2020: ನವದೆಹಲಿ: ಕೊರೋನಾವೈರಸ್ ಬಿಕ್ಕಟ್ಟಿನ ಮಧ್ಯೆ, ಬೆಂಗಳೂರು ಮೂಲದ ತಂತ್ರಜ್ಞಾನ ಸಂಸ್ಥೆಯೊಂದು ವಿದ್ಯುತ್ತಿನ ಅಗತ್ಯವೇ ಇಲ್ಲದ ವಿಶ್ವದಲ್ಲೇ ಅತ್ಯಂತ ಅಗ್ಗದ ವೆಂಟಿಲೇಟರನ್ನು ತಯಾರಿಸಿದೆ. ತನ್ಮೂಲಕ ಈ ಸಂಸ್ಥೆಯು ವೆಂಟಿಲೇಟರುಗಳ ಅಭಾವದ ಸವಾಲಿಗೆ ಉತ್ತರ ನೀಡಿದೆ. ಕೇವಲ ೨೫೦೦ ರೂಪಾಯಿ ಬೆಲೆಯ ಈ ವೆಂಟಿಲೇಟರ್ ವಿಶ್ವದಲ್ಲೇ ಅತ್ಯಂತ ಕಡಿಮೆ ದರದ ಈ ಮಾದರಿಯ ವೆಂಟಿಲೇಟರ್ ಆಗಿದೆ. ಉಪಕರಣವನ್ನು ಬೆಂಗಳೂರು ಮೂಲಕ ಡೈನಾಮಿಕ್ ಟೆಕ್ ಸಂಸ್ಥೆಯು ತಯಾರಿಸಿದೆ. ಈ ಸಂಸ್ಥೆಯು ಉತ್ತಮ ಗುಣಮಟ್ಟದ ಎಂಜಿನಿಯರಿಂಗ್ ಉತ್ಪನ್ನUಳನ್ನು ವಾಹನ (ಆಟೋಮೋಟಿವ್), ವೈಮಾನಿಕ (ಏರೋನಾಟಿಕ್) ಮತ್ತು ಭದ್ರತಾ ಉದ್ದೇಶಗಳಿಗಾಗಿ ತಯಾರಿಸುತ್ತದೆ. ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು 2020 ಏಪ್ರಿಲ್ 20ರ
ಸೋಮವಾರ ಟ್ವಟ್ಟರ್ ಮೂಲಕ ’ಭಾರತೀಯ ಸಂಶೋಧನೆ’ಯನ್ನು ಶ್ಲಾಘಿಸಿದರು. ಇಂತಹ ಸಂಶೋಧನೆಗಳು ಗ್ರಾಮೀಣ ಆರೋಗ್ಯ ಕೇಂದ್ರಗಳು ಮತ್ತು ಸ್ಥಳೀಯ ಆಸ್ಪತ್ರೆಗಳಿಗೆ ಅತ್ಯಂತ ನಿರ್ಣಾಯಕವಾಗಿವೆ’ ಎಂದು ಅವರು ಹೇಳಿದರು. ಉಪಕರಣದ ಕಾರ್ಯ ನಿರ್ವಹಣೆಗೆ ವಿದ್ಯುತ್ ಬೇಕಾಗಿಯೇ ಇಲ್ಲ ಮತ್ತು ಇದರ ನಿರ್ಮಾಣಕ್ಕೆ ಆಮದು ಭಾಗಗಳ ಅಗತ್ಯವೂ ಇಲ್ಲ. ವೆಂಟಿಲೇಟರ್ ಒತ್ತಡವನ್ನು ನಿರ್ವಹಿಸುತ್ತದೆ ಮತ್ತು ನಿಯಂತ್ರಿತ ಪ್ರಮಾಣದ ಉಸಿರಾಟಕ್ಕಾಗಿ ಆಮ್ಲಜನಕವನ್ನು ಕೂಡಾ ನಿಯಂತ್ರಿಸುತ್ತದೆ. ‘ಶೂನ್ಯ ವಿದ್ಯುತ್ತು, ಆಮದು ಬೇಕಾಗಿಲ್ಲ, ಎಲೆಕ್ಟ್ರಾನಿಕ್ ಭಾಗಗಳಿಲ್ಲ. ಗರಿಷ್ಠ/ ಕನಿಷ್ಠ ಒತ್ತಡವನ್ನು ನಿರ್ವಹಿಸುತ್ತದೆ. ನಿಯಂತ್ರಿತ ಆಮ್ಲಜನಕ ಮಿಶ್ರಣ ನಿಯಂತ್ರಿತ ಉಸಿರಾಟ ದರ. ಬೆಲೆ: ಒಂದಕ್ಕೆ ೨೫೦೦ ರೂಪಾಯಿ’ ಎಂದು ಕಾಂತ್ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಬ್ಯಾಂಕುಗಳಿಗೆ ೯,೦೦೦ ಕೋಟಿ ರೂಪಾಯಿ ಮೊತ್ತದ ಹಣ ವಂಚನೆ ಮತ್ತು ವರ್ಗಾವಣೆ ಅರೋಪಕ್ಕೆ ಸಂಬಂಧಿಸಿದಂತೆ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಮದ್ಯ ದೊರೆ ವಿಜಯ್ ಮಲ್ಯ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಇಂಗ್ಲೆಂಡ್ ಹೈಕೋರ್ಟ್ 2020 ಏಪ್ರಿಲ್ 20ರ ಸೋಮವಾರ ವಜಾಗೊಳಿಸಿತು. ೬೪ರ ಹರೆಯದ ಕಿಂಗ್ ಫಿಷರ್ ಏರ್ ಲೈನ್ಸಿನ ಮಾಜಿ ಮುಖ್ಯಸ್ಥ ಮಲ್ಯ ಅವರು ತಮ್ಮನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಈ ವರ್ಷ ಫೆಬ್ರುವರಿಯಲ್ಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಹಣ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ಮಲ್ಯ ಇಂಗ್ಲೆಂಡಿನಿಂದ ಭಾರತಕ್ಕೆ ತಮ್ಮನ್ನು ಹಸ್ತಾಂತರಿಸಲು ನೀಡಲಾದ ಅನುಮತಿಯನ್ನು ಇಂಗ್ಲೆಂಡ್ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಲಂಡನ್ನಿನ ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್‌ನ ಲಾರ್ಡ್ ಜಸ್ಟೀಸ್ ಸ್ಟೆಫನ್ ಇರ್ವಿನ್ ಮತ್ತು ಜಸ್ಟೀಸ್ ಎಲಿಸಾಬೆತ್ ಲಾಯಿಂಗ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಮಲ್ಯ ಮೇಲ್ಮನವಿಯನ್ನು ವಜಾಗೊಳಿಸಿತು. ಕೊರೋನಾವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಡಿಯೋ ಮೂಲಕದ ಪೀಠವು ತನ್ನ ತೀರ್ಪನ್ನು ಪ್ರಕಟಿಸಿತು. ಹಿರಿಯ ಜಿಲ್ಲಾ ನ್ಯಾಯಾಧೀರು (ಎಸ್ಡಿಜೆ) ಮೇಲ್ನೋಟಕ್ಕೆ ಆರೋಪ ರುಜುವಾತಾಗಿದೆ ಎಂಬುದಾಗಿ ಹೇಳಿ ನೀಡಿದ ತೀರ್ಪನ್ನು ನಾವು ಪರಿಶೀಲಿಸಿದ್ದೇವೆ. ಕೆಲವು ಅಂಶಗಳಲ್ಲಿ ತೀರ್ಪಿನ ವ್ಯಾಪ್ತಿ ಭಾರತದಲ್ಲಿನ ಪ್ರತಿವಾದಿಯು (ಕೇಂದ್ರೀಯ ತನಿಖಾದಳ -ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ)) ಮಾಡಿದ ಆರೋಪಗಳಿಗಿಂತ ವಿಸ್ತೃತವಾಗಿದೆ. ಮೇಲ್ನೋಟಕ್ಕೆ ಅಪರಾಧವನ್ನು ಸಾಬೀತುಪಡಿಸುವ ಪ್ರಮುಖವಾದ ಏಳು ಅಂಶಗಳು ಭಾರತದಲ್ಲಿನ ಆಪಾದನೆಗಳ ಜೊತೆ ತಾಳೆಯಾಗುತ್ತವೆ ಎಂದು ಪೀಠ ತೀರ್ಪು ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ: ಮೂವರು ಸಾಧುಗಳನ್ನು ಕಳೆದವಾರ ಗುಂಪುದಾಳಿಯಲ್ಲಿ ಕೊಂದ ಪ್ರಕರಣದ ತಪ್ಪಿತಸ್ಥರ ವಿರುದ್ಧ ಮತ್ತು ಈ ಪ್ರಕರಣಕ್ಕೆ ಧಾರ್ಮಿಕ ಬಣ್ಣ ಬಳಿಯುವವರ ವಿರುದ್ಧ ಉಗ್ರಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು 2020 ಏಪ್ರಿಲ್ 20ರ ಸೋಮವಾರ ಭರವಸೆ ನೀಡಿದರು. ಫಾಲ್ಗಾರ್ನಲ್ಲಿ ಕಳೆದ ವಾರ ಮೂವರನ್ನು ಗುಂಪುದಾಳಿಯಲ್ಲಿ ಕೊಂದ ಪ್ರಕರಣಕ್ಕೆ ಧಾರ್ಮಿಕ ಬಣ್ಣ ನೀಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ತಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದು ಪ್ರಕರಣದ ವಿವರಗಳನ್ನು ನೀಡಿರುವುದಾಗಿ ಉದ್ಧವ್ ಹೇಳಿದರು. ಅಮಿತ್ ಶಾಜಿ ಅವರಿಗೂ ಪ್ರಕರಣಕ್ಕೆ ಯಾವುದೇ ಧಾರ್ಮಿಕ ಸಂಬಂಧ ಇಲ್ಲ ಎಂಬುದು ಗೊತ್ತಿದೆ. ಘಟನೆ ಸಂಭವಿಸಿದ ಗ್ರಾಮಕ್ಕೆ ಅಂತಹ ಯಾವುದೇ ಹಿನ್ನೆಲೆ ಕೂಡಾ ಇಲ್ಲ. ಸಾಮಾಜಿಕ ಮಾಧ್ಯಮ ಬಳಸಿಕೊಂಡು ಕೋಮು ಪ್ರಕ್ಷುಬ್ಧತೆ ಹರಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಅವರಿಗೂ ಮನವಿ ಮಾಡಿದ್ದೇನೆ ಎಂದು ಠಾಕ್ರೆ ಅವರು ಫೇಸ್ಬುಕ್ ಲೈವ್ನಲ್ಲಿ ನುಡಿದರು. ಘಟನೆಯನ್ನು ಬಳಸಿಕೊಂಡು ಧಾರ್ಮಿಕ ಭಾವನೆಗಳಿಗೆ ಕಿಚ್ಚು ಹಚ್ಚಲು ಯತ್ನಿಸುವವರ ವಿರುದ್ಧ ನಾವು ಕೂಡಾ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು. ಪಾಲ್ಘಾರ್ನಿಂದ ೧೧೦ ಕಿಮೀ ದೂರದ ಗಢಚಿಂಚಲೆ ಗ್ರಾಮದ ಹೊರಭಾಗದಲ್ಲಿ ಇಬ್ಬರು ಹಿಂದೂ ಸಾಧುಗಳ ಮತ್ತು ಅವರ ಚಾಲಕನನ್ನು ಮಕ್ಕಳ ಕಳ್ಳರು ಎಂಬ ಗುಮಾನಿಯಲ್ಲಿ ಭಾವಿಸಿ ಏಪ್ರಿಲ್ ೧೬ರಂದು ಜನರ ಗುಂಪೊಂದು ದಾಳಿ ನಡೆಸಿ ಕೊಂದು ಹಾಕಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ (ಕೋವಿಡ್ -೧೯) ಸೋಂಕಿನ ದುಪ್ಪಟ್ಟು ದರವು (ಡಬ್ಲಿಂಗ್ ರೇಟ್) ೭.