ಇಂದಿನ ಇತಿಹಾಸ History Today ಏಪ್ರಿಲ್ 20
2018: ನವದೆಹಲಿ: ಅಭೂತಪೂರ್ವ ಕ್ರಮ ಒಂದರಲ್ಲಿ ಕಾಂಗ್ರೆಸ್ ಮತ್ತು ಇತರ ೬ ವಿರೋಧ
ಪಕ್ಷಗಳು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ವಿರುದ್ಧ ’ದುರ್ವರ್ತನೆ’ ಮತ್ತು ಹುದ್ದೆಯ
’ದುರುಪಯೋಗ’ದ ಆರೋಪ ಮಾಡಿ ದೋಷಾರೋಪಣಾ ನೋಟಿಸ್ ನೀಡಿದವು. ವಿರೋಧ ಪಕ್ಷಗಳು ಉಪರಾಷ್ಟ್ರಪತಿ ಮತ್ತು
ರಾಜ್ಯ ಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ವಿರುದ್ಧ ದೋಷಾರೋಪ
ಹೊರಿಸುವ ಕ್ರಮ ಜರುಗಿಸಲು ಮೇಲ್ಮನೆಯ ೬೪ ಸದಸ್ಯರ ಸಹಿಗಳನ್ನು ಒಳಗೊಂಡ ನೋಟಿಸ್‌ನ್ನು ಸಲ್ಲಿಸಿದರು. ಭಾರತದಲ್ಲಿ ಈ ಹಿಂದೆ ಎಂದೂ ಯಾರೇ ಮುಖ್ಯ ನ್ಯಾಯಮೂರ್ತಿಯೂ
ದೋಷಾರೋಪಣೆಗೆ ಗುರಿಯಾಗಿರಲಿಲ್ಲ. ವಿರೋಧ ಪಕ್ಷಗಳು ಸಿಜೆಐ ವಿರುದ್ಧ ಸಲ್ಲಿಸಿದ ನೋಟಿಸ್ ಬಗ್ಗೆ ಉಪರಾಷ್ಟ್ರಪತಿ
ಕಾನೂನು ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ಪತ್ರಿಕಾಗೋಷ್ಠಿಯನ್ನು
ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ’ಅತ್ಯಂತ ಭಾರವಾದ ಹೃದಯದೊಂದಿಗೆ ದೋಪಾರೋಪಣಾ
ನೋಟಿಸ್ ಸಲ್ಲಿಸಲಾಗಿದೆ ಎಂದು ಹೇಳಿದರು. ’ಜನರ ಪ್ರತಿನಿಧಿಗಳಾಗಿ ನಾವು ಜನರಿಗೆ ಉತ್ತರದಾಯಿಗಳಾಗಿ
ಇರುವಂತೆಯೇ, ಮುಖ್ಯ ನ್ಯಾಯಮೂರ್ತಿಯನ್ನು ಉತ್ತರದಾಯಿಗಳನ್ನಾಗಿ ಮಾಡುವ ಅರ್ಹತೆ ನಮಗಿದೆ’ ಎಂದು ಅವರು
ನುಡಿದರು. ’ಕಾನೂನಿನ ಮುಖ್ಯಸ್ಥರು ಬೇರೆ ಯಾವುದೇ ಕಚೇರಿಯ ಮುಖ್ಯಸ್ಥರಿಗಿಂತ ಮಹತ್ವದ ವ್ಯಕ್ತಿ’ ಎಂದು
ಅವರು ನುಡಿದರು. ’ವಿಚಾರಣೆ ನಡೆಯುತ್ತದೆ ಮತ್ತು ಸತ್ಯ
ಮಾತ್ರವೇ ಗೆಲ್ಲುತ್ತದೆ ಎಂದು ನಾವು ಭರವಸೆ ಹೊಂದಿದ್ದೇವೆ. ನಮ್ಮ ನ್ಯಾಯಾಂಗ ದೃಢವಾಗಿ, ಕಾರ್‍ಯಾಂಗದಿಂದ
ಮುಕ್ತವಾಗಿ ಸ್ವತಂತ್ರವಾಗಿ ನಿಂತಾಗ ಮತ್ತು ತನ್ನ ಸಂವಿಧಾಬದ್ಧ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ,
ಭೀತಿ ಇಲ್ಲದೆ ಮತ್ತು ಯಾವುದೇ ಹಸ್ತಕ್ಷೇಪ ಇಲ್ಲದೆ ನಿರ್ವಹಿಸಿದಾಗ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ’
ಎಂದು ಸಿಬಲ್ ಹೇಳಿದರು. ದೋಪಾರೋಪಣಾ ನೋಟಿಸ್‌ನಲ್ಲಿ
೭೧ ಸಹಿಗಳಿದ್ದರೂ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಅದರಿಂದ ೭ ಹೆಸರುಗಳನ್ನು
ಅವರು ಮೇಲ್ಮನೆಯಿಂದ ನಿವೃತ್ತರಾಗಿರುವ ಕಾರಣ ಹೊರತು ಪಡಿಸುವಂತೆ ಸಭಾಪತಿಯವರನ್ನು ಕೋರಿದ್ದಾರೆ. ದೋಷಾರೋಪಣಾ
ನೋಟಿಸ್ ಸಲ್ಲಿಸಲು ರಾಜ್ಯಸಭೆಯ ಕನಿಷ್ಠ ೫೦ ಸದಸ್ಯರ ಅಗತ್ಯವಿದೆ. ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ಏನಿದ್ದರೂ,
ಪಕ್ಷ ಸಹೋದ್ಯೋಗಿಗಳ ನಿಲುವನ್ನು ಒಪ್ಪಿಲ್ಲ. ’ದೋಷಾರೋಪಣೆ ಅತ್ಯಂತ ಗಂಭೀರ ವಿಚಾರ, ಅದನ್ನು ಯಾವುದೇ
ತೀರ್ಪನ್ನು ಅಥವಾ ನ್ಯಾಯಾಲಯದ ಯಾವುದಾದರೂ ವಿಚಾರವನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕಾಗಿ ಮಾಡಬಾರದು
ಎಂದು ನಾನು ನಂಬುತ್ತೇನೆ. ವಿವಿಧ ಪಕ್ಷಗಳು ನಡೆಸಿದ ಸಭೆ ಮತ್ತು ಅಲ್ಲಿ ನಡೆದ ಮಾತುಕತೆಗೆ ನಾನು ಪಾಲುದಾರನಲ್ಲ.
ಆದ್ದರಿಂದ ದೋಷಾರೋಪಣೆ ಮಾಡಲು ಹೇಳಲಾಗುತ್ತಿರುವ ಕಾರಣ ಸಮರ್ಥನೀಯವೇ ಅಥವಾ ಅಲ್ಲವೇ ಎಂದು ನಾನು ಹೇಳುವುದು
ಪ್ರಾಮಾಣಿಕವಾಗುವುದಿಲ್ಲ’ ಎಂದು ಖುರ್ಷಿದ್ ನುಡಿದರು. ಕಾಂಗ್ರೆಸ್, ಎನ್ ಸಿಪಿ, ಸಿಪಿಐ(ಎಂ) ಮತ್ತು ಸಿಪಿಐ, ಎಸ್‌ಪಿ,
ಬಿಎಸ್ ಪಿ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷಗಳಿಗೆ ಸೇರಿದ ಸಂಸತ್ ಸದಸ್ಯರು
ನೋಟಿಸಿಗೆ ಸಹಿ ಮಾಡಿದ್ದಾರೆ. ಈ ಪಕ್ಷಗಳು ಇದಕ್ಕೆ ಮುನ್ನ ಸಂಸತ್ತಿನಲ್ಲಿ ಸಭೆ ಸೇರಿ ದೋಷಾರೋಪಣಾ
ನೋಟಿಸಿಗೆ ಅಂತಿಮ ರೂಪ ನೀಡಿದರು. ಸಂಸತ್ತಿನಲ್ಲಿ
ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ರಣ್ ದೀಪ್ ಸುರ್ಜಿವಾಲ,
ಸಿಪಿಐನ ಡಿ. ರಾಜಾ, ಎನ್ ಸಿಪಿಯ ವಂದನಾ ಚವಾಣ್ ಪಾಲ್ಗೊಂಡಿದ್ದರು. ಸೂಕ್ಷ್ಮ ಪ್ರಕರಣಗಳನ್ನು ಆಯ್ದ
ನ್ಯಾಯಮೂರ್ತಿಗಳಿಗೆ ನಿಯೋಜಿಸಲಾಗುತ್ತಿದೆ ಎಂದೂ ಅವರು ಆಪಾದಿಸಿದರು. ವಿಪಕ್ಷ ನಾಯಕರು ಮಾಡಿರುವ ಆರೋಪಗಳಲ್ಲಿ ಕೆಲವನ್ನು ಜನವರಿ
೪ರಂದು ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿದ್ದ ಸುಪ್ರೀಂಕೋರ್ಟಿನ ನಾಲ್ವರು ಉನ್ನತ ನ್ಯಾಯಮೂರ್ತಿಗಳು
ಪ್ರಸ್ತಾಪಿಸಿದ್ದರು. ರಾಜ್ಯಸಭೆಯಲ್ಲಿ ಮಂಡಿಸಲಾದ
ದೋಷಾರೋಪಣಾ ನಿರ್ಣಯವನ್ನು ಮೇಲ್ಮನೆಯ ಕನಿಷ್ಠ ೫೦ ಸಂಸತ್ ಸದಸ್ಯರು ಬೆಂಬಲಿಸಬೇಕು. ಲೋಕಸಭೆಯಲ್ಲಿ
ಇಂತಹ ನಿರ್ಣಯವನ್ನು ಕನಿಷ್ಠ ೧೦೦ ಸದಸ್ಯರು ಬೆಂಬಲಿಸಬೇಕು. ರಾಜ್ಯಸಭಾ ಸಭಾಪತಿಯವರಿಗೆ ದೋಷಾರೋಪಣಾ ನೋಟಿಸನ್ನು ಸಲ್ಲಿಸಿದ
ಬಳಿಕ, ಅವರು ಅದರಲ್ಲಿ ಅರ್ಹತೆ ಇದೆಯೇ ಅಥವಾ ಅಂತಹ ನಿರ್ಣಯವನ್ನು ಮಂಡಿಸಲು ಸೂಕ್ತ ನೆಲೆ ಇದೆಯೇ ಎಂದು
ಪರಿಶೀಲಿಸುವರು. ಅರ್ಹತೆ ಇದೆ ಎಂಬುದು ಅವರಿಗೆ ಖಚಿತವಾದಲ್ಲಿ ಅದನ್ನು ಪರಿಶೀಲಿಸಲು ಅವರು ಸಮಿತಿಯೊಂದನ್ನು
ರಚಿಸಬಹುದು ಅಥವಾ ಅವರು ಅದನ್ನು ತಿರಸ್ಕರಿಸಬಹುದು.
ಸದನದಲ್ಲಿ ದೋಷಾರೋಪಣಾ ನಿರ್ಣಯ ಮಂಡನೆಯಾದಲ್ಲಿ ರಾಷ್ಟ್ರದ ಇತಿಹಾಸದಲ್ಲೇ ಭಾರತದ ಮುಖ್ಯ ನ್ಯಾಯಮೂರ್ತಿ
ವಿರುದ್ಧ ಮಂಡಿಸಲಾದ ಪ್ರಪ್ರಥಮ ದೋಷಾರೋಪಣಾ ನಿರ್ಣಯ ಇದಾಗಲಿದೆ.
2018: ನವದೆಹಲಿ: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕು ಪದಕಗಳನ್ನು ಗೆದ್ದ
ರಾಷ್ಟ್ರದ ಏಕೈಕ ’ಚತುರ್ವಳಿ’ ಪದಕ ವಿಜೇತೆ ಮಣಿಕಾ ಭಾತ್ರ ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ
ನೀಡುವಂತೆ ಭಾರತದ ಟೇಬಲ್ ಟೆನಿಸ್ ಫೆಡರೇಶನ್ (ಟಿಟಿಎಫ್ ಐ) ಶಿಫಾರಸು ಮಾಡಿತು. ’ನಾವು ಈದಿನ ಮಣಿಕಾ
ಭಾತ್ರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿ ಪತ್ರ ಕಳಿಸಿದ್ದೇವೆ. ಆಸ್ಟ್ರೇಲಿಯಾದ ಗೋಲ್ಡ್
ಕೋಸ್ಟ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಇಂತಹ ಅಮೋಘ ಸಾಧನೆ ಮಾಡಿದ ಆಕೆಯನ್ನು (ಸರ್ಕಾರಿ)
ಸಮಿತಿ ನಿರ್ಲಕ್ಷಿಸಲಾಗದು’ ಎಂದು ಟಿಟಿಎಫ್ ಐ ಅಧಿಕಾರಿಯೊಬ್ಬರು ಹೇಳಿದರು. ಭಾತ್ರ ಅವರು ಭಾರತವನ್ನು
ಚೊಚ್ಚಲ ಸಿಂಗಲ್ಸ್ ಸ್ವರ್ಣ ಪದಕ ಪಡೆಯುವತ್ತ ಭಾರತದ ಚೊಚ್ಚಲ ತಂಡವನ್ನು ಏಕಾಂಗಿಯಾಗಿ ಒಯ್ಯುವ ಮೂಲಕ
ಗೋಲ್ಡ್ ಕೋಸ್ಟ್ ನಲ್ಲಿ ಇತಿಹಾಸ ನಿರ್ಮಿಸಿದ್ದರು.
೨೨ರ ಹರೆಯದ ಈ ಸಾಧಕಿ ಜಾಗತಿಕ ೪ನೇ ಸ್ಥಾನದ ಕ್ರೀಡಾಪಟು ಮತ್ತು ಒಲಿಂಪಿಕ್ ಪದಕ ವಿಜೇತೆ ಸಿಂಗಾಪುರದ
ಫೆಂಗ್ ಟಿಯಾನ್ವಿ ಅವರನ್ನು ಕ್ರೀಡಾಕೂಟದಲ್ಲಿ ಎರಡು ಬಾರಿ ಸೋಲಿಸಿದ್ದರು. ಇದಲ್ಲದೆ ಮೌಮಾ ದಆಸ್ ಅವರನ್ನು ಬದಿಯಲ್ಲಿ ಇರಿಸಿಕೊಂಡು
ಮಹಿಳಾ ಡಬಲ್ಸ್ ಬೆಳ್ಳಿಯನ್ನು ಗೆದ್ದಿದ್ದ ಭಾತ್ರ, ಮಿಕ್ಸೆಡ್ ಡಬಲ್ಸ್ ನಲ್ಲಿ ಜಿ. ಸೆಥಿಯನ್ ಜೊತೆಗೆ
ಕಂಚಿನ ಪದಕವನ್ನು ತಮ್ಮ ಬಗಲಿಗೆ ಏರಿಸಿಕೊಂಡಿದ್ದರು.
ಸ್ವೀಡನ್ನಿನಲ್ಲಿ ಏಪ್ರಿಲ್ ೨೯ರಂದು ನಡೆಯಲಿರುವ ಮುಂದಿನ ವರ್ಲ್ಡ ಟೀಮ್ ಚಾಂಪಿಯನ್ ಶಿಪ್
ಕೀಡಾ ಕೂಟದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ವಿರುದ್ಧ
ದೋಷಾರೋಪಣಾ ನೋಟಿಸನ್ನು ಕಾಂಗ್ರೆಸ್ ಮತ್ತು ಇತರ ಆರು ವಿರೋಧಪಕ್ಷಗಳು ಶುಕ್ರವಾರ ಉಪರಾಷ್ಟ್ರಪತಿ ಹಾಗೂ
ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ
ಸಲ್ಲಿಸಿದ್ದರೂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರದಂತೆ ಹಲವು ನಾಯಕರು ಅದಕ್ಕೆ ಸಹಿ ಹಾಕದೇ ಇರುವುದು
ಬೆಳಕಿಗೆ ಬಂದಿತು. ’ದೋಷಾರೋಪಣಾ ನೋಟಿಸ್ ಗಂಭೀರ ವಿಷಯವಾಗಿದ್ದು, ಯಾವುದೇ ತೀರ್ಪನ್ನು ಅಥವಾ ನ್ಯಾಯಾಲಯದ
ಯಾವದೇ ಒಂದು ಅಭಿಪ್ರಾಯವನ್ನು ಒಪ್ಪದೇ ಇರುವ ಕಾರಣಕ್ಕಾಗಿ ಅದನ್ನು ಮಾಡುವುದು ಸರಿಯಲ್ಲ. ಈ ಕುರಿತ
ಮಾತುಕತೆಗಳಲ್ಲಿ ನಾನು ಭಾಗೀದಾರನಲ್ಲ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ವಿತ್ತ ಸಚಿವ ಪಿ.
ಚಿದಂಬರಂ ಅವರೂ ಭಾರತದ ಮುಖ್ಯ ನ್ಯಾಯಮೂರ್ತಿ ವಿರುದ್ಧ ದೋಷಾರೋಪಣಾ ಕ್ರಮ ಜರುಗಿಸಲು ಹೊರಟ ಪಕ್ಷದ
ನಿಲುವಿನಿಂದ ದೂರ ನಿಂತರು. ’ಮನಮೋಹನ್ ಸಿಂಗ್ ಅವರು ಮಾಜಿ ಪ್ರಧಾನಿಯಾದ್ದರಿಂದ ಉದ್ದೇಶಪೂರ್ವಕವಾಗಿಯೇ
ನಾವು ಅವರನ್ನು ಇದರಲ್ಲಿ ಶಾಮೀಲುಗೊಳಿಸಲಿಲ್ಲ’ ಎಂದು ಕಪಿಲ್ ಸಿಬಲ್ ಸಮಜಾಯಿಷಿ ನೀಡಿದರು. ಮನಮೋಹನ್
ಸಿಂಗ್ ಅವರು ನೋಟಿಸಿಗೆ ಸಹಿ ಹಾಕಲು ನಿರಾಕರಿಸಿದರು ಎಂಬ ವದಂತಿಗಳನ್ನು ಅವರು ಖಂಡತುಂಡವಾಗಿ ತಳ್ಳಿಹಾಕಿದರು. ನೋಟಿಸಿಗೆ ಸಹಿ ಹಾಕದ ಇತರರ ಬಗ್ಗೆ ಕೇಳಲಾದ ಪ್ರಶ್ನೆಗೆ
ಸಿಬಲ್ ಅವರು ’ಕೆಲವು ವಿಷಯಗಳು ಬಾಕಿ ಉಳಿದಿರುವುದರಿಂದ ನಾವು ಇತರ ಕೆಲವನ್ನು ಮುಜುಗರಕ್ಕೆ ಈಡು ಮಾಡಲು
ಇಚ್ಛಿಸಲಿಲ್ಲ’ ಎಂದು ಸಿಬಲ್ ನುಡಿದರು. ಕಾಂಗ್ರೆಸ್,
ಎನ್ ಸಿಪಿ, ಸಿಪಿಐ(ಎಂ) ಮತ್ತು ಸಿಪಿಐ, ಎಸ್‌ಪಿ, ಬಿಎಸ್ ಪಿ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ
ಲೀಗ್ (ಐಯುಎಂಎಲ್) ಪಕ್ಷಗಳಿಗೆ ಸೇರಿದ ಸಂಸತ್ ಸದಸ್ಯರು ನೋಟಿಸಿಗೆ ಸಹಿ ಮಾಡಿದ್ದಾರೆ. ಈ ಪಕ್ಷಗಳು
ಇದಕ್ಕೆ ಮುನ್ನ ಸಂಸತ್ತಿನಲ್ಲಿ ಸಭೆ ಸೇರಿ ದೋಷಾರೋಪಣಾ ನೋಟಿಸಿಗೆ ಅಂತಿಮ ರೂಪ ನೀಡಿದ್ದರು. ಭಾರತದಲ್ಲಿ ಈ ಹಿಂದೆ ಎಂದೂ ಯಾರೇ ಮುಖ್ಯ ನ್ಯಾಯಮೂರ್ತಿಯೂ
ದೋಷಾರೋಪಣೆಗೆ ಗುರಿಯಾಗಿರಲಿಲ್ಲ. ವಿರೋಧ ಪಕ್ಷಗಳು ಸಿಜೆಐ ವಿರುದ್ಧ ಸಲ್ಲಿಸಿದ ನೋಟಿಸ್ ಬಗ್ಗೆ ಉಪರಾಷ್ಟ್ರಪತಿ
ಕಾನೂನು ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ.
2018: ನವದೆಹಲಿ: ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ದೋಷಾರೋಪಣಾ ಕ್ರಮವನ್ನು
’ರಾಜಕೀಯ ದಾಳ’ವಾಗಿ ಬಳಸುತ್ತಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಇತರ ೬ ವಿರೋಧ ಪಕ್ಷಗಳು ಭಾರತದ ಮುಖ್ಯ
ನ್ಯಾಯಮೂರ್ತಿ ದೀಪಕ್ ಮಿಶ್ರ ಅವರನ್ನು ದುರ್ವರ್ತನೆ ಮತ್ತು ಹುದ್ದೆಯ ದುರುಪಯೋಗ ಸೇರಿದಂತೆ ಐದು ಅಂಶಗಳಿಗೆ
ಸಂಬಂಧಿಸಿದಂತೆ ಆಪಾದನೆಗಳನ್ನು ಹೊರಿಸಿ ದೋಷಾರೋಪಣಾ ನೋಟಿಸ್ ನೀಡಿದ್ದಕ್ಕೆ ಪ್ರತಿಯಾಗಿ ಜೇಟ್ಲಿ ಈ
ವಾಗ್ದಾಳಿ ನಡೆಸಿದರು. ನ್ಯಾಯಮೂರ್ತಿ ಲೋಯ ಸಾವಿನ ಪ್ರಕರಣ ಕುರಿತ ೧೧೪ ಪುಟಗಳ ತೀರ್ಪನ್ನು ತಾವು ಓದಿದ್ದು,
’ಸಾರ್ವಜನಿಕ ಮತ್ತು ರಾಜಕೀಯ ಪ್ರಚಾರವಾಗಿ ಸುಳ್ಳುಗಳನ್ನು ಸೃಷ್ಟಿಸಲು ನಡೆಸಲಾದ ಸಂಚಿನ ಪ್ರತಿಯೊಂದು
ವಾಸ್ತವಾಂಶವನ್ನೂ ತೀರ್ಪು ಬಯಲುಗೊಳಿಸಿದೆ’ ಎಂದು ಹೇಳಿದರು. ರಾಷ್ಟ್ರೀಯ ರಾಜಕೀಯ ಪಕ್ಷಗಳ ಇತಿಹಾಸದಲ್ಲಿ ಹಿಂದೆಂದೂ ಕೆಲವು
ನಿವೃತ್ತ ನ್ಯಾಯಾಧೀಶರು ಮತ್ತು ಕೆಲವು ವಕೀಲರು ಕೆಲವು ಸುಳ್ಳುಗಳನ್ನು ಮುಂದುವರೆಸಲು ಸಂಚುಗಾರರಾದ
ಉದಾಹರಣೆ ಇಲ್ಲ ಎಂದು ಜೇಟ್ಲಿ ನುಡಿದರು. ಫೇಸ್ ಬುಕ್
ನಲ್ಲಿ ’ಜಜ್ ಲೋಯ ಡೆತ್ ಕೇಸ್- ದಿ ಒನ್ ದ್ಯಾಟ್ ಅಲ್ ಮೋಸ್ಟ್ ಕ್ರಿಯೇಟೆಡ್ ಜ್ಯೂಡಿಷಿಯಲ್ ಮ್ಯುಟಿನಿ’
ಶೀರ್ಷಿಕೆಯ ಸುದೀರ್ಘ ಪೋಸ್ಟ್ ಪ್ರಕಟಿಸಿದ ಸಚಿವರು ’ರಾಜ್ಯಸಭೆಯ ೫೦ ಸಹಿಗಳನ್ನು ಅಥವಾ ಲೋಕಸಭೆಯ ೧೦೦
ಸದಸ್ಯರ ಸಹಿಗಳನ್ನು ಕಪೂಲ ಕಲ್ಪಿತ ವಿಷಯಗಳಿಗಾಗಿ ಸಂಗ್ರಹಿಸುವುದು ಕಷ್ಟವೇನಲ್ಲ. ಆದರೆ ದುರ್ವರ್ತನೆಯನ್ನು
ಸಾಬೀತುಪಡಿಸುವಂತಹ ಪ್ರಕರಣವೇ ಇಲ್ಲದಿದ್ದಾಗ ಅಥವಾ ನಿಮ್ಮ ಕಡೆಯಲ್ಲಿ ಸಾಕಷ್ಟು ಸಂಖ್ಯೆಯ ಸದಸ್ಯರು
ಇಲ್ಲದೇ ಇದ್ದಾಗ, ಅಧಿಕಾರವನ್ನು ಬೆದರಿಕೆ ತಂತ್ರವಾಗಿ ಬಳಸುವುದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ
ಗಂಭೀರ ಬೆದರಿಕೆಯನ್ನು ಉಂಟು ಮಾಡುತ್ತದೆ’ ಎಂದು ಬರೆದರು. ಕಾಂಗ್ರೆಸ್ ಪಕ್ಷವು ’ಸೇಡಿನ ಅರ್ಜಿಯ’
ಮೊರೆ ಹೊಕ್ಕಿದೆ ಮತ್ತು ನ್ಯಾಯಮೂರ್ತಿಯನ್ನು ಬೆದರಿಸಲು ಯತ್ನಿಸುತ್ತಿದೆ’ ಎಂದು ಜೇಟ್ಲಿ ದೂರಿದರು. ’ಕಾಂಗ್ರೆಸ್ ಪಕ್ಷವು ನ್ಯಾಯಮೂರ್ತಿ ಲೋಯ ಪ್ರಕರಣದಲ್ಲಿ
ಕಟ್ಟಿದ ಸುಳ್ಳುಗಳು ಸಾಬೀತಾದ ಬಳಿಕ ಸಲ್ಲಿಸಿರುವ ಸೇಡಿನ ಅರ್ಜಿ ಇದು. ಇದು ನ್ಯಾಯಮೂರ್ತಿಯನ್ನು ಬೆದರಿಸುವ
ತಂತ್ರ ಮತ್ತು ಇತರ ನ್ಯಾಯಾಧೀಶರಿಗೆ ’ನೀವು ನಮ್ಮ ಅಭಿಪ್ರಾಯವನ್ನು ಒಪ್ಪದೇ ಇದ್ದರೆ ನಿಮ್ಮ ವಿರುದ್ಧ
ಸೇಡು ತೀರಿಸಲು ಐವತ್ತು ಸಂಸದರು ಸಾಕು ಎಂಬ ಸಂದೇಶ’ ಎಂದು ಜೇಟ್ಲಿ ತಮ್ಮ ಪೋಸ್ಟಿನಲ್ಲಿ ಬರೆದರು. ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ವಿರುದ್ಧ ದೋಷಾರೋಪಣೆಯನ್ನು
ಅವರು ’ಅಸಮರ್ಥರಾಗಿದ್ದಾಗ’ ಅಥವಾ ’ಸಾಬೀತಾದ ದುರ್ವರ್ತನೆ’ಯ ಪ್ರಕರಣ ಇದ್ದಾಗ ಮಾತ್ರ ಮಾಡಬಹುದು ಎಂಬುದನ್ನು
ಜೇಟ್ಲಿ ಕಾಂಗೆಸ್ಸಿಗೆ ನೆನಪಿಸಿದರು. ಈ ಮೂಲಕ ’ಅಡ್ಡಿಪಡಿಸುವವರ ಸಂಸ್ಥೆಯನ್ನು’ ಗುರುತಿಸಲು ಕಾಂಗ್ರೆಸ್
ಅಪೇಕ್ಷಿಸುತ್ತಿದ್ದ್ದು, ನ್ಯಾಯಾಲಯಗಳ ಬೆದರಿಸುವಿಕೆಯನ್ನು
ವಕಾಲತ್ತಿನ ಹೊಸ ರೂಪವನ್ನಾಗಿ ಮಾಡಿದೆ ಎಂದು ಸಚಿವರು
ಹೇಳಿದರು. ಅಡ್ಡಿ ಪಡಿಸುವವರ ಸಂಸ್ಥೆಯನ್ನು ಸುಳ್ಳು ಪ್ರಕರಣಗಳನ್ನು ಹೆಕ್ಕಿ ತೆಗೆದು, ಅದನ್ನೇ ಅತ್ಯಂತ
ಬದ್ಧತೆಯೊಂದಿಗೆ ಮುಂದುವರೆಸಿ, ’ಗೋಸ್ಪೆಲ್ ಸತ್ಯ’ ಎಂಬುದಾಗಿ ಅಂಗೀಕರಿಸುವ ಸಾರ್ವಜನಿಕ ಹಿತಾಸಕ್ತಿ
ಹೋರಾಟಗಾರರ ಸಂಸ್ಥೆ ಎಂಬುದಾಗಿ ಜೇಟ್ಲಿ ಬಣ್ಣಿಸಿದರು. ಈ ಹೋರಾಟಗಾರರಿಗೆ ಬಳಿಕ ಸುಳ್ಳುಗಳನ್ನು ಹರಡಲು
ಮಾಧ್ಯಮದ ಒಂದು ವರ್ಗ ನೆರವು ನೀಡುತ್ತದೆ ಎಂದೂ ಜೇಟ್ಲಿ ಬರೆದರು. ನ್ಯಾಯಾಧೀಶ ಲೋಯ ಅವರ ಸಾವಿನ ಸಂದರ್ಭಗಳ
ಬಗ್ಗೆ ಪ್ರಸ್ತಾಪಿಸಿದ ಜೇಟ್ಲಿ, ’ಸಂಬಂಧಪಟ್ಟ ವ್ಯಕ್ತಿಗಳು ಮತ್ತು ನ್ಯಾಯಾಧೀಶ ಲೋಯ ಅವರದ್ದು ಸಹಜ
ಸಾವು ಎಂಬುದಾಗಿ ಅಂಗೀಕರಿಸಿದ ಅವರ ಕುಟುಂಬ ಸದಸ್ಯರಿಂದ ಹೇಳಿಕೆಗಳನ್ನು ಪಡೆದ ಬಳಿಕವೇ ಸುಪ್ರೀಂಕೋರ್ಟ್
ಸಹಜ ಕಾರಣಗಳಿಗಾಗಿಯೇ ನ್ಯಾಯಾಧೀಶ ಲೋಯ ಸಾವು ಸಂಭವಿಸಿದೆ, ಅವರ ಸಾವಿನ ಸಂದರ್ಭಗಳಿಗೆ ಸಂಬಂಧಿಸಿದಂತೆ
ಯಾವುದೇ ಅನುಮಾನಾಸ್ಪದ ವಿಚಾರ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದರು.
2018: ಸೆಹೋರ್ (ಮಧ್ಯಪ್ರದೇಶ): ತಾನು
ಪ್ರೀತಿಸಿದ ಮಹಿಳೆ ಮದುವೆಯಾಗಲು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಯುವಕನೊಬ್ಬ ತಾನು ಆಕೆಯನ್ನು
ಮದುವೆಯಾಗುವ ಸಲುವಾಗಿಯೆ ಕದ್ದು ತಂದಿದ್ದ ೬.೭೪ ಲಕ್ಷ ರೂಪಾಯಿಗಳ ಪೈಕಿ ೫ ಲಕ್ಷ ರೂಪಾಯಿಗಳನ್ನು ಬೆಂಕಿ
ಹಚ್ಚಿ ನಾಶ ಪಡಿಸಿದ ಘಟನೆ ಘಟಿಸಿದೆ ಎಂದು ಪೊಲೀಸರು ತಿಳಿಸಿದರು. ಜಿತೇಂದ್ರ ಗೋಯಲ್ ಎಂಬ ೨೨ರ ಹರೆಯದ ತರುಣನೇ ಲಕ್ಷಾಂತರ ರೂಪಾಯಿ
ನಗದು ಹಣಕ್ಕೆ ಕಿಚ್ಚಿಟ್ಟ ಭೂಪ. ಫೈನಾನ್ಸ್ ಕಂಪೆನಿಯೊಂದರಲ್ಲಿ ಕ್ಯಾಷಿಯರ್ ಆಗಿದ್ದ ಈತನನ್ನು ಗುರುವಾರ
ಹಣಕದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದರು. ಗೋಯಲ್ ಏಪ್ರಿಲ್ ೧೮ರ ಬುಧವಾರ ತನ್ನ ಕಂಪೆನಿಯ ಲಾಕರ್
ನಿಂದ ೬.೭೪ ಲಕ್ಷ ರೂಪಾಯಿಗಳನ್ನು ಕದ್ದಿದ್ದ ಎಂದು ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ
ನಿರಂಜನ್ ಶರ್ಮ ಹೇಳಿದರು. ಕಂಪೆನಿಯ ಲಾಕರ್ ನಿಂದ ಹಣ ನಾಪತ್ತೆಯಾಗಿರುವುದು ಗೊತ್ತಾದ ತತ್ ಕ್ಷಣವೇ
ಕಂಪೆನಿಯ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದರು.
ಹಲವಾರು ಸುಳಿವುಗಳನ್ನು ಆಧರಿಸಿ ಪೊಲೀಸರು ಗೋಯಲ್ ನನ್ನು ಹರ್ದಾ ಜಿಲ್ಲೆಯಲ್ಲಿನ ಆತನ ಹುಟ್ಟೂರಿನಲ್ಲಿ
ಪತ್ತೆ ಹಚ್ಚಿ ಅಪರಾಧ ಘಟಿಸಿದ ೨೪ ಗಂಟೆಗಳ ಒಳಗಾಗಿ ಆತನನ್ನು ಬಂಧಿಸಿದರು. ಪ್ರಶ್ನಿಸಿದಾಗ ಗೋಯಲ್ ತಾನು ಪ್ರೀತಿಸಿದ್ದ ಮಹಿಳೆಯನ್ನು
ಮದುವೆಯಾಗಬೇಕೆಂಬ ಉದ್ದೇಶದಿಂದ ಹಣ ತೆಗೆದುಕೊಂಡೆ
ಎಂದು ಬಾಯಿಬಿಟ್ಟ. ಆದರೆ, ತಾನು ಮಹಿಳೆಯನ್ನು ಸಂಪರ್ಕಿಸಿದಾಗ ಆಕೆ ಆತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿ,
ತಾನು ಬೇರೊಬ್ಬನನ್ನು ಮದುವೆಯಾಗುತ್ತಿರುವುದಾಗಿ ಹೇಳಿದಳು ಎಂದು ಆತನ ತನ್ನ ಕಥೆ ಹೇಳಿದ. ಪ್ರೀತಿಸಿದ್ಧ ಮಹಿಳೆಯ ವರ್ತನೆಯಿಂದ ಆಘಾತಕ್ಕೆ ಈಡಾಗುವುದರ
ಜೊತೆಗೆ ಸಿಟ್ಟಿಗೆದ್ದ ಗೋಯಲ್, ತನ್ನ ಬಳಿ ಇದ್ದ ೫ ಲಕ್ಷ ರೂಪಾಯಿಗಳಿಗೆ ಬೆಂಕಿ ಹಚ್ಚಿದ. ಸುಟ್ಟ ಈ
ನೋಟುಗಳನ್ನು ನಸ್ರುಲ್ ಗಂಜ್ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಆತ ಆತ್ಮಹತ್ಯೆ ಮಾಡಿಕೊಳ್ಳಲೂ
ಯೋಜಿಸಿದ್ದ ಎಂದು ಪೊಲೀಸ್ ಅಧಿಕಾರಿ ನಿರಂಜನ್ ಶರ್ಮ ನುಡಿದರು. ’ಐದು ಲಕ್ಷ ರೂಪಾಯಿ ಮೌಲ್ಯದ ಸುಟ್ಟ ಬಹುತೇಕ ೫೦೦ ರೂಪಾಯಿ
ಮುಖಬೆಲೆಯ ಕರೆನ್ಸಿ ನೋಟುಗಳನ್ನು ನಾವು ಪತ್ತೆ ಹಚ್ಚಿದ್ದೇವೆ. ೪೬,೦೦೦ ರೂಪಾಯಿಗಳ ನಗದು ಹಣ ಮತ್ತು
೧,೨೮,೦೦೦ ರೂಪಾಯಿಗಳ ಇನ್ನೊಂದು ಕಟ್ಟು ಕಪಾಟಿನಲ್ಲಿ ಪತ್ತೆಯಾಗಿದೆ’ ಎಂದು ಶರ್ಮ ಹೇಳಿದರು. ಭಾರತೀಯ ದಂಡ ಸಂಹಿತೆಯ ಸಂಬಂಧಪಟ್ಟ ವಿಧಿಗಳ ಅಡಿಯಲ್ಲಿ ಗೋಯಲ್
ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ನುಡಿದರು.
2018: ಅಹಮದಾಬಾದ್: ಸಾಮೂಹಿಕ ಅತ್ಯಾಚಾರಕ್ಕೆ
ಒಳಗಾಗಿ ಬಳಿಕ ಕೊಲೆಯಾದ ೧೧ರ ಹರೆಯದ ಬಾಲಕಿಯ ತಾಯಿಯದು ಎಂದು ಶಂಕಿಸಲಾದ ಮಹಿಳೆಯ ಶವ, ಬಾಲಕಿಯ ಶವ
ಲಭಿಸಿದ ನಾಲ್ಕು ದಿನಗಳ ಬಳಿಕ ಪತ್ತೆಯಾಗಿದ್ದು, ಇಡೀ ಪ್ರಕರಣಕ್ಕೆ ’ಮಾನವ ಕಳ್ಳಸಾಗಣೆ’ಯ ಆಯಾಮ ಇದೆಯೇ
ಎಂದು ಗುಜರಾತ್ ಪೊಲೀಸರು ತನಿಖೆ ಆರಂಭಿಸಿದರು. ಏಪ್ರಿಲ್ ೬ರಂದು ಪತ್ತೆಯಾದ ಬಾಲಕಿಯ ಶವದ ಪ್ರಕರಣಕ್ಕೆ
ಸಂಬಂಧಿಸಿದಂತೆ ಮುಖ್ಯ ಆರೋಪಿ ಹರ್ಷವ್ ಗುರ್ಜರ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು
ಗುಜರಾತ್ ಗೃಹ ಸಚಿವ ಪ್ರದೀಪ್ ಸಿನ್ಹ ಜಡೇಜ ಪ್ರಕಟಿಸಿದರು. ಗುರ್ಜರನನ್ನು ರಾಜಸ್ಥಾನದ ಸವಾಯಿ ಮಾಧೋಪುರದ ಗಂಗಾಪುರದಲ್ಲಿ
ಬಂಧಿಸಲಾಗಿದೆ. ರಾಜಸ್ಥಾನದಿಂದ ಅವರು ತಂದಿದ್ದ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಯಿತು. ಪೊಲೀಸರ
ಪ್ರಕಾರ ಆರೋಪಿಗಳು ಅಪ್ರಾಪ್ತ ಬಾಲಕಿಯನ್ನು ರಾಜಸ್ಥಾನದಿಂದ ೩೦,೦೦೦ ರೂಪಾಯಿಗಳನ್ನು ನೀಡಿ ಖರೀದಿಸಿ
ತಂದಿದ್ದರು. ೧೧ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿರುವ ಮೂವರು ವ್ಯಕ್ತಿಗಳು, ಆಕೆಯ
ತಾಯಿಯನ್ನು ಕೂಡಾ ಕೊಂದು ಹಾಕಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದರು. ಅಪರಿಚಿತ ಮಹಿಳೆಯ ಶವ ಸೂರತ್ತಿನಲ್ಲಿ ಬಾಲಕಿಯ ಶವ ಬಳಿಕ ಪತ್ತೆಯಾಗಿದೆ
ಎಂದು ಸಚಿವರು ತಿಳಿಸಿದರು. ಮಹಿಳೆ ೨೦ ದಿನಗಳ ಹಿಂದೆ
ಕಣ್ಮರೆಯಾಗಿದ್ದಳೆನ್ನಲಾಗಿದ್ದು, ಆಕೆಯ ಶವ ಬಾಲಕಿಯ ಶವ ಪತ್ತೆಯಾದ ೪ ದಿನಗಳ ಬಳಿಕ ಲಭಿಸಿದೆ. ಆಕೆ
ಬಾಲಕಿಯ ತಾಯಿ ಎಂಬುದು ತನಿಖೆಗಳಿಂದ ಬೆಳಕಿಗೆ ಬಂದಿದೆ ಎಂದು ಸಚಿವರು ಹೇಳಿದರು. ಈ ಪ್ರಕರಣವು ಗುಜರಾತಿನ ಜನರ ಸಾಮೂಹಿಕ ಪ್ರಜ್ಞೆಯನ್ನೇ ಅಲುಗಾಡಿಸಿದೆ.
ಪ್ರಕರಣ ಅತ್ಯಂತ ಕ್ಲಿಷ್ಟವಾಗಿದೆ. ಇದು ಹುಲ್ಲುಗಾವಲಿನಲ್ಲಿ ಬಿದ್ದ ಸೂಜಿಯಂತೆ ಕಾಣುತ್ತಿದೆ ಎಂದು
ಅವರು ನುಡಿದರು. ಈ ವಾರದ ಆದಿಯಲ್ಲಿ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಸೂರತ್ ಪೊಲೀಸರನ್ನು ಸಂಪರ್ಕಿಸಿ
ಬಾಲಕಿ ತಮ್ಮ ಮಗು ಎಂದು ಹೇಳಿದ್ದರು. ಪೊಲೀಸರು ಆ ವ್ಯಕ್ತಿಯ ಡಿಎನ್ ಎ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ
ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದರು.
2018:
ಅಹಮದಾಬಾದ್: ಗುಜರಾತ್‌ನ ನರೋಡಾ ಪಾಟಿಯಾ ಕೇಸ್‌ನಲ್ಲಿ ಗುಜರಾತ್ ಹೈಕೋರ್ಟ್ ಭಾರತೀಯ ಜನತಾ ಪಕ್ಷದ ನಾಯಕಿ ಮಾಯಾ ಕೊದ್ನಾನಿ ಅವರನ್ನು ಖುಲಾಸೆಗೊಳಿಸಿತು.
ಆದರೆ ಬಜರಂಗ ದಳ ನಾಯಕ ಬಾಬು ಬಜರಂಗಿ ಅವರು ಅಪರಾಧಿ ಎಂಬ ತೀರ್ಪನ್ನು ಎತ್ತಿ ಹಿಡಿಯಿತು. ಕೊದ್ನಾನಿ ಮಾತ್ರವಲ್ಲದೆ ನರೋಡಾ ಪಾಟಿಯಾ ದೊಂಬಿ ಪ್ರಕರಣದ ಗಣಪತ್ ಛಾರಾ ಮತ್ತು ಹರೀಶ್ ಛಾರಾ ಅವರನ್ನು ಎಲ್ಲ ಆರೋಪಗಳಿಂದ ಗುಜರಾತ್ ಹೈಕೋರ್ಟ್ ಖುಲಾಸೆ ಗೊಳಿಸಿತು. 2002ರ ಫೆ.27ರಂದು ಗೋದ್ರಾ ಸ್ಟೇಶನ್ನಲ್ಲಿ ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಕೋಚ್ಗೆ ಬೆಂಕಿ ಹಾಕಲಾದುದನ್ನು ಅನಸರಿಸಿ ನಡೆದಿದ್ದ ನರೋಡಾ ಪಾಟಿಯಾ ನರಮೇಧದಲ್ಲಿ ಕನಿಷ್ಠ 97 ಮುಸ್ಲಿಮರನ್ನು ಹತ್ಯೆಗೈಯಲಾಗಿತ್ತು. ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಬೆಂಕಿಗೆ 58 ಹಿಂದೂ ಕರಸೇವಕರು ಸುಟ್ಟು ಕರಕಲಾಗಿದ್ದರು. ನರೋಡಾ
ಪಾಟಿಯಾ ನರಮೇಧ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಹರ್ಷ
ದೇವಾನಿ ಮತ್ತು ನ್ಯಾಯಮೂರ್ತಿ ಎ ಎಸ್ ಸುಪೇಹಿಯಾ ಅವರನ್ನು ಒಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು 2017ರ ಆಗಸ್ಟ್‌ನಲ್ಲಿ ವಿಚಾರಣೆಯನ್ನು ಮುಗಿಸಿ ಆದೇಶವನ್ನು ಕಾಯ್ದಿರಿಸಿತ್ತು. 2018: ನವದೆಹಲಿ : 1993ರ ಮುಂಬಯಿ ಸ್ಫೋಟದ ಸಂಚುಕೋರ ಮತ್ತು ಡಿ ಕಂಪೆನಿ ಬಾಸ್ ಆಗಿರುವ ಉಗ್ರ ದಾವೂದ್ ಇಬ್ರಾಹಿಂ ಅಕ್ರಮ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತು. ಮುಂಬಯಿಯಲ್ಲಿನ ದಾವೂದ್ ಒಡೆತನದ ವಸತಿ ಕಟ್ಟಡವನ್ನು ಮುಟ್ಟು ಗೋಲು ಹಾಕದಂತೆ ದಾವೂದ್ ತಾಯಿ ಅಮೀನಾ ಬೀ (ವಿಧಿವಶರಾಗಿರುವ ಇವರ ಕಾನೂನುಸಮ್ಮತ ಪ್ರತಿನಿಧಿಗಳು) ಮತ್ತು ಸಹೋದರಿ ಹಸೀನಾ ಇಬ್ರಾಹಿಂ ಪಾರ್ಕ್‌ರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಜಸ್ಟಿಸ್ ಆರ್ ಕೆ ಅಗ್ರವಾಲ್ ನೇತ್ರತ್ವದ ಪೀಠ ವಜಾಗೊಳಿಸಿತು. ಈ ವಸತಿ ಕಟ್ಟಡಗಳ ಸರ್ಕಾರ ವಶಕ್ಕೆ ಪಡೆಯುವ ಪ್ರಕ್ರಿಯೆಯು ಕಾನೂನು ಬಾಹಿರವಾಗಿದ್ದು ಇದರ ಮುಟ್ಟುಗೋಲಿಗೆ ಸಂಬಂಧಿಸಿ ತಮಗೆ ಯಾವುದೇ ನೊಟೀಸ್ ಜಾರಿ ಮಾಡಲಾಗಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ದೆಹಲಿ ಹೈಕೋರ್ಟ್ ತಮ್ಮ ಅರ್ಜಿಯನ್ನು ಕಳ್ಳಸಾಗಣೆಗಾರರು ಮತ್ತು ವಿದೇಶ ವಿನಿಮಯ ಅಕ್ರಮ ನಡೆಸುವವರ ವಿರುದ್ಧ (ಆಸ್ತಿ ಮುಟ್ಟುಗೋಲು) ಕಾಯಿದೆಯಡಿ ತಮ್ಮ ಅರ್ಜಿಯನ್ನು ತಿರಸ್ಕರಿಸಿತ್ತು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು. ದಾವೂದ್ ಇಬ್ರಾಹಿಂ ಒಡೆತನದಲ್ಲಿ ಮುಂಬಯಿಯ ನಾಗಪಾಡದಲ್ಲಿ ಒಟ್ಟು ಏಳು ವಸತಿ ಕಟ್ಟಡ ಇದೆ. ಇವುಗಳಲ್ಲಿ ಎರಡು ಆತನ ತಾಯಿ ಅಮೀನಾ ಅವರ ಹೆಸರಲ್ಲಿದೆ; ಉಳಿದ ಐದು ಹಸೀನಾ ಅವರ ಹೆಸರಲ್ಲಿದೆ. ಆದರೆ ಇವೆಲ್ಲವನ್ನೂ ದಾವೂದ್ ಇಬ್ರಾಹಿಂ ಅಕ್ರಮವಾಗಿ ಕಲೆ ಹಾಕಿರುವುದರಿಂದ ಅದನ್ನು ವಶಪಡಿಸಿಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಕೋರ್ಟ್ ಹೇಳಿತು.
2009: ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸರ್ವಋತು ಬೇಹುಗಾರಿಕೆ ಉಪಗ್ರಹ 'ರಿಸ್ಯಾಟ್-2' ಹಾಗೂ ಶೈಕ್ಷಣಿಕ ಉದ್ದೇಶದ 'ಅನುಸ್ಯಾಟ್' ಉಪಗ್ರಹಗಳು ಈದಿನ ಬೆಳಿಗ್ಗೆ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಚಿಮ್ಮಿದವು. ಮಂಜು ಹಾಗೂ ಮೋಡ ಮುಸುಕಿದ ಆಕಾಶದಲ್ಲಿ ಹಗಲು-ರಾತ್ರಿಯೂ ಭೂಮಿಯ ಚಿತ್ರಗಳನ್ನು ಸೆರೆ ಹಿಡಿಯಬಲ್ಲ 'ರಿಸ್ಯಾಟ್-2' ಉಡಾವಣೆಯಿಂದ ಭದ್ರತಾ ಉದ್ದೇಶದ ಸರ್ವೇಕ್ಷಣಾ ಸಾಮರ್ಥ್ಯವನ್ನು ಇಮ್ಮಡಿಸಿತು. ಆದರೆ ಉಡಾವಣೆಯ ನಂತರ ವರದಿಗಾರರೊಂದಿಗೆ ಮಾತನಾಡಿದ ಇಸ್ರೊ ಅಧ್ಯಕ್ಷ ಮಾಧವನ್ ನಾಯರ್, ರಿಸ್ಯಾಟ್-2 ಬೇಹುಗಾರಿಕೆ ಉಪಗ್ರಹ ಎಂಬುದನ್ನು ಅಲ್ಲಗಳೆದರು.
2009: ಕೆರೆಬಿಯನ್ ದ್ವೀಪ ಜಮೈಕಾದ ಮೊಂಟೆಗೊ ಕೊಲ್ಲಿಯಲ್ಲಿನ ಸಂಗ್‌ಸ್ಟರ್ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣದಿಂದ ಕೆನಡಾದ ಹಲಿಫೆಕ್ಸ್‌ಗೆ ತೆರಳಲು ಸಿದ್ಧವಾಗಿದ್ದ ಕೇನ್‌ಜೆಟ್ ವಿಮಾನದ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಏಕೈಕ ಬಂದೂಕುಧಾರಿ ಎಲ್ಲಾ 180 ಪ್ರಯಣಿಕರನ್ನು ಬಿಡುಗಡೆ ಮಾಡಿ, ಐವರು ಸಿಬ್ಬಂದಿಯನ್ನು ಮಾತ್ರ ಒತ್ತೆ ಇರಿಸಿಕೊಂಡ.
2009: ಎಲ್‌ಟಿಟಿಇ ನಿಯಂತ್ರಿತ ಪ್ರದೇಶದಿಂದ ಸುಮಾರು 35000 ನಾಗರಿಕರು ಗುಳೆ ಹೊರಟಿದ್ದು, ಇನ್ನು 24 ಗಂಟೆಗಳ ಅವಧಿಯಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಮತ್ತು ಆತನ ಸಹಚರರು ಶರಣಾಗಬೇಕು ಎಂದು ಶ್ರೀಲಂಕಾ ಅಧ್ಯಕ್ಷ ಮಹೀಂದಾ ರಾಜಪಕ್ಸೆ ಗಡುವು ನೀಡಿದರು. ಇದೇ ವೇಳೆ ಗುಂಡು ಹಾರಾಟ ನಿಷೇಧ ವಲಯದಲ್ಲಿ ಮೂರುಪ್ರತ್ಯೇಕ ಮಾನವ ಬಾಂಬ್ ಸ್ಫೋಟಿಸಿದ ಘಟನೆಯಲ್ಲಿ ಕನಿಷ್ಠ 17 ನಾಗರಿಕರು ಮೃತಪಟ್ಟರು.
2009: ಸೂಕ್ಷ್ಮ ಕೆಲಸ ಮತ್ತು ವಿನ್ಯಾಸಕ್ಕೆ ಹೆಸರಾದ ಬನಾರಸ್ ಸೀರೆ ಬೌದ್ಧಿಕ ಆಸ್ತಿ ಹಕ್ಕು ಪಡೆಯಲು ಕಾದಿದ್ದು, ವಾರಣಾಸಿಯ ಒಂಬತ್ತು ಸಂಸ್ಥೆಗಳು ಈ ಕೈಮಗ್ಗದ ಜವಳಿಗೆ ಭೌಗೋಳಿಕ ವೈಶಿಷ್ಟ್ಯ ಪಡೆಯಲು ಯತ್ನಿಸಿದವು. ಬನಾರಸ್ ಬನ್‌ಕಾರ್ ಸಮಿತಿ ಇತರ ಎಂಟು ಸಂಸ್ಥೆಗಳೊಂದಿಗೆ ಭೌಗೋಳಿಕ ಸೂಚಿ (ಜಿಯಾಗ್ರಫಿಕಲ್ ಇಂಡೆಕ್ಸ್-ಜಿ.ಐ) ನೋಂದಾವಣೆಗೆ ಅರ್ಜಿ ಸಲ್ಲಿಸಿತು.. ಈ ಮೂಲಕ ಬನಾರಸ್ ಬ್ರೊಕೇಡ್ ಮತ್ತು ಸೀರೆಗಳು ತಮ್ಮೊಂದಿಗೆ 'ಜಿಐ' ಪದವನ್ನೂ ತಗುಲಿಸಿಕೊಳ್ಳಲು ಕಾತರಿಸಿದವು. ಬ್ರೊಕೇಡ್‌ಗಳು ಕೈಮಗ್ಗದಲ್ಲೇ ನೇಯ್ದ ಭಾರಿ ರೇಷ್ಮೆ ವಸ್ತ್ರ. ವಾರಣಾಸಿಯನ್ನು ಇದರ ಉತ್ಪಾದನೆಯ ಕೇಂದ್ರ ಎಂದು ಪರಿಗಣಿಸಲಾಯಿತು.
2009: ಎಲ್‌ಟಿಟಿಇ ನಾಯಕ ವಿ. ಪ್ರಭಾಕರನ್ ಉಗ್ರನಲ್ಲ ಎಂದು ಹೇಳಿಕೆ ನೀಡಿದ ಮಾರನೇ ದಿನವೇ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಸಂಪೂರ್ಣ ರಾಗ ಬದಲಿಸಿ, ಎಲ್‌ಟಿಟಿಇ ಉಗ್ರರ ಸಂಘಟನೆಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಪ್ರಭಾಕರನ್ ಉಗ್ರನಲ್ಲ, ಎಲ್‌ಟಿಟಿಇ ಉಗ್ರರ ಸಂಘಟನೆಯಲ್ಲ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕರುಣಾನಿಧಿ ಹೇಳಿದ್ದರು.. ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿ ತಮಿಳುನಾಡಿನಲ್ಲಿ ರಾಜಕೀಯ ಬಿರುಗಾಳಿ ಎದ್ದಿತ್ತು. ಪರಿಣಾಮವಾಗಿ ಕರುಣಾನಿಧಿ ಎಲ್ ಟಿ ಟಿಇಯನ್ನು ಖಂಡಿಸಿ ಹೇಳಿಕೆ ನೀಡಿದೆ. ತಮ್ಮ ಹೇಳಿಕೆಯನ್ನು ತಿರುಚಲಾಗಿತ್ತು. ಎಲ್‌ಟಿಟಿಇ ಪ್ರತ್ಯೇಕತಾವಾದಿ ಗುಂಪಾಗಿ ಹೋರಾಟ ಆರಂಭಿಸಿತ್ತು. ಈಗ ಅದು ಉಗ್ರರ ಸಂಘಟನೆಯಾಗಿದೆ. ಅಲ್ಲದೇ ಶ್ರೀಪೆರಂಬುದೂರ್ ಘಟನೆಯನ್ನು ಯಾರೂ ಮರೆತಿಲ್ಲ.' ಎಂದು ಡಿಎಂಕೆ ನಾಯಕ ಹೇಳಿದರು.
2009: ವಿವಾದಗಳಿಂದ ಕೂಡಿದ್ದ ಐದು ವರ್ಷಗಳ ಅವಧಿಯನ್ನು ಪೂರೈಸಿ ಈದಿನ ನಿವೃತ್ತರಾದ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ, ತಮ್ಮ ಉತ್ತರಾಧಿಕಾರಿ ಚಾವ್ಲಾ ವಿರುದ್ಧ ಟೀಕೆ ಮಾಡಿರುವುದಕ್ಕೆ ಸ್ವಲ್ಪವೂ ವಿಷಾದವಿಲ್ಲ ಎಂದು ಹೇಳಿದರು. ಕೆಲ ತಿಂಗಳ ಹಿಂದೆ ಗೋಪಾಲಸ್ವಾಮಿ ತಮ್ಮ ಸಹೋದ್ಯೋಗಿ ನವೀನ್ ಚಾವ್ಲಾ ಕಾಂಗ್ರೆಸ್ ಪರ ಮೃದು ಧೋರಣೆ ಹೊಂದಿದ್ದಾರೆ ಎಂದು ಟೀಕಿಸಿದ್ದರು. ಅವರನ್ನು ಹುದ್ದೆಯಿಂದ ಕಿತ್ತು ಹಾಕುವಂತೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಶಿಫಾರಸು ಪತ್ರ ಕಳುಹಿಸಿದ್ದರು. ಬೆಲ್ಜಿಯಂ ಸರ್ಕಾರದ ಪೌರ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು (ವಿಚಾರಣೆಗೆ ಒಳಪಡಿಸಿದ್ದಲ್ಲಿ ಸೋನಿಯಾ ಚುನಾವಣೆಗೆ ಸ್ಪರ್ಧಿಸುವಂತಿರಲಿಲ್ಲ) ಎಂಬ ವಾದ ಮಂಡಿಸಿದರೂ, ಅವರ ಸಹೋದ್ಯೋಗಿಗಳಾದ ಚಾವ್ಲಾ ಹಾಗೂ ಎಸ್.ವೈ. ಖುರೇಷಿ ಗೋಪಾಲಸ್ವಾಮಿ ಅವರ ವಾದವನ್ನು ಪುರಸ್ಕರಿಸಿರಲಿಲ್ಲ.
2009: ಸಿಖ್ ವಿದ್ಯಾರ್ಥಿನಿಯೊಬ್ಬಳು ಕಡಗ ಧರಿಸುವುದಕ್ಕೆ ನಿಷೇಧ ಹೇರಿದ್ದ ಶಾಲೆಯೊಂದಕ್ಕೆ ಲಂಡನ್ ಹೈ ಕೋರ್ಟ್ ಕಾನೂನು ವೆಚ್ಚ ಸೇರಿದಂತೆ ಒಟ್ಟು 20 ಲಕ್ಷ ಪೌಂಡ್ ಮೊತ್ತದ ದಂಡ ಕಟ್ಟುವಂತೆ ಆದೇಶಿಸಿತು. ವೇಲ್ಸ್‌ನ ಅಬೆರ್‌ಡೇರ್ ಬಾಲಕಿಯರ ಶಾಲೆಯು 15 ವರ್ಷ ವಯಸ್ಸಿನ ಸಾರಿಕ ವಾಟ್‌ಕಿನ್ಸ್ ಸಿಂಗ್ ಎಂಬ ವಿದ್ಯಾರ್ಥಿನಿಗೆ ಸಿಖ್ ಧರ್ಮದ 5 ಲಾಂಛನಗಳಲ್ಲಿ ಒಂದಾದ ಕಡಗ ಧರಿಸುವುದಕ್ಕೆ ನಿಷೇಧ ಹೇರಿತ್ತು. ಶಾಲೆಯ ಈ ನಿರ್ಧಾರದ ವಿರುದ್ಧದ ಕಾನೂನು ಹೋರಾಟ ಯಶಸ್ವಿಯಾಗಿ ನಿಷೇಧ ತೆರವುಗೊಳಿಸುವುದು ಮಾತ್ರವಲ್ಲದೆ, ಕೋರ್ಟ್ ವೆಚ್ಚವೂ ಸೇರಿದಂತೆ ಶಾಲೆಯು ಈಗ ದೊಡ್ಡ ಮೊತ್ತದ ದಂಡವನ್ನು ಪಾವತಿಸಬೇಕಾಗಿದೆ ಎಂದು “ಡೈಲಿ ಎಕ್ಸ್‌ಪ್ರೆಸ್’ ದೈನಿಕ ವರದಿ ಮಾಡಿತು.. ಇಲ್ಲಿನ ಮಾನವ ಹಕ್ಕುಗಳ ಹೋರಾಟ ಸಂಘಟನೆಯು ಪರವಾಗಿ ನ್ಯಾಯಕ್ಕಾಗಿ ಹೋರಾಟ ನಡೆಸಿತ್ತು. ಈ ಶಾಲೆ ಕಾನೂನು ಹೋರಾಟಕ್ಕಾಗಿ 76,000 ಪೌಂಡ್ ಮೊತ್ತವನ್ನು ವೆಚ್ಚ ಮಾಡಿತ್ತು. ವಿದ್ಯಾರ್ಥಿನಿಯನ್ನು ಕಳೆದ ವರ್ಷದ ಪ್ರಾರಂಭದಲ್ಲಿ ಶಾಲೆಯಿಂದ ಹೊರ ಹಾಕಲಾಗಿತ್ತು.
2009: ಐದು ವರ್ಷಗಳ ಅವಧಿಗೆ ಆಕ್ಸಿಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾಗಿ ಶಿಖಾ ಶರ್ಮಾ ಅವರನ್ನು ನೇಮಕ ಮಾಡಿರುವುದಾಗಿ ಬ್ಯಾಂಕು ತಿಳಿಸಿತು. ಆಕ್ಸಿಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಜೆ. ನಾಯಕ್ ಅವರ ಬದಲಿಗೆ ಐಸಿಐಸಿಐ ಸಮೂಹದ ಲೈಫ್ ಇನ್ಶೂರೆನ್ಸ್ ವ್ಯವಹಾರದ ಮುಖ್ಯಸ್ಥರಾಗಿದ್ದ ಶಿಖಾ ಅವರನ್ನು ನೇಮಿಸಲಾಯಿತು.
2008: ಹೊಟ್ಟೆಪಾಡಿಗಾಗಿ ಹಾಗೂ ಔಷಧಿ ಖರ್ಚು ಭರಿಸುವ ಸಲುವಾಗಿ ಖ್ಯಾತ ಹಿಂದಿ ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ ವಯೋವೃದ್ಧ ಅಮರ ಕಾಂತ್ (83) ಅವರು 2007ರಲ್ಲಿ ದೊರೆತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ತಮಗೆ ಸಂದ ಪ್ರಶಸ್ತಿ ಪದಕಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು. ಈ ಹಿಂದೆ ಬಡತನದ ಕಾರಣ ಪುಡಿಗಾಸಿಗಾಗಿ ಅವರು ತಮ್ಮ ಕೃತಿಗಳ ಹಸ್ತಪ್ರತಿಗಳನ್ನು ಮಾರಾಟ ಮಾಡಿದ್ದರು. ಉತ್ತರ ಪ್ರದೇಶ ಬಲಿಯಾ ಪಟ್ಟಣದವರಾದ ಅಮರ ಕಾಂತ್ 1942ರಲ್ಲಿ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' (ಕ್ವಿಟ್ ಇಂಡಿಯಾ) ಚಳವಳಿಯಲ್ಲಿ ಭಾಗವಹಿಸಿದ್ದರು. ತಮ್ಮ ಸಾಧನೆಗಾಗಿ ಇವರು ರಾಜ್ಯ ಸರ್ಕಾರದಿಂದ ಮಹಾತ್ಮಗಾಂಧಿ ಪ್ರಶಸ್ತಿ ಹಾಗೂ ಸಾಹಿತ್ಯ ಭೂಷಣ ಪ್ರಶಸ್ತಿಯನ್ನೂ ಪಡೆದಿದ್ದರು.
