ಇಂದಿನ ಇತಿಹಾಸ History Today ಜುಲೈ 02
2018: ಕುರುಕ್ಷೇತ್ರ: ಮಹಾಭಾರತದಲ್ಲಿ ಶ್ರೀಕೃಷ್ಣನು
ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ, ಹರಿಯಾಣದ ಕುರುಕ್ಷೇತ್ರದಲ್ಲಿ ತಿರುಮಲ ತಿರುಪತಿ ದೇವಸ್ಥಾನ
ಮಂಡಳಿ (ಟಿಟಿಡಿ) ವತಿಯಿಂದ ವೆಂಕಟೇಶ್ವರ ದೇವಾಲಯವನ್ನು ನಿರ್ಮಿಸಲಾಗಿದ್ದು, ಅದನ್ನು ಭಕ್ತರಿಗಾಗಿ
ತೆರೆಯಲಾಯಿತು. ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ
ಭಗವದ್ಗೀತೆಯನ್ನು ಕುರುಕ್ಷೇತ್ರದಲ್ಲಿ ಬೋಧಿಸಿದ್ದರಿಂದ ಆ ಸ್ಥಳಕ್ಕೆ ವಿಶೇಷ ಮಹತ್ವವಿದೆ. ಹೀಗಾಗಿ
ಅಲ್ಲಿ ಟಿಟಿಡಿ ವೆಂಕಟೇಶ್ವರ ದೇವಾಲಯ ನಿರ್ಮಿಸುವ ನಿರ್ಧಾರ ಕೈಗೊಂಡಿತ್ತು. ಬ್ರಹ್ಮ
ಸರೋವರದ ಸಮೀಪ ೫.೫೨ ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ಉತ್ತರ ಭಾರತದಲ್ಲೇ
ಅತಿದೊಡ್ಡ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು
೩೫ ಕೋಟಿ ರೂ. ವೆಚ್ಚದ ತಿರುಪತಿ ಬಾಲಾಜಿ ದೇವಾಲಯಕ್ಕೆ ಕುರುಕ್ಷೇತ್ರ ಅಭಿವೃದ್ಧಿ ಮಂಡಳಿ ಸ್ಥಳ ಒದಗಿಸಿತ್ತು.
೨೦೧೨ರ ಜನವರಿಯಲ್ಲಿ ದೇಗುಲ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಸಹಸ್ರಾರು ಕಾರ್ಮಿಕರು ದೇವಾಲಯ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕುರುಕ್ಷೇತ್ರದಲ್ಲಿ ಒಟ್ಟು ಮೂರು ದೇವಾಲಯಗಳನ್ನು
ನಿರ್ಮಿಸಲಾಗಿದೆ. ಒಂದು ದೇವಾಲಯದ ಗರ್ಭಗುಡಿಯಲ್ಲಿ ವಿಷ್ಣುವಿನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದರೆ,
ವಿಷ್ಣುವಿನ ಪತ್ನಿಯರಾದ ಭೂದೇವಿ ಮತ್ತು ಶ್ರೀದೇವಿಗೆ ಪ್ರತ್ಯೇಕ ದೇವಾಲಯ ನಿರ್ಮಿಸಲಾಗಿದೆ. ದೇವಾಲಯದಲ್ಲಿ
ಮೂರ್ತಿ ಪ್ರತಿಷ್ಠಾಪನೆ ಮತ್ತು ವೈದಿಕ ಕಾರ್ಯಗಳಿಗಾಗಿ ತಿರುಪತಿ ದೇವಾಲಯದಿಂದ ೭೦ಕ್ಕೂ ಅಧಿಕ ಅರ್ಚಕರು
ಕುರುಕ್ಷೇತ್ರಕ್ಕೆ ತೆರಳಿದ್ದರು. ಹರಿಯಾಣ
ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ದೇವಾಲಯವನ್ನು ಉದ್ಘಾಟಿಸಿದರು. ಇಲ್ಲಿ ಭಕ್ತರಿಗೆ ಕುರುಕ್ಷೇತ್ರದಲ್ಲಿ
ಎಲ್ಲ ಸೇವೆ ಮತ್ತು ದರ್ಶನ ದೊರೆಯಲಿದ್ದು, ಪ್ರವಾಸೋದ್ಯಮಕ್ಕೂ ಇದರಿಂದ ಅನುಕೂಲವಾಗಲಿದೆ. ದೇವಾಲಯದಲ್ಲಿ
ಬೆಳಗ್ಗೆ ೬ರಿಂದ ರಾತ್ರಿ ೯ ರವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
2018: ಬೆಂಗಳೂರು: ವಿಧಾನಸಭೆಯ ವಿರೋಧ
ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿ(ಎಸ್)-ಕಾಂಗ್ರೆಸ್
ಸಮ್ಮಿಶ್ರ ಸರ್ಕಾರವು ತಾವು ಕೇಳಿದ್ದ ನಿವಾಸಕ್ಕೆ ಬದಲಾಗಿ
ತನಗೆ ನೀಡಿದ ಬೇರೆ ಬಂಗಲೆಯನ್ನು ತಿರಸ್ಕರಿಸಿದರು.
ಯಡಿಯೂರಪ್ಪ ಅವರು ರೇಸ್ ಕೋರ್ಸ್ ರಸ್ತೆಯ ನಂ.೨ ಬಂಗಲೆಯನ್ನು ತಮಗೆ ನೀಡುವಂತೆ ಕೋರಿದ್ದರು. ೨೦೧೧ರವರೆಗೆ
ತಾವು ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ನಂ ೨ರ ಬಂಗಲೆಯಲ್ಲಿ ವಾಸವಾಗಿದ್ದರು. ಈ ಬಂಗಲೆ
ತಮ್ಮ ಪಾಲಿಗೆ ‘ಅದೃಷ್ಟ’ದ ಬಂಗಲೆ ಎಂಬುದಾಗಿ ಭಾವಿಸಿರುವ ಯಡಿಯೂರಪ್ಪ
ಅವರು ವಿಧಾನಸಭೆಯ ಏಕೈಕ ದೊಡ್ಡ ಪಕ್ಷದ ನಾಯಕನಾಗಿರುವ ತಮಗೆ ಪಕ್ಷದ ಶಾಸಕರ ಜೊತೆ ಸಭೆ ನಡೆಸುವುದೇ
ಮತ್ತಿತರ ಕೆಲಸಕ್ಕೆ ಸಾಕಷ್ಟು ವಿಶಾಲವಾಗಿರುವ ಈ ಬಂಗಲೆ ಅನುಕೂಲಕರ ಎಂಬ ಕಾರಣ ನೀಡಿ ಅದನ್ನೇ ತಮಗೆ
ಮಂಜೂರು ಮಾಡುವಂತೆ ಕೋರಿದ್ದರು. ಜೂನ್ ೩೦ರಂದು ಹೊರಡಿಸಲಾಗಿರುವ
ಸರ್ಕಾರಿ ಸುತ್ತೋಲೆಯ ಪ್ರಕಾರ ಯಡಿಯೂರಪ್ಪ ಅವರಿಗೆ ರೇಸ್ ಕೋರ್ಸ್ ರಸ್ತೆಯ ನಂ.೨ರ ನಿವಾಸದ ಬದಲಿಗೆ
ನಂ.೪ ನಿವಾಸವನ್ನು ನೀಡಲಾಯಿತು. ತಮ್ಮ ಆಯ್ಕೆಯ ಬಂಗಲೆಯನ್ನು ನೀಡದೇ ಇರುವುದರಿಂದ ಭ್ರಮ ನಿರಸನಗೊಂಡಿರುವ
ಯಡಿಯೂರಪ್ಪ ಅವರು ‘ಮುಖ್ಯಮಂತ್ರಿಯವರು ನನ್ನ ಮನವಿಯನ್ನು ಮನ್ನಿಸದೇ ಇರುವ ಕಾರಣ ನಾನು ಸರ್ಕಾರವು
ನನಗೆ ನೀಡಿರುವ ಮನೆಯನ್ನು ತೆಗೆದುಕೊಳ್ಳುವುದಿಲ್ಲ. ನಾನು ಬೆಂಗಳೂರಿಗೆ ಬಂದಾಗ ಡಾಲರ್‍ಸ್ ಕಾಲೋನಿಯಲ್ಲಿ
ಇರುವ ನನ್ನ ಸ್ವಂತ ನಿವಾಸದಲ್ಲೇ ವಾಸ್ತವ್ಯ ಇರುತ್ತೇನೆ’ ಎಂದು ಹೇಳುವ ಮೂಲಕ ತಮ್ಮ
ಅತೃಪ್ತಿಯನ್ನು ಪ್ರಕಟಿಸಿದರು. ಯಡಿಯೂರಪ್ಪ ಅವರು ನಂ.೨ ಬಂಗಲೆಯಲ್ಲಿ ತಾವು ವಾಸವಿದ್ದಾಗ ‘ವಾಸ್ತು’ವಿಗೆ ಅನುಗುಣವಾಗಿ ಹಲವಾರು ಬದಲಾವಣೆಗಳನ್ನು ಮಾಡಿಸಿದ್ದರು.
ಈ ಮನೆಯ ವಾಸ್ತು ಈ ಹಿಂದೆ ತಮಗೆ ಎರಡು ಬಾರಿ ಮುಖ್ಯಮಂತ್ರಿಯಾಗಲು ನೆರವಾಗಿತ್ತು ಎಂದು ಯಡಿಯೂರಪ್ಪ
ನಂಬಿದ್ದಾರೆ ಎಂದು ಮೂಲಗಳು ಹೇಳಿದವು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಂ.೪ ಬಂಗಲೆ ಮಂಜೂರು
ಮಾಡಿದ ನಿರ್ಣಯದ ಹಿಂದೆ ಜೆಡಿ(ಎಸ್) ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪ್ರಭಾವವಿದೆ
ಎಂದು ಯಡಿಯೂರಪ್ಪ ಅವರ ನಿಕಟ ಮೂಲಗಳು ಹೇಳಿದವು. ಜ್ಯೋತಿಷ್ಯ ಮತ್ತು ವಾಸ್ತುವಿನಲ್ಲಿ ಬಲವಾದ ನಂಬಿಕೆ
ಇರುವ ದೇವೇಗೌಡ ಅವರು ನಂ.೨ ಬಂಗಲೆಯನ್ನು ಯಡಿಯೂರಪ್ಪ ಅವರಿಗೆ ನೀಡಿದರೆ ಅವರು ಮತ್ತೆ ಮುಖ್ಯಮಂತ್ರಿಯಾಗುವ
ಸಾಧ್ಯತೆ ಇದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಪುತ್ರ-
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ನಾಯಕನ ಮನವಿಯನ್ನು ಮನ್ನಿಸದಂತೆ ಸಲಹೆ ಮಾಡಿದ್ದಾರೆ
ಎಂದು ಮೂಲಗಳು ಆಪಾದಿಸಿದವು. ಯಡಿಯೂರಪ್ಪ ಅವರು ಮುಖ್ಯಮಂತ್ರಿ
ಸ್ಥಾನದಿಂದ ಕೆಳಗಿಳಿದ ಬಳಿಕ ‘ರೇಸ್ ವ್ಯೂ ಕಾಟೇಜ್’ನಲ್ಲಿ ಮಾಜಿ ಪರಿಸರ
ಸಚಿವ ಬಿ. ರಮಾನಾಥ ರೈ ವಾಸವಾಗಿದ್ದರು. ಈಗ ಈ ಬಂಗಲೆಯನ್ನು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರಿಗೆ
ಮಂಜೂರು ಮಾಡಲಾಗಿದೆ. ವಿರೋಧ
ಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರು ಕ್ಯಾಬಿನೆಟ್ ಸಚಿವ ಸ್ಥಾನಮಾನವನ್ನು ಹೊಂದಿದ್ದು ಸರ್ಕಾರಿ ಬಂಗಲೆಗೆ
ಅರ್ಹತೆ ಪಡೆದಿದ್ದಾರೆ.
2018: ನವದೆಹಲಿ: ಸುಪ್ರೀಂಕೋರ್ಟ್ ತೀರ್ಪಿಗೆ
ಅನುಗುಣವಾಗಿ ನ್ಯಾಯಾಧಿಕರಣವು ನಿಗದಿ ಪಡಿಸಿದ ರೀತಿಯಲ್ಲಿ
ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ
ಸೂಚನೆ ನೀಡಿತು. ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ
ಜುಲೈ ತಿಂಗಳ ನೀರು ಹರಿಸಿ ಎಂದು ಪ್ರಾಧಿಕಾರ ಹೇಳಿತು. ಜುಲೈ ತಿಂಗಳಿನಲ್ಲಿ ಕರ್ನಾಟಕ ೩೪ಟಿಎಂಸಿ ನೀರು
ಬಿಡಬೇಕೆಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಎಷ್ಟು
ಪ್ರಮಾಣದ ನೀರು ಬಿಡಬೇಕು ಎಂದು ಪ್ರಾಧಿಕಾರ ಈದಿನ ಸ್ಪಷ್ಟವಾಗಿ ತಿಳಿಸಿಲ್ಲ ಎಂದು ವರದಿ ಹೇಳಿತು. ಈ ಮಧ್ಯೆ, ಕರ್ನಾಟಕ ಈಗಾಗಲೇ ಜೂನ್ ತಿಂಗಳಿನಲ್ಲಿ ನಿಗದಿಗಿಂತ
ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿದೆ. ಸುಮಾರು ೨.೫ ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬಿಡಲಾಗಿದೆ.
ಹೀಗಾಗಿ ಜುಲೈ ತಿಂಗಳಲ್ಲಿ ೩೧ ಟಿಎಂಸಿ ನೀರು ಹರಿಸಬೇಕಾಗಿದೆ. . ೧೪.೭೫ ಟಿಎಂಸಿ ನೀರನ್ನು ಕರ್ನಾಟಕಕ್ಕೇ
ಉಳಿಸಿಕೊಳ್ಳಲು ಹಿಂದೆ ಆದೇಶಿಸಿರುವ ಹಿನ್ನೆಲೆಯಲ್ಲಿ ಇದರ ಲೆಕ್ಕವನ್ನು ಕಳುಹಿಸಬೇಕಾಗಿರುವ ಒಟ್ಟು
ನೀರಿನ ಪ್ರಮಾಣದಲ್ಲಿ ಕಳೆಯಬೇಕಾಗುತ್ತದೆ. ಆದ್ದರಿಂದ ಕೇಂದ್ರ ಜಲ ಆಯೋಗದಿಂದ ಅಂಕಿ-ಅಂಶ ಪಡೆದು ನೀರನ್ನು
ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಕರ್ನಾಟಕ ಹೇಳಿತು. ಸಂಗ್ರಹ ಎಷ್ಟು, ಒಳಹರಿವು, ಹೊರಹರಿವು ಫೈನಲ್ ಲೆಕ್ಕಾಚಾರ
ಮಾಡಿ ಅಂತಿಮ ಪ್ರಮಾಣವನ್ನು ರೆಗ್ಯುಲೇಟರ್ ಹೇಳ್ತಾರೆ. ಸಭೆಯಲ್ಲಿ ಇದಕ್ಕೆ ಕರ್ನಾಟಕ ವಿರೋಧವನ್ನೂ
ವ್ಯಕ್ತಪಡಿಸಿತು. ಕೇಂದ್ರ ಜಲಮಂಡಳಿ ಮತ್ತು ಕಾವೇರಿ
ನದಿ ನೀರು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷ ಎಸ್. ಮಸೂದ್ ಹುಸೇನ್ ನೇತೃತ್ವದಲ್ಲಿ ಸೋಮವಾರ ಪ್ರಾಧಿಕಾರದ
ಚೊಚ್ಚಲ ಸಭೆ ನಡೆಯಿತು. ಸಭೆಯಲ್ಲಿ ಕಾವೇರಿ ನದಿ ನೀರು
ಹಂಚಿಕೆ ಕುರಿತು ಚರ್ಚೆ ನಡೆಸಿ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಲಾಯಿತು. ಸಭೆ
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಈ
ಸಭೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗವಹಿಸಿದ್ದರು.
ಅವ್ರು
ಹೇಳಿದ್ರೆ, ಬಿಡೋದಿಕ್ಕೆ ನೀರು ಬೇಡ್ವೇ: ತಮಿಳುನಾಡಿಗೆ ನೀರು ಬಿಡಬೇಕೆಂಬ ಕಾವೇರಿ ನದಿ ನೀರು ನಿರ್ವಹಣಾ
ಪ್ರಾಧಿಕಾರ ಸೂಚಿಸಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಡಿಕೆ ಶಿವಕುಮಾರ್,
ತರಾತುರಿಯಲ್ಲಿ ನಾನು ಏನನ್ನೂ ಹೇಳೋದಿಲ್ಲ. ತಮಿಳುನಾಡು ಅಗತ್ಯಕ್ಕಿಂತ ಹೆಚ್ಚು ನೀರಿನ ಬೇಡಿಕೆ ಇಟ್ಟಿದೆ.
ಅವ್ರು ಹೇಳಿದ ಕೂಡಲೇ ಬಿಡೋದಕ್ಕೆ ನೀರು ಬೇಕಲ್ಲ ಎಂದು ಪ್ರಶ್ನಿಸಿದರು.
2018: ನವದೆಹಲಿ: ರಾಷ್ಟ್ರದಲ್ಲಿ ಉದ್ಯೋಗಗಳ ಅಭಾವ ಇದೆ ಎಂಬ ಪ್ರತಿಪಾದನೆಗಳನ್ನು ಇಲ್ಲಿ ನಿರಾಕರಿಸಿದ ಪ್ರಧಾನಿ ನರೇಂದ್ರ
ಮೋದಿ ಅವರು ’ಉದ್ಯೋಗ ಸೃಷ್ಟಿ ಕುರಿತ ಮಾಹಿತಿಯ ಕೊರತೆಯು ವಿರೋಧ ಪಕ್ಷಗಳಿಗೆ ಸರ್ಕಾರವನ್ನು ದೂಷಿಸಲು
ಅವಕಾಶವನ್ನು ಒದಗಿಸಿಕೊಟ್ಟಿದೆ’ ಎಂದು ಹೇಳಿದರು. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ
’ಇಪಿಎಫ್ ಮಾಹಿತಿಯನ್ನು ಆಧರಿಸಿದ ಅಧ್ಯಯನ ಒಂದರ ಪ್ರಕಾರ ಕಳೆದ ವರ್ಷ ಔಪಚಾರಿಕ ರಂಗದಲ್ಲಿ ೭೦ ಲಕ್ಷಕ್ಕೂ
ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಇದರ ಜೊತೆಗೆ ಅನೌಪಚಾರಿಕ ರಂಗಗಳಲ್ಲಿಯೂ ಉದ್ಯೋಗ ಸೃಷ್ಟಿಯಾಗಿದೆ’ ಎಂದು ನುಡಿದರು. ಭಾರತದಲ್ಲಿ ಹೇಗೆ ಬೇಗನೇ ಬಡತನ ಇಳಿಮುಖವಾಗುತ್ತಿದೆ ಎಂಬುದನ್ನು
ತೋರಿಸುವ ಅಂತಾರಾಷ್ಟ್ರೀಯ ವರದಿಯೊಂದನ್ನು ಉಲ್ಲೇಖಿಸಿದ ಮೋದಿ ’ಉದ್ಯೋಗದ ಅಭಾವವಿದ್ದರೆ ಇದು ಸಾಧ್ಯವೇ?’
ಎಂದು ಪ್ರಶ್ನಿಸಿದರು. ‘ಒಂದು ಕೋಟಿಗೂ ಹೆಚ್ಚು ಮನೆಗಳನ್ನು
ಕಳೆದ ಒಂದು ವರ್ಷದ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿರಬಹುದು?
ತಿಂಗಳಿಗೆ ರಸ್ತೆ ನಿರ್ಮಾಣದ ಕೆಲಸ ದುಪ್ಪಟ್ಟಾದರೆ, ರೈಲ್ವೇ, ಹೆದ್ದಾರಿ, ಏರ್ ಲೈನ್ಸಿನಲ್ಲಿ ಅಗಾಧ
ಪ್ರಗತಿಯಾದರೆ ಇದು ಏನನ್ನು ಸೂಚಿಸುತ್ತದೆ? ಹೆಚ್ಚು ಜನರಿಗೆ ಉದ್ಯೋಗ ನೀಡದೇ ಇದ್ದರೆ ಇದು ಸಾಧ್ಯವಾಗುತ್ತದೆಯೇ?’
ಎಂದು ಪ್ರಧಾನಿ ಕೇಳಿದರು. ಯುವಕರಿಗೆ ಉದ್ಯೋಗಾವಕಾಶಗಳ
ಅಭಾವ ಇದೆ ಎಂಬ ವಿರೋಧಿ ಆಪಾದನೆಗಳನ್ನು ಅಲ್ಲಗಳೆದ ಪ್ರಧಾನಿ, ’ಕರ್ನಾಟಕದ ಹಿಂದಿನ ಸರ್ಕಾರ ೫೩ ಲಕ್ಷ
ಉದ್ಯೋಗ ಸೃಷ್ಟಿಸಿರುವುದಾಗಿ ಪ್ರತಿಪಾದಿಸಿತ್ತು. ಪಶ್ಚಿಮ ಬಂಗಾಳ ಸರ್ಕಾರ ಕಳೆದ ಅವಧಿಯಲ್ಲಿ ೬೮ ಲಕ್ಷ
ಉದ್ಯೋಗ ಸೃಷ್ಟಿಸಿರುವುದಾಗಿ ಹೇಳಿದೆ. ಈ ರಾಜ್ಯಗಳು ಒಳ್ಳೆಯ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು
ಸಾಧ್ಯವಾದರೆ, ರಾಷ್ಟ್ರಕ್ಕೆ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲವೇ? ರಾಜ್ಯಗಳು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ ಆದರೆ ಕೇಂದ್ರವು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ ಎಂದು
ಹೇಗೆ ಹೇಳಲು ಸಾಧ್ಯ?’ ಎಂದು ಮೋದಿ ಪ್ರಶ್ನಿಸಿದರು.
ಮಾಜಿ ವಿತ್ತ ಸಚಿವ ಪಿ. ಚಿದಂಬರಮ್ ಅವರ ಮುಂಗಡಪತ್ರದ ಕೆಲವು ಸಂಖ್ಯೆಗಳ ಬಗ್ಗೆ ಅನುಮಾನ ವ್ಯಕ್ತ
ಪಡಿಸಿದ ಪ್ರಧಾನಿ, ’ಭಾರತೀಯ ಆರ್ಥಿಕತೆಯ ಮಂಕು ಬಡಿದ ಸ್ಥಿತಿ ನಿರೀಕ್ಷೆಗಿಂತಲೂ ಅತ್ಯಂತ ಕೆಟ್ಟದ್ದಾಗಿತ್ತು.
ಆದರೆ ಈ ಬಗ್ಗೆ ಶ್ವೇತ ಪತ್ರ ತಂದು ’ರಾಜಕೀಯ ಮಾಡುವುದು’ ಸರಿಯಲ್ಲ ಎಂದು ಸರ್ಕಾರ
ಭಾವಿಸಿತು’ ಎಂದು ಹೇಳಿದರು. ರೈತರ ಸಂಕಷ್ಟಗಳ ಕುರಿತು ಪ್ರಸ್ತಾಪಿಸಿದ ಮೋದಿ, ರೈತರ ಆದಾಯವನ್ನು
ದ್ವಿಗಣಗೊಳಿಸುವ ವಚನ ಈಡೇರಿಸುವ ನಿಟ್ಟಿನಲ್ಲಿ ವೆಚ್ಚ ಕಡಿತ, ಉತ್ಪನ್ನಗಳ ಬೆಲೆ ಹೆಚ್ಚಳ, ಕಟಾವು
ಪೂರ್ವ ಮತ್ತು ಕಟಾವು ಬಳಿಕದ ನಷ್ಟಗಳನ್ನು ಕನಿಷ್ಠಗೊಳಿಸುವುದು ಮತ್ತು ಆದಾಯ ಸೃಷ್ಟಿಗಾಗಿ ಹೆಚ್ಚು
ಅವಕಾಶಗಳನ್ನು ಕಲ್ಪಿಸುವುದು ಸೇರಿದಂತೆ ನಾಲ್ಕು ಅಂಶಗಳ ನೀತಿ ರೂಪಿಸಲಾಗಿದೆ. ನಮ್ಮ ನೀತಿಯನ್ನು ನೀವು
ಸೂಕ್ಷ್ಮವಾಗಿ ಗಮನಿಸಿದರೆ ’ಬೀಜದಿಂದ ಬಜಾರ್’ವರೆಗೆ ಪ್ರತಿಯೊಂದು
ಹಂತದಲ್ಲೂ ರೈತನಿಗೆ ನೆರವಾಗುವ ಉದ್ದೇಶವನ್ನು ಅದು ಹೊಂದಿರುವುದು ಗೊತ್ತಾಗುತ್ತದೆ’ ಎಂದು ನುಡಿದರು. ಕೈಗಾರಿಕೋದ್ಯಮಿಗಳ
ಜೊತೆಗಿನ ಇತ್ತೀಚಿನ ಸಂವಾದದಲ್ಲಿ ಭಾರತದ ಬೆಳವಣಿಗೆಗೆ ಕಾರ್ಪೋರೇಟ್ ರಂಗ ಹೇಗೆ ತನ್ನ ಕಾಣಿಕೆ ನೀಡಬಹುದು
ಎಂಬ ಬಗ್ಗೆ ಚರ್ಚಿಸಿದುದಾಗಿ ಪ್ರಧಾನಿ ಹೇಳಿದರು. ಜಿಎಸ್ ಟಿ, ದಿವಾಳಿ ನ್ಯಾಯಾಲಯಗಳ ಮೂಲಕ ಬ್ಯಾಂಕ್
ಸಾಲ ಸಮಸ್ಯೆ ಇತ್ಯರ್ಥ ಇತ್ಯಾದಿ ಉಪಕ್ರಮಗಳು ವ್ಯವಹಾರದಲ್ಲಿನ ಕೆಟ್ಟ ಶಕ್ತಿಗಳನ್ನು ನಿವಾರಿಸುತ್ತಿದೆ.
ಇದು ವಹಿವಾಟಿಗೆ ಉತ್ತಮ ಎಂದು ಉದ್ಯಮ ನಾಯಕರು ಅಭಿಪ್ರಾಯ ಪಟ್ಟರು ಎಂದು ಮೋದಿ ನುಡಿದರು. ಏರ್ ಇಂಡಿಯಾ ಪ್ರಕರಣವನ್ನು ಉಲ್ಲೇಖಿಸಿ ಸರ್ಕಾರವು ಖಾಸಗೀಕರಣಕ್ಕೆ
ಹೆಚ್ಚಿನ ಗಮನ ಹರಿಸುತ್ತಿಲ್ಲ ಎಂಬ ಆಪಾದನೆಗಳನ್ನು ತಳ್ಳಿ ಹಾಕಿದ ಪ್ರಧಾನಿ, ಏರ್ ಇಂಡಿಯಾ ಮಾರಾಟಕ್ಕೆ
ಸರ್ಕಾರ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿತು. ನೀತಿ ನಿರ್ಧಾರ ಮತ್ತು ಮಾರಾಟದ ಕೊಡುಗೆಗೆ ಸ್ಪಂದನೆಯ
ಅಭಾವ ಇವೆರಡರ ನಡುವಣ ವ್ಯತ್ಯಾಸಗಳನ್ನು ನೀವು ಗುರುತಿಸಬೇಕು. ನಾವು ಏರ್ ಇಂಡಿಯಾ ಖಾಸಗೀಕರಣಕ್ಕೆ
ಮಾತ್ರವೇ ಮಾರ್ಗ ಮುಕ್ತಗೊಳಿಸಿದ್ದಲ್ಲ, ನಷ್ಟದ ಹಾದಿಯಲ್ಲಿದ್ದ ಇತರ ಹಲವಾರು ಸರ್ಕಾರಿ ಉದ್ಯಮಗಳ ಖಾಸಗೀಕರಣಕ್ಕೂ ಅವಕಾಸ ನೀಡಿದ್ದೇವೆ.
ಆದರೆ ಈ ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತದೆ’ ಎಂದು ಹೇಳಿದರು.
2017: ಯೆಕಟೆರಿನ್ಬರ್ಗ್ (ರಷ್ಯಾ): ‘ಚೆನ್ನೈ ಬಳಿಯ ಕಡಲ ತೀರದಲ್ಲಿ ಸಾಂಪ್ರದಾಯಿಕ ಅಣು ರಿಯಾಕ್ಟರ್ಗಳಿಗಿಂತ ಹೆಚ್ಚಿನ ವೇಗದಲ್ಲಿ ಅಣುವಿದಳನ ಕ್ರಿಯೆ ನಡೆಸುವ, ವೇಗದ ಅಣುವಿದಳನ (ಫಾಸ್ಟ್ ಬ್ರೀಡರ್) ರಿಯಾಕ್ಟರ್ ಇರುವ ಅಣು ವಿದ್ಯುತ್ ಸ್ಥಾವರಕ್ಕೆ ಚಾಲನೆ ನೀಡಲು ಭಾರತದ ಅಣುವಿಜ್ಞಾನಿಗಳು ದಿನಗಣನೆ ಮಾಡುತ್ತಿದ್ದಾರೆ’ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಹೇಳಿತು. ಇದರೊಂದಿಗೆ ಈ
ಅಣು ವಿದ್ಯತ್ ಸ್ಥಾವರ “ಅಕ್ಷಯಪಾತ್ರೆ’ಯಂತೆ ವಿದ್ಯುತ್ ಒದಗಿಸಲಿದೆ. ‘ಅಣುವಿದ್ಯುತ್ ಕ್ಷೇತ್ರದಲ್ಲೇ ಇದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಕಲ್ಪಾಕಂನಲ್ಲಿ ಸ್ಥಾಪಿತವಾಗಿರುವ ಸ್ಥಾವರದಲ್ಲಿ ಬಳಕೆಯಾಗಲಿರುವ ವೇಗದ ಅಣುವಿದಳನ ರಿಯಾಕ್ಟರ್ ಅನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಸ್ಥಾವರ ಈ ವರ್ಷಾಂತ್ಯದಲ್ಲಿ ಕಾರ್ಯಾರಂಭ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ’ ಎಂದು ಐಎಇಎ ಹೇಳಿತು. ‘ಇವು ಸಾಂಪ್ರದಾಯಿಕ ರಿಯಾಕ್ಟರ್ಗಳಿಗಿಂತ ಗರಿಷ್ಠ ಶೇ 70ರಷ್ಟು ಹೆಚ್ಚು ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ. ಅಲ್ಲದೆ, ಇಲ್ಲಿ ಉತ್ಪತ್ತಿಯಾಗುವ ವಿಕಿರಣ ತ್ಯಾಜ್ಯವನ್ನು ಮತ್ತೆ ಇಂಧನವಾಗಿ ಬಳಸಲು ಅವಕಾಶ ಇದೆ. ಹೀಗಾಗಿ ಇದು ಅನಿಯಮಿತವಾಗಿ ಶಕ್ತಿ ಉತ್ಪಾದಿಸುತ್ತಲೇ ಇರುತ್ತದೆ. ಜತೆಗೆ, ಈ ತ್ಯಾಜ್ಯವನ್ನು ಅಣ್ವಸ್ತ್ರ ತಯಾರಿಕೆಗೂ ಬಳಸಬಹುದು. ಈ ರಿಯಾಕ್ಟರ್‌ಗಳು ಒಂದು ರೀತಿಯಲ್ಲಿ ‘ಅಕ್ಷಯ ಪಾತ್ರೆ’ ಇದ್ದಂತೆ’ ಎಂದು ಐಎಇಎ ಬಣ್ಣಿಸಿತು. ಇಂದಿರಾ ಗಾಂಧಿ ಅಣು ಸಂಶೋಧನಾ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಭಾದುರಿ, ‘ವೇಗದ ಅಣುವಿದಳನ ರಿಯಾಕ್ಟರ್‌ನ ಮೂಲ ರೂಪದ ಅಭಿವೃದ್ಧಿ ಮತ್ತು ಪರೀಕ್ಷೆಗಾಗಿ ಭಾರತದ ವಿಜ್ಞಾನಿಗಳು 27 ವರ್ಷ ದುಡಿದಿದ್ದಾರೆ. ಇಂತಹ ಪೂರ್ಣ ಪ್ರಮಾಣದ ರಿಯಾಕ್ಟರ್ ಇರುವ ಸ್ಥಾವರದ ನಿರ್ಮಾಣ ಆರಂಭವಾಗಿ 15 ವರ್ಷ ಕಳೆದಿದೆ. ಸಾಂಪ್ರದಾಯಿಕ ರಿಯಾಕ್ಟರ್ ಇರುವ ಸ್ಥಾವರಗಳಿಗಿಂತ ಇದು ಹಲವು ಪಟ್ಟು ಸುರಕ್ಷಿತ’ ಎಂದು ಹೇಳಿದರು. ವೇಗದ ವಿದಳನ ರಿಯಾಕ್ಟರ್ಗಳಲ್ಲಿ ನ್ಯೂಟ್ರಾನ್ಗಳ ಚಲನೆಯ ವೇಗವನ್ನು ಕಾಯ್ದುಕೊಳ್ಳಲಾಗುತ್ತದೆ. ಹೀಗಾಗಿ ಕಡಿಮೆ ಪ್ರತಿರೋಧದ ಭಾರಜಲವನ್ನು ಬಳಸಲಾಗುತ್ತದೆ. ಕಲ್ಪಾಕಂನ ರಿಯಾಕ್ಟರ್ನಲ್ಲಿ ದ್ರವ ರೂಪದ ಸೋಡಿಯಂ ಬಳಸಲಾಗಿದೆ. ಇಲ್ಲಿ ನ್ಯೂಟ್ರಾನ್ಗಳ
ಚಲನೆ ಭಾರಿ ವೇಗದಲ್ಲಿ ಇರುವುದರಿಂದ ಮತ್ತೊಂದು ಹಂತದ ರಾಸಾಯನಿಕ ಕ್ರಿಯೆ ನಡೆದು, ಪ್ಲುಟೋನಿಯಂ ಉತ್ಪತ್ತಿಯಾಗುತ್ತದೆ. ಈ ಹಂತದಲ್ಲಿ ಭಾರಿ ಶಾಖ ಬಿಡುಗಡೆಯಾಗುತ್ತದೆ. ಸಾಮಾನ್ಯ ರಿಯಾಕ್ಟರ್ಗಳಲ್ಲಿ ಯುರೇನಿಯಂ 235 ವಿದಳನ ನಡೆದು, ನ್ಯೂಟ್ರಾನ್ಗಳು ಉತ್ಪತ್ತಿಯಾಗುತ್ತವೆ. ನ್ಯೂಟ್ರಾನ್ಗಳು ಭಾರಿ ವೇಗದಲ್ಲಿ ಚಲಿಸಿ, ಯುರೇನಿಯಂ 235ನ ವಿದಳನ ಸರಪಳಿಯನ್ನು ಮುಂದುವರೆಸುತ್ತವೆ. ವಿದಳನದ ವೇಗವನ್ನು ಕಡಿಮೆ ಮಾಡಲು ಭಾರಜಲವನ್ನು (ಸಾಮಾನ್ಯವಾಗಿ ದ್ರವ ರೂಪದ ಲೋಹವಾಗಿರುತ್ತದೆ) ಬಳಸಲಾಗುತ್ತದೆ. ಭಾರಜಲದ ಅಣುಗಳ ಜತೆ ನ್ಯೂಟ್ರಾನ್ಗಳು ಸಂಘರ್ಷ ನಡೆಸುವುದರಿಂದ ಶಾಖ ಉತ್ಪಾದನೆಯಾಗುತ್ತದೆ. ಈ ಶಾಖವನ್ನು ಬಳಸಿಕೊಂಡು, ನೀರನ್ನು ಕುದಿಸಿ ಹಬೆ ಉತ್ಪಾದಿಸಲಾಗುತ್ತದೆ. ಆ ಹಬೆಯ ಮೂಲಕ ಚಕ್ರಗಳನ್ನು ತಿರುಗಿಸಿ, ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ವೇಗದ ಅಣುವಿದಳನ ರಿಯಾಕ್ಟರ್ ಅಭಿವೃದ್ಧಿ ಮತ್ತು ಸ್ಥಾವರ ನಿರ್ಮಾಣದಲ್ಲಿ ಈವರೆಗೆ ಯಶ ಕಂಡಿರುವುದು ರಷ್ಯಾ ಮಾತ್ರ. 1980ರಲ್ಲೇ ತನ್ನ ಅರ್ಲ್ ಪರ್ವತ ಪ್ರದೇಶದ ಬಳಿ ಇಂತಹ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿ ಆರಂಭಿಸಿತ್ತು. ಆದರೆ, ಸೋವಿಯತ್ ಒಕ್ಕೂಟದ ವಿಭಜನೆಯ ಕಾರಣ ಯೋಜನೆ ನನೆಗುದಿಗೆ ಬಿದ್ದಿತ್ತು. ಕಳೆದ ದಶಕದಲ್ಲಿ ಅದನ್ನು ಪೂರ್ಣಗೊಳಿಸುವಲ್ಲಿ ರಷ್ಯಾ ಯಶಸ್ವಿಯಾಯಿತು. 2016ರಲ್ಲಷ್ಟೇ ಕಾರ್ಯಾರಂಭ ಮಾಡಿದ ಈ ಸ್ಥಾವರ 800 ಮೆಗಾವಾಟ್ ವಿದ್ಯುತ್ ಅನ್ನು ಪೂರೈಸುತ್ತಿದೆ. ಇಂತಹ ಮತ್ತಷ್ಟು ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ರಷ್ಯಾ ಯೋಜನೆ ರೂಪಿಸಿದೆ ಎಂದು ಐಎಇಎ ಮಾಹಿತಿ ನೀಡಿದೆ. ಅಮೆರಿಕವೂ ಇಂತಹ ರಿಯಾಕ್ಟರ್ಗಳಿರುವ ಅಣುವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತಾದರೂ, ವಿಕಿರಣ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಪ್ರಕ್ರಿಯೆ ಸಂಕೀರ್ಣವಾಗಿದ್ದ ಕಾರಣ ಯೋಜನೆಯನ್ನು ಕೈಬಿಟ್ಟಿತು. ಇನ್ನು ಜಪಾನ್ ಮತ್ತು ರಷ್ಯಾಗಳು ಇಂತಹ ರಿಯಾಕ್ಟರ್ಗಳ ನಿರ್ಮಾಣಕ್ಕೆ ಪ್ರಯತ್ನ ನಡೆಸಿ, ಹಲವು ಭಾರಿ ವಿಫಲವಾಗಿವೆ. ಹೀಗಾಗಿ ಅಂತಹ ಯೋಜನೆಗಳನ್ನೇ ಕೈಬಿಟ್ಟಿವೆ. ಚೀನಾವಂತೂ ಈ ವಿಚಾರದಲ್ಲಿ ಭಾರತಕ್ಕಿಂತ ಬಹಳ ಹಿಂದೆ ಉಳಿದಿದೆ ಎಂದು ಐಎಇಎ ಅಭಿಪ್ರಾಯಪಟ್ಟಿತು.
2017: ನವದೆಹಲಿ: ಚೀನಾದ ಸೈನಿಕರ ಜತೆ ಸಂಘರ್ಷ ನಡೆಯುತ್ತಿರುವ ಸಿಕ್ಕಿಂ ಗಡಿಗೆ ಭಾರತ ಇನ್ನಷ್ಟು ಯೋಧರನ್ನು ಕಳುಹಿಸಿತು. ಚೀನಾದ ಸೇನೆ ಕೂಡ ಸಂಘರ್ಷ ಉಂಟಾಗಿರುವ ಪ್ರದೇಶದಲ್ಲಿ ಹೆಚ್ಚು ಯೋಧರನ್ನು ನಿಯೋಜಿಸಿತು. ಭಾರತವೇ ಅತಿಕ್ರಮಣ ಮಾಡಿದೆ ಎಂದು ಚೀನಾ ಆರೋಪಿಸಿತು. ಒಂದು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದೆ. ಹಾಗಾಗಿ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿದೆ. ಆದರೆ ಸೈನಿಕರನ್ನು ಕಳುಹಿಸಿರುವುದಕ್ಕೆ ಯುದ್ಧ ಮಾಡುವ ಉದ್ದೇಶ ಇಲ್ಲ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿದವು. ಯುದ್ಧದ ಉದ್ದೇಶ ಇಲ್ಲದಿದ್ದರೆ ಸೈನಿಕರು ಬಂದೂಕಿನ ನಳಿಕೆಯನ್ನು ಕೆಳಮುಖವಾಗಿ ಇರಿಸಿ ಮುಂದೆ ಸಾಗುತ್ತಾರೆ. ಸಿಕ್ಕಿಂ ಗಡಿಯಲ್ಲಿದ್ದ ಭಾರತದ ಎರಡು ಬಂಕರ್ಗಳನ್ನು ಜೂನ್ 6ರಂದು ನಾಶ ಮಾಡಿರುವ ಚೀನಾ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದೆ. ಇದರಿಂದಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಆದರೆ ಚೀನೀಯರು ಮತ್ತಷ್ಟು ಹಾನಿ ಅಥವಾ ಅತಿಕ್ರಮಣ ಮಾಡದಂತೆ ಭಾರತದ ಯೋಧರು ತಡೆದಿದ್ದಾರೆ. ಅಲ್ಲಿಂದ 20 ಕಿ.ಮೀ. ದೂರವಿರುವ ಸೇನಾ ಶಿಬಿರದಿಂದ ಜೂನ್ 8ರಂದೇ ಮತ್ತಷ್ಟು ಯೋಧರನ್ನು ಅಲ್ಲಿಗೆ ಭಾರತ ಕಳುಹಿಸಿದೆ. ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಎರಡೂ ಕಡೆಯ ಕೆಲವು ಸೈನಿಕರಿಗೆ ಸಣ್ಣ ಪುಟ್ಟ ಗಾಯಗಳೂ ಆಗಿವೆ ಎಂದು ಸೇನೆಯ ಮೂಲಗಳು ತಿಳಿಸಿದವು. ಎರಡೂ ದೇಶಗಳ ನಡುವೆ ಸಂಘರ್ಷ ಆರಂಭವಾದ ನಂತರ ಮೇಜರ್ ಜನರಲ್ ದರ್ಜೆಯ ಅಧಿಕಾರಿಯೊಬ್ಬ ರನ್ನು ಗಡಿ ಪ್ರದೇಶಕ್ಕೆ ಕಳುಹಿಸಿದ ಭಾರತದ ಸೇನೆ, ಶಾಂತಿ ಮಾತುಕತೆಗೆ ಕೋರಿಕೆ ಕಳುಹಿಸಿತ್ತು. ಎರಡು ಕೋರಿಕೆಗಳಿಗೆ ಪ್ರತಿಕ್ರಿಯೆ ನೀಡದ ಚೀನಾ ಮೂರನೇ ಕೋರಿಕೆ ನಂತರ ಮಾತುಕತೆಗೆ ಒಪ್ಪಿಗೆ ನೀಡಿತ್ತು. ಡೋಕ ಲಾ ಪ್ರದೇಶದಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಶಾಂತಿ ಮಾತುಕತೆಯಲ್ಲಿ ಭಾರತವನ್ನು ಚೀನಾ ಒತ್ತಾಯಿಸಿತ್ತು. ಈ ಮಧ್ಯೆ, ಸದ್ಯದ ಬಿಕ್ಕಟ್ಟು ಬಗೆಹರಿಯಬೇಕಿದ್ದರೆ ವಿವಾದಾತ್ಮಕ ದೋಕ್ ಲಮ್ ಪ್ರದೇಶದಿಂದ ಭಾರತ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಕ್ಸಿನುವಾ ಹೇಳಿತು. ಸಿಕ್ಕಿಂನಲ್ಲಿ ಭಾರತ–ಚೀನಾ ಗಡಿಯನ್ನು 1890ರ ಸಿನೊ–ಬ್ರಿಟಿಷ್ ಒಪ್ಪಂದದ ಪ್ರಕಾರ ಗುರುತಿಸಲಾಗಿದೆ ಎಂದು ಚೀನಾ ಹೇಳಿದೆ. ಆದರೆ ಸಿಕ್ಕಿಂ ವಲಯದ ಗಡಿಯನ್ನು 2012ರಲ್ಲಿ ನಿಗದಿಪಡಿಸಲಾಗಿದೆ ಎಂಬುದು ಭಾರತದ ವಾದ. 1962ರ ಯುದ್ಧದ ನಂತರ ಭಾರತ ಮತ್ತು ಚೀನಾ ನಡುವಣ ಅತ್ಯಂತ ದೊಡ್ಡ ಬಿಕ್ಕಟ್ಟು ಇದು. 2013ರಲ್ಲಿ ಜಮ್ಮು ಮತ್ತು ಕಾಶ್ಮೀರದ ಲಡಾಕ್‌ನ ದೌಲತ್ ಬೇಗ್ ಓಲ್ಡೀಯಲ್ಲಿ ಚೀನಾದ ಸೇನೆ ಭಾರತದೊಳಕ್ಕೆ 30 ಕಿ.ಮೀನಷ್ಟು ಅತಿಕ್ರಮಣ ಮಾಡಿತ್ತು. ಇದು ತನ್ನ ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಭಾಗ ಎಂದು ಚೀನಾ ವಾದಿಸಿತ್ತು. ಆದರೆ ಭಾರತದ ಸೇನೆ ಚೀನಾ ಯೋಧರನ್ನು ಹೊರಗಟ್ಟುವಲ್ಲಿ ಯಶಸ್ವಿಯಾಗಿತ್ತು. ಈ ಸಂಘರ್ಷ 21 ದಿನ ನಡೆದಿತ್ತು. ಈ ಬಾರಿ ಜೂನ್ 1ರಂದು ಆರಂಭವಾದ ಸಂಘರ್ಷ ಇನ್ನೂ ಮುಂದುವರಿದಿದೆ.
2017: ನವದೆಹಲಿ: ದೇಶದಾದ್ಯಂತ ಸರಕು ಮತ್ತು ಸೇವಾತೆರಿಗೆ (ಜಿಎಸ್ಟಿ) ವ್ಯವಸ್ಥೆ ಜಾರಿಗೆ ಬಂದ ಎರಡು ದಿನಗಳಲ್ಲಿಯೇ ವರ್ತಕ ಸಮೂಹದಲ್ಲಿ ಮೂಡಿರುವ ಪ್ರಮುಖ ಅನುಮಾನಗಳನ್ನು ರೆವೆನ್ಯೂ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಅವರು ಪರಿಹರಿಸಿದರು. ಜಿಎಸ್ಟಿ ಕಾರ್ಯವೈಖರಿ ಸ್ವರೂಪದ ಬಗ್ಗೆ ಸರಳ ವಿವರಣೆ ನೀಡಿದ ಅವರು, ಸರಣಿ ಟ್ವೀಟ್ ಮೂಲಕ ವರ್ತಕರು ಮತ್ತು ವಾಣಿಜ್ಯೋದ್ಯಮಿಗಳ ಮನದಲ್ಲಿ ಮೂಡಿರುವ ಗೊಂದಲ ದೂರ ಮಾಡಲು ಪ್ರಯತ್ನಿಸಿದರು. ‘ಗ್ರಾಹಕರು ಯಾವುದೇ ಗಾಳಿಸುದ್ದಿಗೆ ಕಿವಿಗೊಡಬೇಡಿ. ಕಟ್ಟುಕಥೆಗಳನ್ನು ನಂಬಬೇಡಿ’ ಎಂದು ಮನವಿ ಮಾಡಿಕೊಂಡರು. ‘ಜಿಎಸ್ಟಿ ಜಾರಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿ ಇರಲಿದೆ’ ಎಂದು ಅವರು ಭರವಸೆ ನೀಡಿದರು. ‘ವಿದ್ಯುತ್, ನೀರು ಪೂರೈಕೆಯಂತಹ ಬಿಲ್‌ಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಬಳಕೆದಾರರು ಎರಡು ಬಾರಿ ಜಿಎಸ್ಟಿ ಪಾವತಿಸಬೇಕಾಗುತ್ತದೆ ಎನ್ನುವುದು ಸಂಪೂರ್ಣ ಆಧಾರರಹಿತ. ತೆರಿಗೆ ಇಲಾಖೆ ಸಂಪರ್ಕಿಸಿ ಖಚಿತಪಡಿಸಿಕೊಳ್ಳದೆ ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ’ ಎಂದು ಮನವಿ ಮಾಡಿಕೊಂಡರು. ‘ಜಿಎಸ್ಟಿ ಜಾರಿಗೆ ಯಾರೊಬ್ಬರೂ ದೊಡ್ಡ ಕಂಪ್ಯೂಟರ್, ಸಾಫ್ಟ್‌ವೇರ್ ಅಳವಡಿಸಲು ಹೆಚ್ಚು ವೆಚ್ಚ ಮಾಡಬೇಕಾಗಿಲ್ಲ. ಸರಕು ಪೂರೈಕೆದಾರರು ಮತ್ತು ಖರೀದಿದಾರರು (ಬಿಟುಬಿ) ಕೂಡ ದೊಡ್ಡ ಪ್ರಮಾಣದಲ್ಲಿ ಐ.ಟಿ ಮೂಲಸೌಕರ್ಯ ಅಳವಡಿಸಿಕೊಳ್ಳಬೇಕಾಗಿಲ್ಲ. ಮೂರು ತಿಂಗಳಿಗೊಮ್ಮೆ ರಿಟರ್ನ್ ಸಲ್ಲಿಸಿದರೆ ಸಾಕು. ಸರ್ಕಾರ ಉಚಿತವಾಗಿ ಸಾಫ್ಟ್‌ವೇರ್ ನೀಡಲಿದೆ’ ಎಂದು
ವಿವರಿಸಿದರು. ನೇರ ತೆರಿಗೆ ಸುಧಾರಣೆ: ಜಿಎಸ್ಟಿಯನ್ನು ಯಶಸ್ವಿಯಾಗಿ ಜಾರಿಗೆ ತಂದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ನೇರ ತೆರಿಗೆ ವ್ಯವಸ್ಥೆಯಲ್ಲಿಯೂ ಸಮಗ್ರ ಸುಧಾರಣೆ ತರಲಿದೆ. ‘ನಮ್ಮ ಆದಾಯ ತೆರಿಗೆ ಕಾನೂನುಗಳನ್ನು ಅರ್ಥೈಸಿಕೊಳ್ಳಲು ಮೇಧಾವಿಗಳಿಂದಲೂ ಸಾಧ್ಯವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿರುವುದು, ನೇರ ತೆರಿಗೆ ಸಂಹಿತೆ (ಡಿಟಿಸಿ) ಜಾರಿಗೆ ಬರುವ ಸುಳಿವು ಎಂದೇ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ವ್ಯಾಖ್ಯಾನಿಸುತ್ತಿದ್ದಾರೆ.ಜಿಎಸ್‌ಟಿಗೆ ಪೂರಕವಾಗಿ ‘ಡಿಟಿಸಿ’ ಜಾರಿಗೆ ತರಲು ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸಮಿತಿಯು ಕೂಡ ಸರ್ಕಾರವನ್ನು ಒತ್ತಾಯಿಸಿದೆ. ಸಮಗ್ರ ಧೋರಣೆ ಇರಲಿ: ಜಿಎಸ್ಟಿ ಕಾರಣಕ್ಕೆ ಬೆಲೆಗಳು ಏರಿಕೆಯಾಗಲಿವೆ ಎನ್ನುವುದನ್ನು ಮಾಜಿ ರೆವೆನ್ಯೂ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಳ್ಳಿಹಾಕಿದರು. ‘ಬಳಕೆದಾರರು ಸರಕು ಮತ್ತು ಸೇವೆಗಳ ತೆರಿಗೆ ಹೆಚ್ಚಳವನ್ನು ಒಂದು ಬದಿಯಿಂದ ಮಾತ್ರ ನೋಡುತ್ತಿದ್ದಾರೆ. ಉದ್ದಿಮೆಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಒದಗಿಸಿರುವುದನ್ನು ಗಮನಿಸಲ್ಲ. ಇದು ತೆರಿಗೆ ದರ ಹೆಚ್ಚಳದ ಹೊರೆ ತಗ್ಗಿಸಲಿದೆ. ತೆರಿಗೆ ಸುಧಾರಣಾ ಕ್ರಮವನ್ನು ಸಮಗ್ರವಾಗಿ ನೋಡಬೇಕು’ ಎಂದು ದಾಸ್ ಹೇಳಿದರು. ಅನುಮಾನಗಳಿಗೆ ಪರಿಹಾರ- ಮಿಥ್ಯೆ 1: ವರ್ತಕರು ಕಂಪ್ಯೂಟರ್ ಅಥವಾ ಇಂಟರ್‌ನೆಟ್ ಮೂಲಕವೇ ಎಲ್ಲ ಬೆಲೆಪಟ್ಟಿಗಳನ್ನು (ಇನ್‌ವೈಸ್) ಸಿದ್ಧಪಡಿಸಬೇಕು. ಸ್ತುಸ್ಥಿತಿ: ಕಂಪ್ಯೂಟರ್, ಇಂಟರ್‌ನೆಟ್ ಇಲ್ಲದೆಯೂ ಎಕ್ಸೆಲ್ ಮಾದರಿಗಳಲ್ಲೂ ಸರಕುಪಟ್ಟಿ ಸಿದ್ಧಪಡಿಸಬಹುದು. ಮಿಥ್ಯೆ 2: ಜಿಎಸ್ಟಿಯಡಿ ವಹಿವಾಟು ನಿರ್ವಹಿಸಲು ನಿರಂತರವಾಗಿ ಇಂಟರ್‌ನೆಟ್ ಬಳಸುತ್ತಿರಬೇಕು. ವಸ್ತುಸ್ಥಿತಿ: ಪ್ರತಿ ತಿಂಗಳೂ ಲೆಕ್ಕಪತ್ರ (ರಿಟರ್ನ್) ಸಲ್ಲಿಸುವಾಗ ಮಾತ್ರ ಇಂಟರ್‌ನೆಟ್‌ನ ಅಗತ್ಯ ಇರಲಿದೆ. ಮಿಥ್ಯೆ 3: ನನ್ನ ಬಳಿ ತಾತ್ಕಾಲಿಕ ಗುರುತಿನ ಸಂಖ್ಯೆ (ಐ.ಡಿ) ಇದೆ. ವಹಿವಾಟು ನಿರ್ವಹಿಸಲು ನಾನು ಅಂತಿಮ ಐ.ಡಿ ಎದುರು ನೋಡುತ್ತಿರುವೆ. ವಸ್ತುಸ್ಥಿತಿ: ತಾತ್ಕಾಲಿಕ ಐ.ಡಿಯೇ ನಿಮ್ಮ ಜಿಎಸ್‌ಟಿಎನ್ ಅಂತಿಮ ಸಂಖ್ಯೆಯಾಗಿದೆ. ಯಾವುದೇ ಹಿಂಜರಿಕೆ ಇಲ್ಲದೆ ವಹಿವಾಟು ಮುಂದುವರೆಸಿ. ಮಿಥ್ಯೆ 4: ನನ್ನ ವಹಿವಾಟಿನ ಸರಕಿಗೆ ಈ ಹಿಂದೆ ವಿನಾಯ್ತಿ ಇತ್ತು. ಹೀಗಾಗಿ ವಹಿವಾಟು ಮುಂದುವರೆಸಲು ನನಗೆ ಹೊಸ ನೋಂದಣಿ ಸಂಖ್ಯೆ ತುರ್ತಾಗಿ ಬೇಕಾಗಿದೆ. ವಸ್ತುಸ್ಥಿತಿ: ನೀವು ಈಗಲೂ ವಹಿವಾಟು ಮುಂದುವರೆಸಬಹುದು. 30 ದಿನಗಳಲ್ಲಿ ನಿಮ್ಮ ನೋಂದಣಿಯಾಗಲಿದೆ. ಮಿಥ್ಯೆ 5: ಪ್ರತಿ ತಿಂಗಳೂ ಮೂರು ರಿಟರ್ನ್ಸ್ಗಳನ್ನು ಭರ್ತಿ ಮಾಡಬೇಕು. ವಸ್ತು ಸ್ಥಿತಿ: ಮೂರು ಭಾಗಗಳನ್ನು ಒಳಗೊಂಡಿರುವ ಒಂದೇ ರಿಟರ್ನ್ ಸಲ್ಲಿಸಿದರೆ ಸಾಕು. ಮೊದಲ ಭಾಗವನ್ನು ಡೀಲರ್ ಭರ್ತಿ ಮಾಡಿದರೆ ಸಾಕು. ಉಳಿದ ಎರಡು ಭಾಗಗಳನ್ನು ಕಂಪ್ಯೂಟರ್ ಸ್ವಯಂಚಾಲಿತವಾಗಿ ಭರ್ತಿ ಮಾಡಿಕೊಳ್ಳಲಿದೆ. ಮಿಥ್ಯೆ 6: ಸಣ್ಣ ವರ್ತಕರೂ ಬೆಲೆಪಟ್ಟಿ ಗೆ ಅನುಗುಣವಾಗಿ ರಿಟರ್ನ್ನಲ್ಲಿ ವಿವರಣೆ ನೀಡಬೇಕು. ವಸ್ತುಸ್ಥಿತಿ: ಗ್ರಾಹಕರಿಗೆ ಸರಕು ಮಾರಾಟ ಮಾಡುವ (ಬಿಟುಸಿ) ಚಿಲ್ಲರೆ ವಹಿವಾಟುದಾರರು ಒಟ್ಟಾರೆ ಮಾರಾಟದ ಸಂಕ್ಷಿಪ್ತ ವಿವರಣೆ ನೀಡಿದರೆ ಸಾಕು. ಮಿಥ್ಯೆ 7: ಈ ಹಿಂದಿನ ಮೌಲ್ಯವರ್ಧಿತ ತೆರಿಗೆಗೆ (ವ್ಯಾಟ್) ಹೋಲಿಸಿದರೆ, ಜಿಎಸ್ಟಿ ದರಗಳು ದುಬಾರಿಯಾಗಿವೆ. ವಸ್ತುಸ್ಥಿತಿ: ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ಅಬಕಾರಿ ಮತ್ತು ಇತರ ತೆರಿಗೆಗಳು ಮರೆಮಾಚಿದ ಸ್ವರೂಪದಲ್ಲಿ ಇದ್ದವು. ಜಿಎಸ್‌ಟಿಯಲ್ಲಿ ಅವೆಲ್ಲವೂ ವಿಲೀನಗೊಂಡಿವೆ. ಹೀಗಾಗಿ ತೆರಿಗೆ ದರಗಳು ದುಬಾರಿ ಎನ್ನುವ ಭಾವನೆ ಮೂಡಿಸಿವೆ.
2017: ಇಸ್ಲಾಮಾಬಾದ್: ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ರಾಜತಾಂತ್ರಿಕ ಕಚೇರಿ ಸಂಪರ್ಕಿಸಲು ಅನುವು ಮಾಡಿಕೊಡಬೇಕು ಎಂಬ ಭಾರತದ ಮನವಿಯನ್ನು ಪಾಕಿಸ್ತಾನ ಮತ್ತೊಮ್ಮೆ ತಿರಸ್ಕರಿಸಿತು. ಜಾಧವ್ ಅವರನ್ನು ನಾಗರಿಕ ಕೈದಿ ಎಂದು ಸಮೀಕರಿಸುತ್ತಿರುವ ಭಾರತದ ನಿಲುವು ‘ಹಾಸ್ಯಾಸ್ಪದ ತರ್ಕ’ವಾಗಿದೆ ಎಂದು ಪಾಕಿಸ್ತಾನ ಲೇವಡಿ ಮಾಡಿತು. ‘ಕಮಾಂಡರ್ ಜಾಧವ್ ಅವರ ಪ್ರಕರಣವನ್ನು ನಾಗರಿಕ ಕೈದಿ ಹಾಗೂ ಮೀನುಗಾರರ ಪ್ರಕರಣಕ್ಕೆ ಹೋಲಿಸುವ ಮೂಲಕ ಭಾರತ ನಗೆಪಾಟಲುಗೀಡು ತರ್ಕ ಮಂಡಿಸುತ್ತಿದೆ’ ಎಂದು ವಿದೇಶಾಂಗ ಇಲಾಖೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿತು. ಉಭಯ ದೇಶಗಳ ಜೈಲಿನಲ್ಲಿರುವ ಕೈದಿಗಳ ಪಟ್ಟಿಯನ್ನು ಹಿಂದಿನ ದಿನ ಭಾರತ ಹಾಗೂ ಪಾಕಿಸ್ತಾನ ಹಸ್ತಾಂತರ ಮಾಡಿಕೊಂಡಿದ್ದವು. ಮರುದಿನವೇ ಜಾಧವ್ಗೆ ಸಂಬಂಧಿಸಿದಂತೆ ಪಾಕ್ ವಿದೇಶಾಂಗ ಇಲಾಖೆ ಈ ಹೇಳಿಕೆ ನೀಡಿತು. ‘ಕಮಾಂಡರ್ ಜಾಧವ್ ಭಾರತದ ನೌಕಾಸೇನಾ ಅಧಿಕಾರಿಯಾಗಿದ್ದು, ಭಾರತದ ಬೇಹುಗಾರಿಕೆ ಸಂಸ್ಥೆಯಾದ ‘ರಾ’ ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಲು ಕಳುಹಿಸಿತ್ತು. ಪಾಕಿಸ್ತಾನದಲ್ಲಿ ಭಯೋತ್ಪಾದಕ ಹಾಗೂ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗುವ ಮೂಲಕ ಸಾವಿರಾರು ಅಮಾಯಕರ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣಕರ್ತರಾಗಿದ್ದಾರೆ’ ಎಂದು ವಿದೇಶಾಂಗ ಇಲಾಖೆಯು ಪುನರುಚ್ಚರಿಸಿತು.
2008: ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವಂತೆ ಒತ್ತಾಯ ಹೇರುವುದು ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಮಾತೃಭಾಷೆ ಕನ್ನಡ ಆಗಿದ್ದರೆ, ಅಂಥ ವಿದ್ಯಾರ್ಥಿಗಳು ಪ್ರಥಮ ಭಾಷೆಯಾಗಿ ಕನ್ನಡವನ್ನು ಅಧ್ಯಯನ ಮಾಡಬೇಕು. ಒಂದು ವೇಳೆ ವಿದ್ಯಾರ್ಥಿಗಳ ಮಾತೃಭಾಷೆ ಕನ್ನಡೇತರ ಆಗಿದ್ದು, ಅಲ್ಲಿಯ ಪ್ರಾದೇಶಿಕ ಭಾಷೆ ಕನ್ನಡ ಆಗಿದ್ದರೆ, ಅಂತಹ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಯಲೇಬೇಕು. ಆದರೆ ಭಾಷಾ ಮಾಧ್ಯಮದ ಆಯ್ಕೆ ಸೇರಿದಂತೆ ತಮ್ಮ ಇಚ್ಛೆಯಂತೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಿ ಅದರ ಆಡಳಿತ ನಡೆಸುವ ಅಧಿಕಾರವನ್ನು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಶಾಲೆಗಳಿಗೆ ಸಂವಿಧಾನ ನೀಡಿದೆ. ಭಾಷಾ ನೀತಿಯನ್ನು ರೂಪಿಸುವ ಅಧಿಕಾರ ಸರ್ಕಾರಕ್ಕೆ ಇದ್ದ ಮಾತ್ರಕ್ಕೆ, ಈ ಶಾಲೆಗಳ ಹಕ್ಕನ್ನು ಕಸಿದುಕೊಳ್ಳುವುದು ಉಚಿತವಲ್ಲ. ಇದು ಸಂವಿಧಾನದ 19(1)(ಜಿ), 26 ಮತ್ತು 30(1)ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತು.
2007: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿ 1997ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತು. ಸಾರಿಗೆ ನಿಗಮವನ್ನು ಕರ್ನಾಟಕ ಈಶಾನ್ಯ ರಸ್ತೆ ಸಾರಿಗೆ ನಿಗಮ, ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ವನ್ನಾಗಿ ವಿಭಾಗ ಮಾಡಿ ಸರ್ಕಾರ 1997ರಲ್ಲಿ ಆದೇಶ ಹೊರಡಿಸಿತ್ತು. ಆದೇಶವನ್ನು ರದ್ದು ಮಾಡಿದ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಸಾರಿಗೆ ನಿಗಮದ ವಕೀಲರ ಕೋರಿಕೆ ಮೇರೆಗೆ ರದ್ದತಿ ಆದೇಶ ಜಾರಿಗೆ ಆರು ವಾರಗಳ ತಡೆ ನೀಡಿದರು. ನಾಲ್ಕು ವಿಭಾಗಗಳನ್ನಾಗಿ ಮಾಡಿದ ಆದೇಶವನ್ನು ಪ್ರಶ್ನಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮತ್ತು ಕೆಲಸಗಾರರ ಒಕ್ಕೂಟ ಅರ್ಜಿ ಸಲ್ಲಿಸಿತ್ತು.
2007: ರಾಜಕೀಯ ಪಕ್ಷಗಳು ಹಾಗೂ ಪರಿಸರವಾದಿಗಳ ವಿರೋಧ ನಡುವೆಯೇ ಈದಿನ ಬೆಳಿಗ್ಗೆ 6 ಗಂಟೆಗೆ ವಿಶ್ವದ ಅತಿದೊಡ್ಡ ಪರಮಾಣು ಇಂಧನ ಚಾಲಿತ ಅಮೆರಿಕ ಯುದ್ಧನೌಕೆ `ನಿಮಿಜ್' ಚೆನ್ನೈ ಬಂದರಿನಿಂದ 2-3 ನಾಟಿಕಲ್ ಮೈಲಿ ದೂರದಲ್ಲಿ ಲಂಗರು ಹಾಕಿತು. ಎರಡು ಪರಮಾಣು ವಿದ್ಯುತ್ ಘಟಕಗಳ ಸಹಾಯದಿಂದ ಚಲಿಸುವ ಈ ಹಡಗು ಅಣು ವಿಕಿರಣಗಳನ್ನು ಹೊರ ಸೂಸುತ್ತದೆ. ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ ಎಂದು ಆರೋಪಿಸಿ ಎಡಪಕ್ಷಗಳು, ಎಐಎಡಿಎಂಕೆ ಮತ್ತು ಹಲವು ಪರಿಸರವಾದಿಗಳು `ನಿಮಿಜ್' ಭಾರತ ಪ್ರವೇಶವನ್ನು ವಿರೋಧಿಸಿದ್ದರು.
2007: ಅನಾರೋಗ್ಯಕ್ಕೆ ಒಳಗಾಗಿದ್ದ ಮಾಜಿ ಕ್ರಿಕೆಟ್ ಆಟಗಾರ ದಿಲೀಪ್ ಸರ್ದೇಸಾಯಿ (67) ಮುಂಬೈಯಲ್ಲಿ ನಿಧನರಾದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದ ದಿಲೀಪ್, 1961ರಿಂದ 1973ರ ಅವಧಿಯಲ್ಲಿ ದಿಲೀಪ್ 30 ಟೆಸ್ಟ್ ಪಂದ್ಯಗಳನ್ನು ಆಡಿ, ಐದು ಶತಕಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದರು. ಇನಿಂಗ್ಸ್ ಒಂದರಲ್ಲಿ ಅವರು 212 ರನ್ ಸೇರಿಸಿ ಗಮನ ಸೆಳೆದಿದ್ದರು. ಸ್ಪಿನ್ ಬೌಲಿಂಗ್ ನಿಭಾಯಿಸುವುದರಲ್ಲಿ ಎತ್ತಿದ ಕೈ ಎಂಬ ಖ್ಯಾತಿ ಅವರಿಗಿತ್ತು.
2007: ರಾಷ್ಟ್ರಪಿತ ಗಾಂಧೀಜಿ ಅವರು ತಮ್ಮ ಹತ್ಯೆ ನಡೆಯುವ 19 ದಿನಗಳ ಮುಂಚೆ ತಮ್ಮ `ಹರಿಜನ' ಪತ್ರಿಕೆಗೆ ಬರೆದ ಲೇಖನದ ಹಸ್ತಪ್ರತಿಯನ್ನು ಹರಾಜು ಹಾಕುವುದಾಗಿ ಘೋಷಿಸಿದ್ದ ಲಂಡನ್ನಿನ ಕ್ರಿಸ್ಟೀ ಹರಾಜು ಸಂಸ್ಥೆಯು ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಈ ಹಸ್ತಪ್ರತಿಯನ್ನು ಭಾರಿ ಮೊತ್ತಕ್ಕೆ ಹರಾಜು ಹಾಕಲಾಗುವುದು ಎಂದು ಸಂಸ್ಥೆ ಈ ಮೊದಲು ಹೇಳಿತ್ತು. ಇದನ್ನು ಹರಾಜು ಹಾಕಬಾರದು ಎಂಬ ಭಾರತದ ಮನವಿಗೆ ಓಗೊಟ್ಟು ಹರಾಜು ಹಾಕುವ ನಿರ್ಧಾರದಿಂದ ಅದು ಹಿಂದೆ ಸರಿಯಿತು. ಭಾರತವು ಈ ಐತಿಹಾಸಿಕ ಮಹತ್ವವುಳ್ಳ ಪತ್ರವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕ ಡಾ. ಅಮಿನ್ ಜಾಫರ್ ಹೇಳಿದರು.
2007: ಬಿಸಿನೆಸ್ ವೀಕ್ ನಿಯತಕಾಲಿಕೆಯು ಭಾರತದ ಐಟಿ ದೊರೆ, ವಿಪ್ರೋ ಕಂಪೆನಿಯ ಅಜೀಂ ಪ್ರೇಮ್ ಜಿ ಹಾಗೂ ಬಾಂಗ್ಲಾದೇಶದ ಮೈಕ್ರೊ ಕ್ರೆಡಿಟ್ ಮುಖಂಡ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂಸುಫ್ ಅವರನ್ನು ವಿಶ್ವದ 30 ಮಂದಿ ವಾಣಿಜ್ಯೋದ್ಯಮಿಗಳ ಪಟ್ಟಿಯಲ್ಲಿ ಸೇರಿಸಿತು. ಅದು ಪ್ರಕಟಿಸಿದ ವಿಶ್ವದ ಪ್ರಸಿದ್ಧ ವಾಣಿಜ್ಯೋದ್ಯಮಿಗಳ ಪಟ್ಟಿಯಲ್ಲಿ ಬಿಲ್ ಗೇಟ್ಸ್, ಸ್ಟೆವ್ ಜಾಬ್ಸ್, ಹೆನ್ರಿ ಫೋರ್ಡ್, ಬೆಂಜಮಿನ್ ಫ್ರಾಂಕ್ಲಿನ್, ಜಾನ್ ಡಿ ರಾಕ್ ಫೆಲ್ಲರ್, ಥಾಮಸ್ ಎಡಿಸನ್ ಹಾಗೂ ಮಿಚೆಯಲ್ ಡೆಲ್ ಸೇರಿದ್ದಾರೆ. ಪ್ರೇಮ್ ಜಿ ಅವರು 21ನೇ ವಯಸ್ಸಿನಲ್ಲಿ ತಮ್ಮ ತಂದೆಯಿಂದ ವಿಪ್ರೊ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಂಡು ವಿಶ್ವ ಮಟ್ಟದಲ್ಲಿ ಬೆಳೆಸಿದ್ದು, ಗುಣಮಟ್ಟದ ಸೇವೆಯೆ ಅದಕ್ಕೆ ಮೂಲ ಕಾರಣ. ಅಗ್ರಗಣ್ಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಇದು ಒಂದು ಎಂದು ನಿಯತಕಾಲಿಕ ತಿಳಿಸಿತು.
2007: ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರು ಸ್ಥಾಪಿಸಿದ ಅಂಬಿಕಾ ಪಾಲ್ ಪ್ರತಿಷ್ಠಾನವು ಲಂಡನ್ ಪ್ರಾಣಿ ಸಂಗ್ರಹಾಲಯದ ಒಂದು ಭಾಗವಾಗಿರುವ ಆಫ್ರಿಕಾ ಪಕ್ಷಿಧಾಮದ ಪುನಶ್ಚೇತನಕ್ಕಾಗಿ ಹತ್ತು ಲಕ್ಷ ಪೌಂಡುಗಳ ಕೊಡುಗೆ ಪ್ರಕಟಿಸಿತು. ಪ್ರತಿಷ್ಠಾನವು ಅಂಬಿಕಾ ಪಾಲ್ ಸ್ಮರಣಾರ್ಥ ಲಂಡನ್ ಪ್ರಾಣಿ ಸಂಗ್ರಹಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬ್ರಿಟನ್ನಿನ ನೂತನ ಪ್ರಧಾನಿ ಗೋರ್ಡಾನ್ ಬ್ರೌನ್ ಮತ್ತು ಪತ್ನಿ ಸಾರಾಹ್ ಬ್ರೌನ್ ಹಾಗೂ ಅವರ ಸಚಿವ ಸಂಪುಟದ ಡಜನ್ನಿಗೂ ಅಧಿಕ ಸದಸ್ಯರ ಸಮ್ಮುಖದಲ್ಲಿ ಸ್ವರಾಜ್ ಅವರು ಇದನ್ನು ಘೋಷಿಸಿದರು.
2007: ಭಾರತೀಯ ಮೂಲದ ಎಂಜಿನಿಯರ್ ಹರವಿಂದರ್ ಎಸ್. ಆನಂದ್ (46) ಅವರು ನ್ಯೂಯಾರ್ಕ್ ಪ್ರಾಂತ್ಯದ ಹಳ್ಳಿಯೊಂದರ ಮೇಯರ್ ಆಗಿ ಆಯ್ಕೆ ಆದರು. ಇದರೊಂದಿಗೆ ನ್ಯೂಯಾರ್ಕ್ ಪ್ರಾಂತ್ಯದಲ್ಲಿ ಮೇಯರ್ ಹುದ್ದೆಗೇರಿದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. 25 ವರ್ಷಗಳ ಹಿಂದೆ ವರ್ಷಗಳ ಹಿಂದೆ ಅಮೆರಿಕಕ್ಕೆ ಬಂದ ಆನಂದ್ ಅವರು ಕಳೆದ 10 ವರ್ಷಗಳಿಂದ ಲ್ಯುರೆಲ್ ಹೊಲೊವ್ ಗ್ರಾಮದ ನಿವಾಸಿ. ಪಂಜಾಬ್ ವಿಶ್ವವಿದ್ಯಾಲಯದಿಂದ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಆನಂದ್ ಅವರು ಕೈಗಾರಿಕಾ ರಾಸಾಯನಿಕಗಳನ್ನು ತಯಾರಿಸುವ ಅಮೆರಿಕದ `ರಾಯ್ಸ್ ಇಂಟರ್ ನ್ಯಾಶನಲ್' ಎಂಬ ಕಂಪೆನಿಯಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ. ಲ್ಯೂರೆಲ್ ಹೊಲೊವ್ನ ಜನಸಂಖ್ಯೆ 1,930. ಇದರಲ್ಲಿ ಶೇ.3 ರಷ್ಟು ಜನ ಮಾತ್ರ ಭಾರತೀಯ ಮೂಲದವರು. ಆನಂದ್ ಅವರ ವೃತ್ತಿಪರತೆಯನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸುವ ರೀತಿಯನ್ನು ಲ್ಯೂರೆಲ್ ಜನರು ಮೆಚ್ಚಿಕೊಂಡರು.
2007: ಗಾಜಿನಲ್ಲಿ ಪರಮಾಣುಗಳ ಚಲನೆಯನ್ನು ನೀರಿನಲ್ಲಿ ಜೆಲ್ಲಿಮೀನುಗಳ ಚಲನೆಗೆ ಹೋಲಿಸಿದ ಭಾರತೀಯ ಮೂಲದ ವಿಜ್ಞಾನಿ, ಪೆನ್ಸಿಲ್ವೇನಿಯಾದ ಬೆಥ್ಲೆಹೆಮ್ ವಿಶ್ವ ವಿದ್ಯಾಲಯದ ಅಂತಾರಾಷ್ಟ್ರೀಯ ಭೌತವಸ್ತು ಸಂಸ್ಥೆಯ ನಿರ್ದೇಶಕ ಹಿಮಾಂಶು ಜೈನ್ ಅವರಿಗೆ ಪ್ರತಿಷ್ಠಿತ 'ಒಟ್ಟೊ ಸ್ಕಾಟ್ ಸಂಶೋಧನಾ ಪ್ರಶಸ್ತಿ' ಲಭಿಸಿತು. ಫ್ರಾನ್ಸಿನಲ್ಲಿ ಗಾಜು ಸಮ್ಮೇಳನದಲ್ಲಿ ಈದಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೈನ್ ಅವರೊಂದಿಗೆ ಫ್ರಾನ್ಸಿನ ವಾಲ್ಟರ್ ಕೊಬ್ ಪ್ರಶಸ್ತಿ ಹಂಚಿಕೊಂಡರು. ಈ ದ್ವೈವಾರ್ಷಿಕ ಪ್ರಶಸ್ತಿ 34,055 ಡಾಲರ್ ನಗದು ಮೊತ್ತ ಒಳಗೊಂಡಿದ್ದು ಗಾಜು ಸಂಶೋಧನೆಯಲ್ಲಿ ವಿಶ್ವದಲ್ಲೇ ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲಾಗಿದೆ.
2006: ಕನ್ನಡ ಚಲನಚಿತ್ರ ನಿರ್ಮಾಪಕ ಹಾಗೂ ಪತ್ರಿಕಾ ಸಂಪರ್ಕಾಧಿಕಾರಿ ಡಿ.ವಿ. ಸುಧೀಂದ್ರ ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. 1977ರಲ್ಲಿ ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರ `ಸೊಸೆ ತಂದ ಸೌಭಾಗ್ಯ' ಚಿತ್ರಕ್ಕೆ ಪತ್ರಿಕಾ ಸಂಪರ್ಕಾಧಿಕಾರಿಯಾಗುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸುಧೀಂದ್ರ `ನಗು ನಗುತಾ ನಲಿ', `ಗಣೇಶನ ಮದುವೆ', `ಗುಂಡನ ಮದುವೆ' ಚಿತ್ರಗಳನ್ನೂ ನಿರ್ಮಿಸಿದ್ದರು.
1958: ಡಾ. ವಸಂತ ಕುಮಾರ ಪೆರ್ಲ ಜನನ.
1957: ಎನ್.ಆರ್. ಗೀತಾ ಜನನ.
1950: ಈರಣ್ಣ ಇಟಗಿ ಜನನ.
1944: ಸಾಹಿತ್ಯ ಪ್ರಚಾರ, ಪತ್ರಿಕಾ ಸಂಪಾದಕ ಫ.ಗು. ಹಳಕಟ್ಟಿ ಅವರು ಗುರುಬಸಪ್ಪ -ದಾನಮ್ಮ ದಂಪತಿಯ ಮಗನಾಗಿ ಧಾರವಾಡದಲ್ಲಿ ಹುಟ್ಟಿದರು. 1964 ಜೂನ್ 29ರಂದು ಅವರು ನಿಧನರಾದರು.
1923: ಶಾರದಾ ಜಡೆ ಜನನ.
1921: ಭಾರತಿ ರಮಣಾಚಾರ್ಯ ಜನನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment