ನಾನು ಮೆಚ್ಚಿದ ವಾಟ್ಸಪ್

Monday, July 16, 2018

ಇಂದಿನ ಇತಿಹಾಸ History Today ಜುಲೈ 16

ಇಂದಿನ ಇತಿಹಾಸ History Today ಜುಲೈ 16 

2017: ಲಂಡನ್‌: ಆರಂಭದಿಂದ ಅಜೇಯ ಓಟ ಮುಂದುವರಿಸಿದ ಸ್ವಜರ್ಲೆಂಡಿನ ರೋಜರ್ ಫೆಡರರ್‌ ವಿಂಬಲ್ಡನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಗೆದ್ದು ಮತ್ತೆ ದಾಖಲೆ ನಿರ್ಮಿಸಿದರು.  ರಾತ್ರಿ ಇಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಕ್ರೊವೇಷಿಯಾದ ಮರಿನ್ ಸಿಲಿಕ್ ಅವರನ್ನು 6–3, 6–1, 6–4ರಲ್ಲಿ ಮಣಿಸಿದ ಫೆಡರರ್‌ ಎಂಟು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಈ ಜಯದೊಂದಿಗೆ ಫೆಡರರ್‌ ಒಟ್ಟು 19 ಗ್ರ್ಯಾನ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎಂದೆನಿಸಿಕೊಂಡರು. 35ನೇ ವಯಸ್ಸಿನಲ್ಲಿ ವಿಂಬಲ್ಡನ್ ಗೆಲ್ಲುವುದರೊಂದಿಗೆ ಈ ಪ್ರಶಸ್ತಿ ಗೆದ್ದ ಅತಿ ಹಿರಿಯ ಆಟಗಾರ ಎಂಬ ದಾಖಲೆಯೂ ರೋಜರ್ ಫೆಡರರ್‌ ಅವರ ಹೆಸರಿಗೆ ಸೇರಿತು. ಫೈನಲ್‌ ಪಂದ್ಯದಲ್ಲಿ ಫೆಡರರ್ ಮುಂದೆ ಮರಿನ್ ಸಿಲಿಕ್‌ ಅವರ ಯಾವ ತಂತ್ರವೂ ಫಲಿಸಲಿಲ್ಲ. ಆರಂಭದಿಂದಲೇ ಮುನ್ನಡೆ ಸಾಧಿಸಿದ ಫೆಡರರ್‌ ಮೊದಲ ಸೆಟ್‌ನಲ್ಲಿ 6–3ರಿಂದ ಎದುರಾಳಿಯನ್ನು ಹಿಂದಿಕ್ಕಿದರು. 28 ವರ್ಷದ ಸಿಲಿಕ್ ಎರಡನೇ ಸೆಟ್‌ನಲ್ಲಿ 3–0 ಅಂತರದಲ್ಲಿ ಹಿಂದುಳಿದಾಗ ಕಣ್ಣೀರು ಹಾಕಿದರು. ಫೆಡರರ್‌ಗೆ ಉತ್ತರ ನೀಡಲು ಸಾಧ್ಯವಾಗದ ಸಿಲಿಕ್ ಈ ಸೆಟ್‌ನಲ್ಲಿ 1–6ರಿಂದ ನಿರಾಸೆ ಅನುಭವಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಸಿಲಿಕ್‌ ಸ್ವಲ್ಪ ಪ್ರತಿರೋಧ ಒಡ್ಡಿದರೂ ಜಯದತ್ತ ನಾಗಾಲೋಟ ಮುಂದುವರಿಸಿದ ಫೆಡರರ್‌ಗೆ ಲಗಾಮು ಸಾಧ್ಯವಾಗಲಿಲ್ಲ. 2014ರಲ್ಲಿ ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಸಿಲಿಕ್‌ಗೆ ಇಲ್ಲಿ ಏಳನೇ ಶ್ರೇಯಾಂಕ ನೀಡಲಾಗಿತ್ತು. ಸೆಮಿಫೈನಲ್‌ನಲ್ಲಿ ಅಮೆರಿಕದ ಸ್ಯಾಮ್ ಕ್ವೆರಿ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ಸಿಲಿಕ್‌ ಭರವಸೆಯಿಂದಲೇ ಅಂಗಳಕ್ಕೆ ಇಳಿದಿದ್ದರು. ರಾಜಕುಮಾರ ವಿಲಿಯಮ್ಸ್‌ ದಂಪತಿ ಮತ್ತು ಚಿತ್ರ ತಾರೆಯರು ಸಾಕ್ಷಿಯಾದ ಪಂದ್ಯದಲ್ಲಿ ಸಿಲಿಕ್‌ಗೆ ಮೊದಲ ಬ್ರೇಕ್‌ ಪಾಯಿಂಟ್‌ ಲಭಿಸಿದ್ದು ನಾಲ್ಕನೇ ಗೇಮ್‌ನಲ್ಲಿ. ಈ ಸಂದರ್ಭದಲ್ಲಿ ಅವರ ನಿರೀಕ್ಷೆ ಗರಿಗೆದರಿತು. ಆದರೆ ಮುಂದಿನ ಗೇಮ್‌ನಲ್ಲಿ ಚೇತರಿಸಿಕೊಂಡ ಫೆಡರರ್‌ ಎದುರಾಳಿಯನ್ನು ನಿರಾಸೆಯ ಕೂಪಕ್ಕೆ ತಳ್ಳಿದರು.
2017: ನವದೆಹಲಿ/ ಚೆನ್ನೈ: ನೇತಾಜಿ ಸುಭಾಸ್ ಚಂದ್ರ ಬೋಸ್‌ ಹೇಗೆ ಮೃತಪಟ್ಟರು? ದೇಶ ಸ್ವಾತಂತ್ರ್ಯ ಪಡೆದ
ದಿನದಿಂದಲೂ ಇದೊಂದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಇದೀಗ ನೇತಾಜಿ ಸಾವಿಗೆ ಸಂಬಂಧಿಸಿದಂತೆ ಮತ್ತೂಂದು ಟ್ವಿಸ್ಟ್‌ ದೊರೆತಿದ್ದು, 'ಸುಭಾಸ್‌ಚಂದ್ರ ಭೋಸ್‌ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ. ಅಲ್ಲದೆ 1947ರಲ್ಲಿ ಅವರಿನ್ನೂ ಜೀವಂತವಾಗಿದ್ದರು,' ಎಂದು ಪ್ಯಾರಿಸ್‌ ಮೂಲದ ಇತಿಹಾಸಕಾರ ಜೆ.ಬಿ.ಪಿ. ಮೋರ್‌ ಹೇಳಿದರು. 1947ರ ಡಿಸೆಂಬರ್‌ 11ರಂದು ಸಲ್ಲಿಕೆಯಾಗಿದ್ದ ಫ್ರೆಂಚ್‌ ಸೀಕ್ರೆಟ್‌ ಸರ್ವಿಸ್‌ನ ಗುಪ್ತ ವರದಿಯೊಂದನ್ನು ಉಲ್ಲೇಖಿಸಿ ಈ ವಾದ ಮಂಡಿಸಿರುವ ಮೋರ್‌, 'ತೈವಾನ್‌ ವಿಮಾನ ದುರಂತದಲ್ಲಿ ನೇತಾಜಿ ಅಸುನೀಗಿದ್ದರು ಎಂಬ ಬಗ್ಗೆ ವರದಿಯಲ್ಲಿ ಹೇಳಿಲ್ಲ. ಬದಲಿಗೆ 1947ರ ಡಿಸೆಂಬರ್‌ ಅಂತ್ಯದ ವೇಳೆ ಅವರಿನ್ನೂ ಜೀವಂತವಾಗಿದ್ದರು. ಇಂಡೋ ಚೈನಾದಿಂದ ಜೀವಂತವಾಗೇ ತಪ್ಪಿಸಿಕೊಂಡು ಹೋದ ಬೋಸ್‌, 1947ರ ಡಿ.11ರವರೆಗೆ ಅಪರಿಚಿತರಂತೆ ಅಲೆದಾಡುತ್ತಿದ್ದರು' ಎಂದು ವರದಿಯಲ್ಲಿ ಉಲ್ಲೇಖವಿದೆ' ಎಂದು ಹೇಳಿದರು. ನೇತಾಜಿ ನಿಧನದ ಮರ್ಮ ತಿಳಿಯಲು ಕೇಂದ್ರ ಸರಕಾರ ಮೂರು ಸಮಿತಿಗಳನ್ನು ರಚಿಸಿತ್ತು. 1956ರಲ್ಲಿ ರಚನೆಯಾದ ಶಾನ‌ ವಾಜ್‌ ಸಮಿತಿ, 'ಜಪಾನ್‌ ಆಕ್ರಮಿತ ತೈಪೆಯಲ್ಲಿನ ಥೈಹೋಕು ವಿಮಾನ ನಿಲ್ದಾಣದಲ್ಲಿ 1945ರ ಆಗಸ್ಟ್‌ 18ರಂದು ಸಂಭವಿಸಿದ ವಿಮಾನ ದುರಂತದಲ್ಲಿ ನೇತಾಜಿ ನಿಧನರಾಗಿದ್ದರು,' ಎಂದು ವರದಿ ನೀಡಿತ್ತು. ಆದರೆ ಸುಭಾಸ್‌ಚಂದ್ರ ಬೋಸ್‌ ವಿಮಾನ ಅಪಘಾತದಲ್ಲಿ ಮೃತರಾಗಿಲ್ಲ ಎಂದು ಮುಖರ್ಜಿ ಸಮಿತಿ (1999) ತನ್ನ ವರದಿಯಲ್ಲಿ ಹೇಳಿತ್ತು. ಆದರೆ ಮುಖರ್ಜಿ ಸಮಿತಿ ವರದಿಯನ್ನು ಸರಕಾರವೇ ಅಲ್ಲಗಳೆದಿತ್ತು.  ಇತ್ತೀಚೆಗೆ ನೇತಾಜಿಗೆ ಸಂಬಂಧಪಟ್ಟ ರಹಸ್ಯ ಕಡತಗಳನ್ನು ಬಹಿರಂಗಗೊಳಿಸಿದ ಬಳಿಕ, ನರೇಂದ್ರ ಮೋದಿ ನೇತೃತ್ವದ  ಎನ್ ಡಿ ಎ ಸರ್ಕಾರ ಕೂಡಾ ಮಾಹಿತಿ ಹಕ್ಕು ಕಾಯ್ದೆ ಅಡಿ ನೀಡಿದ ಉತ್ತರದಲ್ಲಿ ನೇತಾಜಿ ವಿಮಾನ ಅಪಘಾತದಲ್ಲಿ ಮೃತರಾದರು ಎಂದೇ ಮಾಹಿತಿ ನೀಡಿತ್ತು.
2017: ನವದೆಹಲಿ: ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಉಲ್ಲಂಘಿಸುವ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕಟು
ಎಚ್ಚರಿಕೆ ನೀಡಿದರು. ಸಂಸತ್ತಿನ ಮುಂಗಾರು ಅಧಿವೇಶನದ  ಮುನ್ನಾ ದಿನ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಅವರು ಮಾತನಾಡಿದರು. ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ರಾಜ್ಯಗಳಿಗೆ ಸೂಚಿಸಿದರು. ಆದರೆ ಇಂತಹ ಕೃತ್ಯಗಳಿಗೆ ರಾಜಕೀಯ ಅಥವಾ ಕೋಮು ಬಣ್ಣ ಕೊಡುವುದರ ವಿರುದ್ಧ ಎಚ್ಚರಿಕೆ ನೀಡಿದರು. ಹಿಂದೂಗಳು ಗೋವನ್ನು ತಾಯಿಯೆಂದು ಪರಿಗಣಿಸುತ್ತಾರೆ. ಆದರೆ ಜನರು ಕಾನೂನು ಕೈಗೆತ್ತಿಕೊಳ್ಳಲು ಅದು ಕಾರಣವಾಗಬಾರದು. ಕಾನೂನು ಉಲ್ಲಂಘನೆಯ ವಿರುದ್ಧರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದರು. ಕೆಲವು ಸಮಾಜ ವಿರೋಧಿಗಳು ಗೋರಕ್ಷಣೆಯನ್ನು ಅರಾಜಕತೆ ಹರಡುವ ಮಾಧ್ಯಮ ಮಾಡಿಕೊಂಡಿದ್ದಾರೆ. ಸಾಮರಸ್ಯ ಕದಡುವ ಉದ್ದೇಶ ಹೊಂದಿರುವವರು ಅದರಿಂದ ಪ್ರಯೋಜನವನ್ನೂಪಡೆಯುತ್ತಿದ್ದಾರೆ.  ಇಂತಹ ಕೃತ್ಯಗಳಿಂದ ದೇಶದ ವರ್ಚಸ್ಸು ಕುಸಿಯುತ್ತದೆ ಎಂದು ಪ್ರಧಾನಿ ಹೇಳಿದರು. ಒಂದು ತಿಂಗಳಲ್ಲಿ ಎರಡನೇ ಬಾರಿ ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸೆಯ ವಿರುದ್ಧ ಪ್ರಧಾನಿ ಮಾತನಾಡಿದರು. ಸಬರಮತಿ ಆಶ್ರಮದಲ್ಲಿ ಜೂನ್‌ 29ರಂದು ಮಾತನಾಡಿದ್ದ ಮೋದಿ ಅವರು, ಗೋರಕ್ಷಣೆ ಹೆಸರಿನಲ್ಲಿ ನಡೆಯುವ ದೌರ್ಜನ್ಯವನ್ನು ಖಂಡಿಸಿದ್ದರು.
2017: ಮಂಗಳೂರು: ಪೈಲಟ್‌ನ ಚಾಣಾಕ್ಷತನ ಮತ್ತು ಸಮಯ ಪ್ರಜ್ಞೆಯಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣದಲ್ಲಿ ಭಾರೀ ದೊಡ್ಡ ಮಟ್ಟದ ಅವಘಡವೊಂದು ತಪ್ಪಿತು. ವಿಮಾನದಲ್ಲಿದ್ದ ಎಲ್ಲ 186 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು. ಏರ್‌ ಇಂಡಿಯಾ ಸಂಸ್ಥೆಗೆ ಸೇರಿದ ದುಬಾೖ-ಮಂಗಳೂರು ವಿಮಾನ ಈದಿನ ಮುಂಜಾನೆ 4.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ  ಈ ಘಟನೆ ಸಂಭವಿಸಿತು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಇಳಿಯುವಾಗ ಪೈಲಟ್‌ನ ನಿಯಂತ್ರಣ ತಪ್ಪಿ ರನ್‌ವೇಯಿಂದ ಸ್ವಲ್ಪ ಬದಿಗೆ ಸರಿದ ಪರಿಣಾಮ ರನ್‌ವೇಗೆ ಹೊಂದಿಕೊಂಡಿರುವ ಮಾರ್ಗಸೂಚಿ ದೀಪಕ್ಕೆ ತಾಗಿತು. ಇದರ ಪರಿಣಾಮ, ವಿಮಾನವು ರನ್‌ವೇಯಲ್ಲಿ ಚಲಿಸುತ್ತ ಸುಮಾರು ಆರು ಮಾರ್ಗಸೂಚಿ ದೀಪಗಳಿಗೆ ತಾಗಿಕೊಂಡು ಹೋಯಿತು. ದೀಪಗಳಿಗಷ್ಟೇ ಹೆಚ್ಚಿನ ಹಾನಿಯಾಗಿದೆ. ವಿಮಾನಕ್ಕೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.  ಪೈಲಟ್‌ ವಿಮಾನವನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ಈ ಅವಘಡ ಸಂಭವಿಸಿರುವುದು ವಿಮಾನದೊಳಗಿದ್ದ ಯಾವುದೇ ಪ್ರಯಾಣಿಕರ ಅನುಭವ ಅಥವಾ ಗಮನಕ್ಕೂ ಬರಲಿಲ್ಲ. ಆ ಮೂಲಕ ಈ ದುಬಾೖ-ಮಂಗಳೂರು ವಿಮಾನದಲ್ಲಿದ್ದ ಎಲ್ಲ 186 ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು. ಇಳಿಯುವ ವೇಳೆ ಚಕ್ರದಲ್ಲಿ ಕಾಣಿಸಿಕೊಂಡಿರುವ ತೊಂದರೆಯಿಂದಾಗಿ ವಿಮಾನ ಹತೋಟಿ ತಪ್ಪಿರುವ ಸಾಧ್ಯತೆ ಇರುವುದರಿಂದ ವಿಮಾನದ ಚಕ್ರವನ್ನು ಬದಲಾಯಿಸಿಕೊಂಡು ಎಂದಿನಂತೆ ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು.


