ನಾನು ಮೆಚ್ಚಿದ ವಾಟ್ಸಪ್

Monday, April 13, 2020

ಇಂದಿನ ಇತಿಹಾಸ History Today ಏಪ್ರಿಲ್ 13

2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 14ರ ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಕೊರೋನಾವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ರಾಷ್ಟ್ರವ್ಯಾಪಿ ದಿಗ್ಬಂಧನದ ವಿಸ್ತರಣೆಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಮಾರ್ಚ್ ೨೪ರಲ್ಲಿ ವಿಧಿಸಲಾಗಿದ್ದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವು ಮಂಗಳವಾರ ಮಧ್ಯರಾತ್ರಿಗೆ ಮುಕ್ತಾಯವಾಗಲಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರು ೨೦೨೦ ಏಪ್ರಿಲ್ ೧೪ರಂದು ಬೆಳಗ್ಗೆ ೧೦ ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯವು 2020 ಏಪ್ರಿಲ್ 13ರ ಸೋಮವಾರ ಟ್ವೀಟ್ ಮಾಡಿತು. ಮಂಗಳವಾರದ ಭಾಷಣಕ್ಕೆ ಮುನ್ನ ಈದಿನ ಪ್ರಧಾನಿಯವರು ವಿವಿಧ ಇಲಾಖಾ ಮುಖ್ಯಸ್ಥರ ಜೊತೆಗೆ ಅಂತಿಮ ಹಂತದ ಸಮಾಲೋಚನೆಗಳನ್ನು ನಡೆಸಿದ್ದರು. ಕಳೆದ ತಿಂಗಳಲ್ಲಿ ಪ್ರಧಾನಿ ಮೋದಿಯವರು ಮಾರ್ಚ್ ೧೯ ಮತ್ತು ಮಾರ್ಚ್ ೨೪ - ಹೀಗೆ ಎರಡು ಬಾರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು. ಮಾರ್ಚ್ ೧೯ರಂದು ಪ್ರಧಾನಿಯವರು ಕೊರೋನಾವೈರಸ್ ವಿರುದ್ಧ ಹೋರಾಟಕ್ಕಾಗಿ ನಿರ್ಧಾರ ಮತ್ತು ಸಂಯಮ ವಹಿಸಲು ಕರೆ ನೀಡಿದ್ದರೆ. ಮಾರ್ಚ್ ೨೨ರ ಭಾನುವಾರಜನತಾ ಕರ್ಫ್ಯೂ ಆಚರಿಸುವಂತೆಯೂ ಅವರು ಕರೆ ಕೊಟ್ಟಿದ್ದರು. ಮಾರ್ಚ್ ೨೪ರಂದು ಮೋದಿಯವರು ಮಾರಕ ವೈರಸ್ ಹರಡದಂತೆ ತಡೆಯುವ ಸಲುವಾಗಿ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ್ದರು. ಅದಕ್ಕೂ ಮುನ್ನಜನತಾ ಕರ್ಫ್ಯೂ ದಿನದಂತೆ ಸಂಜೆ ಚಪ್ಪಾಳೆ, ಶಂಖನಾದಗಳ ಮೂಲಕ ಕೋರೋನಾವೈರಸ್ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಹೋರಾಟಗಾರರಾದ ವೈದ್ಯಕೀಯ ಸಿಬ್ಬಂದಿ ಮತ್ತಿತರರಿಗೆ ರಾಷ್ಟ್ರದ ಕೃತಜ್ಞತೆ ಅರ್ಪಿಸುವಂತೆ ಸೂಚಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನವೈರಸ್ ಸೋಂಕು ಭಾರತದ ಆರ್ಥಿಕತೆಯ ಮೇಲೆ ಉಂಟು ಮಾಡುವ ಪರಿಣಾಮವು ಅದರಿಂದ ಉದ್ಭವಿಸಿರುವ ಬಿಕ್ಕಟ್ಟಿನ ಆಳ, ಅವಧಿ ಮತ್ತು ವಿಸ್ತರಣೆಯನ್ನು ಅವಲಂಬಿಸಿರುತ್ತದೆ ಎಂದು ರಿಸರ್ವ್ ಬ್ಯಾಂಕ್ ತುರ್ತು ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಡಾವಳಿ ಟಿಪ್ಪಣಿಗಳಲ್ಲಿ (ಮಿನಿಟ್ಸ್) ತಿಳಿಸಿದೆ. ಮಾರ್ಚ್ ಅಂತ್ಯದಲ್ಲಿ ನಡೆದಿದ್ದ ಸಭೆಯಲ್ಲಿ ಆರ್‌ಬಿಐ ತನ್ನ ಮುಖ್ಯ ಅಲ್ಪಾವಧಿಯ ಸಾಲ ದರವನ್ನು ನಿರೀಕ್ಷೆ ಮೀರಿ ೭೫ ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿತ್ತು ಮತ್ತು ಕೋವಿಡ್-೧೯  ಪರಿಣಾಮವಾಗಿ ಉಂಟಾದ ಆರ್ಥಿಕ ಕುಸಿತವನ್ನು ಎದುರಿಸಲು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಅಸ್ಥಿರತೆ ನಿವಾರಣೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿತ್ತು. "ಕೋವಿಡ್-೧೯ರ ನಿಖರವಾದ ಪರಿಣಾಮದ ಬಗ್ಗೆ  ಹಿಂದೆಂದೂ ಕಾಣದಂತಹ ಅನಿಶ್ಚಿತತೆಯಿದೆ, ಇದು ಅಲ್ಪಾವಧಿಯ  ಬೆಳವಣಿಗೆಯ ದೃಷ್ಟಿಕೋನದ ಮೇಲೆ ಪರಿಣಾಮ ಬೀರುತ್ತದೆ. ಪ್ರಮಾಣೀಕರಿಸಲು ಕಷ್ಟವಾದರೂ, ಮುಂದಿನ ದಿನಗಳಲ್ಲಿ ಒಟ್ಟಾರೆ ಬೇಡಿಕೆಯು ಗಮನಾರ್ಹವಾಗಿ ದುರ್ಬಲಗೊಳ್ಳುತ್ತದೆ ಎಂಬುದು ಸ್ಪಷ್ಟ. ಇದು ಒಟ್ಟಾರೆ ವರ್ಷದ ಬೆಳವಣಿಗೆಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಸರ್ವ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಎಂಪಿಸಿ ಸದಸ್ಯ ಜನಕ್ ರಾಜ್ ಸಭೆಯ ನಡಾವಳಿ ಟಿಪ್ಪಣಿಗಳಲ್ಲಿ ಬರೆದಿದ್ದಾರೆ.  " ಹಂತದಲ್ಲಿ ದೇಶೀಯ ಬೇಡಿಕೆಯ ಮೇಲೆ ಕೋವಿಡ್-೧೯ರ ವ್ಯತಿರಿಕ್ತ ಪರಿಣಾಮ ಹೆಚ್ಚಾಗದಂತೆ ನೋಡಿಕೊಳ್ಳುವುದು ವಿತ್ತೀಯ ನೀತಿಯ ಮುಖ್ಯ ಸವಾಲು" ಎಂದು ಅವರು ನಮೂದಿಸಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ,೩೦೦ನ್ನು ದಾಟಿದ್ದು, ಹೊಸದಾಗಿ ೫೧ ಮಂದಿ ಸಾವನ್ನಪ್ಪುವುದರೊಂದಿಗೆ ಮಾರಕ ವೈರಸ್ಸಿಗೆ ಬಲಿಯಾದವರ ಸಂಖ್ಯೆ ೩೨೪ಕ್ಕೆ ಏರಿದೆ. ಆದರೆ ೧೫ ಬಾಧಿತ ರಾಜ್ಯಗಳ ೨೫ ಜಿಲ್ಲೆಗಳಲ್ಲಿ ಒಂದೇ ಒಂದು ಹೊಸ ಪ್ರಕರಣ ವರದಿಯಾಗದೇ ಇರುವುದು ಆಶಾದಾಯಕ ಬೆಳವಣಿಗೆ ಎಂದು ಕೇಂದ್ರ ಸರ್ಕಾರ 2020 ಏಪ್ರಿಲ್ 13ರ ಸೋಮವಾರ ತಿಳಿಸಿತು. ದೇಶದಲ್ಲಿ ಕೊರೋನಾಸೋಂಕು ತಗುಲಿದ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ,೯೮೭ ಆಗಿದ್ದು, ೮೫೬ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಇಲ್ಲವೇ ವಲಸೆ ಹೋಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ೭೨ ವಿದೇಶೀಯರು ಸೇರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತು. ಭಾನುವಾರ ಸಂಜೆಯ ಬಳಿಕ ವರದಿಯಾಗಿರುವ ೫೧ ಸಾವಿನ ಪ್ರಕರಣಗಳಲ್ಲಿ ೨೨ ಪ್ರಕರಣಗಳು ಮಹಾರಾಷ್ಟ್ರದಿಂದ, ಪ್ರಕರಣಗಳು ದೆಹಲಿಯಿಂದ, ಮೂರು ಪ್ರಕರಣಗಳು ಗುಜರಾತಿನಿಂದ, ಎರಡು ಪ್ರಕರಣಗಳು ಪಶ್ಚಿಮ ಬಂಗಾಳದಿಂದ ಹಾಗೂ ತಲಾ ಒಂದು ಪ್ರಕರಣ ತಮಿಳುನಾಡು, ಜಾರ್ಖಂಡ್ ಮತ್ತು ಆಂದ್ರಪ್ರದೇಶದಿಂದ ವರದಿಯಾದವು. ಭಾರತದಲ್ಲಿ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಇದ್ದರೂ, ಕೊರೋನಾಸೋಂಕಿನ ಬಾಧೆಗೆ ಗುರಿಯಾಗಿರುವ ೧೫ ರಾಜ್ಯಗಳ ೨೫ ಜಿಲ್ಲೆಗಳಿಂದ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂಬುದು ಗಮನಾರ್ಹ ಎಂದು ಕೇಂದ್ರ ಸರ್ಕಾರ ಬೊಟ್ಟು ಮಾಡಿತು. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಫಲಾನುಭವಿಗಳಿಗೆ ಐದು ಕಿಲೋಗ್ರಾಂನಷ್ಟು ಉಚಿತ ರೇಷನ್ ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 2020 ಏಪ್ರಿಲ್ 13ರ ಸೋಮವಾರ ಸ್ವಾಗತಿಸಿದರು ಮತ್ತು ಕೋವಿಡ್-೧೯ ದಿಗ್ಬಂಧನದ ಪರಿಣಾಮ ತಗ್ಗಿಸಲು ಇನ್ನಷ್ಟು ಕ್ರಮಗಳನ್ನು ಸಲಹೆ ಮಾಡಿದರು. ಪ್ರಧಾನಿ ಮೋದಿ ಅವರಿಗೆ ಬರೆದ ಹೊಸ ಪತ್ರದಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉಚಿತವಾಗಿ ಹೆಚ್ಚವರಿ ರೇಷನ್ ಒದಗಿಸಲು ನಿರ್ಧರಿಸಿದ ಕ್ರಮವನ್ನು ಸ್ವಾಗತಿಸಿದ ಸೋನಿಯಾ, ಕೋವಿಡ್-೧೯ ಬಿಕ್ಕಟ್ಟು ಹಲವಾರು ಕುಟುಂಬಗಳಲ್ಲಿ ಆಹಾರದ ಅಭದ್ರತೆ ಮತ್ತು ದಾರಿದ್ರ್ಯವನ್ನು ಹುಟ್ಟು ಹಾಕಿದೆ ಎಂದು ತಿಳಿಸಿದರು.  ದಿಗ್ಬಂಧನವು ಬದುಕಿನ ಮೇಲೆ ಉಂಟು ಮಾಡಿರುವ ಪರಿಣಾಮಗಳಿಂದ ಹೊರಬರಲು ತಮ್ಮ ಸಲಹೆಗಳನ್ನು ಅವರು ಪತ್ರದಲ್ಲಿ ಪಟ್ಟಿ ಮಾಡಿದರು. ‘ದೇಶಾದ್ಯಂತ ಲಕ್ಷಾಂತರ ಮಂದಿ ಲಾಕ್‌ಡೌನ್ ಪರಿಣಾಮವಾಗಿ ಆಹಾರದ ತೀವ್ರ ಅಭದ್ರತೆ ಎದುರಿಸುತ್ತಿದ್ದಾರೆ. ಭಾರತವು ಈಗಿನ ಸಾಂಕ್ರಾಮಿಕದಂತಹ ಪರಿಸ್ಥಿತಿಗಳನ್ನು ಎದುರಿಸುವ ಸಲುವಾಗಿಯೇ ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವುದರ ಹೊರತಾಗಿಯೂ ಇಂತಹ ಸ್ಥಿತಿ ಎದುರಾಗಿರುವುದು ದಾರುಣ ಎಂದು ಸೋನಿಯಾಗಾಂಧಿ ಹೇಳಿದರು. ಕಾಂಗ್ರೆಸ್ ಮುಖ್ಯಸ್ಥೆ ಮಾರ್ಚ್ ೨೩ರಿಂದ ಪ್ರಧಾನಿಯವರಿಗೆ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಆರನೇ ಪತ್ರ ಇದು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಮಾರ್ಚ್ ೨೪ರಂದು ಘೋಷಿಸಲಾದ ೨೧ ದಿನಗಳ ಅವಧಿಯ ರಾಷ್ಟ್ರವ್ಯಾಪಿ ದಿಗ್ಬಂಧನವು (ಲಾಕ್‌ಡೌನ್) ವಿಶ್ವದಲ್ಲೇ ಅತ್ಯಂತ ದೊಡ್ಡಲಾಕ್‌ಡೌನ್ ಆಗಿದ್ದು ಇದು ಭಾರತದ ಆರ್ಥಿಕತೆಗೆ ಅಂದಾಜು - ಲಕ್ಷ ಕೋಟಿ ರೂಪಾಯಿಗಳ ನಷ್ಟವನ್ನು ಉಂಟು ಮಾಡಿರಬಹುದು ಎಂದು ಕೈಗಾರಿಕಾ ವಿಶ್ಲೇಷಕರು ಹಾಗೂ ಆರ್ಥಿಕ ತಜ್ಞರು ಅಂದಾಜು 2020 ಏಪ್ರಿಲ್ 13ರ ಸೋಮವಾರ ಮಾಡಿದರು. ೨೧ ದಿನಗಳ ದಿಗ್ಬಂಧನ ಕಾಲದಲ್ಲಿ ಬಹುತೇಕ ಕಾರ್ಖಾನೆಗಳು, ವ್ಯವಹಾರ, ವಿಮಾನಯಾನ, ರೈಲು ಸಂಚಾರ ಸ್ಥಗಿತಗೊಂಡಿದ್ದವು. ವಾಹನಗಳು ಹಾಗೂ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೊರೋನಾವೈರಸ್ (ಕೋವಿಡ್-೧೯) ಮಾರಕ ರೋಗ ಹರಡದಂತೆ ತಡೆಯುವ ಸಲುವಾಗಿ ಮಾರ್ಚ್ ೨೫ರಿಂದ ಜಾರಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್-೧೯ ಲಾಕ್‌ಡೌನ್ ಘೋಷಿಸಿದ್ದರು. ಪರಿಣಾಮವಾಗಿ ದೇಶಾದ್ಯಂತ ಶೇಕಡಾ ೭೦ರಷ್ಟು ಆರ್ಥಿಕ ಚಟುವಟಿಕೆಗಳು, ಹೂಡಿಕೆ, ರಫ್ತು, ವಿಶೇಷ ಗ್ರಾಹಕ ಬಳಕೆ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಕೃಷಿ, ಗಣಿಗಾರಿಕೆ,  ಅಗತ್ಯ ವಸ್ತುಗಳು ಮತ್ತು ಸೇವೆ, ಸಾರ್ವಜನಿಕ ಉಪಯುಕ್ತ ಸೇವೆಗಳು, ಕೆಲವು ಹಣಕಾಸು ಸೇವೆಗಳು, ಐಟಿ ಸೇವೆಗಳು ಮತ್ತು ಸಾರ್ವಜನಿಕ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ದಿಟ್ಟ ಹಣಕಾಸು ಕ್ರಮಗಳ ಬಳಿಕ ಆರ್ಥಿಕತೆಯು ಚೇತರಿಕೆಯ ಲಕ್ಷಣಗಳನ್ನು ತೋರುತ್ತಿದ್ದ ಅಪಕ್ವ ಕಾಲದಲ್ಲಿ ಭಾರತದ ಆರ್ಥಿಕತೆಗೆ ಸಾಂಕ್ರಾಮಿಕ ರೋಗದ ಬರಸಿಡಿಲು ಬಡಿದಿದೆ ಎಂದು ಕೇಂದ್ರೀಯ ಸಾಂಸ್ಥಿಕ ಸಂಶೋಧನಾ ಸಂಸ್ಥೆ ಹೇಳಿದೆ. ಪರಿಣಾಮವಾಗಿ ದೇಶವು ೨೦೨೧ರ ಹಣಕಾಸು ವರ್ಷದಲ್ಲಿ (ಏಪ್ರಿಲ್ ೨೦೨೦ರಿಂದ ಮಾರ್ಚ್ ೨೦೨೧) ಅತ್ಯಂತ ಕಡಿಮೆ ಅಂದರೆ ಒಂದಂಕಿಯ ಬೆಳವಣಿಗೆಗೆ ಇಳಿಯುವ ಸಾಧ್ಯತೆ ಇದೆ ಎಂದು ಅದು ಹೇಳಿತು. ರಾಷ್ಟ್ರವ್ಯಾಪಿ ಸಂಪೂರ್ಣ ದಿಗ್ಬಂಧನವು - ಟ್ರಿಲಿಯನ್ ರೂಪಾಯಿಗಳ ನಷ್ಟವನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಅದು ಹೇಳಿತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಖಾಸಗಿ ಪ್ರಯೋಗಾಲಯಗಳು (ಲ್ಯಾಬೋರೇಟರಿಗಳು) ಪ್ರತಿಯೊಬ್ಬರಿಗೂ ಕೊರೋನಾ (ಕೋವಿಡ್-೧೯) ಪರೀಕ್ಷೆಯನ್ನು ಉಚಿತವಾಗಿ ನಡೆಸಬೇಕು ಎಂಬುದಾಗಿ ಕಳೆದವಾರ ನೀಡಿದ್ದ ತನ್ನ ತೀರ್ಪನ್ನು ಸುಪ್ರೀಂಕೋರ್ಟ್  2020 ಏಪ್ರಿಲ್ 13ರ ಸೋಮವಾರ ತಿದ್ದುಪಡಿ ಮಾಡಿದ್ದು, ಬಡವರಿಗೆ ಮಾತ್ರ ಖಾಸಗಿ ಕೋವಿಡ್ ಪರೀಕ್ಷೆ ಉಚಿತ ಎಂದು ಹೇಳಿತು. ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಸ್. ರವೀಂದ್ರ ಭಟ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವುಪರೀಕ್ಷೆಗಾಗಿ ೪೫೦೦ ರೂಪಾಯಿ ಪಾವತಿ ಮಾಡಲು ಸಾಧ್ಯವಿಲ್ಲದೇ ಇರುವ ಜನರಿಗೆ ಮಾತ್ರ ಖಾಸಗಿ ಪ್ರಯೋಗಾಲಯಗಳು ಉಚಿತವಾಗಿ ಪರೀಕ್ಷೆಯನ್ನು ನಡೆಸಬೇಕು ಎಂದು ಆಜ್ಞಾಪಿಸಿತು. ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಅರ್ಹರಾದ ವ್ಯಕ್ತಿಗಳು ಪರೀಕ್ಷೆಗಾಗಿ ಪಾವತಿ ಮಾಡಬೇಕಾಗಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳು ಶುಲ್ಕರಹಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದಾದ ಆರ್ಥಿಕ ದುರ್ಬಲ ವರ್ಗಗಳ ಬಗ್ಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದರು. ಯಾವುದೇ ಸಂದರ್ಭದಲ್ಲೂ ಖಾಸಗಿ ಪ್ರಯೋಗಾಲಯಗಳು ಉಚಿತ ಪರೀಕ್ಷೆಯ ಆರ್ಥಿಕ ಹೊರೆಯನ್ನು ಹೊರಬೇಕಾಗಿಲ್ಲ. ಖಾಸಗಿ ಪ್ರಯೋಗಾಲಯಗಳು ನಡೆಸುವ ಉಚಿತ ಪರೀಕ್ಷೆಗಳ ವೆಚ್ಚವನ್ನು ಮರುಪಾವತಿ ಮಾಡುವ ಬಗ್ಗೆ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕು ಎಂದೂ ಪೀಠ ಸೂಚಿಸಿತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment