Sunday, July 1, 2018

ಏಪಲ್ ಬೀಜಗಳು ವಿಷಯುಕ್ತವೇ? ಏಪಲ್ ಬೀಜ ಕೊಟ್ಟು ಕೊಂದದ್ದು ಹೌದಾ?


ಏಪಲ್ ಬೀಜಗಳು ವಿಷಯುಕ್ತವೇ? ಏಪಲ್
ಬೀಜ ಕೊಟ್ಟು ಕೊಂದದ್ದು ಹೌದಾ?

ಆಸ್ಟ್ರೇಲಿಯಾದಲ್ಲಿ ಭಾರತೀಯ ಮಹಿಳೆಯೊಬ್ಬಳು  ಪುಡಿ ಮಾಡಿದ ಏಪಲ್ ಬೀಜಗಳನ್ನು ಕೊಟ್ಟು ತನ್ನ ಗಂಡನನ್ನು ಕೊಂದಳು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ  ವ್ಯಾಪಕವಾಗಿ ಪ್ರಸಾರವಾಗುತ್ತಿದೆ.  ಆಕೆ ಮತ್ತು ಆಕೆಯ ಪ್ರೇಮಿಗೆ ಈ ಪ್ರಕರಣದಲ್ಲಿ ಕ್ರಮವಾಗಿ 22 ವರ್ಷ ಮತ್ತು 25 ವರ್ಷಗಳ ಸೆರೆವಾಸದ ಶಿಕ್ಷೆಯನ್ನು 2018ರ ಜೂನ್ 21ರಂದು  ವಿಧಿಸಲಾಗಿದೆ ಎಂದು ಈ ಸುದ್ದಿ ಉಲ್ಲೇಖಿಸುತ್ತದೆ.
ಜಾಲತಾಣದ  ಇದೇ ಸುದ್ದಿಯ ಮುಂದುವರಿದ ಭಾಗ ಹೀಗೆ ಇದೆ: ಇಲ್ಲಿಯವರೆಗೆ ನನಗೆ ಏಪಲ್ಸ್ ಬೀಜಗಳೂ ಸಯನೈಡ್ ವಿಷವನ್ನು ಹೊಂದಿವೆ ಎಂಬುದು ಗೊತ್ತೇ ಇರಲಿಲ್ಲ. ನಾನು ಮಾಹಿತಿಗಾಗಿ ತಡಕಾಡಿದೆ. ಮತ್ತು ಏಪಲ್ ಬೀಜಗಳು ಸಯನೈಡ್ ಹೊಂದಿವೆ ಎಂಬ ವಿಷಯ ತಿಳಿದು ಅಚ್ಚರಿಗೊಂಡೆ. ಈ ಕಾರಣಕ್ಕಾಗಿಯೇ ಏಪಲ್ ಒಳಕ್ಕೆ ಕೀಟಗಳು ದಾಂಗುಡಿ ಇಡುವುದಿಲ್ಲ.ಬಹುಶ ಅಲ್ಲಿ ತಮಗೆ ಸಾವು ಕಾದಿರುತ್ತದೆ ಎಂಬುದು ಅವುಗಳಿಗೆ ಗೊತ್ತಿರುತ್ತದೋ ಏನೋ? ಆದ್ದರಿಂದ ಏಪಲ್ ತಿನ್ನುವ ಮುನ್ನ ಬೀಜಗಳನ್ನು ತೆಗೆಯಲು ಮರೆಯಬೇಡಿ…. ವಿಶೇಷವಾಗಿ ಮಕ್ಕಳಿಗೆ ಇಡೀ ಏಪಲ್ ಕೊಡಲೇಬೇಡಿ. ಬದಲಿಗೆ ಅವುಗಳನ್ನು ಕತ್ತರಿಸಿ, ಬೀಜಗಳನ್ನು ತೆಗೆದುಕೊಡಿ. ಕುರಿತು ಸಂಶಯಗಳಿದ್ದರೆ ಗೂಗಲ್ ನಲ್ಲಿ ಶೋಧಿಸಿ. ಮತ್ತು ಸಂದೇಶವನ್ನು ಸಾಧ್ಯವಿದ್ದಷ್ಟೂ ಜನರಿಗೆ ಕಳುಹಿಸಿ.
ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಸುದ್ದಿ ಸರಿಯಾ? ಸರಿಯಾಗಿದ್ದರೆ ಎಷ್ಟರ ಮಟ್ಟಿಗೆ ಸರಿ?
ವಾಸ್ತವಾಂಶ
ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಹರಡುತ್ತಿರುವ ಏಪಲ್ ಬೀಜಗಳು ವಿಷಪೂರಿತವಾಗಿವೆ ಎಂಬ ಸುದ್ದಿಗೆ ಮೂಲಾಧಾರ ಆಸ್ಟ್ರೇಲಿಯಾದ ಒಂದು ಕೊಲೆ ಪ್ರಕರಣದ ಸುದ್ದಿ. ಕೊಲೆ ಪ್ರಕರಣದಲ್ಲಿ ಭಾರತೀಯ ಮಹಿಳೆಯೊಬ್ಬಳು ತನ್ನ ಗಂಡನನ್ನು ಪುಡಿ ಮಾಡಿದ ಏಪಲ್ ಬೀಜದ ಜ್ಯೂಸ್ ನೀಡಿ ಕೊಲೆ ಮಾಡಿದಳು. ಅಪರಾಧಕ್ಕಾಗಿ ಆಕೆಗೆ ಮತ್ತು ಆಕೆಯ ಪ್ರಿಯಕರನಿಗೆ ಕ್ರಮವಾಗಿ 22 ಮತ್ತು 25 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ

ಆದರೆ ಸುದ್ದಿ ಪೂರ್ತಿ ಸತ್ಯವಲ್ಲ, ಅರ್ಧ ಸತ್ಯ. ಸುದ್ದಿಯ ಮುಂದಿನ ಸಂದೇಶ ಏನೆಂದರೆ ಏಪಲ್ ಬೀಜಗಳು ಸಯನೈಡ್ ಹೊಂದಿವೆ. ಆದ್ದರಿಂದ ತಿಂದ ಬಳಿಕ ದೇಹದ ಒಳಗೆ ಅದು ವಿಷವಾಗಿ ಬದಲಾಗುತ್ತದೆ ಎಂಬುದು.
ವಾಸ್ತವವಾಗಿ ಇದು ಆಸ್ಟ್ರೇಲಿಯಾದಲ್ಲಿ ಸೋಫಿಯಾ ಸ್ಯಾಮ್ ಎಂಬ ಮಹಿಳೆ ತನ್ನ ಗಂಡ ಸ್ಯಾಮ್ ಅಬ್ರಹಾಮನನ್ನು ತನ್ನ ಮಾಜಿ ಪ್ರಿಯಕರ ಅರುಣ್ ಕಮಲಾಸನಮ್ ಜೊತೆ ಸೇರಿ ಕೊಂದ ಪ್ರಕರಣ.  ಘಟನೆ ಘಟಿಸಿದ್ದು ಆಸ್ಟ್ರೇಲಿಯಾದ ಮೆಲ್ಬೋರ್ನಿನಲ್ಲಿ 2015 ಅಕ್ಟೋಬರ್ ತಿಂಗಳಲ್ಲಿ.  ಆಸ್ಟ್ರೇಲಿಯಾದ ಸುಪ್ರೀಂಕೋರ್ಟ್ 2018 ಜೂನ್ 21ರಂದು ತೀರ್ಪು ನೀಡಿ ಸೋಫಿಯಾಗೆ 22 ವರ್ಷ ಮತ್ತು ಮತ್ತು ಕಮಲಾಸನಮ್ ಗೆ 27 ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿತು. ಬಹುಮುಖ್ಯವಾಗಿ ಇವರಿಬ್ಬರೂ ಸೇರಿ ಸಯನೈಡ್ ಮಿಶ್ರಿತ ಕಿತ್ತಳೆ ಜ್ಯೂಸ್ ನೀಡಿ ಸ್ಯಾಮ್ ಅಬ್ರಹಾಮ್ ನನ್ನು ಕೊಂದದ್ದಕ್ಕಾಗಿ ಕೋರ್ಟ್ ಶಿಕ್ಷೆ ವಿಧಿಸಿತು.  ( ಲಿಂಕ್ ಗಮನಿಸಿ: Apple Seeds Poisonous, Woman Killed Husband Giving Them ).

