ನಾನು ಮೆಚ್ಚಿದ ವಾಟ್ಸಪ್

Thursday, April 2, 2020

ಇಂದಿನ ಇತಿಹಾಸ History Today ಏಪ್ರಿಲ್ 02

ಇಂದಿನ ಇತಿಹಾಸ  History Today ಏಪ್ರಿಲ್  02 
2020: ನವದೆಹಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್ ನಾಯಕ ಮೌಲಾನಾ ಸಾದ್ ಖಾಂಡ್ಲವಿ ಅವರು ನಾಪತ್ತೆಯಾಗಿದ್ದು, ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿ 2020 ಏಪ್ರಿಲ್ 02ರ ಗುರುವಾರ ಆಡಿಯೋ ಬಿಡುಗಡೆ ಮಾಡಿದರು. ರಾಷ್ಟ್ರದ ರಾಜಧಾನಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಕಟ್ಟಡದಲ್ಲಿ ಧಾರ್ಮಿಕ ಸಮಾವೇಶ ಸಂಘಟಿಸಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾದ ಬಳಿಕ ಮೌಲಾನಾ ಸಾದ್ ನಾಪತ್ತೆಯಾಗಿ ಅಜ್ಞಾತವಾಸಕ್ಕೆ ಒಳಗಾಗಿದ್ದಾರೆ. ನಾವು ಯಾವುದೇ ಸ್ಥಳಗಳಲ್ಲಿ ಸಭೆ ಸೇರುವುದನ್ನು  ನಿವಾರಿಸಬೇಕು ಮತ್ತು ನಾವು ಏನು ಮಾಡಬೇಕು ಎಂದು ಸರ್ಕಾರ ಮತ್ತು ಕಾನೂನು ಬಯಸುತ್ತದೋ ಅದನ್ನು ಅನುಸರಿಸಬೇಕು. ಸಮಯದಲ್ಲಿ ಅವರಿಗೆ ಬೆಂಬಲ ನೀಡುವುದು ಮತ್ತು ನೆರವಾಗುವುದು ನಮ್ಮ ಕರ್ತವ್ಯ ಕೂಡಾ ಎಂದು ಖಾಂಡ್ಲವಿ ಜಮಾತ್ ಸದಸ್ಯರಿಗೆ ಮರ್ಕಜ್  ಯೂ ಟ್ಯೂಬ್ ಚಾನೆಲ್ನಲ್ಲಿ ಪ್ರಕಟಿಸಲಾಗಿರುವ ಆಡಿಯೋ ಸಂದೇಶದಲ್ಲಿ ಸೂಚಿಸಿದರು. ನೀವು ಎಲ್ಲಿದ್ದೀರೋ ಅಲ್ಲೇ, ಸ್ವತಃ ಏಕಾಂಗಿವಾಸಕ್ಕೆ (ಕ್ವಾರಂಟೈನ್) ಒಳಗಾಗಿ. ಇದು ಇಸ್ಲಾಂ ಅಥವಾ ಷರಿಯಾಕ್ಕೆ ವಿರುದ್ಧವಲ್ಲ ಎಂದೂ ಅವರು ಸ್ಪಷ್ಟ ಪಡಿಸಿದರು. ಖಾಂಡ್ಲವಿ ಅವರು ಅಜ್ಞಾತ ಸ್ಥಳದಲ್ಲಿ ಅಡಗಿದ್ದಾರೆ ಎಂದು ನಂಬಲಾಗಿದೆ. ಯೂ ಟ್ಯೂಬ್ ಮೂಲಕ ಪ್ರಕಟಗೊಂಡಿರುವ ಆಡಿಯೋದಲ್ಲಿ ಖಾಂಡ್ಲವಿ ಸ್ವತಃ ತಾವು ಸ್ವಯಂ ಏಕಾಂತವಾಸದಲ್ಲಿ ಇರುವುದಾಗಿ ಹೇಳಿದ್ದು ದಾಖಲಾಗಿದೆ.  ನಾನು ವೈದ್ಯರ ಸಲಹೆಯಂತೆ ದೆಹಲಿಯಲ್ಲೇ ಅಜ್ಞಾತಸ್ಥಳದಲ್ಲಿ ಸ್ವಯಂ ಏಕಾಂತವಾಸದಲ್ಲಿ ಇದ್ದೇನೆ ಮತ್ತು  ಜಮಾತ್ ಎಲ್ಲರಿಗೂ ರಾಷ್ಟ್ರದಲ್ಲೇ ಎಲ್ಲಿದ್ದೀರೋ ಅಲ್ಲೇ ಕಾನೂನಿನ ನಿರ್ದೇಶನಗನ್ನು ಪಾಲಿಸಿ ಎಂದು ಮನವಿ ಮಾಡುತ್ತೇನೆ ಎಂದು ಖಾಂಡ್ಲವಿ ಆಡಿಯೋದಲ್ಲಿ ಹೇಳಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಮಾರಕ ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಬಿಗಿಯನ್ನು ದಿಗ್ಬಂಧನ ಅವಧಿ ಬಳಿಕ ನಂತರ ನಿಧಾನಗತಿಯಲ್ಲಿ ಸಡಿಲಿಸಲು ಒಲವು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ದಿಗ್ಬಂಧನ ನಿರ್ಗಮನ ತಂತ್ರವನ್ನು ರೂಪಿಸುವ ನಿಟ್ಟಿನಲ್ಲಿ ಸಲಹೆ ನೀಡುವಂತೆ 2020 ಏಪ್ರಿಲ್ 02ರ ಗುರುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.  ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಮ್ಮೇಳನ ನಡೆಸಿದ ಪ್ರಧಾನಿ, ದಿಗ್ಬಂಧನದಿಂದ ಹೇಗೆ ನಿರ್ಗಮಿಸಬೇಕು ಎಂಬುದರ ಕುರಿತು ಸಲಹೆಗಳನ್ನು ಕಳುಹಿಸಿಕೊಡಿ ಎಂದು ಕೋರಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದ ಅವರು, ಕೋವಿಡ್ -೧೯ ಹರಡುವಿಕೆಯನ್ನು ಸೀಮಿತಗೊಳಿಸುವಲ್ಲಿ ಭಾರತವು "ಸ್ವಲ್ಪ ಯಶಸ್ಸನ್ನು ಸಾಧಿಸಿದೆ" ಎಂದು ನುಡಿದರು. ಕೊರೋನವೈರಸ್ ಕಾಯಿಲೆಯಿಂದ ಎದುರಾಗುವ ದೊಡ್ಡ ಸವಾಲನ್ನು ನಿಭಾಯಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಎರಡನೇ ವಿಡಿಯೋ ಕಾನ್ಫರೆನ್ಸ್ ಇದಾಗಿದೆ. ಮಾರ್ಚ್ ೨೦ರಂದು ಅವರು ಮುಖ್ಯಮಂತ್ರಿಗಳ ಜೊತೆಗೆ ಮೊದಲನೆಯ ವಿಡಿಯೋ ಸಮ್ಮೇಳನ  ನಡೆಸಿದ್ದರು. ಸುಮಾರು ೧೦ ದಿನಗಳ ಹಿಂದೆ ಜಾರಿಗೊಳಿಸಲಾದ ರಾಷ್ಟ್ರವ್ಯಾಪಿ ದಿಗ್ಬಂಧನಕ್ಕಾಗಿ ಮುಖ್ಯಮಂತ್ರಿಗಳ ವ್ಯಕ್ತ ಪಡಿಸಿದ ಶ್ಲಾಘನೆಯನ್ನು ಆಲಿಸಿದ ಪ್ರಧಾನಿ, ಕನಿಷ್ಠ ಜೀವ ಹಾನಿಯನ್ನು ಖಚಿತಪಡಿಸಿಕೊಳ್ಳುವುದು ದೇಶದ ಮುಖ್ಯಗುರಿ ಎಂದು ಹೇಳಿದರು. "ಮುಂದಿನ ಕೆಲವು ವಾರಗಳಲ್ಲಿ, ಪರೀಕ್ಷೆ, ಪತ್ತೆಹಚ್ಚುವಿಕೆ, ಪ್ರತ್ಯೇಕಿಸುವಿಕೆ ಮತ್ತು ಸಂಪರ್ಕ ತಡೆ (ಐಸೋಲೇಷನ್ ಮತ್ತು ಕ್ವಾರಂಟೈನ್) ಇವುಗಳ ಬಗ್ಗೆ ನಾವು ಗಮನ ಕೇಂದ್ರೀಕರಿಸಬೇಕು ಎಂದು ಮೋದಿ ಹೇಳಿದರು. ಅಗತ್ಯ ವೈದ್ಯಕೀಯ ಉತ್ಪನ್ನಗಳ ಪೂರೈಕೆಯನ್ನು ಕಾಯ್ದುಕೊಳ್ಳುವುದರ ಅವಶ್ಯಕತೆ, ಔಷಧಗಳ ತಯಾರಿಕೆಗೆ ಕಚ್ಚಾ ವಸ್ತುUಳು ಮತ್ತು ವೈದ್ಯಕೀಯ ಉಪಕರಣಗಳ ಲಭ್ಯತೆ ಬಗ್ಗೆ ಅವರು ಒತ್ತಿ ಹೇಳಿದರು. ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಇತರ ಅಧಿಕಾರಿಗಳು ದಿಗ್ಬಂಧನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಬೇಕಾದ ಅಗತ್ಯಕ್ಕೆ ಒತ್ತು ನೀಡಿದರು, ಬಡವರಿಗೆ ಆಹಾರ ಒದಗಿಸುವ ಬಗ್ಗೆ ಮತು ಸೋಂಕಿಗೆ ತುತ್ತಾದವರು, ವಿಶೇಷವಾಗಿ ತಬ್ಲಿಘಿ ಜಮಾತ್ ಪ್ರತಿನಿಧಿಗಳ ಜೊತೆಗೆ ಸಂಪರ್ಕ ಹೊಂದಿದವರ ಪತ್ತೆ ವಿಚಾರದಲ್ಲಿ  ಹೆಚ್ಚಿನ ಗಮನ ಹರಿಸಲು ಅವರು ಸಲಹೆ ಮಾಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ತಿರುವನಂತಪುರಂ: ವೈದ್ಯರು ಔಷಧ ಚೀಟಿ (ಪ್ರಿಸ್ಕ್ರಿಪ್ಷನ್) ಬರೆದುಕೊಟ್ಟರೆ ವ್ಯಸನಿಗಳಿಗೆ ಮದ್ಯ ಖರೀದಿಸಲು ಅವಕಾಶ ನೀಡುವ ರಾಜ್ಯ ಸರ್ಕಾರದ ಕ್ರಮಕ್ಕೆ ಕೇರಳ ಹೈಕೋರ್ಟ್ 2020 ಏಪ್ರಿಲ್ 02ರ ಗುರುವಾರ ತಡೆಯಾಜ್ಞೆ ನೀಡಿತು. ಇದರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ ಭಾರೀ ಮುಜುಗರ ಅನುಭವಿಸಿತು. ನ್ಯಾಯಮೂರ್ತಿಗಳಾದ .ಕೆ.ಜಯಶಂಕರನ್ ನಂಬಿಯಾರ್ ಮತ್ತು ಶಾಜಿ ಪಿ ಚಾಲಿ ಅವರನ್ನೊಳಗೊಂಡ ಹೈಕೋರ್ಟ್ ನ್ಯಾಯಪೀಠವು ಸರ್ಕಾರದ ಆದೇಶವನ್ನು "ಗೊಂದಲದ" ಮತ್ತು "ವಿಪತ್ತಿನ ಪಾಕವಿಧಾನ" ಎಂದು ಬಣ್ಣಿಸಿತುಸರ್ಕಾರದ ಆದೇಶದ ವಿರುದ್ಧ ಸಾಮಾಜಿಕ ಕಾರ್ಯಕರ್ತರು, ವೈದ್ಯರು ಮತ್ತು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಪೀಠವು ಕ್ರಮಕ್ಕೆ ಮುಂದಾಯಿತು. ಸರ್ಕಾರಿ ವೈದ್ಯರ ಶಿಫಾರಸಿನೊಂದಿಗೆ ಬಂದರೆ ಮದ್ಯ ಮಾರಾಟಗಾರರಿಗೆ, ವ್ಯಸನಿಗಳಿಗೆ ನಿಯಂತ್ರಿತ ಪ್ರಮಾಣದಲ್ಲಿ ಮದ್ಯವನ್ನು ಮಾರಾಟ ಮಾಡಲು ಕೇರಳದ ಅಬಕಾರಿ ಇಲಾಖೆಯು ಸೋಮವಾರ ಅನುಮತಿ ನೀಡಿತ್ತು. ಬೆನ್ನಲ್ಲೇ, ಸರ್ಕಾರದ ಆದೇಶವು ವೈದ್ಯರು ಮತ್ತು ವಿರೋಧ ಪಕ್ಷಗಳ ತೀಕ್ಷ್ಣ ಟೀಕೆಗೆ ಗುರಿಯಾಗಿತ್ತು. ರಾಷ್ಟ್ರವ್ಯಾಪಿ ದಿಗ್ಬಂಧನದಿಂದಾಗಿ (ಲಾಕ್ ಔಟ್) ಮದ್ಯ ಸಿಗದ ಕಾರಣ ಎಂಟು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ  ಎಂದು ಹೇಳುವ ಮೂಲಕ ಪಿಣರಾಯಿ ವಿಜಯನ್ ಸರ್ಕಾರ ಆದೇಶವನ್ನು ಸಮರ್ಥಿಸಿಕೊಂಡಿತ್ತು. ಸರ್ಕಾರವು ಗುರುವಾರ ನ್ಯಾಯಾಲಯದಲ್ಲಿಯೂ ಇದೇ ರೀತಿಯ ಪ್ರತಿವಾದವನ್ನು ಮಂಡಿಸಿತು. ಚಿಕಿತ್ಸೆಯ ಭಾಗವಾಗಿ ವ್ಯಸನಿಗಳಿಗೆ ಮಧ್ಯಮ ಪ್ರಮಾಣದಲ್ಲಿ ಮದ್ಯವನ್ನು ನೀಡಲಾಗುತ್ತದೆ ಎಂದು ರಾಜ್ಯದ ಕಾನೂನು ಅಧಿಕಾರಿ ವಿವರಿಸಲು ಪ್ರಯತ್ನಿಸಿದರು. ಆದರೆ ನ್ಯಾಯಮೂರ್ತಿಗಳಿಗೆ ಸರ್ಕಾರದ ಪ್ರತಿಪಾದನೆ ಸಮಾಧಾನ ನೀಡಲಿಲ್ಲ. ಆಲ್ಕೋಹಾಲ್ ವಿದ್ಡ್ರಾವಲ್ ಸಿಂಡ್ರೋಮ್ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮದ್ಯ ನೀಡುವ ರಾಜ್ಯದ ಏಕಪಕ್ಷೀಯ ನಿರ್ಧಾರದ ಬಗ್ಗೆ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದರು, ವೈಜ್ಞಾನಿಕ ಅಧ್ಯಯನಗಳು ಬೆಂಬಲಿಸದ ಗೊಂದಲಕಾರೀ ನಿರ್ಧಾರ ಇದು ಎಂದು ನ್ಯಾಯಮೂರ್ತಿಗಳು ಕರೆದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ದೇಶಾದ್ಯಂತ ೯೦೦೦ ಮಂದಿ ತಬ್ಲಿಘಿ ಜಮಾತ್ ಕಾರ್ಯಕರ್ತರು ಮತ್ತು ಅವರ ಜೊತೆಗೆ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಲಾಗಿದ್ದು ಎಲ್ಲರನ್ನೂ ಏಕಾಂತವಾಸಕ್ಕೆ (ಕ್ವಾರಂಟೈನ್) ಕಳುಹಿಸಲಾಗಿದೆ. ಇವರ ಪೈಕಿ ೧೩೦೦ ಮಂದಿ ವಿದೇಶೀಯರು ಎಂದು ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ 2020 ಏಪ್ರಿಲ್ 02ರ ಗುರುವಾರ ಪ್ರಕಟಿಸಿದರು. ತಬ್ಲಿಘಿ ಜಮಾತ್ಗೆ ಸಂಬಂಧಪಟ್ಟ ಕನಿಷ್ಠ ೯೬೦ ವಿದೇಶೀಯರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿ ಅವರ ವೀಸಾಗಳನ್ನು ರದ್ದು ಪಡಿಸಲಾಗಿದೆ ಎಂದೂ ಸರ್ಕಾರ ಪ್ರಕಟಿಸಿತು. ವ್ಯಕ್ತಿಗಳು ಜಮಾತ್ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಂಡದ್ದು ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದ ಸರ್ಕಾರ ತಿಳಿಸಿತು. ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾದ ೯೬೦ ಮಂದಿ ವಿದೇಶೀಯರ ವಿರುದ್ದ ವಿದೇಶೀಯರ ಕಾಯ್ದೆ, ೧೯೪೬ರ ವಿಧಿಗಳನ್ನು ಮತ್ತು ೨೦೦೫ರ ವಿಪತ್ತು ನಿರ್ವಹಣಾ ಕಾಯ್ದೆಯ ವಿಧಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯವು ದೆಹಲಿ ಪೊಲೀಸ್ ಮತ್ತು ಸಂಬಂಧಪಟ್ಟ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನಿರ್ದೇಶನ ನೀಡಿತು.  ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್ ಸಮಾವೇಶವು ರಾಷ್ಟ್ರದಲ್ಲಿ ಕೊರೋನಾವೈರಸ್ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾದದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೇಂದ್ರವು ಕ್ರಮ ಕೈಗೊಂಡಿತು.  ಇದೇ ವೇಳೆಗೆ ದೇಶಾದ್ಯಂತ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೊರೋನಾವೈರಸ್ ಸೋಂಕಿನ ೩೨೮ ಹೊಸ ಪ್ರಕರಣಗಳು ವರದಿಯಾಗಿವೆ  ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತು. ೧೯೬೫ ಕೋವಿಡ್ -೧೯ ಪ್ರಕರಣಗಳ ಪೈಕಿ ,೭೬೪ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ೧೫೦ ಪ್ರಕರಣಗಳಲ್ಲಿ ಜನರು ಗುಣಮುಖರಾಗಿದ್ದಾರೆ ಅಥವಾ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಒಬ್ಬ ವ್ಯಕ್ತಿ ವಿದೇಶಕ್ಕೆ ವಲಸೆ ಹೋಗಿದ್ದಾರೆ. ಸಚಿವಾಲಯದ ಮಾಹಿತಿ ಪ್ರಕಾರ ಮಹಾರಾಷ್ಟ್ರದಿಂದ , ಮಧ್ಯಪ್ರದೇಶದಿಂದ ಮತ್ತು ಆಂಧ್ರಪ್ರದೇಶ ಹಾಗೂ ಪಂಜಾಬಿನಿಂದ ತಲಾ ಮೂರು ಸಾವುಗಳು ವರದಿಯಾಗಿವೆ.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಮಾರಕ ಕೊರೋನಾವೈರಸ್ (ಕೋವಿಡ್- ೧೯) ಹರಡುವುದನ್ನು ತಡೆಗಟ್ಟಲು ಜಾರಿಗೊಳಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಅಥವಾ ಅಧಿಕಾರಿಗಳ ಸೂಚನೆ ಉಲ್ಲಂಘಿಸಿದವರನ್ನು ಒಂದು/ ಎರಡು ವರ್ಷ ಜೈಲಿಗೆ ತಳ್ಳಿ ಎಂದು ಕೇಂದ್ರ ಸರ್ಕಾರ ಶ್ರೀವಾಸ್ತವ 2020 ಏಪ್ರಿಲ್ 02ರ ಗುರುವಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಕಠಿಣ ಸಂದೇಶ ರವಾನಿಸಿತು.
ಹಲವು ರಾಜ್ಯಗಳಲ್ಲಿ ದಿಗ್ಬಂಧನ ಉಲ್ಲಂಘಿಸಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದೆ ಎಂದು ವರದಿ ತಿಳಿಸಿತು. ವೈದ್ಯರು, ಆರೋಗ್ಯ ಸಿಬ್ಬಂದಿ ಅಥವಾ ಸರ್ಕಾರಿ ಅಧಿಕಾರಿಗಳ ಮೇಳೆ ಯಾರು ಹಲ್ಲೆ ನಡೆಸುತ್ತಾರೋ ಅವರನ್ನು ಜೈಲಿಗೆ ಕಳುಹಿಸಿ. ಒಂದು ವೇಳೆ ಇಂತಹ (ವೈದ್ಯರ ಮೇಲೆ ಹಲ್ಲೆ ಇನ್ನಿತರ) ಘಟನೆಯಿಂದ ಯಾರಾದರೂ ಸಾವು ನೋವಿಗೆ ಕಾರಣರಾದರೆ ಅಂತಹವರನ್ನು ಎರಡು ವರ್ಷ ಜೈಲಿಗೆ ಕಳುಹಿಸಿ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿತು. ಯಾರು ಆದೇಶವನ್ನು ಉಲ್ಲಂಘಿಸುತ್ತಾರೋ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಯಾರು ಹಣಕ್ಕಾಗಿ ಸುಳ್ಳು ವದಂತಿ ಹಬ್ಬಿಸುತ್ತಾರೋ ಅವರನ್ನು ಕೂಡಾ ಎರಡು ವರ್ಷ ಜೈಲಿಗೆ ಕಳುಹಿಸಿ ಎಂದು ಗೌಬಾ ತಿಳಿಸಿದರು. ಲಾಕ್ ಡೌನ್ಗೆ ಸಂಬಂಧಿಸಿದಂತೆ ಪೊಲೀಸ್, ಕೇಂದ್ರ ಅಥವಾ ರಾಜ್ಯ ಸರ್ಕಾರಿ ಅಧಿಕಾರಿಗಳು ನೀಡುವ ಆದೇಶ ಉಲ್ಲಂಘಿಸಿದರೆ ಒಂದು / ಎರಡು ವರ್ಷಗಳ ಸೆರೆವಾಸ ವಿಧಿಸಬಹುದು. ಅಗತ್ಯವಸ್ತುಗಳನ್ನು ಅಕ್ರಮವಾಗಿ ಬಚ್ಚಿಟ್ಟರೆ ವರ್ಷಗಳವರೆಗಿನ ಸೆರೆವಾಸಕ್ಕೆ ಗುರಿಯಾಗಬಹುದು ಎಂದೂ ಕೇಂದ್ರ ಸರ್ಕಾರ ತಿಳಿಸಿತು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)



No comments:

Post a Comment