Wednesday, April 8, 2020

ಇಂದಿನ ಇತಿಹಾಸ History Today ಏಪ್ರಿಲ್ 08

2020: ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ೩೨ ಕೊರೋನಾ ಸಾವುಗಳ ಪ್ರಕರಣ ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ ೧೪೯ಕ್ಕೆ ಏರಿತು.  ೭೭೩ ಹೊಸ ಸೋಂಕಿನ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ  ೫೨೭೪ಕ್ಕೆ ಏರಿತು.  ಇದೇ ವೇಳೆಗೆ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  2020 ಏಪ್ರಿಲ್ 8ರ ಬುಧವಾರ ದೆಹಲಿ ಮತ್ತು ಮುಂಬೈಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು.  ಹೀಗಾಗಿ  ಮುಖಗವಸು ಧರಿಸದೆ ರಸ್ತೆಗೆ ಬಂದರೆ ಜೈಲು ಸೇರುವ ಅಪಾಯ ಎದುರಾಯಿತು. ಮುಂಬೈ ನಿವಾಸಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು (ಮಾಸ್ಕ್) ಧರಿಸುವುದನ್ನು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ (ಬಿಎಂಸಿ) ಬುಧವಾರ ಕಡ್ಡಾಯಗೊಳಿಸಿತು. ಮುಖಗವಸುಗಳು ಕೊರೋನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟುತ್ತವೆ ಎಂಬುದಾಗಿ ಹಲವಾರು ಅಧ್ಯಯಗಳು ತಿಳಿಸಿರುವುದನ್ನು ಉಲ್ಲೇಖಿಸಿ  ಬಿಎಂಸಿ ಕ್ರಮ ಕೈಗೊಂಡಿತು. ಮುಖಗವಸು ಧರಿಸದೇ ರಸ್ತೆಗೆ ಬಂದವರು ಭಾರತೀಯ ದಂಡ ಸಂಹಿತೆಯ ೧೮೮ನೇ ವಿಧಿಯ ಅಡಿಯಲ್ಲಿ ಬಂಧನಕ್ಕೆ ಒಳಗಾಗಬಹುದು ಎಂದು ಬಿಎಂಸಿ ಸುತ್ತೋಲೆ ಒಂದರಲ್ಲಿ ತಿಳಿಸಿತು. ಮುನಿಸಿಪಲ್ ಕಮೀಷನರ್ ಪ್ರವೀನ್ ಪರದೇಶಿ ಅವರು ಸುತ್ತೋಲೆಯನ್ನು ಹೊರಡಿಸಿದ್ದು, ಸಾರ್ವಜನಿಕರ ವಿಶಾಲ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ಯಾರೇ ವ್ಯಕ್ತಿಗಳು ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮೂರು ಪದರದ ಮುಖಗವಸು ಅಥವಾ ಬಟ್ಟೆಯ ಮುಖಗವಸನ್ನು ಜನರು ಕಡ್ಡಾಯವಾಗಿ ಧರಿಸಬೇಕು ಎಂದು ಸುತ್ತೋಲೆ ತಿಳಿಸಿತು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ).

