ನಾನು ಮೆಚ್ಚಿದ ವಾಟ್ಸಪ್

Tuesday, April 14, 2020

ಇಂದಿನ ಇತಿಹಾಸ History Today ಏಪ್ರಿಲ್ 14

ಇಂದಿನ ಇತಿಹಾಸ  History Today ಏಪ್ರಿಲ್  14 
2020: ನವದೆಹಲಿ: ಕೊರೋನಾ ಇನ್ನಷ್ಟು ಹರಡಲು ಭಾರತ ಅವಕಾಶ ನೀಡುವುದಿಲ್ಲ, ಆದ್ದರಿಂದ ಮಾರ್ಚ್ ೨೫ರಿಂದ ಜಾರಿಯಲ್ಲಿರುವ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್‌ಡೌನ್) ಇನ್ನೂ ೧೯ ದಿನ, ಮೇ ೦೩ರವರೆಗೆ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 14ರ ಮಂಗಳವಾರ ಘೋಷಿಸಿದರು. ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಬೆಳಗ್ಗೆ ಮಾಡಿದ ಬಾಷಣದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮೇ ೩ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಕಟಿಸಿದ ಪ್ರಧಾನಿ, ಮುಂದಿನ ಒಂದು ವಾರ ಕಾಲ ದಿಗ್ಬಂಧನ ಅವಧಿಯಲ್ಲಿ ಅತ್ಯಂತ ಬಿಗಿಯಾದ ಕಟ್ಟುನಿಟ್ಟು ಅನುರಿಸಲಾಗುವುದು ಎಂದು ಎಂದು ಹೇಳಿದರು. ಏಪ್ರಿಲ್ ೨೦ರವರೆಗೆ ಅತ್ಯಂತ ಬಿಗಿಯಾದ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ. ಎಲ್ಲ ಪ್ರದೇಶಗಳಲ್ಲೂ ಲಾಕ್‌ಡೌನ್ ನಿಯಮಾವಳಿಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನಿಗಾ ವಹಿಸಲಾಗುವುದು ಮತ್ತು ನಿಯಮಗಳ ಪಾಲನೆಯಾಗುತ್ತಿದೆಯೇ ಎಂಬುದಾಗಿ ಗಮನಿಸಲಾಗುವುದು. ಸಮರ್ಪಕವಾಗಿ ಲಾಕ್ ಡೌನ್ ನಿಯಮಗಳನ್ನು ಅನುಸರಿಸಿದ ಮತ್ತು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಸ ಪ್ರಕರಣಗಳು ಕಂಡು ಬರದ ಜಾಗಗಳಲ್ಲಿ ವಾರದ ಬಳಿಕ ನಿಯಮಗಳನ್ನು ಸ್ವಲ್ಪ ಸಡಿಲಿಸಲಾಗುವುದು ಎಂದು ಪ್ರಧಾನಿ ನುಡಿದರು. ಲಾಕ್‌ಡೌನ್ ನಿಯಮಾವಳಿಗೆ ಸಂಬಂಧಿಸಿದಂತೆ ವಿಸೃತ ಮಾರ್ಗದರ್ಶಿ ಸೂತ್ರವನ್ನು ಬುಧವಾರ (ಏಪ್ರಿಲ್ ೧೫) ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಅವರು ನುಡಿದರು. ಮಾರ್ಗದರ್ಶಿ ಸೂತ್ರಗಳನ್ನು ರಚಿಸುವಾಗ ರೈತರು ಮತ್ತು ದಿನಗೂಲಿ ಕಾರ್ಮಿಕರ ಸಂಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಪ್ರಧಾನಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿರುವ ೧೯ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಅವಧಿಯಲ್ಲಿ ಆಹಾರ ಮತ್ತು ಔಷಧ ಸೇರಿದಂತೆ ಯಾವುದೇ ಅಗತ್ಯವಸ್ತುಗಳಿಗೆ ತೊಂದರೆ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ 2020 ಏಪ್ರಿಲ್ 14ರ ಮಂಗಳವಾರ ಭರವಸೆ ನೀಡಿದರು. ಇದೇ ವೇಳೆಯಲ್ಲಿ ಕೊರೋನಾವೈರಸ್ಸನ್ನು ಹತೋಟಿಯಲ್ಲಿ ಇಡಲು ಕೈಗೊಳ್ಳಲಾಗಿರುವ ಕ್ರಮಗಳ ಜಾರಿ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಸಮನ್ವಯನ್ನು ಗೃಹ ಸಚಿವರು ಶ್ಲಾಘಿಸಿದರು. ದಿಗ್ಬಂಧನದ ವೇಳೆಯಲ್ಲಿ ಎಲ್ಲ ಅಗತ್ಯವಸ್ತುಗಳ ಸುಲಲಿತ ಸರಬರಾಜು ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಗೆ ಸಮರ್ಥನೆಯಾಗಿ ಶಾ ಅವರ ಭರವಸೆಯೂ ಬಂದಿತು.  ಪ್ರಧಾನಿ ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಂಗಳವಾರ ಬೆಳಗ್ಗೆ ಮಾಡಿದ ಭಾಷಣದಲ್ಲಿ ಅಗತ್ಯವಸ್ತುಗಳ ಸರಬರಾಜಿಗೆ ಉಂಟಾಗುತ್ತಿರುವ ಅಡೆತಡೆಗಳನ್ನು ಕ್ರಮೇಣ ನಿವಾರಿಸಲಾಗುವುದು ಎಂಬುದಾಗಿ ಭರವಸೆ ನೀಡಿದ್ದರು. ಆಹಾರ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಇಲ್ಲ ಎಂದೂ ಪ್ರಧಾನಿ ಮೋದಿ ಹೇಳಿದ್ದರು. ಅಂಶವನ್ನು ಪುನರುಚ್ಚರಿಸಿದ ಶಾ ಭಯಭೀತರಾಗಬೇಡಿ ಎಂದು ನಿವಾಸಿಗಳಿಗೆ ಸಲಹೆ ಮಾಡಿದರು. ಆಹಾರ, ಔಷಧ ಮತ್ತು ದೈನಂದಿನ ಅಗತ್ಯವಸ್ತುಗಳ ದಾಸ್ತಾನು ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ, ಯಾರೇ ನಾಗರಿಕರೂ ಭಯಗ್ರಸ್ತರಾಗಬೇಕಾದ ಅಗತ್ಯವಿಲ್ಲ ಎಂಬುದಾಗಿ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಬಿಡುಗಡೆ ಮಾಡಿರುವ ಶಾ ಅವರ ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಪರೀಕ್ಷಾ ಕಿಟ್ ಖರೀದಿಯಲ್ಲಿನ ವಿಳಂಬಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2020 ಏಪ್ರಿಲ್ 14ರ ಮಂಗಳವಾರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಏಪ್ರಿಲ್ ಇಲ್ಲವೇ ಏಪ್ರಿಲ್ ೧೦ ರಂದು ದೇಕ್ಕೆ ತಲುಪಬೇಕಾಗಿದ್ದ ಕ್ಷಿಪ್ರ ಪರೀಕ್ಷಾ ಕಿಟ್‌ಗಳು, ಈಗ ಏಪ್ರಿಲ್ ೧೫ ರೊಳಗೆ ತಲುಪಲಿವೆ ಎಂಬುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ಪ್ರಕಟಿಸಿದ ಬಳಿಕ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು ಕೇಂದ್ರ ಸರ್ಕಾರವನ್ನು ಜಗ್ಗಾಡಿದರು. ಈ ಕಿಟ್‌ಗಳನ್ನು ಕೊರೋನವೈರಸ್ ರೋಗವನ್ನು ಹಾಟ್‌ಸ್ಪಾಟ್‌ಗಳು ಮತ್ತು ಹತೋಟಿ ವಲಯಗಳಲ್ಲಿ ಮಾತ್ರವಲ್ಲದೆ ವೈರಸ್‌ನಿಂದ ಮುಕ್ತವಾಗಿರುವ ಪ್ರದೇಶಗಳಲ್ಲಿಯೂ ವ್ಯಾಪಕ ಮತ್ತು ತ್ವರಿತ ಪರೀಕ್ಷೆ ನಡೆಸಲು ಸಾಧ್ಯವಾಗುವಂತೆ ಮಾಡುವ ಮುಂದಿನ ಹಂತಕ್ಕಾಗಿ ಅತ್ಯಾಧುನಿಕ ಕೋವಿಡ್-೧೯ ಕ್ಷಿಪ್ರ ಪರೀಕ್ಷಾ ಕಿಟ್‌ಗಳಿಗೆ ಭಾರತ ಆದೇಶ ನೀಡಿದೆ. ತ್ವರಿತ ಪರೀಕ್ಷೆ ಕಿಟ್‌ಗಳು (ರಾಪಿಡ್ ಟೆಸ್ಟ್ ಕಿಟ್‌ಗಳು) ಅಥವಾ ಆರ್‌ಟಿಕೆಗಳು ರಕ್ತ ಪರೀಕ್ಷಾ ಕಿಟ್‌ಗಳಾಗಿದ್ದು,  ಪರೀಕ್ಷಿಸಿದವರ ಮಾದರಿಗಳಲ್ಲಿ ಪ್ರತಿಕಾಯಗಳನ್ನು ಹುಡುಕುತ್ತವೆ. ಪರೀಕ್ಷೆ ಪಾಸಿಟವ್ ಆದರೆ ಪರೀಕ್ಷೆಗೊಳಗಾದ ವ್ಯಕ್ತಿ ವೈರಸ್ ಸೋಂಕಿಗೆ ಒಳಗಾಗಿದ್ದಾನೆ ಎಂದು ಅರ್ಥ. "ಪ್ರತಿ ೧೦ ಲಕ್ಷ (ಮಿಲಿಯನ್) ಭಾರತೀಯರಿಗೆ ಕೇವಲ ೧೪೯ ಪರೀಕ್ಷೆಗಳೊಂದಿಗೆ, ನಾವು ಈಗ ಲಾವೋಸ್ (೧೫೭), ನೈಜರ್ (೧೮೨) ಮತ್ತು ಹೊಂಡುರಾಸ್ (೧೬೨) ದೇಶಗಳ ಸಾಲಿನಲ್ಲಿ ಇದ್ದೇವೆ. ಸಾಮೂಹಿಕ ಪರೀಕ್ಷೆಯು ವೈರಸ್ ವಿರುದ್ಧ ಹೋರಾಡುವ ಕೀಲಿಯಾಗಿದೆ. ಪ್ರಸ್ತುತ ನಾವು ಆಟದಲ್ಲಿ ಎಲ್ಲಿಯೂ ಇಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020 ಏಪ್ರಿಲ್ 14ರ ಮಂಗಳವಾರ ೧೦,೮೧೫ಕ್ಕೇ ಏರಿದ್ದು, ಸಾವಿನ ಸಂಖ್ಯೆ ೩೫೩ಕ್ಕೆ ಏರಿತು. ಬೆನ್ನಲ್ಲೇ ಕೊರೊನಾವೈರಸ್ ಮಾದರಿಗಳ ಗುಂಪು ಪರೀಕ್ಷೆ ನಡೆಸಲು ಭಾರತ ತೀರ್ಮಾನಿಸಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇದಕ್ಕೆ ಒಪ್ಪಿಗೆ ನೀಡಿತು. ಕೊರೋನಾವೈರಸ್ ಮಾದರಿಗಳ ಗುಂಪು ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳಿಗೆ ಐಸಿಎಂಆರ್ ಮಂಗಳವಾರ ಅನುಮೋದನೆ ನೀಡಿತು. ಇದರಂತೆ ಐದು ಮಾದರಿಗಳನ್ನು ಇನ್ನು ಮಂದೆ ಒಂದೇ ಸಲಕ್ಕೆ ಪರೀಕ್ಷಿಸಲಾಗುವುದು. ಭಾರತದ ೧೦,೮೧೫ ಕೊರೋನಾವೈರಸ್ ಪ್ರಕರಣಗಳ ಪೈಕಿ ,೨೭೨ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ,೧೮೯ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ,೨೧೧ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತು. ಇದೇ ವೇಳೆಗೆ ಜಾಗತಿಕ ಮಟ್ಟದಲ್ಲಿ ಕೊರೋನಾವೈರಸ್ ಸೋಂಕು ೨೦ ಲಕ್ಷ ಮಂದಿಯನ್ನು ಬಾಧಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರ ಪುನಾರಂಭದ ಯೋಜನೆಯನ್ನು ಪೂರ್ಣಗೊಳಿಸುವ ಸನಿಹಕ್ಕೆ ತಾವು ಬಂದಿರುವುದಾಗಿ ಸೋಮವಾರ ಪ್ರಕಟಿಸಿದರು. ಮಾರಕ ಕೊರೋನಾವೈರಸ್ ಸೋಂಕು ೩೩೦ ದಶಲಕ್ಷ ಜನರಿರುವ ಅಮೆರಿಕದ ಶೇಕಡಾ ೯೫ಕ್ಕೂ ಹೆಚ್ಚು ಮಂದಿಗೆ ಹರಡಿದ್ದರಿಂದ ಇಷ್ಟೂ ಮಂದಿಗೆ ಗೃಹ ಬಂಧನದಲ್ಲಿ ಇರುವಂತೆ ಸರ್ಕಾರ ಆದೇಶ ನೀಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನ್ಯೂಯಾರ್ಕ್: ಮಾರಕ ಕೊರೊನಾ ವೈರಸ್ ಬಲಾಢ್ಯ ಅಮೆರಿಕವನ್ನು ಹಿಂಡಿ ಹಿಪ್ಪೆ ಮಾಡಿ, ಬಡವ-ಬಲ್ಲಿದ, ಖ್ಯಾತ- ಜನಸಾಮಾನ್ಯ ಎಂಬ ತಾರತಮ್ಯವಿಲ್ಲದೇ ಎಲ್ಲರನ್ನೂ ಬಲಿ ಪಡೆಯುತ್ತಿದ್ದು ಇದೀಗ ಅಮೆರಿಕದ ಅಧ್ಯಕ್ಷರ ಆಪ್ತ ಸ್ನೇಹಿತನನ್ನೇ ಬಲಿ ಪಡೆದಿದೆ. ಆಪ್ತ ಗೆಳೆಯನ ಅಗಲಿಕೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಂಬನಿ ಮಿಡಿದರು. ನ್ಯೂಯಾರ್ಕ್ ನಗರದ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸ್ನೇಹಿತ ಸ್ಯಾನ್ಲಿ ಚೇರಾ ಕೋವಿಡ್-೧೯ಕ್ಕೆ ಬಲಿಯಾದರು. ೭೮ ವರ್ಷದ ಸ್ಟ್ಯಾನ್ಲಿ ಚೇರಾ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಸೋಂಕಿಗಾಗಿ ಚಿಕಿತ್ಸೆ ಪಡೆಯತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೇರಾ ಮೃತರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದರು. ತಮ್ಮ ಆಪ್ತ ಸ್ನೇಹಿತನ ಅಗಲಿಕೆ ಕಂಬನಿ ಮಿಡಿದಿರುವ ಡೊನಾಲ್ಡ್ ಟ್ರಂಪ್, ಸ್ಟ್ಯಾನ್ಲಿ ಚೇರಾ ಅವರೊಂದಿಗಿನ ಆಪ್ತ ಬಾಂಧವ್ಯ ಸದಾ ನೆನಪಿನಲ್ಲಿರುತ್ತದೆ ಎಂದು ಹೇಳಿದರು. ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಖರ್ಚಿಗಾಗಿ ಸ್ಟ್ಯಾನ್ಲಿ ಚೇರಾ ಸುಮಾರು ಲಕ್ಷ ಅಮೆರಿಕನ್ ಡಾಲ್ ದೇಣಿಗೆಯನ್ನು ನೀಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2020: ಮುಂಬೈ: ಭೀಮಾ- ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಚಿಂತಕ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಅವರು 2020 ಏಪ್ರಿಲ್ 14ರ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಶರಣಾಗತರಾದರು. ಎಲ್ಗಾರ್ ಪರಿಷದ್- ಮಾವೋವಾದಿಗಳ ಜೊತೆಗಿನ ನಂಟು ಪ್ರಕರಣದಲ್ಲಿ ತೇಲ್ತುಂಬ್ಡೆ ಅವರನ್ನು ವಿಶೇಷ ಎನ್‌ಐಎ ನ್ಯಾಯಾಲಯವು ಏಪ್ರಿಲ್ ೧೮ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಒಪ್ಪಿಸಿ ಆದೇಶ ನೀಡಿತು. ಭಾರತದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ೧೨೯ನೇ ಜನ್ಮದಿನದಂದೇ ತೇಲ್ತುಂಬ್ಡೆ ಅವರು ಸಿಐಎ ಮುಂದೆ ಶರಣಾಗತರಾಗಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ  ಪ್ರೊಫೆಸರ್ ತೇಲ್ತುಂಬ್ಡೆ ಎನ್‌ಐಎ ಮುಂದೆ ಶರಣಾಗಿದ್ದಾರೆ ಎಂದು ಅವರ ವಕೀಲ ಮಿಹಿರ್ ದೇಸಾಯಿ ಹೇಳಿದರು. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಪಿಪಿಎ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ೨೦೧೮ ಜನವರಿ ೧ರಂದು ಸಂಭವಿಸಿದ್ದ ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಎನ್‌ಐಎ ಮಂದಿ ಮಾನವ ಹಕ್ಕು ಹೋರಟಗಾರರನ್ನು ಮತ್ತು ನಾಗರಿಕ ಹಕ್ಕು ಹೋರಾಟಗಾರರನ್ನು ಹಿಂದೆಯೇ ಬಂಧಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ದೆಹಲಿಯ ಉತ್ತರಪ್ರದೇಶ ಗಡಿಯಲ್ಲಿ ಕಳೆದ ತಿಂಗಳು ಉದ್ಭವಿಸಿದಂತಹುದೇ ಘಟನೆ 2020 ಏಪ್ರಿಲ್ 14ರ ಮಂಗಳವಾರ ಮುಂಬೈಯಲ್ಲಿ ಮರುಕಳಿಸಿದ್ದು, ಸಹಸ್ರಾರು ಮಂದಿ ವಲಸೆ ಕಾರ್ಮಿಕರು ಬಾಂದ್ರಾ ರೈಲ್ವೇ ನಿಲ್ದಾಣದ ಹೊರಗೆ ಜಮಾಯಿಸಿ ತಮ್ಮನ್ನು ಹುಟ್ಟೂರುಗಳಿಗೆ ಕಳುಹಿಸುವಂತೆ ಆಗ್ರಹಿಸಿದ ಘಟನೆ ಘಟಿಸಿತು. ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಚರ್ಚಿಸಿ, ಪರಿಸ್ಥಿತಿ ನಿಭಾಯಿಸಲು ಕೇಂದ್ರದ ಸಂಪೂರ್ಣ ಬೆಂಬಲವನ್ನು ತಿಳಿಸಿದರುದು ವರದಿಗಳು ಹೇಳಿದವು. ತಮ್ಮನ್ನು ಊರಿಗೆ ಕಳುಹಿಸಲು ರೈಲುಗಳನ್ನು ಓಡಿಸುವಂತೆ ಆಗ್ರಹಿಸುತ್ತಿದ್ದ ವಲಸೆ ಕಾರ್ಮಿಕರು ಲಾಕ್ ಡೌನ್ ಉಲ್ಲಂಘಿಸಿ ರೈಲ್ವೇ ನಿಲ್ದಾಣದ ಒಳಕ್ಕೆ ನುಗ್ಗಲು ಯತ್ನಿಸಿದಾಗ ಅವರನ್ನು ಪೊಲೀಸರು ಲಾಠಿ ಪ್ರಹಾರ ಮಾಡಿ ಚದುರಿಸಿದರು ಎಂದು ವರದಿಗಳು ಹೇಳಿದವು. ಕಾರ್ಮಿಕರು ಲಾಕ್ ಡೌನ್ ವಿಸ್ತರಣೆಯನ್ನು ಪ್ರತಿಭಟಿಸುತ್ತಿದ್ದರು. ತಮಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳು ಸಿಗುತ್ತಿಲ್ಲ ಎಂಬುದಾಗಿ ಹೇಳುತ್ತಿದ್ದರು ಎಂದು ಪಶ್ಚಿಮ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದರು. ಕೊರೋನಾ ವೈರಸ್ ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ದಿಗ್ಬಂಧನವನ್ನು ಮೇ ರವರೆಗೆ ವಿಸ್ತರಿಸಿರುವ ನಿರ್ಧಾರದಿಂದ ಕೆರಳಿದ ವಲಸೆ ಕಾರ್ಮಿಕರು, ದಿನಗೂಲಿಗಳು ಮುಂಬೈಯ ಬಾಂದ್ರಾ ರೈಲ್ವೇ ನಿಲ್ದಾಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದರು ಎಂದು ವರದಿಗಳು ಹೇಳಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


No comments:

Post a Comment