ಮಂಗಳ ಗ್ರಹದಲ್ಲಿ ಭೂಗತ ‘ಉಪ್ಪು ಸರೋವರ’
ನವದೆಹಲಿ: ಮಂಗಳ ಗ್ರಹದಲ್ಲಿ ನೀರಿಗಾಗಿ ಹುಡುಕಾಡುತ್ತಿದ್ದ ವಿಜ್ಞಾನಿಗಳಿಗೆ ಮೊದಲ ಬಾರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಕೆಂಪು ಗ್ರಹದ ಅಂಗಳದಲ್ಲಿ ಹುದುಗಿರುವ ಭೂಗತ ಉಪ್ಪು ನೀರಿನ ಸರೋವರವನ್ನು ಇಟಲಿಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮಂಗಳ ಗ್ರಹದಲ್ಲಿ ಜೀವಿಗಳಿದ್ದಿರಬಹುದಾದ ಸಾಧ್ಯತೆಗಳನ್ನು ಇದು ಮತ್ತಷ್ಟು ಹೆಚ್ಚಿಸಿದೆ.
ಮಂಗಳ ಗ್ರಹದ ಸುತ್ತ ಸುತ್ತುತ್ತಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮಾರ್ಸ್ ಎಕ್ಸ್ಪ್ರೆಸ್ ಉಪಗ್ರಹದಲ್ಲಿರುವ ‘ಮಾರ್ಸಿಸ್’ ರಾಡಾರ್ ಈ ಸರೋವರವನ್ನು ಪತ್ತೆ ಹಚ್ಚಿದೆ. ಮಂಗಳ ಗ್ರಹದ ದಕ್ಷಿಣ ದ್ರುವದಲ್ಲಿ ಈ ಸರೋವರವಿದ್ದು, ‘ಇದು ತುಂಬಾ ದೊಡ್ಡ ಸರೋವರವೇನಲ್ಲ’ ಎನ್ನುತ್ತಾರೆ ಈ ಅಧ್ಯಯನವನ್ನು ಮುನ್ನಡೆಸಿದ ಇಟಲಿಯ ಖಗೋಳ ವಿಜ್ಞಾನಿ ರಾಬರ್ಟೋ ಒರಸಾಯ್. ಸರೋವರ ಕನಿಷ್ಟ ೧ ಮೀಟರ್ ಆಳವಿದೆ ಮತ್ತು ಸುಮಾರು೨೦ ಕಿಲೋಮೀಟರ್ ವ್ಯಾಪ್ತಿಯಲ್ಲಿದೆ ಎಂದು ಅಂದಾಜಿಸಲಾಗಿದೆ.
“ಮಂಗಳ ಗ್ರಹದಲ್ಲಿ ಸರೋವರ ಭೂಗತವಾಗಿರುವುದು ದೊಡ್ಡ ಅಚ್ಚರಿಯೇನಲ್ಲ. ದ್ರವ ರೂಪದಲ್ಲಿ ನೀರು ಮಂಗಳ ಗ್ರಹದ ಮೇಲ್ಮೈಯಲ್ಲಿ ಇರಲು ಸಾಧ್ಯವಿಲ್ಲ. ಕಾರಣ ಮಂಗಳ ಗ್ರಹದ ವಾತಾವರಣದಲ್ಲಿರುವ ಒತ್ತಡ ತೀರಾ ಕಡಿಮೆಯಾಗಿದೆ,” ಎನ್ನುತ್ತಾರೆ ಡಬ್ಲಿನ್ ಇನ್ಸ್ಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ನ ಲಿಯೋ ಎನ್ರೈಟ್.
ಸರೋವರ ಮೇಲ್ಮೈನಿಂದ ೧.೬ ಕಿಲೋಮೀಟರ್ ಆಳದಲ್ಲಿದೆ. ಇಲ್ಲಿನ ವಾತಾವರಣ -೧೦ ರಿಂದ -೩೦ ಡಿಗ್ರಿ ಸೆಲ್ಸಿಯಸ್ನಷ್ಟು ಶೀತವಾಗಿರುವುದರಿಂದ ನೀರು ತೀರಾ ಉಪ್ಪಾಗಿರಬಹುದು ಎಂಬುದು ಎನ್ರೈಟ್ ಅಂದಾಜು. ನೀರಿನ ಅನ್ವೇಷಣೆ ಅಂಗಾರಕನ ಅಂಗಳದಲ್ಲಿ ಜೀವಿಗಳುಇದ್ದಿರಬಹುದಾದ ಸಾಧ್ಯತೆಗಳಿಗೆ ಸಾಕ್ಷಿ ಎನ್ನುತ್ತಾರೆ ಅವರು.
‘ಮಂಗಳ ಗ್ರಹದಲ್ಲಿ ಜೀವಿಗಳು ಇದ್ದಿರಬಹುದು’ ಎಂದು ವಿಜ್ಞಾನಿಗಳು ತುಂಬಾ ಹಿಂದೆಯೇ ಅಂದಾಜಿಸಿದ್ದರು. ಮತ್ತು ಕಳೆದೊಂದು ವರ್ಷದಲ್ಲಿ ಹಲವಾರು ‘ಮಂಗಳಯಾನ’ಗಳು ಈ ನಿಟ್ಟಿನಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದವು. ಇವುಗಳಲ್ಲಿ ಗ್ರಹದ ಮೇಲ್ಮೈ ಮೇಲೆ ಉಪ್ಪು ನೀರು ಹರಿದಿರುವ ಲಕ್ಷಣಗಳು ಗೋಚರಿಸಿತ್ತು. ಇದೀಗ ಜೀವಿಗಳು ಇದ್ದಿರಬಹುದಾದ ಸಾಧ್ಯತೆಗಳಿಗೆ ಸಾಕ್ಷಿಯಾಗಿ ದ್ರವ ರೂಪದ ನೀರು ಪತ್ತೆಯಾಗಿದೆ.
“ಇದು ಮಂಗಳ ಗ್ರಹದಲ್ಲಿ ಜೀವಿಗಳ ಹುಡುಕಾಟ ಮತ್ತು ನೀರಿನ ಹುಡುಕಾಟದಲ್ಲಾದ ದೊಡ್ಡ ಮಟ್ಟದ ಪ್ರಗತಿ. ಇದಕ್ಕಾಗಿ ನಾವೆಲ್ಲಾ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು. ಆದರೆ, ಇನ್ನೂ ಸ್ವಲ್ಪ ತಾಳ್ಮೆಯಿಂದ ಕಾಯಿರಿ. ಕಾರಣ ಈ ಹಿಂದೆ ತಪ್ಪು ಎಚ್ಚರಿಕೆಗಳನ್ನು ನೀಡಿದ ಉದಾಹರಣೆಗಳೂ ನಮ್ಮ ಮುಂದಿವೆ,” ಎಂದು ಮುನ್ನೆಚ್ಚರಿಕೆ ನೀಡುತ್ತಾರೆ ಎನ್ರೈಟ್.
ನೆಲದಾಳದಲ್ಲಿರುವ ನೀರಿನ “ಕೆಲವು ಸ್ಯಾಂಪಲ್ಗಳನ್ನು ತಂದಾಗ ನೀವು ಇದರ ಬಗ್ಗೆ ಖಚಿತವಾಗಿ ಹೇಳಬಹುದು. ಆದರೆ ನೀರು ದಕ್ಷಿಣ ದ್ರುವದಲ್ಲಿ ೧.೫ ಕಿಲೋಮೀಟರ್ ಆಳದಲ್ಲಿದೆ. ಈ ಜಾಗ ತಲುಪಲು ನೀವು ಮೇಲ್ಮೈಯನ್ನು ದೊಡ್ಡ ಪ್ರಮಾಣಕ್ಕೆ ಕೊರೆಯಬೇಕಾಗುತ್ತದೆ. ಸಮಸ್ಯೆ ಇರುವುದೇ ಇಲ್ಲಿ,” ಎಂದು ಎನ್ರೈಟ್ ವಿವರಿಸುತ್ತಾರೆ. ಮಂಗಳ ಗ್ರಹದ ದ್ರುವಗಳಲ್ಲಿ ಡ್ರೈ ಐಸ್ (ಘನ ರೂಪದ ಕಾರ್ಬನ್ ಡೈ ಆಕ್ಸೈಡ್) ಇದ್ದು ಇವುಗಳನ್ನು ಕೊರೆದು ತಳವನ್ನುತಲುಪಬೇಕಾದ ಸವಾಲು ಈಗ ವಿಜ್ಞಾನಿಗಳ ಮುಂದೆ ಇದೆ.