೫ ದಿನಗಳಿಗೆ ಸುಧಾರಿಸಿದೆ ಎಂದು ಕೇಂದ್ರ ಸರ್ಕಾರವು 2020 ಏಪ್ರಿಲ್ 20ರ ಸೋಮವಾರ ಪ್ರಕಟಿಸಿತು. ‘ಭಾರತದ ಕೋವಿಡ್-೧೯ ದುಪ್ಪಟ್ಟು ದರವು ಸುಧಾರಿಸಿದೆ. ರಾಷ್ಟ್ರವ್ಯಾಪಿ ದಿಗ್ಬಂಧನಕ್ಕಿಂತ ಮೊದಲು ೩.೪ ದಿನಗಳಿಗೆ ದುಪ್ಪಟ್ಟಾಗುತ್ತಿದ್ದ ಸೋಂಕು ಈಗ ೭.೫ ದಿನಗಳಿಗೆ ಒಮ್ಮೆ ದುಪ್ಪಟ್ಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ತಮ್ಮ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರಾಡಳಿತ ಪ್ರದೇಶ - ದೆಹಲಿ ಮತ್ತು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಛತ್ತೀಸ್ ಗಢ, ತಮಿಳುನಾಡು ಹಾಗೂ ಬಿಹಾರ ಈ ಎಂಟು ರಾಜ್ಯಗಳಲ್ಲಿ ೨೦ಕ್ಕೂ ಕಡಿಮೆ ದಿನಗಳಿಗೆ ಒಮ್ಮೆ ಸೋಂಕು ದುಪ್ಪಟ್ಟಾಗುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಅಸ್ಸಾಂ, ಉತ್ತರಾಖಂಡ ಮತ್ತು ಲಡಾಖ್ನಲ್ಲಿ ಸೋಂಕು ೨೦ರಿಂದ ೩೦ ದಿನಗಳ ನಡುವಣ ಅಂತರದಲ್ಲಿ ದುಪ್ಪಟ್ಟಾಗುತ್ತಿದೆ ಎಂದು ಅಗರವಾಲ್ ವಿವರಿಸಿದರು. ಒಡಿಶಾದಲ್ಲಿ ೩೯.೮ ದಿನಗಳಿಗೆ ಒಮ್ಮೆ ಸೋಂಕು ದುಪ್ಪಟ್ಟಾಗುತ್ತಿದ್ದರೆ, ಕೇರಳದ ಸ್ಥಿತಿ ಅತ್ಯುತ್ತಮವಾಗಿದ್ದು ಅಲ್ಲಿ ೭೨.೨ ದಿನಗಳಿಗೆ ಒಮ್ಮೆ ಸೋಂಕು ದುಪ್ಪಟ್ಟಾಗುತ್ತಿದೆ ಎಂದು ಅವರು ಹೇಳಿದರು. ರಾಷ್ಟ್ರವು ಕೋವಿಡ್-೧೯ರ ೧,೫೫೩ ಹೆಚ್ಚುವರಿ ಪ್ರಕರಣಗಳನ್ನು ದಾಖಲಿಸಿದ್ದು, ದೇದಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ೧೭,೨೬೫ಕ್ಕೆ ಏರಿದೆ. ಒಟ್ಟು ೫೪೩ ಸಾವುಗಳು ದಾಖಲಾಗಿವೆ. ಕಳೆದ ೨೪ ಗಂಟೆಗಳಲ್ಲಿ ೩೬ ಮಂದಿ ಮೃತರಾಗಿದ್ದಾರೆ ಎಂದು ಅಗರವಾಲ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ ಸಿಂಗ್ ಬಿಶ್ತ್ ಅವರು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಸ್ಥೆಯಲ್ಲಿ (ಏಮ್ಸ್) 2020 ಏಪ್ರಿಲ್ 20ರ ಸೋಮವಾರ ನಿಧನರಾಗಿದ್ದು, ರಾಷ್ಟ್ರವ್ಯಾಪಿ ಕೊರೋನಾ ದಿಗ್ಬಂಧನದ (ಲಾಕ್ ಡೌನ್) ಕಾರಣ ಆದಿತ್ಯನಾಥ್ ಅವರು ಮಂಗಳವಾರ ನಡೆಯುವ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಕಟಿಸಿದರು. ಕೊರೋನಾವೈರಸ್ ಲಾಕ್ಡೌನ್ ಕಾರಣ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರು ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು. ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಂದೆ ಬೆಳಗ್ಗೆ ೧೦.೪೪ಕ್ಕೆ ಸ್ವರ್ಗಸ್ಥರಾದರು. ನಾವು ಗಾಢವಾದ ಶೋಕ ವ್ಯಕ್ತ ಪಡಿಸುತ್ತೇವೆ’ ಎಂದು ರಾಜ್ಯದ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಗೃಹ) ಅವನೀಶ್ ಕೆ ಅವಸ್ಥಿ ಹೇಳಿದರು. ೮೯ರ ಹರೆಯದ ಬಿಶ್ತ್ ಅವರು ಅರಣ್ಯ ರೇಂಜರ್ ಆಗಿದ್ದು ೧೯೯೧ರಲ್ಲಿ ನಿವೃತ್ತರಾಗಿದ್ದರು. ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹುಅಂಗಾಂಗ ವೈಫಲ್ಯದ ಕಾರಣ ಕೊನೆಯುಸಿರು ಎಳೆದರು ಎಂದು ವೈದ್ಯರೊಬ್ಬರು ಹೇಳಿದರು. ಬಿಶ್ತ್ ಅವರನ್ನು ಮಾರ್ಚ್ ೧೩ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ತೀವ್ರ ನಿಗಾಘಟಕದಲ್ಲಿ ಅವರಿಗೆ ಜೀವ ರಕ್ಷಕ ಬೆಂಬಲ ಒದಗಿಸಲಾಗಿತ್ತು. ಅವರಿಗೆ ಬಹು ಸಮಸ್ಯೆಗಳಿದದವು. ಯಕೃತ್ತು ಮತ್ತು ಮೂತ್ರಕೋಶಗಳು ತೃಪ್ತಿಕರವಾಗಿ ಕಾರ್‍ಯ ನಿರ್ವಹಿಸುತ್ತಿರಲಿಲ್ಲ. ಅವರು ಡಯಾಲಿಸಿಸ್ ಮತ್ತು ಜೀವರಕ್ಷಕ ಕ್ರಮಗಳಿಗೆ ಒಳಪಟ್ಟಿದ್ದರು. ತಜ್ಞರ ತಂಡ ಅವರನ್ನ ನೋಡಿಕೊಳ್ಳುತ್ತಿತ್ತು ಎಂದು ಹಿರಿಯ ವೈದ್ಯರೊಬ್ಬರು ಹೇಳಿದರು. ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಸೇರಿದಂತೆ ಹಲವಾರು ಮಂದಿ ರಾಜಕೀಯ ನಾಯಕರು ಮತ್ತು ರಾಜತಾಂತ್ರಿಕರು ಬಿಶ್ತ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಚೀನಾವು ಭಾರತಕ್ಕೆ ೨೪ ವಿಮಾನಗಳಷ್ಟು ಕೋವಿಡ್ -೧೯ಕ್ಕೆ ಸಂಬಂಧಿಸಿದ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದ್ದು, ಮುಂದಿನ ವಾರ ಚೀನಾದ ಕಂಪನಿಗಳು ೨೦ ವಿಮಾನಗಳಷ್ಟು ವೈದ್ಯಕೀಯ ಸಾಮಗ್ರಿಗಳ ಸರಕನ್ನು ಭಾರತಕ್ಕೆ ಕಳುಹಿಸುವ ನಿರೀಕ್ಷೆಯಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು 2020 ಏಪ್ರಿಲ್ 20ರ ಸೋಮವಾರ ತಿಳಿಸಿದರು. ಏಪ್ರಿಲ್ ೨೧ ಮತ್ತು ೨೭ ರ ನಡುವಿನ ಅವಧಿಯಲ್ಲಿ ಈ ವಿಮಾನಗಳಲ್ಲಿ ವೈದ್ಯಕೀಯ ಸಾಮಗ್ರಿ ರವಾನೆಯ ವಿನಂತಿಯನ್ನು ಚೀನಾದ ನಾಗರಿಕ ವಿಮಾನಯಾನ ಆಡಳಿತದ ಮುಂದೆ ಇರಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಭಾರತೀಯ ಕಂಪೆನಿಗಳ ಮೇಲೆ ನೆರೆರಾಷ್ಟ್ರವು ಸ್ವಾಧೀನತೆ ಸಾಧಿಸದಂತೆ ಭಾರತವು ನಿರ್ಬಂಧಗಳನ್ನು ವಿಧಿಸಿದ್ದರ ಹೊರತಾಗಿಯೂ ಕೋವಿಡ್ -೧೯ರ ವಿರುದ್ಧದ ಸಮರದಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರ ಮುಂದುವರೆಸುವ ಸಾಧ್ಯತೆಗಳನ್ನು ಈ ಬೆಳವಣಿಗೆಯು ತೆರೆದಿಟ್ಟಿದೆ. ಏಪ್ರಿಲ್ ೪ ರಿಂದೀಚೆಗೆ ಕಳೆದ ಎರಡು ವಾರಗಳಲ್ಲಿ, ಶಾಂಘೈ, ಗುವಾಂಗ್ಜೋವು, ಶೆನ್ಜೆನ್, ಕ್ಸಿಯಾನ್ ಮತ್ತು ಹಾಂಕಾಂಗ್ನಿಂದ ಸುಮಾರು ೨೪ ವಿಮಾನಗಳ ಹಾರಾಟದಲ್ಲಿ ೩೯೦ ಟನ್ ವೈದ್ಯಕೀಯ ಸಾಮಗ್ರಿಗಳನ್ನು ಭಾರತದತ್ತ ಕಳುಹಿಸಲಾಗಿತ್ತು. ಇವುಗಳಲ್ಲಿ ಆರ್ಟಿ-ಪಿಸಿಆರ್ ಪರೀಕ್ಷಾ ಕಿಟ್ಗಳು, ತ್ವರಿತ ಪ್ರತಿಕಾಯ ಪರೀಕ್ಷಾ ಕಿಟ್ಗಳು, ಥರ್ಮಾಮೀಟರ್ಗಳು, ವೈಯಕ್ತಿಕ ರಕ್ಷಣಾ ಸಾಧನಗಳು ಸೇರಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಇಂಪೀರಿಯಲ್ ಲೈಫ್ ಸೈನ್ಸಸ್, ಎಚ್ಎಲ್ಎಲ್, ಮ್ಯಾಟ್ರಿಕ್ಸ್ ಲ್ಯಾಬ್ಸ್, ಇನ್ವೆಕ್ಸ್ ಹೆಲ್ತ್ಕೇರ್, ಮ್ಯಾಕ್ಸ್ ಮತ್ತು ರಿಲಯನ್ಸ್, ಟಾಟಾ, ಅದಾನಿ ಗುಂಪಿನ ಕಂಪನಿಗಳಿಗೆ ಈ ಸರಕುಗಳು ಬಂದವು. ಈ ಪಟ್ಟಿಯಲ್ಲಿ ಕರ್ನಾಟಕ, ಅಸ್ಸಾಂ, ತಮಿಳುನಾಡು ಮತ್ತು ರಾಜಸ್ಥಾನ ಈ ನಾಲ್ಕು ರಾಜ್ಯ ಸರ್ಕಾರಗಳೂ ಇದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment