ನಾನು ಮೆಚ್ಚಿದ ವಾಟ್ಸಪ್

Sunday, April 12, 2020

ಇಂದಿನ ಇತಿಹಾಸ History Today ಏಪ್ರಿಲ್ 12

2020: ನವದೆಹಲಿ: ಕೇರನ್ ವಲಯದ ಗಡಿ ನಿಯಂತ್ರಣ ರೇಖೆಯ ಆಚೆ ಪಾಕಿಸ್ತಾನದ ದುದ್ನಿಯಲ್ ನಲ್ಲಿ ನಿರ್ಮಿಸಲಾಗಿದ್ದ ಭಯೋತ್ಪಾದಕ ಉಡಾವಣಾ ಶಿಬಿರಗಳ ಮೇಲೆ ಭಾರತೀಯ ಸೇನೆಯ ಫಿರಂಗಿದಳವು ಏಪ್ರಿಲ್ ೧೦ ರಂದು  ನಡೆಸಿದ ದಾಳಿಯಲ್ಲಿ ಎಂಟು ಭಯೋತ್ಪಾದಕರು ಮತ್ತು ೧೫ ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಸಂಸ್ಥೆಯ ಮೂಲಗಳು  2020 ಏಪ್ರಿಲ್ 12ರ ಭಾನುವಾರ ತಿಳಿಸಿದವು. ‘ಯಾರೂ ಶಿಕ್ಷೆಗೆ ಗುರಿಯಾಗದೆ ತಪ್ಪಿಸಿಕೊಳ್ಳುವಂತಿಲ್ಲ’ ಎಂಬ ಕಠಿಣ ಸಂದೇಶವನ್ನು ಈ ಮೂಲಕ ಪಾಕಿಸ್ತಾನಕ್ಕೆ ನೀಡಲಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿದವು. ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರ ತೀರಿಸಿಕೊಳ್ಳಲು ಕಿಶಂಗಂಗಾ ನದಿಯ ದಂಡೆ ಮೇಲಿನ  ದುಧ್ನಿಯಲ್ ನ್ನು ಗುರಿಯಾಗಿಸಲಾಗಿತ್ತು. ಪರ್ವತ ಪಟ್ಟಣದಿಂದಲೇ  ಬಂದಿದ್ದ ಐವರು ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯಾಚರಣೆಯನ್ನು ಏಪ್ರಿಲ್ ರಂದು ಕೇರನ್ ವಲಯದಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಗಳು ಆರಂಭಿಸಿದ್ದವು.  ಕಾರ್ಯಾಚರಣೆಯಲ್ಲಿ ಕೊಲ್ಲಲಾದ ಐವರು ಭಯೋತ್ಪಾದಕರಲ್ಲಿ, ಮೂವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು ಮತ್ತು ಉಳಿದ ಇಬ್ಬರು ಜೈಶ್--ಮೊಹಮ್ಮದ್ (ಜೆಎಂ) ಮೂಲಕ ತರಬೇತಿ ಪಡೆದಿದ್ದರು  ಎಂದು ಅವರ ಮುಖ ಪರಿಚಯವಿದ್ದ  ತಿಳಿಸಿದ್ದಾರೆ.  ಭಯೋತ್ಪಾದಕರ  ಗುರುತು ಪತ್ರೆ ಕಾರ್ಯ ಇನ್ನೂ ಮುಂದುವರೆದಿದೆ.ವಾಸ್ತವಿಕ ಗಡಿಯಾಗಿರುವ ಗಡಿ ನಿಯಂತ್ರಣ ರೇಖೆಯ (ಎಲ್ ಒಸಿ) ಉದ್ದಕ್ಕೂ ಶಾರದಾ, ದುಧ್ನಿಯಲ್ ಮತ್ತು ಶಾಹಕೋಟ್  ಪ್ರದೇಶಗಳಲ್ಲಿ ಭಾರತೀಯ ಸೇನೆಯು ಗುಂಡು ಹಾರಿಸಿರುವುದನ್ನು ಪಾಕಿಸ್ತಾನೀ ಸೇನೆ ಖಚಿತಪಡಿಸಿತ್ತು. ಆದರೆ ೧೫ ವರ್ಷದ ಬಾಲಕಿ ಸೇರಿದಂತೆ ನಾಲ್ಕು ನಾಗರಿಕರಿಗೆ ಮಾತ್ರ ಗಂಭೀರ ಗಾಯಗಳಾಗಿವೆ ಎಂದು ಅದು ಹೇಳಿಕೊಂಡಿತ್ತು೨೦೨೦ ರಲ್ಲಿ ಭಾರತೀಯ ಸೇನೆಯು ೭೦೮ ಕದನ ವಿರಾಮ ಉಲ್ಲಂಘನೆ ಮಾಡಿದೆ  ಮತ್ತುಇಬ್ಬರು ನಾಗರಿಕರನ್ನು ಕೊಂದು ೪೨ ಜನರನ್ನು ಗಾಯಗೊಳಿಸಿದೆ ಎಂದು ಎಂದು ಇಸ್ಲಾಮಾಬಾದ್ ದೂಷಿಸಿತ್ತು.

(ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)
2020: ಲಂಡನ್: ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಸೈಟ್ ಥಾಮಸ್ ಆಸ್ಪತ್ರೆಗೆ ದಾಖಲಾಗಿದ್ದ ಇಂಗ್ಲೆಂಡ್ ಪ್ರಧಾನಿ  ಬೋರಿಸ್ ಜಾನ್ಸನ್ ಅವರು 2020 ಏಪ್ರಿಲ್ 12ರ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಕಿಂಗ್ ಹ್ಯಾಮ್ ಶೈರಿನ ಮನೆಗೆ ವಿಶ್ರಾಂತಿಯ ಸಲುವಾಗಿ ತೆರಳಿದರು. ತನ್ನ ಜೀವ ಕಾಪಾಡಿದ್ದಕ್ಕಾಗಿ ಅವರು ವೈದ್ಯರನ್ನು ಶ್ಲಾಘಿಸಿ ಧನ್ಯವಾದ ಅರ್ಪಿಸಿದರು. ಶನಿವಾರ ಇಂಗ್ಲೆಂಡಿನಲ್ಲಿ ಕೊರೋನಾವೈರಸ್ ಸಾವಿನ ಸಂಖ್ಯೆ 9,875ಕ್ಕೆ ತಲುಪಿದ್ದು ವಾರಾಂತ್ಯದ ವೇಳೆಗೆ 10,000 ತಲುಪಬಹುದೆಂಬ ಭೀತಿ ವ್ಯಕ್ತವಾಗಿತ್ತು. ಪ್ರಧಾನಿಯವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಚೆಕರ್ಸ್ ಗೆ ಚೇತರಿಕೆ ಸಲುವಾಗಿ ಕಳುಹಿಸಲಾಗಿದೆ. ಪ್ರಧಾನಿಯವರು ತತ್ ಕ್ಷಣವೇ ಕರ್ತವ್ಯಕ್ಕೆ ಹಾಜರಾಗುವುದಿಲ್ಲಎಂದು ಡೌನಿಂಗ್ ಸ್ಟ್ರೀಟ್ ವಕ್ತಾರರು ಬಳಿಕ ತಿಳಿಸಿದರು.  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ಚಂಡೀಗಢ: ನಾಕಾಬಂದಿಯ ವೇಳೆ 2020 ಏಪ್ರಿಲ್ 12 ಭಾನುವಾರ ಎಎಸ್‌ಐ ಕೈ ಕತ್ತರಿಸಿದ್ದ ಆರೋಪಿಗಳನ್ನು  ಅತ್ಯಂತ  ಕ್ಷಿಪ್ರವಾಗಿ ಪತ್ತೆ ಮಾಡಿವಶಕ್ಕೆ ಪಡೆಯಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದರು. ಪಂಜಾಬಿನ  ಪಟಿಯಾಲ ಜಿಲ್ಲೆಯಲ್ಲಿ ನಿಹಾಂಗ್ ಸಿಖ್ಖರ ಗುಂಪು ಸಹಾಯಕ ಸಬ್ ಇನ್ಸ್ ಪೆಕ್ಟರ್ ಒಬ್ಬರ ಕೈ ಕತ್ತರಿಸಿದ್ದರು. ಈ ಸಂದರ್ಭದಲ್ಲಿ ಆರು ಮಂದಿ ಪೊಲೀಸರಿಗೂ ಗಾಯಗಳಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದ  ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಮತ್ತು ತನಿಖೆ ಮುಂದುವರರೆದಿದೆ. ರಾಜ್ಯದಲ್ಲಿ ಯಾರೇ ಆಗಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕೂಡಲೆ ಕಠಿಣ ಕ್ರಮ ಕೈಗೊಳ್ಳಿ ಎಂದು  ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪೊಲೀಸರಿಗೆ ಸೂಚಿಸಿದರು. ಬೆಳಿಗ್ಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕರಿಂದ ಐದು ಮಂದಿಯ ಗುಂಪನ್ನು ಮಂಡಿ ಬೋರ್ಡ್ ಠಾಣೆ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆ ಬಳಿ ತಡೆದಿದ್ದರು. ದಿಗ್ಬಂಧನ (ಲಾಕ್ ಡೌನ್) ಪಾಸ್ ತೋರಿಸುವಂತೆ ಗುಂಪಿಗೆ ಪೊಲೀಸರು ಸೂಚಿಸಿದ್ದರು. ಆದರೆ, ತಪ್ಪಿಸಿಕೊಳ್ಳಲೆತ್ನಿಸಿದ ಗುಂಪು  ಪೊಲೀಸರತ್ತ ವಾಹನ ನುಗ್ಗಿಸಲು ಯತ್ನಿಸಿತ್ತು. ಬಳಿಕ ಪೊಲೀಸರ ಮೇಲೆಯೇ ದಾಳಿ ನಡೆಸಿತು ಎಂದು ಪಟಿಯಾಲ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ  ಮನ್ ದೀಪ್ ಸಿಂಗ್  ಸಿದು ತಿಳಿಸಿದರು.  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿ ಹಾಗೂ ಸುತ್ತ ಮುತ್ತಣ ಪ್ರದೇಶದಲ್ಲಿ 2020 ಏಪ್ರಿಲ್ 12ರ ಭಾನುವಾರ ಲಘು ಭೂಕಂಪ ಸಂಭವಿಸಿತು.  ಭೂಕಂಪದ ಕೇಂದ್ರ ಬಿಂದು ದೆಹಲಿ-ಉತ್ತರಪ್ರದೇಶ ಗಡಿ ಪ್ರದೇಶ ಎಂದು ಗುರುತಿಸಲಾಯಿತು. ಭೂಕಂಪದ  ತೀವ್ರತೆ ರಿಕ್ಟರ್ ಮಾಪಕದಲ್ಲಿ ೩.೫ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಸಂಜೆ ೫.೪೫ರ ಸುಮಾರಿಗೆ ಸಂಭವಿಸಿದ ಲಘು ಭೂಕಂಪದಲ್ಲಿ ಯಾವುದೇ ಜೀವಹಾನಿ ಅಥವಾ ಅಸ್ತಿ, ಪಾಸ್ತಿ ಹಾನಿಯಾಗಿಲ್ಲ. ಕೋವಿಡ್ ೧೯ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ಜನರು ಮನೆಗಳಲ್ಲಿ ಇದ್ದರು. ಲಘು ಭೂಕಂಪ ಸಂಭವಿಸಿದ ಘಟನೆ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅಪ್ ಡೇಟ್ ಮಾಡುವ ಮೂಲಕ ಸುದ್ದಿಯನ್ನು ಹಂಚಿಕೊಂಡಿರುವುದಾಗಿ ವರದಿ ತಿಳಿಸಿತು.ಬಳಿಕ ಭೂಕಂಪದ ವಿಷಯ ತಿಳಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ‘ಎಲ್ಲರೂ ಸುರಕ್ಷಿರಾಗಿದ್ದಾರೆ ಎಂದು ಭಾವಿಸುವೆ’ ಎಂದು ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)
2020: ವಾಷಿಂಗ್ಟನ್: ವಿಶ್ವಾದ್ಯಂತ  ವ್ಯಾಪಿಸಿರುವ ಕೊರೊನಾವೈರಸ್ ಸೋಂಕಿಗೆ ಈವರೆಗೆ ೧.೮ ಲಕ್ಷ ಜನರು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನ ಪ್ರಕರಣದಲ್ಲಿ ಅಮೆರಿಕವು ಚೀನಾವನ್ನೂ ಹಿಂದಿಕ್ಕಿದ್ದು, ೨೦ ಸಾವಿರ ಜನರು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ೨೪ ಗಂಟೆಯಲ್ಲಿ ೯೧೧ ಜನರು ಕೋವಿಡ್ -19 ಸೋಂಕಿಗೆ ಮೃತರಾದರು. ಶನಿವಾರ ೨೬ ಸಾವಿರ ಹೊಸ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ ೫.೩ ಲಕ್ಷ ದಾಟಿತು. ಬರೋಬ್ಬರಿ ೨೦,೫೭೭ ಜನರು ಮೃತರಾದರು.  ಅಮೆರಿಕದಲ್ಲಿ ಮೊಟ್ಟ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಾಗ ಯಾವುದೇ ಮುಂಜಾಗೃತ ಕ್ರಮ ಕೈಗೊಂಡಿರಲಿಲ್ಲ. ಇದು ಕೊರೋನಾ ವೈರಸ್ ಹರಡಲು ಪ್ರಮುಖ ಕಾರಣ ಎನ್ನಲಾಯಿತು. ಜನ ನಿಬಿಡ ನಗರಗಳಾದ ನ್ಯೂಯಾರ್ಕ್ ಸೇರಿ ಹಲವು ಕಡೆಗಳಲ್ಲಿ ಕೊರೋನಾಸೋಂಕು  ಕಾಣಿಸಿಕೊಂಡಿದ್ದು, ವೈರಸ್ ಕಬಂದ ಬಾಹು ಚಾಚುತ್ತಿದೆ. ಸ್ಪೇನ್ ಕೂಡ ಈ ಭೀಕರ ವೈರಸ್ ದಾಳಿಗೆ ತತ್ತರಿಸಿದೆ. ೧.೬೩ ಲಕ್ಷ ಜನರಿಗೆ  ಕೊರೋನಾ ಸೋಂಕು ಬಾಧಿಸಿದೆ. ೧೬ ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ೧೫ ಲಕ್ಷ ಜನರಿಗೆ ಸೋಂಕು ಅಂಟಿದ್ದು, ೧೯ ಸಾವಿರ ಮಂದಿ ಅಸುನೀಗಿದ್ದಾರೆ. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಏಪ್ರಿಲ್  12  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


 




No comments:

Post a Comment