ನಾನು ಮೆಚ್ಚಿದ ವಾಟ್ಸಪ್

Thursday, July 26, 2018

ಇಂದಿನ ಇತಿಹಾಸ History Today ಜುಲೈ 26

 

2018: ನವದೆಹಲಿ: ಬಿಹಾರದ ಬಾಲಿಕಾ ಆಶ್ರಯಧಾಮದ ಬಾಲಕಿಯರ ಲೈಂಗಿಕ ಶೋಷಣೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸರ್ಕಾರ ಆದೇಶ ನೀಡಿತು. ಆಶ್ರಯ ಧಾಮವನ್ನು ನಡೆಸುತ್ತಿರುವ ಸರ್ಕಾರೇತರ ಸಂಘಟನೆಯ ಮುಖ್ಯಸ್ಥ ಬ್ರಜೇಶ್ ಠಾಕೂರ್ ಕಳೆದ ಲೋಕಸಭಾ ಚುನಾವಣೆ ಕಾಲದಲ್ಲಿ ಮುಜಾಫ್ಫರಪುರದಲ್ಲಿ ಮುಖ್ಯಮಂತ್ರಿಯವರ ಚುನಾವಣಾ ಪ್ರಚಾರ ತಂಡದಲ್ಲಿದ್ದ ಎಂಬುದಾಗಿ ಆರ್ ಜೆಡಿ ಶಾಸಕ ತೇಜಸ್ವಿ ಯಾದವ್ ಆಪಾದಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆಯಿತು. ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಯಾದವ್ ಆಗ್ರಹಿಸಿದ್ದರು.  ಬಿಹಾರ ಆಶ್ರಯಧಾಮಗಳಲ್ಲಿ ಬಾಲಕಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ವರದಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ರಾಜ್ಯ ಸರ್ಕಾರವು ಮನವಿ ಮಾಡಿದರೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವ ಬಗ್ಗೆ ಕೇಂದ್ರವು ಪರಿಶೀಲಿಸುವುದು ಎಂದು ಹೇಳಿದ್ದರು.   ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಪಕ್ಷವು ಬುಧವಾರ ಬಿಹಾರ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್ ಡಿಎ  ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆಪಾದಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು. ಮಹಿಳೆಯರ ವಿರುದ್ಧ ವಿಶೇಷವಾಗಿ ಎಳೆಯ ಬಾಲಕಿಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾವು ’ಎನ್ ಡಿಎ ಭಗಾವೋ, ಬೇಟಿ ಬಚಾವೋ (ಎನ್ ಡಿಎ ಓಡಿಸಿ, ಪುತ್ರಿಯರನ್ನು ರಕ್ಷಿಸಿ) ಹೆಸರಿನಲ್ಲಿ ಈ ತಿಂಗಳ ಕೊನೆಯವಾರ ರಾಜ್ಯ ವ್ಯಾಪಿ ಸೈಕಲ್ ಸಂಘಟಿಸಲು ನಿರ್ಧರಿಸಿದ್ದೇವೆ ಎಂದು ತೇಜಸ್ವಿ ಯಾದವ್ ಹೇಳಿದ್ದರು.  ಕಾಂಗ್ರೆಸ್ ಶಾಸಕ ವಿಜಯಶಂಕರ ದುಬೆ ಅವರು ಕೂಡಾ ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಈ ವರ್ಷ ಜೂನ್ ತಿಂಗಳಲ್ಲಿ ಬೀಗಮುದ್ರೆ  ಮಾಡಲಾದ ಆಶ್ರಯಧಾಮದಲ್ಲಿ ೪೦ಕ್ಕೂ ಹೆಚ್ಚು ಬಾಲಕಿಯರನ್ನು ಇರಿಸಲಾಗಿತ್ತು. ಮುಂಬೈಯ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಬಹಿರಂಗ ಪಡಿಸಿದ ಸಾಮಾಜಿಕ ಆಡಿಟ್ ವರದಿಯಿಂದ ಈ ಬಾಲಿಕಾ ಆಶ್ರಯಧಾಮದ ಬಾಲಕಿರನ್ನು ಲೈಂಗಿಕವಾಗಿ ಶೋಷಿಸುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಇಲ್ಲಿದ್ದ ಸುಮಾರು ೩೦ಕ್ಕೂ ಹೆಚ್ಚು ಬಾಲಕಿಯರು ಕ್ರೌರ್ಯ, ಲೈಂಗಿಕ ಶೋಷಣೆ, ಮಾದಕ ದ್ರವ್ಯದ ಇಂಜೆಕ್ಷನ್ ಪರಿಣಾಮವಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಬಾಲಿಕಾ ಗೃಹ ನಡೆಸುತ್ತಿದ್ದ ಸರ್ಕಾರೇತರ ಸಂಘಟನೆಯನ್ನು (ಎನ್ ಜಿಒ) ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಅಲ್ಲಿ ಇದ್ದ ಎಲ್ಲ ಬಾಲಕಿಯರನ್ನು ಇತರ ಜಿಲ್ಲೆಗಳಿಗೆ ಕಳುಹಿಸಲಾಗಿದ್ದು, ಬಾಲಿಕಾ ಗೃಹಕ್ಕೆ ಬೀಗ ಮುದ್ರೆ ಮಾಡಲಾಗಿತ್ತು.

2018: ವಾಷಿಂಗ್ಟನ್: ಹಿಮಾಲಯ ಪ್ರದೇಶದ ಡೊಕ್ಲಾಮ್ ನಲ್ಲಿ ಚೀನಾ ಸದ್ದು ಗದ್ದಲ ಇಲ್ಲದೆ ಮತ್ತೆ ತನ್ನ ರಸ್ತೆ ನಿರ್ಮಾಣ ಇತ್ಯಾದಿ ಚಟುವಟಿಕೆಗಳನ್ನು ಆರಂಭಿಸಿದೆಯೇ? ಅಮೆರಿಕದ ಕಾಂಗ್ರೆಸ್ ಶಾಸಕರೊಬ್ಬರ ಮಾತನ್ನು ನಂಬುವುದಾದರೆ ಹೌದು.  ಚೀನಾ ಸದ್ದು ಗದ್ದಲ ಇಲ್ಲದೆಯೇ ಡೊಕ್ಲಾಮ್ ಪ್ರದೇಶದಲ್ಲಿ ಚೀನಾ ಮತ್ತೆ ತನ್ನ ಚಟುವಟಿಕೆಗಳನ್ನು ಸದ್ದು ಗದ್ದಲ ಇಲ್ಲದೆಯೇ ಪುನಾರಂಭ ಮಾಡಿದೆ ಎಂದು ಇಲ್ಲಿ ಕಾಂಗ್ರೆಸ್ ಸಭೆಗೆ ತಿಳಿಸಿದ ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಭಾರತವಾಗಲಿ, ಭೂತಾನ್ ಆಗಲಿ ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.  ಹಿಮಾಲಯ ಪ್ರದೇಶದಲ್ಲಿ ಚೀನಾ ಕೈಗೊಂಡಿರುವ ಕ್ರಮಗಳು ವಿವಾದಿತ ದಕ್ಷೀಣ ಚೀನಾ ಸಮುದ್ರದಲ್ಲಿ ಬೀಜಿಂಗ್ ನಡೆಸುತ್ತಿರುವ ಚಟುವಟಿಕೆಗಳನ್ನೇ ಹೋಲುತ್ತಿವೆ ಎಂದು ಅವರು ನುಡಿದರು. ಚೀನಾವು ದಕ್ಷಿಣ ಚೀನಾ ಸಮುದ್ರದಾದ್ಯಂತ ತನಗೆ ಸಾರ್ವಭೌಮತ್ವ ಇದೆ ಎಂದು ಚೀನಾ ಪ್ರತಿಪಾದಿಸುತ್ತಿದೆ. ವಿಯೆಟ್ನಾಮ್, ಮಲೇಶ್ಯಾ, ಫಿಲಿಪ್ಪೈನ್ಸ್ , ಬ್ರೂನಿ ಮತ್ತು ತೈವಾನ್ ಇದಕ್ಕೆ ವಿರುದ್ಧವಾದ ಪ್ರತಿಪಾದನೆಗಳನ್ನು ಮಾಡುತ್ತಿವೆ.  ಚೀನಾವು ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಪ್ರಾದೇಶಿಕ ವಿವಾದದಲ್ಲಿ ನಿರತವಾಗಿದೆ. ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರ ಪ್ರದೇಶಗಳಲ್ಲಿ ಚೀನಾವು ಪ್ರಾದೇಶಿಕ ವಿವಾದಗಳನ್ನೂ ನಡೆಸುತ್ತಿದೆ. ಈ ಪ್ರದೇಶಗಳ ಹಲವಾರು ದ್ವೀಪಗಳಲ್ಲಿ ಚೀನಾ ಸೇನೆಯನ್ನು ನೆಲೆ ನಿಲ್ಲಿಸಿ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದೆ. ಉಭಯ ಪ್ರದೇಶಗಳೂ ಖನಿಜ, ತೈಲ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳಿಂದ ಸಂಪದ್ಭರಿತವಾರುವುದರ ಜೊತೆಗೆ ಜಾಗತಿಕ ವ್ಯಾಪಾರಕ್ಕೂ ಪ್ರಾಮುಖ್ಯತೆ ಪಡೆದಿವೆ.  ‘ಭಾರತವು ತನ್ನ ಉತ್ತರ ಭಾಗಗಳ ರಕ್ಷಣೆಗೆ ತೀವ್ರ ಯತ್ನ ನಡೆಸುತ್ತಿದೆ. ಇಲ್ಲಿನ ಗಡಿ ವಿವಾದವು ಭಾರತದ ಪಾಲಿಗೆ ಕಳವಳ ತರುವಂತಹ ವಿಚಾರವಾಗಿರುವುದೇ ಇದಕ್ಕೆ ಕಾರಣ ಎಂದು ನಾನು ಅಂದಾಜು ಮಾಡಬಲ್ಲೆ ಎಂದು ಭಾರತಿಯ ಗಡಿಯಲ್ಲಿ ಚೀನಾದ ರಸ್ತೆ ನಿರ್ಮಾಣ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ದಕ್ಷಿಣ ಮತ್ತು ಕೇಂದ್ರ ಏಷ್ಯಾಗಳ ವಿದೇಶಾಂಗ ಮುಖ್ಯ ಉಪ ಸಹಾಯಕ ಕಾರ್‍ಯದರ್ಶಿ ಅಲೀಸ್ ಜಿ ವೆಲ್ಸ್ ಹೇಳಿದರು.  ಹಿಮಾಲಯ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಹಲವಾರು ಬಾರಿ ಘರ್ಷಿಸಿವೆ. ಭೂತಾನ್ ಮತ್ತು ಚೀನಾ ನಡುವಣ ವಿವಾದಿತ ಡೊಕ್ಲಾಮ್ ಪ್ರಸ್ಥಭೂಮಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ರಸ್ತೆ ನಿರ್ಮಾಣ ಆರಂಭಿಸಿದಾಗ ಭಾರತ ಮತ್ತು ಚೀನಾದ ಪಡೆಗಳು ಮುಖಾಮುಖಿಯಾಗಿದ್ದವು ಎಂದು ಕಾಂಗ್ರೆಸ್ ಸದಸ್ಯೆ ಆನ್ ವಾಗ್ನರ್ ಪ್ರಶ್ನೆಗೆ ಉತ್ತರವಾಗಿ ವೆಲ್ಸ್ ನುಡಿದರು.  ಬಳಿಕ ಉಭಯ ರಾಷ್ಟ್ರಗಳೂ ಸ್ವಸ್ಥಾನಕ್ಕೆ ಮರಳಿದವು. ಆದರೆ ಚೀನಾ ಮತ್ತು ಸದ್ದು ಗದ್ದಲ ಇಲ್ಲದೆಯೇ ಡೊಕ್ಲಾಮ್ ನಲ್ಲಿ ತನ್ನ ಚಟುವಟಿಕೆಗಳನ್ನು ಪುನಾರಂಭಿಸಿದೆ. ಅದನ್ನು ನಿಲ್ಲಿಸುವ ನಿಟ್ಟಿನಲ್ಲಿ ಭೂತಾನ್ ಅಥವಾ ಭಾರತ ಯತ್ನಿಸಿಲ್ಲ ಎಂದು ವಾಗ್ನರ್ ಹೇಳಿದರು.  ಚೀನಾವು ಹಿಮಾಲಯದಲ್ಲಿ ಮತ್ತೆ ಮತೆ ನಡೆಸುತ್ತಿರುವ ಚಟುವಟಿಕೆಗಳು ನನಗೆ ಅದರ ದಕ್ಷಿಣ ಚೀನಾ ನೀತಿಗಳನ್ನು ನೆನಪಿಗೆ ತರುತ್ತವೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಮಿಲಿಟರೀಕರಣದ ಚಟುವಟಿಕೆಗಳಿಗೆ ಪ್ರತಿಕ್ರಿಯಿಸುವಲ್ಲಿನ ನಮ್ಮ ವೈಫಲ್ಯವು ಹಿಮಾಲಯ ಗಡಿ ವಿವಾದ ಕುರಿತೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪುನರಾವರ್ತಿಸುತ್ತಿದೆಯೇ ಎಂದು ವಾಗ್ನರ್ ಪ್ರಶ್ನಿಸಿದರು.  ಏಷ್ಯಾ ಮತ್ತ ಫೆಸಿಫಿಕ್ ಕುರಿತ ವಿದೇಶಾಂಗ ವ್ಯವಹಾರಗಳ ಸದನ ಉಪಸಮಿತಿ ಅಧ್ಯಕ್ಷ ಕಾಂಗ್ರೆಸ್ ಸದಸ್ಯ ಟೆಡ್ ಯೊಹೋ ದಕ್ಷಿಣದಲ್ಲಿ ಚೀನಾ ಅನುಸರಿಸುತ್ತಿರುವ ಆಕ್ರಮಣಕಾರಿ ಧೋರಣೆಯನ್ನು ಪ್ರಸ್ತಾಪಿಸಿದರು. ಆ ಪ್ರದೇಶದಲ್ಲಿ ಚೀನಾವನ್ನು ತಡೆಯಲು ಉತ್ತಮ ದಾರಿ ಯಾವುದು ಎಂಬ ಬಗ್ಗೆ ನಿಮ್ಮ ವಿಚಾರವೇನು? ಎಂದು ಯೊಹೋ ಪ್ರಶ್ನಿಸಿದರು. ಅಮೆರಿಕವು ಚೀನಾದ ಜೊತೆಗೆ ಡಾಲರ್‌ಗಾಗಿ ಡಾಲರ್ ಪಡೆಯಲು ಸ್ಪರ್ಧಿಸಲು ಬಯಸುತ್ತಿಲ್ಲ. ಬದಲಿಗೆ ರಾಷ್ಟ್ರಗಳು ಅಥವಾ ಅಲ್ಲಿನ ಪೌರರಿಗೆ ಅನುಕೂಲವಾಗುವಂತಹ ಷರತ್ತುಗಳಿಗೆ ಯತ್ನಿಸುತ್ತಿದೆ. ಅಮೆರಿಕ ಮತ್ತು ಅದರ ಕಂಪೆನಿಗಳು ಈ ಪ್ರದೇಶದಲ್ಲಿ ೮೫೦ ಬಿಲಿಯನ್ (೮೫೦೦೦ ಕೋಟಿ) ಡಾಲರ್ ಹಣವನ್ನು ವಿದೇಶೀ ನೇರ ಹೂಡಿಕೆಯಾಗಿ ನೀಡುತ್ತಿವೆ. ಇದು ಚೀನಾ ಕೊಡುತ್ತಿರುವುದಕ್ಕೆ ಅತ್ಯಂತ ಹೆಚ್ಚಿನದು ಎಂದು ವೆಲ್ ಉತ್ತರಿಸಿದರು.  ಡೊಕ್ಲಾಮ್ ನಲ್ಲಿ ಕಳೆದ ವರ್ಷ ಭಾರತ, ಭೂತಾನ್, ಚೀನಾ ಗಡಿಗಳು ಸೇರುವ ಜಂಕ್ಷನ್ ನಲ್ಲಿ ಚೀನೀ ಸೇನೆಯು ಆರಂಭಿಸಿದ್ದ ರಸ್ತೆ ನಿರ್ಮಾಣ ಕಾರ್‍ಯವನ್ನು ಭಾರತೀಯ ಪಡೆಗಳು ತಡೆದ ಬಳಿಕ  ಭಾರತ ಮತ್ತು ಚೀನೀ ಪಡೆಗಳು ಜೂನ್ ೧೬ರಿಂದ ೭೩ ದಿನಗಳ ಕಾಲ ಭಾರತ ಮತ್ತು ಚೀನೀ ಪಡೆಗಳು ಹಿಂದಕ್ಕೆ ಸರಿಯದೆ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಡೊಕ್ಲಾಮ್ ಗೆ ಸಂಬಂಧಿಸಿದಂತೆ ಭೂತಾನ್ ಮತ್ತು ಚೀನಾ ಮಧ್ಯೆ ವಿವಾದ ಇದ್ದ ಪರಿಣಾಮವಾಗಿ ಉದ್ಭವಿಸಿದ ಈ ಬಿಕ್ಕಟ್ಟು ಆಗಸ್ಟ್ ೨೮ರಂದು ಕೊನೆಗೊಂಡಿತ್ತು.

2018: ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್ ಚುನಾವಣೆಯ ಮತಎಣಿಕೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ -ಇ-ಇನ್ಸಾಫ್ (ಪಿಟಿಐ) ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಉಗ್ರ ಹಫೀಜ್ ಸಯೀದ್ ಬೆಂಬಲಿತ ಅಲ್ಲಾ ಹೋ ಅಕ್ಬರ್ ತೆಹ್ರೀಕ್ ಪಕ್ಷವನ್ನು ಪಾಕ್ ಮತದಾರರು ಸಾರಾ ಸಗಟಾಗಿ ತಿರಸ್ಕರಿಸಿದ್ದು ಬೆಳಕಿಗೆ ಬಂದಿತು. ಉಗ್ರ ಸಯೀದ್ ನ ಮಿಲ್ಲಿ ಮುಸ್ಲಿಂ ಲೀಗ್ ಗೆ ರಾಜಕೀಯ ಪಕ್ಷ ಎಂದು ಮಾನ್ಯತೆ ಕೊಡಲು ಪಾಕ್ ಚುನಾವಣಾ ಆಯೋಗ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಾ ಹೋ ಅಕ್ಬರ್ ಎಂಬ ಹೊಸ ಪಕ್ಷವನ್ನು ಸ್ಥಾಪಿಸಲಾಗಿತ್ತು.. ಬಳಿಕ ಸಯೀದ್ ಬೆಂಬಲಿತ ಅಭ್ಯರ್ಥಿಗಳು ಈ ಪಕ್ಷದ ಬ್ಯಾನರ್ ಹಿಡಿದುಕೊಂಡು ಸಾರ್ವತ್ರಿಕ ಚುನಾವಣೆಯಲ್ಲಿ ಅಖಾಡಕ್ಕಿಳಿದಿದ್ದರು. ರಾಜಕೀಯ ಪಕ್ಷ ಎಂದು ಮಾನ್ಯತೆ ಪಡೆಯದ ಉಗ್ರ ಹಫೀಜ್ ಸ್ಥಾಪಿತ ಮಿಲಿ ಮುಸ್ಲಿಂ ಲೀಗ್‌ನ ೨೬೫ ಅಭ್ಯರ್ಥಿಗಳು ಅಲ್ಲಾಹು ಅಕ್ಬರ್ ತೆಹ್ರೀಕ್(ಎಎಟಿ) ಬ್ಯಾನರ್‌ನಡಿಯಲ್ಲಿ ಸ್ಪರ್ಧಿಸಿದ್ದರು. ೮೦ ಅಭ್ಯರ್ಥಿಗಳು ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ ಮತ್ತು ೧೮೫ ಪ್ರಾದೇಶಿಕ ಅಸೆಂಬ್ಲಿ ಸ್ಥಾನಗಳಿಗೆ ಸ್ಪರ್ಧಿಸಿದ್ದರು.  ಡಾನ್ ಡಾಟ್ ಕಾಂನ ಫಲಿತಾಂಶದ ಪ್ರಕಾರ, ೨೭೨ ಸ್ಥಾನಗಳ ಪೈಕಿ ಎಎಟಿ (ಅಲ್ಲಾ ಹೋ ಅಕ್ಬರ್ ಪಕ್ಷ) ಕೇವಲ ಒಂದು ಸ್ಥಾನದಲ್ಲಷ್ಟೇ ಗೆಲುವು ಸಾಧಿಸಿದೆ ಎಂದು ಹೇಳಲಾಯಿತು. ಜೊತೆಗೆ, ಇಸ್ಲಾಂ ತತ್ವವನ್ನು ಪ್ರತಿಪಾದಿಸುತ್ತಿದ್ದ ತೆಹ್ರೀಕ್ ಇ ಲಬ್ಬೈಕ್ ಪಾಕಿಸ್ತಾನ ಪಕ್ಷವನ್ನೂ ಕೂಡಾ ಮತದಾರರು ತಿರಸ್ಕರಿಸಿದ್ದಾರೆ. ಟಿಎಲ್ ಪಿ ಕೇವಲ ಒಂದು ಸ್ಥಾನದಲ್ಲದಷ್ಟೇ ಮುನ್ನಡೆ ಸಾಧಿಸಿದೆ ಎಂದು ವರದಿ ವಿವರಿಸಿತು. ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಚುನಾವಣೆಯ ೨೭೨ ಸ್ಥಾನಗಳಲ್ಲಿ ಎಎಟಿ ಹಾಗೂ ಟಿಎಲ್ ಪಿಯನ್ನು ಜನ ತಿರಸ್ಕರಿಸುವ ಮೂಲಕ ಧಾರ್ಮಿಕ ಮೂಲಭೂತವಾದ ಪೋಷಿಸುವ ಕಟ್ಟರ್ ವಾದಿಗಳಿಗೆ ಬೆಂಬಲ ಇಲ್ಲ ಎಂಬ ಸಂದೇಶ ರವಾನಿಸಿರುವುದಾಗಿ ವರದಿ ಹೇಳಿತು.

2018: ನವದೆಹಲಿ: ಚರ್ಚ್ ಪಾದ್ರಿಗಳಿಗೆ ಸಂಬಂಧಿಸಿದ ಅತ್ಯಾಚಾರ ಪ್ರಕರಣಗಳು ದಿಢೀರನೆ ಹೆಚ್ಚಿರುವುದು ಏಕೆ ಎಂದು ಸುಪ್ರೀಂಕೋರ್ಟ್ ಅಚ್ಚರಿ ವ್ಯಕ್ತ ಪಡಿಸಿತು. ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಆಶೋಕ ಭೂಷಣ್ ಅವರನ್ನು ಒಳಗೊಂಡ ಪೀಠವು ಕೇರಳದ ಎರಡು ಚರ್ಚ್‌ಗಳ ಪಾದ್ರಿಗಳಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳು ತನ್ನ ಮುಂದೆ ಬಂದಾಗ ಈ ಪ್ರಶ್ನೆಯನ್ನು ಎತ್ತಿತು.  ಎರಡು ಪ್ರತ್ಯೇಕ ಪ್ರಕರಣಗಳು ಒಂದಾದ ಬಳಿಕ ಒಂದರಂತೆ ಪೀಠದ ಮುಂದೆ ಬಂದಿದ್ದವು. ಮೊದಲ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಪೀಠ ’ಏನಾಗುತ್ತಿದೆ? ಪಾದ್ರಿಗಳ ಪ್ರಕರಣ ಒಂದರ ನಂತರ ಮತ್ತೊಂದು ಎಂದು ಉದ್ಘರಿಸಿತು.  ‘ನಾವು ಹೇಳುತ್ತಿರುವುದು ಏನೆಂದರೆ ಸೆಕ್ಷನ್ ೩೭೬ (ಅತ್ಯಾಚಾರ) ಅಡಿಯಲ್ಲಿ ದಾಖಲಾದ ಪಾದ್ರಿಗಳಿಗೆ ಸಂಬಂಧಿಸಿದ ಇಷ್ಟೊಂದು ಪ್ರಕರಣಗಳು ಬರುತ್ತಿವೆಯಲ್ಲ ಏಕೆ ಎಂದು ಎಂದು ಪೀಠ ಹೇಳಿತು.  ಪೀಠದ ಮುಂದೆ ಬಂದ ಮೊದಲ ಪ್ರಕರಣದಲ್ಲಿ ಥೆರಾಕಂನ ಫಾದರ್ ಥಾಮಸ್ ಜೋಸೆಫ್ ಅವರು ಅತ್ಯಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಮಾಡಲಾದ ಆಪಾದನೆಗಳನ್ನು ರದ್ದು ಪಡಿಸಬೇಕು ಎಂದು ಸುಪ್ರೀಂಕೋರ್ಟನ್ನು ಕೋರಿದ್ದರು. ಕೊಟ್ಟಿಯೂರು ಪಾದ್ರಿ ರಾಬಿನ್ ವಡಕ್ಕಂಚೆರಿ ಅವರ ವಿರುದ್ಧದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಜೋಸೆಫ್ ಅವರು ಸಹಕರಿಸಿದರು ಎಂದು ಆಪಾದಿಸಲಾಗಿದ್ದ ಪ್ರಕರಣದ ಇದು. ಈ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದಳೆನ್ನಲಾದ ಬಾಲಕಿ ಬಳಿಕ ಮಗುವೊಂದಕ್ಕೆ ಜನ್ಮ ನೀಡಿದ್ದಳು. ಕಳೆದ ವರ್ಷ ವೇನಾಡ್ ಮಕ್ಕಳ ಕಲ್ಯಾಣ ಸಮಿತಿಯ (ಸಿ ಡಬ್ಲ್ಯೂಸಿ) ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲ್ಪಟ್ಟ ಜೋಸೆಫ್ ಅವರಲ್ಲದೆ ಐವರು ಕ್ರೈಸ್ತ ಸನ್ಯಾಸಿನಿಯರು ಮತ್ತು ಇಬ್ಬರು ವೈದ್ಯರೂ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಪೀಠದ ಮುಂದೆ ಆರೋಪಿಗಳ ಪರವಾಗಿ ವಾದಿಸಿದ ವಕೀಲರು ಆಗಸ್ಟ್ ೧ರಿಂದ ಆರಂಭವಾಗುವ ಪ್ರಕರಣದ ವಿಚಾರಣೆಯನ್ನು ತಡೆ ಹಿಡಿಯಬೇಕು ಎಂದು ಕೋರಿದರು. ವಿಚಾರಣೆಯನ್ನು ತಾನು ಅಮಾನತುಗೊಳಿಸಲಾಗದು ಎಂದು ಹೇಳಿದ ಪೀಠ, ಏನಿದ್ದರೂ ಪ್ರಕರಣವನ್ನು ಆಗಸ್ಟ್ ೧ರಂದೇ ಅಲಿಸಲು ಒಪ್ಪಿತು.  ಪೀಠದ ಮುಂದೆ ಬಂದ ಎರಡನೇ ಪ್ರಕರಣ ಕೂಡಾ ಕೇರಳದ ಮೆಲಂಕಾರ ಆರ್ಥೊಡಕ್ಸ್ ಸಿರಿಯನ್ ಚರ್ಚ್‌ಗೆ ಸೇರಿದ ನಾಲ್ವರು ಪಾದ್ರಿಗಳಿಗೆ ಸಂಬಂಧಿಸಿದ್ದಾಗಿತ್ತು. ೩೪ರ ಹರೆಯದ ವಿವಾಹಿತ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಸಂಬಂಧಿತ ಪ್ರಕರಣದಲ್ಲಿ ಇಬ್ಬರು ಪಾದ್ರಿಗಳು ಸುಪ್ರೀಂಕೋರ್ಟಿಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕಳೆದ ವಾರ ಈ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಗುರುವಾರ ಪೀಠವು ಕೇರಳ ಪೊಲೀಸರಿಗೆ ಜುಲೈ ೨೭ರ ಒಳಗಾಗಿ ತನಿಖೆ ಕುರಿತ ವಾಸ್ತವ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿತು.  ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಪಾದ್ರಿಗಳಾದ ಫಾದರ್ ಸೋನಿ ಅಬ್ರಹಾಂ ವರ್ಗೀಸ್ ಮತ್ತು ಫಾದರ್ ಜೈಸ್ ಕೆ ಜಾರ್ಜ್ ಅವರಿಗೆ ಬಂಧನದಿಂದ ರಕ್ಷಣೆ ಒದಗಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸುವ ಮುನ್ನ ಪ್ರಕರಣದ ವಾಸ್ತವ ವರದಿಯನ್ನು ಪರಿಶೀಲಿಸಲು ತಾನು ಬಯಸುವುದಾಗಿ ಪೀಠ ಹೇಳಿತು. ಮಧ್ಯಂತರ ಕ್ರಮವಾಗಿ, ತನ್ನ ಅಂತಿಮ ಆದೇಶ ಆಗುವವರೆಗೆ ಉಭಯ ಪಾದ್ರಿಗಳನ್ನೂ ಬಂಧಿಸಬಾರದು ಎಂದು ಪೀಠ ಪೊಲೀಸರಿಗೆ ಸೂಚಿಸಿತು.  ಕಾಕತಾಳೀಯವಾಗಿ ಇದೇ ಪೀಠ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರಿಗೆ ಸಂಬಂಧಿಸಿದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನೂ ನಡೆಸುತ್ತಿದೆ.

