ನಾನು ಮೆಚ್ಚಿದ ವಾಟ್ಸಪ್

Sunday, July 15, 2018

ಇಂದಿನ ಇತಿಹಾಸ History Today ಜುಲೈ 15

ಇಂದಿನ ಇತಿಹಾಸ History Today ಜುಲೈ 15


2017: ಲಂಡನ್ವಿಂಬಲ್ಡನ್ ಟೆನಿಸ್ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಅಮೆರಿಕದ ವೀನಸ್ವಿಲಿಯಮ್ಸ್ಅವರನ್ನು ಪರಾಭವಗೊಳಿಸಿ  ಸ್ಪೇನ್ ಗಾರ್ಬೈನ್ ಮುಗುರುಜಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
  ಲಂಡನ್ನಿನ ಇಲ್ಲಿನ ಆಲ್‌ ಇಂಗ್ಲೆಂಡ್‌ ಕೋರ್ಟ್‌ನಲ್ಲಿ  ನಡೆದ ಪಂದ್ಯದಲ್ಲಿ  77 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ ಮುಗುರುಜಾ ಅವರು ವೀನಸ್ ಅವರನ್ನು 7-5, 6-0 ನೇರ ಸೆಟ್‍ಗಳಿಂದ ಮಣಿಸಿದರು.

2017: ಡರ್ಬಿ
: ಡರ್ಬಿಯಲ್ಲಿ ನಡೆದ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯ ನ್ಯೂಜಿಲೆಂಡ್ ಎದುರಿನ ಮಹತ್ವದ ಪಂದ್ಯದಲ್ಲಿ ಭಾರತ ತಂಡ 186ರನ್‌ಗಳ ಭಾರಿ ಅಂತರದ ಜಯ ಸಾಧಿಸಿ
ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕಿ ಸೂಜಿ ಬೇಟ್ಸ್ ಭಾರತಕ್ಕೆ ಬ್ಯಾಟಿಂಗ್‌ ಅವಕಾಶ ನೀಡಿ, ಬೌಲಿಂಗ್‌ ಆಯ್ದುಕೊಂಡರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಉತ್ತಮವಾಗಿ ದಾಳಿ ಸಂಘಟಿಸಿದ ಕೀವಿಸ್‌ ಬೌಲರ್‌ಗಳು ಮಿಥಾಲಿ ಪಡೆಯ ಆರಂಭಿಕ ಬ್ಯಾಟ್ಸ್‌ವುಮನ್‌ಗಳನ್ನು ಬೇಗನೆ ಪೆವಿಲಿಯನ್‌ಗಟ್ಟಿ ಸಂಭ್ರಮಿಸಿದರು. ನಿಧಾನಗತಿಯಲ್ಲಿ ಬ್ಯಾಟ್‌ ಬೀಸುತ್ತಿದ್ದ ಸ್ಮೃತಿ ಮಂದಾನ 24 ಎಸೆತಗಳಲ್ಲಿ 13ರನ್‌ ಹಾಗೂ ಪೂನಮ್‌ ರಾವುತ್‌ 11 ಎಸೆತಗಳಲ್ಲಿ 4ರನ್‌ಗಳಿಸಿ ವಿಕೆಟ್‌ ಒಪ್ಪಿಸಿದಾಗ ಭಾರತ ತಂಡದ ಮೊತ್ತ ಕೇವಲ 21! ಈ ವೇಳೆ ಜತೆಯಾದ ನಾಯಕಿ ಮಿಥಾಲಿ ಹಾಗೂ ಹರ್ಮನ್‌ ಪ್ರೀತ್‌ಕೌರ್‌ ಮೂರನೇ ವಿಕೆಟ್‌ಗೆ 132ರನ್‌ ಸೇರಿಸಿ ತಂಡವನ್ನು ಆತಂಕದಿಂದ ಪಾರು ಮಾಡಿದರು. ಜವಾಬ್ದಾರಿಯುತ ಆಟವಾಡಿದ ನಾಯಕಿ ಮಿಥಾಲಿ ಏಕದಿನ ಮಾದರಿಯಲ್ಲಿ ಆರನೇ ಶತಕ ಸಿಡಿಸಿ ಸಂಭ್ರಮಿಸಿದರು. ಅವರು 123 ಎಸೆತಗಳಲ್ಲಿ 109ರನ್‌ ಗಳಿಸಿದರು. ಇನ್ನೊಂದು ತುದಿಯಲ್ಲಿ ನಾಯಕಿಗೆ ಉತ್ತಮ ಬೆಂಬಲ ನೀಡಿದ ಹರ್ಮನ್‌ ಪ್ರೀತ್‌ಕೌರ್‌(60) ಸಹ ಅರ್ಧಶತಕ ಸಿಡಿಸಿ ಮಿಂಚಿದರು.
2017: ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಚೌರಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಗುಂಡು ಹಾಗೂ ಷೆಲ್‌ ದಾಳಿ ನಡೆಸಿದ್ದು, ಒಬ್ಬ ಭಾರತೀಯ ಯೋಧ ಹುತಾತ್ಮರಾದರು ಎಂದು ರಕ್ಷಣಾ ಪಡೆ ವಕ್ತಾರರು ತಿಳಿಸಿದರು. ಪಾಕಿಸ್ತಾನದ ಸೇನೆಯ ದಾಳಿಗೆ ಪ್ರತಿದಾಳಿ ನಡೆಸಿದ ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ 35 ವರ್ಷದ ಯೋಧ ಲ್ಯಾನ್ಸ್‌ ನಾಯಕ ಮೊಹಮದ್ ನಸೀರ್‌ ಅವರು ಪಾಕ್‌ ಸೇನೆಯ ಗುಂಡಿನ ದಾಳಿಗೆ ಹುತಾತ್ಮರಾದರು. ಪಾಕಿಸ್ತಾನ ಸೇನೆಯು ರಾಜೌರಿ ವಲಯದಲ್ಲಿ ಮಧ್ಯಾಹ್ನ 1.30ಕ್ಕೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಭಾರತೀಯ ಸೇನೆ ಪ್ರತಿ ದಾಳಿನಡೆಸಿ ತಕ್ಕ ಉತ್ತರ ನೀಡಿತು ಎಂದು ಅವರು ಹೇಳಿದರು.
2017: ಶ್ರೀನಗರ: ದಕ್ಷಿಣ ಕಾಶ್ಮೀರದ ತ್ರಾಲ್‌ ಪ್ರದೇಶದ ಸತೋರಾದಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಗೈದವು. ಭಯೋತ್ಪಾದಕರ ವಾಸ್ತವ್ಯ ಬಗ್ಗೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಸೇನಾ ಪಡೆಗಳು ಇಬ್ಬರನ್ನು ಹತ್ಯೆಗೈದು ಕಾರ್ಯಾಚರಣೆ ಮುಂದುವರೆಸಿದವು. ಇದೇ ಭಯೋತ್ಪಾದಕರು ಜೂನ್‌ 9 ರಂದು ತ್ರಾಲ್‌ನ  ಅರಿಬಾಲ್‌ನ ಸಿಆರ್‌ಪಿಎಫ್ ಕ್ಯಾಂಪ್‌ಗೆ ಗ್ರೆನೇಡ್‌ ಎಸೆದಿದ್ದರು ಎನ್ನಲಾಗಿದ್ದು, ಈ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಜವಾನ ಗಾಯಗೊಂಡಿದ್ದ. ಪ್ರಸಕ್ತ ವರ್ಷ ಸೇನಾ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು  ಕಾಶ್ಮೀರದಲ್ಲಿ 102 ಉಗ್ರರನ್ನು ಹತ್ಯೆಗೈದಿರುವ ಅಂಕಿ ಅಂಶ ಲಭ್ಯವಾಗಿದೆ. 


2017: ಶ್ರೀನಗರ: ಶ್ರೀನಗರದ ಕೇಂದ್ರೀಯ ಬಂಧೀಖಾನೆಯಲ್ಲಿ ಕಳೆದ 13 ದಿನಗಳಿಂದ ಇರಿಸಲ್ಪಟ್ಟಿದ್ದ  ಜೆಕೆಎಲ್‌ಎಫ್ ಅಧ್ಯಕ್ಷ ಮೊಹಮ್ಮದ್‌ ಯಾಸಿನ್‌ ಮಲಿಕ್‌ನನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು. ಮಲಿಕ್‌ನನ್ನು ಕಳೆದ ಜುಲೈ 3ರಂದು ಬಂಧಿಸಲಾಗಿತ್ತು. ಮಲಿಕ್‌ ಸಹಿತ ಹುರಿಯತ್‌ ಕಾನ್ಫರೆನ್ಸ್‌ ನ ಎರಡೂ ಬಣ ವಾರ ಪೂರ್ತಿ ಪ್ರತಿಭಟನೆ, ರಾಲಿಗೆ ಕರೆ ನೀಡಿದ ಪ್ರಯುಕ್ತ ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧಿಸಲಾಗಿತ್ತು. ಕಳೆದ ವರ್ಷ ಜುಲೈ 8ರಂದು ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ ಹಿಜ್‌ಬುಲ್‌ ಕಮಾಂಡರ್‌ ಬುರ್ಹಾನ್‌ ವಾನಿಯ ಸಾವಿನ ಮೊದಲ ವರ್ಷಾಚರಣೆ ಪ್ರಯುಕ್ತ ಸೈಯದ್‌ ಅಲೀ ಶಾ ಗೀಲಾನಿ ಮತ್ತು ಮೀರ್‌ವೆಜ್‌ ಉಮರ್‌ ಫಾರೂಕ್‌ ವಾರ ಪೂರ್ತಿ ಪ್ರತಿಭಟನೆಗೆ ಕರೆ ನೀಡಿದ್ದರು.

2008: ಜಾರ್ಖಂಡಿನ ಚೈಬಾಸಾದಲ್ಲಿ ನಡೆದ ಮೇವು ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯವೊಂದು ಐಎಎಸ್ ಅಧಿಕಾರಿ ಸಾಜಲ್ ಚಕ್ರವರ್ತಿ ಸಹಿತ 14 ಮಂದಿ ತಪ್ಪಿತಸ್ಥರು ಎಂದು ಘೋಷಿಸಿ ಅವರೆಲ್ಲರಿಗೆ 3ರಿಂದ 6 ವರ್ಷಗಳ ತನಕ ಕಠಿಣ ಜೈಲು ಶಿಕ್ಷೆ ವಿಧಿಸಿತು. ಚೈಬಾಸಾ ಖಜಾನೆಯಿಂದ 38.84 ಕೋಟಿ ರೂಪಾಯಿಯಷ್ಟು ಹಣವನ್ನು ಅಕ್ರಮವಾಗಿ ಹಿಂಪಡೆದ ಆರೋಪ ಈ ವ್ಯಕ್ತಿಗಳ ಮೇಲಿತ್ತು. ಇವರೆಲ್ಲರಿಗೂ 2 ಲಕ್ಷದಿಂದ 50 ಲಕ್ಷ ರೂಪಾಯಿ ತನಕ ದಂಡ ವಿಧಿಸಲಾಯಿತು..

2007: ಭೋಪಾಲ್ ನ ಬರ್ಕತ್ ಉಲ್ಲಾ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಕೊಳವೆ ಬಾವಿ ಮತ್ತು ಕಂದಕದಲ್ಲಿ ಬಿದ್ದ ಮಕ್ಕಳನ್ನು ಸುರಕ್ಷಿತವಾಗಿ ಮೇಲೆತ್ತಲು ಕಡಿಮೆ ವೆಚ್ಚದಯಂತ್ರವನ್ನು ರೂಪಿಸಿದ್ದನ್ನು ಬಹಿರಂಗಪಡಿಸಿದರು. ಇಪ್ಪತ್ತರ ಹರೆಯದ ವಿದ್ಯಾರ್ಥಿಗಳಾದ ಮಯಂಕ್ ಜೈನ್, ಗೌರವ್ ಭಾರ್ಗವ, ಆಶಿಶ್ ಮುಚ್ರಿಕರ್ ಮತ್ತು ಅಶುತೋಷ್ ಶ್ರೀವಾಸ್ತವ್ ಅವರು ಹೆಚ್ಚು ತೂಕದ ಗೊಂಬೆಯನ್ನು ಪ್ರಯೋಗಾರ್ಥವಾಗಿ ಬಳಸಿ, ಕಂದಕದಿಂದ ಮಕ್ಕಳನ್ನು ಪಾರು ಮಾಡುವಂತಹ ಸಲಕರಣೆಯ ವಿನ್ಯಾಸ ರೂಪಿಸಿದ್ದಾರೆ. ಪ್ರೊ.ದಿನೇಶ್ ಅಗರವಾಲ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಇದನ್ನು ವಿನ್ಯಾಸಗೊಳಿಸಿದ್ದಾರೆ. ಬಾವಿಯಲ್ಲಿ ಸಿಲುಕಿದ ಮಗುವನ್ನು ಹೊರತೆಗೆಯಲು ಜೆಸಿಬಿ ಯಂತ್ರ 40-45 ಗಂಟೆ ತೆಗೆದುಕೊಂಡರೆ, ಈ ಯಂತ್ರದಿಂದ ಕೇವಲ ಎರಡು ಗಂಟೆಗಳಲ್ಲಿ ಈ ಕೆಲಸ ಮಾಡಬಲ್ಲುದು. ಎರಡು ಸಾವಿರ ರೂಪಾಯಿಗಳಷ್ಟು ಕಡಿಮೆ ವೆಚ್ಚದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಳಿಸ ಬಹುದು. ಯಾವುದೇ ಬೃಹತ್ ಯಂತ್ರಗಳ ಸಹಾಯವಿಲ್ಲದೆ ಇದನ್ನು ಕಂದಕಕ್ಕೆ ಇಳಿಸಬಹುದು. ಇದರಲ್ಲಿ ಕ್ಯಾಮೆರಾ ಮತ್ತು ಮೈಕ್ ಅಳವಡಿಸಬಹುದು.

2007: ಹದಿನೈದು ದಿನಗಳ ಹಿಂದಷ್ಟೇ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿಗೆ ಬೆಂಕಿ ಹಚ್ಚಿದ್ದ ಶಸ್ತ್ರಸಜ್ಜಿತ ನಕ್ಸಲೀಯರ ತಂಡ, ಈದಿನ ಬೆಳಗಿನ ಜಾವ ಪುನಃ ಆಗುಂಬೆ ಸಮೀಪದ ಗುಬ್ಬಿಗ, ತಲ್ಲೂರು ಅಂಗಡಿ ಗ್ರಾಮಗಳ ಮೇಲೆ ದಾಳಿ ಮಾಡಿ ಅಂಗಡಿ ಮಾಲೀಕ ನಾಗೇಶ, ಇವರ ಸೋದರ ಗುತ್ತಿಗೆದಾರ ಉಮೇಶ, ಬಿದರಗೋಡು ಪಂಚಾಯ್ತಿ ಸದಸ್ಯ ಸತೀಶ ಮತ್ತು ಕೃಷಿಕ ಶಂಕರಪ್ಪ ಅವರ ಮನೆಗೆ ನುಗ್ಗಿ 85,000 ರೂಪಾಯಿ ನಗದು ಹಣ,500 ಗ್ರಾಂ ಚಿನ್ನವನ್ನು ದೋಚಿತು.

2007: ಚಿತ್ರದುರ್ಗದ ಕಾತ್ರಾಳ್ ಕೆರೆ ಸಮೀಪ ಹೆದ್ದಾರಿ 4ರಲ್ಲಿ ಖಾಸಗಿ ಬಸ್, ಟಾಟಾ ಸುಮೋ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ 14 ಜನ ಮೃತರಾಗಿ, ಇಬ್ಬರು ಗಾಯಗೊಂಡರು. ಮಧ್ಯರಾತ್ರಿ 1.30ರ ವೇಳೆಗೆ ಈ ದುರಂತ ಸಂಭವಿಸಿತು. ಮೃತರಾದವರಲ್ಲಿ ಕೆಲವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ನಿವಾಸಿಗಳು. ಮೂವರು ಚಳ್ಳಕೆರೆಯ ಸೋಮಗುದ್ದಿನವರು. ಇವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, 16 ಜನ ಟಾಟಾ ಸುಮೋದಲ್ಲಿ ಉಕ್ಕಡಗಾತ್ರಿ ದೇವರ ದರ್ಶನಕ್ಕೆ ಹೊರಟಿದ್ದರು.

2007: ಕರ್ನಾಟಕದ ಆರು ಕೃಷಿ ಸಂಶೋಧಕರಿಗೆ ಮತ್ತು ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಈ ಬಾರಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಪ್ರಶಸ್ತಿ ಲಭಿಸಿತು. ಬೆಂಗಳೂರಿನ ಡಾ. ಸುಧೀರ್ ಚಂದ್ರ ರಾಯ್, ಧಾರವಾಡದ ಡಾ. ಪ್ರತಿಮಾ ಸಿ ಬಿಲೆಹಾಳ್ ಮತ್ತು ಮಂಗಳೂರಿನ ಡಾ. ಸ್ವಾತಿ ಲಕ್ಷ್ಮಿ ಅವರು ಅತ್ಯುತ್ತಮ ಸ್ನಾತಕೋತ್ತರ ಸಂಶೋಧಕರಿಗೆ ನೀಡುವ 2006ರ ಸಾಲಿನ `ಜವಾಹರಲಾಲ್ ನೆಹರು' ಪ್ರಶಸ್ತಿಗೆ ಪಾತ್ರರಾದರು. ಬೆಂಗಳೂರು ಮೂಲದ ಮತ್ತೊಬ್ಬ ವಿಜ್ಞಾನಿ ಡಾ. ವಿ. ರಾಮಮೂರ್ತಿ 2005-06ರ ಸಾಲಿನ `ಸ್ವಾಮಿ ಸಹಜಾನಂದ ಸರಸ್ವತಿ' ಪ್ರಶಸ್ತಿಗೆ ಆಯ್ಕೆಯಾದರು. ಡಾ. ರವೀಂದ್ರ ಎಚ್ ಪಾಟೀಲ್ ಅವರು 2005-06ರ ಸಾಲಿನ `ಲಾಲ್ ಬಹದೂರ್ ಶಾಸ್ತ್ರಿ ಯುವ ವಿಜ್ಞಾನಿ' ಪ್ರಶಸ್ತಿಗೆ ಪಾತ್ರರಾದರೆ, ಡಾ. ಇಂದ್ರಾಣಿ ಕರುಣಸಾಗರ್ ಅವರು ಒಂದು ಲಕ್ಷ ರೂ. ಬಹುಮಾನ ಮೊತ್ತದ `ರಫಿ ಅಹ್ಮದ್ ಕಿದ್ವಾಯಿ' ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರವು ವಿಸ್ತರಣಾ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅದಕ್ಕೆ ಒಂದು ಲಕ್ಷ ರೂ. ಬಹುಮಾನ ಪ್ರಕಟಿಸಲಾಯಿತು.

2007: ಭಾರತದ ಖ್ಯಾತ ಚೆಸ್ ಆಟಗಾರ್ತಿ ಕೊನೇರು ಹಂಪಿ ಅವರು ಈ ರಾತ್ರಿ ಡಿಫೆರ್ಡಾಂಗಿನಲ್ಲಿ (ಲಕ್ಸೆಂಬರ್ಗ್) ಮುಕ್ತಾಯವಾದ ಕೌಪ್ ಥಿಂಗ್ ಅಂತಾರಾಷ್ಟ್ರೀಯ ಓಪನ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಒಂಬತ್ತನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ವಿಜಯ ಸಾಧಿಸಿ, ಚಾಂಪಿಯನ್ ಪಟ್ಟ ಬಗಲಿಗೆ ಹಾಕಿಕೊಂಡರು. ಕಳೆದ ತಿಂಗಳ ಅಂತ್ಯದಲ್ಲಿ ಹಾಲೆಂಡಿನ ಹಿಲ್ವೆರ್ಸಮ್ನಲ್ಲಿ ನಡೆದ ಎಚ್ ಎಸ್ ಜಿ ಅಂತಾರಾಷ್ಟ್ರೀಯ ಓಪನ್ ಚೆಸ್ ಟೂರ್ನಿಯಲ್ಲಿ ಹಂಪಿ ಚಾಂಪಿಯನ್ ಪಟ್ಟ ಪಡೆದಿದ್ದರು.

2007: ವಾಹನಗಳ ದಟ್ಟಣೆ ಮತ್ತು ವಾಯು ಮಾಲಿನ್ಯದಿಂದ ಬಿಡುಗಡೆ ಹೊಂದಲು ಪ್ಯಾರಿಸ್ ನಗರದಾದ್ಯಂತ ಬಾಡಿಗೆ ಸೈಕಲ್ ಬಳಸಲು ಅವಕಾಶ ಕಲ್ಪಿಸಲಾಯಿತು. ಎಲ್ಲ ಕಡೆಗಳಲ್ಲೂ ಸೈಕಲ್ ನಿಲ್ದಾಣಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಯುರೋಪಿನ ಇತರ ನಗರಗಳಲ್ಲೂ ಇದು ಜನಪ್ರಿಯವಾಗುತ್ತಿದೆ. ನಗರದ ಒಂದು ಸೈಕಲ್ ನಿಲ್ದಾಣದಿಂದ ಇನ್ನೊಂದು ನಿಲ್ದಾಣ ಅಥವಾ ಬೇರೆ ಕಡೆಗೆ ಹೋಗಲು ಬಾಡಿಗೆ ಸೈಕಲ್ಲುಗಳ ವ್ಯವಸ್ಥೆಯನ್ನೂ ಮಾಡಲಾಯಿತು.

2006: ಕರ್ನಾಟಕ ರಾಜ್ಯದ ನೂತನ ಲೋಕಾಯುಕ್ತರಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂತರ್ಿ ಎನ್. ಸಂತೋಷ ಹೆಗ್ಡೆ ಅವರನ್ನು ನೇಮಿಸಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದರು. ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಈ ಅಧಿಸೂಚನೆ ಹೊರಡಿಸಿದರು. ಎನ್. ವೆಂಕಟಾಚಲ ಅವರ ನಿವೃತ್ತಿಯಿಂದ ಈ ಸ್ಥಾನ ತೆರವಾಗಿತ್ತು.

2006: ಸ್ವೀಡನ್ ನೇತೃತ್ವದ ವಿಜ್ಞಾನಿಗಳ ತಂಡವೊಂದು ಕರಡಿಯೊಂದರ ಹಲ್ಲಿನಲ್ಲಿ ತಾವು 4 ಲಕ್ಷ ವರ್ಷಗಳಷ್ಟು ಹಳೆಯ ಡಿಎನ್ಎ ಪತ್ತೆ ಮಾಡಿದೆ ಎಂದು ಸ್ವೀಡನ್ನಿನ ಉಪ್ಸಾಲಾ ವಿಶ್ವವಿದ್ಯಾಲಯ ಪ್ರತಿಪಾದಿಸಿತು. ಈ ತಂಡದಲ್ಲಿ ಸ್ವೀಡನ್, ಸ್ಪೇನ್ ಮತ್ತು ಜರ್ಮನಿಯ ಸಂಶೋಧಕರಿದ್ದು, ಉತ್ತರ ಸ್ಪೇನಿನ ಅಟಪ್ಯುಯೆರ್ಕ ಎಂಬಲ್ಲಿನ ಗುಹೆಯೊಂದರಲ್ಲಿ ಈ ಕರಡಿಯ ಹಲ್ಲನ್ನು ಶೋಧಿಸಿತ್ತು ಎಂದು ಎ ಎಫ್ ಪಿ ಸುದ್ದಿ ಸಂಸ್ಥೆ ಸ್ಟಾಕ್ ಹೋಮ್ನಿಂದ ವರದಿ ಮಾಡಿತು.

2006: ಸರ್. ಸಿ.ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ, ಭಾರತದ ಮೊತ್ತ ಮೊದಲ ಪ್ಲಾಸ್ಟಿಕ್ ತಂತ್ರಜ್ಞಾನ ವಿಜ್ಞಾನಿ ಎಂದು ಗುರುತಿಸಲ್ಪಟ್ಟ ಡಾ. ಕೆ.ಎಸ್. ಜಗದೀಶ್ (51) ತುಮಕೂರಿನಲ್ಲಿ ನಿಧನರಾದರು.

1991: ಕರ್ನಾಟಕ ಕೇಸರಿ ಜಗನ್ನಾಥ ಜೋಶಿ ನಿಧನ.

1932: ಸಾಹಿತಿ ಮನೋರಮ ಎಂ. ಭಟ್ ಜನನ.

1906: ರಸಿಕ ರಂಗ ಕಾವ್ಯನಾಮದಿಂದ ಖ್ಯಾತರಾಗಿರುವ ಸಾಹಿತಿ, ಕಾದಂಬರಿಕಾರ ರಂಗನಾಥ ಶ್ರೀನಿವಾಸ ಮುಗಳಿ (ರಂ.ಶ್ರೀ. ಮುಗಳಿ) ಶ್ರೀನಿವಾಸರಾಯ- ಕಮಲಮ್ಮ ದಂಪತಿಯ ಪುತ್ರನಾಗಿ ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ ಜನಿಸಿದರು. 1993ರ ಫೆಬ್ರುವರಿ 20ರಂದು ಅವರು ನಿಧನರಾದರು.

1904: ಜೈಪುರ ಘರಾನಾದ ಖ್ಯಾತ ಹಾಡುಗಾರ ಮೊಗುಬಾಯಿ ಕುರ್ದಿಕರ ಜನನ.

1903: ಸ್ವಾತಂತ್ರ್ಯ ಸೇನಾನಿ, ಸಮಾಜ ಸುಧಾರಕ ರಾಜಕಾರಣಿ ಕುಮಾರಸ್ವಾಮಿ ಕಾಮರಾಜ್ ಜನನ.

1783: ಭಾರತದ ಖ್ಯಾತ ಸಮಾಜ ಸುಧಾರಕ, ವರ್ತಕ, ಕೈಗಾರಿಕೋದ್ಯಮಿ ಸರ್ ಜೆಮ್ ಶೆಟ್ಜಿ ಜೀಜಾಭಾಯಿ ಅವರು ಈದಿನ ಮುಂಬೈಯಲ್ಲಿ ಜನಿಸಿದರು. ಕೆರೆ, ಬಾವಿ, ರಸ್ತೆ, ಆಸ್ಪತ್ರೆಗಳ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಆರಂಭ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಇತ್ಯಾದಿಗಳ ಮೂಲಕ ತಮ್ಮ ಅಪಾರ ಸಂಪತ್ತನ್ನು ಇವರು ಸಮಾಜ ಸೇವೆಗೆ ವಿನಿಯೋಗಿಸಿದರು.

No comments:

Post a Comment