ಸುದ್ದಿಯಿಂದ ಸ್ಪಷ್ಟವಾಗುವ ಅಂಶ: ಅಪರಾಧಿಗಳಿಬ್ಬರೂ ಸೇರಿ ಸ್ಯಾಮ್ ಅಬ್ರಹಾಮನನ್ನು ಕೊಂದದ್ದು ನಿಜ, ಆದರೆ ಪುಡಿ ಮಾಡಿದ ಆಪಲ್ ಬೀಜದ ಜ್ಯೂಸ್ ನೀಡಿ ಅಲ್ಲ ಬದಲಿಗೆ ಸಯನೈಡ್ ಬೆರೆಸಿದ ಜ್ಯೂಸ್ ಕುಡಿಸಿ ಎಂಬುದು. ಹೀಗಾಗಿ ಪುಡಿ ಮಾಡಿದ ಏಪಲ್ ಬೀಜ ನೀಡಿ ಕೊಲ್ಲಲಾಯಿತು ಎಂಬುದು ಸತ್ಯದೂರವಾದ ಅಂಶ.
ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ಏಪಲ್ ಮೇಲೆ ಸುಳ್ಳು ಆರೋಪ ಹೊರಿಸಿ ಪ್ರಚಾರ ಮಾಡಲಾಗುತ್ತಿದೆಯೇ?
ವಾಸ್ತವವಾಗಿ ಏಪಲ್ ಬೀಜಗಳು ಸಯನೈಡ್ ಮತ್ತು ಸಕ್ಕರೆಯ ಅಂಶ ಇರುವ  ಅಮಿಗ್ಡಾಲಿನ್ (Amygdalin)  ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಈ ಸಂಯುಕ್ತವು ಏಪ್ರಿಕಾಟ್,  ಬಿಟ್ಟರ್ ಆಲ್ಮಂಡ್, ಪೀಚಸ್, ಪೀಯರ್ಸ್ ಮತ್ತು ಚೆರ್ರಿ ಪಿಟ್ಸ್ ಗಳಲ್ಲೂ ಇದೆ. ಲಿಮಾ ಬೀನ್ಸ್ ನಲ್ಲೂ ಇದೇ ಸಂಯುಕ್ತ ಇರುತ್ತದೆ. ಮಾನವ ದೇಹದೊಳಗಿನ ಪಚನಕಾರಿ ಎನ್ ಜೈಮುಗಳು ಎಮಿಗ್ರಾಲಿನನ್ನು ಹೈಡ್ರೋಜೆನ್ ಸಯನೈಡ್ (ಎಚ್ ಸಿ ಎನ್) ಆಗಿ ಪರಿವರ್ತಿಸುತ್ತದೆ. ಇದು ನಿಮ್ಮನ್ನು ಅಸ್ವಸ್ಥನನ್ನಾಗಿ ಮಾಡಬಹುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಕೊಲ್ಲಲೂ ಬಹುದು. ಆದರೆ ಆಪಲ್ ಬೀಜಗಳು ಅತ್ಯಂತ ದಪ್ಪವಾದ ರಕ್ಷಣಾತ್ಮಕ ಸಿಪ್ಪೆಯನ್ನು ಹೊಂದಿರುವುದರಿಂದ ಹೀಗಾಗುವುದು ಬಲು ಅಪರೂಪ. ಸಾಮಾನ್ಯವಾಗಿ ಜೀವಿಗಳ ಹೊಟ್ಟೆಯ ಒಳಕ್ಕೆ ಹೋದ ಬೀಜಗಳು ಅದೇ ಅವಸ್ಥೆಯಲ್ಲಿ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹೊರಬರುತ್ತವೆ. ಕಡು ರುಚಿಯ ಕಾರಣ ಜನರಾಗಲೀ ಪ್ರಾಣಿಗಳಾಗಲೀ ಅವುಗಳನ್ನು ತಿನ್ನುವುದಿಲ್ಲ.
ಆದರೆ ಹೆಚ್ಚಿನ ಪ್ರಮಾಣದಲ್ಲಿ ಏಪಲ್ ಬೀಜಗಳನ್ನು ಪುಡಿಮಾಡಿ ಇಲ್ಲವೇ ಜಗಿದು ತಿಂದರೆ ಅವು ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ಬ್ರಿಟಾನಿಕಾ.ಕಾಮ್ ಪ್ರಕಾರ 150ರಿಂದ ಕೆಲವು ಸಾವಿರಗಳಷ್ಟು ಪ್ರಮಾಣದ  ಪುಡಿ ಮಾಡಿದ ಏಪಲ್ ಬೀಜಗಳು ವಯಸ್ಕರಲ್ಲಿ ಸಯನೈಡ್ ವಿಷವಾಗಿ ಪರಿವರ್ತನೆಗೊಳ್ಳಬಲ್ಲುವು.

ಗೊತ್ತಿದ್ದೋ, ಗೊತ್ತಿಲ್ಲದೆಯೋ ಸ್ವಲ್ಪ ಪ್ರಮಾಣದಲ್ಲಿ ಏಪಲ್ ಬೀಜಗಳನ್ನು ತಿಂದರೆ ಅದು ಸ್ವಲ್ಪ ಪ್ರಮಾಣದ ಹೈಡ್ರೋಜನ್ ಸಯನೈಡನ್ನು ದೇಹದಲ್ಲಿ ಉಂಟು ಮಾಡಬಹುದು, ಆದರೆ
ಅದು ಸಹಜವಾಗಿಯೇ ದೇಹದಿಂದ ಹೊರತಳ್ಳಲ್ಪಡುತ್ತದೆ. ಅಲ್ಪ ಪ್ರಮಾಣದಲ್ಲಿ ಹೈಡ್ರೋಜನ್ ಸಯನೈಡ್ ದೇಹದಲ್ಲಿ ಉತ್ಪತ್ತಿಯಾದರೆ ಆಗ ತಲೆನೋವು, ಹೊಟ್ಟೆ ನೋವು, ವಾಕರಿಕೆ, ವಾಂತಿ, ತಲೆಸುತ್ತು, ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಆದ್ದರಿಂದ ಏಪಲ್ ತಿನ್ನುವಾಗ ಬೀಜಗಳನ್ನು ತೆಗೆದೇ ತಿನ್ನುವುದು ಕ್ಷೇಮಕರ.

No comments:

Post a Comment