ನಾನು ಮೆಚ್ಚಿದ ವಾಟ್ಸಪ್

Sunday, April 15, 2018

ಇಂದಿನ ಇತಿಹಾಸ History Today ಏಪ್ರಿಲ್ 14

ಇಂದಿನ ಇತಿಹಾಸ History Today ಏಪ್ರಿಲ್ 14
2018: ವಾಷಿಂಗ್ಟನ್: ಇತ್ತೀಚಿನ ರಾಸಾಯನಿಕ ಶಸ್ತ್ರಾಸ್ತ್ರ ದೌರ್ಜನ್ಯಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಮಿತ್ರ ಪಡೆಗಳು ಬಶರ್ ಅಲ್-ಅಸ್ಸಾದ್ ನೇತೃತ್ವದ ಸಿರಿಯಾ ಮೇಲೆ ದಂಡನಾತ್ಮಕ ಜಂಟಿ ಸೇನಾ ದಾಳಿ ಕಾರ್ಯಾಚರಣೆ ನಡೆಸಿದವು. ಸಂಜೆಯವೇಳಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರುಯೋಜನೆ ಯಶಸ್ವಿಯಾಯಿತುಎಂದು ಪ್ರಕಟಿಸಿದರು. ಸಿರಿಯಾದ ಬಹುತೇಕ ರಾಸಾಯನಿಕ ಶಸ್ತ್ರಾಸ್ತ್ರ ಸಂಗ್ರಹವನ್ನು ದಾಳಿಯಲ್ಲಿ ಧ್ವಂಸಗೊಳಿಸಲಾಗಿದೆ ಎಂದು ಅವರು ನುಡಿದರು.  ಈ ದಾಳಿಯನ್ನು ವಿರೋಧಿಸಿದ ರಷ್ಯಾ ’ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಾರವಾದ ಪ್ರತಿಕ್ರಿಯೆ ನೀಡಿತು. ಸಿರಿಯಾದ ಇತ್ತೀಚಿನ ರಾಸಾಯನಿಕ ಶಸ್ತ್ರಾಸ್ತ್ರ ದೌರ್ಜನ್ಯವನ್ನು ವಿರೋಧಿಸಿ ಅಮೆರಿಕ, ಬ್ರಿಟನ್  ಮತ್ತು ಫ್ರಾನ್ಸ್ ಈದಿನ ದಂಡನಾತ್ಮಕ ಸೇನಾ ದಾಳಿ ನಡೆಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದರು. ಟ್ರಂಪ್ ಅವರು ಶ್ವೇತಭವನದಲ್ಲಿ ಭಾಷಣ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ಭಾರಿ ಸ್ಫೋಟದ ಸದ್ದುಗಳು ಕೇಳಿಸಿದವು.  ‘ಕೆಲವೇ ಕ್ಷಣಗಳ ಹಿಂದೆ, ನಾನು ಅಮೆರಿಕದ ಸಶಸ್ತ್ರ ಪಡೆಗಳಿಗೆ ಸಿರಿಯಾದ ಸರ್ವಾಧಿಕಾರಿ ಬಶರ್ ಅಲ್-ಅಸ್ಸಾದ್ ಅವರ ರಾಸಾಯನಿಕ ಶಸ್ತ್ರಾಸ್ತ್ರಗಳಿರುವ ಗುರಿಗಳ ಮೇಲೆ ನಿಖರ ದಾಳಿ ನಡೆಸುವಂತೆ ಆಜ್ಞಾಪಿಸಿದ್ದೇನೆ ಎಂದು ಟ್ರಂಪ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ತಮ್ಮ ಟೆಲಿವಿಷನ್ ಭಾಷಣದಲ್ಲಿ ಹೇಳಿದರು.  ಫ್ರಾನ್ಸ್ ಮತ್ತು ಬ್ರಿಟನ್ ಸಶಸ್ತ್ರ ಪಡೆಗಳ ಜೊತೆಗೆ ಆರಂಭಿಸಲಾಗಿರುವ ಜಂಟಿ ಕಾರ್‍ಯಾಚರಣೆ ಪ್ರಸ್ತುತ ಜಾರಿಯಲ್ಲಿದೆ. ನಾವು ಈ ಉಭಯ ರಾಷ್ಟ್ರಗಳಿಗೂ ಧನ್ಯವಾದ ಸಲ್ಲಿಸುತ್ತೇವೆ ಎಂದು ಟ್ರಂಪ್ ನುಡಿದರು.  ಸಿರಿಯಾದ ರಾಸಾಯನಿಕ ಉತ್ಪಾದನಾ ಸವಲತ್ತುಗಳನ್ನು ಗುರಿಯಾಗಿಟ್ಟು ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು.  ಇನ್ನೊಬ್ಬ ಅಧಿಕಾರಿ ಬಹುವಿಧ ಬಾಂಬುಗಳನ್ನು ದಾಳಿಯಲ್ಲಿ ಬಳಸಲಾಗಿದೆ ಎಂದು ಹೇಳಿದರು.  ಟ್ರಂಪ್ ಅವರು ತನ್ನ ಮಿತ್ರರಾಷ್ಟ್ರವಾದ ಸಿರಿಯಾ ಜೊತೆಗೆ ನಿಂತುಕೊಳ್ಳಬೇಡಿ ಎಂದು ರಷ್ಯಾಕ್ಕೂ ಎಚ್ಚರಿಕೆ ನೀಡಿದರು.  ‘ಈ ಕರಿಯ ದಾರಿಯನ್ನೇ ಬೆಂಬಲಿಸುವುದೇ ಅಥವಾ ನಾಗರಿಕ ರಾಷ್ಟ್ರಗಳ ಜೊತೆ ಸ್ಥಿರತೆ ಮತ್ತು ಶಾಂತಿಗಾಗಿ ಜೊತೆಯಾಗುವುದೇ ಎಂದು ರಷ್ಯಾ ನಿರ್ಧರಿಸಬೇಕು ಎಂದು ಟ್ರಂಪ್ ಎಚ್ಚರಿಸಿದರು.  ಡಮಾಸ್ಕರ್ ಹೊರವಲಯ ಡೌಮಾದಲ್ಲಿ ವಾರದ ಹಿಂದೆ ನಡೆದ ವಿಷಕಾರಿ ರಾಸಾಯನಿಕ ದಾಳಿಯ ಪರಿಣಾಮಗಳ ಭೀಕರ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮಿತ್ರ ರಾಷ್ಟ್ರಗಳ ದಾಳಿ ನಡೆಯುವ ನಿರೀಕ್ಷೆ ಇತ್ತು. ’ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ಸಿರಿಯಾದಲ್ಲಿ ಸ್ವೇಚ್ಛಾಚಾರದ ರಾಸಾಯನಿಕ ದಾಳಿಗೆ ಬಲಿಯಾಗಿ ಸಾವನ್ನಪ್ಪಿದ್ದಾರೆ’ ಎಂದು ಟ್ರಂಪ್ ಟ್ವೀಟ್ ಮಾಡಿದರು.  ‘ಅಧ್ಯಕ್ಷ ಪುಟಿನ್, ಪ್ರಾಣಿ ಅಸ್ಸಾದ್ ಅವರನ್ನು ಬೆಂಬಲಿಸಿದ್ದಕ್ಕೆ ರಷ್ಯಾ ಮತ್ತು ಇರಾನ್ ಹೊಣೆ. ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಟ್ರಂಪ್ ಟ್ವೀಟಿನಲ್ಲಿ ಎಚ್ಚರಿಸಿದರು.  ೧೦೦ಕ್ಕೂ ಅಧಿಕ ಕ್ಷಿಪಣಿ ಬಳಕೆ: ಸಿರಿಯಾದ ಮೇಲೆ ಅಮೆರಿಕ ಮತ್ತು ಮಿತ್ರಪಡೆಗಳು ೧೦೦ಕ್ಕೂ ಅಧಿಕ ಕ್ಷಿಪಣಿಗಳ ದಾಳಿ ನಡೆಸಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮೂಲಗಳು ತಿಳಿಸಿವೆ.  ‘ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಪಡೆಗಳು ಒಟ್ಟಾಗಿ ನೆಲ ಮತ್ತು ಸಾಗರದಿಂದ ೧೦೦ಕ್ಕೂ ಅಧಿಕ ಕ್ರೂಸ್ ಕ್ಷಿಪಣಿಗಳನ್ನು ಸಿರಿಯಾದ ಮಿಲಿಟರಿ ಮತ್ತು ನಾಗರಿಕ ನೆಲೆಗಳ ಮೇಲೆ ಉಡಾಯಿಸಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಿಯಾ ನೊವೊಸ್ತಿ ಸುದ್ದಿಸಂಸ್ಥೆ ವರದಿ ಮಾಡಿತು. ಈ ಕ್ಷಿಪಣಿಗಳ ಪೈಕಿ ಹೆಚ್ಚಿನವುಗಳನ್ನೂ ಸಿರಿಯಾ ವೈಮಾನಿಕ ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದೂ ಸುದ್ದಿಸಂಸ್ಥೆ ಹೇಳಿತು. ಸಿರಿಯಾದ ಬಶರ್-ಅಲ್ ಅಸ್ಸಾದ್ ಆಡಳಿತ ನಡೆಸಿದ ರಾಸಾಯನಿಕ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಮಿತ್ರಕೂಟ ಈ ದಾಳಿ ನಡೆಸಿದ್ದು, ನ್ಯಾಟೋ ಇದನ್ನು ಬೆಂಬಲಿಸಿತು.  ಜಾಗತಿಕ ಶಾಂತಿಗೆ ಸಿರಿಯಾ ಬೆದರಿಕೆ: ಜಾಗತಿಕ ಶಾಂತಿಗೆ ಸಿರಿಯಾ ಅತಿದೊಡ್ಡ ಬೆದರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗುಟೆರಸ್ ಹೇಳಿದರು.  ರಷ್ಯಾ ಎಚ್ಚರಿಕೆ: ಸಿರಿಯಾದಲ್ಲಿ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಸೇನಾ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ರಷ್ಯಾ ಖಾರವಾಗಿ ಪ್ರತಿಕ್ರಿಯಿಸಿತು. ಈ ಕಾರ್ಯಾಚರಣೆಯ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಅಮೆರಿಕದಲ್ಲಿನ ರಷ್ಯಾ ರಾಯಭಾರಿ ಅನತೊಲಿ ಅಂತನೊವ್ ತಿಳಿಸಿದರು.  ಟ್ವಿಟರ್ ಮೂಲಕ ಹೇಳಿಕೆ ನೀಡಿರುವ ಅವರು, ‘ಪೂರ್ವಯೋಜಿತ ಸನ್ನಿವೇಶ ಸೃಷ್ಟಿಸುವ ಪ್ರಯತ್ನ ಜಾರಿಯಲ್ಲಿದೆ. ಮತ್ತು ನಮ್ಮನ್ನು ಕೆಣಕಲಾಗುತ್ತಿದೆ. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಾವು ಈಗಾಗಲೇ ಎಚ್ಚರಿಸಿದ್ದೇವೆ ಎಂದು ಹೇಳಿದರು. ‘ಈ ಕಾರ್ಯಾಚರಣೆಯಿಂದ ವಾಷಿಂಗ್ಟನ್, ಲಂಡನ್ ಮತ್ತು ಪ್ಯಾರಿಸ್ ಜೊತೆಗಿನ ಬಾಂಧವ್ಯಗಳು ಹದಗೆಡಲಿವೆ. ರಾಸಾಯನಿಕ ಶಸ್ತ್ರಾಸ್ತ್ರಗಳ ದೊಡ್ಡ ಮಾಲೀಕನಾದ ಅಮೆರಿಕಕ್ಕೆ ಬೇರೆ ದೇಶಗಳನ್ನು ದೂಷಿಸುವ ನೈತಿಕತೆ ಇಲ್ಲ್ಲ ಎಂಬ ಕಟು ಟ್ವೀಟ್ ಮಾಡಿದರು.  ಅಲ್ಲದೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹೀಯಾಳಿಸುವುದನ್ನು ಯಾವುದೇ ಕಾರಣಕ್ಕೆ ಸಹಿಸುವುದಿಲ್ಲ ಎಂಬ ಖಡಕ್ ಸಂದೇಶವನ್ನೂ ಅವರು ನೀಡಿದರು.  ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್  ಅವರು ಡಮಾಸ್ಕಸ್ ಹೊರವಲಯದಲಿ ಏ.೭ರಂದು ನಡೆಸಿದ ರಾಸಾಯನಿಕ ದಾಳಿಗೆ ಪ್ರತ್ಯುತ್ತರವಾಗಿ ಈ ಮೂರು ದೇಶಗಳು ಮಿಲಿಟರಿ ಕಾರ್ಯಾಚರಣೆ ನಡೆಸಿದವು.

2018: ಗೋಲ್ಡ್ ಕೋಸ್ಟ್ (ಆಸ್ಟೇಲಿಯಾ): ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮನಿಕಾ ಬಾತ್ರ ಅವರು ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ ಪಂದ್ಯದಲ್ಲಿ ವಿಜಯ ಸಾಧಿಸುವ ಮೂಲಕ ಭಾರತಕ್ಕೆ ಮೊತ್ತ ಮೊದಲ ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ ಸ್ವರ್ಣ ಪದಕವನ್ನು ತಂದು ಕೊಟ್ಟರು.  ಇದರೊಂದಿಗೆ ಮಹಿಳಾ ಸಿಂಗಲ್ಸ್ ಸ್ವರ್ಣಪದಕ ಗೆದ್ದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.  ಸಿಂಗಾಪುರದ ಯು ಮೆಂಗ್ಯಿಯು ಅವರನ್ನು ಫೈನಲ್ ನಲ್ಲಿ ೪-೦ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಬಾತ್ರ ಈ ಸಾಧನೆ ಮಾಡಿದರು.  ಇದಕ್ಕೆ ಮುನ್ನ ಬಾತ್ರ ಅವರು ವಿಶ್ವದ ನಂ.೪ ಫೆಂಗ್ ತಿಯಾನ್ವೀ ಅವರನ್ನು ಟೀಮ್ ಫೈನಲ್ ನಲ್ಲಿ ಸೋಲಿಸಿ ನಿರ್ಣಾಯಕ ವಿಜಯ ಸಾಧಿಸಿದ್ದರು. ತಮ್ಮ ತಂಡವನ್ನು ಸ್ವರ್ಣ ಪದಕ ಗೆಲ್ಲುವತ್ತ ಕೂಡಾ ಮುನ್ನಡೆಸಿದ ೨೨ರ ಹರೆಯದ ಈ ಕ್ರೀಡಾಪಟು ಮೌಮಾ ದಾಸ್ ಜೊತೆಗೆ ರಾಷ್ಟ್ರಕ್ಕೆ ಚೊಚ್ಚಲ ಮಹಿಳಾ ಟಬಲ್ಸ್ ಬೆಳ್ಳಿಯನ್ನು ಗೆಲ್ಲಿಸಿಕೊಟ್ಟರು. 

2018: ವಡೋದರಾ: ಕೇಂದ್ರ ಸಚಿವೆ ಮೇನಕಾ ಗಾಂಧಿ ಮತ್ತು ಕೆಲವು ಬಿಜೆಪಿ ನಾಯಕರು ಬಿ.ಆರ್. ಅಂಬೇಡ್ಕರ್ ಅವರ ೧೨೭ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಮಾಲಾರ್ಪಣೆ ಮಾಡಿದ ಬಳಿಕ ದಲಿತ ಸಮುದಾಯದ ಸದಸ್ಯರು ಅಂಬೇಡ್ಕರ್ ಪ್ರತಿಮೆಯನ್ನು ತೊಳೆದು ಸ್ವಚ್ಚ ಗೊಳಿಸಿದ ಘಟನೆ ಇಲ್ಲಿ ಘಟಿಸಿತು.  ಮೇನಕಾ ಗಾಂಧಿ ಮತ್ತು ಬಿಜೆಪಿ ನಾಯಕರ ಹಾಜರಾತಿಯಿಂದ ಪರಿಸರ ಮಲಿನಗೊಂಡಿತು. ಆದ್ದರಿಂದ ಅಂಬೇಡ್ಕರ್ ಪ್ರತಿಮೆಯನ್ನು ಸ್ವಚ್ಚಗೊಳಿಸಲಾಯಿತು ಎಂದು ದಲಿತ ನಾಯಕರು ನುಡಿದರು.  ಬರೋಡದ ಮಹಾರಾಜ ಸಯಾಜಿರಾವ್ ವಿಶ್ವ ವಿದ್ಯಾಲಯದ ಪರಿಶಿಷ್ಟ ಜಾತಿ/ ಪರಿಶಿಷ್ಟ ನೌಕರರ ಸಂಘದ ಪ್ರಧಾನ ಕಾರ್‍ಯದರ್ಶಿ ಥಾಕೋರ್ ಸೋಲಂಕಿ ಅವರು ಬಿಜೆಪಿ ನಾಯಕರು ಬರುವುದಕ್ಕೆ ಮುನ್ನವೇ ತಾವು ದಲಿತ ನಾಯಕನಿಗೆ ಗೌರವ ಸಲ್ಲಿಸಲು ಸ್ಥಳದಲ್ಲಿ ಸಮಾವೇಶಗೊಂಡಿದ್ದುದಾಗಿ ಹೇಳಿದರು.  ನಗರದಲ್ಲಿ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಬಂದ ಮೇನಕಾ ಗಾಂಧಿ ಮತ್ತು ಬಿಜೆಪಿ ನಾಯಕರ ವಿರುದ್ಧ ದಲಿತ ಸಮುದಾಯದ ಸದಸ್ಯರು ರೇಸ್ ಕೋರ್ಸ್ ರಸ್ತೆಯ ಜಿಇಬಿ ಸರ್ಕಲ್ ಪ್ರದೇಶದಲ್ಲಿ ಘೋಷಣೆಗಳನ್ನು ಕೂಗಿದರು.  ಮೇನಕಾ ಅವರು ಅಂಬೇಡ್ಕರ್ ಪ್ರತಿಮೆ ಬಳಿಗೆ ಬಿಜೆಪಿ ಸಂಸದ ರಂಜನ್ ಬೆನ್ ಭಟ್, ನಗರದ ಮೇಯರ್ ಭರತ್ ಡಂಗರ್, ಬಿಜೆಪಿ ಶಾಸಕ ಯೋಗೇಶ್ ಪಟೇಲ್ ಮತ್ತಿತರರ ಜೊತೆಗೆ ಬಂದರು. ಸೋಲಂಕಿ ನೇತೃತ್ವದಲ್ಲಿ ದಲಿತ ಸಮುದಾಯದ ಸದಸ್ಯರು ಅವರ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಮತ್ತು ಅವರ ಮಧ್ಯೆ ವಾಗ್ವಾದ ನಡೆಯಿತು. ಆದರೆ ಯಾವುದೇ ಅಹಿತಕರ ಘಟನೆ ಘಟಿಸಲಿಲ್ಲ.  ಮೇನಕಾ ಗಾಂಧಿ ಮತ್ತು ಇತರ ನಾಯಕರು ಬೆಳಗ್ಗೆ ೯ ಗಂಟೆ ಸುಮಾರಿಗೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರಳಿದರು. ಬೆನ್ನಲ್ಲೇ ದಲಿತ ಸಮುದಾಯದ ಸದಸ್ಯರು ’ಬಿಜೆಪಿ ನಾಯಕರ ಉಪಸ್ಥಿತಿಯಿಂದಾಗಿ ಪರಿಸರ ಮಲಿನಗೊಂಡಿತು ಎನ್ನುತ್ತಾ ಪ್ರತಿಮೆಯನ್ನು ಹಾಲು ಮತ್ತು ನೀರಿನಿಂದ ತೊಳೆದರು.  ‘ಬಿಜೆಪಿ ನಾಯಕರು ಬರುವುದಕ್ಕೆ ಮೊದಲೇ ನಾವು ಮೊದಲೇ ಸಮಾವೇಶಗೊಂಡಿದ್ದುದರಿಂದ ನಮಗೆ ಗೌರವಾರ್ಪಣೆ ಮಾಡಲು ಮೊದಲು ಅವಕಾಶ ನೀಡಬೇಕು ಎಂದು ನಾವು ಪೊಲೀಸರಿಗೆ ತಿಳಿಸಿದೆವು. ಆದರೆ ಶಿಷ್ಟಾಚಾರದ (ಪ್ರೊಟೋಕಾಲ್) ಪ್ರಕಾರ ಮೊದಲು ಮಾಲಾರ್ಪಣೆ ಮಾಡುವುದು ಮೇಯರ್ ಹಕ್ಕು ಎಂದು ಪೊಲೀಸರು ನಮ್ಮನ್ನು ತಡೆದರು. ಇದರಿಂದ ನಮ್ಮ ಸದಸ್ಯರು ಸಿಟ್ಟಿಗೆದ್ದರು ಎಂದು ಸೋಲಂಕಿ ನುಡಿದರು.  ಮೇನಕಾ ಗಾಂಧಿ ಮತ್ತು ಇತರ ಬಿಜೆಪಿ ನಾಯಕರ ಆಗಮನದಿಂದಾಗಿ ಜಿಇಬಿ ಸರ್ಕಲ್ ಮತ್ತು ಪ್ರತಿಮೆಯ ಪರಿಸರ ಮಲಿನಗೊಂಡಿತು. ಆದ್ದರಿಂದ ನಾವು ಅಂಬೇಡ್ಕರ್ ಪ್ರತಿಮೆಯನ್ನು ಬಿಜೆಪಿ ನಾಯಕರು ಹಾರ ಹಾಕಿದ ಬಳಿಕ ಹಾಲು ಮತ್ತು ನೀರಿನಿಂದ ತೊಳೆದೆವು ಎಂದು ಅವರು ಹೇಳಿದರು.  ಮೇನಕಾ ಗಾಂಧಿ ಅವರು ಬರುವುದಕ್ಕೆ ಮುನ್ನ ಬಿಜೆಪಿ ರಾಜ್ಯ ಘಟಕದ ಎಸ್ ಸಿ/ ಎಸ್ ಟಿ ವಿಭಾಗದ ಪ್ರಧಾನ ಕಾರ್ಯದಶಿ ಜಿವರಾಜ್ ಚೌಹಾಣ್ ಅವರನ್ನೂ ದಲಿತ ಸದಸ್ಯರು ಘೇರಾವ್ ಮಾಡಿದ್ದರು. ಪರಿಣಾಮವಾಗಿ ಅವರು ಸ್ಥಳಬಿಟ್ಟು ತೆರಳಿದ್ದರು.

2018: ಮುಂಬೈ: ಖ್ಯಾತ ಚಿತ್ರ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಕೇಂದ್ರ ಸಚಿವ ಮೇನಕಾ ಗಾಂಧಿ ಅಭಿಪ್ರಾಯಕ್ಕೆ ಸಾಥ್ ನೀಡಿದರು.   ೧೨ ವರ್ಷಗಳಿಗಿಂತ ಕೆಳಗಿನವರ ಮೇಲೆ ಅತ್ಯಾಚಾರ ನಡೆಸುವವರನ್ನು ಗಲ್ಲಿಗೇರಿಸಬೇಕು ಎಂದು ಹೇಮಾ ಮಾಲಿನಿ ಅವರೂ ಆಗ್ರಹಿಸಿದರು. ಮೇನಕಾ ಗಾಂಧಿ ಅವರು, ೧೨ ವರ್ಷಕ್ಕಿಂತ ಕೆಳಗಿನ ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ವಿಧಿಸುವ ವಿಧಿಯನ್ನು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಸ್ಕೊ) ಕಾಯ್ದೆಗೆ ಸೇರ್ಪಡೆ ಮಾಡುವ ಸಲುವಾಗಿ ಸೂಕ್ತ ತಿದ್ದುಪಡಿ ತರಲು ಪ್ರಸ್ತಾವ ರೂಪಿಸುವಂತೆ ತಮ್ಮ ಇಲಾಖೆಗೆ ಸೂಚಿಸಿರುವುದಾಗಿ ಏಪ್ರಿಲ್ 13ರ ಶುಕ್ರವಾರ ಹೇಳಿದ್ದರು.  ಈದಿನ  ಟ್ವಿಟ್ಟರಿನಲ್ಲಿ ತಮ್ಮ ಅಭಿಪ್ರಾಯ ಹೊರಗೆಡವಿದ ಹೇಮಾ ಮಾಲಿನಿ ಅವರು ’ಶಿಶುಗಳನ್ನು ಕೂಡಾ ಬಿಡದ ಮೃಗಗಳ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸಲು ಕರೆ ನೀಡಿದರು. ಮಾಧ್ಯಮ ಕೂಡಾ ಈ ವಿಚಾರಕ್ಕೆ ಬೆಂಬಲ ನೀಡಬೇಕು ಎಂದು ಅವರು ಕೋರಿದರು.  ‘ಪ್ರತಿದಿನ ಪತ್ರಿಕೆಗಳು ನಮ್ಮ ರಾಷ್ಟ್ರದ ಪ್ರತಿಯೊಂದು ಭಾಗದಲ್ಲೂ ಅತ್ಯಾಚಾರಗಳು ನಡೆಯುತ್ತಿರುವುದನ್ನು ವರದಿ ಮಾಡುತ್ತಿವೆ! ಕಥುವಾ, ಉನ್ನಾವೋ ನಾಚಿಕೆಗೇಡಿನ ಈ ಪಟ್ಟಿಯಲ್ಲಿ ಎರಡು ದೃಷ್ಟಾಂತಗಳು ಮಾತ್ರ. ಈ ಚಿತ್ತರಹಿತ ಅತ್ಯಾಚಾರಿಗಳನ್ನು ಮಾನವ ಜೀವಿಗಳು ಎಂಬುದಾಗಿ ವರ್ಗೀಕರಿಸಬಹುದೇ? ಅವರು ಹಾರಾಡುವ ಮೃಗಗಳು. ಅವರನ್ನು ಅವರ ಈ ಹೀನ ಅಪರಾಧಕ್ಕಾಗಿ ಗಲ್ಲಿಗೆ ಏರಿಸಬೇಕು ಎಂದು ಮಥುರಾದ ಬಿಜೆಪಿ ಸಂಸದೆ ಟ್ವೀಟ್ ಮಾಡಿದರು.  ಶಿಶುಗಳು ಮತ್ತು ಅಂಬೆಗಾಲಿಡುತ್ತಿರುವವರನ್ನೂ ಬಿಡದ ಈ ಮೃಗಗಳ ವಿರುದ್ದ ರಾಷ್ಟ್ರಮಟ್ಟದಲ್ಲಿ ಚಳವಳಿ ನಡೆಯಬೇಕು ಅದಕ್ಕೆ ಮಾಧ್ಯಮದಿಂದಲೂ ಪ್ರಬಲ ಬೆಂಬಲ ಸಿಗಬೇಕು. ಅಪರಾಧ ಸಾಬೀತಾದವರಿಗೆ ಮರಣದಂಡನೆ ವಿಧಿಸಬೇಕು ಎಂಬ ಮೇನಕಾಜಿ ಅವರ ಮಾತನ್ನು ನಾನು ಒಪ್ಪುತ್ತೇನೆ. ಎಲ್ಲ ಅತ್ಯಾಚಾರಗಳಲ್ಲೂ ಅಪ್ರಾಪ್ತರೂ ಸೇರಿದಂತೆ ಅತ್ಯಾಚಾರಿಗಳಿಗೆ ಜಾಮೀನು, ಕ್ಷಮೆ ಸಿಗಬಾರದು ಎಂದು ಅವರು ನುಡಿದರು.  ಪೋಸ್ಕೋ ಕಾನೂನಿನಲ್ಲಿ ಪ್ರಸ್ತುತ ಮರಣದಂಡನೆಗೆ ಯಾವುದೇ ಅವಕಾಶ ಇಲ್ಲ. ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದಷ್ಟೆ.  ಕಥುವಾದಲ್ಲಿ ಬಕೇರ್‍ವಾಲ್ ಅಲೆಮಾರಿ ಸಮುದಾಯದ ಎಂಟು ವರ್ಷದ ಬಾಲಕಿ ಜನವರಿ ೧೦ರಂದು ಮನೆ ಸಮೀಪದಿಂದ ಕಣ್ಮರೆಯಾಗಿದ್ದಳು. ವಾರದ ಬಳಿಕ ಆಕೆಯ ಶವ ಅದೇ ಪ್ರದೇಶದಲ್ಲಿ ಲಭಿಸಿತ್ತು. ಉನ್ನಾವೋದಲ್ಲಿ ೧೭ರ ಹರೆಯದ ಬಾಲಕಿಯ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ತನ್ನ ಮನೆಯಲ್ಲಿ ಕಳೆದ ವರ್ಷ ಜೂನ್ ೪ರಂದು ಅತ್ಯಾಚಾರ ಎಸಗಿರುವುದಾಗಿ ಆಪಾದಿಸಲಾಗಿತ್ತು.

2018: ನವದೆಹಲಿ: ವಿಶ್ವ ಹಿಂದೂ ಪರಿಷತ್ತಿನ ೫೨ ವರ್ಷಗಳ ಇತಿಹಾಸದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ನಡೆದ ರಹಸ್ಯ ಮತದಾನದಲ್ಲಿ ಸಂಘಟನೆಯ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ನ್ಯಾಯಮೂರ್ತಿ ವಿಎಸ್ ಕೊಕ್ಜೆ ಅವರು ಆಯ್ಕೆಯಾಗಿದ್ದು, ಪ್ರವೀಣ್ ತೊಗಾಡಿಯಾ ಅವರ ಆಳ್ವಿಕೆ ಅಂತ್ಯಗೊಂಡಿತು.  ಪ್ರವೀಣ್ ತೊಗಾಡಿಯಾ ಅವರನ್ನು ತಮ್ಮ ತಂಡದಲ್ಲಿ ಇಟ್ಟುಕೊಳ್ಳುವುದಾಗಿ ಹೇಳಿದ್ದ ಹಿಂದಿನ ಅಧ್ಯಕ್ಷ ರಾಘವ ರೆಡ್ಡಿ ಅವರಿಗಿಂತ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಸಂಘಟನೆಯ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯಮೂರ್ತಿ ವಿಎಸ್ ಕೊಕ್ಜೆ ಒಂದು ಗಂಟೆಯ ಒಳಗಾಗಿ ತೊಗಾಡಿಯಾ ರಹಿತವಾದ ತಮ್ಮ ನೂತನ ತಂಡವನ್ನು ಪ್ರಕಟಿಸಿದರು.  ಸಂಘಟನೆಯ ಅಂತಾರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಾಮಾನ್ಯವಾಗಿ ಸರ್ವಾನುಮತದಿಂದಲೇ ಆಗುತ್ತದೆ. ಈ ಬಾರಿ ಪ್ರಕ್ರಿಯೆ ಕಳೆದ ವರ್ಷ ಡಿಸೆಂಬರಿನಲ್ಲಿ ಆರಂಭವಾಗಿತ್ತು. ಆದರೆ ಸರ್ವಾನುಮತ ಬಾರದ ಕಾರಣ ಪ್ರಕ್ರಿಯೆಯನ್ನು ಅರ್ಧಕ್ಕೆ ಬಿಟ್ಟು ಬಿಡಲಾಗಿತ್ತು.  ಚುನಾವಣಾ ಫಲಿತಾಂಶದ ಬಗ್ಗೆ ಸಿಟ್ಟಿಗೆದ್ದಿರುವ ತೊಗಾಡಿಯಾ ಅವರು ಏಪ್ರಿಲ್ ೧೬ರಿಂದ ಅನಿರ್ದಿಷ್ಟ ನಿರಶನ ಆರಂಭಿಸಲು ನಿರ್ಧರಿಸಿದರು. ಕೊಕ್ಜೆ ಅವರು ಆಯ್ಕೆ ಮಾಡಿರುವ ನೂತನ ತಂಡದಲ್ಲಿ ಅಲೋಕ್ ಕುಮಾರ್ ವಕೀಲರು (ಕಾರ್ಯಾಧ್ಯಕ್ಷ), ಅಶೋಕ ಚೌಗುಲೆ (ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ), ಮಿಲಿಂದ ಪರಾಂಡೆ (ಪ್ರಧಾನ ಕಾರ್ಯದಶಿ), ವಿನಾಯಕ ರಾವ್ ದೇಶಪಾಂಡೆ (ಜಂಟಿ ಪ್ರಧಾನ ಕಾರ್ಯದರ್ಶಿ) ಅವರು ಇದ್ದರು.  ಒಟ್ಟು ಚಲಾವಣೆಗೊಂಡ ೧೯೨ ಮತಗಳಲ್ಲಿ ಕೊಕ್ಜೆ ಅವರಿಗೆ ೧೩೧ ಮತಗಳು ಬಂದರೆ, ರಾಘವ ರೆಡ್ಡಿ ಅವರಿಗೆ ೬೦ ಮತಗಳು ಬಂದವು. ಒಂದು ಮತವನ್ನು ಅಸಿಂಧು ಎಂಬುದಾಗಿ ಘೋಷಿಸಲಾಯಿತು.  ೨೭೩ ಸದಸ್ಯರ ಟ್ರಸ್ಟಿಗಳ ಮಂಡಳಿಯು ಇಬ್ಬರು ಸ್ಪರ್ಧಿಗಳು ಇದ್ದಕಾರಣ ಮತದಾನ ನಡೆಸಬೇಕು ಎಂದು ತೀರ್‍ಮಾನಿಸಿತು. ಸ್ಥಳದಲ್ಲಿ ಮೂರು ಮತಗಟ್ಟೆಗಳನ್ನು ಮತದಾನ ಮಾಡಲು ರಚಿಸಲಾಗಿತ್ತು.  ಈ ಹಿಂದೆ ಅಂತಾರಾಷ್ಟ್ರೀಯ ಅಧ್ಯಕ್ಷರನ್ನು ಸರ್ವಾನುಮತ ಮತ್ತು ಆಯ್ಕೆ ಮೂಲಕ ಮಾಡಲಾಗುತ್ತಿತ್ತು. ೫೨ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸರ್ವಾನುಮತದ ಅಭಾವದ ಕಾರಣ ರಹಸ್ಯ ಮತದಾನಕ್ಕೆ ವ್ಯವಸ್ಥೆ ಮಾಡಲಾಯಿತು. ಗುರುಗ್ರಾಮದ ಲೋಕೋಪಯೋಗಿ ಗೆಸ್ಟ್ ಹೌಸಿನಲ್ಲಿ ಬಿಗಿ ಭದ್ರತೆಯ ಮಧ್ಯೆ ಚುನಾವಣೆ ನಡೆಯಿತು.  ವಿಎಚ್ ಪಿಯು ಹಿಂದುತ್ವ ರಾಜಕಾರಣದ ಮುಖವನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ, ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು ’ಹಿಂದೂ ಸಮಾಜ ನಮ್ಮ ಮುಖ, ಬೇರೆ ಯಾವುದೂ ಅಲ್ಲ. ಕೆಲಸ ಮಾಡುವಾಗ ನಾವು ವಿಭಿನ್ನ ಪಾತ್ರಗಳನ್ನು ವಹಿಸುತ್ತೇವೆ. ಆದರೆ ವಿಶಾಲ ಕಾರ್‍ಯಕ್ರಮಗಳು ಮತ್ತು ಬಾಧ್ಯತೆಗಳು ಯಾರೇ ಒಬ್ಬ ವ್ಯಕ್ತಿಯನ್ನು ಅವಲಂಬಿಸಿರುವುದಿಲ್ಲ ಎಂದು ಹೇಳಿದರು.  ಫಲಿತಾಂಶದ ಬಗ್ಗೆ ತೊಗಾಡಿಯಾ ಅವರ ಅತೃಪ್ತಿ ಮತ್ತು ತಂಡದಲ್ಲಿ ಅವರನ್ನು ಸೇರ್ಪಡೆ ಮಾಡದೇ ಇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಜೈನ್ ಅವರು ’ವಿಚ್‌ಪಿಯು ಏಕಮುಖ ಮಾರ್ಗದ ಸಂಘಟನೆ. ನೀವು ಪ್ರವೇಶಿಸಬಹುದಷ್ಟೆ, ಹೊರಹೋಗುವಂತಿಲ್ಲ. ಹಿಂದೂ ಸಮಾಜದ ಸೇವೆಯಲ್ಲಿ, ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ನಾವು ನಮ್ಮ ಜನಾಭಿಪ್ರಾಯಕ್ಕೆ ಬದ್ಧರಾಗಿರುತ್ತೇವೆ ಮತ್ತು ರಾಮಮಂದಿರ ನಿರ್ಮಾಣಕ್ಕಾಗಿ ಶ್ರಮಿಸುತ್ತೇವೆ. ’ಮಂದಿರ್ ವಹೀಂ ಬನಾಯೇಗಾ, ಜಾಗ ಈಗ ನಮ್ಮ ಬಳಿ ಇಲ್ಲ, ಆದರೆ ಪರಿಸ್ಥಿತಿ ಬದಲಾಗುತ್ತದೆ. ವಿಎಚ್ ಪಿ ನಿಲುವಿನ ಪ್ರಕಾರ ಅಯೋಧ್ಯೆಯಲ್ಲಿ ಬಾಬರಿ ಹೆಸರಿನ ಯಾವುದೇ ಮಸೀದಿ ಇರುವಂತಿಲ್ಲ ಎಂದು ಜೈನ್ ನುಡಿದರು.  ಚುನಾವಣೆಯ ಮುನ್ನಾದಿನ ಆರ್ ಕೆ ಪುರಂನ ವಿಎಚ್ ಪಿ ಕೇಂದ್ರ ಕಚೇರಿಯಲ್ಲಿ ಘರ್ಷನೆಗಳು ನಡೆದಿzವು. ಕಾವಲುಗಾರರು ಕಾರ್ಯಕರ್ತರನ್ನು ಒಳಕ್ಕೆ ಬರದಂತೆ ತಡೆದಿದ್ದರು. ಪರಿಣಾಮವಾಗಿ ಕೊಕ್ಜೆ ಮತ್ತು ರೆಡ್ಡಿ ಬಣಗಳ ಮೇಲಾಟ ನಡೆದಿತ್ತು. ‘ವಿಎಚ್ ಪಿಯಲ್ಲಿ ಶಿಬಿರಗಳಿಲ್ಲ. ಹಿಂದೂ ಸಮಾಜವೇ ನಮ್ಮ ಗುರುತು ಮತ್ತು ನಾವೀಗ ರಾಷ್ಟ್ರಕ್ಕಾಗಿ ಶ್ರಮಿಸಲು ಹೋಗುತ್ತಿದ್ದೇವೆ. ಚುನಾವಣೆಗೆ ಮುನ್ನ ಏನೇ ನಡೆದಿದ್ದರೂ ಅದು ಚುನಾವಣೆಯ ಬಿಸಿಗೆ ಆಗಿದೆ ಅಷ್ಟೆ. ಆದರೆ ಕೆಟ್ ಕನಸಿನಂತೆ ನಾವು ಈ ಘಟನೆಯನ್ನು ಮರೆತಿದ್ದೇವೆ ಎಂದು ಜೈನ್ ಹೇಳಿದರು.  ಮತದಾನದಲ್ಲಿ ಪಾಲ್ಗೊಂಡಿದ್ದವರ ಪೈಕಿ ಒಬ್ಬರಾದ ಅರವಿಂದ ಸೈನಿ ಅವರು ’ಅಂತಾರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ನಾವು ಮತದಾನ ಮಾಡಿದ್ದು ಇದೇ ಮೊದಲು. ತೊಗಾಡಿಯಾ ಅವರು ಹಿಂದುತ್ವಕ್ಕಾಗಿ ದುಡಿದಿದ್ದಾರೆ, ಆದರೆ ಅವರು ಸಂಘಟನೆಗಿಂತ ದೊಡ್ಡವರಲ್ಲ. ಹೊಸ ನಾಯಕತ್ವದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು ಎಂದು ನುಡಿದರು.

2018: ನವದೆಹಲಿ: ಬ್ಯಾಂಕಿಗೆ ೭೩೮ ಕೋಟಿ ರೂಪಾಯಿ ವಂಚಿಸಿದ ಆಪಾದನೆಯಲ್ಲಿ ಯುಕೋ ಬ್ಯಾಂಕಿನ ಮಾಜಿ ಸಿಎಂಡಿ ಅರುಣ್ ಕೌಲ್,  ಖಾಸಗಿ ಕಂಪೆನಿ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿತು. ಅರುಣ್ ಕೌಲ್, ಎರಾ ಎಂಜಿನಿಯರಿಂಗ್ ಇನ್ಫ್ರಾ ಇಂಡಿಯಾ ಲಿಮಿಟೆಡ್ ಕಂಪೆನಿ, ಕಂಪೆನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಹೇಮ್ ಸಿಂಗ್ ಭರಾನಾ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಗಳಾದ ಪಂಕಜ್ ಜೈನ್ ಮತ್ತು ವಂದ್ನಾ ಶಾರ್‍ದ ಅವರನ್ನೂ ಎಫ್ ಐಆರ್ ನಲ್ಲಿ ಹೆಸರಿಸಲಾಯಿತು.  ಅಲ್ಟಿಯಸ್ ಫಿನ್ಸರ್ವ್‌ನ ಪವನ್ ಬನ್ಸಲ್ ಮತ್ತು ಇತರ ಸಾರ್ವಜನಿಕ ಸೇವಕರನ್ನೂ ತನಿಖೆಗೆ ಒಳಪಡಿಸಲಾಯಿತು. ಆರೋಪಿಗಳು ಯೂಕೋ ಬ್ಯಾಂಕಿಗೆ ೬೨೧ ಕೋಟಿ ರೂಪಾಯಿಗಳನ್ನು ಬ್ಯಾಂಕು ಸಾಲ ವರ್ಗಾವಣೆ ಮೂಲಕ ವಂಚಿಸಿದ್ದಾರೆ ಎಂದು ಆಪಾದಿಸಲಾಯಿತು.  ’ಸಾಲವನ್ನು ಮಂಜೂರಾದ ಉದ್ದೇಶಕ್ಕೆ ಬಳಸಲಿಲ್ಲ, ಬದಲಿಗೆ ವಹಿವಾಟು ಮಾಹಿತಿ ಸೃಷ್ಟಿಸಿ ಚಾರ್ಟರ್ಡ್ ಅಕೌಂಟೆಂಟ್ ಗಳು ನೀಡಿದ ನಕಲಿ ಸರ್ಟಿಫಿಕೇಟ್ ಬಳಸಿ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.  ಬ್ಯಾಂಕಿನ ಸಿಎಂಡಿ ಆಗಿದ್ದ ಕೌಲ್ ಅವರು ಕಂಪೆನಿಗೆ ಸಾಲ ಪಡೆದುಕೊಳ್ಳಲು ಅನುಕೂಲ ಮಾಡಿಕೊಟ್ಟರು ಎಂದು ಆಪಾದಿಸಲಾಯಿತು. ಆರೋಪಿಗಳ ಮನೆ ಮತ್ತು ಕಚೇರಿ ಆವರಣಗಳು ಸೇರಿದಂತೆ ದೆಹಲಿಯ ಎಂಟು ಸ್ಥಳಗಳು ಮತ್ತು ಮುಂಬೈಯ ಎರಡು ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿದವು.

