ನಾನು ಮೆಚ್ಚಿದ ವಾಟ್ಸಪ್

Wednesday, July 18, 2018

ಇಂದಿನ ಇತಿಹಾಸ History Today ಜುಲೈ 18

ಇಂದಿನ ಇತಿಹಾಸ History Today ಜುಲೈ 18

2018: ನವದೆಹಲಿ: ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳ ಅಧಿಕೃತ ಕಾರುಗಳು/ ವಾಹನಗಳು ಕೂಡ ರಿಜಿಸ್ಟ್ರೇಶನ್ ನಂಬರನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ದೆಹಲಿ ಹೈಕೋರ್ಟ್ ಆಜ್ಞಾಪಿಸಿತು. ದೇಶದ ಉನ್ನತ ಸಾಂವಿಧಾನಿಕ ಅಧಿಕಾರಿಗಳಾಗಿರುವ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳು ಬಳಸುವ ಅಧಿಕೃತ ಕಾರುಗಳನ್ನು ಕೂಡ ಸಂಬಂಧಪಟ್ಟ ಪ್ರಾಧಿಕಾರಗಳಲ್ಲಿ ನೋಂದಾಯಿಸಿ ಕಡ್ಡಾಯವಾಗಿ ರಿಜಿಸ್ಟ್ರೇಶನ್ ನಂಬರ್ ಅಳವಡಿಸಿರಬೇಕು ಎಂದು ದೆಹಲಿ ಹೈಕೋರ್ಟ್ ನಿರ್ದೇಶಿಸಿತು.  ಈ ಎಲ್ಲ ಉನ್ನತ ಅಧಿಕಾರಿಗಳ ಅಧಿಕೃತ ಕಾರುಗಳ ರಿಜಿಸ್ಟ್ರೇಶನ್ ನಂಬರುಗಳನ್ನು ಅವರ ವಾಹನಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಕೋರ್ಟ್ ಹೇಳಿತು.  ದೇಶದ ಉನ್ನತ ಸಾಂವಿಧಾನಿಕ ಅಧಿಕಾರಿಗಳು ಬಳಸುವ ಕಾರುಗಳಲ್ಲಿ ಸರ್ಕಾರದ ಲಾಂಛನ ಮಾತ್ರವೇ ಇರುತ್ತದೆ. ರಿಜಿಸ್ಟ್ರೇಶನ್ ನಂಬರ್ ಇರುವುದಿಲ್ಲ. ಆದುದರಿಂದ ಈ ವಾಹನಗಳು ಉನ್ನತ ಸಾಂವಿಧಾನಿಕ ಅಧಿಕಾರಿಗಳ ಕಾರುಗಳೆಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೀಗಾಗಿ ಇಂತಹ ವಾಹನಗಳು ಭಯೋತ್ಪಾದಕರ ಅಥವಾ ಯಾವುದೇ ದುರುದ್ದೇಶ ಹೊಂದಿರುವ ವ್ಯಕ್ತಿಗಳ ದುಷ್ಕೃತ್ಯಗಳಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ; ಆದುದರಿಂದ ಈ ವಾಹನಗಳಿಗೂ ಇತರ ಎಲ್ಲ ವಾಹನಗಳಂತೆ ರಿಜಿಸ್ಟ್ರೇಶನ್ ನಂಬರ್ ಅಳವಡಿಸುವುದು ಅಗತ್ಯ ಎಂದು ’ನ್ಯಾಯಭೂಮಿ ಎಂಬ ಸರ್ಕಾರೇತರ ಸೇವಾ ಸಂಘಟನೆಯೊಂದು ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು.  ಅರ್ಜಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀಡಿದ್ದ ಮಾಹಿತಿಯನ್ನು ಉಲ್ಲೇಖಿಸಿ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ಸಲ್ಲಿಸಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀಡಿದ್ದ ಮಾಹಿತಿಯ ಪ್ರಕಾರ ತನ್ನ ಪ್ರೋಟೋಕಾಲ್ ವಿಭಾಗವು ನಿರ್ವಹಿಸುತ್ತಿರುವ ೧೪ ಕಾರುಗಳಲ್ಲಿ ಯಾವುದೇ ಕಾರನ್ನೂ ರಿಜಿಸ್ಟ್ರೇಶನ್ ಮಾಡಿಲ್ಲ ಎಂದು ತಿಳಿಸಲಾಗಿತ್ತು.  ರಾಷ್ಟ್ರದ ಭದ್ರತೆ ಮತ್ತು ರಾಷ್ಟ್ರಪತಿಯವರ ಭೌತಿಕ ಭದ್ರತೆಗೆ ಅಪಾಯವಾಗಬಹುದಾದ ಕಾರಣ ತನ್ನ ಬಳಿ ಇರುವ ಕಾರುಗಳ ರಿಜಿಸ್ಟ್ರೇಷನ್ ನಂಬರುಗಳನ್ನು ಒದಗಿಸಲು ರಾಷ್ಟ್ರಪತಿ ಭವನವು ನಿರಾಕರಿಸಿದೆ ಎಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಮಾಹಿತಿ ತಿಳಿಸಿತ್ತು.  ‘ಮಾತೃಭೂಮಿಯ ಅರ್ಜಿಯನ್ನು ಪುರಸ್ಕರಿಸಿದ ದೆಹಲಿ ಹೈಕೋರ್ಟ್ ಉನ್ನತ ಸಾಂವಿಧಾನಿಕ ಅಧಿಕಾರಿಗಳ ಕಾರುಗಳಿಗೂ ರಿಜಿಸ್ಟ್ರೇಷನ್ ನಂಬರ್ ಕಡ್ಡಾಯಗೊಳಿಸಿ ಆದೇಶ ನೀಡಿತು.

2018: ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತನ್ನ ವಿರುದ್ಧದ ಮೊತ್ತ ಮೊದಲ ಅವಿಶ್ವಾಸ ನಿರ್ಣಯವನ್ನು ಲೋಕಸಭೆಯಲ್ಲಿ ತನ್ನ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಎದುರಿಸಲಿದೆ. ಜುಲೈ ೨೦ರ ಶುಕ್ರವಾರ ಸದನವು ತೆಲುಗುದೇಶಂ ಪಕ್ಷವು (ಟಿಡಿಪಿ) ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ಎತ್ತಿಕೊಳ್ಳಲಿದೆ.  ‘ಸದನವು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಶುಕ್ರವಾರ, ಜುಲೈ ೨೦ರಂದು ಎತ್ತಿಕೊಳ್ಳಲಿದೆ. ಇಡೀ ದಿನ ನಿರ್ಣಯದ ಮೇಲೆ ಚರ್ಚೆ ನಡೆಯಲಿದ್ದು ಬಳಿಕ ನಿರ್ಣಯವನ್ನು ಮತಕ್ಕೆ ಹಾಕಲಾಗುವುದು ಎಂದು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಭೋಜನ ವಿರಾಮದ ಬಳಿಕ ಲೋಕಸಭೆಯು ಮರುಸಮಾವೇಶಗೊಂಡಾಗ ಪ್ರಕಟಿಸಿದರು.  ಆ ದಿನ ಪ್ರಶ್ನೋತ್ತರ ವೇಳೆಯಾಗಲೀ, ಇತರ ಯಾವುದೇ ಕಲಾಪಗಳಾಗಲೀ ಇರುವುದಿಲ್ಲ. ಅವಿಶ್ವಾಸ ನಿರ್ಣಯದ ಮೇಲೆ ಮಾತ್ರವೇ ಚರ್ಚೆ ನಡೆಯುವುದು ಎಂದು ಅವರು ಹೇಳಿದರು.  ಇದಕ್ಕೆ ಮುನ್ನ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಲು ಒಪ್ಪಿಗೆ ನೀಡಿದ್ದ ಲೋಕಸಭಾಧ್ಯಕ್ಷರು ೨-೩ ದಿನಗಳಲ್ಲಿ ನಿರ್ಣಯದ ಮೇಲಿನ ಚರ್ಚೆಯ ದಿನಾಂಕ ಪ್ರಕಟಿಸುವುದಾಗಿ ಹೇಳಿದ್ದರು.  ತೆಲುಗುದೇಶಂ ಪಕ್ಷದ (ಟಿಡಿಪಿ) ಸಂಸತ್ ಸದಸ್ಯ ಕೇಸಿನೇನಿ ಶ್ರೀನಿವಾಸ್ ಅವರು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ವಿರೋಧ ಪಕ್ಷಗಳ ೫೦ಕ್ಕೂ ಹೆಚ್ಚು ಸದಸ್ಯರು ಬೆಂಬಲಿಸಿರುವ ಹಿನ್ನೆಲೆಯಲ್ಲಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಅಂಗೀಕರಿಸಿದರು. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ  ತೆಲುಗುದೇಶಂ ಪಕ್ಷವು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಸುಮಿತ್ರಾ ಮಹಾಜನ್ ಅವರು ಅದನ್ನು ಅಂಗೀಕರಿಸಿದರು.  ಮಾಜಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕೆಳಮನೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಒತ್ತಾಯಿಸಿತು. ಮುಂದಿನ ವರ್ಷ ನಡೆಯಲಿರುವ ಮಹಾಚುನಾವಣೆಗೆ ಮುನ್ನ ವಿರೋಧ ಪಕ್ಷಗಳ ಏಕತೆಗೆ ಈ ಅವಿಶ್ವಾಸ ನಿರ್ಣಯವು ಪರೀಕ್ಷೆಯಾಗಲಿದೆ.  ನಿರ್ಣಯದ ಮೇಲಿನ ಚರ್ಚೆಗೆ ೨-೩ ದಿನಗಳಲ್ಲಿ ದಿನಾಂಕ ಮತ್ತು ಸಮಯ ನಿಗದಿ ಪಡಿಸುವುದಾಗಿ ಮಹಾಜನ್ ಹೇಳಿದರು.  ಈ ವರ್ಷದ ಆದಿಯಲ್ಲಿ ಆಡಳಿತಾರೂಢ ಎನ್ ಡಿಎಯಿಂದ ಹೊರ ಬಂದಿರುವ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸುತ್ತಿದೆ.  ಆಳುವ ಎನ್ ಡಿಎ ಸರ್ಕಾರದ ವಿರುದ್ಧ ತೆಲುಗುದೇಶಂ ಪಕ್ಷವು ಇದೇ ಮಾದರಿಯ ಅವಿಶ್ವಾಸ ನಿರ್ಣಯವನ್ನು ಮುಂಗಡಪತ್ರ ಅಧಿವೇಶನದ ಕಾಲದಲ್ಲಿಯೂ ಮಂಡಿಸಿತ್ತು. ಆದರೆ ಕೋಲಾಹಲದ ಮಧ್ಯೆ ಅಧಿವೇಶನದ ಉದ್ದಕ್ಕೂ ಕಲಾಪಗಳು ಸ್ಥಗಿತಗೊಂಡ ಕಾರಣ ತೆಲುಗುದೇಶಂ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ಎತ್ತಿಕೊಳ್ಳಲು ಆಗಿರಲಿಲ್ಲ.  ಪ್ರಸ್ತುತ ೫೩೫ ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ೨೭೩ ಸಂಸತ್ ಸದಸ್ಯರನ್ನು ಹೊಂದಿದ್ದು ತನ್ನ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸ್ಪಷ್ಟ ಬಹುಮತವನ್ನು ಹೊಂದಿದೆ.  ಏಳು ಪಕ್ಷಗಳ ಸಂಸತ್ ಸದಸ್ಯರು ಮಂಗಳವಾರ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ ಪತ್ರ ಬರೆದು ಬಿಜೆಪಿಯು ಕಳೆದ ಸಂಸದೀಯ ಅಧಿವೇಶನ ಕಾಲದಲ್ಲಿ ಸಾಂವಿಧಾನಿಕ ಮಿತಿಗಳನ್ನು ಉಲ್ಲಂಘಿಸಿತ್ತು ಎಂದು ಆಪಾದಿಸಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿತ್ತು.  ಪತ್ರಕ್ಕೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ, ಸಿಪಿಐ (ಎಂ) ನಾಯಕ ಮೊಹಮ್ಮದ್ ಸಲೀಂ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಎನ್ ಸಿಪಿಯ ತಾರಿಖ್ ಅನ್ವರ್, ಆರ್ ಜೆಡಿಯ ಜೇ ಪ್ರಕಾಶ್ ನಾರಾಯಣ್ ಯಾದವ್, ಸಿಪಿಐಯ ಸಿ.ಎನ್. ಜಯದೇವನ್, ಕೇರಳ ಮೂಲದ ಐಯುಎಂಎಲ್ ನ ಪಿ.ಕೆ. ಕುನ್ಹಾಲಿಕುಟ್ಟಿ ಮತ್ತು ಆಪ್ (ಎಎಪಿ) ನಾಯಕ ಭಗವಂತ ಮಾನ್ ಸಹಿ ಹಾಕಿದ್ದರು.  ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಕಳೆದ ವಾರ ವಿರೋಧ ಪಕ್ಷಗಳಿಗೆ ಪತ್ರ ಬರೆದು ಸಂಸತ್ ಕಲಾಪಗಳು ನಿರಂತರವಾಗಿ ಅಸ್ತವ್ಯಸ್ತಗೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದರು. ಮತ್ತು ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ, ಸಂಸತ್ತಿನ ಘನತೆಗೆ ಚ್ಯುತಿ ಉಂಟಾಗದಂತೆ ಖಾತರಿ ನೀಡುವಂತೆಯೂ ಸೂಚಿಸಿದ್ದರು.  ಇದಕ್ಕೆ ಪ್ರತಿಯಾಗಿ ಬರೆದ ತಮ್ಮ ಪತ್ರದಲ್ಲಿ ವಿರೋಧ ಪಕ್ಷಗಳು ಬಿಜೆಪಿಯು ಹಿಂದಿನ ಲೋಕಸಭಾ ಅಧಿವೇಶನದ ವೇಳೆಯಲ್ಲಿ ಹಲವಾರು ಮಹತ್ವದ ಮಸೂದೆಗಳ ಮೇಲೆ ಚರ್ಚೆಗೆ ಅವಕಾಶ ನೀಡದೆ ಕಲಾಪದ ಮೇಲೆ ಸವಾರಿ ಮಾಡಿತು. ಮತ್ತು ಈ ಮಸೂದೆಗಳಿಗೆ ’ಹಣಕಾಸು ಮಸೂದೆಗಳು ಎಂಬ ಸರ್ಟಿಫಿಕೇಟ್ ನೀಡಿ ಇವುಗಳನ್ನು ವಸ್ತುಶಃ ’ಏಕ ಸದನ ಮಸೂದೆಗಳನ್ನಾಗಿ ಪರಿವರ್ತಿಸುವ ಮೂಲಕ ಸಂವಿಧಾನವು ಖಾತರಿ ನೀಡಿದ ಹಕ್ಕುಗಳನ್ನು ಮೂಲೆಗುಂಪು ಮಾಡಿತು ಎಂದು ಆಪಾದಿಸಿದ್ದವು.   ಸಂಸತ್‌ನ ಮುಂಗಾರು ಅಧಿವೇಶನ ಈದಿನ ಆರಂಭವಾಗುತ್ತಿದ್ದಂತೆಯೇ ತೆಲುಗುದೇಶಂ  ಆಂಧ್ರಕ್ಕೆ ವಿಶೇಷ ಸಂಸತ್ ಸದಸ್ಯರು ಆಂಧ್ರಪ್ರದೇಶದಕ್ಕೆ ವಿಶೇಷ ಸ್ಥಾನ ಮಾನ ನೀಡುವಂತೆ ಆಗ್ರಹಿಸಿ ತೀವ್ರ ಗದ್ದಲ ಉಂಟುಮಾಡಿದರು.  ಸರ್ಕಾರ ರೈತರ ನಿರಂತರ ಆತ್ಮಹತ್ಯೆಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಗಳನ್ನು  ತಡೆಯುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ದೂರಿದರು. ಸಮಾಜವಾದಿ ಪಕ್ಷದ ಸದಸ್ಯರು ಗುಂಪು ಹತ್ಯೆ ಮತ್ತು ಹಿಂಸಾಚಾರಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ರಾಜ್ಯ ಸಭಾ ಕಲಾಪದಲ್ಲಿ ತೀವ್ರ ಗದ್ದಲ ಕಂಡು ಬಂದ ಹಿನ್ನಲೆಯಲ್ಲಿ ಕಲಾಪವನ್ನು ಮಧ್ಯಾಹ್ನ ೧೨ ಗಂಟೆಯವರೆ ಮುಂದೂಡಲಾಯಿತು.  ಸಹಕಾರಕ್ಕೆ ಪ್ರಧಾನಿ ಮನವಿ:  ಅಧಿವೇಶನಕ್ಕೂ ಮುನ್ನ ಸಂಸತ್ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ’ಎಲ್ಲಾ ಪಕ್ಷಗಳ ಸದಸ್ಯರು ಸಂಸತ್ತಿನ  ಅಮೂಲ್ಯವಾದ ಸಮಯವನ್ನು ಪರಸ್ಪರ ಸಹಕಾರದ ಮೂಲಕ ಸದುಪಯೋಗ ಪಡಿಸಿಕೊಳ್ಳುವ ವಿಶ್ವಾಸವಿದೆ. ಸರ್ಕಾರ ಎಲ್ಲಾ ವಿಚಾರಗಳ ಕುರಿತಾಗಿ ಚರ್ಚೆಗೆ ಸಿದ್ಧವಿದೆ. ನಾವು ನಮ್ಮ  ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ರಾಜ್ಯಗಳ ವಿಧಾನ ಸಭೆಗಳಿಗೆ ಹೆಚ್ಚಿನ ಸ್ಫೂರ್ತಿಯನ್ನು ತುಂಬಬೇಕಾಗಿದೆ ಎಂದು ಮನವಿ ಮಾಡಿದರು.

2018: ನವದೆಹಲಿ: ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ರಾಷ್ಟ್ರದ ರಾಜಧಾನಿಯ ಆಡಳಿತಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನೀಡಿದ ತೀರ್ಪಿನ ಹೊರತಾಗಿಯೂ ತನ್ನ ಕಾರ್ಯ ನಿರ್ವಹಣೆ ಸಂಪೂರ್ಣವಾಗಿ ಊನಗೊಂಡಿದೆ ಎಂದು ದೆಹಲಿ ಸರ್ಕಾರವು ಸುಪ್ರೀಂಕೋರ್ಟಿಗೆ ಅರಿಕೆ ಮಾಡಿಕೊಂಡಿತು.  ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ನವೀನ್ ಸಿನ್ಹ ಅವರನ್ನು ಒಳಗೊಂಡ ಪೀಠವು ದೆಹಲಿ ಸರ್ಕಾರದ ಅಹವಾಲನ್ನು ಆಲಿಸಿತು.  ತನಗೆ ಎಲ್ಲವೂ ಗೊತ್ತಿದೆ. ವಿಷಯವನ್ನು ಜುಲೈ ೨೬ರಂದು ಸ್ಥಾಯಿ ಪೀಠವು ವಿಚಾರಣೆ ನಡೆಸಲಿದೆ ಎಂದು ನ್ಯಾಯಾಲಯ ಹೇಳಿತು.  ‘ಸರ್ಕಾರದ ಕಾರ್‍ಯ ನಿರ್ವಹಣೆ ಸಂಪೂರ್ಣವಾಗಿ ಊನಗೊಂಡಿದೆ. ಪ್ರತಿಯೊಂದು ಅಂಶವನ್ನೂ ವಿವರಿಸಿದ ಸಂವಿಧಾನ ಪೀಠದ ಇತ್ತೀಚಿನ ತೀರ್ಪಿನ ಹೊರತಾಗಿಯೂ ನಾವು ಅಧಿಕಾರಿಗಳನ್ನು ನಿಯೋಜಿಸುವಂತಿಲ್ಲ, ವರ್ಗಾವಣೆ ಮಾಡುವಂತಿಲ್ಲ. ಈ ವಿಷಯಗಳನ್ನು ಆದಷ್ಟೂ ಶೀಘ್ರ ಇತ್ಯರ್ಥ ಪಡಿಸಬೇಕಾದ ಅಗತ್ಯವಿದೆ ಎಂದು ದೆಹಲಿ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಪಿ. ಚಿದಂಬರಂ ಪ್ರತಿಪಾದಿಸಿದರು.  ದೆಹಲಿ ಸರ್ಕಾರದ ಪರವಾಗಿ ಹಾಜರಾದ ಇನ್ನೊಬ್ಬ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ’ಅಧಿಕಾರಿಗಳು ಪ್ರಮಾಣ ಪತ್ರ ಸಲ್ಲಿಸಲೂ ಇಚ್ಛಿಸುತ್ತಿಲ್ಲ. ಹೀಗಾಗಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರೇ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದರು.  ‘ನಾನು ಪರಿಸ್ಥಿತಿಯನ್ನು ಸ್ಪಷ್ಟ ಪಡಿಸಲಷ್ಟೇ ಬಯಸಿದ್ದೇನೆ ಎಂದು ಜೈಸಿಂಗ್ ನುಡಿದರು.  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ರಾಷ್ಟ್ರದ ರಾಜಧಾನಿಯಲ್ಲಿನ ಆಡಳಿತದ ವಿಶಾಲ ಮಾನದಂಡಗಳನ್ನು ತನ್ನ ತೀರ್ಪಿನಲ್ಲಿ ನೀಡಿತ್ತು.  ೨೦೧೪ರಲ್ಲಿ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಕೇಂದ್ರ ಮತ್ತು ದೆಹಲಿ ಸರ್ಕಾರದ ಮಧ್ಯೆ ಅಧಿಕಾರದ ಜಟಾಪಟಿ ನಡೆಯುತ್ತಿದೆ.  ದೆಹಲಿ ಸರ್ಕಾರವು ತನ್ನ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಅಧಿಕಾರಗಳನ್ನು ಚಲಾಯಿಸಿ ನೀಡಿದ ವಿವಿಧ ಅಧಿಸೂಚನೆಗಳ ವಿಚಾರದಲ್ಲಿ ಸೂಕ್ತವಾದ ಕಿರಿಯ ಪೀಠವು ವ್ಯವಹರಿಸಲಿದೆ ಎಂದು ಸಂವಿಧಾನ ಪೀಠವು ತನ್ನ ತೀರ್ಪಿನಲ್ಲಿ ಸ್ಪಷ್ಟ ಪಡಿಸಿತ್ತು.

2018: ಶಿಮ್ಲಾ :  ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಗ್ರಾಮವೊಂದರಲ್ಲಿ ಮಿಗ್ -೧ ಸಮರ ವಿಮಾನವೊಂದು ಪತನಗೊಂಡು,  ವಿಮಾನದ ಪೈಲಟ್ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿತು. ಸಮರ ವಿಮಾನವು ಜವಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆಹ್ರಾ ಪಲ್ಲಿ ಗ್ರಾಮದಲ್ಲಿ ಪತನಗೊಂಡಿದೆ ಎಂದು ಕಾಂಗ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಂತೋಷ ಪಾಟಿಯಾಲ್ ಹೇಳಿದರು. ತಾವು ಮತ್ತು ಇತರ ಅಧಿಕಾರಿಗಳು ದುರಂತ ಸ್ಥಳದತ್ತ ಸಾಗುತ್ತಿರುವುದಾಗಿ ಅವರು ನುಡಿದರು.  ವಿಮಾನವು ಪಂಜಾಬಿನ ಪಠಾಣ್ ಕೋಟ್ ವಾಯುನೆಲೆಯಿಂದ ಗಗನಕ್ಕೆ ಏರಿತ್ತು ಎಂದು ಅಧಿಕಾರಿಗಳು ನುಡಿದರು. ವಿಮಾನವು ತನ್ನ ದೈನಂದಿನ ಹಾರಾಟದಲ್ಲಿ ನಿರತವಾಗಿದ್ದಾಗ ಈ ದುರಂತ ಸಂಭವಿಸಿತು.  ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ತನಿಖೆಗೆ ಆಜ್ಞಾಪಿಸಲಾಯಿತು. ಎರಡು ತಿಂಗಳ  ಅವಧಿಯಲ್ಲಿ ಸಂಭವಿಸಿದ ಎರಡನೇ ಭಾರತೀಯ ವಾಯುಪಡೆ ಯುದ್ಧ ವಿಮಾನ ಪತನದ ಘಟನೆ ಇದು. ಜೂನ್ ತಿಂಗಳಲ್ಲಿ ಭಾರತೀಯ ವಾಯುಪಡೆಯ ಜಾಗ್ವಾರ್ ಫೈಟರ್-ಬಾಂಬರ್ ಗುಜರಾತಿನ ಕಚ್‌ನಲ್ಲಿ ಬಾನಿಗೇರಿದ ಬೆನ್ನಲ್ಲೇ ಪತನಗೊಂಡು ಪೈಲಟ್ ಹಿರಿಯ ಏರ್ ಕಮಾಂಡರ್ ಅಸು ನೀಗಿದ್ದರು.  ಇದಕ್ಕೆ ಮುನ್ನ ಜನವರಿಯಲ್ಲಿ ಭಾರತೀಯ ನೌಕಾಪಡೆಯ ಮಿಗ್ ೨೯ ಕೆ ಯುದ್ಧ ವಿಮಾನವು ಗೋವಾ ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ಹೊರಕ್ಕೆ ಚಲಿಸಿದಾಗ ಬೆಂಕಿ ಹೊತ್ತಿಕೊಂಡಿತ್ತು. ತರಬೇತಿ ಪಡೆಯುತ್ತಿದ್ದ ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದರು. ವಿಮಾನ ಐಎನ್ ಎಸ್ ಹಂಸ ನೆಲೆಯೊಳಗೆ ಹಾರಲು ಯತ್ನಿಸುತ್ತಿದ್ದಾಗ ಅಪ್ಪಳಿಸಿತ್ತು. ನಾಲ್ಕು ವರ್ಷಗಳ ಹಿಂದೆ ಸಿ-೧೩೦ಜೆ ಸೂಪರ್ ಹರ್ಕ್ಯೂಲಿಸ್ ವಿಶೇಷ ಕಾರ್‍ಯಾಚರಣೆಗಳ ಸಾರಿಗೆ ವಿಮಾನವು ತರಬೇತಿ ಕಾಲದಲ್ಲಿ ನೆಲಕ್ಕೆ ಅಪ್ಪಳಿಸ ಅದರಲ್ಲಿದ್ದ ಐವರು ಅಸು ನೀಗಿದ್ದರು.  ಅದೇ ವರ್ಷ ಜಾಗ್ವಾರ್ ಯುದ್ಧ ವಿಮಾನವೊಂದು ರಾಜಸ್ಥಾನದ ಬಿಕನೇರ್ ಜಿಲ್ಲೆಯ ಭೊಲಸಾರ್ ಗ್ರಾಮದ ಬಳಿ ನೆಲಕ್ಕೆ ಅಪ್ಪಳಿಸಿತ್ತು. ಅದೃಷ್ಟವಶಾತ್ ಪೈಲಟ್ ಮತ್ತು ಸಹ ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಕ್ಕೆ ನೆಗೆದಿದ್ದರು. ಬಿಕನೇರ್ ನ ಎನ್‌ಎ ಎಲ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ತಾಂತ್ರಿಕ ಅಡಚಣೆಗಳು ಕಾಣಿಸಿಕೊಂಡದ್ದನ್ನು ಅನುಸರಿಸಿ ಇಬ್ಬರು ಹೊರಕ್ಕೆ ನೆಗೆದಿದ್ದರು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿದ್ದವು.

2018: ನವದೆಹಲಿ: ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ವಾಯುಪಡೆ ಮುಖ್ಯಸ್ಥ ಎಸ್ ಪಿ ತ್ಯಾಗಿ ಮತ್ತು ಅವರ ಇಬ್ಬರು ಸಹೋದರ ಸಂಬಂಧಿಗಳು, ವಕೀಲ ಗೌತಮ್ ಖೇತಾನ್, ಇಟಲಿಯ ಇಬ್ಬರು ಮಧ್ಯವರ್ತಿಗಳು ಮತ್ತು ಫಿನ್ ಮೆಕಾನಿಕಾ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯವು ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು.  ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರ ಮುಂದೆ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು ಜುಲೈ ೨೦ರಂದು ಅದನ್ನು ಪರಿಗಣನೆಗೆ ಎತ್ತಿಕೊಳ್ಳಲಾಗುವುದು.  ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಎನ್.ಕೆ. ಮಟ್ಟ ಅವರ ಮೂಲಕ ದೋಪಾರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಅದರಲ್ಲಿ ಎಸ್.ಪಿ. ತ್ಯಾಗಿ ಸೇರಿದಂತೆ ತ್ಯಾಗಿ ಸಹೋದರರು, ಖೇತಾನ್, ಇಟಾಲಿಯನ್ ಮಧ್ಯವರ್ತಿಗಳಾದ ಕಾರ್ಲೊ ಗೆರೋಸಾ ಮತ್ತು ಗೈಡೊ ಹಶ್ಚಕೆ  ಮತ್ತು ಆಗಸ್ಟಾ ವೆಸ್ಟ್ ಲ್ಯಾಂಡಿನ ಪಾಲಕ ಕಂಪೆನಿಯಾದ ಫಿನ್ನೆಮೆಕಾನಿಕಾ ಕಂಪೆನಿಯನ್ನು ಆರೋಪಿಗಳು ಎಂಬುದಾಗಿ ಹೆಸರಿಸಲಾಯಿತು. ಸುಮಾರು ೨೮೦ ಲಕ್ಷ ಯೂರೋ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರ ವಿರುದ್ಧ ದೋಷಾರೋ ಹೊರಿಸಲಾಯಿತು. ವಿವಿಧ ವಿದೇಶೀ ಕಂಪೆನಿಗಳ ಮೂಲಕವಾಗಿ ಹಣ ವರ್ಗಾವಣೆ ಮಾಡಲಾಗಿದ್ದು, ಇದನ್ನು ಲಂಚ ನೀಡಿಕೆಗೆ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯವು ತನ್ನ ದೋಷಾರೊಪ ಪಟ್ಟಿಯಲ್ಲಿ ಆಪಾದಿಸಿತು. ೩,೬೦೦ ಕೋಟಿ ರೂಪಾಯಿ ಮೌಲ್ಯದ ವಿವಿಐಪಿ ಹೆಲಿಕಾಪ್ಟರ್ ವ್ಯವಹಾರದಲ್ಲಿ ನಡೆದ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.  ೨೦೧೪ರ ಜನವರಿ ೧ರಂದು ಭಾರತವು ಬ್ರಿಟಿಷ್ ಫಿನ್ನೆಮೆಕಾನಿಯಾದ ಆಧೀನ ಸಂಸ್ಥೆಯಾದ ಆಗಸ್ಟಾ ವೆಸ್ಟಲ್ಯಾಂಡ್ ಜೊತೆಗೆ ೧೨ ಎ ಡಬ್ಲ್ಯೂ -೧೦೧ ವಿವಿಐಪಿ ಹೆಲಿಕಾಪ್ಟರ್ ಖರೀದಿ ಸಂಬಂಧ ಮಾಡಿಕೊಳ್ಳಲಾಗಿದ್ದ ಗುತ್ತಿಗೆಯನ್ನು ರದ್ದು ಪಡಿಸಿತ್ತು. ಒಪ್ಪಂದ ಬದ್ಧತೆಗಳ ಉಲ್ಲಂಘನೆ ಮತ್ತು ವ್ಯವಹಾರ ಕುದುರಿಸಲು ೪೨೩ ಕೋಟಿ ರೂಪಾಯಿಗಳ ಲಂಚ ಪಾವತಿ ಆರೋಪದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಕ್ರಮ ಕೈಗೊಂಡಿತ್ತು.

2018: ನವದೆಹಲಿ: ಸಂವಿಧಾನದಲ್ಲಿ ತಿಳಿಸಿರುವಂತೆ ಮಹಿಳೆಯರ ಪ್ರಾರ್ಥನೆಯ ಹಕ್ಕು ಪುರುಷರ ಪ್ರಾರ್ಥನೆಯ ಹಕ್ಕಿಗೆ ಸರಿಸಮ, ಯಾವುದೇ ಕಾನೂನನ್ನೂ ಇದಕ್ಕೆ ವಿರುದ್ಧವಾಗಿ ರಚಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.  ಜೈವಿಕ ಕಾರಣಗಳ ನೆಲೆಯಲ್ಲಿ ಕೇರಳದ ಶಬರಿಮಲೈಯಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ಕಾಲದಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತ ಪಡಿಸಿತು.  ‘ಯಾವ ಆಧಾರದಲ್ಲಿ ನೀವು (ದೇಗುಲ ಅಧಿಕಾರಿಗಳು) ಪ್ರವೇಶ ನಿರಾಕರಿಸುತ್ತೀರಿ? ಅದು ಸಾಂವಿಧಾನಿಕ ಆದೇಶಕ್ಕೆ ವಿರುದ್ಧ. ಒಮ್ಮೆ ನೀವು ಸಾರ್ವಜನಿಕರಿಗೆ ತೆರೆದಿರಿ ಎಂದಾದರೆ, ಯಾರು ಬೇಕಾದರೂ ಅಲ್ಲಿಗೆ ಹೋಗಬಹುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಹೇಳಿದರು.  ದೇವಾಲಯವೊಂದು ಪುರುಷರಿಗೆ ಪ್ರವೇಶವನ್ನು ಮುಕ್ತಗೊಳಿಸಿದರೆ, ಅದು ಮಹಿಳೆಯರಿಗೂ ಪ್ರವೇಶಕ್ಕೆ ಮುಕ್ತವಾಗಿರಬೇಕು. ಖಾಸಗಿ ದೇವಾಲಯ ಎಂಬ ಪರಿಕಲ್ಪನೆ ಇಲ್ಲ. ದೇವಾಲಯ ಒಂದು ಇದೆ ಎಂದಾದರೆ ಅದು  ಸಾರ್ವಜನಿಕ ಪ್ರದೇಶ ಮತ್ತು ಪ್ರತಿಯೊಬ್ಬರೂ ಅಲ್ಲಿಗೆ ಹೋಗಬಹುದು. ಅಲ್ಲಿಗೆ ಪುರುಷರು ಹೋಗಬಹುದಾದರೆ, ಮಹಿಳೆಯರೂ ಹೋಗಬಹುದು ಎಂದು ವಿಚಾರಣೆ ಕಾಲದಲ್ಲಿ ಅವರು ನುಡಿದರು.  ದೇವಾಲಯಗಳಿಗೆ ಸಂಬಂಧಪಟ್ಟ ರೀತಿ ನೀತಿಗಳು ಮತ್ತು ಪೂಜಾ ವಿಧಿ ವಿಧಾನಗಳನ್ನು ದೇವಾಲಯಗಳು ರೂಪಿಸುತ್ತವೆ ಮತ್ತು ಪೂಜಾ ಹಕ್ಕಿನ ಅಡಿಯಲ್ಲಿ ಅವು ಸಂರಕ್ಷಿತವಾಗಿವೆ ಎಂಬುದಾಗಿ ಕೇರಳ ಸರ್ಕಾರ ಮಂಡಿಸಿದ ವಾದವನ್ನು ಕೂಡಾ ಸಿಜೆಐ ವಿರೋಧಿಸಿದರು.   ‘ದೇವಸ್ಥಾನವು ಪಂಥೀಯ ಹಕ್ಕುಗಳನ್ನು ಪ್ರತಿಪಾದಿಸುವಂತಿಲ್ಲ.  ಪುರುಷರಿಗೆ ಸರಿಸಮವಾಗಿ ಪ್ರಾರ್ಥನೆ ಮಾಡುವ ಮಹಿಳೆಯರ ಹಕ್ಕು, ಶಾಸನವನ್ನು ಅವಲಂಬಿಸಿಲ್ಲ. ಅದು ಸಂವಿಧಾನದಲ್ಲಿ ಇದೆ. ಸಂವಿಧಾನದ ೨೫(೧) ಪರಿಚ್ಛೇದದಲ್ಲಿ ಅದು ಇದೆ. ಕಾನೂನು ಪ್ರತಿಯೊಬ್ಬರಿಗೂ ಸಮಾನ ಪ್ರಾರ್ಥನೆಯ ಹಕ್ಕನ್ನು ನೀಡುತ್ತದೆ ಎಂದು ಅವರು ನುಡಿದರು.  ಪಂಚ ಸದಸ್ಯ ಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ’ಪ್ರತಿಯೊಬ್ಬ ಮಹಿಳೆಯೂ ದೇವರ ಸೃಷ್ಟಿ. ಉದ್ಯೋಗ ಅಥವಾ ಪ್ರಾರ್ಥನೆಯಲ್ಲಿ ಅವರ ವಿರುದ್ಧ ತಾರತಮ್ಯ ಏಕಿರಬೇಕು?’ ಎಂದು ಪ್ರಶ್ನಿಸಿದರು.  ಸುಪ್ರೀಂಕೋರ್ಟ್ ಕಳೆದ ವರ್ಷ ಅಕ್ಟೋಬರಿನಲ್ಲಿ ಪ್ರಕರಣದ ವಿಚಾರಣೆ ಕಾಲದಲ್ಲಿ ನಾಲ್ಕು ಮಹತ್ವದ ಪ್ರಶ್ನೆಗಳ ಇತ್ಯರ್ಥಕ್ಕಾಗಿ ಸಂವಿಧಾನ ಪೀಠವನ್ನು ರಚಿಸಿತ್ತು. ಅವುಗಳಲ್ಲಿ ನಿಷೇಧವು ಮಹಿಳೆಯರ ವಿರುದ್ಧದ ತಾರತಮ್ಯ ಆಗುವುದೇ ಎಂಬುದು ಪ್ರಾಥಮಿಕ ಪ್ರಶ್ನೆಯಾಗಿತ್ತು.  ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿಗಳಾದ ರೊಹಿಂಟನ್ ಫಾಲಿ ನಾರಿಮನ್, ಎಎಂ ಖಾನ್ವಿಲ್ಕರ್ ಮತ್ತು ಇಂದು ಮೆಹ್ತಾ ಅವರೂ ಸದಸ್ಯರಾಗಿದ್ದಾರೆ. ಅರ್ಜಿದಾರನಾದ ಇಂಡಿಯನ್ ಯಂಗ್ ಲಾಯರ್‍ಸ್ ಅಸೋಸಿಯೇಶನ್, ಸ್ವಾಮಿ ಅಯ್ಯಪ್ಪ ದೇಗುಲಕ್ಕೆ  ಮಹಿಳೆಯರ ಪ್ರವೇಶವನ್ನು ನಿಷೇಧಿಸಿದ ೮೦೦ ವರ್ಷಗಳಷ್ಟು ಹಳೆಯದಾದ ಕ್ರಮವನ್ನು ಪ್ರಶ್ನಿಸಿತ್ತು.  ೧೦ರಿಂದ ೫೦ ವರ್ಷಗಳವರೆಗಿನ ಎಲ್ಲ ವಯೋಮಾನದ ಮಹಿಳಾ ಭಕ್ತರಿಗೂ ಪ್ರವೇಶದ ಖಾತರಿ ನೀಡುವಂತೆ ಕೇರಳ ಸರ್ಕಾರ, ತಿರುವಾಂಕೂರು ದೇವಸ್ವಂ ಮಂಡಳಿ, ಶಬರಿ ಮಲೈ ದೇಗುಲ ಮುಖ್ಯ ತಂತ್ರಿ (ಅರ್ಚಕ) ಮತ್ತು ಪಟ್ಟಣಂ ತಿಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನಿರ್ದೇಶನ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೋರಿತ್ತು. ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ರವಿ ಪ್ರಕಾಶ್ ಅವರು ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನಿರಾಕರಿಸುವುದು ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಿಧಿ ವಿಧಾನವಲ್ಲವಾದ್ದರಿಂದ ಅವರ ಬಗ್ಗೆ ತಾರತಮ್ಯ ಮಾಡುವುದು ಮತ್ತು ನಿಯಂತ್ರಣಗಳನ್ನು ವಿಧಿಸುವುದು ಧಾರ್ಮಿಕ ವ್ಯವಹಾರಗಳ ತಿರುಳು ಕೂಡಾ ಆಗುವುದಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.  ಕೇವಲ ಮಹಿಳೆಯರ ನೋಟದಿಂದ ಯಾರೇ ವ್ಯಕ್ತಿಯ ಬ್ರಹ್ಮಚರ್ಯೆ ಮೇಲೂ ಪರಿಣಾಮವಾಗುವುದಿಲ ಎಂದೂ ಗುಪ್ತ ಹೇಳಿದರು. 

