Wednesday, July 11, 2018

ಇಂದಿನ ಇತಿಹಾಸ History Today ಜುಲೈ 11

ಇಂದಿನ ಇತಿಹಾಸ History Today ಜುಲೈ 11

2018: ಪ್ಯಾರಿಸ್: ಭಾರತ ಜಗತ್ತಿನ ೬ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಈ ವರೆಗೆ ಆ ಸ್ಥಾನದಲ್ಲಿದ್ದ ಫ್ರಾನ್ಸ್ ೭ನೇ ಸ್ಥಾನಕ್ಕೆ ಕುಸಿದಿದೆ ಎಂದು ೨೦೧೭ರ ವಿಶ್ವಬ್ಯಾಂಕ್ ವರದಿ ತಿಳಿಸಿತು. ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ೨.೫೯೭ ಟ್ರಿಲಿಯನ್ (೨೫,೯೭,೦೦೦ ಕೋಟಿ) ಡಾಲರ್‌ಗಳಿಗೆ ಏರಿದೆ. ಇದೇ ಅವಧಿಯಲ್ಲಿ ಫ್ರಾನ್ಸ್‌ನ ಜಿಡಿಪಿ ೨.೫೮೨ ಟ್ರಿಲಿಯನ್ ಡಾಲರ್‌ಗಳು ಎಂದು ವಿಶ್ವಬ್ಯಾಂಕ್ ವರದಿ ಹೇಳಿತು. ಭಾರತದ ಜನಸಂಖ್ಯೆ ೧೩೪ ಕೋಟಿಯಾಗಿದ್ದರೆ, ಫ್ರಾನ್ಸ್‌ನ ಜನಸಂಖ್ಯೆ ಕೇವಲ ೬.೭ ಕೋಟಿ ಆಗಿದೆ. ಹೀಗಾಗಿ ಭಾರತದ ತಲಾ ಜಿಡಿಪಿಗೆ ಹೋಲಿಸಿದರೆ ಫ್ರಾನ್ಸ್‌ನ ತಲಾವಾರು ಜಿಡಿಪಿ ೨೦ ಪಟ್ಟು ಹೆಚ್ಚು ಎಂದು ವಿಶ್ವಬ್ಯಾಂಕ್  ತಿಳಿಸಿತು. ಕಳೆದ ವರ್ಷ ಉತ್ಪಾದನೆ ಹಾಗೂ ಗ್ರಾಹಕ ವೆಚ್ಚಗಳು ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣಗಳು. ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಿದ ಬಳಿಕವೂ ಭಾರತದ ಅಭಿವೃದ್ಧಿ ವೇಗ ಪಡೆದುಕೊಂಡಿದೆ.  ಕಳೆದ ಒಂದು ದಶಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದ್ವಿಗುಣಗೊಂಡಿದೆ. ಏಷ್ಯಾ ಖಂಡದಲ್ಲಿ ಚೀನಾದ ಆರ್ಥಿಕ ಬೆಳವಣಿಗೆ ಮಂದಗತಿಗೆ ಇಳಿದಿದ್ದರೆ, ಭಾರತದ ಬೆಳವಣಿಗೆ ವೇಗವಾಗಿ ವೃದ್ಧಿಸುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಇದೇ ರೀತಿಯ ವರದಿ ನೀಡಿದೆ. ಭಾರತದ ಆರ್ಥಿಕತೆ ಈ ವರ್ಷ ಶೇ ೭.೪ರ ಬೆಳವಣಿಗೆ ಕಾಣಲಿದ್ದು, ೨೦೧೯ರಲ್ಲಿ ಶೇ ೭.೮ಕ್ಕೆ ಏರಲಿದೆ. ಗೃಹ ವೆಚ್ಚಗಳು ಮತ್ತು ತೆರಿಗೆ ಸುಧಾರಣೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಐಎಂಎಫ್ ತಿಳಿಸಿತು. ಲಂಡನ್ ಮೂಲದ ಸೆಂಟರ್ ಫಾರ್ ಎಕನಾಮಿಕ್ಸ್ ಅಂಡ್ ಬಿಸಿನೆಸ್ ರೀಸರ್ಚ್ ಪ್ರಕಾರ, ಭಾರತದ ಅರ್ಥವ್ಯವಸ್ಥೆಯ ಬೆಳಗವಣಿಗೆ ಈ ವರ್ಷವೇ ಬ್ರಿಟನ್ ಮತ್ತು ಫ್ರಾನ್ಸನ್ನು ಮೀರಿಸಲಿದೆ. ಇದೇ ಬೆಳವಣಿಗೆಯನ್ನು ಕಾಯ್ದುಕೊಂಡರೆ ೨೦೩೨ರ ವೇಳೆಗೆ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಈ ಸಂಸ್ಥೆ ಭವಿಷ್ಯ ನುಡಿಯಿತು.  ಸದ್ಯಕ್ಕೆ ಜಗತ್ತಿನ ಐದು ಬೃಹತ್ ಅರ್ಥವ್ಯವಸ್ಥೆಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಉಳಿದ ಸ್ಥಾನಗಳನ್ನು ಕ್ರಮವಾಗಿ ಬ್ರಿಟನ್, ಚೀನಾ, ಜಪಾನ್, ಜರ್ಮನಿ ಹಂಚಿಕೊಂಡಿವೆ. ಭಾರತ ಆರನೆಯ ಹಾಗೂ ಫ್ರಾನ್ಸ್ ೭ನೆಯ ಸ್ಥಾನದಲ್ಲಿವೆ.  ಕಳೆದ ವರ್ಷ ಉತ್ಪಾದನೆ ಮತ್ತು ಬಳಕೆದಾರರ ಖರ್ಚು ಭಾರತದ ಆರ್ಥಿಕತೆಯನ್ನು ಬಲಿಷ್ಠ ಗೊಳಿಸಿದ್ದವು; ಆದರೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಅನುಷ್ಠಾನದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆಯ ವೇಗ ಕುಂಠಿತಗೊಂಡಿತು ಎಂದು ವಿಶ್ವ ಬ್ಯಾಂಕ್ ಹೇಳಿತು.