2018: ನವದೆಹಲಿ:  ದಲಿತರ ವಿರುದ್ಧ ದೌರ್ಜನ್ಯ ಎಸಗುವ ಆರೋಪಿಗಳನ್ನು ತತ್ ಕ್ಷಣ ಬಂಧಿಸುವುದನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಮಾರ್ಚ್ ೨೦ರಂದು ನೀಡಿದ ತೀರ್ಪಿನ ವಿರುದ್ಧ ಪ್ರತ್ಯೇಕ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಮೂಲಕ ಕೇರಳವು ಇಂತಹ ಪ್ರತ್ಯೇಕ ಅರ್ಜಿ ಸಲ್ಲಿಸಿದ ಮೊದಲ ರಾಜ್ಯ ಎನಿಸಿಕೊಂಡಿತು.   ತೀರ್ಪನ್ನು ಮರುಪರಿಶೀಲನೆ ಮಾಡಬೇಕು, ಅದು ಪರಿಶಿಷ್ಟ ಜಾತಿ/ ಪರಿಶಿಷ್ಟ ಸಮುದಾಯಗಳಲ್ಲಿ ಅಭದ್ರತೆ ಮೂಲವಾಗಿದೆ ಎಂದು ಕೇರಳದ ಎಡರಂಗ ಸರ್ಕಾರವು (ಎಲ್ ಡಿಎಫ್) ಸುಪ್ರೀಂಕೋರ್ಟಿಗೆ ಮನವಿ ಮಾಡಿತು.  ೧೯ ಪುಟಗಳ ಪುನರ್ ಪರಿಶೀಲನಾ ಅರ್ಜಿಯು ಕೇಂದ್ರವು ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯಲ್ಲಿನ ವಾದಗಳನ್ನೇ ಪ್ರತಿಧ್ವನಿಸಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಸಲ್ಲಿಸಿದ್ದ ತನ್ನ ಲಿಖಿತ ಅರ್ಜಿಯಲ್ಲಿ ತೀರ್ಪು ಅಸಾಮರಸ್ಯಕ್ಕೆ ಕಾರಣವಾಗಿರುವುದರ ಜೊತೆಗೆ ರಾಷ್ಟ್ರಕ್ಕೆ ದೊಡ್ಡ ಹಾನಿ ಉಂಟು ಮಾಡಿದೆ ಎಂದು ಹೇಳಿ ತೀರ್ಪಿನ ಪುನರ್ ಪರಿಶೀಲನೆ ಮಾಡಬೇಕು ಎಂದು ಕೋರಿತ್ತು.  ‘ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ೧೯೮೯ರ ವಿಧಿಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು ಎಂಬುದಾಗಿ ಸ್ವತಃ ಸುಪ್ರೀಂಕೋರ್ಟೇ ಹಿಂದೆ ನೀಡಿದ್ದ ತೀರ್ಪುಗಳಿಗೇ ಸದರಿ ತೀರ್ಪು ವಿರುದ್ಧವಾಗಿದೆ ಎಂದು ಕೇರಳ ತನ್ನ ಪುನರ್ ಪರಿಶೀಲನಾ ಅರ್ಜಿಯಲ್ಲಿ ಹೇಳಿತು.  1989ರ ಕಾಯ್ದೆಯ ದುರ್ಬಳಕೆಯಾಗುತ್ತಿದೆ ಎಂಬ ಕೋರ್ಟ್ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರ ನೀಡಿದ ಅಭಿಪ್ರಾಯಕ್ಕೆ ಕೇರಳ ಸಹಮತ ವ್ಯಕ್ತ ಪಡಿಸಿದೆ. ದಲಿತರ ರಕ್ಷಣೆಗಾಗಿ ಇರುವ ಕಾನೂನಿನ ಸಮರ್ಥ ಬಳಕೆಯಾಗಿಲ್ಲ ಎಂಬುದನ್ನು ವಾಸ್ತವಾಂಶಗಳು ಮತ್ತು ಮಾಹಿತಿ ದೃಢ ಪಡಿಸಿದೆ ಎಂಬುದಾಗಿ ಕೇಂದ್ರ ಸರ್ಕಾರ ಹೇಳಿದ್ದನ್ನು ಕೇರಳವೂ ಸಮರ್ಥಿಸಿತು..
ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವಂತಿಲ್ಲ ಎಂಬುದಾಗಿ ಕಾನೂನೇ ಸ್ಪಷ್ಟವಾಗಿ ಹೇಳಿರುವಾಗ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಅವಕಾಶಗಳನ್ನು ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಸುಪ್ರೀಂಕೋರ್ಟ್ ನೀಡುವಂತಿಲ್ಲ ಎಂದೂ ಅರ್ಜಿ ವಾದಿಸಿದೆ. ಅಸ್ಪೃಶ್ಯತೆಯ ಆಚರಣೆ ಮತ್ತು ಸಾಮಾಜಿಕ ಧೋರಣೆಯೇ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ವಿರುದ್ಧ ಇಂತಹ ಅಪರಾಧಗಳನ್ನು ಎಸಗಲು ಕಾರಣವಾಗಿದ್ದದ್ದು ಅಸ್ಪೃಶ್ಯತೆ ಆಚರಣೆಯ ಹಿನ್ನೆಲೆಯನ್ನು ಅವಲೋಕಿಸಿದಾಗ ಗೊತ್ತಾಗುವುದರಿಂದ, ನಿರೀಕ್ಷಣಾ ಜಾಮೀನಿನ ಸವಲತ್ತು ಇಂತಹ ಅಪರಾಧ ಎಸಗಿದ ಆರೋಪಿತ ವ್ಯಕ್ತಿಗಳಿಗೆ ಸಂತ್ರಸ್ಥರನ್ನು ಬೆದರಿಸಲು ದುರ್ಬಳಕೆಯಾಗಬಹುದು ಮತ್ತು ಸಮರ್ಪಕ ತನಿಖೆಗೆ ಅಡ್ಡಿಯಾಗಬಹುದು ಎಂಬ ಆತಂಕಕ್ಕೆ ಸಮರ್ಥನೆಯನ್ನು ಒದಗಿಸುತ್ತದೆ ಎಂಬುದಾಗಿ ಕೇರಳವು ಕೇಂದ್ರದ ವಾದದ ಮಾದರಿಯಲ್ಲೇ ವಾದ ಮಾಡಿತು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಸದಸ್ಯರ ವಿರುದ್ಧ  ಅವರನ್ನು ಅದೇ ದುಸ್ಥಿತಿಯಲ್ಲಿ ಇರಿಸಬೇಕು ಎಂಬ ಉದ್ದೇಶದಿಂದ ಘೋರ ಅಪರಾಧಗಳನ್ನು ಎಸಗಲಾಗುತ್ತದೆ ಎಂದು ಕೇರಳ ವಾದಿಸಿತು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಸಮುದಾಯಗಳ ಸದಸ್ಯರ ಗೌರವಾನ್ವಿತ ಬದುಕಿನ ವಿರುದ್ಧ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸುವುದರಿಂದ ಸಂವಿಧಾನದ ೨೧ನೇ ಪರಿಚ್ಛೇದದ ಅಡಿಯಲ್ಲಿ ನೀಡಲಾಗಿರುವ ಬದುಕುವ ಮೂಲಭೂತ  ಹಕ್ಕಿನ ಉಲ್ಲಂಘನೆ ಆಗುವುದಿಲ್ಲ ಎಂದೂ ಕೇರಳ ವಾದಿಸಿತು. ದುರ್ಬಲರ ರಕ್ಷಣೆಗಾಗಿ ಸಂಸತ್ತು ಅಂಗೀಕರಿಸಿರುವ ಕಾಯ್ದೆಯ ವಿಧಿಗಳನ್ನು ಸುಪ್ರೀಂಕೋರ್ಟ್ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದೂ ಕೇರಳ ವಾದಿಸಿದೆ.

2009: ದುಬೈಯಲ್ಲಿನ ಒಂಟೆ ತಳಿ ಅಭಿವೃದ್ಧಿ ಕೇಂದ್ರವು ವಿಶ್ವದಲ್ಲಿಯೇ ಮೊದಲ ತದ್ರೂಪಿ ಒಂಟೆಯನ್ನು ಸೃಷ್ಟಿಸಿರುವುವುದಾಗಿ ಪ್ರಕಟಿಸಿತು. ಈ ಹೆಣ್ಣುಮರಿಯ ಹೆಸರು ಇನ್‌ಝಾಜ್.

2009: ಬೆಂಗಳೂರು ನಗರದ ಮಡಿವಾಳದಲ್ಲಿನ ಬಾಲಾಪರಾಧಿಗಳ ಸರ್ಕಾರಿ ವೀಕ್ಷಣಾಲಯದಿಂದ 12 ಮಂದಿ ಬಾಲಕರು ತಪ್ಪಿಸಿಕೊಂಡು ಪರಾರಿಯಾದ ಘಟನೆ ಈದಿನ ಸಂಭವಿಸಿತು. ಬಾಲಕರನ್ನು ವೀಕ್ಷಣಾಲಯದ ಆವರಣದಲ್ಲೇ ಬಟ್ಟೆ ತೊಳೆಯಲು ಕೊಠಡಿಯಿಂದ ಹೊರಗೆ ಬಿಟ್ಟಿದ್ದ ಸಂದರ್ಭದಲ್ಲಿ ಅವರು ಪರಾರಿಯಾದರು. ಆವರಣಕ್ಕೆ ಅಳವಡಿಸಿದ ಕಬ್ಬಿಣದ ಮೇಲ್ಛಾವಣಿಯ ಸಲಾಕೆಗಳನ್ನು ಮುರಿದು ಹೊರ ಹೋಗಿರುವ ಅವರು, ಕಟ್ಟಡದ ಕಾಂಪೌಂಡಿಗೆ ಹೊಂದಿಕೊಂಡಂತಿದ್ದ ಮರದ ಮೂಲಕ ಕೆಳಗಿಳಿದು ತಪ್ಪಿಸಿಕೊಂಡರು. ಅವರಲ್ಲಿ ಮೂವರು ಕೊಲೆ ಆರೋಪದಡಿ ಹಾಗೂ ಉಳಿದವರು ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದರು.

2009: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಖಾಸಗಿ ಬಸ್ ಕಣಿವೆಗೆ ಉರುಳಿ ಕನಿಷ್ಠ 30 ಮಂದಿ ಮೃತರಾದರು. ಈ ಬಸ್ ಚಾದ್ರಾ ಹಳ್ಳಿಯಿಂದ ಜಿಲ್ಲಾ ಪ್ರಮುಖ ಸ್ಥಳ ಚಂಬಾ ಕಡೆಗೆ ಹೋಗುತ್ತಿದ್ದಾಗ ಟಿಸ್ಸಾ ಬಳಿ ಕಣಿವೆಗೆ ಉರುಳಿತು. ಮೃತಪಟ್ಟವರೆಲ್ಲ ಚಂಬಾ ಜಿಲ್ಲೆಗೆ ಸೇರಿದ್ದರು.

2009: ಕಾಯಕಯೋಗಿ ಎಂದೇ ಖ್ಯಾತರಾಗಿದ್ದ ಹಾಸನ ತಣ್ಣೀರುಹಳ್ಳ ಮಠದ ಪಟ್ಟಾಧ್ಯಕ್ಷ ಶಿವಲಿಂಗ ಸ್ವಾಮೀಜಿ ನಿಧನರಾದರು. ಅವರು ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಭಕ್ತರ ಮನೆಗೆ ಎತ್ತಿನ ಗಾಡಿಯಲ್ಲಿ, ಕಾಲು ನಡಿಗೆಯಲ್ಲಿ ಸುತ್ತಿ ದವಸ ಧಾನ್ಯ ಸಂಗ್ರಹಿಸಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವರು ನೆರವಾಗಿದ್ದರು. ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಸತಿ, ದಾಸೋಹ ಸೌಲಭ್ಯವನ್ನೂ ಒದಗಿಸಿದ್ದರು. ಕಾಯಕಯೋಗಿಯಾಗಿ ಶ್ರೀಮಠದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಜೈವಿಕ ಕೃಷಿ, ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗಿಸಿಕೊಂಡದ್ದಲ್ಲದೆ, ಎಕರೆಗೆ 40 ಕ್ವಿಂಟಲ್ ಬತ್ತ ಬೆಳೆದ ದಾಖಲೆಯೂ ಅವರಿಗೆ ಸಂದಿದೆ. ಬಡ ವಿದ್ಯಾರ್ಥಿಗಳಿಗಾಗಿ ಐಟಿಐ, ಪ್ರಾಥಮಿಕ ಶಾಲೆ, ಹಾಸ್ಟೆಲ್ ಸ್ಥಾಪಿಸಿದ್ದರು.

2009: ತಾಲಿಬಾನ್ ಜತೆಗಿನ ವಿವಾದಾತ್ಮಕ ಶಾಂತಿ ಒಪ್ಪಂದದ ಭಾಗವಾಗಿ ಪಾಕಿಸ್ಥಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಸ್ವಾತ್ ಕಣಿವೆಯಲ್ಲಿ ಷರಿಯತ್ ಕಾನೂನು ಜಾರಿಗೊಳಿಸಲು ಅನುಮತಿ ನೀಡಿದರು. ಹಿಂದಿನ ದಿನವಷ್ಟೇ ಜರ್ದಾರಿ ಈ ವಿಷಯವನ್ನು ಸಂಸತ್ ಮುಂದೆ ಇಟ್ಟಿದ್ದರು. ಸಂಸತ್ ಇದಕ್ಕೆ ಸಮ್ಮತಿ ನೀಡಿದ ಕಾರಣ ಅಧ್ಯಕ್ಷರು 'ನಿಜಾಮ್-ಎ-ಅದಲ್- 2009 ಕಾಯ್ದೆಗೆ ಅಂಗೀಕಾರ ನೀಡಿದರು ಎಂದು ಹಿರಿಯ ಸಚಿವ ಬಶೀರ್ ಅಹ್ಮದ್ ಬಿಲೋರ್ ಹೇಳಿಕೆಯನ್ನು ಜಿಯೋ ಟಿವಿ ಉಲ್ಲೇಖಿಸಿತು. ಒಪ್ಪಂದಕ್ಕೆ ಸಹಿ ಮಾಡಿರುವ ವಿಷಯವನ್ನು ಅಧ್ಯಕ್ಷರ ವಕ್ತಾರ ಕೂಡ ಖಚಿತಪಡಿಸಿರುವುದಾಗಿ ಜಿಯೋ ವಾಹಿನಿ ಹೇಳಿತು.

2009: ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅದರ ಪೈಲಟ್ ಮೃತನಾದ ಕಾರಣ ಪ್ರಯಾಣಿಕನೊಬ್ಬ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ರೋಚಕ ಘಟನೆಗೆ ಫ್ಲಾರಿಡಾದ ಫೋರ್ಟ್‌ಮೈರ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಕ್ಷಿಯಾಯಿತು. ನೇಪಲ್ಸ್ ವಿಮಾನ ನಿಲ್ದಾಣದಿಂದ ಹೊರಟ 'ಕಿಂಗ್' ವಿಮಾನವು 10,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದಾಗ ಪೈಲಟ್ ಮೃತನಾದ. ತತ್ ಕ್ಷಣವೇ ಪ್ರಯಾಣಿಕನೊಬ್ಬ ವಿಮಾನಯಾನ ನಿಯಂತ್ರಕರ ನೆರವಿನೊಂದಿಗೆ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ. ಈ ಪ್ರಯಾಣಿಕನಿಗೆ ಒಂದು ಎಂಜಿನ್ ವಿಮಾನ ಚಾಲನೆಗೆ ಪರವಾನಗಿ ಇತ್ತು. ಆದರೆ ಎರಡು ಎಂಜಿನ್ ಹೊಂದಿರುವ ವಿಮಾನ ಚಾಲನೆಗೆ ಅನುಮತಿ ಇರಲಿಲ್ಲ. ಜಾಕ್ಸನ್‌ನಿಂದ ಮಿಸಿಸಿಪ್ಪಿಗೆ ತೆರಳುತ್ತಿದ್ದ ಈ ವಿಮಾನದಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದರು.

2008: ನೇಪಾಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಫಲಿತಾಂಶ ಹೊರಬಿದ್ದ ಒಟ್ಟು 181 ಸ್ಥಾನಗಳಗಳಲ್ಲಿ ಸಿಪಿಎನ್- ಮಾವೋವಾದಿ ಪಕ್ಷವು 101 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದತ್ತ ದಾಪುಗಾಲು ಹಾಕಿತು. ಈ ಮೂಲಕ ರಾಜಪ್ರಭುತ್ವವನ್ನು ಕೊನೆಗಾಣಿಸಲು ಪಕ್ಷವು ದಶಕಗಳಿಂದಲೂ ನಡೆಸುತ್ತಾ ಬಂದ ಹೋರಾಟಕ್ಕೆ ಜಯ ದೊರೆತಂತಾಯಿತು.

2008: ಸುಮಾರು ನಾಲ್ಕು ದಶಕಗಳ ನಂತರ ಕೋಲ್ಕತಾ -ಢಾಕಾ ನಡುವಿನ ರೈಲು ಸೇವೆ ಪುನರಾರಂಭವಾಯಿತು. ಎರಡೂ ದೇಶಗಳ ನಡುವೆ ಬಾಂಧವ್ಯ ವೃದ್ಧಿಸುವ ಸಲುವಾಗಿ ಏಕಕಾಲಕ್ಕೆ ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ಭಾರತದ ಕೋಲ್ಕತಾದಲ್ಲಿ `ಮೈತ್ರಿ ಎಕ್ಸ್ ಪ್ರೆಸ್' ಹೆಸರಿನ ಸಾರ್ವಜನಿಕ ರೈಲ್ವೆ ಸೇವೆಯನ್ನು ವಿಧ್ಯುಕ್ತವಾಗಿ ಪುನರಾರಂಭಿಸಲಾಯಿತು. ಬಂಗಾಲಿಗಳ ಹೊಸವರ್ಷದ ದಿನವಾದ `ಪೊಯ್ಲ ಬೈಸಾಖಿ'ಯಂದು ಪುಷ್ಪಗಳಿಂದ ಅಲಂಕೃತಗೊಂಡ ಆರು ಬೋಗಿಗಳ ರೈಲನ್ನು ಬೆಳಿಗ್ಗೆ 7.10ಕ್ಕೆ ರಿಮೋಟ್ ಕಂಟ್ರೋಲ್ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ವಿಧ್ಯುಕ್ತವಾಗಿ ಉದ್ಘಾಟಿಸಿದರು. ಉತ್ತರ ಕೋಲ್ಕತಾದಿಂದ ಹೊರಟ ಈ ರೈಲು 15 ಗಂಟೆಗಳ ಐತಿಹಾಸಿಕ ಪ್ರಯಾಣದ ನಂತರ ಢಾಕಾವನ್ನು ತಲುಪುವುದು. 1965ರಲ್ಲಿ ನಡೆದ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಕೋಲ್ಕತಾ-ಢಾಕಾ ನಡುವಣ ರೈಲ್ವೆ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ಸಮಯದಲ್ಲಿ ಬಾಂಗ್ಲಾ ಪಾಕಿಸ್ಥಾನದ ಭಾಗವಾಗಿತ್ತು. ಈ ಮಧ್ಯೆ 1996ರಲ್ಲಿ ಕೋಲ್ಕತಾ -ಢಾಕಾ ನಡುವೆ ನೇರ ಬಸ್ ಸಂಪರ್ಕ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. `ಮೈತ್ರಿ' ಅಂದರೆ ಸ್ನೇಹದ ಹೆಸರಿನಲ್ಲಿರುವ ಈ ರೈಲು 538 ಕಿ.ಮೀ.ವರೆಗೆ ಪ್ರಯಾಣಿಸಲಿದ್ದು, 120ಕಿ.ಮೀ. ವರೆಗಿನ ಪ್ರಯಾಣವನ್ನು ಭಾರತದಲ್ಲಿ ಕೈಗೊಳ್ಳುತ್ತದೆ. ಕೋಲ್ಕತಾದಿಂದ ಹೊರಡುವ ರೈಲಿನಲ್ಲಿ 368 ಮಂದಿ ಪ್ರಯಾಣಿಸಬಹುದಾಗಿದ್ದರೆ, ಢಾಕಾದಿಂದ ಹೊರಡುವ ರೈಲಿನಲ್ಲಿ 418ಮಂದಿ ಪ್ರಯಾಣಿಸಬಹುದು. `ಮೈತ್ರಿ ಎಕ್ಸ್ ಪ್ರೆಸ್' ಸಂಚಾರ ಆರಂಭಕ್ಕೆ ಎರಡೂ ದೇಶಗಳು ಈ ವಾರದ ಆದಿಯಲ್ಲಿ ಪರಸ್ಪರ ಚರ್ಚಿಸಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಏಪ್ರಿಲ್ 14 ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ ಮತ್ತು ಮರಣ ದಿನವೂ ಆಗಿದೆ. ಅಲ್ಲದೆ ಟ್ಯಾಗೋರರು ಭಾರತ ಮತ್ತು ಬಾಂಗ್ಲಾ ಎರಡೂ ದೇಶಗಳಿಗೆ ರಾಷ್ಟ್ರಗೀತೆಯನ್ನು ರಚಿಸಿಕೊಟ್ಟವರು. ಆದ್ದರಿಂದ ಅಂದು `ಮೈತ್ರಿ ಎಕ್ಸ್ ಪ್ರೆಸ್'ಗೆ ಚಾಲನೆ ನೀಡಬೇಕು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಪಿ.ಆರ್. ದಾಸ್ ಮುನ್ಯಿ ಅವರ ಸಲಹೆಯನ್ನು ಪರಿಗಣಿಸಿ ಈ ದಿನವೇ 'ಮೈತ್ರಿ' ಸಂಚಾರ ಆರಂಭಿಸಲಾಯಿತು.

2008: ವಿಧಾನ ಪರಿಷತ್ ಮಾಜಿ ಸದಸ್ಯೆ ಮತ್ತು ಲೇಖಕಿ ಸರಿತಾ ಕುಸುಮಾಕರ ದೇಸಾಯಿ (67) ಹಿಂದಿನ ದಿನ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಬೆಂಗಳೂರಿನ ಬನಶಂಕರಿಯ ಚಿತಾಗಾರದಲ್ಲಿ ಈದಿನ ಸಂಜೆ ಅಂತ್ಯಕ್ರಿಯೆ ನೆರವೇರಿತು. ಮೂಲತಃ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯವರಾದ ಸರಿತಾ ಅವರು ಗುಲ್ಬರ್ಗದ ಖ್ಯಾತ ವಕೀಲರಾಗಿದ್ದ ಕುಸುಮಾಕರ ದೇಸಾಯಿ ಅವರನ್ನು ವಿವಾಹವಾಗಿ ಗುಲ್ಬರ್ಗದಲ್ಲಿ ವಾಸವಾಗಿದ್ದರು. ಅನಾರೋಗ್ಯದ ಕಾರಣ ಇತ್ತೀಚೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕನ್ನಡ ಕಾನೂನು ಪದಕೋಶ ರಚನಾ ಸಮಿತಿ, ಅಖಿಲ ಕರ್ನಾಟಕ ಪ್ರಥಮ ವಿಪ್ರ ಮಹಿಳಾ ಸಮ್ಮೇಳನದ ಅಧ್ಯಕ್ಷೆಯಾಗಿ, ಕನ್ನಡ ಲೇಖಕಿಯರ ಪರಿಷತ್ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದ ಅವರು, `ನಾನು ಲಕ್ಕಿ, ಕಾಶಿಯಲ್ಲಿ ಕಂಡಿದ್ದೇನು?' `ಮಿಡಿಗಾದ ಮಿಡುಕು' ಮುಂತಾದ ಸಣ್ಣ ಕಥೆಗಳ ಸಂಕಲನ ಪ್ರಕಟಿಸಿದ್ದರು. ದೂರದರ್ಶನದ ಜನಪ್ರಿಯ ಧಾರಾವಾಹಿಯಾಗಿದ್ದ `ಮನೆತನ', `ಋಣಾನುಬಂಧ', `ಒಲವು-ಚೆಲುವು'ಗಳಲ್ಲಿ ನಟಿಸಿದ್ದರು. ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯೆಯಾಗಿದ್ದರು. ಇವರ `ಭೀಮೇಶ-ಕೃಷ್ಣ' ಸಂಗೀತ ರೂಪಕ ಅಖಿಲ ಭಾರತ ಆಕಾಶವಾಣಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ವರ್ಷದ ಲೇಖಕಿ ಪ್ರಶಸ್ತಿಗೆ ಭಾಜನರಾಗಿದ್ದರು. ಗುಲ್ಬರ್ಗ-ಬೀದರ್ ರೈಲ್ವೆ ಮಾರ್ಗ, ಸಿಮೆಂಟ್ ಕಾರ್ಖಾನೆ, ಆಳಂದ ಸಕ್ಕರೆ ಕಾರ್ಖಾನೆ ಸೇರಿದಂತೆ ಈ ಭಾಗದ ಹಲವು ಬೇಡಿಕೆಗಳಿಗಾಗಿ ಸರ್ಕಾರದ ಗಮನ ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದರು. 1995ರಲ್ಲಿ ಅವರು ವಿಧಾನಪರಿಷತ್ ಸದಸ್ಯೆಯಾಗಿ ನಾಮಕರಣಗೊಂಡಿದ್ದರು.

2008: ಬಿಹಾರಿನ ಜಮುಯಿ ಜಿಲ್ಲೆಯ ಜಹಜಾ ರೈಲ್ವೆ ನಿಲ್ದಾಣದಲ್ಲಿನ ಪೊಲೀಸ್ ಠಾಣೆಯ ಮೇಲೆ ಹಿಂದಿನ ದಿನ ರಾತ್ರಿ ಸುಮಾರು 500 ಸಶಸ್ತ್ರ ಮಾವೋವಾದಿ ನಕ್ಸಲೀಯರು ದಾಳಿ ಮಾಡಿದ್ದರಿಂದ ಭದ್ರತಾ ಪಡೆಯ ನಾಲ್ವರು ಸೇರಿದಂತೆ ಐವರು ಸತ್ತು ಇತರ 12 ಜನರು ಗಂಭೀರವಾಗಿ ಗಾಯಗೊಂಡರು. ಈ ನಕ್ಸಲೀಯರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಅಲ್ಲಿದ್ದವರನ್ನು ಬಲವಂತವಾಗಿ ಹೊರಗೆ ಹಾಕಿದರು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ಅಪಹರಿಸಿ ಸ್ಫೋಟಕ ಸಿಡಿಸಿದರು.

2008: ಭುವನೇಶ್ವರದಲ್ಲಿ ಹಿಂದಿನ ದಿನ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕ್ರೀಡಾ ತರಬೇತುದಾರ ಬಿರಾಂಚಿ ದಾಸ್ ಅವರಿಗೆ ಸಹಸ್ರಾರು ಜನರು ಅಶ್ರುತರ್ಪಣದ ಮೂಲಕ ಅಂತಿಮ ನಮನ ಸಲ್ಲಿಸಿದರು. ಆದರೆ ಅತಿ ಕಿರಿಯ ವಯಸ್ಸಿನ ಮ್ಯಾರಾಥಾನ್ ಓಟಗಾರ ಬುಧಿಯಾ ಸಿಂಗ್ ಗೆ ಮಾತ್ರ ತನ್ನ ಗುರುವಿಗೆ ಅಂತಿಮ ನಮನ ಹೇಳಲು ಸಾಧ್ಯವಾಗಲಿಲ್ಲ. ಭದ್ರತಾ ಕಾರಣಕ್ಕಾಗಿ ತಾಯಿ ಸುಖಂತಿ ಸಿಂಗ್ ಅವರ ಆದೇಶದಂತೆ ಕ್ರೀಡಾನಿಲಯದ ತನ್ನ ಕೊಠಡಿಯಲ್ಲಿಯೇ ಬಂಧಿಯಾದ ಬುಧಿಯಾಗೆ ಕೊನೆಗೂ ಗುರುವಿನ ಅಂತಿಮ ದರ್ಶನದ ಭಾಗ್ಯ ದೊರಕಲಿಲ್ಲ.

2008: ಮುಂಬೈಯಿಂದ ಹಾಂಕಾಂಗಿಗೆ ಮೊದಲ ವಿಮಾನಯಾನವನ್ನು ಜೆಟ್ ಏರ್ ವೇಸ್ ಆರಂಭಿಸಿತು. ಇದರೊಂದಿಗೆ ಈ ಮಾರ್ಗದಲ್ಲಿ ಖಾಸಗಿ ಕಂಪೆನಿಯೊಂದು ವಿಮಾನಯಾನ ಸೇವೆ ಆರಂಭಿಸಿದ ಶ್ರೇಯಸ್ಸು ಜೆಟ್ ಏರ್ ವೇಸ್ ಗೆ ಸಂದಿತು.

2008: ಭಾರತದ ಪಂಕಜ್ ಅಡ್ವಾಣಿ ಅವರು ಎರಡು ದಿನ ಹಿಂದೆ ಮ್ಯಾನ್ಮಾರಿನಲ್ಲಿ ಮುಕ್ತಾಯವಾದ ಏಳನೇ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ತುರುಸಿನ ಪೈಪೋಟಿ ಕಂಡುಬಂದ ಫೈನಲ್ ಪಂದ್ಯದಲ್ಲಿ ಪಂಕಜ್ ಅಡ್ವಾಣಿ ಅವರು 5-4ರಲ್ಲಿ ಭಾರತದವರೇ ಆದ ರೂಪೇಶ್ ಶಾ ಅವರನ್ನು ಪರಾಭವಗೊಳಿಸಿದರು.

2007: ಭ್ರಷ್ಟಾಚಾರ ಪ್ರಕರಣದಲ್ಲಿ `ಸಾರ್ವಜನಿಕರ ಸೇವಕರ' ಮೇಲೆ ಮೊಕದ್ದಮೆ ಹೂಡಲು ಪೂರ್ವಾನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಸಾರ್ವಜನಿಕ ರಂಗದಲ್ಲಿ ಮಿತಿ ಮೀರುತ್ತಿರುವ ಲಂಚಗುಳಿತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದು ಗಮನಾರ್ಹವಾದ ತೀರ್ಪು. 1988ರ ಭ್ರಷ್ಟಾಚಾರ ತಡೆ ಕಾನೂನಿನ ಅಡಿ ದಾಖಲಾಗುವ ಪ್ರಕರಣದಲ್ಲಿ ಪೂರ್ವಾನುಮತಿ ತನ್ನಷ್ಟಕ್ಕೆ ತಾನೇ ಅಂತರ್ಗತವಾಗಿದೆ. ಆದ್ದರಿಂದ ಅನುಮತಿ ನೀಡಲಾಗಿದೆಯೇ ಇಲ್ಲವೇ ಎನ್ನುವುದು ಮಹತ್ವ ಪಡೆಯುವುದಿಲ್ಲ ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಎಚ್. ಎಸ್. ಕಪಾಡಿಯಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತು.

2007: ಶಿಯಾ ಜನಾಂಗದವರ ಪವಿತ್ರ ನಗರವಾದ ಕರ್ಬಾಲದಲ್ಲಿನ ಬಸ್ಸು ನಿಲ್ದಾಣದಲ್ಲಿ ಕಾರು ಬಾಂಬ್ ಸ್ಫೋಟ ಸಂಭವಿಸಿ ಕನಿಷ್ಠ 56 ಜನರು ಮೃತರಾಗಿ, ಇತರ 70ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು. ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಪವಿತ್ರ ಸಮಾಧಿ ಸ್ಥಳದಿಂದ ಕೇವಲ 200 ಮೀಟರುಗಳ ಅಂತರದಲ್ಲಿ ಈ ಸ್ಫೋಟ ನಡೆಯಿತು. ಕರ್ಬಾಲ ನಗರವು ಬಾಗ್ದಾದಿನಿಂದ 80 ಕಿ.ಮೀ. ದೂರದಲ್ಲಿದೆ.

2007: ಮಾಧ್ಯಮಗಳಲ್ಲಿ ಬಹುಚರ್ಚಿತ ಪ್ರೇಮ ಪ್ರಸಂಗ ಬ್ರಿಟನ್ನಿನ ರಾಜಕುಮಾರ ವಿಲಿಯಮ್ಸ್ ಮತ್ತು ಕೇಟ್ ಮಿಡ್ಲ್ ಟನ್ ಅವರದ್ದು. ಆದರೆ ಈಗ ಈ ಪ್ರೇಮ ಬಾಂಧವ್ಯ ಮುರಿದುಬಿದ್ದಿದ್ದು, ಬ್ರಿಟನ್ನಿನ ಸನ್ ಪತ್ರಿಕೆ ಇವರ ವೈಮನಸ್ಸನ್ನು ಪ್ರಕಟಿಸಿತು. 24 ಹರೆಯದ ವಿಲಿಯಮ್ಸ್ ಮತ್ತು 25 ಹರೆಯದ ಕೇಟ್ ಕಳೆದ ತಿಂಗಳಷ್ಟೇ ಸ್ವಿಟ್ಜರ್ಲ್ಯಾಂಡಿನಲ್ಲಿ ತಬ್ಬಿಕೊಳ್ಳುತ್ತ ಮುತ್ತಿಡುತ್ತ ಚಳಿಗಾಲದ ರಜೆಯನ್ನು ಕಳೆದಿದ್ದರು.. ಮಧ್ಯಮ ವರ್ಗದ ವಾಣಿಜ್ಯೋದ್ಯಮಿಯೊಬ್ಬರ ಮಗಳಾದ ಕೇಟ್ ತನ್ನ ಫ್ಯಾಷನ್ ಉಡುಗೆ ತೊಡುಗೆಗಳಿಂದ ಜನಪ್ರಿಯಳಾಗಿದ್ದಳು. ಬಹುತೇಕ ಜನರು ಕೇಟ್ ರನ್ನು ರಾಣಿಯ ಸ್ವರೂಪದಲ್ಲಿ ಸ್ವೀಕರಿಸಿದ್ದರು..

2007: ಇತ್ತೀಚೆಗೆ ಮಹಿಳೆಯರನ್ನು ತೀವ್ರವಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರಿಗೆ ಯೋಗದ ಮೂಲಕ ಸುಲಭವಾಗಿ ಮದ್ದು ಕಂಡುಕೊಂಡು ಪರಿಣಾಮಕಾರಿಯಾದ ಫಲಿತಾಂಶ ಪಡೆಯಬಹುದು ಎಂಬುದು ಬೆಳಕಿಗೆ ಬಂದಿತು. ಸ್ತನ್ಯ ಕ್ಯಾನರಿಗೆ ತುತ್ತಾಗಿರುವ ಮಹಿಳೆಯರಿಗೆ ಯೋಗದ ಕೆಲವು ನಿರ್ದಿಷ್ಟ ಆಸನಗಳನ್ನು ಪ್ರತಿದಿನ ಅಭ್ಯಾಸ ಮಾಡಿಸಿದಾಗ ಅದು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದನ್ನು ನಾರ್ತ್ ಕರೊಲಿನಾದ ಸಂಶೋಧಕರು ಪತ್ತೆ ಹಚ್ಚಿದರು. ನಾರ್ತ್ ಕರೊಲಿನಾದ ದುರ್ಹಮ್ ಪ್ರದೇಶದಲ್ಲಿರುವ ಡ್ಯೂಕ್ ಯುನಿವರ್ಸಿಟಿ ಆಫ್ ಮೆಡಿಕಲ್ ಸೆಂಟರಿನಲ್ಲಿ ಮಹಿಳೆಯರ ಸ್ತನ್ಯ ಕ್ಯಾನ್ಸರ್ ಮೇಲೆ ಯೋಗದ ಪರಿಣಾಮ ಕುರಿತಂತೆ ಕೈಗೊಂಡಿದ್ದ ಸಂಶೋಧನೆ ಯಶಸ್ವಿಯಾಗಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಡಾ. ಜೇಮ್ಸ್ ಡಬ್ಲ್ಯೂ. ಕಾರ್ಲ್ ಸನ್ ಈ ದಿನ ಪ್ರಕಟಿಸಿದರು. ಸ್ತನ ಕಾನ್ಸರ್ ಬರುವುದಕ್ಕೆ ಮುಂಚೆಯೇ ಮಹಿಳೆ ಆ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಉತ್ತಮ. ಸ್ತನ ಕ್ಯಾನ್ಸರ್ ಇರುವ ಸುಮಾರು 59 ವರ್ಷದ 13 ಮಹಿಳೆಯರಿಗೆ ವಾರಕ್ಕೊಮ್ಮೆ ಯೋಗ ತರಬೇತಿ ನೀಡಲಾಗುತ್ತಿತ್ತು. ಇದೇ ರೀತಿ ಸತತವಾಗಿ 8 ವಾರಗಳ ಕಾಲ ಮಾಡಿದಾಗ ಅವರಲ್ಲಿ ನೋವು ಕಡಿಮೆಯಾಗಿ ಚೈತನ್ಯ ಕಂಡು ಬರತೊಡಗಿತು. ಇದು ನೋವು ನಿರೋಧಕ ಶಕ್ತಿಯ ಪ್ರಮಾಣವನ್ನೂ ಹೆಚ್ಚು ಮಾಡಿತ್ತು ಎಂದು ಸಂಶೋಧನ ತಂಡ ಕಂಡು ಹಿಡಿಯಿತು. ಪ್ರತಿದಿನ ಯೋಗ ಮಾಡುವುದರಿಂದ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರು ಪರಿಣಾಮಕಾರಿ ಫಲಿತಾಂಶ ಪಡೆಯಬಹುದು. `ಯೋಗದಿಂದ ನೋವು. ಆಯಾಸ ಕಡಿಮೆಯಾಗಿ ದೇಹಕ್ಕೆ ಹೆಚ್ಚು ಉತ್ಸಾಹ ಉಂಟಾಗುತ್ತದೆ' ಎಂಬುದು ಕಾರ್ಲ್ ಸನ್ ಅಭಿಪ್ರಾಯ..

2006: ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ರಾಮಾಯಣ ಮಹಾಸತ್ರವನ್ನು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ನ್ಯಾಸ ಸಮಿತಿ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಉದ್ಘಾಟಿಸಿದರು. ರಾಮಚಂದ್ರಾಪುರ ಮಠದ ಸ್ವಾಮೀಜಿ ಶ್ರೀ ರಾಘವೇಶ್ವರ ಭಾರತೀ ಅವರು ಖ್ಯಾತ ಸಾಹಿತಿ ಎಸ್ .ಎಲ್. ಭೈರಪ್ಪ ಅವರಿಗೆ ಪ್ರಥಮ ಪುರುಷೋತ್ತಮ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವಾಲ್ಮೀಕಿ ರಾಮಾಯಣದ ಸಾರವನ್ನು ಶ್ರೀಸಾಮಾನ್ಯರಿಗೆ ಬಿತ್ತುವ ಉದ್ದೇಶದ ಇಂತಹ ಕಾರ್ಯಕ್ರಮ ಇತಿಹಾಸದಲ್ಲಿ ಇದೇ ಪ್ರಥಮ.

2006: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಎ.ಬಿ.ಎ. ಘನಿಖಾನ್ ಚೌಧರಿ ಅವರು ಕೋಲ್ಕತಾದಲ್ಲಿ ನಿಧನರಾದರು.

2006: ದೆಹಲಿಯ ಜಾಮಾ ಮಸೀದಿ ಸಂಕೀರ್ಣದಲ್ಲಿ ಎರಡು ಸ್ಫೋಟಗಳು ಸಂಭವಿಸಿ 13 ಜನ ಗಾಯಗೊಂಡರು. ಆದರೆ ಮಸೀದಿಗೆ ಯಾವುದೇ ಹಾನಿ ಉಂಟಾಗಲಿಲ್ಲ.

1965: ಕಲಾವಿದೆ ಪ್ರತಿಭಾ ಟಿ.ಎಸ್. ಜನನ.

1951: ಭಾರತದಲ್ಲಿ ದಕ್ಷಿಣ ರೈಲ್ವೇ ಸ್ಥಾಪನೆಗೊಂಡಿತು. ಇದು ಮೊತ್ತ ಮೊದಲ ವಲಯ ರೈಲ್ವೇ (ಝೋನಲ್ ರೈಲ್ವೇ) ಆಗಿದ್ದು, ಮದ್ರಾಸ್, ದಕ್ಷಿಣ ಮರಾಠಾ, ದಕ್ಷಿಣ ಭಾರತ ಮತ್ತು ಮೈಸೂರು ರಾಜ್ಯ ರೈಲ್ವೇಗಳನ್ನು ವಿಲೀನಗೊಳಿಸಿ ಈ ರೈಲ್ವೇ ವಲಯವನ್ನು ಸ್ಥಾಪಿಸಲಾಯಿತು.

1947: ಕಲಾವಿದ ಕಮಲಾಕ್ಷ ಪಿ. ಜನನ.

1944: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇಂಫಾಲಿನಿಂದ 45 ಕಿ.ಮೀ. ದೂರದ ಮೊಯಿರಂಗ್ ಹೆಸರಿನ ಈ ಸ್ಥಳದಲ್ಲಿ ಈಗ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಮಾರಕ ಸಭಾಂಗಣ ಹಾಗೂ ವಾರ್ ಮ್ಯೂಸಿಯಂ ಇದೆ.

1928: ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಮ್ಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಶಂಕರಗೌಡ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೆಟ್ಟದೂರಿನಲ್ಲಿ ಜನಿಸಿದರು. ರೇಖಾಚಿತ್ರ, ಜಲವರ್ಣ, ನೆರಳು ಬೆಳಕಿನ ಕಲೆ, ತೈಲವರ್ಣ, ಭಾವಚಿತ್ರ ಮುಂತಾದುವುಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಬೆಟ್ಟದೂರು 14ರ ವಯಸ್ಸಿನಲ್ಲೇ ರಬೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ, ಸುಭಾಶ್ ಚಂದ್ರ ಬೋಸ್ ಅವರ ಭಾವಚಿತ್ರ ರಚಿಸಿದವರು.

1900: ಕಲಾವಿದ ಎಚ್. ಎಸ್. ಇನಾಮತಿ ಜನನ.

1891: ಭೀಮರಾವ್ ರಾಮ್ ಜಿ ಅಂಬೇಡ್ಕರ್ (ಡಾ. ಬಿ.ಆರ್. ಅಂಬೇಡ್ಕರ್) (1891-1956) ಜನ್ಮದಿನ. ಹರಿಜನರ ನಾಯಕರಾಗಿದ್ದ ಇವರು 1947-51ರ ಅವಧಿಯಲ್ಲಿ ಭಾರತ ಸರ್ಕಾರದ ಕಾನೂನು ಸಚಿವರಾಗಿದ್ದರು. ಭಾರತದ ಸಂವಿಧಾನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಮುತ್ಸದ್ದಿ ಇವರು.

1889: ಅರ್ನಾಲ್ಡ್ (ಜೋಸೆಫ್) ಟಾಯ್ನಬೀ (1889-1975) ಹುಟ್ಟಿದ ದಿನ. ಇಂಗ್ಲಿಷ್ ಇತಿಹಾಸಕಾರನಾದ ಈತ `ಎ ಸ್ಟಡಿ ಆಫ್ ಹಿಸ್ಟರಿ' ಗ್ರಂಥದ ಮೂಲಕ ಖ್ಯಾತನಾದ.

1866: ಆನ್ ಸುಲ್ಲೀವಾನ್ ಮ್ಯಾಕೆ (1866-1936) ಹುಟ್ಟಿದ ದಿನ. ಅಮೆರಿಕಾದವಳಾದ ಈಕೆ ಕುರುಡಿ, ಕಿವುಡಿ, ಮೂಕಿಯಾಗಿದ್ದ ಹೆಲನ್ ಕೆಲ್ಲರ್ ನ ಶಿಕ್ಷಕಿ.

1828: ನಾಹ್ ವೆಬ್ಸ್ಟರ್ ತನ್ನ `ಅಮೆರಿಕನ್ ಡಿಕ್ಷನರಿ ಆಫ್ ಇಂಗ್ಲಿಷ್ ಲ್ಯಾಂಗ್ವೇಜ್'ನ ಮೊದಲ ಆವೃತ್ತಿಯನ್ನು ಪ್ರಕಟಿಸಿದ.

No comments:

Post a Comment