Friday, July 13, 2018

ಇಂದಿನ ಇತಿಹಾಸ History Today ಜುಲೈ 13

 

2017: ನವದೆಹಲಿ:ಹಿಂದೂಗಳ ಪವಿತ್ರ ಗಂಗಾನದಿ ದಡದಿಂದ 500 ಮೀಟರ್ ಒಳಗೆ ಕಸ ಸುರಿಯುವುದನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರು ಪೀಠ (ಎನ್ ಜಿಟಿ), ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ ಯಾವುದೇ ವಿಧದ ಕಸವನ್ನು ಸುರಿದರೆ 50 ಸಾವಿರ ರೂಪಾಯಿ ದಂಡ ವಿಧಿಸಬೇಕು ಎಂದು ಆದೇಶ ನೀಡಿತು. ಉನ್ನಾವೋ ಮತ್ತು ಹರಿದ್ವಾರದಲ್ಲಿನ ಗಂಗಾನದಿಯ ದಡದಿಂದ 500 ಮೀಟರ್ ವ್ಯಾಪ್ತಿವರೆಗೆ ಕಸ ಎಸೆಯಲು ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಜಸ್ಟೀಸ್ ಸ್ವತಂತ್ರ ಕುಮಾರ್ ನೇತೃತ್ವದ ಎನ್ ಜಿಟಿ ಪೀಠ ನಿರ್ದೇಶನ ಕೊಟ್ಟಿತು. ಅಷ್ಟೇ ಅಲ್ಲ ಗಂಗಾನದಿಯ ದಡದಿಂದ 100 ಮೀಟರ್ ವ್ಯಾಪ್ತಿಯನ್ನು ಅಭಿವೃದ್ಧಿ ರಹಿತ ವಲಯ ಎಂಬುದಾಗಿ ಘೋಷಿಸಬೇಕು ಎಂದು ಎನ್ ಜಿಟಿ ತಿಳಿಸಿತು. ಈ ಆದೇಶದ ಅನ್ವಯ ಉನ್ನಾವೋ ಮತ್ತು ಹರಿದ್ವಾರದ ಗಂಗಾನದಿ ಪರಿಸರದ ನಡುವೆ ಕಸ ಸುರಿಯುವ ವ್ಯಕ್ತಿಗಳು 50 ಸಾವಿರ ರೂಪಾಯಿ ದಂಡ ಕಟ್ಟಬೇಕಾಗಲಿದೆ ಎಂದು ವರದಿ ಹೇಳಿತು.

2017: ನವದೆಹಲಿ: ಪಾಕಿಸ್ಥಾನದಲ್ಲಿ ಸೇನಾ  ನ್ಯಾಯಾಲಯದಿಂದ ಮರಣ ದಂಡನೆಗೆ
ಗುರಿಯಾಗಿರುವ ಹಾಗೂ ಪ್ರಕೃತ ಅಲ್ಲಿನ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ ಅವರನ್ನು ಭೇಟಿಯಾಗಲು ಬಯಸಿರುವ ಅವರ ತಾಯಿ ಆವಂತಿಕಾ ಜಾಧವ್‌ ಅವರ ವೀಸಾ ಕೋರಿಕೆ ಅರ್ಜಿಯು  ಪರಿಶೀಲನೆಯಲ್ಲಿದೆ ಎಂದು ಪಾಕಿಸ್ಥಾನದ ವಿದೇಶ ಕಾರ್ಯಾಲಯ ಹೇಳಿತು. ಪಾಕ್‌ ವಿದೇಶ ಕಾರ್ಯಾಲಯದ ವಕ್ತಾರ ನಫೀಸ್‌ ಝಕಾರಿಯಾ ಅವರನ್ನು ಉಲ್ಲೇಖಿಸಿ ಪಾಕಿಸ್ಥಾನದ ಡಾನ್‌ ದೈನಿಕದ ಅಂತರ್‌ಜಾಲ ಆವೃತ್ತಿಯು ಈ ವಿಷಯವನ್ನು ವರದಿ ಮಾಡಿತು. ಝಕಾರಿಯಾ ಅವರು ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, 'ಭಾರತದಲ್ಲಿ ಚಿಕಿತ್ಸೆ ಪಡೆಯಬಯಸುವ ಪಾಕಿಸ್ಥಾನೀಯರ ವೀಸಾ ಕೋರಿಕೆಯ ಅರ್ಜಿಯ ಮೇಲೆ ಶರತ್ತುಗಳನ್ನು ಹೇರಲಾಗುತ್ತಿದೆ' ಎಂದು ಆರೋಪಿಸಿದರು. "ದ ಹೇಗ್‌'ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯವು ಕಳೆದ ಮೇ 18ರಂದು ಕುಲಭೂಷಣ್‌ ಜಾಧವ್‌ ಮರಣ ದಂಡನೆ ಶಿಕ್ಷೆಯ ಜಾರಿಗೆ ತಡೆ ನೀಡಿತ್ತಲ್ಲದೆ ಜಾಧವ್‌ಗೆ ದೂತಾವಾಸದ ಸಂಪರ್ಕಾವಕಾಶ ಕಲ್ಪಿಸಬೇಕೆಂಬ ಭಾರತದ ಕೋರಿಕೆಯನ್ನು ಮನ್ನಿಸಬೇಕಂದೂ ಪಾಕಿಸ್ಥಾನಕ್ಕೆ ಸೂಚಿಸಿತ್ತು.

2017:ಬೆಂಗಳೂರು: ಪರಪ್ಪನ ಅಗ್ರಹಾರ ಡಿಜಿ ಎಚ್.ಎನ್.ಸತ್ಯನಾರಾಯಣ ರಾವ್ ಅವರು
ತಮಿಳುನಾಡಿನ ಶಶಿಕಲಾ ನಟರಾಜನ್ ಅವರಿಗೆ ವಿಶೇಷ ಆತಿಥ್ಯ ನೀಡಲು ಕೋಟ್ಯಂತರ ರೂಪಾಯಿ ಲಂಚ ಸ್ವೀಕರಿಸಿದ್ದಾರಂದು ಕಾರಾಗೃಹ ಡಿಐಜಿ ರೂಪಾ ಅವರು ನೀಡಿರುವ ವರದಿ ಇಬ್ಬರು ಅಧಿಕಾರಿಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿತು. ಮತ್ತೊಂದೆಡೆ ಲಂಚ ಪಡೆದಿರುವ ಆರೋಪದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದರು. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಶಿಕಲಾಗೆ ವಿಶೇಷ ಆತಿಥ್ಯ ನೀಡಿರುವ ಹಾಗೂ ಲಂಚ ಸ್ವೀಕರಿಸಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯನವರು ಚರ್ಚೆ ನಡೆಸಿದ್ದು, ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಿದರು.  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ಅವರಿಗೆ ವಿಐಪಿ ಸೌಲಭ್ಯ ಕಲ್ಪಿಸಲು 2 ಕೋಟಿ ರೂ. ಲಂಚ ಸ್ವೀಕಾರ ಆಗಿದೆ ಎಂಬ ಡಿಐಜಿ ರೂಪಾ ಅವರ ವರದಿ ಬಗ್ಗೆ ಪರಪ್ಪನ ಅಗ್ರಹಾರ ಡಿಜಿ ಸತ್ಯನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ಶಶಿಕಲಾಗೆ ನಾವು ಯಾವುದೇ ವಿಐಪಿ ಸವಲತ್ತು ಕೊಟ್ಟಿಲ್ಲ. ರೂಪಾ ಬರೆದಿರುವ ವರದಿಯಲ್ಲಿ ಹುರುಳಿಲ್ಲ. ಯಾವ ಅಪರಾಧಿಗಳಿಂದಲೂ ಒಂದು ರೂಪಾಯಿಯನ್ನೂ  ಪಡೆದಿಲ್ಲ ಎಂದು ಹೇಳಿದರು. ರೂಪಾ ಅವರು ಸಾಕ್ಷ್ಯವನ್ನು ನನಗೆ ಕೊಡಬೇಕು. ಸಾಕ್ಷ್ಯವನ್ನು ಟಿವಿ ಚಾನೆಲ್ ಗಳಿಗೆ ಕೊಡೋದಲ್ಲ, ನಾನು ಕಾರಾಗೃಹದ ಐಜಿ. ಶಶಿಕಲಾ ಅವರು ಸಾಮಾನ್ಯ ಕೈದಿಯಾಗಿಯೇ ಜೈಲಿನಲ್ಲಿದ್ದಾರೆ. ಅವರು ಯಾವ ಆಧಾರದಲ್ಲಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ ಎಂದು ಸತ್ಯನಾರಾಯಣ ಅವರು ತಿಳಿಸಿದರು. ಈ ಮಧ್ಯೆ ನಾನು ಕೊಟ್ಟಿರುವ ವರದಿಯಲ್ಲಿ ಸುಳ್ಳಿದ್ದರೆ ತನಿಖೆ ನಡೆಸಲಿ. ನಾನು ನಾಲ್ಕು ಪುಟಗಳ ವರದಿಯನ್ನು ಡಿಜಿಪಿಗೆ ಕಳುಹಿಸಿದ್ದೇನೆ. ನನ್ನ ವರದಿ ನೋಡಿದ್ರೆ ಸಾಕ್ಷ್ಯಾಧಾರಗಳು ಸಿಗುತ್ತದೆ. ನನ್ನ ವರದಿ ಸಂಪೂರ್ಣ ಸತ್ಯ, ನಾನು ನೋಡಿದ್ದನ್ನು ವರದಿಯಲ್ಲಿ ಉಲ್ಲೇಖಿಸಿದ್ದೇನೆ ಎಂದು ಕಾರಾಗೃಹ ಡಿಐಜಿ ರೂಪಾ ತಿರುಗೇಟು ನೀಡಿದರು.  
2017: ಶೆನ್ಯಾಂಗ್‌, ಚೀನ : ತಿಂಗಳ ಹಿಂದೆ ಜೈಲಿನಿಂದ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದ ಚೀನದ ನೊಬೆಲ್‌ ಶಾಂತಿ ಪುರಸ್ಕೃತ, ಕ್ಯಾನ್ಸರ್‌ ಪೀಡಿತ, 61ರ ಹರೆಯದ ಲಿಯು ಕ್ಸಿಯಾವೋಬೋ ಅವರು ನಿಧನ ಹೊಂದಿದರು. ಚೀನದ ಈಶಾನ್ಯ ನಗರವಾದ ಶೆನ್ಯಾಂಗ್‌ನ ಆಸ್ಪತ್ರೆಗೆ ಲಿಯು ಅವರು ತಿಂಗಳ ಹಿಂದೆ ಕ್ಯಾನ್ಸರ್‌ ಉಲ್ಬಣಗೊಂಡ ಕಾರಣ ದಾಖಲಿಸಲ್ಪಟ್ಟಿದ್ದರು. ಲಿಯು ಅವರು ಈದಿನ ಮೃತಪಟ್ಟಿರುವುದನ್ನು ಕಾನೂನು ವಿಭಾಗವು ದೃಢೀಕರಿಸಿತು.
2017: ನವದೆಹಲಿ: ಹೊಸದಿಲ್ಲಿ : ದಕ್ಷಿಣ ಭಾರತದಲ್ಲಿನ ತನ್ನ ನೆಲೆಗಳಿಂದ ಚೀನದಲ್ಲಿನ ಎಲ್ಲ ಧ್ವಂಸ ಅತ್ಯಂತ ವಿನಾಶಕಾರಿ ಅಣ್ವಸ್ತ್ರ ಕ್ಷಿಪಣಿಗಳನ್ನು ಭಾರತ ಈಗ ಅಭಿವೃದ್ದಿಪಡಿಸುತ್ತಿದೆ ಎಂದು ಅಮೆರಿಕದ ಇಬ್ಬರು ಉನ್ನತ ಅಣ್ವಸ್ಸ ತಜ್ಞರು ಹೇಳಿದರು.ಭಾರತ ಅತ್ಯಂತ ವಿನಾಶಕಾರಿಯಾಗಬಲ್ಲ 150ರಿಂದ 200 ಅಣು ಸಿಡಿತಲೆಗಳನ್ನು ತಯಾರಿಸುವಷ್ಟು ಪ್ಲುಟೋನಿಯಂ  ಅನ್ನು ತನ್ನ ಸಂಗ್ರಹದಲ್ಲಿ ಹೊಂದಿದೆ; ಈಗಾಗಲೇ ಬಹುತೇಕ ಅದು 120ರಿಂದ 130ರಷ್ಟು ಅಣುಸಿಡಿತಲೆಗಳನ್ನು ಉತ್ಪಾದಿಸಿರಬಹುದು ಎಂದು "ಆಫ್ಟರ್‌ ಮಿಡ್‌ನೈಟ್‌' ಎಂಬ ಹೆಸರಿನ ವಿದ್ಯುನ್ಮಾನ ನಿಯತಕಾಲಿಕದ ಜುಲೈ-ಆಗಸ್ಟ್‌ ಸಂಚಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಈ ಅಮೆರಿಕನ್‌ ಪರಿಣತರು ತಿಳಿಸಿದರು. ಭಾರತ ಈ ವರೆಗೂ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಪಾಕಿಸ್ಥಾನವನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ಅಣ್ವಸ್ತ್ರಗಳನ್ನು ಸಿದ್ಧಪಡಿಸುತ್ತಿತ್ತು. ಆದರೆ ಕಮ್ಯುನಿಸ್ಟ್‌ ದಿಗ್ಗಜ ದೇಶವಾಗಿರುವ ಚೀನದಿಂದ ತನಗೆ ಎದುರಾಗುವ ಸವಾಲುಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಭಾರತ ತನ್ನ ಅಣ್ವಸ್ತ್ರಗಳನ್ನು ಆಧುನೀಕರಿಸುತ್ತಿರುವಂತೆ ತೋರಿ ಬರುತ್ತಿದೆ ಎಂದು ಹ್ಯಾನ್ಸ್‌ ಎಂ ಕ್ರಿಸ್ಟನ್‌ಸನ್‌ ಮತ್ತು ರಾಬರ್ಟ್‌ ಎಸ್‌ ನೋರಿಸ್‌ ಅವರು "ದಿ ಇಂಡಿಯನ್‌ ನ್ಯೂಕ್ಲಿಯರ್‌ ಫೋರ್‌ಸಸ್‌ 2017' ಎಂಬ ಶೀರ್ಷಿಕೆಯ ಲೇಖನದಲ್ಲಿ ಬರೆದರು. ಚೀನದೊಂದಿಗಿನ ಭವಿಷ್ಯದ ತನ್ನ ವ್ಯೂಹಾತ್ಮಕ ಸಂಬಂಧಗಳಿಗೆ ಭಾರತ ಹೆಚ್ಚು ಒತ್ತು ನೀಡುತ್ತಿರುವುದರಿಂದ ತನ್ನ ಅಣ್ವಸ್ತ್ರಗಳ ಸಂಗ್ರಹವನ್ನು ಆಧುನೀಕರಿಸುವ ದಿಶೆಯಲ್ಲಿ ಅದು ಅತ್ಯಂತ ಕ್ರಿಯಾಶೀಲವಾಗಿದೆ ಎಂದು ಅವರು ಬರೆದರು. ಭಾರತವು ಈಗಾಗಲೇ ಶಸ್ತ್ರಾಸ್ತ್ರ ದರ್ಜೆಯ 600 ಕಿಲೋಗ್ರಾಂ ಪ್ಲುಟೋನಿಯಂ  ಅನ್ನು ಬಹುತೇಕ ಉತ್ಪಾದಿಸಿದೆ. ಇದು 150 - 200 ಅಣ್ವಸ್ತ್ರ ಸಿಡಿ ತಲೆಗಳ ನಿರ್ಮಾಣಕ್ಕೆ ಸಾಕಾಗುತ್ತದೆ. ಹಾಗಿದ್ದರೂ ಭಾರತದ ತನ್ನ ಸಂಗ್ರಹದಲ್ಲಿರುವ ಪ್ಲುಟೋನಿಯಂ ನ ಪೂರ್ಣ ಪ್ರಮಾಣವನ್ನು ಶಸ್ತ್ರಾಸ್ತ್ರ  ದರ್ಜೆಗೆ ಪರಿವರ್ತಿಸಿಲ್ಲ ಎಂದು ಲೇಖನದಲ್ಲಿ ಹೇಳಲಾಯಿತು. ಕ್ರಿಸ್ಟನ್‌ಸನ್‌ ಮತ್ತು ನೋರಿಸ್‌ ಅವರ ಪ್ರಕಾರ ಅಗ್ನಿ 1 ಮತ್ತು ಸುಧಾರಿತ ಅಗ್ನಿ 2 ಎರಡು ಹಂತಗಳ ಅಣ್ವಸ್ತ್ರ ಕ್ಷಿಪಣಿಗಳು ಪಶ್ಚಿಮ, ಮಧ್ಯ ಹಾಗೂ ದಕ್ಷಿಣ ಚೀನದ ಎಲ್ಲ ಗುರಿಗಳನ್ನು ಭೆದಿಸಲು ಅಗತ್ಯವಿರುವ 2,000 ಕಿ.ಮೀ.ಗಳನ್ನು ಕ್ರಮಿಸಬಲ್ಲ ದೂರ ವ್ಯಾಪ್ತಿ ಸಾಮರ್ಥ್ಯವನ್ನು ಹೊಂದಿವೆ. ಇದನ್ನೂ ಮೀರಿಸುವ ಅಗ್ನಿ 4 ಅಣ್ವಸ್ತ್ರ ಕ್ಷಿಪಣಿಯನ್ನು ಈಶಾನ್ಯ ಭಾರತದಿಂದ ಉಡಾಯಿಸಿದ್ದೇ ಆದಲ್ಲಿ ಅದು ಬೀಜಿಂಗ್‌ ಮತ್ತು ಶಾಂಘೈ ಸಹಿತ ಇಡಿಯ ಚೀನದ ಎಲ್ಲ ಗುರಿಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ ಎಂದವರು ಹೇಳಿದರು.

2017: ನವದೆಹಲಿ:
 ನೇಪಾಳ ಮತ್ತು ಭೂತಾನ್‌ ಗಡಿ ಭಾಗಗಳಲ್ಲಿ ರಕ್ಷಣೆಯ ಹೊಣೆ ಹೊತ್ತಿರುವ
ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ವು ತನ್ನ ಗುಪ್ತಚರ ದಳದ ಮೂಲಕ ದೇಶ ವಿರೋಧಿ ಚಟುವಟಿಕೆ ಕುರಿತು ನಿಗಾ ವಹಿಸಲಿದೆ. ಎಸ್‌ಎಸ್‌ಬಿ ಗುಪ್ತಚರ ದಳದ 650 ಸಿಬ್ಬಂದಿ ಗಡಿ ಭಾಗಗಳಲ್ಲಿ ನಡೆಯುವ ಚಟುವಟಿಕೆಗಳ ಕಡೆಗೆ ಗಮನ ಹರಿಸಲಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಸಮ್ಮತಿ ನೀಡಿತು. ಭಾರತ–ನೇಪಾಳದ 1,751 ಕಿ.ಮೀ. ಹಾಗೂ ಇಂಡೋ–ಭೂತಾನ್‌ನ 699 ಕಿ.ಮೀ. ಗಡಿ ಪ್ರದೇಶದಲ್ಲಿ ಎಸ್‌ಎಸ್‌ಬಿ ರಕ್ಷಣಾ ಕಾರ್ಯ ನಡೆಸುತ್ತಿದೆ. ಜಾರ್ಖಂಡ್‌ ಹಾಗೂ ಬಿಹಾರದ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತಂಡಗಳೂ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸಲಿವೆ. ಭೂತಾನ್, ನೇಪಾಳ ಗಡಿಗಳಲ್ಲಿ ಜನರ ಸಂಚಾರಕ್ಕೆ ಯಾವುದೇ ತಡೆಗಳಿಲ್ಲ. ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಉಭಯ ರಾಷ್ಟ್ರಗಳ ಜನರು ಉತ್ತಮ ಸಂಬಂಧ ಹೊಂದಿದ್ದು, ಅಹಿತಕರ ಘಟನೆ ಸಂಭವಿಸದಂತೆ ರಕ್ಷಣೆ ಒದಗಿಸುವ ಜವಾಬ್ದಾರಿ ಹೊತ್ತಿದೆ. 1962ರಲ್ಲಿ ಚೀನಾದ ದಾಳಿ ನಂತರದಲ್ಲಿ 80 ಸಾವಿರ ಸಿಬ್ಬಂದಿ ಹೊಂದಿರುವ ಬಲಿಷ್ಠ ಪಡೆ ಎಸ್‌ಎಸ್‌ಬಿಯನ್ನು 1963ರಲ್ಲಿ ಸ್ಥಾಪಿಸಲಾಗಿತ್ತು


2017: ಭಡೋಹಿ, ಉತ್ತರ ಪ್ರದೇಶ : ಪ್ರಶಸ್ತಿ ಪುರಸ್ಕೃತ ಬಾಲಿವುಡ್‌ ಫೋಟೋಗ್ರಾಫ‌ರ್‌ ರಾಜು ಉಪಾಧ್ಯಾಯ ಗೋಪೀಗಂಜ್‌ ಪ್ರದೇಶದಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಮೃತರಾದರು. 55ರ ಹರೆಯದ ಉಪಾಧ್ಯಾಯ ಅವರ ವಾಹನಕ್ಕೆ ಛತ್ಮೀ ಗ್ರಾಮಕ್ಕೆ ಸಮೀಪದಲ್ಲಿ ಟ್ರಕ್‌ ಢಿಕ್ಕಿ ಹೊಡೆಯಿತು. ಉಪಾಧ್ಯಾಯ ಅವರು ಪತ್ನಿ ಆಶಾ ಉಪಾಧ್ಯಾಯ ಅವರನ್ನು ಭೇಟಿಯಾಗಿ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದರು. ಪೊಲೀಸರು ಟ್ರಕ್‌ ಚಾಲಕನನ್ನು ಬಂಧಿಸಿ ಟ್ರಕ್ಕನ್ನು ವಶಕ್ಕೆ ತೆಗೆದುಕೊಂಡರು. 

2008: ತಮ್ಮ ವಿವಾಹ ಏರ್ಪಡಿಸಿದ್ದ ಕಲ್ಯಾಣ ಮಂಟಪಕ್ಕೆ ಸಮೀಪದ ಆಟದ ಮೈದಾನದ ಬಳಿಗೆ ಹೆಲಿಕಾಪ್ಟರಿನಲ್ಲಿ
ಬಂದು, ಮೇಲಿನಿಂದ ಪ್ಯಾರಾಚೂಟ್ ಮೂಲಕ 7 ಸಾವಿರ ಅಡಿ ಕೆಳಗೆ ಧುಮುಕಿ ವಧು ಶ್ವೇತ ಪುಸ್ಟಿ ಅವರತ್ತ ಪ್ಯಾರಾಚೂಟಿನಲ್ಲಿ ಧಾವಿಸುವ ಮೂಲಕ ವಾಯುಪಡೆಯಲ್ಲಿ ಅಧಿಕಾರಿಯಾದ ಸಿಸಿರ್ ಭುವನೇಶ್ವರದಲ್ಲಿ 'ಮದುವೆ ಮಾರ್ಗದಲ್ಲಿ ದಾಖಲೆ' ಒಂದನ್ನು ಸೃಷ್ಟಿಸಿದರು. ಅಮೆರಿಕದಲ್ಲಿ ಭಾರತದ ತ್ರಿವರ್ಣ ಧ್ವಜದೊಂದಿಗೆ ಹೆಲಿಕಾಪ್ಟರಿನಿಂದ 15 ಸಾವಿರ ಅಡಿ ಕೆಳಗೆ ಧುಮುಕಿ ಲಿಮ್ಕಾ ದಾಖಲೆಗಳ ಪುಸ್ತಕದಲ್ಲೂ ಸಿಸಿರ್ ತಮ್ಮ ಹೆಸರು ನಮೂದಿಸಿದ್ದರು. ವಿನೂತನ ರೀತಿಯಲ್ಲಿ ಮದುವೆಯಾಗಬೇಕೆಂಬ ತಮ್ಮ ಬಹುಕಾಲದ ಮನದಾಸೆ ಈಡೇರಿಸಿಕೊಳ್ಳಲು ಸಿಸಿರ್ಗೆ ಖರ್ಚಾದದ್ದು 3 ಲಕ್ಷ ರೂಪಾಯಿ!