2017: ಶ್ರೀನಗರ/ನವದೆಹಲಿ: ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿ ವಾರ
ತುಂಬುವುದರೊಳಗೆ ಮತ್ತೂಂದು ದುರಂತ ಸಂಭವಿಸಿತು. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮರನಾಥ ಯಾತ್ರಿಕರನ್ನು ಹೊತ್ತೂಯ್ಯುತ್ತಿದ್ದ ಬಸ್ಸೊಂದು ಕಮರಿಗೆ ಉರುಳಿಬಿದ್ದ ಪರಿಣಾಮ, 16 ಮಂದಿ ಯಾತ್ರಾರ್ಥಿಗಳು ಸಾವಿಗೀಡಾದರು. ರಾಮ್‌ಬನ್‌ ಜಿಲ್ಲೆಯ ನಚ್ಲಾನಾ ಜಿಲ್ಲೆಯಲ್ಲಿ ಈ ದುರ್ಘ‌ಟನೆ ಘಟಿಸಿತು. ಬಸ್‌ ಸ್ಕಿಡ್‌ ಆಗಿ ವಾಲಿದ್ದು, ಅನಂತರ ಕಮರಿಯೊಂದಕ್ಕೆ ಉರುಳಿಬಿದ್ದಿತು. ಈ ವೇಳೆ ಇಬ್ಬರು ಮಹಿಳೆಯರ ಸಹಿತ 16 ಮಂದಿ ಮೃತರಾಗಿ 27 ಮಂದಿ ಗಾಯಗೊಂಡರು. ಘಟನೆ ಸಂಭವಿಸಿದ ಕೂಡಲೇ ವಾಯುಪಡೆಯ ಹೆಲಿಕಾಪ್ಟರ್‌ ಮೂಲಕ 19 ಮಂದಿಯನ್ನು ಮೇಲೆತ್ತಲಾಗಿದೆ ಎಂದು ಹಿರಿಯ ಸುಪರಿಂಟೆಂಡೆಂಟ್‌ ಆಫ್ಪೊ ಲೀಸ್‌ ಮೋಹನ್‌ ಲಾಲ್‌ ತಿಳಿಸಿದರು. ಮೃತರು ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಅಸ್ಸಾಂ, ಹರಿಯಾಣ ಮತ್ತು ಮಧ್ಯಪ್ರದೇಶಕ್ಕೆ ಸೇರಿದವರು ಎಂದೂ ಅವರು ಮಾಹಿತಿ ನೀಡಿದರು. ಈ ನಡುವೆ ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿಯಿಂದ ಗಾಯಗೊಂಡಿದ್ದ ಮಹಿಳೆಯೊಬ್ಬರು ಈದಿನ  ಕೊನೆಯುಸಿರೆಳೆದರು. ಈ ಮೂಲಕ ಅಮರನಾಥ ಯಾತ್ರಿಗಳ ಮೇಲೆ ನಡೆದ ಉಗ್ರ ದಾಳಿಗೆ ಬಲಿಯಾದವರ ಸಂಖ್ಯೆ 8ಕ್ಕೇರಿತು.  ಗಾಯಗೊಂಡಿದ್ದ ಗುಜರಾತ್‌ನ ಲಲಿತಾ ಬೆನ್‌(47) ಇಲ್ಲಿನ ಸ್ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದರು.


2017: ನವದೆಹಲಿ: 'ವೇಗವಾಗಿ ಕಾರು ಓಡಿಸಿ ವ್ಯಕ್ತಿಯೊಬ್ಬನ ಪ್ರಾಣ ತೆಗೆಯುವ ಚಾಲಕನಿಗೆ
ವಿಧಿಸುವ ಶಿಕ್ಷೆಗಿಂತಲೂ ಅಪಘಾತದಲ್ಲಿ ಹಸುವನ್ನು ಕೊಂದ ಚಾಲಕನಿಗೇ ಹೆಚ್ಚು ಶಿಕ್ಷೆ ವಿಧಿಸುವುದು ಇಂದಿನ ಕಾನೂನುಗಳ ವೈಶಿಷ್ಟ್ಯ...' 2008ರಲ್ಲಿ ನಡೆದ ಅಪಘಾತವೊಂದರಲ್ಲಿ ಬಿಎಂಡಬ್ಲ್ಯು ಕಾರನ್ನು ಬೈಕ್‌ ಸವಾರನ ಮೇಲೆ ಹರಿಸಿ ಆತನ ಸಾವಿಗೆ ಕಾರಣನಾಗಿದ್ದ ಹರಿಯಾಣದ ಉದ್ಯಮಿಯೊಬ್ಬರ ಪುತ್ರನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತ ಪಡಿಸಿದರು. ಹಸು ಕೊಂದವರಿಗೆ ಕನಿಷ್ಠ 5, 7 ಇಲ್ಲವೇ ಕೆಲವು ರಾಜ್ಯಗಳಲ್ಲಿ 14 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಆದರೆ  ಅಜಾಗರೂಕ ಚಾಲನೆ ಮಾಡಿ ವ್ಯಕ್ತಿಯೊಬ್ಬನ ಅಮೂಲ್ಯ ಜೀವ ತೆಗೆದವರಿಗೆ ಕೇವಲ 2 ವರ್ಷ ಶಿಕ್ಷೆ ವಿಧಿಸಬೇಕಾಗಿದೆ. ಕಾನೂನಿನಲ್ಲಿ ಇರುವ ಶಿಕ್ಷೆಯ ಮಿತಿ ಇಷ್ಟೆ' ಎಂದು ದಿಲ್ಲಿಯ ಹೆಚ್ಚುವರಿ ಸೆಷನ್ಸ್‌ ಜಡ್ಜ್ ಸಂಜೀವ್‌ ಕುಮಾರ್‌ ವಿಷಾದಿಸಿದರು. ಈ ತೀರ್ಪಿನ ಪ್ರತಿಯನ್ನು ಪ್ರಧಾನಿ ಮೋದಿ ಅವರಿಗೂ ಕಳುಹಿಸಿಕೊಡಿ. ಇಂಥ ಅಪರಾಧಗಳಿಗೆ ನೀಡಲಾಗುವ ಶಿಕ್ಷೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಹೆಜ್ಜೆಯಿಡಲಿ ಎಂದು ಅವರು ಹಾರೈಸಿದರು.

2008: ಒರಿಸ್ಸಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನಿನ ಮೇಲೆ ಮಾವೋ ಉಗ್ರರು ನಡೆಸಿದ ಗುಂಡಿನ ದಾಳಿ ಹಾಗೂ ನೆಲಬಾಂಬ್ ಸ್ಛೋಟದಿಂದ 21 ಮಂದಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಯಿತು. ಮೂರು ವಾರಗಳಿಂದ ಮಾವೋವಾದಿಗಳು ಪೊಲೀಸ್ ಪಡೆಯ ಮೇಲೆ ನಡೆಸಿದ ಎರಡನೇ ಹಿಂಸಾಕೃತ್ಯ ಇದು.

2007: ಲಂಡನ್ನಿನ ಗ್ಲಾಸ್ಗೋ ವಿಮಾನ ನಿಲ್ದಾಣದ ಮೇಲೆ ವಿಫಲ ಆತ್ಮಹತ್ಯಾ ದಾಳಿ ನಡೆಸಿದ್ದ ತಂಡದ ಜೊತೆ ಸಂಬಂಧ ಹೊಂದಿರುವ ಶಂಕೆಯ ಆಧಾರದಲ್ಲಿ ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದ್ದ ಬೆಂಗಳೂರು ಮೂಲದ ವೈದ್ಯ ಮೊಹಮ್ಮದ್ ಹನೀಫ್ ಗೆ ಬ್ರಿಸ್ಬೆನ್ ನ್ಯಾಯಾಲಯ ಜಾಮೀನು ನೀಡಿತು. ಆದರೆ, ಜಾಮೀನು ನೀಡಿದ ಬಳಿಕ ಔಪಚಾರಿಕ ಕಾನೂನು ಕ್ರಮ ಪೂರೈಸಿ ಹನೀಫ್ನನ್ನು ಬಿಡುಗಡೆ ಮಾಡುವ ಮುನ್ನವೇ ಆತನ ವೀಸಾ ರದ್ದುಗೊಳಿಸಿ ವಲಸೆ ಕಾಯ್ದೆ ಅಡಿ ಮತ್ತೆ ಬಂಧಿಸಲಾಯಿತು.

2007: ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ಅಬು ಸಲೇಂನ ಪ್ರೇಯಸಿ ಹಾಗೂ ಮಾಜಿ ಬಾಲಿವುಡ್ ತಾರೆ ಮೋನಿಕಾ ಬೇಡಿಯನ್ನು ಭೋಪಾಲ್ ನ್ಯಾಯಾಲಯ ಖುಲಾಸೆ ಮಾಡಿತು. ಈ ಪ್ರಕರಣದಲ್ಲಿ ಪ್ರಾಸೆಕ್ಯೂಷನ್, ಮೋನಿಕಾ ಬೇಡಿ ವಿರುದ್ಧ ದಾಖಲೆಗಳ ಬೃಹತ್ ಸಂಗ್ರಹ ಹಾಗೂ 35 ಸಾಕ್ಷಿಗಳನ್ನು ಹಾಜರುಪಡಿಸಿದರೂ ಪ್ರಧಾನ ನ್ಯಾಯಾಧೀಶರಿಗೆ ಈ ಸಾಕ್ಷಿಗಳಲ್ಲಿ ಗಟ್ಟಿತನ ಕಂಡುಬರಲಿಲ್ಲ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಅಬ್ದುಲ್ ಕಬೀರನ್ನು ಕೂಡಾ ನ್ಯಾಯಾಲಯ ಆರೋಪಮುಕ್ತಗೊಳಿಸಿತು. ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋನಿಕಾಗೆ ಹೈದರಾಬಾದ್ ನ್ಯಾಯಾಲಯ 5 ವರ್ಷಗಳ ಶಿಕ್ಷೆ ವಿಧಿಸಿತ್ತು. ಫೌಜಿಯಾ ಉಸ್ಮಾನ್ ಎಂಬ ನಕಲಿ ಹೆಸರಿನಲ್ಲಿ ಆಕೆ ಭೋಪಾಲ್ ನಲ್ಲಿ ಪಾಸ್ಪೋರ್ಟ್ ಪಡೆದು, ಸಲೇಂ ಜೊತೆ ಪೋರ್ಚುಗಲ್ಲಿಗೆೆ ತೆರಳಿದ್ದಳು ಎಂದು ಆರೋಪಿಸಲಾಗಿತ್ತು. 2001ರಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಭೋಪಾಲ್ ಕೇಂದ್ರ ಕಾರಾಗೃಹದಲ್ಲಿದ್ದಾಗ ಮೋನಿಕಾ ಮಹಿಳಾ ಕೈದಿಗಳಿಗೆ ಇಂಗ್ಲಿಷ್ ಹಾಗೂ ನೃತ್ಯ ತರಗತಿಗಳನ್ನು ನಡೆಸುತ್ತಿದ್ದಳು.

2007: ಜಪಾನಿನ ವಾಯವ್ಯ ಕರಾವಳಿ ಪ್ರದೇಶದಲ್ಲಿ ಭಾರಿ ಭೂಕಂಪ ಸಂಭವಿಸಿ, ಏಳು ಮಂದಿ ಮೃತರಾಗಿ, ಸಾವಿರಾರು ಮಂದಿ ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.8ರಷ್ಟಿತ್ತು. ಭೂಕಂಪದಿಂದಾಗಿ ಕಶಿವಜಕಿ ಎಂಬಲ್ಲಿನ ಪರಮಾಣು ವಿದ್ಯುತ್ ಸ್ಥಾವರಕ್ಕೆ ಹಾನಿಯುಂಟಾಗಿ, ಅಲ್ಲಿ ಬೆಂಕಿ ಕಾಣಿಸಿಕೊಂಡಿತು. ನಸುಕಿನ ವೇಳೆಯಲ್ಲಿ ಸುಮಾರು 20 ಸೆಕೆಂಡುಗಳ ಕಾಲ ಭೂಮಿ ಅದುರಿ, ಮರದಿಂದ ನಿರ್ಮಿಸಲಾದ ಮನೆಗಳು ಧರೆಗುರುಳಿದವು. ಕಡಲಲ್ಲಿ 50 ಮೀಟರ್ ಎತ್ತರದ ಅಲೆಗಳೆದ್ದು ದಂಡೆಗೆ ಅಪ್ಪಳಿಸಿದವು.

2007: ಕೇಂದ್ರದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ಲೋಕಸಭಾ ಸದಸ್ಯ ರಶೀದ್ ಮಸೂದ್ ಅವರನ್ನು ತೃತೀಯ ರಂಗದ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಮಸೂದ್ ಅವರು ವಾಯವ್ಯ ಉತ್ತರ ಪ್ರದೇಶದ ಸಹರಾನ್ ಪುರದಿಂದ ಐದು ಬಾರಿ ಸಂಸತ್ತು ಪ್ರವೇಶಿಸಿದವರು.

2007: ಇರಾಕಿನ ಕಿರ್ಕುಕ್ ಪ್ರದೇಶದಲ್ಲಿ ಸಂಭವಿಸಿದ ಎರಡು ಕಾರು ಬಾಂಬ್ ಸ್ಫೋಟಗಳಲ್ಲಿ 85 ಮಂದಿ ಮೃತರಾಗಿ ಇತರ 150 ಜನರು ಗಾಯಗೊಂಡರು. 20 ನಿಮಿಷಗಳ ಅಂತರದಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಫೋಟಗಳ ಹಿಂದೆ ಕುರ್ದಿಷ್ ರಾಜಕೀಯ ಪಕ್ಷದ ಕಚೇರಿ ಧ್ವಂಸಮಾಡುವ ಗುರಿ ಇತ್ತು. ಇರಾಕ್ ಅಧ್ಯಕ್ಷ ಜಲಾಲ್ ತಾಲಾಬಾನಿ ಅವರ ಕುರ್ದಿಸ್ಥಾನ್ ಪೇಟ್ರಿಯಾಟಿಕ್ ಒಕ್ಕೂಟ ಪಕ್ಷದ ಕಚೇರಿ ಬಳಿ ಸ್ಫೋಟಕ ತುಂಬಿದ್ದ ಟ್ರಕ್ಕನ್ನು ಸ್ಫೋಟಿಸಲಾಯಿತು.

2007: ಭಾರಿ ವಂಚನೆ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಅವಾಮಿ ಲೀಗ್ ಅಧ್ಯಕ್ಷೆ ಶೇಖ್ ಹಸೀನಾ ಅವರನ್ನು ಧಾನ್ ಮೋಂದಿಯಲ್ಲಿನ ಅವರ ನಿವಾಸದಲ್ಲಿ ಬಂಧಿಸಲಾಯಿತು. ಬೆಳಗ್ಗೆ ಸುಮಾರು 300-400 ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಾಚರಣೆ ತಂಡ ಹಸೀನಾ ಮನೆ `ಸುಧಾ ಸದನ'ವನ್ನು ಮುತ್ತಿಗೆ ಹಾಕಿದರು. ಮೂರು ಗಂಟೆಗಳ ಕಾಲ ತಪಾಸಣೆ ನಡೆಸಿದ ಬಳಿಕ ಹಸೀನಾ ಅವರನ್ನು ಬಂಧಿಸಿ ಢಾಕಾದಲ್ಲಿನ ಕೋರ್ಟಿಗೆ ಹಾಜರುಪಡಿಸಲಾಯಿತು. 1996-2001ರಲ್ಲಿ ಹಸೀನಾ ಅಧಿಕಾರದಲ್ಲಿದ್ದಾಗ ಈಸ್ಟ್ ಕೋಸ್ಟ್ ಟ್ರೇಡಿಂಗ್ ಕಂಪನಿಯಿಂದ 2.96 ಕೋಟಿ ಟಾಕಾ (4,42,000 ಅಮೆರಿಕ ಡಾಲರ್)ಹಣ ಸುಲಿಗೆ ಮಾಡಿದ್ದಲ್ಲದೆ, ತಮ್ಮ ರಾಜಕೀಯ ಎದುರಾಳಿಯೊಬ್ಬರ ಕೊಲೆಯಲ್ಲೂ ಕೈವಾಡ ನಡೆಸಿದ್ದರು ಎಂಬುದು ಅವರ ಮೇಲಿನ ಆರೋಪ.