2020: ನವದೆಹಲಿ: ದೊಡ್ಡ ಪ್ರಮಾಣದ ಜೈವಿಕ ದುರಂತUಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತವನ್ನು ಸಜ್ಜುಗೊಳಿಸುವ ಯೋಜನೆಯೊಂದು ಸುಮಾರು ಒಂದು ದಶಕಕ್ಕೂ ಹಿಂದೆಯೇ ರೂಪುಗೊಂಡಿತ್ತು. ಆದರೆ ಅಧಿಕಾರಶಾಹಿಯ ಪ್ರತಿರೋಧದ ಪರಿಣಾಮವಾಗಿ ಅದು ಮೂಲೆಗುಂಪಾಗಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿತು. ಹತ್ತು ವರ್ಷಗಳ ಹಿಂದೆ ರೂಪಿಸಿದ ಯೋಜನೆ ಅಧಿಕಾರಶಾಹಿಯ ವಿರೋಧದಿಂದಾಗಿ ಜಾರಿಗೆ ಬರಲಿಲ್ಲ ಎಂದು ಯೋಜನೆ ರೂಪಿಸುವ ನಿಟ್ಟಿನಲ್ಲಿ ಕಾರ್ಯ ಎಸಗಿದ್ದ ಹಿರಿಯ ಅಧಿಕಾರಿಗಳು  2020 ಏಪ್ರಿಲ್ 8ರ ಬುಧವಾರ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು. ದಶಕದ ಹಿಂದೆ ರೂಪಿಸಲಾಗಿದ್ದ ಯೋಜನೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ದಿಗ್ಬಂಧನಗಳಿಗೆ (ಲಾಕ್ ಡೌನ್) ಸಮುದಾಯ ಸನ್ನದ್ಧತೆ, ನಿರ್ಣಾಯಕ ವೈದ್ಯಕೀಯ ಉಪಕರಣಗಳು ಮತ್ತು ರಕ್ಷಣಾತ್ಮಕ ಉಡುಪುಗಳ ರಾಜ್ಯಮಟ್ಟದ ದಾಸ್ತಾನು, ಹಠಾತ್, ಸಾಮೂಹಿಕ ಸಾವು-ನೋವುಗಳನ್ನು ಒಳಗೊಂಡ ಜೈವಿಕ ವಿಪತ್ತುಗಳಿಗೆ ಎಲ್ಲಾ ಆಸ್ಪತ್ರೆಗಳನ್ನು ಸಜ್ಜಗೊಳಿಸುವುದು ಸೇರಿತ್ತು. ೧೯೯೯ ಕಾರ್ಗಿಲ್ ಯುದ್ಧದ ಸಮಯದಲ್ಲಿ ವೈದ್ಯಕೀಯ ಸಾಗಣೆ (ಲಾಜಿಸ್ಟಿಕ್) ಸಮಸ್ಯೆಗಳನ್ನು ನಿಭಾಯಿಸಿದ್ದಕ್ಕಾಗಿ ವ್ಯಾಪಕ ಪ್ರಶಂಸೆ ಗಳಿಸಿದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಾಜಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಜೆ.ಆರ್.ಭಾರದ್ವಾಜ್ ನೇತೃತ್ವದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ತಜ್ಞರು ಯೋಜನೆಯನ್ನು ರೂಪಿಸಿದ್ದರು. ಎನ್ಡಿಆರ್ಎಫ್ ಯೋಜನೆ ಜಾರಿಗೆ ಬಂದಿದರೆ, ಈಗ ವುಹಾನ್ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ನಡೆಸುತ್ತಿರುವ  ಪ್ರಯತ್ನಗಳು ಹಗುರಗೊಳ್ಳುತ್ತಿದ್ದವು   ಎಂದು ಯೋಜನೆ ರೂಪಿಸುವಲ್ಲಿ ಸಕ್ರಿಯರಾಗಿದ್ದ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರತೆ ಮತ್ತು ಪೂರ್ಣ ತರಬೇತಿ ಇಲ್ಲದ ಸಿಬ್ಬಂದಿ ಸಮಸ್ಯೆ, ಅವರಿಗೆ ಬೇಕಾದ ರಕ್ಷಣಾತ್ಮಕ ಸಾಧನಗಳ ದೀರ್ಘಕಾಲೀನ ಕೊರತೆ ನಿವಾರಣೆಯಾಗಿರುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
2020: ನವದೆಹಲಿ: ವಿರೋಧ ಪಕ್ಷಗಳ ಸದನ ನಾಯಕರ ಜೊತೆ 2020 ಏಪ್ರಿಲ್ 8ರ ಬುಧವಾರ ನಡೆಸಿದ ತಮ್ಮ ವಿಡಿಯೋ ಸಂವಹನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ತೆರವುಗೊಳಿಸುವ ಸಾಧ್ಯತೆಗಳನ್ನು ವಸ್ತುಶಃ ತಳ್ಳಿಹಾಕಿದರು.  ಏಪ್ರಿಲ್ ೧೧ರಂದು ಪುನಃ ಮುಖ್ಯಮಂತ್ರಿಗಳ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಪ್ರಧಾನಿ ಹೇಳಿದರು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಕೂಡಾ ಶೇಕಡಾ ೮೦ರಷ್ಟು ರಾಜಕೀಯ ಪಕ್ಷಗಳು ದಿಗ್ಬಂಧನ ಮುಂದುವರೆಸುವಂತೆ ಸಲಹೆ ಮಾಡಿವೆ ಎಂದು ತಿಳಿಸಿದರು.  ಸಂಪನ್ಮೂಲಗಳ ಮೇಲೆ ಅಗಾಧವಾದ ಒತ್ತಡ ಬಿದ್ದಿದ್ದರೂ, ಕೊರೋನಾವೈರಸ್ ಹರಡುವಿಕೆಯು ನಿಯಂತ್ರಣದಲ್ಲಿ ಇರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದೂ ಪ್ರಧಾನಿ ವಿಪಕ್ಷ ನಾಯಕರ ಜೊತೆಗಿನ ವಿಡಿಯೋ ಸಂವಹನದಲ್ಲಿ ನುಡಿದರು. ‘ನಮ್ಮ ಜನರನ್ನು ಸಂರಕ್ಷಿಸಲು ಲಾಕ್ ಡೌನ್ ಒಂದೇ ಮಾರ್ಗವಾಗಿದೆಎಂದು ಒತ್ತಿ ಹೇಳಿದ ಪ್ರಧಾನಿ, ’ನಾನು ನಿಯಮಿತವಾಗಿ ಮುಖ್ಯಮಂತ್ರಿಗಳು, ಜಿಲ್ಲೆಗಳು ಮತ್ತು ತಜ್ಞರ ಜೊತೆ ಮಾತನಾಡುತ್ತಿದ್ದೇನೆ.ಯಾರು ಕೂಡಾ ದಿಗ್ಬಂಧನ ತೆರವುಗೊಳಿಸುವಂತೆ ನನ್ನ ಬಳಿ ಹೇಳುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಠಿಣ ನಿಯಮಾವಳಿಗಳ ಅಗತ್ಯ ನಮಗಿದೆ. ನಾವು ಹಲವಾರು ಅನಿರೀಕ್ಷಿತ ಕ್ರಮಗಳನ್ನೂ ಕೈಗೊಳ್ಳಬೇಕಾಗಬಹುದುಎಂದು ನುಡಿದರು. ‘ಲಾಕ್ ಡೌನ್ ತೆರವುಗೊಳಿಸಬೇಕು ಎಂದು ಯಾರೂ ಹೇಳುತ್ತಿಲ್ಲ. ಏಪ್ರಿಲ್ ೧೧ ರಂದು ನಾನು ಪುನಃ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುವೆ. ಆದರೆ, ಈಗಿನ ಪ್ರಕಾರ ಸಂಪೂರ್ಣವಾಗಿ ಲಾಕ್ ಡೌನ್ ತೆರವುಗೊಳಿಸುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದೆ. ನಾವು ಜಿಲ್ಲಾ ಮಟ್ಟದಲ್ಲೂ ಮಾತನಾಡುತ್ತಿದ್ದೇವೆ. ನಮಗೆ ನಮ್ಮ ಜನರನ್ನು ಸಂರಕ್ಷಿಸಲು ಲಾಕ್ ಡೌನ್ ಏಕೈಕ ಮಾರ್ಗವಾಗಿದೆಎಂದು ಮೋದಿ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಹರಡುವಿಕೆಯನ್ನು ತಡೆಯಲು ಭಾರತವು ತೀವ್ರ ಯತ್ನ ನಡೆಸಿರುವಂತೆಯೇ ಒಟ್ಟು ಸೋಂಕಿನ ಶೇಕಡಾ ೮೦ರಷ್ಟು ವ್ಯಾಪಿಸಿರುವ ೬೨ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರವು ದಿಗ್ಬಂಧನವನ್ನು (ಲಾಕ್ ಡೌನ್) ವಿಸ್ತರಿಸಬಹುದು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ್ ಅವರು 2020 ಏಪ್ರಿಲ್ 8ರ ಬುಧವಾರ ಇಲ್ಲಿ ಹೇಳಿದರು. ಕೆಲವು ರಾಜ್ಯಗಳು ದಿಗ್ಬಂಧನವನ್ನು ವಿಸ್ತರಿಸುವಂತೆ ಶಿಫಾರಸು ಮಾಡಿವೆ. ಆದರೆ ಯೋಗ್ಯ ಕಾರ್ಯತಂತ್ರವನ್ನು ವಾರಾಂತ್ಯದಲ್ಲಿ ರೂಪಿಸಲಾಗುವುದು ಎಂದು ಅವರು ನುಡಿದರು.  ಮುಂಬೈಯು ಭಾರತದ ಕೊರೋನಾವೈರಸ್ ಕೇಂದ್ರ ಸ್ಥಾನವಾಗಿ ಪರಿಣಮಿಸಿದ್ದರೂ, ೪೦೦ ಜಿಲ್ಲೆಗಳಲ್ಲಿ ಕೋವಿಡ್-೧೯ ಪ್ರಕರಣ ದಾಖಲಾಗಿಯೇ ಇಲ್ಲ ಎಂಬುದು ನಮ್ಮ ಪಾಲಿಗೆ ಆಶಾಕಿರಣ ಎಂದು ಕುಮಾರ್ ಹೇಳಿದರು. ಏಪ್ರಿಲ್ ೧೪ರಂದು ಅಂತ್ಯಗೊಳ್ಳಬೇಕಾಗಿರುವ ದಿಗ್ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದು ಅವರು ನುಡಿದರು. ನಿರ್ಗಮನ ತಂತ್ರವನ್ನು ಬಹುತೇಕ ರಾಜ್ಯ ಸರ್ಕಾರಗಳೇ ವಿನ್ಯಾಸಗೊಳಿಸಬೇಕು ಮತ್ತು ಜಾರಿಗೊಳಿಸಬೇಕಾಗಿದೆ. ಜಿಲ್ಲಾ ಆಡಳಿತಗಳು ಯೋಜನೆ ಬಗ್ಗೆ ಗಮನ ಹರಿಸಬೇಕು, ಮಾರಕ ವೈರಸ್ಸನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಣ ಒಮ್ಮತ ಬಲು ಮುಖ್ಯ. ಅಧಿಕಾರಿಗಳು ಜೀವಗಳು ಮತ್ತು ಬದುಕಿನ ನಡುವೆ ಸಮತೋಲನ ಸಾಧಿಸಬೇಕು ಎಂದು ಕುಮಾರ್ ಹೇಳಿದರು. ಮುಂಬೈ ದಿಗ್ಬಂಧನ ವಿಸ್ತರಣೆ ಖಚಿತ: ಮಧ್ಯೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಹೊರವಲಯಗಳಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ೭೮೨ಕ್ಕೆ ಏರಿದ್ದು, ಸಾವಿನ ಸಂಖ್ಯೆ ೫೦ ತಲುಪಿರುವ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ದಿಗ್ಬಂಧನವು ಏಪ್ರಿಲ್ ೩೦ರವರೆಗೆ ವಿಸ್ತರಣೆ ಆಗುವುದು ಖಚಿತ ಎಂದು ಮೂವರು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ).

2020: ನವದೆಹಲಿ: ಕೊರೋನಾವೈರಸ್ ಸೋಂಕಿಗೆ ಸಂಬಂಧಿಸಿದಂತೆ ರೋಗಿಗಳ ಮೇಲೆ ನಡೆಸುವ ಪರೀಕ್ಷೆಗಳಿಗೆ ಶುಲ್ಕ ವಿಧಿಸದಂತೆ ಸುಪ್ರೀಂಕೋರ್ಟ್ 2020 ಏಪ್ರಿಲ್ 8ರ ಬುಧವಾರ  ಖಾಸಗಿ ಪ್ರಯೋಗಾಲಯಗಳ ಮೇಲೆ ನಿಷೇಧ ಹೇರಿತು. ಪರೀಕ್ಷೆಗಳಿಗಾಗಿ ರೋಗಿಗಳ ಮೇಲೆ ಶುಲ್ಕ ವಿಧಿಸಬಾರದು ಎಂಬ ಬಗ್ಗೆ ತಮಗೆ ಮನವರಿಕೆಯಾಗಿದೆ ಎಂದು ತಿಳಿಸಿದ ನ್ಯಾಯಮೂರ್ತಿಗಳು ಹಣವನ್ನು ಸರ್ಕಾರದಿಂದ ಮರುಪಾವತಿ ಪಡೆಯಬಹುದೇ ಎಂಬ ಬಗ್ಗೆ ತಾವು ಮುಂದಕ್ಕೆ ನಿರ್ಧರಿಸುವುದಾಗಿ ಹೇಳಿದರು. ರಾಷ್ಟ್ರವು ಬಿಕ್ಕಟ್ಟನ್ನು ಎದುರಿಸುತ್ತಿರುವ ಘಳಿಗೆಯಲ್ಲಿ ಉದಾರ ಸೇವೆ ಒದಗಿಸುವ ಮೂಲಕ ಸಾಂಕ್ರಾಮಿಕ ಪಿಡುಗು ಹರಡದಂತೆ ತಡೆಯುವಲ್ಲಿ ಪ್ರಯೋಗಾಲಯಗಳು (ಲ್ಯಾಬೋರೇಟರಿಗಳು) ಸೇರಿದಂತೆ ಖಾಸಗಿ ಆಸ್ಪತ್ರೆಗಳು ಮಹತ್ವದ ಪಾತ್ರ ವಹಿಸಬೇಕಾಗಿದೆ. ಹೀಗಾಗಿ ಉಚಿತವಾಗಿ ಕೋವಿಡ್-೧೯ ಪರೀಕ್ಷೆಗಳನ್ನು ನಡೆಸುವಂತೆ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳಿಗೆ ಅಗತ್ಯ ನಿರ್ದೇಶನ ನೀಡಬೇಕೆಂಬ ಅರ್ಜಿದಾರರ ಮನವಿಯಲ್ಲಿ ಹುರುಳಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ಪೀಠ ಹೇಳಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
2020: ನವದೆಹಲಿ: ಐದು ಲಕ್ಷ ರೂಪಾಯಿಗಳವರೆಗಿನ ತೆರಿಗೆ ಮರುಪಾವತಿ ಬಾಕಿಗಳನ್ನು ತತ್ ಕ್ಷಣವೇ ಬಿಡುಗಡೆ ಮಾಡುವುದಾಗಿ ಆದಾಯ ತೆರಿಗೆ ಇಲಾಖೆ 2020 ಏಪ್ರಿಲ್ 08ರ  ಬುಧವಾರ ಪ್ರಕಟಿಸಿತು.   ಕ್ರಮದಿಂದ ೧೪ ಲಕ್ಷ ತೆರಿಗೆ ಪಾವತಿದಾರರಿಗೆ ಅನುಕೂಲವಾಗಲಿದೆ. ಸರ್ಕಾರ ಕೂಡಾ ಬಾಕಿ ಇರುವ  ೧೮,೦೦೦ ಕೋಟಿ ರೂಪಾಯಿಗಳ ಜಿಎಸ್ ಟಿ ಮತ್ತ ಕಸ್ಟಮ್ಸ್ ಮರುಪಾವತಿಗಳನ್ನು ಬಿಡುಗಡೆ ಮಾಡುವ ಮೂಲಕ ಉದ್ಯಮ ಸಂಸ್ಥೆಗಳಿಗೆ ನಿರಾಳತೆ ಒದಗಿಸಿತು. ಎಲ್ಲ ಜಿಎಸ್ ಟಿ ಮತ್ತು ಕಸ್ಟಮ್ ಮರುಪಾವತಿಗಳನ್ನು ಕೂಡಾ ಬಿಡುಗಡೆ ಮಾಡಲಾಗುವುದು. ಇದು ಎಂಸ್ ಎಂಇಗಳು ಸೇರಿದಂತೆ ಸುಮಾರು ಲಕ್ಷ ಉದ್ಯಮ ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವಾಲಯದ ಅಡಿಯಲ್ಲಿನ ಕಂದಾಯ ಇಲಾಖೆ ತಿಳಿಸಿತು.ಮಂಜೂರು ಮಾಡಲಾಗಿರುವ ಒಟ್ಟು ಮರುಪಾವತಿ ಮೊತ್ತ ೧೮,೦೦೦ ಕೋಟಿ ರೂಪಾಯಿಗಳು ಎಂದು ಇಲಾಖೆ ಹೇಳಿತು. ಕೋವಿಡ್-೧೯ ಪರಿಸ್ಥಿಯ ಪರಿಶೀಲನೆ ಬಳಿಕ ಉದ್ಯಮ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ತತ್ ಕ್ಷಣದ ನಿರಾಳತೆ ಒದಗಿಸುವ ಸಲುವಾಗಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಇಲಾಖೆಯ ಹೇಳಿಕೆ ತಿಳಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

No comments:

Post a Comment