50 ಪೈಸೆಗೆ ದಂಡ 15,000 ರೂಪಾಯಿ!
ಕೇವಲ 50 ಪೈಸೆ. ಕೊಡದಿದ್ದರೆ ಏನಾಗುತ್ತದೆ? ಅಂತ ನಿರ್ಲಕ್ಷಿಸುವವರು ಬಹಳ ಮಂದಿ. ಆದರೆ ಗ್ರಾಹಕರಿಗೆ 50 ಪೈಸೆಯನ್ನು ಹಿಂತಿರುಗಿಸದೇ, ಅದನ್ನು 'ರೌಂಡ್ ಆಫ್' ಮಾಡಿದ್ದು ಇಂಡಿಯಾ ಪೋಸ್ಟ್‌ಗೆ ದುಬಾರಿಯಾಗಿ ಪರಿಣಮಿಸಿದೆ.
ಈ ಐವತ್ತು ಪೈಸೆಯನ್ನು 10,000 ರೂಪಾಯಿಗಳ ಪರಿಹಾರ ಮತ್ತು 5000 ರೂಪಾಯಿಗಳ ಖಟ್ಲೆ ವೆಚ್ಚ ಸೇರಿಸಿ ಪಾವತಿ ಮಾಡಿ ಎಂದು ಗ್ರಾಹಕ ನ್ಯಾಯಾಲಯವು ಅಂಚೆ ಇಲಾಖೆಗೆ ಆದೇಶ ನೀಡಿದೆ.
50 ಪೈಸೆ ಪಾವತಿ ಮಾಡದೆ ಅದನ್ನು ರೌಂಡ್ ಆಫ್ ಮಾಡಿದ್ದು ಅನ್ಯಾಯದ ವ್ಯಾಪಾರೀ ಅಭ್ಯಾಸ ಮತ್ತು ಸೇವಾಲೋಪ ಆಗುತ್ತದೆ ಎಂದು ಕಾಂಚೀಪುರಂ ಜಿಲ್ಲಾ ಗ್ರಾಹಕ ನ್ಯಾಯಾಲಯ ಹೇಳಿದೆ.
ಈ ಪ್ರಕರಣದಲ್ಲಿ ದೂರು ಕೊಟ್ಟವರು ಎ ಮಾನಶಾ. ಅವರು 2023ರ ಡಿಸೆಂಬರ್ 13ರಂದು ಕಾಂಚೀಪುರಂಗೆ ಸಮೀಪದ ಪೊಜಿಚಲೂರು ಅಂಚೆ ಕಛೇರಿಯಲ್ಲಿ ನೋಂದಾಯಿತ ಪತ್ರಕ್ಕಾಗಿ 30 ರೂಪಾಯಿ ನಗದು ಪಾವತಿಸಿದ್ದರು. ಆದರೆ ರಶೀದಿಯಲ್ಲಿ ಕೇವಲ 29.50 ರೂಪಾಯಿ ನಮೂದಿಸಲಾಗಿತ್ತು. ಯುಪಿಐ ಮೂಲಕ ನಿಖರವಾದ ಮೊತ್ತವನ್ನು ಪಾವತಿ ಮಾಡ್ತೇನೆ ಅಂತ ಅವರು ಹೇಳಿದರು. ಆದರೆ ʼತಾಂತ್ರಿಕ ಸಮಸ್ಯೆಗಳಿವೆ, ಅದು ಸಾಧ್ಯವಿಲ್ಲ. ಆದ್ದರಿಂದ 30 ರೂಪಾಯಿಗೆ ರೌಂಡ್ ಆಫ್ ಮಾಡಿದ್ದೇವೆʼ ಅಂತ ಸಿಬ್ಬಂದಿ ಉತ್ತರ ಕೊಟ್ಟರು.
ಮಾನಶಾ ಅವರಿಗೆ ಇದು ಸಣ್ಣ ಸಮಸ್ಯೆಯಲ್ಲ, ಗಹನವಾದ ಸಮಸ್ಯೆ ಅಂತ ಅನಿಸಿತು. ಪ್ರತಿನಿತ್ಯ ಲಕ್ಷಗಟ್ಟಲೆ ವಹಿವಾಟುಗಳು ನಡೆಯುತ್ತವೆ. ಅವುಗಳನ್ನು ಸರಿಯಾಗಿ ಲೆಕ್ಕ ಹಾಕದಿದ್ದರೆ ಸರ್ಕಾರಕ್ಕೆ, ಸಾರ್ವಜನಿಕರಿಗೆ ನಷ್ಟವಾಗುವುದರ ಸಹಿತ ಅನೇಕ ಪರಿಣಾಮಗಳಾಗುತ್ತವೆ ಅಂತ ಅವರು ಭಾವಿಸಿದರು.