2018: ನವದೆಹಲಿ: ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೭೭ರ ಸಿಂಧುತ್ವ ಕುರಿತು ನಿಲುವು ತೆಗೆದುಕೊಳ್ಳಲು  ನಿರಾಕರಿಸಿದ ಕೇಂದ್ರ ಸರ್ಕಾರವು ಇದನ್ನು ಸುಪ್ರೀಂಕೋರ್ಟಿನ ವಿವೇಚನೆಗೆ ಬಿಟ್ಟು ಬಿಡುವುದಾಗಿ ಹೇಳಿತು. ಈ ವಿಧಿಯ ವಿರುದ್ಧ ತಾನು ಸೆಣಸುವುದಿಲ್ಲ ಎಂದೂ ಸರ್ಕಾರ ಹೇಳಿತು. ಇದು ಸರ್ಕಾರದ ಹಿಂದಿನ ನಿಲುವಿಗೆ ನೀಡಿದ ವಿದಾಯವಾಗಿದ್ದು, ಹಿಂದೆ ಸರ್ಕಾರವು ತಾನು ಸಲಿಂಗರತಿ ಬಾಂಧವ್ಯಗಳ ಅಪರಾಧೀಕರಣವನ್ನು ಬೆಂಬಲಿಸುವುದಾಗಿ ಹೇಳಿತ್ತು.  ಸೆಕ್ಷನ್ ೩೭೭ರ ಸಾಂವಿಧಾನಿಕತೆಯು ವಯಸ್ಕ ವ್ಯಕ್ತಿಗಳು ಖಾಸಗಿಯಾಗಿ ನಡೆಸುವ ಸಹಮತದ ಕೃತ್ಯಗಳಿಗೆ ಅನ್ವಯವಾಗುತ್ತಿತ್ತು. ಇದೀಗ ಭಾರತ ಸರ್ಕಾರವು ಈ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಟ್ಟು ಬಿಡುವುದು ಎಂದು ಕೇಂದ್ರವು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರವು ಹೇಳಿದೆ. ಏನಿದ್ದರೂ ಪ್ರಾಣಿಗಳೊಂದಿಗೆ ಸಂಭೋಗದಂತಹ ಅಪರಾಧ ಅಥವಾ ಪಾಶವೀಕೃತ್ಯ ಇಲ್ಲವೇ ಅಸಭ್ಯತೆ ಬಗ್ಗೆ ಸ್ಪಷ್ಟನೆ ಬೇಕು ಎಂದು ಅದು ನ್ಯಾಯಾಲಯವನ್ನು ಕೋರಿತು. ನಾಗರಿಕ ಹಕ್ಕು - ಬಾಧ್ಯತೆಗಳನ್ನು ಪರಿಶೀಲಿಸಲು ನ್ಯಾಯಾಲಯ ನಿರ್ಧರಿಸಿದರೆ, ವಿವರವಾದ ಉತ್ತರ ಸಲ್ಲಿಸಲು ತಾನು ಸಿದ್ಧ ಎಂದು ಸರ್ಕಾರ ತಿಳಿಸಿತು.  ‘ನಾಗರಿಕ ಹಕ್ಕುಗಳು, ಉತ್ತರಾಧಿಕಾರತ್ವ, ವೈವಾಹಿಕ ಹಕ್ಕುಗಳು ಇತ್ಯಾದಿಗಳ ಮೇಲೆ ಪರಿಣಾಮ ಬೀರುವಂತಹ ಯಾವುದೇ ವಿಚಾರವನ್ನೂ ಹೇಳಬೇಡಿ ಎಂದು ಎಎಸ್ ಜಿ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿದರು.  ‘ನಿಸರ್ಗ ವ್ಯವಸ್ಥೆಗೆ ವಿರುದ್ಧವಾಗಿ ಯಾರಾದರೂ ಸ್ವ ಇಚ್ಛೆಯಿಂದ ಯಾರೇ ಪುರುಷ, ಮಹಿಳೆ ಅಥವಾ ಪ್ರಾಣಿ ಜೊತೆಗೆ ಅಸ್ವಾಭಾವಿಕ ಸಂಭೋಗ ನಡೆಸಿದರೆ ಅಂತಹ ವ್ಯಕ್ತಿಯನ್ನು (ಜೀವಾವಧಿ ಸಜೆ) ಅಥವಾ ೧೦ ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಸೆರೆವಾಸದ ಶಿಕ್ಷೆಗೆ ಗುರಿಪಡಿಸಬಹುದು ಮತ್ತು ದಂಡಕ್ಕೂ ಆತ ಅರ್ಹ ಎಂದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೭೭ ಹೇಳುತ್ತದೆ.  ಅತ್ಯಂತ ಹಳೆಯದಾದ ಈ ಬ್ರಿಟಿಷ್ ಕಾನೂನು ೧೮೬೧ರಷ್ಟು ಹಳೆಯದಾಗಿದ್ದು, ನಿಸರ್ಗ ವ್ಯವಸ್ಥೆಗೆ ವಿರುದ್ಧವಾದ ಲೈಂಗಿಕ ಚಟುವಟಿಕೆಗಳನ್ನು ಅಪರಾಧೀಕರಣಗೊಳಿಸುತ್ತದೆ.  ಹಾದರ ಇಲ್ಲವೇ ರಕ್ತಸಂಬಂಧಿಗಳ ನಡುವಿನ ಲೈಂಗಿಕತೆಯಂತಹ ಬಾಂಧವ್ಯಗಳನ್ನು ಮತ್ತು ಪಾಶವೀ ವರ್ತನೆಗಳನ್ನು ವಿಚಾರಣಾ ಕಲಾಪದಿಂದ ಹೊರಗಿಡಬೇಕು ಎಂದೂ ಕೇಂದ್ರ ಮನವಿ ಮಾಡಿತು. ಈ ಅರ್ಜಿಗಳ ವ್ಯಾಪ್ತಿಯನ್ನು ವಿಸ್ತರಿಸಬಾರದು ಎಂದೂ ಎಎಸ್ಜಿ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿದರು.  ಸರ್ಕಾರವು ಸೆಕ್ಷನ್ ೩೭೭ನ್ನು ಬೆಂಬಲಿಸುತ್ತದೆ ಮತ್ತು ಅದನ್ನು ರದ್ದು ಪಡಿಸುವುದನ್ನು ವಿರೋಧಿಸುತ್ತದೆ ಎಂಬುದಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಸುಳಿವು ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ನಾನು ಕ್ಯುರೇಟಿವ್ (ಅರ್ಜಿ) ಸಲುವಾಗಿ ಹಾಜರಾಗಿದ್ದೇನೆ. ಸರ್ಕಾರದ ನಿಲುವು ಭಿನ್ನವಾಗಿದೆ ಎಂದು ನನಗೆ ಹೇಳಲಾಗಿದೆ. ಆದ್ದರಿಂದ ನಾನು ಪ್ರಕರಣದಲ್ಲಿ ಹಾಜರಾಗುತ್ತಿಲ್ಲ. ಭಾರತ ಸರ್ಕಾರ ಬೇರೆಯೇ ನಿಲುವನ್ನು ಹೊಂದಿರುವಂತೆ ಕಾಣಿಸುತ್ತಿರುವುದರಿಂದ ನಾನು ಹಾಜರಾಗಲಾರೆ ಎಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ೨೦೧೨ರಲ್ಲಿ ತಾನೇ ನೀಡಿದ್ದ ಆದೇಶದ ಮರುಪರಿಶೀಲನೆಯನ್ನು ಮಂಗಳವಾರ ಆರಂಭಿಸಿತ್ತು. ೨೦೧೨ರ ಸುಪ್ರೀಂಕೋರ್ಟ್ ತೀರ್ಪು ಸಲಿಂಗ ಕಾಮವನ್ನು ಅಪರಾಧವನ್ನಾಗಿ ಮಾಡಿತ್ತು. ಈ ಪುರಾತನ, ಸಾಮ್ರಾಜ್ಯಶಾಹಿ ಕಾನೂನಿನ ವಿಧಿಯನ್ನು ರದ್ದು ಪಡಿಸಲಾಗುವುದು ಎಂದು ಇಡಿಯ ಎಲ್ ಜಿಬಿಟಿಕ್ಯೂ ಸಮುದಾಯ ಈಗ ಹಾರೈಸಿದೆ. ಯಾರೇ ಪುರುಷ, ಮಹಿಳೆ ಅಥವಾ ಪ್ರಾಣಿ ಜೊತೆ ನಡೆಸುವ ನಿಸರ್ಗ ವ್ಯವಸ್ಥೆಗೆ ವಿರುದ್ಧವಾದ ವಿಷಯಲೋಲುಪತೆಯ ರತಿಕ್ರಿಯೆಯನ್ನು ನಿಷೇಧಿಸುವ ಸೆಕ್ಷನ್ ೩೭೭ ಸಂವಿಧಾನಬಾಹಿರ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು.  ಸೆಕ್ಷನ್ ೩೭೭ನ್ನು ಸಮರ್ಥಸಿದವರಲ್ಲಿ ಎಜಿ ವೇಣುಗೋಪಾಲ್ ಅವರೇ ಮೊದಲಿಗರಲ್ಲ. ಹಿಂದಿನ ಇಬ್ಬರು ಅಟಾರ್ನಿ ಜನರಲ್ ಗಳಾದ ಮುಕುಲ್ ರೋಹ್ಟಗಿ ಮತ್ತು ಗೂಲಂ ವಹನ್ವತಿ ಕೂಡಾ ಇದೇ ನಿಲುವು ತಾಳಿದ್ದರು. ೨೦೧೨ರಲ್ಲಿ ವಹನ್ವತಿ ಅವರು ’ನನ್ನ ಪ್ರಜ್ಞೆಯು ಹಾಗೆ ಮಾಡಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರು. ಬಳಿಕ ಅವರು ಸ್ವತಂತ್ರವಾಗಿ ನ್ಯಾಯಾಲಯಕ್ಕೆ ಸಹಾಯಕರಾಗಿ (ಅಮಿಕಸ್) ನೆರವಾಗಿದ್ದರು.

