Monday, July 30, 2018

ಇಂದಿನ ಇತಿಹಾಸ History Today ಜುಲೈ 30

2018: ಹೊಸದಿಲ್ಲಿ: ದೇಶಾದ್ಯಂತ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ತೀವ್ರಗೊಂಡ ಜನಾಕ್ರೋಶದ ನಡುವೆಯೇ, ಅಪರಾಧಿಗಳನ್ನು ಗಲ್ಲಿಗೇರಿಸಲು ಸರಕಾರ ರೂಪಿಸಿರುವ ಹೊಸ ಕಾನೂನು ತಿದ್ದುಪಡಿಗೆ ಲೋಕಸಭೆಯ ಅಂಗೀಕಾರ ದೊರಕಿತು. 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಶಿಕ್ಷೆಗೊಳಗಾಗುವವರಿಗೆ ಮರಣದಂಡನೆ ವಿಧಿಸುವ ಸಂಬಂಧ 'ಕ್ರಿಮಿನಲ್ಕಾನೂನು ತಿದ್ದುಪಡಿ ವಿಧೇಯಕ-2018' ಲೋಕಸಭೆಯಲ್ಲಿ ಅನುಮೋದನೆ ಪಡೆಯಿತು. ಜಮ್ಮು-ಕಾಶ್ಮೀರದ ಕಠುವಾ ಹಾಗೂ ಉತ್ತರ ಪ್ರದೇಶದ ಉನ್ನಾವೋದಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳ ಬಳಿಕ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಆಗ್ರಹ ದೇಶಾದ್ಯಂತ ಕೇಳಿಬಂದಿತ್ತು.  ಕೇಂದ್ರ ಸರಕಾರ ನಿಟ್ಟಿನಲ್ಲಿ ಕ್ರಿಮಿನಲ್ಕಾನೂನು ತಿದ್ದುಪಡಿಗೆ ಏಪ್ರಿಲ್‌ 21ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಈಗ ಧ್ವನಿಮತದ ಮೂಲಕ ಅಂಗೀಕಾರವಾಗಿರುವ ವಿಧೇಯಕವು ಮಹಿಳೆಯರು ಹಾಗೂ ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ನೆರವಾಗಲಿದೆ ಎಂದು ಗೃಹ ಖಾತೆ ಸಹಾಯಕ ಸಚಿವ ಕಿರಣ್ರಿಜಿಜು ತಿಳಿಸಿದರು.  ಪ್ರಸ್ತುತ ಭಾರತೀಯ ದಂಡ ಸಂಹಿತೆ (ಐಪಿಸಿ)ಅಡಿಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾಪವಿದೆ. ಆದರೆ, 12 ಅಥವಾ 16 ವರ್ಷಕ್ಕಿಂತ ಕಿರಿಯ ಬಾಲಕಿಯರ ಮೇಲೆ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರಕ್ಕೆ ಶಿಕ್ಷೆಯ ಬಗ್ಗೆ ನಿಯಮಗಳಿರಲಿಲ್ಲ ಎಂದು ಸಚಿವರು ಮಾಹಿತಿ ನೀಡಿದರು. ವಿಧೇಯಕಕ್ಕೆ ಬಹುತೇಕ ಸಂಸದರು ಸಹಮತ ವ್ಯಕ್ತಪಡಿಸಿದರೂ, ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದ ಬಗ್ಗೆ ಕೆಲ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.  5 ದಿನದಲ್ಲೇ ಗಲ್ಲು ಶಿಕ್ಷೆ!  ಸುಗ್ರೀವಾಜ್ಞೆ ಮೂಲಕ ಕಾನೂನು ತಿದ್ದುಪಡಿ ಮಾಡಿರುವುದರಿಂದ ಈಗಾಗಲೇ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ ಜಾರಿಯಲ್ಲಿದೆ. ಆದರೆ, 6 ತಿಂಗಳೊಳಗೆ ಇದಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆಯುವುದರೊಂದಿಗೆ ಕಾನೂನು ಶಾಶ್ವತವಾಗಿ ಜಾರಿಯಾಗಲಿದೆ. ಜುಲೈ 2ರಂದು ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಹೊಸ ಕಾನೂನಿನಡಿ ನ್ಯಾಯಾಲಯ ತ್ವರಿತ ವಿಚಾರಣೆ ನಡೆಸಿ, 5 ದಿನದಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಸುಗ್ರೀವಾಜ್ಞೆ ಜಾರಿ ಬಳಿಕ ಈಗಾಗಲೇ ದೇಶಾದ್ಯಂತ ಹಲವೆಡೆ ಹೊಸ ಕಾನೂನಿನಡಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.  ಇತರ ಮುಖ್ಯಾಂಶಗಳು   * 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರಕ್ಕೆ ಕನಿಷ್ಠ 20 ವರ್ಷ ಜೈಲು, ಜೀವಾವಧಿ ಅಥವಾ ಮರಣದಂಡನೆ.  * 12 ವರ್ಷಕ್ಕಿಂತ ಕಿರಿಯ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಿಗೆ ಕಾಯಂ ಆಜೀವ ಜೈಲು ಶಿಕ್ಷೆ ಅಥವಾ ಮರಣದಂಡನೆ.   * ಮಹಿಳೆಯರ ಮೇಲಿನ ಅತ್ಯಾಚಾರಿಗಳಿಗೆ ಕನಿಷ್ಠ ಶಿಕ್ಷೆ ಪ್ರಮಾಣ 7ರಿಂದ 10 ವರ್ಷಕ್ಕೆ ಏರಿಕೆ, ಜೀವಾವಧಿಗೆ ವಿಸ್ತರಣೆ ಅವಕಾಶ.  * 16 ವರ್ಷಕ್ಕಿಂತ ಕಿರಿಯ ಮಕ್ಕಳ ಅತ್ಯಾಚಾರಿಗಳಿಗೆ ಕನಿಷ್ಠ ಶಿಕ್ಷೆ 10ರಿಂದ 20 ವರ್ಷಕ್ಕೆ ಹೆಚ್ಚಳ, ಆಜೀವ ಪರ್ಯಂತ ಶಿಕ್ಷೆಯಾಗಿ ಪರಿವರ್ತನೆಗೆ ಅವಕಾಶ.  * ಎಲ್ಲಾ ರೀತಿಯ ಅತ್ಯಾಚಾರ ಪ್ರಕರಣಗಳ ತನಿಖೆ, ವಿಚಾರಣೆಗೆ 2 ತಿಂಗಳ ಕಾಲಮಿತಿ.  * ಅತ್ಯಾಚಾರ ಪ್ರಕರಣದ ಮೇಲ್ಮನವಿ ಇತ್ಯರ್ಥಕ್ಕೆ 6 ತಿಂಗಳ ಗಡುವು.  * 16 ವರ್ಷಕ್ಕಿಂತ ಕಿರಿಯ ಬಾಲಕಿಯ ಅತ್ಯಾಚಾರಿ ಅಥವಾ ಸಾಮೂಹಿಕ ಅತ್ಯಾಚಾರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಇಲ್ಲ.  * 16 ವರ್ಷಕ್ಕಿಂತ ಕಿರಿಯ ಬಾಲಕಿಯ ಅತ್ಯಾಚಾರಿಗೆ ಜಾಮೀನು ನೀಡುವ ಬಗ್ಗೆ ತೀರ್ಮಾನಿಸುವ 15 ದಿನಗಳ ಮುನ್ನ ಸಂತ್ರಸ್ತೆಯ ವಕೀಲರು ಅಥವಾ ಪಬ್ಲಿಕ್ಪ್ರಾಸಿಕ್ಯೂಟರ್ಗೆ ನ್ಯಾಯಾಲಯ ನೋಟಿಸ್ನೀಡುವುದು ಕಡ್ಡಾಯ.