2008: ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ ಉತ್ತರ ಪ್ರದೇಶದ ವಕ್ಫ್ ಸಚಿವ ಶಹಜಲ್ ಇಸ್ಲಾಮ್ ಅನ್ಸಾರಿ ಮತ್ತು ಅವರ ಭದ್ರತಾ ಸಿಬ್ಬಂದಿ 3000 ರೂಪಾಯಿ ದಂಡ ತೆತ್ತ ಘಟನೆ ನಡೆಯಿತು. ಸಚಿವರು ಮತ್ತು ಸಿಬ್ಬಂದಿ ಹಿಂದಿನ ದಿನ ಲಕ್ನೋ- ದೆಹಲಿ ಶತಾಬ್ದಿ ಏಕ್ಸ್ಪ್ರೆಸ್ ರೈಲಿನ ವಿಶೇಷ ಎಕ್ಸಿಕ್ಯೂಟಿವ್ ವರ್ಗದಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನ ಟಿಕೆಟ್ ಪರೀಕ್ಷಕರು ಟಿಕೆಟ್ ತೋರಿಸುವಂತೆ ಕೇಳಿದಾಗ ಸಚಿವರು ತಮ್ಮ ಬಳಿ ಇದ್ದ ಟಿಕೆಟಿನ ಜೆರಾಕ್ಸ್ ಪ್ರತಿ ತೋರಿಸಿದರು. ಆದರೆ ಮೂಲ ಟಿಕೆಟ್ ತೋರಿಸಲು ವಿಫಲರಾದರು.
2008: ಮರಾಠಿಯ ಪ್ರಸಿದ್ಧ ಜಾನಪದ ಮತ್ತು ಶಿಕ್ಷಣತಜ್ಞೆ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯೆ ಡಾ. ಸರೋಜಿನಿ ಬಾಬರ್ (87) ಅವರು ತಮ್ಮ ದೀರ್ಘ ಅನಾರೋಗ್ಯದಿಂದಾಗಿ ಈದಿನ ತಡರಾತ್ರಿ ಪುಣೆಯಲ್ಲಿ ನಿಧನರಾದರು. ಅವರು ಅವಿವಾಹಿತರಾಗಿದ್ದರು. ಅವರು `ಮರಾಠಿ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ' ವಿಷಯಕ್ಕೆ ಡಾಕ್ಟರೇಟ್ ಪಡೆದಿದ್ದರು. ಮರಾಠಿ ಜಾನಪದ ಸಾಹಿತ್ಯ ಮತ್ತು ಸಾಮಾಜಿಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಕಳೆದ 50 ವರ್ಷಗಳಿಂದ ಏಕಾಂಗಿಯಾಗಿ `ಸಮಾಜ್ ಶಿಕ್ಷಣ್ ಮಾಲಾ' ಮಾಸಿಕ ಪತ್ರಿಕೆಯನ್ನು ಅವರು ನಡೆಸುತ್ತಿದ್ದರು. ಎರಡು ಅವಧಿಗೆ ಮಹಾರಾಷ್ಟ್ರ ವಿಧಾನಸಭೆಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ಸರೋಜಿನಿ ಅವರ ಜೀವನಸಾಧನೆ ಪರಿಗಣಿಸಿ ಪುಣೆ ವಿಶ್ವವಿದ್ಯಾಲಯ `ಜೀವನ್ ಸಾಧನಾ ಗೌರವ್ ಪುರಸ್ಕಾರ' ನೀಡಿ ಗೌರವಿಸಿತ್ತು.
2008: ವ್ಯಕ್ತಿಯೊಬ್ಬನ ಉಪನಾಮ (ಸರ್ ನೇಮ್) ಆ ವ್ಯಕ್ತಿಯ ಜಾತಿ ಸೂಚಕ ಎಂದು ಯಾವತ್ತೂ ಪರಿಗಣಿಸುವಂತಿಲ್ಲ ಎಂದು ಮುಂಬೈ ಹೈಕೋರ್ಟ್ ತೀರ್ಪು ನೀಡಿತು. ದೀಪಿಕಾ ನಂದನವರ್ ಎಂಬ ಯುವತಿ ತಾನು `ಹಾಲ್ಬಿ' (ಪರಿಶಿಷ್ಟ ಪಂಗಡ) ಪಂಗಡಕ್ಕೆ ಸೇರಿದವಳಾಗಿದ್ದು, ತನ್ನದೇ ಉಪನಾಮ ಹೊಂದಿದ್ದ ಇತರ 29 ಜನರ ಮೀಸಲಾತಿ ಮಾನ್ಯತೆಯನ್ನು ರದ್ದುಪಡಿಸಲಾಗಿದೆ. ಆದರೆ ತನಗೆ ಈ ಸೌಲಭ್ಯ ಸಿಗಬೇಕು ಎಂದು ಹೇಳಿದ್ದಳು. ಆದರೆ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ರೋಷನ್ ದಲ್ವಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ರೀತಿಯ ಹೋಲಿಕೆ ಮಾಡುವುದನ್ನು ಆಕ್ಷೇಪಿಸಿ, ಈ ಇತರ ನಂದನವರುಗಳು ಯುವತಿಯ ರಕ್ತಸಂಬಂಧಿಗಳು ಅಲ್ಲವಾದ ಕಾರಣ ಈಕೆಯ ಜಾತಿ ನಿರ್ಧಾರದಲ್ಲಿ ಇತರರ ಜಾತಿ ವಿಷಯ ಪ್ರಾಮುಖ್ಯ ಪಡೆಯುವುದ್ಲಿಲ ಎಂದು ಹೇಳಿತು.
2008: ಬಿಹಾರ ವಿಧಾನ ಸಭೆ ವಿಸರ್ಜಿಸುವಂತೆ ತಾವು ನೀಡಿದ ಆದೇಶ ಅಸಾಂವಿಧಾನಿಕವಾದುದು ಎಂದು ಸುಪ್ರೀಂಕೋರ್ಟ್ 2005ರಲ್ಲಿ ತೀರ್ಪು ನೀಡಿದ್ದಾಗ ರಾಷ್ಟ್ರಪತಿ ಕಲಾಂ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದರು ಎಂಬುದು ಬಹಿರಂಗಗೊಂಡಿತು. ಕಲಾಂ ರಾಷ್ಟ್ರಪತಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿದ್ದ ಪಿ.ಎಂ. ನಾಯರ್ ಈ ಅಂಶವನ್ನು ಬಹಿರಂಗಪಡಿಸಿದರು. ಸುಪ್ರೀಂಕೋರ್ಟ್ ತೀರ್ಪಿನಿಂದ ನೊಂದ ಕಲಾಂ ತಮ್ಮ ರಾಜೀನಾಮೆ ಪತ್ರ ಸಿದ್ಧಪಡಿಸಿದ್ದರೂ ಕೊನೆಗೆ ಅದನ್ನು ಕೈಬಿಟ್ಟರು ಎಂದು ನಾಯರ್, `ಕಲಾಂ ಎಫೆಕ್ಟ್; ಮೈ ಇಯರ್ಸ್ ವಿದ್ ಪ್ರೆಸಿಡೆಂಟ್' ಎಂಬ ತಮ್ಮ ಕೃತಿಯಲ್ಲಿ ಬಹಿರಂಗಪಡಿಸಿದರು.
2008: ನೇಪಾಳದಲ್ಲಿ ಅಸ್ತಿತ್ವಕ್ಕೆ ಬರಲಿರುವ ಸರ್ಕಾರವನ್ನು ತಾವೇ ಮುನ್ನಡೆಸಲಿರುವುದಾಗಿ ಮಾವೋವಾದಿ ನಾಯಕ ಪ್ರಚಂಡ ಕಠ್ಮಂಡುವಿನಲ್ಲಿ ಘೋಷಿಸಿದರು.
2008: ಕುಡಿದ ಮತ್ತಿನಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಟ್ಯಾಕ್ಸಿ ಚಾಲಕನನ್ನು `ಇರಾಕಿ ಭಯೋತ್ಪಾದಕ' ಎಂದು ನಿಂದಿಸಿ, ಥಳಿಸಿದ ಆರೋಪದ ಹಿನ್ನೆಲೆಯಲ್ಲಿ 21 ವರ್ಷದ ಅಮೆರಿಕದ ಪ್ರಜೆ ಫುಟ್ಬಾಲ್ ತಂಡದಿಂದ ಹೊರಹಾಕಲ್ಪಟ್ಟಿದ್ದ ಲೂಯಿಸ್ ವ್ಯಾಜ್ ಕ್ವೆಜ್ (21) ಅವರಿಗೆ ಸಿಲಿಕಾನ್ ವ್ಯಾಲಿಯ ಸ್ಥಳೀಯ ನ್ಯಾಯಾಲಯ 9 ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿತು.
2008: ಯುದ್ಧ ಪೀಡಿತ ಉತ್ತರ ಶ್ರೀಲಂಕಾದ ಮುಲ್ಲೈತೀವುವಿನಲ್ಲಿ ವಾಯುಪಡೆ ದಾಳಿಗೆ ಕನಿಷ್ಠ 32 ಎಲ್ ಟಿ ಟಿ ಇ ಬಂಡುಕೋರರು ಹಾಗೂ ಮಾನವ ಹಕ್ಕು ಕಾರ್ಯಕರ್ತನೊಬ್ಬ ಮೃತರಾದರು. ಎಲ್ ಟಿ ಟಿ ಇ ಪ್ರಾಬಲ್ಯದ ವನ್ನಿಯಲ್ಲಿ ಶ್ರೀಲಂಕಾ ಸೇನೆ ನಡೆಸಿದ ಕಾರ್ಯಾಚರಣೆಗೆ ಮಾನವ ಹಕ್ಕು ಕಾರ್ಯಕರ್ತ ಫಾದರ್ ಎಂ.ಎಕ್ಸ್. ಕರುಣಾರತ್ಮಂ ಮೃತಪಟ್ಟರು ಎಂದು ಎಲ್ಟಿಟಿಇ ಪ್ರಕಟಿಸಿತು.
2007: ಬಾಲಿವುಡ್ಡಿನ ಜನಪ್ರಿಯ ತಾರೆಗಳಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರು ಈದಿನ ಸಂಜೆ ಮುಂಬೈಯಲ್ಲಿ ನಡೆದ ವರ್ಣರಂಜಿತ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು. ಇದರೊಂದಿಗೆ ಬಹು ನಿರೀಕ್ಷಿತ, ಭಾರಿ ಪ್ರಚಾರ ಗಿಟ್ಟಿಸಿಕೊಂಡಿದ್ದ.ಬಾಲಿವುಡ್ ವಲಯದ `ಬಹುದೊಡ್ಡ ಮದುವೆ' ಸಡಗರದೊಂದಿಗೆ ಈಡೇರಿತು. ವರ್ಷದ ಮದುವೆ ಎಂದೇ ಬಿಂಬಿತವಾದ ಈ ಸಮಾರಂಭದಲ್ಲಿ ಅಭಿಷೇಕ್ (31) ಮತ್ತು ಐಶ್ವರ್ಯ (33) ಉತ್ತರ ಭಾರತದ ಸಂಪ್ರದಾಯದಂತೆ ಪರಸ್ಪರ ಹಾರ ಬದಲಾಯಿಸುವ ಮೂಲಕ ಸತಿ ಪತಿಯಾದರು. ಅಮಿತಾಭ್ ಮತ್ತು ಜಯಾ ಬಚ್ಚನ್ ಕುಟುಂಬದ ಮನೆ `ಪ್ರತೀಕ್ಷಾ'ದಲ್ಲಿ ಈ ಸಮಾರಂಭ ನೆರವೇರಿತು. ವಾರಣಾಸಿಯಿಂದ ಬಂದ ಅರ್ಚಕರು ವಿವಾಹ ವಿಧಿಗಳನ್ನು ನೆರವೇರಿಸಿದರು. ಏಪ್ರಿಲ್ 18ರ ರಾತ್ರಿ `ಸಂಗೀತ ಸಮಾರಂಭ'ದೊಂದಿಗೆ ಆರಂಭವಾಗಿ 19ರಂದು ಸಾಂಪ್ರದಾಯಿಕ `ಮೆಹಂದಿ' ಕಾರ್ಯಕ್ರಮದೊಂದಿಗೆ ಮುಂದುವರೆದ ಮದುವೆ ಸಡಗರಕ್ಕೆ `ಅಕ್ಷಯ ತೃತೀಯಾ'ದ ಪವಿತ್ರ ದಿನವಾದ ಈದಿನ ವಿವಾಹ ಸಮಾರಂಭದ ಕ್ಲೈಮಾಕ್ಸಿನೊಂದಿಗೆ, ತೆರೆ ಬಿದ್ದಿತು. (ನೆನಪಿಡಬೇಕಾದ ಸಂಗತಿ: ವರ್ಷದ ಹಿಂದೆ ಏಪ್ರಿಲ್ 19ರಂದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಭೂತನಾಥ ದೇಗುಲದಲ್ಲಿ `ಗುರು' ಚಿತ್ರಕ್ಕಾಗಿ ಇವರಿಬ್ಬರ ಅದ್ಧೂರಿ ಮದುವೆ ನಡೆದಿತ್ತು!)
2007: ಅಸಾಧಾರಣ ಸಾಹಿತ್ಯ ವ್ಯಕ್ತಿತ್ವ ಎಂದು ಗೌರವಿಸಿ ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರಿಗೆ `ಎನ್. ಟಿ. ರಾಮರಾವ್ (ಎನ್ ಟಿ ಆರ್) ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಲು ಹೈದರಾಬಾದಿನ ಎನ್ ಟಿ ಆರ್ ವಿಜ್ಞಾನ ಟ್ರಸ್ಟ್ ತೀರ್ಮಾನಿಸಿತು. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರ ಪತ್ನಿ ಲಕ್ಷ್ಮಿ ಪಾರ್ವತಿ ಅಧ್ಯಕ್ಷತೆಯ ಈ ಟ್ರಸ್ಟಿನ ಈ ಚೊಚ್ಚಲ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ.
2007: ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠದ ವಿಶ್ವ ಗೋ ಸಮ್ಮೇಳನದ ಆವರಣದಲ್ಲಿ ಎತ್ತಿನಗಾಡಿ ಸವಾರಿ ಮಾಡುವ ಮೂಲಕ ಖ್ಯಾತ ಹಿಂದಿ ಚಿತ್ರನಟ ವಿವೇಕ್ ಒಬೆರಾಯ್ ಎತ್ತಿನಗಾಡಿ ಪರಿಕ್ರಮ ಪಥಕ್ಕೆ ಚಾಲನೆ ನೀಡಿದರು.
2006: ಭಾರತದ ಜಾರ್ಖಂಡಿನ ರಾಂಚಿಯ ಹುಡುಗ ಸ್ಫೋಟಕ ಹೊಡೆತಗಳ ಆಟಗಾರ ಮಹೇಂದ್ರ ಸಿಂಗ್ ದೋನಿ ರಾಷ್ಟ್ರೀಯ ಕ್ರಿಕೆಟಿಗೆೆ ಪದಾರ್ಪಣೆ ಮಾಡಿದ ಕೇವಲ 16 ತಿಂಗಳಿನಲ್ಲಿಯೇ ವಿಶ್ವದ ನಂಬರ್ ಒನ್ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಾರಾಷ್ಟ್ರೀಯ ಕ್ರೆಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ ಹೊಸದಾದ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ದೋನಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಟಿಂಗ್ ಅವರನ್ನು ಹಿಂದಕ್ಕೆ ತಳ್ಳಿದರು.
2006: ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಬಿಜೆಪಿಗೆ ರಾಜೀನಾಮೆ ಕೊಡುವ ಮೂಲಕ ಆ ಪಕ್ಷದ ಜೊತೆಗಿನ ತಮ್ಮ ಬಾಂಧವ್ಯವನ್ನು ಕಡಿದುಕೊಂಡರು.
2006: ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ 2005ನೇ ಸಾಲಿನ ಗೌರವ ಪ್ರಶಸ್ತಿಗಳು ಪ್ರಕಟಗೊಂಡವು. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ತುಳು ಸಾಹಿತ್ಯ ಮತ್ತು ಸಂಶೋಧನೆ, ವಿ.ಜಿ. ಪಾಲ್ ಅವರು ತುಳು ನಾಟಕ, ಚಲನಚಿತ್ರ, ಐತಪ್ಪ ಮೂರುಪಂಬದ ಅವರು ತುಳು ಜಾನಪದ ಪ್ರಶಸ್ತಿಗೆ ಆಯ್ಕೆಯಾದರು.
2006: ಸುಮಾರು ಒಂದು ದಶಕದಿಂದ ಕಾನೂನು ತೊಡಕುಗಳಲ್ಲಿ ಸಿಲುಕಿ ಕುಂಟುತ್ತಾ ಸಾಗಿದ್ದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಕಾರಿಡಾರ್ ಯೋಜನೆಯ ಹಾದಿಯನ್ನು ಸುಪ್ರೀಂಕೋರ್ಟ್ ಸುಗಮಗೊಳಿಸಿತು. ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದ ಸುಪ್ರೀಂಕೋರ್ಟ್ ನೈಸ್ ಕಂಪೆನಿಯ ವ್ಯಾಜ್ಯವೆಚ್ಚ ಐದು ಲಕ್ಷ ರೂಪಾಯಿಗಳನ್ನು ಭರಿಸಿಕೊಡುವಂತೆಯೂ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತು.
1961: ಕಲಾವಿದ ಮುರಳಿ ವಿ. ಜನನ.
1960: ಏರ್ ಇಂಡಿಯಾ ಸಂಸ್ಥೆಯು ಜೆಟ್ ಯುಗವನ್ನು ಪ್ರವೇಶಿಸಿತು. ಸಂಸ್ಥೆಯ `ಗೌರಿಶಂಕರ' ಬೋಯಿಂಗ್ 707ರ ಸೇವೆಯನ್ನು ಲಂಡನ್ನಿನಲ್ಲಿ ಮೊತ್ತ ಮೊದಲ ಬಾರಿಗೆ ಆರಂಭಿಸಲಾಯಿತು.
1950: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜನ್ಮದಿನ.
1947: ಕಲಾವಿದೆ ವಸಂತ ಮಾಧವಿ ಜನನ.
1942: ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಹಿರಿತೆರೆಗಳಲ್ಲಿ ತಮ್ಮ ನಟನೆಯಿಂದ ಪ್ರಖ್ಯಾತರಾಗಿರುವ ಎಚ್. ಜಿ. ದತ್ತಾತ್ರೇಯ `ದತ್ತಣ್ಣ' ಅವರು ಹರಿಹರ ಗುಂಡೂರಾಯರು- ವೆಂಕಮ್ಮ ದಂಪತಿಯ ಮಗನಾಗಿ ಚಿತ್ರದುರ್ಗದಲ್ಲಿ ಜನಿಸಿದರು.
1942: ಕಲಾವಿದ ಪುಂಚಿತ್ತಾಯ ಪಿ.ಎಸ್. ಜನನ.
1940: ಕಲಾವಿದ ವಿ. ಕೃಷ್ಣಮೂರ್ತಿ ಜನನ.
1924: ಕಲಾವಿದ ರಾಮಸ್ವಾಮಿ ಎಚ್. ಟಿ. ಜನನ.
1889: ಅಡಾಲ್ಫ್ ಹಿಟ್ಲರ್ ಜನ್ಮದಿನ. ಜರ್ಮನಿಯ ನಾತ್ಸಿ ಸರ್ವಾಧಿಕಾರಿಯಾದ ಈತ ಆಸ್ಟ್ರಿಯಾ- ಹಂಗೆರಿಯ ಬ್ರೌನವು- ಆಮ್- ಇನ್ ಎಂಬ ಸ್ಥಳದಲ್ಲಿ ಹುಟ್ಟಿದ. ಲಕ್ಷಾಂತರ ಯಹೂದಿಗಳ ಕಗ್ಗೊಲೆಗೆ ಕಾರಣನಾದ. ತನ್ನ ರಾಷ್ಟ್ರವನ್ನು ಎರಡನೇ ಜಾಗತಿಕ ಸಮರದತ್ತ ಮುನ್ನಡೆಸಿದ.
1862: ಲೂಯಿ ಪ್ಯಾಶ್ಚರ್ ಮತ್ತು ಕ್ಲಾರ್ಡ್ ಬರ್ನಾರ್ಡ್ ಪ್ಯಾಶ್ಚರೀಕರಣದ ಮೊದಲ ಪರೀಕ್ಷೆಯನ್ನು ಪೂರ್ಣಗೊಳಿಸಿದರು. 48 ದಿನಗಳ ಕಾಲ ಮುಚ್ಚಿಡಲಾಗಿದ್ದ ಬಾಟಲಿಗಳನ್ನು ಫ್ರೆಂಚ್ ವಿಜ್ಞಾನ ಅಕಾಡೆಮಿಯ ಸಭೆಯೊಂದರಲ್ಲಿ ತೆರೆಯಲಾಯಿತು. ಆ ಬಾಟಲಿಗಳಲ್ಲಿ ನಾಯಿಯ ರಕ್ತ ಹಾಗೂ ಮೂತ್ರವನ್ನು ತುಂಬಿಸಿ 30 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಇಡಲಾಗಿತ್ತು. ಈ ಅವಧಿಯಲ್ಲಿ ಅವು ಕೆಟ್ಟಿರಲಿಲ್ಲ. ಇದರಿಂದ ಸೂಕ್ಷ್ಮಜೀವಿಗಳು ಸಾಯುವಷ್ಟು ಉಷ್ಣತೆಯಲ್ಲಿ ಆಹಾರವನ್ನು ಇರಿಸಿ ಕೆಡದಂತೆ ರಕ್ಷಿಸಿ ಇಡುವ ಸಾಧ್ಯತೆ ಪತ್ತೆಯಾಯಿತು.
No comments:
Post a Comment