Sunday, July 22, 2018

ಪೊಲೀಸ್ ಹತ್ಯೆಗೆ ಸೇಡು ತೀರಿಸಿದ ಸೇನೆ, 3 ಉಗ್ರರ ಹತ್ಯೆ


ಪೊಲೀಸ್ ಹತ್ಯೆಗೆ ಸೇಡು ತೀರಿಸಿದ ಸೇನೆ, 3 ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲಗಮ್ ಜಿಲ್ಲೆಯ ಖುದ್ವಾನಿಯ ವಾನಿ ಮೊಹಲ್ಲಾದಲ್ಲಿ ಭದ್ರತಾ ಪಡೆಗಳು 22 ಜುಲೈ 2018ರ ಭಾನುವಾರ ಭಾರೀ ಗುಂಡಿನ ಚಕಮಕಿ ನಡೆಸಿ ಮೂವರು ಉಗ್ರರನ್ನು ಬಲಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಹತ್ಯೆಗೀಡಾದ ಉಗ್ರರು ಸಿ.ಟಿ. ಮೊಹಮ್ಮದ್ ಸಲೀಂ ಎಂಬ ಪೊಲೀಸ್ ಪೇದೆಯನ್ನು ಅಪಹರಿಸಿ ಶನಿವಾರ ಹತ್ಯೆಗೈದಿದ್ದರು.

ಶಾ ಅವರು ರಜೆಯ ನಿಮಿತ್ತ ಮನೆಗೆ ಬಂದಿದ್ದಾಗ, ಜುಲೈ ೨೦ರ ಶುಕ್ರವಾರ ರಾತ್ರಿ ಅವರನ್ನು ಉಗ್ರಗಾಮಿಗಳು  ಅಪಹರಿಸಿದ್ದರು.

ಪೊಲೀಸ್ ಹತ್ಯೆ ಬಳಿಕ ಉಗ್ರಗಾಮಿಗಳ ಸುಳಿವನ್ನು ಅನುಸರಿಸಿ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಯೋಧರು, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ ಆರ್ ಪಿ ಎಫ್)  ಜಂಟಿಯಾಗಿ ಭಾನುವಾರ ಬೆಳ್ಳಂಬೆಳಗ್ಗೆಯೇ ಭಾರೀ ಕಾರ್ಯಾಚರಣೆಗಿಳಿದು ಕೆಲವೇ ತಾಸುಗಳ ಒಳಗಾಗಿ ಮೂವರು ಉಗ್ರಗಾಮಿಗಳನ್ನು ಕೊಂದು ಹಾಕಿದ್ದಾರೆ.

ಹತ ಉಗ್ರರ ಬಳಿ ಇದ್ದ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ.
ಕಳೆದ ತಿಂಗಳಷ್ಟೇ ಉಗ್ರಗಾಮಿಗಳು ಯೋಧ ಔರಂಗಬೇಜ್ ಅವರನ್ನು ಅಪಹರಿಸಿ, ಹತ್ಯೆಗೈದ ಘಟನೆ ಶೋಪಿಯಾನ್ ನಲ್ಲಿ ಘಟಿಸಿತ್ತು.

ದಕ್ಷಿಣ ಕಾಶ್ಮೀರದ ಕುಲಗಮ್ ಜಿಲ್ಲೆಯ ಮುತಲ್ಹಾಮಾ ಪ್ರದೇಶದ ನಿವಾಸದಿಂದ ಪೊಲೀಸ್  ಪೇದೆಯನ್ನು  ಅಪಹರಿಸಲಾಗಿತ್ತು. ಪೊಲೀಸ್ ಪೇದೆಯ ಮೃತದೇಹ ಬಳಿಕ ಪತ್ತೆಯಾಗಿದ್ದು, ತೀವ್ರ ಚಿತ್ರಹಿಂಸೆ ನೀಡಿರುವ ಗುರುತುಗಳು ದೇಹದ ಮೇಲೆ ಕಂಡು ಬಂದಿದ್ದವು.

ಪೊಲೀಸ್ ಪೇದೆ ಹತ್ಯೆಗೆ ಕಾರಣವಾದ ಮೂವರೂ ಉಗ್ರಗಾಮಿಗಳನ್ನು ಎನ್ ಕೌಂಟರಿನಲ್ಲಿ ಹತ್ಯೆ ಮಾಡಲಾಗಿದ್ದು, ಉಗ್ರರ ಬಳಿಯಿದ್ದ ಮೂರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಎಸ್ಪಿ ವಾಯಿದ್ ಟ್ವೀಟ್ ಮಾಡಿದ್ದಾರೆ.

ಕುಲಗಮ್ ಜಿಲ್ಲೆಯ ಖುದ್ವಾನಿಯಲ್ಲಿ ಪೊಲೀಸ್ ಪೇದೆ ಮೊಹಮ್ಮದ್ ಸಲೀಂ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಉಗ್ರಗಾಮಿಗಳು ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆ ಹಾಗೂ ಸಿಆರ್ ಪಿ ಎಫ್ ನಡೆಸುತ್ತಿರುವ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಬೆಳಗ್ಗೆ ಡಿಜಿಪಿ ತಿಳಿಸಿದ್ದರು.

ಖುದ್ವಾನಿ ಪ್ರದೇಶದಲ್ಲಿ ಉಗ್ರಗಾಮಿಗಳೂ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ, ಬೆಳ್ಳಂಬೆಳಗ್ಗೆಯೇ ಭದ್ರತಾ ಪಡೆಗಳು ಬೆಳಗ್ಗೆ ಅವರಿಗಾಗಿ ಹುಡುಕಾಟ ನಡೆಸಿದ್ದವು.

ಶೋಧ ಕಾರ್‍ಯಾಚರಣೆ ವೇಳೆಯಲ್ಲಿ ಉಗ್ರಗಾಮಿಗಳು ಬಂದೂಕಿನಿಂದ ಭದ್ರತಾ ಪಡೆಗಳತ್ತ ಗುಂಡು ಹಾರಿಸಿದರು. ಕೂಡಲೇ  ಪ್ರತಿ ದಾಳಿ ನಡೆಸಿದ ಜಂಟಿ ಭದ್ರತಾ ಪಡೆ, ಮೂವರು ಉಗ್ರಗಾಮಿಗಳನ್ನು ಕೊಂದು ಹಾಕಿತು.

ಹತರಾಗಿರುವ ಉಗ್ರಗಾಮಿಗಳು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ಧೃಡಪಟ್ಟಿಲ್ಲ. ಆದರೆ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯು ಪೊಲೀಸ್ ಪೇದೆಯನ್ನು ಹತ್ಯೆ ಮಾಡಿದೆ ಎಂದು ಕಣಿವೆ ರಾಜ್ಯದ ಪೊಲೀಸರು ತಿಳಿಸಿದ್ದರು.

No comments:

Post a Comment