2018: ಇಸ್ಲಾಮಾಬಾದ್: ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಚುನಾವಣೆಯ ಪೂರ್ಣ ಫಲಿತಾಂಶ ಇನ್ನೂ ಘೋಷಣೆಯಾಗದೇ ಇದ್ದರೂ, ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಗೆಲುವು ಘೋಷಿಸಿಕೊಂಡಿದ್ದು, ಭಾರತ ಮತ್ತು ಪಾಕಿಸ್ತಾನ ಕಾಶ್ಮೀರ ವಿವಾದವನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಮತದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬುದಾಗಿ ಪ್ರತಿಸ್ಪರ್ಧಿ ಪಕ್ಷಗಳು ಆಪಾದಿಸಿರುವುದರ ಮಧ್ಯೆ, ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್ -ಇ- ಇನ್ಸಾಫ್ (ಪಿಟಿಐ) ಪಕ್ಷವು ೧೧೦ ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದು, ಜನಾದೇಶವು ತಮ್ಮ ಪರವಾಗಿ ಬಂದಿದೆ ಎಂದು ಇಮ್ರಾನ್ ಖಾನ್ ಘೋಷಿಸಿದ್ದಾರೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿದರು. ಸಂಪೂರ್ಣ ಫಲಿತಾಂಶ ಬರುವುದಕ್ಕೂ ಮುನ್ನವೇ ಮಾಧ್ಯಮಗಳ ಜೊತೆ ಮಾತನಾಡಿದ ಇಮ್ರಾನ್ ಖಾನ್ ’ಶಾಂತಿಗಾಗಿ ಮತ್ತು ಪ್ರದೇಶದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೊನೆಗೊಳಿಸುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿ ದುಡಿಯಬೇಕು ಎಂದು ಹೇಳಿದರು.  ಇದಕ್ಕೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಪರ್ವೇಜ್ ಮುಷರಫ್ ಅವರು ಇಮ್ರಾನ್ ಖಾನ್ ಅವರ ಪರ ಜನಾದೇಶ ಬಂದಿರುವುದನ್ನು ತಾವು ಬೆಂಬಲಿಸುವುದಾಗಿ ಹೇಳಿದರು. ಇಮ್ರಾನ್ ಖಾನ್ ಅವರು ಎಂದೂ ಭಾರತದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿಲ್ಲ ಎಂದೂ ಮುಷರಫ್ ಪ್ರತಿಪಾದಿಸಿದರು.  ತಮ್ಮ ಸರ್ಕಾರವು ಯಾವುದೇ ರಾಜಕೀಯ ಸೇಡು ತೀರಿಸದೇ ಇರುವ ಮೊತ್ತ ಮೊದಲ ಸರ್ಕಾರವಾಗಲಿದೆ ಎಂದೂ ಇಮ್ರಾನ್ ಖಾನ್ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ನುಡಿದರು.  ಕ್ರಿಕೆಟಿಗನಾಗಿ ಇದ್ದ ಕಾರಣ ಭಾರತದ ಬಹಳಷ್ಟು ಮಂದಿ ನನಗೆ ಗೊತ್ತು. ಆಗ್ನೇಯ ಏಷ್ಯಾದ ಬಡತನವನ್ನು ನಾವು ನಿವಾರಿಸಲು ಸಾಧ್ಯವಿದೆ. ಆದರೆ ಕಾಶ್ಮೀರವೇ ನಮ್ಮ ಮುಂದಿನ ದೊಡ್ಡ ಸಮಸ್ಯೆ. ಇದನ್ನು ಇತ್ಯರ್ಥ ಪಡಿಸಲು ಉಭಯರೂ ಚರ್ಚೆಗೆ ಮುಂದಾಗಬೇಕು ಎಂದು ಇಮ್ರಾನ್ ಖಾನ್ ಹೇಳಿದರು.  ಭಾರತದ ನಾಯಕತ್ವವು ಇಚ್ಛಿಸಿದರೆ ಅದರ ಜೊತೆಗಿನ ಬಾಂಧವ್ಯವನ್ನು ಸುಧಾರಿಸಲು ನಾವು ಬಯಸುತ್ತೇವೆ. ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಏನೇ ತಪ್ಪಾದರೂ ಅದು ಭಾರತದಿಂದಾಗಿಯೇ ಆಗಿದೆ ಎಂಬ ಆರೋಪ ಹಾಗೆಯೇ ಭಾರತದಲ್ಲಿ ಏನಾದರೂ ಆದರೆ ಅದು ಪಾಕಿಸ್ತಾನದಿಂದಾಗಿಯೇ ಆಗಿದೆ ಎಂಬ ಪರಸ್ಪರ ದೂಷಣೆಯ ಆಟವು ನಮ್ಮನ್ನು ಮೂಲಸ್ಥಾನದಲ್ಲಿಯೇ ತಂದು ನಿಲ್ಲಿಸುತ್ತದೆ ಎಂದು ಅವರು ನುಡಿದರು.  ‘ಇದು ನಾವು ಬೆಳೆಯುವ ಬಗೆಯಲ್ಲ ಮತ್ತು ಅದು ಉಪಖಂಡಕ್ಕೆ ಹಾನಿಕರ ಎಂದು ಖಾನ್ ಹೇಳಿದರು.  ‘ಅವರು ಒಂದು ಹೆಜ್ಜೆ ಮುಂದೆ ಬಂದರೆ, ನಾವು ಎರಡು ಹೆಜ್ಜೆ ಮುಂದೆ ಬರುತ್ತೇವೆ. ಆದರೆ ಕನಿಷ್ಠ ನಾವು ಆರಂಭವನ್ನಾದರೂ ಮಾಡಬೇಕಾದ ಅಗತ್ಯವಿದೆ ಎಂದು ಪಾಕಿಸ್ತಾನದ ನೂತನ ನಾಯಕ ನುಡಿದರು.  ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಸೆರೆಮನೆ ಸೇರಿರುವ ಮಾಜಿ ಪ್ರಧಾನಿ ನವಾಜ್ ಶರೀಪ್ ಮತ್ತು ಪಿಎಂಎಲ್ - ಎನ್ ಪಕ್ಷವು ’ಚುನಾವಣೆಯಲ್ಲಿ ಮತ್ತು ಮತಗಳ ಎಣಿಕೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, ಇಡೀ ಚುನಾವಣಾ ಪ್ರಕ್ರಿಯೆಯು ಸೇನಾ ಆಳ್ವಿಕೆಯ ಇತಿಹಾಸ ಹೊಂದಿರುವ ರಾಷ್ಟ್ರದ ಪ್ರಜಾಪ್ರಭುತ್ವದ ಮೇಲಿನ ದೊಡ್ಡ ಪ್ರಮಾಣದ ಹಲ್ಲೆಯಾಗಿದೆ ಎಂದು ಹೇಳಿ, ಚುನಾವಣಾ ಫಲಿತಾಂಶವನ್ನು ತಿರಸ್ಕರಿಸಿತು. ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವು ಹೆಚ್ಚು ಸ್ಥಾನಗಳೊಂದಿಗೆ ಮುನ್ನಡೆಯಲ್ಲಿದ್ದರೂ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸ್ಪಷ್ಟ ಬಹುಮತ ಗಳಿಸದೇ ಹೋಗಬಹುದು ಎಂದು ಹೇಳಲಾಯಿತು. ಇಮ್ರಾನ್ ಖಾನ್ ಅವರು ತಾವು ಸ್ಪರ್ಧಿಸಿದ ಐದೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಪಾಕಿಸ್ತಾನದ ಹಾಲಿ ಪ್ರಧಾನಿ ಪಿಎಂಎಲ್- ಎನ್ ಪಕ್ಷದ ಶಾಹಿದ್ ಖಾಖನ್ ಅಬ್ಬಾಸಿ, ಪಿಪಿಪಿ ನಾಯಕ ಬಿಲಾವಲ್ ಭುಟ್ಟೋ, ಪಿಪಿಪಿಯ ಅಭ್ಯರ್ಥಿ ಮಾಜಿ ಪ್ರಧಾನಿ ಯೂಸುಫ್ ರಜಾ ಗಿಲಾನಿ, ಜಮಾತ್-ಇ-ಇಸ್ಲಾಮೀ ಮುಖ್ಯಸ್ಥ ಸಿರಾಜ್ -ಉಲ್ -ಹಕ್ ಸೇರಿದಂತೆ  ಪ್ರತಿಸ್ಪರ್ಧಿ ಪಕ್ಷಗಳ ಘಟಾನುಘಟಿ ಪ್ರಮುಖರು ಪರಾಜಯಗೊಂಡರು.  ಮಾಜಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ಪಿಟಿಐನ ಮೊಹಮ್ಮದ್ ಇಬ್ರಾಹಿಂ ಅವರಿಂದ ಮುಲ್ತಾನಿನ ಶುಜಾಬಾದ್ ಕ್ಷೇತ್ರದಲ್ಲಿ ಪರಾಭವಗೊಂಡರು. ಮಾಜಿ ಪ್ರಧಾನಿಯ ಸಹೋದರ ಸಂಬಂಧಿ ಅಸದ್ ಮುರ್ತಾಜಾ ಗಿಲಾನಿ ೨೦೦೨ರಲ್ಲಿ ಈ ಸ್ಥಾನವನ್ನು ಗೆದ್ದಿದ್ದರು.

ಇನ್ನೊಂದೆಡೆಯಲ್ಲಿ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸಂಚುಕೋರ ಜಮಾತ್ -ಉದ್ ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಪಕ್ಷವನ್ನು ಪಾಕಿಸ್ತಾನದ ಮತದಾರರು ಸಾರಾ ಸಗಟು ತಿರಸ್ಕರಿಸಿದರು.  ಈ ಮಧ್ಯೆ ಚುನಾವಣೆಯ ಪೂರ್ಣ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾಗುತ್ತಿದೆ. ಇದರಲ್ಲಿ ಅಕ್ರಮ ಇದೆ ಎಂದು ವಿಪಕ್ಷಗಳು ಚುನಾವಣಾ ಆಯೋಗದ ಮೇಲೆ ಹರಿಹಾಯ್ದವು.  ಆದರೆ ಶೇಕಡಾ ೯೦ರಷ್ಟು ಫಲಿತಾಂಶ ಪ್ರಕಟಗೊಂಡಿದೆ. ಉಳಿದ ಫಲಿತಾಂಶಗಳೂ ೨೪ ಗಂಟೆಗಳ ಒಳಗೆ ಪ್ರಕಟಗೊಳ್ಳಲಿವೆ. ಯಾವುದೇ ವಿಳಂಬ ಆಗಿಲ್ಲ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಪ್ರತಿಪಾದಿಸಿತು.
2016: ಅಬುಧಾಬಿ: ವಿಶ್ವದ ಅಂತ್ಯಂತ ದೊಡ್ಡ ಸೌರಶಕ್ತಿ ಚಾಲಿತ ವಿಮಾನ ಎಂಬ ಕೀರ್ತಿಗೆ ಭಾಜನವಾಗಿರುವ ಸೋಲಾರ್ ಇಂಪಲ್ಸ್ 2 ಈದಿನ ಮುಂಜಾನೆ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮೂಲಕ ತನ್ನ ಚೊಚ್ಚಲ ವಿಶ್ವ ಪಯಣವನ್ನು ಪೂರೈಸಿ ಇತಿಹಾಸ ನಿರ್ಮಿಸಿತು. 2015 ಮಾರ್ಚ್ ತಿಂಗಳಲ್ಲಿ ಪ್ರಯಾಣ ಆರಂಭಿಸಿದ ವಿಮಾನ ಒಂದು ವರ್ಷಕ್ಕೂ ಅಧಿಕ ಕಾಲ ಒಟ್ಟು 42,000 ಕಿ.ಮೀ.ಗೂ ಹೆಚ್ಚು ದೂರವನ್ನು ಕೇವಲ ಸೌರ ಶಕ್ತಿಯಿಂದಲೇ ಪಯಣಿಸಿ ವಿಶ್ವದ ನಾನಾಭಾಗಗಳಿಗೆ ಭೇಟಿ ನೀಡಿದೆ. ಬರ್ಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬೋಸ್ಟ್ ಬರ್ಗ್ ಈ ವಿಮಾನವನ್ನು ಹಾರಿಸಿದ್ದಾರೆ. ಪಯಣದ  ಕುರಿತು ಪ್ರತಿಕ್ರಿಯಿಸದ ವಿಮಾನದ ಎರಡನೇ ಪೈಲೆಟ್ ಆಂಡ್ರೆ ಬೋಸ್ಟ್ಬರ್ಗ್, ನಾವು ಹಂತ ಹಂತವಾಗಿ ವಿಶ್ವದ ನಾನಾ ಭಾಗಗಳಿಗೆ ಭೇಟಿ ನೀಡಿದ್ದೇವೆ. ಕ್ಷಣಗಳು ತುಂಬಾ ರೋಚಕವಾಗಿದ್ದವು ಎಂದು ತಿಳಿಸಿದರು. ಈ ವಿಮಾನ ಸುಮಾರು 500 ಗಂಟೆಗಳ ಕಾಲ ಇಂಧನ ಇಲ್ಲದೆ 42,000 ಕಿ.ಮೀ ಸಂಚರಿಸಿದ ಸಾಧನೆ ಮಾಡಿದೆ. ಅರಬ್ಬಿ ಸಮುದ್ರ, ಭಾರತ, ಮ್ಯಾನ್ಮಾರ್, ಚೀನಾ, ಅಂಟ್ಲಾಟಿಕ್ ಸಮುದ್ರ, ಅಮೆರಿಕ, ದಕ್ಷಿಣ ಯುರೋಪ್, ಉತ್ತರ ಯುರೋಪ್ ಹಾಗೂ ದಕ್ಷಿಣ ಆಫ್ರಿಕಾ ದೇಶಗಳನ್ನು ಪ್ರದಕ್ಷಿಣೆ ಹೊಡೆದಿದೆ.
 2016: ನವದೆಹಲಿ: ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಕಳೆದ 16 ವರ್ಷಗಳಿಂದ ನಡೆಸುತ್ತಿದ್ದ ಉಪವಾಸ  ಸತ್ಯಾಗ್ರಹವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದವು. ಈಶಾನ್ಯ ರಾಜ್ಯಗಳು ಮತ್ತು ಕಾಶ್ಮೀರದಲ್ಲಿ  ಸೇನಾ ಯೋಧರು ನಡೆಸುತ್ತಿದ್ದ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಖಂಡಿಸಿ ಇರೋಮ್ ಶರ್ಮಿಳಾ  2000ನೇ ವರ್ಷದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರುಮಣಿಪುರದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಅವರು ಸತ್ಯಾಗ್ರಹವನ್ನು ನಿಲ್ಲಿಸಲಿದ್ದಾರೆ. ಆಗಸ್ಟ್ ತಿಂಗಳ 9ರಂದು ಅಧಿಕೃತವಾಗಿ ಉಪವಾಸವನ್ನು ಕೈಬಿಡಲಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿದವು. 

2016: ನ್ಯೂಯಾರ್ಕ್
: ಅಮೆರಿಕದ ದೈತ್ಯ ದೂರಸಂಪರ್ಕ ಸಂಸ್ಥೆ ವೆರಿಜಾನ್ ಅಂತರ್ಜಾಲ ಸರ್ಚ್
ಇಂಜಿನ್ ಮತ್ತು ನೆಟ್ವರ್ಕ್ ಪ್ರೊವೈಡರ್ ಕಂಪನಿ ಯಾಹೂವನ್ನು 3235.70 ಕೋಟಿ ರೂ. (4.8 ಬಿಲಿಯನ್) ಮೊತ್ತಕ್ಕೆ ಖರೀದಿಸಲು ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಹಸ್ತಾಂತರಗೊಳ್ಳಲಿದೆ. 20 ವರ್ಷಗಳಿಂದ ಅಂತರ್ಜಾಲದಲ್ಲಿ ತನ್ನದೇ ಛಾಪು ಮೂಡಿಸಿದ್ದ ಯಾಹೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಯಾಹೂ ತಂತ್ರಜ್ಞಾನವನ್ನು ಇತ್ತೀಚೆಗೆ ಅಭಿವೃದ್ಧಿಪಡಿಸುತ್ತಿರುವ ಮೊಬೈಲ್ ಮಾಧ್ಯಮ ತಂತ್ರಜ್ಞಾನಕ್ಕೆ ಬಳಸಿಕೊಳ್ಳಲಾಗುವುದು ಎಂದು ವೆರಿಜಾನ್ ಪ್ರಧಾನ ಕಾರ್ಯದರ್ಶಿ ಲೊವೆಲ್ ಮ್ಯಾಕ್ಅಡ್ಯಾಮ್ ತಿಳಿಸಿದರು. ಡಿಜಿಟಲ್ ಯುಗದಲ್ಲಿ ವೆರಿಜಾನ್ ಆದಾಯ ಮತ್ತು ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಯಾಹೂ ಒಡೆತನ ಪಡೆದು ಕೊಳ್ಳಲಾಗಿದೆ ಎಂದು ವೆರಿಜಾನ್ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದರು.

2016: ಮುಂಬೈದುಬೈನಿಂದ ಮಾಲ್ಡೀವ್ಸ್ ರಾಜಧಾನಿ ಮಾಲೆಗೆ ಹೊರಟಿದ್ದ ಎಮಿರೇಟ್ಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. 309 ಪ್ರಯಾಣಿಕರನ್ನು ಒಳಗೊಂಡ ಎಮಿರಟ್ಸ್ ಸಂಸ್ಥೆಗೆ ಸೇರಿದ ಬೋಯಿಂಗ್ 777 (ಇಕೆ 652) ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ವಿಮಾನದ ಪೈಲಟ್ ತುರ್ತು ಭೂಸ್ಪರ್ಶ ಮಾಡುವುದಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಸಂದೇಶ ಕಳುಹಿಸಿದರು. ವಿಮಾನದಲ್ಲಿದ್ದ 309 ಪ್ರಯಾಣಿಕರು ಸುರಕ್ಷಿತರಾಗಿರುವುದಾಗಿ ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಎಮಿರಟ್ಸ್ ಸಂಸ್ಥೆ ದುಬೈನಿಂದ ಮಾಲೆಗೆ ಹೋಗುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ. ಅನಾನುಕೂಲತೆಗಾಗಿ ಸಂಸ್ಥೆ ಕ್ಷಮೆಯಾಚಿಸುತ್ತದೆ ಎಂದು ತಿಳಿಸಿತು.

2016: ನವದೆಹಲಿ: ಪಾಕಿಸ್ತಾನ ಮೂಲದ ಗುಂಪೊಂದು ಕಾಶ್ಮೀರದ ಘಟನಾವಳಿಗಳನ್ನು ಖಂಡಿಸಲು ಪ್ರಧಾನಿ ಮೋದಿ, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಪೆಲ್ಲೆಟ್ ದಾಳಿಗೆ ತುತ್ತಾದವರಂತೆ ಚಿತ್ರಿಸಿ ವಿಕೃತ ಮನೋಭಾವ ಮೆರೆಯಿತು. ಹಿಬ್ಜುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನಿ ವನಿ ಹತ್ಯೆ ವಿಚಾರವಾಗಿ ಭಾರತ ಕೆಟ್ಟದಾಗಿ ನಡೆದುಕೊಂಡು, ಪ್ರತಿಭಟನಾಕಾರರ ಮೇಲೆ ಪೆಲ್ಲೆಟ್ ಗನ್ ಮೂಲಕ ಗುಂಡಿನ ದಾಳಿ ನಡೆಸಿದೆ. ಮೂಲಕ ಕಾಶ್ಮೀರ ಹೋರಾಟಗಾರರನ್ನು ಹತ್ತಿಕ್ಕಲಾಗುತ್ತಿದೆ ಎಂದು ಭಾರತೀಯರು ನಂಬಿದ್ದಾರೆ. ಇದೊಂದು ಅಮಾನವೀಯ ಘಟನೆಯಾಗಿದ್ದು, ಇದೇ ರೀತಿ ದಾಳಿ ಪ್ರಧಾನಿ ಮೋದಿ, ನಟ ಅಮಿತಾಭ್ ಬಚ್ಚನ್ , ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಲೆ ದಾಳಿ ನಡೆದರೆ ಹೇಗಿರುತ್ತೇ? ಎನ್ನುವುದನ್ನು ನೋಡಿಕೊಳ್ಳಿ ಎಂದು ಹೇಳಿ ಈ ಚಿತ್ರಗಳನ್ನು ಪ್ರಕಟಿಸುವ ಮೂಲಕ ಭಾರತಕ್ಕೆ ಸವಾಲು ಹಾಕಿತು.  ನೆವರ್ ಫರ್ಗೆಟ್ ಪಾಕಿಸ್ತಾನ್ ಎಂಬ ಗುಂಪು ಸಾಮಾಜಿಕ ಜಾಲತಾಣದಲ್ಲಿ ಈ ಕೃತ್ಯ ಎಸಗಿತು. ಪ್ರಧಾನಿ ನರೇಂದ್ರ ಮೋದಿ ಪೆಲ್ಲೆಟ್ ಗನ್ ದಾಳಿಯಿಂದ ಕಣ್ಣಿನ ದೃಷ್ಟಿ ಕಳೆದುಕೊಂಡವರಂತೆ, ಅಮಿತಾಭ್ ಬಚ್ಚನ್, ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ, ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರು ಪೆಲ್ಲೆಟ್ ಗನ್ನಿಂದ ಗುಂಡೇಟಿಗೆ ಗುರಿಯಾದವರಂತೆ ಚಿತ್ರಿಸಿತು.

