ನಾನು ಮೆಚ್ಚಿದ ವಾಟ್ಸಪ್

Tuesday, July 10, 2018

ಇಂದಿನ ಇತಿಹಾಸ History Today ಜುಲೈ 10

 

2018: ಮೇ ಸಾಯ್, ಥಾಯ್ಲೆಂಡ್: ಸತತ ಮೂರು ದಿನಗಳ ಕಾರ್ಯಾಚರಣೆಯ ಬಳಿಕ ಥಾಯ್ಲೆಂಡಿನ ಕಡಿದಾದ ಥಾಮ್ ಲುವಾಂಗ್ ಗುಹೆಯಲ್ಲಿ ಪ್ರವಾಹದ ನೀರಿನ ಮಧ್ಯೆ ಸಿಲುಕಿದ್ದ ಫುಟ್ಬಾಲ್ ತಂಡದ ಎಲ್ಲ ೧೨ ಬಾಲಕರು ಮತ್ತು ೨೫ರ ಹರೆಯದ ತರಬೇತಿದಾರನನ್ನು (ಕೋಚ್) ಸುರಕ್ಷಿತವಾಗಿ ಹೊರತರುವಲ್ಲಿ ಥಾಯ್ ನೇವಿ ಸೀಲ್ಸ್ ರಕ್ಷಣಾ ಪಡೆ ಯಶಸ್ವಿಯಾಯಿತು. ಜುಲೈ ೮ರ ಭಾನುವಾರ ಆರಂಭಗೊಂಡಿದ್ದ ಕಾರ್ಯಾಚರಣೆಯಲ್ಲಿ ಮೊದಲ ಹಂತದಲ್ಲಿ ನಾಲ್ವರು ಮತ್ತು ಜು.9ರ ಸೋಮವಾರ ಮತ್ತೆ ನಾಲ್ವರು ಬಾಲಕರನ್ನು ಹೊರಕರೆತರಲಾಗಿತ್ತು.  ಜು.10ರ ಮಂಗಳವಾರ ಮತ್ತೆ ಕಾರ್ಯಾಚರಣೆ ಮುಂದುವರಿಸಿ, ಉಳಿದ ಐವರನ್ನು ಹೊರ ತರುವ ಮೂಲಕ ಗುಹೆಯಲ್ಲಿ ಸಿಲುಕಿಕೊಂಡಿದ್ದ ಎಲ್ಲ ೧೨ ಬಾಲಕರು ಮತ್ತು ಫುಟ್ಬಾಲ್ ತಂಡದ ತರಬೇತಿದಾರನನ್ನು ಮಧ್ಯಾಹ್ನದ ವೇಳೆಗೆ ಹೊರತರಲಾಯಿತು.  ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿಕೊಂಡಿದ್ದ ೧೨ ಬಾಲಕರು ಮತ್ತು ಕೋಚ್ ರಕ್ಷಣಾ ಕಾರ್ಯಾಚರಣೆ ಅತ್ಯಂತ ಅಪಾಯಕಾರಿ ಮತ್ತು ಸಾಹಸವಾಗಿದ್ದು ಜಗತ್ತಿನ ಗಮನ ಸೆಳೆದಿತ್ತು.  ಅಮೆರಿಕ, ಇಂಗ್ಲೆಂಡ್, ಜಪಾನ್ ಸಹಿತ ವಿವಿಧ ರಾಷ್ಟ್ರಗಳ ತಜ್ಞರು, ಮುಳುಗುಗಾರರು ಥಾಯ್ ನೇವಿ ಸೀಲ್ಸ್ ಪಡೆಗೆ ನೆರವು ನೀಡಿದ್ದು, ಬಾಲಕರ ರಕ್ಷಣೆಗೆ ಶ್ರಮಿಸಿದ್ದರು.  ‘ಇದು ಪವಾಡವೇ ಅಥವಾ ವಿಜ್ಞಾನವೇ ಅಥವಾ ಬೇರೆ ಏನೋ ಆಗಿರಬಹುದೇ ಎಂಬುದು ನಮಗೆ ಖಚಿತವಿಲ್ಲ. ಅಂತೂ ಎಲ್ಲ ಹದಿಮೂರೂ ಮಂದಿಯನ್ನು ನಾವೀಗ ಪ್ರವಾಹದ ನೀರು ತುಂಬಿದ್ದ ಕಡಿದಾದ ಗುಹೆಯಿಂದ ಹೊರಕ್ಕೆ ತಂದಿದ್ದೇವೆ ಎಂದು ಸೀಲ್ ಘಟಕ ತನ್ನ ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಿತು.  ‘ಫುಟ್ಬಾಲ್ ತಂಡದ ಎಲ್ಲ ೧೩ ಮಂದಿಯೂ ಸುರಕ್ಷಿತರಾಗಿದ್ದಾರೆ ಎಂದು ಸೀಲ್ ಹೇಳಿತು.  ೧೧ರಿಂದ ೧೬ರ ನಡುವಣ ಹರೆಯದ ಬಾಲಕರು ಮತ್ತು ಅವರ ತರಬೇತಿದಾರ ಉತ್ತರ ಥಾಯ್ಲೆಂಡಿನ ಮ್ಯಾನ್ಮಾರ್ ಗಡಿಯ ಪರ್ವತ ಪ್ರದೇಶದ ಕಡಿದಾದ ಥಾಮ್ ಲುವಾಂಗ್ ಗುಹೆಯನ್ನು ಜೂನ್ ೨೩ರಂದು ತಮ್ಮ ಫುಟ್ ಬಾಲ್ ಅಭ್ಯಾಸದ ಬಳಿಕ ಪ್ರವೇಶಿಸಿದ್ದರು. ಮತ್ತು ಭಾರೀ ಮಳೆಯ ಕಾರಣ ಗುಹೆಯ ಒಳಸೇರಿದ ಪ್ರವಾದ ನೀರು ಮತ್ತು ಕೆಸರಿನ ಮಧ್ಯೆ ಸಿಕ್ಕಿಹಾಕಿಕೊಂಡಿದ್ದರು. ಇಬ್ಬರು ಬ್ರಿಟಿಷ್ ಮುಳುಗುಕಾರರು ಪತ್ತೆ ಹಚ್ಚುವವರೆಗೆ ಈ ಬಾಲಕರು ಮತ್ತು ಅವರ ತರಬೇತಿದಾರ ೯ ದಿನಗಳನ್ನು ಗುಹೆಯೊಳಗಿನ ಕತ್ತಲಲ್ಲಿ ಕಳೆದಿದ್ದರು. ರಕ್ಷಿಸಲ್ಪಟ್ಟಿರುವ ಎಲ್ಲ ಬಾಲಕರೂ ಧೈರ್ಯದಿಂದಿದ್ದು, ನಸುನಗುವಿನೊಂದಿಗೆ ಮುಳುಗುಕಾರರನ್ನು ಅಚ್ಚರಿಗೊಳಿಸಿದ್ದರು. ಬಳಿಕ ಆಮ್ಲಜನಕದ ಸಿಲಿಂಡರುಗಳ ಜೊತೆಗೆ ತಜ್ಞರು, ಮುಳುಗುಕಾರರು ಅವರ ರಕ್ಷಣೆಯ ಕಾರ್‍ಯಕ್ಕೆ ಇಳಿದರು. ಒಬ್ಬ ಬಾಲಕನಿಗೆ ಇಬ್ಬರು ಮುಳುಗು ತಜ್ಞರು ಜೊತೆಯಾಗಿ ಒಟ್ಟು ನಾಲ್ವರನ್ನು ಹೊರತಂದಿದ್ದರು. ವಾಪಸ್ ಬರುವಾಗ ಗುರುತಿಗಾಗಿ ಹಗ್ಗವನ್ನು ಬಳಸಲಾಗಿತ್ತು. ಗುಹೆಯ ಚಿತ್ರಣ ಅರಿತಿದ್ದ ಕಾರಣ ಭಾನುವಾರ ತೆರಳಿದ್ದ ತಂಡವನ್ನೇ ಸೋಮವಾರ ಕಳುಹಿಸಲಾಗಿತ್ತು. ಕಾರ್ಯಾಚರಣೆಗೆ ೩-೪ ದಿನ ಬೇಕಾಗಬಹುದು ಎಂದು ಮೊದಲಿಗೆ ಅಂದಾಜು ಮಾಡಲಾಗಿತ್ತು. ಆದರೆ ಈದಿನ ಸಂಜೆ ೫.೩೦ರ ವೇಳೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿತು. ಫುಟ್ಬಾಲ್ ತಂಡದಲ್ಲಿ ಅತ್ಯಂತ ಕಿರಿಯ ಸದಸ್ಯನಾದ ಚಾನಿನ್ ವಿಂಬುನ್ ರುಂಗ್ ಗ್ರುವೆಂಗ್ ಅವರು ಗುಹೆಯಿಂದ ರಕ್ಷಿಸಲ್ಪಟ್ಟ ೧೧ನೇ ವ್ಯಕ್ತಿ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು.

