Saturday, July 7, 2018

ಇಂದಿನ ಇತಿಹಾಸ History Today ಜುಲೈ 07

 

2018: ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನ್ಯಾಶನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್  -ನೀಟ್), ಜಂಟಿ ಪ್ರವೇಶ ಪರೀಕ್ಷೆ (ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್ -ಜೆಇಇ) ಮತ್ತು ರಾಷ್ಟ್ರೀಯ ಪ್ರವೇಶ ಪರೀಕ್ಷೆ (ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ -ನೆಟ್) ಇವುಗಳನ್ನು ಇನ್ನು ಮುಂದೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ನ್ಯಾಶನಲ್ ಟೆಸ್ಟಿಂಗ್ ಏಜನ್ಸಿ -ಎನ್ ಟಿಎ) ವರ್ಷಕ್ಕೆ ೨ ಬಾರಿ ನಡೆಸುತ್ತದೆ.  ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್  ಈದಿನ ಇಲ್ಲಿ ಈ ವಿಚಾರವನ್ನು ಪ್ರಕಟಿಸಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಕ್ರಮ ಜಾರಿಗೆ ಬರಲಿದೆ. ಇಲ್ಲಿಯವರೆಗೆ ಈ ಪರೀಕ್ಷೆಗಳನ್ನು ಕೇಂದ್ರೀಯ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸುತ್ತಿತ್ತು.  ವಿದ್ಯಾರ್ಥಿಗಳು ವರ್ಷದಲ್ಲಿ ಎರಡು ಬಾರಿ ನೀಟ್ ಎದುರಿಸಬಹುದು; ಇವುಗಳಲ್ಲಿನ ಅತ್ಯುತ್ತಮ ಅಂಕಗಳನ್ನು ಪ್ರವೇಶಕ್ಕೆ ಪರಿಗಣಿಸಲಾಗುವುದು. ನೀಟ್ ಅನ್ನು ಪ್ರತೀ ವರ್ಷ ಫೆಬ್ರವರಿ ಮತ್ತು ಮೇ ತಿಂಗಳಲ್ಲಿ ನಡೆಸಲಾಗುವುದು ಎಂದು ಜಾವಡೇಕರ್ ಹೇಳಿದರು.  ಕಾಲೇಜು ಮತ್ತು ವಿವಿ ಮಟ್ಟದ ಉಪನ್ಯಾಸಕರ ಹುದ್ದೆಯ ನೆಟ್ ಪರೀಕ್ಷೆಯನ್ನು ಡಿಸೆಂಬರ್‌ನಲ್ಲಿ ನಡೆಸಲಾಗುವುದು. ಜೆಇಇ ಮೇನ್ಸ್ ವರ್ಷಂಪ್ರತಿ ಜನವರಿ ಮತ್ತು ಎಪ್ರಿಲ್ ನಲ್ಲಿ ನಡೆಸಲಾಗುವುದು ಎಂದು ಜಾವಡೇಕರ್ ತಿಳಿಸಿದರು.   ಎನ್‌ಟಿಎ ಪರೀಕ್ಷೆಗಳಿಗಾಗಿ ಆಗಸ್ಟ್ ಅಂತ್ಯದಿಂದ ಕಂಪ್ಯೂಟರ್ ಕೇಂದ್ರಗಳಿಗೆ ಹೋಗುವ ಅವಕಾಶ ವಿದ್ಯಾರ್ಥಿಗಳಿಗೆ ಇರುತ್ತದೆ. ಪರೀಕ್ಷೆಯ ಪಠ್ಯಸೂಚಿ (ಸಿಲೆಬಸ್), ಪ್ರಶ್ನೆ ವಿಧಾನ, ಭಾಷೆ ಮತ್ತು ಪರೀಕ್ಷಾ ಶುಲ್ಕ ಇವುಗಳನ್ನು ಬದಲಿಸಲಾಗುವುದಿಲ್ಲ ಎಂದು ಜಾವಡೇಕರ್ ಹೇಳಿದರು.  ಎನ್‌ಟಿಎ ನಡೆಸುವ ಪರೀಕ್ಷೆಗಳ ವೇಳಾ ಪಟ್ಟಿಯನ್ನು  ಸಚಿವಾಲಯದ ವೆಬ್ ಸೈಟಿನಲ್ಲಿ ಹಾಕಲಾಗುವುದು ಎಂದು ಅವರು ನುಡಿದರು.  ವಿದ್ಯಾರ್ಥಿಗಳು ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ವರ್ಷದಲ್ಲಿ ಎರಡು ಬಾರಿ ಹಾಜರಾಗಬಹುದು. ಪ್ರವೇಶಕ್ಕೆ ವಿದ್ಯಾರ್ಥಿಗಳ ಅತ್ಯಂತ ಹೆಚ್ಚಿನ ಗಳಿಕೆಯ ಅಂಕಗಳನ್ನು ಪರಿಗಣಿಸಲಾಗುವುದು ಎಂದು ಸಚಿವರು ಹೇಳಿದರು. ಜೆಇಇ (ಅಡ್ವಾನ್ಸಡ್) ಪರೀಕ್ಷೆಯನ್ನು ಐಐಟಿಗಳೇ ನಡೆಸುವ ವ್ಯವಸ್ಥೆ ಮುಂದುವರೆಯಲಿದೆ.  ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ಕಾಮನ್ ಮ್ಯಾನೇಜ್ ಮೆಂಟ್ ಅಡ್ಮಿಷನ್ ಟೆಸ್ಟನ್ನು (ಸಿಎಂಎಟಿ) ಮತ್ತು ಗ್ರಾಜುಯೇಟ್ ಫಾರ್ಮೆಸಿ ಆಪ್ಟಿಟ್ಯೂಡ್ ಪರೀಕ್ಷೆಯನ್ನು (ಜಿಪಿಎಟಿ) ನಡೆಸುವುದು ಎಂದೂ  ಜಾವಡೇಕರ್ ನುಡಿದರು.  ಈ ಎಲ್ಲಾ ಪರೀಕ್ಷೆಗಳೂ ಕಂಪ್ಯೂಟರ್ ಆಧಾರಿತವಾಗಿದ್ದು, ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ಅಥವಾ ಅಧಿಕೃತ ಕಂಪ್ಯೂಟರ್ ಕೇಂದ್ರಗಳಲ್ಲಿ ಉಚಿತವಾಗಿ ಅಭ್ಯಾಸ ಮಾಡಬಹುದು.. ಇಂತಹ ಕೇಂದ್ರಗಳ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.  ಪರೀಕ್ಷಾ ವ್ಯವಸ್ಥೆಯು ಕಂಪ್ಯೂಟರ್ ಆಧಾರಿತ ವ್ಯವಸ್ಥೆಯಾದ್ದರಿಂದ ವಂಚನೆ ಮತ್ತು ಸೋರಿಕೆಗಳಿಗೆ ಅವಕಾಶಗಳಿರುವುದಿಲ್ಲ ಎಂದು ಜಾವಡೇಕರ್ ಹೇಳಿದರು. ೧೦ನೇ ತರಗತಿ ಪರೀಕ್ಷೆಗಳು ಕೂಡಾ ಕಂಪ್ಯೂಟರ್ ಆಧಾರಿತವಾದುದಾಗಿದ್ದರೂ ವಂಚನೆ ಹಗರಣಗಳು ನಡೆದ ಬಗ್ಗೆ ಜ್ಞಾಪಿಸಿದಾಗ ’ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮೊಡ್ಯೂಲ್ ಪರದೆ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಜಾವಡೇಕರ್ ಉತ್ತರಿಸಿದರು.  ‘ಪರೀಕ್ಷೆಗಳು ಅಂತಾರಾಷ್ಟ್ರೀಯ ಪರೀಕ್ಷೆಗಳಿಗೆ ಸಮಾನವಾದ ಮಾದರಿಯಲ್ಲಿ ಇರಲಿದ್ದು ಹೆಚ್ಚು ಸುಭದ್ರವಾಗಿರಲಿದೆ. ಸೋರಿಕೆ ಸಾಧ್ಯತೆಗಳು ಇರುವುದಿಲ್ಲ ಮತ್ತು ಇದು ವಿದ್ಯಾರ್ಥಿ ಮಿತ್ರ, ಮುಕ್ತ, ವೈಜ್ಞಾನಿಕ ಮತ್ತು ಸೋರಿಕೆ ರಹಿತ ವ್ಯವಸ್ಥೆಯಾಗಿರುತ್ತದೆ ಎಂದು ಸಚಿವರು ವಿವರಿಸಿದರು.

2018: ಪಾಟ್ನಾ:  ಗುಂಪು ಚಿತ್ರವಧೆ ಕೃತ್ಯಕ್ಕಾಗಿ ಶಿಕ್ಷೆಗೀಡಾಗಿದ್ದ ಎಂಟು ಮಂದಿಯನ್ನು ಹಾರಹಾಕಿ ಸನ್ಮಾನಿಸಿದ ಬಗ್ಗೆ ಉದ್ಭವಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಗಳನ್ನು ಮಾಡಿದ ಕೇಂದ್ರ ಸಚಿವ ಜಯಂತ್ ಸಿನ್ಹ ಅವರು ’ಕಾನೂನು ಪ್ರಕ್ರಿಯೆಯನ್ನು ಗೌರವಿಸುತ್ತಿದ್ದೇನೆ ಎಂದು ಪ್ರತಿಪಾದಿಸಿದರು. ಜಾಖಂಡ್ ನ ರಾಮಗಢ ಜಿಲ್ಲೆಯಲ್ಲಿ ಕಳೆದ ವರ್ಷ ಜೂನ್ ೩೦ರಂದು ಗೋ ಸಂರಕ್ಷಣೆಯ ಹೆಸರಿನಲ್ಲಿ ಮಾಂಸದ ವ್ಯಾಪಾರಿ ಅಲಿಮುದ್ದೀನ್ ಅನ್ಸಾರಿ ಅವರನ್ನು ಗುಂಪುಗೂಡಿ ಥಳಿಸಿ ಕೊಂದ ಪ್ರಕರಣದಲ್ಲಿ ಎಂಟು ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿತ್ತು.  ಬಳಿಕ ಸ್ಥಳೀಯ ಬಿಜೆಪಿ ನಾಯಕ ನಿತ್ಯಾನಂದ ಮಹತೋ ಸೇರಿದಂತೆ ೮ ಮಂದಿಯನ್ನು ಬಂಧಿಸಲಾಗಿತ್ತು ಮತ್ತು ಈ ವರ್ಷ ಮಾರ್ಚ್ ತಿಂಗಳಲ್ಲಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿತ್ತು. ಏನಿದ್ದರೂ ಜಾರ್ಖಂಡ್ ಹೈಕೋರ್ಟ್ ಹಿಂದಿನ ವಾರ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಸಜೆಯನ್ನು ಅಮಾನತುಗೊಳಿಸಿತ್ತು.  ಜುಲೈ 2ರ ಮಂಗಳವಾರ ಈ ವ್ಯಕ್ತಿಗಳು ಜಾಮೀನಿನಲ್ಲಿ ಹಜಾರಿ ಬಾಗ್ ಸೆರೆಮನೆಯಿಂದ ಹೊರಕ್ಕೆ ಬಂದರು ಮತ್ತು ಸಚಿವ ಜಯಂತ್ ನಿನ್ಹ ಅವರ ನಿವಾಸದಲ್ಲಿ ಸಚಿವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಹಜಾರಿಬಾಗ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಚಿವರು ಹಾರಹಾಕಿ ಅವರನ್ನು ಅಭಿನಂದಿಸಿದ್ದರು.  ಈ ಘಟನೆಯ ಬಳಿಕ ಸಿನ್ಹ ವರ್ತನೆ ಬಗ್ಗೆ ವಿವಾರ ಉದ್ಭವಿಸಿತ್ತು.  ’ಇದು ಹೇಯಕೃತ್ಯ ಎಂದು ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೆ ಎಂಎಂ ಧುರೀಣ ಹೇಮಂತ ಸೊರೇನ್ ಟ್ವೀಟ್ ಮಾಡಿದ್ದರು.  ಸಿನ್ಹ ಅವರು  ಈದಿನ ಸರಣಿ ಟ್ವೀಟ್ ಗಳನ್ನು ಮಾಡಿ ತಾವು ಹಿಂಸಾಚಾರವನ್ನು ಖಂಡಿಸಿ, ಗುಂಪು ಚಿತ್ರವಧೆಯನ್ನು ತಿರಸ್ಕರಿಸುವುದದರೂ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವು ವ್ಯಕ್ತಿಗಳ ವಿಚಾರಣೆ ನಡೆಸಿ ಶಿಕ್ಷಿಸಿದ ಬಗ್ಗೆ ತಮಗೆ ಸಂದೇಹಗಳಿವೆ ಎಂದು ತಿಳಿಸಿದರು.   ‘ಹಿಂಸಾಚಾರ ಮತ್ತು ಎಲ್ಲ ರೀತಿಯ ಗುಂಪು ಚಿತ್ರವಧೆ ಕೃತ್ಯಗಳನ್ನು ನಾನು ನಿಸ್ಸಂದೇಹವಾಗಿ ಖಂಡಿಸುವೆ. ನಮ್ಮ ಸಂವಿಧಾನಬದ್ಧ ಪ್ರಜಾಪ್ರಭುತ್ವದಲ್ಲಿ ಕಾನೂನು ಆಳ್ವಿಕೆ ಪರಮೋಚ್ಚವಾದುದು. ಯಾವುದೇ ಅಕ್ರಮ ಕೃತ್ಯಗಳ ಹಾಗೂ ನಿರ್ದಿಷ್ಟವಾಗಿ ಯಾರೇ ನಾಗರಿಕನ ಹಕ್ಕುಗಳನ್ನು ಉಲ್ಲಂಘಿಸುವವರನ್ನು ಕಾನೂನಿಗೆ ಅನುಗುಣವಾಗಿ ಶಿಕ್ಷಿಸಬೇಕು ಎಂದು ಸಿನ್ಹ ಹೇಳಿದರು. ‘ಪ್ರತಿಯೊಬ್ಬ ಆರೋಪಿಗೂ ಜೀವಾವಧಿ ಶಿಕ್ಷೆ ವಿಧಿಸಿದ ಫಾಸ್ಟ್ ಟ್ರ್ಯಾಕ್ ಕೋರ್ಟ್ ತೀರ್ಪಿನ ಬಗ್ಗೆ ನನಗೆ ಸಂದೇಹಗಳು ಇವೆ ಎಂದು ನಾನು ಪದೇ ಪದೇ ಅಭಿಪ್ರಾಯ ವ್ಯಕ್ತ ಪಡಿಸಿದ್ದೇನೆ. ಗೌರವಾನ್ವಿತ ಹೈಕೋರ್ಟ್ ವಿಷಯವನ್ನು ಆಲಿಸಿ, ಫಾಸ್ಟ್ರ್ ಟ್ರ್ಯಾಕ್ ಕೋರ್ಟ್ ನೀಡಿದ ತೀರ್ಪಿನ ಸಮರ್ಪಕತೆ ಬಗ್ಗೆ ಪರೀಕ್ಷಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಹೇಳಿದರು.  ‘ನನಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ಮತ್ತು ಕಾನೂನಿನ ಆಳ್ವಿಕೆ ಬಗ್ಗೆ ಪೂರ್ಣ ವಿಶ್ವಾಸ ಇದೆ. ನಾನು ಕಾನೂನಿನ ಪ್ರಕ್ರಿಯೆಯನ್ನು ಗೌರವಿಸುತ್ತಿರುವಾಗ, ದುರದೃಷ್ಟಕರವಾಗಿ ನನ್ನ ನಡೆಗಳ ಬಗ್ಗೆ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ. ಮುಗ್ಧರ ಸಂರಕ್ಷಣೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ನ್ಯಾಯೋಚಿತವಾಗಿ ಶಿಕ್ಷೆಯಾಗಬೇಕು ಎಂದು ಜಯಂತ್ ಸಿನ್ಹ ಹೇಳಿದರು.  ಜಾರ್ಖಂಡಿನ  ಬಿಜೆಪಿ ಸರ್ಕಾರವು ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿ ಫಾಸ್ಟ್ ಟ್ರ್ಯಾಕ್ ಕೋರ್ಟಿಗೆ ಕಳುಹಿಸುವಂತೆ ಪೊಲೀಸರಿಗೆ ಆದೇಶ ನೀಡಿತ್ತು. ಘಟನೆಯ ಒಂಬತ್ತು ತಿಂಗಳ ಬಳಿಕ ನ್ಯಾಯಾಲಯ ತನ್ನ ತೀರ್ಪು ನೀಡಿತ್ತು.

2018: ಜೈಪುರ: ಕಾಂಗ್ರೆಸ್ ಪಕ್ಷವು ’ಬೇಲ್ ಗಾಡಿ ಎಂಬುದಾಗಿ ಬಣ್ಣಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಾಂಗ್ರೆಸ್ ಪಕ್ಷದ ವಿರುದ್ಧ ಇಲ್ಲಿ ಪ್ರಬಲ ಟೀಕಾ ಪ್ರಹಾರ ನಡೆಸಿದರು.   ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆದು ಕೊಂಡಿರುವುದನ್ನು ಉಲ್ಲೇಖಿಸಿದ ಪ್ರಧಾನಿ ’ವಿರೋಧ ಪಕ್ಷಗಳು ಸೇನೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿವೆ ಮತ್ತು ರಾಷ್ಟ್ರದ ಭದ್ರತೆಗೆ ಸಂಬಂಧಪಟ್ಟ ವಿಷಯಗಳಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆಪಾದಿಸಿದರು.  ಜೈಪುರದಲ್ಲಿ ಸಂಘಟಿಸಲಾಗಿದ್ದ ಸರ್ಕಾರದ ಸಾರ್ವಜನಿಕ ಸಭೆಯಲ್ಲಿ ಪ್ರಮುಖ ಕಾರ್ಯಕ್ರಮಗಳ ಫಲಾನುಭವಿಗಳ ಜೊತೆ ಸಂವಾದ ನಡೆಸಿದ ಮೋದಿ, ’ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಸಚಿವರು ಜಾಮೀನಿನಲ್ಲಿದ್ದಾರೆ. ಇದು ಕಾಂಗ್ರೆಸ್ ಸರ್ಕಾರಗಳು ಈ ಹಿಂದೆ ಕಾರ್ಯ ನಿರ್ವಹಿಸಿದ ವೈಖರಿಯ ಫಲ. ಅವರಿಗೆ ಸಾರ್ವಜನಿಕ ಭಾವನೆಗಳು ಮತ್ತು ಅಭಿವೃದ್ಧಿಯ ಕನಸಿನ ಬಗ್ಗೆ ಆದರವಿಲ್ಲ ಎಂದು ನುಡಿದರು.  ಸಶಸ್ತ್ರ ಪಡೆಗಳ ‘ಏಕ ಶ್ರೇಣಿ,  ಏಕ ಪಿಂಚಣಿ ವಿಷಯವನ್ನು ಎನ್ ಡಿಎ ಸರ್ಕಾರ ಇತ್ಯರ್ಥ ಪಡಿಸಿದಾಗ ವಿರೋಧ ಪಕ್ಷಗಳು ಸೇನೆಯ ಆಧಾರಗಳನ್ನೇ ಪ್ರಶ್ನಿಸುವ ಮೂಲಕ ರಾಷ್ಟ್ರದ ಭದ್ರತೆಯ ವಿಚಾರವನ್ನೇ ಇಕ್ಕಟ್ಟಿಗೆ ತಂದಿಟ್ಟವು ಎಂದು ಮೋದಿ ಹೇಳಿದರು.  ೨೦೨೨ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಕೇಂದ್ರವು ಶ್ರಮಿಸುತ್ತಿದೆ ಮತ್ತು ರೈತರ ಹನಿ ಹನಿ ಬೆವರಿಗೂ ಗೌರವ ಕೊಟ್ಟು ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಇದೇ ರೀತಿ ಗ್ರಾಮ ಸ್ವರಾಜ್ ಅಭಿಯಾನವು ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ವದ ವ್ಯತ್ತಾಸವನ್ನು ಮಾಡಲಿದೆ. ಇವುಗಳನ್ನು ಸಂಶಯಿಸುತ್ತಿರುವ ವಿರೋಧ ಪಕ್ಷಗಳು ಹಿಂದೆ ಕೆಲಸವನ್ನೇ ಮಾಡಲಿಲ್ಲ ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ನುಡಿದರು. ಕೇಂದ್ರ ಮತ್ತು ರಾಜ್ಯಗಳಲ್ಲಿ ಇರುವ ಬಿಜೆಪಿ ಸರ್ಕಾರಗಳು ಅಭಿವೃದ್ಧಿಯ ಏಕೈಕ ಕಾರ್‍ಯಸೂಚಿಯನ್ನು ಹೊಂದಿವೆ ಮತ್ತು ಪ್ರಾಮಾಣಿಕತೆ, ಬದ್ಧತೆ ಮತ್ತು ಸಮರ್ಪಣಾ ಭಾವದೊಂದಿಗೆ ಕೆಲಸ ಮಾಡುತ್ತಿವೆ. ಬಡವರ ಸಬಲೀಕರಣಕ್ಕಾಗಿ ಸರ್ಕಾರ ನಡೆಸಿದ ಸುಸ್ಥಿರ ಯತ್ನಗಳ ಫಲವಾಗಿ ೫ ಕೋಟಿ ಜನರು ದಾರಿದ್ರ್ಯದಿಂದ ಹೊರಬಂದಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಶ್ಲಾಘನೆಗೆ ಪಾತ್ರವಾಗಿದೆ ಎಂದು ಮೋದಿ ಹೇಳಿದರು. ರಾಜಸ್ಥಾನದ ಮಹತ್ವಾಕಾಂಕ್ಷಿ ಪೂರ್ವ ರಾಜಸ್ಥಾನ ಕಾಲುವೆ ಯೋಜನೆಗೆ (ಇಆರ್ ಸಿಪಿ) ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಕೇಂದ್ರವು ಅನುಕಂಪಪೂರ್ವಕವಾಗಿ ಪರಿಗಣಿಸಲಿದೆ. ಈ ಯೋಜನೆಯಿಂದ ೧೩ ಜಿಲ್ಲೆಗಳು ಮತ್ತು ರಾಜ್ಯದ ಜನಸಂಖ್ಯೆಯ ಶೇಕಡಾ ೪೦ರಷ್ಟು ಮಂದಿಗೆ ನೀರಾವರಿ ಸೌಲಭ್ಯ ಲಭಿಸುವುದರ ಜೊತೆಗೆ ೨ ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಪ್ರಾಪ್ತಿಯಾಗುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಯುವ ಮೂಲಕ ಅನುಕೂಲವಾಗಲಿದೆ ಎಂದು ಪ್ರಧಾನಿ ನುಡಿದರು. ಒಟ್ಟು ೨,೧೦೦ ಕೋಟಿ ರೂಪಾಯಿ ಯೋಜನಾ ವೆಚ್ಚದ ೧೩ ನಗರ ಮೂಲಸವಲತ್ತು ಯೋಜನೆಗಳನ್ನೂ ಈ ಸಂದರ್ಭದಲ್ಲಿ ಅನಾವರಣಗೊಳಿಸಿದ ಮೋದಿ, ಯೋಜನೆಯ ೧೨ ಮಂದಿ ಫಲಾನುಭವಿಗಳು ಅನುಭವ ಹಂಚಿಕೊಂಡ ದೃಕ್-ಶ್ರಾವ್ಯ ಪ್ರಸಂಟೇಷನನ್ನು ವೀಕ್ಷಿಸಿದರು.  ಜೈಪುರ ನಗರದ ಅಮೃದನ್ ಕಾ ಬಾಗ್‌ನಲ್ಲಿ  ’ಪ್ರಧಾನಮಂತ್ರಿ -ಫಲಾನುಭವಿ ಜನ ಸಂವಾದ ಹೆಸರಿನ ಕಾರ್‍ಯಕಮದಲ್ಲಿ ೩೩ ಜಿಲ್ಲೆಗಳಿಂದ ಬಂದ ೨ ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು

2018: ನವದೆಹಲಿ: ದೆಹಲಿಯಲ್ಲಿ ೨೦೧೨ರಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳು ಮರಣದಂಡನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಜುಲೈ ೯ರ ಸೋಮವಾರ ತನ್ನ ತೀರ್ಪನ್ನು ಪ್ರಕಟಿಸಲಿದೆ.  ದೇಶವನ್ನೇ ಆಘಾತಗೊಳಿಸಿದ್ದ ಪ್ರಕರಣದಲ್ಲಿ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ೨೦೧೭ರ ಮೇ ತಿಂಗಳಲ್ಲಿ ಎತ್ತಿ ಹಿಡಿದಿತ್ತು. ಅಪರಾಧಿಗಳಾದ ಅಕ್ಷಯ್, ಪವನ್, ವಿನಯ್ ಶರ್ಮ ಮತ್ತು ಮುಖೇಶ್ ಅವರಿಗೆ ದೆಹಲಿ ಹೈಕೋರ್ಟ್ ವಿಧಿಸಿದ ಮರಣದಂಡನೆಯನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು.  ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ತೀರ್ಪನ್ನು ನಾಲ್ವರೂ ಅಪರಾಧಿಗಳು ಮರು ಪರಿಶೀಲನಾ ಅರ್ಜಿಯ ಮೂಲಕ ಪುನಃ ಪ್ರಶ್ನಿಸಿದ್ದರು.  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಈ ಮರುಪರಿಶೀಲನಾ ಅರ್ಜಿಯ ಮೇಲಿನ ತನ್ನ ತೀರ್ಪನ್ನು ಜುಲೈ ೯ರಂದು ಪ್ರಕಟಿಸಲಿದೆ.  ೨೦೧೨ರ ಡಿಸೆಂಬರ್ ೧೬ರಂದು, ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಐವರು ಪುರುಷರು ಮತ್ತು ಒಬ್ಬ ಅಪ್ರಾಪ್ತ ಬಾಲಕ ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ಗೆಳೆಯನ ಜೊತೆಗೆ ಬಸ್ಸನ್ನು ಏರಿದ ಬಳಿಕ ಚಲಿಸುತ್ತಿದ್ದ ಬಸ್ಸಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಇಬ್ಬರನ್ನೂ ಬಸ್ಸಿನಿಂದ ಹೊರಕ್ಕೆ ಎಸೆದು ಹೋಗಿದ್ದರು.  ದೆಹಲಿ ಆಸ್ಪತ್ರೆಯಲ್ಲಿ ಸುದೀರ್ಘ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ವಿದ್ಯಾರ್ಥಿನಿ ಇನ್ನೂ ಉತ್ತಮ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ವಿಮಾನದಲ್ಲಿ ಒಯ್ದ ಬಳಿಕ ಕೊನೆಯುಸಿರು ಎಳೆದಿದ್ದರು.  ಈ ಭೀಕರ ಘಟನೆಯು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ದೆಹಲಿಯಲ್ಲಿ ಸಹಸ್ರಾರು ಮಂದಿ ಯುವಕರು ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಿ ನಿರ್ಭಯ ಪ್ರಕರಣದ ೬ ಮಂದಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದರು.

2018: ನವದೆಹಲಿ: ಬಹಳಷ್ಟು ಕಾಂಗ್ರೆಸ್ ನಾಯಕರು ’ಬೇಲ್ನಲ್ಲಿ (ಜಾಮೀನು) ಇದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷವು ’ಬೇಲ್ ಗಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಾಪ್ರಹಾರ ನಡೆಸಿದ ದಿನವೇ ಕಾಂಗ್ರೆಸ್ಸಿನ ಹಿರಿಯ ನಾಯಕ, ಸಂಸದ ಶಶಿ ತರೂರ್ ಅವರಿಗೆ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತು.  ಎರಡು ದಿನಗಳ ಹಿಂದಷ್ಟೇ ಶಶಿ ತರೂರ್ ಅವರಿಗೆ ನ್ಯಾಯಾಲಯ ನಿರೀಕ್ಷಾ ಜಾಮೀನು ಮಂಜೂರು ಮಾಡಿತ್ತು.  ಜುಲೈ 3ರ ಮಂಗಳವಾರ ದೆಹಲಿ ಹೈಕೋರ್ಟ್ ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರಿಗೆ ನಿರೀಕ್ಷಾ ಜಾಮೀನು ಮಂಜೂರು ಮಾಡಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾನನಷ್ಟ ಪ್ರಕರಣವೊಂದನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ  (ಆರೆಸ್ಸೆಸ್) ಕಾರ್ಯಕರ್ತರೊಬ್ಬರು ಈ ಪ್ರಕರಣವನ್ನು ದಾಖಲಿಸಿದ್ದರು.  ೨೦೧೫ರ ಡಿಸೆಂಬರಿನಲ್ಲಿ ದೆಹಲಿಯ ನ್ಯಾಯಾಲಯವೊಂದು ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯ್ಷಕ್ಷ ರಾಹುಲ್ ಗಾಂಧಿ ಅವರಿಗೆ ನ್ಯಾಷನಲ್ ಹೆರಾಲ್ಡ್ ವಂಚನೆ ಮತ್ತು ಹಣ ದುರುಪಯೋಗ ಪ್ರಕರಣದಲ್ಲಿ ಬೇಷರತ್ ಜಾಮೀನು ನೀಡಿತ್ತು.  ನ್ಯಾಯಾಲಯವು ಪ್ರಕರಣದಲ್ಲಿನ ಇತರ ಆರೋಪಿಗಳಾದ ಪ್ರಧಾನ ಕಾರ್‍ಯದರ್ಶಿ ಆಸ್ಕರ್ ಫರ್ನಾಂಡಿಸ್, ಖಜಾಂಚಿ ಮೋತಿಲಾಲ್ ವೋರಾ ಮತ್ತು ಗಾಂಧಿ ಕುಟುಂಬ ನಿಷ್ಠ ಸುಮನ್ ದುಬೆ ಅವರಿಗೂ ಜಾಮೀನು ಮಂಜೂರು ಮಾಡಿತ್ತು. ಇನ್ನೊಬ್ಬ ಆರೋಪಿ  ಸ್ಯಾಮ್ ಪಿತ್ರೋಡಾ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.