2016: ಪ್ಯಾರಿಸ್: ಫ್ರಾನ್ಸ್ ಉತ್ತರದಲ್ಲಿರುವ ರೋಯೆನ್ ನಗರದ ಇಗರ್ಜಿ (ಚರ್ಚ್) ಒಂದರಲ್ಲಿ ಇಬ್ಬರು ದುಷ್ಕರ್ವಿುಗಳು ದಾಳಿ ನಡೆಸಿ ಪಾದ್ರಿಯನ್ನು ಹತ್ಯೆ ಮಾಡಿದರು. ಪೊಲೀಸರು ಇಬ್ಬರೂ ದುಷ್ಕರ್ವಿುಗಳನ್ನು ಹೊಡೆದುರುಳಿಸಿದರು. ರೋಯೆನ್ ನಗರದ ದಕ್ಷಿಣ ಭಾಗದಲ್ಲಿರುವ ಸೈಂಟ್ ಎಟಿನೆ ಡು ರೌವರೆ ಇಗರ್ಜಿಗೆ ಏಕಾಏಕಿ ನುಗ್ಗಿದ ಇಬ್ಬರು ದುಷ್ಕರ್ವಿುಗಳು ಇಗರ್ಜಿಯಲ್ಲಿ ಇದ್ದವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಒತ್ತೆಯಾಳುಗಳ ಪೈಕಿ ಪಾದ್ರಿಗಳನ್ನು ದುಷ್ಕರ್ವಿುಗಳು ಬ್ಲೇಡ್ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದರು. ಇತ್ತೀಚೆಗೆ ನೀಸ್ ನಗರದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರ ಮೇಲೆ ದುಷ್ಕರ್ವಿುಯೊಬ್ಬ ಟ್ರಕ್ ಹರಿಸಿದ ಪರಿಣಾಮ 84 ಜನರು ಸಾವನ್ನಪ್ಪಿ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ನಂತರ ಫ್ರಾನ್ಸ್ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿತ್ತು.
 2016: ಮೊಗದಿಶುಸೋಮಾಲಿಯಾದ ರಾಜಧಾನಿ ಮೊಗದಿಶುವಿನ ವಿಮಾನ ನಿಲ್ದಾಣದಲ್ಲಿ ಅವಳಿ ಆತ್ಮಾಹುತಿ ಬಾಂಬ್ ದಾಳಿಗೆ 13 ಜನರು ಬಲಿಯಾಗಿ, ಹಲವರು ಗಾಯಗೊಂಡರು. ಅಲ್ ಖೈದಾ ಸಂಘಟನೆಯೊಂದಿಗೆ ಗುರುತಿಸಿಕೊಂಡ ಸೋಮಾಲಿಯಾದ ಉಗ್ರಗಾಮಿ ಸಂಘಟನೆಶಬಾಬ್ಸ್ಫೋಟದ ಹೊಣೆ ಹೊತ್ತುಕೊಂಡಿತು. ವಿಮಾನ ನಿಲ್ದಾಣದ ಬಳಿ ಇರುವ ವಿಶ್ವಸಂಸ್ಥೆ ಮತ್ತು ಆಫ್ರಿಕನ್ ಒಕ್ಕೂಟಕ್ಕೆ ಸೇರಿದ ಕಟ್ಟಡಗಳ ಸಮೀಪದಲ್ಲೇ ಸ್ಫೋಟ ಸಂಭವಿಸಿತು. ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ  ಒಂದು ವಾಹನ ಸ್ಪೋಟಗೊಂಡಿತು. ಮತ್ತೊಂದು ಸ್ಫೋಟ ಅಮಿಸೋಮ್ ಶಾಂತಿಪಾಲನಾ ಪಡೆಯ ಯೋಧರಿದ್ದ ಸ್ಥಳಕ್ಕೆ ಸಮೀಪದಲ್ಲಿ ಸಂಭವಿಸಿತು.
2016: ದಿ ಹೇಗ್: ಅಂತಾರಾಷ್ಟ್ರೀಯ ಮಟ್ಟದ ಪ್ರಕರಣವಾಗಿದ್ದ ಉಪಗ್ರಹ ಮತ್ತು ತರಂಗಾಂತರ ಹಂಚಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಅಂತರಿಕ್ಷ ಸಂಸ್ಥೆ ಇಸ್ರೋಗೆ ಭಾರಿ ಹಿನ್ನಡೆಯಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ 100 ಕೋಟಿ ದಂಡ ಪಾವತಿಸಬೇಕಾದ ಸಂದಿಗ್ಧ ಪರಿಸ್ಥಿತಿ ಬಂದೊದಗಿತು. ಹೇಗ್ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಹಠಾತ್ ನೀತಿ ನಿಯಮಗಳ ಬದಲಾವಣೆ ತರುವ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಮಂಡಳಿಯಾಗಿದೆ. ಇಸ್ರೋ ಒಡೆತನದ ಆಂಥ್ರಿಕ್ಸ್ ಉದ್ಯಮದಲ್ಲಿ ಎರಡು ಉಪಗ್ರಹ ತರಂಗ ಹಂಚಿಕೆಯ ವಿಷಯದಲ್ಲಿ ಬೆಂಗಳೂರು ಮೂಲದ ದೆವಾಸ್ ಮಲ್ಟಿಮೀಡಿಯಾ ಸಂಸ್ಥೆಯೊಂದಿಗೆ ಆಗಿದ್ದ ಒಪ್ಪಂದಕ್ಕೆ ಸಮಸ್ಯೆ ತಲೆದೋರಿದ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದ ಸಂಸ್ಥೆ ಇಸ್ರೋ ವಿರುದ್ಧ ಪ್ರಕರಣ ದಾಖಲಿಸಿತ್ತು. ಇಸ್ರೋದ ಮಾಧವನ್ ನಾಯರ್ ಅಧ್ಯಕ್ಷತೆಯ ಅವಧಿಯಲ್ಲಿ ಆಂಥ್ರಿಕ್ಸ್ 70 ಮೆಗಾ ಹರ್ಟ್ಸ್ ಎಸ್ ಬ್ಯಾಂಡ್ ತರಂಗ ಹಂಚಿಕೆ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜಿ-ಸ್ಯಾಟ್-6 ಮತ್ತು ಜಿ-ಸ್ಯಾಟ್-6 ಉಪಗ್ರಹ ಉಡಾವಣೆ ಮಾಡಿ ದೆವಾಸ್ಗೆ ತರಂಗ ಒದಗಿಸುವ ಮಾತುಕತೆ ನಡೆದಿತ್ತು. ಒಪ್ಪಂದದಂತೆ ದೆವಾಸ್ ವಾರ್ಷಿಕ 600 ಕೋಟಿಯಂತೆ 12 ವರ್ಷಗಳವರೆಗೆ ಹಣ ಪಾವತಿಸಬೇಕು ಎಂಬ ಷರತ್ತು ವಿಧಿಸಿತ್ತು. 2011 ರಲ್ಲಿ ಆದಾಯ ನಷ್ಟ ಅನುಭವಿಸಿದ್ದ ಇಸ್ರೋ ಯೋಜನೆ ಕೈಬಿಡುವಂತೆ ಮನಮೋಹನ್ ಸಿಂಗ್ ಸರ್ಕಾರ ನೇಮಿಸಿದ್ದ ಸಮಿತಿಯ ನೀಡಿದ ವರದಿ ಮೇರೆಗೆ ಉಪಗ್ರಹ ನಿರ್ಮಾಣ ಸಾಧ್ಯವಿಲ್ಲ ಎಂದು ಸೂಚಿಸಿತ್ತು. ಚತುರ್ವೇದಿ ಸಮಿತಿ ಹಾಗೂ ವಿಜ್ಞಾನಿ ರೊದ್ದಮ್ ನರಸಿಂಹ ಅವರು ಪ್ರಧಾನಿಯವರಿಗೆ ಉದ್ದೇಶಿತ ಯೋಜನೆಯ ವಿವರ ಸಲ್ಲಿಸಿದ್ದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ನಡೆದ 2 ಜಿ ಸ್ಪೆಕ್ಟ್ರಂ ಹಗರಣದ ಬಳಿಕ ನಡೆದ 2011 ಸಂಪುಟ ಸಭೆಯಲ್ಲಿ ದೆವಾಸ್-ಆಂಥ್ರಿಕ್ಸ್ ಒಪ್ಪಂದಕ್ಕೆ ತಿಲಾಂಜಲಿ ಇಟ್ಟ ಬಳಿಕ 2015 ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದ ದೆವಾಸ್ ಪ್ರಕರಣದಲ್ಲಿ ಹೇಗ್ ನ್ಯಾಯಾಲಯ ಒಪ್ಪಂದ ಕಡಿದುಕೊಂಡಿದ್ದಕ್ಕಾಗಿ ಅಂಥ್ರಿಕ್ಸ್ಗೆ 4,400 ಕೋಟಿ ದಂಡ ವಿಧಿಸಿತ್ತು. ಅಂದಿನ ಇಸ್ರೋ ಅಧ್ಯಕ್ಷ ಮಾಧವನ್ ನಾಯರ್ ತೀರ್ಪಿಗೆ ಪ್ರತಿಕ್ರಿಯಿಸುತ್ತ ಇದೊಂದು ಆತುರದ ನಿರ್ಧಾರವಾಗಿದೆ ಮತ್ತು ವಿಚಾರಾತ್ಮಕವಾಗಿಲ್ಲ ಎಂದು ಹೇಳಿದರು.

2016: ಕಾಶ್ಮೀರ: ಗಡಿ ನಿಯಂತ್ರಣಾ ರೇಖೆಯ ಬಳಿಯಿರುವ ಕುಪ್ವಾರ ಜಿಲ್ಲೆಯ ನೌಗಾಂವ್ ಪ್ರದೇಶದಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ನಾಲ್ವರು ಉಗ್ರಗಾಮಿಗಳನ್ನು ಭಾರತೀಯ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದರು. ಅದೇ ವೇಳೆ ಒಬ್ಬ ಉಗ್ರನನ್ನು ಬಂಧಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿದವು. ಗಡಿಪ್ರದೇಶದೊಳಗೆ ನುಗ್ಗಿದ್ದ ಉಗ್ರರು ವಿದೇಶೀ ಮೂಲದವರು ಎಂದು ಮೂಲಗಳು ತಿಳಿಸಿದವು.

2016: ನವದೆಹಲಿ : ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನಾ ಮದ್ದು ಸೇವನೆ ಮಾಡಿದ್ದಾರೆ ಎಂದು ಸಾಬೀತಾದ ಬೆನ್ನಲ್ಲೇ ರಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಶಾಟ್‍ಪುಟ್ ಪಟು ಇಂದ್ರಜೀತ್ ಸಿಂಗ್ ಕೂಡಾ ಉದ್ದೀಪನಾ ಮದ್ದು ಸೇವನೆ ಮಾಡಿದ್ದಾರೆ ಎಂಬುದು ಸಾಬೀತಾಯಿತು. ಜೂನ್ 22 ರಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ ನಡೆಸಿದ ಪರೀಕ್ಷೆಯಲ್ಲಿ 28 ರ ಹರೆಯದ ಇಂದ್ರಜೀತ್,  ನಿಷೇಧಿತ ಸ್ಟೆರಾಯ್ಡ್ ಸೇವನೆ ಮಾಡಿರುವುದು ಪತ್ತೆಯಾಯಿತು.  2014ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಹರಿಯಾಣದ ಈ ಕ್ರೀಡಾಪಟು, ಉದ್ದೀಪನಾ ಮದ್ದು ತಡೆ ಘಟಕ ನಡೆಸುವ ಬಿ ಸ್ಯಾಂಪಲ್  ಪರೀಕ್ಷೆಯಲ್ಲಿಯೂ ಫೇಲಾದರೆ, ಇವರಿಗೆ ರಿಯೋ ಒಲಿಂಪಿಕ್ಸ್ ಅವಕಾಶವೂ ಕೈ ತಪ್ಪಿ, 5 ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗುವರು.

2016: ನವದೆಹಲಿ: ದೇಶದ ಎರಡನೇ ಅತೀ ದೊಡ್ಡ ಆನ್ಲೈನ್ ಫ್ಯಾಷನ್ ಮಾರಾಟ ಮಳಿಗೆ ಜಬಂಗ್ ಇದೀಗ ಫ್ಲಿಪ್ಕಾರ್ಟ್ ಸ್ವಾಮ್ಯದ ಮಿಂತ್ರ ಪಾಲಾಯಿತು. ಅತ್ಯಂತ ಜನಪ್ರಿಯ ಹಾಗೂ ದೇಶದ ಅತಿ ದೊಡ್ಡ ಆನ್ಲೈನ್ ಫ್ಯಾಷನ್ ಮಾರಾಟ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಿಂತ್ರಕ್ಕೆ ಜಬಂಗ್ ಸೇರ್ಪಡೆಯಿಂದಾಗಿ ಇನ್ನಷ್ಟು ಬಲಬಂದಂತಾಯಿತು. ಎರಡು ವರ್ಷದ ಹಿಂದೆ ಫ್ಲಿಪ್ಕಾರ್ಟ್ ಮಿಂತ್ರವನ್ನು ಖರೀದಿಸುವ ಮೂಲಕ ತನ್ನ ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಿಕೊಂಡಿತ್ತು. ಇದೀಗ ಜಬಂಗ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಫ್ಲಿಪ್ಕಾರ್ಟ್ ಸಿಇಓ ಬಿನ್ನಿ ಬನ್ಸಲ್, ಭಾರತೀಯ ವಾಣಿಜ್ಯ ವ್ಯವಹಾರ ರೂಪಾಂತರವಾಗಲಿದ್ದು, ಕಂಪನಿ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ತಿಳಿಸಿದರು. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ನಂತರ ಫ್ಯಾಷನ್ ವಸ್ತುಗಳು ಅಧಿಕ ಮಾರಾಟವಾಗುತ್ತಿವೆ. -ಮಾರುಕಟ್ಟೆಯಲ್ಲಿ 16 ಬಿಲಿಯನ್ ಡಾಲರ್ನಷ್ಟು ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರ ನಡೆಯುತ್ತಿದೆ. ಜಬಂಗ್ನಲ್ಲಿ ಈಗಾಗಲೇ 1,500 ಬ್ರಾಂಡ್ಗಳಿದ್ದು, 1, 50,000 ಸಾವಿರಕ್ಕೂ ಅಧಿಕ ವೈವಿಧ್ಯಮಯ ವಿನ್ಯಾಸಗಳನ್ನು ಕಾಣಬಹುದು.

2016: ಟೋಕಿಯೊ: ವಿಕಲಾಂಗರ ಆಶ್ರಯಧಾಮದ ಮೇಲೆ ದಾಳಿ ಮಾಡಿದ ವ್ಯಕ್ತಿಯೊಬ್ಬ 19 ವಿಕಲಾಂಗರನ್ನು ಚಾಕುವಿನಿಂದ ಇರಿದು ಸಾಯಿಸಿ, ಇತರ 26 ಮಂದಿಯನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಈದಿನ ಬೆಳಗಿನಜಾವ ಘಟಿಸಿದೆ. ಟೋಕಿಯೋದಿಂದ ತುಸು ದೂರದ ಸಗಾಮಿಹಾರ ಬಳಿಯ ವಿಕಲಾಂಗರ ಆಶ್ರಯಧಾಮದೊಳಕ್ಕೆ ಏಕಾಏಕಿ ನುಗ್ಗಿದ ಆಗಂತುಕ ಮನಬಂದಂತೆ ಚುಚ್ಚಿ ದಾರುಣವಾಗಿ ಹತ್ಯೆ ಮಾಡಿದ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೊಲೆಗಾರನನ್ನು ವಶಕ್ಕೆ ಪಡೆದರು. 26 ವರ್ಷದ ಬಂಧಿತ ಆರೋಪಿ ವಿಕಲಾಂಗಧಾಮದ ಹಳೆಯ ನೌಕರನಾಗಿದ್ದ, ಜಗತ್ತಿನಲ್ಲಿ ವಿಕಲಾಂಗರು ಇರಬಾರದು, ಅದಕ್ಕಾಗಿ ಅವರನ್ನು ಹತ್ಯೆ ಮಾಡಿದ್ದೇನೆ ಎಂದು ಈತ ಹೇಳಿಕೆ ನೀಡಿದ. ಜಪಾನಿ ಇತಿಹಾಸದಲ್ಲೇ ಇದೊಂದು ಭಯಾನಕ ಕೃತ್ಯ ಎಂದು ಸ್ಥಳೀಯ ಮಾಧ್ಯಮಗಳು ಬಣ್ಣಿಸಿದವು.
2008: ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟದ ದುಷ್ಕೃತ್ಯ ನಡೆದ ಬೆನ್ನಲ್ಲೇ ಈದಿನ ಸಂಜೆ ಗುಜರಾತಿನ ಅಹಮದಾಬಾದಿನಲ್ಲಿಯೂ ಅದೇ ರೀತಿಯ ಕಡಿಮೆ ತೀವ್ರತೆಯ ಸರಣಿ ಬಾಂಬ್ ಸ್ಫೋಟ ಸಂಭವಿಸಿ 29ಕ್ಕೂ ಹೆಚ್ಚು ಮಂದಿ ಮೃತರಾಗಿ, 100ಕ್ಕೂ ಅಧಿಕ ಮಂದಿ ಗಾಯಗೊಂಡರು. ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಮಣಿನಗರ್ ಸೇರಿದಂತೆ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ 17 ಸ್ಫೋಟಗಳು ಸಂಭವಿಸಿದವು.


2007: ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳ ಜತೆ ಸಂವಾದ ನಡೆಸಲು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ www.abdulkalam.com ಎಂಬ ಹೊಸ ವೆಬ್ಸೈಟ್ ಈದಿನ ಆರಂಭಗೊಂಡಿತು. ಚೆನ್ನೈಯ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಲ್ಲಿನ ಶಿಕ್ಷಕರ ಜತೆಗೆ ಕಲಾಂ ಸಂವಾದ ನಡೆಸಿದ ಸಂದರ್ಭದಲ್ಲಿ ಈ ವೆಬ್ಸೈಟನ್ನು ಪ್ರಾರಂಭಿಸಲಾಗಿತ್ತು. ರಾಷ್ಟ್ರಪತಿ ಕಚೇರಿಯಲ್ಲಿದ್ದ ಹಿಂದಿನ ವೆಬ್ಸೈಟಿನ ಎಲ್ಲ ವಿಷಯಗಳು ಈ ವೆಬ್ ಸೈಟಿನಲ್ಲಿ ಲಭಿಸುತ್ತವೆ.

2007: ಸುಮಾರು 700 ಕಿಲೋ ಮೀಟರ್ ದೂರದ ಭೂಪ್ರದೇಶಕ್ಕೆ ಅಪ್ಪಳಿಸುವ ಸಾಮರ್ಥ್ಯವುಳ್ಳ `ಬಾಬರ್' ನೌಕಾ ಕ್ಷಿಪಣಿಯ ಪರೀಕ್ಷೆಯನ್ನು ಪಾಕಿಸ್ತಾನ ಸರ್ಕಾರ ಯಶಸ್ವಿಯಾಗಿ ನಡೆಸಿತು. ಈ ವ್ಯಾಪ್ತಿಯೊಳಗೆ ಬರುವ ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಭಾರತ-ರಷ್ಯಾ ಜಂಟಿ ಕಾರ್ಯಾಚರಣೆಯ ಅನ್ವಯ ಭಾರತ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಪ್ರತಿಯಾಗಿ ಬಾಬರ್ ಕ್ಷಿಪಣಿಯನ್ನು ಪಾಕ್ ನಿರ್ಮಿಸಿದೆ. 2005ರಲ್ಲಿ 500 ಕಿಲೋ ಮೀಟರ್ವರೆಗೆ ಕ್ರಮಿಸುವ ಸಾಮರ್ಥ್ಯ ಇದ್ದ ಬ್ರಹ್ಮೋಸ್ ಕ್ಷಿಪಣಿ ಸಾಮರ್ಥ್ಯವನ್ನು 700 ಕಿಲೋ ಮೀಟರ್ಗೆ ಹೆಚ್ಚಿಸಿ ಕಳೆದ ಮಾರ್ಚ್ 22ರಂದು ಭಾರತ ಪರೀಕ್ಷೆ ನಡೆಸಿತ್ತು.

2007: ಉಗ್ರರ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸಹಾಯ ಮಾಡಿದ್ದಕ್ಕಾಗಿ ಅಮೆರಿಕ ಪ್ರಜೆ ಮಹಮದ್ ಫಾರೂಕ್ ಬ್ರೆಂಟ್ ಎಂಬಾತನಿಗೆ ನ್ಯೂಯಾರ್ಕಿನ ಸ್ಥಳೀಯ ನ್ಯಾಯಾಲಯ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಬ್ರೆಂಟ್ನಂತಹ ವ್ಯಕ್ತಿಗಳ ಸಹಾಯದಿಂದಲೇ ಉಗ್ರರ ಸಂಘಟನೆಗಳು ಈ ದೇಶದಲ್ಲಿ ದುಷ್ಕೃತ್ಯ ನಡೆಸಲು ಸಾಧ್ಯವಾಗುತ್ತದೆ ಎಂದು ಶಿಕ್ಷೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಲೊರೆಟ್ಟಾ ಹೇಳಿದರು. ಬ್ರೆಂಟ್ 2002ರಲ್ಲಿ ಪಾಕಿಸ್ಥಾವನದಲ್ಲಿ ಉಗ್ರರ ತರಬೇತಿ ಪಡೆದುಕೊಂಡು ಅಮೆರಿಕಕ್ಕೆ ವಾಪಸ್ಸಾದ ನಂತರ ಮಹಮದ್ ಅಲ್ ಮುತಜ್ಜಮ್ ಎಂಬ ಹೆಸರಿನಲ್ಲಿ ದುಷ್ಕೃತ್ಯ ನಡೆಸಲು ಆರಂಭಿಸಿದನು. 2005ರಲ್ಲಿ ಬಾಲ್ಟಿಮೋರ್, ಮೇರಿಲ್ಯಾಂಡ್ ಪ್ರದೇಶದಲ್ಲಿ ಚಟುವಟಿಕೆ ನಡೆಸುತ್ತಿದ್ದಾಗ ಈತ ಸೆರೆ ಸಿಕ್ಕಿದ.

2007: ಕ್ಷಯರೋಗ ತಗುಲಿದ ಶಂಕೆಯಿಂದ ನೈಋತ್ಯ ವೇಲ್ಸ್ ನಲ್ಲಿರುವ ಸ್ಕಂದ ವೇಲ್ ದೇವಾಲಯದ ಹೋರಿ `ಶಂಬೊ'ವನ್ನು ಕೊಲ್ಲಲು ಆಗಮಿಸಿದ ಸರ್ಕಾರಿ ಅಧಿಕಾರಿಗಳನ್ನು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ಸಮುದಾಯದವರು ಪ್ರತಿಭಟಿಸಿ ವಾಪಸ್ ಕಳುಹಿಸಿದರು. `ಶಂಬೊ'ವನ್ನು ಕೊಲ್ಲದಂತೆ ದೇವಾಲಯದ ಹಿಂದೂ ಭಕ್ತರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ, ಹತ್ಯೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಪಶುವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ತಮ್ಮನ್ನು ಈಗ ವಾಪಸ್ ಕಳುಹಿಸಿದರೂ ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡು ಬಂದು ಹೋರಿಯನ್ನು ವಧಿಸುವುದಾಗಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಹೇಳಿದರು.