2008: ಅಮೆರಿಕದ ಬಿಸಿನೆಸ್ ಮ್ಯಾಗಜೀನ್ `ಫೋಬ್ಸ್' ಪತ್ರಿಕೆ ಸಂಗ್ರಹಿಸಿರುವ ಇತ್ತೀಚಿನ `ಬಿಲಿಯನೇರ್ಗಳ ಪತ್ನಿಯರು' ಪಟ್ಟಿಯಲ್ಲಿ ಉಷಾ ಮಿತ್ತಲ್ ಹಾಗೂ ಟೀನಾ ಅಂಬಾನಿ ಹೆಸರು ದಾಖಲಾಯಿತು. ಉಷಾ ಮಿತ್ತಲ್ ವಿಶ್ವದ ನಾಲ್ಕನೇ ಅತ್ಯಂತ ಶ್ರೀಮಂತ ಹಾಗೂ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಪತ್ನಿ. ಟೀನಾ ಅಂಬಾನಿ ವಿವಾಹವಾಗಿರುವುದು ವಿಶ್ವದ 6ನೇ ಅತ್ಯಂತ ಶ್ರೀಮಂತ ಅನಿಲ್ ಅಂಬಾನಿ ಅವರನ್ನು. `ಶತಕೋಟ್ಯಧಿಪತಿಗಳ ಪತ್ನಿಯರ ಕ್ಲಬ್'ಗೆ ಸದಸ್ಯತ್ವ ಪಡೆಯುವುದೆಂದರೆ ಅದು ಅಷ್ಟೇನೂ ಸುಲಭವಲ್ಲ ಎಂದು ತನ್ನ ವೆಬ್ಸೈಟಿನಲ್ಲಿ ಪ್ರಕಟಿಸಿದ ಲೇಖನದಲ್ಲಿ `ಫೋಬ್ಸ್' ತಿಳಿಸಿತು.

2007: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಬರೆದ ಪತ್ರವನ್ನು ಹರಾಜು ಹಾಕದಂತೆ ಯಶಸ್ವಿಯಾಗಿ ತಡೆದು ಅವುಗಳನ್ನು ಭಾರತ ತನ್ನ ವಶಕ್ಕೆ ತೆಗೆದುಕೊಂಡ ಕೇವಲ ಹತ್ತು ದಿನಗಳ ಅಂತರದಲ್ಲಿ ಲಂಡನ್ನಿನ ಸೊಥೆಬಿ ಹರಾಜು ಸಂಸ್ಥೆಯು ರಾಷ್ಟ್ರಪಿತನ ಹಸ್ತಾಕ್ಷರ ಇರುವ ಪತ್ರಗಳು ಮತ್ತು ಅವರ ಕೈ ಬರಹದ ಸರಣಿ ಲೇಖನಗಳನ್ನು ಈದಿನ ಹರಾಜು ಹಾಕಿತು. ಇಂಗ್ಲಿಷ್ ಸಾಹಿತ್ಯ ಮತ್ತು ಐತಿಹಾಸಿಕ ದಾಖಲೆಗಳನ್ನು ಹರಾಜು ಮಾಡುವ ತನ್ನ ಯೋಜನೆಯನ್ವಯ ಸಂಸ್ಥೆಯು 1920 ಮತ್ತು 1940ರ ಮಧ್ಯದಲ್ಲಿ ಗಾಂಧೀಜಿ ಅವರು ಬರೆದಿದ್ದ ಸರಣಿ ಲೇಖನ, ಪತ್ರಗಳನ್ನು ಹರಾಜು ಹಾಕಿತು. ಯಂಗ್ ಇಂಡಿಯಾ ಪತ್ರಿಕೆಗಾಗಿ ಬರೆದ ಲೇಖನಗಳ ಸರಣಿ ಹಾಗೂ ಗಾಂಧೀಜಿ ಅವರ ಹಸ್ತಾಕ್ಷರ ಇರುವ 11 ಪತ್ರಗಳು ಸೇರಿದಂತೆ ಒಟ್ಟು 33 ಪುಟಗಳನ್ನು 45,600 (ಅಂದಾಜು 37 ಲಕ್ಷ 40 ಸಾವಿರ ರೂಪಾಯಿ) ಪೌಂಡಿಗೆ ಹರಾಜು ಹಾಕಲಾಯಿತು. 1921ರಲ್ಲಿ ಯಂಗ್ ಇಂಡಿಯಾ ಪತ್ರಿಕೆಗೆ ಬರೆದಿರುವ ಈ ಲೇಖನಗಳಲ್ಲಿ ಗಾಂಧೀಜಿ ಅವರು ದೇಶದ ರಾಜಕೀಯ, ಸಾಂಸ್ಕೃತಿಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಜಾತಿ ವ್ಯವಸ್ಥೆ, ಖಾದಿ ಜಾಗೃತಿ ಅಭಿಯಾನ, ವಸಾಹತುಶಾಹಿ ಶಿಕ್ಷಣ ವ್ಯವಸ್ಥೆ, ಅಹಿಂಸಾತ್ಮಕ ಚಳವಳಿಯ ಮಹತ್ವ ಸೇರಿದಂತೆ ಹಲವು ಗಂಭೀರ ವಿಷಯಗಳ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಅವರ ಹಸ್ತಾಕ್ಷರ ಇರುವ ಹನ್ನೊಂದು ಪತ್ರಗಳಲ್ಲಿ ಆರು ಪತ್ರಗಳನ್ನು ಯಂಗ್ ಇಂಡಿಯಾ ಪತ್ರಿಕೆಗೆ ಕೆಲಸ ಮಾಡುತ್ತಿದ್ದ ಯುವ ಕಾಂಗ್ರೆಸ್ ನಾಯಕ ಬದ್ರುಲ್ ಹಸನ್ ಅವರಿಗೆ ಬರೆಯಲಾಗಿತ್ತು. ಮೂರು ಪತ್ರಗಳನ್ನು ಬದ್ರುಲ್ ಹಸನ್ ಕುಟುಂಬದ ಇತರ ಸದಸ್ಯರಿಗೆ ಬರೆಯಲಾಗಿತ್ತು. ಒಂದು ಪತ್ರ ಬದ್ರುಲ್ ಸಾವಿನ ಕುರಿತಾದದ್ದು. ಗಾಂಧೀಜಿ ಅವರ ಹತ್ಯೆಗಿಂತ ಕೇವಲ ಹತ್ತೊಂಬತ್ತು ದಿನಗಳ ಮೊದಲು ಬರೆದ ಅವರ ಕೊನೆಯ ಪತ್ರವನ್ನು ಕ್ರಿಸ್ಟಿ ಸಂಸ್ಥೆ ಹರಾಜು ಹಾಕಲು ಮುಂದಾದಾಗ ಕಳೆದ ಜುಲೈ 2 ರಂದು ಭಾರತ ಯಶಸ್ವಿಯಾಗಿ ತಡೆದಿತ್ತು. ಹಲವು ಸುತ್ತಿನ ಚರ್ಚೆಯ ನಂತರ ಇಂಡಿಯಾ ಹೌಸ್ ಆ ಪತ್ರವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. `ಉರ್ದು ಹರಿಜನ್'ಗಾಗಿ ಬರೆದ ಆ ಕೊನೆಯ ಪತ್ರದಲ್ಲಿ ಗಾಂಧೀಜಿ ಅವರು ಪರಧರ್ಮ ಸಹಿಷ್ಣುತೆಯ ಮಹತ್ವದ ಕುರಿತು ಸುದೀರ್ಘವಾಗಿ ಚರ್ಚಿಸಿದ್ದರು.

2007: ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈದಿನ ವಾಷಿಂಗ್ಟನ್ನಿನಲ್ಲಿ ಸೆನೆಟ್ ಸಭೆಯನ್ನು ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಿಸಲಾಯಿತು. ಕ್ರಿಸ್ತಪೂರ್ವ 1500ರ ಕಾಲದ ಪುರಾತನ ಹಿಂದು ಗ್ರಂಥ ಋಗ್ವೇದಲ್ಲಿನ ಗಾಯತ್ರಿ ಮಂತ್ರವನ್ನು ಭಾರತೀಯ ಮೂಲದ ಅಮೆರಿಕ ಪ್ರಜೆ, ಅರ್ಚಕ ರಾಜನ್ ಜೆಡ್ ಅವರು 1789ರಲ್ಲಿ ಸ್ಥಾಪನೆಯಾಗಿರುವ ಸೆನೆಟ್ ಸಭಾಂಗಣದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಪಠಿಸಿದರು. ಪೆನ್ಸಿಲ್ವೇನಿಯಾದ ಸೆನೆಟರ್ ರಾಬರ್ಟ್ ಕ್ಯಾಸೆ ಅವರು ರಾಜನ್ ಅವರನ್ನು ಪರಿಚಯಿಸಿದ ನಂತರ ಭಾರತದ ಪವಿತ್ರ ಗಂಗಾ ಜಲವನ್ನು ಸಭಾಂಗಣದ ಸುತ್ತ ಸಿಂಪಡಿಸಿ, ಗಾಯತ್ರಿ ಮಂತ್ರ ಪಠಿಸಿದರು.

2007: ರಾಷ್ಟ್ರಪತಿ ಸ್ಥಾನದ ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್ ತಮ್ಮ ಹಾಗೂ ಪತ್ನಿಯ ಸ್ಥಿರ ಹಾಗೂ ಚರಾಸ್ತಿ ವಿವರಗಳನ್ನು ಬಹಿರಂಗಪಡಿಸಿದರು. ರಾಷ್ಟ್ರಪತಿ ಸ್ಥಾನದ ಸ್ಪರ್ಧಿಗಳು ಆಸ್ತಿ ವಿವರ ಪ್ರಕಟಿಸುವ ಅನಿವಾರ್ಯತೆ ಇಲ್ಲದಿದ್ದರೂ ಶೆಖಾವತ್ ಈ ಹೆಜ್ಜೆ ಇರಿಸಿದರು.

2007: ಹಿಂದಿ ಭಾಷೆಯನ್ನು ಜನಪ್ರಿಯಗೊಳಿಸುವುದು, ಸಂಯುಕ್ತ ರಾಷ್ಟ್ರ ಸಂಸ್ಥೆಯಿಂದ ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನ ದೊರಕಿಸುವುದು ಮತ್ತು ಭಾರತೀಯ ಸಮುದಾಯದ ಜನರಿರುವ ರಾಷ್ಟ್ರಗಳಲ್ಲಿ ಹಿಂದಿ ಕಲಿಸುವ ಮಹತ್ತರ ಉದ್ದೇಶದ ಮೂರು ದಿನಗಳ ವಿಶ್ವ ಹಿಂದಿ ಸಮ್ಮೇಳನಕ್ಕೆ ನ್ಯೂಯಾರ್ಕಿನಲ್ಲಿ ಈದಿನ ಚಾಲನೆ ನೀಡಲಾಯಿತು.

2006: ಹನ್ನೆರಡು ವರ್ಷಗಳ ಬಳಿಕ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು ಶ್ರಾವಣಕ್ಕೆ ಮುನ್ನವೇ ಭರ್ತಿಯಾದವು.

2006: ಗಡಿ ಘರ್ಷಣೆ ಸಂದರ್ಭದಲ್ಲಿ ತನ್ನ 8 ಯೋಧರನ್ನು ಕೊಂದು ಇಬ್ಬರು ಯೋಧರನ್ನು ಹಿಜ್ಬುಲ್ಲಾ ಗೆರಿಲ್ಲಾಗಳು ಒತ್ತೆಸೆರೆ ಹಿಡಿದ ಹಿನ್ನೆಲೆಯಲ್ಲಿ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನಿನ 27 ಮಂದಿ ಮೃತರಾದರು.

1995: ಸಿನಿಮಾ ಪತ್ರಕರ್ತೆ ದೇವಯಾನಿ ಚೌಬಾಲ್ ನಿಧನ.

1932: ರಂ.ಶಾ. ಎಂದೇ ಕನ್ನಡ ಸಾಹಿತ್ಯ ವಲಯದಲ್ಲಿ ಖ್ಯಾತರಾಗಿರುವ ರಂಗನಾಥ ಶಾಮಾಚಾರ್ಯ ಲೋಕಾಪುರ ಅವರು ಶಾಮಾಚಾರ್ಯ- ಇಂದಿರಾಬಾಯಿ ದಂಪತಿಯ ಮಗನಾಗಿ ಜಮಖಂಡಿ ತಾಲ್ಲೂಕಿನ ಹುನ್ನೂರಿನಲ್ಲಿ ಜನಿಸಿದರು.

1929: ಇಂಗ್ಲಿಷ್, ಅನುವಾದ ಸಾಹಿತ್ಯ, ಕವಿತೆ, ಭಾಷಾಶಾಸ್ತ್ರ ಮತ್ತು ಜಾನಪದ ಸೇರಿದಂತೆ ಭಾರತೀಯ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ ಎ.ಕೆ. ರಾಮಾನುಜನ್ ಅವರು ಈದಿನ ಮೈಸೂರಿನಲ್ಲಿ ಜನಿಸಿದರು.

1907: ಸಾಹಿತಿ ಕಡಿದಾಳ್ ಮಂಜಪ್ಪ ಜನನ.

1905: ಖ್ಯಾತ ಕಾಶ್ಮೀರಿ ಸ್ವಾತಂತ್ರ್ಯ ಹೋರಾಟಗಾರ ಪ್ರೇಮನಾಥ ಬಜಾಜ್ ಜನನ

No comments:

Post a Comment