Saturday, April 11, 2020
ಇಂದಿನ ಇತಿಹಾಸ History Today ಏಪ್ರಿಲ್ 11
ಇಂದಿನ ಇತಿಹಾಸ HistoryToday ಏಪ್ರಿಲ್ 11
2020: ನವದೆಹಲಿ: ಮುಖಗವಸು (ಮಾಸ್ಕ್) ಧರಿಸಿಕೊಂಡೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ 2020 ಏಪ್ರಿಲ್ 11ರ ಶನಿವಾರ ವಿಡಿಯೋ ಸವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾವೈರಸ್ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ವಿಸ್ತರಿಸುವ ಬಗ್ಗೆ ಯಾವುದೇ ಸಲಹೆಗಳ ಬಗ್ಗೆ ತಾವು ಮುಕ್ತ ಮನಸ್ಸು ಹೊಂದಿರುವುದಾಗಿ ಭರವಸೆ ನೀಡಿದರು. ’ನಾನು ವಾರಪೂರ್ತಿ ದಿನದ ೨೪ ಗಂಟೆ ಕೂಡಾ ನಿಮಗೆ ಲಭ್ಯನಿದ್ದೇನೆ. ಯಾರೇ ಮುಖ್ಯಮಂತ್ರಿ ನನ್ನ ಜೊತೆ ಮಾತನಾಡಿ ಕೋವಿಡ್-೧೯ಕ್ಕೆ ಸಂಬಂಧಿಸಿದಂತೆ ಯಾವುದೇ ಸಮಯದಲ್ಲಿ ಸಲಹೆ ನೀಡಬಹುದು. ನಾವೆಲ್ಲರೂ ಪರಸ್ಪರ ಹೆಗಲಿ ಹೆಗಲು ನೀಡಿ ಒಟ್ಟಿಗೆ ನಿಲ್ಲಬೇಕಾಗಿದೆ’ ಎಂದು ಪ್ರಧಾನಿ ಹೇಳಿದರು. ವಿಡಿಯೋ ಕಾನ್ಪರೆನ್ಸಿನಲ್ಲಿ ಪಾಲ್ಗೊಂಡ ಹಲವಾರು ಮುಖ್ಯಮಂತ್ರಿಗಳೂ ಮುಖಗವಸುಗಳನ್ನು ಧರಿಸುವ ಮೂಲಕ ಮುಖಗವಸು ಧರಿಸುವುದರ ಅಗತ್ಯ ಕುರಿತು ರಾಷ್ಟ್ರಕ್ಕೆ ಸಂದೇಶ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು ಇದು ಮೂರನೇ ಸಲ. ಏಪ್ರಿಲ್ ೭ರ ಮಂಗಳವಾರ ಕೂಡಾ ಮುಖ್ಯಮಂತ್ರಿಗಳಿಂದ ಏಪ್ರಿಲ್ ೧೪ಕ್ಕೆ ಮುಕ್ತಾಯವಾಗಲಿರುವ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮುಂದುವರೆಸುವ ಬಗ್ಗೆ ಪ್ರಧಾನಿಯವರು ಹಿಮ್ಮಾಹಿತಿ ಪಡೆದಿದ್ದರು. ಏಪ್ರಿಲ್ ೨ರಂದು ಮುಖ್ಯಮಂತ್ರಿಗಳ ಜೊತೆಗಿನ ಸಂವಹನಕಾಲದಲ್ಲಿ ನಿಧಾನಗತಿಯಲ್ಲಿ ಲಾಕ್ ಡೌನ್ ನಿಂದ ಹೊರಬರುವ ಬಗ್ಗೆ ಕಾರ್‍ಯತಂತ್ರ ರೂಪಿಸುವಂತೆ ಪ್ರಧಾನಿ ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದಿಗ್ಬಂಧನ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವವನ್ನು 