2006: ಗುಲ್ಬರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು 489 ದಿನಗಳಿಂದ ನಡೆಯುತ್ತಿದ್ದ ದಿನಗೂಲಿ ನೌಕರರ ಧರಣಿ ಅಂತ್ಯಗೊಂಡಿತು. ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ದಿನಗೂಲಿ ನೌಕರರ ಕಾಯಂ ಪ್ರಕ್ರಿಯೆಗೆ ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದನ್ನು ಅನುಸರಿಸಿ ದಿನಗೂಲಿ ನೌಕರರು ಈ ದಿನ ತಮ್ಮ ಧರಣಿ ಹಿಂತೆಗೆದುಕೊಂಡರು.

2006: ಲಕ್ಷದ್ವೀಪ ಸಮೀಪದ ಸುಹೈಲಿ ಜನರಹಿತ ದ್ವೀಪದ ಸಮೀಪ ಅಪಾಯದ ಸುಳಿಗೆ ಸಿಲುಕಿದ ಸೀಷೆಲ್ಸ್ನ `ಇಸಬೆಲ್ಲ 3' ಮೀನುಗಾರಿಕಾ ನೌಕೆಯಿಂದ ಉಗ್ರರೂಪ ತಾಳಿದ್ದ ಅರಬ್ಬೀ ಸಮುದ್ರಕ್ಕೆ ಜಿಗಿದು 33 ಮಂದಿ ಮೀನುಗಾರರು ಪ್ರಾಣ ಉಳಿಸಿಕೊಂಡರು. ಉಗ್ರರೂಪ ತಾಳಿದ್ದ ಸಮುದ್ರದಲ್ಲಿ ಈಜಿಕೊಂಡೇ ಅವರೆಲ್ಲರೂ ಸುಹೈಲಿ ದ್ವೀಪವನ್ನು ತಲುಪಿದರು.

2004: ತಮಿಳುನಾಡು ಕುಂಭಕೋಣಂನ ಖಾಸತಿ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 91 ವಿದ್ಯಾರ್ಥಿಗಳು ಮೃತರಾದರು. ಮೂರನೇ ಮಹಡಿಯಲ್ಲಿ ಮಧ್ಯಾಹ್ನದ ಊಟಕ್ಕೆ ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾರಿದ ಬೆಂಕಿ ಪಕ್ಕದಲ್ಲಿದ್ದ ಹುಲ್ಲಿನ ಛಾವಣಿಯ ಶಾಲಾ ಕೊಠಡಿಗೆ ಹರಡಿ ಈ ದುರಂತ ಸಂಭವಿಸಿತು.

1992: ಶಂಕರದಯಾಳ್ ಶರ್ಮಾ ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದರು.

1959: ತಂತ್ರಜ್ಞೆ, ಕತೆಗಾರ್ತಿ, ಅಂಕಣಗಾರ್ತಿ ನೇಮಿಚಂದ್ರ ಅವರು ಪ್ರೊ.ಜಿ. ಗುಂಡಣ್ಣ- ತಿಮ್ಮಕ್ಕ ದಂಪತಿಯ ಪುತ್ರಿಯಾಗಿ ಚಿತ್ರದುರ್ಗದಲ್ಲಿ ಜನಿಸಿದರು.

1942: ಶೀಲಾ ಗಜಾನನ ಆಂಕೋಲ ಜನನ.

622: ಮುಸ್ಲಿಂ ಶಕೆ ಎಂದೇ ಹೆಸರಾಗಿರುವ ಹಿಜರಿ ಶಕೆ ಆರಂಭ. ಪ್ರವಾದಿ ಮಹಮ್ಮದರು ಮೆಕ್ಕಾದಿಂದ ಮದೀನಕ್ಕೆ ಪ್ರಯಾಣ ಬೆಳೆಸಿದ ದಿನ ಇದು. ಮತಾಂತರ ತಪ್ಪಿಸಿಕೊಳ್ಳಲು ಮಹಮ್ಮದರು ಈ ರೀತಿ ಮಾಡಿದರು ಎನ್ನಲಾಗುತ್ತದೆ. ಇನ್ನೊಂದು ಮೂಲದ ಪ್ರಕಾರ ಎರಡನೇ ಖಲೀಫನಾಗಿದ್ದ ಒಂದನೇ ಉಮರ್ ಹಿಜರಿ ಶಕೆಯನ್ನು ಪರಿಚಯಿಸಿದ ಎನ್ನಲಾಗುತ್ತದೆ. ಹಿಜರಿ ಎಂದರೆ ಅರೇಬಿಕ್ ಭಾಷೆಯಲ್ಲಿ ಸಂಬಂಧಗಳನ್ನು ಕಡಿಯುವುದು ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು ಎಂದು ಅರ್ಥ.

No comments:

Post a Comment