ಇಂದಿನ ಇತಿಹಾಸ History Today ಜುಲೈ 09
2018: ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ
ಸಂಬಂಧಿಸಿದಂತೆ ನಾಲ್ವರಲ್ಲಿ ಮೂವರು ಅಪರಾಧಿಗಳು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ
ತೀರ್ಪು ಪ್ರಕಟಿಸಿತು. ಗಲ್ಲುಶಿಕ್ಷೆ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕೆಂದು ಕೋರಿ ಅಪರಾಧಿಗಳಾದ ಮುಕೇಶ್
(೨೯ವರ್ಷ), ಪವನ್ ಗುಪ್ತಾ (೨೨) ಹಾಗೂ ವಿನಯ್ ಶರ್ಮಾ (೨೩) ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ
ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ್ರ, ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಮತ್ತು ಅಶೋಕ ಭೂಷಣ್
ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ವಜಾಗೊಳಿಸಿ, ಗಲ್ಲುಶಿಕ್ಷೆಯನ್ನು ಎತ್ತಿಹಿಡಿಯಿತು. ೨೦೧೭ರ ಮೇ ೫ರಂದು ಸುಪ್ರೀಂಕೋರ್ಟ್ ನೀಡಿದ್ದ ಗಲ್ಲುಶಿಕ್ಷೆ
ತೀರ್ಪಿನ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕೆಂದು ನಾಲ್ಕನೇ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ (೩೧)
ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿಲ್ಲ, ನಾವು ನಂತರ ಸಲ್ಲಿಸುತ್ತೇವೆ ಎಂದು ಅಕ್ಷಯ್ ಪರ ವಕೀಲ ಎಪಿ
ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಸಹಜವಾಗಿ ಕಾಣುವಂತಹ ತಪ್ಪು ಇದ್ದಾಗ ಅಥವಾ ನ್ಯಾಯದಾನದಲ್ಲಿ ತಪ್ಪಾಗಿದ್ದರೆ ಮಾತ್ರ ಪುನರ್
ಪರಿಶೀಲನೆ ಸಾಧ್ಯ. ತೀರ್ಪಿನ ಪುನರ್ ಪರಿಶೀಲನೆಯ ಹೆಸರಿನಲ್ಲಿ
ಅಪರಾಧಿಗಳಿಗೆ ಪ್ರಕರಣದಲ್ಲಿ ಮರುವಾದ ಮಂಡನೆಗೆ ಅವಕಾಶ ನೀಡಲಾಗದು. ಇಲ್ಲಿ ಮರುಪರಿಶೀಲನೆಗೆ ಯಾವುದೇ
ನೆಲೆ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ೨೦೧೭ರ
ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ ನಾಲ್ವರೂ ಅಪರಾಧಿಗಳಿಗೆ ೨೦೧೨ರ ಡಿಸೆಂಬರ್ ೧೬ರಂದು ನಡೆದ ಸಾಮೂಹಿಕ
ಅತ್ಯಚಾರ ಪ್ರಕರಣದಲ್ಲಿ ಮರಣದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೋರ್ಟ್
ಎತ್ತಿ ಹಿಡಿದಿತ್ತು ಇದರ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.
ಅಪರಾಧಿಗಳಿಗೆ ಈಗ ಕಾನೂನುಪ್ರಕಾರ ಎರಡು ಆಯ್ಕೆಗಳಿವೆ.
ಅವರು ಸುಪ್ರೀಂಕೋರ್ಟಿಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿ ತೀರ್ಪಿನಲ್ಲಿ ಮಾರ್ಪಾಡು ಮಾಡಿ ಶಿಕ್ಷೆ ಕಡಿತಕ್ಕೆ
ಕೋರಬಹುದು. ಕಟ್ಟ ಕಡೆಯದಾಗಿ ಭಾರತದ ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಬಹುದು. ೨೦೧೭ರ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಕೆಳ ನ್ಯಾಯಾಲಯಗಳ
ತೀರ್ಪನ್ನು ಎತ್ತಿ ಹಿಡಿದಿತ್ತು. ೨೩ರ ಹರೆಯದ ಪ್ಯಾರಾ
ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬ರಂದು ದಕ್ಷಿಣ ದೆಹಲಿಯಲ್ಲಿ ಚಲಿಸುತ್ತಿದ್ದ
ಬಸ್ಸಿನಲ್ಲಿಸಾಮೂಹಿಕ ಅತ್ಯಾಚಾರ ನಡೆದಿತ್ತು. ಗಾಯಗಳ ಪರಿಣಾಮವಾ ೨೦೧೨ರ ಡಿಸೆಂಬರ್ ೨೯ರಂದು ಸಿಂಗಾಪುರದ
ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದರು. ಪ್ರಕರಣದ ಆರೋಪಿಗಳ ಪೈಕಿಗಳಲ್ಲಿ ಒಬ್ಬರನಾದ
ರಾಮ್ ಸಿಂಗ ತಿಹಾರ್ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅಪ್ರಾಪ್ತ ವಯಸ್ಸಿನ ಅಪರಾಧಿ ಒಬ್ಬನನ್ನು ಬಾಲಾಪರಾಧ ಮಂಡಳಿ
ಶಿಕ್ಷೆ ನೀಡಿತ್ತು. ಮೂರು ವರ್ಷಗಳ ಶಿಕ್ಷೆಯ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿತ್ತು.
2018: ನವದೆಹಲಿ: ದೆಹಲಿ ಸರ್ಕಾರ ಮತ್ತು
ಕೇಂದ್ರ ಸರ್ಕಾರದ ನಡುವಣ ಅಧಿಕಾರ ಸಮರಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಅಂಗೀಕರಿಸುವಲ್ಲಿ
’ಆಯುವ’ ಕೆಲಸವನ್ನು ಹೇಗೆ ಮಾಡುವಿರಿ ಎಂದು ಲೆಫ್ಟಿನೆಂಟ್
ಗವರ್ನರ್ ಅವರಿಗೆ ಬರೆದ ಪತ್ರದಲ್ಲಿಕೇಜ್ರಿವಾಲ್ ಪ್ರಶ್ನಿಸಿದರು.
ಸುಪ್ರೀಂಕೋರ್ಟ್
ಆದೇಶವನ್ನು ಅಕ್ಷರಶಃ ಅನುಷ್ಠಾನಗೊಳಿಸಿ ಎಂದು ಕೇಜ್ರಿವಾಲ್ ಅವರು ಬೈಜಾಲ್ ಅವರನ್ನು ಆಗ್ರಹಿಸಿದರು. ಗೃಹ ಸಚಿವಾಲಯಕ್ಕೆ ತೀರ್ಪನ್ನು ವ್ಯಾಖ್ಯಾನಿಸುವ ಅಧಿಕಾರ
ಇಲ್ಲ ಎಂದು ಅವರು ಒತ್ತಿ ಹೇಳಿದರು. ‘ಗೊಂದಲಗಳಿದ್ದರೆ
ತತ್ ಕ್ಷಣವೇ ಸ್ಪಷ್ಟನೆಗಾಗಿ ಸುಪ್ರೀಂ ಕೋರ್ಟನ್ನು
ಸಂಪರ್ಕಿಸಿ. ಆದರೆ ದಯವಿಟ್ಟು ಸುಪ್ರೀಂಕೋರ್ಟಿನ ಆದೇಶವನ್ನು ಉಲ್ಲಂಘಿಸಬೇಡಿ’ ಎಂದೂ ಲೆಫ್ಟಿನೆಂಟ್ ಗವರ್ನರ್ ಅವರನ್ನು ಮುಖ್ಯಮಂತ್ರಿ
ಒತ್ತಾಯಿಸಿದರು. ‘ತೀರ್ಪನ್ನು ಒಪ್ಪಿಕೊಳ್ಳುವಲ್ಲಿ
ನೀವು ಆಯುವ ಕೆಲಸವನ್ನು ಹೇಗೆ ಮಾಡುತ್ತೀರಿ? ಎಲ್ಲ ವಿಷಯಗಳನ್ನು ನೀವು ಈಗ ರೆಗ್ಯುಲರ್ ಪೀಠದ ಮುಂದೆ
ಒಯ್ದು ಇಡಬೇಕು, ತನ್ಮೂಲಕ ತೀರ್ಪಿನ ಯಾವುದೇ ಭಾಗವನ್ನೂ ಅನುಷ್ಠಾನಗೊಳಿಸಬಾರದು. ಅಥವಾ ತೀರ್ಪನ್ನು
ಪೂರ್ತಿಯಾಗಿ ಅಂಗೀಕರಿಸಿ ಅನುಷ್ಠಾನಗೊಳಿಸಬೇಕು. ’ಆದೇಶದ ಈ ಪ್ಯಾರಾವನ್ನು ಅಂಗೀಕರಿಸುತ್ತೇನೆ. ಆದರೆ
ಅದೇ ಆದೇಶದ ಆ ಪ್ಯಾರಾವನ್ನು ಒಪ್ಪುವುದಿಲ್ಲ ಎಂದು ಹೇಗೆ ಹೇಳುತ್ತೀರಿ?’ ಎಂದು ಕೇಜ್ರಿವಾಲ್ ತಮ್ಮ
ಪತ್ರದಲ್ಲಿ ಪ್ರಶ್ನಿಸಿದರು. ಮುಖ್ಯಮಂತ್ರಿಯವರು ’ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನಾ’ ಶೀರ್ಷಿಕೆಯ ಯೋಜನೆಗೆ ಅನುಮೋದನೆ ನೀಡಿದ್ದರು.
ಈ ಯೋಜನೆಯ ಅಡಿಯಲ್ಲಿ ದೆಹಲಿ ವಿಧಾನಸಭೆಯ ಪ್ರತಿಯೊಂದು ಕ್ಷೇತ್ರದಿಂದ ೧,೧೦೦ ಮಂದಿ ಹಿರಿಯ ನಾಗರಿಕರಿಗೆ
ಉಚಿತ ತೀರ್ಥ ಯಾತ್ರೆ ನಡೆಸಲು ಅವಕಾಶ ಒದಗಿಸಲಾಗುವುದು. ಲೆಫ್ಟಿನೆಂಟ್ ಗವರ್ನರ್ ಆಕ್ಷೇಪಗಳನ್ನು ತಳ್ಳಿಹಾಕಿ
ಈ ಯೋಜನೆಗೆ ಕೇಜ್ರಿವಾಲ್ ಒಪ್ಪಿಗೆ ನೀಡಿದ್ದರು. ‘ಮುಖ್ಯಮಂತ್ರಿ
ತೀರ್ಥಯಾತ್ರಾ ಯೋಜನಾ’ಕ್ಕೆ ಅನುಮೋದನೆ ನೀಡಿದೆ, ಎಲ್ಲ ಆಕ್ಷೇಪಗಳನ್ನೂ
ತಳ್ಳಿಹಾಕಲಾಗಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.
ಮುಖ್ಯಮಂತ್ರಿಯವರು ಕಳೆದ ಜುಲೈ 6ರ ಶುಕ್ರವಾರ ಸುದ್ದಿಗಾರರ
ಜೊತೆ ಮಾತನಾಡುತ್ತಾ ಸೇವೆಗಳ ಇಲಾಖೆಯ ಮೇಲಿನ ನಿಯಂತ್ರಣವನ್ನು ದೆಹಲಿ ಸರ್ಕಾರಕ್ಕೆ ವರ್ಗಾಯಿಸಲು ರಾಜ್ಯಪಾಲರು ಒಪ್ಪಿಲ್ಲ.
ಭಾರತದ ಇತಿಹಾಸದಲ್ಲೇ ಕೇಂದ್ರ ಸರ್ಕಾರವು ಬಹಿರಂಗವಾಗಿ ಸುಪ್ರೀಂಕೋರ್ಟಿನ ಆದೇಶವನ್ನು ಪಾಲಿಸಲು ನಿರಾಕರಿಸಿದೆ
ಎಂದು ಅವರು ನುಡಿದರು. ಬೈಜಾಲ್
ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ, ’ಲೆಫ್ಟಿನೆಂಟ್ ಗವರ್ನರ್
ಅವರು ಗೃಹ ವ್ಯವಹಾರಗಳ ಸಲಹೆಯನ್ನು ಕೇಳಿದ್ದಾರೆ ಮತ್ತು ಸೇವೆಗಳನ್ನು ದೆಹಲಿ ಸರ್ಕಾರಕ್ಕೆ ನೀಡಬಾರದು
ಎಂದು ಇಲಾಖೆಯು ಹೇಳಿದೆ’ ಎಂದು ಹೇಳಿದರು.
ಇದು
ರಾಷ್ಟ್ರದಲ್ಲಿ ಅರಾಜಕತೆಗೆ ದಾರಿ ಮಾಡುತ್ತದೆ ಎಂದು ಕೇಜ್ರಿವಾಲ್ ನುಡಿದರು. ಸುಪ್ರೀಂಕೋರ್ಟ್ ತನ್ನ
ಮಹತ್ವದ ತೀರ್ಪು ನೀಡಿದ ಕೆಲವು ಗಂಟೆಗಳ ಬಳಿಕ ದೆಹಲಿ ಸರ್ಕಾರವು ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗಳಿಗೆ
ಸಂಬಂಧಿಸಿದಂತೆ ಮುಖ್ಯಮಂತ್ರಿಯನ್ನು ಅನುಮೋದನಾ ಪ್ರಾಧಿಕಾರವನ್ನಾಗಿ ಮಾಡುವ ಹೊಸ ವ್ಯವಸ್ಥೆಯನ್ನು
ಜಾರಿಗೆ ತಂದಿತ್ತು. ಏನಿದ್ದರೂ ಸೇವೆಗಳ ಇಲಾಖೆಯು
ಇದನ್ನು ಒಪ್ಪಲು ನಿರಾಕರಿಸಿತ್ತು. ಸುಪ್ರೀಂಕೋರ್ಟ್ ೨೦೧೬ರ ಅಧಿಸೂಚನೆಯನ್ನು ರದ್ದು ಪಡಿಸಿಲ್ಲ, ಈ
ಅಧಿಸೂಚನೆಯು ವರ್ಗಾವಣೆ ಮತ್ತು ನಿಯೋಜನೆಗಳಿಗೆ ಗೃಹ
ಇಲಾಖಾ ಸಚಿವಾಲಯವನ್ನೇ ಪ್ರಾಧಿಕಾರಿಯನ್ನಾಗಿ ಮಾಡಿದೆ ಎಂಬ ಕಾರಣವನ್ನು ಅದು ನೀಡಿತ್ತು.
2018: ಉಡುಪಿ: ತುಳು ಹಾಗೂ ಕನ್ನಡ
ಸಿನಿಮಾಗಳಲ್ಲಿ ಮಿಂಚಿದ್ದ ನಟ ಸದಾಶಿವ ಸಾಲ್ಯಾನ್ ಜುಲೈ ೮ರ ಭಾನುವಾರ ಮುಂಬೈಯ ನಿವಾಸದಲ್ಲಿ ವಿಧಿವಶರಾಗಿದ್ದಾರೆ
ಎಂದು ಕುಟುಂಬದ ಮೂಲಗಳು ತಿಳಿಸಿದವು. ಹವ್ಯಾಸಿ
ರಂಗಭೂಮಿಯಲ್ಲಿ ಗುರುತಿಸಿಕೊಂಡು ಬೆಳೆದಿದ್ದ ಸದಾಶಿವ ಸಾಲ್ಯಾನ್ ಅವರು ಭಾಗ್ಯವಂತೆದಿ, ಬದ್ಕೆರೆ ಬುಡ್ಲೆ,
ಪಟ್ಟಾಯಿ ಪಿಲಿ, ಸತ್ಯ ಓಲುಂಡು, ಸಮರ ಸಿಂಹ, ಅನಾಥ ರಕ್ಷಕ, ಸಿಡಿದೆಡ್ಡ ಪಾಂಡವರು, ಕಾಲೇಜು ರಂಗ ಸೇರಿದಂತೆ
ಸುಮಾರು ೫೦ ಸಿನಿಮಾಗಳಲ್ಲಿ ನಟಿಸಿದ್ದರು. ಸದಾಶಿವ ಸಾಲ್ಯಾನ್ ಮೂಲತಃ ಉಡುಪಿಯ ತೆಂಕ ಎರ್ಮಾಳ್ ನಲ್ಲಿ
ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅವರು ಮುಂಬೈಗೆ ವಲಸೆ ಹೋಗಿದ್ದರು. ಅಲ್ಲಿಯೇ ಅಂಧೇರಿಯ ಚಿನ್ಮಯ
ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಬಳಿಕ ಮುಂಬೈಯ ಸೆಂಟ್ರಲ್ ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದ ಸಾಲ್ಯಾನ್ ಅವರು ರಂಗಭೂಮಿ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.
ತುಳು, ಹಿಂದಿ ಹಾಗೂ ಮರಾಠಿಯ ಸುಮಾರು ೫೦೦ ನಾಟಕಗಳನ್ನು ನಿರ್ದೇಶಿಸಿದ್ದರು. ಬಳಿಕ ರಂಗಕರ್ಮಿ ಕೆಎನ್
ಟೈಲರ್ ಮೂಲಕ ಸಾಲ್ಯಾನ್ ಅವರಿಗೆ ತುಳು ಸಿನಿಮಾ ರಂಗದ ನಂಟು ಬೆಳೆಯಿತು. ಹೀಗೆ ಸುಮಾರು ೫೦ ಸಿನಿಮಾಗಳಲ್ಲಿ
ನಟಿಸಿ ಹೆಸರು ಗಳಿಸಿದ್ದರು. ಅನಾರೋಗ್ಯದ ಕಾರಣದಿಂದ ಸದಾಶಿವ ಸಾಲ್ಯಾನ್ ಅವರು ಇತ್ತೀಚೆಗೆ ನಟನೆಯಿಂದ
ದೂರ ಉಳಿದಿದ್ದರು. ಸಾಲ್ಯಾನ್ ಅವರು ಪತ್ನಿ ಸುಶೀಲಾ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬ ವರ್ಗವನ್ನು
ಅಗಲಿದರು.
2018: ನವದೆಹಲಿ: ಬಾಂಬ್ ಬೆದರಿಕೆಯ
ಪರಿಣಾಮವಾಗಿ ಅಹಮದಾಬಾದಿನಲ್ಲಿ ವಿಸ್ತಾರ ವಿಮಾನದ ಹಾರಾಟ ಬೆಳಗ್ಗೆ ಸುಮಾರು ೩ ಗಂಟೆಗೂ ಹೆಚ್ಚು ಕಾಲ
ವಿಳಂಬಗೊಂಡಿತು. ದೆಹಲಿಗೆ ತೆರಳುವ ವಿಸ್ತಾರದ ಯುಕೆ
೯೭೬ ವಿಮಾನದಲ್ಲಿ ಬಾಂಬ್ ಇದೆ ಎಂಬ ದೂರವಾಣಿ ಕರೆಯೊಂದು ಗೋವಾದಿಂದ ಏರ್ ಲೈನ್ಸಿನ ಕಸ್ಟಮರ್ ಕೇರ್
ವಿಭಾಗಕ್ಕೆ ಬೆಳಗ್ಗೆ ಬಂದಿತ್ತು. ವಿಮಾನ ೧೦.೫೫ಕ್ಕೆ
ಹೊರಡಬೇಕಾಗಿತ್ತು. ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಅದರ ಹಾರಾಟದ ಸಮಯವನ್ನು ಮಧ್ಯಾಹ್ನ ೧ ಗಂಟೆಗೆ
ಮುಂದೂಡಿ ಬಳಿಕ ೩ ಗಂಟೆಗೆ ಮುಂದೂಡಲಾಯಿತು. ಕಡ್ಡಾಯ ಭದ್ರತಾ ತಪಾಸಣೆಗಳ ಕಾರಣ ವಿಮಾನಯಾನದಲ್ಲಿ ವಿಳಂಬವಾಯಿತು
ಎಂದು ಏರ್ ಲೈನ್ ಟ್ವೀಟ್ ಮಾಡಿತು. ವಿಮಾನವನ್ನು ನಿಲ್ದಾಣದಲ್ಲಿನ
ನಿರ್ಜನ ಪ್ರದೇಶಕ್ಕೆ ಒಯ್ದು ಭದ್ರತಾ ಸಿಬ್ಬಂದಿ ಮತ್ತು ಶ್ವಾನದಳವನ್ನು ಭದ್ರತಾ ತಪಾಸಣೆಗಾಗಿ ನಿಯೋಜಿಸಲಾಯಿತು
ಎಂದು ಮೂಲಗಳು ತಿಳಿಸಿವೆ.
2018: ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕಾಂಕ್ಷೆಯ ಅಹಮದಾಬಾದ್
- ಮೆಟ್ರೋಪಾಲಿಗಳ ನಡುವಣ ಬುಲೆಟ್ ಟ್ರೈನ್ ಯೋಜನೆಗೆ ವಿಖ್ರೋಲಿ ಹೊರವಲಯದಲ್ಲಿ ತನ್ನ ಭೂಮಿಯ ಪ್ರಸ್ತಾಪಿತ
ಸ್ವಾಧೀನವನ್ನು ಪ್ರಶ್ನಿಸಿ ಗೋದ್ರೆಜ್ ಸಮೂಹವು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತು. ತನಗೆ ಬೇಕಾದ ೮.೬
ಎಕರೆ ಭೂಮಿಗಾಗಿ ಗೋದ್ರೆಜ್ ಸಮೂಹದ ಭೂಮಿಯನ್ನು ಹೊರಗಿಟ್ಟು, ಯೋಜನೆಯ ರೂಪುರೇಷೆ ಬದಲಾಯಿಸುವಂತೆ ಅಧಿಕಾರಿಗಳಿಗೆ
ನಿರ್ದೇಶನ ನೀಡುವಂತೆ ಸಮೂಹವು ನ್ಯಾಯಾಲಯಕ್ಕೆ ಮನವಿ ಮಾಡಿತು. ಬುಲೆಟ್ ಟ್ರೈನ್ ಯೋಜನೆಯ ಹಾಲಿ ರೂಪುರೇಷೆಯಂತೆ ಮುಂಬೈ
ಮತ್ತು ಅಹಮದಾಬಾದ್ ನಡುವಣ ಒಟ್ಟು ೫೦೮.೧೭ ಕಿಮೀ ರೈಲು ಹಳಿಯಲ್ಲಿ ಸುಮಾರು ೨೧ ಕಿಮೀಗಳು ಭೂಗತ ಮಾರ್ಗವಾಗಿದೆ. ಒಂದು ಭೂಗತ ಮಾರ್ಗದ ಪ್ರವೇಶ ಸ್ಥಳವು ವಿಖ್ರೋಲಿಯ ಭೂಮಿಯಲ್ಲಿ
ಬರುತ್ತದೆ. ಕಳೆದ ತಿಂಗಳು ಸಲ್ಲಿಕೆಯಾಗಿರುವ ಅರ್ಜಿಯು
ಜುಲೈ ೩೧ರಂದು ಹೈಕೋರ್ಟಿನ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ. ಬುಲೆಟ್ ಟ್ರೈನ್ ಯೋಜನೆಯು ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ
ರೈತರು ಮತ್ತು ಬುಡಕಟ್ಟು ಗುಂಪುಗಳ ವಿರೋಧವನ್ನೂ ಎದುರಿಸುತ್ತಿದೆ. ಗುಜರಾತಿನ ನಾಲ್ವರು ರೈತರು ಯೋಜನೆಗಾಗಿ ತಮ್ಮ ಭೂಮಿಯನ್ನು
ಸ್ವಾಧೀನ ಪಡಿಸಿಕೊಳ್ಳವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ ಪ್ರಧಾನಿ
ಶಿಂಜೋ ಅಬೆ ಅವರು ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಅಹಮದಾಬಾದಿನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ದೇಶದ ಚೊಚ್ಚಲ ಬುಲೆಟ್ ಟ್ರೈನ್ ಗರಿಷ್ಠ ೩೫೦ ಕಿಮೀ ವೇಗದಲ್ಲಿ
ಓಡಲಿದ್ದು ಪಯಣದ ಸಮಯವನ್ನು ಈಗಿನ ೭ ಗಂಟೆಯಿಂದ ೩ ಗಂಟೆಗಳಿಗೆ ಇಳಿಸಲಿದೆ. ರೈಲುಗಾಡಿಯು ಮಹಾರಾಷ್ಟ್ರದ ೪ ನಿಲ್ದಾಣಗಳು ಸೇರಿದಂತೆ ೧೨
ನಿಲ್ದಾಣಗಳಲ್ಲಿ ನಿಲ್ಲಲಿದೆ.
2018: ಬೆಂಗಳೂರು: ಸುಮಾರು ಆರು ವರ್ಷಗಳ
ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡ ಮೂವರು
ಆರೋಪಿಗಳಿಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ವಿಶೇಷ ನ್ಯಾಯಾಲಯ ೭ ವರ್ಷಗಳ ಜೈಲುಶಿಕ್ಷೆ
ವಿಧಿಸಿ ತೀರ್ಪು ನೀಡಿತು.
೨೦೧೦ರ
ಏಪ್ರಿಲ್ ೧೦ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆರಂಭಕ್ಕೂ ಮುನ್ನ ಸ್ಫೋಟ ಸಂಭವಿಸಿತ್ತು.
ಘಟನೆಯಲ್ಲಿ ೧೫ ಮಂದಿ ಗಾಯಗೊಂಡಿದ್ದರು. ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಕಮಲ್ ಹಸನ್, ಗೌಹಾರ್ ಅಜೀಜ್
ಖೊಮೆನಿ, ಕಪಿಲ್ ಅಖ್ತರ್ ಗೆ ೭ ವರ್ಷಗಳ ಜೈಲುಶಿಕ್ಷೆ ನೀಡಿತು. ಪ್ರಕರಣದ ವಾದ, ಪ್ರತಿವಾದ ಆಲಿಸಿದ ನಂತರ ಎನ್ ಐಎ ವಿಶೇಷ
ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ತೀರ್ಪು ಪ್ರಕಟಿಸಿದರು. ಸ್ಫೋಟ ಪ್ರಕರಣದ ೫ನೇ ಆರೋಪಿಯಾಗಿರುವ ಗೌಹಾರ್ ಅಜೀಜ್ ಖೋಮೆನಿ,
೧೨ನೇ ಆರೋಪಿ ಕಮಲ್ ಹಸನ್ ಅಲಿಯಾಸ್ ಕಮಲ್ ಹಾಗೂ ೧೩ನೇ ಆರೋಪಿ ಮೊಹಮ್ಮದ್ ಕಫೀಲ್ ಅಖ್ತರ್ ತಪ್ಪೊಪ್ಪಿಗೆ
ಹೇಳಿಕೆ ನೀಡಿದ್ದರು. ಉಳಿದ ಆರೋಪಿಗಳ ಬಗ್ಗೆ ತನಿಖೆ ನಡೆಯಬೇಕಾಗಿದೆ.
2018: ಬೆಂಗಳೂರು/ ಬೀದರ್: ವಿಧಾನಸಭೆಯಲ್ಲಿ ರೈತರ
ಸಾಲಮನ್ನಾದ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾಗಲೇ
ಬೀದರಿನಲ್ಲಿ ಸಾಲಬಾಧೆಯಿಂದ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾದ ಘಟನೆ ಘಟಿಸಿತು. ಇದೇ ವೇಳೆಗೆ ವಿಧಾನಸೌಧದ ಹೊರಗೆ ರೈತ ಸಂಘಟನೆ ಸಂಪೂರ್ಣ
ಸಾಲಮನ್ನಾಕ್ಕೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿತು.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ನಿವಾಸಿ ರೈತ ಪಂಡಿತ್ ವಿವಿಧ ಬ್ಯಾಂಕುಗಳಲ್ಲಿ
೩ ಲಕ್ಷ ರೂಪಾಯಿ ಸಾಲ ಮಾಡಿದ್ದು, ಸಾಲ ಕಟ್ಟಲಾಗದೆ ಮನನೊಂದು ಈದಿನ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ
ಎಂದು ವರದಿ ತಿಳಿಸಿತು. ಬೀದರಿನ ಮಲ್ಲಿಕ್ ಮಿರ್ಜಾಪುರ ಎಂಬಲ್ಲಿಯೂ ರೈತ ರಾಜಾರೆಡ್ಡಿ ಸಾಲಬಾಧೆಯಿಂದ
ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು
ವರದಿ ಹೇಳಿತು. ರೈತ ಪ್ರತಿಭಟನೆ: ಸಾಲಮನ್ನಾ ಹೆಸರಿನಲ್ಲಿ
ಸರ್ಕಾರ ಅನ್ಯಾಯ ಮಾಡಿದೆ ಎಂದು ಆಪಾದಿಸಿರುವ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರೈತರ ಸಂಪೂರ್ಣ
ಸಾಲ ಮನ್ನಾ ಮಾಡುವಂತೆ ಪಟ್ಟು ಹಿಡಿದು ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿತು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಪ್ರತಿಭಟನೆಯ ನೇತೃತ್ವ
ವಹಿಸಿದ್ದರು. ಪ್ರತಿಭಟನೆ ಸಂದರ್ಭದಲ್ಲಿ ರೈತರು ಮತ್ತು
ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಸಾಲಮನ್ನಾ
ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು,
ಇಲ್ಲವೇ ಕುಮಾರಸ್ವಾಮಿಯವರೇ ಸ್ಥಳಕ್ಕೆ ಆಗಮಿಸಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದರು. ವಿಧಾನಸೌಧಕ್ಕೆ
ಮುತ್ತಿಗೆ ಯತ್ನ, ಹಲವು ರೈತರು ಪೊಲೀಸರ ವಶಕ್ಕೆ: ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ
ನಡೆಸುತ್ತಿದ್ದ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ
ಮೌರ್ಯ ಸರ್ಕಲ್ ಸಮೀಪ ಪೊಲೀಸರು ರೈತರನ್ನು ವಶಕ್ಕೆ ಪಡೆದರು. ಮುಖ್ಯಮಂತ್ರಿ ಭೇಟಿಗೆ ಅವಕಾಶ; ಸಂಪೂರ್ಣ ಸಾಲಮನ್ನಾ ವಿಚಾರಕ್ಕೆ
ಸಂಬಂಧಿಸಿದಂತೆ ಪ್ರತಿಭಟನಾ ನಿರತ ರೈತರ ಪ್ರತಿಭಟನೆಗೆ ಮಣಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ
ನಿಯೋಗಕ್ಕೆ ಭೇಟಿಯಾಗಲು ಅವಕಾಶ ಕಲ್ಪಿಸಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
2018: ನವದೆಹಲಿ: ಪ್ರಧಾನಿ ನರೇಂದ್ರ
ಮೋದಿ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಅವರು ನೋಯ್ದಾದಲ್ಲಿ ಸ್ಯಾಮ್ ಸಂಗ್ ಮೊಬೈಲ್ ತಯಾರಿ
ಘಟಕವನ್ನು ಉದ್ಘಾಟಿಸಿದರು. ಈ ಘಟಕವು ವಿಶ್ವದಲ್ಲೇ ಅತಿದೊಡ್ಡ ಮೊಬೈಲ್ ತಯಾರಿ ಘಟಕ ಎಂದು ಪ್ರತಿಪಾದಿಸಲಾಯಿತು.
ಈ ಘಟಕವು ವಾರ್ಷಿಕ ಮೊಬೈಲ್ ತಯಾರಿ ಸಾಮರ್ಥ್ಯವನ್ನು ೨೦೨೦ರ ವೇಳೆಗೆ ೧೨೦ ಮಿಲಿಯ (೧೨ ಕೋಟಿ) ಯುನಿಟ್‌ಗಳಿಗೆ
ಏರಿಸಲಿದೆ ಎಂದು ಸ್ಯಾಮ್ ಸಂಗ್ ಇಂಡಿಯಾ ಹೇಳಿದೆ. ಕಂಪೆನಿಯ ಪ್ರಸ್ತುತ ಮೊಬೈಲ್ ತಯಾರಿ ಸಾಮರ್ಥ್ಯ
೬೮ ಮಿಲಿಯ (೬.೮೦ ಕೋಟಿ) ಘಟಕಗಳು. ಕಂಪೆನಿಯು ತನ್ನ
’ಮೇಕ್ ಫಾರ್ ವರ್ಲ್ಡ್’ ಉಪಕ್ರಮದ ಅಂಗವಾಗಿ ಭಾರತವನ್ನು
’ಮೊಬೈಲ್ ಫೋನ್‌ಗಳ ಕೇಂದ್ರ ಸ್ಥಾನ’ವನ್ನಾಗಿ (ಮೊಬೈಲ್ ಹಬ್)
ಮಾಡುವ ಗುರಿ ಹೊಂದಿದೆ. ಇಲ್ಲಿ ತಯಾರಿಸಲಾಗುವ ಶೇಕಡಾ ೩೦ರಷ್ಟು ಮೊಬೈಲ್‌ಗಳನ್ನು ರಫ್ತು ಮಾಡುವ ಗುರಿ
ಇದೆ. ಕಳೆದ ಜೂನ್ ತಿಂಗಳಲ್ಲಿ, ಸ್ಯಾಮ್ ಸಂಗ್ ನೋಯ್ಡಾದ
ಘಟಕದಲ್ಲಿ ಹೊಸ ಮೊಬೈಲ್ ಫೋನ್ ಗಳ ತಯಾರಿ ಸಾಮರ್ಥ್ಯ
ಹೆಚ್ಚಳಕ್ಕಾಗಿ ೪,೯೧೫ ಕೋಟಿ ರೂಪಾಯಿಗಳನ್ನು ಹೂಡುವುದಾಗಿ ಪ್ರಕಟಿಸಿತ್ತು.
2017:
ನವದೆಹಲಿ: ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಸೇರಬೇಕು ಎಂಬ ಆಸೆ ಹೊತ್ತಿರುವ
ವಿದ್ಯಾರ್ಥಿಗಳು, ಪ್ರವೇಶ ಪರೀಕ್ಷೆಗಳಿಗಾಗಿ ಇನ್ನು ಮುಂದೆ ಮನೆಯಲ್ಲೇ ಕುಳಿತು ಸಿದ್ಧತೆ ಮಾಡಿಕೊಳ್ಳಬಹುದು.
ಇದೇ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ನಾಲ್ಕು ಶೈಕ್ಷಣಿಕ ಟಿವಿ ವಾಹಿನಿಗಳಿಗೆ ಚಾಲನೆ ನೀಡಿತು.
ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ತಜ್ಞರು ವಾಹಿನಿಗಳ ಮೂಲಕ ವಿದ್ಯಾರ್ಥಿಗಳಿಗೆ
ಪರೀಕ್ಷಾ ತಯಾರಿ ಬಗ್ಗೆ ಬೋಧನೆ ಮಾಡಲಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈ ವಾಹಿನಿಗಳಿಗೆ
ಚಾಲನೆ ನೀಡಿದರು. ಇದಲ್ಲದೇ, ಶಾಲೆಗಳು ಮತ್ತು ಉನ್ನತ ಶಿಕ್ಷಣವನ್ನು ಗುರಿಯಾಗಿಸಿಕೊಂಡು 28 ಇತರ ಡಿಟಿಎಚ್
ಉಪಗ್ರಹ ವಾಹಿನಿಗಳನ್ನೂ ಅವರು ಉದ್ಘಾಟಿಸಿದರು. ಪದವಿ, ಡಿಪ್ಲೊಮಾ ಸೇರಿದಂತೆ ದೇಶದ ವಿದ್ಯಾರ್ಥಿಗಳ
ಇತರ ಪ್ರಮಾಣ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡುವ ಮತ್ತು ಪರಿಶೀಲನೆಗೆ
ಒಳಪಡಿಸುವ ವ್ಯವಸ್ಥೆಯಾದ ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿಗೂ (ಎನ್‌ಎಡಿ) ಮುಖರ್ಜಿ ಅವರು ಚಾಲನೆ
ನೀಡಿದರು. ಭಾರತದ ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್‌ಗಳ (ಮೂಕ್ಸ್) ವೇದಿಕೆ ‘ಸ್ವಯಂ’ನ ಕಾರ್ಯಾರಂಭಕ್ಕೂ
ರಾಷ್ಟ್ರಪತಿ ಅವರು ನಾಂದಿ ಹಾಡಿದರು. ಸ್ವಯಂ
ಪ್ರಭ: ಈದಿನ ಆರಂಭಗೊಂಡ 32 ಶೈಕ್ಷಣಿಕ ವಾಹಿನಿಗಳು ‘ಸ್ವಯಂ ಪ್ರಭ’ ಎಂಬ
ಬ್ರ್ಯಾಂಡ್ ಹೆಸರಿನಲ್ಲಿ ಡಿಶ್ ಟಿವಿಯಲ್ಲಿ ದಿನದ 24 ಗಂಟೆಗಳೂ ಪ್ರಸಾರವಾಗಲಿವೆ. ವಾಹಿನಿಗಳ ಕಾರ್ಯನಿರ್ವಹಣೆ ಹೀಗೆ: ಎಂಜಿಯರಿಂಗ್
ಮತ್ತು ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನಡೆಯುವ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ
ನೆರವಾಗುವ ನಾಲ್ಕು ವಾಹಿನಿಗಳು ಐಐಟಿ–ಪಾಲ್ (ಐಐಟಿ ಪ್ರೊಫೆಸರ್ ನೆರವಿನಿಂದ ಕಲಿಯುವಿಕೆ) ಅಡಿಯಲ್ಲಿ
ಪ್ರಸಾರವಾಗಲಿವೆ. ಚಾನೆಲ್‌ಗಳು
ಪ್ರತಿದಿನ ನಾಲ್ಕು ಗಂಟೆಗಳ ಕಾಲ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಹೊಸ ಮಾಹಿತಿಯನ್ನು ಪ್ರಸಾರ
ಮಾಡಲಿವೆ. ನಂತರ ಅದು ಐದು ಬಾರಿ ಮರು ಪ್ರಸಾರ ಆಗಲಿದೆ. ಐಐಟಿ–ಪಾಲ್ ವಾಹಿನಿಗಳನ್ನು ದೆಹಲಿಯ ಐಐಟಿ
ನಿರ್ವಹಿಸಲಿದೆ. ವಿವಿಧ ಐಐಟಿಗಳು ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಇತರೆ ಪ್ರತಿಷ್ಠಿತ ಶಿಕ್ಷಣ
ಸಂಸ್ಥೆಗಳ ವಿಷಯ ತಜ್ಞರು ನೇರ ಮತ್ತು ಸಂವಹನಾತ್ಮಕ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ವಿದ್ಯಾರ್ಥಿಗಳು
