2018: ನವದೆಹಲಿ: ರೈತರನ್ನು ನಿರ್ಲಕ್ಷಿಸಿ,
ಕೈಗಾರಿಕೋದ್ಯಮಿಗಳಿಗೆ ಹತ್ತಿರವಾಗಿದ್ದಾರೆ ಎಂದು ತಮ್ಮ ವಿರುದ್ಧ ಹರಿಹಾಯುತ್ತಿರುವ ವಿರೋಧ ಪಕ್ಷಗಳಿಗೆ
ಇಲ್ಲಿ ಪ್ರಖರ ಎದಿರೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ, ’ಕೈಗಾರಿಕೋದ್ಯಮಿಗಳ ಜೊತೆ ಬೆರೆಯುವುದರಲ್ಲಿ
ತಪ್ಪೇನಿಲ್ಲ, ಮಹಾತ್ಮ ಗಾಂಧಿ ಕೂಡಾ ಬಿರ್ಲಾ ಕುಟುಂಬದ ಜೊತೆ ಬೆರೆಯುತ್ತಿದ್ದರು’ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ
ರಾಜ್ಯದ ಸುಮಾರು ೬೦,೦೦೦ ಕೋಟಿ ರೂಪಾಯಿ ಮೊತ್ತದ ೮೧ ಹೂಡಿಕೆ ಯೋಜನೆಗಳಿಗೆ ಚಾಲನೆ ನೀಡಿ ಪ್ರಧಾನಿ
ಮಾತನಾಡುತ್ತಿದ್ದರು. ಉದ್ಯಮಿಗಳನ್ನು ’ಚೋರ ಮತ್ತು
ಲೂಟಿಕೋರರು’ ಎಂಬುದಾಗಿ ಕರೆಯುತ್ತಿರುವುದಕ್ಕಾಗಿ ವಿಪಕ್ಷಗಳ
ಮೇಲೆ ಹರಿಹಾಯ್ದ ಪ್ರಧಾನಿ ’ನನ್ನ ಉದ್ದೇಶಗಳು ಸ್ಪಷ್ಟವಾಗಿರುವುದರಿಂದ ಅವರ ಜೊತೆ ನಿಲ್ಲಲು ನಾನು
ಹಿಂಜರಿಯುವುದಿಲ್ಲ’ ಎಂದು ಹೇಳಿದರು. ‘ರಾಷ್ಟ್ರ ನಿರ್ಮಾಣದಲ್ಲಿ ಕೈಗಾರಿಕೋದ್ಯಮಿಗಳ ಕೊಡುಗೆ ರೈತರು
ಅಥವಾ ವೃತ್ತಿ ನಿರತರು ಅಥವಾ ಅಧಿಕಾರಿಯ ಕೊಡುಗೆಗೆ ಸಮ. ಕೈಗಾರಿಕೋದ್ಯಮಿಗಳ ಜೊತೆ ಒಡನಾಡುವುದರಲ್ಲಿ
ಯಾವ ತಪ್ಪೂ ಇಲ್ಲ. ಹಾಗೆ ಮಾಡಲು ನಾನು ಅಂಜುವುದಿಲ್ಲ’ ಎಂದು ಮೋದಿ ಉದ್ಯಮಿಗಳನ್ನು
ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ‘ನನ್ನ ಆತ್ಮಸಾಕ್ಷಿ
ನಿರ್ಮಲವಾಗಿದೆ. ಮಹಾತ್ಮಾ ಗಾಂಧಿ ಅವರು ಕೂಡಾ ಬಿರ್ಲಾಗಳ ಜೊತೆ ಸುದೀರ್ಘ ಒಡನಾಟ ಹೊಂದಿದ್ದರು. ಹಲವಾರು
ಸಂದರ್ಭಗಳಲ್ಲಿ ಅವರು ಕೈಗಾರಿಕೋದ್ಯಮಿಯ ಕುಟುಂಬದ ಜೊತೆಗೇ ವಾಸವಾಗಿದ್ದರು’ ಎಂದು ಮೋದಿ ನುಡಿದರು. ‘ನೀವು ಎಂದೂ ಅವರನ್ನು ಕೈಗಾರಿಕೋದ್ಯಮಿಗಳ ಜೊತೆಗಿನ ಫೊಟೋದಲ್ಲಿ
ನೋಡಲಾರಿರಿ. ಆದರೆ ಈ ಎಲ್ಲ ಕೈಗಾರಿಕೋದ್ಯಮಿಗಳು ಅವರ ಮನೆಗಳಲ್ಲಿ ಅವರಿಗೆ ತಲೆಬಾಗಿದ್ದಾರೆ. ಅವರು
ಪರದೆಯ ಹಿಂದಿನಿಂದ ಮಾತ್ರ ಭೇಟಿ ಮಾಡುತ್ತಾರೆ’ ಎಂದು ಮೋದಿ ವಿಪಕ್ಷಗಳನ್ನು
ತಿವಿದರು. ಮೋದಿ
ಅವರು ಕೈಗಾರಿಕೋದ್ಯಮಿಗಳ ಜೊತೆ ಹೊಂದಿರುವ ಒಡನಾಟಕ್ಕಾಗಿ ಇತ್ತೀಚೆಗೆ ಅವರ ವಿರುದ್ಧ ಪದೇ ಪದೇ ದಾಳಿ
ಮಾಡಿದ್ದ ಕಾಂಗ್ರೆಸ್, ರಫೇಲ್ ವ್ಯವಹಾರದ ಬಗೆಗಿನ ಸರ್ಕಾರದ ರಹಸ್ಯಕ್ಕಾಗಿ ಕಟು ಪ್ರಹಾರ ನಡೆಸಿತ್ತು. ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ
ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಕ್ಕೆ
ಸುಳ್ಳು ಹೇಳುತ್ತಿದ್ದಾರೆ ಎಂದು ಆಪಾದಿಸಿದ್ದರು. ಸರ್ಕಾರವು ಫ್ರಾನ್ಸಿನಿಂದ ಸಮರ ವಿಮಾನಗಳನ್ನು ಯುಪಿಎ
ಸರ್ಕಾರವು ತನ್ನ ಅವಧಿಯಲ್ಲಿ ಪಾವತಿ ಮಾಡಿದ್ದ ಹಣದ ಮೂರುಪಟ್ಟು ಬೆಲೆ ಕೊಟ್ಟು ಖರೀದಿಸಿದೆ ಎಂದು ರಾಹುಲ್
ಆಪಾದಿಸಿದ್ದರು. ರಾಜ್ಯದಲ್ಲಿ ಹೂಡಿಕೆ ಮಿತ್ರ ಪರಿಸರ
ನಿರ್ಮಾಣ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಯತ್ನಗಳನ್ನೂ
ಮೋದಿ ಶ್ಲಾಘಿಸಿದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ
ಪ್ರಧಾನಿ ಮೋದಿ ’ನಾನು ರಾಜ್ಯವೊಂದರ ಮುಖ್ಯಮಂತ್ರಿಯಾಗಿ ದೀರ್ಘ ಕಾಲ ಇದ್ದೆ. ಕೈಗಾರಿಕಾ ಚಟುವಟಿಕೆಗಾಗಿ
ಖ್ಯಾತಿ ಪಡೆದ ರಾಜ್ಯದಿಂದ ನಾನು ಬಂದಿದ್ದೇನೆ. ೬೦,೦೦೦ ಕೋಟಿ ರೂಪಾಯಿಗಳ ಹೋಡಿಕೆ ಸಣ್ಣ ವಿಷಯವಲ್ಲ.
ಯುಪಿ ಸರ್ಕಾರ ಊಹಿಸಲಾಗದಂತಹ ಕೆಲಸ ಮಾಡಿದೆ. ಹೂಡಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ನನಗೆ ಗೊತ್ತಿವೆ.
ಆದರೂ ಕೇವಲ ಐದು ತಿಂಗಳಲ್ಲಿ ಇದನ್ನು ಸಾಧಿಸಲಾಗಿದೆ. ಇದು ದೊಡ್ಡ ಯಶಸ್ಸು’ ಎಂದು ಹೇಳಿದರು. ಈ ಹೂಡಿಕೆ ಯೋಜನೆಗಳೂ ರಾಜ್ಯದಲ್ಲಿ ಕೈಗಾರಿಕೀಕರಣಕ್ಕೆ ಭಾರಿ
ಒತ್ತು ನೀಡುವ ನಿರೀಕ್ಷೆಯಿದೆ. ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ, ಅದನಿ ಸಮೂಹದ
ಅಧ್ಯಕ್ಷ ಗೌತಮ್ ಅದನಿ, ಎಸ್ಸೆಲ್ ಸಮೂಹದ ಅಧ್ಯಕ್ಷ ಸುಭಾಶ್ ಚಂದ್ರ, ಐಟಿಸಿ ಆಡಳಿತ ನಿರ್ದೇಶಕ ಸಂಜೀವ
ಪುರಿ, ಇತರ ಪ್ರಮುಖ ವ್ಯಾಪಾರೋದ್ಯಮ ಸಂಸ್ಥೆಗಳ ಉನ್ನತ ವ್ಯಕ್ತಿಗಳು ಈದಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಈ ವರ್ಷ ಫೆಬ್ರುವರಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಈದಿನದ ಸಮಾವೇಶವನ್ನು ಸಂಘಟಿಸಲಾಗಿತ್ತು. ಮುಖ್ಯಮಂತ್ರಿ
ಯೋಗಿ ಆದಿತ್ಯನಾಥ್ ಅವರು ಈ ವರ್ಷದ ಆದಿಯಲ್ಲಿ ನಡೆದ ಯಶಸ್ವೀ ಹೂಡಿಕೆದಾರರ ಶೃಂಗಸಭೆ ನಡೆಸುವಲ್ಲಿ
ಮುಂಚೂಣಿಯಲ್ಲಿ ನಿಂತು ರಾಜ್ಯವನ್ನು ಮುನ್ನಡೆಸಿದ್ದರು. ಪರಿಣಾಮವಾಗಿ ರಾಜ್ಯದಲ್ಲಿ ವಿವಿಧ ಯೋಜನೆಗಳ
ಜಾರಿಗೆ ಯೋಗ್ಯವಾದ ಪರಿಸರ ಇದೀಗ ನಿರ್ಮಾಣಗೊಂಡಿದೆ.
ಲೋಕಸಭೆಯಲ್ಲಿ ಲಕ್ನೋ ಕ್ಷೇತ್ರವನ್ನು ಪ್ರತಿನಿಧಿಸುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಅವರು ಕೇಂದ್ರದ ಪರವಾಗಿ ಮಹತ್ವದ ಯೋಜನೆಗಳಿಗೆ ಬೇಕಾದ ಯಾವುದೇ ಅಗತ್ಯ ಭದ್ರತೆಗಳನ್ನು ಒದಗಿಸುವ ಭರವಸೆ
ನೀಡಿದ್ದಾರೆ. ‘ರಾಷ್ಟ್ರದ ಗೃಹ ಸಚಿವನಾಗಿ ನಾನು ನಿಮಗೆ ಈ ಭರವಸೆ ನೀಡುತ್ತೇನೆ’ ಎಂದು ಅವರು ನುಡಿದರು.
2018: ಇಸ್ಲಾಮಾಬಾದ್: ಪಾಕಿಸ್ತಾನವು ಆಗಸ್ಟ್ ೧೪ರಂದು ಸ್ವಾತಂತ್ರ್ಯ ದಿನ ಆಚರಿಸುವುದಕ್ಕೆ
ಮುನ್ನವೇ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸುವರು ಎಂದು ಖಾನ್
ಅವರ ಪಾಕಿಸ್ತಾನ್ ತೆಹ್ರೀಕ್ -ಐ- ಇನ್ಸಾಫ್ (ಪಿಟಿಐ) ಪಕ್ಷವು ಪ್ರಕಟಿಸಿತು. ಮುಂದಿನ ಸರ್ಕಾರ ರಚನೆಗಾಗಿ
ಪಕ್ಷವು ಪಕ್ಷೇತರರು ಮತ್ತು ಸಣ್ಣ ಪಕ್ಷಗಳನ್ನು ಸಂಪರ್ಕಿಸಲು ತೀವ್ರ ಯತ್ನ ನಡೆಸುತ್ತಿದೆ. ಪಾಕಿಸ್ತಾನ್
ತೆಹ್ರೀಕ್ -ಐ-ಇನ್ಸಾಫ್ (ಪಿಟಿಐ) ಪಕ್ಷವು ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಜುಲೈ ೨೫ರ ಚುನಾವಣೆಯಲ್ಲಿ
ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆಯಾಗಿದ್ದರೂ ಸ್ವಂತ ಬಲದಲ್ಲಿ ಸರ್ಕಾರ ರಚಿಸಲು ಬೇಕಾದ ಸದಸ್ಯರ ಬೆಂಬಲವನ್ನು
ಅದು ಹೊಂದಿಲ್ಲ. ಸಂಖ್ಯಾ ಆಟವನ್ನು ಪೂರ್ಣಗೊಳಿಸುವ
ನಿಟ್ಟಿನಲ್ಲಿ ಕಳೆದ ರಾತ್ರಿ ಸಮಾಲೋಚನೆಗಳನ್ನು ನಡೆಸಲಾಗಿದೆ ಮತ್ತು ಅವರು ಆಗಸ್ಟ್ ೧೪ಕ್ಕೆ ಮುನ್ನ
ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಿಟಿಐ ನಾಯಕ ನಯೀನುಲ್ ಹಖ್ ಮಾಧ್ಯಮಗಳಿಗೆ ತಿಳಿಸಿದರು.
ಪಾಕಿಸ್ತಾನ ಚುನಾವಣಾ ಆಯೋಗದ ಸಂಪೂರ್ಣ ಪ್ರಾಥಮಿಕ ಫಲಿತಾಂಶಗಳ ಪ್ರಕಾರ ಪಿಟಿಐ ೧೧೫ ಸ್ಥಾನಗಳನ್ನು
ಗೆದ್ದಿದ್ದು, ಸರಳ ಬಹುಮತಕ್ಕೆ ೧೨ ಸ್ಥಾನಗಳ ಕೊರತೆಯಾಗಿದೆ. ಇದೇ ವೇಳೆಗೆ ನವಾಜ್ ಶರೀಫ್ ನೇತೃತ್ವದ
ಪಿಎಂಎಲ್ -ಎನ್ ಮತ್ತು ಅಸಿಫ್ ಅಲಿ ಜರ್ದಾರಿ ನೇತೃತ್ವದ ಪಿಪಿಪಿ ಕ್ರಮವಾಗಿ ೬೪ ಮತ್ತು ೪೩ ಸ್ಥಾನಗಳನ್ನು
ಹೊಂದಿವೆ. ಪಾಕಿಸ್ತಾನದ ಕೆಳಮನೆಯಾಗಿರುವ ರಾಷ್ಟ್ರೀಯ
ಅಸೆಂಬ್ಲಿಯು ಒಟ್ಟು ೩೪೨ ಸದಸ್ಯ ಬಲವನ್ನು ಹೊಂದಿದ್ದು ಅವರ ಪೈಕಿ ೨೭೨ ಮಂದಿಯನ್ನು ನೇರವಾಗಿ ಆಯ್ಕೆ
ಮಾಡಲಾಗುತ್ತದೆ. ಒಟ್ಟು ೧೭೨ ಮ್ಯಾಜಿಕ್ ಸಂಖ್ಯೆಯ ಸ್ಥಾನಗಳನ್ನು ಹೊಂದಿದರೆ ಮಾತ್ರ ಸರ್ಕಾರವನ್ನು
ರಚಿಸಬಹುದು. ಈ ಮಧ್ಯೆ ಪಾಕಿಸ್ತಾನದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಚದುರಂಗದಾಟಕ್ಕಾಗಿ
ರಾಜಕೀಯ ಪಕ್ಷಗಳು ಬಹಿರಂಗ ಮತ್ತು ರಹಸ್ಯ ಸಭೆಗಳನ್ನು ನಡೆಸುತ್ತಿವೆ. ಪಾಕಿಸ್ತಾನದ ಎರಡು ಪ್ರಮುಖ
ಪಕ್ಷಗಳಾದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)
ಮತ್ತು ಪಾಕಿಸ್ತಾನ್ ಮುಸ್ಲಿಮ್ ಲೀಗ್ -ನವಾಜ್ (ಪಿಎಂಎಲ್-ಎನ್)
ಪಕ್ಷಗಳು ಜಂಟಿ ವ್ಯೂಹ ರಚಿಸುವ ಸಲುವಾಗಿ ಕೆಲವೇ ದಿನಗಳಲ್ಲಿ ಸಭೆ ನಡೆಸುವ ನಿರೀಕ್ಷೆ ಇದೆ. ಸಂಸತ್ತಿನಲ್ಲಿ
ಪಿಟಿಐಗೆ ಕಠಿಣ ಸಂದರ್ಭವನ್ನು ಸೃಷ್ಟಿಸಲು ಅವರು ಉದ್ದೇಶಿಸಿವೆ ಎಂದು ಡಾನ್ ವರದಿ ಮಾಡಿದೆ. ಪಾಕ್ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಮುಖ ಸರ್ಕಾರಿ ಕಚೇರಿಗಳ ಸಂಭಾವ್ಯ ಅಭ್ಯರ್ಥಿಗಳ ಮತ್ತು
ಫೆಡರಲ್ ಕ್ಯಾಬಿನೆಟ್ ಸದಸ್ಯರ ಹೆಸರುಗಳ ಬಗ್ಗೆ ಚರ್ಚೆ ನಡೆಸಿವೆ. ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ
ಗೆದ್ದಿರುವ ಪಿಟಿಐ ನಾಯಕರು ಕಾನೂನಿನ ಪ್ರಕಾರ ತಮ್ಮ ಹೆಚ್ಚುವರಿ ಸ್ಥಾನಗಳನ್ನು ತೆರವುಗೊಳಿಸಬೇಕಾಗಿದೆ.
ಕಾಯ್ದೆಯು ಒಂದು ಸ್ಥಾನವನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶ ನೀಡಿದೆ. ಪಿಟಿಐ ಅಧ್ಯಕ್ಷ ಇಮ್ರಾನ್
ಖಾನ್ ಅವರು ಐದು ಸ್ಥಾನಗಳಿಂದ ಜಯಗಳಿಸಿದ್ದು, ಈಗ ೪ ಸ್ಥಾನಗಳನ್ನು ತೆರವುಗೊಳಿಸಬೇಕಾಗಿದೆ. ತಕ್ಷಶಿಲೆಯ ಗುಲಾಂ ಸರ್ವಾರ್ ಖಾನ್ ಕೂಡಾ ೨ ಸ್ಥಾನಗಳನ್ನು
ಗೆದ್ದಿದ್ದು ಒಂದು ಸ್ಥಾನವನ್ನು ತೆರವು ಮಾಡಬೇಕಾಗಿದೆ. ಖೈಬರ್ ಫಖ್ತೂನ್‌ಖ್ವಾದ ಮಾಜಿ ಮುಖ್ಯಮಂತ್ರಿ
ಪರ್ವೇಜ್ ಖಟ್ಟಕ್ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಅಸೆಂಬ್ಲಿ ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಪಿಟಿಐ ಪರ್ವೇಜ್ ಖಟ್ಟಕ್ ಅವರನ್ನು ಪುನಃ ಮುಖ್ಯಮಂತ್ರಿಯಾಗಿ
ನಾಮನಿರ್ದೇಶನ ಮಾಡಲು ಬಯಸಿದರೆ ಅವರು ಕೂಡಾ ಕೆಳಮನೆಯ ಸ್ಥಾನವನ್ನು ತೆರವು ಮಾಡಬೇಕಾಗುತ್ತದೆ. ಅಂದರೆ
ಪಿಟಿಐ ಪಕ್ಷದ ಒಟ್ಟು ಸ್ಥಾನಗಳು ೧೦೯ಕ್ಕೆ ಇಳಿಯಲಿವೆ.
ಈ ಲೆಕ್ಕಾಚಾರಗಳನ್ನು ಮಾಡಿದ ಬಳಿಕ ಪಿಟಿಐ ನಾಯಕತ್ವವು ಈಗ ಸಣ್ಣ ಗುಂಪುಗಳು ಮತ್ತು ಪಕ್ಷೇತರರನ್ನು
ಸಂಪರ್ಕಿಸಲು ನಿರ್ಧರಿಸಿದೆ. ಪಿಪಿಪಿ ಅಥವಾ ಪಿಎಂಎಲ್-ಎನ್ ಜೊತೆಗೆ ಕೈಜೋಡಿಸುವುದಿಲ್ಲ ಎಂದು ಪಿಟಿಐ
ಮೊದಲೇ ಪ್ರಕಟಿಸಿತ್ತು.
2018: ನವದೆಹಲಿ: ಸ್ವರಾಜ್ (ಸ್ವಯಂ
ಆಡಳಿತದ) ಕರೆಯ ಬಳಿಕ, ಉತ್ತಮ ಆಡಳಿvವನ್ನು ಕೇಳಲು ಇದೀಗ ಸಕಾಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ
ಅವರು ತಮ್ಮ ಮಾಸಿಕ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ನುಡಿದರು. ‘ಸ್ವರಾಜ್’ (ಸ್ವಯಂ ಆಡಳಿತ) ನನ್ನ
ಜನ್ಮಸಿದ್ಧ ಹಕ್ಕು ಮತ್ತು ನಾನು ಅದನ್ನು ಪಡೆದೇ ತೀರುತ್ತೇನೆ’ ಎಂಬುದಾಗಿ ಸ್ವಾತಂತ್ರ್ಯ
ಹೋರಾಟಗಾರ ಬಾಲ ಗಂಗಾಧರ ತಿಲಕ್ ಅವರು ದೇಶಕ್ಕೆ ನೀಡಿದ್ದ ಘೋಷಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ
’ಇಂದು ಉತ್ತಮ ಆಡಳಿತ ನಮ್ಮ ಜನ್ಮಸಿದ್ಧ ಹಕ್ಕು ಮತ್ತು ನಾವು ಅದನ್ನು ಪಡೆದೇ ತೀರುತ್ತೇವೆ ಎಂದು ಘೋಷಿಸಲು
ಸಕಾಲ’ ಎಂದು ಹೇಳಿದರು. ‘ಪ್ರತಿಯೊಬ್ಬ ಭಾರತೀಯನಿಗೂ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ
ಧನಾತ್ಮಕ ಫಲಿತಾಂಶ ಲಭಿಸಬೇಕು. ಇದು ಜನಮನವನ್ನು ತಲುಪಿದಾಗ ಅದು ಹೊಸ ಭಾರತವನ್ನು ಸೃಷ್ಟಿಸುತ್ತದೆ’ ಎಂದು ಮೋದಿ ನುಡಿದರು. ತಿಲಕ್, ವಲ್ಲಭ ಭಾಯಿ
ಪಟೇಲ್ ಮತ್ತು ಚಂದ್ರಶೇಖರ ಆಜಾದ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ಪ್ರಧಾನಿ
ಉಲ್ಲೇಖಿಸಿದರು. ತಿಲಕ್ ಅವರ ಜನ್ನದಿನ ಜುಲೈ ೨೩ ಆಗಿದ್ದರೆ ಅವರ ಪುಣ್ಯತಿಥಿ ಆಗಸ್ಟ್ ೧ರಂದು. ಆಜಾದ್
ಅವರ ಜನ್ಮದಿನ ಕೂಡಾ ಜುಲೈ ೨೩ರಂದು. ಬ್ರಿಟಿಷ್ ಸರ್ಕಾರದ
ವಿರೋಧದ ಮಧ್ಯೆಯೇ ವಲ್ಲಭ ಭಾಯಿ ಪಟೇಲ್ ಅವರು ೧೯೨೯ರಲ್ಲಿ ಅಹ್ಮದಾಬಾದಿನ ವಿಕ್ಟೋರಿಯಾ ಉದ್ಯಾನದಲ್ಲಿ
ಬಾಲಗಂಗಾಧರ ತಿಲಕ್ ಅವರ ಪ್ರತಿಮೆ ಸ್ಥಾಪನೆಗೊಳ್ಳುವಂತೆ ಮಾಡಿದರು ಎಂದು ಮೋದಿ ಸ್ಮರಿಸಿದರು. ಬಹಿರಂಗವಾಗಿ ಸಾರ್ವಜನಕ ಗಣೇಶ ಉತ್ಸವಗಳನ್ನು ಆಚರಿಸುವ ಪರಂಪರೆ
ಸೃಷ್ಟಿಸುವಲ್ಲಿ ತಿಲಕ್ ಅವರ ಕೊಡುಗೆಯನ್ನು ಪ್ರಧಾನಿ ನೆನಪಿಸಿದರು. ‘ಗಣೇಶ ಉತ್ಸವದ ಸಾರ್ವಜನಿಕ ಆಚರಣೆಯು ಸಾಮಾಜಿಕ ಜಾಗೃತಿ
ಮೂಡಿಸುವಲ್ಲಿ ಪರಿಣಾಮಕಾರಿ ಮಾಧ್ಯಮವಾಯಿತು’ ಎಂದು ಮೋದಿ ಹೇಳಿದರು. ‘ಅದು ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಜನರನ್ನು ಒಗ್ಗೂಡಿಸುವ
ಅಗತ್ಯವಿದ್ದ ಕಾಲ. ಈ ಉತ್ಸವಗಳು ಜಾತೀಯತೆ ಮತ್ತು ಕೋಮುಭಾವನೆಯ ಅಡ್ಡಗೋಡೆಗಳನ್ನು ತೊಡೆದುಹಾಕಿ ಜನರನ್ನು
ಒಗ್ಗೂಡಿಸುವ ಉದ್ದೇಶ ಪೂರ್ಣಗೊಳ್ಳಲು ನೆರವಾದವು’ ಎಂದು ಪ್ರಧಾನಿ ನುಡಿದರು. ಆಜಾದ್ ಅವರು ತಮ್ಮ ಬದುಕನ್ನೇ ಅಪಾಯಕ್ಕೆ ಒಡ್ಡಿಕೊಂಡರು,
ಆದರೆ ವಿದೇಶೀ ಆಡಳಿತಕ್ಕೆ ಎಂದೂ ತಲೆಬಾಗಲಿಲ್ಲ ಎಂದು ಮೋದಿ ಹೇಳಿದರು. ಪುಸ್ತಕಗಳು ಮತ್ತು ಅಧ್ಯಯನಗಳಿಗೆ ಪರ್ಯಾಯಗಳಿಲ್ಲ, ಆದರೆ
ವಿದ್ಯಾರ್ಥಿಗಳು ಶಾಂತರಾಗಿದ್ದುಕೊಂಡು ಬದುಕನ್ನು ಸವಿಯಬೇಕು ಮತ್ತು ಆಂತರಿಕ ಖುಷಿಯನ್ನು ಗಳಿಸಿಕೊಳ್ಳಬೇಕು
ಎಂದು ಮೋದಿ ಕಾಲೇಜುಗಳು ಮತ್ತು ಉನ್ನತ ಅಧ್ಯಯನದ ಶಿಕ್ಷಣ ಸಂಸ್ಥೆಗಳನ್ನು ಸೇರಲು ಸಜ್ಜಾಗಿರುವ ವಿದ್ಯಾರ್ಥಿಗಳಿಗೆ
ಕಿವಿಮಾತು ಹೇಳಿದರು. ‘ಶಾಂತವಾಗಿರಿ, ಬದುಕನ್ನು ಸವಿಯಿರಿ,
ಬದುಕಿನ ಆಂತರಿಕ ಖುಷಿಯನ್ನು ಗಳಿಸಿಕೊಳ್ಳಿ. ಪುಸ್ತಕಗಳಿಗೆ ಪರ್‍ಯಾಯ ಇಲ್ಲ, ಅಧ್ಯಯನ ಮಾಡಲೇಬೇಕು.
ಆದರೆ ನಿಮ್ಮ ಮನಸ್ಸು ಹೊಸ ಹೊಸದರ ಹುಡುಕಾಟದಲ್ಲಿ ನಿರತವಾಗಿರಬೇಕು ಎಂದಷ್ಟೇ ನಾನು ನಿಮಗೆ ಹೇಳಬಯಸುತ್ತೇನೆ’ ಎಂದು ಪ್ರಧಾನಿ ನುಡಿದರು. ಬಾಲ್ಯದ ಗೆಳೆತನ
ಅತ್ಯಂತ ಅಮೂಲ್ಯ, ಆದರೆ ಹೊಸ ಗೆಳೆತನ ಮಾಡಿಕೊಳ್ಳುವಾಗ ಮತ್ತು ಅದನ್ನು ಉಳಿಸಿಕೊಳ್ಳುವಲ್ಲಿ ತುಂಬಾ
ವಿವೇಕವನ್ನು ಹೊಂದಿರುವ ಅಗತ್ಯ ಇದೆ. ಹೊಸದೇನನ್ನಾದರೂ ಕಲಿಯುತ್ತಿರಿ. ಹೊಸ ಕೌಶಲ, ಭಾಷೆಗಳನ್ನು ಕಲಿಯಿರಿ.
ಅಧ್ಯಯನಕ್ಕಾಗಿ ಮನೆಗಳನ್ನು ಬಿಟ್ಟು ಹೊರಬರುವ ಮಕ್ಕಳು ಹೊಸ ಸ್ಥಳ, ಹೆಚ್ಚಿನ ಜನ, ಭಾಷೆ, ಸಂಸ್ಕೃತಿ
ಮತ್ತು ಪ್ರವಾಸವನ್ನು ಪತ್ತೆ ಮಾಡುತ್ತಿರಬೇಕು ಎಂದು ಮೋದಿ ಹೇಳಿದರು. ಅತ್ಯಂತ ದಾರಿದ್ರ್ಯದ ನಡುವೆಯೂ
ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಉಲ್ಲೇಖಿಸಿದ ಪ್ರಧಾನಿ, ತಮ್ಮ ಕಠಿಣ ಶ್ರಮ,
ದೃಢ ನಿರ್ಧಾರಗಳ ಮೂಲಕ ಎಲ್ಲ ಅಡಚಣೆಗಳನ್ನು ನಿವಾರಿಸಿಕೊಂಡು ಸಾಧನೆ ಮೆರೆಯುವ ಇಂತಹ ಮಕ್ಕಳು ಇತರರಿಗೆ
ಸ್ಫೂರ್ತಿಯ ದಾರಿ ದೀಪಗಳು ಎಂದು ನುಡಿದರು. ೪೦೦ ಮೀಟರ್
ಓಟದಲ್ಲಿ ರಾಷ್ಟ್ರಕ್ಕೆ ಚಿನ್ನದ ಪದಕವನ್ನು ರಾಷ್ಟ್ರಕ್ಕೆ ತಂದು ಕೊಟ್ಟು ಇತಿಹಾಸ ನಿರ್ಮಿಸಿದ ಅಥ್ಲೀಟ್
ಹಿಮಾ ದಾಸ್ ಅವರನ್ನು ಅಭಿನಂದಿಸಿದ ಪ್ರಧಾನಿ, ಟ್ಯುನಿಸಿಯಾದಲ್ಲಿ ನಡೆದ ೨೦೧೮ರ ಜಾಗತಿತ ಪ್ಯಾರಾ ಅಥ್ಲೆಟಿಕ್ಸ್
ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಪದಕಗಳನ್ನು ಗೆದ್ದ ಏಕ್ತಾ ಭ್ಯಾನ್, ಯೋಗೇಶ್ ಖತುನಿಯಾಜಿ ಮತ್ತು ಸುಂದರ
ಸಿಂಗ್ ಗುರ್ಜರ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರಕೃತಿ ಜೊತೆಗೆ ಘರ್ಷಣೆಗೆ ಇಳಿಯುವ ಮೂಲಕ ಪರಿಸರ ಅಸಮತೋಲನಕ್ಕೆ
ಕಾರಣವಾಗುವ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವ ಮಾನವ ಪ್ರವೃತ್ತಿಯನ್ನು ಟೀಕಿಸಿದ ಪ್ರಧಾನಿ ಎಲ್ಲರ
ಅನುಕೂಲಕ್ಕಾಗಿ ಪರಿಸರವನ್ನು ರಕ್ಷಿಸಿ ಎಂದು ಜನತೆಯನ್ನು ಆಗ್ರಹಿಸಿದರು.
ಕೆಲವೆಡೆ
ಅತಿಯಾದ ಮಳೆ, ಇನ್ನು ಕೆಲವೆಡೆ ಮಳೆಯ ಅಭಾವ. ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ ಎಂದು ಪ್ರಧಾನಿ ನುಡಿದರು.
’ಆದರೆ ಮಳೆಯನ್ನು ಏಕೆ ದೂಷಿಸಬೇಕು? ಪ್ರಕೃತಿಯ ಜೊತೆಗೆ ಘರ್ಷಣೆಯ ಹಾದಿ ಹಿಡಿದದ್ದು ಮನುಷ್ಯರೇ. ಪರಿಣಾಮವಾಗಿ
ಇಂತಹ ಹಾನಿಗಳು ಸಂಭವಿಸುತ್ತಿವೆ’ ಎಂದು ಮೋದಿ ನುಡಿದರು.
2018: ಲಾಹೋರ್: ಪಾಕಿಸ್ತಾನದ ಅಡಿಯಾಲ
ಸೆರೆಮನೆಯಲ್ಲಿ ಸೆರೆವಾಸದ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಹೃದಯ
ಸಂಬಂಧಿ ಸಮಸ್ಯೆಗಳ ಕಾರಣ ತತ್ ಕ್ಷಣವೇ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲು ಸರ್ಕಾರ
ತೀರ್ಮಾನಿಸಿತು. ಅವರನ್ನು ತತ್ ಕ್ಷಣವೇ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಬೇಕಾದ ಅಗತ್ಯ
ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಕುಟುಂಬವು
ಲಂಡನ್ನಿನಲ್ಲಿ ಐಷಾರಾಮೀ ಅಪಾರ್ಟ್‌ಮೆಂಟುಗಳನ್ನು ಖರೀದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರೀಫ್
ವಿರುದ್ಧ ದಾಖಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನವಾಜ್ ಶರೀಫ್ ಅವರಿಗೆ
೧೦ ವರ್ಷಗಳ ಸೆರೆವಾಸ ವಿಧಿಸಲಾಗಿದ್ದು ಅವರನ್ನು ಜುಲೈ ೧೩ರಿಂದ ರಾವಲ್ಪಿಂಡಿಯ ಅಡಿಯಾಲ ಸೆರೆಮನೆಯಲ್ಲಿ
ಇರಿಸಲಾಗಿತ್ತು. ಹಿಂದಿನ ವಾರ ಶರೀಫ್ ಅವರು ಕಿಡ್ನಿ
ವೈಫಲ್ಯದ ಅಂಚಿಗೆ ತಲುಪಿದ್ದರು ಎನ್ನಲಾಗಿದ್ದು, ವೈದ್ಯರು ಅವರನ್ನು ತತ್ ಕ್ಷಣವೇ ಆಸ್ಪತೆಗೆ ಸ್ಥಳಾಂತರಿಸುವಂತೆ
ಶಿಫಾರಸು ಮಾಡಿದ್ದರು. ಪಾಕಿಸ್ತಾನದ ಉಸ್ತುವಾರಿ ಸರ್ಕಾರವು ಈದಿನ ಮಾಜಿ ಪ್ರಧಾನಿಯನ್ನು ಇಸಿಜಿ ಮತ್ತು ರಕ್ತ ಪರೀಕ್ಷಾ
ವರದಿಗಳಲ್ಲಿ ಭಾರಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಪಾಕಿಸ್ತಾನ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಗೆ (ಪಿಐಎಂಎಸ್) ಸ್ಥಳಾಂತರಿಸಲು ನಿರ್ಧರಿಸಿತು. ಅಡಿಯಾಲ
ಸೆರೆಮನೆಯ ಮೇಲೆ ಆಡಳಿತಾತ್ಮಕ ನಿಯಂತ್ರಣ ಹೊಂದಿರುವ ಪಂಜಾಬ್ ಸರ್ಕಾರವು ವೈದ್ಯರ ತಂಡವು ಶರೀಫ್ ಅವರನ್ನು
ಸೂಕ್ತ ವೈದ್ಯಕೀಯ ನೆರವು ಲಭಿಸುವ ಜಾಗಕ್ಕೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಿದ್ದನ್ನು ಅನುಸರಿಸಿ,
ಶರೀಫ್ ಅವರ ಸ್ಥಳಾಂತರ ನಿರ್ಧಾರ ಕೈಗೊಂಡಿತು. ಶರೀಫ್
ಅವರನ್ನು ಇಸ್ಲಾಮಾಬಾದಿನ ಪಾಕಿಸ್ತಾನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸ್ಥಳಾಂತರಿಸಲಾಗುವುದು. ಅಲ್ಲಿ
ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಪಂಜಾಬ್ ಗೃಹ ಸಚಿವ ಶೌಕತ್ ಜಾವೇದ್ ಹೇಳಿದರು. ಇದಕ್ಕೆ ಮುನ್ನ ಡಾ. ಏಜಾಜ್ ಖದೀರ್ ನೇತೃತ್ವದ ವೈದ್ಯರ ತಂಡವು
ಶರೀಫ್ ಅವರು ಎದೆ ನೋವಾಗುತ್ತಿದೆ ಎಂದು ದೂರು ನೀಡಿದ್ದನ್ನು ಅನುಸರಿಸಿ ಅವರನ್ನು ವೈದ್ಯಕೀಯ ತಪಾಸಣೆಗೆ
ಒಳಪಡಿಸಿತ್ತು. ಹೃದಯ ತಜ್ಞ ಡಾ. ನಯೀಮ್ ಮಲಿಕ್, ವೈದ್ಯಕೀಯ ವಿಶೇಷ ತಜ್ಞ ಡಾ. ಶಾಜಿ ಸಿದ್ದಿಖಿ, ನರತಜ್ಞ
ಡಾ. ಸೋಹಾಲಿ ತನ್ವೀರ್ ಮತ್ತು ಡಾ. ಮಸೂದ್ ಅವರೂ ಈ ತಂಡದಲ್ಲಿದ್ದರು. ವೈದ್ಯರು
ತಪಾಸಣೆ ನಡೆಸಿದಾಗ ಶರೀಫ್ ಅವರ ಇಸಿಜಿಯಲ್ಲಿ ಭಾರಿ ಏರುಪೇರು ಕಾಣಿಸಿತು. ಹೀಗಾಗಿ ವೈದ್ಯರ ತಂಡ ತತ್
ಕ್ಷಣವೇ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಶಿಫಾರಸು ಮಾಡಿತು. ಶರೀಫ್ ಅವರಿಗೆ ೨೦೧೬ರಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ
ನಡೆಸಲಾಗಿತ್ತು. ಜೊತೆಗೆ ಹೈಪರ್ ಟೆನ್ಷನ್ ಮತ್ತು ಮಧುಮೇಹದಿಂದಲೂ ಅವರು ನರಳುತ್ತಿದ್ದರು. ಕಳೆದವಾರ,
ಪಿಎಂಎಲ್-ಎನ್ ಅಧ್ಯಕ್ಷ ಶೆಹಬಾಜ್ ಶರೀಫ್ ಅವರು ಪಂಜಾಬಿನ ಉಸ್ತುವಾರಿ ಸರ್ಕಾರಕ್ಕೆ ಪತ್ರ ಬರೆದು ಅಡಿಯಾಲ
ಸೆರೆಮನೆಯಲ್ಲಿ ಉತ್ತಮ ಸವಲತ್ತುಗಳನ್ನು ಕಲ್ಪಿಸುವಂತೆ ಕೋರಿದ್ದರು. ನವಾಜ್ ಶರೀಫ್ ಅವರಿಗೆ ತಮ್ಮ ಆಪ್ತ ವೈದ್ಯರಿಂದ ತಪಾಸಣೆಗೆ
ಮತ್ತು ನಿರಂತರ ಔಷಧ ಒದಗಿಸುವ ಅವಕಾಶವನ್ನು ಕಲ್ಪಿಸಬೇಕು ಎಂದು ಶೆಹಬಾಜ್ ಅಧಿಕಾರಿಗಳಿಗೆ ತಿಳಿಸಿದ್ದರು.
2018: ಅಹಮದಾಬಾದ್: ಬುಡಕಟ್ಟು ಜನರ ಪ್ರಾಬಲ್ಯವಿರುವ
ಗುಜರಾತಿನ ದಹೋಡ್ ಜಿಲ್ಲೆಯಲ್ಲಿ ೨೨ರ ಹರೆಯದ ವ್ಯಕ್ತಿಯೊಬ್ಬನನ್ನು ಜನರ ಗುಂಪು ಚಚ್ಚಿ ಸಾಯಿಸಿದ್ದು,
ಆತನ ಜೊತೆಗಿದ್ದ ಮಾರಣಾಂತಿಕವಾಗಿ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಗುಂಪುದಾಳಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಯನ್ನು ಅಜ್ಮಲ್ ವಹೋನಿಯಾ ಎಂಬುದಾಗಿ ಗುರುತಿಸಲಾಗಿದ್ದು
ಆತನ ಜೊತೆಗಿದ್ದ ವ್ಯಕ್ತಿಯನ್ನು ಭಾದು ಮಾಥುರ್ ಎಂಬುದಾಗಿ ಗುರುತಿಸಲಾಗಿದೆ. ಇವರಿಬ್ಬರೂ ಮೊಬೈಲ್
ಕಳ್ಳರು ಎಂಬ ಅನುಮಾನದಿಂದ ಗುಂಪು ಅಂಗಡಿಯೊಂದರ ಬಳಿ ಇವರ ಮೇಲೆ ದಾಳಿ ಮಾಡಿತು ಎಂದು ವರದಿಗಳು ಹೇಳಿದವು.
ಮೃತ ವ್ಯಕ್ತಿಯ ವಿರುದ್ಧ ಕಳವು, ದರೋಡೆ, ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ೩೨ ಪ್ರಕರಣಗಳು ದಾಖಲಾಗಿದ್ದವು
ಎನ್ನಲಾಗಿದ್ದು, ಆತನ ಜೊತೆಗಿದ್ದ ಮಾಥುರ್ ಕೂಡಾ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದ
ಎನ್ನಲಾಯಿತು. ಇಬ್ಬರೂ ಇತ್ತೀಚೆಗೆ ಸೆರೆಮನೆಯಿಂದ
ಬಿಡುಗಡೆಯಾಗಿದ್ದರು. ಕಾಳಿ
ಮಹುಡಿ ಗ್ರಾಮದ ಗುಂಪಿನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದರು.
’ನಾವು ಪ್ರಕರಣ ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ’ ಎಂದು ದಹೋದಿನ ಪೊಲೀಸ್ ಇನ್ ಸ್ಪೆಕ್ಟರ್ ಹೇಳಿದರು.
ದಾಳಿ ಆರೋಪಿಗಳನ್ನು ಪೊಲೀಸರು ಇನ್ನೂ ಗುರುತಿಸಿಲ್ಲ.
ಎಫ್ ಐಆರ್ ಪ್ರಕಾರ ಸುಮಾರು ೩೦ ಜನರಿದ್ದ ಗುಂಪು ಇಬ್ಬರ ಮೇಲೂ ದಾಳಿ ನಡೆಸಿದೆ. ವಹೋನಿಯಾ
ಸ್ಥಳದಲ್ಲೇ ಸಾವನ್ನಪ್ಪಿದರೆ, ಮಾಥುರ್ ಗಂಭೀರವಾಗಿ ಗಾಯಗೊಂಡ. ಆತನನ್ನು ಜುಲೈ ೨೭ರಂದು ತಡವಾಗಿ ಗ್ರಾಮಕ್ಕೆ
ಪೊಲೀಸರು ಬಂದ ಬಳಿಕ ಆಸ್ಪತ್ರೆಗೆ ಒಯ್ಯಲಾಯಿತು. ಈ
ಮಧ್ಯೆ ಗ್ರಾಮಸ್ಥರು ಮತ್ತು ಸ್ಥಳೀಯರು ಬೇರೆಯೇ ಕಥೆ ಹೇಳಿದ್ದಾರೆ. ಅವರ ಪ್ರಕಾರ ೨೦ ಜನರ ತಂಡವೊಂದು
ದರೋಡೆಯ ಉದ್ದೇಶದಿಂದ ನಡುರಾತ್ರಿಯಲ್ಲಿ ಗ್ರಾಮದ ಮೇಲೆ ದಾಳಿ ನಡೆಸಿತ್ತು. ಎಚ್ಚೆತ್ತ ಜನರು ಅಂಗಡಿಯ
ಬಳಿ ಸೇರಿದ್ದರು. ದರೋಡಕೋರರ ಪೈಕಿ ಇಬ್ಬರನ್ನು ಹಿಡಿಯಲು ಜನರಿಗೆ ಸಾಧ್ಯವಾಯಿತು, ಉಳಿದವರು ಸ್ಥಳದಿಂದ
ಪರಾರಿಯಾದರು. ಸಿಕ್ಕಿಹಾಕಿಕೊಂಡ ಇಬ್ಬರನ್ನ ಜನರು ಹಿಗ್ಗಾಮುಗ್ಗಾ ಥಳಿಸಿದರು ಎಂದು ಗ್ರಾಮಸ್ಥರು ಪ್ರತಿಪಾದಿಸಿದರು.
2018: ನವದೆಹಲಿ: ರಾಜಸ್ಥಾನದ ಶ್ರೀಗಂಗಾನಗರ
ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಸ್ಪರ್ಧೆ ನಡೆಯುತ್ತಿದ್ದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ
ಸ್ಟೇಡಿಯಂನ ಟಿನ್ ಛಾವಣಿ, ಅದರ ಮೇಲಿದ್ದ ನೂರಾರು ಮಂದಿ ವೀಕ್ಷಕರ ಸಹಿತವಾಗಿ ಕುಸಿದ ಘಟನೆ ಘಟಿಸಿ,
ಹಲವರು ಗಾಯಗೊಂಡರು. ಐವರ ಸ್ಥಿತಿ ಚಿಂತಾಜನಕ ಎಂದು ಪೊಲೀಸರು ತಿಳಿಸಿದರು.
ಜಿಲ್ಲೆಯ
ಪದಂಪುರ ಧಾನ್ ಮಂಡಿ ಪ್ರದೇಶದಲ್ಲಿ ನಡೆಯುತ್ತಿದ್ದ ಟ್ರ್ಯಾಕ್ಟರ್ ಸ್ಪರ್ಧೆಯನ್ನು ವೀಕ್ಷಿಸಲು ನೂರಾರು
ಮಂದಿ ಜಮಾಯಿಸಿದ್ದ ಸಂದರ್ಭದಲ್ಲಿ ಈ ದುರಂತ ಘಟಿಸಿತು. ಘಟನೆಯಲ್ಲಿ
೧೫ ಮಂದಿ ಗಾಯಗೊಂಡರು.. ಅವರ ಪೈಕಿ ೧೦ ಮಂದಿಯನ್ನು ಪದಂಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,
ಗಂಭೀರ ಸ್ಥಿತಿಯಲ್ಲಿರುವ ಐವರನ್ನು ಶ್ರೀಗಂಗಾನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶ್ರೀಗಂಗಾನಗರ
ಜಿಲ್ಲಾಧಿಕಾರಿ ಗ್ಯಾನರಾಮ್ ತಿಳಿಸಿದರು. ಶ್ರೀಗಂಗಾನಗರದ ಸಂಸತ್ ಸದಸ್ಯ ನಿಹಾಲ್ ಚಂದ್ ಚೌಹಾಣ್ ಅವರು
ಗಾಯಾಳುಗಳಿಗೆ ಶೀಘ್ರವೇ ಪರಿಹಾರ ಧನ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಅವಶೇಷಗಳ
ಅಡಿಯಲ್ಲಿ ಯಾರೂ ಸಿಕ್ಕಿಹಾಕಿಕೊಂಡಿಲ್ಲ. ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ನುಡಿದರು.
ಅವರ ಮಾಹಿತಿಯ ಪ್ರಕಾರ ೧೭ ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾಯಿತು.
2016: ಶಿಮ್ಲಾ: ಮುಂದಿನ ಆರು ತಿಂಗಳ ಒಳಗಾಗಿ ರಾಷ್ಟ್ರದಲ್ಲಿ ಗೋಹತ್ಯೆಯನ್ನು ನಿಷೇಧಿಸುವಂತೆ ಕೇಂದ್ರ
ಸರ್ಕಾರಕ್ಕೆ ನಿರ್ದೇಶನ ನೀಡಿ ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶ ನೀಡಿತು. ದನ- ಕರುಗಳ ಆಮದು ಮತ್ತು ರಫ್ತು, ಗೋಮಾಂಸ ಮತ್ತು ಗೋಮಾಂಸದ ಉತ್ಪನ್ನಗಳ ಮಾರಾಟವನ್ನು ಆರು ತಿಂಗಳುಗಳೊಳಗಾಗಿ ಕೇಂದ್ರ ಸರ್ಕಾರ ನಿಷೇಧಿಸಬೇಕು ಎಂದು ಹೈಕೋರ್ಟ್ ಸೂಚಿಸಿತು. ಗೋಹತ್ಯಾ ನಿಷೇಧ ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಷಯ ಎಂಬ ಕೇಂದ್ರ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ‘‘ದನ- ಕರುಗಳ ಆಮದು ಮತ್ತು ರಫ್ತು, ಗೋಮಾಂಸ ಮತ್ತು ಗೋಮಾಂಸದ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ 14 ಅಕ್ಟೊಬರ್ 2015ರಲ್ಲೇ ಆದೇಶ ನೀಡಲಾಗಿತ್ತು. ಇದೀಗ ಇನ್ನೊಮ್ಮೆ ಅದೇಶ ನೀಡಿದ್ದು ಮುಂದಿನ ಆರು ತಿಂಗಳುಗಳೊಳಗೆ ದೇಶದಲ್ಲಿ ಗೋ ಹತ್ಯೆ ನಿಷೇಧಕ್ಕೆ ಕ್ರಮಕೈಗೊಳ್ಳಬೇಕು ’’ ಎಂದು ನ್ಯಾಯಮೂತಿಗಳಾದ ರಾಜೀವ್ ಶರ್ವ ಹಾಗೂ ಸುರೇಶ್ವರ್ ಠಾಕೂರ್ರನ್ನೊಳಗೊಂಡ ಪೀಠ ಹೇಳಿತು. ಆದೇಶದ ಪ್ರತಿಯನ್ನು ರಾಷ್ಟ್ರೀಯ ಕಾನೂನು ಆಯೋಗಕ್ಕೂ ಕಳುಹಿಸಲಾಗುವುದು ಎಂದು ಪೀಠ ತಿಳಿಸಿತು. ಹಿಮಾಚಲ ಪ್ರದೇಶದ ಹಿಂದೂ ಸಂಘಟನೆಗಳು ಹಾಗೂ ಭಾರತೀಯ ಗೋವಂಶ ರಕ್ಷಣಾ ಸಂವರ್ಧನ ಪರಿಷದ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಹೈಕೋರ್ಟ್ ಈ ಆದೇಶ ಹೊರಡಿಸಿತು.
2008: ಜುಲೈ 26ರ ಸರಣಿ ಸ್ಛೋಟದಿಂದ ಅಹಮದಾಬಾದ್ ನಗರ ಚೇತರಿಸಿಕೊಳ್ಳುತ್ತಿರುವಾಗಲೇ ಗುಜರಾತಿನ ಮತ್ತೊಂದು ಪ್ರಮುಖ ನಗರ ಸೂರತ್ತಿನಲ್ಲಿ ಮತ್ತೆ 18 ಸಜೀವ ಬಾಂಬುಗಳು ಪತ್ತೆಯಾದವು. ಅವುಗಳನ್ನು ನಿಷ್ಕ್ರಿಯಗೊಳಿಸಲಾಯಿತು. ಇದರೊಂದಿಗೆ ಎರಡು ದಿನಗಳಲ್ಲಿ ಸೂರತ್ತಿನಲ್ಲಿ ಪತ್ತೆಯಾದ ಬಾಂಬುಗಳ ಸಂಖ್ಯೆ 23ಕ್ಕೆ ಏರಿತು..
2007: ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕ ಎಂಬ ಹಣೆಪಟ್ಟಿ ಬಿದ್ದು ಬಂಧಿತನಾಗಿ ಅಲ್ಲಿನ ಪೊಲೀಸರಿಂದ ಚಿತ್ರಹಿಂಸೆಗೆ ಒಳಗಾದ ಬೆಂಗಳೂರಿನ ವೈದ್ಯ ಹನೀಫ್ ಆರೋಪಮುಕ್ತರಾಗಿ ತಮ್ಮ ವಕೀಲ ಪೀಟರ್ ರುಸ್ಸೊ ಜೊತೆಗೆ ಬೆಂಗಳೂರಿಗೆ ಬಂದಿಳಿದರು. ಹನೀಫ್ ಮಾವ ಅಶ್ಫಾಕ್ ಅಹಮದ್, ಸಹೋದರ ಮಹಮದ್ ಶಫಿ ಮೊದಲಾದ ಸಂಬಂಧಿಕರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದರು.
2007: ಉಡುಪಿಯಲ್ಲಿ ನಡೆಯುವ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು ಆಯ್ಕೆಯಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯು, ಶೇಷಗಿರಿರಾವ್ ಅವರನ್ನು ಮುಂದಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿತು.
2007: ಸರಕು ಸಾಗಣೆ ವಿಮಾನವೊಂದು ಈದಿನ ಮಾಸ್ಕೊದ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೆ ಈಡಾಯಿತು. ಪರಿಣಾಮವಾಗಿ ಐವರು ಸಿಬ್ಬಂದಿ ಸೇರಿ ಎಂಟು ಮಂದಿ ಮೃತರಾದರು. ಸೈಬೀರಿಯಾ ಮೂಲದ ಅತ್ರಾನ್ ಏರ್ಲೈನ್ಸಿನ ಅಂತೊನಾವ್ ಎನ್-12 ವಿಮಾನವು ಭಾರತೀಯ ಕಾಲಮಾನ ಬೆಳಿಗ್ಗೆ 6.46ರ ಸುಮಾರಿಗೆ ಮಾಸ್ಕೊ ಡಾಮೊದೆಡೊವೊ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿ, ರನ್ವೇಯಿಂದ ಹಾರಿ ಕೇವಲ ನಾಲ್ಕು ಕಿ.ಮೀ. ದೂರ ಸಾಗುವಷ್ಟರಲ್ಲಿ ಬೆಂಕಿಗೆ ಆಹುತಿಯಾಯಿತು.
2007: ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಒಡೆತನದ ಕಪಾರೊ ಸಮೂಹವು ಸ್ಕೈ ಕಂಪೆನಿಯ `ಚಾನೆಲ್ 158'ನ್ನು ಖರೀದಿಸಿತು. ಈ ಚಾನೆಲ್ ಮೂಲಕ ಕಪಾರೊ ಸಮೂಹ ತನ್ನ `ಫಿಲ್ಮ್ 24' ಉದ್ಯಮವನ್ನು ವಿಸ್ತರಿಸುವುದು ಕಪಾರೋ ಸಮೂಹದ ಗುರಿ.
2007: ಉಡುಪಿ ನಗರದ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ಈದಿನ ಸಂಜೆ ಯಕ್ಷಗಾನ ಕ್ಷೇತ್ರದಲ್ಲಿ ನೂತನ ದಾಖಲೆಯೊಂದು ನಿರ್ಮಾಣವಾಯಿತು. ಒಂದಲ್ಲ, ಎರಡಲ್ಲ, ಹತ್ತಕ್ಕಿಂತ ಹೆಚ್ಚು ರಾಕ್ಷಸ ವೇಷಧಾರಿಗಳ ಸಂಗಮ ಇಲ್ಲಿ ಏರ್ಪಟ್ಟಿತು. ಯಕ್ಷಗಾನ ಅಭಿಮಾನಿಗಳು ಈ ಹಿಂದೆಂದೂ ಕಂಡಿರದ ಅಪೂರ್ವ ಸಂಗಮ ಅದಾಗಿತ್ತು. ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಬಡಗುತಿಟ್ಟು ಬಣ್ಣದ ವೇಷ (ರಾಕ್ಷಸ ವೇಷ) ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಈ ರಾಕ್ಷಸರ ದಂಡೇ ರಂಗಸ್ಥಳಕ್ಕೆ ಆಗಮಿಸಿತು. ತೆಂಕುತಿಟ್ಟಿನ ಒಂಬತ್ತು ಮಂದಿ ರಾಕ್ಷಸರು ಹಾಗೂ ಬಡಗುತ್ತಿಟ್ಟಿನ ಇಬ್ಬರು ರಾಕ್ಷಸರ ಸಂಗಮದಿಂದ ಇಡೀ ವೇದಿಕೆ ಭರ್ತಿಯಾಯಿತು. ಅಲ್ಲಿ ಬರೀ ರಾಕ್ಷಸರಿರಲಿಲ್ಲ, ರಾಕ್ಷಸಿಯರೂ ಇದ್ದರು. ಅಲ್ಲಿ ಬಣ್ಣದ ವೇಷಧಾರಿಗಳ ಕಲ್ಪನೆಯ ವಿನಿಮಯವೂ ಇತ್ತು. ತಜ್ಞರ ಸಲಹೆ ಇತ್ತು. ಹೀಗಾಗಿ ರಾಕ್ಷಸ ವೇಷ ಕಮ್ಮಟ ಹೆಚ್ಚು ಕಲಾತ್ಮಕವಾಗಿ ಮೂಡಿ ಬಂತು. ಆ ಕಾರಣದಿಂದ ಯಕ್ಷಗಾನದ ಇತಿಹಾಸದಲ್ಲೇ ಈ ಕಮ್ಮಟ ನೂತನ ದಾಖಲೆ ನಿರ್ಮಿಸಿತು.
2007: ಜೋರ್ಡಾ ಅಮ್ಮಾನಿನಲ್ಲಿ ನಡೆದ 17ನೇ ಆಸಿಯಾನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನ ಮುಕ್ತಾಯ ದಿನವಾದ ಈದಿನ ಭಾರತವು ಮೂರು ಬಂಗಾರದ ಪದಕಗಳನ್ನು ಗಳಿಸುವುದರೊಂದಿಗೆ ಎರಡನೇ ಸ್ಥಾನ ಪಡೆಯಿತು. ರಂಜಿತ್ ಮಹೇಶ್ವರಿ ಪುರುಷರ ಟ್ರಿಪಲ್ ಜಿಗಿತದಲ್ಲಿ 17.19 ಮೀಟರ್ ಜಿಗಿದು ಚಿನ್ನದ ಪದಕ ಗೆದ್ದುಕೊಂಡರು. ಸಿನಿಮೋಲ್ ಪೌಲೋಸ್ ಮಹಿಳೆಯರ ವಿಭಾಗದಲ್ಲಿ ಚಿನ್ನ ಗಳಿಸಿದರು. ಮಹಿಳೆಯರ ರಿಲೆ ತಂಡ ಮೊದಲ ಸ್ಥಾನ ಗಳಿಸಿತು. ಇದರಿಂದಾಗಿ ಭಾರತ ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಒಟ್ಟು ಐದು ಪದಕಗಳನ್ನು ತನ್ನದಾಗಿಸಿಕೊಂಡಿತು.
2006: ಜಾನಪದ ಗಾರುಡಿಗ, ಸ್ವಾತಂತ್ರ್ಯ ಯೋಧ, ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಎಸ್. ಕೆ. ಕರೀಂಖಾನ್ ಅವರು ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 104 ವರ್ಷ ವಯಸ್ಸಾಗಿತ್ತು. (ಇನ್ನೊಂದು ಮೂಲದ ಪ್ರಕಾರ 98 ವರ್ಷ ವಯಸ್ಸು). ಮೂರು ತಿಂಗಳುಗಳಿಂದ ಅಸ್ವಸ್ಥರಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
2006: ಶ್ರೀಲಂಕಾ ನಾಯಕ ಜಯವರ್ಧನೆ (374) ಮತ್ತು ಸಂಗಕ್ಕಾರ (287) ಅವರು ದಕ್ಷಿಣ ಆಫ್ರಿಕಾ ವಿರುದ್ಧ ಕೊಲಂಬೋದಲ್ಲಿ ನಡೆದ ಮೊದಲ ಟೆಸ್ಟಿನಲ್ಲಿ ಜೊತೆಯಾಟದಲ್ಲಿ `ವಿಶ್ವದಾಖಲೆ' (ಒಟ್ಟು 624 ರನ್) ಸ್ಥಾಪಿಸಿದರು. 1997ರಲ್ಲಿ ಭಾರತದ ವಿರುದ್ಧ ಕೊಲಂಬೋದಲ್ಲೇ ನಡೆದ ಪಂದ್ಯದಲ್ಲಿ ಮಹಾನಾಮಾ ಮತ್ತು ಜಯಸೂರ್ಯ 2ನೇ ವಿಕೆಟ್ ಜೊತೆಯಾಟಕ್ಕೆ 576 ರನ್ ಗಳಿಸಿದ್ದೇ ಜೊತೆಯಾಟದ ವಿಶ್ವದಾಖಲೆಯಾಗಿತ್ತು.
2006: ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಪ್ರಸಾಧನ ಕಲೆಯ ಹಿರಿಯ ಕಲಾವಿದ ಸದಾನಂದ ಶಾನಭಾಗ (65) ನಿಧನರಾದರು. `ಪುತ್ರಣ್ಣ' ಎಂದೇ ಖ್ಯಾತರಾಗಿದ್ದ ಅವರು ಚಿತ್ರ ಕಲಾವಿದರಾಗಿ, ಮುಖವಾಡ ತಯಾರಿಕೆಗಳಲ್ಲಿ ಮತ್ತು ತೆರೆಯ ಹಿಂದಿನಪ್ರಸಾಧನ ಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರು.
2004: ಮಾಜಿ ಮಿಸ್ ಇಂಡಿಯಾ ಖ್ಯಾತಿಯ ರೂಪದರ್ಶಿ ಬೆಂಗಳೂರು ಮೂಲದ ನಫೀಸಾ ಜೋಸೆಫ್ ಮುಂಬೈಯ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.
2003: ಎಬಿಪಿಜೆಡಿ ನಾಯಕ ಸಿ. ಭೈರೇಗೌಡ ನಿಧನ.
1963: ಸಾಹಿತಿ ವಿಜಯಾ ಜಿ.ಎಸ್. ಜನನ.
1958: ಸಾಹಿತಿ ಪಿ. ಬಸವಲಿಂಗಯ್ಯ ಜನನ.
1957: ವಿಶ್ವ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಅಸ್ತಿತ್ವಕ್ಕೆ.
1925: ಸಾಹಿತಿ ಗೋವಿಂದ ರಾಜುಲು ಜನನ.
1904: ಸಾಹಿತಿ ಜಿ.ಬಿ. ಜೋಶಿ ಜನನ.
1904: ಭಾರತೀಯ ಕೈಗಾರಿಕೋದ್ಯಮದ ಜನಕ ಜೆಹಾಂಗೀರ್ ರತನ್ ಜಿ ದಾದಾಭಾಯಿ ಟಾಟಾ (29-7-1904ರಿಂದ 29-11-1993ರವರೆಗೆ) ಅವರು ಈದಿನ ಪ್ಯಾರಿಸ್ಸಿನಲ್ಲಿ ಜನಿಸಿದರು. ಜೆ. ಆರ್. ಡಿ. ಟಾಟಾ ಎಂದೇ ಖ್ಯಾತರಾದ ಅವರು ನಾಲ್ಕು ಮಕ್ಕಳ ಪೈಕಿ ಎರಡನೆಯವರು. ಫ್ರಾನ್ಸ್, ಜಪಾನ್ ಮತ್ತು ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆದ ಅವರು 1938ರಲ್ಲಿ 34ನೇ ವಯಸ್ಸಿನವರಾಗಿದ್ದಾಗ ಸಹೋದರರ ಜೊತೆ ಸೇರಿ ಭಾರತದಲ್ಲಿ ಅತಿದೊಡ್ಡ ಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿದರು. ಮಾನವೀಯ ವ್ಯಕ್ತಿತ್ವಕ್ಕಾಗಿ 1992ರಲ್ಲಿ ಟಾಟಾ ಅವರಿಗೆ `ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತದಲ್ಲಿ ಕುಟುಂಬಯೋಜನೆ ಯಶಸ್ವಿಯಾಗುವಂತೆ ಮಾಡಿದ್ದಕ್ಕಾಗಿ ಅವರಿಗೆ ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಪ್ರಶಸ್ತಿ ಲಭಿಸಿತ್ತು. 1993ರ ನವೆಂಬರ್ 29ರಂದು ತವರು ರಾಜ್ಯವಾದ ಮಹಾರಾಷ್ಟ್ರದಲ್ಲಿ ಅವರು ನಿಧನರಾದರು.
1891: ಖ್ಯಾತ ಶಿಕ್ಷಣ ತಜ್ಞ, ಸಮಾಜ ಸುಧಾರಕ, ಸಾಹಿತಿ ಈಶ್ವರ ಚಂದ್ರ ವಿದ್ಯಾಸಾಗರ ನಿಧನ.
1884: ನಾಟಕದ ಮೂಲಕ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿದ ಖ್ಯಾತ ನಾಟಕಕಾರ ತಂಜಾವೂರು ಪರಮಶಿವ ಕೈಲಾಸಂ (ಟಿ.ಪಿ. ಕೈಲಾಸಂ) (29-7-1884ರಿಂದ 23-11-1946ರವರೆಗೆ) ನ್ಯಾಯಾಧೀಶ ಪರಮಶಿವ ಅಯ್ಯರ್- ಕಮಲಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿ ಈದಿನ ಜನಿಸಿದರು.
1835: ಹವಾಯಿಯಲ್ಲಿ ಮೊದಲ ಬಾರಿಗೆ ಕಬ್ಬು ಕೃಷಿ ಆರಂಭ.
No comments:
Post a Comment