ನಾನು ಮೆಚ್ಚಿದ ವಾಟ್ಸಪ್

Sunday, October 18, 2020

ಇಂದಿನ ಇತಿಹಾಸ History Today ಅಕ್ಟೋಬರ್ 18

 ಇಂದಿನ ಇತಿಹಾಸ  History Today ಅಕ್ಟೋಬರ್ 18

2020: ನವದೆಹಲಿ: ರಹಸ್ಯ ಕಾರ್ಯಾಚರಣೆ ಅಥವಾ ವಿಧ್ವಂಸಕ ಕೃತಗಳನ್ನು ನಾಶಪಡಿಸುವ ಭಾರತೀಯ ನೌಕಾಪಡೆಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ನೌಕಾ ಆವೃತ್ತಿಯನ್ನು 2020 ಅಕ್ಟೋಬರ್ 18 ಭಾನುವಾರ ಅರಬ್ಬೀ ಸಮುದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಿತು ಎಂದು ಅಧಿಕಾರಿಗಳು ತಿಳಿಸಿದರು. ಅತ್ಯಂಕ ಸಂಕೀರ್ಣವಾದ ಕೌಶಲ್ಯಭರಿತ ತಂತ್ರಜ್ಞಾನ ಹೊಂದಿರುವ, ಸೂಜಿ ಮೊನೆಯಷ್ಟು  ನಿಖರತೆಯೊಂದಿಗೆ ಗುರಿ ಸಾಧಿಸುವಂತಹ  ಈ ಕ್ಷಿಪಣಿಯನ್ನು ಐಎನ್‌ಎಸ್ ಚೆನ್ನೈಯಿಂದ ಪರೀಕ್ಷಾರ್ಥವಾಗಿ ಹಾರಿಸಲಾಯಿತು. ನೌಕಾ ಮೇಲ್ಮೈಯಲ್ಲಿ ದೀರ್ಘ ವ್ಯಾಪ್ತಿಯಲ್ಲಿರುವ ಗುರಿಗಳನ್ನು ‘ಬ್ರಹ್ಮೋಸ್ ನಿಖರವಾಗಿ ತಲುಪಲಿದೆ. ಇದು ನೌಕಾಪಡೆಯಲ್ಲಿ ವಿಧ್ವಂಸಕ ಕೃತ್ಯವನ್ನು ತಡೆಯುವ ಮತ್ತೊಂದು ಅಸ್ತ್ರವಾಗಲಿದೆ’ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿತು. ಭಾರತ-ರಷ್ಯಾ ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೋಸ್ಪೇಸ್, ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ತಯಾರಿಸುತ್ತದೆ. ಇದನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂ ವೇದಿಕೆಗಳಿಂದ ಉಡಾಯಿಸಬಹುದು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮೇಲ್ಮನವಿ ಸಲ್ಲಿಸಲು ಅತಿಯಾಗಿ ವಿಳಂಬ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಇದರಿಂದಾಗಿ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದ್ದು, ಈ ನಷ್ಟವನ್ನು ಸಂಬಂಧಿತ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ನಿರ್ದೇಶಿಸಿದೆ. ‘ಮೇಲ್ಮನವಿ ಸಲ್ಲಿಸಲು ಶಾಸನ ನಿಗದಿಪಡಿಸಿದ ಕಾಲ ಮಿತಿಯನ್ನು ಸರ್ಕಾರಿ ಅಧಿಕಾರಿಗಳು ನಿರ್ಲಕ್ಷಿಸಲು ನ್ಯಾಯಾಲಯ ಅವಕಾಶ ನೀಡುವುದಿಲ್ಲ‘ ಎಂದು ನ್ಯಾಯಮೂರ್ತಿ ಎಸ್.ಕೆ.ಕೌಲ್ ಮತ್ತು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರನ್ನು ಒಳಗೊಂಡ ಪೀಠವು ಹೇಳಿದೆ.  ‘ಸರ್ಕಾರಿ ಆಡಳಿತ ಯಂತ್ರಗಳು ಸಕಾಲದಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಅಸಮರ್ಥವಾಗಿದ್ದರೆ, ಮೇಲ್ಮನವಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡುವುದು ಅಥವಾ ಕಾಲಾವಕಾಶ ಕೇಳುವುದು ಪರಿಹಾರವಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಎತ್ತಲಾಗಿದೆ‘ ಎಂದು ಪೀಠ ಹೇಳಿತು. ಮಧ್ಯಪ್ರದೇಶ ಸರ್ಕಾರ ೬೬೩ ದಿನಗಳ ನಂತರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸುವ ವೇಳೆ ನ್ಯಾಯಪೀಠ ‘ಕಾನೂನಿನ ಪ್ರಕಾರ ನಿಗದಿಪಡಿಸಿರುವ ಸಮಯದೊಳಗೆ ಮೇಲ್ಮನವಿಗಳನ್ನು ಸಲ್ಲಿಸಬೇಕು‘ ಎಂದು ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಚಾವುಂಡರಾಯ ದತ್ತಿ ಪ್ರಶಸ್ತಿ’ಗೆ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಆಯ್ಕೆಯಾಗಿದ್ದಾರೆ. ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ 2020 ಅಕ್ಟೋಬರ್ 17 ಶನಿವಾರ ಈ ಆಯ್ಕೆ ಮಾಡಲಾಯಿತು. ಜೈನ ಸಾಹಿತ್ಯದಲ್ಲಿ ಕೃಷಿ ಮಾಡಿದ ಲೇಖಕರಿಗೆ ನೀಡಲಾಗುತ್ತಿರುವ ಈ ಪ್ರಶಸ್ತಿಯು  ೩೦ ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ. ಆಯ್ಕೆ ಸಮಿತಿಯ ಸಭೆಯಲ್ಲಿ ಲೇಖಕಿ ಡಾ. ಪದ್ಮಿನಿ ನಾಗರಾಜ್, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ರಾಜಶೇಖರ ಹತಗುಂದಿ ಹಾಗೂ ವ.ಚ. ಚನ್ನೇಗೌಡ ಇದ್ದರು ಎಂದು ಪ್ರಕಟಣೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು: ಯಕ್ಷಗಾನದ ಹಿರಿಯ ಕಲಾವಿದ, ಮದ್ದಳೆಯ ಮಾಂತ್ರಿಕರೆಂದೇ ಖ್ಯಾತರಾದ ಹಿರಿಯಡ್ಕ ಗೋಪಾಲ್ ರಾವ್ (೧೦೧) ಬೆಂಗಳೂರಿನ  ಸ್ವಗೃಹ ಒಂತಿಬೆಟ್ಟುವಿನಲ್ಲಿ  2020 ಅಕ್ಟೋಬರ್ 17 ಶನಿವಾರ ನಿಧನರಾದರು. ಅವರು ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದರು.ಗೋಪಾಲರಾವ್ ಅವರು ೧೯೧೯ರ ಡಿಸೆಂಬರ್ ೧೫ರಂದು ಉಡುಪಿ ತಾಲ್ಲೂಕಿನ ಹಿರಿಯಡ್ಕದಲ್ಲಿ ಜನಿಸಿದರು. ಹಿರಿಯಡ್ಕ ಮೇಳದಲ್ಲಿ ಮದ್ದಳೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಯಕ್ಷಗಾನದ ಬಡಗುತಿಟ್ಟಿನಲ್ಲಿ ಏರು ಮದ್ದಳೆ ಬಾರಿಸುವುದರಲ್ಲಿ ಅವರು ನಿಷ್ಣಾತರು. ಹಿರಿಯ ಭಾಗವತರಾದ ಶೇಷಗಿರಿ ರಾವ್ ಅವರ ಭಾಗವತಿಗೆ ಮದ್ದಳೆ ಬಾರಿಸುತ್ತಿದ್ದ ಪರಿ ಇಂದಿಗೂ ಮರೆಯುವಂತಿಲ್ಲ ಎಂದು ರಾವ್ ಅವರ ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಾರೆ.ರಾವ್ ಅವರು ಪೆರ್ಡೂರು ಹಾಗೂ ಮಂದಾರ್ತಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಶಿವರಾಮ ಕಾರಂತರ ಒಡನಾಡಿಯಾಗಿಯೂ ಗುರುತಿಸಿಕೊಂಡಿದ್ದರು. ೨೦೧೮ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್: ಆಮದು ಮಾಡಿಕೊಳ್ಳಲಾದ, ಶೈಥ್ಯೀಕೃತ ಮೀನಿನ ಪೊಟ್ಟಣದಲ್ಲಿ ಸಜೀವ ಕೊರೊನಾ ವೈರಸ್ ಪತ್ತೆಯಾಗಿರುವುದನ್ನು ಚೀನಾ ಆರೋಗ್ಯಾಧಿಕಾರಿಗಳು ಖಚಿತಪಡಿಸಿದರು. ಬಂದರು ನಗರ ಕಿಂಗ್ಡಾವೋದಲ್ಲಿ ಈ ವೈರಸ್ ಪತ್ತೆಯಾಗಿದೆ. ಶೈಥ್ಯೀಕೃತ ಆಹಾರದ ಪೊಟ್ಟಣದ ಮೇಲ್ಮೈಯಲ್ಲಿ ಜೀವಂತ ಕೊರೋನಾವೈರಸ್ ಸೋಂಕು ಪತ್ತೆಯಾಗಿರುವುದು ವಿಶ್ವದಲ್ಲೇ ಇದು ಪ್ರಥಮ. ಕೋವಿಡ್-19  ಸೋಂಕು ಕಾಣಿಸಿಕೊಂಡ ನಂತರ ಶೈಥ್ಯೀಕೃತ ಆಹಾರದ ಪೊಟ್ಟಣದ ಮೇಲೆ ಜೀವಂತ ವೈರಸ್‌ಅನ್ನು ಪತ್ತೆ ಹಚ್ಚಿ, ಪ್ರತ್ಯೇಕಿಸಲಾಯಿತು ಎಂದು ರೋಗಗಳನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸಿಡಿಸಿ)  ಪ್ರಕಟಣೆ ತಿಳಿಸಿತು. ಕಿಂಗ್ಡಾವೋ ನಗರದಲ್ಲಿ ಇತ್ತೀಚೆಗೆ ಹೊಸದಾಗಿ ಕೋವಿಡ್ ಪ್ರಕರಣಗಳು ವರದಿಯಾಗಿ ಆತಂಕಕ್ಕೆ ಕಾರಣವಾಗಿತ್ತು. ಇದಾದ ನಂತರ ನಗರದ ೧.೧೦ ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ಸೋಂಕಿನ ಮೂಲವನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾದರು. ಆಮದು ಮಾಡಿಕೊಂಡಿದ್ದ ಮೀನಿನ ಪೊಟ್ಟಣಗಳು ಸೋಂಕಿಗೆ ಒಳಗಾಗಿದ್ದವು ಎಂಬುದು ಪರೀಕ್ಷೆಯಿಂದ ದೃಢಪಟ್ಟಿತು ಎಂದು ಸಿಡಿಸಿ ಪ್ರಕಟಣೆಯನ್ನು  ಉಲ್ಲೇಖಿಸಿ ಸರ್ಕಾರೀ  ಒಡೆತನದ ಕ್ಷಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಸೀಮಿತ ಸಂಖ್ಯೆಯ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಕೋವಿಡ್ -೧೯ ವೈರಸ್ಸಿನ ಸಮುದಾಯ ಹರಡುವಿಕೆ ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ 2020 ಅಕ್ಟೋಬರ್ 18 ಭಾನುವಾರ ಒಪ್ಪಿಕೊಂಡರು. ಆದರೆ ಇದು ದೇಶಾದ್ಯಂತ ಸಂಭವಿಸುತ್ತಿಲ್ಲ’ ಎಂದು ಸಚಿವರು ತಮ್ಮ ಸಾಪ್ತಾಹಿಕ ಸಾಮಾಜಿಕ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಕೆಲವು ಪ್ರದೇಶಗಳಲ್ಲಿ ಸಮುದಾಯ ಪ್ರಸರಣವನ್ನು ಆರಂಭವಾಗಿದೆ ಎಂಬುದಾಗಿ ಒಪ್ಪಿದ ಬಗ್ಗೆ ಪ್ರಶ್ನಿಸಿದಾಗ ಕೇಂದ್ರ ಆರೋಗ್ಯ ಸಚಿವರು ಈ ವಿಷಯವನ್ನು ಒಪ್ಪಿಕೊಂಡರು. ಭಾರತದಲ್ಲಿ ಕೋವಿಡ್ -೧೯ ಸಮುದಾಯ ಪ್ರಸರಣವನ್ನು ಕೇಂದ್ರ ಸರ್ಕಾರವು ಇದುವರೆಗೂ  ನಿರಾಕರಿಸಿದ್ದರೂ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜುಲೈ ತಿಂಗಳಲ್ಲಿ  ರಾಜ್ಯದಲ್ಲಿ ಸಮುದಾಯ ಪ್ರಸರಣವನ್ನು ದೃಢ ಪಡಿಸಿದ್ದರು. ಕರಾವಳಿಯ ಎರಡು ಪುಟ್ಟ ಗ್ರಾಮಗಳಾದ ಪೂಂತುರಾ ಮತ್ತು ಪುಲ್ಲಿವಿಲಾದಲ್ಲಿ ಸಮುದಾಯ ಪ್ರಸರಣಗಳು ಕಂಡು ಬಂದಿದ್ದುದನ್ನು ಮುಖ್ಯಮಂತ್ರಿ ಪಿಣರಾಯಿ ದೃಢ ಪಡಿಸಿದ್ದರು. ಅಸ್ಸಾಮಿನಲ್ಲಿ ಕೂಡಾ ಜುಲೈ-ಆಗಸ್ಟ್ ತಿಂಗಳಲ್ಲಿ ಸಮುದಾಯ ಪ್ರಸರಣದ ಸುಳಿವು ಲಭಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಟೋಕಿಯೋ: ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಜಪಾನ್ (ಸಿಬಿಸಿಜೆ) ಮೂಲಕ ಪೋಪ್ ಫ್ರಾನ್ಸಿಸ್ ಅವರಿಗೆ ಓಡಾಟದ ಅಗತ್ಯಗಳ ಸಲುವಾಗಿ ವಿಶೇಷವಾಗಿ ಮಾರ್ಪಡಿಸಿದ ಹೈಡ್ರೋಜನ್-ಚಾಲಿತ ಟೊಯೋಟಾ ಮಿರೈಯನ್ನು ಉಡುಗೊರೆಯಾಗಿ ನೀಡಲಾಗಿದೆ. ಟೊಯೋಟಾ  ಕಂಪೆನಿಯು ವಿಶೇಷವಾಗಿ ತಯಾರಿಸಿದ ಎರಡು ಮಿರೈ ವಾಹನಗಳಲ್ಲಿ ಕಾರು ಒಂದಾಗಿದೆ.  ಹೊಸ ಅಧಿಕೃತ ಪೋಪ್ ಮೊಬೈಲ್ ೫. ಮೀಟರ್ ಉದ್ದ ಮತ್ತು . ಮೀಟರ್ ಎತ್ತರವನ್ನು ಹೊಂದಿದೆ - ವಿಶೇಷವಾಗಿ ರಚಿಸಲಾದ ಮೇಲ್ಚಾವಣಿ ಇದಕ್ಕಿದೆ. ಕಾರಿನ ಹಿಂಭಾಗದಲ್ಲಿ ಇರುವ ಬಿಳಿ ಬಣ್ಣದ ವಿಶಿಷ್ಟ ರಚನೆಯು ಪೋಪ್ ಅವರು ಕುಳಿತುಕೊಂಡಿದ್ದರೂ ಜನರಿಗೆ ಸುಲಭವಾಗಿ ಅವರು ಕಾಣುವಂತಹ ವಿನ್ಯಾಸವನ್ನು ಹೊಂದಿದೆ. ಹೊಸ ಪೋಪ್ ಮೊಬೈಲ್  ಹಿಂದಿನ ಪೋಪ್ ಮೊಬೈಲುಗಳಲ್ಲಿ ಇದ್ದಂತಹ ಗುಂಡು ನಿರೋಧಕ ಗಾಜಿನ ಗುಮ್ಮಟಕ್ಕೆ ವಿರುದ್ಧವಾಗಿ ತೆರೆದ ಗಾಳಿಯ ಗುಮ್ಮಟವನ್ನು ಹೊಂದಿದೆ. ಕಾರಿನ ಹಿಂಭಾಗದಲ್ಲಿ ಪೋಪ್ ಅವರಿಗಾಗಿ ಎತ್ತರದ ಆಸನವನ್ನು ವ್ಯವಸ್ಥೆ ಮಾಡಲಾಗಿದೆ. ಟೊಯೋಟಾ ಮಿರೈ  ಇದೇ ಮೊದಲ ಬಾರಿಗೆ ಸಾಮೂಹಿಕವಾಗಿ ಉತ್ಪಾದನೆಯಾಗಿರುವ  ಹೈಡ್ರೋಜನ್ ಚಾಲಿತ ಸೆಡಾನ್. ಇದನ್ನು ಮೊದಲ ಬಾರಿಗೆ ೨೦೧೪ ರಲ್ಲಿ ಬಿಡುಗಡೆ ಮಾಡಲಾಗಿತ್ತು.  ಇದು ಹೈಡ್ರೋಜನ್ ಇಂಧನ ಕೋಶ ವ್ಯವಸ್ಥೆಯಿಂದ ನಡೆಸಲ್ಪಡುವ ಅಂತಿಮ ಶೂನ್ಯ- ಮಾಲಿನ್ಯ ಕಾರಕ ಕಾರು. ಸುಮಾರು 500 ಕಿ.ಮೀ. ಸಂಚಾರ ಸಾಮರ್ಥ್ಯ  ಇರುವ ಕಾರು ಕೇವಲ ನೀರನ್ನು ಹೊರಸೂಸುತ್ತಾ ಓಡುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಸ್ಯಾನ್ ಫ್ರಾನ್ಸಿಸ್ಕೋ: ಚಾಂದ್ರ ನೆಲದಲ್ಲಿ ೪ಜಿ ನೆಟ್ ವರ್ಕ್ ಸ್ಥಾಪಿಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಿದ್ಧತೆ ನಡೆಸಿದೆ. ಭೂಮಿಯ ಸಹಜ ಉಪಗ್ರಹವಾಗಿರುವ ಚಂದ್ರನಲ್ಲಿ ೪ಜಿ ಎಲ್ ಟಿಇ  ಮೊಬೈಲ್ ನೆಟ್ ವರ್ಕ್  ಸಂಪರ್ಕ ಕಲ್ಪಿಸಲು ತಯಾರಿ ಆರಂಭಿಸಿರುವ ನಾಸಾ, ಖ್ಯಾತ ಟೆಲಿಕಾಂ ಕಂಪೆನಿ ನೋಕಿಯಾಕ್ಕೆ ೧೪. ಮಿಲಿಯನ್ (1.41 ಕೋಟಿ) ಡಾಲರ್ ಮೊತ್ತದ ಕಾಮಗಾರಿಯನ್ನು ಗುತ್ತಿಗೆ ನೀಡಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೇರಲು ಅಮೆರಿಕಟಿಪ್ಪಿಂಗ್ ಪಾಯಿಂಟ್ ಎಂಬ ೨೭೭೫ ಕೋಟಿ ರೂ. ಮೌಲ್ಯದ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಚಾಂದ್ರ ನೆಲದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವಂತೆ ಮಾಡುವ ಮೂಲಕ ಭೂಮಿ ಹಾಗೂ ಚಂದ್ರನ ನಡುವೆ ಅತ್ಯುತ್ತಮ ಗುಣಮಟ್ಟದ ಫೋಟೋ, ವಿಡಿಯೋ ವಿನಿಮಯವನ್ನು ವೇಗವಾಗಿ ಮಾಡಿಕೊಳ್ಳುವುದು ನಾಸಾದ ಗುರಿ. ಚಂದ್ರನ ಮೇಲೆ ೪ಜಿ ನೆಟ್ ವರ್ಕ್ ಸ್ಥಾಪನೆಯಾದ ಬಳಿಕ ರೋವರ್ ಗಳನ್ನು ಭೂಮಿಯಿಂದಲೇ ಸುಲಭವಾಗಿ ನಿಯಂತ್ರಿಸಬಹುದು. ರೋವರ್ ಗಳ ಮೂಲಕ ಉತ್ಕೃಷ್ಟ ಗುಣಮಟ್ಟದ ಲೈವ್ ವಿಡಿಯೋಗಳನ್ನು ಪಡೆಯಬಹುದಾಗಿದ್ದು, ಚಂದ್ರನ ಮೇಲ್ಮೈ ಅಧ್ಯಯನಕ್ಕೆ ಇನ್ನಷ್ಟು ನೆರವನ್ನು ೪ಜಿ ನೆಟ್ ವರ್ಕ್ ನೀಡಲಿದೆ. ಚಂದ್ರನ ಮೇಲೇ ವಿಜ್ಞಾನಿಗಳು ಕುಳಿತು ಸಂಶೋಧನೆ ನಡೆಸುವಂತಹ ವ್ಯವಸ್ಥೆಯನ್ನು ೨೦೨೮ರೊಳಗೆ ರೂಪಿಸಲು ನಾಸಾ ನಿರ್ಧರಿಸಿದೆ. ಮಾನವರು ಚಂದ್ರನ ಮೇಲೆ ಉಳಿದುಕೊಂಡು, ಅಲ್ಲಿಂದಲೇ ಕೆಲಸ ಮಾಡಲು ಸಾಧ್ಯವಾಗುವಂತೆ ಮಾಡುವುದು ನಾಸಾದ ಉದ್ದೇಶ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 18 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment