ನಾನು ಮೆಚ್ಚಿದ ವಾಟ್ಸಪ್

Tuesday, July 3, 2018

ಇಂದಿನ ಇತಿಹಾಸ History Today ಜುಲೈ 03

ಇಂದಿನ ಇತಿಹಾಸ History Today ಜುಲೈ 03 

2018: ವಾಷಿಂಗ್ಟನ್:  ಅಮೆರಿಕದ ಉತ್ತರ ಕರೋಲಿನಾ ರಾಜ್ಯದ ಜನಪ್ರಿಯ ಎಲ್ಕ್ ನದಿಯ ಜಲಪಾತದ ಬಳಿ ಬಂಡೆಗೆ ಜಿಗಿದ ೩೨ರ ಹರೆಯದ ಭಾರತೀಯ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಜಲಪಾತದಲ್ಲಿ ಮುಳುಗಿ ಜಲಸಮಾಧಿಯಾದ ದುರಂತ ಘಟಿಸಿತು. ಕಳೆದ ಆರು ತಿಂಗಳ ಅವಧಿಯಲ್ಲಿ ಸಂಭವಿಸಿದ ಈ ಮಾದರಿಯ ಎರಡನೇ ದುರ್ಘಟನೆ ಇದು ಎಂದು ಅಧಿಕಾರಿಗಳು ಹೇಳಿದರು.  ಸಾಫ್ಟವೇರ್ ಎಂಜಿನಿಯರ್ ಗೋಗಿನೇನಿ ನಾಗಾರ್ಜುನ ಅವರು ಜಲಪಾತದ ಸಮೀಪವಿದ್ದ ಬಂಡೆಯೊಂದಕ್ಕೆ ಜಿಗಿದರು. ಆಗ ಆಯತಪ್ಪಿದ ಅವರು ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿ ಜಲಪಾತದ ನೀರಿನಲ್ಲಿ ಮುಳುಗಿದರು. ಒಮ್ಮೆ ಮುಳುಗಿದ ಬಳಿಕ ಅವರು ಮತ್ತೆ ಮೇಲಕ್ಕೆ ಬರಲಿಲ್ಲ ಎಂದು ಅಸಿಸ್ಟೆಂಟ್ ಫೈರ್ ಮಾರ್ಶಲ್ ಪೌಲ್ ಬುಖಾನನ್ ಅವರನ್ನು ಉಲ್ಲೇಖಿಸಿ ಅವ್ರಿ ಜರ್ನಲ್ ವರದಿ ಮಾಡಿತು. ಚಾರ್ಲೊಟ್ಟೆಯ ನಾಗಾರ್ಜುನ ಅವರು ಜುಲೈ 1ರ ಭಾನುವಾರ ಜಲಪಾತಕ್ಕೆ ಜಿಗಿದ ಬಳಿಕ ತಮ್ಮ ಗೆಳೆಯರ ಜೊತೆಗೆ ಜಲಪಾತದ ತಳಭಾಗದಲ್ಲಿ ಈಜಾಟ ನಿರತರಾಗಿದ್ದರು ಎಂದು ಅವೆರಿ ಕೌಂಟಿಯ ಶೆರೀಫ್ ಕೆವಿನ್ ಫೈರ್‍ಯೆ ಹೇಳಿಕೆಯಲ್ಲಿ ತಿಳಿಸಿದರು. ಆಂಧ್ರಪ್ರದೇಶದವರಾದ ನಾಗಾರ್ಜುನ ಅವರು ಜಲಪಾತದ ಪ್ರಬಲ ಸೆಳೆತಕ್ಕೆ ಸಿಲುಕಿದ ಬಳಿಕ ಮೇಲಕ್ಕೆ ಬರಲೇ ಇಲ್ಲ. ಎರಡು ಗಂಟೆಗಳ ಬಳಿಕ ಅವರ ಶವ ಪತ್ತೆಯಾಗಿದ್ದು, ಲೆನೋಯಿರ್‍ನ ವೈದ್ಯಕೀಯ ಪರೀಕ್ಷಕರ ಕಚೇರಿಗೆ ಕಳಹಿಸಿಲಾಗಿದೆ ಎಂದು ಹೇಳಿಕೆ ತಿಳಿಸಿತು. ಎಲ್ಕ್ ನದಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಈ ಮಾದರಿಯ ಸಾವು ಸಂಭವಿಸಿದ್ದು ಇದು ಎರಡನೆಯದು.  ಮೇ ೨೦ರಂದು ಓಹಿಯೋದ ೨೬ರ ಹರೆಯದ ಥಾಮಸ್ ಮೆಕ್ ಕಾರ್ಡ್ಲ್ ಬಂಡೆಯಿಂದ ಜಾರಿ ಮಳೆಯಿಂದಾಗಿ ಉಂಟಾಗಿದ್ದ ನೀರಿನ ಪ್ರಬಲ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು.  ಈ ಜಲಪಾತ ಹಿಂದಿನಿಂದಲೇ ಅಪಾಯಕಾರಿ ಜಲಪಾತ ಎಂದೇ ಪರಿಗಣಿಸಲ್ಪಟ್ಟಿದೆ. ಇಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದರೆ ಹಲವು ಸಾವುಗಳೂ ಸಂಭವಿಸಿವೆ.  ಜಲಪಾತದ ಆಸುಪಾಸಿನಲ್ಲಿ ಇರಿಸಲಾಗಿರುವ ಫಲಕಗಳು ರೋಮಾಂಚನ (ಥ್ರಿಲ್) ಬಯಸುವವರಿಗೆ ನದಿಗೆ ಜಿಗಿಯದಂತೆ ಮತ್ತು ಜಲಪಾತದ ಸಮೀಪ ಈಜಾಡದಂತೆ ಸಲಹೆ ನೀಡುತ್ತವೆ. ಕಲ್ಲುಗಳು ಹಾಗೂ ನೀರಿನ ಪ್ರಬಲ ಸೆಳೆತದ ಕಾರಣ ಅಪಾಯ ಹೆಚ್ಚು ಎಂದು ಫಲಕಗಳು ಎಚ್ಚರಿಸುತ್ತವೆ. ಜಲಪಾತದ ಮೇಲಿನಿಂದ ಬಂಡೆಯಿಂದ ಬಂಡೆಗೆ ಜಿಗಿಯುವುದು  ಸಾವುಗಳು ಅಥವಾ ಗಂಭೀರ ಗಾಯಗಳಿಗೆ ಮೂಲಭೂತ ಕಾರಣಗಳು. ಆದರೆ ಇತ್ತೀಚಿನ ಎರಡು ಸಾವುಗಳು ಈಜಾಟದ ಸಂದರ್ಭದ ದುರಂತಗಳಿಂದಾಗಿ ಸಂಭವಿಸಿದೆ ಎಂದು ಶೆರೀಫ್ ಪ್ರಕಟಣೆ ತಿಳಿಸಿತು.

2018: ನವದೆಹಲಿ: ಗೋ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ನಿಗ್ರಹಿಸುವ
ಹೊಣೆಗಾರಿಕೆಯನ್ನು  ರಾಜ್ಯಗಳ ಮೇಲಕ್ಕೆ ಹೊರಿಸಿದ ಸುಪ್ರೀಂಕೋರ್ಟ್ ಇಂತಹ ಹಿಂಸಾಚಾರಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಮೇಲಿನ ತನ್ನ ತೀರ್ಪನ್ನು ಕಾಯ್ದಿರಿಸಿತು.  ’ಯಾರೂ ಕೂಡಾ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ’ ಎಂದು ಈ ಸಂದರ್ಭದಲ್ಲಿ ಅದು ಎಚ್ಚರಿಸಿತು.  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ’ಇದು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿದ್ದು ಪ್ರತಿಯೊಂದು ರಾಜ್ಯವೂ ಈ ವಿಚಾರದಲ್ಲಿ ಹೊಣೆಯಾಗುತ್ತದೆ’ ಎಂದು ಹೇಳಿ,  ಮನವಿಗಳ ಮೇಲೆ ತಾನು ಆದೇಶ ನೀಡಲಿದ್ದೇನೆ ಎಂದು ತಿಳಿಸಿತು.  ವಿಚಾರಣಾ ಕಾಲದಲ್ಲಿ ಪೀಠವು ಗೋ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಘಟನೆಗಳು ವಾಸ್ತವವಾಗಿ ಗುಂಪು ಹಿಂಸಾಚಾರಗಳಾಗಿದ್ದು ಇದು ಅಪರಾಧ ಎಂದು ಹೇಳಿದರು.  ಅಡಿಷನಲ್ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಅವರು ’ಕೇಂದ್ರವು ಪರಿಸ್ಥಿತಿ ಬಗ್ಗೆ ಎಚ್ಚರಿಕೆಯಿಂದಿದ್ದು, ನಿಭಾಯಿಸಲು ಯತ್ನಿಸುತ್ತಿದೆ’ ಎಂದು ಹೇಳಿದರು. ’ಮುಖ್ಯ ಚಿಂತೆ ಕಾನೂನು ಸುವ್ಯವಸ್ಥೆ ಪಾಲನೆಯದ್ದು’ ಎಂದು ಅವರು ನುಡಿದರು.  ಯಾರೂ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಇಂತಹ ಘಟನೆಗಳನ್ನು ತಡೆಯುವ ಹೊಣೆಗಾರಿಕೆ ರಾಜ್ಯಗಳದ್ದು ಎಂದು ಪೀಠ ಹೇಳಿತು.  ಕಳೆದ ವರ್ಷ ಸೆಪ್ಟೆಂಬರ್ ೬ರಂದು ಸುಪ್ರೀಂಕೋರ್ಟ್ ಗೋ ಸಂರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೂ ಸೂಚಿಸಿತ್ತು. ಪ್ರತಿ ಜಿಲ್ಲೆಯಲ್ಲೂ ನೋಡಾಲ್ ಅಧಿಕಾರಿಯಾಗಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಾರದೊಳಗಾಗಿ ನೇಮಿಸುವಂತೆ ಮತ್ತು ಗೋ ಸಂಕ್ಷಕರನ್ನು ’ಸ್ವತಃ ಕಾನೂನಿನ ರೀತಿಯಲ್ಲಿ’ ವರ್ತಿಸದಂತೆ ತಡೆಯುವ ಮೂಲಕ ಗೋ ಸಂರಕ್ಷಣೆ ಹೆಸರಿನ ಹಿಂಸಾಚಾರ ನಿಗ್ರಹಿಸುವಂತೆಯೂ ನಿರ್ದೇಶಿಸಿತ್ತು.  ಗೋ ಸಂರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರ ನಿಲ್ಲಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ನೀಡಿದ ತನ್ನ ನಿರ್ದೇಶನವನ್ನು ಪಾಲಿಸದೇ ಇದ್ದುದಕ್ಕಾಗಿ ಸಲ್ಲಿಸಲಾದ ನ್ಯಾಯಾಲಯ ನಿಂದನೆ ಅರ್ಜಿಗಳನ್ನು ಅನುಸರಿಸಿ ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಂದ ಉತ್ತರವನ್ನೂ ಸುಪ್ರೀಂಕೋರ್ಟ್ ಕೋರಿತು. ಮಹಾತ್ಮಾ ಗಾಂಧೀಜಿ ಅವರ ಮರಿಮೊಮ್ಮಗ ತುಷಾರ ಗಾಂಧಿ ಅವರು ನ್ಯಾಯಾಲಯ ನಿಂದನೆ ಅರ್ಜಿಗಳನ್ನು ಸಲ್ಲಿಸಿ, ಮೂರು ರಾಜ್ಯಗಳು ಕಳೆದ ವರ್ಷ ಸೆಪ್ಟೆಂಬರ್ ೬ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸಿಲ್ಲ ಎಂದು ಹೇಳಿದ್ದರು.
 

2018: ಭೋಪಾಲ್: ತನ್ನ ಪಠ್ಯ ಪುಸ್ತಕಗಳಲ್ಲಿ ಕೆಲವು ಬದಲಾವಣೆಗಳಿಗಾಗಿ ಕೆಲವರ ಹುಬ್ಬೇರಿಸಿರುವ
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್ ಸಿ ಇ ಆರ್ ಟಿ) ಕೆಲವು ಪಠ್ಯಪುಸ್ತಕಗಳಿಗೆ ಇತ್ತೀಚೆಗೆ ಮಾಡಿರುವ ತಿದ್ದುಪಡಿಗಳಿಂದಾಗಿ ಇನ್ನೊಂದು ವಿವಾದವನ್ನು ಸೃಷ್ಟಿಸಿತು.  ಈ ಬಾರಿ ಮಂಡಳಿಯು ಬಿಜೆಪಿಯನ್ನು ’ಹಿಂದುತ್ವ ಕಾರ್‍ಯಸೂಚಿ’ ಹೊಂದಿರುವ ಪಕ್ಷ ಎಂಬುದಾಗಿ ಬಣ್ಣಿಸಿತು. ೧೨ನೇ ತರಗತಿಗಾಗಿ ಪರಿಷ್ಕರಿಸಲಾಗಿರುವ ಪಠ್ಯಪುಸ್ತಕದ ’ಸ್ವತಂತ್ರ ಭಾರತ್ ಮೇ ರಾಜ್ ನೀತಿ’ (ಸ್ವತಂತ್ರ ಭಾರತದಲ್ಲಿ ರಾಜನೀತಿ) ಭಾಗದಲ್ಲಿ ’ಭಾರತೀಯ ಜನತಾ ಪಕ್ಷವು ೧೯೮೦ರಲ್ಲಿ ಜನಸಂಘವು ವಿಭಜನೆಗೊಂಡು, ಬಿಜೆಪಿಯಾಗಿ ಹೊಸರೂಪ ಪಡೆದ ಬಳಿಕ ಹಿಂದುತ್ವ ಕಾರ್‍ಯಸೂಚಿಯನ್ನು ಪ್ರಚಾರ ಮಾಡಲು ಆರಂಭಿಸಿತು’ ಎಂದು ವಿವರಿಸಲಾಯಿತು.  ಪುಸ್ತಕವು ಗೋಧ್ರಾ ಹಿಂಸಾಚಾರವು ಗುಜರಾತಿನ ಕೋಮುಹಿಂಸಾಚಾರದ ಬಳಿಕ ಸಂಭವಿಸಿತು ಎಂದು ಉಲ್ಲೇಖಿಸಿತು.  ಕುತೂಹಲಕರವೆಂದರೆ ಎನ್ ಸಿ ಇ ಆರ್ ಟಿಯು  ೧೨ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿ ’ಮುಸ್ಲಿಂ ವಿರೋಧಿ ದಂಗೆಗಳು’ ಶಬ್ದದ ಬದಲಿಗೆ ’ಗುಜರಾತ್ ದಂಗೆಗಳು’ ಶಬ್ದವನ್ನು ಬಳಸಿತು. ’ಭಾರತೀಯ ರಾಜಕಾರಣದಲ್ಲಿನ ಇತ್ತೀಚಿನ ಬೆಳವಣಿಗೆಗಳು’ ಎಂ ಶೀರ್ಷಿಕೆಯ ಪಠ್ಯ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಏನಿದ್ದರೂ ೧೯೮೪ರ ದಂಗೆಗಳನ್ನು ಸಿಖ್-ವಿರೋಧಿ ದಂಗೆಗಳು ಎಂಬುದಾಗಿಯೇ ಬಣ್ಣಿಸಲಾಗಿದ್ದು, ವಿಪಕ್ಷಗಳ ಟೀಕಾ ಪ್ರಹಾರಕ್ಕೆ ಗುರಿಯಾಯಿತು. ಹಿಂದಿನ ತಿದ್ದುಪಡಿಯೊಂದನ್ನು ಬದಲಾಯಿಸಿರುವ ಪುಸ್ತಕವು ಗೋಧ್ರಾ ದಂಗೆಗಳ ಬಳಿಕ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜ್ಯ ಸರ್ಕಾರಕ್ಕೆ ’ರಾಜಧರ್ಮ’ವನ್ನು ಬೋಧಿಸಿದರು ಎಂದು ತಿಳಿಸಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡಾ ಗುಜರಾತ್ ಸರ್ಕಾರವನ್ನು ಘರ್ಷಣೆಗಳಿಗಾಗಿ ತರಾಟೆಗೆ ತೆಗೆದುಕೊಂಡಿತು ಎಂದು ಪುಸ್ತಕ ವಿವರಿಸಿತು. ಬಹುತೇಕ ಪಕ್ಷಗಳು ಹಿಂದುತ್ವ ಕಾರ್‍ಯಸೂಚಿಯನ್ನು ಬೆಂಬಲಿಸಲಿಲ್ಲ. ಬಿಜೆಪಿ, ಹೀಗೆ ಅದನ್ನು ಚುನಾವಣಾ ವಿಷಯವಾಗಿ ಪರಿವರ್ತಿಸಿತು ಎಂದು ಪಠ್ಯಪುಸ್ತಕ ಹೇಳಿತು. ಕಾಂಗ್ರೆಸ್ ಪಕ್ಷವು ಸ್ವಾತಂತ್ರಾ ನಂತರದ ಬಹುತೇಕ ಎಲ್ಲ ಚುನಾವಣೆಯಲ್ಲೂ ಮುನ್ನಡೆ ಸಾಧಿಸಿತ್ತು. ’ಹಳೆಯ ಮಹಾನ್ ಪಕ್ಷವು ಭಾರತೀಯ ರಾಜಕೀಯದಲ್ಲಿ ದೀರ್ಘ ಕಾಲ ಪ್ರಬಲವಾಗಿತ್ತು. ಗುಂಪುಗಾರಿಕೆ ಕೂಡಾ ದೌರ್ಬಲ್ಯದ ಬದಲಿಗೆ ತನ್ನ ಶಕ್ತಿ ಎಂಬುದಾಗಿ ಪಕ್ಷವು ಸಾಬೀತು ಪಡಿಸಿತ್ತು ಎಂದು ಪುಸ್ತಕ ವಿವರಿಸಿತು. ಪುಸ್ತಕದಲ್ಲಿನ ವಿವರಗಳ ಬಗ್ಗೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಸಚಿವ ದೀಪಕ್ ಜೋಶಿ ಅವರು ’ಇಂತಹ ವಿವರಗಳನ್ನು ಮಕ್ಕಳಿಗೆ ನೀಡುವುದು ಸರಿಯಲ್ಲ. ಈ ಸೇರ್ಪಡೆಗಳನ್ನು ಬದಲಾಯಿಸುವಂತೆ ನಾವು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ. ಇದನ್ನು ಹಿಂದಿನ ಸರ್ಕಾರಗಳು ಮಾಡಿವೆ. ಬಿಜೆಪಿಯನ್ನು ಹಿಂದುತ್ವ ಪಕ್ಷ ಎಂಬುದಾಗಿ ಬಿಂಬಿಸುವುದು ತಪ್ಪು. ನಾವು ಈ ಪುಸ್ತಕವನ್ನು ಮಧ್ಯ ಪ್ರದೇಶ ಮಂಡಳಿಯ ಪಠ್ಯಸೂಚಿಯಲ್ಲಿ ಸೇರಿಸುವುದಿಲ್ಲ ಎಂದು ಅವರು ನುಡಿದರು.  ರಾಷ್ಟ್ರೀಯ ಆದರ್ಶ ವ್ಯಕ್ತಿಗಳನ್ನು ಹೊಸದಾಗಿ ಸೇರಿಸುವ ಸಲುವಾಗಿ ಈ ಹಿಂದೆ ಮಂಡಳಿ ಮಾಡಿದ್ದ ಬದಲಾವಣೆಗಳನ್ನು ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಟೀಕಿಸಿ, ಹಲವಾರು ಪ್ರಮುಖ ನಾಯಕರನ್ನು ರಾಷ್ಟ್ರದ ಸಾಮೂಹಿಕ ಸ್ಮರಣೆಯಲ್ಲಿ ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲಾಗಿದೆ ಎಂದು ಟೀಕಿಸಿದ್ದವು. ಹೊಸ ಇತಿಹಾಸ ಪಠ್ಯಪುಸ್ತಕದಲ್ಲಿ ಶ್ರೀ ಅರಬಿಂದೋ, ಸ್ವಾಮಿ ವಿವೇಕಾನಂದ, ಸ್ವಾತಂತ್ರ್ಯ ಹೋರಾಟಗಾರರಾದ ಲಾಲಾ ಲಜಪತರಾಯ್, ವಲ್ಲಭ ಭಾಯಿ ಪಟೇಲ್, ಪೇಶ್ವಾ ಮತ್ತು ಮರಾಠಾ ದಂಡನಾಯಕ ಬಾಜಿರಾವ್ ಬಲ್ಲಾಳ್, ಜಾಟ್ ದೊರೆ ಸೂರಜ್ ಮಲ್, ರಜಪೂತ ಐಕಾನ್ ಮಹಾರಾಣಾ ಪ್ರತಾಪ್, ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಅವರ ಕುರಿತ ಮಾಹಿತಿಯನ್ನು ಪುಸ್ತಕಕ್ಕೆ ಸೇರ್ಪಡೆ ಮಾಡಲಾಗಿದೆ ಅಥವಾ ಪುಸ್ತಕದಲ್ಲಿ ಅವರಿಗೆ ಹೆಚ್ಚಿನ ಪುಟಗಳನ್ನು ಒದಗಿಸಲಾಗಿದೆ.

2018: ನವದೆಹಲಿ: ಅಂತರ್ ಜಾತೀಯ ದಂಪತಿಯ ಪಾಸ್ ಪೋರ್ಟ್ ನೀಡಿಕೆಗೆ ಸಂಬಂಧಿಸಿದಂತೆ ಸುಷ್ಮಾ
ಸ್ವರಾಜ್ ವಿರುದ್ಧ ನಡೆದಿರುವ ಟ್ವಿಟ್ಟರ್ ಟ್ರೋಲಿಂಗ್ ಅಭಿಯಾನವನ್ನು ಗೃಹ ಸಚಿವ ರಾಜನಾಥ್ ಸಿಂಗ್, ನೌಕಾಯಾನ ಸಚಿವ ನಿತಿನ್ ಗಡ್ಕರಿ ಅವರ ಬಳಿಕ ಇದೀಗ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಖಂಡಿಸಿದರು. ’ಶ್ರೀಮತಿ ಸುಷ್ಮಾ ಸ್ವರಾಜ್ ಜಿ ಅವರ ವಿರುದ್ಧದ ನಾಚಿಕೆಗೇಡು ಟ್ರೋಲಿಂಗ್ ಅಭಿಯಾನವನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ಆಕೆ ಅತ್ಯಂತ ಹಿರಿಯ ಸಂಸದೀಯ ಪಟು. ನಾವು ಪರಸ್ಪರ ಗೌರವಿಸಬೇಕು’ ಎಂದು ಪಾಸ್ವಾನ್  ಟ್ವೀಟ್ ಮಾಡಿದರು. ಬಳಿಕ ಪಕ್ಷದ ರೈತರ ವಿಭಾಗದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ಟ್ರೋಲಿಂಗ್ ಬಗ್ಗೆ ಪ್ರಶ್ನಿಸಿದಾಗ ಲೋಕಜನಶಕ್ತಿ ಪಕ್ಷದ ನಾಯಕ ’ಶ್ರೀಮತಿ ಸ್ವರಾಜ್ ಅವರ ವಿರುದ್ಧ ಇಂತಹ ಭಾಷೆಯ ಬಳಕೆ ತಪ್ಪು’ ಎಂದು ಹೇಳಿದರು.  ಟ್ವಿಟ್ಟರ್ ನಲ್ಲಿ ಪೋಲ್:  ಸುಷ್ಮಾ ಸ್ವರಾಜ್ ಅವರು ವಿಶಿಷ್ಟ ಪ್ರತಿಭಟನೆಯಾಗಿ ಪಾಸ್ ಪೋರ್ಟ್ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮನ್ನು ಗುರಿಯಾಗಿಸಿ ಟ್ವಿಟ್ಟರಿನಲ್ಲಿ ಬರುತ್ತಿರುವ ಪೋಸ್ಟ್ ಗಳನ್ನು ’ಲೈಕ್’ ಮಾಡುತ್ತಿದ್ದಾರೆ ಮತ್ತು ಜುಲೈ ೧ರಂದು ಟ್ವಿಟ್ಟರಿನಲ್ಲಿ ’ಪೋಲ್’ ಕೂಡಾ ನಡೆಸಿ ಬಳಕೆದಾರರಿಗೆ ಇಂತಹ ಟ್ರೋಲಿಂಗ್ ನ್ನು ಅನುಮೋದಿಸುವಿರಾ ಎಂದು ಪ್ರಶ್ನಿಸಿದ್ದರು.  ’ಪೋಲ್’ಗೆ ಪ್ರತಿಕ್ರಿಯಿಸಿದ ಶೇಕಡಾ ೫೭ರಷ್ಟು ಮಂದಿ ಟ್ರೋಲಿಂಗ್ ನ್ನು ವಿರೋಧಿಸಿದರೆ, ಶೇಕಡಾ ೪೩ರಷ್ಟು ಮಂದಿ ಟ್ರೋಲಿಂಗನ್ನು ಬೆಂಬಲಿಸಿದರು.  ಅಂತರ್ಜಾತೀಯ ದಂಪತಿಯನ್ನು ಪಾಸ್ ಪೋರ್ಟ್ ಅರ್ಜಿ ಸಂಬಂಧ ಕಚೇರಿಯಲ್ಲಿ ಅವಮಾನಗೊಳಿಸಿದ್ದಕ್ಕಾಗಿ ಲಕ್ನೋದಲ್ಲಿನ ಪಾಸ್ ಪೋರ್ಟ್ ಸೇವಾಕೇಂದ್ರದ ಅಧಿಕಾರಿ ವಿಕಾಸ್ ಮಿಶ್ರ ಅವರನ್ನು ಲಕ್ನೋದಿಂದ ಗೋರಖ್ ಪುರಕ್ಕೆ ವರ್ಗಾವಣೆ ಮಾಡಿದ ಬಳಿಕ ಸುಷ್ಮಾ ಸ್ವರಾಜ್ ವಿರುದ್ಧ ಟ್ರೊಲಿಂಗ್ ಅಭಿಯಾನ ಶುರುವಾಗಿತ್ತು.  ಟ್ರೋಲಿಂಗ್ ಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವೆಯ ಬೆಂಬಲಕ್ಕೆ ಬಾರದೇ ಇದ್ದುದಕ್ಕಾಗಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು. ಜುಲೈ ೨ರಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಟ್ರೋಲಿಂಗನ್ನು ತಪ್ಪು ಎಂಬುದಾಗಿ ಹೇಳಿ ಖಂಡಿಸಿದ್ದರು. ಜುಲೈ ೩ರಂದು ಸಚಿವ ನಿತಿನ್ ಗಡ್ಕರಿ ಅವರು ಸುಷ್ಮಾ ಬೆಂಬಲಕ್ಕೆ ಬಂದಿದ್ದರು.  ವಿವಾದ ಉದ್ಭವಿಸಿದಾಗ ಸ್ವರಾಜ್ ಅವರು ಫ್ರಾನ್ಸ್, ಬೆಲ್ಜಿಯಂ ಮತ್ತು ಲಕ್ಸೆಂಬರ್ಗ್ ಭೇಟಿಯಲ್ಲಿದ್ದರು. ’೨೦೧೮ರ ಜೂನ್ ೧೭ರಿಂದ ೨೩ರವರೆಗೆ ನಾನು ಭಾರತದಿಂದ ಹೊರಗಿದ್ದೆ. ನನ್ನ ಗೈರುಹಾಜರಿಯಲ್ಲಿ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಏನಿದ್ದರೂ ನನ್ನನ್ನು ಕೆಲವು ಟ್ವೀಟ್ ಗಳ ಮೂಲಕ ಗೌರವಿಸಲಾಗಿದೆ. ನಾನು ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆದ್ದರಿಂದ ನಾನು ಅವುಗಳನ್ನು ಲೈಕ್ ಮಾಡಿದ್ದೇನೆ’ ಎಂದು ಸುಷ್ಮಾ ಜೂನ್ ೨೪ರಂದು ಟ್ವೀಟ್ ಮಾಡಿದ್ದರು.  ಜುಲೈ ೧ರಂದು ಟ್ವಿಟ್ಟರ್ ಪೋಲ್ ಬಳಿಕ ಸುಷ್ಮಾ ಅವರು ’ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಸಹಜ. ದಯವಿಟ್ಟು ಟೀಕಿಸಿ, ಆದರೆ ಅಶ್ಲೀಲ ಭಾಷೆಯಲ್ಲಿ ಅಲ್ಲ.  ಯೋಗ್ಯ ಭಾಷೆಯಲ್ಲಿನ ಟೀಕೆ ಯಾವಾಗಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ’ ಎಂದು ಟ್ವೀಟ್ ಮಾಡಿದ್ದರು.

2018: ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿನ ಒಳಸಂಚು ಹಿಂದಿನ ಸತ್ಯವನ್ನು
ಬಯಲಿಗೆಳೆಯಲು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಬಂಧಿಸಿ ತನ್ನ ವಶದಲ್ಲೇ ತನಿಖೆ ನಡೆಸುವುದು ಅತ್ಯಗತ್ಯ ಎಂದು ಕೇಂದ್ರೀಯ ತನಿಖಾ ದಳವು (ಸಿಬಿಐ) ದೆಹಲಿ ಹೈಕೋರ್ಟಿಗೆ ತಿಳಿಸಿತು.  ದೆಹಲಿ ಹೈಕೋರ್ಟಿಗೆ ತನ್ನ ಉತ್ತರವನ್ನು ನೀಡಿದ ಸಿಬಿಐ, ’ಈವರೆಗೆ ನಡೆಸಿದ ವಿಚಾರಣೆಯಲ್ಲಿ ಮೇಲೆ ತಿಳಿಸಿದ ಅಪರಾಧಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಶಾಮೀಲಾಗಿರುವುದನ್ನು ತೋರಿಸುವಂತಹ ಪ್ರಬಲ ಪ್ರಕರಣ ಮೇಲ್ನೋಟಕ್ಕೇ ಕಂಡುಬಂದಿದೆ. ಈ ಪ್ರಕರಣದಲ್ಲಿ ಇನ್ನೂ ದೊಡ್ಡ ಒಳಸಂಚು ಬಿಚ್ಚಿಕೊಳ್ಳುತ್ತಿದೆ. ಆದ್ದರಿಂದ ಅರ್ಜಿದಾರರನ್ನು ಬಂಧಿಸಿ ತನ್ನ ವಶದಲ್ಲಿಟ್ಟುಕೊಂಡು ತನಿಖೆ ನಡೆಸುವುದು ಅತ್ಯಗತ್ಯವಾಗಿದೆ’ ಎಂದು ಪ್ರತಿಪಾದಿಸಿತು.  ಹೈಕೋರ್ಟ್ ಆದೇಶದ ಪ್ರಕಾರ ವಿಚಾರಣೆಗಾಗಿ ತನಿಖೆಗಾರರ ಮುಂದೆ ಚಿದಂಬರಂ ಅವರು ಹಾಜರಾಗಿದ್ದಾರಾದರೂ, ಹಿರಿಯ ಕಾಂಗ್ರೆಸ್ ನಾಯಕ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆ ಮತ್ತು ಸಹಕರಿಸುತ್ತಿಲ್ಲ ಎಂದು ಸಿಬಿಐ ಹೇಳಿತು.  ’ತ್ರಪ್ತಿ ಪಡಿಸುವಂತಹ ದಾಖಲೆಗಳು ಇರುವುದರ ಹೊರತಾಗಿಯೂ, ಅವುಗಳನ್ನು ಆಧರಿಸಿದ ಪ್ರಶ್ನೆಗಳಿಗೆ ಅರ್ಜಿದಾರರು ತಪ್ಪಿಸಿಕೊಳ್ಳುವ ಉತ್ತರ ನೀಡಿದ್ದಾರೆ ಮತ್ತು ತನಿಖಾ ಸಂಸ್ಥೆಯ ಜೊತೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಪ್ರಮಾಣಪತ್ರ ಹೇಳಿತು. ಈವರೆಗೆ ಸಂಗ್ರಹಿಸಲಾಗಿರುವ ದಾಖಲೆಗಳು ಮತ್ತು ಅಪರಾಧದ ತೀವ್ರತೆಯು ಅರ್ಜಿದಾರರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಬೇಕಾದ ಅಗತ್ಯತೆಯನ್ನು ಸ್ಪಷ್ಟ ಪಡಿಸಿದೆ. ಅಂತಹ ತನಿಖೆಯು ಭಿನ್ನವಾಗಿರುತ್ತದೆ. ವಶಕ್ಕೆ ತೆಗೆದುಕೊಂಡು ತನಿಖೆ ನಡೆಸದ ವಿನಃ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗದು ಮತ್ತು ಸತ್ಯವನ್ನು ಬಯಲಿಗೆಳೆಯಲು ಅಸಾಧ್ಯ ಎಂಬ ತೀರ್ಮಾನಕ್ಕೆ ತನಿಖಾ ಸಂಸ್ಥೆಯು ಬಂದಿದೆ ಎಂದೂ  ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು.  ಚಿದಂಬರಂ ಅವರ ಬಂಧನಪೂರ್ವ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಹೈಕೋರ್ಟಿಗೆ ಮನವಿ ಮಾಡಿದ ಸಿಬಿಐಯು,  ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಈವರೆಗೆ ಸಂಗ್ರಹಿಸಿದ ಮಾಹಿತಿಯನ್ನು ನ್ಯಾಯಾಲಯಕ್ಕೆ ತೋರಿಸಲು ಸಿದ್ಧ. ಆದರೆ, ನ್ಯಾಯಾಲಯವು ಬಂಧಿಸದಂತೆ  ಚಿದಂಬರಂ ಅವರಿಗೆ ರಕ್ಷಣೆ ನೀಡಬಾರದು. ಹಾಗೆ ಮಾಡಿದರೆ ಅದು ತನಿಖೆ ಮತ್ತು ನ್ಯಾಯದ ಹಿತಾಸಕ್ತಿಗೆ ಧಕ್ಕೆಯನ್ನು ಉಂಟು ಮಾಡುವುದು ಎಂದು ಸಿಬಿಐ ಹೇಳಿತು.  ಚಿದಂಬರಂ ಅವರು ತಮ್ಮ ವೇದಿಕೆಯನ್ನು ಆಯ್ದುಕೊಂಡು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ತನಿಖಾ ಸಂಸ್ಥೆ ಮನವಿ ಮಾಡಿತು.   ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿರುವ ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಅರ್ಜಿದಾರರು ದೆಹಲಿಯ ವಿಶೇಷ ನ್ಯಾಯಾಲಯವನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ನೇರವಾಗಿ ಗೌರವಾನ್ವಿತ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎಂದು ವಿವರಿಸಿದ ಸಿಬಿಐ ಮಾಜಿ ಕೇಂದ್ರ ಸಚಿವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಕೋರಿತು. ಚಿದಂಬರಂ ಅವರನ್ನು ಬಂಧಿಸದಂತೆ ನೀಡಿದ್ದ ರಕ್ಷಣೆಯನ್ನು ಹೈಕೋರ್ಟ್ ಆಗಸ್ಟ್ ೧ರವರೆಗೆ ವಿಸ್ತರಿಸಿದ ಕೆಲವೇ ಗಂಟೆಗಳಲ್ಲಿ ಸಿಬಿಐ ಹೈಕೋರ್ಟಿಗೆ ತನ್ನ ಉತ್ತರವನ್ನು ಸಲ್ಲಿಸಿತು. ಇದಕ್ಕೆ ಮುನ್ನ ತನ್ನ ಉತ್ತರ ನೀಡಲು ಕಾಲಾವಕಾಶ ಕೊಡುವಂತೆ ಸಿಬಿಐ ಕೋರಿತ್ತು.  ಐಎನ್ ಎಕ್ಸ್ ಮೀಡಿಯಾ ಕ್ಕೆ ತನ್ನ ಪುತ್ರ ಕಾರ್ತಿಯ ಪ್ರೇರಣೆಯಂತೆ ಎಫ್ ಐಪಿಬಿ ಕ್ಲೀಯರೆನ್ಸ್ ನೀಡಿದ್ದರಲ್ಲಿ ಚಿದಂಬರಂ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತನಿಖಾ ಸಂಸ್ಥೆ ಆಪಾದಿಸಿತ್ತು.
 

2017: ನವದೆಹಲಿ: ತುಳುನಾಡಿನ ಸಾಂಪ್ರದಾಯಿಕ ಜಾನಪದ ಸಾಹಸ ಕ್ರೀಡೆ 'ಕಂಬಳ'ವನ್ನು ಯಥಾ ಪ್ರಕಾರ ಮುಂದುವರೆಸುವ ರಾಜ್ಯ ಸರಕಾರದ 'ಕಂಬಳ ತಿದ್ದುಪಡಿ ಮಸೂದೆ'ಗೆ ಎದುರಾಗಿದ್ದ ಎಲ್ಲ ಕಾನೂನು ಅಡೆತಡೆ ಮತ್ತು ಗೊಂದಲ ನಿವಾರಣೆಯಾಗಿದ್ದು, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು  ಕಂಬಳ ತಿದ್ದುಪಡಿ ವಿಧೇಯಕಕ್ಕೆ ಅಂಕಿತ ಹಾಕುವ ಮೂಲಕ ತುಳುನಾಡಿನ ಈ ಜಾನಪದ ಕ್ರೀಡೆಗೆ ಮತ್ತೆ ಚಾಲನೆ ದೊರಕಿಸಿದರು.  ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರ ನೇತೃತ್ವದಲ್ಲಿ ಕಳೆದ ತಿಂಗಳು ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿ ಸಂಚಾಲಕ ಸೀತಾರಾಮ ಶೆಟ್ಟಿ ಹಾಗೂ ಕಂಬಳ ಸಮಿತಿಯ ಅಶೋಕ್‌ ಕುಮಾರ್‌ ರೈ ಅವರು ಈ ವಿಶೇಷ ಮಸೂದೆಯನ್ನು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರಕಾರವು ಸಚಿವ ಸಂಪುಟದ ಒಪ್ಪಿಗೆ ಪಡೆದು ಕೆಲವು ಪರಿಷ್ಕರಣೆಯೊಂದಿಗೆ 2ನೇ ಸಲ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ 'ಕಂಬಳ ತಿದ್ದುಪಡಿ ಮಸೂದೆ'ಗೆ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಇತ್ತೀಚೆಗಷ್ಟೇ ಸಹಿ ಹಾಕಿದ್ದರು. ಆ ಮೂಲಕ ಕಾನೂನು ಇಲಾಖೆಯಿಂದ ಹಲವು ತಿಂಗಳಿನಿಂದ ಎದುರಾಗಿದ್ದ ಕಾನೂನು ತೊಡಕು ಬಗೆಹರಿದಿದೆ. ಇದರೊಂದಿಗೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು, ರಾಜ್ಯಪಾಲರ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ ಈ 'ಕಂಬಳ ತಿದ್ದುಪಡಿ ಮಸೂದೆ'ಗೆ ಈಗ ಅರಣ್ಯ ಮತ್ತು ಪರಿಸರ, ಸಂಸ್ಕೃತಿ ಹಾಗೂ ಕಾನೂನು ಸಚಿವಾಲಯದ ಒಪ್ಪಿಗೆ ಸಿಕ್ಕಿತು. ಈ ಹಿಂದೆ ಕೇವಲ ಅರಣ್ಯ ಹಾಗೂ ಸಂಸ್ಕೃತಿ ಸಚಿವಾಲಯದಿಂದಷ್ಟೇ ಒಪ್ಪಿಗೆ ಲಭಿಸಿತ್ತು. ಆದರೆ, ವಿಧೇಯಕದಲ್ಲಿನ ಕೆಲವು ಪದ ಬಳಕೆಗೆ ಕಾನೂನು ಸಚಿವಾಲಯ ಆಕ್ಷೇಪವೆತ್ತಿದ್ದ ಕಾರಣ ಕಡತವನ್ನು ರಾಜ್ಯ ಸರಕಾರಕ್ಕೆ ವಾಪಸ್‌ ಕಳುಹಿಸಲಾಗಿತ್ತು.

2017: ನವದೆಹಲಿ/ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರಿಗೆ ಸುಪ್ರೀಂಕೋರ್ಟ್
ಬರೋಬ್ಬರಿ 25 ಲಕ್ಷ ರೂಪಾಯಿ ದಂಡ ವಿಧಿಸಿರುವ ಪ್ರಸಂಗ ಘಟಿಸಿತು. ಅಬ್ರಹಾಂ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿ, ಅನಗತ್ಯವಾಗಿ ಪಿಐಎಲ್ ಸಲ್ಲಿಸಿ ಕೋರ್ಟ್ ನ ಸಮಯವನ್ನು ವ್ಯರ್ಥಗೊಳಿಸಿರುವುದಾಗಿ ಸುಪ್ರೀಂಪೀಠ ಹೇಳಿತು. 2 ವಾರದಲ್ಲಿ ದಂಡದ ಮೊತ್ತವನ್ನು ತುಂಬುವಂತೆ ಸೂಚನೆ ನೀಡಿತು. ಆಳಂದಲ್ಲಿ ಮಿನಿವಿಧಾನಸೌಧ ನಿರ್ಮಾಣ ಹಿನ್ನೆಲೆಯಲ್ಲಿ, ಬೇರೆ ಸರ್ವೆ ನಂಬ್ರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಟಿಜೆ ಅಬ್ರಹಾಂ ಪಿಐಎಲ್ ನಲ್ಲಿ ದೂರಿದ್ದರು. ಹಾಗಾಗಿ  ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.


2017:  ಮಡಿಕೇರಿ: ಸ್ಯಾಂಡಲ್ ವುಡ್ ನ ಕಿರಿಕ್ ಜೋಡಿಗಳಾದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ
ರಶ್ಮಿಕಾ ಮಂದಣ್ಣ ಹುಟ್ಟೂರಾದ ಕೊಡಗು ಜಿಲ್ಲೆಯ ವಿರಾಜಪೇಟೆಯ ಸೆರೆನಿಟಿ ಸಭಾಂಗಣದಲ್ಲಿ ಈದಿನ ಸಂಜೆ ಉಂಗುರ ಬದಲಿಸಿಕೊಳ್ಳುವ ಶಾಸ್ತ್ರದೊಂದಿಗೆ ಅದ್ದೂರಿಯಾಗಿ ನೆರವೇರಿತು. ಬೆಳಗ್ಗೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ರಕ್ಷಿತ್ ಹಾಗೂ ರಶ್ಮಿಕಾ ಕುಟುಂಬಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದಲ್ಲಿ ಲಗ್ನ ಪತ್ರಿಕೆ ಶಾಸ್ತ್ರ ಪೂರ್ಣಗೊಳಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಶ್ಮಿಕಾ ತಾಯಿ ಸುಮನಾ, ಎಂಗೇಜ್ ಮೆಂಟ್ ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಕ್ಷಿತ್ ಮತ್ತು ರಶ್ಮಿಕಾ ಮದುವೆ 2 ವರ್ಷದ ನಂತರ ನಡೆಯಲಿದೆ ಎಂದು ಹೇಳಿದರು. ಶ್ರದ್ಧಾ ಪೊನ್ನಪ್ಪ ವಿನ್ಯಾಸ ಮಾಡಿರುವ ಉಡುಗೆಯಲ್ಲಿ ರಶ್ಮಿಕಾ ಕಂಗೊಳಿಸಿದರೆ, ರಕ್ಷಿತ್ ತಾವೇ ವಿನ್ಯಾಸ ಮಾಡಿರುವ ವಿಶೇಷ ಸೂಟ್ ಧರಿಸಿದ್ದರು. ಸ್ಯಾಂಡಲ್ ವುಡ್ಡಿನ ಗಣ್ಯರು, ಆತ್ಮೀಯರು, ಹಿತೈಷಿಗಳು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಸಿರು ಬಿಳಿ ಬಣ್ಣದ ಸಭಾಂಗಣದಲ್ಲಿ ಅದ್ದೂರಿ ಗೆಟ್ ಟುಗೆದರ್ ನಡೆಯಿತು. 2 ಅಡಿ ಉದ್ದದ ಕೇಕ್ ಅನ್ನು ರಕ್ಷಿತ್, ರಶ್ಮಿಕಾ ಕತ್ತರಿಸಿದರು.
2017: ಜೆರುಸಲೆಂ: ಇಸ್ರೇಲ್‌ ಜತೆಗಿನ ಭಾರತದ ಒಪ್ಪಂದಗಳನ್ನು ‘ವಿಶೇಷ’ ಎಂದು ಬಣ್ಣಿಸಿದ ಪ್ರಧಾನಮಂತ್ರಿ
ನರೇಂದ್ರ ಮೋದಿ, ‘ಭಯೋತ್ಪಾದನೆ ವಿರುದ್ಧ ಉಭಯರಾಷ್ಟ್ರಗಳು ಜಂಟಿಯಾಗಿ ಹೋರಾಡಲಿವೆ’ ಎಂದು ಹೇಳಿದರು. ಮೂರು ದಿನಗಳ ಭೇಟಿಗಾಗಿ ಮೋದಿ ಇಸ್ರೇಲ್‌ಗೆ ಬಂದಿಳಿಯಲಿದ್ದು, ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಮಂತ್ರಿ ಎನಿಸಲಿದ್ದಾರೆ. ಈ ಭೇಟಿ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಬೆಸೆಯುವಲ್ಲಿ ಮುಖ್ಯ ಪಾತ್ರ ವಹಿಸಲಿದೆ ಎಂದು ಮೋದಿ ಈ ಸಂದರ್ಭದಲ್ಲಿ ‘ಇಸ್ರೇಲ್‌ ಹಯೋಮ್‌’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದರು. ರಕ್ಷಣೆ ಹಾಗೂ ಸೈಬರ್‌ ಸುರಕ್ಷತೆಯ ಕ್ಷೇತ್ರಗಳಲ್ಲಿ ಭಾರತ– ಇಸ್ರೇಲ್‌ ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ.

2017:  ಟಿ, ತಮಿಳುನಾಡು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸೇರಿದ
ಕೊಡನಾಡ್‌ ಎಸ್ಟೇಟ್‌ನ ಅಕೌಂಟಂಟ್‌ ದಿನೇಶ್‌ ಕುಮಾರ್‌ (28) ಎಂಬುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ಕೊಡನಾಡ್‌ ಎಸ್ಟೇಟ್‌ಗೆ ಸಂಬಂಧಿಸಿದ ಮತ್ತೊಂದು ನಿಗೂಢ ಸಾವು ಇದು. ಕೊಡನಾಡ್‌ ಎಸ್ಟೇಟ್‌ನ ಮೂರು ಮಂದಿ ಅಕೌಂಟಂಟ್‌ಗಳ ಪೈಕಿ ದಿನೇಶ್‌ ಕೂಡಾ ಒಬ್ಬರಾಗಿದ್ದರು. ಅವರ ಶವ ಕೊಥಗಿರಿಯ ಅವರ ನಿವಾಸದಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಏಪ್ರಿಲ್ 24ರಂದು ಜಯಲಲಿತಾ ಅವರ ಕೊಡನಾಡ್‌ ಎಸ್ಟೇಟ್‌ ಬಂಗಲೆಗೆ ನುಗ್ಗಿದ್ದ ದುಷ್ಕರ್ಮಿಗಳು ಕಾವಲುಗಾರರಾದ ಓಂ ಬಹದ್ದೂರ್‌ (51) ಮತ್ತು ಕೃಷ್ಣ ಬಹದ್ದೂರ್‌ (37) ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಓಂ ಬಹದ್ದೂರ್‌ ಮೃತರಾಗಿದ್ದರು. ಕೃಷ್ಣ ಬಹದ್ದೂರ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದ ಶಂಕಿತ ಆರೋಪಿಗಳಾಗಿದ್ದ ಸಿ. ಕನಕರಾಜು (36) ಮತ್ತು ಕೆ.ವಿ. ಸಾಯನ್‌ (35) ಎಂಬುವರು ಎರಡು ತಿಂಗಳ ಹಿಂದೆ ರಸ್ತೆ ಅಪಘಾತಕ್ಕೀಡಾಗಿದ್ದರು. ಕನಕರಾಜು ಏಪ್ರಿಲ್‌ 28ರಂದು ಸೇಲಂ ಜಿಲ್ಲೆಯ ಅತ್ತೂರ್‌ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದ. ಸಾಯನ್‌ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಏಪ್ರಿಲ್‌ 29ರ ಬೆಳಗಿನ ಜಾವ ಕನ್ನಾಡಿ ಜಂಕ್ಷನ್‌ ಸಮೀಪ ಅಪಘಾತಕ್ಕೀಡಾಗಿತ್ತು. ಸಾಯನ್‌ ಕುಟುಂಬ ಸಮೇತ ತ್ರಿಶೂರ್‌ ಕಡೆಗೆ ಹೊರಟಿದ್ದ ವೇಳೆ ಕಾರಿಗೆ ಲಾರಿ ಡಿಕ್ಕಿ ಹೊಡೆದು ಸಾಯನ್‌ ಪತ್ನಿ ಮತ್ತು ಐದು ವರ್ಷದ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಸಾಯನ್‌ ಗಂಭೀರವಾಗಿ ಗಾಯಗೊಂಡಿದ್ದ. ಕನಕರಾಜು 2008ರಿಂದ ಜಯಲಲಿತಾ ಅವರ ಖಾಸಗಿ ಕಾರಿನ ಚಾಲಕನಾಗಿದ್ದ. ಜಯಲಲಿತಾ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಆತನನ್ನು 2013ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು.
2008: ಅಮರನಾಥ ದೇವಸ್ಥಾನದ ಆಡಳಿತ ಮಂಡಳಿಗೆ ನೀಡಿದ್ದ ಭೂಮಿಯನ್ನು ವಾಪಸ್ಸು ಪಡೆದ ಜಮ್ಮು- ಕಾಶ್ಮೀರ ಸರ್ಕಾರದ ಕ್ರಮ ವಿರೋಧಿಸಿ ಹಿಂದೂಪರ ಸಂಘಟನೆಗಳು ನೀಡಿದ್ದ ಭಾರತ್ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವಾರು ರಾಜ್ಯಗಳಲ್ಲಿ ಜನಜೀವನಕ್ಕೆ ತೊಂದರೆಯಾಯಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರೈಲುಗಳನ್ನು ನಿಲ್ಲಿಸಿದ, ರಸ್ತೆ ತಡೆ ಮಾಡಿದ ಹಾಗೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಪ್ರಕರಣಗಳೂ ನಡೆದವು.

2007: ಚಂಡೀಗಢ ಉದ್ಯಮಿ ಬಲಬೀರ್ ಸಿಂಗ್ ಉಪ್ಪಲ್ ಅವರು 15 ಕೆಜಿ ತೂಕದ 1.5 ಕೋಟಿ ಮೌಲ್ಯದ ಬಂಗಾರದ ಪೂಜಾ ಸಾಮಗಿಗಳನ್ನು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟಿಗೆ ದಾನ ಮಾಡಿದರು.

2007: ಪಾಕಿಸ್ಥಾನದ ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಅಡಗಿ ಕುಳಿತಿದ್ದ ತೀವ್ರಗಾಮಿ ವಿದ್ಯಾರ್ಥಿಗಳು ಹಾಗೂ ಪಾಕಿಸ್ಥಾನದ ಅರೆ ಸೇನಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕ ಹಾಗೂ ಒಬ್ಬ ನಾಗರಿಕ ಸೇರಿ 11 ಜನ ಮೃತರಾದರು. ಅಡಗಿದ್ದ ಉಗ್ರರನ್ನು ಹೊರಗಟ್ಟುವ ಸಲುವಾಗಿ ನಡೆದ ಕಾರ್ಯಾಚರಣೆ ಕಾಲದಲ್ಲಿ ಈ ಘಟನೆ ಸಂಭವಿಸಿತು.

2007: ನ್ಯಾಟೊ ಮತ್ತು ಆಫ್ಘಾನಿಸ್ಥಾನ ಸೇನಾ ಪಡೆಗಳು ಕಂದಹಾರ ಪ್ರಾಂತ್ಯದ ಜರಿ ಜಿಲ್ಲೆಯಲ್ಲಿ ಈದಿನ ರಾತ್ರಿ ನಡೆಸಿದ ಕಾರ್ಯಾಚರಣೆಯ್ಲಲಿ 33 ತಾಲಿಬಾನ್ ಉಗ್ರರು ಮೃತರಾದರು. ನ್ಯಾಟೊ ಪಡೆ ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಿತು. ದಿನದ ಹಿಂದೆ ಕಂದಹಾರದ ರಸ್ತೆ ಬದಿಂಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಏಳು ಮಂದಿ ಆಫ್ಘನ್ ಪೊಲೀಸರು ಪ್ರಾಣ ಕಳೆದುಕೊಂಡಿದ್ದರು.

2007: ರಾಷ್ಟ್ರಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ ಸರ್ಧಿಸಿದ ಪ್ರತಿಭಾ ಪಾಟೀಲ್ ಅವರ ನಾಮಪತ್ರ ತಿರಸ್ಕರಿಸುವಂತೆ ಆದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಅರ್ಜಿಯಲ್ಲಿ ಮಾಡಿದ ಆರೋಪಗಳನ್ನು ಸಮರ್ಥಿಸುವ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಮತ್ತು ಪಿ.ಕೆ.ಬಾಲಸುಬ್ರಹ್ಮಣ್ಯನ್ ಅವರನ್ನೊಳಗೊಂಡ ಪೀಠ ತಿಳಿಸಿತು. ಸಹಕಾರ ಬ್ಯಾಂಕ್ ಹಾಗೂ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆಸಿದ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ್ಯದನ್ನು ಅನರ್ಹಗೊಳಿಸಬೇಕೆಂದು ಕೋರಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲರಾದ ಮನೋಹರ್ ಲಾಲ್ ಶರ್ಮಾ ಸಲ್ಲಿಸಿದ್ದರು. ಜಲಗಾಂವಿನಲ್ಲಿ ಪ್ರತಿಭಾ ಪಾಟೀಲ್ ಅವರು 1994 ರಲ್ಲಿ ಸಕ್ಕರೆ ಕಾರ್ಖಾನೆಯ ಹೆಸರಿನಲ್ಲಿ 17.7 ಕೋಟಿ ಸಾಲ ತೆಗೆದಿದ್ದರು. ಈ ಸಾಲವನ್ನು ಇದುವರೆಗೂ ಮರುಪಾವತಿ ಮಾಡಿಲ್ಲ. ಇದಲ್ಲದೆ ಪ್ರತಿಭಾ ಪಾಟೀಲ್ ಹಾಗೂ ಅವರ ಸಂಬಂಧಿಕರ ಹತೋಟಿಯಲ್ಲಿನ ಮಹಿಳಾ ಸಹಕಾರಿ ಬ್ಯಾಂಕಿನಲ್ಲಿ 30 ಮಂದಿ ಉದ್ಯೋಗಿಗಳಿಂದ ಕಾರ್ಗಿಲ್ ಯುದ್ಧ ಸಂತ್ರಸ್ತರಿಗೆಂದು ಸಂಗ್ರಹಿಸಲಾದ ಹಣವನ್ನು ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿಲ್ಲ. ಇದು ಗಂಭೀರ ಅಪರಾಧ ಎಂಬುದು ಅರ್ಜಿದಾರರ ಆರೋಪವಾಗಿತ್ತು.

2007: ಅನಾರೋಗ್ಯದ ಬಳಿಕ ಜುಲೈ 2ರಂದು ಮುಂಬೈಯಲ್ಲಿ ನಿಧನರಾದ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ದಿಲೀಪ್ ಸರ್ದೇಸಾಯಿ (67) ಪಾರ್ಥಿವ ಶರೀರದ ಅಂತ್ಯಸಂಸ್ಕಾರ ದಕ್ಷಿಣ ಮುಂಬೈಯ ಚಂದನವಾಡ ರುದ್ರಭೂಮಿಯಲ್ಲಿ ನಡೆಯಿತು. ಸರ್ದೇಸಾಯಿ ಅವರ ಪುತ್ರ ಖ್ಯಾತ ಪತ್ರಕರ್ತ ರಾಜ್ ದೀಪ್ ಕೊನೆಯ ಸಾಂಪ್ರದಾಯಿಕ ವಿಧಿಯನ್ನು ಪೂರೈಸಿದರು.

2006: ಭಾರತವು ವಿಂಡೀಸ್ ನೆಲದಲ್ಲಿ 35 ವರ್ಷಗಳ ಬಳಿಕ ನಾಲ್ಕು ಪಂದ್ಯಗಳ ಸರಣಿಯ ಅಂತಿಮ ಟೆಸ್ಟಿನ್ಲಲಿ 49 ರನ್ನುಗಳ ಗೆಲುವು ಸಾಧಿಸಿ, 1-0 ಅಂತರದಲ್ಲಿ ಸರಣಿ ಗೆಲುವಿನ ಮಹತ್ವದ ಸಾಧನೆಯನ್ನು ಮಾಡಿತು.

2006: ಮುಂಬೈ, ಒರಿಸ್ಸಾ, ಕೇರಳದಲ್ಲಿ ಭಾರಿ ಮಳೆಗೆ ಸಿಲುಕಿ 14 ಜನ ಮೃತರಾದರು.

1980: ಭಾರತದ ಕ್ರಿಕೆಟ್ ಆಟಗಾರ ಸ್ಪಿನ್ ಬೌಲರ್ ಹರ್ ಭಜನ್ ಸಿಂಗ್ ಜನ್ಮದಿನ.

1971: ಅಮೆರಿಕನ್ ರಾಕ್ ಗ್ರೂಪ್ `ಡೋರ್ಸ್' ನ ಮುಖ್ಯ ಗಾಯಕ ಜಿಮ್ ಮೊರ್ರಿಸನ್ ಪ್ಯಾರಿಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

1969: `ರೋಲ್ಲಿಂಗ್ ಸ್ಟೋನ್ಸ್' ರಾಕ್ ಗುಂಪಿನ ಸ್ಥಾಪಕ ಸದಸ್ಯ ಬ್ರಯಾನ್ ಜೋನ್ಸ್ ಅತಿಯಾದ ಮಾದಕ ದ್ರವ್ಯ ಸೇವನೆಯ ಪರಿಣಾಮವಾಗಿ ತನ್ನ ಈಜುಕೊಳದಲ್ಲೇ ಮುಳುಗಿ ಅಸುನೀಗಿದ.

1897: ಹಂಸಾ ಜೀವರಾಜ್ ಮೆಹ್ತಾ (1897-1995) ಜನ್ಮದಿನ. ಸಾಮಾಜಿಕ ಕಾರ್ಯಕರ್ತೆ ಹಾಗೂ ಶಿಕ್ಷಣತಜ್ಞೆಯಾಗಿದ್ದ ಮೆಹ್ತಾ ಬರೋಡಾದ ಮಹಾರಾಜಾ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಉಪಕುಲಪತಿಯಾಗುವ ಮೂಲಕ ಭಾರತದ ಪ್ರಥಮ ಮಹಿಳಾ ಉಪಕುಲಪತಿ ಎಂಬ ಖ್ಯಾತಿಗೆ ಪಾತ್ರರಾದರು.

1850: ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಧ್ಯಕ್ಷ `ಕೊಹಿನೂರ್ ವಜ್ರ'ವನ್ನು ಇಂಗ್ಲೆಂಡಿನ ರಾಣಿ ವಿಕ್ಟೋರಿಯಾಗೆ ಹಸ್ತಾಂತರಿಸಿದ. ಈ ವಜ್ರವನ್ನು ಲಾರ್ಡ್ ಡಾಲ್ ಹೌಸಿ ಭಾರತದಿಂದ ತಂದಿದ್ದ. ಪಂಜಾಬಿನ ಮಹಾರಾಜ ದಲೀಪ್ ಸಿಂಗ್ ತಾನು ಗದ್ದುಗೆಯಿಂದ ಇಳಿದ ಬಳಿಕ ಈ ವಜ್ರವನ್ನು ಡಾಲ್ ಹೌಸಿಗೆ ನೀಡಿದ್ದ.

No comments:

Post a Comment