ಈ ಪ್ರಕರಣವನ್ನು ಸುಮ್ಮನೇ ಬಿಡಬಾರದು ಎಂದುಕೊಂಡ ಅವರು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.
ಗ್ರಾಹಕ ನ್ಯಾಯಾಲಯಕ್ಕೆ ಉತ್ತರ ನೀಡಿದ ಅಂಚೆ ಇಲಾಖೆ ತಾಂತ್ರಿಕ ಸಮಸ್ಯೆಗಳಿಂದಾಗಿ ಡಿಜಿಟಲ್ ಮೋಡ್ ಮೂಲಕ ಪಾವತಿಯನ್ನು ಪಡೆಯಲು ಆಗಲಿಲ್ಲ ಎಂದು ಹೇಳಿತು.
ಈ ಹೊತ್ತಿನಲ್ಲಿ ಗ್ರಾಹಕರಿಂದ ನಗದು ಸಂಗ್ರಹಿಸಲಾಗಿದೆ. ಅಲ್ಲದೆ, 50 ಪೈಸೆಗಳನ್ನು 'ಸಂಯೋಜಿತ ಅಂಚೆ ಸಾಫ್ಟ್‌ವೇರ್' ನಲ್ಲಿ ಸ್ವಯಂಚಾಲಿತವಾಗಿ ಪೂರ್ಣಗೊಳಿಸಲಾಗುತ್ತದೆ ಅಂದರೆ ರೌಂಡ್ ಆಫ್ ಮಾಡಲಾಗುತ್ತದೆ ಮತ್ತು ಅಂಚೆ ಖಾತೆಗಳಲ್ಲಿ ಸರಿಯಾಗಿ ಲೆಕ್ಕ ಹಾಕಲಾಗುತ್ತದೆ ಎಂದು ಅದು ಸಮಜಾಯಿಷಿ ನೀಡಿತು.
'ಸ್ವಯಂಚಾಲಿತವಾಗಿ ಪೂರ್ಣಗೊಳ್ಳುವ ಮೊತ್ತ' ಅಂದರೆ ರೌಂಡ್ ಆಫ್ ಮಾಡುವ ಮೊತ್ತವು 'ಕೌಂಟರ್ ಖಾತೆಗಳ ಸಲ್ಲಿಕೆ'ಯಲ್ಲಿ ಪ್ರತ್ಯೇಕವಾಗಿ ಪ್ರತಿಫಲಿಸುತ್ತದೆ. ಹೀಗಾಗಿ ಈ ದೂರು ಸ್ವೀಕಾರಕ್ಕೆ ಅರ್ಹವಲ್ಲʼ ಎಂದು ಅಂಚೆ ಇಲಾಖೆ ವಾದಿಸಿತು.
"50 ಪೈಸೆಗಿಂತ ಕಡಿಮೆ ಭಾಗದ ಮೊತ್ತವನ್ನು ಒಳಗೊಂಡಿರುವ ಮೊತ್ತಕ್ಕೆ, ವಸ್ತು/ ಪತ್ರವನ್ನು ಬುಕ್ ಮಾಡಿದ್ದರೆ, ಭಿನ್ನರಾಶಿ ಮೊತ್ತವನ್ನು ಅಂದರೆ ಐವತ್ತು ಪೈಸೆಗಿಂತ ಕಡಿಮೆ ಮೊತ್ತವನ್ನು ನಿರ್ಲಕ್ಷಿಸಲಾಗುತ್ತದೆ ಮತ್ತು ಗ್ರಾಹಕರಿಂದ ಸಂಗ್ರಹಿಸಲಾಗುವುದಿಲ್ಲ. ಅಂತಹ ಭಿನ್ನರಾಶಿ ಮೊತ್ತವನ್ನು ಪೂರ್ಣಗೊಳಿಸುವುದು ಒಟ್ಟು ಮೌಲ್ಯವನ್ನು ಅವಲಂಬಿಸಿರುತ್ತದೆ” ಎಂದೂ ಅಂಚೆ ಇಲಾಖೆ ಪ್ರತಿಪಾದನೆ ಮಾಡಿತು.
ಉಭಯರ ವಾದವನ್ನು ಆಲಿಸಿದ ನಂತರ, ಗ್ರಾಹಕ ನ್ಯಾಯಾಲಯವು ʼತಂತ್ರಾಂಶ ಸಮಸ್ಯೆಯಿಂದ ಅಥವಾ ಸಾಫ್ಟ್‌ವೇರ್ ಸಮಸ್ಯೆಯಿಂದ 50 ಪೈಸೆಯನ್ನು ಹೆಚ್ಚುವರಿಯಾಗಿ ಸಂಗ್ರಹಿಸಿರುವ ಅಂಚೆ ಕಚೇರಿಯ ಕ್ರಮವು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಅನ್ಯಾಯದ ವ್ಯಾಪಾರ ಅಭ್ಯಾಸ ಆಗುತ್ತದೆʼ ಎಂದು ಅಭಿಪ್ರಾಯ ಪಟ್ಟಿತು.
ಹೀಗಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ದೂರುದಾರರಿಗೆ ಐವತ್ತು ಪೈಸೆ ಮರುಪಾವತಿ ಮಾಡಬೇಕು ಮತ್ತು ಮಾನಸಿಕ ಸಂಕಟ, ಅನ್ಯಾಯದ ವ್ಯಾಪಾರ ಅಭ್ಯಾಸ ಮತ್ತು ಸೇವೆಯಲ್ಲಿನ ಕೊರತೆಗೆ ಪರಿಹಾರವಾಗಿ 10,000 ರೂಪಾಯಿಗಳನ್ನು ಈ ಆದೇಶ ಸ್ವೀಕರಿಸಿದ ದಿನದಿಂದ (ಸೆಪ್ಟೆಂಬರ್ 11, 2024) ಎರಡು ತಿಂಗಳ ಒಳಗೆ ಪಾವತಿ ಮಾಡಬೇಕು ಅಂತ ಆದೇಶ ನೀಡಿತು. ಜೊತೆಗೆ ದೂರುದಾರರಿಗೆ 5,000 ರೂಪಾಯಿಗಳನ್ನು ಖಟ್ಲೆ ವೆಚ್ಚಕ್ಕಾಗಿಯೂ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿತು.
ದೂರುದಾರರು ತಮ್ಮ ದೂರಿನಲ್ಲಿ ತಮಗೆ 50 ಪೈಸೆಯ ಬಾಕಿ ಹಣದ ಜೊತೆಗೆ 'ಮಾನಸಿಕ ಸಂಕಟ'ಕ್ಕೆ ರೂ 2.50 ಲಕ್ಷ ಪರಿಹಾರ ಮತ್ತು ಖಟ್ಲೆ ವೆಚ್ಚವಾಗಿ 10,000 ರೂಪಾಯಿ ಪಾವತಿಸಲು ನಿರ್ದೇಶನ ನೀಡಬೇಕು ಎಂದೂ ಕೋರಿದ್ದರು. ಈ ಕೋರಿಕೆಗೆ ಅರ್ಹತೆ ಇಲ್ಲ ಅಂತ ಹೇಳಿದ ಗ್ರಾಹಕ ನ್ಯಾಯಾಲಯ ಅದನ್ನು ತಳ್ಳಿ ಹಾಕಿತು.
-ನೆತ್ರಕೆರೆ ಉದಯಶಂಕರ
ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
ಇವುಗಳನ್ನೂ ಓದಿರಿ:
ಸಮುದ್ರದಲ್ಲಿ ಮುಳುಗಿದ ದೋಣಿ ಭಟ್ಕಳದಲ್ಲಿ ತೇಲಿತೇ?
ಅಪಘಾತ ಪರಿಹಾರ ಪಡೆಯಲು ಚಾಲನಾ ಲೈಸೆನ್ಸ್ ಬೇಕೇ?
ಚಿಟ್ ಫಂಡ್ ಹಣ ಪಡೆಯಲು ಬೇಕೆಷ್ಟು ಭದ್ರತೆ?
ಉಭಯರಿಗೂ ಚುಚ್ಚಿದ 'ಸೊಳ್ಳೆ ನಿವಾರಕ'..!
ಮನವಿ ಮಾಡಿದರೂ ವರ್ಗವಾಗದ ಆರ್.ಡಿ. ಖಾತೆ..!
ಬೇಡದಿದ್ದರೂ ಸಾಲಕೊಟ್ಟ ಬ್ಯಾಂಕ್...!
ನಮೂದು ದರ ಒಂದು, ಮಾರುವ ದರ ಇನ್ನೊಂದು..!
ಮಂಜೂರು ಮಾಡಿದ ಸಾಲ ವಿತರಣೆಗೆ ನಿರಾಕರಿಸಿದ ಬ್ಯಾಂಕು..!
35 ರೂಪಾಯಿ ಚಿಪ್ಸ್, ರೂ. 50,000 ಪರಿಹಾರ..! (ಗ್ರಾಹಕ ಜಾಗೃತಿ)
Free Flight / Free Family Holiday..! ವಿದೇಶ ಪಯಣ ಮತ್ತು ರಜಾದ ಮಜಾ..!
When your telephone rings till you fed up...!
No comments:
Post a Comment