2018: ನವದೆಹಲಿ:  ಅಸ್ಸಾಂ ರಾಜ್ಯದಲ್ಲಿರುವ ಅಕ್ರಮ ವಿದೇಶಿ ವಲಸಿಗರನ್ನು ಗುರುತಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಆದೇಶದನ್ವಯ ಕಾನೂನುಬದ್ಧ ಅಸ್ಸಾಂ ನಾಗರಿಕರ ಪರಿಷ್ಕೃತ ರಿಜಿಸ್ಟರ್ ಕರಡನ್ನು ಎನ್ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಬಿಡುಗಡೆ ಮಾಡಿತು.  ಕರಡಿನಲ್ಲಿ ೪೦ ಲಕ್ಷ ಮಂದಿ ಅಕ್ರಮ ವಲಸಿಗರಾಗಿದ್ದಾರೆ ಎಂದು ತಿಳಿಸಲಾಗಿದ್ದು ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳೀಯರನ್ನು ಗುರಿಯಾಗಿಟ್ಟುಕೊಂಡು ವರದಿ ತಯಾರಿಸಲಾಗಿದೆ ಎಂದು ಆಪಾದಿಸಿದ್ದರೆ, ಲೋಕಸಭೆಯ ಕಾಂಗ್ರೆಸ್ ನಾಯಕ ವರದಿ ರಾಜ್ಯದ ಜನರನ್ನು ವಿಭಜಿಸುತ್ತಿದೆ ಎಂದು ದೂರಿದರು. ಗೃಹ ಸಚಿವ ರಾಜನಾಥ್ ಸಿಂಗ್ ಅವರು ವರದಿಯಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ, ವಿಪಕ್ಷ ಆರೋಪ ಬುಡರಹಿತ ಎಂದು ತಳ್ಳಿಹಾಕಿದರು. ಎನ್ ಆರ್ ಸಿ ಪ್ರಕಾರ, ಅಸ್ಸಾಂನಲ್ಲಿ ಒಟ್ಟು ,೨೯, ೯೧, ೩೮೪ ಜನರು ರಾಷ್ಟ್ರೀಯ ಪೌರತ್ವ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ,೮೯,೮೩,೬೭೭ ಮಂದಿ ಕಾನೂನುಬದ್ಧ ಪ್ರಜೆಗಳಾಗಿದ್ದಾರೆ ಎಂದು ಕರಡು ತಿಳಿಸಿತು.  ಅರ್ಜಿ ಸಲ್ಲಿಸಿದವರಲ್ಲಿ ೪೦ ಲಕ್ಷಕ್ಕೂ ಅಧಿಕ ಜನರು ಅಕ್ರಮ ವಲಸಿಗ ಪ್ರಜೆಗಳಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು. ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು  ಕಂಡು ಹಿಡಿಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ನಾಗರಿಕರ ನೋಂದಣಿಯನ್ನು ಮಾಡಿಸಲಾಗಿತ್ತು ಎಂದು ಮಾಧ್ಯಮದ ವರದಿ ಹೇಳಿತು. ಕಳೆದ ವರ್ಷ ಡಿಸೆಂಬರ್ ನಲ್ಲಿ ಎಆರ್ ಸಿ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ ಅಸ್ಸಾಂನಲ್ಲಿ ಒಟ್ಟು .೨೯ ಕೋಟಿ ಜನರು ತಮ್ಮ ಪೌರತ್ವ ಸಾಬೀತುಪಡಿಸಲು ದಾಖಲೆ ಸಲ್ಲಿಸಿದ್ದರು. ಅಂತಿಮ ಕರಡಿನಲ್ಲಿ .೦೯ ಕೋಟಿ ಜನರು ಅಧಿಕೃತ ಪೌರತ್ವ ಹೊಂದಿರುವುದಾಗಿ ತಿಳಿಸಿತು.  ಇದರಲ್ಲಿ ೪೦.೦೭ ಲಕ್ಷ ಜನರ ಬಳಿ ತಾವು ಅಸ್ಸಾಂ ನಾಗರಿಕರು ಎಂಬುದನ್ನು ಸಾಬೀತು ಪಡಿಸುವ ಬಗೆಗಿನ ಸೂಕ್ತ ದಾಖಲೆ ಇಲ್ಲ. ಆದರೆ ಇದು ಅಂತಿಮ ಕರಡು ವಿನಃ, ಅಂತಿಮ ಪಟ್ಟಿಯಲ್ಲ. ಯಾರ ಹೆಸರು ಪಟ್ಟಿಯಲ್ಲಿ ಇಲ್ಲವೋ ಅವರು ಇನ್ನೂ ಹೆಸರನ್ನು ಸೇರಿಸಬಹುದಾಗಿದೆ ಎಂದು ಗುವಾಹಟಿಯಲ್ಲಿ ಕರಡು ಬಿಡುಗಡೆ ಮಾಡಿದ ಎನ್ ಆರ್ ಸಿಯ ಸೈಲೇಶ್ ತಿಳಿಸಿದರು. ‘ಇದೇನು ಅಂತಿಮವಲ್ಲ. ಯಾರ ಹೆಸರು ಪಟ್ಟಿಯಲ್ಲಿ ಇಲ್ಲವೋ ಅವರು ಅಥವಾ ಯಾವುದಾದರು ಆಕ್ಷೇಪಣೆ ಸಲ್ಲಿಸುವುದಿದ್ದರೆ ಸಲ್ಲಿಸಬಹುದು ಎಂದು ಸೈಲೇಶ್ ಹೇಳಿದರು. ಮಮತಾ ಬ್ಯಾನರ್ಜಿ ಆಕ್ರೋಶ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ (ಎನ್ ಆರ್ ಸಿ) ೪೦ ಲಕ್ಷ ಜನರ ಹೆಸರುಗಳನ್ನು ಹೊರತು ಪಡಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದರು. ’ಭಾರತೀಯ ನಾಗರಿಕರು ತಮ್ಮದೇ ನೆಲದಲ್ಲಿ ನಿರಾಶ್ರಿತರಾಗಿದ್ದಾರೆ. ಕೇಂದ್ರ ಸರ್ಕಾರವು ವೋಟ್ ಬ್ಯಾಂಕ್ ರಾಜಕಾರಣ ನಡೆಸಿದೆ ಎಂದು ಅವರು ಆಪಾದಿಸಿದರುಈದಿನ ದೆಹಲಿಗೆ ತೆರಳುತ್ತಿರುವ ಬ್ಯಾನರ್ಜಿ ಅವರು ತಾವು ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಜೊತೆಗೆ ಚರ್ಚಿಸುವುದಾಗಿ ನುಡಿದರು. ’ನಾನು ಪಕ್ಷದ ಸಂಸತ್ ಸದಸ್ಯರ ತಂಡವೊಂದನ್ನು ಅಸ್ಸಾಮಿಗೆ ಕಳುಹಿಸುವೆ, ಅಗತ್ಯ ಬಿದ್ದಲ್ಲಿ ನಾನೂ ಸ್ವತಃ ಅಲ್ಲಿಗೆ ಹೋಗುವೆ ಎಂದು ಅವರು ನುಡಿದರುಎನ್ ಆರ್ ಸಿ ಕರಡಿಗೆ ಸೇರ್ಪಡೆಯಾಗದ ಜನರಿಗೆ ಪಶ್ಚಿಮ ಬಂಗಾಳವು ಆಶ್ರಯ ನೀಡಲಿದೆಯೇ ಎಂಬ ಪ್ರಶ್ನೆಗೆಅವರಿಗೆ ಮನೆಗಳಿವೆ. ಅವರು ಅಸ್ಸಾಮಿನ ನಿವಾಸಿಗಳಾಗಿದ್ದಾರೆ. ಅವರು ಬರಬಯಸುವುದಿದ್ದರೆ ನಾವು ಯೋಚಿಸುತ್ತೇವೆ. ಆದರೆ ಅವರನ್ನು ಏಕೆ ಅಲ್ಲಿಂದ ತೆರವುಗೊಳಿಸಬೇಕು? ಎಂದು ಮಮತಾ ಪ್ರಶ್ನಿಸಿದರು.  ‘ಅವರು ಭಾರತೀಯರು, ಆದರೆ ತಮ್ಮದೇ ನೆಲದಲ್ಲಿ ನಿರಾಶ್ರಿತರಾಗಿದ್ದಾರೆ ಎಂದು ನುಡಿದ ಬ್ಯಾನರ್ಜಿ, ಪಾಸ್ ಪೋರ್ಟ್ ಹೊಂದಿರುವ ಕೆಲವು ವ್ಯಕ್ತಿಗಳ ಹೆಸರು ಕೂಡಾ ಎನ್ ಆರ್ ಸಿಯಿಂದ ಬಿಟ್ಟು ಹೋಗಿದೆ. ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಅಂತಿಮ ಕರಡಿನಿಂದ ಹೊರತು ಪಡಿಸಲಾಗಿದೆ ಎಂದು ಹೇಳಿದರುಲೋಕಸಭೆಯಲ್ಲಿ ವಿಪಕ್ಷ ಆಕ್ರೋಶ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ’ರಾಜ್ಯದ ಮೂಲ ಪೌರರನ್ನೇ ಪ್ರಶ್ನಿಸಲಾಗುತ್ತಿದ್ದು, ಇದು ರಾಜ್ಯದ ಜನರನ್ನು ಜಾತಿ ಮತಗಳ ಆಧಾರದಲ್ಲಿ ವಿಭಜಿಸುತ್ತಿದೆ ಎಂದು ಹೇಳಿದರು.  ಸಿಪಿಐ(ಎಂ) ಸದಸ್ಯ ಮೊಹಮ್ಮದ್ ಸಲೀಮ್ ಅವರುಅಸ್ಸಾಮಿನಲ್ಲಿ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ. ಜನರ ಮಾನವ ಹಕ್ಕುಗಳು ಮತ್ತು ಪ್ರಜಾತಾಂತ್ರಿಕ ಹಕ್ಕುಗಳು ಗಂಡಾಂತರದಲ್ಲಿವೆ ಎಂದು ನುಡಿದರು. ಸಮಾಜವಾದಿ ಪಕ್ಷದ ಜಯಪ್ರಕಾಶ್ ನಾರಾಯಣ್ ಯಾದವ್ ಅವರು ಕ್ರಮವು ಅಸ್ಸಾಮಿನಲ್ಲಿ ದ್ವೇಷ ಮತ್ತು ಹಿಂಸೆಗೆ ಕಾರಣವಾಗಬಲ್ಲುದು ಎಂದು ಹೇಳಿದರು. ಇದನ್ನು ೪೦ ವರ್ಷಗಳಿಂದ ರಾಜ್ಯದಲ್ಲಿಯೇ ವಾಸವಾಗಿರುವ ಜನರ ವಿರುದ್ಧದ ಸಮರ ಎಂದು ಅವರು ಬಣ್ಣಿಸಿದರುರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್ ಆರ್ ಸಿ) ಮೊದಲ ಕರಡನ್ನು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕಳೆದ ವರ್ಷ ಡಿಸೆಂಬರಿನಲ್ಲಿ ಪ್ರಕಟಿಸಲಾಗಿತ್ತು. ಅದರ ಪ್ರಕಾರ .೨೯ ಕೋಟಿ ಅರ್ಜಿದಾರರ ಪೈಕಿ . ಕೋಟಿ ಜನರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿತ್ತು. ೨೦ನೇ ಶತಮಾನದ ಆದಿಯಿಂದಲೇ ಅಸ್ಸಾಂಮಿಗೆ ಬಾಂಗ್ಲಾದೇಶದಿಂದ ಜನರು ವಲಸೆ ಬರುತ್ತಿದ್ದು, ರಾಷ್ಟ್ರದಲ್ಲೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಇರುವ ಏಕೈಕ ರಾಜ್ಯ ಇದಾಗಿದೆ. ಇಲ್ಲಿನ ಮೊದಲ ಎನ್ ಆರ್ ಸಿಯನ್ನು ೧೯೫೧ರಲ್ಲಿ ಸಿದ್ಧ ಪಡಿಸಲಾಗಿತ್ತು. ಈದಿನ ಎನ್ ಆರ್ ಸಿ ಬಿಡುಗಡೆಯಾಗುತ್ತಿದ್ದಂತೆಯೇ ತೃಣಮೂಲ ಕಾಂಗ್ರೆಸ್ ಲೋಕಸಭೆಯಲ್ಲಿ ಎನ್ ಆರ್ ಸಿ ಮೇಲೆ ನಿಲುವಳಿ ಸೂಚನೆಯನ್ನು ಮಂಡಿಸಿತು. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಅದನ್ನು ಅಂಗೀಕರಿಸಲಿಲ್ಲ. ೪೦ ಲಕ್ಷ ಜನರು ಎಲ್ಲಿಗೆ ಹೋಗುತ್ತಾರೆ ಎಂದು ಕೇಂದ್ರವನ್ನು ಪ್ರಶ್ನಿಸಿದ ಸುದೀಪ್ ಬಂದ್ಯೋಪಾಧ್ಯಾಯ (ಟಿಎಂಸಿ) ’ಅಸ್ಸಾಮಿನಲ್ಲಿ ದಶಕಗಳಿಂದ ವಾಸವಾಗಿರುವ ಜನರಿಗೆ ನ್ಯಾಯದ ನಿರಾಕರಣೆ ಆಗಬಾರದು ಎಂದು ಆಗ್ರಹಿಸಿದರುಇದು ಅಮಾನವೀಯ ಮತ್ತು ಜನರಿಗೆ ನೀಡಲಾಗುತ್ತಿರುವ ಚಿತ್ರಹಿಂಸೆ. ೪೦ ಲಕ್ಷ ಮಂದಿಗೆ ಅಸ್ಸಾಮಿನಲ್ಲಿ ವಾಸ್ತವ್ಯ ಸಾಧ್ಯವಾಗುವಂತೆ ತಿದ್ದುಪಡಿಗಳನ್ನು ಮಾಡಬೇಕು ಎಂದು ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಅವರು ನುಡಿದರು. ಸರ್ಕಾರದ್ದೇನಿಲ್ಲ, ಸುಪ್ರೀಂ ಆದೇಶ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಬಿಡುಗಡೆ ಮಾಡುವಲ್ಲಿ ಸರ್ಕಾರ ಏನನ್ನೂ ಮಾಡಿಲ್ಲ. ಎಲ್ಲವನ್ನೂ ಸುಪ್ರೀಂಕೋರ್ಟ್ ಆದೇಶದಂತೆ ಮಾಡಲಾಗಿದೆ. ಸರ್ಕಾರದ ವಿರುದ್ಧ ವಿಪಕ್ಷವು ಮಾಡುತ್ತಿರುವ ಆರೋಪ ಬುಡರಹಿತವಾದದ್ದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭೆಯಲ್ಲಿ ಹೇಳಿದರು.  ‘ಇದು ಅತ್ಯಂತ ಸೂಕ್ಷ್ಮ ವಿಚಾರವಾದ ಕಾರಣ ಭೀತಿ ಸೃಷ್ಟಿಸಬೇಡಿ ಎಂದು ಗೃಹ ಸಚಿವರು ವಿರೋಧಿ ಸದಸ್ಯರಿಗೆ ಮನವಿ ಮಾಡಿದರು. ’ಏನು ನಡೆಯುತ್ತಿದೆಯೋ ಅದು ಸುಪ್ರೀಂಕೋರ್ಟಿನ ಉಸ್ತುವಾರಿಯಲ್ಲಿ ನಡೆಯುತ್ತಿದೆ, ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ಅವರು ಹೇಳಿದರು.  ‘ಈದಿನ ಪ್ರಕಟಿಸಲಾಗಿರುವ ಎನ್ ಆರ್ ಸಿ ಅಂತಿಮ ಪಟ್ಟಿಯಲ್ಲ. ಅರ್ಜಿದಾರರಿಗೆ ತಮ್ಮ ಆಕ್ಷೇಪ ಮತ್ತು ಪ್ರತಿಪಾದನೆ ಮಂಡಿಸಲು ಅವಕಾಶವಿದೆ. ಅಂತಹ ಪ್ರತಿಪಾದನೆ, ಆಕ್ಷೇಪಗಳನ್ನು ಹೇಗೆ ಇತ್ಯರ್ಥ ಪಡಿಸಬೇಕು ಎಂಬುದನ್ನು ಸುಪ್ರೀಂಕೋರ್ಟ್ ನಿರ್ಧರಿಸುತ್ತದೆ ಎಂದು ಸಿಂಗ್ ನುಡಿದರು. ಎನ್ ಆರ್ಸಿಯಲ್ಲಿ ಸರ್ಕಾರ ವಹಿಸಿದ್ದ ಪಾತ್ರವೇನು ಎಂಬುದನ್ನು ಪಟ್ಟಿಮಾಡಿ ಎಂದು ವಿಪಕ್ಷಗಳಿಗೆ ಸೂಚಿಸಿದ ಗೃಹ ಸಚಿವರುಇದು ಅತ್ಯಂತ ಸೂಕ್ಷ್ಮ ವಿಷಯ. ಅನಗತ್ಯವಾಗಿ ರಾಜಕೀಯಗೊಳಿಸಬೇಡಿ ಎಂದು ಹೇಳಿದರುಸಚಿವರ ಉತ್ತರದಿಂದ ಸಮಾಧಾನಗೊಳ್ಳದ ವಿಪಕ್ಷ ಸದಸ್ಯರು ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿದರು. ರಾಜ್ಯಸಭೆ ಕಲಾಪ ಮುಂದೂಡಿಕೆ: ರಾಜ್ಯಸಭೆಯಲ್ಲಿ ಅಸ್ಸಾಂ ಎನ್ ಆರ್ ಸಿ ವಿಷಯ ಪ್ರತಿಧ್ವನಿಸಿ, ತೀವ್ರ ಗದ್ದಲದ ಬಳಿಕ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

2018: ನವದೆಹಲಿ: ಕೋಟ್ಯಧಿಪತಿ ವಜ್ರ ವ್ಯಾಪಾರಿ ಮೆಹುಲ್ ಚೊಕ್ಸಿ ಜಗತ್ತಿನಾದ್ಯಂತ ಪ್ರವಾಸ ಮಾಡುವುದನ್ನು ತಡೆಯಲು ಆಂಟಿಗುವಾ ಮತ್ತು ಬಾರ್ಬುಡಗಳಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಯು ಅಲ್ಲಿನ ಅಧಿಕಾರಿಗಳಿಗೆ ಮನವಿ ಮಾಡಿದೆ ಎಂದು ಮೂಲಗಳು ಇಲ್ಲಿ ತಿಳಿಸಿದವು. ‘ಆಂಟಿಗುವಾದಲ್ಲಿ ಮೆಹುಲ್ ಚೊಕ್ಸಿ ಇರುವ ಸಾಧ್ಯತೆಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಲಭಿಸಿದ ತತ್ ಕ್ಷಣವೇ ಜಾರ್ಜ್ಟೌನಿನಲ್ಲಿ ನಮ್ಮ ರಾಜತಾಂತ್ರಿಕ ಕಚೇರಿಗೆ ಸೂಚನೆ ನೀಡಲಾಯಿತು ಮತ್ತು ಆಂಟುಗುವಾ ಮತ್ತು ಬಾರ್ಬುಡ ಸರ್ಕಾರಗಳಿಗೆ ಲಿಖಿತ ಹಾಗೂ ಮೌಖಿಕ ಮನವಿ ಸಲ್ಲಿಸಿ ಅವರ ನೆಲದಲ್ಲಿ ಚೊಕ್ಸಿ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಬಂಧಿಸಲು ಮತ್ತು ನೆಲ, ವಾಯು ಇಲ್ಲವೇ ಸಮುದ್ರ ಮೂಲಕ ಮುಂದಕ್ಕೆ ಪಯಣಿಸದಂತೆ ತಡೆಯಲು ಕೋರಲಾಯಿತು ಎಂದು ಮೂಲಗಳು ಹೇಳಿದವು. ಚೊಕ್ಸಿ ಭವಿಷ್ಯದ ಬಗ್ಗೆ ಭಾರತವು ಆಂಟಿಗುವಾ ಮತ್ತು ಬಾರ್ಬುಡಾ ಜೊತೆಗೆ ಮಾತುಕತೆ ನಡೆಸಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸರ್ಕಾರದ ಇತರ ಸಂಸ್ಥೆಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ವಯಿತ ಕ್ರಮಗಳನ್ನು ಕೈಗೊಳ್ಳಲಿವೆ ಎಂದು ಮೂಲಗಳು ತಿಳಿಸಿದವು. ಉಭಯ ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಗಡೀಪಾರು ಒಪ್ಪಂದ ಇಲ್ಲದೇ ಇದ್ದರೂ ಚೊಕ್ಸಿಯನ್ನು ಹಿಂದಕ್ಕೆ ಕಳುಹಿಸುವಂತೆ ಭಾರತ ಸಲ್ಲಿಸಿರುವ ಗೌರವಿಸಲು ತಾನು ಯತ್ನಿಸುವುದಾಗಿ ದ್ವೀಪರಾಷ್ಟ್ರ ಸರ್ಕಾರವು ಸುಳಿವು ನೀಡಿತು. ‘ನಾವು ಭಾರತ ಸರ್ಕಾರದ ಸಂಸ್ಥೆಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದೇವೆ ಮತ್ತು ಆಂಟುಗುವಾ ಮತ್ತು ಬಾರ್ಬುಡಾ ಸರ್ಕಾರವು ವಿಷಯಕ್ಕೆ ಸಂಬಂಧಿಸಿದಂತೆ ಬೆಂಬತ್ತುವುದು ಎಂದು ಮೂಲಗಳು ಹೇಳಿದವುಚೊಕ್ಸಿ ಮತ್ತು ಅವರ ಅಳಿಯ ನೀರವ್ ಮೋದಿ ಇಬ್ಬರೂ ಸರ್ಕಾರಿ ರಂಗದ ಹಲವಾರು ಬ್ಯಾಂಕುಗಳಿಗೆ ಕೋಟ್ಯಂತರ ಡಾಲರ್ ವಂಚಿಸಿದ ಪ್ರಕರಣದಲ್ಲಿ ಬೇಕಾಗಿದ್ದಾರೆ. ಚೊಕ್ಸಿ ಅವರಿಗೆ ೨೦೧೭ರ ಚಳಿಗಾಲದಲ್ಲಿ, ಹಗರಣ ಬೆಳಕಿಗೆ ಬರುವುದಕ್ಕೆ ಮೂರು ತಿಂಗಳು ಮುನ್ನ ಆಂಟಿಗುವಾ ಪಾಸ್ ಪೋರ್ಟ್ ನೀಡಲಾಗಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮೋದಿ ಮತ್ತು ಚೊಕ್ಸಿ ಅವರ ಪಾಸ್ ಪೋರ್ಟ್ಗಳನ್ನು ಫೆಬ್ರುವರಿಯಲ್ಲಿ ರದ್ದು ಪಡಿಸಿ, ಇವರಿಬ್ಬರೂ ಜಗತ್ತು ಸುತ್ತದಂತೆ ತಡೆಯುವ ಯತ್ನ ನಡೆಸಿತ್ತು. ಏನಿದ್ದರೂ ಇವರಿಬ್ಬರೂ ವಿಶ್ವ ಸುತ್ತುತ್ತಿರುವ ಬಗ್ಗೆ ವರದಿಗಳು ಬಂದಿದ್ದವು.

2018: ಪುಣೆ: ಶಿಕ್ಷಣ ಮತ್ತು ನೌಕರಿಯಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಪುಣೆಯಲ್ಲಿ ಮತ್ತೆ ಹಿಂಸಾತ್ಮಕ ಚಳವಳಿ ಭುಗಿಲೆದ್ದಿತು.  ಚಳವಳಿಕಾರರು ಕನಿಷ್ಠ ೪೦ ಬಸ್ಸುಗಳಿಗೆ ಬೆಂಕಿ ಹಚ್ಚಿ, ಇತರ ೫೦ ಬಸ್ಸುಗಳನ್ನು ಹಾನಿಗೊಳಿಸಿದರು. ಮಹಾರಾಷ್ಟ್ರದಲ್ಲಿ ಕಳೆದವಾರ ಮರಾಠಾ ಮೀಸಲು ಚಳವಳಿಯ ನೇತೃತ್ವ ಮರಾಠಾ ಕ್ರಾಂತಿ ಮೋರ್ಚಾ ಗುಂಪು ಈದಿನದ ಹಿಂಸಾಚಾರದ ಹಿಂದಿದೆ ಎಂದು ಪೊಲೀಸರು ಶಂಕಿಸಿದರು. ನಗರ ಹೊರವಲಯದ ಪುಣೆ-ನಾಸಿಕ್ ಹೆದ್ದಾರಿಯಲ್ಲಿರುವ ಚಾಕನ್ ಕೈಗಾರಿಕಾ ಪ್ರದೇಶದಲ್ಲಿ ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದೆ. ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೊಲೀಸರು ಆಶ್ರುವಾಯು ಜೊತೆಗೆ ಗಾಳಿಯಲ್ಲೂ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಹಠಾತ್ ಹಿಂಸಾಚಾರದ ಪರಿಣಾಮವಾಗಿ ಪ್ರದೇಶದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ನೂರಾರು ಮಂದಿ ಪ್ರಯಾಣಿಕರು ಮಾರ್ಗಮಧ್ಯದಲ್ಲೇ ಉಳಿಯಬೇಕಾಯಿತು. ಕೆಲವು ಸಮೀಪದ ಸರ್ಕಾರಿ ಕಟ್ಟಡಗಳಿಗೆ ಹೋಗಿ ಆಶ್ರಯ ಪಡೆದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಅಧಿಕಾರಿಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದು, ನಾಲ್ಕಕ್ಕಿಂತ ಹೆಚ್ಚು ಜನ ಜಮಾಯಿಸದಂತೆ ನಿರ್ಬಂಧಿಸಿದ್ದಾರೆ. ಹೆಚ್ಚುವರಿ ಪಡೆಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಯಿತು. ಈದಿನ ಬೆಳಗ್ಗೆ ಮರಾಠಾ ಮೀಸಲಾತಿಗೆ ಆಗ್ರಹಿಸಿ ಇಬ್ಬರು ವ್ಯಕ್ತಿಗಳು ಆತ್ಯಹತ್ಯೆಮಾಡಿಕೊಂಡ ಬಳಿಕ ಹಿಂಸಾಚಾರ ಭುಗಿಲೆದ್ದಿತು. ಒಬ್ಬ ವ್ಯಕ್ತಿ ನಾಂದೇಡ್ ನಲ್ಲಿ ನೇಣು ಹಾಕಿಕೊಂಡರೆ, ಇನ್ನೊಬ್ಬ ವ್ಯಕ್ತಿ ಔರಂಗಾಬಾದಿನಲ್ಲಿ ರೈಲುಗಾಡಿಯ ಮುಂಭಾಗಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ. ಮರಾಠಾ ಸಮುದಾಯಕ್ಕೆ ಶಿಕ್ಷಣ ಸಂಸ್ಥೆಗಳು ಮತ್ತು ನೌಕರಿಗಳಲ್ಲಿ ಶೇಕಡಾ ೧೬ರಷ್ಟು ಮೀಸಲಾಗಿ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯವ್ಯಾಪಿ ಚಳವಳಿ ನಡೆದ ಕೆಲವೇ ದಿನಗಳ ಬಳಿಕ ಈದಿನ ಎರಡು ಆತ್ಮಹತ್ಯೆಗಳು ಮತ್ತು ಪುಣೆ ಹಿಂಸಾಚಾರ ಘಟಿಸಿದೆ. ಮುಂಬೈ ಬಂದ್ ಕಾಲದಲ್ಲಿ ತೀವ್ರ ಹಿಂಸಾಚಾರ ಸಂಭವಿಸಿದ್ದನ್ನು ಅನುಸರಿಸಿ ಚಳವಳಿ ಮುಖ್ಯಸ್ಥರು ಚಳವಳಿಯನ್ನು ಹಿಂತೆಗೆದುಕೊಂಡಿದ್ದರು. ಮರಾಠಾ ಸಮುದಾಯದ ಕೆಲವರು ಹಿಂಸಾಚಾರಕ್ಕೆ ಯೋಜಿಸುತ್ತಿದ್ದಾರೆ ಎಂದು ಆಪಾದಿಸಿದ್ದಕ್ಕಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಮರಾಠಾ ಕ್ರಾಂತಿ ಮೋರ್ಚಾ ಮುಂಬೈ ಬಂದ್ ಗೆ ಕರೆ ನೀಡಿತ್ತು. ರಾಜ್ಯ ಜನಸಂಖ್ಯೆಯಲ್ಲಿ ಶೇಕಡಾ ೩೦ರಷ್ಟು ಇರುವ ರಾಜಕೀಯವಾಗಿ ಪ್ರಬಲವಾಗಿರುವ ಮರಾಠಾ ಸಮುದಾಯವು ಮೀಸಲಾತಿಯ ಆಗ್ರಹ ಮುಂದಿಟ್ಟಿರುವುದು ರಾಜ್ಯದಲ್ಲಿ ಕೆಲವು ದಿನಗಳಿಂದ ಭಾರಿ ವಿವಾದವನ್ನು ಎಬ್ಬಿಸಿತ್ತು.

2016: ಮುಂಬೈ: 87 ವರ್ಷದ ಸುದೀರ್ಘ ಇತಿಹಾಸ ಹೊಂದಿರುವ ಪಾರ್ಲೆ ಜಿ ಕಂಪನಿ ತನ್ನ ಕದ ಮುಚ್ಚಿತು. ಇದರಿಂದಾಗಿ ಜನಪ್ರಿಯ ಬಿಸ್ಕತ್ ಇತಿಹಾಸ ಸೇರಿದಂತಾಗಿದೆ ಮುಂಬೈ: 87 ವರ್ಷದ ಸುದೀರ್ಘ ಇತಿಹಾಸ ಹೊಂದಿರುವ ಪಾರ್ಲೆ ಜಿ ಕಂಪನಿ ತನ್ನ ಕದ ಮುಚ್ಚಿತು. ಇದರಿಂದಾಗಿ ಜನಪ್ರಿಯ ಬಿಸ್ಕತ್ ಇತಿಹಾಸ ಸೇರಿದಂತಾಗಿದೆ. 929ರಿಂದ ಕಾರ್ಯ ನಿರ್ವಹಿಸುತ್ತಿದ್ದ ಪಾರ್ಲೆ ಇನ್ನು ಮುಂದೆ ನೆನಪು ಮಾತ್ರಪಾರ್ಲೆ ಗ್ಲೂಕೊ ಹೆಸರಿನಲ್ಲಿ ಬಿಸ್ಕತ್ ಉತ್ಪಾದಿಸುತ್ತಿದ್ದ ಕಂಪನಿ 1980ರಲ್ಲಿ ಪಾರ್ಲೆ ಜಿ ಎಂಬ ಹೆಸರಿನಲ್ಲಿ ಉತ್ಪಾದನೆ ಆರಂಭಿಸಿತುದೇಶದ ಮೂಲೆ ಮೂಲೆಗಳಲ್ಲಿ ಬಹು ಬೇಗನೆ ಹಸ್ತ ಚಾಚಿದ  ಕಂಪನಿ ಪ್ರತಿನಿತ್ಯ 40 ಕೋಟಿ ಬಿಸ್ಕತ್ ಉತ್ಪಾದನೆ ಮಾಡುತಿತ್ತು. ಪ್ರಾರಂಭದಲ್ಲಿ ಮಿಠಾಯಿಗಳನ್ನು ಉತ್ಪಾದಿಸುತ್ತಿದ್ದ  ಕಂಪನಿ 1939ರಲ್ಲಿ ಬಿಸ್ಕತ್ ಉತ್ಪಾದನೆಗೆ ಕೈ ಹಾಕಿತುಇದರಿಂದಾಗಿ ಕಂಪನಿ ಮಾರುಕಟ್ಟೆಯಲ್ಲಿ ಉತ್ತಮ ಹೆಸರುಗಳಿಸುವ ಜತೆಗೆ ಅಧಿಕ ಲಾಭಗಳಿಸಿತುಆದರೆ ಇತ್ತೀಚಿನ ವರ್ಷದಲ್ಲಿ ಪ್ರಬಲ ಪೈಪೋಟಿ ಎದುರಿಸಲು ವಿಫಲವಾದ ಕಂಪನಿ ನಷ್ಟಕ್ಕೆ ಸಿಲುಕಿ ನಲುಗಿತು.  ಇದರಿಂದಾಗಿ 87 ವರ್ಷ ಇತಿಹಾಸ ಹೊಂದಿರುವ ಪಾರ್ಲೆ ಕಂಪನಿಯನ್ನು ಮುಚ್ಚುವ ನಿರ್ಧಾರವನ್ನು ಚೌಹಾನ್ ಕುಟುಂಬ ತೆಗೆದು ಕೊಂಡಿತು. ದೇಶದಲ್ಲಿನ 60 ಲಕ್ಷ ಚಿಲ್ಲರೆ ಮಳಿಗೆಗಳಲ್ಲಿ ಪಾರ್ಲೆ ಜಿ ಬಿಸ್ಕತ್ತು ಸಿಗುತ್ತಿತ್ತು ಎಂದು ಸಮೀಕ್ಷೆಯೊಂದು ತಿಳಿಸಿತ್ತು.  ಹಲವು ವರ್ಷಗಳಿಂದ ಪಾರ್ಲೆ ಬಿಸ್ಕತ್ಗೆ ಒಗ್ಗಿಕೊಂಡವರಿಗೆ ಕಂಪನಿಯ  ನಿರ್ಧಾರ ಆಘಾತ ತಂದಿತು.

2016: ಬೆಂಗಳೂರು/ಬ್ರುಸೆಲ್ಸ್: ಬಹು ಅಂಗಾಗ ವೈಫಲ್ಯದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರು ಬೆಲ್ಜಿಯಂನ  ಬ್ರುಸೆಲ್ಸ್ನಲ್ಲಿ ನಿಧನರಾದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಕೇಶ್ ಅವರಿಗೆ ಬೆಲ್ಜಿಯಂನ ಬ್ರುಸೆಲ್ಸ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 1ಗಂಟೆ ಸುಮಾರಿಗೆ ನಿಧನರಾದರು. ಸ್ನೇಹಿತರ ಜೊತೆಗೆ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ರಾಕೇಶ್ ಅವರು ಅನಾರೋಗ್ಯದಿಂದ ಕಳೆದ  ಜುಲೈ 23ರ ಶನಿವಾರ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ರಾಕೇಶ್ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಜುಲೈ 28ರಂದು  ಬೆಲ್ಜಿಯಂಗೆ ತಲುಪಿದ್ದರು. ರಾಕೇಶ್ ಅವರಿಗೆ ಮೊದಲಿನಿಂದಲೂ ಯಕೃತ್ತಿನ ಸಮಸ್ಯೆ ಇತ್ತು. ಪ್ರವಾಸದ ವೇಳೆ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದ ಅವರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದರು.. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಜುಲೈ 29ರಂದು ಸಂಜೆ ತಮ್ಮ ಸಂಬಂಧಿಯ ಜತೆ ಬ್ರುಸೆಲ್ಸ್ಗೆ ತಲುಪಿದ್ದರು. ರಾಕೇಶ್ಗೆ ಇಬ್ಬರು ಮಕ್ಕಳಿದ್ದು, ರಾಕೇಶ್ ಅವರ ಪತ್ನಿಯೂ ಕಳೆದ ಬೆಲ್ಜಿಯಂಗೆ ತೆರಳಿದ್ದರು.

2016: ಭುವನೇಶ್ವರ: ಗುಡುಗುಸಿಡಿಲು ಸಹಿತ ಧಾರಾಕಾರ ಮಳೆಗೆ ಓಡಿಶಾ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದು, 30ಕ್ಕೂ ಅಧಿಕ ಜನರು ಈದಿನ ಸಾವನ್ನಪ್ಪಿದರು. ಸಿಡಿಲಿನ ಅಬ್ಬರಕ್ಕೆ ಮಹಿಳೆ, ಮಕ್ಕಳು ಹಾಗೂ ವೃದ್ಧರು ಸಾವನ್ನಪ್ಪಿದರು. 36 ಜನರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಭದ್ರಕ್ನಲ್ಲಿ 8, ಬಾಲಾಸೋರ್ನಲ್ಲಿ 7, ಖುದ್ರಾದಲ್ಲಿ 6, ಜೈಪುರದಲ್ಲಿ 3, ನಯಾಗರ್ನಲ್ಲಿ 2 ಹಾಗೂ ಸಂಬಲಪುರ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದ ವರದಿಯಾಯಿತು. ಮೃತರ ಕುಟುಂಬಕಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದರು.. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದರು. 

2016: ಹುಬ್ಬಳ್ಳಿ: ಕಾಶ್ಮೀರದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ನವಲಗುಂದ ತಾಲೂಕಿನ ಸೈದಾಪುರ ಗ್ರಾಮದ ಹಸನಸಾಬ್ ಖುದಾವಂದ್ ಈದಿನ ವೀರಮರಣ ಹೊಂದಿದರು. ಇಪ್ಪತ್ನಾಲ್ಕರ ಹರೆಯಯ ಹಸನ್ ಸಾಬ್ ಅವರ ಸಾವಿನ ಸುದ್ದಿ ಕುಟುಂಬದ ಸದಸ್ಯರಿಗೆ ಆಘಾತ ನೀಡಿತು.
.
2016: ಕ್ಯಾಂಡಿ: ಹದಿನೇಳು ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ ಜಯಸಿದ
ಸಾಧನೆಯನ್ನು ಈದಿನ ಶ್ರೀಲಂಕಾ ಮಾಡಿತು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 106 ರನ್ಗಳ ಜಯ ದಾಖಲಿಸುವ ಮೂಲಕ ಶ್ರೀಲಂಕಾ 1-0 ಅಂತರದಲ್ಲಿ ಮುನ್ನಡೆ ಕಂಡಿತು. ಮೂಲಕ ಸ್ಮಿತ್ ಪಡೆಗೆ ಸಿಂಹಳಿಯರು ಆಘಾತ ನೀಡಿದರು. ಎರಡನೇ ಇನಿಂಗ್ಸ್ನಲ್ಲಿ 268 ರನ್ ಗುರಿ ಬೆನ್ನುಹತ್ತಿದ ಆಸ್ಟ್ರೇಲಿಯಾ 161 ರನ್ಗೆ ಸರ್ವಪತನಗೊಂಡಿತು. ನಾಯಕ ಸ್ಟಿವನ್ ಸ್ಮಿತ್ಗಳಿಸಿದ 55 ರನ್ ವಯಕ್ತಿಕ ಗರಿಷ್ಠವಾಯಿತು. ಶ್ರೀಲಂಕಾ ಸ್ಪಿನ್ನರ್ ರಂಗನ ಹೆರಾತ್ ಎರಡನೇ ಇನಿಂಗ್ಸ್ನಲ್ಲಿ ಕೂಡ ಕಮಾಲ್ ಮಾಡಿದರು. ಐದು ವಿಕೆಟ್ ಪಡೆಯುವ ಮೂಲಕ ಕಾಂಗರೂಗಳಿಗೆ ಆಘಾತ ನೀಡಿದರು. ಪ್ರಥಮ ಇನಿಂಗ್ಸ್ನಲ್ಲಿ ಕೂಡ ನಾಲ್ಕು ವಿಕೆಟ್ ಪಡೆದು, ಆಸ್ಟ್ರೇಲಿಯಾ ಕುಸಿತಕ್ಕೆ ಕಾರಣರಾಗಿದ್ದರು. ದ್ವಿತೀಯ ಇನಿಂಗ್ಸ್ನಲ್ಲಿ ಯುವ ಬ್ಯಾಟ್ಸ್ಮನ್ ಕುಶಾಲ್ ಮೆಂಡೀಸ್ ಸಿಡಿಸಿದ 176 ರನ್ಗಳ ನೆರವಿನಿಂದ ಶ್ರೀಲಂಕಾ 353 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.

