ನಾನು ಮೆಚ್ಚಿದ ವಾಟ್ಸಪ್

Wednesday, April 1, 2020

ಇಂದಿನ ಇತಿಹಾಸ History Today ಏಪ್ರಿಲ್ 01

2020: ನವದೆಹಲಿ: ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಅವರು ಬಂಗಲೆವಾಲಿ ಮಸೀದಿಯನ್ನು ಖಾಲಿ ಮಾಡುವಂತೆ ದೆಹಲಿ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಮಾಡಿದ ಮನವಿಗೆ ಮಣಿಯಲು ನಿರಾಕರಿಸಿದಾಗ, ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್) ಅಜಿತ್ ದೋವಲ್ ಅವರಿಗೆ  2020 ಮಾರ್ಚ್  31ರ ಮಂಗಳವಾರ ಕೆಲಸವನ್ನು ಪೂರ್ಣಗೊಳಿಸುವ ಹೊಣೆ ಒಪ್ಪಿಸಿದ್ದ ವಿಚಾರ   2020 ಏಪ್ರಿಲ್ 01ರ ಬುಧವಾರ ಬೆಳಕಿಗೆ ಬಂದಿತು. ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳ ಪ್ರಕಾರ, ಮಾರ್ಚ್ ೨೮-೨೯ರ ನಡುವಣ ರಾತ್ರಿಯಲ್ಲಿ ತಮ್ಮ ನಿವಾಸದಿಂದ ಹೊರಟ ದೋವಲ್ ಅವರು ನಸುಕಿನ ಗಂಟೆಗೆ ಮರ್ಕಜ್ ತಲುಪಿದ್ದರು ಮತ್ತು ಕೋವಿಡ್ -೧೯ ಸೋಂಕಿಗೆ ಸಂಬಂಧಿಸಿದಂತೆ ಮಸೀದಿಯ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸು ಅಗತ್ಯವನ್ನು ಮೌಲಾನಾ ಸಾದ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.  ತೆಲಂಗಾಣದ ಕರೀಂನಗರದಲ್ಲಿ ಕೊರನಾವೈರಸ್ ಪಾಟಿಸಿವ್ ವರದಿ ಬಂದಿದ್ದ ಒಂಬತ್ತು ಇಂಡೋನೇಷ್ಯಾ ಪ್ರಜೆಗಳು ಮರ್ಕಜ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದುದನ್ನು ಮಾರ್ಚ್ ೧೮ ರಂದು  ಭದ್ರತಾ ಸಂಸ್ಥೆಗಳು ಪತ್ತೆ ಹಚ್ಚಿದಂದಿನಿಂದ ಅಮಿತ್ ಶಾ ಮತ್ತುಜಿತ್ ದೋವಲ್ ಅವರು ಮಸೀದಿ ವಿದ್ಯಮಾನಗಳ ಮೇಲೆ ನಿಗಾ ಇಟ್ಟಿದ್ದರು. ಭದ್ರತಾ ಸಂಸ್ಥೆಗಳು ಮರುದಿನವೇ ಎಲ್ಲಾ ರಾಜ್ಯ ಪೊಲೀಸ್ ಮತ್ತು ಅಂಗಸಂಸ್ಥೆ ಕಚೇರಿಗಳಿಗೆ ಮರ್ಕಜ್ ಮೂಲಕ ಸೋಂಕಿನ ಸಾಧ್ಯತೆ ಬಗ್ಗೆ ಎಚ್ಚರಿಕೆಯನ್ನು ಕಳುಹಿಸಿದ್ದವು. ಮಾರ್ಚ್ ೨೭, ೨೮ ಮತ್ತು ೨೯ ರಂದು ೧೬೭ ಮಂದಿ ತಬ್ಲಿಘಿ ಕೆಲಸಗಾರರನ್ನು ಆಸ್ಪತ್ರೆಗೆ ದಾಖಲಿಸಲು ಮಸೀದಿ ಅವಕಾಶ ಮಾಡಿಕೊಟ್ಟರೂ, ದೋವಲ್ ಅವರ ಮಧ್ಯಪ್ರವೇಶದ ನಂತರವೇ ಜಮಾತ್ ನಾಯಕತ್ವವು ಮಸೀದಿಯನ್ನು ಸ್ವಚ್ಛಗೊಳಿಸಲು ಮುಂದಾಯಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
2020: ನವದೆಹಲಿ: ಬಹುತೇಕ ಕೊರೋನಾವೈರಸ್ ಸೋಂಕು ತಗುಲಿದ ತಬ್ಲಿಘಿ ಜಮಾತ್ ಸಮಾವೇಶ ಪ್ರತಿನಿಧಿಗಳ ಜೊತೆ ಐದು ರೈಲುಗಳಲ್ಲಿ ಪಯಣಿಸಿದ್ದ ಸಹಸ್ರಾರು ಮಂದಿ ಪ್ರಯಾಣಿಕರ ಬಗೆಗಿನ ವಿವರಗಳನ್ನು ಒದಗಿಸಲು ಇದೀಗ ರೈಲ್ವೇ ಇಲಾಖೆ ಹರಸಾಹಸ ನಡೆಸುತ್ತಿದೆ. ಎಲ್ಲ ರೈಲುಗಳು ಮಾರ್ಚ್ ೧೩-೧೯ರ ನಡುವಣ ಅವಧಿಯಲ್ಲಿ ದೆಹಲಿಯಿಂದ ಹೊರಟಿದ್ದವು. ಪೈಕಿ ದುರೊಂತೋ ಎಕ್ಸ್ ಪ್ರೆಸ್ ಆಂಧ್ರಪ್ರದೇಶದ ಗುಂಟೂರಿಗೆ, ಗ್ರ್ಯಾಂಡ್ ಟ್ರಂಕ್ ಎಕ್ಸ್ ಪ್ರೆಸ್ ಚೆನ್ನೈಗೆ, ತಮಿಳುನಾಡು ಎಕ್ಸ್ ಪ್ರೆಸ್ ಚೆನ್ನೈಗೆ ಸಂಚರಿಸಿದ್ದವು. ಇದಲ್ಲದೆ ನವದೆಹಲಿ-ರಾಂಚಿ ರಾಜಧಾನಿ ಎಕ್ಸ್ ಪ್ರೆಸ್ ರಾಂಚಿಗೆ ಮತ್ತು ಎಪಿ ಸಂಪರ್ಕ ಕ್ರಾಂತ್ರಿ ಎಕ್ಸ್ಪ್ರೆಸ್ ತೆಲಂಗಾಣ/ಆಂಧ್ರಪ್ರದೇಶಕ್ಕೆ ಸಂಚರಿಸಿದ್ದವು. ತಬ್ಲಿಘಿ ಸಮಾವೇಶದ ಪ್ರತಿನಿಧಿಗಳ ಜೊತೆ ಸಂಪರ್ಕಕ್ಕೆ ಬಂದಿರಬಹುದಾದ ಪ್ರಯಾಣಿಕರ ನೈಜ ಸಂಖ್ಯೆಯ ಬಗ್ಗೆ ರೈಲ್ವೇ ಬಳಿ ಯಾವುದೇ ಖಚಿತ ಮಾಹಿತಿ ಇಲ್ಲವಾದರೂ ಪ್ರತಿಯೊಂದು ರೈಲು ಕೂಡಾ ೧೦೦೦-೧೨೦೦ ಪ್ರಯಾಣಿಕರನ್ನು ಮತ್ತು ಇತರ ಸಿಬ್ಬಂದಿಯನ್ನು ಒಯ್ದಿದ್ದು ಅವರೆಲ್ಲರೂ ಸೋಂಕು ತಗುಲುವ/ ತಗುಲಿರುವ ಅಪಾಯವಿದೆ ಎಂದು ರೈಲ್ವೇ ಮೂಲಗಳು  2020 ಏಪ್ರಿಲ್ 01ರ ಬುಧವಾರ ಹೇಳಿದವು. ರೈಲ್ವೇಯು ಜಿಲ್ಲಾಧಿಕಾರಿಗಳಿಗೆ ಪ್ರಯಾಣಿಕರ ಪಟ್ಟಿಗಳನ್ನು ಒದಗಿಸಲಿದೆ. ಅವುಗಳನ್ನು ಸಮಾವೇಶದಲ್ಲಿ ಪಾಲ್ಗೊಂಡಿದ್ದವರ ಪಟ್ಟಿಗಳ ಜೊತೆ ತಾಳೆ ನೋಡಲಾಗುವುದು. ಇದರಿಂದ ಅವರ ಸಂಪರ್ಕದ ಮಾಹಿತಿಗಳನ್ನು ಪತ್ತೆ ಹಚ್ಚಬಹುದು ಎಂದು ರಾಜ್ಯ ಅಧಿಕಾರಿಗಳು ಭಾವಿಸಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)
2020: ನವದೆಹಲಿ: ದೆಹಲಿಯ ಸರ್ಕಾರಿ ಕ್ಯಾನ್ಸರ್ ಸಂಸ್ಥೆಯ ೩೫ರ ಹರೆಯದ ವೈದ್ಯರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತವಾದ ಪರಿಣಾಮ, ಅಧಿಕಾರಿಗಳು ಶುಚೀಕರಣದ ಸಲುವಾಗಿ ಆಸ್ಪತ್ರೆಯ ಹೊರರೋಗಿ ಕ್ಲಿನಿಕ್ಗಳನ್ನು  2020 ಏಪ್ರಿಲ್ 01ರ ಬುಧವಾರ ಮುಚ್ಚಿದರು.