2018: ಮಾಲೌತ್: ಒಂದು ನಿರ್ದಿಷ್ಟ ಕುಟುಂಬದ ಹಿತಾಸಕ್ತಿ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷವು ರೈತರನ್ನು ವೋಟ್ ಬ್ಯಾಂಕ್ ಆಗಿ ಬಳಸಿತು ಮತ್ತು ರೈತ ಸಮುದಾಯಕ್ಕೆ ದ್ರೋಹ ಬಗೆಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ‘ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ನೀತಿಗಳ ಪರಿಣಾಮವಾಗಿ ಕಠಿಣ ಶ್ರಮದ ಹೊರತಾಗಿಯೂ ರೈತರು ಆರಾಮದಾಯಕ ಬದುಕು ಸಾಗಿಸುವ ಬಗ್ಗೆ ಯೋಚಿಸಲೂ ಸಾಧ್ಯವಿರಲಿಲ್ಲ. ದಶಕಗಳ ಕಾಲ ಅವರು ಭ್ರಮ ನಿರಸನ ಮತ್ತು ನಿರಾಶೆಯಲ್ಲೇ ಬದುಕಬೇಕಾಯಿತು ಎಂದು ಮೋದಿ ನುಡಿದರು.  ಗಾಂಧಿ ಕುಟುಂಬದ ವಿರುದ್ಧ ಪ್ರಖರ ದಾಳಿ ನಡೆಸಿದ ಪ್ರಧಾನಿ, ’ಕಾಂಗ್ರೆಸ್ಸಿಗೆ ಏನಾದರೂ ಚಿಂತೆ ಇದ್ದಿದ್ದರೆ, ಅದು ನಿರ್ದಿಷ್ಟವಾಗಿ ಒಂದು ಕುಟುಂಬದ ಬಗ್ಗೆ ಇದ್ದಂತಹ ಚಿಂತೆ ಮತ್ತು ಆ ಕುಟುಂಬದ ಜೀವನವನ್ನು ಹೇಗೆ ಆರಾಮದಾಯಕವನ್ನಾಗಿ ಮಾಡುವುದು ಎಂಬ ಚಿಂತೆ ಮಾತ್ರ ಎಂದು ಹೇಳಿದರು. ‘ವರ್ಷಾನುಗಟ್ಟಲೆ ಕಾಲ ನೀವು ಮಾಡಿದ ವೆಚ್ಚಗಳ ಮೇಲೆ ನಿಮಗೆ ಶೇಕಡಾ ೧೦ರಷ್ಟ ಮಾತ್ರ ಲಾಭ ಏಕೆ ಒದಗಿಸಲಾಯಿತು ಎಂಬುದು ನನಗೆ ಗೊತ್ತಿದೆ. ಇದರ ಹಿಂದಿನ ಉದ್ದೇಶವೇನಿತ್ತು ಎಂಬುದು ನನಗೆ ತಿಳಿದಿದೆ. ರೈತರು ನಮ್ಮ ದೇಶದ ಆತ್ಮ. ಅವರು ನಮ್ಮ ’ಅನ್ನದಾತರು. ಆದರೆ ಕಾಂಗ್ರೆಸ್ ಯಾವಾಗಲೂ ಅವರಿಗೆ ದ್ರೋಹ ಎಸಗಿತು ಮತ್ತು ಅವರಿಗೆ ಸುಳ್ಳುಗಳನ್ನು ಹೇಳಿತು. ಕಾಂಗ್ರೆಸ್ ಅವರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿತು ಎಂದು ಪ್ರಧಾನಿ ರೈತರ ರ್‍ಯಾಲಿಯಲ್ಲಿ ನುಡಿದರು.  ಈ ಸ್ಥಿತಿಗತಿಯ ಚಿತ್ರಣವನ್ನು ಬದಲಿಸುವ ಸಲುವಾಗಿ ಕೇಂದ್ರದಲ್ಲಿನ ಎನ್ ಡಿಎ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರವು ಮುಂಗಾರು ಬೆಳೆಗಳಿಗೆ ಇತ್ತೀಚೆಗೆ ಅಭೂತಪೂರ್ವ ಪ್ರಮಾಣದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿದ ಹಿನ್ನೆಲೆಯಲ್ಲಿ ಈದಿನದ ಬೃಹತ್ ರೈತ ಸಭೆಯನ್ನು ಸಂಘಟಿಸಲಾಗಿತ್ತು.  ‘ಕಿಸಾನ್ ಕಲ್ಯಾಣ ಸಭೆಯಲ್ಲಿ’  ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್, ಪಂಜಾಬ್ ಮಾಜಿ ಮುಖ್ಯುಮಂತ್ರಿ ಪ್ರಕಾಶ್ ಸಿಂಗ್ ಬಾದಲ್,  ಸಂಯುಕ್ತ ಅಕಾಲಿ ದಳ (ಎಸ್ ಎಡಿ) ಮುಖ್ಯಸ್ಥ ಸುಖ್ ಬೀರ್ ಸಿಂಗ್ ಬಾದಲ್, ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ಸೇರಿದಂತೆ ಎಸ್ ಎಡಿ ಮತ್ತು ಬಿಜೆಪಿಯ ಹಲವಾರು ನಾಯಕರು ಪಾಲ್ಗೊಂಡಿದ್ದರು.  ಪಂಜಾಬ್ ಮತ್ತು ನೆರೆಯ ಹರಿಯಾಣ ಹಾಗೂ ರಾಜಸ್ಥಾನದ ವಿವಿಧ ಭಾಗಗಳಿಂದ ಬಂದಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ’ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದಾಖಲೆ ಉತ್ಪಾದನೆಯೊಂದಿಗೆ ನೀವು ಹಸಿರು ತುಂಬುತ್ತಿರುವ ಪರಿಗಾಗಿ ನಾನು ನಿಮಗೆ ಶಿರಬಾಗುತ್ತೇನೆ. ಗೋದಿ ಇರಲಿ, ಬತ್ತ ಇರಲಿ, ಹತ್ತಿ ಇರಲಿ, ಸಕ್ಕರೆ ಅಥವಾ ದ್ವಿದಳ ಧಾನ್ಯಗಳೇ ಇರಲಿ ಹಿಂದಿನ ಎಲ್ಲ ದಾಖಲೆಗಳನ್ನು ನೀವು ಮುರಿದಿದ್ದೀರಿ. ಈಗ ಕೂಡಾ ಹೊಸ ದಾಖಲೆ ಸೃಷ್ಟಿಗೆ ಸಜ್ಜಾಗಿದ್ದೀರಿ. ಈ ಬಗ್ಗೆ ಈಗಾಗಲೇ ಮುನ್ಸೂಚನೆಗಳು ಬಂದಿವೆ ಎಂದು ಹೇಳಿದರು.  ನನ್ನ ಪ್ರೀತಿಯ ರೈತ ಸಹೋದರ, ಸಹೋದರಿಯರೇ, ಎಂತಹುದೇ ಪರಿಸ್ಥಿತಿ ಇದ್ದರೂ ನೀವು ಅತ್ಯಂತ ಕಠಿಣ ಶ್ರಮ ವಹಿಸಿದ್ದೀರಿ. ಆದರೆ ಇಷ್ಟೊಂದು ಕಠಿಣ ಶ್ರiದ ಹೊರತಾಗಿಯೂ ದಶಕಗಳ ಕಾಲ ನಿಮ್ಮ ಬದುಕು ಭ್ರಮನಿರಸನ ಮತ್ತು ನಿರಾಸೆಯಿಂದಲೇ ಕೂಡಿತ್ತು. ಕಳೆದ ೭೦ ವರ್ಷಗಳಲ್ಲಿನ ಈ ಪರಿಸ್ಥಿತಿಗೆ ಕಾರಣ ನಿಮ್ಮ ಪರಿಸ್ಥಿತಿ ಸುಧಾರಣೆಗಾಗಿ ಯಾರಿಗೆ ಹೊಣೆಗಾರಿಕೆ ವಹಿಸಲಾಗಿತ್ತೋ ಅವರು ನಿಮ್ಮ ಬದುಕಿನ ಗುಣಮಟ್ಟ ಸುಧಾರಣೆಗಾಗಿ ಶ್ರಮಿಸದೇ ಇದ್ದುದು, ನಿಮ್ಮ ಕಠಿಣ ಶ್ರಮಕ್ಕೆ ಅವರು ಸೂಕ್ತ ಗೌರವ ಕೊಡದೇ ಇದ್ದುದು. ರೈತರಿಗೆ ಕೇವಲ ಭರವಸೆಗಳನ್ನು ನೀಡಲಾಯಿತು. ೭೦ ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ಸಿಗೆ ಏನಾದರೂ ಚಿಂತೆ ಇದ್ದಿದ್ದರೆ ಅದು ನಿರ್ದಿಷ್ಟ ಕುಟುಂಬದ ಏಳ್ಗೆಯ ಚಿಂತೆ ಮಾತ್ರ ಎಂದು ಪ್ರಧಾನಿ ನುಡಿದರು.  ‘ರೈತರಿಗಾಗಿ ಅವರು ಹಲವಾರು ಘೋಷಣೆಗಳನ್ನು ಮಾಡಿದರು. ಆದರೆ ಕಾಂಗ್ರೆಸ್ ಕಂಡದ್ದು ಒಂದು ಕನಸನ್ನು ಮಾತ್ರ- ನಿರ್ದಿಷ್ಟ ಕುಟುಂಬ ಒಂದಕ್ಕೆ ಅನುಕೂಲ ಮಾಡುವುದು ಹೇಗೆ ಎಂಬ ಕನಸು ಅದು. ಇಡಿ ರಾಷ್ಟ್ರಕ್ಕೆ ಈ ಸತ್ಯ ಗೊತ್ತಿದೆ ಎಂದು ಮೋದಿ ಹೇಳಿದರು.   ಕೆಲವು ಸಾಲುಗಳನ್ನು ಪಂಜಾಬಿಯಲ್ಲಿ ಮಾತನಾಡಿದ ಮೋದಿ ’ರಾಷ್ಟ್ರದ ಆಹಾರ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ಪಂಜಾಬ್ ಯಾವಾಗಲೂ ರಾಷ್ಟ್ರಕ್ಕೆ ಸ್ಫೂರ್ತಿ ತುಂಬಿದೆ ಎಂದು ನುಡಿದರು.
ಪಂಜಾಬ್, ರಾಜಸ್ಥಾನ ಮತ್ತು ಹರಿಯಾಣವನ್ನು ಮಾಲೌತ್ ಬೆಸೆದಿದೆ ಎಂದು ಪ್ರಧಾನಿ ನುಡಿದರು. ರಾಜಸ್ಥಾನದಿಂದಲೂ ಭಾರೀ ಸಂಖ್ಯೆಯಲ್ಲಿ ರೈತರು ಇಲ್ಲಿಗೆ ಬಂದಿರುವುದು ನನಗೆ ಸಂತಸವನ್ನು ತಂದಿದೆ. ಒಂದು ರೀತಿಯಲ್ಲಿ ಈದಿನ ಮಾಲೌತ್ ರೈತರ ಕುಂಭಮೇಳಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

2018: ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ ೭ರಂದು ಉದ್ಘಾಟಿಸಿದ ಕೇಂದ್ರೀಯ ಕಲ್ಯಾಣ ಕಾರ್ಯಕ್ರಮದ ಮಹಿಳಾ ಫಲಾನುಭವಿಯೊಬ್ಬರು ಅದೇ ದಿನ ರಾಷ್ಟ್ರೀಯ ಹೆದ್ದಾರಿ ೮ರಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಡಂಗರಪುರ ನಿವಾಸಿಯಾಧ ನಂದಿ ಬಾಯಿ ಅವರು ಜೈಪುರದಲ್ಲಿ ಜುಲೈ ೭ರಂದು ನಡೆದ ಪ್ರಧಾನಿಯವರ ಜನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು ಎಂದು ಡಂಗರಪುರ ಜಿಲ್ಲಾಧಿಕಾರಿ ರಾಜೇಂದ್ರ ಭಟ್ ಹೇಳಿದರು.  ನಂದಿ ಬಾಯಿ ಅವರು ಜೈಪುರದಿಂದ ಬಸ್ಸಿನ ಮೂಲಕ ವಾಪಸ್ ಹೊರಟಿದ್ದರು. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆಕೆಗೆ ಕೇಂದ್ರ ಸರ್ಕಾರದ ೧.೫ ಲಕ್ಷ ರೂಪಾಯಿ ನೆರವು ಲಭಿಸಿತ್ತು.  ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಯೇ ಎಂಬುದು ನಮಗೆ ಖಚಿತವಿಲ್ಲ. ಆಕೆಯ ಪುತ್ರ, ಭಾವ, ಭಾವನ ಮಗ ಆಕೆಯ ಜೊತೆಗಿದ್ದರು. ಅವರ ಪ್ರಕಾರ ಬಸ್ಸು ಆಹಾರಕ್ಕಾಗಿ ಧಾಬಾ ಒಂದರಲ್ಲಿ ನಿಂತಿತ್ತು. ಆದರೆ ಆಕೆಯ ಶವ ಅಲ್ಲಿಂದ ಮುಂದೆ ೪೮ ಕಿಮೀ ದೂರದಲ್ಲಿ ಪತ್ತೆಯಾಗಿದ್ದು, ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ಭಟ್ ನುಡಿದರು.  ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕುಟುಂಬಕ್ಕೆ ೨ ಲಕ್ಷ ರೂಪಾಯಿಗಳ ಪರಿಹಾರ ಪ್ರಕಟಿಸಿದರು ಎಂದು ಭಟ್ ಹೇಳಿದರು.  ಜುಲೈ ೯ರಂದು ತನ್ನ ತಾಯಿ ಕಣ್ಮರೆಯಾದ ಬಗ್ಗೆ ಮೃತಳ ಪುತ್ರ ಲಕ್ಷ್ಮಣ್ ಸಿಂಗ್ ಡಂಗರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಡಂಗರಪುರ ಸ್ಟೇಷನ್ ಹೌಸ್ ಅಧಿಕಾರಿ ಬೃಜೇಶ್ ಕುಮಾರ್ ಹೇಳಿದ್ದಾರೆ. ಅಜ್ಮೀರ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.  ಪೊಲೀಸರಿಗೆ ಮೃತಳ ಶವ ರಾಷ್ಟ್ರೀಯ ಹೆದ್ದಾರಿ ೮ರಲ್ಲಿ  ಜುಲೈ ೭ರಂದೇ ಲಭಿಸಿದ್ದು, ಗುರುತು ಪತ್ತೆಗಾಗಿ ತನಿಖೆ ಆರಂಭಿಸಲಾಗಿತ್ತು. ಜುಲೈ ೧೦ರಂದು ಆಕೆಯ ಪುತ್ರ ಲಕ್ಷ್ಮಣ್ ಸಿಂಗ್ ಪೊಲೀಸರನ್ನು ಸಂಪರ್ಕಿಸಿ ಶವದ ಗುರುತು ಪತ್ತೆ ಹಚ್ಚಿದರು.  ನಾವು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಒಪ್ಪಿಸಿದ್ದೇವೆ.  ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಅವರು ನುಡಿದರು.  ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷೆ ಅರ್ಚನಾ ಶರ್ಮ ಅವರು ’ಇಂತಹ ಫಲಾನುಭವಿಗಳ ಸುರಕ್ಷತೆ ಬಗ್ಗೆ ಖಾತರಿ ನೀಡಬೇಕಾದ್ದು ಸರ್ಕಾರದ ಹೊಣೆಗಾರಿಕೆ ಎಂದು ಹೇಳಿದರು. ’ಅಧಿಕಾರಿಗಳು ಇಂತಹ ಎಲ್ಲ ಸರ್ಕಾರಿ ಅತಿಥಿಗಳನ್ನು ಅವರವರ ಮನೆಗಳಿಗೆ ತಲುಪಿಸುವಂತಹ ಹೊಣೆಗಾರಿಕೆ ತೆಗೆದುಕೊಳ್ಳಬೇಕಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.

2018: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ ಸರ್ಕಾರ ರಚನೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ.  ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ಮತ್ತು ಹಿರಿಯ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ನಿರ್ಮಲ್ ಸಿಂಗ್ ಅವರು ಬುಧವಾರ ಸಂಜೆ ೪ ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಉನ್ನತ ಮೂಲಗಳು ತಿಳಿಸಿದವು. ತಿಂಗಳ ಒಳಗಾಗಿ ರಾಜ್ಯದಲ್ಲಿ ಮುಂದಿನ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವ ಸಾಧ್ಯತೆ ಕುರಿತ ಊಹಾಪೋಹಕ್ಕೆ ಈ ಭೇಟಿ ಇಂಬು ನೀಡಿತು. ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಿಜೆಪಿ ಕಾರ್‍ಯದರ್ಶಿ ರಾಮ್ ಮಾಧವ್ ಅವರು ಇದಕ್ಕೆ ಮುನ್ನ ಪ್ರಧಾನಿ ಮೋದಿ ಅವರ ಜೊತೆಗೆ ಸುದೀರ್ಘ ಮಾತುಕತೆ ನಡೆಸಿದ್ದರು ಎಂದು ಮೂಲಗಳು ಹೇಳಿದವು. ಮೋದಿ ಅವರ ಜೊತೆಗೆ ನಿರ್ಮಲ್ ಸಿಂಗ್ ಅವರ ಭೇಟಿಯು ಕಾಶ್ಮೀರದಲ್ಲಿ ಪಿಡಿಪಿ ಬಂಡುಕೋರರ ಬೆಂಬಲದೊಂದಿಗೆ ಹಿಂದು ಮುಖ್ಯಮಂತ್ರಿಯನ್ನು ನೇಮಿಸುವ ನಿಟ್ಟಿನಲ್ಲಿ ಬಿಜೆಪಿ ಅಡಿಯಿಟ್ಟಿದೆ ಎಂಬ ಊಹಾಪೋಹಗಳಿಗೆ ಬಲ ನೀಡಿತು. ಈ ವಿಚಾರವನ್ನು ಒಪ್ಪಿಕೊಳ್ಳಲು ಯಾರೂ ಇಚ್ಛಿಸುತ್ತಿಲ್ಲವಾದರೂ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕುತೂಹಲಕರ ವಿದ್ಯಮಾನಗಳು ಅಮರನಾಥ ಯಾತ್ರೆ ಸಂಪನ್ನವಾದ ಬಳಿಕ ಆಗಸ್ಟ್ ಕೊನೆಯಲ್ಲಿ ಬಿಜೆಪಿಯು ಸರ್ಕಾರ ರಚನೆಯನ್ನು ಪ್ರಕಟಿಸುವ ಸಾಧ್ಯತೆಗಳು ಕಂಡು ಬರುತ್ತಿವೆ.  ನವದೆಹಲಿ ಮತ್ತು ಶ್ರೀನಗರ ನಡುವಣ ಉನ್ನತ ನಾಯಕರ ಓಡಾಟ ಕೂಡಾ ಹೊಸ ಸರ್ಕಾರ ರಚನೆ ಸಾಧ್ಯತೆಯ ಬಗ್ಗೆ ಬೊಟ್ಟು ಮಾಡುತ್ತಿವೆ. ಪಿಡಿಪಿ ಜೊತೆಗಿನ ಮೈತ್ರಿ ಕಡಿದುಕೊಂಡ ೧೦ ದಿನಗಳ ಬಳಿಕ ಜೂನ್ ೨೭ರಂದು ಮಾಧವ್ ಅವರು ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜ್ಜದ್ ಲೋನ್ ಅವರ ಮನೆಯಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ತಾವು ಕುಳಿತ ಫೋಟೋ ಟ್ವೀಟ್ ಮಾಡಿದ್ದರು.  ನಾಲ್ಕು ದಿನಗಳ ಬಳಿಕ ಲೋನ್ ಅವರು ದೆಹಲಿಗೆ ತೆರಳಿದ್ದು, ಪ್ರಧಾನಿಯವರ ಜೊತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ವದಂತಿ ಹರಡಿತ್ತು. ಆದರೆ ಲೋನ್ ಅವರು ಟ್ವಿಟ್ಟರಿನಲ್ಲಿ ನೀಡಿದ ಹೇಳಿಕೆಯಲ್ಲಿ ಈ ವದಂತಿಯನ್ನು ನಿರಾಕರಿಸಿದ್ದರು.  ಜುಲೈ ೪ರಂದು ಕೇಂದ್ರ ಗೃಹ ಸಚಿವ ರಾಜನಾಥ್  ಸಿಂಗ್ ಅವರು ಎರಡು ದಿನಗಳ ಭೇಟಿಗಾಗಿ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆಗೆ ಶ್ರೀನಗರಕ್ಕೆ ಬಂದಿದ್ದರು.  ಆ ಬಳಿಕ ಮಾಧವ್ ಅವರು ಕಣಿವೆಗೆ ಇನ್ನೊಂದು ಭೇಟಿ ನೀಡಿದ್ದರು ಎಂದು ಹೇಳಲಾಯಿತು. ಪಿಡಿಪಿ ಬಂಡುಕೋರರ ಬೆಂಬಲ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನಾಯಕತ್ವ ವಿರುದ್ಧ ಬಹಿರಂಗವಾಗಿ ಬಂಡೆದ್ದಿರುವ ಪಿಡಿಪಿ ಶಾಸಕರಲ್ಲಿ ಒಬ್ಬರಾದ ಅಬಿದ್ ಅನ್ಸಾರಿ ಅವರು ’ಪಿಡಿಪಿ ಬಂಡುಕೋರರು ಬಿಜೆಪಿಯನ್ನು ಬೆಂಬಲಿಸುವ ಬಗ್ಗೆ ಗಂಭೀರವಾಗಿ ಪರಿಶೀಲಿಸುವರು ಎಂದು ಮಾಧ್ಯಮ ಒಂದಕ್ಕೆ ತಿಳಿಸಿದರು. ಪ್ರಭಾವಿ ಶಿಯಾ ನಾಯಕ ಇಮ್ರಾನ್ ಅನ್ಸಾರಿ ಅವರ ಚಿಕ್ಕಪ್ಪನಾಗಿರುವ ಅಬಿದ್ ಅನ್ಸಾರಿ ಅವರು ಮೆಹಬೂಬಾ ವಿರುದ್ಧ ಸಮರ ಘೋಷಿಸಿದ ಮೊದಲ ಪಿಡಿಪಿ ಶಾಸಕ. ಪಕ್ಷವು ವಿಭಜನೆಯ ಅಥವಾ ಪ್ರಮುಖ ಬದಲಾವಣೆಯ ದಾರಿಯಲ್ಲಿ ಸಾಗುತ್ತಿದೆ, ಯಾವುದೇ ಬೆಳವಣಿಗೆಯಾದರೂ ಮೆಹಬೂಬಾ ಅವರನ್ನು ಕಿತ್ತೊಗೆಯುವ ಇಲ್ಲವೇ ಹಿಡಿಯಷ್ಟು ಬೆಂಬಲಿಗರು ಅವರ ಬಳಿ ಉಳಿಯುವ ಸಾಧ್ಯತೆಗಳು ಹೆಚ್ಚು ಎಂದು  ಅವರು ಹೇಳಿದರು.  ಪ್ರಶ್ನೆ ಇರುವುದು ಸಂಖ್ಯೆಗಳದ್ದು. ಡಜನ್ ಶಾಸಕರು ಇದ್ದಾರೆ ಎಂಬುದು ನಮ್ಮ ನಂಬಕೆ. ಮೆಹಬೂಬಾಜಿ ಅವರಿಗೆ ಪಕ್ಷವನ್ನು ರಕ್ಷಿಸುವ ಮನಸ್ಸಿದ್ದರೆ ಅವರು ರಾಜೀನಾಮೆ ನೀಡಿ ಬೇರೆ ಯಾರಿಗಾದರೂ ನಾಯಕತ್ವವನ್ನು ವಹಿಸಬೇಕು, ಇಲ್ಲದೇ ಇದ್ದಲ್ಲಿ ನಾವು ನಮ್ಮ ದಾರಿಯಲ್ಲಿ ಸಾಗುತ್ತೇವೆ ಎಂದು ಅವರು ಹೇಳಿದರು. ಬಂಡುಕೋರರು ಬಿಜೆಪಿಯನ್ನು ಬೆಂಬಲಿಸುವರೇ ಎಂಬ ಪ್ರಶ್ನೆಗೆ ಅನ್ಸಾರಿ ’ಯಾಕಾಗಬಾರದು? ನಮ್ಮ ಬಳಿ ಸಂಖ್ಯೆ ಇದ್ದರೆ, ಬಹುಶಃ ನಾವು ಹಾಗೆಯೇ ಮಾಡಬಹುದು ಎಂದು ನನ್ನ ಅನಿಸಿಕೆ. ಸರ್ಕಾರ ರಚಿಸದೇ ಇರುವುದಕ್ಕೆ ಕಾರಣಗಳೇನಿಲ್ಲ. ರಾಜ್ಯ ಸರ್ಕಾರಕ್ಕೆ ಇನ್ನೂ ಎರಡು ವರ್ಷಗಳ ಅವಧಿ ಇದೆ ಎಂದು ಅವರು ನುಡಿದರು.


2018: ಲಖನೌ: ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಲ್ಲಿಸಲಾದ ಚಾರ್ಜ್‌ಶೀಟಿನಲ್ಲಿ    ಉತ್ತರ  ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ಅವರನ್ನು ಸಿಬಿಐ ಆರೋಪಿಯಾಗಿ ಹೆಸರಿಸಿತು. ಬಂಗೇರಮಾವು ಕ್ಷೇತ್ರದ ಶಾಸಕ ಸೆನೆಗರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅಪಹರಣ (ಸೆಕ್ಷನ್ ೩೬೩), ಅಪಹರಣ ಮತ್ತು ಬಾಲಕಿಗೆ ಪ್ರೇರೇಪಣೆ (ಸೆ.೩೬೬), ಅತ್ಯಾಚಾರಕ್ಕೆ ಶಿಕ್ಷೆ (ಸೆ.೩೭೬), ಕ್ರಿಮಿನಲ್ ಬೆದರಿಕೆ (ಸೆ.೫೦೬) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ (ಪೋಸ್ಕೋ) ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಯಿತು.

2017: ನವದೆಹಲಿ: ಹಿರಿಯ ಕ್ರಿಕೆಟಿಗ ರವಿಶಾಸ್ತ್ರಿ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ
ನೇಮಕ ಮಾಡಲಾಯಿತು. ಇದರೊಂದಿಗೆ ಕೆಲವು ದಿನಗಳಿಂದ ನಡೆದಿದ್ದ ಕೋಚ್ ನೇಮಕ ಪ್ರಹಸನಕ್ಕೆ ಬಿಸಿಸಿಐ ಮಂಗಳವಾರ ರಾತ್ರಿ ತೆರೆ ಎಳೆಯಿತು.  ಅಲ್ಲದೇ ಬೌಲಿಂಗ್ ಕೋಚ್ ಸ್ಥಾನಕ್ಕೆ ಜಹೀರ್ ಖಾನ್ ಅವರನ್ನು  ನೇಮಕ ಮಾಡಲಾಯಿತು. ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರು ಇರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯು ರವಿಶಾಸ್ತ್ರಿ ಮತ್ತು  ಜಹೀರ್ ಖಾನ್ ಅವರ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿತು. ‘ಸಿಎಸಿಯ ಶಿಫಾರಸಿನ ಮೇರೆಗೆ ರವಿಶಾಸ್ತ್ರಿ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಮತ್ತು ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ’ ಎಂದು  ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ  ಪ್ರಕಟಿಸಿದರು. ರವಿಶಾಸ್ತ್ರಿ ಅವರು 2007ರಲ್ಲಿ ಭಾರತ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದರು. 2014 ರಿಂದ 2016ರವರೆಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.   ಆ ಸಂದರ್ಭದಲ್ಲಿ ಭಾರತ ತಂಡವು ಏಕದಿನ ವಿಶ್ವಕಪ್ (2015) ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ (2016) ಸೆಮಿಫೈನಲ್ ಪ್ರವೇಶಿಸಿತ್ತು.  ಇದೀಗ 55 ವರ್ಷದ ರವಿಶಾಸ್ತ್ರಿ  ಅವರು    ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.  ಅವರು ಎರಡು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದ್ದಾರೆ.  ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು  ಕೂಡ ಶಾಸ್ತ್ರಿಯವರ ನೇಮಕಕ್ಕೆ ಹೆಚ್ಚು ಒಲವು ತೋರಿದ್ದರು. ಹೋದ ತಿಂಗಳು  ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ನಂತರ ಅನಿಲ್ ಕುಂಬ್ಳೆ ರಾಜೀನಾಮೆಯಿಂದಾಗಿ  ಮುಖ್ಯ ಕೋಚ್ ಹುದ್ದೆ ತೆರವಾಗಿತ್ತು. ಕೊಹ್ಲಿ ಮತ್ತು ಕುಂಬ್ಳೆಯವರ ನಡುವಣ ಭಿನ್ನಾಭಿಪ್ರಾಯ ವಿವಾದದ ರೂಪ ಪಡೆದಿತ್ತು.  ಅದರಿಂದಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡವು ಕೋಚ್ ಇಲ್ಲದೇ ತೆರಳಿತ್ತು.ಆ ನಂತರ ನೂತನ ಕೋಚ್ ನೇಮಕಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು.  ಹತ್ತು ಮಂದಿ ಹಿರಿಯ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್,  ಲಾಲ್‌ಚಂದ್ ರಜಪೂತ್, ಟಾಮ್ ಮೂಡಿ ಮತ್ತು ರಿಚರ್ಡ್ ಪೈಬಸ್ ಅವರನ್ನು ಸೋಮ ವಾರ ಸಂದರ್ಶನ ಮಾಡಲಾಗಿತ್ತು. ಏತನ್ಮಧ್ಯೆ ನೂತನ ಕೋಚ್ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಬಿಸಿಸಿಐ ಹೇಳಿತು.

2017: ಪಟ್ನಾ : ಬೇನಾಮಿ ಆಸ್ತಪಾಸ್ತಿ ಸಂಗ್ರಹಿಸಿದ ಆರೋಪದಿಂದ ಕಳಂಕಿತರಾಗಿರುವ ಬಿಹಾರ ಉಪ

ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಕ್ಕೆ ಜೆಡಿಯು ಮತ್ತು ಅದರ ನಾಯಕರಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ನಾಲ್ಕು ದಿನಗಳ ಗಡುವು ನೀಡಿದರು. ನಿತೀಶ್‌ ಕುಮಾರ್‌ ಅವರು ಈದಿನ ತಮ್ಮ ಜೆಡಿಯು ಪಕ್ಷದ ಸಂಸದರು, ಶಾಸಕರು ಮತ್ತು ಪಕ್ಷದ ಇತರ ಪದಾಧಿಕಾರಿಗಳ ಸಭೆಯನ್ನು ಕರೆದಿದ್ದರು. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಮತ್ತು ಅವರ ಕುಟುಂಬ ಸದಸ್ಯರ ಬೇನಾಮಿ ಆಸ್ತಿಪಾಸ್ತಿಗಳ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿರುವ ಕುರಿತು ಸಭೆ ವಿಶೇಷವಾಗಿ ಚರ್ಚಿಸಿತು. ಸಿಬಿಐ ಮತ್ತು ಇಡಿ ದಾಳಿಗಳ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಕಳಂಕಿತರಾಗಿರುವ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ಆರ್‌ಜೆಡಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ ಎಂದು ಸಭೆಯಲ್ಲಿ ನಿತೀಶ್‌ ಹೇಳಿರುವುದಾಗಿ ವರದಿಯಾಯಿತು. ತನ್ನ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತೇಜಸ್ವಿ ಯಾದವ್‌ ಅವರು ತಮ್ಮ ನಿಲುವೇನೆಂಬುದನ್ನು ವಿವರಿಸಬೇಕು ಅಥವಾ ಆ ಕುರಿತು ಸ್ಪಷ್ಟೀಕರಣ ನೀಡಬೇಕು ಎಂಬುದು ನಿತೀಶ್‌ ಅವರ ನಿಲುವು/ ಪಟ್ನಾ ಮತ್ತು ದಿಲ್ಲಿಯಲ್ಲಿ ಬೇನಾಮಿ ಆಸ್ತಿಪಾಸ್ತಿಗಳನ್ನು ಸಂಗ್ರಹಿಸಿರುವುದಕ್ಕಾಗಿ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌ ದಾಖಲಾಗಿದೆ.


2017: ಮೊಸುಲ್‌ : ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್‌ ಅಲ್‌ ಬಗ್ಧಾದಿ ಹತನಾಗಿರುವುದು ಖಚಿತ
ಎಂಬ ಬಗ್ಗೆ ತನಗೆ ದೃಢ ಮಾಹಿತಿ ಲಭಿಸಿದೆ ಎಂದು ಸಿರಿಯದ ಮಾನವ ಹಕ್ಕುಗಳ ವಿಚಕ್ಷಣ ಸಂಸ್ಥೆ ಹೇಳಿತು. ಸಿರಿಯದ ಹೊರವಲಯದಲ್ಲಿರುವ ರಕ್ಕಾ ನಗರದಲ್ಲಿ ಐಸಿಸ್‌ ಉಗ್ರ ಸಂಘಟನೆಯ ನಾಯಕರು ಸಭೆ ಸೇರಿದ್ದ ತಾಣದ ಮೇಲೆ ತಾನು ನಡೆಸಿದ ಬಾಂಬ್‌ ದಾಳಿಯಲ್ಲಿ ಬಗ್ಧಾದಿ ಹತನಾಗಿದ್ದಾನೆ ಎಂದು ಕಳೆದ ಜೂನ್‌ ತಿಂಗಳಲ್ಲಿ ರಶ್ಯದ ರಕ್ಷಣಾ ಸಚಿವಾಲಯ ಹೇಳಿತು. ಆದರೆ ಅಮೆರಿಕ, ಬಗ್ಧಾದಿ ಸತ್ತಿರುವುದು ತನಗೆ ದೃಢಪಟ್ಟಿಲ್ಲ ಎಂದು ಹೇಳಿತ್ತು. ಪಾಶ್ಚಾತ್ಯ ಮತ್ತು ಇರಾಕೀ ಅಧಿಕಾರಿಗಳು ಬಗ್ಧಾದಿಯ  ಸಾವಿನ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದರು. ಕಳೆದ ಮೇ ತಿಂಗಳಲ್ಲಿ ರಶ್ಯದ ವಾಯು ಪಡೆ ಸಿರಿಯದ ರಕ್ಕಾ ನಗರದ ಮೇಲೆ ನಡೆಸಿದ್ದ ವಾಯು ದಾಳಿಯಲ್ಲಿ ದಾಯೇಶ್‌ (ಐಸಿಸ್‌) ನಾಯಕ ಬಗ್ಧಾದಿ ಸತ್ತಿರುವ ಸಾಧ್ಯತೆಯೇ ಹೆಚ್ಚು ಎಂದು ರಶ್ಯ ವಾರಗಳ ಹಿಂದೆ ಪುನರುಚ್ಚರಿಸಿರುವುದನ್ನು ಅನಸರಿಸಿ ಇದೀಗ ಸಿರಿಯದ ಮಾನವ ಹಕ್ಕು ವಿಚಕ್ಷಣ ಸಂಸ್ಥೆ ಬಗ್ಧಾದಿಯ ಸಾವಿನ ಬಗ್ಗೆ  ತನಗೆ ದೃಢವಾದ ಮಾಹಿತಿಗಳು ಲಭಿಸಿವೆ ಎಂದು ಹೇಳಿತು.

2017: ಜಮ್ಮು–ಕಾಶ್ಮೀರ:
 ದೇಶದ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, 2–3
ಉಗ್ರರು ಸಿಲುಕಿರುವುದಾಗಿ ವರದಿಯಾಯಿತು.  ಜಮ್ಮು ಮತ್ತು ಕಾಶ್ಮೀರದ ಬುಡ್ಗಮ್‌ ಜಿಲ್ಲೆಯ ರೆಡ್ವೊರಾ ವಲಯದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಸುತ್ತುವರಿದು, ಗುಂಡಿನ ಚಕಮಕಿ ಮುಂದುವರಿಸಿತು. ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರು ಇದ್ದ ಬಸ್‌ನ ಮೇಲೆ ಹಿಂದಿನ ರಾತ್ರಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಗುಜರಾತ್‌ನ ಏಳು ಯಾತ್ರಾರ್ಥಿಗಳು ಮೃತರಾದರು, 



2008: ಧೂಮಪಾನದ ಮೇಲೆ ಇನ್ನಷ್ಟು ಕಟ್ಟಳೆ ಹೇರುವ ಸಲುವಾಗಿ, ಗಾಂಧಿ ಜಯಂತಿ ದಿನದಿಂದ (ಅಕ್ಟೋಬರ್ 2) ಅನ್ವಯವಾಗುವಂತೆ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ಕಟ್ಟಡಗಳ ಒಳಭಾಗದಲ್ಲಿ ಬೀಡಿ, ಸಿಗರೇಟ್ ಸೇದುವುದಕ್ಕೆ ನಿಷೇಧ ವಿಧಿಸುವುದಾಗಿ ಕೇಂದ್ರ ಸರ್ಕಾರವು ಪ್ರಕಟಿಸಿತು.

2007: 2006ರ ಜುಲೈ 11ರಂದು ನಡೆದ ಸರಣಿ ರೈಲು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಡೆಸಿದ ತನಿಖೆ ಕಾಲದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದ್ದ ಆರೋಪಿಯ ಹೇಳಿಕೆಯ ವಿಡಿಯೊ `ಸಿಡಿ' ಬಹಿರಂಗಗೊಂಡ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿತು. ವರ್ಷದ ಹಿಂದೆ ಇದೇ ದಿನ ಲಷ್ಕರ್-ಎ- ತೊಯ್ಬಾ ಸಂಘಟನೆಗೆ ಸೇರಿದ ಉಗ್ರರು ಮುಂಬೈ ಮಹಾನಗರದ ರೈಲುಗಳ ಏಳು ಬೋಗಿಗಳಲ್ಲಿ ಶಕ್ತಿಶಾಲಿ ಬಾಂಬುಗಳನ್ನು ಸ್ಫೋಟಿಸಿದಾಗ 187 ಪ್ರಯಾಣಿಕರು ಮೃತರಾಗಿ 812 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

2007: ಬೆಂಗಳೂರು ಮೂಲದ ಐ.ಟಿ. ಸಂಸ್ಥೆ ಇನ್ಫೋಸಿಸ್, 2007ರ ಸಾಲಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ರೂ 3773 ಕೋಟಿ ವಹಿವಾಟು ನಡೆಸಿ ರೂ 1,079 ಕೋಟಿ ನಿವ್ವಳ ಲಾಭ ಗಳಿಸಿ, ಶೇ 34.5ರಷ್ಟು ಏರಿಕೆ ದಾಖಲಿಸಿತು.

2007: ಪುಣೆಯಲ್ಲಿ ಮುಕ್ತಾಯವಾದ 104ನೇ ಆಗಾಖಾನ್ ಟ್ರೋಫಿ ಹಾಕಿ ಟೂರ್ನಿಯ ಹಿರಿಯರ ವಿಭಾಗದಲ್ಲಿ ವಿಕ್ರಮ್ ಪಿಳ್ಳೈ ಅಕಾಡೆಮಿ (ವಿಪಿಎ) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಪಿಎ ತಂಡವು 5-2 ಗೋಲುಗಳ ಅಂತರದಿಂದ ಫೈನಲ್ ಪಂದ್ಯದಲ್ಲಿ ಪುಣೆಯ ಕೇಂದ್ರ ರೈಲ್ವೆ ತಂಡವನ್ನು ಸೋಲಿಸಿತು.

2007: ಟೆನಿಸ್ ತಾರೆ, ಗ್ಲೋಬೋಸ್ಪೋರ್ಟ್ ಮುಖ್ಯಸ್ಥ ಮಹೇಶ್ ಭೂಪತಿ ಹಾಗೂ ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ ಫ್ರಾಸ್ಟ್ರಕ್ಚರ್ (ಎಪಿಐ) ನಿರ್ದೇಶಕ ಅನ್ಸಾಲ್ ನೇತೃತ್ವದ ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ ಫ್ರಾಸ್ಟ್ರಕ್ಚರ್ (ಎಪಿಐ) ಭಾರತದ ವಿವಿಧೆಡೆ 16 ಟೆನಿಸ್ ಅಕಾಡೆಮಿಗಳನ್ನು ತೆರೆಯುವ ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ ಈದಿನ ನವದೆಹಲಿಯಲ್ಲಿ ಸಹಿ ಹಾಕಿದರು. `ಮಹೇಶ್ ಭೂಪತಿ ಟೆನಿಸ್ ಅಕಾಡೆಮೀಸ್' (ಎಂಬಿಟಿಎ) ಹೆಸರಿನಲ್ಲಿ 16 ಅಕಾಡೆಮಿಗಳು ತಲೆಎತ್ತುವುವು.

2006: ಭಾರತದ ವಾಣಿಜ್ಯ ರಾಜಧಾನಿ ಮುಂಬೈಯ ಉಪನಗರ ರೈಲುಗಳಲ್ಲಿ ಈದಿನ ಸಂಜೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ 200ಕ್ಕೂ ಹೆಚ್ಚು ಜನ ಮೃತರಾಗಿ 500ಕ್ಕೂ ಹೆಚ್ಚು ಜನ ಗಾಯಗೊಂಡರು. ಸಂಜೆ 6ರಿಂದ 6.30ರ ಅವಧಿಯಲ್ಲಿ ಮಾತುಂಗ, ಖಾರ್, ಸಾಂತಾಕ್ರೂಜ್, ಜೋಗೇಶ್ವರಿ, ಬೊರಿವಿಲಿ, ಭಯಂದರಿನಲ್ಲಿ ರೈಲುಗಳ ಮೊದಲ ದರ್ಜೆ ಬೋಗಿಗಳಲ್ಲಿ ಈ ಬಾಂಬ್ ಸ್ಫೋಟಗಳು ಸಂಭವಿಸಿದವು.

2006: ಇರಾಕಿನಾದ್ಯಂತ ನಡೆದ ಬಾಂಬ್ ಮತ್ತು ಬಂದೂಕು ದಾಳಿಗಳಲ್ಲಿ 10 ಮಂದಿ ಶಿಯಾಗಳು ಸೇರಿ ಒಟ್ಟು 36 ಮಂದಿ ಮೃತರಾದರು.

2006: ಬಾಂಗ್ಲಾದೇಶದ ವಾಯವ್ಯ ಭಾಗದಲ್ಲಿ ರೈಲು-ಬಸ್ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಕನಿಷ್ಠ 33 ಪ್ರಯಾಣಿಕರು ಮೃತರಾಗಿ ಇತರ 35 ಮಂದಿ ಗಾಯಗೊಂಡರು.

1994: ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿತು. ಈಕೆ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ 1972ರಲ್ಲಿ ಸೇವೆಗೆ ಸೇರಿದವರು. 1949ರ ಜೂನ್ 9ರಂದು ಜನಿಸಿದ ಕಿರಣ್ ಅಮೃತಸರ, ಪಂಜಾಬ್ ಮತ್ತು ಭಾರತದ ಇತರ ಕಡೆಗಳಲ್ಲಿ ಪೊಲೀಸ್ ಇಲಾಖೆಗಳಲ್ಲಿ ಸೇವೆ ಮಾಡಿದ್ದಾರೆ. 2005ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯವು ಇವರಿಗೆ ಡಾಕ್ಟರ್ ಆಫ್ ಲಾ ಪದವಿ ನೀಡಿ ಗೌರವಿಸಿತು.

1948: ಮಿತ್ರಾ ವೆಂಕಟರಾಜ್ ಜನನ.

1937: ಕಥೆ, ಕಾದಂಬರಿಗಾರ್ತಿ, ಸಂಘಟಕಿ ಸುನೀತಿ ಉದ್ಯಾವರ ಅವರು ಶಾಂತಾ ರಾಮರಾವ್- ಸೀತಾಬಾಯಿ ದಂಪತಿಯ ಪುತ್ರಿಯಾಗಿ ಮಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಮನೆತನದಲ್ಲಿ ಜನಿಸಿದರು. ಮುಂಬೈ ವಿಶ್ವವಿದ್ಯಾಲಯಕ್ಕೆ `ಕಡೆಂಗೋಡ್ಲು ಶಂಕರ ಭಟ್ಟರ ಸೃಜನಶೀಲ ಪ್ರಕಟಿತ ಕೃತಿಗಳು' ಮಹಾಪ್ರಬಂಧ ಮಂಡಿಸಿ ಪಿ ಎಚ್ ಡಿ ಪಡೆದ ಅವರು ಕನ್ನಡ ವಿಭಾಗದಿಂದ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

1932: ಎಚ್. ಎ. ರಾಮಕೃಷ್ಣ ಜನನ.

1897: ಸಮಾಜ ಸುಧಾರಕ, ಸ್ವಾತಂತ್ರ್ಯ ಸೇನಾನಿ ಸಿಖ್ ನಾಥ್ ಬ್ಯಾನರ್ಜಿ ಜನನ.

1882: ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ ಬಾಬಾ ಕಾನ್ಷಿರಾಮ್ ಜನನ

No comments:

Post a Comment