Wednesday, July 4, 2018

ಇಂದಿನ ಇತಿಹಾಸ History Today ಜುಲೈ 04

ಇಂದಿನ ಇತಿಹಾಸ History Today ಜುಲೈ 04 

2018: ನವದೆಹಲಿ:  ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರವಾಗಿ ವರ್ತಿಸುವಂತಿಲ್ಲ; ಆಮ್ ಆದ್ಮಿ ಪಕ್ಷದ ಚುನಾಯಿತ ಸರ್ಕಾರದ ನೀತಿ ನಿರ್ಧಾರಗಳಿಗೆ ಅಡ್ಡಿಪಡಿಸುವಂತಿಲ್ಲ ಮತ್ತು ರಾಜ್ಯ ಸರ್ಕಾರದ ನೆರವು ಮತ್ತು ಸಲಹೆಗಳಿಗೆ ಬದ್ಧರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದ ಅಧಿಕಾರದ ಹಗ್ಗಜಗ್ಗಾಟಕ್ಕೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚಸದಸ್ಯ ಸಂವಿಧಾನ ಪೀಠವು ತನ್ನ ತೀರ್ಪಿನ ಮೂಲಕ ಸ್ಪಷ್ಟ ಅಂತ್ಯ ಹಾಡಿತು. ಈ ತೀರ್ಪು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರದ ಪಾಲಿಗೆ ನಿರಾಳತೆ ಮೂಡಿಸಿತು.  ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ; ಅಲ್ಲದೆ ಸಂವಿಧಾನವು ಚುನಾಯಿತ ಸರ್ಕಾರಕ್ಕೆ ಮಹತ್ವ ನೀಡಿರುವಾಗ ಅದರ ನಿರ್ಧಾರಗಳಿಗೆ ಲೆಫ್ಟಿನೆಂಟ್ ಗವರ್ನರ್ ಅಡ್ಡಿಪಡಿಸುವಂತಿಲ್ಲ ಎಂದು ಪೀಠವು ಸ್ಪಷ್ಟ ಮಾತುಗಳಲ್ಲಿ ಹೇಳಿತು.  ‘ಇದು ದೆಹಲಿಯ ಜನರಿಗೆ ದೊಡ್ಡ ವಿಜಯ.. ಪ್ರಜಾಪ್ರಭುತ್ವಕ್ಕೆ ದೊಡ್ಡ ವಿಜಯ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದರು.  ಹೀಗಿದ್ದರೂ, ದೆಹಲಿಯದ್ದು ವಿಶಿಷ್ಟ ಪ್ರಕರಣವಾಗಿದ್ದು, ಚುನಾಯಿತ ಸರ್ಕಾರದ ನಿರ್ಧಾರಗಳು ರಾಷ್ಟ್ರೀಯ ಹಿತಾಸಕ್ತಿಗೆ ಅಡ್ಡಿಯಾಗುವಂತಿದ್ದರೆ ಕೇಂದ್ರ ಸರ್ಕಾರ ತಡೆಯೊಡ್ಡಬಹುದು ಎಂದೂ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.  ‘ಮುಖ್ಯಮಂತ್ರಿಯಾಗಲೀ, ಲೆಫ್ಟಿನೆಂಟ್ ಗವರ್ನರ್ ಆಗಲಿ, ಯಾರೊಬ್ಬರೂ ಸಂವಿಧಾನಕ್ಕಿಂತ ಮೇಲಿನವರಲ್ಲ. ಪರಸ್ಪರ ಸಾಮರಸ್ಯದೊಂದಿಗೆ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.  ದೆಹಲಿಯ ಆಡಳಿತದಲ್ಲಿ ಯಾರಿಗೆ ಹೆಚ್ಚು ಅಧಿಕಾರವಿದೆ ಎಂಬ ಮೂಲ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರದ ಮಧ್ಯೆ ಕಾನೂನು ಸಮರ ನಡೆದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿತು.  ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ವಿಚಾರ ಕೇಂದ್ರ ಸರ್ಕಾರದ ವಿಶೇಷ ಅಧಿಕಾರವಾಗಿದ್ದು, ಅದನ್ನು ಹೊರತುಪಡಿಸಿ ಕಾನೂನು ರೂಪಿಸುವ ಮತ್ತು ಆಡಳಿತ ನಡೆಸುವ ಅಧಿಕಾರ ದೆಹಲಿ ಸರ್ಕಾರಕ್ಕೆ ಸೇರಿದೆ. ಅದರ ನಿರ್ಧಾರಗಳಿಗೆ ಲೆಫ್ಟಿನೆಂಟ್ ಗವರ್ನರ್ ಯಾಂತ್ರಿಕವಾಗಿ ತಡೆಯೊಡ್ಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.   ಆಮ್ ಆದ್ಮಿ ಪಕ್ಷದ ನಾಯಕ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಈ ತೀರ್ಪು ಸ್ವಲ್ಪ ಮಟ್ಟಿನ ನೆಮ್ಮದಿಯನ್ನು ಕೊಟ್ಟಿದೆಯಾದರೂ, ದೆಹಲಿಗೆ ಪೂರ್ಣ ಮಟ್ಟದ ರಾಜ್ಯ ಸ್ಥಾನಮಾನ ದೊರಕಿಸುವ ಅವರ ಅಭಿಯಾನಕ್ಕೆ ಹಿನ್ನಡೆಯಾದಂತಾಯಿತು.  ದೆಹಲಿಯ ಚುನಾಯಿತ ಆಪ್ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಅಧಿಕಾರದ ಕಿತ್ತಾಟವನ್ನು ಬಗೆಹರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ಸಂದೇಶ ನೀಡಿದ್ದು, ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರದ ಪರಮೋಚ್ಚ ಕಾರ್ಯನಿರ್ವಾಹಕರಾಗಿರುವ ಹೊರತಾಗಿಯೂ ಅವರು ಚುನಾಯಿತ ಸರ್ಕಾರದ ಸಲಹೆಗೆ ಬದ್ಧರಾಗಿರ ತಕ್ಕದ್ದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿತು. ಅಷ್ಟೇ ಅಲ್ಲ ಎಲ್ಲ ಕಾಲಕ್ಕೂ ಅವರು ದೆಹಲಿ ಸಚಿವ ಸಂಪುಟದೊಂದಿಗೆ ಹೊಂದಾಣಿಕೆಯೊಂದಿಗೆ ಕಾರ್ಯ ಎಸಗತಕ್ಕದ್ದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿತು.  "ಸಂವಿಧಾನವನ್ನು ಎಲ್ಲರೂ ಎಲ್ಲ ಕಾಲದಲ್ಲೂ, ಯಾವುದೇ ಬೆಲೆ ತೆತ್ತಾದರೂ ಸರಿ, ಅನುಸರಿಸತಕ್ಕದ್ದು; ಅರಾಜಕತೆಗೆ ಯಾವುದೇ ಅವಕಾಶ ಇರುವುದಿಲ್ಲ; ದೆಹಲಿಗೆ ಪೂರ್ಣ ಮಟ್ಟದ ರಾಜ್ಯ ಸ್ಥಾನಮಾನ ಇರುವುದಿಲ್ಲ; ಆದರೂ ಅದು ವಿಶೇಷ ಸ್ಥಾನಮಾನವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.   ಎಲ್ ಜಿ ಅವರು ಚುನಾಯಿತ ಸರ್ಕಾರದೊಂದಿಗೆ ಸಾಮರಸ್ಯ, ಹೊಂದಾಣಿಕೆಯಿಂದ ಕಾರ್ಯವೆಸಗತಕ್ಕದ್ದು; ಹಾಗೆಯೇ ಚುನಾಯಿತ ಸರ್ಕಾರದ ಸಚಿವ ಸಂಪುಟದ ಸಲಹೆಗೆ ಬದ್ಧರಾಗಿರಬೇಕು; ಅದೇ ರೀತಿ ಚುನಾಯಿತ ಸರ್ಕಾರ ಕೂಡಾ ತನ್ನ ನೀತಿ ನಿರ್ಧಾರಗಳಿಗೆ ಲೆಫ್ಟಿನೆಂಟ್ ಗವರ್ನರ್ ಅವರ ಪೂರ್ವಾನುಮತಿಯನ್ನು ಪಡೆದುಕೊಳ್ಳತಕ್ಕದ್ದು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿತು. ಸುಪ್ರೀಂ ಕೋರ್ಟ್‌ನ ಈ ತೀರ್ಪು ಆಮ್ ಆದ್ಮಿ ಸರ್ಕಾರಕ್ಕೆ ಎರಡಲಗಿನ ಖಡ್ಗವಾಗಿ ಪರಿಣಮಿಸಿತು.  ಸರ್ಕಾರದ ನೀತಿ ನಿರ್ಧಾರಗಳನ್ನು ತಡೆಯುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇಲ್ಲ ಎಂಬ ವಿಚಾರಕ್ಕೆ ಈಗ ಕಾನೂನಿನ ಮಾನ್ಯತೆ ಲಭಿಸಿದ್ದರೂ, ದೆಹಲಿಗೆ ಪೂರ್ಣಮಟ್ಟದ ರಾಜ್ಯ ಸ್ಥಾನಮಾನ ಪಡೆಯುವಲ್ಲಿ ಆಪ್ ಅಭಿಯಾನಕ್ಕೆ ಸುಪ್ರೀಂ ಕೋರ್ಟಿನ ಈ ತೀರ್ಪು ತಣ್ಣೀರೆರಚಿದೆ ಎಂಬ ಅಭಿಪ್ರಾಯ ಆಪ್ ಉನ್ನತ ವಲಯದಲ್ಲಿ ವ್ಯಕ್ತವಾಯಿತು.

