Saturday, April 18, 2020

ಇಂದಿನ ಇತಿಹಾಸ History Today ಏಪ್ರಿಲ್ 18

2020: ವಾಷಿಂಗ್ಟನ್: ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ  ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯಿಂದ ಆಕಸ್ಮಿಕವಾಗಿ ಕೊರೋನವೈರಸ್ (ಎನ್ಸಿಒವಿ) ಸೋರಿಕೆಯಾಗಿರಬಹುದು ಎಂಬ ಪಾಕ್ಸ್ ನ್ಯೂಸ್ ವರದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡರು. ಕೊರೋನಾವೈರಸ್ ಸಹಜವಾಗಿ ಕೆಲವು ಬಾವಲಿಗಳಲ್ಲಿ ಕಾಣಿಸುವ ವೈರಾಣು ಆಗಿದ್ದು ಜೈವಿಕ ಶಸ್ತ್ರಾಸ್ತ್ರವಲ್ಲ,  ಆದರೆ ವುಹಾನ್ ಪ್ರಯೋಗಾಲಯದಲ್ಲಿ (ಲ್ಯಾಬೋರೇಟರಿ) ಅದರ ಬಗ್ಗೆ ಅಧ್ಯಯನ ನಡೆಯುತ್ತಿತು ಎಂದು ಹೆಸರು ಉಲ್ಲೇಖಿಸದ ಮೂಲಗಳನ್ನು ಆಧರಿಸಿದ ತನ್ನ ವಿಶೇಷ ವರದಿಯಲ್ಲಿ ಫಾಕ್ಸ್ ನ್ಯೂಸ್ ತಿಳಿಸಿತ್ತು. ಪ್ರಾಥಮಿಕ ಹಂತದಲ್ಲಿ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡುತ್ತಿದ್ದ ಪೇಷಂಟ್ ಝೀರೋ ಗೆ ವರ್ಗಾವಣೆಗೊಳ್ಳುವ ಮೂಲಕ ವೈರಸ್ ಬಾವಲಿಯಿಂದ ಮನುಷ್ಯನಿಗೆ ಸೋಂಕಿದೆ. ಪ್ರಯೋಗಾಲಯದ ಸಿಬ್ಬಂದಿಗೆ ಆಕಸ್ಮಿಕವಾಗಿ ಸೋಂಕಿದ ವೈರಸ್ ಬಳಿಕ ವುಹಾನ್ ನಗರದಲ್ಲಿ ಪ್ರಯೋಗಾಲದಯ ಹೊರಗಿನ ಸಾಮಾನ್ಯರಿಗೂ ವರ್ಗಾವಣೆಯಾಗಿ ರೋಗ ಹರಡಿತು ಎಂದು ವರದಿ ತಿಳಿಸಿತ್ತು. ವುಹಾನ್ ಹಸಿ ಮಾಂಸದ ಮಾರುಕಟ್ಟೆಯನ್ನು ವೈರಾಣುವಿನ ಜನ್ಮಸ್ಥಾನ ಎಂಬುದಾಗಿ ಮೊದಲಿಗೆ ಗುರುತಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಬಾವಲಿಗಳ ಮಾರಾಟ ನಡೆಯುತ್ತಿರಲಿಲ್ಲ ಎಂದು ಪಾಕ್ಸ್ ನ್ಯೂಸ್ ವರದಿ ಹೇಳಿತ್ತು. ಚೀನಾವು ಪ್ರಯೋಗಾಲಯದ ಕಡೆಗಿನ ಗಮನವನ್ನು ಬೇರೆ ಕಡೆಗೆ ಸೆಳೆಯುವ ಸಲುವಾಗಿ ವುಹಾನ್ ಹಸಿಮಾಂಸದ ಮಾರುಕಟ್ಟೆಯನ್ನು ದೂಷಿಸಿತು ಎಂದೂ ವರದಿ ಹೇಳಿತ್ತು. ವೈರಾಣು ಸಮರವು ಅಮೆರಿಕದ ಸಾಮರ್ಥ್ಯಕ್ಕೆ ಸರಿಸಮ ಅಥವಾ ಇನ್ನೂ ಹೆಚ್ಚಿನದು ಆಗಬಲ್ಲುದೇ ಎಂಬುದನ್ನು ಗುರುತಿಸುವ ತನ್ನ ಪ್ರಯತ್ನವಾಗಿ ಚೀನಾದ ಕಮ್ಯೂನಿಸ್ಟ್ ಪಕ್ಷವು (ಸಿಸಿಪಿ) ಯತ್ನ ನಡೆಸಿತ್ತು ಎಂದು ವಿವಿಧ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿತ್ತು. ಶ್ವೇತಭವನದಲ್ಲಿ ನಡೆದ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಪಾಕ್ಸ್ ನ್ಯೂಸ್ ವರದಿಗಾರನ ಪ್ರತಿಪಾದನೆಗಳ ಬಗ್ಗೆ ಪ್ರಶ್ನಿಸಿದಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೋನಾವೈರಸ್ ಸಹಜವಾಗಿ ಹುಟ್ಟುವಂತಹ ವೈರಸ್ ಆಗಿದ್ದರೂ, ಅದು ವುಹಾನ್ ನಗರದ ವೈರಾಲಜಿ ಲ್ಯಾಬೋರೇಟರಿಯಿಂದ ಹೊರಕ್ಕೆ ಬಂದಿದೆ, ಇದಕ್ಕೆ ಸುರಕ್ಷತಾ ಶಿಷ್ಟಾಚಾರಗಳ ಕೊರತೆಯೇ ಕಾರಣ, ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಗೆ ಮೊದಲು ಸೋಂಕು ಹರಡಿತು, ಬಳಿಕ ಆಕೆಯ ಬಾಯ್ ಫ್ರೆಂಡಿಗೆ ವರ್ಗಾವಣೆಗೊಂಡಿತು, ಬಳಿಕ ವುಹಾನ್ ನಗರದ ಹಸಿ ಮಾಂಸದ ಮಾರುಕಟ್ಟೆಗೆ ಅವರು ಹೋದಾಗ ಮಾರುಕಟ್ಟೆಯಲ್ಲಿ ಹರಡಲು ಆರಂಭವಾಯಿತು ಎಂಬುದಾಗಿ ಹಲವು ಮೂಲಗಳು ಪತ್ರಿಕಾ ಸಂಸ್ಥೆಗೆ ತಿಳಿಸಿವೆ ಎಂದು ಟ್ರಂಪ್ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ಆಕ್ಸ್ ಫರ್ಡ್ (ಇಂಗ್ಲೆಂಡ್): ಮಹತ್ವದ ಬೆಳವಣಿಗೆಯೊಂದರಲ್ಲಿ  ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು ತಾನು ಅಭಿವೃದ್ಧಿ ಪಡಿಸಿರುವ ಕೋವಿಡ್ -೧೯ರ ಲಸಿಕೆಯನ್ನು ಮೇ ವೇಳೆಗೆ ೫೦೦ ಮಂದಿಗೆ ಪ್ರಾಯೋಗಿಕವಾಗಿ ನೀಡಲು ಮುಂದೆ ಬಂದಿದೆ ಎಂದು ವಿಶ್ವವಿದ್ಯಾಲಯದ ಲಸಿಕೆ ವಿಜ್ಞಾನದ ಪ್ರಾಧ್ಯಾಪಕ ಸಾರಾ ಗಿಲ್ಬರ್ಟ್   2020 ಏಪ್ರಿಲ್ 18ರ ಶನಿವಾರ  ತಿಳಿಸಿದರು. ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ೧೮ ರಿಂದ ೫೫ ವರ್ಷ ವಯಸ್ಸಿನ ವ್ಯಕ್ತಿಗಳನ್ನು ಆರಂಭಿಕ ಮತ್ತು ಮಧ್ಯ ಹಂತದ ನಿಯಂತ್ರಿತ ಪ್ರಯೋಗಕ್ಕೆ ಒಳಪಡಿಸಲಾಗುವುದು ಎಂದು ತಿಳಿಸಿತು.. "೨೦೨೦ ಶರತ್ಕಾಲದ ಹೊತ್ತಿಗೆ, ನಾವು ನೇ ಹಂತದಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವ ಮತ್ತು ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯ ಗಳಿಕೆಯ ವಿಶ್ವಾಸ ಹೊಂದಿದ್ದೇವೆ. ಆದರೆ   ಮಹತ್ವಾಕಾಂಕ್ಷೆಯು ಸಾಂದರ್ಭಿಕ ಬದಲಾವಣೆಗೆ ಒಳಪಟ್ಟಿದೆ ಎಂದು ಗಿಲ್ಬರ್ಟ್ ಅವರನ್ನು ಉಲ್ಲೇಖಿಸಿದ ವರದಿ ಹೇಳಿದೆ. ಗಿಲ್ಬರ್ಟ್ ಅವರು ೧೯೯೪ ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಲಸಿಕೆಗಳ ಬಗ್ಗೆ ತನ್ನ ಅಧ್ಯಯನವನ್ನು ಪ್ರಾರಂಭಿಸಿದ್ದರು. ಕೊರೋನಾವೈರಸ್ಸಿಗೆ ಲಸಿಕೆ ಸಂಶೋಧನೆಯ ತಂಡದ ಪ್ರಯತ್ನಗಳನ್ನು ಹೆಚ್ಚಿಸಲು ಮಾರ್ಚ್ ತಿಂಗಳಲ್ಲಿ ಇಂಗ್ಲೆಂಡಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ರಿಸರ್ಚ್ ಮತ್ತು ಯುಕೆ ರಿಸರ್ಚ್ ಅಂಡ್ ಇನ್ನೋವೇಶನ್ನಿಂದ . ಮಿಲಿಯನ್ (ದಶಲಕ್ಷ) ಪೌಂಡ್ ಅನುದಾನವನ್ನು ಅವರಿಗೆ ನೀಡಲಾಗಿತ್ತು.  ಗಮನಾರ್ಹವಾಗಿ, ಅವರ ತಂಡದ ಪ್ರಾಯೋಗಿಕ ರೋಗನಿರೋಧಕ ಲಸಿಕೆಯು ಪ್ರಾಯೋಗಿಕ ಪರೀಕ್ಷೆಗಳ ಹಂತಕ್ಕೆ ಬಂದ ಮೊದಲ ಲಸಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆ ಅಭಿವೃದ್ಧಿಗಾಗಿ ೭೦ ಅಭ್ಯರ್ಥಿಗಳನ್ನು ಗುರುತಿಸಿದೆ, ಇತರ ಮೂವರು ಅಭಿವೃದ್ಧಿ ಪಡಿಸಿದ ಲಸಿಕೆಯನ್ನೂ ಮಾನವರ ಮೇಲೆ ಪರೀಕ್ಷಿಸಲಾಗುತ್ತಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)


2020: ತಿರುವನಂತಪುರಂ: ಕೊರೋನಾವೈರಸ್ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಹಂತ ಹಂತವಾಗಿ ದಿಗ್ಬಂಧನ (ಲಾಕ್ಡೌನ್) ನಿಯಮಗಳನ್ನು ಸಡಿಲಿಸಲು ಅನುಮತಿ ನೀಡಿರುವ ಪಿಣರಾಯಿ ವಿಜಯನ್ ಸರ್ಕಾರ  2020 ಏಪ್ರಿಲ್ 18ರ ಶನಿವಾರ  ವಿಸ್ತೃತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತು. ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾಜ್ಯವನ್ನು ಕೆಂಪು, ಕಿತ್ತಳೆ , ಕಿತ್ತಳೆ ಬಿ ಮತ್ತು ಹಸಿರು ವಲಯಗಳಾಗಿ ವಿಂಗಡಿಸಲಾಗಿದೆ. ಕಾಸರಗೋಡು, ಕಣ್ಣೂರು, ಕೋಳಿಕ್ಕೋಡ್, ಮಲಪ್ಪುರಂ ಜಿಲ್ಲೆಗಳು ಕೆಂಪು ವಲಯ (ರೆಡ್ ಜೋನ್) ವ್ಯಾಪ್ತಿಯಲ್ಲಿದ್ದು ಇಲ್ಲಿ ಲಾಕ್ಡೌನ್ ನಿಯಮಗಳಲ್ಲಿ ಯಾವುದೇ ಸಡಿಲಿಕೆಯೂ ಇಲ್ಲ. ಹಾಟ್ ಸ್ಪಾಟ್ಗಳು ಎಂಬುದಾಗಿ ಪರಿಗಣಿಸಲಾಗಿರುವ ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳ ಸರಬರಾಜಿಗಾಗಿ ಒಳ ಬರುವ ಮತ್ತು ಹೊರಹೋಗುವ ಎರಡು ಮಾರ್ಗಗಳು ಮಾತ್ರ ತೆರೆದಿರುತ್ತವೆ. ಉಳಿದೆಲ್ಲ ರಸ್ತೆಗಳೂ ಕಟ್ಟು ನಿಟ್ಟಿನ ಬೀಗಮುದ್ರೆಗೆ ಒಳಪಟ್ಟಿವೆ ಎಂದು ಮಾರ್ಗದರ್ಶಿ ಸೂತ್ರಗಳು ಹೇಳಿದವು. ಇತರ ವಲಯಗಳಲ್ಲಿ ಖಾಸಗಿ ವಾಹನಗಳಿಗೆ ಜಿಲ್ಲೆಗಳ ಒಳಗೆ ಸರಿ ಮತ್ತು ಬೆಸ ಪದ್ಧತಿಯಂತೆ ಸಂಚರಿಸಲು ಅವಕಾಶವಿದೆ. ರಾತ್ರಿ ಗಂಟೆಯವರೆಗೆ ತಪ್ಪಿದರೆ ಗಂಟೆಯವರೆಗೆ ತೆರೆದಿರಲು ರೆಸ್ಟೋರೆಂಟ್ಗಳಿಗೂ ಅವಕಾಶ ನೀಡಲಾಯಿತು. ಜಿಲ್ಲೆಗಳ ಒಳಗೆ ಬಸ್ಸುಗಳಿಗೆ ಅಲ್ಪದೂರದ ಪಯಣಕ್ಕೆ ಅವಕಾಶ ನೀಡಲಾಗಿದೆ. ಸೇವೆಗಳು ಸಾಮಾಜಿಕ ಅಂತರ ಪಾಲನೆಯ ನಿಯಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು ಎಂದು ಅಧಿಕಾರಿಗಳು ಹೇಳಿದರು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಯಾವುದೇ ರಾಷ್ಟ್ರದ ಯಾವುದೇ ಕಂಪೆನಿ ಅಥವಾ ವ್ಯಕ್ತಿ ಯಾವುದೇ ರಂಗದಲ್ಲಿ ಹಣ ಹೂಡಿಕೆ ಮಾಡಬೇಕಿದ್ದರೆ ಸರ್ಕಾರದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ವಾಣಿಜ್ಯ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಅಭಿವೃದ್ಧಿ ಇಲಾಖೆಯು (ಡಿಪಿಐಐಟಿ) ದೇಶೀ ಸಂಸ್ಥೆಗಳ ರಕ್ಷಣೆಗಾಗಿ ಆದೇಶ ಹೊರಡಿಸಿತು. ವಿದೇಶೀ ನೇರ ಹೂಡಿಕೆ (ಎಫ್ಡಿಐ) ನೀತಿಯನ್ನು ಸರ್ಕಾರವು ಪುನರ್ ಪರಿಶೀಲನೆ ಮಾಡಿದ್ದು, ಹಾಲಿ ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯ ಕಂಪೆನಿಗಳನ್ನು ಅವಕಾಶವಾದಿಗಳು ವಶಕ್ಕೆ ಪಡೆದುಕೊಳ್ಳುವುದನ್ನು ದಮನಿಸಲು ಕ್ರಮ ಕೈಗೊಂಡಿದೆ ಎಂದು ಇಲಾಖೆ ಹೇಳಿತು. ಕೇಂದ್ರ ಸರ್ಕಾರದಿಂದ ಪ್ರಕಟಣೆ ಹೊರಬಿದ್ದ ತತ್ ಕ್ಷಣವೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಿಯಮಗಳನ್ನು ಬಿಗಿಗೊಳಿಸಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದರು. ಹಾಲಿ ಆರ್ಥಿಕ ಹಿನ್ನಡೆಯ ಪರಿಸ್ಥಿತಿಯ ದುರ್ಲಾಭ ಪಡೆದು ಭಾರತೀಯ ಕಾರ್ಪೋರೇಟ್ ಕಂಪೆನಿಗಳನ್ನು ವಿದೇಶೀಯರು ಗುಳುಂಕರಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಹುಲ್ ಗಾಂಧಿಯವರು ಕಳೆದ ವಾರ ಸರ್ಕಾರವನ್ನು ಆಗ್ರಹಿಸಿದ್ದರು. ಕೇಂದ್ರದ ನಿರ್ಧಾರವು ವಿದೇಶೀ ಹೂಡಿಕೆಗಳ ಮೇಲೆ, ನಿರ್ದಿಷ್ಟವಾಗಿ ೨೦೦೦ ಏಪ್ರಿಲ್ನಿಂದ ೨೦೧೯ ಡಿಸೆಂಬರ್ವರೆಗಿನ ಅವಧಿಯಲ್ಲಿ ಭಾರತದಲ್ಲಿ .೩೪ ಬಿಲಿಯನ್ (೨೩೪ ಕೋಟಿ) ಡಾಲರ್ ಹೂಡಿಕೆ ಮಾಡಿರುವ ಚೀನಾದ ನೇರ ಹೂಡಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಚೀನೀ ಕಂಪೆನಿಗಳು ಭಾರತದ ನಷ್ಟದಲ್ಲಿರುವ ಕಂಪೆನಿಗಳನ್ನು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆಗಳು ಇರುವ ಬಗ್ಗೆ ಭಾರತೀಯ ಕಾರ್ಪೋರೇಟ್ಗಳು ಆತಂಕ ವ್ಯಕ್ತ ಪಡಿಸಿದ್ದವು ಎಂದು ಅಧಿಕಾರಿಯೊಬ್ಬರು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ವಿಶ್ವವನ್ನು ನಡುಗಿಸುತ್ತಿರುವ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಭಾರತದಲ್ಲಿ ಶನಿವಾರ ೪೮೮ಕ್ಕೆ ಏರಿದ್ದು, ಸೋಂಕಿತರ ಸಂಖ್ಯೆ ೧೪,೭೯೨ಕ್ಕೆ ಏರಿತು. ಮಧ್ಯೆ ರಾಷ್ಟ್ರಪತಿ ಭವನದ ಸ್ವಚ್ಛತಾ ಕಾರ್ಮಿಕನೊಬ್ಬನ ಬಂಧು ಮೃತನಾದುದನ್ನು ಅನುಸರಿಸಿ ಕಾರ್ಮಿಕ ಹಾಗೂ ಆತನ ಕುಟುಂಬ ಸದಸ್ಯರನ್ನು 2020 ಏಪ್ರಿಲ್  18ರ ಶನಿವಾರ ಕ್ವಾರಂಟೈನ್ ಗೆ ಒಳಪಡಿಸಲಾಯಿತು. ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನಗಳಿಗೆ ಬುಕ್ಕಿಂಗ್ ಆರಂಭಿಸುವುದಾಗಿ ಹೇಳಿತು. ಆದರೆ ಕೇಂದ್ರ ಸರ್ಕಾರ   ಈ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿತು.   ರಾಷ್ಟ್ರಪತಿಗಳ ಎಸ್ಟೇಟಿನಲ್ಲಿನ ಸ್ವಚ್ಛತಾ ಕಾರ್ಮಿಕನ ಬಂಧುವೊಬ್ಬ ನಿಧನರಾದ ಬಳಿಕ ಎಸ್ಟೇಟಿನಲ್ಲಿರುವ ಆತನ ಮನೆಯಲ್ಲಿಯೇ ಸ್ವಚ್ಛತಾ ಕಾರ್ಮಿಕ ಮತ್ತು ಆತನ ಕುಟುಂಬ ಸದಸ್ಯರನ್ನು ಏಕಾಂಗಿವಾಸಕ್ಕೆ ಒಳಪಡಿಸಲಾಯಿತು. ಆವರಣದಲ್ಲಿ ವಾಸವಾಗಿರುವ ೩೦ ಕುಟುಂಬಗಳು ಮತ್ತು ಅಧಿಕಾರಿಯೊಬ್ಬರಿಗೆ ಕೂಡಾ ಸ್ವಯಂ ಪ್ರತ್ಯೇಕವಾಸಕ್ಕೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಏರ್ ಇಂಡಿಯಾ ಬುಕಿಂಗ್: ಮಧ್ಯೆ ದೇಶದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವಯ ಮೇ ೪ರಿಂದ ಆರಂಭಿಸಲಾಗುವ ದೇಶದ ಒಳಗಿನ ವಿಮಾನಯಾನಗಳಿಗಾಗಿ ಬುಕಿಂಗ್ ಆರಂಭಿಸುವುದಾಗಿ ಶನಿವಾರ ಪ್ರಕಟಿಸಿತು. ಜೂನ್ ೧ರಿಂದ ಆರಂಭವಾಗುವ ಅಂತಾರಾಷ್ಟ್ರೀಯ ವಿಮಾನಯಾನಗಳಿಗೂ ಬುಕಿಂಗ್ ಆರಂಭಿಸಲಾಗುವುದು ಎಂದೂ ಅದು ತಿಳಿಸಿತು. ಸಂಸ್ಥೆಯ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನಗಳು ರಾಷ್ಟ್ರವ್ಯಾಪಿ ಲಾಕ್ ಡೌನ್ ಪರಿಣಾಮವಾಗಿ ಸ್ಥಗಿತಗೊಂಡಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸೊಪೋರ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಪರಿಣಾಮವಾಗಿ ತಮ್ಮ ವಾಹನದಲ್ಲಿದ್ದ ಮೂವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರು 2020 ಏಪ್ರಿಲ್  18ರ ಶನಿವಾರ ಹುತಾತ್ಮರಾದರು. ಕಳೆದ ರಾತ್ರಿಯಿಂದೀಚೆಗೆ ಸಿಆರ್ಪಿಎಫ್ ಮೇಲೆ  ನಡೆದ ಎರಡನೇ ದಾಳಿ ಇದು. ಸಿಆರ್ಪಿಎಫ್ ೧೭೯ನೇ ಬೆಟಾಲಿಯನ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ನಿರ್ವಹಿಸುತ್ತಿದ್ದ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು. ಒಂದು ವಾರದ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಅರೆ ಸೇನಾ ಪಡೆಗಳ ಮೇಲೆ ನಡೆದಿರುವ ಮೂರನೇ ದಾಳಿ ಇದು. ಪುಲ್ವಾಮದಲ್ಲಿ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರು ಶುಕ್ರವಾರ ನಡೆಸಿದ್ದ ಇದೇ ಮಾದರಿಯ ದಾಳಿಯಲ್ಲಿ ಸಿಆರ್ಪಿಎಫ್ ಯೋಧನೊಬ್ಬ ಗಾಯಗೊಂಡಿದ್ದ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

No comments:

Post a Comment