ಮನೆಯಲ್ಲೇ ಕುಳಿತು ಟಿ.ವಿ ಅಥವಾ ಮೊಬೈಲ್ ಮೂಲಕ ಈ ತರಗತಿಗೆ ಹಾಜರಾಗಬಹುದು. ಅಲ್ಲದೇ ವಿಷಯ ತಜ್ಞರಿಗೆ
ಪ್ರಶ್ನೆಗಳನ್ನೂ ಕೇಳಬಹುದು. ಸ್ವಯಂ
ಎಂದರೆ: ಆನ್‌ಲೈನ್ ಕೋರ್ಸ್‌ಗಳ ವೇದಿಕೆ ‘ಸ್ವಯಂ’ ಪ್ರೌಢ ಮತ್ತು ಪಿಯುಸಿ
ಮಟ್ಟದ 29 ವಿಷಯಗಳಲ್ಲಿ ವರ್ಚ್ಯುವಲ್ ತರಗತಿಗಳನ್ನು ನಡೆಸಲಿದೆ. ಎಂಜಿನಿಯರಿಂಗ್ ಮತ್ತು ಮ್ಯಾನೇಜ್
ಮೆಂಟ್ ಸೇರಿದಂತೆ ವಿವಿಧ ಕ್ಷೇತ್ರಗಳ 210 ಪದವಿ ಕೋರ್ಸ್‌ಗಳು ಮತ್ತು 192 ಸ್ನಾತಕೋತ್ತರ
ಪದವಿ ಕೋರ್ಸ್‌ಗಳ ಬೋಧನೆಯೂ ಸ್ವಯಂ ವಾಹಿನಿಯಲ್ಲಿ ಇರಲಿದೆ. ಅಲ್ಲದೇ, 14 ಅಲ್ಪಾವಧಿ (ಸರ್ಟಿಫಿಕೇಟ್)
ಕೋರ್ಸ್‌ಗಳು ಮತ್ತು ಮೂರು ಡಿಪ್ಲೊಮಾ ಕೋರ್ಸ್‌ಗಳನ್ನೂ ನೀಡಲಿದೆ. ಯಾರು ಬೇಕಾದರೂ, ದೇಶದ ಯಾವ ಮೂಲೆಯಿಂದಲೂ
ಆನ್‌ಲೈನ್ ಮೂಲಕ ಅಲ್ಪ ಖರ್ಚಿನಲ್ಲಿ ಈ ಕೋರ್ಸ್‌ಗಳನ್ನು ಮಾಡಬಹುದು. ‘ಸ್ವಯಂ’ ಮೂಲಕ ಪ್ರಮಾಣ ಪತ್ರ,
ಡಿಪ್ಲೊಮಾ ಮತ್ತು ಪದವಿ ಪಡೆಯಲು ಬಯಸುವವರು ಅದರ ಪೋರ್ಟಲ್‌ಗೆ ಭೇಟಿ ಕೊಟ್ಟು ನೋಂದಣಿ ಮಾಡಿಸಿಕೊಂಡು,
ಸಣ್ಣ ಮೊತ್ತದ ಶುಲ್ಕ ಪಾವತಿಸಬೇಕು. ಕೋರ್ಸ್ ಮುಗಿದು ಪದವಿ, ಡಿಪ್ಲೊಮಾ ಪ್ರಮಾಣಪತ್ರ ನೀಡುವುದಕ್ಕೂ
ಮುನ್ನ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಪಡೆದಿರುವ ಅಂಕ/ಗ್ರೇಡ್‌ಗಳನ್ನು ಆ ಅಭ್ಯರ್ಥಿಯ ಶೈಕ್ಷಣಿಕ
ದಾಖಲೆಗಳಿಗೆ ವರ್ಗಾಯಿಸಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳು ಯಾವುದಾದರೂ ವಿ.ವಿ ಮತ್ತು ಕಾಲೇಜುಗಳಲ್ಲಿ
ನೋಂದಾಯಿಸಿಕೊಂಡಿದ್ದರೆ, ಅವರ ಅಂಕಗಳು ಮತ್ತು ಗ್ರೇಡ್‌ಗಳನ್ನು ಅವರ ಮಾತೃ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ.
2017:
ಲಂಡನ್: ಲಿಂಗಪರಿವರ್ತನೆ ಚಿಕಿತ್ಸೆ ಮಾಡಿಸಿಕೊಂಡ 21 ವರ್ಷದ ಯುವಕನೊಬ್ಬ ಹೆಣ್ಣು
ಮಗುವಿಗೆ ಜನ್ಮ
ನೀಡಿರುವ ಅಪರೂಪದ ಪ್ರಕರಣ ಬ್ರಿಟನ್‌ನಲ್ಲಿ ಘಟಿಸಿದ್ದು ವರದಿಯಾಯಿತು. ಫೇಸ್‌ಬುಕ್‌ನಲ್ಲಿ
ಪರಿಚಯವಾದ ವ್ಯಕ್ತಿಯೊಬ್ಬರಿಂದ ದಾನವಾಗಿ ಪಡೆದಿದ್ದ ವೀರ್ಯದಿಂದ ಬ್ರಿಟನ್ ಪ್ರಜೆ ಹೈಡೆನ್ ಕ್ರಾಸ್
ಕಳೆದ ವರ್ಷದ ಆರಂಭದಲ್ಲಿ ಗರ್ಭ ಧರಿಸಿದ್ದರು. ಆಗ ಈ ಸುದ್ದಿ ವಿಶ್ವದಾದ್ಯಂತ ಪ್ರಕಟವಾಗಿತ್ತು.
ಇಲ್ಲಿಯ ಆಸ್ಪತ್ಸೆಯಲ್ಲಿ ಜೂನ್ 16ರಂದು ಶಸ್ತ್ರಚಿಕಿತ್ಸೆಯ ಮೂಲಕ ಹೈಡೆನ್ ಅವರ ಹೆರಿಗೆ
ಮಾಡಿಸಲಾಯಿತು. ಇದರೊಂದಿಗೆ ಮಗುವಿನ ಜನ್ಮ ನೀಡಿದ ಇಂಗ್ಲೆಂಡಿನ ಪ್ರಥಮ ಪುರುಷ ಎಂಬ ಹೆಗ್ಗಳಿಕೆ
ಅವರದಾಯಿತು. ‘ಮಗಳು ಟ್ರಿನಿಟಿ ಲೇ ನನ್ನ ಪಾಲಿನ ದೇವತೆ’ ಎಂದು ಹೈಡೆನ್ ‘ ದಿ ಸನ್’ ಪತ್ರಿಕೆಗೆ
ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾನೂನುಬದ್ಧವಾಗಿ ಪುರುಷನಂತೆ ಜೀವನ
ನಡೆಸುತ್ತಿರುವ ಹೈಡೆನ್, ಮಹಿಳೆಯಿಂದ ಪುರುಷದೇಹಕ್ಕೆ ಬದಲಾಗಲು ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿದ್ದರು.
ಭವಿಷ್ಯದಲ್ಲಿ ಮಗು ಪಡೆಯುವ ಹಂಬಲ ಹೊಂದಿದ್ದ ಅವರ ಅಂಡಾಣುಗಳನ್ನು ಸಂರಕ್ಷಿಸಿಡಲು ಬ್ರಿಟನ್‌ನ
ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆ (ಎನ್‌ಎಚ್‌ಎಸ್) ನಿರಾಕರಿಸಿತ್ತು. ಈ
ಕಾರಣದಿಂದ, ತಮ್ಮ ಲಿಂಗ ಪರಿವರ್ತನೆ ಚಿಕಿತ್ಸೆಯನ್ನು ಅರ್ಧದಲ್ಲೇ ತಡೆಹಿಡಿದಿದ್ದ ಹೈಡೆನ್, ವೀರ್ಯ
ದಾನಿಯನ್ನು ಪತ್ತೆ ಮಾಡಿದ್ದರು. ಇದೀಗ ಮಗು ಪಡೆಯುವ ತಮ್ಮ ಬಯಕೆ ಪೂರ್ಣಗೊಂಡಿರುವುದರಿಂದ
ಹೈಡೆನ್ ಆದಷ್ಟು ಬೇಗ ಲಿಂಗ ಪರಿವರ್ತನೆಯ ಚಿಕಿತ್ಸೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದರು.
2017:
ಮೋಸುಲ್ (ಇರಾಕ್): ‘ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಹಿಡಿತದಲ್ಲಿದ್ದ ಮೋಸುಲ್ ನಗರ
ಸ್ವತಂತ್ರಗೊಂಡಿದೆ’
ಎಂದು ಇರಾಕ್ ಪ್ರಧಾನಿ ಹೈದರ್ ಅಲ್– ಅಬಾದಿ ಘೋಷಿಸಿದರು. ಐಸಿಸ್ (ಐ.ಎಸ್) ಉಗ್ರರ ವಿರುದ್ಧ ಸಾಧಿಸಿದ
ಅತಿದೊಡ್ಡ ವಿಜಯ ಇದಾಗಿದೆ ಎಂದು ಪ್ರಧಾನಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿತು. ಈ ಸಂದರ್ಭದಲ್ಲೂ ನಗರದಿಂದ
ಗುಂಡಿನ ದಾಳಿ ಮತ್ತು ವಾಯು ದಾಳಿಯ ಶಬ್ದ ಕೇಳಿಬರುತ್ತಿತ್ತು. ಇದರಿಂದ ಹೋರಾಟ ಇನ್ನೂ ಸಂಪೂರ್ಣ ಅಂತ್ಯಗೊಂಡಿಲ್ಲ
ಎಂದು ಹೇಳಲಾಯಿತು. ಆದರೂ ಇರಾಕ್ ಭದ್ರತಾ ಪಡೆಗಳ ಈ ವಿಜಯವನ್ನು ಮೈಲುಗಲ್ಲು ಎಂದೇ ಬಣ್ಣಿಸಲಾಯಿತು.
ಮೋಸುಲ್‌ಗೆ ಭೇಟಿ ನೀಡಿದ ಪ್ರಧಾನಿ, ಉಗ್ರರ ವಿರುದ್ಧ ಹೋರಾಡಿದ ಯೋಧರನ್ನು ಅಭಿನಂದಿಸಿದರು. ಮೋಸುಲ್‌ನಲ್ಲಿ
ಇರಾಕಿ ಪಡೆಗಳು ಒಂಬತ್ತು ತಿಂಗಳಿನಿಂದ ಉಗ್ರರ ವಿರುದ್ಧ ಹೋರಾಟ ನಡೆಸಿದ್ದವು. ಅಮೆರಿಕದ ನೇತೃತ್ವದಲ್ಲಿ
ವೈಮಾನಿಕ ದಾಳಿಯೂ ನಡೆದದ್ದರಿಂದ ಉಗ್ರರು ತಮ್ಮ ಹಿಡಿದಲ್ಲಿದ್ದ ಸಾಕಷ್ಟು ಪ್ರದೇಶವನ್ನು ಕಳೆದುಕೊಂಡಿದ್ದಾರೆ.
ಮೋಸುಲ್ ಮರುವಶ ಕಾರ್ಯಾಚರಣೆಯನ್ನು ಇರಾಕಿ ಪಡೆಗಳು ಕಳೆದ ಅಕ್ಟೋಬರ್‌ನಿಂದಲೇ ಆರಂಭಿಸಿದ್ದವು.
ಈ ವರ್ಷದ ಜನವರಿಯಲ್ಲಿ ಪೂರ್ವ ಭಾಗವನ್ನು ವಶಕ್ಕೆ ಪಡೆದಿದ್ದವು. ಆದರೆ ಉಗ್ರರು ಟೈಗ್ರಿಸ್ ನದಿಯ
ದಂಡೆಯ ಮೇಲಿರುವ ಜನದಟ್ಟಣೆಯ ನಗರವನ್ನು ಪ್ರವೇಶ ಮಾಡಿದ ನಂತರ ಯೋಧರಿಗೆ ಹೋರಾಟ ಕಷ್ಟವಾಗಿತ್ತು. 2007: ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕ ಚಂದ್ರಶೇಖರ್ ಅವರ ಅಂತ್ಯಸಂಸ್ಕಾರವನ್ನು ಈದಿನ ಸಂಜೆ ನವದೆಹಲಿಯ ಯಮುನಾ ನದಿ ದಂಡೆಯಲ್ಲಿರುವ ರಾಜ್ ಘಾಟಿನನ ಏಕತಾ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವದೊಡನೆ ನೆರವೇರಿಸಲಾಯಿತು. ಹಿಂದೂ ಧಾರ್ಮಿಕ ವಿಧಿ-ವಿಧಾನಗಳನ್ವಯ ವೇದ ಪಠಣಗಳೊಂದಿಗೆ ಚಂದ್ರಶೇಖರ್ ಅಂತಿಮ ಸಂಸ್ಕಾರವನ್ನು ಅವರ ಪುತ್ರರಾದ ಪಂಕಜ್ ಮತ್ತು ನೀರಜ್ ಅವರು ನೆರವೇರಿಸಿದರು.
2007: ವೃತ್ತಿರಂಗಭೂಮಿಯ ಹಿರಿಯ ಕಲಾವಿದ ವಿಜಾಪುರದ ಕೆ.ಬಿ.ಶಂಕರ್, ಹಾರ್ಮೋನಿಯಂ ಮೇಷ್ಟ್ರು ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ದೇವೇಂದ್ರ ರೆಡ್ಡಿ ನಂದಿಪುರ, ನಟ ಬೆಂಗಳೂರಿನ ಮೈಕೋ ಚಂದ್ರು ಸೇರಿದಂತೆ ಹದಿನೈದು ಮಂದಿ ರಂಗಭೂಮಿಯ ಹಿರಿಯ ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡೆಮಿಯ 2006- 07ರ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. `ನಾಟಕ ಕ್ಷೇತ್ರಕ್ಕೆ ಶಿಷ್ಟ ಕೊಡುಗೆ ನೀಡಿದ ಕವಿ ಎಚ್.ಡುಂಡಿರಾಜ್ ಅವರನ್ನು ಗೌರವ ಪ್ರಶಸ್ತಿಗೆ, ಪ್ರಭಾತ್ ಕಲಾವಿದರು ಸಂಸ್ಥೆಯನ್ನು ಕೆ.ಹಿರಣ್ಣಯ್ಯ ಪುರಸ್ಕಾರಕ್ಕೆ ಹಾಗೂ ಆರು ಮಂದಿಯನ್ನು ಸಿಜಿಕೆ ಯುವರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ ಬೆಂಗಳೂರಿನಲ್ಲಿ ಪ್ರಕಟಿಸಿದರು.
2007: ಮೋಸ, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ನಾಲ್ಕು ವಿವಿಧ ಆರೋಪಗಳಿಗೆ ಗುರಿಯಾದ ಚಿತ್ರ ನಟ ಶ್ರೀನಿವಾಸ ಮೂರ್ತಿ ಅವರಿಗೆ ಏಳು ವರ್ಷ ಶಿಕ್ಷೆ ಹಾಗೂ ಮೂರು ಸಾವಿರ ರೂಪಾಯಿ ದಂಡ ವಿಧಿಸಿ ನಗರದ ಆರನೇ ಎಸಿಎಂಎಂ ಕೋರ್ಟ್ ಆದೇಶ ನೀಡಿತು. 1988ರಲ್ಲಿ ಬಿಡುಗಡೆಗೊಂಡ `ಬಾಳ ನೌಕೆ' ಚಿತ್ರಕ್ಕೆ ಸಂಬಂಧಿಸಿದಂತೆ ಅವರು ಈ ಆರೋಪಗಳಿಗೆ ಗುರಿಯಾಗಿದ್ದರು.
2007: `ದಲಾಲ್ ಸ್ಟ್ರೀಟ್' ಎಂದೂ ಕರೆಯಿಸಿಕೊಳ್ಳುವ ಷೇರುಪೇಟೆಯ 133ನೇ ಸ್ಥಾಪನಾ ದಿನವಾಗಿರುವ ಈದಿನ ಮುಂಬೈ ಷೇರು ಪೇಟೆಯ ಸೂಚ್ಯಂಕವು ಬ್ಯಾಂಕ್ ಮತ್ತು ಮಾಹಿತಿ ತಂತ್ರಜ್ಞಾನದ ಷೇರುಗಳ ಖರೀದಿ ಬೆಂಬಲದ ಫಲವಾಗಿ 81.61 ಅಂಶಗಳಷ್ಟು ಏರಿಕೆ ದಾಖಲಿಸಿ 15,000 ಅಂಶಗಳ ಮೈಲಿಗಲ್ಲು ದಾಟಿ ಹೊಸ ದಾಖಲೆ ಬರೆಯಿತು.
2006: ಬರ್ಲಿನ್ನಿನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪೈನಲ್ ಪಂದ್ಯದಲ್ಲಿ ಇಟೆಲಿಯು ಫ್ರಾನ್ಸನ್ನು ಪೆನಾಲ್ಟಿ ಶೂಟೌಟಿನಲ್ಲಿ 5-3 ಗೋಲುಗಳಿಂದ ಸೋಲಿಸಿ 2006ರ 18ನೇ ವಿಶ್ವ ಕಪ್ಪನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಸ್ಟುಟ್ ಗರ್ಟಿನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಜರ್ಮನಿ ಮೂರನೇ ಸ್ಥಾನವನ್ನು ಪಡೆದು `ಪೀಫಾ' ವಿಶ್ವಕಪ್ ಫುಟ್ಬಾಲ್ ಕಂಚಿನ ಪದಕವನ್ನು ಗೆದ್ದುಕೊಂಡಿತು.
2006: ದೇಶದ ಪ್ರತಿಷ್ಠಿತ ಅತ್ಯಾಧುನಿಕ ಮಧ್ಯಮ ಶ್ರೇಣಿಯ ಖಂಡಾತರ ಅಗ್ನಿ - 3 ಕ್ಷಿಪಣಿಯನ್ನು ಒರಿಸ್ಸಾದ ಕಡಲ ತೀರದ ವೀಲರ್ ದ್ವೀಪದಿಂದ ಪರೀಕ್ಷಾರ್ಥ ಹಾರಿಬಿಡಲಾಯಿತು. ಆದರೆ ತಾಂತ್ರಿಕ ದೋಷದ ಪರಿಣಾಮವಾಗಿ ಸಮುದ್ರಕ್ಕೆ ಬಿದ್ದಿತು.
2006: ರಷ್ಯಾದ ಸೈಬೀರ್ ಏರ್ ಲೈನ್ಸ್ಗೆ ಸೇರಿದ ವಿಮಾನವೊಂದು ಸೈಬೀರಿಯಾದ ಇರ್ಕುತ್ಸ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅಪಘಾತಕ್ಕೆ ಈಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಚಾಲಕ, ಸಿಬ್ಬಂದಿ ಸೇರಿದಂತೆ 150ಕ್ಕೂ ಹೆಚ್ಚು ಜನ ಮೃತರಾದರು.
2006: `ಬಿಗ್ ಬಿ' ಎಂದೇ ಖ್ಯಾತರಾದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ಗೆ ಬ್ರಿಟನ್ನಿನ ಲೈಸೆಸ್ಟರಿನ ಡಿ. ಮೊಂಟ್ ಫೋರ್ಡ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು.
1969: ವನ್ಯ ಜೀವಿ ಮಂಡಳಿಯ ಸಲಹೆಯ ಮೇರೆಗೆ ಬಂಗಾಳದ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಭಾರತ ಸರ್ಕಾರ ಮಾನ್ಯ ಮಾಡಿತು. ಈ ಹುಲಿ ಕೆಂಪು ಮಿಶ್ರಿತ ಹಳದಿ ಚರ್ಮ ಅದರ ಮೇಲೆ ಕಪ್ಪು ಪಟ್ಟಿಯನ್ನು ಹೊಂದಿ ರಾಜ ಗಾಂಭೀರ್ಯವನ್ನು ಪಡೆದಿದೆ.
1942: ಆನ್ ಫ್ರಾಂಕ್ ಮತ್ತು ಆಕೆಯ ಕುಟುಂಬ ನಾಝಿಗಳ ದಾಳಿಯಿಂದ ಪಾರಾಗಲು ಆ್ಯಮ್ಸ್ಟರ್ಡ್ಯಾಮಿನಲ್ಲಿ ಆಶ್ರಯ ಪಡೆದರು. ಆ್ಯಮ್ಸ್ಟರ್ಡ್ಯಾಮಿನ ಪ್ರಿನ್ಸ್ ಗ್ರಾಚಿನಲ್ಲಿ ಕಳೆದ `ಅಜ್ಞಾತವಾಸ'ದ ಕುರಿತು ಆನ್ ಫ್ರಾಂಕ್ ಬರೆದ ದಿನಚರಿ ಮುಂದೆ ಜಾಗತಿಕ ಖ್ಯಾತಿ ಪಡೆಯಿತು. ಅವರು ಆಶ್ರಯಪಡೆದಿದ್ದ ತಾಣ ಮ್ಯೂಸಿಯಂ ಆಯಿತು.
1922: ಜಾನಿ ವೀಸ್ ಮುಲ್ಲರ್ 100 ಮೀಟರುಗಳನ್ನು ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ (58.6 ಸೆಕೆಂಡುಗಳು) ಈಜಿದ ಜಗತ್ತಿನ ಮೊತ್ತ ಮೊದಲಿನ ಈಜುಗಾರ ಎಂಬ ಖ್ಯಾತಿ ಗಳಿಸಿದರು. ಮುಂದೆ ಇವರು ಚಿತ್ರನಟನಾಗಿ `ಟಾರ್ಜಾನ್- ದಿ ಏಪ್ ಮ್ಯಾನ್' ಚಿತ್ರದ ಮೂಲಕ ಮಿಂಚಿದರು. ಮೊದಲ `ಟಾರ್ಜಾನ್' ಚಿತ್ರವಲ್ಲದೆ ಇನ್ನೂ 11 `ಟಾರ್ಜಾನ್' ಚಿತ್ರಗಳಲ್ಲಿ ಜಾನಿ ನಟಿಸಿದರು.
1838: ಮುಂಬೈಯ ಗವರ್ನರ್ ಆಗಿದ್ದ ಸರ್ ರಾಬರ್ಟ್ ಗ್ರಾಂಟ್ (1780-1838) ಮೃತರಾದರು. ಇವರ ಹೆಸರನ್ನೇ ಗ್ರಾಂಟ್ ಮೆಡಿಕಲ್ ಕಾಲೇಜಿಗೆ ನೀಡಲಾಯಿತು.
1877: ವಿಂಬಲ್ಡನ್ನಿನ ಆಲ್ ಇಂಗ್ಲೆಂಡ್ ಕ್ರೊಕೆಟ್ ಮತ್ತು ಲಾನ್ ಟೆನಿಸ್ ಕ್ಲಬ್ಬಿನಲ್ಲಿ ಮೊತ್ತ ಮೊದಲ `ವಿಂಬಲ್ಡನ್ ಚಾಂಪಿಯನ್ ಶಿಪ್' ಆರಂಭವಾಯಿತು
No comments:
Post a Comment