Wednesday, April 15, 2020

ಇಂದಿನ ಇತಿಹಾಸ History Today ಏಪ್ರಿಲ್ 15

2020: ನವದೆಹಲಿ: ’ಸಾರ್ವಜನಿಕರಿಗೆ ಆಗುತ್ತಿರುವ ಕಷ್ಟಗಳನ್ನು ನಿವಾರಿಸುವ ಸಲುವಾಗಿ ಎರಡನೇ ಹಂತಹ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್)  ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು 2020 ಏಪ್ರಿಲ್ 15ರ ಬುಧವಾರ ಬಿಡುಗಡೆ ಮಾಡಿದ್ದು ಏಪ್ರಿಲ್ ೨೦ರ ಬಳಿಕ ಕೃಷಿ, ಇ-ಕಾಮರ್ಸ್, ಉತ್ಪಾದನೆ ಮತ್ತು ಐಟಿ ಸೇವಾ ಕ್ಷೇತ್ರಗಳ ಚಟುವಟಿಕೆಗಳಿಗೆ ಅವಕಾಶ ನೀಡಿತು. ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ ೩ರ ವರೆಗೆ ವಿಸ್ತರಿಸಿದ ಒಂದು ದಿನದ ಬಳಿಕ ಗೃಹ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸರ್ಕಾರವು  ಹಂತ ಹಂತವಾಗಿ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ಎಂನರೇಗಾ ಅಡಿಯಲ್ಲಿ ನಿರ್ಮಾಣ ಮತ್ತು ಗ್ರಾಮೀಣ ಕೆಲಸಗಳನ್ನು ಪುನಾರಂಭಿಸಲು ಅವಕಾಶ ನೀಡಿತು.  ’ಪರಿಷ್ಕೃತ, ಒಗ್ಗೂಡಿಸಲಾಗಿರುವ ಮಾರ್ಗದರ್ಶಿ ಸೂತ್ರಗಳು ಗ್ರಾಮೀಣ ಭವಿಷ್ಯ ಮತ್ತು ಕೃಷಿ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ನಿರ್ಣಾಯಕವಾದ ವಲಯಗಳ ಕಾರ್‍ಯ ನಿರ್ವಹಣೆಯನ್ನು ಉದ್ದೇಶಿಸಿದೆ. ರಾಷ್ಟ್ರದಲ್ಲಿ ಕೋವಿಡ್-೧೯ ಹರದಂತೆ ನೋಡಿಕೊಳ್ಳುವ ಪ್ರಮುಖ ಉದ್ದೇಶದ ಸುರಕ್ಷತಾ ಕ್ರಮವು ಅಗ್ರಪ್ರಾಶಸ್ತ್ಯದ ಕೆಲಸವಾಗಿದ್ದು ಅದಕ್ಕೆ ಸಂಬಂಧಿಸಿದ ಶಿಷ್ಟಾಚಾರಗಳ ಪಾಲನೆಯ ಜೊತೆಗೇ ನಿರ್ದಿಷ್ಟ ವಲಯಗಳಲ್ಲಿ ಚಟುವಟಿಕೆ ಆರಂಭಕ್ಕೆ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಸರ್ಕಾರೀ ಪ್ರಕಟಣೆ ತಿಳಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಈ ವರ್ಷ ಮಾಮೂಲಿ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ 2020 ಏಪ್ರಿಲ್ 15ರ ಬುಧವಾರ ಬಿಡುಗಡೆ ತಿಳಿಸಿತು. ಕೋವಿಡ್-೧೯ ದಿಗ್ಬಂಧನದಿಂದ (ಲಾಕ್ ಡೌನ್) ನಲುಗುತ್ತಿರುವ ರೈತರ ಪಾಲಿಗೆ ಈ ಸುದ್ದಿ ಹರ್ಷವನ್ನು ಉಂಟು ಮಾಡಲಿದೆ. ‘ಈ ವರ್ಷ ನಾವು ಮಾಮೂಲಿ ಮುಂಗಾರು ಮಳೆಯನ್ನು ಪಡೆಯಲಿದ್ದೇವೆ. ೨೦೨೦ರ ಮುಂಗಾರು ಋತುವಿನಲ್ಲಿ ಶೇಕಡಾ ೧೦೦ರಷ್ಟು ಮಳೆ ಸುರಿಯವ ನಿರೀಕ್ಷೆಯಿದೆ. ಈ ಲೆಕ್ಕಾಚಾರದಲ್ಲಿ ಶೇಕಡಾ ೫ರಷ್ಟು ಹೆಚ್ಚು ಕಡಿಮೆ ಆಗಬಹುದಷ್ಟೆ ಎಂದು ಭೂ ವಿಜ್ಞಾನ ಸಚಿವಾಲಯದ (ಎಂಒಇಎಸ್) ಕಾರ್ಯದರ್ಶಿ ಮಾಧವನ್ ರಾಜೀವನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಇದು ನಿಜವಾಗಿಯೂ ನಮಗೆಲ್ಲರಿಗೂ ಸಂತಸದ ಸುದ್ದಿ. ಇದು ನಿಜವಾಗಿಯೂ ನಮ್ಮ ಕೃಷಿ ರಂಗಕ್ಕೆ ನೆರವಾಗಲಿದ್ದು ಈ ವರ್ಷ ಉತ್ತಮ ಫಸಲು ಬರಬಹುದು. ಇದು ಖಂಡಿತವಾಗಿ ನಮ್ಮ ಆರ್ಥಿಕತೆಗೆ ನೆರವಾಗಲಿದೆ ಎಂದು ಅವರು ಹೇಳಿದರು. ನೈಋತ್ಯ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಯ ಮಳೆಯ ಕುರಿತ ತನ್ನ ಮೊದಲ ದೀರ್ಘ ವಲಯದ ಹವಾಮಾನ ಭವಿಷ್ಯದಲ್ಲಿ  (ಎಲ್‌ಆರ್‌ಎಫ್) ಹವಾಮಾನ ಬ್ಯೂರೋ ಹಲವಾರು ಸ್ಥಳಗಳಲ್ಲಿ ಮುಂಗಾರು ಆರಂಭವಾಗುವ ದಿನಾಂಕಗಳನ್ನು ಕೂಡಾ ನೀಡಿದೆ. ವರದಿಯ ಪ್ರಕಾರ ಕೇರಳಕ್ಕೆ ಮುಂಗಾರು ಮಾಮೂಲಿಯಾಗಿ ಜೂನ್ ೧ರಂದೇ ಆಗಮಿಸಲಿದೆ ಎಂದು ಅಧಿಕಾರಿ ನುಡಿದರು. ಚೆನ್ನೈಗೆ ಜೂನ್ ೪ರಂದು, ಪಂಜಿಮ್‌ಗೆ ಜೂನ್ ೭ರಂದು, ಹೈದರಾಬಾದಿಗೆ ಜೂನ್ ೮ರಂದು, ಪುಣೆಗೆ ಜೂನ್ ೧೦ರಂದು ಮತ್ತು ಮುಂಬೈಗೆ ಜೂನ್ ೧೧ರಂದು ಮುಂಗಾರು ಪ್ರವೇಶವಾಗಲಿದೆ. (ವಿವರಗಳಿಗೆ   ಇಲ್ಲಿ  ಕ್ಲಿಕ್ ಮಾಡಿರಿ)

2020: ಲಕ್ನೋ: ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಶಂಕಿತ ಕೊರೋನಾವೈರಸ್ ಸೋಂಕಿತ ರೋಗಿಯೊಬ್ಬರನ್ನು ಆಸ್ಪತ್ರೆಗೆ ಒಯ್ಯಲು ಹೋದ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ಮೇಲೆ ಕುಟುಂಬ ಸದಸ್ಯರು ಮತ್ತು ಆಸುಪಾಸಿನ ನಿವಾಸಿಗಳು ಕಲ್ಲೆಸೆದ ಘಟನೆ 2020 ಏಪ್ರಿಲ್ 15ರ ಬುಧವಾರ ಬಿಡುಗಡೆ ಘಟಿಸಿತು. ಮೊರಾದಾಬಾದ್ ಜಿಲ್ಲೆಯ ನವಾಬ್ ಪುರದ ನಾಗಫಾನಿಯಲ್ಲಿ ಈ ಘಟನೆ ಘಟಿಸಿತು. ಸ್ಥಳೀಯರ ಕಲ್ಲು ತೂರಾಟದಿಂದ ಹಲವಾರು ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ಆಂಬುಲೆನ್ಸ್ ಮತ್ತು ಎರಡು ಪೊಲೀಸ್ ವಾಹನಗಳೂ ಹಾನಿಗೊಂಡವು. ಘಟನೆಯನ್ನು ಅನುಸರಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ಅಡಿಯಲ್ಲಿ ದಾಳಿಕೋರರ ವಿರುದ್ಧ ಕಠಿಣ ಆರೋಪಗಳನ್ನು ಹೊರಿಸಿ ಕ್ರಮ ಕೈಗೊಳ್ಳಲು ಆಡಳಿತವು ನಿರ್ಧರಿಸಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ವರದಿಗಳ ಪ್ರಕಾರ ವ್ಯಕ್ತಿಯೊಬ್ಬ ಅಸ್ವಸ್ಥನಾಗಿದ್ದು ಆತನ್ನು ತೀರ್ಥಂಕರ ಮಹಾವೀರ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆತನ ಗಂಟಲ ದ್ರವದ ಮಾದರಿಗಳನ್ನು ಏಪ್ರಿಲ್ ೯ರಂದು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಏಪ್ರಿಲ್ ೧೨ರಂದು ವರದಿ ಬಂದಾಗ ಆತನಿಗೆ ಕೊರೋನಾವೈರಸ್ ಸೋಂಕು ತಗುಲಿದ್ದ ದೃಢಪಟ್ಟಿತ್ತು. ಅಸ್ವಸ್ಥ ವ್ಯಕ್ತಿ ಅದೇ ದಿನ ರಾತ್ರಿ ಮೃತನಾಗಿದ್ದ. ಆತನ ಕುಟುಂಬದ ಕೆಲವು ಸದಸ್ಯರನ್ನು ಐಎಫ್ ಟಿಎಂ ವಿಶ್ವವಿದ್ಯಾಲಯದ ಘಟಕದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ತಂಡ ಬುಧವಾರ ಮೃತ ರೋಗಿಯ ತಮ್ಮ ಜ್ವರದಿಂದ ನರಳುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಒಯ್ಯಲು ಆತನ ಮನೆಗೆ ಆಗಮಿಸಿತ್ತು. (ವಿವರಗಳಿಗೆ   ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಹಿನ್ನೆಲೆಯಲ್ಲಿ ಮೇ ೩ರ ವರೆಗೆ ವಿಸ್ತರಣೆಗೊಂಡ ರಾಷ್ಟ್ರವ್ಯಾಪಿ ದಿಗ್ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 2020 ಏಪ್ರಿಲ್ 15ರ ಬುಧವಾರ ಪ್ರಕಟಿಸಿರುವ ಪರಿಷ್ಕೃತ ಮಾರ್ಗದರ್ಶಿ ಸೂತ್ರದಲ್ಲಿ ವಾಹನ ಸಂಚಾರದ ವಿಚಾರದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಯಿತು. ಗೃಹ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿರುವ ನಿರ್ದೇಶನಗಳ ಪ್ರಕಾರ ದಿಗ್ಬಂಧನ ಕಾಲದಲ್ಲಿ ಅಗತ್ಯ ಸೇವೆಗಾಗಿ ಸಂಚರಿಸಲು ಅನುಮತಿ ಪಡೆದ ಖಾಸಗಿ ಚತುಷ್ಚಕ್ರ ವಾಹನದಲ್ಲಿ (ಕಾರು, ಜೀಪು) ಚಾಲಕನನ್ನು ಹೊರತು ಪಡಿಸಿ ಹಿಂಬದಿಯ ಸೀಟಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಕುಳಿತು ಪ್ರಯಾಣ ಮಾಡಬಹುದು. ದ್ವಿಚಕ್ರವಾಹನವಾಗಿದ್ದರೆ ವಾಹನ ಸವಾರ ತನ್ನ ಜೊತೆಗೆ ಹಿಂಬದಿ ಸವಾರನನ್ನು ಒಯ್ಯುವಂತಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿತು. ‘ದಿಗ್ಬಂಧನ ವೇಳೆಯಲ್ಲಿ ತುರ್ತು ಸೇವೆಗಳಿಗಾಗಿ ವೈದ್ಯಕೀಯ ಮತ್ತು ಪಶುವೈದ್ಯ ಸೇವೆಗೆ ಮತ್ತು ಅಗತ್ಯ ವಸ್ತುಗಳನ್ನು ಪಡೆಯಲು ಖಾಸಗಿ ವಾಹನಗಳಿಗೆ ಅವಕಾಶ ನೀಡಲಾಗುವುದು. ಇಂತಹ ಸಂದರ್ಭಗಳಲ್ಲಿ, ನಾಲ್ಕು ಚಕ್ರದ ವಾಹನವಾಗಿದ್ದರೆ ಅಂತಹ ಖಾಸಗಿ ವಾಹನದ ಚಾಲಕನನ್ನು ಹೊರತು ಪಡಿಸಿ ಒಬ್ಬ ಪ್ರಯಾಣಿಕನಿಗೆ ಮಾತ್ರ ಹಿಂಬದಿಯ ಆಸನದಲ್ಲಿ ಕುಳಿತು ಪಯಣಿಸಲು ಅವಕಾಶ ಇದೆ, ಏನಿದ್ದರೂ ದ್ವಿಚಕ್ರ ವಾಹನವಾಗಿದ್ದರೆ ವಾಹನದ ಚಾಲಕನಿಗೆ ಮಾತ್ರವೇ ಅನುಮತಿ ನೀಡಲಾಗುವುದು ಎಂದು ಸಚಿವಾಲಯದ ಪ್ರಕಟಣೆ ಹೇಳಿತು. (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿನ ಸಂಖ್ಯೆ ೧೨,೦೦೦ ಸಮೀಪಕ್ಕೆ ಬಂದಿದ್ದು, ಸಾವಿನ ಸಂಖ್ಯೆ ೩೯೨ಕ್ಕೆ ಏರಿದೆ. ಇದೇ ವೇಳೆಗೆ ಕೇಂದ್ರ ಸರ್ಕಾರವು ದೇಶದ ೧೭೦ ಜಿಲ್ಲೆಗಳನ್ನು ಕೋವಿಡ್-೧೯ ಹಾಟ್‌ಸ್ಪಾಟ್‌ಗಳು ಎಂಬುದಾಗಿ ಗುರುತಿಸಿ, ಅವುಗಳನ್ನು ಕೆಂಪು ವಲಯ (ರೆಡ್ ಜೋನ್) ಎಂಬುದಾಗಿ 2020 ಏಪ್ರಿಲ್ 15ರ ಬುಧವಾರ ಬಿಡುಗಡೆ ವರ್ಗೀಕರಿಸಿತು. ‘ರೆಡ್ ಜೋನ್ ಎಂಬುದಾಗಿ ವರ್ಗೀಕರಿಸಲಾಗಿರುವ ಈ ಜಿಲ್ಲೆಗಳಲ್ಲಿ  ಕೊರೋನಾವೈರಸ್ ಹರಡದಂತೆ ತಡೆಯಲು ಅತ್ಯಂತ ಕಠಿಣ ದಿಗ್ಬಂಧನ (ಲಾಕ್‌ಡೌನ್) ಜಾರಿಯಾಗಲಿದೆ. ರೆಡ್ ಜೋನ್ ಅಥವಾ ಹಾಟ್‌ಸ್ಪಾಟ್‌ಗಳು ಎಂಬುದಾಗಿ ಸರ್ಕಾರವು ಗುರುತಿಸಿರುವ ಜಿಲ್ಲೆಗಳ ಪೈಕಿ ಹೆಚ್ಚಿನ ಜಿಲ್ಲೆಗಳು ತಮಿಳುನಾಡಿನಲ್ಲಿ (೩೭ ಜಿಲ್ಲೆಗಳ ಪೈಕಿ ೨೨) ಇದ್ದು, ಮಹಾರಾಷ್ಟ್ರದಲ್ಲಿ ೧೪ ಜಿಲ್ಲೆಗಳು, ಉತ್ತರ ಪ್ರದೇಶದಲ್ಲಿ ೧೩ ಜಿಲ್ಲೆಗಳು, ರಾಜಸ್ಥಾನದಲ್ಲಿ ೧೨ ಜಿಲ್ಲೆಗಳು, ಆಂದ್ರಪ್ರದೇಶದಲ್ಲಿ ೧೧ ಜಿಲ್ಲೆಗಳು ಮತ್ತು ದೆಹಲಿಯಲ್ಲಿ ೧೦ ಜಿಲ್ಲೆಗಳು ಹಾಟ್‌ಸ್ಪಾಟ್‌ಗಳು ಎಂಬುದಾಗಿ ವರ್ಗೀಕರಣಗೊಂಡವು. ೬೦೦ಕ್ಕೂ ಹೆಚ್ಚು ಪ್ರಕರಣಗಳು ಇರುವ ತೆಲಂಗಾಣ ರಾಜ್ಯವು ೯ ಹಾಟ್‌ಸ್ಪಾಟ್ ಜಿಲ್ಲೆಗಳೊಂದಿಗೆ ನಂತರದ ಸ್ಥಾನದಲ್ಲಿದ್ದು, ತಲಾ ೮ ಜಿಲ್ಲೆಗಳೊಂದಿಗೆ ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕವು ತೆಲಂಗಾಣದ ಹಿಂದೆ ಇವೆ. ಕೇರಳವು ೭, ಗುಜರಾತ್, ಮಧ್ಯಪ್ರದೇಶ ಮತ್ತು ಹರಿಯಾಣ ತಲಾ ೬ ಹಾಟ್‌ಸ್ಟಾಟ್ ಜಿಲ್ಲೆಗಳನ್ನು ಹೊಂದಿವೆ. ಅಸ್ಸಾಂ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ೫ ರೆಡ್ ಜೋನ್ ಜಿಲ್ಲೆಗಳಿದ್ದು ಇಲ್ಲಿ ಗುಂಪು ರೋಗ ಲಕ್ಷಣಗಳು ಕಾಣಿಸಿವೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ೪ ರೆಡ್ ಜೋನ್ ಜಿಲ್ಲೆಗಳಿವೆ. ರೆಡ್ ಜೋನ್ ಜಿಲ್ಲೆಗಳನ್ನು ಕೂಡಾ ದೊಡ್ಡ ಪ್ರಮಾಣದ ಅಥವಾ ಗುಂಪು ಪಿಡುಗಿನ ಜಿಲ್ಲೆಗಳಾಗಿ ವರ್ಗೀಕರಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಪಿಡುಗು ಕಂಡು ಬಂದ ಜಿಲ್ಲೆಗಳಲ್ಲಿ ಏಕರೂಪದ ನಿರ್ಬಂಧಗಳಿದ್ದರೆ, ಗುಂಪು ಪಿಡುಗು ಕಂಡು ಬಂದ ಜಿಲ್ಲೆಗಳಲ್ಲಿ ಅತ್ಯಂತ ಕಠಿಣ ನಿರ್ಬಂಧಗಳು ಜಾರಿಯಾಗುವ ಸಾಧ್ಯತೆಗಳಿವೆ. (ವಿವರಗಳಿಗೆ   ಇಲ್ಲಿ  ಕ್ಲಿಕ್ ಮಾಡಿರಿ)



No comments:

Post a Comment