2020 ಏಪ್ರಿಲ್ 11ರ ಶನಿವಾರ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಸಂವಹನದಲ್ಲಿ ಪುನಃ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರಮಗಳು ಜನರ ಜೀವಗಳನ್ನು ರಕ್ಷಿಸುತ್ತವೆ ಎಂದು ನುಡಿದರು. ವಿಶ್ವಾದ್ಯಂತ ಸಹಸ್ರಾರು ಮಂದಿಯನ್ನು ಬಲಿ ಪಡೆದು, ಲಕ್ಷಾಂತರ ಮಂದಿಯನ್ನು ಬಾಧಿಸಿರುವ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಮನೆಯ ಒಳಗೇ ಸುರಕ್ಷಿತರಾಗಿ ಇರಬೇಕಾದುದರ ಮಹತ್ವವನ್ನು ಭಾರತೀಯ ನಾಗರಿಕರು ಅರ್ಥ ಮಾಡಿಕೊಂಡಿದ್ದಾರೆ ಎಂದೂ ಪ್ರಧಾನಿ ಶ್ಲಾಘಿಸಿದರು. ದಿಗ್ಬಂಧನ ವಿಸ್ತರಣೆ ಮನವಿಗಳನ್ನು ಪರಿಶೀಲಿಸುವುದಾಗಿ ಅವರು ಹೇಳಿದರು. ’ದಿಗ್ಬಂಧನದ ಬಗ್ಗೆ ಮಾತನಾಡುವಾಗ ಜೀವ ಇದ್ದರೆ, ಜಗತ್ತು ಇದೆ (ಜಾನ್ ಹೈ ತೊ ಜಹಾಂ ಹೈ) ಎಂದು ನಾನು ಹೇಳಿದ್ದೆ. ನಾನು ದೇಶಕ್ಕೆ ಈ ಸಂದೇಶವನ್ನು ನೀಡುವಾಗ, ಪ್ರಾರಂಭದಲ್ಲಿಯೇ ಪ್ರತಿಯೊಬ್ಬ ನಾಗರಿಕನ ಪ್ರಾಣ ರಕ್ಷಣೆಗೆ ದಿಗ್ಬಂಧನ (ಲಾಕ್ ಡೌನ್) ಮತ್ತು ಸಾಮಾಜಿಕ ಅಂತರ ಪಾಲನೆ ಅತ್ಯಂತ ಮತ್ವದ್ದು ಎಂದು ಹೇಳಿದ್ದೆ’ ಎಂದು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತಾ ಪ್ರಧಾನಿ ನುಡಿದರು. ’ದೇಶದ ಬಹುತೇಕ ಮಂದಿ ತಮ್ಮ ಕರ್ತವ್ಯವನ್ನು ಅರಿತುಕೊಂಡಿದ್ದಾರೆ ಮತ್ತು ಮನೆಗಳ ಒಳಗೇ ಉಳಿದುಕೊಳ್ಳುವುದರ ಮಹತ್ವ ಅರ್ಥ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡಾ ಈ ಮಂತ್ರವನ್ನು ಅನುಸರಿಸುವ ಮೂಲಕ ಜನರ ಜೀವ ರಕ್ಷಣೆಗೆ ಯತ್ನಿಸಿದೆ ಎಂದು ಮೋದಿ ಹೇಳಿದರು.’ಈಗ ಭಾರತದ ಉಜ್ವಲ ಭವಿಷ್ಯಕ್ಕಾಗಿ, ಸಮೃದ್ಧ ಮತ್ತು ಆರೋಗ್ಯಶಾಲಿ ಭಾರತಕ್ಕಾಗಿ ಜೀವ ಮತ್ತು ಜೀವನ ಈ ಎರಡೂ ಅಂಶಗಳ ಬಗ್ಗೆ ಗಮನ ನೀಡುವುದು ಅತ್ಯಂತ ಅಗತ್ಯವಾಗಿದೆ. ಬದುಕು ಮತ್ತು ಜಗತ್ತು ಎರಡಕ್ಕೂ ಇದು ಅತ್ಯಗತ್ಯ’ ಎಂದು ಅವರು ನುಡಿದರು. ಲಾಕ್ ಡೌನ್ ವಿಸ್ತರಣೆ, ಪ್ರಧಾನಿಗೆ ಕೇಜ್ರಿವಾಲ್ ಬೆಂಬಲ: ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವಾಪಿ ಲಾಕ್ ಡೌನ್ ವಿಸ್ತರಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬುದಾಗಿ ವಿಡಿಯೋ ಕಾನ್ಫರೆನ್ಸಿನ ಬಳಿಕ ಟ್ವೀಟ್ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ’ಪ್ರಧಾನಿಯವರ ಈ ನಿರ್ಧಾರವನ್ನು ನಾನು ಬೆಂಬಲಿಸಿದ್ದೇನೆ. ಏಕೆಂದರೆ ಲಾಕ್ ಡೌನ್ ಕ್ರಮವು ಭಾರತಕ್ಕೆ ಇತರ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಉತ್ತಮ ರೀತಿಯಲ್ಲಿ ರೋಗವನ್ನು ನಿಭಾಯಿಸಲು ನೆರವಾಗಿದೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ದುಬೈ: ಯುಎಇಯಲ್ಲಿ ಇರುವ ಪುತ್ರಿಯ ಭೇಟಿಗೆ ಬಂದಿದ್ದ ಭಾರತದ ನಿವೃತ್ತ ಕಾಲೇಜು ಪ್ರಾಧ್ಯಾಪಕರೊಬ್ಬರು, ಕೊರೊನಾವೈರಸ್ ಸೋಂಕಿನ ಪರಿಣಾಮವಾಗಿ ದೇಶಕ್ಕೆ ಹಿಂತಿರುಗಲು ಸಾಧ್ಯವಾಗದೆ ಇಲ್ಲೇ ಸಿಕ್ಕಿಹಾಕಿಕೊಂಡು ಹೃದಯಾಘಾತಕ್ಕೆ ಒಳಗಾಗಿ 2020 ಏಪ್ರಿಲ್ 11ರ ಶನಿವಾರ ಸಾವನ್ನಪ್ಪಿದರು. ವಿಮಾನಗಳ ಯಾನ ರದ್ದಾದ ಕಾರಣ ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ಅವರು ದುಬೈಯಲ್ಲೇ ಉಳಿಯಬೇಕಾಗಿ ಬಂದಿತ್ತು ಎಂದು ಮೃತರ ಕುಟುಂಬ ಸದಸ್ಯರು ತಿಳಿಸಿದರು. ಕೇರಳದ ೭೦ರ ಹರೆಯದ ಎಂ. ಶ್ರೀಕುಮಾರ್ ಮತ್ತು ಅವರ ಪತ್ನಿ ಶ್ರೀಕುಮಾರಿ ಶಾರ್ಜಾದಲ್ಲಿ ಅದ್ಯಾಪಕಿಯಾಗಿರುವ ಪುತ್ರಿ ಶ್ರೀಜಾ ಮನೆಗೆ ಪ್ರವಾಸ ಬಂದಿದ್ದರು. ಅವರು ಶನಿವಾರ ಸ್ವದೇಶಕ್ಕೆ ವಾಪಸಾಗಬೇಕಾಗಿತ್ತು. ಆದರೆ ವಿಮಾನಯಾನಗಳು ಅಮಾನತುಗೊಂಡ ಪರಿಣಾಮವಾಗಿ ಅವರಿಗೆ ಕೇರಳಕ್ಕೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ಕೇರಳದ ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಅಂಕಿಸಂಖ್ಯಾ ಪ್ರಾಧ್ಯಾಪಕರಾಗಿದ್ದ ಶ್ರೀಕುಮಾರ್ ಅವರು ಕೆಲ ವರ್ಷಗಳ ಹಿಂದೆ ನಿವೃತ್ತರಾಗಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಲಂಡನ್: ರಜಾ ಬಂದರೆ ಸಾಕು, ಲಂಡನ್ನಿಗೆ ಪ್ರವಾಸ ಹೋಗಲು ಕಾಯುತ್ತಿದ್ದ ಭಾರತೀಯರ ಲಂಡನ್ ಪ್ರವಾಸದ ಕನಸು ಈಗ ಕರಟಿಹೋಗಿದೆ. ಹೌದು, ೨೦೧೪ರ ಆದಿಯಲ್ಲಿ ಲಂಡನ್ನಿಗೆ ಹೋಗಿದ್ದ ಐಟಿ ತಜ್ಞ ದೀಪಕ್ ಜೋಶಿ ಅವರ ಫ್ಲ್ಯಾಟಿಗೆ ಪ್ರತಿವರ್ಷ ಈ ಸಮಯದಲ್ಲಿ ಅಂದರೆ, ಸೆಕೆ ಮತ್ತು ಚಳಿ ಹದವಾಗಿ ಇರುವ ಕಾಲದಲ್ಲಿ ಭಾರತೀಯ ಬಂಧು ಮಿತ್ರರು ಬರದೇ ಇದ್ದ ದಿನಗಳೇ ಇರಲಿಲ್ಲ. ಆದರೆ ಈಗ ಆ ಸ್ಥಿತಿ ಇಲ್ಲ. ಈ ವರ್ಷದ ಬೇಸಿಗೆಯಲ್ಲಿ ದೆಹಲಿ, ಗುವಾಹಟಿ, ಇಂದೋರ್ ಮತ್ತು ಗೋವಾ- ಹೀಗೆ ಕನಿಷ್ಠ ೩-೪ ಕಡೆಯಿಂದ ಗೆಳೆಯರು ಬರುತ್ತಾರೆ ಎಂದು ಜೋಶಿ ನಿರೀಕ್ಷಿಸಿದ್ದರು. ಆದರೆ ಎಲ್ಲವೂ ರದ್ದಾಗಿವೆ. ’ಅಬ್ ಕೌನ್ ಆಯೇಗಾ ಯಹಾಂ?’ (ಈಗ ಇಲ್ಲಿಗೆ ಯಾರು ಬರುತ್ತಾರೆ?) ಲಂಡನ್ನಿನಲ್ಲಿ ಇರುವ ಪ್ರಕರಣಗಳ ಸಂಖ್ಯೆ ಇಂಗ್ಲೆಂಡಿನಲ್ಲೇ ಅತ್ಯಧಿಕ’ ಎಂದು 2020 ಏಪ್ರಿಲ್ 11ರ ಶನಿವಾರ ನಿಟ್ಟುಸಿರು ಬಿಟ್ಟರು ಜೋಶಿ. ಸುಮಾರು ೯೦೦೦ ಮಂದಿಯ ಸಾವು, ಆಸ್ಪತ್ರೆಗಳಲ್ಲಿ ಸಹಸ್ರಾರು ಪ್ರಕರಣಗಳು- ಇಂಗ್ಲೆಂಡಿನ ಜನರ ದೈನಂದಿನ ಭ್ರಮನಿರಸನದ ಇಲ್ಲವೇ ಅನುದಿನದ ಬದುಕಿನ ಹೊಂದಾಣಿಕೆಯ ಇಂತಹ ಕಥೆಗಳನ್ನೇ ಹೇಳುತ್ತವೆ. ಕಾರ್‍ಯಕ್ರಮ ರದ್ದು, ಟಿಕೆಟ್ ರದ್ದು, ಸೂಪರ್ ಮಾರುಕಟ್ಟೆಗಳ ಅವಸ್ಥೆಗಳು ಇಲ್ಲವೇ ಕ್ಯೂಗಳ ಕಥೆಗಳು ಸಾಲು ಸಾಲು. ಇಂಗ್ಲೆಂಡಿನ ಭಾರತೀಯ ಸಮುದಾಯದ ಹೆಚ್ಚು ಕಡಿಮೆ ಪ್ರತಿಯೊಬ್ಬ ವ್ಯಕ್ತಿಗೂ ಯಾರಿಗೆ ವೈರಸ್ ಸೋಂಕು ತಗುಲಿದೆ, ಯಾರು ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇದ್ದಾರೆ ಅಥವಾ ಯಾರು ಆಸ್ಪತ್ರೆಯಲ್ಲಿ ಇದ್ದಾರೆ ಎಂಬುದು ಗೊತ್ತಿದೆ. ಲಂಡನ್ನಿನಲ್ಲಿ ಭಾರತೀಯ ಮೂಲದ ಜನರು ಹೆಚ್ಚು ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈಲಿಂಗ್, ಸೌಥಾಲ್, ಬ್ರೆಂಟ್, ಬರ್‍ನೆಟ್ ಮತ್ತು ಹ್ಯಾರೋ ಇವುಗಳಲ್ಲಿ ಸೇರಿವೆ. ’ಮನೆಯೊಳಗೆ ಇರುವುದು ಎಂದರೆ ಬೇಜಾರು. ಆದರೆ ಬೇರೆ ದಾರಿಯೇ ಇಲ್ಲ’ ಎನ್ನುತ್ತಾರೆ ಮೈಡೆನ್ ಹೆಡ್ ಮೂಲದ ರವಿ ಸಿಂಗ್. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಸಂವಹನ ಕಾಲದಲ್ಲಿ ಒಂದೇ ವಾಕ್ಯದ ಮೂಲಕ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಷರತ್ತುಬದ್ಧವಾಗಿ ವಿಸ್ತರಿಸುವ ಸೂಚನೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಮೂಲಗಳು 2020 ಏಪ್ರಿಲ್ 11ರ ಶನಿವಾರ ಹೇಳಿದವು. ಮುಖ್ಯಮಂತ್ರಿಗಳ ಜೊತೆ ಸಂವಹನ ನಡೆಸಿರುವ ಪ್ರಧಾನಿಯವರು ಜೀವಗಳನ್ನು ಮಾತ್ರವೇ ಅಲ್ಲ, ಜೀವನಗಳನ್ನು ಕೂಡಾ ರಕ್ಷಿಸುವುದು ಈಗಿನ ಹೊಸ ಸವಾಲು ಎಂಬ ವಿಚಾರಕ್ಕೆ ಒತ್ತು ನೀಡಿದ್ದಾರೆ ಎಂದು ಮೂಲಗಳು ವ್ಯಾಖ್ಯಾನಿಸಿದವು. ಪ್ರಧಾನಿ ಮೋದಿಯವರು ’ಹಿಂದೆ ಸರ್ಕಾರದ ಗುರಿ ’ಜಾನ್ ಹೈ ತೊ ಜಹಾನ್ ಹೈ’ (ಜೀವ ಇದ್ದರೆ ಜೀವನ ಇದೆ) ಎಂಬುದಾಗಿತ್ತು. ಆದರೆ ಈಗ ಅದು ’ಜಾನ್ ಭೀ ಜಹಾನ್ ಭೀ’ (ಉಳಿಸಿ ಜೀವ ಮತ್ತು ಜೀವನ)’ ಎಂಬುದಾಗಿದೆ. ಪ್ರಧಾನಿಯವರ ಈ ಒಂದೇ ಮಾತು ಕೇಂದ್ರದ ಧೋರಣೆಯಲ್ಲಿನ ವ್ಯತ್ಯಾಸವನ್ನು ತೋರಿಸುತ್ತದೆ. ಪ್ರಧಾನಿ ಮೋದಿಯವರು ಹೆಚ್ಚು ವಿವರಿಸಲಿಲ್ಲ ಎಂದು ಪ್ರಧಾನಿ ಕಚೇರಿಯ ಅಧಿಕಾರಿ ಹೇಳಿದರು. ಪ್ರಧಾನಿಯವರು ಇನ್ನಷ್ಟು ಸಮಾಲೋಚನೆಗಳ ಬಳಿಕ ಏಪ್ರಿಲ್ ೧೪ರ ವೇಳೆಗೆ ರಾಷ್ಟ್ರದ ಕಾರ್‍ಯತಂತ್ರವನ್ನು ಅಂತಿಮಗೊಳಿಸಲಿದ್ದಾರೆ ಎಂದು ಅವರು ನುಡಿದರು. ಸಂವಹನ ಕಾಲದಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರದಂತಹ ವಿರೋಧ ಪಕ್ಷಗಳ ಆಳ್ವಿಕೆಯ ಬಹುತೇಕ ಮುಖ್ಯಮಂತ್ರಿಗಳು ದಿಗ್ಬಂಧನ (ಲಾಕ್ ಡೌನ್) ವಿಸ್ತರಣೆಗೆ ಆಗ್ರಹಿಸಿದರು. ಇದಕ್ಕೆ ವ್ಯತಿರಿಕ್ತವಾಗಿ ಎನ್‌ಡಿಎ ಮುಖ್ಯಮಂತ್ರಿಗಳು ನಿರ್ಧಾರವನ್ನು ಪ್ರಧಾನಿ ಮೋದಿಯವರಿಗೆ ಬಿಟ್ಟಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
Subscribe to:
Post Comments (Atom)
No comments:
Post a Comment