2018: ನವದೆಹಲಿ:  ಬತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು  ಕ್ವಿಂಟಲ್ ಗೆ ೨೦೦ ರೂಪಾಯಿಗಳಷ್ಟು ಏರಿಸಿದ್ದು, ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ ೫೦ ರಷ್ಟು ಹೆಚ್ಚಿನ ಬೆಲೆ ಕೊಡುವ ಚುನಾವಣಾ ವಚನವನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯು ಮುಂದಿನ ಮಹಾ ಚುನಾವಣೆಗೆ ಒಂದು ವರ್ಷಕ್ಕೂ ಕಡಿಮೆ ಅವಧಿ ಉಳಿದಿರುವ ಈ ಸಂದರ್ಭದಲ್ಲಿ ಕನಿಷ್ಠ ಬೆಂಬಲ ಬೆಲೆ ಏರಿಕೆಯ ನಿರ್ಧಾರ ಕೈಗೊಂಡಿತು.  ೨೦೧೪ರಲ್ಲಿ ಚುನಾವಣೆ ಕಾಲದಲ್ಲಿ ಬಿಜೆಪಿಯು ರೈತರಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟಿನಷ್ಟು ಬೆಲೆ ಕೊಡುವುದಾಗಿ ಭರವಸೆ ನೀಡಿತ್ತು ೨೦೧೮ರ ಫೆಬ್ರುವರಿ ೧ರಂದು ಮಂಡಿಸಿದ ಸರ್ಕಾರದ ಐದನೆಯ ಮತ್ತು ಅಂತಿಮ ಮುಂಗಡಪತ್ರದಲ್ಲಿ ಚುನಾವಣಾ ವಚನ ಈಡೇರಿಸುವ ನಿಟ್ಟಿನ ಪ್ರಕಟಣೆಯನ್ನು ಹೊರಡಿಸಲಾಗಿತ್ತು.  ಈದಿನ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಪಿಎ) ೧೪ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿತು.  ಮೂಲಗಳ ಪ್ರಕಾರ, ಬತ್ತದ ಬೆಂಬಲ ಬೆಲೆಯನ್ನು (ಕಾಮನ್ ಗ್ರೇಡ್) ಕ್ವಿಂಟಲ್ ಗೆ ೨೦೦ ರೂಪಾಯಿಗಳಷ್ಟು ಏರಿಸಿ ೧,೭೫೦ ರೂಪಾಯಿಗಳಿಗೆ ನಿಗದಿ ಪಡಿಸಿತು. ಗ್ರೇಡ್ ಎ ತಳಿಯ ಬತ್ತಕ್ಕೆ ಕ್ವಿಂಟಲ್ ಬೆಲೆಯನ್ನು ಕ್ವಿಂಟಲ್ ಗೆ ೧೬೦ ರೂಪಾಯಿಗಳಷ್ಟು ಏರಿಸಲಾಗಿದ್ದು, ೧,೭೫೦ ರೂಪಾಯಿಗಳಿಗೆ ನಿಗದಿ ಪಡಿಸಲಾಯಿತು.  ಸಾಮಾನ್ಯ ಬತ್ತಕ್ಕೆ ಕ್ವಿಂಟಲ್ ಗೆ ರೂ. ೧,೫೫೦, ಮತ್ತು ಎ ಗ್ರೇಡ್ ತಳಿಯ ಬತ್ತಕ್ಕೆ ಕ್ವಿಂಟಲ್ ಗೆ ೧,೫೯೦ ರೂ. ನಿಗದಿ ಪಡಿಸಲಾಯಿತು. ಹತ್ತಿಯ  (ಮೀಡಿಯಂ ಸ್ಟೇಪಲ್) ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್ ಗೆ ೪,೦೨೦ ರೂಪಾಯಿಗಳಿಂದ ೫,೧೫೦ ರೂಪಾಯಿಗಳಿಗೆ ಏರಿಸಲಾಗಿದೆ ಮತ್ತು ಹತ್ತಿ (ಲಾಂಗ್ ಸ್ಟೇಬಲ್) ಬೆಲೆಯನ್ನು ಕ್ವಿಂಟಲ್ ಗೆ ೪,೩೨೦ ರೂಪಾಯಿಗಳಿಂದ ೫,೪೫೦ ರೂಪಾಯಿಗಳಿಗೆ ಏರಿಸಲಾಯಿತು. ದ್ವಿದಳ ಧಾನ್ಯಗಳ ಪೈಕಿ ತೊಗರಿ ದರವನ್ನು ಕ್ವಿಂಟಲ್ ಗೆ ೫,೪೫೦ ರೂಪಾಯಿಗಳಿಂದ ೫,೬೭೫ ರೂಪಾಯಿಗಳಿಗೆ ಏರಿಸಲಾಯಿತು. ಹೆಸರು ದರವನ್ನು ಕ್ವಿಂಟಲ್‌ಗೆ ೫,೫೭೫ ರೂಪಾಯಿಗಳಿಂದ ೬,೯೭೫ ರೂಪಾಯಿಗಳಿಗೆ, ಕಡಲೆ ಬೆಲೆಯನ್ನು ಕ್ವಿಂಟಲ್ ಗೆ ೫,೪೦೦ ರೂಪಾಯಿಗಳಿಂದ ೫,೬೦೦ ರೂಪಾಯಿಗಳಿಗೆ ಏರಿಸಲಾಯಿತು.  ಬತ್ತದ ಬೆಂಬಲ ಬೆಲೆ ಏರಿಕೆಯಿಂದ ಆಹಾರ ಸಬ್ಸಿಡಿ ಮೇಲಿನ ಬೊಕ್ಕಸದ ಹೊರೆ ೨೦೧೬-೧೭ರ ಮಾರುಕಟ್ಟೆ ವರ್ಷ (ಅಕ್ಟೋಬರ್- ಸೆಪ್ಟೆಂಬರ್) ದಾಸ್ತಾನು ಆಧರಿಸಿ ೧೧,೦೦೦ ಕೋಟಿ ರೂಪಾಯಿಗಳಷ್ಟಕ್ಕೆ ಏರಲಿದೆ.  ಭಾರತೀಯ ಆಹಾರ ನಿಗಮವು (ಎಫ್ ಸಿಐ) ಗೋದಿ ಮತ್ತು ಅಕ್ಕಿಯನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಸರಬರಾಜು ಮಾಡುವುದು.  ಬತ್ತವು ಪ್ರಮುಖ ಮುಂಗಾರು ಬೆಳೆಯಾಗಿದ್ದು, ನೈಋತ್ಯ ಮುಂಗಾರು ಆಗಮನದೊಂದಿಗೆ ಬಿತ್ತನೆ ಆರಂಭಗೊಂಡಿತು. ಕೃಷಿ ಸಚಿವಾಲಯವು ಪ್ರಸ್ತಾಪಿಸಿದ ಕನಿಷ್ಠ ಬೆಂಬಲ ಬೆಲೆಯು ಸರ್ಕಾರದ ಕೃಷಿ ಸಲಹಾ ಸಂಸ್ಥೆ ಸಿಎಸಿಒಯು ಸಲಹೆ ಮಾಡಿದ್ದಕ್ಕಿಂತ ಹೆಚ್ಚಿನದಾಗಿತ್ತು ಎಂದು ಇದಕ್ಕೆ ಮುನ್ನ ಸುದ್ದಿ ಮೂಲಗಳು ತಿಳಿಸಿದ್ದವು. ಬಂಪರ್ ಉತ್ಪಾದನೆಯ ಹಿನ್ನೆಲೆಯಲ್ಲಿ ಬಹುತೇಕ ಬೆಳೆಗಳ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಈಡಾಡುದನ್ನು ಅನುಸರಿಸಿ ಕೃಷಿ ಸಚಿವಾಲಯವು ಹೆಚ್ಚಿನ ಬೆಂಬಲ ಬೆಲೆಯ ಪ್ರಸ್ತಾಪ ಮಾಡಿತ್ತು.  ದಾಖಲೆ ಉತ್ಪಾದನೆ: ೨೦೧೭-೧೮ರ ಬೆಲೆ ವರ್ಷದಲ್ಲಿ (ಜುಲೈ-ಜೂನ್) ಭಾರತವು ಅಂದಾಜು ೨೭೯.೫೧ ಮಿಲಿಯ (೨೭೯೫.೧ ದಶಲಕ್ಷ) ಟನ್ ಧಾನ್ಯಗಳ ದಾಖಲೆ ಉತ್ಪಾದನೆ ಮಾಡಿತ್ತು. ಅಕ್ಕಿ, ಗೋಧಿ, ದಪ್ಪ ಧಾನ್ಯಗಳು ಮತ್ತು ದ್ವಿದಳಧಾನ್ಯಗಳ ಉತ್ಪಾದನೆ ಸಾರ್ವಕಾಲಿಕ ದಾಖಲೆಯಾಗಿತ್ತು.   ಪ್ರಸ್ತುತ ವರ್ಷ ಮಾಮೂಲಿ ಮುಂಗಾರಿನ ಭವಿಷ್ಯದ ಜೊತೆಗೆ  ಕನಿಷ್ಠ ಬೆಂಬಲಬೆಲೆ ಏರಿಕೆಯ ಘೋಷಣೆಯು ಆಹಾರ ಧಾನ್ಯ ಉತ್ಪಾದನೆಗೆ ಇನ್ನಷ್ಟು ಒತ್ತು ನೀಡಬಲ್ಲುದು. ಏನಿದ್ದರೂ ಹೆಚ್ಚಿನ ಬೆಂಬಲ ಬೆಲೆ ಕೂಡಾ ಆಹಾರ ಹಣದುಬ್ಬರಕ್ಕೆ ಕಾರಣವಾಗಲೂ ಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟರು.

2018: ಪುದುಚೆರಿ: ದೆಹಲಿ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಅಧಿಕಾರಗಳನ್ನು ಮೊಟಕುಗೊಳಿಸಿರುವ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠದ ತೀರ್ಪು ಪುದುಚೆರಿ ಕೇಂದ್ರಾಡಳಿತ ಪ್ರದೇಶಕ್ಕೂ ಅನ್ವಯವಾಗುತ್ತದೆ ಎಂದು ಇಲ್ಲಿ ಅಭಿಪ್ರಾಯಪಟ್ಟ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರು ತೀರ್ಪಿನ ಉಲ್ಲಂಘನೆಯಾದರೆ ತಾವು ಕಾನೂನು ಸಮರ ಹೂಡುವುದಾಗಿ ಎಚ್ಚರಿಕೆ ನೀಡಿದರು.  ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಜೊತೆಗೆ ದೀರ್ಘ ಕಾಲದಿಂದ ಘರ್ಷಿಸುತ್ತಿರುವ ನಾರಾಯಣಸ್ವಾಮಿ ಅವರು ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶಂಸಿಸಿ ಅದು ಸಂಪೂರ್ಣವಾಗಿ ಪುದುಚೆರಿಗೂ ಅನ್ವಯಿಸುವಂತಹುದು ಎಂದು ಹೇಳಿದರು.
ಪುದುಚೆರಿಯಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದೇ ಇದ್ದಲ್ಲಿ ತಾವು ಸುಪ್ರೀಂಕೋರ್ಟ್ ನಿಂದನೆ ಅರ್ಜಿಯನ್ನು ದಾಖಲಿಸುವುದಾಗಿಯೂ ನಾರಾಯಣಸ್ವಾಮಿ ಎಚ್ಚರಿಸಿದರು.  ‘ನಾನು ತೀರ್ಪನ್ನು ಸ್ವಾಗತಿಸುತ್ತೇನೆ, ಮತ್ತು ಅದು ಸಂಪೂರ್ಣವಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೆರಿ ಸರ್ಕಾರಕ್ಕೂ ಅನ್ವಯಿಸುತ್ತದೆ ಎಂದು ಅಭಿಪ್ರಾಯ ಪಡುತ್ತೇನೆ. ಇದು ಚಾರಿತ್ರಿಕ ಮತ್ತು ಚುನಾಯಿತ ಪ್ರತಿನಿಧಿಗಳ ದೊಡ್ಡ ವಿಜಯ ಎಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.  ‘ಈಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಕಾರ್‍ಯ ಎಸಗುವ ಯಾರೇ ವ್ಯಕ್ತಿ ಗಂಭೀರವಾದ ಕ್ರಮ ಎದುರಿಸಬೇಕಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ನಡೆಯಲು ವಿಫಲರಾದವರ ವಿರುದ್ಧ ನಾನೇ ಸ್ವತಃ ನ್ಯಾಯಾಲಯ ನಿಂದನೆ ಅರ್ಜಿಯನ್ನು ದಾಖಲಿಸುತ್ತೇನೆ ಎಂದು ನಾರಾಯಣ ಸ್ವಾಮಿ ಅವರು ಕಿರಣ್ ಬೇಡಿ ಅವರ ಹೆಸರನ್ನು ಪ್ರಸ್ತಾಪಿಸದೆಯೇ ಹೇಳಿದರು.  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಭಾರಿ ವಿಜಯ ಎಂದು ಭಾವಿಸಲಾಗಿರುವ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಈದಿನ ’ಲೆಫ್ಟಿನೆಂಟ್ ಗವರ್ನರ್ ಅವರಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವ ಸ್ವತಂತ್ರ ಅಧಿಕಾರವಿಲ್ಲ, ಅವರು ಚುನಾಯಿತ ಸರ್ಕಾರದ ಸಲಹೆಗೆ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿತ್ತು.  ಕಾನೂನು ಸುವ್ಯವಸ್ಥೆ, ಪೊಲೀಸ್ ಮತ್ತು ಭೂಮಿ ಈ ಮೂರು ವಿಷಯಗಳನ್ನು ಹೊರತು ಪಡಿಸಿ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಶಾಸನ ರೂಪಿಸುವ ಮತ್ತು ಆಡಳಿತ ನಡೆಸುವ ಅಧಿಕಾರವನ್ನು ದೆಹಲಿ ಸರ್ಕಾರವು ಹೊಂದಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.  ನಾರಾಯಣ ಸ್ವಾಮಿ ಅವರು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಆಡಳಿತದ ದೈನಂದಿನ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಪದೇ ಪದೇ ಆಪಾದಿಸಿದ್ದರು. ಕಿರಣ್ ಬೇಡಿ ಅವರ ದಿಢೀರ್ ಭೇಟಿ, ಸ್ಥಳ ಪರೀಕ್ಷೆಗಳನ್ನು ವಿರೋಧಿಸುತ್ತಿದ್ದ ನಾರಾಯಣ ಸ್ವಾಮಿ ಅವರು, ಮುಖ್ಯಮಂತ್ರಿ ಅಥವಾ ಸಂಬಂಧಪಟ್ಟ ಸಚಿವರ ಜೊತೆಗೆ ಸಮಾಲೋಚಿಸದೆ ಸರ್ಕಾರಿ ಅಧಿಕಾರಿಗಳಿಗೆ ಆದೇಶ ನೀಡುತ್ತಿದ್ದುದಕ್ಕಾಗಿ ಬೇಡಿ ಅವರನ್ನು ಟೀಕಿಸುತ್ತಿದ್ದರು. ಕೃಷಿ ಸಾಲ ಮನ್ನಾ, ದಲಿತರಿಗೆ ಉಚಿತ ಶಿಕ್ಷಣ ಇತ್ಯಾದಿಗಳಿಗೆ ಸಂಬಂಧಿಸಿದ ಕಡತಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುದಕ್ಕಾಗಿಯೂ ಲೆಫ್ಟಿನೆಂಟ್ ಗವರ್ನರ್ ಬೇಡಿ ಅವರನ್ನು ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡಿದ್ದರು.  ಸರ್ಕಾರದ ವಿವಿಧ ನಿರ್ಣಯಗಳ ಅನುಷ್ಠಾನದಲ್ಲಿ ಅಡಚಣೆಗಳನ್ನು ಒಡ್ಡುತ್ತಿರುವ ಬೇಡಿ ಅವರು ಸುಪ್ರೀಂಕೋರ್ಟ್ ತೀರ್ಪಿನ ಬಳಿಕವಾದರೂ ತಮ್ಮ ಮಾರ್ಗವನ್ನು ಬದಲಾಯಿಸಿಕೊಳ್ಳುತ್ತಾರೆ ಎಂದು ಹಾರೈಸುವೆ ಎಂದು ಮುಖ್ಯಮಂತ್ರಿ ಹೇಳಿದರು.  ‘ಈಗ ಎಲ್ಲವೂ ಹಳೆಯ ವಿಷಯವಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪು ಪ್ರಜಾಪ್ರಭುತ್ವದ ಸ್ಫೂರ್ತಿ ಮತ್ತು ಚುನಾಯಿತ ಸರ್ಕಾರದ ಉದ್ದೇಶವನ್ನು ಸ್ಪಷ್ಟ ಪಡಿಸಿದೆ ಎಂದು ಹೇಳಿದ ಅವರು ’ಲೆಫ್ಟಿನೆಂಟ್ ಗವರ್ನರ್ ಅಡಚಣೆಗಾರನಾಗಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು ಬೊಟ್ಟು ಮಾಡಿದರು.  ‘ಲೆಫ್ಟಿನೆಂಟ್ ಗವರ್ನರ್ ಅವರು ಸ್ವತಂತ್ರ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಹೊಂದಿಲ್ಲ ಎಂದು ನಾನು ಹೇಳುತ್ತಲೇ ಬಂದಿದ್ದೆ. ನಿಜವಾದ ಅಧಿಕಾರ ಚುನಾಯಿತ ಸರ್ಕಾರದ ಬಳಿಯೇ ಉಳಿಯಬೇಕು ಎಂದು ನಾರಾಯಣಸ್ವಾಮಿ ಹೇಳಿದರು.  ಸಾಮಾಜಿಕ ಮಾಧ್ಯಮಗಳ ಮೂಲಕ ಬೇಡಿ ಅವರು ಸೂಚನೆಗಳನ್ನು ಮತ್ತು ಆದೇಶಗಳನ್ನು ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ’ಲೆಫ್ಟಿನೆಂಟ್ ಗವರ್ನರ್ ಅವರು ಬೇಕೆಂದಾಗ ವಾಟ್ಸಪ್, ಟ್ವಿಟ್ಟರ್ ಮತ್ತು ಫೇಸ್ ಬುಕ್ ಬಳಸುತ್ತಿದ್ದ ಯುಗ ಈಗ ಭೂತಕಾಲದ್ದಾಗಲಿದೆ ಎಂದು ನುಡಿದರು.  ಸಭೆಯ ಉದ್ದೇಶವನ್ನು ಸಂಬಂಧಪಟ್ಟ ಸಚಿವರಿಗೆ ತಿಳಿಸದೆ ಲೆಫ್ಟಿನೆಂಟ್ ಗವರ್ನರ್ ಅವರ ಯಾವುದೇ ಸಭೆ, ಸಮಾಲೋಚನೆಗಳಿಗೆ ತೆರಳದಂತೆ ನಾರಾಯಣಸ್ವಾಮಿ ಅವರು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದರು.

2018: ಕೌಲಾಲಂಪುರ: ತಮ್ಮನ್ನು ಮಲೇಶ್ಯಾದಿಂದ ಗಡೀಪಾರು ಮಾಡಲಾಗಿದ್ದು, ಭಾರತಕ್ಕೆ ವಾಪಸಾಗುವುದಾಗಿ ಪ್ರಕಟಗೊಂಡಿರುವ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ವಿವಾದಿತ ಮುಸ್ಲಿಂ ಮತ ಪ್ರಚಾರಕ ಝಾಕೀರ್ ನಾಯ್ಕ್  ’ಅನ್ಯಾಯದ ವಿಚಾರಣೆಯಿಂದ ಸುರಕ್ಷಿತವಾಗಿರುವವರೆಗೆ ನಾನು ಭಾರತಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ತನ್ನನ್ನು ಮಲೇಶ್ಯ್ಯಾದಿಂದ ಗಡಿಪಾರು ಮಾಡಲಾಗಿದೆ ಎಂಬ ಮಾಧ್ಯಮದ ವರದಿಗಳನ್ನು ಝಾಕೀರ್ ತಳ್ಳಿ ಹಾಕಿದರು.  ‘ಮಾಧ್ಯಮ ವರದಿಗಳು ಆಧಾರವಿಲ್ಲದ್ದು ಮತ್ತು ಸುಳ್ಳಿನಿಂದ ಕೂಡಿವೆ ಎಂದು ಝಾಕೀರ್  ಹೇಳಿಕೆ ನೀಡಿದರು.  ಗೃಹ ಸಚಿವಾಲಯವೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮಲೇಶ್ಯಾದಿಂದ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿತು. ಢಾಕಾ ದಾಳಿ ನಡೆಸಿದ ಐಸಿಸ್ ಉಗ್ರರಿಗೆ ಪ್ರೇರೇಪಣೆ ನೀಡಿದ ಆರೋಪ ಝಾಕೀರ್ ನಾಯ್ಕ್ ಮೇಲಿದ್ದು, ೨೦೧೬ ರಿಂದ ಮಲೇಶ್ಯಾದ್ಯದ ಪುತ್ರಜಯದಲ್ಲಿ ನೆಲೆಸಿದ್ದು, ಭಾರತಕ್ಕೆ ಹಿಂದಿರುಗಿಲ್ಲ.  

2018: ನವದೆಹಲಿ: ವಿದೇಶಕ್ಕೆ ಪರಾರಿಯಾಗಿರುವ ಬ್ಯಾಂಕ್ ವಂಚನೆ ಆರೋಪ ಎದುರಿಸುತ್ತಿರುವ ವಜ್ರಾಭರಣ ಉದ್ಯಮಿ ನೀರವ್ ಮೋದಿ ಇಂಗ್ಲೆಂಡಿನಲ್ಲಿ ರಾಜಕೀಯ ಆಶ್ರಯ ಕೋರಿರುವ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ ಎಂದು ಅಧಿಕೃತ ಮೂಲಗಳು ಇಲ್ಲಿ ತಿಳಿಸಿದವು. ಮೋದಿ ಅವರು ಇಂಗ್ಲೆಂಡಿನಲ್ಲಿ ರಾಜಕೀಯ ಆಶ್ರಯ ಕೋರಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿತ್ತು. ’ಅವರು ಇಂಗ್ಲೆಂಡಿನಲ್ಲಿ ರಾಜಕೀಯ ಆಶ್ರಯ ಕೋರಿದ್ದಾರೆ ಎಂಬ ಬಗ್ಗೆ ನಮಗೆ ಗೊತ್ತಿಲ್ಲ. ಅವರು ರಾಜಕೀಯ ಆಶ್ರಯ ಕೋರಿರುವ ಬಗ್ಗೆ ಇಂಗ್ಲೆಂಡ್ ನಮಗೆ ತಿಳಿಸಿಲ್ಲ ಎಂದ ಸುದ್ದಿ ಮೂಲವೊಂದು ಹೇಳಿತು.  ೨೦೦ ಕೋಟಿ ಡಾಲರ್ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಮೋದಿ ಸಿಬಿಐಗೆ ಬೇಕಾಗಿದ್ದಾರೆ. ನೀರವ್ ಮೋದಿ ಮತ್ತು ಸಹೋದರ ನಿಶಾಲ್ ಮೋದಿ ಹಾಗೂ ನೌಕರ ಸುಭಾಶ್ ಪರಬ್ ವಿರುದ್ಧ ಸಿಬಿಐ ಮನವಿ ಮೇರೆಗೆ ಇಂಟರ್ ಪೋಸಲ್ ಈ ಮೊದಲೇ ’ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.  ನೀರವ್ ಮೋದಿ ಅವರು ಇಂಗ್ಲೆಂಡ್, ಫ್ರಾನ್ಸ್, ಮತ್ತು ಬೆಲ್ಜಿಯಂಗೆ ಕಳೆದ ಕೆಲವು ವಾರಗಳಲ್ಲಿ ಭೇಟಿ ನೀಡಿರಬಹುದು ಎಂಬ ವರದಿಗಳಿವೆ. ವಿದೇಶಗಳಲ್ಲಿ ಇರುವ ಭಾರತೀಯ ರಾಜತಾಂತ್ರಿಕ ಸಂಸ್ಥೆಗಳು ಸ್ಥಳೀಯ ಸರ್ಕಾರಗಳಿಗೆ ನೀರವ್ ಮೋದಿ ವಿರುದ್ಧ ಜಾರಿಗೊಳಿಸಲಾಗಿರುವ ರೆಡ್ ಕಾರ್ನರ್ ನೋಟಿಸ್ ಬಗ್ಗೆ ಮಾಹಿತಿ ನೀಡುತ್ತಿವೆ.  ಮುಂಬೈ ನ್ಯಾಯಾಲಯದಲ್ಲಿ ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಮತ್ತು ವಿಶೇಷ ನ್ಯಾಯಾಧೀಶ ಜೆ.ಸಿ. ಜಗದಾಳೆ ಅವರು ಜಾರಿಗೊಳಿಸಿರುವ ಬಂಧನ ವಾರಂಟ್ ಆಧರಿಸಿ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ನೀರವ್ ಮೋದಿ ವಿರುದ್ದ ಜಾರಿ ಮಾಡಲಾಗಿರುವ ರೆಡ್ ಕಾರ್ನರ್ ನೋಟಿಸ್ ನಲ್ಲಿ ಇಂಟರ್ ಪೋಲ್ ತನ್ನ ೧೯೨ ಸದಸ್ಯ ರಾಷ್ಟ್ರಗಳಿಗೆ ಅವರ ನೆಲದಲ್ಲಿ ಮೋದಿ ಕಂಡು ಬಂದರೆ ಬಂಧಿಸುವಂತೆ ಮತ್ತು ಸೂಚಿಸಿದೆ. ಬಳಿಕ ಗಡೀಪಾರು ಪ್ರಕ್ರಿಯೆಗಳನ್ನು  ಆರಂಭಿಸಬಹುದು.

ನೀರವ್ ಮೋದಿ ಜೊತೆಗೆ ಅವರ ಪತ್ನಿ ಹಾಗೂ ಅಮೆರಿಕದ ಪ್ರಜೆಯಾಗಿರುವ ಅಮಿ ಮೋದಿ, ಬೆಲ್ಜಿಯಂ ಪೌರನಾಗಿರುವ ಸಹೋದರ ನಿಶಾಲ್ ಮೋದಿ ಮತ್ತು ಚಿಕ್ಕಪ್ಪ ಮೆಹುಲ್ ಚೊಕ್ಸಿ ಎಲ್ಲರನ್ನು ಸಿಬಿಐ ತನ್ನ ಎಫ್ ಐ ಆರ್ ನಲ್ಲಿ ಆರೋಪಿಗಳನ್ನಾಗಿ ಹೆಸರಿಸಿದೆ. ಎಲ್ಲ ಆರೋಪಿಗಳೂ ಅತಿ ದೊಡ್ಡ ಬ್ಯಾಂಕ್ ಹಗರಣ ಬೆಳಕಿಗೆ ಬರುವುದಕ್ಕೆ ಕೆಲ ವಾರ ಮುನ್ನ ೨೦೧೮ರ ಜನವರಿ ಮೊದಲ ವಾರದಲ್ಲಿ ದೇಶ ತ್ಯಜಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಾ ಹಲವಾರು ಐರೋಪ್ಯ ರಾಷ್ಟ್ರಗಳಿಗೆ ನೀರವ್ ಮೋದಿ ಪತ್ತೆ ಕಾರ್‍ಯದಲ್ಲಿ ನೆರವಾಗುವಂತೆ ಕೋರಿ ಪತ್ರಗಳನ್ನು ಬರೆದಿತ್ತು.

2017: ಟೆಲ್‌ ಅವಿವ್‌ : ಭಾರತ ಸ್ವಾತಂತ್ರ್ಯ ಗಳಿಸಿ 70 ವರ್ಷದ ನಂತರ ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ  ಹೆಗ್ಗಳಿಕೆಯೊಂದಿಗೆ  ಇಲ್ಲಿಗೆ ಬಂದಿಳಿದ ನರೇಂದ್ರ ಮೋದಿ ಅವರಿಗೆ ಯೆಹೂದಿ ರಾಷ್ಟ್ರ ಭವ್ಯ ಸ್ವಾಗತ ನೀಡಿತು. ಎಲ್ಲ ಶಿಷ್ಟಾಚಾರಗಳನ್ನು ಬದಿಗಿರಿಸಿ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಖುದ್ದಾಗಿ ಮೋದಿ  ಅವರನ್ನು ಸ್ವಾಗತಿಸಲು ಬೆನ್‌ ಗುರಿಯನ್‌ ವಿಮಾನ ನಿಲ್ದಾಣದಲ್ಲಿ ಕಾದಿದ್ದರು. ಅವರ ಸಂಪುಟದ ಎಲ್ಲ ಸದಸ್ಯರು ಹಾಗೂ ವಿವಿಧ ಧರ್ಮಗಳ ಪ್ರತಿನಿಧಿಗಳು ಅಲ್ಲಿ ಹಾಜರಿದ್ದರು.  ಅಮೆರಿಕ ಅಧ್ಯಕ್ಷ  ಮತ್ತು ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಅವರನ್ನು  ಮಾತ್ರ ಇಸ್ರೇಲ್‌ ಪ್ರಧಾನಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಪರಿಪಾಠವಿದೆ.   ಮೊದಲ ಬಾರಿಗೆ ನೆತನ್ಯಾಹು ಅವರು ಆ ಸಂಪ್ರದಾಯ ಮುರಿದು ಅಚ್ಚರಿ ಮೂಡಿಸಿದರು. ಸಾಂಪ್ರದಾಯಿಕ ಮಿತ್ರರಾಷ್ಟ್ರ  ಪ್ಯಾಲೆಸ್ಟೀನ್‌ ಬದಲು  ಇಸ್ರೇಲ್‌ಗೆ ತೆರಳುವ ಮೂಲಕ ಮೋದಿ  ಭಾರತ–ಇಸ್ರೇಲ್‌ ನಡುವಣ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದಾರೆ ಎಂದು ಬಣ್ಣಿಸಲಾಯಿತು.  ಮೋದಿ ಅವರನ್ನು ತಬ್ಬಿ ಸ್ವಾಗತಿಸಿದ  ನೆತನ್ಯಾಹು ಅವರು ‘ಆಪ್ ಕಾ ಸ್ವಾಗತ್‌ ಹೈ ಮೇರೆ ದೋಸ್ತ್‌’ (ಸ್ವಾಗತ ಮಿತ್ರ) ಎಂದು ಹಿಂದಿಯಲ್ಲಿ ಹೇಳಿ ಬೆರಗು ಮೂಡಿಸಿದರು. ‘ನಾವು ಭಾರತವನ್ನು ಪ್ರೀತಿಸುತ್ತೇವೆ’ ಎಂದು ಹಿಂದಿಯಲ್ಲಿಯೇ ಹೇಳಿ ನಸುನಕ್ಕರು. ಲಿಖಿತ ಭಾಷಣ ಓದಿದ ಉಭಯ ನಾಯಕರು ಪರಸ್ಪರ ‘ಸ್ನೇಹಿತ’ ಎಂದು ಸಂಭೋದಿಸಿಕೊಂಡರು.  ಇದಕ್ಕೆ ಪ್ರತಿಯಾಗಿ ಮೋದಿ ಕೂಡ ಇಸ್ರೇಲ್‌ ಅಧಿಕೃತ ಭಾಷೆ  ಹಿಬ್ರೂದಲ್ಲಿ ‘ಶಾಲೋಮ್‌ (ಹಲೋ)’ ಎಂದು ಶುಭಾಶಯ ಕೋರಿದರು.  ‘ಇಲ್ಲಿಗೆ ಬರಲು ಸಂತಸವೆನಿಸುತ್ತದೆ’  ಎಂದರು.   ಕೆನೆಬಣ್ಣದ ‘ಬಂದ್ ಗಲಾ’ ಸೂಟು ಧರಿಸಿದ್ದ ಮೋದಿ ಜೇಬಿನಲ್ಲಿ ಅದಕ್ಕೆ ಒಪ್ಪುವ ಕಡುನೀಲಿ ಕರವಸ್ತ್ರ ಇಟ್ಟುಕೊಂಡಿದ್ದರು. ಇಸ್ರೇಲ್‌ನಿಂದ ಅತ್ಯಾಧುನಿಕ ತಂತ್ರಜ್ಞಾನ, ಸೇನಾ ಸಹಕಾರ ಮತ್ತು ತಂತ್ರಜ್ಞಾನ ಹಾಗೂ ಬಂಡವಾಳ ಸೆಳೆಯುವುದು ಈಭೇಟಿಯ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ.  ಬಳಿಕ ನೆತನ್ಯಾಹು ಅವರು ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಪ್ರಧಾನಿ ಮೋದಿಗೆ ಪರಿಚಯಿಸಿದರು. 'ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆ ನನಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ, ಇಸ್ರೇಲಿಗೆ ಇದು ನನ್ನ ಸೀಮೋಲ್ಲಂಘನೆಯ ಭೇಟಿಯಾಗಿದೆ ' ಎಂದು ಮೋದಿ ಹೇಳಿದರು.  ಪ್ರಧಾನಿ ಮೋದಿ ಅವರು ಜು.6ರ ವರೆಗೆ ಇಸ್ರೇಲ್‌ನಲ್ಲಿ ಇರುತ್ತಾರೆ. ಅದಕ್ಕೆ ಮುನ್ನ ಅವರು ಜರ್ಮನಿಯ ಹ್ಯಾಂಬರ್ಗ್‌ ಗೆ ಪ್ರಯಾಣಿಸಿ ಅಲ್ಲಿ ಜಿ-20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಪಾಲ್ಗೊಳುತ್ತಾರೆ.  ಮೋದಿ ಅವರು ತಮ್ಮ ಇಸ್ರೇಲ್‌ ಭೇಟಿಯಲ್ಲಿ ಅಧ್ಯಕ್ಷ ರುವೆನ್‌ ರಿವಿನ್‌ ಅವರನ್ನೂ  ಕಾಣುವರಲ್ಲದೆ ಉಭಯ ದೇಶಗಳ ಸಿಇಓಗಳನ್ನು ಹಾಗೂ ಇಂಡಿಯಾ ಡಯಾನ್ಪೋರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 1918ರ ಹೈಪಾ ವಿಮೋಚನೆಯಲ್ಲಿ ಬಲಿದಾನಗೈದ ಧೀರ ಭಾರತೀಯ ಸೈನಿಕರಿಗೆ ಮೋದಿ ಪುಷ್ಪಾಂಜಲಿ ಸಲ್ಲಿಸಲಿದ್ದಾರೆ.  
2017: ಸಿಯೋಲ್ (ಎಎಫ್‌ಪಿ): ತಾನು ನಡೆಸಿರುವ ಖಂಡಾಂತರ ಕ್ಷಿಪಣಿ ಪರೀಕ್ಷೆಯು ಯಶಸ್ವಿಯಾಗಿದೆ ಎಂದು
ಉತ್ತರ ಕೊರಿಯಾ ಪ್ರತಿಪಾದಿಸಿತು.  ಅಮೆರಿಕವನ್ನು ಗುರಿಯಾಗಿಸಿಕೊಂಡು ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ಮಾಡುತ್ತಿರುವ ಉತ್ತರ ಕೊರಿಯಾದ ಪ್ರಯತ್ನಕ್ಕೆ ಇದೊಂದು ಸ್ಮರಣೀಯ ಕ್ಷಣ ಎನ್ನಲಾಯಿತು. ‘ಹ್ವಾಸಂಗ್ 14’ ಎಂಬ ಈ ಮಹ ತ್ವದ ಕ್ಷಿಪಣಿ ಪರೀಕ್ಷೆಯು ಅಧ್ಯಕ್ಷ ಕಿಮ್ ಜಾಂಗ್ ಉನ್ ಮೇಲ್ವಿಚಾರಣೆಯಲ್ಲಿ ನಡೆಯಿತು.  ಕ್ಷಿಪಣಿಯು 933 ಕಿ.ಮೀ ದೂರ ಕ್ರಮಿಸಿದೆ’ ಎಂದು ಇಲ್ಲಿನ ಸರ್ಕಾರಿ ವಾಹಿನಿಯ ನಿರೂಪಕಿಯೊಬ್ಬರು ಹೇಳಿದರು. ‘ಉತ್ತರ ಕೊರಿಯಾವು ಪ್ರಬಲ ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರ ಮತ್ತು ಖಂಡಾಂತರ ಕ್ಷಿಪಣಿಯು ಜಗತ್ತಿನ ಯಾವುದೇ ಭಾಗದ ಮೇಲೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ’ ಎಂದು ನಿರೂಪಕಿ ಹೇಳಿದರು.  ಉನ್ ಅಧಿಕಾರ ವಹಿಸಿಕೊಂಡ ನಂತರ ಈವರೆಗೆ ಮೂರು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ಮತ್ತು ಹಲವು ರಾಕೆಟ್‌ಗಳ ಉಡಾವಣೆ ನಡೆದಿದೆ. ‘ಕ್ಷಿಪಣಿಯು ಅಲಾಸ್ಕಾವರೆಗೂ ತಲುಪಬಹುದು. ಅಮೆರಿಕವು ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ನಡೆಸುತ್ತಿರುವ ಸಮಯದಲ್ಲೇ ಈ ಪರೀಕ್ಷೆ ನಡೆದಿದೆ’ ಎಂದು ಅಮೆರಿಕದ ತಜ್ಞರು ಹೇಳಿದರು. ಅಮೆರಿಕದ ಮೇಲೆ ದಾಳಿ ನಡೆಸುವ ಸಾಮರ್ಥ್ಯದ ಪರಮಾಣು ಸಿಡಿತಲೆ ಸಂಶೋಧನೆಯಲ್ಲಿ ಉತ್ತರ ಕೊರಿಯಾ ದೀರ್ಘಕಾಲದಿಂದ ತೊಡಗಿತ್ತು. ಟ್ರಂಪ್ ಗರಂ: ‘ಈ ವ್ಯಕ್ತಿಗೆ ತನ್ನ ಜೀವನದಲ್ಲಿ ಏನಾದರೂ ಒಳ್ಳೆಯದನ್ನು ಮಾಡುವ ಉದ್ದೇಶವಿದೆಯೇ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉನ್ ಅವರನ್ನುದ್ದೇಶಿಸಿ ಟ್ವಿಟರ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು. ಈ ಅಸಂಬದ್ಧ ಪ್ರಯೋಗದ ಮೇಲೆ ಒತ್ತಡ ಹೇರಬೇಕು ಎಂದು ಟ್ರಂಪ್ ಅವರು ಉತ್ತರ ಕೊರಿಯಾದ ಪ್ರಮುಖ ಮಿತ್ರ ರಾಷ್ಟ್ರವಾದ ಚೀನಾವನ್ನು ಟ್ವಿಟರ್ ಮೂಲಕ ಒತ್ತಾಯಿಸಿದರು. ಹೆಚ್ಚಿದ ಆತಂಕ: ‘ಆತಂಕದ ವಾತಾವರಣ ಇನ್ನಷ್ಟು ಹೆಚ್ಚಿದೆ ಎಂಬುದನ್ನು ಈ ಕ್ಷಿಪಣಿ ಪರೀಕ್ಷೆಯು ತೋರಿಸಿಕೊಡುತ್ತಿದೆ’ ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ವರದಿಗಾರರಿಗೆ ಹೇಳಿದರು. ಸಂಯಮದಿಂದ ವರ್ತಿಸಿ–ಚೀನಾ: ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸುವ ಮೂಲಕ ಈ ಸಂಬಂಧ ಮತ್ತೊಂದು ಸುತ್ತಿನ ಮಾತುಕತೆ ನಡೆಸುವಂತಹ ವಾತಾವರಣ ಸೃಷ್ಟಿಸಬೇಡಿ. ಸಂಯಮದಿಂದ ವರ್ತಿಸಿ’ ಎಂದು ಚೀನಾವು ಉತ್ತರ ಕೊರಿಯಾಕ್ಕೆ ಸಂದೇಶ ರವಾನಿಸಿದೆ. ಇದೇ ವೇಳೆ, ಪ್ರತೀಕಾರದ ಕ್ರಮ ಕೈಗೊಳ್ಳದಂತೆ ಅಮೆರಿಕಕ್ಕೂ ಅದು ಕರೆ ನೀಡಿದೆ.


2017:  ಹೊಸದಿಲ್ಲಿ : ಅಮಾನ್ಯಗೊಳಿಸಲಾದ  500 ಮತ್ತು 1000 ರೂಪಾಯಿ ನೋಟುಗಳನ್ನು
ಯೋಗ್ಯ ಹಾಗೂ ಸಮರ್ಥನೀಯ ಕಾರಣಗಳಿಗಾಗಿ ಬ್ಯಾಂಕ್‌ನಲ್ಲಿ ಜಮೆ ಮಾಡಲು ವಿಫ‌ಲರಾದವರಿಗೆ ಇನ್ನೂ ಒಂದು ಅವಕಾಶವನ್ನು ಕೊಡುವ ಸಾಧ್ಯತೆಯ ಬಗ್ಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಎರಡು ವಾರಗಳ ಕಾಲಾವಕಾಶವನ್ನು ನೀಡಿ  ಆದೇಶ ಹೊರಡಿಸಿತು. ಅಮಾನ್ಯಗೊಳಿಸಲಾದ ನೋಟುಗಳನ್ನು ಬ್ಯಾಂಕ್‌ಗಳಲ್ಲಿನ ತಮ್ಮ ಖಾತೆಗೆ ಜಮೆ ಮಾಡುವುದಕ್ಕೆ ಸರಕಾರ ಕಳೆದ ವರ್ಷ ಡಿಸೆಂಬರ್‌ 31ರ ವರೆಗೆ ಕಾಲಾವಕಾಶ ನೀಡಿತ್ತು. ಅನಂತರ ಮಾಚ್‌ 31ರ ವರೆಗಿನ ಕಾಲಾವಕಾಶದಲ್ಲಿ ಆರ್‌ಬಿಐ ನಲ್ಲಿ ವಿನಿಮಯಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಇವೆಲ್ಲ ಅವಕಾಶಗಳ ಹೊರತಾಗಿಯೂ ಸಮರ್ಥನೀಯ ಹಾಗೂ ಸರಿಯಾದ ಕಾರಣಗಳಿಗಾಗಿ ಅಮಾನ್ಯಗೊಂಡ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ವಿಫ‌ಲರಾದವರಿಗೆ ಇನ್ನೂ ಒಂದು ಅವಕಾಶವನ್ನು ನೀಡಲು ಸಾಧ್ಯವೇ ಎಂಬುದನ್ನು  ಎರಡು ವಾರಗಳ ಒಳಗೆ ತನಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಇದೀಗ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.  ಹೆರಿಗೆ ಮತ್ತು ಕುಟುಂಬದಲ್ಲಿ ಸಾವಿನ ಕಾರಣ ತಮಗೆ ಹಳೆ ನೋಟು ಜಮೆ ಮಾಡಲಾಗಿಲ್ಲ ಹೇಳಿ ಇಬ್ಬರು ಸುಪ್ರೀಂಕೋರ್ಟ್ ,ಮೆಟ್ಟಲು ತುಳಿದಿದ್ದರು.


2017: ನವದೆಹಲಿ: ಪ್ರಸ್ತುತ ಚುನಾವಣಾ ಆಯುಕ್ತರಾಗಿರುವ ಅಚಲ್‌ ಕುಮಾರ್‌ ಜ್ಯೋತಿ ಅವರನ್ನು ನೂತನ
ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಚುನಾವಣಾ ಆಯೋಗ ನೇಮಕ ಮಾಡಿತು. ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಅವರು ಇದೇ ಜುಲೈ 6ರಂದು ನಿವೃತ್ತರಾಗುವರು. ಅಂದು 64 ವರ್ಷ ವಯಸ್ಸಿನ ಅಚಲ್‌ ಕುಮಾರ್‌ ಜ್ಯೋತಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 1975ರ ಬ್ಯಾಚ್‌ನ ಗುಜರಾತ್‌ ಕೇಡರ್‌ನ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್) ಅಧಿಕಾರಿಯಾಗಿದ್ದ ಅಚಲ್‌ ಕುಮಾರ್‌ ಅವರು ಗುಜರಾತ್‌ನ ವಿಚಕ್ಷಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನ ಮುಖ್ಯ ಕಾರ್ಯದರ್ಶಿಯಾಗಿದ್ದರು. 
2008: ಧಾರವಾಡದ `ವಾಲ್ಮಿ' ಪ್ರಾಂಗಣದಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ. ಕೆ.ಜಿ.ಬಾಲಕೃಷ್ಣನ್ ದೀಪ ಬೆಳಗಿಸಿ ಉದ್ಘಾಟಿಸುವುದರೊಂದಿಗೆ ಈ ಭಾಗದ ಜನರ ದಶಕಗಳ ಹೋರಾಟ ಸಾರ್ಥಕವಾಯಿತು. ಕಿಕ್ಕಿರಿದು ನೆರೆದಿದ್ದ ಜನಸಮೂಹ, ರಾಜಕಾರಣಿಗಳ ದಂಡು, ನ್ಯಾಯಮೂರ್ತಿಗಳು, ನ್ಯಾಯವಾದಿಗಳು ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು. ಹುಬ್ಬಳ್ಳಿ-ಧಾರವಾಡವಲ್ಲದೆ ಉತ್ತರ ಕರ್ನಾಟಕದ ಸಾವಿರಾರು ಜನರು, ರೈತರು ಸಮಾರಂಭದಲ್ಲಿ ಪಾಲ್ಗೊಂಡರು.

2007: ಮಹಿಳೆಯೊಬ್ಬರಿಗೆ ಸಿಜೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ವಿವಾದ ಸೃಷ್ಟಿಸಿದ್ದ ಬಾಲಕ ದಿಲೀಪನ್ ರಾಜ್ (16) ತಿರುಚಿರಾಪಳ್ಳಿಯ ಬಾಲ ನ್ಯಾಯ ಮಂಡಳಿಯ ಎದುರು ಶರಣಾಗತನಾದ. ಹತ್ತನೇ ತರಗತಿ ವಿದ್ಯಾರ್ಥಿಯಾದ ಈತ ದಾಖಲೆಗಾಗಿ ತನ್ನ ವೈದ್ಯ ತಂದೆ ತಾಯಿಯ ನೆರವಿನಿಂದ ಗರ್ಭಿಣಿ ಮಹಿಳೆಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಿದ್ದ. ಆದರೆ ವೈದ್ಯಕೀಯ ಸಂಘ ಇದನ್ನು ಆಕ್ಷೇಪಿಸಿ ಪೊಲೀಸರಿಗೆ ದೂರು ನೀಡಿದ್ದರಿಂದ ದಿಲೀಪನ್ ನಾಪತ್ತೆಯಾಗಿದ್ದ. ಆತನ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು. ಈದಿನ ಮಧ್ಯಾಹ್ನ ಆತ ತನ್ನ ವಕೀಲರೊಂದಿಗೆ ಬಾಲ ನ್ಯಾಯ ಮಂಡಳಿ ಎದುರು ಹಾಜರಾದ.

2007: ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಸಮುದಾಯಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ 4 ರಷ್ಟು ಮೀಸಲು ನೀಡಲು ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿತು. ರಾಜ್ಯ ಹಿಂದುಳಿದ ಆಯೋಗ ಮುಸ್ಲಿಂ ಸಮುದಾಯದ 15 ಪಂಗಡಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು ಆ ಪಂಗಡದ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಒದಗಿಸುವಂತೆ ಶಿಫಾರಸು ಮಾಡಿತ್ತು. ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಈದಿನ ಇದನ್ನು ಅಂಗೀಕರಿಸಿತು. ಸರ್ಕಾರ ಈ ಹಿಂದೆ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡಿದ್ದನ್ನು ಹೈಕೋರ್ಟ್ ರದ್ದು ಮಾಡಿತ್ತು.

2007: ಪ್ಯಾಲಸ್ಟೈನಿನ ಇಸ್ಲಾಮಿಕ್ ಸೇನೆ ಮತ್ತು ಹಮಾಸ್ ಆಡಳಿತದ ನಡುವೆ ನಡೆದ ಮಾತುಕತೆಯ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಮಾರ್ಚ್ ತಿಂಗಳಲ್ಲಿ ಅಪಹರಣಗೊಂಡಿದ್ದ ಬಿಬಿಸಿ ವರದಿಗಾರ ಅಲಾನ್ ಜಾನ್ ಸ್ಟನ್ ಅವರನ್ನು ಗಾಜಾದಿಂದ ಬಿಡುಗಡೆ ಮಾಡಲಾಯಿತು. ಅಲಾನ್ ಅವರನ್ನು ಇಸ್ಲಾಮಿಕ್ ಸೇನೆಯು ಈದಿನ ಬೆಳಿಗ್ಗೆ ಹಮಾಸ್ ಆಡಳಿತಕ್ಕೆ ಒಪ್ಪಿಸಿತು. ನಂತರ ಹಮಾಸ್ ಆಡಳಿತ ಅವರನ್ನು ಬಂಧಮುಕ್ತರನ್ನಾಗಿ ಮಾಡಿತು. ಅಪಹರಣಕ್ಕೆ ಸಂಬಂಧಿಸಿ ಹಮಾಸ್ ಆಡಳಿತ ತನಗೆ ತೊಂದರೆ ನೀಡಿದರೆ ಜಾನ್ ಸ್ಟನ್ ಅವರನ್ನು ಹತ್ಯೆ ಮಾಡುವುದಾಗಿ ಇಸ್ಲಾಮಿಕ್ ಸೇನೆ ಬೆದರಿಕೆ ಹಾಕಿತ್ತು.

