ನಾನು ಮೆಚ್ಚಿದ ವಾಟ್ಸಪ್

Saturday, July 14, 2018

ಇಂದಿನ ಇತಿಹಾಸ History Today ಜುಲೈ 14

ಇಂದಿನ ಇತಿಹಾಸ History Today ಜುಲೈ 14 

2017: ವಾಷಿಂಗ್ಟನ್:  ಮಕ್ಕಳು, ಹದಿಹರೆಯದ ಮಂದಿಯ ಜೀವ ಹಿಂಡುವ ಸಾಮಾನ್ಯ ಬ್ಲಡ್
ಕ್ಯಾನ್ಸರ್ (ಲ್ಯುಕೇಮಿಯಾ) ಕಾಯಿಲೆಗೆ ವಂಶವಾಹಿ ಚಿಕಿತ್ಸೆ (ಜೀನ್ ಥೆರೆಪಿ) ಒದಗಿಸುವ ವಿಶ್ವದ ಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಅಮೆರಿಕ ಪಾತ್ರವಾಯಿತು. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಲಹಾ ಸಮಿತಿಯು 2017 ಜುಲೈ 12ರ ಬುಧವಾರ 10-0 ಮತಗಳ ಅಂತರದಲ್ಲಿ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಅಂಡ್ ನೋವಾರ್ಟಿಸ್ ಕಾರ್ಪೋರೇಷನ್ ಅಭಿವೃದ್ಧಿ ಪಡಿಸಿದ ಲ್ಯುಕೇಮಿಯಾ ಚಿಕಿತ್ಸೆಗೆ ಅನುಮತಿ ನೀಡಿತು. ಸಿಎಆರ್-ಟಿ (ಕಾರ್-ಟಿ) ಹೆಸರಿನ ಈ ವಂಶವಾಹಿ ಚಿಕಿತ್ಸೆಯಲ್ಲಿ ರೋಗಿಯ ಪ್ರತಿರಕ್ಷಣಾ ಕೋಶಗಳನ್ನು (ಇಮ್ಯೂನ್ ಸೆಲ್ಸ್) ತೆಗೆದುಕೊಂಡು, ಅವುಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಮತ್ತೆ ದೇಹಕ್ಕೆ ಮರುಸೇರ್ಪಡೆ ಮಾಡಲಾಗುತ್ತದೆ. ಕೃತಕ ಪ್ರಯೋಗಾಲಯದಲ್ಲಿ ರೋಗಿಯ ರಕ್ತದಲ್ಲಿನ ಪ್ರತಿರಕ್ಷಣಾ ಕೋಶಗಳ ಸಂಖ್ಯೆಯನ್ನು ಹೆಚ್ಚಿಸಿ ಅವು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಂತೆ ಮಾಡಿ ಬಳಿಕ ಅದನ್ನು ರಕ್ತಕ್ಕೆ ಸೇರಿಸಲಾಗುತ್ತದೆ. ದೇಹದಲ್ಲಿ ಮಾರ್ಪಾಡುಗೊಂಡ ಪ್ರತಿರಕ್ಷಣಾ ಕೋಶಗಳು ಅಗಣಿತವಾಗಿ ಬೆಳೆದು ಕ್ಯಾನ್ಸರ್ ಕೋಶಗಳನ್ನು ಕೊಂದು ಹಾಕುತ್ತವೆ. ಚಿಕಿತ್ಸೆ ಪಡೆದ ಪ್ರಥಮ ಬಾಲಕಿ ಎಮಿಲಿ: ಪೆನ್ಸಿಲ್ವೇನಿಯಾದ ಫಿಲಿಪ್ಸ್ ಬರ್ಗಿನ ಟೋಮ್ ವೈಟ್ ಹೆಡ್ ಅವರ ಪುತ್ರಿ 12 ವರ್ಷದ ಎಮಿಲಿ ಐದು ವರ್ಷಗಳ ಹಿಂದೆ ಪ್ರಯೋಗಾತ್ಮಕವಾಗಿ ಈ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ. ಅಂದಿನಿಂದಲೂ ಈ ಚಿಕಿತ್ಸೆಗೆ ಸರ್ಕಾರಿ ಮನ್ನಣೆ ಪಡೆಯಲು ಯತ್ನಗಳು ನಡೆದಿದ್ದು ಇದೀಗ ಸರ್ಕಾರ ಸಮ್ಮತಿ ಮುದ್ರೆ ಲಭಿಸಿದೆ. ತಜ್ಞರ ಪ್ರಕಾರ ಈ ಚಿಕಿತ್ಸೆಗೆ ಅಂದಾಜು ಸಹಸ್ರ ಡಾಲರ್ ವೆಚ್ಚ ಆಗಬಹುದು. ಆದರೆ ಒಮ್ಮೆ ಚಿಕಿತ್ಸೆ ಪಡೆದರೆ ಸಾಕು, ಜೀವಮಾನ ಪರ್ಯಂತ ರೋಗಿಗೆ ಮತ್ತೆ ಈ ಕ್ಯಾನ್ಸರ್ ಕಾಡುವುದಿಲ್ಲ. ಚಿಕಿತ್ಸೆ ನೀಡುವ ಹಂತದಲ್ಲಿ ಜ್ವರ ಕಾಡಬಹುದು. ಇತರ ಅಡ್ಡ ಪರಿಣಾಮಗಳ ಬಗ್ಗೆ ಈವರೆಗೆ ಸ್ಪಷ್ಟತೆ ಲಭಿಸಿಲ್ಲ. ವಿಜ್ಞಾನಿಗಳು ಇದೀಗ ಈ ಚಿಕಿತ್ಸೆಯನ್ನು ಇತರ ಕ್ಯಾನ್ಸರ್ ರೋಗಗಳಲ್ಲೂ ಪ್ರಯೋಗಿಸಬಹುದೇ ಎಂದು ಅಧ್ಯಯನ ಮಾಡುತ್ತಿದ್ದಾರೆ ಎಂದು ವರದಿ ಹೇಳಿತು.


2017: ಲಖನೌ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಪ್ರಬಲ ಸ್ಫೋಟಕ ವಸ್ತು ಪತ್ತೆಯಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸದನಕ್ಕೆ ತಿಳಿಸಿದರು. ಈ ಕುರಿತು ರಾಷ್ಟ್ರೀಯ ತನಿಖಾ ದಳದಿಂದ(ಎನ್‌ಐಎ) ತನಿಖೆ ನಡೆಸಲು ಸದನ ಸರ್ವಾನುಮತದಿಂದ ಶಿಫಾರಸು ಮಾಡಿತು. ಈದಿನ ಬೆಳಗ್ಗೆ ಸದನ ಆರಂಭವಾಗುವುದಕ್ಕೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನೇತೃತ್ವದಲ್ಲಿ ತುರ್ತು ಭದ್ರತಾ ಸಭೆ ನಡೆಸಲಾಯಿತು.  ಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್‌ ಅವರು, ಸದನದಲ್ಲಿ ವಿರೋಧ ಪಕ್ಷದ ನಾಯಕ ರಾಮ್‌ ಗೋವಿಂದ ಚೌಧರಿ ಅವರು ಕೂರುವ ಆಸನದ ಬಳಿ ಪೇಪರ್‌ನಲ್ಲಿ ಸುತ್ತಿಟ್ಟಿದ್ದ ಬಿಳಿ ಪುಡಿ ಸಿಕ್ಕಿದೆ ಎಂದು ತಿಳಿಸಿದರು. ಈ ಸ್ಫೋಟಕ ಜುಲೈ 12ರಂದು ಸ್ವಚ್ಛತಾ ಸಿಬ್ಬಂದಿಗೆ ದೊರೆತಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ಪರೀಕ್ಷೆಗಾಗಿ ಪುಡಿಯನ್ನು ಕಳುಹಿಸಿಕೊಡಲಾಗಿದ್ದು, ಅದು ಅಪಾಯಕಾರಿ ಪ್ಲಾಸ್ಟಿಕ್ ಸ್ಫೋಟಕ ಪಿಇಟಿಎನ್‌(ಪೆಂಟ್ರೇಥೋಟೊಲ್‌ ಟೆಟ್ರಾನಿಟ್ರೇಟ್‌) ಎಂದು ತಿಳಿದುಬಂದಿದೆ ಎಂದು ಅವರು ಹೇಳಿದರು. ಸ್ಫೋಟಕ ಮತ್ತೆ ಹಚ್ಚುವಲ್ಲಿ ಶ್ವಾನ ತಂಡ ವಿಫಲವಾಗಿದೆ. ಆರಂಭದಲ್ಲಿ ಇದು ಕೇವಲ ಪುಡಿ ಅಥವಾ ರಾಸಾಯನಿಕ ಎಂದು ಭಾವಿಸಲಾಗಿತ್ತು. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಇದು ಪಿಇಟಿಎನ್ ಎಂದು ಗೊತ್ತಾಗಿದೆ. ಅದು ಉತ್ತಮ ಗುಣಮಟ್ಟದ ಹೆಕ್ಸೋಜಿನ್‌ ಮತ್ತು ಪ್ಲ್ಯಾಸ್ಟಿಕ್‌ ಸ್ಫೋಟಕವಾಗಿದೆ ಎಂದು ಅವರು ಮಾಹಿತಿ ನೀಡಿದರು. ಪತ್ತೆಯಾಗಿರುವ ಸ್ಫೋಟಕ ವಸ್ತುವಿನ ಪ್ರಮಾಣ 150 ಗ್ರಾಂ ಇದೆ. ತಜ್ಞರು ಹೇಳುವಂತೆ 500 ಗ್ರಾಂನಷ್ಟು ಈ ಸ್ಫೋಟಕ ವಸ್ತುವನ್ನು ಬಳಸಿ ಸ್ಫೋಟಿಸುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ತಿಳಿಸಿದರು. ವಿರೋಧ ಪಕ್ಷದ ನಾಯಕರು ಕೂರುವ ಬೆಂಚಿನಿಂದ ಮೂರನೇ ಬೆಂಚಿನ ಅಡಿ ಸ್ಫೋಟಕ ಪತ್ತೆಯಾಗಿದೆ ಎಂದು ಅವರು ವಿವರಿಸಿದರು. ಸದನದ ಭದ್ರತೆ ವಿಚಾರವಾಗಿ ಇದು ಅಪಾಯಕಾರಿ ಭಯೋತ್ಪಾದಕ ಪಿತೂರಿಯ ಭಾಗವಾಗಿದೆ ಮತ್ತು ಇದರ ಸತ್ಯಾಂಶ ಬಹಿರಂಗಗೊಳ್ಳಬೇಕು. ಈ ಕುರಿತು ಎನ್‌ಐಎಯಿಂದ ತನಿಖೆ ನಡೆಸಲಾಗುವುದು ಎಂದು ಯೋಗಿ ಆದಿತ್ಯನಾಥ್‌ ಹೇಳಿದರು.
2017: ನವದೆಹಲಿ: ಭಾರತದ ಬ್ಯಾಂಕುಗಳಿಗೆ ರೂ. 9 ಸಾವಿರ ಕೋಟಿ ವಂಚಿಸಿರುವ ಉದ್ಯಮಿ ವಿಜಯ್‌ ಮಲ್ಯ
ಅವರನ್ನು 2018ರ ಜನವರಿಗೂ ಮುನ್ನಾ ಭಾರತಕ್ಕೆ ಕರೆತರುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ  ಸುಪ್ರೀಂಕೋರ್ಟಿಗೆ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್‌, ಮಲ್ಯ ಗೈರುಹಾಜರಿಯಲ್ಲಿ ಅವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿತು. ವಂಚನೆ ಪ್ರಕರಣದಲ್ಲಿ ಮಲ್ಯ ತಪ್ಪಿತಸ್ಥ ಎಂದು ಸುಪ್ರೀಂಕೋರ್ಟ್‌ ಮೇ ತಿಂಗಳಲ್ಲಿ ಘೋಷಿಸಿತ್ತು. ಅಲ್ಲದೆ, ಜುಲೈ 10ರೊಳಗೆ ಮಲ್ಯ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ, ಈ ಗಡುವು ಮುಗಿದರೂ ಮಲ್ಯ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ‘ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕರಣದ ವಿಚಾರಣೆಯು ಡಿಸೆಂಬರ್‌ 4ರಂದು ಬ್ರಿಟನ್‌ನ ನ್ಯಾಯಾಲಯದಲ್ಲಿ ಆರಂಭವಾಗಲಿದೆ. ಹೀಗಾಗಿ 2018ರ ಜನವರಿಗೆ ಮುಂಚಿತವಾಗಿ ಅವರನ್ನು ಭಾರತಕ್ಕೆ ಕರೆತರಲು ಸಾಧ್ಯವಿಲ್ಲ’ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಸುಪ್ರೀಂಕೋರ್ಟ್‌ಗೆ ತಿಳಿಸಿದರು.


2017:   ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಅಸಂಖ್ಯ ಅಭಿಮಾನಿಗಳಿಗೆ ಇದೊಂದು ಸಿಹಿ ಸುದ್ದಿ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ವಿಶ್ವದ ಮೂರನೇ ಅತ್ಯಂತ ವಿಶ್ವಸನೀಯ ಸರಕಾರವಾಗಿದ್ದು ಅದರ ಮೇಲೆ ಶೇ.73 ಭಾರತೀಯರು ವಿಶ್ವಾಸ ಹೊಂದಿದ್ದಾರೆ. ವಿಶ್ವದ ಅತೀ ಹಚ್ಚು ವಿಶ್ವಸನೀಯ ಸರಕಾರಗಳ ಚಾರ್ಟ್‌ನಲ್ಲಿ ಭಾರತಕ್ಕೆ ಮೂರನೇ ಸ್ಥಾನ ಲಭಿಸಿದೆ. ಶೇ.79 ಜನರ ವಿಶ್ವಾಸಕ್ಕೆ ಪಾತ್ರವಗಿರುವ ಇಂಡೋನೇಶ್ಯ ಸರಕಾರ ಎರಡನೇ ಸ್ಥಾನದಲ್ಲಿದೆಯಾದರೆ, ಶೇ.80 ಜನರ ವಿಶ್ವಾಸ ಹೊಂದಿರುವ ಸ್ವಿಟ್ಸರ್ಲಂಡ್‌ ಸರಕಾರ ಮೊದಲ ಸ್ಥಾನದಲ್ಲಿದೆ. 
2017: ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಲಷ್ಕರ್‌-ಎ -ತೋಯ್ಬಾ ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಬಂಧಿಸಿದವು. ಮುರ್‌ಕುಂಡಾಲ್‌ ಎಂಬಲ್ಲಿ  ಪೊದೆಯೊಂದರಲ್ಲಿ ಅಡಗಿದ್ದ ಶಹಬಾಜ್‌ ಮಿರ್‌ ಎಂಬ ಉಗ್ರನನ್ನು ಪಿಸ್ತೂಲ್‌ , ಮ್ಯಾಗಜೀನ್‌ಗಳು ಮತ್ತು ಗ್ರೆನೇಡ್‌ ಸಹಿತ ವಶಕ್ಕೆ ಪಡೆಯಲಾಯಿತು. ಶಹಬಾಜ್‌ ಉತ್ತರ ಕಾಶ್ಮೀರದ ಹಾಜಿನ್‌ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿತು.
2008: ಗುಜ್ಜರ್ ಸೇರಿದಂತೆ ವಿಶೇಷ ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಸೇರುವ ಹಾಗೂ ಮೇಲ್ಜಾತಿಯ ಬಡವರನ್ನು ಪರಿಶಿಷ್ಟ ಪಂಗಡಕ್ಕೆ(ಎಸ್ ಟಿ) ಸೇರಿಸುವ ಮಹತ್ತರ ಮಸೂದೆಯನ್ನು ರಾಜಸ್ಥಾನ ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿತು.