ಸಂಸ್ಥೆಯ ಗ್ರಂಥಿ ವಿಜ್ಞಾನ ವಿಭಾಗದ ವೈದ್ಯರನ್ನು ರೋಹಿಣಿಯಲ್ಲಿನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಮತ್ತು ಅವರ ಪತ್ನಿ ಮತ್ತು ಮಗುವನ್ನು ದೆಹಲಿ ಗೇಟ್ ಸಮೀಪದ ಲೋಕನಾಯಕ ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರ ಸೋಂಕಿನ ಮೂಲ ಅಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ಹೇಳಿದರು. ಸದರಿ ವೈದ್ಯ ವಿದೇಶೀ ಪಯಣ ಮಾಡಿದ ಅಥವಾ ಕೋವಿಡ್-೧೯ ರೋಗಿಗಳಿಗೆ ಚಿಕಿತ್ಸೆ ನೀಡಿದ ಇತಿಹಾಸವಿಲ್ಲ. ಆದ್ದರಿಂದ ಸೋಂಕಿನ ಮೂಲ ಈಗಲೂ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖಾ ಅಧಿಕಾರಿಯೊಬ್ಬರು ನುಡಿದರು. ಸದರಿ ವೈದ್ಯರ ಸಹೋದರ ಮತ್ತು ಅತ್ತಿಗೆ ಫೆಬ್ರುವರಿಯಲ್ಲಿ ಇಂಗ್ಲೆಂಡಿಗೆ ಪಯಣಿಸಿದ್ದರು, ಆದರೆ ಅವರಿಗೆ ಕೊರೋನಾಸೋಂಕು ತಗುಲಿರಲಿಲ್ಲ ಎಂದು ಅಧಿಕಾರಿ ಹೇಳಿದರು.ದಿಗ್ಬಂಧನದ (ಲಾಕ್ ಡೌನ್) ಕಾರಣ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ (ಒಪಿಡಿ) ೧೦೦-೧೫೦ ಮಂದಿ ರೋಗಿಗಳು ಬರುತ್ತಿದ್ದಾರೆ. ಇದಕ್ಕೆ ಮುನ್ನ ಪ್ರತಿದಿನ ೧೦೦೦-೧೫೦೦ ರೋಗಿಗಳು ಬರುತ್ತಿದ್ದರು. ‘ನಾವು ಅಪಾಯವನ್ನು ಆಹ್ವಾನಿಸಲಾಗದು. ಅತ್ಯಂತ ತುರ್ತಿನ ಕ್ಯಾನ್ಸರ್ ರೋಗಿಗಳು ಮಾತ್ರ ಈಗ ಆಸ್ಪತ್ರೆಗೆ ಬರುತಿದ್ದಾರೆ. ಆವರಣದ ಶುಚೀಕರಣದ ಸಲುವಾಗಿ ನಾವು ಒಪಿಡಿಯನ್ನು ಮುಚ್ಚಿದ್ದೇವೆಎಂದು ದೆಹಲಿ ಸರ್ಕಾರಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ಡಾ. ಬಿಎಲ್ ಶೆರ್ವಾಲ್ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
2020: ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ಸೋಂಕಿನ ಕೇಂದ್ರವಾಗಿ ಪರಿಣಮಿಸಿರುವ ನಿಜಾಮುದ್ದೀನ್ ಮಸೀದಿಯ ತಬ್ಲಿಘಿ ಜಮಾತ್   ಎಲ್ಲ ವಿದೇಶೀಯರನ್ನೂ ಸಮಗ್ರ ತಪಾಸಣೆಗೆ ಒಳ ಪಡಿಸುವಂತೆ ಮತ್ತು ಲಭ್ಯವಿರುವ ಮೊದಲ ವಿಮಾನದಲ್ಲೇ ಸಾಗಹಾಕುವಂತೆ ಕೇಂದ್ರ ಸರ್ಕಾರವು 2020 ಏಪ್ರಿಲ್ 01ರ ಬುಧವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತು. ಇದೇ ವೇಳೆಗೆ ೨೦೦೦೦ ರೈಲ್ವೆ  ಬೋಗಿಗಳನ್ನು ನವೀಕರಿಸುವ ಮೂಲಕ . ಲಕ್ಷ ಐಸೋಲೇಷನ್ ಮತ್ತು ಕ್ವಾರಂಟೈನ್ ಹಾಸಿಗೆಗಳನ್ನು ಒದಗಿಸಲು ರೈಲ್ವೆ ಇಲಾಖೆ ಹಾಗೂ ವೈದ್ಯಕೀಯ ಸರಕು ಸಾಗಣೆಗಾಗಿ ವಿಮಾನಗಳು ಸಜ್ಜಾಗಿವೆ.  ೩೮೬ ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ೧೬೩೭ಕ್ಕೆ ಏರಿಕೆಯಾಗಿದ್ದು, ೩೮ ಮಂದಿ ಅಸು ನೀಗಿದ್ದಾರೆ. ‘ತಬ್ಲಿಘಿ ಜಮಾತಿಗೆ ಸಂಬಂಧಿಸಿದ ಎಲ್ಲ ವಿದೇಶೀಯರನ್ನೂ ಸಮಗ್ರ ತಪಾಸಣೆಗೆ ಒಳಪಡಿಸಿ. ತಪಾಸಣೆಯಲ್ಲಿ ಕೋವಿಡ್ -೧೯ ಮುಕ್ತರು ಎಂಬುದಾಗಿ ಕಂಡು ಬರುವ ಯಾರೇ ವಿದೇಶೀಯನನ್ನು ತತ್ ಕ್ಷಣವೇ ಲಭ್ಯವಿರುವ ಮೊದಲ ವಿಮಾನದಲ್ಲೇ ಗಡೀಪಾರು ಮಾಡಬೇಕು ಎಂದು ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ಸೂಚಿಸಿತು. ಅಲ್ಲಿಯವರೆಗೆ, ಅಂತಹ ವ್ಯಕ್ತಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಬೇಕು ಮತ್ತು ಅವರ ಅತಿಥೇಯ ಸಂಸ್ಥೆಯ ಮೂಲಕ ಪ್ರತ್ಯೇಕವಾಸಕ್ಕೆ ಒಳಪಡಿಸಬೇಕುಎಂದು ಸರ್ಕಾರ ಸಲಹೆ ಮಾಡಿತು.  ಜಮಾತ್ ವಿದೇಶೀ ತಂಡಗಳು ಭಾರತದ ಒಳನಾಡಿನಲ್ಲಿ ಪ್ರವಾಸನಿರತವಾಗಿವೆ ಮತ್ತು ಕೊರೋನಾವೈರಸ್ ವಾಹಕರಾಗುವ ಸಾಧ್ಯತೆಗಳು ಕಂಡು ಬಂದಿವೆ ಎಂದೂ ಕೇಂದ್ರ ಸರ್ಕಾರ ಹೇಳಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
2020: ನವದೆಹಲಿ: ಕೋರನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಾಧ್ಯಮಿಕ ಶಿಕ್ಷಣದ ಕೇಂದ್ರೀಯ ಮಂಡಳಿಯು (ಸಿಬಿಎಸ್) ಬಡ್ತಿ ಮತ್ತು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನಿರ್ಣಾಯಕವಾದ ೨೯ ಮುಖ್ಯ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ ೧೦ ಮತ್ತು ೧೨ನೇ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್ ಆರ್ ಡಿ) ಸಚಿವ ರಮೇಶ ಪೋಖ್ರಿಯಾಲ್ ಅವರು 2020 ಏಪ್ರಿಲ್ 01ರ ಬುಧವಾರ ಹೇಳಿದರು.  1ರಿಂದ 8ನೇ ತರಗತಿವರೆಗಿನ ಎಲ್ಲ ಮಕ್ಕಳನ್ನೂ ಉತ್ತೀರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.  ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಸಿಬಿಎಸ್ ಪರೀಕ್ಷೆಗಳನ್ನು ದೇಶಾದ್ಯಂತ ಮುಂದೂಡಲಾಗಿತ್ತು. ಕೊರೋನಾವೈರಸ್ ಸೋಂಕಿನ ಪರಿಸ್ಥಿತಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಬಡ್ತಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅಗತ್ಯವಾದ ೨೯ ಮುಖ್ಯ ವಿಷಯಗಳಿಗೆ ಮಾತ್ರ ಮಂಡಳಿ ಪರೀಕ್ಷೆಗಳನ್ನು ನಡೆಸುವಂತೆ ತಾವು ಸಿಬಿಎಸ್ಇಗೆ ಸಲಹೆ ಮಾಡಿರುವುದಾಗಿ ಪೋಖ್ರಿಯಾಲ್ ಹೇಳಿದರು. ಮಂಡಳಿಯು ಪರೀಕ್ಷೆಗಳನ್ನು ನಡೆಸಲು ಸೂಕ್ತವಾದ ಸಮಯ ಬಂದಾಗ ಸೂಕ್ತ ಸೂಚನೆಗಳನ್ನು ನೀಡಿ ೨೯ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸುವುದು ಎಂದು ಸಚಿವರು ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್ ಪಾಲಿಸುವಂತೆ ಸೂಚನೆ ನೀಡಲಾದ ವ್ಯಕ್ತಿಗಳು ನಿಯಮ ಪಾಲಿಸದೆ ಮನೆಯಿಂದ ಹೊರಗೆ ಬಂದಿದ್ದಾರೆಯೇ ಅಥವಾ ಇತರರ ಜೊತೆ ಬೆರೆತಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಅಂತಹ ವ್ಯಕ್ತಿಗಳ ಮೊಬೈಲ್ ಫೋನುಗಳನ್ನು ಟ್ರ್ಯಾಕ್ ಮಾಡುವಂತೆ ದೆಹಲಿ ಪೊಲೀಸರಿಗೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  2020 ಏಪ್ರಿಲ್ 01ರ ಬುಧವಾರ ತಿಳಿಸಿದರು. ಸರ್ಕಾರವು ಈಗಾಗಲೇ ೨೫,೦೦೦ ಮೊಬೈಲ್ ಫೋನ್ ನಂಬರುಗಳನ್ನು  ಬೆನ್ನು ಹತ್ತುವ ಸಲುವಾಗಿ ಪೊಲೀಸರಿಗೆ ನೀಡಿದೆ ಎಂದು ಅವರು ಹೇಳಿದರು. ಕೊರೋನಾವೈರಸ್ ರೋಗವು ಸಮುದಾಯ ವರ್ಗಾವಣೆಯ ಹಂತ ತಲುಪಿರುವುದನ್ನು ಸೂಚಿಸುವ ಯಾವುದೇ ನಿದರ್ಶನ ಇಲ್ಲ ಎಂದು ನುಡಿದ ಮುಖ್ಯಮಂತ್ರಿ ಮೊಬೈಲ್ ಫೋನ್ ಮೂಲಕ ಟ್ರ್ಯಾಕ್ ಮಾಡುವುದರಿಂದ ಹೋಮ್ ಕ್ವಾರಂಟೈನ್ ಸೂಚನೆ ಉಲ್ಲಂಘಿಸಿದರೆ ಗೊತ್ತಾಗುವುದರ ಜೊತೆಗೆ, ಅವರ ಸಂಭಾವ್ಯ ಸಂಪರ್ಕಗಳನ್ನು ಗುರುತಿಸಲೂ ಸಾಧ್ಯವಾಗುತ್ತದೆ  ಎಂದರು. ‘ನಾವು  ೧೧,೦೦೦   ಫೋನ್ ನಂಬರುಗಳನ್ನು ಮಂಗಳವಾರ ದೆಹಲಿ ಪೊಲೀಸರಿಗೆ ನೀಡಿದ್ದೆವು. ಬುಧವಾರ ೧೪,೦೦೦ ಫೋನ್ ನಂಬರುಗಳನ್ನು ನೀಡಲಾಗಿದೆಎಂದು ಮುಖ್ಯಮಂತ್ರಿ ಹೇಳಿದರು.  ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಜೊತೆಗಿನ ತಮ್ಮ ಭೇಟಿಯ ವೇಳೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ಬಳಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತುಎಂದು ಕೇಜ್ರಿವಾಲ್ ಹೇಳಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಚೆನ್ನೈ: ತಮಿಳುನಾಡಿನಲ್ಲಿ ಹೊಸದಾಗಿ ೧೧೦ ಕೊರೊನಾ ಸೋಂಕು ಸಾಬೀತಾದ  ಪ್ರಕರಣಗಳು ಪತ್ತೆಯಾಗಿದ್ದು. ಈ ಎಲ್ಲ ಸೋಂಕಿತರು ದೆಹಲಿಯ ತಬ್ಲಿಘಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂಬುದು  2020 ಏಪ್ರಿಲ್ 01ರ ಬುಧವಾರ ಖಚಿತವಾಯಿತು. ಇದರೊಂದಿಗೆ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೨೩೪ಕ್ಕೆ ಏರಿತು. ಕಳೆದ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ತಮಿಳುನಾಡಿನಿಂದ ೧೫೦೦ ಜನ ಭಾಗವಹಿಸಿರುವ ಸಾಧ್ಯತೆ ಇದೆ ಎಂದು ತಮಿಳುನಾಡು ಸರ್ಕಾರ ಆತಂಕ ವ್ಯಕ್ತಪಡಿಸಿತು.  ಇದುವರೆಗೂ ೧೫ ಜಿಲ್ಲೆಗಳ ೧೧೦ ಮಂದಿಯಲ್ಲಿ ಕೊರೊನಾ ಖಚಿತವಾಗಿದೆ.  ಇನ್ನು, ೬೬೮ ಮಂದಿಯ ವರದಿ ಬರಬೇಕಾಗಿದೆ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಬೀಲಾ ರಾಜೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.  ಒಂದೇ ದಿನ ೧೧೦ ಹೊಸ ಪ್ರಕರಣಗಳು ಕಂಡು ಬಂದಿರುವುದು ತಮಿಳುನಾಡಿನಲ್ಲಿ ಆತಂಕ ಸೃಷ್ಟಿಸಿದ್ದು, ಒಂದೇ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ೨೩೪ಕ್ಕೆ ಏರಿಕೆಯಾಯಿತು. ಇನ್ನು, ೧,೫೦೦ ಜನರಲ್ಲಿ ರಾಜ್ಯಕ್ಕೆ ಇದುವರೆಗೂ ೧,೩೩೧ ಜನ ವಾಪಸಾಗಿದ್ದಾರೆ ಎಂದು ಸರ್ಕಾರ ಹೇಳಿದ್ದು, ಎಲ್ಲರನ್ನೂ ಗುರುತಿಸಿ ಪರೀಕ್ಷಿಸುವ ಕಾರ್ಯ ಮುಂದುವರೆಯಿತು. ದೆಹಲಿಯ ನಿಜಾಮುದ್ದೀನಿನಲ್ಲಿ  ಮಾರ್ಚ್ ಎರಡನೇ ವಾರದಲ್ಲಿ ಜಮಾತ್ ಸಭೆ ನಡೆದಿತ್ತು. ಈ ಸಭೆಯಲ್ಲಿ ವಿವಿಧ ರಾಜ್ಯಗಳ ಹಾಗೂ ದೇಶಗಳ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎನ್ನಲಾಗಿದೆ. ಕರ್ನಾಟಕದಿಂದಲೂ ೩೪೧ ಮಂದಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದ್ದು, ಅವರನ್ನು ಗುರುತಿಸುವ ಕಾರ್ಯ ಮುಂದುವರೆಯಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)



No comments:

Post a Comment