Sunday, July 8, 2018

ಇಂದಿನ ಇತಿಹಾಸ History Today ಜುಲೈ 08

ಇಂದಿನ ಇತಿಹಾಸ History Today ಜುಲೈ 08

2018: ಪಾಟ್ನಾ: ಎನ್‌ಡಿಎ ಮೈತ್ರಿಕೂಟದಿಂದ ಜನತಾದಳ (ಯು) ಹೊರ ನಡೆಯುತ್ತದೆ  ಎಂಬ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲಾಗಿದ್ದು, ೨೦೧೯ ರ ಮಹಾಚುನಾವಣೆಯನ್ನು ಬಿಜೆಪಿ ಮೈತ್ರಿಯೊಂದಿಗೇ ಎದುರಿಸಲು ಬಿಹಾರ ಮುಖ್ಯಮಂತ್ರಿ ಹಾಗೂ ಜನತಾದಳ (ಯು) ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್  ನಿರ್ಧರಿಸಿದರು. ನವದೆಹಲಿಯಲ್ಲಿ ಹಿಂದಿನ ಸಂಜೆ ಮತ್ತು  ಈದಿನ ಬೆಳಗ್ಗೆ ನಡೆದ ಜೆಡಿಯು ಪ್ರಮುಖ ನಾಯಕರ ಮಹತ್ವದ ಸಭೆಯಲ್ಲಿ  ನಿತೀಶ್ ಕುಮಾರ್ ಅವರು ಎಲ್ಲಾ ನಾಯಕರೊಂದಿಗೆ ಚರ್ಚಿಸಿದ ಬಳಿಕ  ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಲು ನಿರ್ಧರಿಸಿದರು.  ಬಿಹಾರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ರಾಜ್ಯ ಘಟಕ ಅಧ್ಯಕ್ಷರು ಮತ್ತು ಇತರ ಕೆಲವು ನಾಯಕರು ಪಾಲ್ಗೊಂಡಿದ್ದರು.  ೨೦೧೯ರ ಲೋಕಸಭಾ ಚುನಾವಣೆಯೊಂದಿಗೆ ೨೦೨೦ ರ ಬಿಹಾರ ವಿಧಾಸಭಾ ಚುನಾವಣೆಯಲ್ಲೂ ಸೀಟು ಹಂಚಿಕೆ ಮಾಡಿಕೊಳ್ಳಲು ಜೆಡಿಯು ತೀರ್ಮಾನಿಸಿತು ಮತ್ತು ಜೆಡಿಯು ಪರವಾಗಿ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರವನ್ನು ಬಿಹಾರ ಮುಖ್ಯಮಂತ್ರಿಗೆ ಬಿಟ್ಟುಕೊಡಲು ನಿರ್ಧರಿಸಿತು.  ಬಹುತೇಕ ನಾಯಕರು ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರೆಯಬೇಕು ಎಂಬ ನಿತೀಶ್ ಕುಮಾರ್ ಅಭಿಪ್ರಾಯವನ್ನು ಒಪ್ಪಿದರು. ಏನಿದ್ದರೂ, ಮೈತ್ರಿಯು ಬಿಹಾರಕ್ಕೆ ಮಾತ್ರ ಸೀಮಿತ. ಪಕ್ಷವು ಇತರ ರಾಜ್ಯಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಲಿದೆ ಎಂಬುದಾಗಿ ಸ್ಪಷ್ಟ ಪಡಿಸಲಾಯಿತು. ಜೆಡಿ(ಯು) - ಬಿಜೆಪಿ ಮೈತ್ರಿ ಬಗ್ಗೆ ಇತ್ತೀಚೆಗೆ ಕೆಲವು ಅಪಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಸಂಕೀರ್ಣ ವಿಚಾರವಾಗಿ ಚರ್ಚಿಸಲಾಯಿತು.  ಆರ್ ಜೆಡಿ -ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರೆದಿದ್ದರೆ, ಜೆಡಿಯು ರಾಜ್ಯದಲ್ಲಿನ ಲೋಕಸಭಾ ಚುನಾವಣೆಯಲ್ಲಿ ೪೦ ಸ್ಥಾನಗಳ ಪೈಕಿ ೧೭-೧೮ ಸ್ಥಾನಗಳನ್ನು ಮಾತ್ರವೇ ಆಗ್ರಹಿಸುತ್ತಿತ್ತು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.   ಪ್ರಸ್ತುತ ೨೦೧೯ ರ ಲೋಕಸಭಾ ಚುನಾವಣೆಯ ೪೦ ಸ್ಥಾನಗಳ ಪೈಕಿ ೧೭ ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲು ಮತ್ತು ಉಳಿದ ೨೩ ಸ್ಥಾನಗಳನ್ನು ಬಿಜೆಪಿ, ಎಲ್‌ಜೆಪಿ ಮತ್ತು ಆರ್‌ಎಲ್‌ಎಸ್‌ಪಿಗೆ ಬಿಟ್ಟುಕೊಡಲು ಜೆಡಿಯು ತೀರ್ಮಾನಿಸಿತು.  ೨೦೧೪ರ ಚುನಾವಣೆಯಲ್ಲಿ  ಮೋದಿ ವಿರುದ್ಧ ಮುನಿಸಿಕೊಂಡು ಹೊರ ನಡೆದಿದ್ದ ನಿತೀಶ್ ಭಾರೀ ಹೊಡೆತ ಅನುಭವಿಸಿದ್ದರು. ೪೦ ಲೋಕಸಭಾ ಸ್ಥಾನಗಳ ಪೈಕಿ ಕೇವಲ ೨ ರಲ್ಲಿ ಜಯ ಗಳಿಸಿದ್ದರು.  ಈ ಬಾರಿ ಆರ್‌ಜೆಡಿ, ಕಾಂಗ್ರೆಸ್ ಮೈತ್ರಿ ಕೂಟ ಮತ್ತು ಆಡಳಿತಾರೂಢ ಜೆಡಿಯು- ಬಿಜೆಪಿಯ ಎನ್‌ಡಿಎ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವುದು ಖಚಿತವಾಗಿದೆ.  ಜುಲೈ ೧೨ರಂದು ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೊತೆಗೂ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚಿಸಿ ಇತ್ಯರ್ಥ ಪಡಿಸಲಿದ್ದಾರೆ. ಬಿಜೆಪಿ ಜೊತೆಗೆ ಮೈತ್ರಿ ಮುಂದುವರೆಸುವ ವಿಚಾರದಲ್ಲಿ ನಾವು ಸುಸ್ಪಷ್ಟವಾಗಿದ್ದೇವೆ ಎಂದು ಜೆಡಿಯು ನಾಯಕ ಹೇಳಿದರು.  ಆರ್ ಜೆಡಿ ನಾಯಕರು ಅವರಿಗೆ ’ಹೋಗಿ ಕುಂಕುಮ ಹಚ್ಚಿಕೊಳ್ಳಿ ಎಂದು ಲೇವಡಿ ಮಾಡಿದ್ದರು. ಆರ್ ಜೆಡಿಯು, ಜೆಡಿ(ಯು)ವಿನ ೭೧ ಸ್ಥಾನಗಳನ್ನು ತನ್ನ ೮೦ ಸ್ಥಾನಗಳ ಜೊತೆಗೆ ಹೋಲಿಕೆ ಮಾಡಿ ದೊಡ್ಡಣ್ಣನಂತೆ ವರ್ತಿಸುತ್ತಿತ್ತು. ಬಿಜೆಪಿ ಜೊತೆಗೆ ಇಂತಹ ಸಮಸ್ಯೆಗಳು ಇಲ್ಲ, ಅವರ ಜೊತೆಗಿನ ಮೈತ್ರಿ ೧೭ ವರ್ಷಗಳ ಅವಧಿಯ ಕಾಲದ ಪರೀಕ್ಷೆಯಲ್ಲಿ ಗೆದ್ದಿದೆ ಎಂದು ಜೆಡಿ(ಯು) ನಾಯಕ ಹೇಳಿದರು. ಕಳೆದ ಚುನಾವಣೆಯಲ್ಲಿ ಮೋದಿ ಅಲೆಯು ಬಿಜೆಪಿಗೆ ೨೨ ಸ್ಥಾನಗಳನ್ನು ಗೆದ್ದುಕೊಳ್ಳಲು ಅನುಕೂಲ ಮಾಡಿಕೊಟ್ಟತ್ತು. ಆದರೆ ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾವು ಎನ್ ಡಿಎಗೆ ಮರಳಿರುವುದರಿಂದ ಪ್ರತಿಯೊಬ್ಬರೂ ತ್ಯಾಗ ಮಾಡಬೇಕಾಗುತ್ತದೆ ಎಂದು ಅವರು ನುಡಿದರು.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ವಿರುದ್ಧ ಜನರು ಪ್ರತಿಭಟಿಸುತ್ತಿದ್ದ ಹಳೆಯ ವಿಡಿಯೋ ಪೋಸ್ಟ್ ಮಾಡಿ ಅದು ಜುಲೈ ೭ರ ಪ್ರಧಾನಿ ಮೋದಿ ಅವರ ಜೈಪುರ ಸಭೆಯ ವಿಡಿಯೋ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ಅದು ಸತ್ಯವಲ್ಲ ಎಂದು ಗೊತ್ತಾದಾಗ ಪೆಚ್ಚಾದ ಘಟನೆ ಘಟಿಸಿತು. ಕಾಂಗ್ರೆಸ್ ಪ್ರಕಟಿಸಿದ್ದು, ಮೋದಿ ಅವರ ಜುಲೈ ೭ರ ಜೈಪುರ ಸಭೆಯ ವಿಡಿಯೋ ಅಲ್ಲ, ಐದು ತಿಂಗಳುಗಳಷ್ಟು ಹಿಂದಿನ, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಸಭೆಗೆ ಸಂಬಂಧಿಸಿದ ವಿಡಿಯೋ ಎಂದು ಬಿಜೆಪಿ ಎದಿರೇಟು ಕೊಟ್ಟಾಗ ಕಾಂಗ್ರೆಸ್ ಮಂಕಾಯಿತು.  ಬಿಜೆಪಿಯ ಐಟಿ ಸೆಲ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಮಿತ್ ಮಾಳವೀಯ ಅವರು ಈದಿನ  ಕಾಂಗ್ರೆಸ್ ಮಾಡಿದ ತಪ್ಪಿನತ್ತ ಬೊಟ್ಟು  ಮಾಡಿ ತೋರಿಸಿದಾಗ ಪಕ್ಷವು ತಾನು ಎಸೆದ ಬಲೆಯಲ್ಲಿ ಸ್ವತಃ ಸಿಲುಕಿಕೊಂಡಿತು.  ‘ಕಾಂಗ್ರೆಸ್ ಪಕ್ಷವು ತನ್ನ ಬಲೆಯಲ್ಲಿ ತಾನೇ (ಎಂದಿನಂತೆ) ಸಿಕ್ಕಿಹಾಕಿಕೊಂಡಿದೆ. ಐದು ತಿಂಗಳ ವಿಡಿಯೋವನ್ನು ಪ್ರಧಾನಿಯವರ  ಜುಲೈ 7ರ ಶನಿವಾರದ ಜೈಪುರ ಸಭೆಯ ವಿಡಿಯೋ ಎಂದು ಪ್ರತಿಪಾದಿಸಿದೆ ಎಂದು ಅಮಿತ್ ಮಾಳವೀಯ ಈದಿನ ಟ್ವೀಟ್ ಮಾಡಿದರು.  ಕಾಂಗ್ರೆಸ್ ತನ್ನ ತಪ್ಪನ್ನು ಒಪ್ಪಿಕೊಂಡಿತು ಮತ್ತು ವಿಡಿಯೋ ಜುಂಜುನುವಿನದು ಜೈಪುರದ್ದಲ್ಲ ಎಂದು ಹೇಳಿತು.  ‘ಹೌದು, ನಾವು ತಪ್ಪು ಮಾಡಿದ್ದೇವೆ. ಆದರೆ ಅದರಲ್ಲಿ ಇರುವ ವಿಷಯಗಳು ನೈಜವಾದವು. ಒಪ್ಪುವಿರಾ ಅಮಿತ್ ಎಂಬುದಾಗಿ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ದಿವ್ಯ ಸ್ಪಂದನ / ರಮ್ಯಾ ಅಮಿತ್ ಮಾಳವೀಯ ಟ್ವೀಟಿಗೆ ಉತ್ತರಿಸಿದರು.  ‘ಕ್ಷಮಿಸಿ, ಇದು ಮಾರ್ಚ್ ತಿಂಗಳ ವಿಡಿಯೋ, ನಿನ್ನೆಯದ್ದಲ್ಲ. ರಾಜಸ್ಥಾನದ್ದೇ. ಬಿಜೆಪಿ ತಿಂಗಳ ಹಿಂದೆಯೇ (ಜನರ ವಿಶ್ವಾಸವನ್ನು) ಕಳೆದುಕೊಂಡಿತೇ?’ ಎಂದೂ ಅವರು ಇನ್ನೊಂದು ಟ್ವೀಟಿನಲ್ಲಿ ಪ್ರಶ್ನಿಸಿದರು. ಪ್ರಧಾನಿಯವರು ಫೇಸ್ ಬುಕ್ ನಿಯಂತ್ರಣ ಪಡೆಯುತ್ತಿರುವಾಗ ತಮ್ಮ ಪಕ್ಷ ಸದಸ್ಯರ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು. ಪ್ರಧಾನಿವರ ಜೈಪುರ ಸಭೆಯಲ್ಲೂ ಒಳಜಗಳ ನಡೆಯಿತು ನೋಡಿ ಎಂದು ಹೇಳಿದ ಕಾಂಗ್ರೆಸ್ ಈ ವಿಡಿಯೋವನ್ನು ಪ್ರದರ್ಶಿಸಿತ್ತು.  ಪ್ರಧಾನಿ ಮೋದಿ ಅವರು ಜುಲೈ 7ರ ಶನಿವಾರ ೧೩ ನಗರ ಮೂಲ ಸವಲತ್ತು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವ ಸಲುವಾಗಿ ಜೈಪುರಕ್ಕೆ ಭೇಟಿ ನೀಡಿದ್ದರು. ಇದೇ ವೇಳೆಯಲ್ಲಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ಕಾರ್‍ಯಕ್ರಮದಲ್ಲೂ ಪಾಲ್ಗೊಂಡಿದ್ದರು. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಅವರೂ ವಿಡಿಯೋ ಜೈಪುರ ಸಭೆಯದ್ದು ಎಂದು ಪ್ರತಿಪಾದಿಸಿದ್ದರು. ಜುಲೈ 7ರ ಶನಿವಾರ ಯಾವುದೇ ಸುದ್ದಿ ವಾಹಿನಿಗಳು ಈ ವಿಡಿಯೋವನ್ನು ಪ್ರಸಾರ ಮಾಡಿಲ್ಲವೇಕೆ ಎಂದು ಅವರು ಅಚ್ಚರಿ ವ್ಯಕ್ತ ಪಡಿಸಿದ್ದರು. ಬಳಿಕ ಸಚಿನ್ ಪೈಲಟ್ ಅವರು ತಮ್ಮ ಟ್ವೀಟನ್ನು ಕಿತ್ತು ಹಾಕಿದ್ದರು.  ಪ್ರಧಾನಿ ಮೋದಿ ಅವರ ಪ್ರಬಲ ಟೀಕಾಕಾರ ಪ್ರಶಾಂತ ಭೂಷಣ್ ಅವರೂ ಕಾಂಗ್ರೆಸ್ ವಿಡಿಯೋವನ್ನು ಶೇರ್ ಮಾಡಿದ್ದರು. ಸದರಿ ವಿಡಿಯೋ ಪ್ರಧಾನಿಯವರ ಜೈಪುರ ರ್‍ಯಾಲಿಯದ್ದು ಅಲ್ಲ ಎಂಬುದು ಗೊತ್ತಾದಾಗ ಅದನ್ನು ಶೇರ್ ಮಾಡಿದ್ದಕ್ಕಾಗಿ ಪ್ರಶಾಂತ ಭೂಷಣ್ ಕ್ಷಮೆ ಕೇಳಿದ್ದರು. ದಿವ್ಯ ಸ್ಪಂದನ ಅವರು ಶೇರ್ ಮಾಡಿದ ವಿಡಿಯೋ ಹಳೆಯ ವಿಡಿಯೋ ಆಗಿರುವಂತೆ ಕಾಣುತ್ತಿದೆ, ಪ್ರಧಾನಿಯವರ ನಿನ್ನೆಯ ಜೈಪುರ ರ್‍ಯಾಲಿಯ ವಿಡಿಯೋ ಅಲ್ಲ. ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅದನ್ನು ಶೇರ್ ಮಾಡಿದ್ದಕ್ಕಾಗಿ ಬೇಸರಿಸುತ್ತೇನೆ ಎಂದು ಪ್ರಶಾಂತ ಭೂಷಣ್ ಈದಿನ ಟ್ವೀಟ್ ಮಾಡಿದರು.

2018: ಚೆನ್ನೈ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಚೆನ್ನೈ ನಿವಾಸದಿಂದ ಸುಮಾರು ೨ ಲಕ್ಷ ರೂಪಾಯಿಗಳಿಗೂ ಹೆಚ್ಚಿನ ನಗದು ಹಣ ಮತ್ತು ರತ್ನಾಭರಣ ಕಳ್ಳತನ ನಡೆದಿರುವುದು ವರದಿಯಾಗಿದೆ ಎಂದು ಪೊಲೀಸರು ಇಲ್ಲಿ ತಿಳಿಸಿದರು. ೧.೫ ಲಕ್ಷ ರೂಪಾಯಿ ನಗದು ಹಣ ಮತ್ತು  ಸುಮಾರು ೧ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕೆಲ ದಿನಗಳ ಹಿಂದೆ ಕಳವು ಆಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನುಡಿದರು. ಪೊಲೀಸ್ ಭದ್ರತೆಯನ್ನೂ ಹೊಂದಿರುವ ಮಾಜಿ ವಿತ್ತ ಸಚಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ವ್ಯಕ್ತಿಗಳ ಬಗ್ಗೆ ಗುಮಾನಿ ಇದೆ ಎಂದು ಅಧಿಕಾರಿ ಹೇಳಿದರು.  ಘಟನೆಗೆ ಸಂಬಂಧಿಸಿದಂತೆ ದೂರನ್ನು ಆಧರಿಸಿ ಎಫ್ ಐಆರ್ ದಾಖಲಿಸಲಾಗಿದೆ, ತನಿಖೆ ನಡೆಯುತ್ತಿದೆ ಎಂದು ಅವರು ನುಡಿದರು. 