2007: ಲಂಡನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳ ಹಿಂದೆ ಬ್ರಿಟನ್ ಹಾಗೂ ಆಸ್ಟ್ರೇಲಿಯಾದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಬೆಂಗಳೂರು ಮೂಲದ ಇಬ್ಬರು ವೈದ್ಯರಾದ ಸಬೀಲ್ ಅಹ್ಮದ್ ಹಾಗೂ ಮಹ್ಮದ್ ಹನೀಫ್ ವಿರುದ್ಧ `ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ' ಹಿನ್ನೆಲೆಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಯಿತು. ಸಬೀಲ್ ಮೇಲೆ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಭಯೋತ್ಪಾದನೆ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲು ಮಾಡಿದರೆ, ಭಯೋತ್ಪಾದನೆ ಚಟುವಟಿಕೆ ತಡೆಗಟ್ಟಬಹುದಾದಂತಹ ಮಾಹಿತಿಯನ್ನು ಹೊಂದಿದ್ದ ಎಂಬ ದೋಷಾರೋಪಣೆಯನ್ನು ಸಬೀಲ್ ವಿರುದ್ಧ ಹೊರಿಸಲಾಯಿತು. ಜೂನ್ 30ರಂದು ಲಿವರ್ ಪೂಲ್ ನಲ್ಲಿ ಸಬೀಲನನ್ನು ಬಂಧಿಸಲಾಗಿತ್ತು.