2016: ಜೌನ್ಪುರ: 2005 ಜುಲೈ 28ರಂದು 14 ಜನರ ಸಾವು ಮತ್ತು 90 ಜನ ಗಾಯಗೊಳ್ಳಲು ಕಾರಣವಾದ ಶ್ರಮಜೀವಿ ಎಕ್ಸ್ಪ್ರೆಸ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸುದೀರ್ಘ 11 ವರ್ಷಗಳ ಬಳಿಕ ಇಲ್ಲಿನ ಸ್ಥಳೀಯ ನ್ಯಾಯಾಲಯವು  ಈದಿನ ಇಬ್ಬರು ಆರೋಪಿಗಳ ಪೈಕಿ ಒಬ್ಬ ಆರೋಪಿಗೆ ಮರಣದಂಡನೆ ವಿಧಿಸಿತು. ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ಹಿಂದಿನ ದಿನ ನೀಡಿದ್ದ ತನ್ನ ತೀರ್ಪಿನಲ್ಲಿ ಪ್ರಕರಣದಲ್ಲಿ ಮೊಹಮ್ಮದ್ ಆಲಂಗೀರ್ ಯಾನೆ ರೋನಿ ಎಂಬ ಆರೋಪಿಯನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಇನ್ನೊಬ್ಬ ಆರೋಪಿ ಒಬೇದುರ್ರಹಮಾನ್ ಯಾನೆ ಬಾಬು ಭಾಯ್ ಕುರಿತ ತೀರ್ಪನ್ನು ಆಗಸ್ಟ್ 2ಕ್ಕೆ ಮುಂದೂಡಿತ್ತು. ಬಿಗಿ ಭದ್ರತೆಯ ನಡುವೆ ನಡೆದ ಕೋರ್ಟ್ ಕಲಾಪದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ ನ್ಯಾಯಾಧೀಶ (ಪ್ರಥಮ) ಬುಧಿರಾಮ್ ಯಾದವ್ ಅವರು ರೋನಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದರು.

2016: ನವದೆಹಲಿ: ಉತ್ತರಾಖಂಡದ ಪಿತೋರ್ಗಢ ಜಿಲ್ಲೆಯ 12,000 ಅಡಿ ಎತ್ತರದ ಹಿಮ ಪರ್ವತದ ಮೇಲೆ ಹುಲಿ ಪತ್ತೆಯಾದುದನ್ನು ವನ್ಯಜಿವಿ ತಜ್ಞರು ಪ್ರಕಟಿಸಿದರು.. 2009 ರಲ್ಲಿ ರಾಯಲ್ ಬೆಂಗಾಲ್ ಟೈಗರ್ 10 ಸಾವಿರ ಅಡಿ ಎತ್ತರದ ಪೂರ್ವಾಂಚಲ ಸಿಕ್ಕಿಂನ ಹಿಮಪರ್ವತದಲ್ಲಿ ವಾಸವಾಗಿರುವುದು ಪತ್ತೆಯಾಗಿದ್ದನ್ನು ಬಿಟ್ಟರೆ ಇದು ಹೊಸ ದಾಖಲೆ. ವನ್ಯಜೀವಿ ತಜ್ಞರು ನೀಡಿದ ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಹಿಮ ಚಿರತೆಗಳು ಇಷ್ಟು ಎತ್ತರದ ಪ್ರದೇಶದಲ್ಲಿ ವಾಸ ಮಾಡುತ್ತವೆ. ಆದರೆ ಮೊಟ್ಟ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಹುಲಿ ಸೆರೆ ಸಿಕ್ಕಿರುವುದು ವಿಶೇಷ ಎಂದು ಭಾರತ ವನ್ಯಜೀವಿ ಸಂಸ್ಥೆಯ ಪ್ರಾಣಿ ವಿಜ್ಞಾನಿ ಬಿಲಾಲ್ ಹಬೀಬ್ ಹೇಳಿದರು. ಹಲವು ವರ್ಷದಿಂದ ಪ್ರಾಣಿ ಜೀವವೈವಿಧ್ಯ ರಕ್ಷಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು, ದೇಶದಲ್ಲೇ ಇದು ಅತಿ ಎತ್ತರದ ಹುಲಿ ಆವಾಸ ಎಂದು ಘೋಷಿಸಿದರು.

2016: ನವದೆಹಲಿ: ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ಎದುರಿಸುತ್ತಿದ್ದ ಜನಪ್ರಿಯ ಬಾಲಿವುಡ್ ಸಿನಿಮಾ ಪಿಪ್ಲಿ ಲೈವ್ ಸಹ ನಿರ್ದೇಶಕ ಮೊಹಮ್ಮದ್ ಫಾರೂಕಿ ಅವರನ್ನು ಅಪರಾಧಿ ಎಂದು ದಿಲ್ಲಿ ಹೈ ಕೋರ್ಟ್ ತೀರ್ಪು ನೀಡಿತು. . 2 ರಂದು ಶಿಕ್ಷೆಯ ಪ್ರಮಾಣ ಮತ್ತು ಅವಧಿ ಪ್ರಕಟಿಸಲಾಗುತ್ತದೆ ಎಂದು ನ್ಯಾಯಪೀಠ ಹೇಳಿತು. ಮಾಹಿತಿ ಸಂಗ್ರಹಕ್ಕೆ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಸುಖದೇವ್ ವಿಹಾರದಲ್ಲಿ ಕಳೆದ ವರ್ಷ ಮಾರ್ಚ್ 28 ರಂದು ಫಾರೂಕಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆಪಾದಿಸಿ ನ್ಯೂರ್ಯಾನ ಕೊಲಂಬಿಯಾ ವಿವಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ದೂರು ನೀಡಿದ್ದರು. ತಮ್ಮಿಂದ ಆದ ಅಚಾತುರ್ಯಕ್ಕೆ ನ್ಯಾಯ ಪೀಠದ ಎದುರು ಫಾರೂಕಿ ಕ್ಷಮೆ ಯಾಚಿಸಿದ್ದರೂ ನೊಂದ ಯುವತಿ ಪ್ರಕರಣ ಹಿಂದೆ ಪಡೆದಿರಲಿಲ್ಲ. ಕಳೆದ ಜೂನ್ 22 ರಿಂದ ಫಾರೂಕಿ ನ್ಯಾಯಾಂಗ ಬಂಧನದಲ್ಲಿದ್ದರು.

 

2016: ಮುಂಬೈ: ಅನುರಾಗ್ ಕಶ್ಯಪ್ ಅವರ ಸರಣಿ ಕೊಲೆಗಳ ಕಥಾ ಹಂದರದಸೈಕೋ ರಾಮನ್’ (ರಾಮನ್ ರಾಘವ್ 2.0) ಚಿತ್ರವು ಕೊರಿಯಾದಲ್ಲಿ ನಡೆದ ಬೈಫಾನ್ (ಬುಚೆಯೋನ್ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ್ ಫೆಸ್ಟಿವಲ್)ಉತ್ಸವದಲ್ಲಿ ಏಷ್ಯಾ ವಿಭಾಗದ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿತು. ದೀಪಕ್ ಸಂಪತ್ ಅವರು ರೋಹಿತ್ ಮಿತ್ತಲ್ ಅವರಆಟೋ ಹೆಡ್ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು. ಕಶ್ಯಪ್ (43) ಅವರುಸೈಕೋ ರಾಮನ್ಪ್ರಶಸ್ತಿ ಪಡೆದ ಕುಶಿಯ ಸುದ್ದಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡರು.  ಸೈಕೋ ರಾಮನ್ಬೈಫಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಏಷ್ಯಾ ಪ್ರಶಸ್ತಿಯನ್ನು ಗಳಿಸಿದೆ ಮತ್ತು ರೋಹಿತ್ ಮಿತ್ತಲ್ ಅವರಆಟೋ ಹೆಡ್ನಲ್ಲಿನ ನಟನೆಗಾಗಿ ದೀಪಕ್ ಸಂಪತ್ ಅವರುಅತ್ಯುತ್ತಮ ನಟಪ್ರಶಸ್ತಿ ಗಳಿಸಿದ್ದಾರೆಎಂದು ಅವರು ಟ್ವೀಟ್ ಮಾಡಿದರು. ನವಾಜುದ್ದೀನ್ ಸಿದ್ದಿಕಿ ಮತ್ತು ವಿಕಿ ಕೌಶಾಲ್ ನಟಿಸಿರುವ ಚಿತ್ರವು 1960ರಲ್ಲಿ ಮುಂಬೈಯಲ್ಲಿ ಸರಣಿ ಕೊಲೆಗಳನ್ನು ನಡೆಸಿದ್ದ ರಾಮನ್ ರಾಘವ್ ಸರಣಿ ಹಂತಕನ ನೈಜ ಜೀವನದಿಂದ ಪ್ರೇರಣೆ ಪಡೆದ ಚಿತ್ರವಾಗಿದ್ದು, ‘ರಾಮನ್ ರಾಘವ್ 2.0’ ಹೆಸರಿನಲ್ಲಿ ಹಿಂದಿ ಚಲನಚಿತ್ರವಾಗಿ ಬಿಡುಗಡೆಯಾಗಿತ್ತು.

2016: ನವದೆಹಲಿ: ಬಿಜೆಪಿ ಮುಖಂಡ ಹಾಗೂ ಮಾಜಿ ಉತ್ತರಾಖಂಡ ಕೃಷಿ ಸಚಿವ ಹರಕ್ ಸಿಂಗ್ ರಾವತ್ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪಕ್ಷಕ್ಕೆ ಭಾರಿ ಮುಜುಗರದ ಪರಿಸ್ಥಿತಿ ಎದುರಾಯಿತು.
2014ರಲ್ಲಿ ಮಹಿಳೆಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ 2013ರಲ್ಲೇ ಮೀರತ್ ಮೂಲದ ಮಹಿಳೆಯೊಬ್ಬಳು ತನಗೆ ಹರಕ್ ಸಿಂಗ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಸಫ್ತರ್ಜಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಉತ್ತರಾಖಂಡ ಕೃಷಿ ಸಚಿವರಾಗಿದ್ದ ಹರಕ್ ಸಿಂಗ್ ಅವರು ಹರೀಶ್ ರಾವತ್ ಸರ್ಕಾರದ ವಿರುದ್ಧ ಸಚಿವರು ದಂಗೆ ಎದ್ದ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
2016: ನವದೆಹಲಿ: ಪಠಾಣಕೋಟ್ ವಾಯುನೆಲೆ ಮೇಲಿನ ದಾಳಿಯಲ್ಲಿ ಪಾಕಿಸ್ತಾನ ಮೂಲದ ಜೈಶ್--ಮೊಹಮದ್ ಉಗ್ರ ಸಂಘಟನೆಯ ಕೈವಾಡದ ಬಗ್ಗೆ 1000 ಪುಟಗಳ ಪೂರಕ ದಾಖಲೆಗಳನ್ನು ಅಮೆರಿಕ ಭಾರತದ ಎನ್ಐಎಗೆ (ರಾಷ್ಟ್ರೀಯ ಭದ್ರತಾ ಪಡೆ) ಒದಗಿಸಿತು. ದಾಳಿ ನಡೆಸಿ ಹತರಾದ ನಾಲ್ವರು ಉಗ್ರರಾದ ಪಂಜಾಬ ಪ್ರಾಂತ್ಯದ ನಾಸಿರ್ ಹುಸೇನ್, ಗುಜ್ರನ್ವಾಲಾ ನಿವಾಸಿ ಅಬು ಬಕರ್, ಸಿಂಧ್ ಪ್ರಾಂತ್ಯದ ಉಮರ್ ಫಾರೂಕ್ ಮತ್ತು ಅಬ್ದುಲ್ ಕೈಯ್ಯಮ್ ಜೆಇಎಮ್ ಕಾಸಿಫ್ ಜಾನ್ ಜತೆ ನಡೆಸಿದ ಸಂದೇಶ ವಿಲೇವಾರಿ ಹಾಗೂ ಮಾತುಕತೆ ವಿವರವನ್ನು ಕಡತದಲ್ಲಿ ಭಾರತಕ್ಕೆ ನೀಡಿತು.  ದಾಳಿಯ ಸಂಚನ್ನು ಪಾಕಿಸ್ತಾನದಲ್ಲೇ ರೂಪಿಸಲಾಗಿತ್ತು ಎಂಬದು  ಇದರಿಂದ ಮತ್ತೊಮ್ಮೆ ದೃಢಪಟ್ಟಿತು. ಸಂಚುಕೋರ ಕಾಸಿಫ್ ಜಾನ್ ಜೆಇಎಮ್ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಕೂಡ ದಾಖಲೆಯಲ್ಲಿ ಲಭ್ಯವಿದೆ ಎಂದು ಅಮೆರಿಕ ಹೇಳಿತು. ಕಾಸಿಫ್ ಫೇಸ್ಬುಕ್ ಅಕೌಂಟ್ನಲ್ಲಿರುವ ನಂಬರಿನಿಂದಲೇ ಉಗ್ರರ ಜತೆ ಮಾತುಕತೆ ನಡೆಸಿ ದಾಳಿಯ ಮಾರ್ಗದರ್ಶನ ನೀಡಿದ್ದ. ಅಲ್ಲದೇ ವಾಟ್ಸ್ ಆಪ್ನಿಂದಲೂ ಸಂದೇಶ ರವಾನಿಸಿದ್ದ ಎಂದು ಕಡತದಲ್ಲಿ ನಮೂದಿಸಲಾಗಿದೆ. ಎನ್ಐಎ ದಾಖಲೆ ಒದಗಿಸುವಂತೆ ಕೋರಿ ಅಮೆರಿಕಕ್ಕೆ ಶಂಕಿತರ ಫೋನ್ ನಂಬರ್ ಹಾಗೂ ಎಲ್ಲ ರೀತಿಯ ವ್ಯವಹಾರ ತಿಳಿಸುವಂತೆ ಕೇಳಿಕೊಂಡಿತ್ತು. ಪಠಾಣಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ್ದ ಉಗ್ರರು 7 ಮಂದಿ ಯೋಧರನ್ನು ಹತ್ಯೆ ಮಾಡಿದ್ದರು. ದಾಳಿ ಹಿಂದೆ ಜೆಇಎಮ್ ಮುಖ್ಯಸ್ಥ ಮಸೂದ್ ಅಜರ್ ಕೈವಾಡವಿದೆ ಎಂದು ಭಾರತ ದೂರಿತ್ತು.

2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ನೌಗಾಂವ ವಿಭಾಗದ ಗಡಿ ನಿಯಂತ್ರಣಾ ರೇಖೆಯಲ್ಲಿ ಜುಲೈ 29-30 ರಾತ್ರಿ ನಡೆದ ನುಸುಳುವಿಕೆ ಯತ್ನವನ್ನು ಸೇನೆ ವಿಫಲಗೊಳಿಸಿತು. ಸಂದರ್ಭದಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದು ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಒಬ್ಬ ಯೋಧ ಗಾಯಗೊಂಡಿದ್ದಾನೆ  ಎಂದು ಸೇನಾ ವಕ್ತಾರರು ತಿಳಿಸಿದರು. ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪಾಕಿಸ್ತಾನದಿಂದ ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುವಿಕೆಗೆ ನಡೆದ ಯತ್ನದ ಸಂದರ್ಭದಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿದ್ದು, ಇಬ್ಬರು ಯೋಧರು ಹುತಾತ್ಮರಾದರು. ಒಬ್ಬ ಯೋಧನಿಗೆ ಗಾಯವಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದರು. ಘಟನಾ ಸ್ಥಳದಲ್ಲಿ ಹತರಾದ ನುಸುಳುಕೋರರಿಂದ ಎರಡು ಎಕೆ ರೈಫಲ್ಗಳು ಮತ್ತು ಒಂದು ಯುಬಿಜಿಎಲ್ ವಶಪಡಿಸಿಕೊಳ್ಳಲಾಯಿತು.  ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ವಕ್ತಾರರು ನುಡಿದರು. ಶಂಕಿತ ಪಾಕಿಸ್ತಾನಿ ಒಬ್ಬನನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಕಟಿಸಿದ ಕೆಲವು ದಿನಗಳ ಬಳಿಕ ಪಾಕ್ ಕಡೆಯಿಂದ ಗಡಿಯಲ್ಲಿ ನುಸುಳುವಿಕೆ ಯತ್ನ ನಡೆಯಿತು.

2015: ರಾಮೇಶ್ವರಂ: 27 ಜುಲೈ 2015ರ ಸೋಮವಾರ ನಿಧನರಾಗಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆಯನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ 30-07-2015ರ ಗುರುವಾರ 11.30 ಸುಮಾರಿಗೆ ಮುಸ್ಲಿಮ್ ವಿಧಿ ವಿಧಾನದಂತೆ ನೆರವೇರಿಸಲಾಯಿತು. ರಾಮೇಶ್ವರಂನ ಪೇಯಿಕರುಂಬು ಎಂಬ ಸ್ಥಳದಲ್ಲಿ 1.5 ಎಕರೆ ಸ್ಥಳವನ್ನು ಗುರುತಿಸಿದ್ದು, ಅಲ್ಲಿ ಕಲಾಂ ಅವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆ ನೆರವೇರಿಸಿದರು. ಮುಸ್ಲಿಂ ವಿಧಿ ವಿಧಾನದಂತೆ ಬೆಳಗ್ಗೆ ಕಲಾಂ ಪಾರ್ಥಿವ ಶರೀರವನ್ನು ಸ್ಥಳೀಯ ಮಸೀದಿಗೆ ಕೊಂಡೊಯ್ದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ನಿಗದಿ ಪಡಿಸಿದ ಸ್ಥಳಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಕಲಾಂ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಭೂಸೇನೆ, ವಾಯು ಪಡೆ, ನೌಕಾ ಪಡೆಯ ಮುಖ್ಯಸ್ಥರು ಗೌರವಾರ್ಪಣೆ ಸಲ್ಲಿಸಿದರು. ನಂತರ ಸೇನಾ ಪಡೆಯ ಯೋಧರು ವಿಶೇಷ ಗೌರವಾರ್ಪಣೆ ಸಲ್ಲಿಸಿದ ನಂತರ ಕುಟುಂಬ ಸದಸ್ಯರು ಕಲಾಂ ಅವರ ಅಂತ್ಯಕ್ರಿಯೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ, ಸಮಾಧಿ ಸ್ಥಳದ ಆಸುಪಾಸಿನ ಕಟ್ಟಡಗಳು, ಮರ-ಗಿಡಗಳ ಮೇಲೆ ಕುಳಿತಿದ್ದ ಸಾವಿರಾರು ಜನರು ‘ಭಾರತ್ ಮಾತಾಕಿ ಜೈ’ ಎಂಬ ಘೊಷಣೆಯನ್ನು ಕೂಡಿ ತಮ್ಮ ಪ್ರೀತಿಯ ‘ಜನತೆಯ ರಾಷ್ಟ್ರಪತಿ’ಗೆ ಅಂತಿಮ ವಿದಾಯ ಹೇಳಿದರು.
2015:  ನವದೆಹಲಿ: ದೇಶದ ನ್ಯಾಯಾಂಗ ಇತಿಹಾಸದಲ್ಲಿ ನಸುಕಿನ ಜಾವ 3ರ ಸುಮಾರಿಗೆ ಸುಪ್ರೀಂಕೋರ್ಟ್ ಕಲಾಪ ಆರಂಭಿಸುವ ಮೂಲಕ ಸುಪ್ರೀಂಕೋರ್ಟ್ 30-07-2015r ಗುರುವಾರ ಇತಿಹಾಸ ಸೃಷ್ಟಿಸಿತು. ಸಾವಿನ ಕುಣಿಕೆಯಿಂದ ಪಾರಾಗುವ ಅಂತಿಮ ಯತ್ನವಾಗಿ ಯಾಕುಬ್ ಮೆಮನ್ ಹಿಂದಿನ ರಾತ್ರಿ ಮಹಾರಾಷ್ಟ್ರ ರಾಜ್ಯಪಾಲರು ಹಾಗೂ ಬಳಿಕ ರಾಷ್ಟ್ರಪತಿಯವರು ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಅಭೂತಪೂರ್ವ ವಿಚಾರಣೆ ಮೂಲಕ ಈ ಇತಿಹಾಸ ಸೃಷ್ಟಿಯಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ರಾತ್ರಿ 10.45ಕ್ಕೆ ಯಾಕುಬ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು. ಇದಾದ ಬೆನ್ನಲ್ಲೇ ಭಾರತದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರ ಮನೆಗೆ ತೆರಳಿದ ವಕೀಲರ ಗುಂಪೊಂದು ಯಾಕೂಬ್ ಪರ ಅರ್ಜಿ ಸಲ್ಲಿಸಿ ಅದರ ತುರ್ತು ವಿಚಾರಣೆಗೆ ಮನವಿ ಮಾಡಿದರು. ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಲು ಅನುಕೂಲವಾಗುವಂತೆ ಯಾಕುಬ್ ಮೆಮನ್​ಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯ ಜಾರಿಗೆ 14 ದಿನಗಳ ತಡೆ ನೀಡುವಂತೆ ವಕೀಲರು ಕೋರಿದರು. ಸಮಾಲೋಚನೆಗಳ ಬಳಿಕ ಮುಖ್ಯನ್ಯಾಯಮೂರ್ತಿಯವರು ಬುಧವಾರ ಯಾಕುಬ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದಲ್ಲಿ ತ್ರಿಸದಸ್ಯ ಪೀಠವನ್ನು ಅರ್ಜಿಯ ವಿಚಾರಣೆಗಾಗಿ ರಚಿಸಿದರು. ಮುಖ್ಯ ನ್ಯಾಯಮೂರ್ತಿಯವರ ಮನೆಯಿಂದ ತುಗ್ಲಕ್ ರಸ್ತೆಯಲ್ಲಿದ್ದ ಹಿರಿಯ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಮನೆಗೂ ತೆರಳಿದ ವಕೀಲರು ಅಂತಿಮವಾಗಿ ಕೆಲವು ಕಿ.ಮೀ. ದೂರದಲ್ಲಿದ್ದ ಸುಪ್ರೀಂಕೋರ್ಟ್​ಗೆ ತೆರಳಿದರು. ರಾತ್ರಿ 1.35ರ ವೇಳೆಗೆ ನ್ಯಾಯಮೂರ್ತಿಗಳಾದ ಮಿಶ್ರಾ, ಪ್ರಫುಲ್ಲ ಚಂದ್ರ ಪಂತ್ ಮತ್ತು ಅಮಿತ್ ರಾಯ್ ಅವರು ಅರ್ಜಿಯ ವಿಚಾರಣೆಗಾಗಿ 2.30ರ ವೇಳೆಗೆ ನ್ಯಾಯಾಲಯಕ್ಕೆ ಬರಲು ಒಪ್ಪಿದರು. ಮೂವರೂ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್​ಗೆ 2.30ಕ್ಕೆ ಆಗಮಿಸಿದರೂ, ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಬರುವುದು ತಡವಾದ್ದರಿಂದ ನಸುಕಿನ 3.20ಕ್ಕೆ ಮರುವಿಮರ್ಶಾ ಅರ್ಜಿಯ ವಿಚಾರಣೆ ಆರಂಭವಾಯಿತು. ನಸುಕಿನ ವೇಳೆಯಲ್ಲಿ ನಡೆದ ಸುಮಾರು 90 ನಿಮಿಷಗಳ ಕಲಾಪಗಳ ಬಳಿಕ 4.50ಕ್ಕೆ ಸುಪ್ರೀಂಕೋರ್ಟ್ ಯಾಕುಬ್ ಅರ್ಜಿಯನ್ನು ಪುನಃ ತಿರಸ್ಕರಿಸಿತು. ಇದರೊಂದಿಗೆ ಯಾಕುಬ್ ಗಲ್ಲು ಜಾರಿ ಅಂತಿಮವಾಗಿ ಖಚಿತಗೊಳ್ಳುವುದರ ಜೊತೆಗೇ ಸುಪ್ರೀಂಕೋರ್ಟ್ ಕಲಾಪದಲ್ಲಿ ಇತಿಹಾಸ ಸೃಷ್ಟಿಯಾಯಿತು.
 
2015: ನಾಗಪುರ:  1993ರ ಮುಂಬೈ ಸರಣಿ ಸ್ಪೋಟದ ಅಪರಾಧಿ, ಉಗ್ರ ಯಾಕುಬ್ ಮೆಮನ್​ಗೆ 30-07-2015 ರ ಗುರುವಾರ ಬೆಳಗ್ಗೆ 7 ಗಂಟೆಗೆ ಸುಮಾರಿಗೆ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಯಿತು.  ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಯಾಕುಬ್ ನಡೆಸಿದ ಕೊನೆಯ ಕ್ಷಣದ ಪ್ರಯತ್ನಗಳೆಲ್ಲವೂ ಫಲ ನೀಡದ ಕಾರಣ ಈದಿನ ಆತನನ್ನು ಗಲ್ಲಿಗೇರಿಸಲಾಯಿತು. ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಯಾಕುಬ್ ಸುಪ್ರೀಂ ಕೋರ್ಟಿಗೆ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನಿವಾಸದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನಂತರ ಸುಪ್ರೀಂ ಕೋರ್ಟ್​ನ ತ್ರಿಸದಸ್ಯ ಪೀಠ ಕೊಠಡಿ ಸಂಖ್ಯ 4 ರಲ್ಲಿ ಸುಮಾರು 90 ನಿಮಿಷ ವಿಚಾರಣೆ ನಡೆಸಲಾಯಿತು. 3.20 ಕ್ಕೆ ವಿಚಾರಣೆ ಪೂರ್ಣಗೊಳಿಸಿದ ಪೀಠ ಗಲ್ಲು ಶಿಕ್ಷೆಯನ್ನು ಕಾಯಂ ಗೊಳಿಸಿತು. ಬುಧವಾರ ಸುಪ್ರೀಂ ಕೋರ್ಟ್​ನ ತ್ರಿಸದಸ್ಯ ಪೀಠ ಯಾಕುಬ್​ನ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ತಿಳಿಸಿತ್ತು. ಉಗ್ರ ಯಾಕುಬ್ ಮೆಮನ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಕಳೆದ ವರ್ಷ ಮೇನಲ್ಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದರು. ಆದರೆ ಬುಧವಾರ ಸುಪ್ರೀಂಕೋರ್ಟ್​ನಲ್ಲಿ ತನಗೆ ಗಲ್ಲು ಶಿಕ್ಷೆ ಆಗಬಹುದು ಎಂಬ ಆತಂಕದಿಂದ ಯಾಕುಬ್ ಎರಡನೇ ಬಾರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದ. ಸುಪ್ರೀಂ ಗಲ್ಲು ಶಿಕ್ಷೆ ಎತ್ತಿಹಿಡಿದರೂ ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವ ವರೆಗೆ ಮರಣದಂಡನೆ ಮುಂದೂಡಬಹುದು ಎಂಬುದೇ ಇದರ ಹಿಂದಿರುವ ಉದ್ದೇಶವಾಗಿತ್ತು. ಆದರೆ ಸುಪ್ರೀಂ ತೀರ್ಪ ಹೊರಬೀಳುತ್ತಿದ್ದಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಕ್ಷಮಾದಾನ ಅರ್ಜಿಯನ್ನು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಿದರು.


2008: ಬಹುವಿವಾದ ಸೃಷ್ಟಿಸಿರುವ ರಾಮ ಸೇತುವೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಪರ್ಯಾಯ ಮಾರ್ಗ ಕಂಡುಹಿಡಿಯುವಂತೆ ಸುಪ್ರೀಂಕೋರ್ಟ್ ನೀಡಿರುವ ಸಲಹೆ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿತು. ಸೇತುಸಮುದ್ರಂ ಕುರಿತು ಸುಪ್ರೀಂ ಕೋರ್ಟಿನಲ್ಲಿ ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸುತ್ತಾ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ಪೀಠಕ್ಕೆ ಈ ವಿಚಾರ ತಿಳಿಸಿದರು. ರಾಮೇಶ್ವರಂ ದ್ವೀಪ ಮತ್ತು ಧನುಷ್ಕೋಡಿ ನಡುವೆ ರಾಮಸೇತುವೆಗೆ ಪರ್ಯಾಯ ಮಾರ್ಗ ಕಂಡುಹಿಡಿಯುವಂತೆ ಸುಪ್ರೀಂಕೋರ್ಟ್ ನೀಡಿದ್ದ ಸಲಹೆ ಮೇರೆಗೆ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಾರಿಮನ್ ತಿಳಿಸಿದರು.

2007: ಭಾರತದಲ್ಲಿ ಆಗಸ್ಟ್ 3ರಂದು ಬಿಡುಗಡೆಯಾಗುವುದಕ್ಕೆ ಒಂದು ದಿನ ಮೊದಲೇ (ಈದಿನ) ಜೋಹಾನ್ಸ್ ಬರ್ಗಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಚೊಚ್ಚಲ ಪ್ರದರ್ಶನ (ಪ್ರೀಮಿಯರ್ ಶೋ) ನಡೆಯಿತು. ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ದಕ್ಷಿಣ ಆಫ್ರಿಕಾದ ಇಡೀ ಸಚಿವ ಸಂಪುಟವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಲನಚಿತ್ರವನ್ನು ವೀಕ್ಷಿಸಿತು. ಮಹಾತ್ಮ ಗಾಂಧಿ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ರಾಷ್ಟ್ರದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಜಾಗತಿಕ ಮಟ್ಟದ ಪ್ರದರ್ಶನದ ಉದ್ಘಾಟನೆ ಮಾಡುತ್ತಿರುವುದು ನನಗೆ ಅತ್ಯಂತ ಖುಷಿಯ ವಿಷಯ. ಭಾರತವು ನಮಗೆ `ಬ್ಯಾರಿಸ್ಟರ್ ಗಾಂಧಿ'ಯನ್ನು ನೀಡಿತು, ಪ್ರತಿಯಾಗಿ ದಕ್ಷಿಣ ಆಫ್ರಿಕವು `ಮಹಾತ್ಮ ಗಾಂಧಿ'ಯನ್ನು ಹಿಂದಿರುಗಿಸಿತು' ಎಂದು ಮಂಡೇಲಾ ತಮ್ಮ ಸಂದೇಶದಲ್ಲಿ ನುಡಿದರು. ಗಾಂಧೀಜಿಯವರ ಹಿರಿಯ ಪುತ್ರ ಹರಿಲಾಲ್ ಜೊತೆಗಿನ ಸಂಕೀರ್ಣ ಸಂಬಂಧದ ಸುತ್ತ ಹೆಣೆಯಲಾಗಿರುವ ಕಥೆಯನ್ನು ಹೊಂದಿರುವ ಈ ಚಿತ್ರ ಜಗತ್ತಿನಾದ್ಯಂತ 2007ರ ಆಗಸ್ಟ್ 3ರಂದು ಬಿಡುಗಡೆಯಾಯಿತು.

2007: ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರು ಈದಿನ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದರು. ಬಹುಮತ ಕಳೆದುಕೊಂಡಿದ್ದ ಅವರು ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ನಾಟಕೀಯ ಬೆಳವಣಿಗೆ ನಡೆಯಿತು. ವಿಧಾನಸಭಾಧ್ಯಕ್ಷ ಪ್ರತಾಪ್ ಸಿಂಗ್ ರಾಣೆ ಅವರು ಎಂಜಿಪಿಯ ಸುದೀನ್ ಮತ್ತು ದೀಪಕ್ ಧವಳೀಕರ್ ಹಾಗೂ ಕಾಂಗ್ರೆಸ್ಸಿಗೆ ರಾಜೀನಾಮೆ ಸಲ್ಲಿಸಿದ ವಿಕ್ಟೋರಿಯಾ ಫರ್ನಾಂಡಿಸ್ ಈ ಮೂವರು ಶಾಸಕರನ್ನು ಮತದಾನದಿಂದ ನಿರ್ಬಂಧಿಸಿ, ತಾವೇ ಕಾಂಗ್ರೆಸ್ ನೇತೃತ್ವ ಸಮ್ಮಿಶ್ರ ಸರ್ಕಾರದ ಪರವಾಗಿ ಮತ ಹಾಕಿದ್ದರಿಂದ ಕಾಮತ್ ಬಹುಮತ ಪಡೆದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ನೇತೃತ್ವದ ವಿರೋಧಿ ಗೋವಾ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸದಸ್ಯರು (ಜಿಡಿಎ), ಸರ್ಕಾರ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿರುವುದಾಗಿ ತೀವ್ರ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.

2007: ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಹಾಗೂ ಕುಟುಂಬದ ಇತರ ಆರು ಸದಸ್ಯರ ವಿರುದ್ಧ ಉತ್ತರಪ್ರದೇಶ ಪೊಲೀಸರು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿದರು. ಮೊರಾದಾಬಾದ್ ಜಿಲ್ಲೆಯ ಚಾಂದೌಸಿ ಪೊಲೀಸ್ ಠಾಣೆಯಲ್ಲಿ ಹಿಂದಿನ ದಿನ ರಾತ್ರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಐಪಿಸಿ 323, 234, 235, 498(ಎ), 506 ಹಾಗೂ 304 ಸೆಕ್ಷನ್ ಅಡಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಅರ್ಜುನ್ ಸಿಂಗ್ ಮೊಮ್ಮಗ ಅಭಿಜಿತ್ ಅವರ ಮಾವ ನೌರಲಿಯ ರಾಜಾ ಮಣ್ವಿಂದರ್ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಈ ಮೊಕದ್ದಮೆ ದಾಖಲಿಸಲಾಯಿತು. ಅಭಿಜಿತ್ ಪತ್ನಿ ಪ್ರಿಯಾಂಕಾ ಸಿಂಗ್ ಆರೋಪದ ಆಧಾರದಲ್ಲಿ, ಅರ್ಜುನ್ ಸಿಂಗ್ ಮತ್ತು ಪತ್ನಿ ಬೀನಾ ಸಿಂಗ್, ಪುತ್ರ ಅಭಿಮನ್ಯು ಸಿಂಗ್, ಮೊಮ್ಮಗ ಅಭಿಜಿತ್ ಸೇರಿದಂತೆ ಕುಟುಂಬದ ಒಟ್ಟು ಏಳು ಜನರ ವಿರುದ್ಧ ಅಪರಾಧ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಮೊರಾದಾಬಾದ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರು ಪೊಲೀಸರಿಗೆ ಆದೇಶಿಸಿದ್ದರು.

2007: ಸಿಕ್ಕಿಮಿನ ಪ್ರಥಮ ಮುಖ್ಯಮಂತ್ರಿ ಹಾಗೂ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪಕರಾದ ಹೆಂಡುಪ್ ದೋರ್ಜಿ ಖಂಗಸರ್ಪಾ ಅವರು ಈದಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ವಿಧುರರಾಗಿದ್ದ ಅವರಿಗೆ 103 ವರ್ಷ ವಯಸಾಗಿತ್ತು. ಕಾಜಿ ಸಾಬ್ ಎಂದೇ ಖ್ಯಾತರಾಗಿದ್ದ ಅವರು ಉತ್ತರ ಬಂಗಾಳದ ಕಲಿಪಾಂಗಿನಲ್ಲಿ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಭಾರತದ ಒಕ್ಕೂಟದಲ್ಲಿ ಸಿಕ್ಕಿಮ್ ರಾಜ್ಯದ ಸೇರ್ಪಡೆಗೆ ಪ್ರಮುಖ ಪಾತ್ರ ವಹಿಸಿದ್ದ ಅವರಿಗೆ 2002ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸಿಕ್ಕಿಮ್ ಸರ್ಕಾರವು 2004ರಲ್ಲಿ ಅವರಿಗೆ ಸಿಕ್ಕಿಮ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

2007: ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪ ಹೊರಿಸಿ ಭಾರತೀಯ ಮೂಲದ ವೈದ್ಯ ಡಾ. ಮೊಹಮ್ಮದ್ ಹನೀಫನನ್ನು ನಾಲ್ಕು ವಾರಗಳ ಕಾಲ ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಲು ಆಸ್ಟ್ರೇಲಿಯಾ ಪ್ರಧಾನಿ ಜಾನ್ ಹೋ ವರ್ಡ್ ನಿರಾಕರಿಸಿದರು.

2007: ಸ್ವೀಡನ್ನಿನ ಖ್ಯಾತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಇಂಗ್ಮಾರ್ ಬರ್ಗ್ ಮನ್ (89) ಅವರು ಈದಿನ ಸ್ಟಾಕ್ ಹೋಮಿನಲ್ಲಿ ನಿಧನರಾದರು. ಬರ್ಗ್ ಮನ್ ಅವರು ಅರ್ಧ ಶತಮಾನದಲ್ಲಿ 50 ಚಿತ್ರಗಳು ಹಾಗೂ 125 ನಾಟಕಗಳನ್ನು ನಿರ್ಮಿಸಿ ಸ್ಕಾಂಡಿನೇವಿಯಾದ ಸಾಂಸ್ಕೃತಿಕ ಲೋಕದಲ್ಲಿ ಖ್ಯಾತರಾಗಿದ್ದರು. ಅವರ ಖಾಸಗಿ ಬದುಕು ಸಹ ವರ್ಣರಂಜಿತವಾಗಿತ್ತು. ಸುಂದರ ಹಾಗೂ ಬುದ್ಧಿವಂತರಾಗಿದ್ದ ಐವರು ಮಹಿಳೆಯರನ್ನು ವಿವಾಹವಾಗಿದ್ದ ಅವರು ಅನೇಕ ನಟಿಯರ ಜತೆ ಸಂಬಂಧವಿಟ್ಟುಕೊಂಡು ವಿವಾದಕ್ಕೂ ಒಳಗಾಗಿದ್ದರು. ವೈಲ್ಡ್ ಸ್ಟ್ರೀವ್ ಬ್ಯಾರಿಸ್, ಸೀನ್ಸ್ ಫ್ರಾಮ್ ಮ್ಯಾರೇಜ್ ನಂತಹ ಚಿತ್ರಗಳು ಅವರಿಗೆ ಜಗತ್ತಿನಾದ್ಯಂತ ಖ್ಯಾತಿ ತಂದುಕೊಟ್ಟಿದ್ದವು.

2007: ಪಾಕಿಸ್ಥಾನದ ಈಶಾನ್ಯ ಪ್ರಾಂತ್ಯದಲ್ಲಿನ ಮಸೀದಿಯೊಂದನ್ನು ನೂರಾರು ಉಗ್ರರು ತಮ್ಮ ವಶಕ್ಕೆ ತೆಗೆದುಕೊಂಡು, ಅದಕ್ಕೆ `ಲಾಲ್ ಮಸೀದಿ' ಎಂದು ಹೆಸರಿಸಿ, ಈ ತಿಂಗಳು ಇಸ್ಲಾಮಾಬಾದಿನಲ್ಲಿ ಹತನಾದ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿಯ `ಆದರ್ಶ'ಗಳನ್ನು ಪಾಲಿಸುವುದಾಗಿ ಘೋಷಿಸಿದರು.ಇಸ್ಲಾಮಾಬಾದಿನ ಲಾಲ್ ಮಸೀದಿಯ ಪಕ್ಕಕ್ಕೆ ಇದ್ದ ಬಾಲಕಿಯರ ಮದರಸಾ `ಜಾಮಿಯಾ ಹಫ್ಸಾ' ಮಾದರಿಯಲ್ಲೇ ಬಾಲಕಿಯರಿಗೆ ತರಬೇತಿ ಶಾಲೆಯನ್ನು ಇಲ್ಲಿಯೂ ಆರಂಭಿಸುವುದಾಗಿ ಉಗ್ರರು ಸಾರಿದರು. ಲಾಲ್ ಮಸೀದಿಯನ್ನು ತೆರವುಗೊಳಿಸಿದ ನಂತರ `ಜಾಮಿಯಾ ಹಫ್ಸಾ'ವನ್ನು ಪಾಕ್ ಸೈನಿಕರು ಧ್ವಂಸಗೊಳಿಸಿದ್ದರು.

2007: ಮಾಜಿ ಸಚಿವ ಮೊಹಮ್ಮದ್ ಮೊಯಿನುದ್ದೀನ್ ಅವರು ಜುಲೈ 29ರ ಈದಿನ ಬೆಂಗಳೂರಿನಲ್ಲಿ ನಿಧನರಾದರು. 1985ರಲ್ಲಿ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು, ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ವಸತಿ ಖಾತೆಯ ರಾಜ್ಯ ಸಚಿವರಾಗಿದ್ದರು.ಭದ್ರಾವತಿಯಲ್ಲಿ ಜನಿಸಿದ್ದ ಇವರು ಬಿ.ಎಸ್ಸಿ ಪದವೀಧರರಾಗಿದ್ದರು. ಕರ್ನಾಟಕ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಗಂಜಾಂನಲ್ಲಿರುವ ಟಿಪ್ಪು ಸುಲ್ತಾನ್ ವಕ್ಫ್ಸ್ ಎಸ್ಟೇಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶ್ರೀರಂಗಪಟ್ಟಣದ ಟಿಪ್ತು ಸುಲ್ತಾನ್ ಸಂಶೋಧನಾ ಸಂಸ್ಥೆ ಹಾಗೂ ವಸ್ತು ಸಂಗ್ರಹಾಲಯದ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

2007: ಸ್ಯಾನ್ ಫೋರ್ಡಿನಲ್ಲಿ ಮುಕ್ತಾಯವಾದ ಆರು ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ವೆಸ್ಟ್ ಬ್ಯಾಂಕ್ ಕ್ಲ್ಯಾಸಿಕ್ ಡಬ್ಲ್ಯುಟಿಎ ಟೂರ್ನಿಯಲ್ಲಿ ಶ್ರೇಯಾಂಕಿತ ಆಟಗಾರ್ತಿಯರನ್ನು ಮಣ್ಣುಮುಕ್ಕಿಸಿ ಫೈನಲ್ ಪ್ರವೇಶಿಸಿದ್ದ ಸಾನಿಯಾ ಮಿರ್ಜಾ ಫೈನಲಿನಲ್ಲಿ ಮುಗ್ಗರಿಸಿದರು. ಸಾನಿಯಾ ಮಿರ್ಜಾ ಅವರು 3-6, 2-6 ನೇರ ಸೆಟ್ ಗಳಲ್ಲಿ ರಷ್ಯಾದ ಅನ್ನಾ ಚಕ್ವೆಟಾಜ್ ಅವರ ಕೈಯಲ್ಲಿ ಪರಾಭವಗೊಂಡರು.


2007: ಉದ್ಯಮಿ ಡಾ.ವಿಜಯ್ ಮಲ್ಯ ಅವರು ರಾಜಾಜಿನಗರದ ಸೆಲೆಕ್ಟ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕರ್ನಾಟಕ ರಾಜ್ಯ ಕ್ರಿಕೆಟ್ ಕಡೆಗೆ ಹೆಜ್ಜೆಯಿಟ್ಟರು.

2006: ಮೂವತ್ತೈದು ವರ್ಷಗಳ ಅವಧಿಯಲ್ಲಿ 8000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ 2400 ಮೆ.ವಾ. ಸಾಮರ್ಥ್ಯದ ಅತಿ ವಿವಾದಿತ ತೆಹ್ರಿ ಜಲ ವಿದ್ಯುತ್ ಸ್ಥಾವರವು ಕಡೆಗೂ ಈದಿನ ಕಾರ್ಯಾರಂಭ ಮಾಡಿತು. ಉತ್ತರದ ಗ್ರಿಡ್ ಜಾಲಕ್ಕೆ ಬೆಸೆದಿರುವ ಸ್ಥಾವರದ 250 ಮೆಗಾವ್ಯಾಟ್ ಸಾಮರ್ಥ್ಯದ ಮೊದಲ ಘಟಕದ ಕಾರ್ಯಾರಂಭಕ್ಕೆ ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಚಾಲನೆ ನೀಡಿದರು. 1657 ಕೋಟಿ ರೂಪಾಯಿ ವೆಚ್ಚದ ತೆಹ್ರಿ ಪಂಪ್ ಸ್ಟೋರೇಜ್ ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಏಷ್ಯದಲ್ಲೇ ಅತ್ಯಂತ ಎತ್ತರದ `ರಾಕ್ ಫಿಲ್ ಡ್ಯಾಮ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಅಣೆಕಟ್ಟು ವಿದ್ಯುತ್ ಯೋಜನೆಯಿಂದ ಉತ್ತರ ಭಾರತದ 9 ರಾಜ್ಯಗಳ ವಿದ್ಯುತ್ ಪರಿಸ್ಥಿತಿ ಸುಧಾರಿಸುವುದು ಎಂದು ನಿರೀಕ್ಷಿಸಲಾಯಿತು. 35 ವರ್ಷಗಳ ಹಿಂದೆ ಯೋಜನೆಗೆ ಅಡಿಗಲ್ಲು ಹಾಕಿದಾಗ ಅದರ ವೆಚ್ಚ 200 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು.

2006: ಬಹರೇನಿನಲ್ಲಿ ಮೂರು ಮಹಡಿಯ ಕಟ್ಟಡವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ 16 ಭಾರತೀಯ ಕಾರ್ಮಿಕರು ಮೃತರಾದರು.

1995: ಜಾರ್ಖಂಡ್ ಸ್ವಾಯತ್ತ ಜಿಲ್ಲಾ ಮಂಡಳಿ ರಚನೆಗೆ ಅಧಿಸೂಚನೆ ಪ್ರಕಟಗೊಂಡಿತು.

1960: ಕರ್ನಾಟಕದ ಸಿಂಹ, ಶ್ರೇಷ್ಠ ಸೇನಾನಿ ಗಂಗಾಧರ ಬಾಲಕೃಷ್ಣ ದೇಶಪಾಂಡೆ ನಿಧನ.

1951: ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಜನನ.

1947: ಕಾಶ್ಮೀರದ ಭಾಗವಾದ ನೈಋತ್ಯ ಗಡಿ ಪ್ರದೇಶವನ್ನು (ಎನ್ ಡಬ್ಲ್ಯೂ ಎಫ್ ಸಿ) ಪಾಕಿಸ್ಥಾನ ಕೈವಶಪಡಿಸಿಕೊಂಡಿತು. ನವೆಂಬರಿನಲ್ಲಿ ಇಲ್ಲಿ ಪಾಕಿಸ್ಥಾನದ ಧ್ವಜಾರೋಹಣ ಮಾಡಲಾಯಿತು.

1928: ಜಾರ್ಜ್ ಈಸ್ಟ್ ಮನ್ ಅವರಿಂದ ಮೊದಲ ಬಣ್ಣದ ಸಿನಿಮಾ ಪ್ರಾತ್ಯಕ್ಷಿಕೆ.

1923: ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ ಖ್ಯಾತ ವಿದ್ವಾಂಸ ಡಾ. ಕೆ. ಕೃಷ್ಣಮೂರ್ತಿ (30-7-
1923ರಿಂದ 18-7-1997) ಅವರು ಎನ್. ವೆಂಕಟಸುಬ್ಬಯ್ಯ- ಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಕೇರಳಾಪುರದಲ್ಲಿ ಜನಿಸಿದರು. ಅವರು ರಚಿಸಿದ ಒಟ್ಟು ಗ್ರಂಥಗಳು 54.

1913: ದ್ವಿತೀಯ ಬಾಲ್ಕನ್ ಯುದ್ಧ ಸಮಾಪ್ತಿಗೊಂಡಿತು.

1883: ಕೈಗಾರಿಕೋದ್ಯಮಿ ಬದ್ರಿದಾಸ್ ಜನನ.

1622: ಶ್ರೇಷ್ಠ ಕವಿ, ಸಂತ ತುಳಸೀದಾಸರ ಪುಣ್ಯದಿನ.

No comments:

Post a Comment