2018: ಚೆನ್ನೈ : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ತಮಿಳು ಭಾಷೆಯಲ್ಲಿ ಬರೆದಿರುವ ಎಲ್ಲ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿ ತಮಿಳಿಗೆ ಭಾಷಾಂತರಗೊಂಡಿರುವ ೪೯ ಪ್ರಶ್ನೆಗಳಿಗೆ ತಲಾ ೪ ಕೃಪಾಂಕಗಳನ್ನು ನೀಡುವಂತೆ ಮದ್ರಾಸ್ ಹೈಕೋರ್ಟಿನ ಮದುರೈ ಪೀಠವು ಕೇಂದ್ರೀಯ ಶಿಕ್ಷಣ ಮಂಡಳಿಗೆ (ಸಿಬಿಎಸ್ ಇ) ಆದೇಶ ನೀಡಿತು.  ಎರಡು ವಾರಗಳ ಒಳಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪರಿಷ್ಕರಿಸಿ ಹೊಸದಾಗಿ ಪ್ರಕಟಿಸುವಂತೆಯೂ ಹೈಕೋರ್ಟ್ ಸಿಬಿಎಸ್ ಇ ಗೆ ಸೂಚಿಸಿತು.  ವೈದ್ಯಕೀಯ ಪ್ರವೇಶಕ್ಕೆ ಸಂಬಂಧಿಸಿದ ನೀಟ್ ಪರೀಕ್ಷೆಯಲ್ಲಿ ೪೯ ಪ್ರಶ್ನೆಗಳನ್ನು ತಪ್ಪಾಗಿ ಭಾಷಾಂತರಿಸಿರುವುದು   ಕಂಡು ಬಂದ ಹಿನ್ನೆಲೆಯಲ್ಲಿ  ಹೈಕೋರ್ಟ್ ಈ ನಿರ್ಧಾರ ತೆಗೆದುಕೊಂಡಿತು.  ತಮಿಳು ಮಾಧ್ಯಮ ಪ್ರಶ್ನೆ ಪತ್ರಿಕೆಯಲ್ಲಿ ಕಂಡು ಬಂದಿದ್ದ ಭಾಷಾಂತರ ದೋಷವನ್ನು ಉಲ್ಲೇಖಿಸಿ ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಪರಿಹಾರವಾಗಿ ಕೃಪಾಂಕಗಳನ್ನು ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.  ಕಳೆದ ಜುಲೈ ೬ರಂದು ಮದ್ರಾಸ್ ಹೈಕೋರ್ಟ್ ಸಿಬಿಎಸ್‌ಇ ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ’ಲೋಪ ದೋಷಗಳ ವಿಷಯದಲ್ಲಿ ನೀವು ಸರ್ವಾಧಿಕಾರಿಯಂತೆ ವರ್ತಿಸುತ್ತೀರಿ ಎಂದು ಚಾಟಿ ಬೀಸಿತ್ತು.  ಏನಿದ್ದರೂ, ಅರ್ಹ ಎಂಬಿಬಿಎಸ್  ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸುವುದು ಅಧಿಕಾರಿಗಳಿಗೆ ಬಿಟ್ಟ ವಿಷಯ ಎಂದು ಕೋರ್ಟ್ ಹೇಳಿತು.  
ನ್ಯಾಯಮೂರ್ತಿಗಳಾದ ಸಿ.ಟಿ. ಸೆಲ್ವಂ ಮತ್ತು ಎ.ಎಂ. ಬಶೀರ್ ಅಹ್ಮದ್ ಅವರನ್ನು ಒಳಗೊಂಡ  ವಿಭಾಗೀಯ ಪೀಠವು ’ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಸೂಕ್ತವಾಗಿ ಪರಿಹಾರ ಒದಗಿಸಬೇಕು ಎಂದು ಹೇಳಿತು. ಸಂಬಂಧ ಪಟ್ಟ ಭಾಷೆಗಳಲ್ಲಿ ನೀಡಲಾಗಿರುವ ಉತ್ತರಗಳನ್ನು ಅಂಗೀಕರಿಸಲು ಪೀಠ ನಿರಾಕರಿಸಿತು. ಸಂಬಂಧಪಟ್ಟ ತಾಂತ್ರಿಕ ಪದಗಳ ಬಗ್ಗೆ ತಿಳಿವಳಿಕೆ ಇದ್ದ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕಾಗಿತ್ತು ಎಂದು ನ್ಯಾಯಮೂರ್ತಿಗಳು ಹೇಳಿದರು.  ಉತ್ತರ ಕೀಗಳನ್ನು ಪ್ರಕಟಿಸುವ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿತು. ರಾಷ್ಟ್ರ ಮಟ್ಟದ ಯಾವುದೇ ಒಂದು ಮಂಡಳಿ ಉತ್ತರಗಳ ಬಗ್ಗೆ ಅನಿಶ್ಚಿತವಾಗಿ ಇರಲು ಹೇಗೆ ಸಾಧ್ಯ? ಎಂದು ಪೀಠ ಪ್ರಶ್ನಿಸಿತು.  ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಯು ತಪ್ಪು ಪ್ರಶ್ನೆಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಯ ಸ್ಥಾನದಲ್ಲಿ ನಿಂತುಕೊಂಡು ಇದನ್ನು ಅರ್ಥೈಸಿಕೊಳ್ಳಬೇಕು ಎಂದು ಪೀಠ ಹೇಳಿತು.  ಖಾಸಗಿ ವಿದ್ಯಾರ್ಥಿಗಳು ನೀಟ್ ಗಾಗಿ ಅರ್ಜಿ ಸಲ್ಲಿಸಲು ಏಕೆ ಅರ್ಹರಲ್ಲ ಎಂದೂ ಪೀಠ ಕೇಳಿತು.  ತಾಯಿ, ಸಹೋದರ-ಸಹೋದರಿಯರು, ಅಸ್ವಸ್ಥ ಪಾಲಕರು ಮತ್ತು ಹಿರಿಯರನ್ನು ನೋಡಿಕೊಳ್ಳಬೇಕಾದ  ಸಹಸ್ರಾರು ಮಕ್ಕಳೂ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ವಿದ್ಯಾವಂತರಾಗಬೇಕೆಂಬ ಏಕೈಕ ಆಸೆಯೊಂದಿಗೆ ಕಷ್ಟ ಪಟ್ಟು ದುಡಿಯುತ್ತಾ ಸ್ವಲ್ಪ ಹೆಚ್ಚುವರಿ ಗಳಿಕೆ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಯಸುತ್ತಾರೆ. ಅಂತಹ ಮಕ್ಕಳನ್ನು ಅವಕಾಶ ವಂಚಿತರನ್ನಾಗಿ ಏಕೆ ಮಾಡಬೇಕು? ಎಂದು ಪೀಠ ಪ್ರಶ್ನಿಸಿತು.  ನಿಗದಿತ ಗಂಟೆಗಳ ಶಿಕ್ಷಣ ಪಡೆದಿಲ್ಲ ಎಂಬ ಕಾರಣಕ್ಕಾಗಿ ಇಂತಹ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಬಿಡಲಾಗುತ್ತಿಲ್ಲ ಅಥವಾ ವಿಜ್ಞಾನದ ವಿಷಯಗಳು ಕೆಲವು ಪ್ರಾಯೋಗಿಕ ತರಬೇತಿಗಳನ್ನು ಹೊಂದಿರಬೇಕಾಗುತ್ತದೆ, ಈ ವಿದ್ಯಾರ್ಥಿಗಳು ಅವುಗಳನ್ನು  ಪಡೆದಿರುವುದಿಲ್ಲ ಎಂಬ ಕಾರಣಕ್ಕಾಗಿ ಅವರಿಗೆ ನೀಟ್ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಲಾಗುತ್ತದೆ ಎಂದು ಪೀಠ ಹೇಳಿತು.  ಗಳಿಸಿದ ಜ್ಞಾನವು ಪರೀಕ್ಷೆಯಲ್ಲಿ ಪ್ರತಿಫಲಿಸುವುದು ಮುಖ್ಯ ವಿಚಾರವಲ್ಲ. ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಇಂತಹ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಬಹುದಲ್ಲ? ಈ ಬಗ್ಗೆ ವ್ಯಾಪಕ ಪ್ರಕಟಣೆಯನ್ನೂ ನೀಡುವ ಮೂಲಕ ಅಗತ್ಯ ಉಳ್ಳ ಇಂತಹ ವಿದ್ಯಾರ್ಥಿಗಳ ಭವಿಷ್ಯವನ್ನು ಅರಳಿಸಬಹುದಲ್ಲ. ನಮ್ಮ ಸಂವಿಧಾನವು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ಒತ್ತು ಕೊಡುತ್ತದೆ ಒಡೆಯುವುದಕ್ಕಲ್ಲ ಎಂದು ಹೇಳಿದ ಪೀಠ, ಈ ವಿಷಯವು ಅಧಿಕಾರಿಗಳ ಗಮನಕ್ಕೆ ಬರುವುದು ಎಂದು ಹಾರೈಸಿತು. ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಟಿಕೆ. ರಂಗರಾಜನ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತ್ತು. ರಂಗರಾಜನ್ ಅವರು ನೀಟ್ ಪರೀಕ್ಷೆಯ ತಮಿಳು ಭಾಷಾ ಪ್ರಶ್ನೆ ಪತ್ರಿಕೆಯಲ್ಲಿ ಕನಿಷ್ಠ ೪೯ ಪ್ರಶ್ನೆಗಳು ತಪ್ಪಾಗಿ ಭಾಷಾಂತರ ಗೊಂಡಿದ್ದ ಹಿನ್ನೆಲೆಯಲ್ಲಿ ಈ ಎಲ್ಲ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕಗಳನ್ನು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

2018: ಬಾಗಲಕೋಟೆ: ರೈತರ ಎರಡು ಲಕ್ಷ ರೂ. ಸಾಲಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದ ನಂತರವೂ ಅನ್ನದಾತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಜಿಲ್ಲೆಯ ಇನ್ನೊಬ್ಬ ರೈತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟಿಸಿತು.  ಬಾದಾಮಿ ತಾಲೂಕಿನ ಬೀರನೂರ ಗ್ರಾಮದ ನಿವಾಸಿ ಮಂಜುನಾಥ ಹೊಸಮನಿ  (೨೬) ಎಂಬ ಯುವ ರೈತ ಸಾಲಬಾಧೆಗೆ ಬೇಸತ್ತು ವಿಷ ಕುಡಿದಿರುವುದು ಬೆಳಕಿಗೆ ಬಂದಿತು. ಕೀಟನಾಶಕ ಸೇವಿಸಿ ಅಸ್ವಸ್ಥನಾಗಿದ್ದ ಹೊಸಮನಿಯನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿತು. ಹೊಸಮನಿ ಮನೆಯ ಹಿತ್ತಲಲ್ಲಿ ಹತ್ತಿಗೆ ಹೊಡೆಯುವ ಕೀಟನಾಶಕ ಎಣ್ಣೆ ಸೇವಿಸಿದ್ದ ಎಂದು ವರದಿ ಹೇಳಿದೆ. ಹೊಸಮನಿ ರಾಷ್ಟ್ರೀಯ ಬ್ಯಾಂಕ್, ಕೃಷಿ ಪತ್ತಿನ ಸಂಘ, ಕೈಗಡ ಸೇರಿ ಒಟ್ಟಾರೆ ೯ ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ೧೫ ಎಕರೆ ಜಮೀನು ಇದ್ದು, ಉಳ್ಳಾಗಡ್ಡಿ, ಮೆಕ್ಕೆಜೋಳ, ತರಕಾರಿ ಬೆಳೆದಿದ್ದ. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಘೋಷಣೆ ಮಾಡಿರುವ ಸಾಲಮನ್ನಾ ಲಾಭ ತಮಗೆ ಸಿಗುತ್ತಿಲ್ಲ.. ಸಾಲದ ಹೊರೆ ಜಾಸ್ತಿ ಆಗಿದೆ ಎಂದು ಮನನೊಂದು ವಿಷ ಸೇವಿಸಿದ್ದಾನೆ ಎಂದು ವರದಿಗಳು ಹೇಳಿದವು. ಸಾಲಮನ್ನಾ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ ಎಂದು ಕೆಲವು ದಿನಗಳ ಹಿಂದೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

2018: ಮುಂಬೈ: ಮೂರು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಜಡಿ ಮಳೆಗೆ ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈ ಮತ್ತೆ ತತ್ತರಿಸಿತು.  ರೈಲ್ವೇ ಸೇವೆಯೂ ಸೇರಿದಂತೆ ನಗರದ ಎಲ್ಲ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡು, ಜನರು ಓಡಾಟಕ್ಕೆ ವ್ಯವಸ್ಥೆ ಇಲ್ಲದೆ ತೀವ್ರ ತೊಂದರೆಗೆ ಒಳಗಾದರು.  ಕಿಕ್ಕಿರಿದು ತುಂಬಿದ್ದ ಜನರನ್ನು ಒಯ್ಯತ್ತಿದ್ದ ಟ್ರಕ್ ಒಂದು ಆಟೋ ರಿಕ್ಷಾ ಮೇಲೆ ಹರಿದ ಬಳಿಕ ಥಾಣೆ ಮತ್ತು ಕಲ್ಯಾಣ ನಡುವಣ ಸಂಚಾರ ಹಾಗೂ ಜನ ಜೀವನ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಬಿರುಮಳೆಯ ಪರಿಣಾಮವಾಗಿ ಮುಂಬೈ - ನಾಸಿಕ್ ಹೆದ್ದಾರಿಯಲ್ಲಿನ  ಸಾಕೇತ್ ಸೇತುವೆಯಲ್ಲಿ ಬಿರುಕುಗಳು ಉಂಟಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಭಿವಂಡಿಯ ಕೊಂಗಾಂವ್ ನಲ್ಲಿ ಟ್ರಕ್ ಒಂದು ಗುಂಡಿಯಲ್ಲಿ ಸಿಲುಕಿ ಆಟೋ ರಿಕ್ಷಾದ ಮೇಲೆ ಎರಗಿದ ಪರಿಣಾಮವಾಗಿ ಅದರಲ್ಲಿದ್ದ ನಾಲ್ವರು ಗಾಯಗೊಂಡರು. ಗಾಯಾಳುಗಳ ಪೈಕಿ ಒಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ.  ಸಾಕೇತ್ ಸೇತುವೆಯಲ್ಲಿ ಮುಂಬೈ ಕಡೆಗೆ ಸಾಗುವ ಲೇನ್ ಮತ್ತು ಕಲ್ಯಾಣದಿಂದ ಥಾಣೆಯತ್ತ ಸಾಗುವ ಎರಡು ಲೇನ್‌ಗಳನ್ನು ಮುಚ್ಚಲಾಯಿತು.  ’ಎಂಜಿಯರ್ ಗಳೂ ಸೇತುವೆಯನ್ನು ಪರೀಕ್ಷಿಸುತ್ತಿದ್ದಾರೆ. ಸಂಚಾರಿ ಪೊಲೀಸರಿಗೆ ತಿಳಿಸಲಾಗಿದ್ದು, ಅವರು ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಥಾಣೆ ಮುನಿಸಿಪಲ್ ಕಾರ್ಪೊರೇಷನ್ನಿನ ದುರಂತ ನಿರ್ವಹಣಾ ಸೆಲ್ ಮುಖ್ಯಸ್ಥ ಸಂತೋಷ ಕದಂ ಹೇಳಿದರು.  ಎನ್ ಡಿ ಆರ್ ಎಫ್ ಮತ್ತು ಕರಾವಳಿ ಕಾವಲು ಪಡೆಗಳು ವಡೋದರಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು ೪೦೦ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಈ ರೈಲುಗಾಡಿಯು ನಲ್ಲಾಸೋಪರ್- ವಿರಾರ್ ಮಧ್ಯೆ ಸಂಚರಿಸಲಾಗದೆ ಸಿಕ್ಕಿಹಾಕಿಕೊಂಡಿತ್ತು. ರೈಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರಿಗೆ ಅಂಧೇರಿಯಿಂದ ಆಹಾರ ವ್ಯವಸ್ಥೆ ಮಾಡಲಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.  ಮಹಾಮಳೆಯಿಂದಾಗಿರುವ ಪರಿಸ್ಥಿತಿ ಎದುರಿಸಲು ನೌಕಾಪಡೆಯನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು. ಮಹಾಮಳೆಯ ಪರಿಣಾಮವಾಗಿ ನಗರದ ’ಡಬ್ಬಾವಾಲರು ತಮ್ಮ ’ಟಿಫಿನ್ ಬಾಕ್ಸ್ ಸೇವೆಯನ್ನು ಸ್ಥಗಿತಗೊಳಿಸಬೇಕಾಯಿತು. ಸ್ಥಳೀಯ ರೈಲುಗಾಡಿಗಳು ಮಳೆಯ ಪರಿಣಾಮವಾಗಿ ವಾಸಿ ಮತ್ತು ವಿರಾರ್ ಮಧ್ಯೆ ನಿಂತುಕೊಂಡಿತು.  ‘ನಗರದಾದ್ಯಂತ ನೀರು ನಿಂತುಕೊಂಡಿರುವ ಕಾರಣ ನಮಗೆ ಈದಿನ ಟಿಫಿನ್ ಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ನಮ್ಮ ಜನರಿಗೆ ಮೊಳಕಾಲು ಮಟ್ಟದ ನೀರಿನಲ್ಲಿ ಸೈಕಲ್ ಓಡಿಸುವುದು ಸಾಧ್ಯವಾಗುತ್ತಿಲ್ಲ ಎಂದು ಮುಂಬೈ ಡಬ್ಬಾವಾಲರ ಸಂಘದ ವಕ್ತಾರ ಸುಭಾಶ್ ತಾಲೇಕರ್ ನುಡಿದರು. ಕಳೆದ ೨೪ ಗಂಟೆಗಳಲ್ಲಿ ದೇಶದ ವಾಣಿಜ್ಯ ರಾಜಧಾನಿಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಮಳೆ ಸುರಿದಿದ್ದು, ಇದು ಸರಾಸರಿ ಮಳೆಗಿಂತ ೫ ಪಟ್ಟು ಹೆಚ್ಚು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿತು.
ಭಾರೀ ಮಳೆಯಿಂದಾಗಿ ರೈಲ್ವೆ ಮತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡದ್ದರಿಂದ ಮುಂಬೈ ಮತ್ತು ಆಸುಪಾಸಿನ ಪಟ್ಟಣಗಳಲ್ಲಿ ಜನಜೀವನ ಬಹುತೇಕ ಸ್ಥಗಿತಗೊಂಡಿತು.  ‘ಕಳೆದ ರಾತ್ರಿಯಿಂದೀಚೆಗೆ ೨೦೦ ಮಿ.ಮೀ.ಗೂ ಹೆಚ್ಚು ಮಳೆ ಸುರಿದಿದ್ದು, ರೈಲ್ವೆ ಹಳಿಗಳ ಮೇಲೆ ನೀರು ತುಂಬಿದೆ. ಪ್ರಯಾಣಿಕರ ಹಿತವನ್ನು ಲಕ್ಷಿಸಿ ನೀರು ಇಳಿಯುವವರೆಗೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹಿರಿಯ ರೈಲ್ವೇ ಅಧಿಕಾರಿಗಳು ತಿಳಿಸಿದರು. ನೀರು ತೆರವುಗೊಳಿಸಲು ಪಂಪಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದೂ ಅವರು ನುಡಿದರು.  ನಲ್ಲಾಸೊಪೋರದಲ್ಲಿ ಫಾಸ್ಟ್ ಲೈನ್ ಲೋಕಲ್ ರೈಲ್ವೇ ಸೇವೆಯೂ ಸ್ಥಗಿತೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಹಾಮಳೆಯ ಪರಿಣಾಮವಾಗಿ ಸುಮಾರು ಕೇಂದ್ರ ರೈಲ್ವೇ ಮತ್ತು ಪಶ್ಚಿಮ ರೈಲ್ವೇಯ ೮೭ಕ್ಕೂ ಹೆಚ್ಚು ಸ್ಥಳೀಯ ರೈಲುಗಳ ಸಂಚಾರ ರದ್ದು ಪಡಿಸಲಾಗಿದೆ. ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದ್ದು, ಮುಂಬೈ ವಿಶ್ವ ವಿದ್ಯಾಲಯದ ಪರೀಕ್ಷೆಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
2008: ಭಾರತ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (ಐಎಇಎ) ನಡುವಿನ ಸುರಕ್ಷತಾ ಒಪ್ಪಂದದ ಕರಡು ಪ್ರತಿಯನ್ನು ಈದಿನ ದಿಢೀರನೆ ಬಹಿರಂಗಪಡಿಸಲಾಯಿತು.

2007: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಮ್ಮಡ್ಲು ಎಂಬಲ್ಲಿ ಈದಿನ ಬೆಳಗ್ಗೆ ನಕ್ಸಲ್ ನಿಗ್ರಹ ಪಡೆ (ಎ ಎನ್ ಎಫ್) ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಬ್ಬ ನಕ್ಸಲೀಯ, ಮತ್ತು ಅವರಿಗೆ ಆಶ್ರಯ ನೀಡಿದ್ದರೆನ್ನಲಾದ ನಾಲ್ವರು ಸ್ಥಳೀಯರು ಸೇರಿದಂತೆ ಐದು ಮಂದಿ ಗುಂಡೇಟಿಗೆ ಬಲಿಯಾದರು. ಮೃತರನ್ನು ಪೊಲೀಸ್ ಇಲಾಖೆಯ ನಕ್ಸಲೀಯರ ಪಟ್ಟಿಯಲ್ಲಿದ್ದ ಗೌತಮ, ಸ್ಥಳೀಯರಾದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಕಾರ್ಯದರ್ಶಿ ಅತ್ಯಡ್ಕದ ಪರಮೇಶ್ವರ್, ಗಾಳಿಗಂಡಿ ತೋಟದಮನೆಯ ಸುಂದರೇಶ್, ರಾಮೇಗೌಡ್ಲು (45), ಆತನ ಪತ್ನಿ ಕಾವೇರಮ್ಮ (35) ಎಂದು ಗುರುತಿಸಲಾಯಿತು.

2007: ಪಾಕಿಸ್ಥಾನದ ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಒಂದು ವಾರದಿಂದ ಅವಿತುಕೊಂಡಿದ್ದ ಉಗ್ರಗಾಮಿಗಳ ವಿರುದ್ಧ ಪಾಕಿಸ್ಥಾನ ಸೇನೆ ಈದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಆರಂಭಿಸಿದ ಪೂರ್ಣ ಪ್ರಮಾಣದ ಕಾರ್ಯಾಚರಣೆಯಲ್ಲಿ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿ ಸೇರಿದಂತೆ 88 ಉಗ್ರರು ಪ್ರಾಣ ಕಳೆದುಕೊಂಡರು. ಲಾಲ್ ಮಸೀದಿಯ ಉಪ ಆಡಳಿತಾಧಿಕಾರಿ ಮತ್ತು ಉಗ್ರರ ನೇತಾರನಾಗಿದ್ದ ಅಬ್ದುಲ್ ರಶೀದ್ ಘಾಜಿ ಜತೆ ಪಾಕಿಸ್ಥಾನ ಆಡಳಿತ ನಡೆಸಿದ ಹನ್ನೊಂದು ಗಂಟೆಗಳ ಮಾತುಕತೆ ವಿಫಲವಾದ ಬಳಿಕ `ಆಪರೇಷನ್ ಸೈಲೆನ್ಸ್'ನ್ನು ನಡೆಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 150 ಜನರನ್ನು ಉಗ್ರರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಕಾರ್ಯಾಚರಣೆಯಲ್ಲಿ 12 ಯೋಧರೂ ಹತರಾದರು.

2007: ಛತ್ತೀಸ್ ಗಢದ ದಾಂಟೇವಾಡ ಜಿಲ್ಲೆಯ ಅರಣ್ಯದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ವಿಶೇಷ ಪೊಲೀಸ್ ಪಡೆ ಜತೆ ನಡೆದ ಗುಂಡಿನ ಕಾಳಗದಲ್ಲಿ 20ಕ್ಕೂ ಹೆಚ್ಚು ಮಾವೋವಾದಿ ನಕ್ಸಲೀಯರು ಮತ್ತು 24 ಪೊಲೀಸರು ಸಾವನ್ನಪ್ಪಿದರು. ರಾಯಪುರದಿಂದ 550 ಕಿ.ಮೀ. ದೂರದ ಎಳಾಂಪಟ್ಟಿ- ರಗದ್ ಗಟ್ಟ ವಲಯದ ಅರಣ್ಯದಲ್ಲಿ ಈ ಗುಂಡಿನ ಕಾಳಗ ನಡೆಯಿತು. ಕೇಂದ್ರ ಮೀಸಲು ಪಡೆ ಮತ್ತು ವಿಶೇಷ ಪೊಲೀಸ್ ಪಡೆಯ 115 ಸದಸ್ಯರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

2006: ಅತಿ ದೊಡ್ಡ ರವಿಕೆ ಹೊಲಿಯುವ ಮೂಲಕ ಎಸ್ಸೆಸ್ಸೆಲ್ಸಿ ಓದಿರುವ ಬೆಂಗಳೂರು ರಾಜಾಜಿನಗರದ ಗೃಹಿಣಿ ಕಮಲಾವತಿ ವಾಸುದೇವ `ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ಸ್ಥಾನ ಗಿಟ್ಟಿಸಿದರು. 2005ರ ಆಗಸ್ಟ್ 23ರಂದು 60 ಅಂಗುಲದ ಪನ್ನಾದ 83.5 ಮೀಟರ್ ಬಟ್ಟೆ ಹಿಡಿದು ಪಟ್ಟಾಗಿ ಕುಳಿತ ಕಮಲಾವತಿ ಆಗಸ್ಟ್ 25ರ ವೇಳೆಗೆ (3 ದಿನದಲ್ಲಿ) 18 ಅಡಿ ಎತ್ತರ, 10 ಅಡಿ 10 ಅಂಗುಲ ಉದ್ದ ಹಾಗೂ 12 ಅಡಿ 6 ಅಂಗುಲ ಸುತ್ತಳತೆಯ ತೋಳುಗಳು, 72.5 ಅಡಿ ಸುತ್ತಳೆಯ ಎದೆಯ ಗಾತ್ರದ ಭಾರಿ ರವಿಕೆಯನ್ನು ಹೊಲಿದು ಮುಗಿಸಿದ್ದರು. ಹೊಲಿಯಲು ಆಕೆ ಬಳಸಿದ ದಾರ 1250 ಮೀಟರುಗಳು.

2006: ಪಾಕಿಸ್ಥಾನ ಅಂತಾರಾಷ್ಟ್ರೀಯ ಏರ್ ಲೈನ್ಸ್ (ಪಿಐಎ) ವಿಮಾನವೊಂದು ಮುಲ್ತಾನ್ ನಗರದ ವಿಮಾನ ನಿಲ್ದಾಣದಿಂದ ಗಗನಕ್ಕೆ ಏರಿದ ಕೆಲವೇ ನಿಮಿಷಗಳಲ್ಲಿ ನೆಲಕ್ಕೆ ಅಪ್ಪಳಿಸಿ ಇಬ್ಬರು ಹಿರಿಯ ರಕ್ಷಣಾ ಅಧಿಕಾರಿಗಳ ಸಹಿತ 45 ಜನ ಮೃತರಾದರು.

2006: ಇನ್ಸಾಟ್ 4 ಸಿ ಸಂಪರ್ಕ ಉಪಗ್ರಹವನ್ನು ಅಂತರಿಕ್ಷಕ್ಕೆ ಸಾಗಿಸಬೇಕಾಗಿದ್ದ ಭೂಸ್ಥಿರ ಕಕ್ಷೆ ಉಪಗ್ರಹ ಉಡಾವಣಾ ವಾಹನವು (ಜಿ ಎಸ್ ಎಲ್ ವಿ-ಎಫ್ ಒ2) ನಭಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ಆಕಾಶದಲ್ಲಿ ಸ್ಫೋಟಗೊಂಡು ಪಥ ಬದಲಿಸಿ ಬಂಗಾಳಕೊಲ್ಲಿಗೆ ಉರಿದು ಬಿತ್ತು.

1994: ಪರಮವೀರ ಚಕ್ರ ಪುರಸ್ಕೃತ ರಾಮರಾವ್ ರಘೋಬ ರಾಣೆ ನಿಧನ.

1992: ರಾಜ್ಯಸಭೆಯ ಉಪಸಭಾಪತಿಯಾಗಿ ನಜ್ಮಾ ಹೆಪ್ತುಲ್ಲಾ ಆಯ್ಕೆ.

1991: ಖ್ಯಾತ ವಿಜ್ಞಾನಿ ಪದ್ಮಭೂಷಣ ಸಿ.ಜಿ. ಪಂಡಿತ್ ನಿಧನ.

1991: ಹತ್ತನೇ ಲೋಕಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಶಿವರಾಜ ಪಾಟೀಲ್ ಆಯ್ಕೆ.

1962: ಸಾಹಿತಿ ಸಕಲವಾರ ಕಾವೇರಪ್ಪ ಜನನ.

1943: ಸಾಹಿತಿ ಲೀಲಾವತಿ ಎಸ್. ರಾವ್ ಜನನ.

1940: ಸಾಹಿತಿ ಶಾರದಾ ಆರ್. ರಾವ್ ಜನನ.

1927: ಸಮಾಜ ಸುಧಾರಕ ಗಂಗಾರಾಮ್ ನಿಧನ.

1865: ಇತಿಹಾಸ ತಜ್ಞ, ಗೆಜೆಟಿಯರ್, ಪ್ರಸಿದ್ಧ ಬಹುಭಾಷಾ ವಿದ್ವಾಂಸ, ಸಂಘ ಸಂಸ್ಥೆಗಳ ಸ್ಥಾಪಕ, ಜನಪ್ರತಿನಿಧಿ ಹಯವದನರಾವ್

(1865-1946) ಅವರು ತಮಿಳುನಾಡಿನ ಕೃಷ್ಣಗಿರಿ ತಾಲ್ಲೂಕಿನ ಹೊಸೂರಿನಲ್ಲಿ ರಾಜಾರಾವ್ ಅವರ ಪುತ್ರನಾಗಿ ಜನಿಸಿದರು.

No comments:

Post a Comment