2007: ಬಾಂಗ್ಲಾದೇಶದ ಮಾಜಿ ನಾಗರಿಕ ವಿಮಾನಯಾನ ಸಚಿವ ಮಹಮ್ಮದ್ ನಾಸಿರುದ್ದೀನ್ ಅವರಿಗೆ, ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಢಾಕಾದ ಭ್ರಷ್ಟಾಚಾರ ವಿರೋಧಿ ವಿಶೇಷ ನ್ಯಾಯಾಲಯವು 13 ವರ್ಷ ಸಜೆ ವಿಧಿಸಿತು. ನ್ಯಾಯಾಧೀಶ ಅಮರ್ ಕುಮಾರ್ ನಾಥ್ ಈ ತೀರ್ಪು ನೀಡಿದರು. ಮಾಜಿ ಸಚಿವ ಅಮಾನುಲ್ಲಾ ಅಮಾನ್ ಅವರಿಗೆ ಸಜೆ ವಿಧಿಸಿದ ನಂತರ ಅಕ್ರಮ ಸಂಪತ್ತು ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಶಿಕ್ಷೆಗೆ ಒಳಗಾದ ಮಾಜಿ ಸಚಿವರಲ್ಲಿ ನಾಸಿರುದ್ದೀನ್ ಎರಡನೆಯವರು. ಐದು ಲಕ್ಷ ಟಾಕಾ (ಬಾಂಗ್ಲಾ ನಾಣ್ಯ) ದಂಡ ವಿದಿಸಿದ್ದಲ್ಲದೆ, ಅಕ್ರಮ ಹಣ ಗಳಿಕೆಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಅವರ ಮಗ ಮಹಮ್ಮದ್ ಹಿದಾಯತ್ ಉಲ್ಲಾನಿಗೂ ಮೂರು ವರ್ಷ ಸಜೆ ಹಾಗೂ ಒಂದು ಲಕ್ಷ ಟಾಕಾ ದಂಡವನ್ನೂ ನ್ಯಾಯಾಲಯ ವಿಧಿಸಿತು.

2007: ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಅಡಗಿದ ತೀವ್ರಗಾಮಿ ವಿದ್ಯಾರ್ಥಿಗಳು ಹಾಗೂ ಪಾಕಿಸ್ಥಾನದ ಭದ್ರತಾ ಪಡೆಗಳ ನಡುವೆ ನಡೆದ ಎರಡು ದಿನಗಳ ಗುಂಡಿನ ಚಕಮಕಿಯಲ್ಲಿ ವಿದ್ಯಾರ್ಥಿಗಳು ಮತ್ತು ಸೈನಿಕರೂ ಸೇರಿದಂತೆ ಬಲಿಯಾದವರ ಸಂಖ್ಯೆ 21ಕ್ಕೆ ಏರಿತು. ಸರ್ಕಾರದ ಆದೇಶದಂತೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶರಣಾಗತರಾದರು.

2007: ಪರಿಶಿಷ್ಟ ಪಂಗಡಗಳಿಗೆ ಅನುಕೂಲವಾಗುವ ಕರ್ನಾಟಕದ ಮಹತ್ವಾಕಾಂಕ್ಷಿ `ಸುವರ್ಣ ಸಂಕಲ್ಪ' ಯೋಜನೆಗೆ ತುಮಕೂರು ಜಿಲ್ಲೆಯ ಬೆಳ್ಳಾವೆ ವಿಧಾನಸಭಾ ಕ್ಷೇತ್ರದ ಬುಳ್ಳಸಂದ್ರ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. ತಮ್ಮದೇ ಆದ ಜಮೀನು ಹೊಂದಿರುವ ಪರಿಶಿಷ್ಟ ವರ್ಗದ ಕುಟುಂಬಗಳಿಗೆ ವಿಶೇಷ ಕೇಂದ್ರೀಯ ಸಹಾಯಧನದಡಿ ತುಮಕೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮುಂಬರುವ 5- 6 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಯೋಜನೆ ಅನುಷ್ಠಾನಕ್ಕೆ ಬರುವುದು. ಬೈಫ್ ಸಂಸ್ಥೆಯು ಯೋಜನೆಯ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿ.

2006: ಗಿನ್ನೆಸ್ ದಾಖಲೆ ಪುಸ್ತಕದ ವೆಬ್ಸೈಟಿನಲ್ಲಿ ಮ್ಯಾರಥಾನ್ ಉಪನ್ಯಾಸದ `ಗಿನ್ನೆಸ್ ದಾಖಲೆ'ಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕ ಅಣ್ಣಯ್ಯ ರಮೇಶ್ ಅವರ ಹೆಸರು ದಾಖಲಾಯಿತು. 98 ಗಂಟೆ 30 ನಿಮಿಷಗಳ ಕಾಲ ನಿರಂತರ ಉಪನ್ಯಾಸ ನೀಡಿ `ಗಿನ್ನೆಸ್ ದಾಖಲೆ' ಪುಸ್ತಕದಲ್ಲಿ ಅವರು ಸ್ಥಾನ ಗಿಟ್ಟಿಸಿದರು. ಮಾರ್ಚ್ 22ರಿಂದ 26ರವರೆಗೆ 98 ಗಂಟೆ, 32 ನಿಮಿಷ ಉಪನ್ಯಾಸ ನೀಡಿ ಗಿನ್ನೆಸ್ ಪುಸ್ತಕದ ದಾಖಲೆಗಾಗಿ ದಾಖಲೆ ಪತ್ರಗಳನ್ನು ಕಳುಹಿಸಿದ್ದರು. ಈ ಹಿಂದೆ ಆಂಧ್ರ ಪ್ರದೇಶದ ಶಿವಶಂಕರ್ ಹೆಸರಿನಲ್ಲಿ ಈ ದಾಖಲೆ (72 ಗಂಟೆ 9 ನಿಮಿಷ) ಇತ್ತು.

2006: ಪೀಠಾಧಿಪತಿ ಶ್ರೀ ಸುಶಮೀಂದ್ರ ತೀರ್ಥರು ದಿಢೀರ್ ಅಸ್ವಸ್ಥರಾದ ಹಿನ್ನೆಲೆಯ್ಲಲಿ ಸುಯತೀಂದ್ರ ತೀರ್ಥರು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ 39ನೇ ಪೀಠಾಧಿಕಾರಿಯಾಗಿ ಪದಗ್ರಹಣ ಮಾಡಿದರು.

2006: ಸತತ ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಮುಂಬೈ ತತ್ತರಿಸಿತು. ಮತ್ತೆ 7 ಮಂದಿ ಅಸು ನೀಗಿದರು.

1902: ಸ್ವಾಮಿ ವಿವೇಕಾನಂದ ಅವರು ಈ ದಿನ ನಿಧನರಾದರು.

1952: ಸುಶೀಲಾದೇವಿ ಆರ್. ರಾವ್ ಜನನ

1936: ಎಂ.ಸಿ. ಅಂಟಿನ ಜನನ.

1930: ಸರೋಜಿನಿ ಶಿಂತ್ರಿ ಜನನ.

1927: ಗೀತಾ ಕುಲಕರ್ಣಿ ಜನನ.

1904: ಹಳ್ಳಿಯ ಬದುಕಿನ ಯಥಾವತ್ ಚಿತ್ರ ನೀಡುವುದರ್ಲಲಿ ನಿಸ್ಸೀಮರಾಗಿದ್ದ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಶ್ರೀನಿವಾಸ ಅಯ್ಯಂಗಾರ್- ಲಕ್ಷ್ಮಮ್ಮ ದಂಪತಿಯ ಪುತ್ರನಾಗಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು. 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಗೊರೂರು 1991ರ ಸೆಪ್ಟೆಂಬರ್ 28ರಂದು ನಿಧನರಾದರು.

1904: ಖ್ಯಾತ ಸಾಹಿತಿ ಸಿದ್ದವನಹಳ್ಳಿ ಕೃಷ್ಣ ಶರ್ಮ ಜನನ.

1898: ಗುಲ್ಜಾರಿಲಾಲ್ ನಂದಾ ಜನನ.

No comments:

Post a Comment