2007: ಕ್ಯಾಂಡಿಯಲ್ಲಿ ಅಂತ್ಯಗೊಂಡ ಬಾಂಗ್ಲಾದೇಶ ವಿರುದ್ಧದ ಮೂರನೇ ಪಂದ್ಯದ ಎರಡನೇ ಇನಿಂಗ್ಸಿನಲ್ಲಿ ಆರು ವಿಕೆಟ್ ಪಡೆಯುವ ಮೂಲಕ ಶ್ರೀಲಂಕೆಯ ಅದ್ವಿತೀಯ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700 ವಿಕೆಟ್ ಗಡಿ ದಾಟಿದ ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಸ್ಟ್ರೇಲಿಯಾದ ಮಾಜಿ ಬೌಲರ್ ಶೇನ್ ವಾರ್ನ್ ಅವರ 708 ವಿಕೆಟ್ಟುಗಳ ವಿಶ್ವದಾಖಲೆ ಅಳಿಸಿಹಾಕಲು ಮುರಳಿಗೆ ಬೇಕಾದ್ದು ಇನ್ನು 7 ವಿಕೆಟ್ ಮಾತ್ರ.

2007: ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತಿಹಾಸ ಪ್ರಸಿದ್ಧ ಹಂಪಿಯ ಸಮಗ್ರ ಅಭಿವೃದ್ಧಿ ಸಲುವಾಗಿ ಕೇಂದ್ರ ಸರ್ಕಾರವು ಕೇಂದ್ರ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ `ಹಂಪಿ ಪ್ರವಾಸೋದ್ಯಮ ಸಮನ್ವಯ ಸಮಿತಿ'ಯನ್ನು ರಚಿಸಿತು.

2007: ವಿವಾದಕ್ಕೆ ಗ್ರಾಸವಾಗಿರುವ `ಆನು ದೇವಾ ಹೊರಗಣವನು' ಕೃತಿಯ ವಿರುದ್ಧದ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸರ್ಕಾರ ರಚಿಸಿದ್ದ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಹಿರಿಯ ಸಾಹಿತಿ ಗೀತಾ ನಾಗಭೂಷಣ ನಿರಾಕರಿಸಿದರು.

2007: ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಚೀನಾ ರೇಷ್ಮೆಗೆ ಕಡಿವಾಣ ಹಾಕುವಂತೆ ರಾಜ್ಯ ಸರ್ಕಾರ ಕೇಂದ್ರದ ಸುರಿ ವಿರೋಧಿ ತೆರಿಗೆ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿತು.

2006: ತಂಬಾಕು ನಿಯಂತ್ರಣದಲ್ಲಿ ತೋರಿದ ಬದ್ಧತೆ ಮತ್ತು ಪ್ರಯತ್ನಗಳಿಗಾಗಿ ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಮೆರಿಕದ `ಲೂಥರ್ ಎಲ್ ಟಿರ್ರಿ' ಪ್ರಶಸ್ತಿ ಗಳಿಸಿತು.

1963: ಧಾರ್ಮಿಕ ನಾಯಕ ಸ್ವಾಮಿ ಶಿವಾನಂದ ಸರಸ್ವತಿ ನಿಧನ.

1946: ಸಣ್ಣಕಥೆ, ಲೇಖನ, ಪ್ರಬಂಧ ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಖ್ಯಾತ ಕಥೆಗಾರ ಈಶ್ವರಚಂದ್ರ ಅವರು ಎಚ್. ಎನ್. ರಾಮರಾವ್- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆಯಲ್ಲಿ ಜನಿಸಿದರು.

1945: ಸಾಹಿತಿ ಕೆ.ಎಸ್. ಭಗವಾನ್ ಜನನ.

1944: ಸಾಹಿತಿ ಕೊತ್ತಲ ಮಹಾದೇವಪ್ಪ ಜನನ.

1942: ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಸಂಕಲ್ಪ ತೊಡುವ ಮಹತ್ವದ ನಿರ್ಣಯವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು ಕೈಗೊಂಡಿತು. ಬ್ರಿಟಿಷರು ಭಾರತವನ್ನು ಬಿಟ್ಟುಕೊಟ್ಟು ಸ್ವಾತಂತ್ರ್ಯ ನೀಡುವವರೆಗೂ ಬ್ರಿಟಿಷ್ ಆಡಳಿತಕ್ಕೆ ಅಸಹಕಾರ ನೀಡಬೇಕು ಎಂದು ಸಮಿತಿ ನಿರ್ಣಯಿಸಿತು. ನಂತರ ಮುಂಬೈಯಲ್ಲಿ 1942ರ ಆಗಸ್ಟ್ 8ರಂದು ನಡೆದ ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ಚಳವಳಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.

1854: ರಾಮಕೃಷ್ಣ ಪರಮಹಂಸರ ಅನುಯಾಯಿ ಮಹೇಂದ್ರನಾಥ ಗುಪ್ತ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment