ನಾನು ಮೆಚ್ಚಿದ ವಾಟ್ಸಪ್

Thursday, April 19, 2018

ಇಂದಿನ ಇತಿಹಾಸ History Today ಏಪ್ರಿಲ್ 18

ಇಂದಿನ ಇತಿಹಾಸ History Today ಏಪ್ರಿಲ್ 18
 2018: ಚೆನ್ನೈ: ಪ್ರಶ್ನೆಯೊಂದನ್ನು ಕೇಳಿದ ಪತ್ರಕರ್ತೆಯ ಗಲ್ಲ ತಟ್ಟಿ ವಿವಾದಕ್ಕೆ ಗುರಿಯಾದ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಆಕೆಯ ಕ್ಷಮೆಯಾಚಿಸಿದ ಘಟನೆ ಇಲ್ಲಿ ಘಟಿಸಿತು.  ಪತ್ರಕರ್ತೆ ಲಕ್ಷ್ಮಿ ಸುಬ್ರಮಣಿಯನ್ ಅವರಿಗೆ ಕ್ಷಮೆಯಾಚಿಸಿ ಪತ್ರವೊಂದನ್ನು ಬರೆದ ರಾಜ್ಯಪಾಲರು ಪ್ರಶ್ನೆಗೆ ಮೆಚ್ಚುಗೆಯಾಗಿ ತಾವು ಆಕೆಯ ಗಲ್ಲ ತಟ್ಟಿದುದಾಗಿ ಹೇಳಿದರು.  ನೀನು ನನ್ನ ಮೊಮ್ಮಗಳಿನಂತೆ ಎಂಬುದಾಗಿ ಪರಿಗಣಿಸಿ ನಾನು ನಿನ್ನ ಗಲ್ಲ ತಟ್ಟಿದ್ದೇನೆ. ಪತ್ರಕರ್ತನಾಗಿ ನಾನು ಕೂಡಾ ೪೦ ವರ್ಷ ದುಡಿದಿರುವುದರಿಂದ, ಪತ್ರಕರ್ತೆಯಾಗಿ ನಿನ್ನ ಕಾರ್ಯನಿರ್ವಹಣೆಗೆ ಮೆಚ್ಚುಗೆ ವ್ಯಕ್ತ ಪಡಿಸಲು ಮತ್ತು ಪ್ರೀತಿಯಿಂದ ನಾನು ಹಾಗೆ ಮಾಡಿದೆ ಎಂದು ಪುರೋಹಿತ್ ಪತ್ರದಲ್ಲಿ ಬರೆದಿದ್ದಾರೆ.  ನಿನ್ನ ಮಿಂಚಂಚೆಯಿಂದ ಘಟನೆ ನಿನ್ನ ಭಾವನೆಗಳಿಗೆ ನೋವು ಉಂಟು ಮಾಡಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನಿನ್ನ ಭಾವನೆಗಳಿಗೆ ಆಗಿರುವ ನೋವಿಗಾಗಿ ನನ್ನ ವಿಷಾದ ವ್ಯಕ್ತ ಪಡಿಸಲು ಮತ್ತು ಕ್ಷಮೆಯಾಚಿಸಲು ನಾನು ಬಯಸುತ್ತೇನೆ ಎಂದೂ ರಾಜ್ಯಪಾಲರು ಬರೆದರು. ಕ್ಷಮೆಯಾಚನೆಗೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್ ಅವರು ತಾನು ಕ್ಷಮಾಯಾಚನೆಯನ್ನು ಅಂಗೀಕರಿಸಿರುವುದಾಗಿ ಹೇಳಿದರು. ಆದರೆ ನಿಮ್ಮ (ರಾಜ್ಯಪಾಲರು) ಪ್ರತಿಪಾದನೆ ನನಗೆ ಸಮಾಧಾನ ನೀಡಿಲ್ಲ ಎಂದು ಹೇಳಿದರು.  ೭೮ರ ಹರೆಯದ ರಾಜ್ಯಪಾಲರು ರಾಜಭವನದಲ್ಲಿ ಕಿಕ್ಕಿರಿದ ಪತ್ರಿಕಾಗೋಷ್ಠಿ ಮುಗಿಸಿ ಹೊರ ಹೊರಡುತ್ತಿದ್ದಾಗ ಘಟನೆ ಸಂಭವಿಸಿತ್ತು.  ಪ್ರಮುಖ ಇಂಗ್ಲಿಷ್ ನಿಯತಕಾಲಿಕವೊಂದರ ಪತ್ರಕರ್ತೆ ಲಕ್ಷ್ಮಿ ನಾನು ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ಅವರ ಪತ್ರಿಕಾಗೋಷ್ಠಿಯ ಮುಗಿಯುತ್ತಿದ್ದ ಹೊತ್ತಿನಲ್ಲಿ ಪ್ರಶ್ನೆಯೊಂದನ್ನು ಕೇಳಿದೆ. ನನ್ನನ್ನು ಪ್ರೋತ್ಸಾಹಿಸಲು? ಮತ್ತು ಒಪ್ಪಿಗೆಯಿಲ್ಲದೆಯೇ? ಉತ್ತರ ರೂಪವಾಗಿ ಅವರು ನನ್ನ ಗಲ್ಲ ತಟ್ಟಿದರು ಎಂದು ಟ್ವೀಟ್ ಮಾಡಿದ್ದರು.  ಘನ ರಾಜ್ಯಪಾಲರಿಗೆ ನಾನು ಮಾತುಗಳನ್ನು ಹೇಳಬೇಕಾಗಿದೆ. ಮಿಸ್ಟರ್ ಪುರೋಹಿತ್ ಅವರೇ ನೀವು ಮೆಚ್ಚುಗೆಪೂರ್ವಕವಾಗಿ ಕೆಲಸ ಮಾಡಿರಬಹುದು ಅಥವಾ ಅಜ್ಜನಂತಹ ಭಾವನೆಯಿಂದ ಮಾಡಿರಬಹುದು. ಆದರೆ ನನಗೆ ನೀವು ಮಾಡಿದ್ದು ತಪ್ಪೆನಿಸುತ್ತಿದೆ ಎಂದು ಲಕ್ಷ್ಮಿ ಬರೆದಿದ್ದರು.  ಇದು ವೃತ್ತಿಪರ ವರ್ತನೆಯಲ್ಲ ಮತ್ತು ಅಪರಿಚಿತರನ್ನು ಅವರ ಒಪ್ಪಿಗೆ ಇಲ್ಲದೆ ಸ್ಪರ್ಶಿಸುವುದು ಸರಿಯಲ್ಲ ಎಂದೂ ಅವರು ಬರೆದಿದ್ದರು. ಘನ ಹುದ್ದೆಯಲ್ಲಿರುವ ಪುರೋಹಿತ್ ಅವರ ವರ್ತನೆಗೆ ಪತ್ರಕರ್ತರೂ ಆಕ್ರೋಶ ವ್ಯಕ್ತಪಡಿಸಿ, ಬೇಷರತ್ ಕ್ಷಮೆ ಯಾಚನೆಗೆ ಪಟ್ಟು ಹಿಡಿದಿದ್ದರು.  ಏಪ್ರಿಲ್  17ರ ಮಂಗಳವಾರ ರಾತ್ರಿ ಪುರೋಹಿತ್ ಅವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಲುಕಿದ್ದ ಪ್ರಾಧ್ಯಾಪಕನೋರ್ವನ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದಿದ್ದು ವೇಳೆ ಘಟನೆ ಘಟಿಸಿತ್ತು.  ಪುರೋಹಿತ್ ಅವರಿಗೆ ಸಾಮಾಜಿಕ ತಾಣದಲ್ಲಿ ಹಲವರು ಬೆಂಬಲ ಸೂಚಿಸಿ,  ಟ್ವೀಟ್ ಮಾಡಿ ಇದು ಗುಡ್ ಟಚ್, ದುರುದ್ದೇಶದಿಂದ ಕೂಡಿರಲ್ಲಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಮಧುರೈ ಕಾಮರಾಜ್ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಜತೆ ಹಾಸಿಗೆ ಹಂಚಿಕೊಂಡಲ್ಲಿ, ಅಂಥ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಆರ್ಥಿಕ ಸವಲತ್ತು ನೀಡುವುದಾಗಿ ಮಹಿಳಾ ಪ್ರೊಫೆಸರ್ ಒಬ್ಬರು ಆಮಿಷವೊಡ್ಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಿನ್ನೆಲೆಯಲ್ಲಿ ವಿರುಧನಗರ್ನ ದೇವಾಂಗ ಆರ್ಟ್ಸ್ ಕಾಲೇಜಿನಲ್ಲಿ ಗಣಿತ ಪ್ರೊಫೆಸರ್ ಆಗಿದ್ದ ನಿರ್ಮಲಾ ದೇವಿ (೪೬) ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು.  ಬಂಧಿತೆ ನಿರ್ಮಲಾ ತಮ್ಮ ಮೇಲಿನ ಆರೋಪ ಸುಳ್ಳು. ತಮಗೆ ರಾಜ್ಯಪಾಲರ ಪರಿಚಯವಿದೆ ಎಂದು ಪೊಲೀಸರಿಗೆ ಹೇಳಿದ್ದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆದು  ಸ್ಪಷ್ಟನೆ ನೀಡಿದ್ದ ರಾಜ್ಯಪಾಲರು, ಮಹಿಳಾ ಪ್ರೊಫೆಸರ್ ತಮಗೆ ಪರಿಚಯವಿಲ್ಲ. ಅವರು ಯಾರೆಂದೇ ಗೊತ್ತಿಲ್ಲ ಎಂದು ಹೇಳಿದ್ದರು.

2018: ನವದೆಹಲಿ:  ಕಥುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ರಾಷ್ಟ್ರಪತಿ ರಾಮ್ನಾಥ್ಕೋವಿಂದ್ಅವರು ತೀವ್ರವಾಗಿ ಖಂಡಿಸಿದರು.  ಕಾತ್ರಾದ ಶ್ರೀ ಮಾತಾ  ವೈಷ್ಣೋದೇವಿ  ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ರಾಷ್ಟ್ರಪತಿ 'ಸ್ವಾತಂತ್ರ್ಯ ದೊರಕಿ 70 ವರ್ಷಗಳಾದರೂ ಕಥುವಾದಂತಹ ಪ್ರಕರಣಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ .ನಾವು ಎಂಥಹ ಸಮಾಜವನ್ನು ಬೆಳೆಸುತ್ತಿದ್ದೇವೆ. ಮುಂದೆ ಯಾವುದೇ ಹೆಣ್ಣಿನ ಮೇಲೆ ಇಂತಹ ಹೇಯ ಕೃತ್ಯ ನಡೆಯಬಾರದು ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು' ಎಂದರುಪ್ರಧಾನಿ ನರೇಂದ್ರ ಮೋದಿ ಅವರು ಕಥುವಾ ಘಟನೆಯನ್ನು ಖಂಡಿಸಿ ಸರಣಿ  ಟ್ವೀಟ್ಗಳನ್ನು ಮಾಡಿದ ಬೆನ್ನಲ್ಲೇ   ರಾಷ್ಟ್ರಪತಿ ಹೇಳಿಕೆ ನೀಡಿದರು.
2018: ದಾವಣಗೆರೆವೀರಶೈವ ಪಂಚಮಸಾಲಿ ಗುರುಪೀಠಕ್ಕೆ ನೂತನ ಸ್ವಾಮೀಜಿಯಾಗಿ ಶ್ವಾಸ ಗುರು ವಚನಾನಂದ ಸ್ವಾಮೀಜಿ ಆಯ್ಕೆಯಾದರು. ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಅವರು  ಘೋಷಣೆ ಮಾಡಿದರು.  ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಬಳಿ ವೀರಶೈವ ಪಂಚಮಸಾಲಿ ಜಗದ್ಗುರು ಪೀಠ ಇದೆ. ಪೀಠದ ಧರ್ಮದರ್ಶಿ ಸಮಿತಿ ಸಭೆಯಲ್ಲಿ ವಚನಾನಂದ ಸ್ವಾಮೀಜಿ ಅವರ ಆಯ್ಕೆಗೆ ಸಮಿತಿ ಸಮ್ಮತಿಸಿದೆ. ಇದೇ 20ರಂದು ವಚನಾನಂದ ಸ್ವಾಮೀಜಿಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಪೀಠಕ್ಕಾಗಿ 40 ಜನ ಸ್ವಾಮೀಜಿಗಳ ಸಂದರ್ಶನ ನಡೆಸಲಾಗಿತ್ತು. ಇವರಲ್ಲಿ ವಚನಾನಂದ ಸ್ವಾಮೀಜಿ ಆಯ್ಕೆಯಾದರು.


2017: ಲಂಡನ್ : ಸ್ಟೇಟ್ಬ್ಯಾಂಕ್ಆಫ್ಇಂಡಿಯಾ (ಎಸ್ಬಿಐ) ಸೇರಿದಂತೆ ದೇಶದ ವಿವಿಧ ಬ್ಯಾಂಕ್ಗಳಿಗೆ ಸಾಲ ಮರುಪಾವತಿಸದಘೋಷಿತ ಅಪರಾಧಿ’, ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ನಲ್ಲಿ ಬಂಧಿಸಿಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ‘ವಂಚನೆ ಆರೋಪ ಎದುರಿಸುತ್ತಿರುವ ಅವರನ್ನು ನಮಗೆ ಹಸ್ತಾಂತರಿಸಬೇಕುಎಂದು ಭಾರತ ಮಾಡಿದ್ದ ಮನವಿ ಆಧರಿಸಿ ಮಲ್ಯ ಅವರನ್ನು ಸ್ಕಾಟ್ಲೆಂಡ್ಯಾರ್ಡ್ಪೊಲೀಸರು ಲಂಡನ್ನಲ್ಲಿ ಬಂಧಿಸಿದರು. ಮಲ್ಯ ಅವರನ್ನು ದೇಶಕ್ಕೆ ಕರೆತರುವ ಪ್ರಕ್ರಿಯೆಯಲ್ಲಿ ಇದು ಮೊದಲ ಹೆಜ್ಜೆ ಎಂದು ಭಾರತದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ‘ಬ್ರಿಟನ್ ಭೇಟಿ ವೇಳೆ ಮಲ್ಯ ಅವರ ಹಸ್ತಾಂತರ ವಿಚಾರವನ್ನೂ ಪ್ರಸ್ತಾಪಿಸಲಾಗುವುದುಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ ಕೆಲವೇ ವಾರಗಳಲ್ಲಿ ಬೆಳವಣಿಗೆ ನಡೆಯಿತು. ಲಂಡನ್ ಪೊಲೀಸ್ಠಾಣೆಯೊಂದರಲ್ಲಿ ಬೆಳಗ್ಗೆ ಹಾಜರಾದ ಮಲ್ಯ ಅವರನ್ನು ಬಂಧಿಸಲಾಯಿತು. ನಂತರ ವೆಸ್ಟ್ಮಿನ್ಸ್ಟರ್ಮ್ಯಾಜಿಸ್ಟ್ರೇಟ್ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತು. ಕೇಂದ್ರದ ಪ್ರತಿಕ್ರಿಯೆ: ಮಲ್ಯ ಅವರನ್ನು ಭಾರತಕ್ಕೆ ಹೇಗೆ ಮರಳಿ ತರಬಹುದು, ಅವರ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಹೇಗೆ ಆರಂಭಿಸಬಹುದು ಎಂಬುದನ್ನು ಆಲೋಚಿಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ನವದೆಹಲಿಯಲ್ಲಿ ಹೇಳಿದರು. ಮಲ್ಯ ಒಡೆತನದ, ಈಗ ಸ್ಥಗಿತಗೊಂಡಿರುವ ಕಿಂಗ್ಫಿಷರ್ಏರ್ಲೈನ್ಸ್ಕಂಪೆನಿಯು ₹9,000 ಕೋಟಿಗಿಂತ ಹೆಚ್ಚು ಮೊತ್ತದ ಸಾಲ ಹಿಂದಿರುಗಿಸಬೇಕಿದೆ. ಮಲ್ಯ ಅವರು 2016 ಮಾರ್ಚ್‌ 2ರಂದು ದೇಶದಿಂದ ಪರಾರಿಯಾಗಿದ್ದರು. ಇದಾದ ನಂತರ ಭಾರತ ಸರ್ಕಾರ ಮಲ್ಯ ಅವರ ಪಾಸ್ಪೋರ್ಸ್ರದ್ದು ಮಾಡಿದೆ. ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತವು ಫೆಬ್ರುವರಿ 8ರಂದು ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತುಲಂಡನ್ನ್ಯಾಯಾಲಯದಲ್ಲಿ ಮಲ್ಯ ಅವರ ಹಸ್ತಾಂತರ ಪ್ರಕರಣದ ವಿಚಾರಣೆ ಕೆಲವು ವಾರಗಳಲ್ಲಿ ಆರಂಭವಾಗಲಿದೆ ಎಂದು ವರದಿಗಳು ತಿಳಿಸಿದವು. ರೂ.  5 ಕೋಟಿ ಬಾಂಡ್!: ಮಲ್ಯ ಅವರು ಜಾಮೀನಿಗೆ ಪ್ರತಿಯಾಗಿ ನ್ಯಾಯಾಲಯಕ್ಕೆ 6.50 ಲಕ್ಷ ಪೌಂಡ್‌ (ರೂ. 5.35ಕೋಟಿ) ಮೌಲ್ಯದ ಬಾಂಡ್ನೀಡಿದ್ದಾರೆ. ಅವರು ಮೇ 17ರಂದು ನ್ಯಾಯಾಲಯಕ್ಕೆ ಮತ್ತೆ ಹಾಜರಾಗಬೇಕು.
2017: ಚೆನ್ನೈ: ತಮಿಳುನಾಡಲ್ಲಿ ಇತಿಹಾಸ ಮರುಕಳಿಸಿತು.  ಜಯಲಲಿತಾ ನಿಧನದ ಬಳಿಕ ಪನ್ನೀರಸೆಲ್ವಂ ಅವರನ್ನು ಸಿಎಂ ಗದ್ದುಗೆಯಿಂದ ಕೆಳಗಿಳಿಸಿ ಪಳನಿಸ್ವಾಮಿಗೆ ಸಿಎಂ ಪಟ್ಟ ಕಟ್ಟಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಈಗ ತಾವೇ ತಲೆದಂಡ ತೆರುವಂತಾಯಿತು. ಪಕ್ಷದ ಬಂಡಾಯ ನಾಯಕ ಪನ್ನೀರಸೆಲ್ವಂ ಜತೆ ಮರುದೋಸ್ತಿಗೆ ಕೈಜೋಡಿಸಿದ ಪಳನಿಸ್ವಾಮಿ, ಶಶಿಕಲಾ ಹಾಗೂ ಟಟಿವಿ ದಿನಕರನ್ ಅವರನ್ನೇ ಪಕ್ಷದಿಂದ ಉಚ್ಚಾಟಿಸಿದರು. ಪಕ್ಷದ ಚಿಹ್ನೆಎರಡೆಲೆಪಡೆಯುವುದಕ್ಕಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡುವ ಯತ್ನ ನಡೆಸಿ ಸಿಕ್ಕಿಬಿದ್ದ ದಿನಕರನ್ ವಿರುದ್ಧ ಕೆಂಡಾಮಂಡಲವಾಗಿದ್ದ ಪಳನಿಸ್ವಾಮಿ ಸರ್ಕಾರ ದಿಢೀರ್ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪನ್ನೀರಸೆಲ್ವಂ ಸಾಂಗತ್ಯಕ್ಕೆ ಮೊರೆ ಹೋಯಿತು. ಸಂಧಾನ ಪ್ರಕ್ರಿಯೆಗಾಗಿ ಪಕ್ಷದ 9 ಹಿರಿಯರ ತಂಡ ಸೆಲ್ವಂ ಜತೆ ಮಾತುಕತೆಯನ್ನೂ ನಡೆಸಿತು. ಪಕ್ಷದ ಜತೆ ವಿಲೀನವಾಗಲು ಪನ್ನೀರ್ ಸಮ್ಮತಿಸಿದರಾದರೂ ಇದಕ್ಕೆ ಶಶಿಕಲಾ ಹಾಗೂ ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂಬ ಷರತ್ತು ಮುಂದಿಟ್ಟಿದ್ದರು. ಈದಿನ ರಾತ್ರಿ ನಡೆದ ಎಐಎಡಿಎಂಕೆ ಸಭೆಯಲ್ಲಿ ಇಬ್ಬರನ್ನು ಪಕ್ಷದಿಂದ ಉಚ್ಚಾಟಿಸುವ ಮಹತ್ವದ ತೀರ್ಮಾನ ಹೊರಬಿದ್ದಿತು. ಮುಖ್ಯಮಂತ್ರಿ ಕೈಗೊಂಡ ನಿರ್ಣಯಕ್ಕೆ 122 ಶಾಸಕರು ಬೆಂಬಲ ಸೂಚಿಸಿದ್ದಾರೆಂದು ಸಚಿವ ಡಿ. ಜಯಕುಮಾರ್ ಮಾಹಿತಿ ನೀಡಿದರು. ತಮಿಳುನಾಡು ರಾಜಕೀಯ: 2016 ಸೆ. 22- ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾದ ಜಯಲಲಿತಾ. ಡಿ. 5 – ಮಧ್ಯರಾತ್ರಿ ಸಿಎಂ ಆಗಿ ಆಯ್ಕೆಯಾದ ಪನ್ನೀರ್ ಸೆಲ್ವಂ. ಡಿ 29 – ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಆಯ್ಕೆ. 2017 ಫೆ 5- ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಶಶಿಕಲಾ ಆಯ್ಕೆ. ಫೆ 5 – ವೈಯಕ್ತಿಕ ಕಾರಣ ಕೊಟ್ಟು ಪನ್ನೀರ ಸೆಲ್ವಂ ರಾಜೀನಾಮೆ. ಫೆ 7 – ಶಶಿಕಲಾ ವಿರುದ್ಧ ತಿರುಗಿಬಿದ್ದ ಪನ್ನೀರ ಸೆಲ್ವಂ. ಫೆ 14 – ಅಕ್ರಮ ಆಸ್ತಿ ಕೇಸ್ನಲ್ಲಿ ಶಶಿಕಲಾಗೆ ಜೈಲು ಶಿಕ್ಷೆ. ಫೆ 16 – ಎಡಪ್ಪಾಡಿ ಪಳನಿಸ್ವಾಮಿ ಸಿಎಂ ಆಗಿ ಆಯ್ಕೆ. ಮಾ.9 – ಆರ್.ಕೆ.ನಗರ ಉಪ ಚುನಾವಣೆಗೆ ದಿನಾಂಕ ಘೋಷಣೆ. ಮಾ 22 – ಎಐಎಡಿಎಂಕೆಯ ಚಿಹ್ನೆಯನ್ನು ರದ್ದು ಮಾಡಿದ ಚುನಾವಣಾ ಆಯೋಗ. ಮಾ 23 – ಪನ್ನೀರ್ಸೆಲ್ವಂ ಹಾಗೂ ಶಶಿಕಲಾ ಬಣಗಳಿಗೆ ಪ್ರತ್ಯೇಕ ಚಿಹ್ನೆ. ಏ 17 – ಎರಡೆಲೆ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಟಿಟಿವಿ ದಿನಕರನ್ ಲಂಚ ಆರೋಪ. ಏ 17- ಎಐಎಡಿಎಂಕೆ ಸಚಿವರಿಂದ ತುರ್ತು ಸಭೆ, ಒಗ್ಗಟ್ಟಿನ ಮಂತ್ರ ಜಪಿಸಿದ ಸಚಿವರು. ಏ 18- ಪಕ್ಷದ ಶಾಸಕಾಂಗ ಸಭೆಮಾಜಿ ಸಿಎಂ ಪನ್ನೀರ್ಸೆಲ್ವಂಗೂ ಆಹ್ವಾನ.
2017: ಕ್ಯಾನ್ ಬೆರಾ: ಮೆರಿಕ ಬಳಿಕ ಇದೀಗ ಆಸ್ಟ್ರೇಲಿಯಾವೂ ವಿದೇಶಿಯರಿಗೆ ವೀಸಾಘಾತ ನೀಡಿತು. ಅಕ್ರಮ ವಲಸಿಗರ ತಡೆಗಾಗಿ ಎಚ್1-ಬಿ ವೀಸಾ ರದ್ದುಗೊಳಿಸುವ ಮೂಲಕ ಭಾರತ ಸೇರಿದಂತೆ ವಿಶ್ವರಾಷ್ಟ್ರಗಳಲ್ಲಿ ತಲ್ಲಣ ಮೂಡಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾದಿಯನ್ನೇ ತುಳಿದ ಆಸೀಸ್ ಸರ್ಕಾರ ಭಾರತೀಯರ ಅಚ್ಚುಮೆಚ್ಚಿನ ವೀಸಾ ಎಂದೇ ಜನಪ್ರಿಯವಾಗಿರುವ ‘457 ವೀಸಾವನ್ನು ದಿಢೀರ್ ರದ್ದುಗೊಳಿಸಿತು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಸ್ಪಷ್ಟಪಡಿಸಿದರು. ಏನಿದು 457 ವೀಸಾವೃತ್ತಿಪರ ಮಾನವ ಸಂಪನ್ಮೂಲ ಕೊರತೆ ಎದುರಾದಾಗ ವಿದೇಶಿ ನೌಕರರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಆಸ್ಟ್ರೇಲಿಯಾ ಸರ್ಕಾರ 4 ವರ್ಷ ಅವಧಿಯ ‘457’ ವೀಸಾವನ್ನು ಪರಿಚಯಿಸಿತ್ತುಹೊಸ ನೀತಿಯಲ್ಲೇನಿದೆ: 650 ಬಗೆಯ ಕೆಲಸಗಳಿಗಿದ್ದ ವೀಸಾ ಮಾನದಂಡ 350ಕ್ಕೆ ಇಳಿಕೆ.  ಕಾಲ್ಸೆಂಟರ್, ಮ್ಯಾನೇಜರ್, ನಟನೆ ಮತ್ತಿತರ ಕ್ಷೇತ್ರಗಳೂ ಮಾನ್ಯತೆ ಕಳೆದುಕೊಂಡವು.
2009: ಪ್ರವಾಸಿಗರ ನೆಚ್ಚಿನ ಸ್ಥಳಗಳನ್ನು ನಾಶ ಮಾಡುವ ಮೂಲಕ ಮುಂಬೈನ ಆರ್ಥಿಕತೆಗೆ ಧಕ್ಕೆ ತರಲು ತಮ್ಮ ತಂಡ ಯೋಜಿಸಿತ್ತು ಎಂದು ನವೆಂಬರ 26ರ ಭಯೋತ್ಪಾದಕರ ದಾಳಿಯ ಆರೋಪಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಾಬ್ ಹೇಳಿರುವುದು ಬೆಳಕಿಗೆ ಬಂತು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ಎದುರು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ್ ನಿಕಂ ಅವರು ಓದಿ ಹೇಳಿದ ಕಸಾಬ್‌ನ ತಪ್ಪೊಪ್ಪಿಗೆ ಹೇಳಿಕೆಯಿಂದ ಈ ವಿಷಯ ಹೊರಬಿದ್ದಿತು.

2009: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತ ಮೂಲದ ರಾಜ್ ಶಾ ಹಾಗೂ ಅನೀಶ್ ಪೌಲ್ ಚೋಪ್ರಾ ಅವರನ್ನು ತಮ್ಮ ಆಡಳಿತದ ಪ್ರಮುಖ ಹುದ್ದೆಗಳಿಗೆ ನೇಮಿಸಿಕೊಂಡರು. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಪಾರದರ್ಶಕ, ದಕ್ಷ ಹಾಗೂ ಪರಿಣಾಮಕಾರಿ ಆಡಳಿತ ನೀಡುವ ಸಂಬಂಧ ಒಬಾಮ ನೀಲನಕ್ಷೆ ತಯಾರಿಸಿದ್ದು ಈ ಕಾರ್ಯದಲ್ಲಿ ಇದೀಗ ನೇಮಕಗೊಂಡಿರುವ ಈ ಅಧಿಕಾರಿಗಳು ಮಹತ್ವದ ಪಾತ್ರ ವಹಿಸುವರು. ಶಾ ಅವರನ್ನು ಕೃಷಿ ಇಲಾಖೆಯ ಸಂಶೋಧನೆ, ಶಿಕ್ಷಣ ಹಾಗೂ ಆರ್ಥಿಕ ವಿಭಾಗಕ್ಕೆ ಅಧೀನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಚೋಪ್ರಾ ಅವರು ಮುಖ್ಯ ನಿರ್ವಹಣಾ ಅಧಿಕಾರಿಯಾಗಿ ಮತ್ತು ಕುಂದ್ರ ಅವರನ್ನು ಮುಖ್ಯ ವಾರ್ತಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ವಾರದ ರೇಡಿಯೊ ಭಾಷಣದಲ್ಲಿ ಒಬಾಮ ಪ್ರಕಟಿಸಿದರು.

2009: ಮಬ್ಬು ಬೆಳಕಿನ ಪಬ್ಬಿನಲ್ಲಿ ಕೆಲವರು ಚುರುಕಾಗುವುದು ಎಲ್ಲರಿಗೂ ಗೊತ್ತು. ಆದರೆ ಇದು ಕೇವಲ ಪಬ್ಬಿಗೆ ಮಾತ್ರ ಅನ್ವಯವಾಗುವ ಮಾತಲ್ಲ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದರು. ನ್ಯೂ ಸೌತ್ ವೇಲ್ಸ್ ವಿ.ವಿ.ಯ ಸಂಶೋಧಕರ ಪ್ರಕಾರ, ಸುತ್ತಲ ವಾತಾವರಣದಲ್ಲಿ ಮಬ್ಬು ಆವರಿಸಿದ್ದಾಗ ಮನುಷ್ಯನ ಮನಸ್ಸು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆಯಂತೆ! ಅಷ್ಟೇ ಅಲ್ಲ, ಮನುಷ್ಯನ ಮನಸ್ಸನ್ನು ಸ್ವಲ್ಪಮಟ್ಟಿನ ದುಃಖದ ಭಾವ-ಛಾಯೆ ಆವರಿಸಿದ್ದರೆ ಅದೂ ಒಳ್ಳೆಯ ಪರಿಣಾಮವನ್ನೇ ಉಂಟುಮಾಡುತ್ತದೆ ಎಂದು ಸಂಶೋಧಕರ ತಂಡದ ನೇತೃತ್ವ ವಹಿಸ್ದಿದ ಜೋ ಫಾರ್‌ಗ್ಯಾಸ್ ಹೇಳಿದರು. 'ನಾವು ನಡೆಸಿದ ಪ್ರಯೋಗಗಳಿಂದ ಇದು ಖಚಿತವಾಗಿದೆ. ಹವಾಮಾನ ಮಬ್ಬಿನಿಂದ ಕವಿದಿದ್ದಾಗ ಪರೀಕ್ಷೆ ಬರೆದವರು ಹಾಗೂ ಮನಸ್ಸಿನಲ್ಲಿ ಒಂದಷ್ಟು ನಕಾರಾತ್ಮಕ ಭಾವ ತುಂಬಿದ್ದವರು ಪರೀಕ್ಷೆಯನ್ನು ಹೆಚ್ಚು ಸಮರ್ಥವಾಗಿ ಎದುರಿಸಿದ್ದಾರೆ. ಪ್ರಖರ ಬೆಳಕಿನ ವಾತಾವರಣದಲ್ಲಿ ಮನಸ್ಸು ತುಂಬಾ ಖುಷಿಯಾಗಿದ್ದಾಗ ಪರೀಕ್ಷೆ ಎದುರಿಸಿದವರು ವಿಫಲರಾದದ್ದು ಕಂಡು ಬಂದಿದೆ' ಎಂದು ಅವರು ವಿವರಿಸಿದರು. ಒಟ್ಟಾರೆ ಮನುಷ್ಯನ ನೆನಪಿನ ಶಕ್ತಿ, ತರ್ಕ ಸಾಮರ್ಥ್ಯ, ನಿರ್ಧಾರದ ಜಾಣ್ಮೆ ಇವೆಲ್ಲವೂ ಮಬ್ಬು ಬೆಳಕಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ ಎಂಬುದು ವಿ.ವಿ. ವಿಜ್ಞಾನಿಗಳ ಅನಿಸಿಕೆಯಾಗಿದ್ದು, ಪ್ರಾಯೋಗಿಕ ಮನಶಾಸ್ತ್ರದ ನಿಯತಕಾಲಿಕದಲ್ಲಿ ಈ ಅಂಶಗಳ ಬಗ್ಗೆ ವಿವರಿಸಲಾಯಿತು.

2009: ವ್ಯಕ್ತಿಯ ಶ್ವಾಸಕೋಶದ ಆಕೃತಿ ಸೆರೆಹಿಡಿಯುವ ನೂತನ ವಿಧಾನವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದು, ಆಸ್ತಮಾ ಚಿಕಿತ್ಸೆಯಲ್ಲಿ ಇದೊಂದು ಕ್ರಾಂತಿಕಾರಕ ಬೆಳವಣಿಗೆಯಾಗಲಿದೆ ಎಂದು ಮೆಲ್ಬೋರ್ನಿನಲ್ಲಿ ಪ್ರಕಟಿಸಲಾಯಿತು. ಈ ಸಂಶೋಧನೆ ಮಾಡಿದ ಕೀರ್ತಿ ಕ್ವೀನ್ಸ್‌ಲ್ಯಾಂಡ್ ವಿವಿ. ತಜ್ಞರ ತಂಡಕ್ಕೆ ಸಂದಿತು. ಎಂಆರ್‌ಐ ಪರೀಕ್ಷೆಗೆ ಹೀಲಿಯಂ ಅನಿಲ ಅಭಿವೃದ್ಧಿ ಪಡಿಸಲಾಗಿದ್ದು, ಇದನ್ನು ವ್ಯಕ್ತಿಯು ಉಸಿರೆಳೆದು ಕೊಂಡಾಗ ಆತನ ಶ್ವಾಸಕೋಶದ ಆಕೃತಿ ಒಡಮೂಡುತ್ತದೆ. 'ಈ ಅನಿಲ (ಹೀಲಿಯಂ-3) ಶರೀರದಲ್ಲಿ ಯಾವುದೇ ರಾಸಾಯನಿಕ ಪರಿಣಾಮವನ್ನುಂಟು ಮಾಡುವುದಿಲ್ಲ. ಹಾಗಾಗಿ ಇದು ಸುರಕ್ಷಿತವಾಗಿದ್ದು, ಅನಿಲ ಪ್ರವಹಿಸುವ ಹಾಗೂ ಉಸಿರಾಟದ ವಿವರ ಪಡೆದುಕೊಳ್ಳಲು ಈ ರೀತಿ ಆಕೃತಿ ಉಪಯುಕ್ತ' ಎಂದು ವಿಜ್ಞಾನಿ ಡಾ. ಮಾರ್ಲಿಸ್ ಫ್ರೈಸ್ ಅಭಿಪ್ರಾಯಪಟ್ಟರು.

2009: ಜಪಾನಿನ ಟೊಟ್ಟೊರಿ ಸಮುದ್ರ ತೀರದಲ್ಲಿ ಮರಳು ಕಲಾಕೃತಿಗಳ ಉತ್ಸವ ಆರಂಭವಾಯಿತು. ವಿಶ್ವದ ಕಾಲ್ಪನಿಕ ಕಥೆಗಳನ್ನು ವಸ್ತುವಾಗಿಟ್ಟು ಕೊಂಡು 10 ದೇಶದ ಕಲಾವಿದರು ಈ ಮರಳು ಕಲಾಕೃತಿಗಳ ಉತ್ಸವದಲ್ಲಿ ಪಾಲ್ಗೊಂಡರು.

2008: ಸ್ಥಳೀಯ ಸಂಗೀತಗಾರ ಹಾಗೂ ಸಂಯೋಜಕ ಶಂಕರ್ ಮಹಾದೇವನ್ `ಮಂಗಳಮ್ ಭಗವಾನ ವಿಷ್ಣು...' ಎಂದು ಹಾಡುವುದರೊಂದಿಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ (ಐಪಿಎಲ್) ಉದ್ಘಾಟನೆಗೊಂಡಿತು. ಸಮಾರಂಭದಲ್ಲಿ ಸಾಲು ಸಾಲು ಸಿನಿಮಾ ಹಾಡುಗಳು, ಚೀಯರ್ ಲೀಡರ್ಸ್ ನೃತ್ಯ, ಚಿಟ್ಟೆ, ಬಾತುಕೋಳಿ, ವಿಶಾಲ ರೆಕ್ಕೆಯ ಹಕ್ಕಿ... ಸೇರಿದಂತೆ ವಿವಿಧ ಕಾರ್ಯಕ್ರಮಗಳು ಕ್ರಿಕೆಟ್ ಲೋಕದಲ್ಲಿ ಹೊಸ ಅನುಭವ ನೀಡಿದವು.

2008: ಕೇಂದ್ರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶೇ 27ರಷ್ಟು ಮೀಸಲು ನೀಡುವಾಗ ಸುಪ್ರೀಂಕೋರ್ಟ್ ತೀರ್ಪಿನಂತೆ ಸಂಬಂಧಪಟ್ಟ ವರ್ಗಗಳ ಒಳಗೇ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದುವರೆದವರನ್ನು ಹೊರಗಿಡುವುದಾಗಿ ಸರ್ಕಾರ ಹೇಳಿತು. ಸುಪ್ರೀಂಕೋರ್ಟ್ ಏನು ಸಲಹೆ ನೀಡಿದೆಯೋ ಅದನ್ನು ನಾವು ಅನುಷ್ಠಾನಗೊಳಿಸುತ್ತೇವೆ ಎಂದು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ತಿಳಿಸಿದರು. `ಸರ್ಕಾರದ ಅಭಿಪ್ರಾಯ ಸ್ಪಷ್ಟವಾಗಿತ್ತು. ಉನ್ನತ ಶಿಕ್ಷಣದಲ್ಲಿನ ಮೀಸಲು ಹಾಗೂ ಉದ್ಯೋಗದಲ್ಲಿನ ಅವಕಾಶಗಳನ್ನು ಬೇರ್ಪಡಿಸಬೇಕು. `ಕೆನೆ ಪದರ'ದ ಪರಿಕಲ್ಪನೆಯನ್ನು ಉದ್ಯೋಗ ಮೀಸಲಿಗೆ ಮಾತ್ರ ಅಳವಡಿಸಬೇಕು ಎಂಬುದು ಅದರ ನಿಲುವಾಗಿತ್ತು. ಆದರೆ, ಸುಪ್ರೀಂಕೋರ್ಟ್ ಈಗ `ಕೆನೆಪದರ' ಹೊರಗಿಡಬೇಕು ಎಂದು ಸೂಚಿಸಿದೆ ಎಂದು ಮುಖರ್ಜಿ ಹೇಳಿದರು.

2008: ಕರ್ನಾಟಕದ ವಿವಿಧೆಡೆ ಬಿರುಗಾಳಿ. ಗುಡುಗು, ಸಿಡಿಲು ಸಹಿತ ಮಳೆಯಾಗಿ ಒಟ್ಟು 13 ಜನರು ಮೃತರಾದರು. ಈ ಪೈಕಿ ಉತ್ತರ ಕರ್ನಾಟಕದ ವಿವಿಧೆಡೆ ಸಿಡಿಲಿನ ಆರ್ಭಟಕ್ಕೆ 7 ಮಂದಿ ಬಲಿಯಾದರೆ, ಶಿಕಾರಿಪುರ ತಾಲ್ಲೂಕಿನ ಕಾಗಿನಲ್ಲಿ ಕ್ರಾಸ್ ಬಳಿ ಬಸ್ಸಿನ ಮೇಲೆ ಮರ ಬಿದ್ದು 6 ಜನ ಮೃತರಾದರು.

2008: ಮೆಕ್ಸಿಕೊ ದೇಶಕ್ಕೆ ಭೇಟಿ ನೀಡಿದ ಭಾರತದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ತಮಗೆ ನೀಡಲಾದ ಗೌರವ ರಕ್ಷೆ ಸ್ವೀಕಾರ ಸಮಾರಂಭದಲ್ಲಿ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಶಿಷ್ಟಾಚಾರವನ್ನು ಮರೆತರು. ಗೌರವ ರಕ್ಷೆ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಮೆಕ್ಸಿಕೊ ಅಧ್ಯಕ್ಷ ಫೆಲಿಪ್ ಕಾಲ್ಡೆರೊನ್ ಅವರು ತಮ್ಮ ದೇಶದ ಧ್ವಜಕ್ಕೆ ಗೌರವ ಸೂಚಿಸಲು ಸ್ವಲ್ಪ ತಡೆದು ನಿಂತಾಗ ರಾಷ್ಟ್ರಪತಿಗಳು ಅದರ ಅರಿವೇ ಇಲ್ಲದೆ ಮುಂದಕ್ಕೆ ಹೋಗಿಬಿಟ್ಟರು. ಬಳಿಕ ಭಾರತದ ರಾಷ್ಟ್ರಧ್ವಜದ ಮುಂಭಾಗಕ್ಕೆ ಬಂದಾಗಲೂ ಅವರು ಧ್ವಜಕ್ಕೆ ವಂದನೆ ಸಲ್ಲಿಸಲು ಮರೆತುಬಿಟ್ಟರು. ತಕ್ಷಣ ಗಾರ್ಡ್ ಕಮಾಂಡರ್ ಅವರು `ಮೇಡಂ ಪ್ರೆಸಿಡೆಂಟ್' ಎಂದು ಕೂಗಿ ಕರೆದಾಗ ಎಚ್ಚೆತ್ತ ರಾಷ್ಟ್ರಪತಿಗಳು ತಮ್ಮ ಹೆಜ್ಜೆ ಹಿಂದಕ್ಕಿಟ್ಟು ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಿದರು.

2008: ಹರಪ್ಪ ನಾಗರಿಕತೆಯು ಎಂದಿನಿಂದ ಅಭಿವೃದ್ಧಿ ಹೊಂದಿತ್ತು ಮತ್ತು ಈ ನಾಗರಿಕತೆಯ ಭೌಗೋಳಿಕ ವ್ಯಾಪ್ತಿ ಎಷ್ಟು ಎಂದು ನಿಗದಿಪಡಿಸುವ ಸಲುವಾಗಿ 50 ವರ್ಷಗಳ ನಂತರ ಈಗ ಮತ್ತೆ ನೊಯಿಡಾ ಹಾಗು ಮೀರತ್ತಿನಲ್ಲಿ ಉತ್ಖನನ ನಡೆಸಲು ಪುರಾತತ್ವ ಶಾಸ್ತ್ರಜ್ಞರ ತಂಡ ನಿರ್ಧರಿಸಿತು. ಮೀರತ್ -ಬಾಗ್ಫತ್ತಿನ ಅಲಂಗಿರ ಪುರ್ ಮತ್ತು ಗೌತಮಬುದ್ಧ ಜಿಲ್ಲೆಯ ಬುಲಂದ ಖೇರ್ ಹರಪ್ಪ ಸಂಸ್ಕೃತಿಯ ಪೂರ್ವದ ಎಲ್ಲೆಎಂದು ನಂಬಲಾಗಿದೆ. ಕಳೆದ ಬಾರಿ ಈ ಪ್ರದೇಶದಲ್ಲಿ 1957-58 ರಲ್ಲಿ ಸಮೀಕ್ಷೆ ಕಾರ್ಯ ನಡೆದಿತ್ತು.

2008: ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯನ್ನು ಬಹಿಷ್ಕರಿಸುವ ತಮ್ಮ ನಿರ್ಧಾರಕ್ಕೆ ಬದ್ಧವಾಗಿರಲು ಜಾಗತಿಕ ಸುದ್ದಿ ಹಾಗೂ ಛಾಯಾಚಿತ್ರ ಸಂಸ್ಥೆಗಳು ತೀರ್ಮಾನಿಸಿದವು. ಟೂರ್ನಿಯ ಪಂದ್ಯಗಳ ಛಾಯಾಚಿತ್ರ ತೆಗೆಯುವ ಸಂಬಂಧ ಐಪಿಎಲ್ನೊಂದಿಗೆ ವಿವಾದ ಉದ್ಭವಿಸಿತ್ತು. ಕ್ರಿಕೆಟ್ ವೆಬ್ ಸೈಟುಗಳಿಗೆ ಛಾಯಾಚಿತ್ರಗಳನ್ನು ವಿತರಿಸುವ ಸಂಬಂಧ ಛಾಯಾಚಿತ್ರ ಸಂಸ್ಥೆಗಳ ಮೇಲೆ ಐಪಿಎಲ್ ನಿರ್ಬಂಧ ಹೇರಿದ್ದೇ ಇದಕ್ಕೆ ಕಾರಣ.

2007: ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸುವ ಚೀನಾದ ಬುಲೆಟ್ ರೈಲು ತನ್ನ ಮೊದಲ ಸಂಚಾರವನ್ನು ಬೀಜಿಂಗ್ ರೈಲು ನಿಲ್ದಾಣದಿಂದ ಆರಂಭಿಸಿತು.

2007: ಭಾರತದ ಮಹತ್ವಾಕಾಂಕ್ಷೆಯ ಹಗುರ ಸಾರಿಗೆ ವಿಮಾನ `ಸರಸ್' ತನ್ನ ಎರಡನೇ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತು. ಸ್ವದೇಶೀ ನಿರ್ಮಿತ ಮೊದಲ ನಾಗರಿಕ ವಿಮಾನ `ಸರಸ್'ನ್ನು ರಾಷ್ಟ್ರೀಯ ವಿಮಾನಾಂತರಿಕ್ಷ ಪ್ರಯೋಗಾಲಯ (ಎನ್ ಎ ಎಲ್) ಅಭಿವೃದ್ಧಿ ಪಡಿಸಿದೆ.

2007: ಪತ್ನಿಯ ಹೆಸರಿನಲ್ಲಿ ಬೇರೊಬ್ಬ ಮಹಿಳೆಯನ್ನು ವಿದೇಶಕ್ಕೆ ಕರೆದೊಯ್ಯುತ್ತಿದ್ದ ಬಿಜೆಪಿ ಸಂಸದ ಗುಜರಾತಿನ ದಾಹೋದ ಕ್ಷೇತ್ರದ ಲೋಕಸಭೆ ಸದಸ್ಯ ವಿಶ್ವ ಹಿಂದೂ ಪರಿಷತ್ತಿನ ಪ್ರಭಾವಿ ಮುಖಂಡ ಬಾಬುಬಾಯಿ ಕಟಾರಾ, ಅವರ ಜೊತೆಗಿದ್ದ ಮಹಿಳೆ ಪರಮ್ ಜೀತ್ ಕೌರ್ ಮತ್ತು ಆಕೆಯ ಪುತ್ರನನ್ನು ವಲಸೆ ಅಧಿಕಾರಿಗಳು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಹಸ್ತಾಂತರಿಸಿದರು.

2007: ವಿಜಯಾ ಬ್ಯಾಂಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಪಿ. ಮಲ್ಯ ಅವರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗುವ 2006-07ರ ಸಾಲಿನ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಲಭಿಸಿತು.

2007: ಕೈಮಗ್ಗ ಉತ್ಪನ್ನಗಳ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ವಿಶ್ವಸಂಸ್ಥೆಯ ಪ್ರತಿಷ್ಠಿತ `ವಿಮೆನ್ ಟುಗೆದರ್ ಅವಾರ್ಡ್ -2007'ಗೆ ಆಯ್ಕೆಯಾದರು.

2007: ಅಮೆರಿಕದ ವರ್ಜೀನಿಯಾ ತಾಂತ್ರಿಕ ವಿಶ್ವ ವಿದ್ಯಾನಿಯಲದಲ್ಲಿ ನಡೆದ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ 33ಕ್ಕೆ ಏರಿತು. ಮುಂಬೈಯ ನಿವಾಸಿ ಕೃಷಿ ವಿಜ್ಞಾನ ಪ್ರಥಮ ವರ್ಷದ ವಿದ್ಯಾರ್ಥಿನಿ ಮಿನಾಲ್ ಪಂಚಲ್ ಅವರ ಶವವೂ ಪತ್ತೆಯಾಯಿತು.

2007: ಮುಂಬೈಯಲ್ಲಿ ವರ್ಣರಂಜಿತ ಸಂಗೀತ ಸಮಾರಂಭದೊಂದಿಗೆ ಬಾಲಿವುಡ್ಡಿನ ಖ್ಯಾತ ತಾರೆಯರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಮದುವೆಯ ಕ್ಷಣಗಣನೆ ಆರಂಭಗೊಂಡಿತು. ಹಿರಿಯ ಚಿತ್ರನಟ ಅಮಿತಾಭ್ ಬಚ್ಚನ್ ಅವರು ಸ್ವತಃ ಐಶ್ವರ್ಯ ರೈ ಅವರ ತಂದೆ ತಾಯಿಯರಾದ ಕೃಷ್ಣರಾಜ್ ಮತ್ತು ವೃಂದಾ ರೈ ಸೇರಿದಂತೆ ಅತಿಥಿಗಳನ್ನು `ಸಂಗೀತ' ಸಮಾರಂಭಕ್ಕೆ ಆಹ್ವಾನಿಸಿದರು.

2007: ಬಾಗ್ದಾದಿನಲ್ಲಿ ನಡೆದ ಭೀಕರ ಕಾರುಬಾಂಬ್ ಸರಣಿ ದಾಳಿಗಳಲ್ಲಿ ಒಟ್ಟು 172 ಜನ ಮೃತರಾದರು.

2007: ಬಿಜೆಪಿ ಧುರೀಣ ಪ್ರಮೋದ್ ಮಹಾಜನ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಹೋದರ ಪ್ರವೀಣ್ ಕೊಲೆ ಕೃತ್ಯ ನಡೆಯುವುದಕ್ಕೆ ಕೆಲವು ದಿನಗಳ ಮುನ್ನ ಕಳುಹಿಸಿದ್ದು ಎನ್ನಲಾದ ಬೆದರಿಕೆ ಸಂದೇಶದ ವಿವರಗಳನ್ನು ಒಳಗೊಂಡ ದೂರವಾಣಿ ಸಂದೇಶದ ಮಾಹಿತಿ ಸಹಿತವಾದ ಪೂರಕ ದೋಷಾರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ್ ನಿಕ್ಕಮ್ ಅವರು 6 ಪುಟಗಳ ಪೂರಕ ದೋಷಾರೋಪ ಪಟ್ಟಿಯನ್ನು ರಿಲಯನ್ಸ್ ಇನ್ ಫೋಕಾಮ್ ಅಧಿಕಾರಿ ಜ್ಞಾನೇಂದ್ರ ಉಪಾಧ್ಯಾಯ ಅವರ ದೂರವಾಣಿ ಸಂದೇಶ ಸಂಬಂಧಿತ ಹೇಳಿಕೆ ಮತ್ತು ಪ್ರಮಾಣಪತ್ರ ಸಹಿತವಾಗಿ ಸಲ್ಲಿಸಿದರು.. ಸಂದೇಶವನ್ನು ಮೊಬೈಲ್ ನಂಬರ್ 9323960307ರಿಂದ (ಪ್ರವೀಣ್ ಮಾಲೀಕತ್ವ) ಮೊಬೈಲ್ ನಂಬರ್ 9811445454ಗೆ (ಪ್ರಮೋದ್ ಮಾಲೀಕತ್ವ) 2006ರ ಏಪ್ರಿಲ್ 15ರಂದು ಸಂಜೆ 4.39 ಗಂಟೆಗೆ ಕಳುಹಿಸಲಾಗಿದೆ ಎಂದು ಕಂಪ್ಯೂಟರಿನಿಂದ ಪಡೆಯಲಾದ ದೂರವಾಣಿ ಸಂದೇಶ ಸಂಬಂಧಿತ ಹೇಳಿಕೆಯು ತಿಳಿಸಿತ್ತು. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಶ್ರೀಹರಿ ದಾವರೆ ಅವರ ಸಮ್ಮುಖದಲ್ಲಿ ಹಿಂದಿನ ದಿನ ಬಿಜೆಪಿ ನಾಯಕ ಗೋಪೀನಾಥ ಮುಂಡೆ ಅವರು ಗುರುತಿಸಿದ ದೂರವಾಣಿಯ ಇನ್ ಬಾಕ್ಸ್ನಿಂದ ಈ ಸಂದೇಶವನ್ನು ತೆಗೆಯಲಾಯಿತು. ಪದ್ಯರೂಪದ ಬೆದರಿಕೆಯೊಂದಿಗೆ ಪ್ರವೀಣ್ ಹೆಸರನ್ನು ಸಂದೇಶವು ಒಳಗೊಂಡಿತ್ತು.

2006: ಕರಾಚಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಅಮೆರಿಕದ ಪಾನ್ ಆಮ್ ವಿಮಾನದಲ್ಲಿ ಅಪಹರಣಕಾರರ ವಿರುದ್ಧ ಸೆಣಸಿ ಮಡಿದ ಗಗನ ಸಖಿ ಚಂಡೀಗಢದ ನೀರಜಾ ಭಾನೋಟ್ ಅವರಿಗೆ ಅಮೆರಿಕದ ಅತ್ಯುಚ್ಚ ಶೌರ್ಯ ಪ್ರಶಸ್ತಿ ಪ್ರಕಟಿಸಲಾಯಿತು.

2006: ಪತ್ರಿಕೋದ್ಯಮ ಶ್ರೇಷ್ಠತೆಗಾಗಿ ನೀಡಲಾಗುವ ನಾಲ್ಕು ಪುಲಿಟ್ಜರ್ ಪ್ರಶಸ್ತಿಗಳನ್ನು ನ್ಯೂಯಾರ್ಕಿನ ವಾಷಿಂಗ್ಟನ್ ಪೋಸ್ಟ್ ತನ್ನ ಮಡಿಲಿಗೆ ಹಾಕಿಕೊಂಡಿತು.

2006: ಹಿರಿಯ ಮರಾಠಿ ಚಲನಚಿತ್ರ ಮತ್ತು ರಂಗಭೂಮಿ ನಟ ಶರದ್ ಅಲಿಯಾಸ್ ದಲ್ ಜೇಮ್ ನೀಸ್ (72) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಕೊಲ್ಹಾಪುರದಲ್ಲಿ ನಿಧನರಾದರು. ಶರದ್ ಅವರು 1950ರಿಂದ 1976ರವರೆಗೆ ಅನೇಕ ಚಲನಚಿತ್ರ ಮತ್ತು ನಾಟಕಗಳಲ್ಲಿ ಅಭಿನಯಿಸಿದ್ದು, ಅವುಗಳಲ್ಲಿ `ಧಾನಾಜಿ ಶಾಂತಾಜಿ' ಚಿತ್ರ ಅತ್ಯಂತ ಪ್ರಸಿದ್ಧ. ನಾಟಕಗಳಲ್ಲಿ `ಸಂಗೀತ್ ಸೌಭದ್ರ' `ಜೈದೇವ್', `ಸ್ವಯಂವರ', `ಮೃಚ್ಛಕಟಿಕ', `ಮಹಾಶ್ವೇತಾ' ಪ್ರಮುಖವಾದುವು.

1930: ಚಿತ್ತಗಾಂಗ್ ಶಸ್ತ್ರಾಗಾರದ ಮೇಲೆ ಭಾರತೀಯ ಕ್ರಾಂತಿಕಾರಿಗಳಿಂದ ದಾಳಿ ನಡೆಯಿತು. ಕ್ರಾಂತಿಕಾರಿ ಸೂರ್ಯ ಸೇನ್ ನೇತೃತದಲ್ಲಿ ಇಂಡಿಯನ್ ರಿಪಬ್ಲಿಕನ್ ಆರ್ಮಿಯ 62 ಮಂದಿ ಕ್ರಾಂತಿಕಾರಿಗಳು ಚಿತ್ತಗಾಂಗಿನಲ್ಲಿದ್ದ ಪೊಲೀಸ್ ಮತ್ತು ಬ್ರಿಟಿಷ್ ಪಡೆಗಳ ಶಸ್ತ್ರಾಗಾರದ ಮೇಲೆ ದಾಳಿ ನಡೆಸಿದರು. `ಚಿತ್ತಗಾಂಗ್ ಶಸ್ತ್ರಾಗಾರ ಮೇಲೆ ದಾಳಿ' ಎಂದೇ ಖ್ಯಾತಿ ಪಡೆದ ಈ ಘಟನೆ ಬ್ರಿಟಿಷರನ್ನು ಬೆಚ್ಚಿ ಬೀಳಿಸಿತು.

1926: ವೃತ್ತಿ ರಂಗಭೂಮಿಯ ಸಂಸ್ಥೆಗಳಿಗೆ ನಾಟಕ ರಚನೆ, ವಾದ್ಯ ಸಂಗೀತದ ನೆರವಿನ ಮೂಲಕ ರಂಗಭೂಮಿಗೆ 5 ದಶಕಗಳಿಂದ ಕಲಾಸೇವೆ ಮಾಡುತ್ತ ಬಂದ ಕೆ.ಎಲ್. ನಾಗರಾಜ ಶಾಸ್ತ್ರಿ ಅವರು ಲಕ್ಷ್ಮಿ ನರಸಿಂಹ ಶಾಸ್ತ್ರಿ- ಗೌರಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಜನಿಸಿದರು.

1898: ಭಾರತೀಯ ಕ್ರಾಂತಿಕಾರಿ ದಾಮೋದರ ಹರಿ ಚಾಪೇಕರ್ ಅವರನ್ನು ಗಲ್ಲಿಗೇರಿಸಲಾಯಿತು. 1897ರಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳ ಕೊಲೆಗೈದುದಕ್ಕಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಯಿತು.

1859: ಭಾರತೀಯ ಕ್ರಾಂತಿಕಾರಿ ತಾಂತ್ಯಾ ಟೋಪೆ ಅವರನ್ನು ಬ್ರಿಟಿಷ್ ಸರ್ಕಾರ ಶಿವಪುರಿಯಲ್ಲಿ ಗಲ್ಲಿಗೇರಿಸಿತು. ಅವರು 1857ರ ಮೊದಲ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು.

1858: ಮಹರ್ಷಿ ಧೊಂಡೋ ಕೇಶವ ಕರ್ವೆ (1858-1962) ಜನ್ಮದಿನ. ಇವರು ಭಾರತೀಯ ಸಮಾಜ ಸುಧಾರಕರಾಗಿದ್ದು ಮಹಿಳಾ ಶಿಕ್ಷಣ ಹಾಗೂ ಹಿಂದು ವಿಧವೆಯರ ಮರುವಿವಾಹಕ್ಕೆ ಬೆಂಬಲ ನೀಡಿದರು. 100ನೇ ಜನ್ಮದಿನದ ಸಂದರ್ಭದಲ್ಲಿ ಅವರನ್ನು `ಭಾರತರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

No comments:

Post a Comment