2007: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು 2007ರ 28 ರಿಂದ ನವೆಂಬರ್ 18 ರವರೆಗೆ ಬೆಂಗಳೂರಿನ ಗಿರಿನಗರದಲ್ಲಿ ಇರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳುವರು. 28 ರ ಸಂಜೆ 5 ಗಂಟೆಗೆ ಯಶವಂತಪುರದ ಗಾಯತ್ರಿ ದೇವಸ್ಥಾನದ ಬಳಿ ಚಿದಂಬರ ದೀಕ್ಷಿತ ಸ್ವಾಮೀಜಿ ಅವರ ನೇತೃತ್ವದಲ್ಲಿ ಸ್ವಾಮೀಜಿಗಳು ಪುರ ಪ್ರವೇಶ ಮಾಡುವರು ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಬಿ.ಕೃಷ್ಣ ಭಟ್ ಹಾಗೂ ಸಂಚಾಲಕ ಕೆ.ಲಕ್ಷ್ಮಿನಾರಾಯಣ ಪ್ರಕಟಿಸಿದರು. ಚಾತುರ್ಮಾಸ್ಯ ಕಾಲದಲ್ಲಿ ಇತರ ಕಾರ್ಯಕ್ರಮಗಳ ಜೊತೆಗೆ ವಿಶೇಷವಾಗಿ ವಾರದ ಎಲ್ಲ ದಿನಗಳಲ್ಲೂ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಗೋ ಯಾತ್ರೆ ನಡೆಯುವುದು. ಈ ಸಂದರ್ಭದಲ್ಲಿ ಭಾರತೀಯ ಗೋವಿನ ಮಹತ್ವ ಸಾರುವ ಪುರ ಸಂಚಲನ ಮತ್ತು ಮನೆ ಬಾಗಿಲಿಗೆ ಗೋ ಸಂದೇಶ ಸಾರಲಾಗುವುದು. ಪ್ರತಿ ಭಾನುವಾರ ನಗರದ ವಿವಿಧ ವಲಯ ಕೇಂದ್ರಗಳಲ್ಲಿ ಗೋ ವಿಚಾರ ಪ್ರಬೋಧಕ, ಗಾನ. ನೃತ್ಯ ಸಮೇತ ಬೃಹತ್ ಸಾರ್ವಜನಿಕ ಸಭೆ ನಡೆಯುವುದು. ವಾರದ ದಿನದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣೆ, ಸಂವರ್ಧನೆ ಬಗ್ಗೆ ಅರಿವು ಮೂಡಿಸಲು ವಿವಿಧ ಶಾಲಾ ಕಾಲೇಜುಗಳಲ್ಲಿ ವೈಜ್ಞಾನಿಕ ಸಂವಾದ ನಡೆಸಲಾಗುವುದು. ಸೆಪ್ಟೆಂಬರ್ 26 ರಂದು ಸೀಮೋಲ್ಲಂಘನ, ನವೆಂಬರ್ 18 ರಂದು ಕೋಟಿ ನೀರಾಜನ - ಲಕ್ಷ ಮಹಿಳೆಯರು ಗೋಮಾತೆಗೆ ಕೋಟಿ ಸಂಖ್ಯೆಯ ದೀಪ ಬೆಳಗಲಾಗುವುದು ಎಂದು ಅವರು ಹೇಳಿದರು.

2007: ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯ ಪಬ್ಲಿಕ್ ಯುಟಿಲಿಟಿ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಬಟ್ಟೆ ಮಳಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾದವು.

2006: ಬೆಂಗಳೂರಿನ ಫ್ರೇಜರ್ಟೌನ್ ನಿವಾಸಿ, ವೈಟ್ಫೀಲ್ಡ್ ಕುಂದಲ ಹಳ್ಳಿಯ ಅವಿವಾ ಕಸ್ಟಮರ್ ಆಪರೇಷನಲ್ ಸರ್ವೀಸ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಅವರನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಸಮೀಪ ಹೆದ್ದಾರಿಯಲ್ಲಿ ಎಸೆಯಲಾಯಿತು. ಬೆಂಗಳೂರಿನ ಕಾಲ್ಸೆಂಟರ್ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಇನ್ನೊಬ್ಬ ಕಾಲ್ಸೆಂಟರ್ ಉದ್ಯೋಗಿಯ ಈ ಹತ್ಯೆ ಜನರನ್ನು ಕಂಗೆಡಿಸಿತು.

2006: ಇಂಗ್ಲೆಂಡಿನ ಉತ್ತರ ಯಾರ್ಕ್ಷೈರ ತಂಡ ಕೌಂಟಿಯಲ್ಲಿ 5 ರನ್ಗಳಿಗೆ ಆಲೌಟ್ ಆಯಿತು. ಡಿಶ್ಫೋರ್ತ್ ತಂಡದ ವಿರುದ್ಧ ಉತ್ತರ ಯಾರ್ಕ್ಷೈರ್ ತಂಡದ ಎಲ್ಲ ಬ್ಯಾಟ್ಸ್ಮನ್ಗಳೂ ಶೂನ್ಯ ಸಂಪಾದನೆ ಮಾಡಿದರು. ಇವರಿಗೆ ಬಂದ ಐದು ರನ್ಗಳು ಇತರ ರನ್ಗಳಿಂದ ಕೊಡುಗೆಯಾಗಿ ಬಂದವುಗಳು. ನಿಡ್ಡರ್ಡೇಲ್ ಮತ್ತು ಅಮೆಚೂರ್ ಕ್ರಿಕೆಟ್ ಲೀಗಿನ 112 ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಕಡಿಮೆ ಮೊತ್ತವಾಗಿದ್ದು ವಿಸ್ಡನ್ ಅಲ್ಮನಾಕ್ ಪ್ರಕಾರ ಇದು ಅತ್ಯಂತ ಅಪೂರ್ವ ಘಟನೆ. 1931ರಲ್ಲಿ ಮಿಡ್ಲ್ಯಾಂಡ್ಸ್ನಲ್ಲಿ ಶೆಪ್ಸ್ಟೋನ್ ಇಲೆವೆನ್ ತಂಡವು 4 ಇತರೆ ರನ್ಗಳಿಸಿ ಆಲೌಟ್ ಆಗಿತ್ತು.

2006: ಒಲಿಂಪಿಕ್ ಮಹಿಳಾ ಡಿಸ್ಕಸ್ ಚಾಂಪಿಯನ್ ರಷ್ಯಾದ ಕ್ರೀಡಾಪಟು ನತಾಲ್ಯಾ ಸಡೋವಾಗೆ ಅಂತರ್ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಎರಡು ವರ್ಷಗಳ ಅವಧಿಯ ನಿಷೇಧ ಹೇರಲಾಯಿತು. ಕಳೆದ ಮೇ 21ರಂದು ಹಾಲೆಂಡಿನ ಹೆಂಗೆಲೋದಲ್ಲಿ ನಡೆದ ಕೂಟ ಒಂದರಲ್ಲಿ ಸಡೋವಾ ನಿಷೇಧಿತ ಸ್ಟೆರಾಯ್ಡ್ ಮೆಥಾಂಡೀನನ್ ಸೇವಿಸಿದ್ದು ಪತ್ತೆಯಾಗಿತ್ತು.

2000: 14 ವರ್ಷದೊಳಗಿನ ಮಕ್ಕಳನ್ನು ಸರ್ಕಾರಿ ನೌಕರಿ, ಮನೆಗೆಲಸಕ್ಕೆ ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ನಿಷೇಧ.

1991: ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬಂದ್.

1958: ತೇಜಸ್ವಿನಿ ನಿರಂಜನ ಜನನ.

1956: ಖ್ಯಾತ ಒರಿಯಾ ಕವಿ, ನಾಟಕಕಾರ, ಪ್ರಬಂಧಕಾರ ಗೋಧಾವರೀಶ್ ಮಿಶ್ರಾ ನಿಧನ.

1945: ಬ್ರಿಟನ್ ಪ್ರಧಾನಿ ಹುದ್ದೆಗೆ ವಿನ್ಸ್ಟನ್ ಚರ್ಚಿಲ್ ರಾಜೀನಾಮೆ.

1938: ಜಿ.ಜೆ. ಹರಿಜಿತ್ ಜನನ.

1935: ಶೈಲಜಾ ಉಡಚಣ ಜನನ.

1934: ಖ್ಯಾತ ಕಾದಂಬರಿಕಾರ ಎಲ್.ಎಲ್. ಭೈರಪ್ಪ ಅವರು ಲಿಂಗಣ್ಣಯ್ಯ- ಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆಶಿವರ ಗ್ರಾಮದಲ್ಲಿ ಜನಿಸಿದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆ ಆರಂಭಿಸಿದ ಭೈರಪ್ಪ ಈವರೆಗೆ 22 ಕಾದಂಬರಿಗಳನ್ನು ಬರೆದಿದ್ದಾರೆ. ನೀಳ್ಗತೆ, ವಿಮರ್ಶಾಕೃತಿ, ಆತ್ಮವೃತ್ತಾಂತವನ್ನೂ ಬರೆದಿದ್ದಾರೆ. ಅವರ ಮೊದಲ ಕಾದಂಬರಿ `ಜಟ್ಟಿ ಮತ್ತು ಮಟ್ಟಿ'ಯಾದರೆ ಇತ್ತೀಚಿನ ಜನಪ್ರಿಯ ಕಾದಂಬರಿ `ಆವರಣ'.

1926: ವಾಗೀಶ್ವರಿ ಶಾಸ್ತ್ರಿ ಜನನ.

1923: ಖ್ಯಾತ ಹಿನ್ನೆಲೆ ಗಾಯಕ ಮುಖೇಶ್ಚಂದ್ರ ಮಾಥುರ್ ಜನನ.

1891: ಖ್ಯಾತ ಬಂಗಾಳಿ ಪ್ರಾಚ್ಯವಸ್ತು ಸಂಶೋಧಕ ರಾಜೇಂದ್ರಲಾಲ್ ಮಿತ್ರ (ರಾಜಾ) ನಿಧನ.

1775: ಮೊದಲ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಬೆಂಜಮಿನ್ ಫ್ರಾಂಕ್ಲಿನ್ ನೇಮಕ.

No comments:

Post a Comment