್ದ. ಈ ಸ್ಫೋಟದಲ್ಲಿ ಹತ್ತು ಮಂದಿ ಸತ್ತು 36 ಮಂದಿ ಗಾಯಗೊಂಡಿದ್ದರು. ಸುಮಾರು 87 ಲಕ್ಷ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಉಂಟಾಗಿತ್ತು. ಶಿಕ್ಷೆಗೆ ಒಳಗಾಗಿರುವ ಮೂವರನ್ನು ಮುಕದಮ್ ಹೋಟೆಲ್ಗಳಿಗೆ ತಲುಪಿಸಿದ್ದ. ಹೋಟೆಲುಗಳಲ್ಲಿ ಸ್ಫೋಟ ಸಂಭವಿಸಿತ್ತು.

2007: ಮುಂಬೈ ಉಪನಗರದ ಬೋರಿವಿಲಿಯ ಬಬಾಯಿ ನಾಕಾ ಪ್ರದೇಶದಲ್ಲಿ ಕುಸಿದು ಬಿದ್ದ ಏಳು ಮಹಡಿಗಳ `ಲಕ್ಷ್ಮಿ ಛಾಯಾ' ಕಟ್ಟಡದ ಅವಶೇಷದಿಂದ ಹೊರತರಲಾದ ವ್ಯಕ್ತಿಯೊಬ್ಬ ಮುಂಬೈಯ ಭಗವತಿ ಆಸ್ಪತ್ರೆಯಲ್ಲಿ ಮೃತನಾದ. ಇದರಿಂದಾಗಿ ಈ ದುರಂತದಲ್ಲಿ ಮಡಿದವರ ಸಂಖ್ಯೆ 26ಕ್ಕೇರಿತು.

2007: ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯ ಅಧಿಕಾರವನ್ನು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮ ಸಭೆಗಳ ಬದಲಿಗೆ ವಿಧಾನಸಭಾ ಸದಸ್ಯರ ನೇತೃತ್ವದ ಸಮಿತಿಗೆ ನೀಡುವ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ- 2007ನ್ನು ರಾಜ್ಯಪಾಲ ಟಿ.ಎನ್.ಚತುರ್ವೇದಿ ವಾಪಸು ಕಳುಹಿಸಿದರು.

2007: ಪಾಕಿಸ್ತಾನದ ಎರಡು ಕಡೆ ಆತ್ಮಹತ್ಯಾ ಬಾಂಬ್ ಸ್ಫೋಟ ಸಂಭವಿಸಿ ಕನಿಷ್ಠ 38 ಮಂದಿ ಮೃತರಾದರು. ದಕ್ಷಿಣ ಪಾಕಿಸ್ತಾನದ ಹಬ್ ಎಂಬಲ್ಲಿ ಜನನಿಬಿಡ ಮಾರುಕಟ್ಟೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಎಂಟು ಪೊಲೀಸರು ಸೇರಿ 30 ಮಂದಿ ಮೃತರಾದರು. ವಾಯವ್ಯ ಭಾಗದ ಹಂಗು ಎಂಬಲ್ಲಿ ಆತ್ಮಹತ್ಯಾ ಪಡೆಯ ಸದಸ್ಯನೊಬ್ಬ ಪೊಲೀಸ್ ತರಬೇತಿ ಕೇಂದ್ರದ ಒಳಗೆ ಕಾರು ನುಗ್ಗಿಸಿ ಬಾಂಬ್ ಸ್ಫೋಟಿಸಿದ್ದರಿಂದ 8 ಮಂದಿ ಮೃತರಾದರು.

2007: ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿರುವ ಎಂಜಿನಿಯರಿಂಗ್ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿ ಹೈದರಾಬಾದ್ ಮೂಲದ ಶಂಕರಶಾಸ್ತ್ರಿ ನೇಮಕಗೊಂಡರು. ಹೈದರಾಬಾದಿನಲ್ಲಿ ಜನಿಸಿದ ಶಾಸ್ತ್ರಿ ತಮ್ಮ ವಿದ್ಯಾಬ್ಯಾಸವನ್ನು ಪುಣೆಯಲ್ಲಿ ಮುಗಿಸಿ ವಿದೇಶದಲ್ಲಿನ ವಿವಿಗೆ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಜಾರ್ಖಂಡಿನ ಗುಡ್ಡಗಾಡು ಮಹಿಳೆ ಲಕ್ಷ್ಮಿ ಲಕ್ರಾ (27) ಉತ್ತರ ರೈಲ್ವೆಯಲ್ಲಿ ಮೊತ್ತ ಮೊದಲ ಮಹಿಳಾ ರೈಲು ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದಳು. ಮೂಲತಃ ಮುಂಬೈಯವಳಾದ ಲಕ್ಷ್ಮಿ 1992ರಲ್ಲಿ ರೈಲ್ವೆ ಇಲಾಖೆಗೆ ಸೇರಿದ್ದು, ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ಮಾರ್ಗದಲ್ಲಿ ಮುನ್ನಡೆದರು.

2006: ತಿರುಮಲ ತಿರುಪತಿ ದೇವಸ್ಥಾನವು ತನ್ನ ಎಲ್ಲ 10,000 ಮಂದಿ ನೌಕರರಿಗೂ ಹಣೆಯಲ್ಲಿ `ತಿಲಕ' ಧರಿಸುವುದನ್ನು ಕಡ್ಡಾಯಗೊಳಿಸಿ ನಿರ್ದೇಶನ ನೀಡಿತು.

2006: ಒರಿಸ್ಸಾದ ಪುರಿ ಮತ್ತು ಕೊನಾರ್ಕ್ ನಡುವೆ ಭಾರತದ ಮೊದಲ ವೇದಾಂತ ಅಂತರ್ರಾಷ್ಟ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲು ಅಗರ್ವಾಲ್ ಪ್ರತಿಷ್ಠಾನ ಮತ್ತು ಒರಿಸ್ಸಾ ಸರ್ಕಾರ ಭುವನೇಶ್ವರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. 8000 ಎಕರೆ ವಿಸ್ತೀರ್ಣದಲ್ಲಿ 15,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ವಿಶ್ವವಿದ್ಯಾಲಯ ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಿದೆ.

2006: ಸರ್ಕಾರಿ ಸೇವೆಯಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗಗಳು) ಮೀಸಲು ಸೌಲಭ್ಯಕ್ಕೆ ಸಂಬಂಧಿಸಿದಂತೆ `ಕೆನೆಪದರ' ಪಟ್ಟಿಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಈ ಪಟ್ಟಿಯಲ್ಲಿ ಇರುವವರ ಮಕ್ಕಳು ಮೀಸಲು ಸೌಲಭ್ಯಕ್ಕೆ ಅರ್ಹರಲ್ಲ ಎಂದು ಪ್ರಕಟಿಸಿತು.

1993: ಹಿರಿಯ ಪತ್ರಕರ್ತ ಗಿರಿಲಾಲ್ ಜೈನ್ ನಿಧನ.

1969: ದೇಶದ 14 ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣ ಮಾಡಿತು.

1965: ಜ್ಯೋತಿ ಗುರುಪ್ರಸಾದ್ ಜನನ.

1954: ಕೆ.ಎಂ. ವಿಜಯಲಕ್ಷ್ಮಿ ಜನನ.

1945: ರೂಪ ಕುಲಕರ್ಣಿ ಜನನ.

1938: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜಯಂತ ವಿಷ್ಣು ನಾರಳೀಕರ್ ಜನನ.

1920: ಕಾದಂಬರಿಕಾರ, ಕಥೆ, ನಾಟಕಕಾರ ತ್ರಿವಿಕ್ರಮ (19-7-1920ರಿಂದ 9-1-1998ರವರೆಗೆ) ಅವರು ಕೆ.ಎಸ್. ಕೃಷ್ಣಮೂರ್ತಿ- ಜಯಲಕ್ಷ್ಮಮ್ಮ ದಂಪತಿಯ ಮಗನಾಗಿ ತುಮಕೂರಿನಲ್ಲಿ ಜನಿಸಿದರು.

No comments:

Post a Comment