Saturday, July 21, 2018

ಸ್ಯಾನಿಟರಿ ನ್ಯಾಪ್ಕಿನ್, ಜಿಎಸ್ ಟಿ ಮುಕ್ತ, ಫ್ರಿಜ್, ಸಣ್ಣ ಟಿವಿಗೆ ತೆರಿಗೆ ಇಳಿಕೆ


ಸ್ಯಾನಿಟರಿ ನ್ಯಾಪ್ಕಿನ್, ಜಿಎಸ್ ಟಿ ಮುಕ್ತ,
 ಫ್ರಿಜ್, ಸಣ್ಣ ಟಿವಿಗೆ ತೆರಿಗೆ ಇಳಿಕೆ

ನವದೆಹಲಿ: ಸ್ಯಾನಿಟರಿ ನ್ಯಾಪ್ ಕಿನ್‌ಗಳು ಸೇರಿದಂತೆ ಹಲವಾರು ಗ್ರಾಹಕ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆಯಿಂದ (ಜಿ ಎಸ್ ಟಿ) ವಿನಾಯ್ತಿ ನೀಡುವ ಹಾಗೂ 50ಕ್ಕೂ ಹೆಚ್ಚಿನ ಗ್ರಾಹಕ ಬಳಕೆಯ ವಸ್ತುಗಳಿಗೆ ತೆರಿಗೆ ಇಳಿಸುವ ಮಹತ್ವದ ನಿರ್ಧಾರವನ್ನು ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಂಡಳಿಯ ಸಭೆ ಕೈಗೊಂಡಿದೆ.

ಜಿಎಸ್ ಟಿ ಮಂಡಳಿ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವ ಪೀಯೂಶ ಗೋಯೆಲ್ ಅವರು ಈ ವಿಚಾರವನ್ನು ತಿಳಿಸಿದರು.

ಒಂದು ವರ್ಷ ಹರೆಯದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಪ್ರಕಾರ ಸ್ಯಾನಿಟರಿ ನ್ಯಾಪ್ ಕಿನ್ ಗಳಿಗೆ ಶೇಕಡಾ ೧೨ರಷ್ಟು ತೆರಿಗೆ ವಿಧಿಸಲಾಗಿತ್ತು. ಇದು ರಾಷ್ಟ್ರಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ನ್ಯಾಪ್ ಕಿನ್ ಗಳನ್ನು ತೆರಿಗೆ ಮುಕ್ತಗೊಳಿಸುವಂತೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

೨೮ನೇ ಜಿಎಸ್ ಟಿ ಮಂಡಳಿ ಸಭೆಯ ಬಳಿಕ ವರದಿಗಾರರ ಜೊತೆ ಮಾತನಾಡಿದ ಸಚಿವರು ಬಿದಿರಿನ ಮೇಲಿನ ತೆರಿಗೆಯನ್ನೂ ಶೇಕಡಾ ೧೨ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.

ಸ್ಯಾನಿಟರಿ ನ್ಯಾಪ್ ಕಿನ್ ಗಳ ಉತ್ಪಾದನೆ ವೇಳೆ ಪ್ರವೇಶ ತೆರಿಗೆ ವಿಧಿಸಿದರೂ, ಅದನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು  ಇದರ ಅರ್ಥ.

ನ್ಯಾಪ್ ಕಿನ್ ಗಳನ್ನು ತೆರಿಗೆ ಮುಕ್ತ ಗೊಳಿಸಿರುವುದರ ಜೊತೆಗೆ ಇತರ ಹಲವಾರು ವಸ್ತುಗಳಿಗೂ ತೆರಿಗೆ ವಿನಾಯ್ತಿ ಹಾಗೂ ರಿಯಾಯ್ತಿಗಳನ್ನು ನೀಡುವ ಮೂಲಕ ಸರಕು ಮತ್ತು ಸೇವಾ ತೆರಿಗೆ ಮಂಡಲಿಯು ಗ್ರಾಹಕರ ಮೇಲಿನ ತೆರಿಗೆ ಹೊರೆಯನ್ನು ತಗ್ಗಿಸಿದೆ ಎಂದು ಸಚಿವ ಪೀಯೂಶ್ ಗೋಯೆಲ್ ಹೇಳಿದರು.

ಜಿಎಸ್ ಟಿ ತೆರಿಗೆ ವಿನಾಯ್ತಿ ಪಡೆದ ಉತ್ಪನ್ನಗಳಲ್ಲಿ ಕಲ್ಲು, ಮಾರ್ಬಲ್ ಅಥವಾ ಮರದಿಂದ ಮಾಡಲಾದ ದೇವರ ವಿಗ್ರಹಗಳು, ಅತ್ಯಮೂಲ್ಯ ಹರಳುಗಳು ಮತ್ತು ಸಾಲ್ ಎಲೆಗಳನ್ನು ಬಳಸದ ರಾಖಿಗಳು ಸೇರಿವೆ.

ರಿಫ್ರಿಜರೇಟರ್ (ಫ್ರಿಜ್), 25 ಅಂಗುಲವರೆಗಿನ ಸಣ್ಣ ಪರದೆಯ ಟೆಲಿವಿಷನ್ ಗಳು, ಲಿಥಿಯಂ ಬ್ಯಾಟರಿಗಳು, ಅಯಾನ್ ಬ್ಯಾಟರಿಗಳು, ವ್ಯಾಕ್ಯೂಂ ಕ್ಲೀನರ್ ಗಳು, ಫುಡ್ ಗ್ರೈಂಡರುಗಳು, ಮಿಕ್ಸರ್‌ಗಳು, ಸ್ಟೋರೇಜ್ ವಾಟರ್ ಹೀಟರುಗಳು, ಹೇರ್ ಡ್ರೈಯರುಗಳು, ಪೆಯಿಂಟ್, ವಾರ್ನಿಶ್ಗಳು, ವಾಟರ್ ಕೂಲರುಗಳು, ಸುಗಂಧ ದ್ರವ್ಯಗಳು, ಟಾಯ್ಲೆಟ್ ಸ್ಪ್ರೇಗಳು, ಸೌಂದರ್‍ಯ ವರ್ಧಕಗಳ ತೆರಿಗೆಯನ್ನು ಶೇಕಡಾ ೨೮ರಿಂದ ಶೇಕಡಾ ೧೮ಕ್ಕೆ ಇಳಿಸಲಾಗಿದೆ.

೧೦೦೦ ರೂಪಾಯಿಗಳವರೆಗಿನ ಪಾದರಕ್ಷೆಗಳ ಜಿಎಸ್ಟಿಯನ್ನು ಶೇಕಡಾ ೫ರಷ್ಟು, ಹ್ಯಾಂಡ್ ಬ್ಯಾಗುಗಳು, ಚಿನ್ನಾಭರಣ ಬಾಕ್ಸ್ ಗಳು, ಗಾಜಿನ ಕಲಾಕೃತಿಗಳು, ಆರ್ನಮೆಂಟಲ್ ಫ್ರೇಮಿನ ಕನ್ನಡಿಗಳ ತೆರಿಗೆಯನ್ನು ಶೇಕಡಾ ೧೨ಕ್ಕೆ ಇಳಿಸಲಾಗಿದೆ.

ಪರಿಷ್ಕೃತ ತೆರಿಗೆ ದರಗಳು ಜುಲೈ ೨೭ರಿಂದ ಜಾರಿಗೆ ಬರಲಿವೆ ಎಂದು ಸಚಿವರು ಹೇಳಿದರು.
ಜಿಎಸ್ ಟಿ ಮಂಡಳಿಯ ಮುಂದಿನ ಸಭೆ ಆಗಸ್ಟ್ ೪ರಂದು ನಡೆಯಲಿದೆ. 

No comments:

Post a Comment