2018: ಕೌಲಾಲಂಪುರ: ಭಯೋತ್ಪಾದಕ ಚಟುವಟಿಕೆಗಳು ಮತ್ತು ಹಣ ವರ್ಗಾವಣೆ ಆಪಾದನೆಗಳಲ್ಲಿ
ಭಾರತಕ್ಕೆ ಬೇಕಾಗಿರುವ ವಿವಾದಾತ್ಮಕ ಧರ್ಮಬೋಧಕ ಜಾಕೀರ್ ನಾಯ್ಕ್ ಗಡೀಪಾರಿಗೆ ನಿರಾಕರಿಸಿದ ಒಂದು ದಿನದ ಬಳಿಕ ಈದಿನ  ಮಲೇಶ್ಯಾದ ಪ್ರಧಾನಿ ಮಹತೀರ್ ಮೊಹಮ್ಮದ್ ಅವರು ಜಾಕೀರ್ ನಾಯ್ಕ್ ಭೇಟಿ ಮಾಡಿ ಮಾತುಕತೆ ನಡೆಸಿದರು.  ಇದೇ ವೇಳೆಗೆ ಆಳುವ ಪಕ್ಷದ ವ್ಯೂಹ ನಿರೂಪಕರು ವಿವಾದಾಸ್ಪದ ಧರ್ಮ ಬೋಧಕನ ಗಡೀಪಾರು ನಿರಾಕರಣೆಯ ಸರ್ಕಾರಿ ನಿರ್ಧಾರವನ್ನು ಪ್ರಬಲವಾಗಿ ಸಮರ್ಥಿಸಿದರು. ಮಹತೀರ್ ಮೊಹಮ್ಮದ್ ಮತ್ತು ಜಾಕೀರ್ ನಾಯ್ಕ್ ಭೇಟಿ ಜುಲೈ ೭ರಂದು, ಮಲೇಶ್ಯಾ ಕಾನೂನುಗಳನ್ನು ಉಲ್ಲಂಘಿಸುವವರೆಗೆ ನಾಯ್ಕ್ ಗಡೀಪಾರನ್ನು ತಳ್ಳಿಹಾಕಿದ ಒಂದು ದಿನದ ಬಳಿಕ ನಡೆಯಿತು. ನಾಯ್ಕ್ ಗೆ ಮಲೇಶ್ಯಾದಲ್ಲಿ ಖಾಯಂ ನಿವಾಸಿ ಸ್ಥಾನ ಮಾನ ನೀಡಲಾಗಿದೆ.  ‘ಟುನ್ (ಮಹತೀರ್) ಅವರನ್ನು ನಾಯ್ಕ್ ಈದಿನ ಬೆಳಗ್ಗೆ ಭೇಟಿ ಮಾಡಿದ್ದನ್ನು ನಾನು ದೃಢಪಡಿಸಬಲ್ಲೆ ಎಂದು ಮೂಲವೊಂದನ್ನು ಉಲ್ಲೇಖಿಸಿ ’ಫ್ರೀ ಮಲೇಶ್ಯಾ ಟುಡೆ ವರದಿ ಮಾಡಿತು.  ಮಹತೀರ್ ಮತ್ತು ನಾಯ್ಕ್ ಅವರ ನಡುವಣ ಚೊಚ್ಚಲ ಮಾತುಕತೆಯಲ್ಲಿ ಯಾವ ವಿಷಯಗಳನ್ನು ಚರ್ಚಿಸಲಾಗಿದೆ ಎಂಬುದು ಬಹಿರಂಗಗೊಂಡಿಲ್ಲ. ಆಡಳಿತಾರೂಢ ಪಕತನ್ ಹರಪನ್ ಸಮ್ಮಿಶ್ರ ಸರ್ಕಾರ ಪುಟ್ರಾಜಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನಡೆದಿರುವ ಮೊದಲ ಭೇಟಿ ಇದು.. ಭೇಟಿ ಅನಿಗದಿತವಾಗಿತ್ತು ಮತ್ತು ಸಂಕ್ಷಿಪ್ತವಾಗಿತ್ತು ಎಂದು ವರದಿ ತಿಳಿಸಿತು. ಹಣ ವರ್ಗಾವಣೆ ಮತ್ತು ಭಯೋತ್ಪಾದನೆ ಚಟುವಟಿಕೆ ಆರೋಪದಲ್ಲಿ ಭಾರತಕ್ಕೆ ಬೇಕಾಗಿರುವ ಜಾಕೀರ್ ನಾಯ್ಕ್ ಗಡೀಪಾರಿಗೆ ಮಲೇಶ್ಯಾ ಪ್ರಧಾನಿ ಸ್ಪಷ್ಟ ನಿರಾಕರಣೆಯ ಸೂಚನೆ ನೀಡಿದ ಒಂದು ದಿನದ ಬಳಿಕ ಮಹತೀರ್ ಮತ್ತು ನಾಯ್ಕ್ ಭೇಟಿ ನಡೆಯಿತು.  ಭಾರತವು ಜನವರಿಯಲ್ಲಿ ಸಲ್ಲಿಸಿದ ಗಡೀಪಾರು ಮನವಿ ಪ್ರಕಾರ ಮಲೇಶ್ಯಾ ಸರ್ಕಾರ ಕ್ರಮ ವಹಿಸುವುದು ಎಂದು ಭಾರತದಲ್ಲಿ ಮಾಧ್ಯಮಗಳು ಊಹೆ ಮಾಡಿದ್ದವು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಾ ಗಡೀಪಾರು ಮನವಿ ಸಲ್ಲಿಸಲಾಗಿದೆ ಎಂದು ಜುಲೈ ೪ರಂದು ದೃಢ ಪಡಿಸಿತ್ತು.  ಆದರೆ ಜುಲೈ ೬ರಂದು ಮಹತೀರ್ ಅವರು ತಮ್ಮ ಸರ್ಕಾರವು ಡಾ. ನಾಯ್ಕ್ ಅವರು ಮಲೇಶ್ಯಾದ ಖಾಯಂ ನಿವಾಸಿ ಸ್ಥಾನಮಾನ ಪಡೆದಿರುವುದರಿಂದ ದೇಶಕ್ಕೆ ಹಾನಿ ಉಂಟು ಮಾಡದ ವಿನಃ ಅವರನ್ನು ಗಡೀಪಾರು ಮಾಡುವುದಿಲ್ಲ ಎಂದು ಹೇಳಿದ್ದರು.  ಈ ಮಧ್ಯೆ ಮಲೇಶ್ಯಾದ ಆಡಳಿತಾರೂಢ ಪರ್ತಿ ಪ್ರಿಬುಮಿ ಬೆರ್ಸಾಟು ಮಲೇಶ್ಯಾ (ಪಿಪಿಬಿಎಂ) ಪಕ್ಷವು ಭಾರತಕ್ಕೆ ಜಾಕೀರ್ ನಾಯ್ಕ್ ಗಡೀಪಾರು ಮಾಡದೇ ಇರಲು ಮಹತೀರ್ ಕೈಗೊಂಡಿರುವ ತೀರ್ಮಾನವನ್ನು ಸಮರ್ಥಿಸಿತು.  ನಾಯ್ಕ್ ಗಡೀಪಾರು ಮಾಡುವುದು ಉಯಿಘುರ್ ಮುಸ್ಲಿಮರನ್ನು ಚೀನಾಕ್ಕೆ ಗಡೀಪಾರು ಮಾಡಿದಂತೆಯೇ ಆಗುತ್ತದೆ ಎಂದು ಅದು ಹೇಳಿದೆ. ನಾಯ್ಕ್ ಭಾಷಣ ಮತ್ತು ಬೋಧನೆಗಳಲ್ಲಿ ವೈಯಕ್ತಿಕವಾಗಿ ತಮಗೆ ಯಾವುದೇ ತಪ್ಪು ಕಾಣಿಸುತ್ತಿಲ್ಲ ಎಂದು ಪಿಪಿಬಿಎಂ ವ್ಯೂಹ ತಜ್ಞ ರಾಯಿಸ್ ಹುಸೇನ್ ಹೇಳಿದರು. ೨೦೧೭ರಲ್ಲಿ ಥಾಯ್ಲೆಂಡ್ ಸೆರೆಮನೆಯಿಂದ ನಾಟಕೀಯವಾಗಿ ತಪ್ಪಿಸಿಕೊಂಡು ಅಕ್ರಮವಾಗಿ ಮಲೇಶ್ಯಾ ಪ್ರವೇಶಿಸಿದ ೧೧ ಮಂದಿ ಉಯಿಘುರ್ ಮುಸ್ಲಿಮರನ್ನು ಚೀನಾಕ್ಕೆ ಗಡೀಪಾರು ಮಾಡುವಂತೆ ಮಲೇಶ್ಯಾದ ಮೇಲೆ ಚೀನಾ ನಿರಂತರ ಒತ್ತಡ ಬೀರುತ್ತಿದೆ.


2018: ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಕನಿಷ್ಠ ೨೧ ಮಂದಿ ಶಾಸಕರು ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿ ಅವರಿಗೆ ತಮ್ಮ ಬೆಂಬಲದ ಪ್ರತಿಜ್ಞೆ ಮಾಡಿದರು. ಪಕ್ಷ ಮೂಲಗಳ ಪ್ರಕಾರ ಈ ಶಾಸಕರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಅವರು ದೆಹಲಿಯಿಂದ ವಾಪಸಾದ ಬಳಿಕ ಅವರನ್ನು ಭೇಟಿ ಮಾಡಲು ಪ್ರಾರಂಭಿಸಿದರು. ಶಾಸಕರು ಸೇರಿದಂತೆ ಪಕ್ಷದ ಕೆಲವು ನಾಯಕರು ಕಳೆದವಾರ ಮೆಹಬೂಬಾ ವಿರುದ್ಧ ಬಂಡಾಯ ಎದ್ದ ಬಳಿಕ, ಈವರೆಗೆ ಕನಿಷ್ಠ ೨೧ ಮಂದಿ ಶಾಸಕರು ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲದ ಪ್ರತಿಜ್ಞೆ ಮಾಡಿದ್ದಾರೆ ಎಂದು ಮೂಲಗಳು ಹೇಳಿದವು. ಮೆಹಬೂಬಾ ಅವರನ್ನು ಭೇಟಿ ಮಾಡಿದವರಲ್ಲಿ ಮೆಹಬೂಬಾ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದ ಒಬ್ಬ ಶಾಸಕರೂ ಸೇರಿದ್ದು, ಅವರ ಮನ ಒಲಿಸುವ ಕೆಲಸ ನಡೆಯುತ್ತಿದೆ ಎಂದು ಪಿಡಿಪಿ ಮೂಲಗಳು ಹೇಳಿದವು.  ಆದರೆ ಶಾಸಕನ ಹೆಸರು ಬಹಿರಂಗ ಪಡಿಸಲು ಅವು ನಿರಾಕರಿಸಿದವು. ಇತರ ಶಾಸಕರ ಜೊತೆ ಸಂಪರ್ಕ ಸಾಧಿಸುವ ಯತ್ನಗಳು ನಡೆಯುತ್ತಿದ್ದು, ಅವರಲ್ಲಿ ಬಹುತೇಕ ಮಂದಿ ನಗರದಿಂದ ಹೊರಗಿದ್ದಾರೆ ಎಂದು ಮೂಲಗಳು ಹೇಳಿದವು.  ಏನಿದ್ದರೂ, ನಗರದಿಂದ ಹೊರಗೆ ಇರುವ ಮಾಜಿ ಸಚಿವ ಇಮ್ರಾನ್ ಅನ್ಸಾರಿ ಅವರು ಮುಫ್ತಿ ವಿರುದ್ಧ ಹರಿ ಹಾಯ್ದಿದ್ದು ಆಕೆ ಸ್ವಜನ ಪಕ್ಷಪಾತ ಎಸಗುತ್ತಿದ್ದಾರೆ ಎಂದು ದೂರಿದ್ದಾರೆ. ಮಾಜಿ ಮುಖ್ಯಮಂತ್ರಿಯ ನಾಯಕತ್ವಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವಿನಲ್ಲಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.  ಬಿಜೆಪಿಯ ಸಮ್ಮಿಶ್ರ ಸರ್ಕಾರದಿಂದ ಹೊರಬಂದ ಬಳಿಕ ಹಾಗೂ ರಾಜ್ಯದಲ್ಲಿ ಕಳೆದ ತಿಂಗಳು ರಾಜ್ಯಪಾಲರ ಆಡಳಿತ ಹೇರಿದ ನಂತರ  ಪಿಡಿಪಿ ನಾಯಕತ್ವವು ಕನಿಷ್ಠ ಐವರು ಶಾಸಕರು ವಿಧಾನಸಭಾ ಸದಸ್ಯರು ಮತ್ತು ಒಬ್ಬ ವಿಧಾನಪರಿಷತ್ ಸದಸ್ಯರಿಂದ ಬಂಡಾಯವನ್ನು ಎದುರಿಸಿತ್ತು.

ಶ್ರೀನಗರದ ಝಡಿಬಾಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಬಿದ್ ಅನ್ಸಾರಿ ಅವರು ಮುಫ್ತಿ ನಾಯಕತ್ವವನ್ನು ಪ್ರಶ್ನಿಸಿದವರಲ್ಲಿ ಮೊದಲಿಗರಾಗಿದ್ದು, ಅವರ ಸೋದರಳಿಯ ಹಾಗೂ ಮಾಜಿ ಸಚಿವರಾದ ಇಮ್ರಾನ್ ಅನ್ಸಾರಿ ಅವರು ಅಬಿದ್ ಅವರನ್ನು ಹಿಂಬಾಲಿಸಿದರು.  ಬಳಿಕ ಶಾಸಕ ತಂಗಮಾಗ್ ಅಬ್ಬಾಸ್ ವನಿ, ಶಾಸಕ ನೂರಬಾದ್ ಅಬ್ದುಲ್ ಮಜೀದ್ ಪದ್ದಾರ್, ಶಾಸಕ ಬಾರಾಮುಲ್ಲಾ ಜಾವೇದ್ ಬೇಗ್ ಮತ್ತು ವಿಧಾನಪರಿಷತ್ ಸದಸ್ಯ ಯಾಸೀರ್ ರೇಶಿ ಈ ಗುಂಪನ್ನು ಸೇರಿಕೊಂಡರು.  ಪಿಡಿಪಿ ಅಧ್ಯಕ್ಷರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವಜನ ಪಕ್ಷಪಾತದಲ್ಲಿ ತಲ್ಲೀನರಾಗಿದ್ದು ಅದಕ್ಷರಾಗಿದ್ದರು ಎಂದು ಈ ಶಾಸಕರು ಆಪಾದಿಸಿದ್ದರು.

2017: ನವದೆಹಲಿ: ಜಿಎಸ್‌ಟಿಯಲ್ಲಿ ಸರಕು ಮತ್ತು ಸೇವೆಗಳದರವನ್ನು ಕಂಡುಕೊಳ್ಳಲು ಕೇಂದ್ರ ಸರ್ಕಾರ ‘GST Rates Finder’ ಆ್ಯಪ್‌ ಬಿಡುಗಡೆ ಮಾಡಿತು. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿಆ್ಯಪ್‌ ಬಿಡುಗಡೆ ಮಾಡಿದರು. ಆ್ಯಂಡ್ರಾಯ್ಡ್‌ ಬೆಂಬಲಿತ ಆ್ಯಪ್‌ ಇದಾಗಿದೆ. ಡೌನ್‌ಲೋಡ್‌ ಮಾಡಿಕೊಂಡ ಬಳಿಕ ಅಂತರ್ಜಾಲದ ಅಗತ್ಯವಿಲ್ಲದೇ ಬಳಕೆ ಮಾಡಬಹುದು ಎಂದು ಸಚಿವಾಲಯ ತಿಳಿಸಿತು. ವರ್ತಕರಷ್ಟೇ ಅಲ್ಲದೆ ಗ್ರಾಹಕರು ಸಹ ತಾವು ಖರೀದಿಸುವ ವಸ್ತುಗಳಿಗೆ ನೀಡುತ್ತಿರುವ ದರ ಸರಿಯಾಗಿದೆಯೇಎಂದು ಖಚಿತಪಡಿಸಿಕೊಳ್ಳಲು ಈ ಆ್ಯಪ್‌ ಉಪಯುಕ್ತವಾಗಿದೆ ಎಂದು ಸಚಿವಾಲಯ ತಿಳಿಸಿತು. ಸರಕು ಅಥವಾ ಸೇವೆಯ ಹೆಸರಿನಿಂದ ಅದರ ದರವನ್ನು ಹುಡುಕಬಹುದು.ವರ್ತಕರಿಗೆ ಒಂದು ನಿರ್ದಿಷ್ಟ ಸರಕಿನ ಎಚ್‌ಎಸ್‌ಎನ್‌ ಕೋಡ್‌ (Harmonised System of Nomenclature) ಸಹ ಸಿಗಲಿದೆ. ಆ ಕೋಡ್‌ ಆಧಾರದ ಮೇಲೆ ಅದಕ್ಕೆ ನಿಗದಿಯಾಗಿರುವ ತೆರಿಗೆ ದರ ಕಂಡುಕೊಳ್ಳಬಹುದು.

2017:
ವಾಷಿಂಗ್ಟನ್‌: ಬ್ಯಾಟರಿ ಇಲ್ಲದೇ ಕೆಲಸ ಮಾಡುವ ಜಗತ್ತಿನ ಮೊದಲ ಮೊಬೈಲ್‌ ಫೋನನ್ನು
ಅವಿಷ್ಕರಿಸಿರುವುದಾಗಿ ವಿಜ್ಞಾನಿಗಳ ತಂಡ ಪ್ರಕಟಿಸಿತು. ಈ ತಂಡದಲ್ಲಿ ಭಾರತೀಯ ಮೂಲದ ಸಂಶೋಧಕರೂ ಇದ್ದಾರೆ. ರೇಡಿಯೊ ಅಥವಾ ಬೆಳಕಿನ ತರಂಗಾಂತರಗಳ ಶಕ್ತಿಯನ್ನು ಹೀರಿಕೊಂಡು ಈ ಮೊಬೈಲ್‌ ಕಾರ್ಯ ನಿರ್ವಹಿಸುತ್ತದೆ ಎಂದು ತಂಡ ಹೇಳಿತು. ‘ಕಾರ್ಯ ನಿರ್ವಹಣೆಗಾಗಿ ವಿದ್ಯುತ್‌ ಶಕ್ತಿಯ ಸಹಾಯವಿಲ್ಲದೇ ಅಭಿವೃದ್ಧಿಪಡಿಸಿದ ಮೊದಲ ಮೊಬೈಲ್‌ ಫೋನ್‌ ಇದಾಗಿದೆ’ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ಯಾಮ್‌ ಗೊಲ್ಲಕೋಟಾ ಹೇಳಿದರು. ಈಗ ಬಳಕೆಯಲ್ಲಿರುವ ಬ್ಯಾಟರಿ ಸಹಿತ ಮೊಬೈಲ್‌ಗಳಲ್ಲಿ ಧ್ವನಿ ವಾಹಕಗಳನ್ನು  ಡಿಜಿಟಲ್‌ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಅದಕ್ಕಾಗಿ ಅತ್ಯಧಿಕ ವಿದ್ಯುತ್‌ ಶಕ್ತಿ ಬೇಕಾಗುತ್ತದೆ. ಬ್ಯಾಟರಿ ಇಲ್ಲದೇ ಅಭಿವೃದ್ಧಿಪಡಿಸಿದ ಹೊಸ  ಮಾದರಿಯಲ್ಲಿ,  ವ್ಯಕ್ತಿ ಮಾತನಾಡುವಾಗ ಅಥವಾ ಕೇಳಿಸಿಕೊಳ್ಳುವಾಗ ಮೈಕ್ರೊಫೋನ್‌ ಅಥವಾ ಸ್ಪೀಕರ್‌ಗಳಲ್ಲಿ ಉಂಟಾಗುವ ಕಂಪನಗಳ ಶಕ್ತಿಯನ್ನೇ ಬಳಸಿಕೊಂಡು ಧ್ವನಿಸಂದೇಶಗಳು ಪ್ರಸಾರವಾಗುತ್ತವೆ ಎಂದು ಸಂಶೋಧನೆ ತಿಳಿಸಿತು. ‌ಈ ಎರಡು ಪ್ರತ್ಯೇಕ ಕಾರ್ಯಗಳ ನಿರ್ವಹಣೆಗೆ ಬಟನ್‌ ಒತ್ತುವ ಸೌಲಭ್ಯ ಕಲ್ಪಿಸಲಾಗಿದೆ ಎಂದೂ ಅದು ಹೇಳಿತು. ಸ್ಕೈಪ್‌ ಮೂಲಕ ಕರೆ ಮಾಡಿ ಈ ಮಾದರಿಯ ಕಾರ್ಯಕ್ಷಮತೆಯನ್ನು ವಿಜ್ಞಾನಿಗಳು ಪರೀಕ್ಷಿಸಿದ್ದಾರೆ ಎಂದು ತಂಡ ಹೇಳಿತು. ಆದರೂ, ಫೋನ್‌ ಕಾರ್ಯನಿರ್ವಹಣೆಗಾಗಿ ಅತ್ಯಲ್ಪ ಶಕ್ತಿಯ ಅಗತ್ಯವಿರುತ್ತದೆ. ಮುಂಬರುವ ದಿನಗಳಲ್ಲಿ ಮೊಬೈಲ್‌ ಗೋಪುರ ಹಾಗೂ ವೈ– ಫೈ ವ್ಯವಸ್ಥೆಗೂ ಇದೇ ತಂತ್ರಜ್ಞಾನ ಬಳಸಿಕೊಳ್ಳಬಹುದಾಗಿದೆ.


2017: ವಿಶ್ವಸಂಸ್ಥೆ: ಜಾಗತಿಕವಾಗಿ ಅಣ್ವಸ್ತ್ರಗಳನ್ನು ನಿಷೇಧಿಸುವ ಮಹತ್ವದ ಒಪ್ಪಂದವನ್ನು
ವಿಶ್ವಸಂಸ್ಥೆ ಅಂಗೀಕರಿಸಿತು. ಆದರೆ, ಭಾರತ, ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಒಂಬತ್ತು ದೇಶಗಳು ಈ ಒಪ್ಪಂದದಿಂದ ಹೊರಗುಳಿದವು. ಕಾನೂನುಬದ್ಧವಾಗಿ ಅಣ್ವಸ್ತ್ರಗಳನ್ನು ನಿಷೇಧಿಸುವ ಈ ಒಪ್ಪಂದದ ಪರವಾಗಿ ಪರವಾಗಿ 122 ರಾಷ್ಟ್ರಗಳು 2017 ಜುಲೈ 7ರ ಶುಕ್ರವಾರ ಮತ ಚಲಾಯಿಸಿದವು. ನೆದರ್ಲೆಂಡ್ಸ್ ಒಪ್ಪಂದದ ವಿರುದ್ಧವಾಗಿ ಮತ­ಚಲಾಯಿಸಿತು. ಸಿಂಗಪುರ ಒಪ್ಪಂದವನ್ನು ತಿರಸ್ಕರಿಸಿತು. ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಉತ್ತರ ಕೊರಿಯಾ ಮತ್ತು ಇಸ್ರೇಲ್ ಒಪ್ಪಂದದಿಂದ ಹೊರಗುಳಿದ ಇತರ ದೇಶಗಳು. ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಕಾನೂನು ಬದ್ದ ತಡೆ ಹಾಕುವಂಥ ಒಪ್ಪಂದ ಇದಾಗಿದ್ದು, 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಕುರಿತು ಚರ್ಚೆ ಹಾಗೂ ನಿರ್ಣಯ ಕೈಗೊಳ್ಳಲಾಯಿತು. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಭಾರತ, ಅಮೆರಿಕ, ರಷ್ಯಾ, ಬ್ರಿಟನ್‌, ಚೀನ, ಫ್ರಾನ್ಸ್‌, ಪಾಕಿಸ್ಥಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್‌ ಹೊರತಾಗಿ 122 ದೇಶಗಳು ಈ ಒಪ್ಪಂದಕ್ಕೆ ಅಸ್ತು ಹೇಳಿದವು. ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್‌, ಇದೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದರು.ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಮಾವೇಶವೊಂದನ್ನು ನಡೆಸಲು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ 120ಕ್ಕೂ ಹೆಚ್ಚು ರಾಷ್ಟ್ರಗಳು ಒಪ್ಪಿದ್ದವು. ಅಂದಿನ ನಿರ್ಣಯಕ್ಕೂ ಭಾರತ ಒಪ್ಪಿರಲಿಲ್ಲ. ಈ ಒಪ್ಪಂದವು ತಮಗೆ ಒಪ್ಪಿಗೆಯಾಗಿಲ್ಲ. ಈ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಾರತ ಹೇಳಿತ್ತು. ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆ ಒಡ್ಡುತ್ತಿರುವ ಬೆದರಿಕೆಗಳಿಗೆ ಈ ಒಪ್ಪಂದವು ಯಾವುದೇ ಪರಿಹಾರ ಸೂಚಿಸುವುದಿಲ್ಲ ಎಂದು ಅಮೆರಿಕ, ಯುಕೆ ಮತ್ತು ಫ್ರಾನ್ಸ್‌ ಹೇಳಿದ್ದವು.  ‘ನಾವು ಈ ಒಪ್ಪಂದದ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಜನಾಂಗದ ಭರವಸೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂಬ ಅಂಶ ನಮ್ಮನ್ನು ಭಾವುಕಗೊಳಿಸಿದೆ’ ಎಂದು ಕೋಸ್ಟಾರಿಕಾ ರಾಯಭಾರಿ ಮತ್ತು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಲ್ಯಾನೆ ವ್ಹೈಟ್ ಗೊಮೇಜ್ ಸಂಭ್ರಮ ವ್ಯಕ್ತಪಡಿಸಿದರು. ಒಪ್ಪಂದಕ್ಕೆ ತೋರಿದ ಉತ್ಸಾಹವು  ಅಣ್ವಸ್ತ್ರ ಆತಂಕದ ಕುರಿತ ಕಳಕಳಿಯನ್ನು ತೋರುತ್ತದೆ. ಅಣ್ವಸ್ತ್ರ ರಹಿತ ಜಗತ್ತಿನ ಸಮಾನ ನಿರೀಕ್ಷೆಗಳನ್ನು ಪೂರೈಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ವಿಶ್ವಸಂಸ್ಥೆ  ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ನುಡಿದರು.

2017:  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತು. ದಾಳಿಯಲ್ಲಿ ಒಬ್ಬ ಸೇನಾ ಯೋಧ ಮತ್ತು ಆತನ ಪತ್ನಿ ಹುತಾತ್ಮರಾದರು.  ಬಂಡಿಪೋರಾದ ಹಾಜಿನ್‌ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ ಬೆಳಗ್ಗೆ ಉಗ್ರರು ದಾಳಿ ನಡೆಸಿದರು. ಮೂವರು ಯೋಧರು ಗಂಭೀರವಾಗಿ ಗಾಯಗೊಂಡರು. ಸ್ಥಳದಲ್ಲಿ ಭದ್ರತಾ ಪಡೆಗಳು ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆಸಿದರು. ಖಾರ್ರಿ ಕರ್ಮರ ಪ್ರದೇದ ಛಕ್ಕ ಡ ಬಾಗಿನ ಗ್ರಾಮಗಳು ಮತ್ತು ಭಾರತೀಯ ಸೇನಾ ನೆಲೆಗಳ ಮೇಲೆ ಪಾಕ್ ದಾಳಿ ನಡೆಸಿದ್ದು, ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದು ವರದಿಗಳು ಹೇಳಿದವು. ರಜೆ ಪಡೆದು ಮನೆಗೆ ಬಂದಿದ್ದ ಯೋಧ ಶೌಕತ್‌ ಅಲಿ (35), ಪತ್ನಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡರು. ಬೆಳಗ್ಗೆ 6.30 ರ ವೇಳೆಗೆ ದಾಳಿ ನಡೆಯಿತು. ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮೋರ್ಟಾರ್‌ ಶೆಲ್‌ಗ‌ಳನ್ನು ದಾಳಿಗೆ ಪಾಕ್‌ ಪಡೆಗಳು ಬಳಸಿದವು. ಪಾಕ್‌ ಪಡೆಗಳ ದಾಳಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿರುವುದಾಗಿ ಸೇನಾ ಮೂಲಗಳು ತಿಳಿಸಿದವು. ಬಂಡಿಪೋರಾದ ಹಾಜಿನ್‌ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ  ಉಗ್ರರ ದಾಳಿಯಿಂದ ಮೂವರು ಯೋಧರು ಗಂಭೀರವಾಗಿ ಗಾಯಗೊಂಡರು. ಹಿಜ್‌ಬುಲ್‌ ಮುಜಾಹಿದೀನ್‌ ಕಮಾಂಡರ್‌, ಉಗ್ರ ಬುರ್ಹಾನ್‌ ವಾನಿಯ ಹತ್ಯೆಗೆ ಇಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಸಲು ಸಿದ್ಧತೆ ನಡೆಸಲಾಗಿತ್ತು.

2016: ತಿರುವನಂತಪುರಂ: ಕೇರಳದ ಆರ್ಥಿಕ ಹೊರೆ ಸರಿದೂಗಿಸಲು ನೂತನ ಎಲ್ಡಿಎಫ್ ಸರ್ಕಾರ ಕೊಬ್ಬುಯುಕ್ತ ಜಂಕ್ ಆಹಾರ ಪದಾರ್ಥಗಳ ಮೇಲೆ 14.5% ಕೊಬ್ಬು ತೆರಿಗೆ (ಫ್ಯಾಟ್ ಟ್ಯಾಕ್ಸ್) ವಿಧಿಸಲು ಮುಂದಾಯಿತು. 2016-17 ಮುಂಗಡ ಪತ್ರದಲ್ಲಿ ತೆರಿಗೆಯನ್ನು ಘೋಷಿಸಲಾಯಿತು. ಜತೆಗೆ ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿತು. ಸಿದ್ಧ ಪದಾರ್ಥಗಳ ಮಳಿಗೆಗಳಾದ ಮೆಕ್ಡೊನಾಲ್ಡ್, ಸಬ್ವೇ, ಡೊಮಿನೋಸ್ನಂತಹ ಅಂತಾರಾಷ್ಟ್ರೀಯ ಮಳಿಗೆಗಳಿಗೆ ತೆರಿಗೆ ಹೊರೆ ಹೆಚ್ಚಿಸಿತು. ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕೇರಳ ಸರ್ಕಾರಕ್ಕೆ ಅವಶ್ಯಕತೆಯಿರುವ 12,000 ಕೋಟಿ ರೂ ಗಳನ್ನುಕೊಬ್ಬು ತೆರಿಗೆ’ (ಫ್ಯಾಟ್ ಟ್ಯಾಕ್ಸ್) ಯಿಂದ ಸಂಗ್ರಹಿಸಿ ಯೋಜನೆಗೆಳಿಗೆ ಚಾಲನೆ ನೀಡುವ ಉದ್ದೇಶ ಹೊಂದಿರುವುದಾಗಿ ಮುಂಗಡಪತ್ರ ಮಂಡಿಸಿದ ಕೇರಳದ ಹಣಕಾಸು ಸಚಿವ ಡಿ ಎಮ್ ಥಾಮಸ್ ಇಸಾಕ್ ಹೇಳಿದರು. ಈ ರೀತಿಯ ತೆರಿಗೆಗಳು ಸರ್ಕಾರದ ಬೊಕ್ಕಸಕ್ಕೆ 25% ಆದಾಯ ತಂದುಕೊಡುತ್ತವೆ ಎಂದು ಅವರು ನುಡಿದರು. ಪಿಜ್ಜಾ, ಪಾಸ್ತಾ, ಬರ್ಗರ್ ಮಾರಾಟ ಮಳಿಗೆಗಳಿಂದ 10 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗುತ್ತಿದೆ ಎಂದು ಇಸಾಕ್ ಹೇಳಿದರು.

2016: ಪ್ರಿಟೋರಿಯ: ಭಾರತ ಮತ್ತು ದಕ್ಷಿಣ ಆಫ್ರಿಕದ ಜನರ ಮಧ್ಯೆ ನೇರ ಸಂಪರ್ಕ ವಿಸ್ತರಣೆಗೆ ಉಭಯ ರಾಷ್ಟ್ರಗಳೂ ಒಪ್ಪಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ದಕ್ಷಿಣ ಆಫ್ರಿಕ ಅಧ್ಯಕ್ಷ ಜಾಕೋಬ್ ಜುಮಾ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಉಭಯ ರಾಷ್ಟ್ರಗಳ ಮಧ್ಯೆ ಆರ್ಥಿಕ ಸಹಕಾರ, ಬಾಂಧವ್ಯ ವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಂತಾರಾಷ್ಟ್ರೀಯ ವಿಷಯಗಳು ಮತ್ತು ಜಾಗತಿಕ ಸವಾಲುಗಳ ವಿಚಾರದಲ್ಲಿ ಒಟ್ಟಾಗಿ ಶ್ರಮಿಸಲು ಉಭಯ ರಾಷ್ಟ್ರಗಳೂ ಸಮ್ಮತಿಸಿವೆ ಎಂದು ಅವರು ನುಡಿದರು. ಭಯೋತ್ಪಾದನೆಯು ಜನರ ಸುರಕ್ಷತೆಗೆ ಸವಾಲು ಒಡ್ಡಿರುವ ಅತ್ಯಂತ ದೊಡ್ಡ ಸಮಸ್ಯೆ. ಅಪಾಯದ ವಿರುದ್ಧ ಪ್ರದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಎಚ್ಚರದಿಂದ ಇರಲು ಮತ್ತು ಸಕ್ರಿಯವಾಗಿ ಇದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಒಟ್ಟಾಗಿ ಇರುವ ಅಗತ್ಯ ಇದೆ ನಾವು ಒಪ್ಪಿದ್ದೇವೆ ಎಂದು ಮೋದಿ ನುಡಿದರುದಕ್ಷಿಣ ಆಫ್ರಿಕವು ಪರಮಾಣು ಪೂರೈಕೆದಾರರ ಸಮೂಹದ (ಎನ್ಎಸ್ಜಿ) ಸದಸ್ಯತ್ವ ಪಡೆಯುವ ಭಾರತದ ಯತ್ನಕ್ಕೆ ಬೆಂಬಲ ನೀಡಿರುವುದಕ್ಕಾಗಿ ನಾನು ಅಧ್ಯಕ್ಷ ಜುಮಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು. ವೃತ್ತಿ ಶಿಕ್ಷಣದಲ್ಲಿ ಪರಸ್ಪರರಿಗೆ ಅನುಕೂಲವಾಗುವಂತೆ ನಮ್ಮ ಸಾಮರ್ಥ್ಯಗಳನ್ನು ಬಳಸಿಕೊಳ್ಳಬೇಕಾದ ಅಗತ್ಯ ಇದೆ. ಖನಿಜ, ಗಣಿಗಾರಿಕೆ, ರಾಸಾಯನಿಕಗಳು ಮತ್ತು ಔಷಧವಸ್ತುಗಳ ಕ್ಷೇತ್ರಗಳಲ್ಲಿ ಇನ್ನಷ್ಟು ಹೂಡಿಕೆ ಮಾಡುವ ಮೂಲಕ ವಹಿವಾಟು ವಿಸ್ತರಣೆಗೆ ಅವಕಾಶಗಳಿವೆ ಎಂದು ಅವರು ನುಡಿದರು.

2016: ಅಹಮದಾಬಾದ್: ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಅವರಿಗೆ ರಾಷ್ಟ್ರದ್ರೋಹ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಷರತ್ತಿನ ಜಾಮೀನು ನೀಡಿತು. ಮುಂದಿನ 6 ತಿಂಗಳುಗಳ ಕಾಲ ರಾಜ್ಯದಿಂದ ಹೊರಗೆ ಇರಬೇಕು ಎಂದು ಷರತ್ತು ವಿಧಿಸಿದ ಹೈಕೋರ್ಟ್ ಹಾರ್ದಿಕ್ಗೆ ಜಾಮೀನು ಮಂಜೂರು ಮಾಡಿತು. ಆದರೆ ಇತರ ಪ್ರಕರಣಗಳು ಬಾಕಿ ಇರುವುದರಿಂದ ಹಾರ್ದಿಕ್ ಪಟೇಲ್ ಸೆರೆಮನೆಯಲ್ಲೇ ಮುಂದುವರೆಯುವುದಾಗಿ ಹಾರ್ದಿಕ್ ಪಟೇಲ್ ಪರ ವಕೀಲ ಜುಬಿನ್ ಭಾರ್ದ ಹೇಳಿದರು.

2016: ಡಲ್ಲಾಸ್: ಸ್ವ ವರ್ಣೀಯರನ್ನು ಗುಂಡಿಟ್ಟು ಹತ್ಯೆ ಮಾಡಿರುವುದನ್ನು ವಿರೋಧಿಸಿ ದಲ್ಲಾಸ್ನಲ್ಲಿ ನಡೆದ ಪ್ರತಿಭಟನೆ ವೇಳೆ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿ ಘಟನೆಯಲ್ಲಿ ಒಟ್ಟು ಐವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದರು. ಓರ್ವ ಮಹಿಳೆ ಸೇರಿ ಮೂವರು ಬಂದೂಕುಧಾರಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇನ್ನು ಅದೇ ಗುಂಪಿಗೆ ಸೇರಿದ ಇನ್ನೊಬ್ಬ ಬಂದೂಕುಧಾರಿ ತನ್ನನ್ನೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಯಿತು. ಘಟನೆಯ ಬಳಿಕ ಡಲ್ಲಾಸ್ನಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಹಿಂದಿನ ದಿನ 8.45 ಸುಮಾರಿಗೆ ಘಟನೆ ಸಂಭವಿಸಿದ್ದು, ದುಷ್ಕರ್ವಿುಗಳುಆಂಬುಷ್ ಸ್ಟೈಲ್ಅರ್ಥಾತ್ ಹೊಂಚುಹಾಕಿ ದಾಳಿ ನಡೆಸಿದ್ದಾರೆ. ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದ ಬೆನ್ನಲ್ಲೇ ಮೂವರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈ ವಾರದಲ್ಲಿ ಡಲ್ಲಾಸ್ ಬೇರೆ ಬೇರೆ ಭಾಗದಲ್ಲಿ ಕೃಷ್ಣ ವರ್ಣೀಯ ಇಬ್ಬರು ಯುವಕರು ಪೊಲೀಸ್ ಗುಂಡಿಗೆ ಬಲಿಯಾಗಿದ್ದರು. ಇದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

2016: ನವದೆಹಲಿ: ಸೇನೆ ಮತ್ತು ಅರೆ ಸೇನಾ ಪಡೆಗಳು ಮಣಿಪುರದಲ್ಲಿಮಿತಿ ಮೀರಿದ ಮತ್ತು ಸೇಡಿನ ಬಲಪ್ರಯೋಗ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಸಶಸ್ತ್ರ ಪಡೆಗಳ ವಿಶೇಷ ವಿಶೇಷಾಧಿಕಾರ ಕಾಯ್ದೆ ಅಥವಾ ಎಎಫ್ಎಸ್ಪಿಎ ವಿರುದ್ಧ ಕಳೆದ ಹಲವಾರು ವರ್ಷಗಳಿಂದ ಪ್ರತಿಭಟನೆ ನಡೆಯುತ್ತಿರುವ ಈಶಾನ್ಯ ರಾಜ್ಯದಲ್ಲಿ ಸಂಭವಿಸಿದ 1500ಕ್ಕೂ ಹೆಚ್ಚು ನಕಲಿ ಘರ್ಷಣೆಗಳ ವಿವರಗಳನ್ನು ನೀಡುವಂತೆಯೂ ಸುಪ್ರೀಂಕೋರ್ಟ್ ಸೂಚಿಸಿತು. ಎಎಫ್ಎಸ್ಪಿಎ ಈಶಾನ್ಯ ರಾಜ್ಯದಲ್ಲಿ ಸೇನೆಗೆ ಅಪಾರ ತುರ್ತು ಅಧಿಕಾರಗಳನ್ನು ಕಲ್ಪಿಸಿದೆ. ಎರಡು ದಶಕಗಳ ಅವಧಿಯಲ್ಲಿ ಸಂಭವಿಸಿದ ನಕಲಿ ಘರ್ಷಣೆಗಳ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರ ಮೂಲಕ ತನಿಖೆ ನಡೆಯಬೇಕು ಎಂದೂ ಸುಪ್ರೀಂಕೋರ್ಟ್ ಹೇಳಿತು. ಮಣಿಪುರದಲ್ಲಿ ನಡೆದಿರುವ ನಕಲಿ ಘರ್ಷಣೆ ಆರೋಪಗಳ ಬಗ್ಗೆ ತನ್ನದೇ ತನಿಖೆ ನಡೆಸಲು ಸೇನೆ ಮುಕ್ತವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿತು. ಸಾಮಾಜಿಕ ಹೋರಾಟಗಾರ್ತಿ ಐರೋಮ್ ಶರ್ಮಿಳಾ ಅವರು ಕಳೆದ 14 ವರ್ಷಗಳಿಂದ ಸೇನಾ ದೌರ್ಜನ್ಯಗಳ ವಿರುದ್ಧ ಮಣಿಪುರದಲ್ಲಿ ನಡೆದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದು, ಸ್ವತಃ 14 ವರ್ಷಗಳಿಂದ ಉಪವಾಸ ಮುಷ್ಕರವನ್ನೂ ಕೈಗೊಂಡಿದ್ದರು.

2016: ನವದೆಹಲಿ: ಕಳೆದೊಂದು ತಿಂಗಳಿಂದ ಒಂದಲ್ಲಾ ಒಂದು ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಸೇರುತ್ತಿರುವ ಆಮ್ ಆದ್ಮಿ ಪಕ್ಷದ ಇನ್ನೋರ್ವ ಶಾಸಕ ಈಗ ಕಂಬಿ ಹಿಂದೆ ಸೇರಿಕೊಂಡರು. ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ದಿಯೋಲಿ ಕ್ಷೇತ್ರದ ಆಪ್  ಶಾಸಕ ಪ್ರಕಾಶ್ ಜರ್ವಾಲ್ ಅವರನ್ನು ಗ್ರೇಟರ್ ಕೈಲಾಶ್ ಠಾಣೆ ಪೊಲೀಸರು ಬಂಧಿಸಿ ಅವರ ವಿರುದ್ಧ ಐಪಿಸಿ ಸೆಕ್ಷನ್ 354, 506, 509 ಮತ್ತು 34 ಪ್ರಕಾರ ಪ್ರಕರಣ ದಾಖಲಿಸಿದರು. ತನ್ನ ಜತೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿರುವ ಮಹಿಳೆ ಮೊದಲು ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಪೊಲೀಸ್ ಕಮೀಷನರ್ ಅವರನ್ನು ಭೇಟಿ ಮಾಡಿ ಬಳಿಕ ಪ್ರಕರಣ ದಾಖಲಿಸಿದ್ದರು. 25 ವರ್ಷ ಪ್ರಾಯದ ಪ್ರಕಾಶ್ ಜರ್ವಾಲ್ 2014 ಮೇ ತಿಂಗಳಲ್ಲಿ ದೆಹಲಿಯ ಜಲ ಮಂಡಳಿ ಇಂಜಿನಿಯರ್ ಒಬ್ಬರಿಗೆ ಥಳಿಸಿ ಬಂಧನಕ್ಕೊಳಗಾಗಿದ್ದರು.

2016: ನವದೆಹಲಿ: ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಧಿಕಾರವಾಪ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿತು. ಇದರೊಂದಿಗೆ ಆಪ್ ಸರ್ಕಾರಕ್ಕೆ ಇನ್ನೊಂದು ಹಿನ್ನಡೆಯಾಯಿತು. ರಾಜ್ಯದ ಅಧಿಕಾರ ವ್ಯಾಪ್ತಿ ಕುರಿತ ಬಿಕ್ಕಟ್ಟಿನ ವಿಚಾರದಲ್ಲಿ ಪ್ರಾಥಮಿಕ ವಿಷಯದ ಬಗ್ಗೆ ನಿರ್ಧರಿಸುವಂತೆ ದೆಹಲಿ ಹೈಕೋರ್ಟ್ಗೆ ನಿರ್ದೇಶಿಸಬೇಕು ಎಂಬುದಾಗಿ ಆಪ್ ಸರ್ಕಾರ ಸುಪ್ರೀಂಕೋರ್ಟಿಗೆ ಮನವಿ ಮಾಡಿತ್ತು. ‘ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷಯವನ್ನು ಆಲಿಸಿದ ಹೈಕೋರ್ಟ್ ವ್ಯಾಪ್ತಿ ವಿಚಾರವೂ ಸೇರಿದಂತೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಬಹುದುಎಂದು ಸುಪ್ರೀಂಕೋರ್ಟ್ ಹೇಳಿತು. ಕೇಂದ್ರ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಮೂಲಕ ಚಲಾಯಿಸಬಹುದಾದ ಅಧಿಕಾರ ಮತ್ತು ದೆಹಲಿ ಸರ್ಕಾರದ ಅಧಿಕಾರ ವ್ಯಾಪ್ತಿ ಕುರಿತು ದೆಹಲಿ ಹೈಕೋರ್ಟ್ಗೆ ಆಪ್ ಸರ್ಕಾರ ಅರ್ಜಿ ಸಲ್ಲಿಸಿತ್ತು.

2016: ಮುಂಬೈ: ಕೇಂದ್ರದಲ್ಲಿ ಮೋದಿ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ 11 ಹೊಸ ಸಚಿವರನ್ನು ಕ್ಯಾಬಿನೆಟ್ಗೆ ಸೇರ್ಪಡೆ ಮಾಡುವ ಮೂಲಕ ಶುಕ್ರವಾರ ತಮ್ಮ ಸಂಪುಟ ವಿಸ್ತರಿಸಿದರು. 6 ಜನ ಕ್ಯಾಬಿನೆಟ್ ದರ್ಜೆ ಸಚಿವರಾದರೆ 5 ಮಂದಿ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶಿವಸೇನೆಯು ಕ್ಯಾಬಿನೆಟ್ ವಿಸ್ತರಣೆಗೆ ಸಹಮತ ಸೂಚಿಸಿಲ್ಲ ಆದರೂ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.ರಾಮ್ ಶಿಂಧೆ, ಸಂಭಾಜಿ ಪಾಟಿಲ್, ಪಾಂಡುರಂಗ ಫಂಡ್ಕರ್, ಜಯಕುಮಾರ ರಾವಲ್ ಮತ್ತು ಮಹಾದೇವ ಜಂಕರ್ ಸಂಪುಟ ಸೇರಿರುವ ಪ್ರಮುಖರು.
2008: ಭಾರತ- ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದವನ್ನು ಕಾರ್ಯಗತಗತಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ `ಐಎಇಎ' ಜೊತೆಗಿನ ಒಪ್ಪಂದ ಪೂರ್ಣಗೊಳಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಟೋಕಿಯೋದಲ್ಲಿ ನೀಡಿದ ಹೇಳಿಕೆಯಿಂದ ಕೆರಳಿದ ಎಡಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂದಕ್ಕೆ ಪಡೆಯುವುದಾಗಿ ಪ್ರಕಟಿಸಿದವು.

2007: ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕ ಚಂದ್ರಶೇಖರ್ ಅವರು ಬಹುಕಾಲದ ಅಸ್ವಸ್ಥತೆಯ ನಂತರ ಈದಿನ ನವದೆಹಲಿಯ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ಒಂದು ಕಾಲಕ್ಕೆ ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕರಿವರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ರಕ್ತದ ಕ್ಯಾನ್ಸರಿನಿಂದ ಬಳಲಿದ್ದ ಅವರು ಈದಿನ ಬೆಳಗ್ಗೆ 8.45ರ ವೇಳೆಗೆ ಕೊನೆಯುಸಿರೆಳೆದರು. ಹಾಲಿ ಲೋಕಸಭಾ ಸದಸ್ಯರಾಗಿದ್ದ ಚಂದ್ರಶೇಖರ್ ದೇಶದ 11ನೇ ಪ್ರಧಾನಿಯಾಗಿ 1990ರ ನವೆಂಬರ್ 10ರಿಂದ 1991ರ ಜೂನ್ 21ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಬೆಂಬಲದೊಡನೆ ಅಲ್ಪ ಬಹುಮತದ ಸರ್ಕಾರವನ್ನು ಮುನ್ನಡೆಸಿದ್ದರು. ಉತ್ತರ ಪ್ರದೇಶದ ಬಲ್ಲಿಯಾ ಕ್ಷೇತ್ರದಿಂದ ಎಂಟು ಬಾರಿ ಲೋಕಸಭೆಗೆ ಮತ್ತು ಒಂದು ಬಾರಿ ರಾಜ್ಯಸಭೆಗೆ ಚುನಾಯಿತರಾಗಿದ್ದ ಅವರು, ಆರ್ಥಿಕ ಉದಾರೀಕರಣದ ನೀತಿಗಳು ಮತ್ತು ವೈಯಕ್ತಿಕ ರಾಜಕಾರಣವನ್ನು ಬಲವಾಗಿ ವಿರೋಧಿಸಿದವರು. ತತ್ವ-ಸಿದ್ಧಾಂತದ ರಾಜಕಾರಣಕ್ಕೆ ಹೆಸರಾಗಿದ್ದ ಅವರು ಪ್ರಧಾನಿಯಾಗುವ ಮುನ್ನ ಯಾವುದೇ ಸರ್ಕಾರಿ ಅಧಿಕಾರದ ಸ್ಥಾನವನ್ನು ಅಲಂಕರಿಸಿರಲಿಲ್ಲ. ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರೊಡನೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಜನತಾದಳದಿಂದ ವಿಭಜನೆಗೊಂಡು ಸಮಾಜವಾದಿ ಜನತಾ ಪಕ್ಷ ರಚಿಸಿಕೊಂಡ ಅವರು, ದಿವಂಗತ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಬೆಂಬಲದಿಂದ ಅಲ್ಪಮತದ ಸರ್ಕಾರ ರಚಿಸಿದರು. ಆದರೆ ಸ್ಪಲ್ಪವೇ ಸಮಯದಲ್ಲಿ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ಪರಿಣಾಮ ಅವರ ಸರ್ಕಾರ ಪತನಗೊಂಡಿತು. ಇತ್ತೀಚಿನ ವರ್ಷಗಳಲ್ಲಿನ ಧನಬಲದ ರಾಜಕಾರಣದ ಮಧ್ಯೆ ತಮ್ಮ ಪಕ್ಷವನ್ನು ಬಲವಾಗಿ ಕಟ್ಟಲು ಅಸಹಾಯಕರಾಗಿದ್ದ ಚಂದ್ರಶೇಖರ್, ತಮ್ಮ ಸ್ವಕ್ಷೇತ್ರದಿಂದ ಮಾತ್ರ ಅಜಾತಶತುವಿನಂತೆ ಗೆಲ್ಲುತ್ತಲೇ ಬಂದರು. ಆದರೆ ಅವರದು ಲೋಕಸಭೆಯಲ್ಲಿ ಒಂಟಿ ದನಿಯಾಗಿತ್ತು. ನೇರ ನಡೆ-ನುಡಿಯ ಹಿರಿಯ ರಾಜಕಾರಣಿಯಾಗಿದ್ದ ಅವರು ಎಲ್ಲ ಪಕ್ಷಗಳ ಹಿರಿಯ ನಾಯಕರೊಡನೆ ಸರಾಗವಾಗಿ ಬೆರೆಯುವ `ಗೌರವಾನ್ವಿತ ವ್ಯಕ್ತಿ' ಯಾಗಿದ್ದರು.

2007: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಪ್ರಸಿದ್ಧ ಯಡೆಯೂರು ಕ್ಷೇತ್ರದಲ್ಲಿ ಆನೆಯ ತುಳಿತಕ್ಕೆ ಒಳಗಾಗಿ ಸಚಿನ್ ಎಂಬ ಎಂಟು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತನಾದನು. ದೇವಾಲಯ ಆವರಣದಲ್ಲೇ ಬಾಲಕ ಆನೆಗೆ ಬಾಳೆಹಣ್ಣು ನೀಡುತ್ತಿದ್ದಾಗ ಈ ಘಟನೆ ನಡೆಯಿತು. ಈ ಬಾಲಕ ಮೂಲತಃ ಅರಕಲಗೂಡಿನವರಾದ ಮಂಜುನಾಥ ಮತ್ತು ಶ್ರೀಮತಿ ಮಂಜುನಾಥ ದಂಪತಿಯ ಪುತ್ರ. ಇವರು ಪ್ರಸ್ತುತ ಬೆಂಗಳೂರಿನ ನಂದಿನಿ ಲೇ ಔಟ್ ನಿವಾಸಿಗಳು.

2007: ಸ್ವಿಟ್ಜರ್ಲೆಂಡ್ ಆಟಗಾರ ರೋಜರ್ ಫೆಡರರ್ ಸತತ ಐದು ಬಾರಿ ವಿಂಬಲ್ಡನ್ ಪ್ರಶಸ್ತಿ ಪಡೆದ ಸಾಧನೆ ಮಾಡಿದರು. ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ಬಿನ ಸೆಂಟರ್ ಕೋರ್ಟಿನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನಿನ ರಫೆಲ್ ನಡಾಲ್ ವಿರುದ್ಧ ಫೆಡರರ್ 7-6 (9-7), 4-6, 7-6 (7-3), 2-6, 6-2ರಲ್ಲಿ ಗೆಲುವಿನ ನಗೆ ಬೀರಿದರು. ಬೋರ್ನ್ ಬರ್ಗ್ ಅವರನ್ನು ಬಿಟ್ಟರೆ ಸತತ ಐದು ಸಲ ವಿಂಬಲ್ಡನ್ ಚಾಂಪಿಯನ್ ಆದ ಶ್ರೇಯಸ್ಸು ಫೆಡರರ್ ಒಬ್ಬರದೇ.

2007: ಸಂಪತ್ತಿನ ಗಳಿಕೆಯಲ್ಲಿ ಹಿರಿಯಣ್ಣ ಮುಖೇಶ್ ಅಂಬಾನಿ ಅವರನ್ನು ಹಿಂಬಾಲಿಸುತ್ತಿರುವ ಅನಿಲ್ ಅಂಬಾನಿ ಸಹ ಪ್ರತಿಷ್ಠಿತ `ಲಕ್ಷ ಕೋಟಿ ಕ್ಲಬ್'ಗೆ (ಟ್ರಿಲಿಯನರ್ ಕ್ಲಬ್) ಸೇರ್ಪಡೆಯಾಗಿ, ಈ ಗೌರವಕ್ಕೆ ಪಾತ್ರರಾದ ದ್ವಿತೀಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಿಯಲ್ ಎಸ್ಟೇಟ್ ಕ್ಷೇತ್ರದ ದೈತ್ಯ ಕಂಪೆನಿ ಡಿಎಲ್ಎಫ್ನ ಅಧ್ಯಕ್ಷ ಕೆ.ಪಿ.ಸಿಂಗ್ ಅವರು ಸಂಪತ್ತಿನ ಗಳಿಕೆಯಲ್ಲಿ ಅಂಬಾನಿ ಸಹೋದರರ ನಂತರದ ಮೂರನೇ ಸ್ಥಾನವನ್ನು ಪಡೆದರು.

2007: ಜಗತ್ತಿನ ಅತ್ಯಂತ ಸುಂದರ ಸ್ಮಾರಕ ಎಂದೇ ಪರಿಗಣಿಸಲಾಗಿರುವ ತಾಜ್ ಮಹಲ್ ನಿರೀಕ್ಷೆಯಂತೆಯೇ ಹೊಸ ಏಳು ಅದ್ಭುತಗಳಲ್ಲಿ ಒಂದೆನಿಸಿತು. ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಕೂಡಾ ಒಂದು ಎಂಬುದಾಗಿ ಪೋರ್ಚುಗಲ್ಲಿನ ಲಿಸ್ಬನ್ನಿನಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಲಾಯಿತು. ಬಾಲಿವುಡ್ ನಟಿ ಬಿಪಾಸಾ ಬಸು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ಏಳು ಅದ್ಭುತಗಳ ಆಯ್ಕೆ ಅಧಿಕೃತವಲ್ಲದಿದ್ದರೂ ಮೊಘಲರ ಕಾಲದ್ದೆಂದು ಹೇಳಲಾಗುತ್ತಿರುವ ಈ ಅಚ್ಚರಿದಾಯಕ ಕಟ್ಟಡ ಭಾರತೀಯರು ಹೆಮ್ಮೆಪಡುವಂತೆ ಮಾಡಿತು. ವಿಶ್ವದಾದ್ಯಂತ ಹೊಸ ಏಳು ಅದ್ಭುತಗಳನ್ನು ಗುರುತಿಸುವ ಕಾರ್ಯಕ್ರಮವನ್ನು ಪೋರ್ಚುಗಲ್ಲಿನ ಚಿತ್ರ ನಿರ್ಮಾಪಕ ಬರ್ನಾರ್ಡ್ ವೆಬರ್ ಆರಂಭಿಸಿದ್ದರು. ಈ ಅಮೃತಶಿಲೆಯ ಕಟ್ಟಡ ಶೇಕಡಾವಾರು ಮತದಾನದಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಒಟ್ಟು ಚಲಾವಣೆಯಾದ ಮತಗಳ ಪೈಕಿ 20 ಶೇಕಡಾ ಮತ ಪಡೆದ ಪೆರುವಿನ ಮಾಚು ಪಿಚು ಮೊದಲ ಸ್ಥಾನ ಗಿಟ್ಟಿಸಿತು. ವಿಶ್ವದ 100 ಕೋಟಿಗೂ ಹೆಚ್ಚು ಮಂದಿ ಮತದಾನ ಮಾಡಿದ್ದರು. `ನ್ಯೂ ಸೆವೆನ್ ವಂಡರ್ಸ್ ಆಫ್ ವರ್ಲ್ಡ್' ಸಂಸ್ಥೆ ಪೋರ್ಚುಗಲ್ಲಿನ ಲಿಸ್ಬನ್ನಿನ `ಎಸ್ಟಾಡಿಯೊ ಡ ಲುಜ್' ಹಾಲ್ನಲ್ಲಿ ಸಮಾರಂಭ ಏರ್ಪಡಿಸಿತ್ತು. ತಾಜ್ ಮಹಲ್ ಮತ್ತು ಮಾಚು ಪಿಚು ಅಲ್ಲದೆ ಚೀನಾದ ಮಹಾಗೋಡೆ, ಜೋರ್ಡಾನಿನ ಪೆಟ್ರಾ ಸ್ಮಾರಕ, ಬ್ರೆಜಿಲ್ ನಲ್ಲಿರುವ ಏಸುಕ್ರಿಸ್ತನ ಪ್ರತಿಮೆ, ಮೆಕ್ಸಿಕೊದ ಚಿಚೆನ್ ಇಟ್ಜಾ ಪಿರಾಮಿಡ್ ಮತ್ತು ರೋಮ್ ನಗರದ ಮಧ್ಯಭಾಗದಲ್ಲಿರುವ ಕಲೊಸಿಯಂ (ವೃತ್ತಕಾರದ ಬೃಹತ್ ರಂಗಮಂಟಪ) ಏಳು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ಸಮಾರಂಭದಲ್ಲಿ ಪ್ರಕಟಿಸಲಾಯಿತು. ತಾಜ್ ಮಹಲ್ ಗೆ ಸಂಬಂಧಿಸಿದ ಪ್ರಶಸ್ತಿ ಪತ್ರವನ್ನು ಆಗ್ರಾದ ಮೇಯರ್ ಅಂಜುಲಾ ಸಿಂಗ್ ಸ್ವೀಕರಿಸಿದರು.

2007: ವರ್ಷದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿರುವ ಮೇಘಾಲಯದ ಕಣ್ಸೆಳೆಯುವ ಪಟ್ಟಣ ಚಿರಾಪುಂಜಿಗೆ 'ಸೊಹ್ರಾ' ಎಂಬುದಾಗಿ ಮರುನಾಮಕರಣ ಮಾಡಲು `ಸಯೆಮ್' ಬುಡಕಟ್ಟಿನ ಮುಖ್ಯಸ್ಥ, ಪ್ರಭಾವಶಾಲಿ ಖಾಸಿ ವಿದ್ಯಾರ್ಥಿ ಸಂಘಟನೆ (ಕೆಎಸ್ಯು) ಹಾಗೂ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡವು. ಸ್ಥಳೀಯರು `ಸೊಹ್ರಾ'ಎಂದೇ ಕರೆಯುವ ಇದನ್ನು ಬ್ರಿಟಿಷ್ ಆಡಳಿತಗಾರರು ಸರಿಯಾಗಿ ಉಚ್ಚರಿಸಲಾಗದೇ `ಚೆರ್ರಾ' ಎಂದು ಅಪಭ್ರಂಶಗೊಳಿಸಿದ್ದರು. 1830ರಲ್ಲಿ `ಸೊಹ್ರಾ'ದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದ್ದ ಬ್ರಿಟಿಷರು `ಪುಂಜೊ' ಎಂಬ ಬಂಗಾಳಿ ಪದವನ್ನು `ಚೆರ್ರಾ'ಕ್ಕೆ ಸೇರಿಸಿದರು. ಆಗ ಅದು ಚಿರಾಪುಂಜಿ ಎಂದು ಬಳಕೆಗೆ ಬಂದಿತು.

2007: ಕೋಲ್ಕತ್ತ ಸಮೀಪದ ಚಿತ್ತೂರಿನಿಂದ ಸಂಚಾರವನ್ನು ಆರಂಭಿಸಿದ ಪ್ರಾಯೋಗಿಕ ರೈಲು ಈದಿನ ಬೆಳಗ್ಗೆ ಭಾರತೀಯ ಕಾಲಮಾನ 10.45ರ ಹೊತ್ತಿಗೆ ಬಾಂಗ್ಲಾದೇಶದ ದರ್ಶನಾ ರೈಲ್ವೆ ನಿಲ್ದಾಣವನ್ನು ತಲುಪಿತು. ಇದರೊಂದಿಗೆ ಬಂಗಾಳದಿಂದ ಬಾಂಗ್ಲಾ ನಡುವೆ ರೈಲು ಸಂಚಾರ ಆರಂಭಿಸುವ ಉದ್ದೇಶ ಭಾಗಶಃ ಯಶಸ್ಸು ಕಂಡಿತು.

2007: ನಾಟಿಂಗ್ ಹ್ಯಾಮಿನಲ್ಲಿ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸೊಗಸಾದ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ತಂಡ ವಿಜಯದುಂಧುಬಿ ಮೊಳಗಿಸಿತು. ಟ್ರೆಂಟ್ ಬ್ರಿಜ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಪ್ರವಾಸಿ ವಿಂಡೀಸ್ 93 ರನ್ನುಗಳಿಂದ ಆತಿಥೇಯ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿತು.

2006: ಉಡುಪಿ ಅಂಬಾಗಿಲಿನ ಸುಸಿ ಗ್ಲೋಬಲ್ ರೀಸರ್ಚ್ ಸೆಂಟರ್ ಅಧ್ಯಕ್ಷ ಬಿ. ವಿಜಯ ಕುಮಾರ್ ಹೆಗ್ಡೆ ಅವರು ಕಡಲ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಸಂಶೋಧನೆಗೆ ಬೌದ್ಧಿಕ ಹಕ್ಕು (ಪೇಟೆಂಟ್) ಪಡೆದುಕೊಂಡಿರುವುದಾಗಿ ಪ್ರಕಟಿಸಿದರು. 27 ವರ್ಷಗಳಿಂದ ನಡೆಸಿದ ಸಂಶೋಧನೆಗೆ ಮೂರೇ ವರ್ಷದಲ್ಲಿ ಕೇಂದ್ರ ಸರ್ಕಾರಿ ಆಧೀನದ ಪೇಟೆಂಟ್ ಕಚೇರಿ ಬೌದ್ಧಿಕ ಹಕ್ಕನ್ನು ನೀಡಿದ್ದು, ಅಧ್ಯಯನ ಯೋಜನೆಗಾಗಿ 2.5 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದು, ಯೋಜನೆ ಅನುಷ್ಠಾನಕ್ಕೆ ಕಂಪೆನಿ ಸ್ಥಾಪಿಸಲಾಗುವುದು ಎಂದು ಹೆಗ್ಡೆ ಹೇಳಿದರು.

2006: ಭಾರತೀಯ ಇಂಗ್ಲಿಷ್ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಕನ್ನಡಿಗ, ಹಾಸನದ ರಾಜಾರಾವ್ ಅವರು ಅಮೆರಿಕದ ಟೆಕ್ಸಾಸ್ನ ಆಸ್ಟಿನ್ನಲ್ಲಿ (98) ನಿಧನರಾದರು. 1908ರಲ್ಲಿ ಹಾಸನದಲ್ಲಿ ಎಚ್.ಎಸ್. ಕೃಷ್ಣಸ್ವಾಮಿ- ಜಯಲಕ್ಷ್ಮಮ್ಮ ದಂಪತಿಯ ಮಗನಾಗಿ ಜನಿಸಿದ್ದ ರಾಜಾರಾವ್ ಅವರ ಸ್ವಂತ ಊರು ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ. 1969ರಲ್ಲಿ ಭಾರತ ಸರ್ಕಾರದ `ಪದ್ಮಭೂಷಣ', 1988ರಲ್ಲಿ ಸಾಹಿತಿ ವಲಯದ ಅತ್ಯಂತ ಪ್ರತಿಷ್ಠಿತ `ನ್ಯೂಸ್ಟಾಡ್ಟ್ ಇಂಟರ್ ನ್ಯಾಷನಲ್ ಪ್ರೈಜ್' ಪಡೆದಿದ್ದ ರಾಜಾರಾವ್ ತಮ್ಮ ಕೃತಿಗಳ ಮೂಲಕ ಹುಟ್ಟೂರನ್ನು ಇಡೀ ಜಗತ್ತಿಗೆ ಪರಿಚಯಿಸಿದ ವ್ಯಕ್ತಿ. ಯೌವನದ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲೂ ತೊಡಗಿಸಿಕೊಂಡಿದ್ದ ಅವರ ಕೃತಿಗಳಲ್ಲಿ `ಕಾಂತಾಪುರ', `ದಿ ಕೌ ಆಫ್ ದಿ ಬ್ಯಾರಿಕೇಡ್ಸ್ ಮತ್ತು ಇತರ ಕಥೆಗಳು', `ವಿದರ್ ಇಂಡಿಯಾ' `ದಿ ಸರ್ಪೆಂಟ್ ಅಂಡ್ ದಿ ರೋಪ್', `ದಿ ಕ್ಯಾಟ್ ಅಂಡ್ ಶೇಕ್ಸ್ಪಿಯರ್' `ದಿ ಮೀನಿಂಗ್ ಆಫ್ ಇಂಡಿಯಾ' ಇತ್ಯಾದಿ ಪ್ರಮುಖವಾದವು.

2006: ಹಿರಿಯ ಸಾಹಿತಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ `ಅನಕೃ- ನಿರ್ಮಾಣ್ ಪ್ರಶಸ್ತಿ' ಪ್ರದಾನ ಮಾಡಲಾಯಿತು.

2006: ಲಂಡನ್ನಿನಲ್ಲಿ ನಡೆದ ಮಹಿಳಾ ವಿಂಬಲ್ಡನ್ ಟೆನಿಸ್ ಸಿಂಗಲ್ಸ್ ಫೈನಲ್ಸಿನಲ್ಲಿ ಫ್ರಾನ್ಸಿನ ಅಮೆಲಿ ಮೌರೆಸ್ಮೊ ಅವರು ಬೆಲ್ಜಿಯಂನ ಜಸ್ಟಿನ್ ಹೆನಿನ್ ಹಾರ್ಡಿನ್ ಅವರನ್ನು 2-6, 6-3, 6-4 ಅಂತರದಲ್ಲಿ ಪರಾಭವಗೊಳಿಸಿ ಚೊಚ್ಚಲ `ಮಹಿಳಾ ವಿಂಬಲ್ಡನ್ ಕಿರೀಟ'ಕ್ಕೆ ಪಾತ್ರರಾದರು.

2006: ಮಾಲೀಕರಿಂದ ಪತ್ರಿಕೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಆಪಾದಿಸಿ ಕ್ಯಾಲಿಫೋರ್ನಿಯಾದ `ಸಂಟಾ ಬಾರ್ಬಾರಾ ನ್ಯೂಸ್ ಪ್ರೆಸ್' ಪತ್ರಿಕೆಯ ಆರು ಮಂದಿ ಹಿರಿಯ ಸಂಪಾದಕರು ಮತ್ತು ದೀರ್ಘ ಕಾಲದ ಅಂಕಣಕಾರರೊಬ್ಬರು ಪತ್ರಿಕೆಗೆ ರಾಜೀನಾಮೆ ನೀಡಿದರು ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿತು.

1981: ಬೆಂಗಳೂರು ನಗರದ ಕಳ್ಳಬಟ್ಟಿ ಸಾರಾಯಿ ದುರಂತದಲ್ಲಿ ಸತ್ತವರ ಸಂಖ್ಯೆ 224ಕ್ಕೆ ಏರಿತು. ಮೈಸೂರಿನಲ್ಲೂ ಕಳ್ಳಬಟ್ಟಿ ಸಾರಾಯಿ ಸೇವನೆಯಿಂದ 25 ಮಂದಿ ಪೌರ ಕಾರ್ಮಿಕರ ಪೈಕಿ 12 ಮಂದಿ ಅಸು ನೀಗಿದರು.

1936: ಶಿವರಾಮು ಎಂದೇ ಖ್ಯಾತರಾಗಿದ್ದ ಸಾಹಿತಿ ಎಂ.ಎಸ್. ಶಿವರಾಮಯ್ಯ ಅವರು ಸೀತಾರಾಮಯ್ಯ- ಶಿವಮ್ಮ ದಂಪತಿಯ ಮಗನಾಗಿ ಮಳವಳ್ಳಿಯಲ್ಲಿ ಜನಿಸಿದರು. ಸಾವರ್ಕರ್ ಅವರ `ಗೋಮಾಂತಕ' ಗದ್ಯರೂಪವನ್ನು `ನೆತ್ತರು ತಾವರೆ' ಹೆಸರಿನಲ್ಲಿ ಕನ್ನಡಕ್ಕೆ ತಂದ ಶಿವರಾಮು `ರಣವೀಳ್ಯ', `ಅಕ್ಕ ನಿವೇದಿತಾ', `ಕನ್ನಡ ಕಡುಗಲಿಗಳು' ಕೃತಿಗಳ ಮೂಲಕ ಜನರಿಗೆ ಸುಪರಿಚಿತರು. ಸಾವರ್ಕರ್ ಜೀವನ ಚರಿತ್ರೆಯ ಕಾದಂಬರಿ ರೂಪ `ಆತ್ಮಾಹುತಿ', ಉಜ್ವಲ ರಾಷ್ಟ್ರಗೀತೆ ವಂದೇ ಮಾತರಂಗೆ ಬಂದ ದುಸ್ಥಿತಿಯನ್ನು ಬಣ್ಣಿಸುವ `ಒಂದು ಕಥೆ ಒಂದು ವ್ಯಥೆ' ಕೃತಿಗಳು ಅವರ ಕೃತಿಗಳಲ್ಲಿ ಅತ್ಯಂತ ಪ್ರಮುಖ ಕೃತಿಗಳು. ಶಿವರಾಮ ಕಾರಂತರಿಂದ ಹೊಗಳಿಕೆಗೆ ಪಾತ್ರರಾದ ಶಿವರಾಮು 1999ರ ನವೆಂಬರ್ 14ರಂದು ನಿಧನರಾದರು.


No comments:

Post a Comment