2018: ಬ್ರಸ್ಸೆಲ್ಸ್: ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆಯನ್ನು ತನ್ನ ಸರ್ಚ್ ಎಂಜಿನ್ ಪ್ರಾಬಲ್ಯವನ್ನು ಬಲಪಡಿಸುವುದಕ್ಕೆ ಅಕ್ರಮವಾಗಿ ಬಳಕೆ ಮಾಡಿದ್ದಕ್ಕಾಗಿ ಗೂಗಲ್ ಮೇಲೆ ೪೩೪ ಕೋಟಿ ಯೂರೋ (೫೦೪ ಕೋಟಿ ಡಾಲರ್) ಮೊತ್ತದ ’ನಂಬಿಕೆ ದ್ರೋಹಿ ದಂಡವನ್ನು ತಾನು ವಿಧಿಸಿರುವುದಾಗಿ ಐರೋಪ್ಯ ಒಕ್ಕೂಟ (ಇಯು) ಪ್ರಕಟಿಸಿತು. ‘ಆಂಡ್ರಾಯಿಡನ್ನು ತನ್ನ ಸರ್ಚ್ ಎಂಜಿನ್ ಪ್ರಾಬಲ್ಯವನ್ನು ಬಲಪಡಿಸಲು ಗೂಗಲ್ ವಾಹನವಾಗಿ ಬಳಸಿಕೊಂಡಿದೆ ಎಂದು ಇಯು ಕಾಂಪಿಟೀಷನ್ ಕಮೀಷನರ್ ಮಾರ್ಗರೆಥ್ ವೆಸ್ಟಾಗರ್ ಹೇಳಿಕೆಯೊಂದರಲ್ಲಿ ತಿಳಿಸಿದರು.  ಗೂಗಲ್ ವರ್ತನೆಯು ಐರೋಪ್ಯ ಒಕ್ಕೂಟದ ನಂಬಿಕೆದ್ರೋಹಿ ನಿಯಮಗಳ ಅಡಿಯಲಿ ಅಕ್ರಮವಾಗಿದೆ ಎಂದು ಹೇಳಿಕೆ ತಿಳಿಸಿತು. ೨೦೧೭ರಲ್ಲಿ ಸಿಲಿಕಾನ್ ವ್ಯಾಲಿಯ ಟೈಟನ್ನ ಶಾಪಿಂಗ್ ಕಂಪ್ಯಾರಿಸನ್ ಸರ್ವೀಸನ್ನು ಬಳಸಿದ ಪ್ರಕರಣದಲಿ ಗೂಗಲ್ ಮೇಲೆ ಐರೋಪ್ಯ ಒಕ್ಕೂಟ ೨೪ ಕೋಟಿ ಯೂರೋ ನಂಬಿಕೆ ದ್ರೋಹಿ ದಂಡ ವಿಧಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಈ ಬಾರಿ ತನ್ನದೇ ದಾಖಲೆಯನ್ನು ಐರೋಪ್ಯ ಒಕ್ಕೂಟ ಮುರಿದಿದ್ದು, ಬಹುತೇಕ ದುಪ್ಪಟ್ಟು ದಂಡವನ್ನು ವಿಧಿಸಿತು. ಮೂರು ವರ್ಷಗಳ ತನಿಖೆಯ ಬಳಿಕ ವಿಧಿಸಲಾಗಿರುವ ಈ ದಂಡವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಐರೋಪ್ಯ ಸ್ಟೀಲ್ ಮತ್ತು ಅಲ್ಯೂ,ಮಿನಿಯಂ ರಫ್ತಿನ ಮೇಲೆ ಸುಂಕ ವಿಧಿಸಲು ಕೈಗೊಂಡ ನಿರ್ಧಾರದ ಹಿನ್ನೆಲೆಯಲ್ಲಿ ಬೆಳೆಯುತ್ತಿರುವ ಟ್ರಾನ್ಸ್ ಅಟ್ಲಾಂಟಿಕ್ ವಾಣಿಜ್ಯ ಸಮರದ ಪರಿಣಾಮ ಇರಬಹುದು ಎಂಬ ಭಯವೂ ವ್ಯಕ್ತವಾಯಿತು.  ಡ್ಯಾನಿಶ್‌ನ ಮಾಜಿ ಪ್ರಧಾನಿ ವೆಸ್ಟಾಗರ್ ಅವರು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಅವರಿಗೆ ಮುಂಚಿತವಾಗಿಯೇ ನಿರ್ಧಾರವನ್ನು ತಿಳಿಸುವ ಸಲುವಾಗಿ ಅವರ ಜೊತೆಗೆ  ಹಿಂದಿನ ರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದರು.


2017: ನವದೆಹಲಿ:  ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಉಪ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿದ್ದು ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡಿದ ಕಾರಣ ಕೇಂದ್ರ ಸಚಿವ ಸಂಪುಟದಲ್ಲಿ ಕೆಲವೊಂದು ಬದಲಾವಣೆ ಮಾಡಲಾಯಿತು. ಆ ಪ್ರಕಾರ ಜವುಳಿ ಸಚಿವೆ ಸ್ಮತಿ ಇರಾನಿ ಅವರಿಗೆ ಹೆಚ್ಚುವರಿ ಹೊಣೆಗಾರಿಕೆಯಾಗಿ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ವಹಿಸಿಕೊಡಲಾಯಿತು. ಗ್ರಾಮಾಭಿವೃದ್ಧಿ ಸಚಿವ ನರೇಂದ್ರ ತೋಮರ್‌ ಅವರಿಗೆ ಹೆಚ್ಚುವರಿಯಾಗಿ ನಗರಾಭಿವೃದ್ಧಿ ಖಾತೆಯನ್ನು ವಹಿಸಿಕೊಡಲಾಯಿತು. ಇದಕ್ಕೆ ಮುನ್ನ ಬೆಳಗ್ಗೆ ನಾಯ್ಡು ಅವರು ಹಿರಿಯ ಬಿಜೆಪಿ ನಾಯಕರಾದ ಮುರಳಿ ಮನೋಹರ ಜೋಷಿ ಮತ್ತು ಎಲ್‌ ಕೆ ಆಡ್ವಾಣಿ, ನರೇಂದ್ರ ಮೋದಿ, ಅಮಿತ್ ಷಾ ಅವರ ಜತೆಗೆ ಸಂಸತ್‌ ಭವನಕ್ಕೆ ಆಗಮಿಸಿ, ಉಪ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. 
2017: ಬೆಂಗಳೂರು: ರಾಜ್ಯಕ್ಕೆ ಪ್ರತ್ಯೇಕ ಧ್ವಜಕ್ಕಾಗಿ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ 9
ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿತು. ವಿಶ್ವ ಕನ್ನಡ ಸಮ್ಮೇಳನದ ಕುರಿತಾಗಿ  ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಿತಿ ರಚಿಸಿರುವ ಕುರಿತು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಪ್ರಧಾನ ಕಾರ್ಯದರ್ಶಿ ಸಮಿತಿಯ ನೇತೃತ್ವ ವಹಿಸುವರು. ಈ ಬಗ್ಗೆ ಪ್ರತಿಕ್ರಿಯಿಸಿದ ಕಸಾಪ ಅಧ್ಯಕ್ಷ ಮನು ಬಳಿಗಾರ್‌ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಕೇಳುವುದು ಸಂವಿಧಾನದಲ್ಲಿ ಇಲ್ಲ. ಆದರೆ  ಜನರ ಅಭಿಪ್ರಾಯವನ್ನು ಪುರಸ್ಕರಿಸುವುದು ಸರ್ಕಾರದ ಕರ್ತವ್ಯ ಹೀಗಾಗಿ ಸಮಿತಿ ರಚಿಸಲಾಗಿದೆ ಎಂದರು.  ರಾಷ್ಟ್ರಧ್ವಜದ ಹೊರತಾಗಿ 370 ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಪ್ರತ್ಯೇಕ ಧ್ವಜ ಇದೆ. ಕರ್ನಾಟಕದಲ್ಲಿ ಕೆಂಪು ಮತ್ತು ಹಳದಿ ಬಾವುಟವನ್ನೇ ಧ್ವಜವನ್ನಾಗಿ ಬಳಸಲಾಗುತ್ತಿದ್ದು ಆದರೆ ಅಧಿಕೃತ ಮಾನ್ಯತೆ ಇಲ್ಲ. ಕೆಲ ಸಾಹಿತಿಗಳು ,ಕನ್ನಡ ಪರ ಸಂಘಟನೆಗಳು ಪ್ರತ್ಯೇಕ ಧ್ವಜಕ್ಕಾಗಿ ಬೇಡಿಕೆ ಇಟ್ಟಿದ್ದು, ಸಮಿತಿ ಹಾಲಿ ಧ್ವಜವನ್ನೇ ಮಾನ್ಯ ಮಾಡಬೇಕೆ ಅಥವಾ ಹೊಸ ಧ್ವಜ ಬೇಕೆ ಎನ್ನುವ ಕುರಿತು ಸರ್ಕಾರಕ್ಕೆ ವರದಿ ನೀಡಲಿದೆ. 
2017: ನವದೆಹಲಿ:  ಉತ್ತರಪ್ರದೇಶದ ಸಹರಣಪುರದಲ್ಲಿ ನಡೆದ ದಲಿತ ವಿರೋಧಿ ಹಿಂಸೆಯ ಬಗ್ಗೆ
ಸದನದಲ್ಲಿ  ತಾನು ಮಾಡುತ್ತಿದ್ದ ಆಶು ಭಾಷಣವನ್ನು ಮೊಟಕುಗೊಳಿಸುವಂತೆ ಸಭಾಧ್ಯಕ್ಷರು ಸೂಚಿಸಿದ ಕೆಲವೇ ತಾಸುಗಳ ಒಳಗೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ತನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.  ರಾಜ್ಯಸಭಾ ಅಧ್ಯಕ್ಷರಾಗಿರುವ ಹಮೀದ್‌ ಅನ್ಸಾರಿ ಅವರನ್ನು ಸಂಜೆ ಭೇಟಿಯಾದ ಮಾಯಾವತಿ ರಾಜ್ಯಸಭಾ ಸದಸ್ಯತ್ವಕ್ಕೆ ತನ್ನ ರಾಜೀನಾಮೆಯನ್ನು ಅವರ ಕೈಗೆ ಒಪ್ಪಿಸಿದರು. "ಇಂದು ಬೆಳಗ್ಗೆ ನಾನು ಸಹಾರಣಪುರದ ಶಬರೀಪುರದಲ್ಲಿ ದಲಿತರ ಮೇಲೆ ನಡೆದಿದ್ದ ದೌರ್ಜನ್ಯದ ವಿಷಯವನ್ನು ರಾಜ್ಯಸಭೆಯಲ್ಲಿ ಎತ್ತಲು ಬಯಸಿದ್ದೆ. ಆದರೆ ನಾನು ಮಾತನಾಡುವಾಗ ಆಳುವ ಪಕ್ಷದ ಸದಸ್ಯರು, ಸಚಿವರ ಸಹಿತವಾಗಿ, ನಡೆದುಕೊಂಡ ರೀತಿಯಿಂದ ಮತ್ತು ನನ್ನ ಭಾಷಣವನ್ನು ತಡೆದ ರೀತಿಯಿಂದ ನಾನು ಬೇಸತ್ತು ಹೋದೆ''  ''ನಾನು ಹೇಳಬಯಸಿರುವುದನ್ನು ನನಗೆ ಹೇಳಲು ಸಾಧ್ಯವಾಗಿಲ್ಲವೆಂದಾದರೆ ನಾನಿನ್ನು ಅಲ್ಲಿ ಇರಬೇಕಾಗಿಲ್ಲ  ಎಂದು ಅನ್ನಿಸಿತು. ಹಾಗಾಗಿ ನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದೆ. ನಾನು ಈಗಷ್ಟೇ ರಾಜ್ಯ ಸಭೆಯ ಅಧ್ಯಕ್ಷ (ಹಮೀದ್‌ ಅನ್ಸಾರಿ) ಅವರನ್ನು ಭೇಟಿಯಾಗಿ ನನ್ನ ರಾಜೀನಾಮೆ ಪತ್ರವನ್ನು  ಸಲ್ಲಿಸಿದ್ದೇನೆ'' ಎಂದು ಮಾಯಾವತಿ ಅವರು ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಇದಕ್ಕೆ ಮೊದಲು ಮಾಯಾವತಿ ಅವರು ದಲಿತರ ಪರವಾಗಿ ಮಾತನಾಡಲು ಅವಕಾಶ ಸಿಗದ ಕಾರಣಕ್ಕೆ  ತಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸದನದಲ್ಲೇ ಬೆದರಿಕೆ ಹಾಕಿದ್ದರು.  
2017: ನವದೆಹಲಿ: ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಶೇಕಡ 12ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)
ನಿಗದಿಪಡಿಸಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ನೋಟಿಸ್ ನೀಡಿತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ಸಿ ಹರಿಶಂಕರ್ ಅವರ ನ್ಯಾಯಪೀಠ, ಪ್ರತಿಕ್ರಿಯೆ ನೀಡುವಂತೆ ಹಣಕಾಸು ಸಚಿವಾಲಯ ಮತ್ತು ತೆರಿಗೆ ಮಂಡಳಿಗೆ ಸೂಚಿಸಿತು. ‘ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಶೇಕಡ 12ರ ಜಿಎಸ್‌ಟಿ ನಿಗದಿಪಡಿಸಿರುವ ಬಗ್ಗೆ ಪರಿಶೀಲನೆಯಾಗಬೇಕು. ಅಧಿಕಾರಿಗಳು ತಮ್ಮ ನಿಲುವನ್ನು ಸಮರ್ಥಿಸಬೇಕು’ ಎಂದು ನ್ಯಾಯಪೀಠ ಹೇಳಿತು. ಜವಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಜರ್ಮಿನಾ ಇಸ್ರಾರ್ ಖಾನ್ ಎಂಬುವವರು ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಶೇಕಡ 12ರ ಜಿಎಸ್‌ಟಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಕ್ರಮ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಪರವಾಗಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಖಾನ್ ತಿಳಿಸಿದ್ದರು. ಕಾಡಿಗೆ, ಕುಂಕುಮ, ಬಿಂದಿ, ಸಿಂಧೂರ, ಪ್ಲಾಸ್ಟಿಕ್, ಗಾಜಿನ ಬಳೆ, ಪೂಜಾ ಸಾಮಗ್ರಿಗಳು, ಕಾಂಡೋಮ್‌, ಇತರ ಗರ್ಭ ನಿರೋಧಕಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಮಹಿಳೆಯರ ಆರೋಗ್ಯಕ್ಕೆ ಅತ್ಯಾವಶ್ಯಕವಾದ ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಜಿಎಸ್‌ಟಿ ನಿಗದಿಪಡಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
2017: ನವದೆಹಲಿ: ಗೋರಕ್ಷಣೆ ಹೆಸರಲ್ಲಿ ನಡೆಯುವ ಎಲ್ಲ ಅಹಿತಕರ ಘಟನೆಗಳ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿತು. ಲೋಕಸಭೆಯಲ್ಲಿ ಮಾತನಾಡಿದ ಗೃಹಖಾತೆ ರಾಜ್ಯ ಸಚಿವ ಹನ್ಸರಾಜ್‌ ಅಹಿರ್‌ ‘ಗೋರಕ್ಷಣೆ ಹೆಸರಿನಲ್ಲಿ  ಮುಸ್ಲಿಮರು ಮತ್ತು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಖಂಡನೀಯ ಎಂದರು. ಇಂತಹ ಪ್ರಕರಣಗಳ ವಿರುದ್ಧ ರಾಜ್ಯ ಸರ್ಕಾರ ಎಫ್‌ಐಆರ್‌ ದಾಖಲಿಸಬೇಕು ಎಂದು ಅವರು ಸೂಚಿಸಿದರು. ಎರಡು ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ನಡೆಸುವುದನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ, ಅಂತಹವರ ವಿರುದ್ಧ ರಾಜ್ಯಸ ರ್ಕಾರಗಳು ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದರು.
2017: ಬೆಂಗಳೂರು: ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರ  ಕುರಿತು ಆರೋಪಿಸಿದ್ದ ಡಿಐಜಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿದ್ದ  ಸರ್ಕಾರ ಅವರ ಸ್ಥಾನಕ್ಕೆ ಎಚ್‌.ಎಸ್‌.ರೇವಣ್ಣ ಅವರನ್ನು ನೇಮಕ ಮಾಡಿತು. ಎಚ್‌.ಎಸ್‌. ರೇವಣ್ಣ ನೇಮಕದ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿತು. ಇದರ ಜತೆಗೆ ಕಾರಾಗೃಹದ ಮುಖ್ಯ ಅಧೀಕ್ಷಕ ಹುದ್ದೆಯ ಪ್ರಭಾರ ಹೊಣೆಯನ್ನು ರೇವಣ್ಣ ಅವರಿಗೆ ವಹಿಸಲಾಯಿತು.

2017: ಮುಂಬೈ: ಸಿಗರೇಟ್ ನಿರ್ಮಾಣ ಕಂಪನಿ ಐಟಿಸಿಯ ಷೇರುಗಳಲ್ಲಿ ಶೇಕಡಾ 13ರಷ್ಟು ಕುಸಿತವುಂಟಾದ ಪರಿಣಾಮ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ಗೆ ಒಂದು ದಿನದಲ್ಲಿ 8,150 ಕೋಟಿ ರೂಪಾಯಿ ನಷ್ಟವಾಯಿತು. 2017 ಜೂನ್ 30ರ ಲೆಕ್ಕ ಪ್ರಕಾರ ಐಟಿಸಿಯ 16.29 ಶೇಕಡಾ ಷೇರುಗಳನ್ನು ಎಲ್‍ಐಸಿ ಹೊಂದಿದೆ.  ಬೆಳಗ್ಗಿನ ವಹಿವಾಟಿನಲ್ಲಿ ಐಟಿಸಿಯ ಷೇರುಗಳಲ್ಲಿ
ಶೇ.15ರಷ್ಟು ಕುಸಿತ ಕಂಡು ಬಂದಿತ್ತು. ಹಾಗಾಗಿ ದಿನದ ವಹಿವಾಟು ಆರಂಭವಾದ ಅರ್ಧಗಂಟೆಯಲ್ಲಿಯೇ ಎಲ್‍ಐಸಿಗೆ ರೂ.7000 ಕೋಟಿ ನಷ್ಟವುಂಟಾಯಿತು. ಸೇವಾ ಮತ್ತು ಸರಕುಗಳ ತೆರಿಗೆ (ಜಿಎಸ್‍ಟಿ)ಯಲ್ಲಿ ಸಿಗರೇಟ್ ಮೇಲೆ ಅಧಿಕ ತೆರಿಗೆ ಹೇರಿದ್ದೇ ಐಟಿಸಿಗೆ ನಷ್ಟವುಂಟಾಗಲು ಕಾರಣವಾಯಿತು. ಹಿಂದಿನ ದಿನದವರೆಗೆ ಶೇ.28ರಷ್ಟು ತೆರಿಗೆ ಅದರ ಮೇಲೆ ಶೇ.5ರಷ್ಟು ಪ್ರತ್ಯೇಕ ಸೆಸ್ ಮತ್ತು 1000 ಸಿಗರೇಟ್‍ಗಳಿಗೆ ನಿಗದಿತ ಸೆಸ್‍ ಎಂಬುದಿತ್ತು. ಸಿಗರೇಟಿನ ಉದ್ದಕ್ಕೆ ಅನುಗುಣವಾಗಿ ನಿಗದಿತ ಸೆಸ್ ರೂ. 2126 ರಿಂದ ರೂ 4170 ವರೆಗೆ ಇತ್ತು. ಇದರಲ್ಲಿ ರೂ. 485 ರಿಂದ ರೂ.792ವರೆಗೆ ಏರಿಕೆ ಮಾಡಿ ಹೊಸ ದರ ಪ್ರಕಟಿಸಲಾಗಿತ್ತು. ಐಟಿಸಿ ಷೇರುಗಳ ಬೆಲೆ ಕುಸಿತವಾದ ಪರಿಣಾಮ ಎಲ್‍ಐಸಿ ಸೇರಿದಂತೆ ಇತರ ವಿಮೆ ಕಂಪನಿಗಳಿಗುಂಟಾಗಿರುವ ನಷ್ಟದ ಮೊತ್ತ ರೂ.10,000 ಕೋಟಿಗಿಂತಲೂ ಅಧಿಕವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಯಿತು.
2008: ನಟ- ನಿರ್ಮಾಪಕ ಎಂ.ಪಿ.ಶಂಕರ್ ಅವರ ಅಂತ್ಯಕ್ರಿಯೆ ಮೈಸೂರಿನ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ನಡೆಯಿತು. ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್, ಉಪ ಪೊಲೀಸ್ ಆಯುಕ್ತ ಡಿ'ಸೋಜಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ಗೌರವ ಸಲ್ಲಿಸಿದರು.

2007: 1993ರ ಮುಂಬೈ ಸರಣಿ ಸ್ಫೋಟದ ವಿಚಾರಣೆ ನಡೆಸಿದ ವಿಶೇಷ ಟಾಡಾ ನ್ಯಾಯಾಲಯವು ಮುಂಬೈ ಮಹಾನಗರದ ವಿವಿಧ ಪ್ರದೇಶಗಳಲ್ಲಿ ಸ್ಫೋಟಕಗಳನ್ನು ಇರಿಸಿದ್ದ ಮೂವರು ವ್ಯಕ್ತಿಗಳಿಗೆ ಮರಣ ದಂಡನೆ ವಿಧಿಸಿತು. 1993ರ ಮಾರ್ಚ್ 12ರಂದು ಸ್ಫೋಟಕಗಳು ತುಂಬಿದ್ದ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿದ್ದಕ್ಕಾಗಿ ಅಬ್ದುಲ್ ಗನಿ ಇಸ್ಮಾಯಿಲ್ ಟರ್ಕ್, ಪರ್ವೇಜ್ ಶೇಕ್ ಹಾಗೂ ಮೊಹಮ್ಮದ್ ಮುಷ್ತಾಕ್ ತರಾನಿಗೆ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ ಮರಣ ದಂಡನೆ ವಿಧಿಸಿದರು. ಶಿಕ್ಷಿತರಲ್ಲಿ ಒಬ್ಬನಾದ ಅಬ್ದುಲ್ ಗನಿ ಟರ್ಕ್ ಪ್ರಕರಣದ ಮುಖ್ಯ ಆರೋಪಿ ಟೈಗರ್ ಮೆಮನ್ನ ಉದ್ಯೋಗಿಯಾಗಿದ್ದ. ವರ್ಲಿಯ ಸೆಂಚುರಿ ಬಜಾರಿನಲ್ಲಿ ಆತ ನಿಲ್ಲಿಸಿದ್ದ ಆರ್ಡಿಎಕ್ಸ್ ತುಂಬಿದ ಜೀಪ್ ಸ್ಫೋಟಗೊಂಡಾಗ 113 ಜನ ಮೃತರಾಗಿ, 227 ಜನರಿಗೆ ಗಾಯಗೊಂಡಿದ್ದರು. ಸರಣಿ ಸ್ಫೋಟಕ್ಕಾಗಿ ಸಂಚು ನಡೆಸಲು ದುಬೈ ಹಾಗೂ ಮುಂಬೈಯಲ್ಲಿ ನಡೆದ ಸಭೆಗಳಲ್ಲೂ ಟರ್ಕ್ ಪಾಲ್ಗೊಂಡಿದ್ದ. ಶಸ್ತ್ರಾಸ್ತ್ರಗಳ ಬಳಕೆಗಾಗಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ. ಪರ್ವೇಜ್ ಶೇಕ್, ಕಾಥಾ ಬಜಾರಿನಲ್ಲಿ ಆರ್ ಡಿ ಎಕ್ಸ್ ತುಂಬಿದ್ದ ಸ್ಕೂಟರ್ ನಿಲ್ಲಿಸಿದ್ದ. ಇದು ನಾಲ್ಕು ಜನರನ್ನು ಬಲಿ ತೆಗೆದುಕೊಂಡಿತ್ತು. ದಕ್ಷಿಣ ಮುಂಬೈನ ಶೇಖ್ ಮೆಮನ್ ಸ್ಟ್ರೀಟಿನಲ್ಲಿ ಸ್ಫೋಟಕ ತುಂಬಿದ ವಾಹನ ಇರಿಸಿದ್ದಕ್ಕೆ ಹಾಗೂ ಸೆಂಟಾರ್ ಹೋಟೆಲಿನಲ್ಲಿ ಸೂಟ್ಕೇಸ್ ಬಾಂಬ್ ಇರಿಸಿದ್ದಕ್ಕಾಗಿ ಮೊಹಮ್ಮದ್ ಮುಷ್ತಾಕ್ ತರಾನಿಗೆ ಮರಣ ದಂಡನೆ ವಿಧಿಸಲಾಯಿತು. ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ 100 ಜನರಲ್ಲಿ ನ್ಯಾಯಾಲಯ ಈವರೆಗೆ 81 ಜನರಿಗೆ ಶಿಕ್ಷೆ ವಿಧಿಸಿತು. ಇವರಲ್ಲಿ 14 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2007: ಬ್ರೆಜಿಲ್ನ ಅತ್ಯಂತ ದಟ್ಟಣೆಯ ಸಾವೊಪಾಲೊದ ಕೊಂಗೊನ್ಹಾಸ್ ನಿಲ್ದಾಣದ ರನ್ವೇ ಬಳಿ ವಿಮಾನವೊಂದಕ್ಕೆ ಬೆಂಕಿ ಹೊತ್ತಿಕೊಂಡು ಸುಮಾರು 200 ಜನ ಮೃತರಾದರು. ಅಸು ನೀಗಿದವರಲ್ಲಿ ಆರು ಜನ ಚಾಲಕ ಸಿಬ್ಬಂದಿ ಮತ್ತು 170 ಪ್ರಯಾಣಿಕರು. ಇನ್ನುಳಿದವರು ರನ್ವೇ ಅಕ್ಕಪಕ್ಕದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದವರು. ಬ್ರೆಜಿಲ್ ನಲ್ಲಿ ಒಂದು ವರ್ಷದಲ್ಲಿ ಇದು ಎರಡನೇ ಅತಿ ದೊಡ್ಡ ವಿಮಾನ ದುರ್ಘಟನೆ. 2006ರ ಸೆಪ್ಟೆಂಬರಿನಲ್ಲಿ ಅಮೆಜಾನ್ ಕಾಡಿನಲ್ಲಿ ಸಣ್ಣ ವಿಮಾನವೊಂದಕ್ಕೆ ಪ್ರಯಾಣಿಕ ವಿಮಾನ ಡಿಕ್ಕಿ ಹೊಡೆದು 154 ಜನ ಮೃತರಾಗಿದ್ದರು.

2007: ಮುಂಬೈ ನಗರದ ಬೊರಿವಲಿ ಪ್ರದೇಶದಲ್ಲಿನ ಏಳು ಮಹಡಿಗಳ ಕಟ್ಟಡವೊಂದು ಕುಸಿದು ಕನಿಷ್ಠ ಏಳು ಜನ ಮೃತರಾಗಿ ಅದರ ಅವಶೇಷದಡಿ ಕನಿಷ್ಠ ನೂರು ಜನ ಸಿಲುಕಿದರು. ವಾಣಿಜ್ಯ ಸಮುಚ್ಛಯವಿರುವ ಈ `ಲಕ್ಷ್ಮಿ ಛಾಯಾ' ಕಟ್ಟಡದಲ್ಲಿ 35 ಮನೆಗಳಿದ್ದವು.

2007: ಬೆಂಗಳೂರಿನ ಬಸವನಗುಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಎರಡನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಯುಕೆಜಿ ವಿದ್ಯಾರ್ಥಿ ಎ. ಸೋನಿಯಾ ಸಿಂಗ್ (5) ಈದಿನ ರಾತ್ರಿ ಆಸ್ಪತ್ರೆಯಲ್ಲಿ ಮೃತಳಾದಳು. ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಎರಡನೇ ಮಹಡಿಯಲ್ಲಿ ಸೋನಿಯಾಳನ್ನು ಆವರಣ ಗೋಡೆಯ ಮೇಲೆ ಕುಳ್ಳಿರಿಸಿ ಮುದ್ದು ಮಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದ ಕಾರಣ ಈ ದುರಂತ ಸಂಭವಿಸಿತ್ತು.

2007: ಎನ್ ಡಿಎ ಕಾಲದಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದ್ದ ರೂ.14,500 ಕೋಟಿ ಸಾಲಕ್ಕೆ ಸಂಬಂಧಿಸಿದಂತೆ ಹುಡ್ಕೊ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ದಳ (ಸಿವಿಸಿ) ನೀಡಿದ ವರದಿ ಆಧಾರದಲ್ಲಿ ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ತಮ್ಮ ಅಧಿಕಾರ ಮತ್ತು ಇಲಾಖೆಯ ನಿಯಮಾವಳಿಗಳನ್ನು ಮೀರಿ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಸಿವಿಸಿ ವರದಿ ಹೇಳಿತ್ತು. ಆ ಕಾಲದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ವಿಚಾರದಲ್ಲಿ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬಹುದು ಎಂದೂ ಸಿವಿಸಿ ನ್ಯಾಯಾಲಯಕ್ಕೆ ತಿಳಿಸಿತ್ತು. ಹುಡ್ಕೊ ಸುಮಾರು ರೂ.14,500 ಕೋಟಿ ಸಾಲ ನೀಡಿರುವ ಪ್ರಕರಣದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕೇಂದ್ರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿವಿಸಿಗೆ ಸೂಚನೆ ನೀಡಿತ್ತು.

2007: ಸಾಂಸ್ಕೃತಿಕ ವೈವಿಧ್ಯದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಭಾರತೀಯ ಬಾಲಿವುಡ್ ತಾರೆ ಶಿಲ್ಪಾಶೆಟ್ಟಿ ಅವರಿಗೆ ಲಂಡನ್ನಿನ ಪ್ರತಿಷ್ಠಿತ ಲೀಡ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಭಾರತೀಯ ಚಿತ್ರರಂಗದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿರುವ ವಿಶೇಷ ವ್ಯಕ್ತಿಗಳಿಗೆ ನೀಡುವ ಈ ಪದವಿಯನ್ನು ಈ ಬಾರಿ ಮಂಗಳೂರು ಬೆಡಗಿ 32 ವರ್ಷದ ನಟಿ ಶಿಲ್ಪಾಶೆಟ್ಟಿ ಅವರಿಗೆ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ವಕ್ತಾರರು ಪ್ರಕಟಿಸಿದರು. ಬಾಲಿವುಡ್ ನಟ ಅಮಿತಾಭ್ ಬಚ್ಚನ್, ನಟಿ ಶಬನಾ ಅಜ್ಮಿ, ನಿರ್ಮಾಪಕ ಯಶ್ಚೋಪ್ರ ಅವರಿಗೆ ಇದೇ ವಿವಿ ಈ ಹಿಂದೆ ಗೌರವ ಡಾಕ್ಟರೇಟ್ ನೀಡಿತ್ತು.

2007: ಅಮೆರಿಕದಲ್ಲಿ ಯಶಸ್ವಿ ಪ್ರವಾಸದ ನಂತರ ಈಗ ಬ್ರಿಟನ್ ಗೆ ಬಂದ ಭಾರತದ ಹೆಸರಾಂತ ಯೋಗ ಗುರು ಸ್ವಾಮಿ ರಾಮದೇವ್ ಅವರು ಲಂಡನ್ನಿನ ಕಾಮನ್ಸ್ ಸಭಾಂಗಣದಲ್ಲಿ ಬ್ರಿಟನ್ನಿನ ಪಾರ್ಲಿಮೆಂಟ್ ಸದಸ್ಯರು ಮತ್ತು ಗಣ್ಯರಿಗಾಗಿ ವಿಶೇಷ ಯೋಗ ಪ್ರದರ್ಶನ ನೀಡಿದರು. 30 ನಿಮಿಷಗಳ ಅವಧಿಯ ಕಾರ್ಯಕ್ರಮದಲ್ಲಿ ಅವರು ಯೋಗದ ವೈಜ್ಞಾನಿಕ ಮಹತ್ವ ಮತ್ತು ಉಪಯುಕ್ತತೆ, ಸಸ್ಯಹಾರ, ವೇದ ಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು.

2006: ಯಕ್ಷಗಾನದ ಮಹಾನ್ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ (88) ಅವರು ಕಾಸರಗೋಡಿನಲ್ಲಿ ನಿಧನರಾದರು. ಹರಿಕಥೆಯಲ್ಲೂ ಅಗಾಧ ಪಾಂಡಿತ್ಯ ಪ್ರತಿಭೆ ಪ್ರದರ್ಶಿಸಿದ್ದ ಅವರು ಯಕ್ಷಗಾನದಲ್ಲಿ `ಮಾತಿನ ಮಹಾಕವಿ' ಎನಿಸಿದ್ದರು. 1918ರ ಏಪ್ರಿಲ್ 7ರಂದು ಕಾಸರಗೋಡು ಜಿಲ್ಲೆಯ ಬೇಳ ಉಬ್ಬಾನದಲ್ಲಿ ನಾರಾಯಣ ಭಟ್- ಲಕ್ಷ್ಮೀ ಅಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದ ಅವರು ಯಕ್ಷಗಾನ ಬಯಲಾಟ, ತಾಳಮದ್ದಲೆ ಅರ್ಥಧಾರಿ, ಹರಿದಾಸರಾಗಿ ಪ್ರಸಿದ್ಧಿ ಪಡೆದ್ದಿದರು. ಶೇಣಿಯವರ ವಾಲಿ, ರಾವಣ, ಮಾಗಧ, ಬಪ್ಪಬ್ಯಾರಿ, ಮಾಧವ ಭಟ್ಟ, ಚಂದಗೋಪ, ತುಘಲಕ್ ಮುಂತಾದ ಪಾತ್ರಗಳು ಮನೆಮಾತಾಗಿದ್ದವು. 1990ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ, 1993ರಲ್ಲಿ ಶ್ರೀ ಶೃಂಗೇರಿ ಜಗದ್ಗುರು ಪೀಠದಿಂದ ಯಕ್ಷಗಾನ ಕಲಾ ತಿಲಕ ಬಿರುದು ಸಹಿತ ಅನೇಕ ಪ್ರಶಸ್ತಿ - ಪುರಸ್ಕಾರಗಳು ಅವರಿಗೆ ಸಂದಿವೆ. ಮಂಗಳೂರು ವಿಶ್ವವಿದ್ಯಾಲಯವು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಕಾಣಿಕೆಗಾಗಿ ಶೇಣಿ ಅವರಿಗೆ 2005ರ ಜನವರಿಯಲ್ಲಿ `ಗೌರವ ಡಾಕ್ಟರೇಟ್' ಪ್ರದಾನ ಮಾಡಿತ್ತು.

2006: ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ವಿಧಾನಸಭಾಧ್ಯಕ್ಷ ಕೃಷ್ಣ ಅದನ್ನು ತತ್ಕ್ಷಣ ಅಂಗೀಕರಿಸಿದರು.

2006: ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ವಿ.ಪಿ. ಸತ್ಯನ್ ಚೆನ್ನೆ ಹೊರವಲಯದಲ್ಲಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. 1993ರಲ್ಲಿ ಅವರಿಗೆ ಭಾರತದ ಅತ್ಯುತ್ತಮ ಫುಟ್ಬಾಲ್ ಪಟು ಗೌರವ ಲಭಿಸಿತ್ತು. 1980ರಿಂದ 15 ವರ್ಷಗಳ ಕಾಲ ಭಾರತೀಯ ಫುಟ್ಬಾಲ್ ತಂಡವನ್ನು ಅವರು ಪ್ರತಿನಿಧಿಸಿದ್ದರು.

2006: ರಾಜೀವ್ಗಾಂಧಿ ಕೊಲೆ ಪ್ರಕರಣದ ಅಪರಾಧಿಗಳಾದ ಮುರುಗನ್ ಮತ್ತು ನಳಿನಿ ತಮ್ಮ ಪುತ್ರಿ ಚರಿತ್ರಾಗೆ ಉನ್ನತ ಶಿಕ್ಷಣದ ಸಲುವಾಗಿ ಭಾರತೀಯ ವೀಸಾ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ 24 ದಿನಗಳ ನಿರಶನವನ್ನು ಈ ದಿನ ಅಂತ್ಯಗೊಳಿಸಿದರು.

1980: ಭಾರತದ ಮೊದಲ ಉಪಗ್ರಹ ವಾಹಕ ನೌಕೆ ಎಸ್ ಎಲ್ ವಿ -3 ರೋಹಿಣಿ ಉಪಗ್ರಹವನ್ನು ಗಗನಕ್ಕೆ ಹೊತ್ತೊಯ್ದಿತು.

1971: ರಾಧಾಕೃಷ್ಣ ಬೆಳ್ಳೂರು ಜನನ.

1946: ಶಿಕ್ಷಕಿ, ಮಾರ್ಗದರ್ಶಿ, ಸಾಹಿತಿ ಪ್ರಮೀಳಮ್ಮ ಅವರು ಸಿದ್ದರಾಮಯ್ಯ- ಗುರುಸಿದ್ದಮ್ಮ ದಂಪತಿಯ ಪುತ್ರಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು.

1936: ಸ್ಪೇನ್ನಲ್ಲಿ ಅಂತರ್ಯುದ್ಧ ಆರಂಭ.

1918: ನೆಲ್ಸನ್ ಮಂಡೇಲಾ ಜನನ.

1829 ಅನ್ವೇಷಕ ಥಾಮಸ್ ಕುಕ್ ನಿಧನ.

No comments:

Post a Comment