2017: ಕುರುಕ್ಷೇತ್ರ : ಜಡಿ ಮಳೆ ಹಾಗೂ ಮೇವು ಅಲಭ್ಯತೆಯ ಕಾರಣ ಹರಿಯಾಣದ ಮಥಾನಾ ಗ್ರಾಮದಲ್ಲಿನ ಸರಕಾರಿ ಗೋರಕ್ಷಣಾ ಕೇಂದ್ರದಲ್ಲಿ 25 ಗೋವುಗಳು ದಾರುಣವಾಗಿ ಸಾವಪ್ಪಿರುವ ಘಟನೆ ಘಟಿಸಿತು. ನಿರಂತರವಾಗಿ ಸುರಿದ ಮಳೆಯಿಂದಾಗಿ ಗೋಶಾಲೆಯಲ್ಲಿ ನೀರು ತುಂಬಿಕೊಂಡಿತ್ತು. ಪರಿಣಾಮವಾಗಿ ಗೋವುಗಳು ಕೆಸರಿನಲ್ಲಿ  ಹುದುಗಿದವು. ಹಲವು ಗೋವುಗಳಿಗೆ ಮೇವು, ಆಹಾರ ಸಿಗದೆ ಅವು ಉಪವಾಸದಿಂದ ಸಾವಿನಂಚಿಗೆ ತಲುಪಿದವು; ಇನ್ನು ಕೆಲವು ಗೋವುಗಳ ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ಅನಾರೋಗ್ಯಕ್ಕೆ ಗುರಿಯಾದವು ಎಂದು ಗ್ರಾಮದ ಮುಖ್ಯಸ್ಥ ಕಿರಣ್‌ ಬಾಲಾ ತಿಳಿಸಿದರು. ಹರಿಯಾಣ ಗೋ ಸೇವಾ ಆಯೋಗದ ಅಧ್ಯಕ್ಷ ಭನೀ ದಾಸ್‌ ಮಂಗ್ಲಾ  ಮತ್ತು ಕೆಲವು ಜಿಲ್ಲಾಡಳಿತ ಅಧಿಕಾರಿಗಳು ಗೋ ಕೇಂದ್ರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
2017: ನವದೆಹಲಿ: ಮಾಜಿ ಕೇಂದ್ರ ರೈಲ್ವೇ ಸಚಿವ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ಗೆ ಹೊಸ
ಸಂಕಷ್ಟ ಎದುರಾಯಿತು. ರೈಲ್ವೇ ಸಚಿವರಾಗಿದ್ದ ವೇಳೆ ಹೊಟೇಲ್‌ಗ‌ಳಿಗೆ ನೀಡಿದ ಗುತ್ತಿಗೆ ಅಕ್ರಮದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡ ಸಿಬಿಐ, ಲಾಲು ಅವರ ಪಟ್ನಾದ ಮನೆ ಸೇರಿದಂತೆ ಕುಟುಂಬದ ಸದಸ್ಯರ  12  ಆವರಣಗಳಲ್ಲಿ ದಾಳಿ ನಡೆಸಿ ಆಘಾತ ನೀಡಿತು. ಲಾಲು , ಪತ್ನಿ ರಾಬ್ರಿ ದೇವಿ , ಪುತ್ರ ಬಿಹಾರ ಡಿಸಿಎಂ ತೇಜಸ್ವಿ , ಆಗಿನ ಐಆರ್‌ಸಿಡಿಸಿ ಎಂಡಿ ಪಿ.ಕೆ ಗೋಯಲ್‌, ಲಾಲು ಆಪ್ತ ಪ್ರೇಮ್‌ಚಂದ್ರ ಗುಪ್ತಾ ಪತ್ನಿ ಸುಜಾತಾ ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತು.ದೆಹಲಿ, ಪಟ್ನಾ, ರಾಂಚಿ, ಪುರಿ, ಗುರುಗ್ರಾಮ ಸೇರಿದಂತೆ 12 ಕಡೆಗಳಲ್ಲಿ ಏಕಕಾಲದಲ್ಲಿ ಸಿಬಿಐ ಅಧಿಕಾರಿ ಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು. 2006 ರಲ್ಲಿ ಬಿಎನ್‌ಆರ್‌ ಹೊಟೇಲ್‌ಗ‌ಳ ನಿರ್ವಹಣೆಗೆ ಸುಜಾತಾ ಹೊಟೇಲ್ಸ್‌ಗೆ ನೀಡಿದ ಗುತ್ತಿಗೆಯಲ್ಲಿ ಅಕ್ರಮ ಎಸಗಿರುವ ಆರೋಪದಲ್ಲಿ ದಾಳಿ ನಡೆಸಲಾಯಿತು. ಸುಜಾತಾ ಹೊಟೇಲ್‌ಗಳನ್ನು ರೈಲ್ವೇ ಇಲಾಖೆ ಈ ವರ್ಷಾರಂಭದಲ್ಲಿ ಆಧೀನಕ್ಕೆ ಪಡೆದುಕೊಂಡಿತ್ತು. 
2017: ಹ್ಯಾಂಬರ್ಗ್‌: ರಾಜಕೀಯ ಗುರಿ ಸಾಧನೆಗಾಗಿ ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು
ಬಳಸುತ್ತಿವೆ. ಭಯೋತ್ಪಾದನೆಯ ವಿರುದ್ದ ಹೋರಾಡಲು ಜಾಗತಿಕ ನಾಯಕರು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಅವರು ಭಯೋತ್ಪಾದನೆ ನಿಗ್ರಹ ಹೋರಾಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ಇನ್ನಷ್ಟು ಪ್ರಬಲವಾಗಬೇಕಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಲಷ್ಕರೆ-ಎ-ತೈಯಬಾ ಮತ್ತು ಜೈಷೆ–ಎ–ಮೊಹಮ್ಮದ್‌‍ನಿಂದ ಹಿಡಿದು ಐಎಸ್‍ಐಸ್ ಮತ್ತು ಅಲ್ ಖೈದಾ ಸಂಘಟನೆಗಳೆಲ್ಲವೂ ವಿಭಿನ್ನವಾಗಿರಬಹುದು ಆದರೆ ಅವುಗಳ ವಿಚಾರಧಾರೆ ಒಂದೇ ಆಗಿದೆ ಎಂದು ಹೇಳಿದರು. ಈ ವೇಳೆ ಭಯೋತ್ಪಾದನೆ ನಿಗ್ರಹಕ್ಕಾಗಿ 11 ಅಂಶಗಳಿರುವ ಕಾರ್ಯಸೂಚಿಯನ್ನು (ಆಕ್ಷನ್ ಅಜೆಂಡಾ) ಮೋದಿ ಪ್ರಸ್ತುತ ಪಡಿಸಿದರು. ಜಿ20 ಶೃಂಗಸಭೆಯಲ್ಲಿ ನಡೆದ ಬ್ರಿಕ್ಸ್ ನಾಯಕರ ಅನೌಪಚಾರಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆಗೆ ನೀಡುವ ಆರ್ಥಿಕ ಬೆಂಬಲ ನೀಡುವುದನ್ನು ಮತ್ತು ಅವರಿಗೆ ಬೆಂಬಲ, ಪ್ರಾಯೋಜಕತ್ವ ನೀಡುವುದನ್ನು ನಿಲ್ಲಿಸಬೇಕುಎಂದು ಹೇಳಿದರು. ಭಾರತದಲ್ಲಿ ಜಿಎಸ್‍ಟಿ ಅನುಷ್ಠಾನಕ್ಕೆ ತಂದಿರುವುದನ್ನು ಉಲ್ಲೇಖಿಸಿದ ಮೋದಿ ಜಾಗತಿಕ ಮಟ್ಟದ ಆರ್ಥಿಕ ಬೆಳವಣಿಗೆಗೆ ಎಲ್ಲರೂ ಜತೆಯಾಗಿ ಕಾರ್ಯವೆಸಗಬೇಕು ಎಂದರು.
2017: ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ತನ್ನ ನೇಮಕಾತಿ ಸಂದರ್ಭದಲ್ಲಿ ನಡೆಸುವ ಪರೀಕ್ಷಾ
ವಿಧಾನವನ್ನು ಆನ್‌ಲೈನ್‌ಗೆ ಬದಲಿಸಿಕೊಂಡದ್ದರಿಂದಾಗಿ ಅಂದಾಜು 4 ಲಕ್ಷ ಮರಗಳು ಹಾಗೂ 319 ಕೋಟಿ ಎ 4 ಗಾತ್ರ ಹಾಳೆಗಳು ಉಳಿತಾಯವಾಗಿವೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿದವು. ಈ ಹಿಂದೆ ನೇಮಕಾತಿ ಸಂದರ್ಭದಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಹಲವು ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಬೇಕಿದ್ದ ಕಾರಣ ಅಧಿಕ ಪ್ರಮಾಣದ ಕಾಗದ ಬಳಕೆ ಮಾಡಲಾಗುತ್ತಿತ್ತು. ಇದಕ್ಕಾಗಿ ಮರಗಳನ್ನು ಅತಿಯಾಗಿ ಅವಲಂಭಿಸಲಾಗಿತ್ತು. ಇದನ್ನು ಗಮನದಲ್ಲಿರಿಸಿ, ಸದ್ಯ ಖಾಲಿಯಿರುವ ಒಟ್ಟು 14,000 ಹುದ್ದೆಗಳ ನೇಮಕಾತಿಗೆ ರೈಲ್ವೆ ಇಲಾಖೆ ಆನ್‌ಲೈನ್‌ ಪರೀಕ್ಷೆ ಆಯೋಜಿಸುವ ತೀರ್ಮಾನ ಕೈಗೊಂಡಿತ್ತು. 92ಲಕ್ಷ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು.  351 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾದ ಪ್ರಾಥಮಿಕ ಪರೀಕ್ಷೆಯಲ್ಲಿ 2.73 ಲಕ್ಷ ಮಂದಿ ಆಯ್ಕೆಯಾಗಿದ್ದರು. ಆಯ್ಕೆಯಾದ ಆಭ್ಯರ್ಥಿಗಳಿಗೆ 2017 ಜನವರಿಯಲ್ಲಿ ಎರಡನೇಹಂತದ ಪರೀಕ್ಷೆಯನ್ನೂ ನಡೆಸಲಾಗಿತ್ತು. ಸದ್ಯ 45ಸಾವಿರ ಅಭ್ಯರ್ಥಿಗಳು ಅಂತಿಮ ಪರೀಕ್ಷೆಗೆ ಆಯ್ಕೆಯಾಗಿದ್ದು, ಅವರಿಗೆ ದೈಹಿಕ ಹಾಗೂ ತಾಂತ್ರಿಕ ಕೌಶಲ ಪರೀಕ್ಷೆಯನ್ನು ಜೂನ್‌ 29, 30ರಂದು ನಡೆಸಲಾಗಿತ್ತು. ಆನ್‌ಲೈನ್‌ ಪದ್ದತಿಯನ್ನು ಅನುಸರಿಸಿದ ಬಳಿಕ ಆಯ್ಕೆ ಪ್ರಕ್ರಿಯೆಗಾಗಿ ವ್ಯಯಿಸಲಾಗುತ್ತಿದ್ದ ಸಮಯ ಹಾಗೂ ಸಂಪನ್ಮೂಲಗಳ ಪ್ರಮಾಣದಲ್ಲಿ ಗಣನೀಯ ಉಳಿತಾಯಕ್ಕೆ ಸಹಕಾರಿಯಾಯಿತು. ಜತೆಗೆ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮವನ್ನು ತಡೆದು ಪರೀಕ್ಷೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲು ಸಾಧ್ಯವಾಯಿತು. ಇದು ‘ವಿಶ್ವದ ಅತಿದೊಡ್ಡ ಆನ್‌ಲೈನ್‌ ಪರೀಕ್ಷಾ ವ್ಯವಸ್ಥೆ’ ಎಂದಿರುವ ಇಲಾಖೆ, ಆಯ್ಕೆಯಾಗುವ 14ಸಾವಿರ ಅಭ್ಯರ್ಥಿಗಳ ದಾಖಲೆ ಪರಿಶೀಲನೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸುವುದಾಗಿ ತಿಳಿಸಿತು.
2017: ಹ್ಯಾಂಬರ್ಗ್‌: ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಲು ಜರ್ಮನಿಯ ಹ್ಯಾಂಬರ್ಗ್‌ಗೆ ಬಂದ
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮಾತುಕತೆ ನಡೆಸಿದರು. ಸಿಕ್ಕಿಂ ವಲಯದ ಭಾರತ–ಚೀನಾ ಗಡಿಯಲ್ಲಿ ಸಂಘರ್ಷದ ಸನ್ನಿವೇಶ ಇರುವ ಕಾರಣ ಮೋದಿ- ಕ್ಸಿ ಮಧ್ಯೆ ಮಾತುಕತೆ ನಡೆಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿತ್ತು. ಆದರೆ ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮುಖಂಡರ ಅನೌಪಚಾರಿಕ ಸಭೆಯ ವೇಳೆ ಉಭಯ ಮುಖಂಡರು ಮಾತುಕತೆ ನಡೆಸಿದರು. ಕೆಲವು ಪ್ರಧಾನ ವಿಷಯಗಳ ಬಗ್ಗೆ ನಾಯಕರು ಚರ್ಚೆ ನಡೆಸಿದರು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಟ್ವೀಟ್ ಮಾಡಿದರು.  ಆದರೆ, ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಈ ನಾಯಕರು ಮಾತನಾಡಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.  ಬ್ರಿಕ್ಸ್ ರಾಷ್ಟ್ರಗಳ ನಾಯಕರ ಅನೌಪಚಾರಿಕ ಸಭೆಯ ನಡುವೆ ಚೀನಾ ಅಧ್ಯಕ್ಷ ಮತ್ತು ಭಾರತದ ಪ್ರಧಾನಿ ಪರಸ್ಪರ ಹೊಗಳಿ ಮಾತನಾಡಿದ್ದು ಹೆಚ್ಚು ಗಮನಾರ್ಹವಾಗಿತ್ತು. ಭಯೋತ್ಪಾದನೆ ವಿರುದ್ದ ಭಾರತದ ದಿಟ್ಟ ನಿಲುವನ್ನು ಚೀನಾ ಅಧ್ಯಕ್ಷರು ಹೊಗಳಿದರು. ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಶ್ಲಾಘಿಸಿದ ಕ್ಸಿ, ದೇಶ ಇನ್ನಷ್ಟು ಗೆಲುವುಗಳನ್ನು ಸಾಧಿಸಲಿ ಎಂದು ಆಶಿಸಿದರು.  ಆನಂತರ ಮಾತನಾಡಿದ ಮೋದಿ, ಮುಂಬರುವ ಬ್ರಿಕ್ಸ್  ಸಮ್ಮೇಳನಕ್ಕೆ ಆತಿಥ್ಯ ವಹಿಸಲಿರುವ ಚೀನಾಗೆ ಅಭಿನಂದನೆ ಸಲ್ಲಿಸಿ,, ಇದಕ್ಕೆ ಎಲ್ಲ ರೀತಿಯಲ್ಲಿಯೂ ಸಹಕರಿಸುವುದಾಗಿ ಹೇಳಿದರು.  ಉಭಯ ನಾಯಕರ ಈ ಮಾತುಕತೆ 5 ನಿಮಿಷಗಳ ಕಾಲ ನಡೆಯಿತು.
2017:  ನವದೆಹಲಿ:  ಜೆಇಇ (ಅಡ್ವಾನ್‌ಸಡ್‌) ಐಐಟಿ ಕೌನ್ಸೆಲಿಂಗ್‌ ಮತ್ತು ಸೇರ್ಪಡೆ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿತು. ಜೆಇಇ - ಅಡ್ವಾನ್ಸ್‌ಡ್‌ ಗೆ ಸಂಬಂಧಿಸಿದಂತೆ ದೇಶದ ಯಾವುದೇ ಹೈಕೋರ್ಟ್‌ಗಳು ಈಗಿನ್ನು ಯಾವುದೇ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಕೂಡದು ಎಂದು ಜಸ್ಟಿಸ್‌ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ಆದೇಶಿಸಿತು. ಹೈಕೋರ್ಟ್‌ಗಳ ಮುಂದೆ ಈಗ ಜೆಇಇ - ಐಐಡಿ ಅಡ್ವಾನ್ಸ್‌ಡ್‌ ಗೆ ಸಂಬಂಧಿಸಿ ಎಷ್ಟು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ ಮತ್ತು ಅವುಗಳ ಸ್ವರೂಪ ಏನು ಎಂಬುದನ್ನು ತತ್ ಕ್ಷಣ  ತನಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌, ಎಲ್ಲ ಹೈಕೋರ್ಟ್‌ಗಳ ರಿಜಿಸ್ಟ್ರಾರ್‌ ಜನರಲ್‌ಗ‌ಳಿಗೆ ನಿರ್ದೇಶನ ನೀಡಿತು.  ಅಡ್ವಾನ್ಸ್‌ಡ್‌ ಕೋರ್ಸಿಗಾಗಿ ಐಐಟಿ ಜಂಟಿ ಪ್ರವೇಶ ಪರೀಕ್ಷೆಯನ್ನು ಎದುರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಏಳು ಇತರೇ ಅಂಕಗಳನ್ನು ಮಂಜೂರು ಮಾಡುವ ಕ್ರಮವನ್ನು ಪ್ರಶ್ನಿಸಿದ ಅರ್ಜಿಗೆ ಉತ್ತರಿಸುವಂತೆ ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರವನ್ನು ಕೇಳಿಕೊಂಡಿತ್ತು.  ಹಿಂದಿ ಭಾಷಾ ಪ್ರಶ° ಪತ್ರಿಕೆಯಲ್ಲಿ ಮುದ್ರಣ ದೋಷಗಳು ಇದ್ದುದರಿಂದ ಎಲ್ಲ ಪರೀಕ್ಷಾರ್ಥಿಗಳಿಗೆ ಇತರೇ ಏಳು ಅಂಕಗಳನ್ನು ನೀಡಲಾಗಿತ್ತು. 
2016: ಲಾರ್ಡ್ಸ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಗಿನ್ನೆಸ್ ವಿಶ್ವದಾಖಲೆಯಲ್ಲಿ ಅತಿ ಎತ್ತರದಿಂದ ಕ್ಯಾಚ್ ಪಡೆದು ತಮ್ಮ ಹೆಸರನ್ನು ದಾಖಲಿಸಿದರು.
ಡ್ರೋನ್ ಕ್ಯಾಮರಾ ಜತೆಗೆ ಚೆಂಡನ್ನೂ 32 ಮೀಟರ್ ಎತ್ತರಕ್ಕೆ ಕಳುಹಿಸಿ ಕೆಳಕ್ಕೆ ಬಿಡಲಾಯಿತು. ಕ್ರಿಕೆಟ್ ಮೈದಾನದಲ್ಲಿ ನಿಂತಿದ್ದ ನಾಸಿರ್ ಹುಸೇನ್ ಇದನ್ನು ಹಿಡಿದು ದಾಖಲೆ ನಿರ್ಮಿಸಿದರು. ಮೊದಲ ಪ್ರಯತ್ನದಲ್ಲಿ ಚೆಂಡನ್ನು ಹಿಡಿಯಲಾಗದೇ ಕೈಚೆಲ್ಲಿದ್ದ ಸಾಸಿರ್ ಹುಸೇನ್, ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ಪರ 96 ಟೆಸ್ಟ್ ಪಂದ್ಯಗಳನ್ನಾಡಿರುವ ನಾಸಿರ್ಗಾಗಿ ವಿಶ್ವದಾಖಲೆಯ ಸವಾಲು ಆಯೋಜನೆಗೊಂಡಿತ್ತು.

2016: ಮಾಪುಟೊ (ಮೊಜಾಂಬಿಕ್): ಕೃಷಿ- ಆಹಾರ ಭದ್ರತೆ, ರಕ್ಷಣೆ, ಔಷಧ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವೃದ್ಧಿಗೆ ಗಮನ ಹರಿಸಿರುವ ಭಾರತ ಮತ್ತು ಮೊಜಾಂಬಿಕ್ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಗುರುವಾರ ಮೂರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದವು. ಮೋದಿ ನೇತೃತ್ವದ ನಿಯೋಗವು ಮೊಜಾಂಬಿಕ್ ನಿಯೋಗದ ಜೊತೆಗೆ ಮಾತುಕತೆ ನಡೆಸಿದ ಬಳಿಕ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಯುವ ವ್ಯವಹಾರಗಳು ಮತ್ತು ಕ್ರೀಡೆಗಳಿಗೆ ಸಂಬಂಧ ಪಟ್ಟಂತೆ ತಿಳಿವಳಿಕೆ ಪತ್ರ, ಮೊಜಾಂಬಿಕ್ನಿಂದ ಧಾನ್ಯಗಳ ಖರೀದಿಗೆ ಸಂಬಂಧಪಟ್ಟಂತೆ ದೀರ್ಘಾವಧಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮಾತುಕತೆಗಳ ಬಳಿಕ ಮೊಜಾಂಬಿಕ್ ಅಧ್ಯಕ್ಷರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಮೊಜಾಂಬಿಕ್ ಜನರ ಆರೋಗ್ಯ ವ್ಯವಸ್ಥೆ ಸುಧಾರಿಸುವ ಸಲುವಾಗಿ ಬಾರತವು ಏಡ್ಸ್ ಚಿಕಿತ್ಸೆ ಸೇರಿದಂತೆ ವಿವಿಧ ಔಷಧಗಳನ್ನು ಮೊಜಾಂಬಿಕ್ಗೆ ಕೊಡುಗೆಯಾಗಿ ನೀಡಲಿದೆ ಎಂದು ಹೇಳಿದರು. ಮೊಜಾಂಬಿಕ್ ಆರ್ಥಿಕ ಸಮೃದ್ಧಿಯೆಡೆಗಿನ ನಡೆಯಲ್ಲಿ ಭಾರತ ಜೊತೆಜೊತೆಯಾಗಿ ಸಹಕಾರದ ಹೆಜ್ಜೆ ಹಾಕಲಿದೆ. ನಾವು ನಂಬಿಗಸ್ಥ ಗೆಳೆಯರಾಗಿರುತ್ತೇವೆ. ಮಾದಕ ದ್ರವ್ಯ ಸಾಗಣೆ ತಡೆ ನಿಟ್ಟಿನಲ್ಲಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದು ಮಾದಕ ದ್ರವ್ಯಗಳ ಹಾವಳಿ ಮತ್ತು ಜಾಲಗಳ ನಿವಾರಣೆಗೆ ನಮ್ಮ ದೃಢ ನಿಲುವಿನ ದ್ಯೋತಕ ಎಂದು ಪ್ರಧಾನಿ ಹೇಳಿದರು. ಮೊಜಾಂಬಿಕ್ ಅಧ್ಯಕ್ಷರು ಮತ್ತು ನಾನು ಪರಸ್ಪರ ರಕ್ಷಣೆ ಮತ್ತು ಭದ್ರತಾ ಬಾಂಧವ್ಯ ವೃದ್ಧಿಗೆ ಒಪ್ಪಿದ್ದೇವೆ. ಭಯೋತ್ಪಾದನೆಯು ಇಂದು ವಿಶ್ವದ ಭದ್ರತೆಗೆ ಎದುರಾಗಿರುವ ಅತಿದೊಡ್ಡ ಬೆದರಿಕೆ ಎಂದು ಅವರು ನುಡಿದರು.

2016: ನವದೆಹಲಿ: ತೆಂಗಿನಕಾಯಿ ಚಿಪ್ಪಿನ ಮನೆಕಟ್ಟಿ, ಭೂಕಂಪ ಹಾನಿ ತಡೆಗಟ್ಟಿಹೌದು. ತೆಂಗಿನಕಾಯಿ ಮನುಜನ ಆರೋಗ್ಯಕ್ಕೆ ಒಳ್ಳೆಯದೆಂಬುದು ಎಲ್ಲರಿಗೂ ಗೊತ್ತು. ಆದರೆ ತೆಂಗಿನ ಚಿಪ್ಪಿನಿಂದ ನಿರ್ಮಿಸಿದ ಮನೆ ಭೂಕಂಪ ನಿರೋಧಕ ಎಂಬದು ಗೊತ್ತೆ? ಕುರಿತ ಸಂಶೋಧನೆ ಇದನ್ನು ಸಾಬೀತುಗೊಳಿಸಿದ್ದು, ಉಪಯುಕ್ತ ಸಂಶೋಧನೆ ತೆಂಗಿನಮರದ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ವಿಶ್ವಕ್ಕೆ ಭೂಕಂಪದಿಂದ ಉಂಟಾಗಬಹುದಾದ ಅನಾಹುತಗಳಿಗೆ ತೆಂಗಿನ ಚಿಪ್ಪಿನಿಂದ ನಿರ್ಮಿತವಾದ ಮನೆ ಪರಿಹಾರವಾಗಬಲ್ಲುದು ಎಂದು ಜರ್ಮನಿಯ ಫ್ರೀಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿರುವುದಾಗಿ ಪ್ರಕಟಿಸಿದರು. ತೆಂಗಿನ ಚಿಪ್ಪಿನಲ್ಲಿರುವ ಮೂರು ಮಾದರಿ ಪದರುಗಳು ಅದರ ಜಡತ್ವ ಕಾಯ್ದುಕೊಳ್ಳುವುದಲ್ಲದೆ ಚಿಪ್ಪಿನ ಒಳಭಾಗವಾದ ಎಂಕೊಕಾರ್ಪ್ ನೀರು ಮತ್ತು ಪೋಷಕಾಂಶಗಳನ್ನು ಶೇಖರಿಸಿಟ್ಟುಕೊಳ್ಳುತ್ತವೆ. ಇವು ಎಂತಹದೇ ಬಲ ಪ್ರಯೋಗವಾದರೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಸಂಶೋಧಕರು ತಿಳಿಸಿದರು. ಸದ್ಯ ಸಿವಿಲ್ ಇಂಜಿನಿಯರುಗಳು ಮತ್ತು ವಸ್ತು ವಿಜ್ಞಾನ ತಜ್ಞರೊಂದಿಗೆ ಟೆಕ್ಸ್ಟೈಲ್ ಫೈಬರ್ ಹಾಗೂ ಕಾಂಕ್ರಿಟ್ ಮಿಶ್ರಣದಲ್ಲಿ ತೆಂಗಿನ ಚಿಪ್ಪು ಬಳಕೆ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸಂಶೋಧಕರಿಗೆ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಸಹಕಾರಿಯಾಗಲಿದೆ.

2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 45,000 ಕೋಟಿ ರೂಪಾಯಿಗಳ ಟೆಲಿಕಾಮ್ ಹಗರಣವನ್ನು ಚಾಪೆಯ ಅಡಿಯಲ್ಲಿ ಹುಗಿದು ಇಟ್ಟಿದೆ ಎಂದು ಕಾಂಗ್ರೆಸ್ ನಾಯಕ ಆರ್.ಎಸ್. ಸುರ್ಜಿವಾಲಾ ಅವರು ಆಪಾದಿಸಿದರು. ನಾನು ತಿನ್ನುವುದಿಲ್ಲ, ಇತರರು ತಿನ್ನಲೂ ಬಿಡುವುದಿಲ್ಲ’ ( ಖಾವೋಂಗಾ, ಖಾನೆ ದೂಂಗಾ) ಎಂಬುದಾಗಿ ಮೋದಿ ಅವರು ನೀಡಿದ್ದ ಭರವಸೆ ಅಪ್ಪಟ ಸುಳ್ಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೋದಿ ಸರ್ಕಾರದ ಕೈಗಾರಿಕಾ ಗೆಳೆಯರಿಗೆ ನೆರವಾಗುವ ಸಲುವಾಗಿ ನಡೆದಿರುವ 45,000 ಕೋಟಿ ರೂಪಾಯಿಗಳ ಟೆಲಿಕಾಮ್ ಹಗರಣವನ್ನು ಹೂತು ಹಾಕಲಾಗಿದೆ ಎಂದು ಅವರು ದೂರಿದರು. ದಂಡವನ್ನು ವಿಧಿಸದೆ ಇರುವುದು ಮಾತ್ರವೇ ಅಲ್ಲ ಅವುಗಳನ್ನು ರಕ್ಷಿಸಲೂ ಪ್ರಯತ್ನಿಸುವ ಮೂಲಕ ಮೋದಿ ಸರ್ಕಾರವು 6 ಟೆಲಿಕಾಮ್ ಕಂಪೆನಿಗಳಿಗೆ ನೆರವಾಗುತ್ತಿದೆ ಎಂದು ಅವರು ಆಪಾದಿಸಿದರು.
ನಿಯಂತ್ರಕರು ಮತ್ತು ಮಹಾ ಲೆಕ್ಕಪತ್ರ ಪರಿಶೋಧಕರ (ಸಿಎಜಿ) ವರದಿಯಲ್ಲಿ ಪ್ರಸ್ತಾಪಗೊಂಡಿರುವ ಟೆಲಿಕಾಮ್ ಹಗರಣವನ್ನು ಮೋದಿ ಸರ್ಕಾರ ಏಕೆ ಎತ್ತಿ ಹಿಡಿದಿಲ್ಲ. ಬದಲಾಗಿ ಅವರಿಂದ ಹಣ ವಸೂಲಿಯನ್ನು ತಡೆಯುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.
2016: ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಇನ್ನು ಮುಂದೆ ಆಫ್ಲೈನ್ ವಿಡಿಯೋ ವೀಕ್ಷಿಸಬಹುದಾದ ನೂತನ ಯೋಜನೆಯನ್ನು ಪರಿಚಯಿಸಲು ಫೇಸ್ಬುಕ್ ತಂಡ ತಯಾರಿಯಲ್ಲಿದೆ. ಮೂಲಗಳ ಪ್ರಕಾರ ಇದೇ 11 ರಿಂದ ಫೇಸ್ಬುಕ್ನಲ್ಲಿ ಸೇವೆ ದೊರೆಯಲಿದೆ ಎಂಬ ಮಾಹಿತಿ ಇದೆಇದರ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿರುವ ಫೇಸ್ಬುಕ್ ಎಲ್ಲ ಸರಿಹೋದರೆ ಶೀಘ್ರದಲ್ಲೆ ಸೇವೆ ಪ್ರಾರಂಭಿಸುವ ನಿರೀಕ್ಷೆಯಲ್ಲಿದೆ. ಯುಟ್ಯೂಬ್ಗೆ ಪೈಪೋಟಿ ನೀಡುವ ಉದ್ದೇಶದಿಂದ ಫೇಸ್ಬುಕ್ನಲ್ಲಿ ವಿಡಿಯೋ ಡೌನ್ಲೋಡ್ ಮಾಡಿ ಆಫ್ಲೈನ್ ಮೋಡ್ನಲ್ಲಿ ವಿಡಿಯೋ ವೀಕ್ಷಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೇಸ್ಬುಕ್ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಅಂತರ್ಜಾಲ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿಡಿಯೋ ಡೌನ್ಲೋಡ್ ಸುಗಮಗೊಳಿಸಲು ಪರೀಕ್ಷಾರ್ಥ ಪ್ರಯೋಗ ಜಾರಿಯಲ್ಲಿದೆ. ಹೇಗೆ ವಿಡಿಯೋ ಪಡೆದುಕೊಳ್ಳಬಹುದು ಮತ್ತು ಇನ್ನಿತರ ಮಾಹಿತಿಗಳನ್ನು ಸದ್ಯದಲ್ಲೆ ಫೇಸ್ಬುಕ್ ಬಹಿರಂಗಗೊಳಿಸಲಿದೆ.

2016: ನವದೆಹಲಿ: ವಿಶ್ವದಲ್ಲೇ ಅಗ್ಗದ, 251 ರೂಪಾಯಿಗಳ ಫ್ರೀಡಮ್ 251 ಸ್ಮಾರ್ಟ್ ಫೋನ್ ತಯಾರಕ ರಿಂಗಿಂಗ್ ಬೆಲ್ಸ್ ರಿಂಗಿಂಗ್ ಬೆಲ್ಸ್ ಎಲೆಗೆನ್ಸ್ ಮತ್ತು ರಿಂಗಿಂಗ್ ಬೆಲ್ಸ್ ಎಲೆಗೆಂಟ್ ಎಂಬ ಎರಡು ಹೊಸ ಫೀಚರ್ ಫೋನ್ಗಳನ್ನು ಅನಾವರಣಗೊಳಿಸಿತು. ಇವುಗಳ ಜೊತೆಗೆ ಮೂರು ಪವರ್ ಬ್ಯಾಂಕ್ಗಳು ಮತ್ತು ಒಂದು ಎಚ್.ಡಿ. ಟಿವಿಯನ್ನೂ ಬಿಡುಗಡೆ ಮಾಡಿತು. ಹೊಸ ಫೋನ್ಗಳು 5-ಅಂಗುಲ 720 ಪಿ ಡಿಸ್ಪ್ಲೇ ಮತ್ತು 1.3ಜಿಎಚ್ರೆಡ್ ಕ್ವಾಡ್-ಕೋರ್ ಪ್ರೊಸೆಸರ್ ಹಾಗೂ 1 ಜಿಬಿ ರಾಮ್ ಮತ್ತು 8 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿವೆ. ಸ್ಟೋರೇಜ್ನ್ನು ಮೈಕ್ರೊ ಎಸ್ಡಿ ಸ್ಲಾಟ್ ಮೂಲಕ 32 ಜಿಬಿಗಳಿಗೆ ಹೆಚ್ಚಿಸಿಕೊಳ್ಳಬಹುದು. ಎರಡೂ ಫೋನ್ಗಳು 8 ಮೆಗಾ ಪಿಕ್ಸೆಲ್ ರೀರ್ ಕ್ಯಾಮೆರಾ ಹಾಗೂ 3.2 ಮೆಗಾಪಿಕ್ಸಲ್ ಫ್ರಂಟ್ ಶೂಟರ್ ಹೊಂದಿವೆ. ವೈಫೈ, ಜಿಪಿಎಸ್, ಬ್ಲೂಟೂತ್ ಮತ್ತು ಎಫ್ಎಂ ಕನೆಕ್ಟಿವಿಟಿಯನ್ನೂ ಹೊಂದಿವೆ. ಫೋನ್ಗಳ ಬೆಲೆ 5000 ರೂಪಾಯಿಗಳ ಒಳಗಿದೆ ಎಂದು ರಿಂಗಿಂಗ್ ಬೆಲ್ಸ್ ಕಂಪೆನಿ ತಿಳಿಸಿತು..

2016: ಢಾಕಾ: ಢಾಕಾದ ರೆಸ್ಟೋರೆಂಟ್ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣ ಮರೆಯುವ ಮುನ್ನವೇ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದ ಮೈದಾನದ ಮೇಲೆ ಉಗ್ರರು ಬಾಂಬ್ ಸ್ಫೋಟ ನಡೆಸಿದರು. ಘಟನೆಯಲ್ಲಿ ಇಬ್ಬರು ಪೊಲೀಸರು ಮತ್ತು ಇಬ್ಬರು ದಾಳಿಕೋರರು ಸೇರಿದಂತೆ ನಾಲ್ವರು ಮೃತರಾದರು. ಢಾಕಾ ರೆಸ್ಟೋರೆಂಟ್ ಮೇಲೆ ನಡೆದ ದಾಳಿ ಕೇವಲ ಟ್ರೖಲರ್, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದಾಳಿ ನಡೆಸುತ್ತೇವೆ ಎಂದು ಐಸಿಸ್ ಎಚ್ಚರಿಕೆ ನೀಡಿದ ಒಂದೆರಡು ದಿನಗಳಲ್ಲೇ ರಂಜಾನ್ ಪ್ರಾರ್ಥನೆ ಮೇಲೆ ದಾಳಿ ನಡೆಯಿತು. ಬಾಂಗ್ಲಾದೇಶದ ಕಿಶೋರ್ ಗಂಜ್ನಲ್ಲಿರುವ ಶೋಲಾಕಿಯಾ ಮೈದಾನದಲ್ಲಿ ಬೆಳಗ್ಗೆ 9.45 ಸುಮಾರಿಗೆ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಯಿತು. ಮೈದಾನದ ಪ್ರವೇಶ ದ್ವಾರದ ಬಳಿ ಪೊಲೀಸ್ ತಂಡದ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದರು. ಮೈದಾನದಲ್ಲಿ ಸುಮಾರು 3 ಲಕ್ಷ ಜನರು ಪ್ರಾರ್ಥನೆ ಸಲ್ಲಿಸಲು ನೆರೆದಿದ್ದರು. ದಾಳಿ ಸಂದರ್ಭದಲ್ಲಿ ಓರ್ವ ಪೊಲೀಸ್ ಪೇದೆ ಮತ್ತು ಓರ್ವ ಉಗ್ರ ಮೃತ ಸೇರಿ ನಾಲ್ವರು ಮೃತರಾಗಿ, 13 ಜನರಿಗೆ ಗಾಯಗಳಾದವು. ಘಟನೆ ನಡೆದ ನಂತರ ಪ್ರಾರ್ಥನೆಗಾಗಿ ಆಗಮಿಸಿದ್ದವರನ್ನು ಸುರಕ್ಷಿತವಾಗಿ ಮೈದಾನದಿಂದ ಹೊರಗೆ ಕಳುಹಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಅಬು ಸಯೀಮ್ ತಿಳಿಸಿದರು. ದಾಳಿ ನಡೆಸಿದ ಉಗ್ರಗಾಮಿಗಳ ತಂಡದಲ್ಲಿ ಸುಮಾರು 6 ರಿಂದ 7 ಜನರಿದ್ದರು. ಉಗ್ರರು ಬಂದೂಕುಗಳು ಮತ್ತು ಹರಿತವಾದ ಆಯುಧವನ್ನು ಹೊಂದಿದ್ದರು. ಕೆಲವು ಉಗ್ರರು ಸ್ಥಳೀಯ ಶಾಲಾ ಕಟ್ಟಡವೊಂದರಲ್ಲಿ ಅವಿತುಕೊಂಡಿದ್ದರು.

2016: ಮುಂಬೈ:  ದೇಶ ವಿದೇಶಗಳಲ್ಲಿ ಕಳೆದೊಂದು ತಿಂಗಳಿಂದ ಭಾರಿ ಹವಾ ಎಬ್ಬಿಸಿದ್ದಸಲ್ಲುಅಲಿಯಾಸ್ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮ ಅಭಿನಯದಸುಲ್ತಾನ್ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ ವರ್ಷದ ದಾಖಲೆಯ ಆದಾಯ ಗಳಿಕೆಯಿಂದ ಸದ್ದು ಮಾಡಿತು. ಬಾಲಿವುಡ್ ಇತಿಹಾಸದ ಹಿಂದಿನ ದಾಖಲೆಗಳನ್ನೆಲ್ಲ ಬದಿಗೊತ್ತುವ ಸಾಧ್ಯತೆಗಳನ್ನು ತೋರಿಸಿದ ಸುಲ್ತಾನ್ಮೊದಲ ದಿನದಲ್ಲಿಯೇ ಬರೋಬ್ಬರಿ 40 ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ತಂದುಕೊಟ್ಟಿತು. ವರ್ಷದಲ್ಲಿಯೇ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದಫ್ಯಾನ್ಚಿತ್ರ ಮೊದಲ ದಿನ 19 ಕೋಟಿ ರೂ.ಸಂಪಾದಿಸಿತ್ತು. ಇದು ವರ್ಷದ ಗರಿಷ್ಠ ಗಳಿಕೆ ಎನಿಸಿಕೊಂಡಿತ್ತು. ಸುಲ್ತಾನ್ ಚಿತ್ರ ದುಪ್ಪಟ್ಟು ಗಳಿಕೆಯೊಂದಿಗೆ ದಾಖಲೆಯನ್ನು ಬ್ರೇಕ್ ಮಾಡಿತು. ಹರಿಯಾಣದ ಬಾಕ್ಸರ್ ಒಬ್ಬನ ಪ್ರೇಮ್ ಕಹಾನಿ ಕಥಾ ಹಂದರವನ್ನೊಳಗೊಂಡ ಚಿತ್ರ ಸುಲ್ತಾನ್, ದೇಶದ 4500 ಚಿತ್ರಮಂದಿರಗಳಲ್ಲಿ ಹಾಗೂ 1100 ವಿದೇಶಿ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಕಂಡಿತ್ತು. ಅಲಿ ಅಬ್ಬಾಸ್ ಜಾಫರ್ಸುಲ್ತಾನ್ಚಿತ್ರವನ್ನು ನಿರ್ದೇಶಿಸಿದ್ದರು..


2016: ಲಖನೌ: ಮುಸ್ಲಿಮ್ ಮಹಿಳೆಯರಿಗೆ ಬಾರಿಯ ರಂಜಾನ್ ಶುಭ ಸುದ್ದಿಯನ್ನು ತಂದಿತು. ಉತ್ತರ ಪ್ರದೇಶದ ಐಶಾಬಾಗ್ ಈದ್ಗಾ ಮಸೀದಿ ಇದೇ ಮೊತ್ತ ಮೊದಲ ಬಾರಿಗೆ ಮಹಿಳೆಯರಿಗೆ ನಮಾಜ್ ಮಾಡಲು ತನ್ನ ದ್ವಾರಗಳನ್ನು ತೆರೆಯಿತು. ಏನಿದ್ದರೂ, ನಮಾಜ್ ಪ್ರಾರ್ಥನೆ ಸಲ್ಲಿಸುವ ಮಹಿಳೆಯರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಈದ್-ಉಲ್-ಫಿತರ್ ನಮಾಜ್ ಮಾಡಬಯಸುವ ಮಹಿಳೆಯರಿಗಾಗಿ ಈದ್ಗಾದ ತೈಯಬ್ ಹಾಲ್ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಈದ್ಗಾದ ಇಮಾಮ್ ಮೌಲಾನಾ ಖಾಲಿದ್ ರಷೀದ್ ಫರಾನಿ ಮಹ್ಲಿ ಹೇಳಿದರು. ನೂರಾರು ಮಹಿಳೆಯರು ಇಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯ, ಮಸೀದಿ, ಪ್ರಾರ್ಥನಾ ಮಂದಿರಗಳಿಗೆ ಮಹಿಳಾ ಪ್ರವೇಶದ ವಿಷಯ ರಾಷ್ಟ್ರದಲ್ಲಿ ತೀವ್ರ ವಿವಾದ ಎಬ್ಬಿಸಿರುವ ಹಿನ್ನೆಲೆಯಲ್ಲಿ ಲಖನೌ ಬೆಳವಣಿಗೆ ಮಹತ್ವ ಪಡೆಯಿತು. ಕೇರಳದ ಶಬರಿಮಲೈ ದೇವಾಲಯ, ಮಹಾರಾಷ್ಟ್ರದ ಶನಿ ದೇವಾಲಯ, ಮುಂಬೈಯ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗುತ್ತಿರುವುದು ಪ್ರತಿಭಟನೆಗಳಿಗೆ ಕಾರಣವಾಗಿತ್ತು.

2008: ಸುಪ್ರಸಿದ್ಧ ಅಮರನಾಥ ಮಂದಿರದ ಆಡಳಿತ ಮಂಡಳಿಗೆ ಯಾತ್ರಿಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸುವ ಸಂಬಂಧ 39 ಎಕರೆಯಷ್ಟು ಅರಣ್ಯ ಭೂಮಿ ಹಸ್ತಾಂತರ ವಿವಾದದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಪಿಡಿಪಿ ಬೆಂಬಲ ಹಿಂದಕ್ಕೆ ಪಡೆದ 9 ದಿನಗಳ ನಂತರ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ವಿಧಾನಸಭೆಯಲ್ಲಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

2007: ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಶೃಂಗಾರ್ ವಾಣಿಜ್ಯ ಮಳಿಗೆ ಸಂಕೀರ್ಣದಲ್ಲಿ ಈದಿನ ರಾತ್ರಿ ದಿಢೀರನೆ ಬೆಂಕಿ ಅನಾಹುತ ಸಂಭವಿಸಿತು. ಸಂಕೀರ್ಣದ ಜಂಗಲ್ ಲಾಜಸ್ ಅಂಡ್ ರೆಸಾರ್ಟ್ಸ್ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹತ್ತಿಕೊಂಡಿತು.

2007: ಪಾಕಿಸ್ಥಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ರಾವಲ್ಪಿಂಡಿಯಲ್ಲಿ ಪ್ರಯಾಣಿಸುತ್ತಿದ್ದ ವಿಮಾನದತ್ತ ಉಗ್ರಗಾಮಿಗಳು ರಾಕೆಟ್ ಮತ್ತು ಗುಂಡಿನ ದಾಳಿ ನಡೆಸಿದರು. ಆದರೆ ಮುಷರಫ್ ಪ್ರಾಣಾಪಾಯದಿಂದ ಪಾರಾದರು. ರನ್ವೇಗೆ ಹತ್ತಿರದಲ್ಲೇ ಇದ್ದ ಮನೆಯೊಂದರಿಂದ ಈ ದಾಳಿ ನಡೆಸಲಾಯಿತು.

2007: ಪೊಲೀಸರು ದೂರು ದಾಖಲಿಸಿಕೊಳ್ಳದೇ ಇರುವುದರಿಂದ ರೋಸಿದ ಪೂಜಾ ಚೌಹಾಣ್ ಎಂಬ ಮಹಿಳೆಯೊಬ್ಬರು ಗುಜರಾತಿನ ರಾಜಕೋಟದಲ್ಲಿ ಅರೆ ನಗ್ನಾವಸ್ಥೆ ನಡಿಗೆ ನಡೆಸಿ ಪ್ರತಿಭಟಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ಸೂಚಿಸಿತು. ವರದಕ್ಷಿಣೆ ಹಿಂಸೆ ಪ್ರಕರಣವನ್ನು ದಾಖಲಿಸಲು ಪೊಲೀಸರು ನಿರಾಕರಿಸಿದ್ದನ್ನು ವಿರೋಧಿಸಿ ಪೂಜಾ ಚೌಹಾಣ್ ಅರೆನಗ್ನರಾಗಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು.

2007: ತುಮಕೂರಿನ `ಅನನ್ಯ ಪ್ರಕಾಶನ' ಸಂಸ್ಥೆಯು ಪ್ರಸಕ್ತ ಸಾಲಿನ `ಕೆ.ಸಾಂಬಶಿವಪ್ಪ' ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಗೆ ಪತ್ರಕರ್ತ ರಘುನಾಥ ಚ.ಹ ಅವರ `ಹೊರಗೂ ಮಳೆ, ಒಳಗೂ ಮಳೆ' ಕಥಾ ಸಂಕಲವನ್ನು ಆಯ್ಕೆ ಮಾಡಿತು.

2007: ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರು ಸ್ಥಾಪಿಸಿದ್ದ ಪ್ರತಿಭಾ ಮಹಿಳಾ ಬ್ಯಾಂಕ್ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕ್ ಒಕ್ಕೂಟದ ನಿರ್ದೇಶಕ ಕೆ.ಡಿ.ವೋರಾ ಸ್ಪಷ್ಟಪಡಿಸಿದರು. 2001- 2004ರ ಅವಧಿಯಲ್ಲಿ ಸಹಕಾರ ಕ್ಷೇತ್ರದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟಿನಿಂದಾಗಿ ಸುಮಾರು 150 ಸಹಕಾರ ಬ್ಯಾಂಕುಗಳು ದಿವಾಳಿ ಎದ್ದವು. ಇವುಗಳಲ್ಲಿ ಪ್ರತಿಭಾ ಮಹಿಳಾ ಬ್ಯಾಂಕ್ ಕೂಡ ಒಂದು ಎಂದು ಅವರು ಹೇಳಿದರು.

2007: ಪ್ರತಿ ಚುನಾವಣೆಯ ನಂತರ ಮೀಸಲು ಕ್ಷೇತ್ರಗಳನ್ನು ಬದಲಾವಣೆ ಮಾಡಲು ಕ್ಷೇತ್ರ ಮರುವಿಂಗಡಣೆ ಆಯೋಗಕ್ಕೆ ಆದೇಶ ನೀಡಬೇಕೆಂದು ಪರಿಶಿಷ್ಟ ಪಂಗಡಕ್ಕೆ ಸೇರಿದ ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶಾಂತವ್ವ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದರು. ಸ್ವಾತಂತ್ರ್ಯ ಸಿಕ್ಕಿದ ನಂತರ ಕೇವಲ ಎರಡು ಬಾರಿ ಮೊದಲು 1952ರಲ್ಲಿ ನಂತರ 1972ರಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದಿದೆ. ಮೂರನೆಯ ಆಯೋಗ 30 ವರ್ಷಗಳ ನಂತರ ರಚನೆಯಾಗಿದೆ. ಮೀಸಲು ಕ್ಷೇತ್ರಗಳನ್ನು ಚುನಾವಣೆಯ ನಂತರ ಬದಲಾಯಿಸದೆ ಹೋದರೆ ಈಗಿನ ಮೀಸಲು ಕ್ಷೇತ್ರಗಳು ಮುಂದಿನ 25-30 ವರ್ಷಗಳ ಕಾಲ ಮುಂದುವರಿಯಲಿವೆ. ಇದರಿಂದ ಬೇರೆ ಕ್ಷೇತ್ರಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ರಾಜಕೀಯ ಮೀಸಲು ಸೌಲಭ್ಯದಿಂದ ವಂಚಿತವಾಗಲಿವೆ ಎಂದು ಶಾಂತವ್ವ ಪ್ರತಿಪಾದಿಸಿದರು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಳಸಲು ರಷ್ಯಾ ನಿರ್ಮಿತ ಶೌಚಗೃಹವೊಂದನ್ನು ನಾಸಾ ಖರೀದಿಸಿತು. ಅದಕ್ಕಾಗಿ 19 ಮಿಲಿಯನ್ ಯುರೋ ನೀಡಲು ಅದು ಒಪ್ಪಿಕೊಂಡಿತು. ಇದು ಭೂಮಿಯ ಮೇಲಿನ ಪಾಯಿಖಾನೆಗಿಂತ ಅತ್ಯಂತ ದುಬಾರಿ. ಆದರೆ, ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮದೇ ಸ್ವಂತ ಶೌಚಗೃಹ ನಿರ್ಮಿಸಲು ತಗಲುವ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಇದು ಲಭಿಸಿತು ಎಂದು ನಾಸಾ ಹೇಳಿತು. ಅಮೆರಿಕ ಸ್ವಾಮ್ಯದ ಬಾಹ್ಯಾಕಾಶ ನಿಲ್ದಾಣಕ್ಕಾಗಿ 2008ಕ್ಕೆ ರಷ್ಯಾವು ಈ ಶೌಚಗೃಹವನ್ನು ನಿರ್ಮಿಸಿ ಕೊಡುವುದು.

2007: ಕಳೆದ ಫೆಬ್ರುವರಿಯಲ್ಲಿ ಸಂಭವಿಸಿದ ಸಮ್ ಜೌತ ಎಕ್ಸ್ಪ್ರೆಸ್ ರೈಲು ದುರಂತದಲ್ಲಿ ಸಾವನ್ನಪ್ಪಿದ 34 ಮಂದಿ ಪಾಕಿಸ್ಥಾನಿ ನಾಗರಿಕರ ಸಂಬಂಧಿಕರಿಗೆ ಹತ್ತು ಲಕ್ಷ ಪಾಕಿಸ್ಥಾನಿ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ಭಾರತವು ಇಸ್ಲಾಮಾಬಾದಿನಲ್ಲಿ ನಡೆದ ಸಮಾರಂಭದಲ್ಲಿ ಈದಿನ ನೀಡಿತು. ಸಮ್ ಜೌತ ಎಕ್ಸ್ಪ್ರೆಸ್ ಬಾಂಬ್ ಸ್ಫೋಟದಲ್ಲಿ ಭಾರತ ಮತ್ತು ಪಾಕಿಸ್ಥಾನ ಸೇರಿದಂತೆ ಒಟ್ಟು 69 ಮಂದಿ ಮೃತರಾಗಿದ್ದರು.

2007: ಹರಿಹರ ತಾಲ್ಲೂಕಿನ ರೈತ ಸಂಘದ ಮುಖಂಡ ಗೋಪಾಲರಾವ್ ಅವರ ತೆಂಗಿನ ತೋಟದಲ್ಲಿ ಈದಿನ ಸಾರ್ವಜನಿಕರಿಗೆ ನೀರಾ ನೀಡಿ 'ಸಾರಾಯಿ ಬದಲು ನೀರಾ ಕುಡಿಯಿರಿ, ಆರೋಗ್ಯ ರಕ್ಷಿಸಿಕೊಳ್ಳಿ' ಪ್ರಚಾರ ಆಂದೋಲನವನ್ನು ಹರಿಹರ ತಾಲ್ಲೂಕು ರೈತಸಂಘ ಆರಂಭಿಸಿತು. ನೀರಾ ರಾಸಾಯನಿಕ ಮುಕ್ತ, ನಿರಪಾಯಕಾರಿ, ಜೊತೆಗೆ ನುಸಿ ರೋಗದಿಂದ ತೆಂಗಿನ ಮರಗಳನ್ನೂ ಪಾರುಮಾಡುತ್ತದೆ ಎಂಬುದು ಅವರ ವಿವರಣೆ.

2007: ಮುಂಬೈ ಷೇರು ಪೇಟೆಯಲ್ಲಿ ಇದೇ ಮೊದಲ ಬಾರಿಗೆ ಷೇರು ಪೇಟೆ ಸಂವೇದಿ ಸೂಚ್ಯಂಕ 15,000ರ ಗಡಿ ಸ್ಪರ್ಶಿಸಿತು.

2006: ದಕ್ಷಿಣ ಕನ್ನಡದ ಯುವ ನಿರ್ದೇಶಕ ರಾಮಚಂದ್ರ ಪಿ.ಎನ್. ಅವರ ಚೊಚ್ಚಲ ತುಳು ಚಿತ್ರ `ಸುದ್ದ' (ತಿಥಿ) ಓಷಿಯಾನ್ ಸಿನೆಫ್ಯಾನ್ ಆಯೋಜಿಸಿದ ಎಂಟನೇ ಏಷ್ಯಾ ಚಲನಚಿತ್ರೋತ್ಸವದಲ್ಲಿ ಜಾಗತಿಕ ಪ್ರೀಮಿಯರ್ನ ಗೌರವ ಪಡೆಯಿತು. ಇದೇ ವಿಭಾಗದಲ್ಲಿ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಸಂತೋಷ ಶಿವನ್ ಅವರ ಮಲಯಾಳಿ ಚಿತ್ರ `ಆನಂದಭದ್ರಂ', ಸುಮಿತ್ರಾ ಭಾವೆ ಮತ್ತು ಆನಂದ ಸುಕತಂಕರ್ ಅವರ ಮರಾಠಿ ಚಿತ್ರ `ನಿಶಾಲ್' ಕೂಡಾ ಸ್ಪರ್ಧೆಗೆ ಆಯ್ಕೆಯಾದವು.

2006: ಬೆಂಗಳೂರು - ಮೈಸೂರು ಕಾರಿಡಾರ್ ರಸ್ತೆಗೆ ಮೈಸೂರು ಕಡೆಯಿಂದ ಕಾಮಗಾರಿ ಆರಂಭಿಸಲು ನಂದಿ ಇನ್ಫ್ರಾಸ್ಟ್ರಕ್ಚರ್ ಎಂಟರ್ಪ್ರೈಸಸ್ (ನೈಸ್) ನಿರ್ದೇಶಕ ಅಶೋಕ ಖೇಣಿ ಅವರು ನಡೆಸಿದ ಭಗೀರಥ ಯತ್ನ ಕೈಗೂಡಲಿಲ್ಲ. ಮುಡಾ ಅಧಿಕಾರಿಗಳು ಪೊಲೀಸರ ಸರ್ಪಗಾವಲು ಹಾಕಿ ಖೇಣಿ ಅವರ ಎಲ್ಲಾ ಯತ್ನಗಳನ್ನು ವಿಫಲಗೊಳಿಸಿದರು.

2006: ಮಾಜಿ ಸಚಿವ, ಚಿತ್ರ ನಿರ್ಮಾಪಕ ಎಸ್. ರಮೇಶ್ (53) ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

1981: `ಮೃತ್ಯುಪಾನೀಯ' ಕಳ್ಳಬಟ್ಟಿ ಸಾರಾಯಿಗೆ ಬೆಂಗಳೂರು ನಗರದಲ್ಲಿ 132 ಮಂದಿ ಆಹುತಿ. ವಿವಿಧ ಆಸ್ಪತ್ರೆಗಳಲ್ಲಿಇತರ 200 ಮಂದಿಯ ಜೀವನ್ಮರಣ ಹೋರಾಟ. ರಾಜ್ಯ ಇತಿಹಾಸದಲ್ಲೇ ಸಂಭವಿಸಿದ ಈ ಭೀಕರ ದುರಂತದಲ್ಲಿ ಸತ್ತವರಲ್ಲಿ 40 ಮಂದಿ ಮಹಿಳೆಯರು.

1970: ಪೆಂಗ್ವಿನ್ ಬುಕ್ನ ಸ್ಥಾಪಕ ಸರ್. ಅಲನ್ ಲೇನ್ ನಿಧನರಾದರು. 1902ರ ಸೆಪ್ಟೆಂಬರ್ 21ರಂದು ಬ್ರಿಸ್ಟಲ್ನಲಿ ್ಲಜನಿಸಿದ ಇವರು ಪುಸ್ತಕ ಪ್ರಕಾಶನದಲ್ಲಿ ಹಿರಿಮೆ ಸಾಧಿಸಿದವರು.

1928: ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ವೈದ್ಯ ಸಾಹಿತಿ ಅನ್ನಪೂರ್ಣಮ್ಮ ಅವರು ವೇದ ಪಾರಂಗತ ಚನ್ನಕೇಶವ ಶಾಸ್ತ್ರಿಗಳು-ಮೀನಾಕ್ಷಮ್ಮ ದಂಪತಿಯ ಪುತ್ರಿಯಾಗಿ ಸಂಸ್ಕೃತ ಗ್ರಾಮ ಮತ್ತೂರಿನಲ್ಲಿ ಜನಿಸಿದರು.

No comments:

Post a Comment