Tuesday, April 7, 2020

ಇಂದಿನ ಇತಿಹಾಸ History Today ಏಪ್ರಿಲ್ 07

2020: ನವದೆಹಲಿ: ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪಾರ್ಸೆಟಮೋಲ್ ಸೇರಿದಂತೆ ೧೪ ಔಷಧಗಳ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸುವ ಮೂಲಕ ಭಾರತವು ಸಂಕಟದ ಸಮಯದಲ್ಲಿ ವಿಶ್ವದ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಹಿಂದೆ ಬೀಳುವುದಿಲ್ಲ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2020 ಏಪ್ರಿಲ್ 07ರ ಮಂಗಳವಾರ ವಿಶ್ವಕ್ಕೆ ರವಾನಿಸಿತು. ಕೋವಿಡ್-೧೯ ಸೋಂಕು ನಿಯಂತ್ರಣದಲ್ಲಿ ಉಪಯುಕ್ತವಾಗಿರುವ ಮಲೇರಿಯಾ ನಿರೋಧಿ ಹೈಡ್ರಾಕ್ಸಿಕ್ಲೊರೋಕ್ವಿನ್ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸದಿದ್ದರೆ ಪ್ರತೀಕಾರದ ಕ್ರಮ ಸಾಧ್ಯತೆ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಎಚ್ಚರಿಕೆ ನೀಡುವುದಕ್ಕೆ ಮುನ್ನವೇ ಸಾಂಸ್ಥಿಕ ಮಾರ್ಗಗಳ ಮೂಲಕ ನಿರ್ಣಾಯಕ ಔಷಧಗಳ ಸರಬರಾಜು ಮಾಡಲು ಅನುಕೂಲವಾಗುವಂತೆ ತನ್ನ ನೀತಿಯಲ್ಲಿ ಮಾಡಲಾಗಿರುವ ಬದಲಾವಣೆಯನ್ನು ಅಮೆರಿಕ ಸೇರಿದಂತೆ ಎಲ್ಲ ರಾಷ್ಟ್ರಗಳಿಗೆ ತಿಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಕಾರ್‍ಯದರ್ಶಿ ಪಿಕೆ ಮಿಶ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಸಮಿತಿಯು 2020 ಏಪ್ರಿಲ್ 07ರ ಮಂಗಳವಾರ ೧೪ ಔಷಧಗಳ ಮೇಲಿನ ರಫ್ತು ನಿರ್ಬಂಧಗಳನ್ನು  ತೆರವುಗೊಳಿಸಲು ಮತ್ತು ದೇಶದಲ್ಲಿನ ಹಾಲಿ ಬೇಡಿಕೆ ಮತ್ತು ಸರಬರಾಜು ಸಾಮರ್ಥ್ಯದ ಅಂದಾಜಿನ ಬಳಿಕ ಹೈಡ್ರಾಕ್ಸಿಕ್ಲೊರೋಕ್ವಿನ್ ಮತ್ತು ಪಾರ್ಸೆಟಮೋಲ್ ರಫ್ತಿಗೆ ಅವಕಾಶ ನೀಡುವ ನಿರ್ಣಯವನ್ನು ಕೈಗೊಂಡಿತು. ಇದು ಹೈಡ್ರಾಕ್ಸಿಕ್ಲೊರೋಕ್ವಿನ್ ಗೆ ಮಾತ್ರವೇ ಸಂಬಂಧಿಸಿದ್ದಲ್ಲ ಅಥವಾ ಅಮೆರಿಕಕ್ಕೆ ಮಾತ್ರವೇ ಸಂಬಂಧಿಸಿದ್ದೂ ಅಲ್ಲ. ಭಾರತದ ಫಾರ್ಮಾ ಉದ್ಯಮವು ಎಚ್ ಐವಿ ಔಷಧಗಳನ್ನು ದಕ್ಷಿಣ ಆಫ್ರಿಕಾದ ೮೦ ಲಕ್ಷ ರೋಗಿಗಳಿಗೆ, ಪಾರ್ಸೆಟಮೋಲ್‌ನ್ನು ಇಂಗ್ಲೆಂಡಿಗೆ ಸರಬರಾಜು ಮಾಡುತ್ತಿದ್ದು, ಎಲ್ಲ ಔಷಧಗಳ ಶೇಕಡಾ ೮೦ಷ್ಟು ಮಾಲ್ದೀವ್ಸ್ ಮತ್ತು ಮಾರಿಷಸ್ ಸೇರಿದಂತೆ ನೆರೆಯ ರಾಷ್ಟ್ರಗಳಿಗೆ ಸರಬರಾಜು ಆಗುತ್ತಿದೆ ಅಧಿಕೃತ ಮೂಲಗಳು ತಿಳಿಸಿದವು.  (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಅತಿಯಾಗಿ ಬಾಧಿತವಾಗಿರುವ ರಾಷ್ಟ್ರಗಳಿಗೆ ಭಾರತವು ಪಾರ್ಸೆಟಮೋಲ್ ಮತ್ತು ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧವನ್ನು ಸರಬರಾಜು ಮಾಡಲಿದೆ ಎಂದು ಭಾರತ  2020 ಏಪ್ರಿಲ್ 07ರ ಮಂಗಳವಾರ  ಪ್ರಕಟಿಸಿತು. ಭಾರತ ಸರ್ಕಾರವು ಮಲೇರಿಯಾ ನಿರೋಧಿ ಔಷಧಗಳ ರಫ್ತಿಗೆ ಅವಕಾಶ ನೀಡದೇ ಇದ್ದಲ್ಲಿ ಪ್ರತೀಕಾರದ ಕ್ರಮ ಕೈಗೊಳ್ಳಬೇಕಾದೀತು ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಮಲೇರಿಯಾ ನಿರೋಧಿ ಔಷಧಗಳ ರಫ್ತನ್ನು ಭಾರತ ಭಾಗಶಃ ಸಡಿಲಿಸಿತು. ಕೋವಿಡ್ -೧೯ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಮಾನವೀಯ ಅಂಶಗಳನ್ನು ಪರಿಗಣಿಸಿ, ನಮ್ಮ ಸಾಮರ್ಥ್ಯವನ್ನು ಅವಲಂಬಿಸಿದ ನಮ್ಮ ಎಲ್ಲ ನೆರೆಯ ರಾಷ್ಟ್ರಗಳಿಗೆ ಸೂಕ್ರ ಪ್ರಮಾಣದ ಪಾರ್ಸೆಟಮೋಲ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ರಫ್ತಿಗೆ ಪರವಾನಗಿ ನೀಡಲು ಭಾರತ ನಿರ್ಧರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದರು. ನಿರ್ದಿಷ್ಟವಾಗಿ ಸಾಂಕ್ರಾಮಿಕದಿಂದ ಅತ್ಯಂತ ಹೆಚ್ಚು ತೊಂದರೆಗೀಡಾದ ಕೆಲವು ರಾಷ್ಟ್ರಗಳಿಗೆ ಅಗತ್ಯ ಔಷಧಗಳನ್ನು ನಾವು  ಸರಬರಾಜು ಮಾಡುತ್ತೇವೆ. ಆದ್ದರಿಂದ ಬಗ್ಗೆ ಯಾವುದೇ ವದಂತಿಗಳು ಅಥವಾ ವಿಷಯವನ್ನು ರಾಜಕೀಯಗೊಳಿಸುವ ಯಾವುದೇ ಯತ್ನಗಳನ್ನು ನಾವು ನಿರುತ್ಸಾಹಿಸುತ್ತೇವೆ ಎಂದು ಶ್ರೀವಾಸ್ತವ ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಸಾಂಕ್ರಾಮಿಕ ಪಿಡುಗನ್ನು ನಿಭಾಯಿಸುವಲ್ಲಿ ಸೂತ್ರಗಳ ಪತ್ರವೊಂದನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2020 ಏಪ್ರಿಲ್ 07ರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದರು. ೨೦,೦೦೦ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ಸೌಂದರ್‍ಯೀಕರಣ ಮತ್ತು ನಿರ್ಮಾಣಯೋಜನೆಯನ್ನು ತತ್ ಕ್ಷಣ ಅಮಾನತುಗೊಳಿಸುವಂತೆಯೂ ಸೋನಿಯಾ  ಗಾಂಧಿ ಅವರು ಪ್ರಧಾನಿಯವರನ್ನು ಕೋರಿದರು. ಮಿತ ವ್ಯಯದ ಹಣವನ್ನು ಸಮಯದ ಅಗತ್ಯವಾಗಿರುವ ಕೋವಿಡ್ -೧೯ ಸೋಂಕು ವಿರೋಧಿ ಸಮರಕ್ಕೆ ಬೇಕಾದ ನಿಧಿಗೆ ವರ್ಗಾಯಿಸಬಹುದು ಎಂದು ಕಾಂಗ್ರೆಸ್ ಅಧ್ಯಕ್ಷೆ ತಮ್ಮ ಪತ್ರದಲ್ಲಿ ಸಲಹೆ ಮಾಡಿದರು. ಪ್ರಧಾನಿಯವರು ತಮ್ಮ ನಡೆಸಿದ ತಮ್ಮ ದೂರವಾಣಿ ಸಂಭಾಷಣೆಗೆ ಸ್ಪಂದಿಸಿ ತಾವು ಸಲಹೆಗಳನ್ನು ಕಳುಹಿಸುತ್ತಿರುವುದಾಗಿ ಸೋನಿಯಾಗಾಂಧಿ ಅವರು ತಿಳಿಸಿದ್ದಾರೆ. ನಿನ್ನೆ (ಸೋಮವಾರ) ನಿಮ್ಮ ಕರೆಯ ವೇಳೆಯಲ್ಲಿ ನಮ್ಮ ಪಕ್ಷದ ವತಿಯಿಂದ ಏನಾದರೂ ಸಲಹೆಗಳಿದ್ದಲ್ಲಿ ಕಳುಹಿಸಿಕೊಡುವಂತೆ ನೀವು ನನ್ನಲ್ಲಿ ಸೌಜನ್ಯಪೂರ್ವಕವಾಗಿ ಸೂಚಿಸಿದ್ದಿರಿ. ಸ್ಫೂರ್ತಿಯ ಹಿನ್ನೆಲೆಯಲ್ಲಿ ನಾನು ಪತ್ರ ಬರೆದಿದ್ದೇನೆ ಎಂದು ಸೋನಿಯಾ ತಿಳಿಸಿದರು. ತಮ್ಮ ಸಲಹೆಗಳಲ್ಲಿ ಸೋನಿಯಾಗಾಂಧಿಯವರು ಟಿವಿ, ಮುದ್ರಣ ಮತ್ತು ಆನ್ ಲೈನ್-   ಎಲ್ಲ ಮಾಧ್ಯಮಗಳಿಗೆ ಸರ್ಕಾರಿ ಜಾಹೀರಾತು ನೀಡುವುದನ್ನು ಎರಡು ವರ್ಷಗಳ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಲು ಕೋರಿದರು. ಸಲಹೆಗಳಲ್ಲಿನ ಮೌಲ್ಯವನ್ನು ತಾವು ಗುರುತಿಸುವಿರಿ ಎಂಬ ನಂಬಕೆ ನನಗೆ ಇದೆ ಎಂದೂ ಸೋನಿಯಾ ಬರೆದರು.  (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ವಿಧಿಸಲಾಗಿರುವ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ವಿಸ್ತರಿಸುವಂತೆ ರಾಜ್ಯಗಳು ಮತ್ತು ತಜ್ಞರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಮಾಸಾಂತ್ಯದವರೆಗೆ ದಿಗ್ಬಂಧನ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಸರ್ಕಾರಿ ಮೂಲಗಳು 2020 ಏಪ್ರಿಲ್ 07ರ ಮಂಗಳವಾರ ತಿಳಿಸಿದವು. ಏನಿದ್ದರೂ, ದಿಗ್ಬಂಧನ ವಿಸ್ತರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ಹೇಳಿದವು. ದಿಗ್ಬಂಧನ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರವನ್ನು ಈವರೆಗೂ ತೆಗೆದುಕೊಳ್ಳಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ಹೇಳಿದರು. ಯಾವುದೇ ವದಂತಿಗಳನ್ನು ಹರಡಬೇಡಿ ಎಂದು ಅವರು ಜನರಿಗೆ ಮನವಿ ಮಾಡಿದರು. ವಿಶ್ವಾದ್ಯಂತ ೭೫,೮೦೦ ಮಂದಿಯನ್ನು ಬಲಿ ಪಡೆದು, ೧೮೩ ರಾಷ್ಟ್ರಗಳ ೧೩. ಲಕ್ಷ ಜನರನ್ನು ಬಾಧಿಸಿರುವ ಕೊರೋನಾವೈರಸ್ ಹರಡುವಿಕೆಯನ್ನು ತಡೆಯಲು ವಿಧಿಸಲಾಗಿರುವ ದಿಗ್ಬಂಧನ ಮಂಗಳವಾರ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹಲವಾರು ರಾಜ್ಯ ಸರ್ಕಾರಗಳು ಮತ್ತು ತಜ್ಞರು ದಿಗ್ಬಂಧನ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರವು ಬಗ್ಗೆ ಪರಿಶೀಲಿಸುತ್ತಿದೆ ಎಂದು ಸುದ್ದಿ ಮೂಲ ತಿಳಿಸಿತು. ಕೊರೋನಾವೈರಸ್ ವಿರೋಧಿ ಹೋರಾಟ ಸುದೀರ್ಘವಾದದ್ದು, ಬಳಲಬೇಡಿ ಅಥವಾ ವಿಶ್ರಮಿಸಬೇಡಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರವಷ್ಟೇ ಪಕ್ಷ ಕಾರ್‍ಯಕರ್ತರಿಗೆ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ನೀಡಿದ್ದ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದರು.  (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020:  ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಭದ್ರತಾ ತಂಡದ ೧೬೦ ಮಂದಿ ಸದಸ್ಯರನ್ನು ಬಾಂದ್ರಾ ಪೂರ್ವದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು ಅವರ ಗಂಟಲ ದ್ರವದ ಮಾದರಿಗಳನ್ನು ಕೊರೋನಾವೈರಸ್ ಸೋಂಕು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ನಾಗರಿಕ ಅಧಿಕಾರಿಗಳು 2020 ಏಪ್ರಿಲ್ 07ರ ಮಂಗಳವಾರ ಇಲ್ಲಿ ತಿಳಿಸಿದರು. ಕಾಲಾನಗರದಲ್ಲಿನ ಠಾಕ್ರೆ ಅವರ ನಿವಾಸವಾದ ಮಾತೋಶ್ರೀಗೆ ಸಮೀಪದ ಚಹಾ ಮಾರುವ ವ್ಯಕ್ತಿಯೊಬ್ಬನಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತವಾದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಠಾಕ್ರೆ ಅವರ ಭದ್ರತಾ ತಂಡದ ಸದಸ್ಯರನ್ನು ಕ್ವಾರಂಟೈನ್‌ಗೆ ಒಳಪಡಿಸುವ ನಿರ್ಧಾರ ಕೈಗೊಳ್ಳಲಾಯಿತು. ಚಹಾ ಮಾರಾಟಗಾರನನ್ನು ಜೋಗೇಶ್ವರಿಯಲ್ಲಿ ಹಿಂದು ಹೃದಯ ಸಾಮ್ರಾಟ ಬಾಳಾಸಾಹೇಬ್ ಠಾಕ್ರೆ ಟ್ರೂಮಾ ಕೇರ್ ಮುನಿಸಿಪಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಮುಖ್ಯಮಂತ್ರಿಯವರ ಭದ್ರತಾ ದಳದ ಸುಮಾರು ೧೬೦ ಮಂದಿ ಸಿಬ್ಬಂದಿ ಚಹಾ ಮಾರಾಟಗಾರನ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಗಳಿವೆ. ಹೀಗಾಗಿ ಅವರೆಲ್ಲರನ್ನೂ ಅಗತ್ಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ ಎಂದು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ನಿನ ಆರೋಗ್ಯ ಇಲಾಖಾ ಉಪ ನಿದೇಶಕರಾದ ದಕ್ಷ ಶಾ ಹೇಳಿದರು. ಆದಾಗ್ಯೂ, ಭಯಗ್ರಸ್ತರಾಗುವ ಅಗತ್ಯವಿಲ್ಲ, ಇದು ರೋಗ ಹರಡದಂತೆ ತಡೆಯಲು ಅಪಾಯ ಸಾಧ್ಯತೆಗಳನ್ನು ಗುರುತಿಸುವ ಶಿಷ್ಟಾಚಾರ ಮಾತ್ರ ಎಂದು ಶಾ ನುಡಿದರು. ಬೆಳವಣಿಗೆಯನ್ನು ಅನುಸರಿಸಿ ರಾಜ್ಯ ಸರ್ಕಾರವು ಎಲ್ಲ ಮಾತೋಶ್ರೀಯಲ್ಲಿ ನಿಯೋಜಿಸಲಾಗಿದ್ದ ಎಲ್ಲ ಸಿಬ್ಬಂದಿಯನ್ನೂ ಬದಲಾಯಿಸಿದೆ. ಎಲ್ಲ ಭದ್ರತಾ ಸಿಬ್ಬಂದಿಯ ದೇಹದ ತಾಪಮಾನವನ್ನು ಪ್ರತಿದಿನವೂ ಪರೀಕ್ಷಿಸಲು ವ್ಯವಸ್ಥೆ ಮಾಡಲಾಯಿತು. .  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ).

2020: ಲಂಡನ್: ಕೋವಿಡ್ -೧೯ ಲಕ್ಷಣಗಳು ಉಲ್ಬಣಿಸಿ ದೇಹಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ  ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ದೇಹಸ್ಥಿತಿ ಸ್ಥಿರವಾಗಿದ್ದು ಅವರು ಉಲ್ಲಸಿತರಾಗಿದ್ದಾರೆ ಎಂದು ಅವರ ವಕ್ತಾರರು 2020 ಏಪ್ರಿಲ್ 07ರ ಮಂಗಳವಾರ ತಿಳಿಸಿದರು. ಏಪ್ರಿಲ್ 5ರ ಭಾನುವಾರ ಆಸ್ಪತ್ರೆಗೆ ದಾಖಲಾಗಿರುವ ಪ್ರಧಾನಿಯವರಿಗೆ ಆಮ್ಲಜನಕ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಈಗ ಇತರ ಸಲಕರಣೆಯ ನೆರವು ಇಲ್ಲದೆಯೇ ಉಸಿರಾಡುತ್ತಿದ್ದಾರೆ. ಅವರಿಗೆ ಯಾಂತ್ರಿಕ ವೆಂಟಿಲೇಟರ್‌ನ ಅಗತ್ಯ ಬಿದ್ದಿಲ್ಲ ಎಂದು ವಕ್ತಾರರು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ).2020: ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೫೦೮
ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ಮತ್ತು ೧೩ ಸಾವುಗಳು ವರದಿಯಾಗಿವೆ. ಇದರೊಂದಿಗೆ ಬಾರತದಲ್ಲಿ ಕೊರೋನಾವೈರಸ್ ಸೋಂಕು ದೃಢಪಟ್ಟವರ ಸಂಖ್ಯೆ  2020 ಏಪ್ರಿಲ್ 07ರ ಮಂಗಳವಾರ ೪,೭೮೯ಕ್ಕೆ ಏರಿದ್ದು, ಸಾವಿನ ಸಂಖ್ಯೆ ೧೨೪ಕ್ಕೆ ಏರಿತು. ೪೭೮೯ ಕೊರೋನಾ ಸೊಂಕು ಪ್ರಕರಣಗಳಲ್ಲಿ ,೩೧೨ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು ೩೫೩ ಪ್ರಕರಣಗಳು ವಾಸಿಯಾಗಿದ್ದು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿತು. ಇದೇ ವೇಳೆಗೆ ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಮಂಗಳವಾರ ೧೩,೬೬,೬೮೫ಕ್ಕೆ ಏರಿದ್ದು, ಒಟ್ಟು ಸಾವಿನ ಸಂಖ್ಯೆ ೭೬೫೫೧ಕ್ಕೆ ಏರಿದೆ. ಚೇತರಿಸಿಕೊಂಡರವರ ಸಂಖ್ಯೆ ,೯೪,೦೮೮ಕ್ಕೆ ಏರಿತು. .  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)



No comments:

Post a Comment