ಕಲಾವಿದನ ಕಲ್ಪನೆ:
ಮಂಗಳ ಗ್ರಹದಿಂದ ಬಂದಿರುವ ಡಾಟಾದಲ್ಲಿ ಕಾಣಿಸುತ್ತಿರುವ ಹೆಚ್ಚಿನ ಪ್ರತಿಫಲನ (ಕಡು ನೀಲಿ ಬಣ್ಣ). ಇದನ್ನೇ ನೀರು ಎಂದುಕೊಳ್ಳಲಾಗಿದೆ.ಕಲಾವಿದನ ಕಲ್ಪನೆ: ಮಂಗಳ ಗ್ರಹದಿಂದ ಬಂದಿರುವ ಡಾಟಾದಲ್ಲಿ ಕಾಣಿಸುತ್ತಿರುವ ಹೆಚ್ಚಿನ ಪ್ರತಿಫಲನ (ಕಡು ನೀಲಿ ಬಣ್ಣ). ಇದನ್ನೇ ನೀರು ಎಂದುಕೊಳ್ಳಲಾಗಿದೆ.
ಭವಿಷ್ಯದ ಯೋಜನೆಗಳು
ಸದ್ಯಕ್ಕೆ ಮಂಗಳ ಗ್ರಹದಲ್ಲಿ ನೀರಿನ ಖಚಿತ ಅನ್ವೇಷಣೆ ಮತ್ತು ಜೀವಿಗಳ ಕುರುಹುಗಳ ಹುಡಕಾಟಕ್ಕೆ ಉತ್ಸುಕರಾಗಿರುವ ವಿಜ್ಞಾನಿಗಳು ಭವಿಷ್ಯದಲ್ಲಿ ಹಲವು ಯೋಜನೆಗಳನ್ನು ತಮ್ಮ ಮುಂದಿಟ್ಟುಕೊಂಡಿದ್ದಾರೆ. ಸದ್ಯದಲ್ಲಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮತ್ತು ‘ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ)’ ಗಳು ಕೆಂಪು ಗ್ರಹದ ಮೇಲೆ ತಮ್ಮ ರೋವರ್ಗಳನ್ನು ಇಳಿಸಲಿವೆ. ೨೦೨೦ರ ಜುಲೈ ವೇಳೆಗೆ ಅಮೆರಿಕಾದ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದ್ದು, ಜೀವಿಗಳ ಇರುವಿಕೆಗೆ ಹುಡುಕಾಟ ನಡೆಸಲಿದೆ. ಅಲ್ಲಿನ ವಾತಾವರಣ, ಭೂಗರ್ಭದ ಗುಣ ಲಕ್ಷಣಗಳ ಬಗ್ಗೆ ಇದು ಅಧ್ಯಯನ ಕೈಗೊಳ್ಳಲಿದ್ದು, ಮಂಗಳ ಗ್ರಹ ಮನುಷ್ಯ ಬದುಕಲು ಎಷ್ಟರಮಟ್ಟಿಗೆ ಯೋಗ್ಯ ಎಂಬುದನ್ನು ಒರೆಗೆ ಹಚ್ಚಲಿದೆ.
ಇನ್ನು ರಷ್ಯ ಮತ್ತು ಯುರೋಪಿಯನ್ ಯೂನಿಯನ್ ಜಂಟಿಯಾಗಿ ಕಳುಹಿಸುತ್ತಿರುಯವ ‘ಎಕ್ಸೋಮಾರ್ಸ್’ ೨೦೨೧ ರಲ್ಲಿ ಮಂಗಳ ಗ್ರಹ ತಲುಪಲಿದ್ದು ಅದೂ ಕೂಡ ನಾಸಾದ ಹಾದಿಯಲ್ಲಿ ಹುಟುಕಾಟ ಮುಂದುವರೆಸಲಿದೆ. ಈ ಎಲ್ಲಾ ಯೋಜನೆಗಳ ಆಚೆಗೆ ಇಲ್ಲಿಯವರೆಗೆ ಮಂಗಳ ಗ್ರಹದಲ್ಲಿ ಶುದ್ಧ ನೀರು ಪತ್ತೆಯಾಗಿಲ್ಲ ಎಂಬುದು ಗಮನಾರ್ಹ. ಇದಲ್ಲದೆ ಹೀಗೆ ನೆಲದ ಆಳಕ್ಕೆ ಹೋಗಿ ಸರೋವರದ ತಳ ತಲುಪಲೂ ಸದ್ಯಕ್ಕೆ ತಂತ್ರಜ್ಞಾನಗಳು ಲಭ್ಯವಿಲ್ಲ. ಎಕ್ಸೊಮಾರ್ಸ್ನಂಥ ರೋವರ್ಗಳು ಕೇವಲ ೨ ಮೀಟರ್ವರೆಗೆ ಮಾತ್ರ ಭೂಮಿಯನ್ನು ಕೊರೆಯುವ ಸಾಮರ್ಥ್ಯ ಹೊಂದಿವೆ. “ಮಂಗಳ ಗ್ರಹದ ಮೇಲ್ಮೈಯನ್ನು ಕೊರೆದು ೧.೬ ಕಿಲೋಮೀಟರ್ ಆಳದಲ್ಲಿರುವ ಸರೋವರ ತಲುಪಲು ಕನಿಷ್ಟ ೨೫ ವರ್ಷ ಬೇಕಾಗಬಹುದು. ನಂತರವಷ್ಟೆ ಇದನ್ನು ಅಧ್ಯಯನಕ್ಕೆ ಒಳಪಡಿಸಬಹುದು,” ಎನ್ನುತ್ತಾರೆ ಎನ್ರೈಟ್.
ಇನ್ನು ರಷ್ಯ ಮತ್ತು ಯುರೋಪಿಯನ್ ಯೂನಿಯನ್ ಜಂಟಿಯಾಗಿ ಕಳುಹಿಸುತ್ತಿರುಯವ ‘ಎಕ್ಸೋಮಾರ್ಸ್’ ೨೦೨೧ ರಲ್ಲಿ ಮಂಗಳ ಗ್ರಹ ತಲುಪಲಿದ್ದು ಅದೂ ಕೂಡ ನಾಸಾದ ಹಾದಿಯಲ್ಲಿ ಹುಟುಕಾಟ ಮುಂದುವರೆಸಲಿದೆ. ಈ ಎಲ್ಲಾ ಯೋಜನೆಗಳ ಆಚೆಗೆ ಇಲ್ಲಿಯವರೆಗೆ ಮಂಗಳ ಗ್ರಹದಲ್ಲಿ ಶುದ್ಧ ನೀರು ಪತ್ತೆಯಾಗಿಲ್ಲ ಎಂಬುದು ಗಮನಾರ್ಹ. ಇದಲ್ಲದೆ ಹೀಗೆ ನೆಲದ ಆಳಕ್ಕೆ ಹೋಗಿ ಸರೋವರದ ತಳ ತಲುಪಲೂ ಸದ್ಯಕ್ಕೆ ತಂತ್ರಜ್ಞಾನಗಳು ಲಭ್ಯವಿಲ್ಲ. ಎಕ್ಸೊಮಾರ್ಸ್ನಂಥ ರೋವರ್ಗಳು ಕೇವಲ ೨ ಮೀಟರ್ವರೆಗೆ ಮಾತ್ರ ಭೂಮಿಯನ್ನು ಕೊರೆಯುವ ಸಾಮರ್ಥ್ಯ ಹೊಂದಿವೆ. “ಮಂಗಳ ಗ್ರಹದ ಮೇಲ್ಮೈಯನ್ನು ಕೊರೆದು ೧.೬ ಕಿಲೋಮೀಟರ್ ಆಳದಲ್ಲಿರುವ ಸರೋವರ ತಲುಪಲು ಕನಿಷ್ಟ ೨೫ ವರ್ಷ ಬೇಕಾಗಬಹುದು. ನಂತರವಷ್ಟೆ ಇದನ್ನು ಅಧ್ಯಯನಕ್ಕೆ ಒಳಪಡಿಸಬಹುದು,” ಎನ್ನುತ್ತಾರೆ ಎನ್ರೈಟ್.
No comments:
Post a Comment