ನಾನು ಮೆಚ್ಚಿದ ವಾಟ್ಸಪ್

Monday, April 2, 2018

ಇಂದಿನ ಇತಿಹಾಸ History Today ಏಪ್ರಿಲ್ 01

ಇಂದಿನ ಇತಿಹಾಸ History Today ಏಪ್ರಿಲ್ 01
2018: ಬೆಂಗಳೂರು: ಮಾರ್ಚ್ ೨೯ರ ಗುರುವಾರ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದ್ದ ಭಾರತದ ಮಹತ್ವಾಕಾಂಕ್ಷೆಯ ’ಜಿಸ್ಯಾಟ್-೬ಎ ಉಪಗ್ರಹ ಸಂಪರ್ಕ ಕಳೆದುಕೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೃಢ ಪಡಿಸಿತು. ೨೬೦ ಕೋಟಿ ರೂಪಾಯಿ ವೆಚ್ಚದ ೨೧೪೦ ಕೆ.ಜಿ. ತೂಕದ ದೇಶೀ ನಿರ್ಮಿತ ಉಪಗ್ರಹ ಜಿಸ್ಯಾಟ್-೬ಎಯ ಕಾರ್‍ಯ ನಿರ್ವಹಣೆ  ಮಾರ್ಚ್ ೩೧ರ ಶನಿವಾರ ಬೆಳಗಿನವರೆಗೂ ಸರಿಯಾಗಿದ್ದುದನ್ನು ಗಮನಿಸಲಾಗಿತ್ತು. ಅದೇ ದಿನ (ಮಾ.೩೧) ಉಪಗ್ರಹವನ್ನು ಮುಂದಿನ ಕಕ್ಷೆಗೆ ಏರಿಸುವ ಪ್ರಕ್ರಿಯೆಯ ಭಾಗವಾಗಿ ಲಿಕ್ವಿಡ್ ಅಪೋಜಿ ಮೋಟಾರ್ (ಲ್ಯಾಮ್) ಇಂಜಿನ್ ಅನ್ನು ೫೩ ನಿಮಿಷ ಉರಿಸಲಾಗಿತ್ತು.. ಉಪಗ್ರಹವನ್ನು ಮುಂದಕ್ಕೆ ತಳ್ಳುವ ಮೂರನೇ ಹಾಗೂ ಅಂತಿಮ ಹಂತದ ಕಾರ್ಯವನ್ನು ಈದಿನಕ್ಕೆ  ನಿಗದಿಪಡಿಸಲಾಗಿತ್ತು.  ಆದರೆ, ಉಪಗ್ರಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇಸ್ರೊ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು.  ಉಪಗ್ರಹ ಸಂಪರ್ಕ ಕಳೆದುಕೊಂಡಿರುವ ಬಗ್ಗೆ ಶನಿವಾರ ಬೆಳಗ್ಗೆಯೇ ಗುಮಾನಿ ವ್ಯಕ್ತವಾಗಿತ್ತು. ವಿಜ್ಞಾನಿಗಳು ಅದರ ಜೊತೆಗೆ ಸಂಪರ್ಕ ಸಾಧಿಸುವ ಯತ್ನವನ್ನು ಶನಿವಾರ ಬೆಳಗ್ಗಿನಿಂದ ಇಡೀ ರಾತ್ರಿ ನಡೆಸಿದರು. ಆದರೆ ಬಳಿಕ ಉಪಗ್ರಹದ ಸಂಪರ್ಕ ಸಾಧ್ಯವಾಗಿಲ್ಲ ಎಂದು ಇಸ್ರೋ ಮೂಲಗಳು ತಿಳಿಸಿದವು.  ಸಶಸ್ತ್ರ ಪಡೆಗಳು ಮತ್ತು ಚಂದ್ರಯಾನ ಸಾಹಸಕ್ಕೆ ಭೀಮ ಬಲ ನೀಡುವುದಾಗಿ ಭಾವಿಸಲಾಗಿದ್ದ ಭಾರತದ ಜಿಸ್ಯಾಟ್-೬ ಎ ಸಂಪರ್ಕ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಮಾರ್ಚ್ ೨೯ರ ಸಂಜೆ ಶ್ರೀಹರಿಕೋಟಾದ ಸತೀಶ ಧವನ್ ವ್ಯೋಮ ನಿಲ್ದಾಣದಿಂದ ಯಶಸ್ವಿಯಾಗಿ ಉಡಾಯಿಸಿತ್ತು. ಪೂರ್ವನಿಗದಿಯಂತೆ ಮುಂದಿನ ೧೮ ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಕಾರ್ಯಾಚರಣೆಯೂ ಯಶಸ್ವಿಯಾಗಿತ್ತು. ಉಪಗ್ರಹವನ್ನು ಭೂ ಸ್ಥಿರ ಉಪಗ್ರಹ ಉಡಾವಣಾ ವಾಹನವು (ಜಿಎಸ್ ಎಲ್ ವಿ-ಎಫ್ ೮) ಅಂದಾಜು ೩೫,೯೦೦ ಕಿ.ಮೀ. ಎತ್ತರದಲ್ಲಿನ ಭೂ ಸ್ಥಿರ ವರ್ಗಾವಣೆ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ ಎಂದು ಇಸ್ರೋ ತಿಳಿಸಿತ್ತು.  ೨,೧೪೦ ಕಿ,ಗ್ರಾಂ ತೂಕದ, ಸುಮಾರು ೨೭೦ ಕೋಟಿ ರೂಪಾಯಿ ವೆಚ್ಚದ ಉಪಗ್ರಹವು ನಿರ್ದಿಷ್ಟವಾಗಿ ರಾಷ್ಟ್ರದ ಮೂಲೆ ಮೂಲೆಗಳಲ್ಲಿ ಇರುವ ಭದ್ರತಾ ಪಡೆಗಳಿಗೆ ಕೈಗಳಲ್ಲೇ ಹಿಡಿಯಬಲ್ಲ ಮೊಬೈಲ್ ಸಾಧನಗಳಿಗೆ ಸಂಕೇತಗಳನ್ನ ಕಳುಹಿಸಲು ಅತ್ಯಂತ ಹೆಚ್ಚು ಉಪಯುಕ್ತವಾಗಲಿವೆ, ರಾಕೆಟ್ ಹೊಸ ಎಂಜಿನನ್ನು ಕೂಡಾ ಹೊಂದಿದ್ದು ಇದನ್ನು ತನ್ನ ಚಂದ್ರಯಾನ ಯೋಜನೆಯಲ್ಲಿ ಬಳಸಬಹುದು ಎಂದು ಇಸ್ರೋ ಹಾರೈಸಿತ್ತು. ಜಿಸ್ಯಾಟ್-೬ಎ ಉಪಗ್ರಹವು ೨೦೧೫ರಲ್ಲಿ ಉಡಾವಣೆ ಮಾಡಲಾಗಿದ್ದ ಜಿಸ್ಯಾಟ್ - ೬ ನಂತಹುದೇ ಉಪಗ್ರಹವಾಗಿದ್ದು ಈ ಅತ್ಯುನ್ನತ ಶಕ್ತಿಯ ಎಸ್ ಬ್ಯಾಂಡ್ ಸಂಪರ್ಕ ಉಪಗ್ರಹವನ್ನು ದೇಶೀಯವಾಗಿಯೇ ನಿರ್ಮಿಸಲಾಗಿತ್ತು.. ಇದರ ಆಯುಸ್ಸು (ಕಾರ್ಯ ನಿರ್ವಹಣಾ ಸಾಮರ್ಥ್ಯ) ಅಂದಾಜು ೧೦ ವರ್ಷ ಎಂದು ನಂಬಲಾಗಿತ್ತು. ಈ ಎರಡು ಉಪಗ್ರಹಗಳು ಎಷ್ಟೇ ದೂರದ ಸಂಪರ್ಕ ರಹಿತ ಸ್ಥಳಗಳಿಗೂ ಪರಸ್ಪರ ಮಾಹಿತಿ ವಿನಿಮಯಕ್ಕೆ ನೆರವಾಗಲಿವೆ ಎಂದು ಹಾರೈಸಲಾಗಿತ್ತು. ಉಪಗ್ರಹವು ೬ ಮೀಟರ್ ಅಗಲದ ಆಂಟೆನಾವನ್ನು ಹೊಂದಿದ್ದು, ಇದು ಇಸ್ರೋ ಸಾಮಾನ್ಯವಾಗಿ ಬಳಸುವ ಆಂಟೆನಾಗಳ ಮೂರು ಪಟ್ಟಿನದ್ದು ದೊಡ್ಡ ಗಾತ್ರದ್ದಾಗಿತ್ತು. ಇದಕ್ಕೆ ಯಾವುದೇ ಮೂಲೆಯಿಂದಾದರೂ ಕೈಯಲ್ಲೇ ಹಿಡಿದ ಟರ್ಮಿನಲ್‌ಗಳ ಮೂಲಕ ಮೊಬೈಲ್ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವ ಸಾಮರ್ಥ್ಯವಿತ್ತು. ಭಾರತದ ರಕ್ಷಣಾ ಪಡೆಗಳಿಗೆ ಇದು ವರದಾನವಾಗುವ ನಿರೀಕ್ಷೆ ಇತ್ತು. ಮಾವೋವಾದಿ ನಕ್ಸಲೀಯ ಹಾವಳಿ ಪ್ರದೇಶಗಳಿಗೆ ಈ ಸಾಧನ ದೊಡ್ಡ ಪ್ರಮಾಣದಲ್ಲಿ ಉಪಯುಕ್ತವಾಗಬಲ್ಲುದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾರೈಸಿತ್ತು.  ಜಿಎಸ್ ಎಲ್ ವಿ-ಎಫ್೦೮ ಅತ್ಯುನ್ನತ ಶಕ್ತಿಯ ಸುಧಾರಿತ ವಿಕಾಸ್ ಎಂಜಿನನ್ನು ಹೊಂದಿದ್ದು ಇದು ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಭಾರತ ನಡೆಸಲು ಉದ್ದೇಶಿಸಿರುವ ಚಂದ್ರಯಾನ ೨ ಯೋಜನೆಗೂ ಅನುಕೂಲಕರವಾಗಲಿದೆ ಎಂದು ಇಸ್ರೋ ಹಾರೈಸಿತ್ತು.  ಹಾಸನದ ಇಸ್ರೋ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಮತ್ತೆ ಉಪಗ್ರಹದೊಂದಿಗೆ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ.  ಕಳೆದ ವರ್ಷ ಆಗಸ್ಟ್ ೩೧ರಂದು ಇಸ್ರೋ ತನ್ನ ಐಆರ್ ಎನ್ ಎಸ್ ಎಸ್- ೧ ಎಚ್ ದಿಕ್ಸೂಚಿ ಉಪಗ್ರಹ ವನ್ನು ಕಳೆದುಕೊಂಡಿತ್ತು.  ಭಾರತದ ಇನ್ಸಾಟ್ -೨ ಡಿ ಸಂಪರ್ಕ ಉಪಗ್ರಹ ನಾಲ್ಕೇ ತಿಂಗಳುಗಳ ಕಾರ್ಯ ನಿರ್ವಹಣೆ ಬಳಿಕ ೧೯೯೭ರ ಅಕ್ಟೋಬರ್ ತಿಂಗಳಲ್ಲಿ ನಿಷ್ಕ್ರಿಯಗೊಂಡದ್ದು ಭಾರತಕ್ಕೆ ಆಗಿದ್ದ ಅತಿ ದೊಡ್ಡ ನಷ್ಟವಾಗಿತ್ತು.

2018: ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಸಂಭವಿಸಿದ ಪ್ರತ್ಯೇಕ ಘರ್ಷಣೆಗಳಲ್ಲಿ ೩ ಸೇನಾ ಯೋಧರು ಹುತಾತ್ಮರಾಗಿದ್ದು, ಉನ್ನತ ಕಮಾಂಡರ್‌ಗಳಿಬ್ಬರು ಸೇರಿದಂತೆ ೧೧ ಮಂದಿ ಉಗ್ರಗಾಮಿಗಳು ಹತರಾದರು.  ಮೂರು ಶವ ಪತ್ತೆಯೊಂದಿಗೆ ಸತ್ತ ಉಗ್ರಗಾಮಿಗಳ ಸಂಖ್ಯೆ  ೧೧ಕ್ಕೆ ಏರಿದೆ. ಇನ್ನೊಬ್ಬ ಯೋಧ ಕೂಡಾ ಹುತಾತ್ಮನಾಗಿದ್ದು, ಹುತಾತ್ಮ ಯೋಧರ ಸಂಖ್ಯೆ ೩ಕ್ಕೆ ಏರಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ತಿಳಿಸಿತು.  ಪ್ರದೇಶದ ಬೇರೆ ಬೇರೆ ಕಡೆ ಸಂಭವಿಸಿದ ಮೂರು ಪ್ರತ್ಯೇಕ ಘರ್ಷಣೆಗಳ ಬಳಿಕ ಭದ್ರತಾ ಪಡೆಗಳು ಮತ್ತು ಪ್ರತಿಭಟನಕಾರರ ಮಧ್ಯೆ ಸಂಭವಿಸಿದ ಹಿಂಸಾಚಾರದಲ್ಲಿ ಇಬ್ಬರು ನಾಗರಿಕರೂ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದವು. ಅನಂತನಾಗ್ ಜಿಲ್ಲೆಯಲ್ಲಿ ಉಗ್ರಗಾಮಿಯೊಬ್ಬ ಪೊಲೀಸರಿಗೆ ಶರಣಾಗತನಾಗಿದ್ದಾನೆ ಎಂದೂ ಪೊಲೀಸರು ತಿಳಿಸಿದರು.  ದೊಡ್ಡ ಪ್ರಮಾಣದಲ್ಲಿ ಉಗ್ರಗಾಮಿಗಳು ಬಂದಿದ್ದಾರೆ ಎಂಬ ಮಾಹಿತಿಯನ್ನು ಅನುಸರಿಸಿ ಭದ್ರತಾ ಪಡೆಗಳು ಶನಿವಾರ ರಾತ್ರಿ ದಕ್ಷಿಣ ಕಾಶ್ಮೀರದ ಮೂರು ಕಡೆಗಳಲ್ಲಿ ಏಕಕಾಲಕ್ಕೆ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.  ಭದ್ರತಾ ಪಡೆಗಳು ಮತ್ತು ರಾಜಕೀಯ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಲು ಸಭೆ ನಡೆಸುವ ಉದ್ದೇಶವನ್ನು ಉಗ್ರಗಾಮಿಗಳು ಹೊಂದಿದ್ದರು.  ಅನಂತನಾಗ್ ಜಿಲ್ಲೆಯ ದಿಯಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಕಾರ್‍ಯಾಚರಣೆಯಲ್ಲಿ ಒಬ್ಬ ಉಗ್ರಗಾಮಿ ಹತನಾದರೆ ಇನ್ನೊಬ್ಬ ಶರಣಾಗತನಾದ. ಶೋಪಿಯಾನ್ ಜಿಲ್ಲೆಯ ಡ್ರಾಗದ್ ನಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ೭ ಉಗ್ರಗಾಮಿಗಳೂ ಹತರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.  ಇನ್ನೊಂದು ಗುಂಡಿನ ಘರ್ಷಣೆ ಕಚ್ದೂರು ಶೋಪಿಯಾನಿನಲ್ಲಿ ಘಟಿಸಿತು. ಅಲ್ಲಿ ಇಬ್ಬರು ಸೇನಾ ಯೋಧರು ಹುತಾತ್ಮರಾದರು. ಎಂಟು ಮಂದಿ ಉಗ್ರಗಾಮಿಗಳೂ ಹತರಾದುದನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೈದ್ ಟ್ವಿಟ್ಟರ್ ಸಂದೇಶದಲ್ಲಿ ದೃಢ ಪಡಿಸಿದರು.  ದಕ್ಷಿಣ ಕಾಶ್ಮೀರದ ಅನಂತನಾಗ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಭಾನುವಾರ ಸಂಭವಿಸಿದ ಮೂರು ಪ್ರತ್ಯೇಕ ಗುಂಡಿನ ಘರ್ಷಣೆಗಳಲ್ಲಿ ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಸಂಘಟನೆಗಳಿಗೆ ಸೇರಿದ ೮ ಉಗ್ರಗಾಮಿಗಳೂ ಹತರಾಗಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.  ಇಬ್ಬರು ನಾಗರಿಕರೂ ಸಾವನ್ನಪ್ಪಿದ್ದಾರೆ ಎಂದು ವೈದ್ ಹೇಳಿದರು.  ‘ನಾವು ೮ ಭಯೋತ್ಪಾದಕರ ಸದ್ದಡಗಿಸಿದ್ದೇವೆ. ಇನ್ನೊಂದು ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಹೇಳಿದರು.  ನಾಲ್ಕರಿಂದ ಐದು ಭಯೋತ್ಪಾದಕರು ಕಚಿಲ್ದೋರಾದಲ್ಲಿ ಅಡಗಿಕೊಂಡಿದ್ದು, ಇಲ್ಲಿ ಮೂರನೇ ಘರ್ಷಣೆ ಮುಂದುವರೆದಿದೆ ಎಂದು ಡಿಜಿಪಿ ನುಡಿದರು. ಸಾವನ್ನಪ್ಪಿದ ನಾಗರಿಕರ ಪೈಕಿ ಒಬ್ಬರನ್ನು ಜುಬೈರ್ ಅಹಮದ್ ಬಟ್ ಎಂಬುದಾಗಿ ಗುರುತಿಸಲಾಗಿದೆ ಎಂದು ಅವರು ಹೇಳಿದರು. ಹಿಂಸಾತ್ಮಕ ಘರ್ಷಣೆಗಳಲ್ಲಿ ಕನಿಷ್ಠ ಏಳು ಪ್ರತಿಭಟನಕಾರರಿಗೆ ಕಣ್ಣುಗಳಿಗೆ ಗಾಯವಾಗಿದೆ. ಅವರನ್ನು ಶ್ರೀನಗರದ ಎಸ್ ಎಂ ಎಚ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ,  ಘರ್ಷಣೆಗಳ ಹಿನ್ನೆಲೆಯಲ್ಲಿ ದಕ್ಷಿಣಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಜನ ಜೀವನ ಸ್ಥಗಿತಗೊಂಡಿದೆ. ಹತ ಪ್ರತ್ಯೇಕತಾವಾದಿಗಳು ಸ್ಥಳೀಯರಾಗಿದ್ದು ಹಿಜ್ಬುಲ್ ಮುಜಾಹಿದೀನ್ ಮತ್ತು ಎಲ್‌ಇಟಿ ಸಂಘಟನೆಗಳಿಗೆ ಸೇರಿದವರು ಎಂದು ಡಿಜಿಪಿ ನುಡಿದರು.  ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆ ಕೈಗೊಂಡದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ದಕ್ಷಿಣಕಾಶ್ಮೀರದ ಹಲವು ಭಾಗಗಳಲ್ಲಿ ಏಕ ಕಾಲಕ್ಕೆ ಕಾರ್ಯಾಚರಣೆಗಳು ನಡೆದವು. ಈ ವರ್ಷ ಸುಮಾರು ೨೦ ಮಂದಿ ಸ್ಥಳೀಯರನ್ನು ಉಗ್ರಗಾಮಿಗಳು ತಮ್ಮ ಸಂಘಟನೆಗಳಿಗೆ ಸೇರ್ಪಡೆ ಮಾಡಿಕೊಂಡಿದ್ದರು.  ಅಧಿಕೃತ ಮಾಹಿತಿ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು ೨೫೦ ಉಗ್ರಗಾಮಿಗಳು ಸಕ್ರಿಯರಾಗಿದ್ದಾರೆ. ಉಗ್ರಗಾಮಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ದಕ್ಷಿಣಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು ರೈಲು ಸೇವೆಗಳೂ ಅಮಾನತುಗೊಂಡವು.

2018: ನವದೆಹಲಿ:  ’ಮಾನ್ಯ ನ್ಯಾಯಮೂರ್ತಿಗಳೇ, ನಮಗೆ ನಿಮ್ಮ ಮಾತುಗಳು ಕೇಳುತ್ತಿಲ್ಲ. ಅದು ಕೇಳುವಂತೆ ವ್ಯವಸ್ಥೆ ಮಾಡಿ ಹೀಗೆ ಕೋರಿರುವ ಅರ್ಜಿಯೊಂದು ಸುಪ್ರೀಂ ಕೋರ್ಟಿನಲ್ಲೇ ದಾಖಲಾಯಿತು.  ‘ಸುಪ್ರೀಂಕೋರ್ಟಿನಲ್ಲಿ ನ್ಯಾಯವು ಕಾಣಿಸುವುದು ಮಾತ್ರವಲ್ಲ, ಕೇಳಲೂ ಬೇಕು - ಹೀಗೆಂದು ಕಾನೂನು ವಿದ್ಯಾರ್ಥಿಗಳು ಮತ್ತು ಯುವ ವಕೀಲರ ದಂಡೊಂದು ’ವಿಸಲ್ ಫಾರ್ ಪಬ್ಲಿಕ್ ಇಂಟರೆಸ್ಟ್ ಬ್ಯಾನರ್ ಅಡಿಯಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ  ಹೇಳಿತು.  ಸುಪ್ರೀಂಕೋರ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳಾಗಿಯೂ ಬಳಿಕ ಕಕ್ಷಿದಾರರಾಗಿಯೂ ಸೇವೆ ಸಲ್ಲಿಸುವ ವೇಳೆಯಲ್ಲಿ ತಮಗೆ ಆದ ಅನುಭವಗಳನ್ನು ಆಧರಿಸಿ ಈ ಅರ್ಜಿ ಸಲ್ಲಿಸಿರುವ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೀಠಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕ ವ್ಯವಸ್ಥೆಯಲ್ಲಿ ಕೋರ್ಟ್ ಕಲಾಪಗಳು ಸಾರ್ವಜನಿಕರಿಗೆ ಕೇಳದಂತಹ ದುಃಸ್ಥಿತಿ ಇರುವ ಬಗ್ಗೆ ಗಮನ ಸೆಳೆದರು. ದೇಶದ ಅತ್ಯುನ್ನತ ಶಕ್ತಿಶಾಲಿ ನ್ಯಾಯಾಲಯದಲ್ಲಿ ಜನ ಸದಾ ಗಿಜಿಗಿಜಿ, ಕೋರ್ಟ್ ಕೊಠಡಿಗಳು ಜನರಿಂದ ತುಂಬಿ ತುಳುಕುವುದರಿಂದ ಆಗುವ ಸಮಸ್ಯೆಗಳನ್ನೂ ವಿವರಿಸಿರುವ ಅವರು ’ಮೌನವಾಗಿರುವ ಧ್ವನಿವರ್ಧಕ ವ್ಯವಸ್ಥೆಯು ಸಾರ್ವಜನಿಕರ ’ತಿಳಿಯುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿದರು.  ಮಾಹಿತಿ ಹಕ್ಕು (ಆರ್ ಟಿ ಐ) ಕಾಯ್ದೆಯ ಅಡಿಯಲ್ಲಿ ಸುಪ್ರೀಂಕೋರ್ಟಿನಿಂದ ಒದಗಿಸಲಾಗಿರುವ ಮಾಹಿತಿಯ ಪ್ರಕಾರ ತೆರಿಗೆದಾತರ ಹಣದಿಂದ ೯೧ ಲಕ್ಷ ರೂಪಾಯಿ ವೆಚ್ಚ ಮಾಡಿ ಕೋರ್ಟ್ ಕೊಠಡಿಗಳಲ್ಲಿ ಧ್ವನಿ ವರ್ಧಕ ವ್ಯವಸ್ಥೆ ಅಳವಡಿಸಲಾಗಿದೆ ಎಂದು ವಕೀಲರಾದ ಕಪಿಲ್ ದೀಪ್ ಅಗರ್ ವಾಲ್, ಕುಮಾರ ಶಾಬು ಮತ್ತು ಪಾರಸ್ ಜೈನ್ ಅವರು ಭಾರತದ ಸುಪ್ರೀಂಕೋರ್ಟ್ ವಿರುದ್ಧ ಸಲ್ಲಿಸಿದ ಮನವಿ ತಿಳಿಸಿತು. ಕಕ್ಷಿದಾರರು, ವಕೀಲರು ಮತ್ತು ಸುಪ್ರೀಂಕೋರ್ಟ್ ಕಲಾಪಗಳನ್ನು ವರದಿ ಮಾಡುವ ಮಾಧ್ಯಮ ವ್ಯಕ್ತಿಗಳಿಗೆ, ವಿಶೇಷವಾಗಿ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದ ಮತ್ತು ಸೂಕ್ಷ್ಮ ಪ್ರಕರಣಗಳ ವಿಚಾರಣೆ ಕಾಲದಲ್ಲಿ ನ್ಯಾಯಮೂರ್ತಿಗಳು ಏನು ಹೇಳುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ ಎಂದು ಮನವಿ ಹೇಳಿತು. ‘ಅಳವಡಿಸಲಾದ ಧ್ವನಿ ವರ್ಧಕವನ್ನು ಬಳಸದೇ ಇರುವುದು ಸಾರ್ವಜನಿಕರ ಮುಕ್ತ ಕೋರ್ಟ್ ಕಲಾಪದ ಸ್ಥಾಯಿ ಮತ್ತು ಸಾಂವಿಧಾನಿಕ ಹಕ್ಕಿನ ಬಾಗಿಲನ್ನೇ ಮುಚ್ಚುತ್ತದೆ. ಭಾರತೀಯ ಸಂವಿಧಾನದ ೧೪೫(೪) ಪರಿಚ್ಛೇದ, ನಾಗರಿಕ ಸಂಹಿತೆಯ ೧೫೩ ಬಿ ಸೆಕ್ಷನ್ ಮತ್ತು ಅಪರಾಧ ದಂಡಸಂಹಿತೆಯ ೩೨೭ನೇ ಸೆಕ್ಷನ್ ಇವೆಲ್ಲವುಳ ಅಡಿಯಲ್ಲಿ ಕೋರ್ಟ್ ಕಲಾಪಗಳು ಸಾರ್ವಜನಿಕರಿಗೆ ಮುಕ್ತವಾಗಿರುವ ಅಗತ್ಯವಿದೆ.  ಧ್ವನಿವರ್ಧಕದ ಬಗೆಗಿನ ನಿರ್ಲಕ್ಷ್ಯವು ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ರಕ್ಷಣೆಯ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿ ಹೇಳಿತು. ’ಇದು ಸುಪ್ರೀಂಕೋರ್ಟ್ ಕಲಾಪಗಳ ವರದಿ ಮಾಡುವ ಮಾದ್ಯಮ ವ್ಯಕ್ತಿಗಳ ಹಕ್ಕಿಗೆ ಚ್ಯುತಿ ಉಂಟು ಮಾಡುತ್ತದೆ, ಜೊತೆಗೆ ಕಕ್ಷಿದಾರರು, ವಿದ್ಯಾರ್ಥಿಗಳು ಸೇರಿದಂತೆ, ಸಂವಿಧಾನದ ೧೯(೧)(ಎ) ಪರಿಚ್ಛೇದದ ಅಡಿಯಲ್ಲಿ ಒದಗಿಸಲಾಗಿರುವ ಸಾರ್ವಜನಿಕರ ’ತಿಳಿಯುವ ಹಕ್ಕಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅರ್ಜಿ ವಿವರಿಸಿತು.  ಡಿಜಿಟಲ್ ಮಾಧ್ಯಮ ವೇದಿಕೆಗಳು ಹೆಚ್ಚಿರುವ ಈ ಸಂದರ್ಭದಲ್ಲಿ ಮಾಧ್ಯಮ ಮಂದಿಗೆ ಘಟನೆ ನಡೆಯುತ್ತಿದ್ದಂತೆಯೇ ಸುದ್ದಿ ಪ್ರಸಾರ ಮಾಡುವ ತವಕ ಇರುತ್ತದೆ. ಈ ತವಕದಲ್ಲಿ ಅವರು ತಪ್ಪು ವರದಿ ಮಾಡಿದಲ್ಲಿ ಅದರಿಂದ ಎಲ್ಲರಿಗೂ ತೀವ್ರ ಹಾನಿಯಾಗುತ್ತದೆ. ಇದರಿಂದ ಅವರು ನ್ಯಾಯಾಲಯ ನಿಂದನೆ ಎದುರಿಸಬೇಕಾಗುವ ಪರಿಸ್ಥಿತಿಯೂ ಬರಬಹುದು. ಕೋರ್ಟ್ ಕೊಠಡಿಗಳಲ್ಲಿ ಅಳವಡಿಸಲಾಗಿರುವ ಧ್ವನಿ ವರ್ಧಕಗಳನ್ನು ಸರಿಯಾಗಿ ಬಳಸುವುದರಿಂದ ಈ ರೀತಿ ವರದಿಗಳ ತಪಾಗುವಿಕೆಯನ್ನು ಕನಿಷ್ಠಗೊಳಿಸಬಹುದು ಎಂದೂ ಅರ್ಜಿ ಹೇಳಿತು.  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ೨೦೧೭ರ ಡಿಸೆಂಬರ್ ೧೧ರಂದು ಮಾಧ್ಯಮ ಮಂದಿಯ ಜೊತೆಗೆ ನಡೆಸಿದ್ದ ಸಭೆಯನ್ನು ಉಲ್ಲೇಖಿಸಿರುವ ಅರ್ಜಿಯು ಈ ಸಭೆಯಲ್ಲಿ ನ್ಯಾಯಮೂರ್ತಿಗಳ ಧ್ವನಿ ಕೇಳದೇ ಇರುವುದನ್ನು ಸಭೆಯಲ್ಲಿ ಚರ್ಚಿಸಲಾಗಿತ್ತು ಎಂದು ಬೊಟ್ಟು ಮಾಡಿತು.  ಭಾರತದ ಮುಖ್ಯ ನ್ಯಾಯಮೂರ್ತಿಯವರು ಹಾಜರಿದ್ದ ಪತ್ರಕರ್ತರಿಗೆ ತಮ್ಮ ಕೋರ್ಟ್ ಕೊಠಡಿ ಅಂದರೆ ನಂ.೧ ಕೊಠಡಿಗೆ ಸಂಬಂಧಿಸಿದಂತೆ ವಿಷಯವನ್ನು ಗಂಭೀರವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಏನಿದ್ದರೂ ಇದಕ್ಕೆ ಸಂಬಂಧಿಸಿದ ನಿರ್ಧಾರ ಸರ್ವಾನುಮತದ್ದಾಗಬೇಕಾದ ಕಾರಣ ಇತರ ನ್ಯಾಯಾಲಯಗಳ ಬಗ್ಗೆ ತಾನು ಬದ್ಧತೆ ವ್ಯಕ್ತ ಪಡಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದರು ಎಂದು ಅರ್ಜಿ ತಿಳಿಸಿತು.

2018: ಪುಣೆ: ಸಂಯುಕ್ತ ಭಾರತದ ದೃಷ್ಟಿಯಲ್ಲಿ ರಾಜಕೀಯ ತಾರತಮ್ಯಕ್ಕೆ ಜಾಗವಿಲ್ಲ ಎಂದು ಇಲ್ಲಿ ಹೇಳಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ’ಕಾಂಗ್ರೆಸ್ ಮುಕ್ತ ಭಾರತ ಅಥವಾ ’ಸಂಘ ಮುಕ್ತ ಭಾರತದಂತಹ ಪದಗಳನ್ನು ಬಳಸುವುದು ಸರಿಯಲ್ಲ ಎಂದು ಹೇಳಿದರು.  ‘ರಾಷ್ಟ್ರ -ನಿರ್ಮಾಣವು ಒಬ್ಬ ವ್ಯಕ್ತಿಯ ಕೆಲಸವಾಗಲು ಸಾಧ್ಯವಿಲ್ಲ. ಅದು ಎಲ್ಲರನ್ನು ಒಳಗೊಳ್ಳುವಂತಹುದಾಗಿರ ಬೇಕು. ಆಡಳಿತ ಮತ್ತು ವಿರೋಧ ಪಕ್ಷಗಳ ಕಾಣಿಕೆ ಅದಕ್ಕೆ ಬೇಕು ಎಂದು ಪುಣೆಯ ಬಾಲಗಂಧರ್ವ ರಂಗಮಂದಿರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೊರತಂದಿರುವ ಆರು ಪುಸ್ತಕಗಳ ಬಿಡುಡೆ ಸಮಾರಂಭದಲ್ಲಿ ಮಾತನಾಡುತ್ತಾ ಆರೆಸ್ಸೆಸ್ ಸರಸಂಘ ಚಾಲಕರು ಹೇಳಿದರು.  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿರುವ ದ್ಯಾನೇಶ್ವರ ಮುಳೆ ಅವರು ಈ ಪುಸ್ತಕಗಳನ್ನು ಬರೆದಿದ್ದಾರೆ.  ‘ಈ ಪದಗಳು (ಕಾಂಗ್ರೆಸ್ ಮುಕ್ತ ಭಾರತ) ರಾಜಕೀಯ ಘೋಷಣೆಗಳು.. ಇದು ಆರೆಸ್ಸೆಸ್ಸಿನ ಮಾತಿನ ಧಾಟಿಯಲ್ಲ. ಮುಕ್ತ ಪದವನ್ನು ರಾಜಕೀಯದಲ್ಲಿ ಬಳಸಲಾಗುತ್ತದೆ ಹೊರತು ಸಂಘದ ಶಬ್ದಕೋಶದಲ್ಲಿ ಅಲ್ಲ. ಯಾರನ್ನೂ ಹೊರತುಪಡಿಸುವ ಭಾಷೆಯನ್ನು ನಾವು ಎಂದೂ ಬಳಸುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಹೇಳಿದರು.  ಮೋದಿ ಅವರು ತಮ್ಮ ಈ ಹೇಳಿಕೆಯಲ್ಲಿ ’ಕಾಂಗ್ರೆಸ್ ಮುಕ್ತ ಭಾರತ ಮಹಾತ್ಮ ಗಾಂಧಿಯವರ ಕನಸಾಗಿತ್ತು, ಅದನ್ನೇ ನಾನು ಮುಂದುವರೆಸುತ್ತಿದ್ದೇನೆ ಎಂದು ಹೇಳಿದ್ದರು.  ಮೋದಿ ಮತ್ತು ಭಾರತೀಯ ಜನತಾ ಪಕ್ಷ ’ಕಾಂಗೆಸ್ ಮುಕ್ತ ಭಾರತದದ ಜಪ ಜಪಿಸುತ್ತಿದ್ದರೆ, ಎಡಪಕ್ಷಗಳು, ಅಂಬೇಡ್ಕರ್ ವಾದಿ ಪಕ್ಷಗಳು ’ಆರೆಸ್ಸೆಸ್ ಮುಕ್ತ ಭಾರತಕ್ಕೆ ಕರೆ ನೀಡುತ್ತಿವೆ. ಭಾಗ್ವತ್ ಮಾತು ಉಭಯರ ಪ್ರತಿಪಾದನೆಯನ್ನೂ ಕೆಳಕ್ಕೆ ಜಗ್ಗಿತು.  ಸಮಾರಂಭದಲ್ಲಿ ಹಾಜರಿದ್ದ ಸ್ಟ್ರಾಟಜಿಕ್ ಫೋರಸೈಟ್ ಗ್ರೂಪ್ ಅಧ್ಯಕ್ಷ ಸಂದೀಪ್ ವಾಸ್ಲೇಕರ್ ಅವರು ’ಕಾಂಗ್ರೆಸ್ ಮತ್ತು ಆರೆಸ್ಸೆಸ್ ಹಳೆಯ ಸಂಘಟನೆಗಳಾಗಿದ್ದು, ಅವುಗಳನ್ನು ಬೆಳೆಸಲು ಅದೆಷ್ಟು ಕಷ್ಟ ಪಡಲಾಗಿದೆ ಎಂಬುದನ್ನು ವಿವರಿಸಿ, ’ವಿಭಿನ್ನ ಸಿದ್ಧಾಂತಗಳ ಜೊತೆಗೆ ಕೆಲಸ ಮಾಡುವುದು ಹೇಗೆ ಎಂಬುದು ಪ್ರಶ್ನೆ. ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ದಾರಿ ಹುಡುಕಬೇಕು ಎಂದು ಇದಕ್ಕೆ ಮುನ್ನ ಹೇಳಿದ್ದರು.  ಅವರ ಮಾತಿಗೆ ಸ್ಪಂದಿಸಿದ ಭಾಗ್ವತ್ ’ಐರೋಪ್ಯರು ತಮ್ಮ ಜೊತೆಗೇ ವಿರೋಧವನ್ನು ಒಯ್ಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ನಾವು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ನಮ್ಮ ಯೋಚನೆಗಳನ್ನು ಒಪ್ಪದಿದ್ದವರನ್ನೂ ಜೊತೆಗೆ ಒಯ್ಯಬೇಕು. ನಮಗೆ ಬದಲಾವಣೆಗಾಗಿ ಧನಾತ್ಮಕ ದೃಷ್ಟಿಕೋನ ಹೊಂದಿರುವ ವ್ಯಕ್ತಿಗಳ ಅಗತ್ಯ ಇದೆ. ಇಲ್ಲದೇ ಇದ್ದಲ್ಲಿ ನಾವು ಘರ್ಷಣೆಗಳು ಮತ್ತು ವಿಭಜನೆಗಳಿಗೆ ಬಲಿಯಾಗುತ್ತೇವೆ ಎಂದು ಹೇಳಿದರು. ತನ್ನಲ್ಲಿ ತಾನು ವಿಶ್ವಾಸ ಇಟ್ಟುಕೊಳ್ಳುವುದರ ಜೊತೆಗೆ ಕುಟುಂಬ ಮತ್ತು ರಾಷ್ಟ್ರದಲ್ಲಿ ವಿಶ್ವಾಸವನ್ನು ಇಟ್ಟುಕೊಳ್ಳುವುದೇ ಹಿಂದುತ್ವದ ಸಾರ ಎಂದು ಭಾಗ್ವತ್ ನುಡಿದರು.

2018: ಬಾಗ್ದಾದ್: ಉತ್ತರ ಇರಾಕಿನ ಮೊಸುಲ್ ನಗರದಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆ ಕೊಂದುಹಾಕಿದ ೩೮ ಮಂದಿ ಭಾರತೀಯ ಕಟ್ಟಡ ಕಾರ್ಮಿಕರ ಪಾರ್ಥಿವ ಶರೀರದ ಅವಶೇಷಗಳನ್ನು ಬಾಗ್ದಾದಿನಲ್ಲಿ ಭಾರತೀಯ ಅಧಿಕಾರಿಗಳಿಗೆ ಒಪ್ಪಿಸಲಾಯಿತು. ಅವುಗಳನ್ನು  ವಿಮಾನ ಮೂಲಕ ಭಾರತಕ್ಕೆ ಕಳುಹಿಸಲಾಗುವುದು. ಪಾರ್ಥಿವ ಶರೀರದ ಅವಶೇಷಗಳನ್ನು ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಯ್ದು ಬಳಿಕ ಸೇನಾ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗುವುದು ಎಂದು ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ಹೇಳಿದರು.  ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಯು ೨೦೧೪ರ ಬೇಸಿಗೆಯಲ್ಲಿ ಇರಾಕಿನ ಉತ್ತರ ಭಾಗದ ಮೊಸುಲ್ ನಗರವನ್ನು ತಾನು ಸ್ವಾಧೀನಪಡಿಸಿಕೊಂಡ ಬಳಿಕ ಭಾರತೀಯ ಕಾರ್ಮಿಕರನ್ನು ಅಪಹರಿಸಿ ಬಳಿಕ ಕೊಂದು ಹಾಕಿತ್ತು. ನಗರವನ್ನು ಮರುವಶ ಪಡಿಸಿಕೊಂಡ ಬಳಿಕ ಇರಾಕಿ ಅಧಿಕಾರಿಗಳಿಗೆ ಕಳೆದ ವರ್ಷ ಸಾಮೂಹಿಕ ಸಮಾಧಿಗಳು ಪತ್ತೆಯಾಗಿದ್ದವು. ಕಳೆದ ತಿಂಗಳು ಸಮಾಧಿಗಳಲ್ಲಿ ಇದ್ದ ಅವಶೇಷಗಳನ್ನು ಪತ್ತೆ ಹಚ್ಚಲಾಗಿತ್ತು. ಉಗ್ರಗಾಮಿಗಳು ಮೊದಲಿಗೆ ೪೦ ಕಾರ್ಮಿಕರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಅವರ ಪೈಕಿ ಒಬ್ಬ ತಪ್ಪಿಸಿಕೊಂಡಿದ್ದರೆ, ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ಬಂಧುಗಳ ಡಿಎನ್ ಎ ಮಾದರಿಗಾಗಿ ಅಧಿಕಾರಿಗಳು ಕಾದಿದ್ದಾರೆ. ಬಹುತೇಕ ಕಾರ್ಮಿಕರು ಉತ್ತರ ಭಾರತದ ನಿವಾಸಿಗಳಾಗಿದ್ದು, ಮೋಸುಲ್ ಸಮೀಪ ಅವರನ್ನು ಕಟ್ಟಡ ನಿಮಾಣ ಕಂಪೆನಿಯು ಕೆಲಸಕ್ಕಾಗಿ ಕರೆದೊಯ್ದಿತ್ತು. ಆ ಸಮಯದಲ್ಲಿ ಇರಾಕಿನಲ್ಲಿ ಸುಮಾರು ೧೦,೦೦೦ ಮಂದಿ ಇದ್ದರು.


2009: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಆಪ್ತ ಸಹಾಯಕರಾಗಿದ್ದ ಕ್ಯಾಪ್ಟನ್ ನಾರಾಯಣ ಸಿಂಗ್ ನೇಗಿ ಅವರು ಡೆಹ್ರಾಡೂನಿನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ನೇಗಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ನೇಗಿ, 1943ರಲ್ಲಿ ಆಜಾದ್ ಹಿಂದ್ ಫೌಜ್ ಸೇರಿದಾಗ ಬೋಸ್ ಸಂಪರ್ಕಕ್ಕೆ ಬಂದಿದ್ದರು. ನಂತರದಲ್ಲಿ ನೇತಾಜಿ ಇವರನ್ನು ತಮ್ಮ ಅಂಗರಕ್ಷಕರನ್ನಾಗಿ ನೇಮಿಸಿಕೊಂಡಿದ್ದರು.

2009: ಉಳಿತಾಯ ಖಾತೆ ಹೊರತುಪಡಿಸಿ ಇತರ ಖಾತೆಯಿಂದ ಒಂದೇ ದಿನದಲ್ಲಿ 50 ಸಾವಿರ ರೂಪಾಯಿಗಿಂತ ಹೆಚ್ಚು ಮೊತ್ತದ ಹಣ ವಾಪಸ್ ಪಡೆಯುವುದರ ಮೇಲೆ ವಿಧಿಸಲಾಗುತ್ತಿದ್ದ ನಗದು (ಬ್ಯಾಂಕಿಂಗ್ ಕ್ಯಾಷ್) ವಹಿವಾಟು ತೆರಿಗೆಯನ್ನು (ಬಿಸಿಟಿಟಿ) ಸರ್ಕಾರ ತೆಗೆದುಹಾಕಿತು. ವೈಯಕ್ತಿಕ ಖಾತೆಯಿಂದ 50 ಸಾವಿರ, ಇತರ ಖಾತೆಯಿಂದ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ತೆಗೆದಲ್ಲಿ ಶೇ 0.1 ರಷ್ಟು ತೆರಿಗೆ ವಿಧಿಸುವ ಈ ಯೋಜನೆಯನ್ನು ಸರ್ಕಾರ 2005ರಲ್ಲಿ ಜಾರಿಗೆ ತಂದಿತ್ತು.

2009: ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ (ಎನ್‌ಎಸ್‌ಎ) ಬಂಧಿತರಾದ ಬಿಜೆಪಿ ಲೋಕಸಭಾ ಅಭ್ಯರ್ಥಿ ವರುಣ್ ಗಾಂಧಿ ಅವರ ಜೀವಕ್ಕೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಬಿಗಿ ಭದ್ರತೆಯ ಇಟಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ವರುಣ್ ಅವರನ್ನು ಕೊಲೆ ಮಾಡಲು ಭೂಗತ ಪಾತಕಿ ಛೋಟಾ ಶಕೀಲ್ ಸಂಚು ನಡೆಸಿರುವುದಾಗಿ ಬೇಹುಗಾರಿಕಾ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಅವರನ್ನು ಜಿಲ್ಲಾ ಕಾರಾಗೃಹದಿಂದ ಇಟಾ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ಈದಿನ ತಿಳಿಸಿದವು.

2009: ಅತ್ಯಾಧುನಿಕ ಹಾಗೂ ಅತ್ಯಂತ ಸುರಕ್ಷಿತ ಎನ್ನಲಾದ ಬೋಯಿಂಗ್ ಬಿಸಿನೆಸ್ ಜೆಟ್‌ನ್ನು (ಬಿಬಿಜೆ) ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭಾರತೀಯ ವಾಯುಪಡೆಗೆ ವಿಧ್ಯುಕ್ತವಾಗಿ ಹಸ್ತಾಂತರಿಸಿದರು. ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ, 934 ಕೋಟಿ ರೂಪಾಯಿಗಳ ಬಿಬಿಜೆಗಳನ್ನು ವಾಯುಪಡೆಯ ಸಂಪರ್ಕ ವಿಭಾಗಕ್ಕೆ ಸೇರಿಸುವ ಮುನ್ನ ರಾಷ್ಟ್ರಪತಿ ಪ್ರಾರ್ಥನೆ ಸಲ್ಲಿಸಿದರು. ನಂತರ ನಡೆದ ಉದ್ಘಾಟನಾ ಹಾರಾಟದಲ್ಲಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂಗಳಿಗೆ ಪ್ರಯಾಣಿಸಿದರು. ರತ್ನಗಂಬಳಿ ಹಾಸಿದ ಮೆಟ್ಟಿಲುಗಳ ಮೂಲಕ ವಿಮಾನವೇರಿದ ಪ್ರತಿಭಾ ಪಾಟೀಲ್ ನಂತರ ಅದರಲ್ಲಿರುವ ಹಲವಾರು ಸೌಲಭ್ಯಗಳನ್ನು ಹೊಂದಿದ 'ಅತಿಗಣ್ಯರ ಕ್ಯಾಬಿನ್' ಪ್ರವೇಶಿಸಿದರು. ವಿಡಿಯೊ ಸಂವಾದ ಸೌಲಭ್ಯ ಒಳಗೊಂಡಂತೆ ಅತ್ಯಾಧುನಿಕ ಕಚೇರಿ ಸವಲತ್ತುಗಳು ಇಲ್ಲಿವೆ. ಖಾಸಗಿ ಕೋಣೆ, ಡಬ್ಬಲ್ ಮಂಚ ಹಾಗೂ ಮನರಂಜನಾ ಸೌಲಭ್ಯಗಳು ಇದರಲ್ಲಿವೆ. ನ್ಯೂಕ್ಲಿಯರ್ ದಾಳಿಯಂತಹ ತುರ್ತು ಸಂದರ್ಭದಲ್ಲಿ ನಿರ್ದೇಶನ ಕೇಂದ್ರವಾಗಿ ಮತ್ತು ಸುಸಜ್ಜಿತ ಕಚೇರಿಯಾಗಿ ಕಾರ್ಯನಿರ್ವಹಿಸಲು ಈ ಬೋಯಿಂಗ್ ಅನುಕೂಲ ಕಲ್ಪಿಸುತ್ತದೆ. ಭಾರತದ ಅಗತ್ಯಕ್ಕೆ ತಕ್ಕಂತೆ ಅಮೆರಿಕವು ಇದನ್ನು ತಯಾರಿಸಿದ್ದು ಭಾರಿ ಪ್ರಮಾಣದ ಸರಕು ಹಾಗೂ ಗರಿಷ್ಠ 46 ಪ್ರಯಾಣಿಕರನ್ನು ಇದು ಹೊತ್ತೊಯ್ಯಬಲ್ಲುದು. ಅಮೆರಿಕದ ಅಧ್ಯಕ್ಷರಿಗೆ ಇರುವ 'ಏರ್‌ಫೋರ್ಸ್ ಒನ್' ಮಾದರಿಯಲ್ಲಿ ರೂಪಿಸಲಾಗಿದೆ.

2009: ಶ್ರೀಲಂಕಾ ಭದ್ರತಾ ಪಡೆಗಳ ಜತೆ ನಡೆದ ತೀವ್ರ ಕಾಳಗದಲ್ಲಿ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರ ಪುತ್ರ ಚಾರ್ಲ್ಸ್ ಆಂಟನಿ ಗಾಯಗೊಂಡರು. 24 ವರ್ಷ ವಯಸ್ಸಿನ ಚಾರ್ಲ್ಸ್, ಪ್ರಭಾಕರನ್ ಅವರ ಹಿರಿಯ ಪುತ್ರ. ಎಲ್‌ಟಿಟಿಇ ಪ್ರಾಬಲ್ಯದ ಪುದ್ದುಕ್ಕುಡಿಯಿರುಪ್ಪು ಪ್ರದೇಶದಲ್ಲಿ ಲಂಕಾ ಸೇನೆ ನಡೆಸಿದ ಹೋರಾಟದಲ್ಲಿ ಗಾಯಗೊಂಡರು ಎಂದು ಎಂದು ಸೇನಾ ಮೂಲಗಳು ತಿಳಿಸಿದವು. ತಮಿಳು ವ್ಯಾಘ್ರ ಪಡೆ ವಶದಲ್ಲಿರುವ ಇನ್ನಷ್ಟು ಪ್ರದೇಶಗಳನ್ನು ಲಂಕಾ ಸೇನೆ ನಿಯಂತ್ರಣಕ್ಕೆ ಪಡೆಯಲು ನಡೆಸಿದ ಹೋರಾಟದಲ್ಲಿ ಎಲ್‌ಟಿಟಿಇ ಪಡೆಗಳ ನೇತೃತ್ವವನ್ನು ವಹಿಸಿಕೊಂಡಿದ್ದ ಆಂಟನಿ ಮಾರ್ಚ್ 8 ರಂದು ಗಾಯಗೊಂಡಿದ್ದರು.

2008: ತಮಿಳುನಾಡು ಸರ್ಕಾರ ಅಕ್ರಮವಾಗಿ ಆರಂಭಿಸಿದ ಹೊಗೇನಕಲ್ ನೀರಾವರಿ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಬಂದ್, ಹೊಗೇನಕಲ್ ಪ್ರದೇಶದಲ್ಲಿ ಕನ್ನಡಿಗರ ಬೃಹತ್ ಶಕ್ತಿ ಪ್ರದರ್ಶನ ನಡೆಸಲು ಈದಿನ ಬೆಂಗಳೂರಿನಲ್ಲಿ ನಡೆದ ವಿವಿಧ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ತೀರ್ಮಾನಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಏಪ್ರಿಲ್ ತಿಂಗಳ 12 ಅಥವಾ 13ರಂದು ಕರ್ನಾಟಕ ಬಂದ್ ನಡೆಸಲು ಹಾಗೂ ಇದೇ ತಿಂಗಳ 9ರಂದು ಹೊಗೇನಕಲ್ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಣಯಿಸಲಾಯಿತು.

2008: 1992ರ ಷೇರು ಹಗರಣದ ಅಪರಾಧಿಗಳಾದ ಷೇರು ದಲ್ಲಾಳಿ ಕೇತನ್ ಪಾರಿಖ್ ಮತ್ತು ಇತರ ಐವರಿಗೆ ಮುಂಬೈ ವಿಶೇಷ ನ್ಯಾಯಾಲಯವು ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿತು. ಕೆನರಾ ಬ್ಯಾಂಕಿನ ಅಂಗ ಸಂಸ್ಥೆ ಕ್ಯಾನ್ ಫಿನಾದ 487.70 ಕೋಟಿ ರೂಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ವಿ. ಕಾನಡೆ ಅವರು ಷೇರು ದಲ್ಲಾಳಿಗಳಾದ ಪಾರಿಖ್, ಹಿತೇನ್ ದಲಾಲ್, ಕ್ಯಾನ್ ಫಿನಾದ ಮಾಜಿ ಅಧಿಕಾರಿಗಳಾದ ಪಿ.ಆರ್. ಆಚಾರ್ಯ, ಎಸ್. ಕೆ. ಝವೇರಿ, ಪಲ್ಲವ್ ಸೇಥ್ ಮತ್ತು ಎಂ. ಕೆ. ಅಶೋಕ್ ಕುಮಾರ್ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದರು. ಇನ್ನಿಬ್ಬರು ಅಪರಾಧಿಗಳಾದ ಸಾಯಿನಾಥ್, ನವೀನ್ ಚಂದ್ರ ಪಾರಿಖ್ ಅವರಿಗೆ ಆರು ತಿಂಗಳ ಸಾದಾ ಜೈಲು ಶಿಕ್ಷೆ ಪ್ರಕಟಿಸಿದರು.

2008: ದೇಶವನ್ನು ತಲ್ಲಣಗೊಳಿಸಿದ ನಿತಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಯು ಆರೋಪಿಗಳಲ್ಲಿ ಒಬ್ಬನಾದ ಮೊನಿಂದರ್ ಸಿಂಗ್ ಪಂಧೇರನನ್ನು ದೋಷಮುಕ್ತಗೊಳಿಸಿತು. ದಿನಗೂಲಿ ನೌಕರ ಜೇಮ್ಸ್ ಎಂಬವರ 10 ವರ್ಷದ ಪುತ್ರಿ ನಿಷಾ ಎಂಬಾಕೆ 2006ರ ಜುಲೈ ತಿಂಗಳಲ್ಲಿ ನಾಪತ್ತೆಯಾಗಿದ್ದಳು. ಆಕೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲ್ಲಲಾಗಿದೆ ಎಂಬ ಆರೋಪವನ್ನು ಪಂಧೇರ್ ಮತ್ತು ಆತನ ಸೇವಕ ಸುರಿಂದರ್ ಕೋಲಿಮೇಲೆ ಹೊರಿಸಲಾಗಿತ್ತು. ಆದರೆ ಪಂಧೇರ್ ಪ್ರಕರಣದಲ್ಲಿ ಶಾಮೀಲಾದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಿದ ಸಿಬಿಐ, ಕೋಲಿ ಮಾತ್ರ ತಪ್ಪಿತಸ್ಥ ಎಂದು ನ್ಯಾಯಾಲಯಕ್ಕೆ ತಿಳಿಸಿತು.

2008: ಬ್ರಿಟನ್ನಿಗೆ ವಲಸೆ ಬರಲು ಆಸಕ್ತಿ ಹೊಂದಿದ ವೃತ್ತಿ ನಿಪುಣರು ಮತ್ತು ತಜ್ಞರಿಗಾಗಿ ಬ್ರಿಟನ್ ಸರ್ಕಾರ ವಿಶೇಷ ವೀಸಾ ವ್ಯವಸ್ಥೆಯೊಂದನ್ನು ರೂಪಿಸಿತು. ಈ ವ್ಯವಸ್ಥೆ ಈದಿನದಿಂದ ಭಾರತದಲ್ಲಿ ಜಾರಿಗೆ ಬಂದಿತು. ಪಾಯಿಂಟ್ ಆಧಾರಿತ ವೀಸಾ ವ್ಯವಸ್ಥೆ (ಪಿಬಿಎಸ್- ಟಿಒ) ಎಂದು ಕರೆಯಲಾಗುವ ಹೊಸ ವ್ಯವಸ್ಥೆಯಡಿ ಮೂರು ವರ್ಷಗಳಿಗೆ ಅನ್ವಯ ವಾಗುವಂತೆ ವೀಸಾ ನೀಡಲಾಗುವುದು. ಇದುವರೆಗೆ ಜಾರಿಯಲ್ಲಿದ್ದ ಎಚ್ ಎಸ್ ಎಂ (ನುರಿತ ತಜ್ಞರ ವಲಸೆ) ಕಾರ್ಯಕ್ರಮದಡಿ ಎರಡು ವರ್ಷಗಳಿಗೆ ಮಾತ್ರ ವೀಸಾ ನೀಡಲಾಗುತ್ತಿತ್ತು.

2008: ಮಹಾರಾಷ್ಟ್ರ ಸರ್ಕಾರವು 2010ರೊಳಗಾಗಿ ಬೃಹನ್ಮುಂಬೈ ಮಹಾನಗರದಲ್ಲಿ ಮಾನೊ ರೈಲು ಆರಂಭಿಸುವ ಯೋಜನೆ ಕೈಗೆತ್ತಿಕೊಂಡಿತು. ಸುಮಾರು 1800 ಕೋಟಿ ವೆಚ್ಚದಲ್ಲಿ ನಾಲ್ಕು ಪ್ರತ್ಯೇಕ ಮಾರ್ಗಗಳನ್ನು ನಿರ್ಮಿಸುವ ಯೋಜನೆಯಿದ್ದು ಇದರ ಸಂಚಾರಕ್ಕೆ ಅಲ್ಪ ಜಾಗ ಸಾಕಾಗುತ್ತದೆ. ಇದು ಮುಂಬೈ ಮಹಾ ನಗರದ ಹೊರ ವಲಯ ಮತ್ತು ಮೆಟ್ರೊ ರೈಲು ವ್ಯವಸ್ಥೆಗೆ ಪರ್ಯಾಯ ಮಾರ್ಗವಾಗಲಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವರು ತಿಳಿಸಿದರು.

2008: ಇನ್ನು ಮುಂದೆ ಬೆಂಗಳೂರು ಸಂಜೆ ಸಮಯದಲ್ಲೂ ಅಂಚೆ ಇಲಾಖೆ ಮೂಲಕ ಕಾಗದ ಪತ್ರ ಹಾಗೂ ಇತರೆ ವಸ್ತುಗಳನ್ನು ರವಾನಿಸಬಹುದು. ಇದಕ್ಕಾಗಿ ಅಂಚೆ ಇಲಾಖೆ `ಸಂಜೆ ಸ್ಪೀಡ್ ಅಂಚೆ' ಎಂಬ ವಿನೂತನ ಯೋಜನೆಯನ್ನು ಆರಂಭಿಸಿತು. ಇದುವರೆಗೆ ಕೇವಲ ಬೆಳಿಗ್ಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿತ್ತು. ಇನ್ನು ಮುಂದೆ ಸಂಜೆ 6.30 ರವರೆಗೂ ಅಂಚೆ ಅಣ್ಣಂದಿರು ಕಾಗದ ಪತ್ರಗಳನ್ನು ತಲುಪಿಸಲು ಹಾಗೂ ಒಯ್ಯಲು ಮನೆಮನೆಗೆ ಬರಲಿದ್ದಾರೆ. ಪ್ರಧಾನ ಅಂಚೆ ಕಚೇರಿಯಲ್ಲಿ ಈ ಯೋಜನೆಗೆ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಮೀರಾ ದತ್ತ ಅವರು ಚಾಲನೆ ನೀಡಿದರು. ಬೆಂಗಳೂರಿನ 84 ಅಂಚೆ ಕಚೇರಿಗಳಲ್ಲಿ ಮಾತ್ರ ಈ ಸೌಲಭ್ಯ ದೊರೆಯಲಿದ್ದು, 120 ಅಂಚೆ ಅಣ್ಣಂದಿರು ಕಾರ್ಯ ನಿರ್ವಹಿಸುವರು. ಈ ಹೊಸ ವ್ಯವಸ್ಥೆಯಲ್ಲಿ ರಿಜಿಸ್ಟರ್ಡ್ ಅಂಚೆ ಹಾಗೂ ಮನಿಯಾರ್ಡರ್ ಹೊರತು ಪಡಿಸಿ ಇತರ ಸ್ಪೀಡ್ ಪೋಸ್ಟ್ ಪತ್ರಗಳನ್ನು ಮನೆಮನೆಗೆ ತೆರಳಿ ಪಡೆಯಲಾಗುತ್ತದೆ.

2008: `ರಾವಲ್ಪಿಂಡಿ ಎಕ್ಸ್ಪ್ರೆಸ್' ಖ್ಯಾತಿಯ ವೇಗಿ ಶೋಯಬ್ ಅಖ್ತರ್ ಅವರ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಲಾಯಿತು. ಅಖ್ತರ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಹಾಗೂ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಈ ನಿರ್ಧಾರ ಕೈಗೊಂಡಿತು.

2008: ಹಿಂದಿನ ವಾರ ಗೃಹ ಬಂಧನದಿಂದ ಬಿಡುಗಡೆಗೊಂಡ ಪಾಕಿಸ್ಥಾನದ ಪದಚ್ಯುತ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮಹಮ್ಮದ್ ಚೌಧರಿ ಅವರು, ತಾವಿನ್ನೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂದು ಘೋಷಿಸಿದರು. ``ಸಂವಿಧಾನದ ಪ್ರಕಾರ, ತಾವಿನ್ನೂ ಸುಪ್ರೀಂ ಕೋರ್ಟ್ ಮುಖ್ಯ ನಾಯಮೂರ್ತಿಯಾಗಿದ್ದು ಈ ಸಂಬಂಧ ಕರ್ತವ್ಯ ನಿರ್ವಹಣೆಗೆ ಯಾರೂ ಅಡ್ಡಿಪಡಿಸಲಾಗದು' ಎಂದು ಅವರು ಹೇಳಿದರು.

2008: ತುಟಿಗೆ ಲಿಪ್ ಸ್ಟಿಕ್ ಬಳಿದುಕೊಂಡ ಮತ್ತು ಹುಬ್ಬು ತೀಡಿಕೊಂಡ ಮಹಿಳೆ ಫಾಹ್ಮೀದಾ ಮಿರ್ಜಾ ಪಾಕಿಸ್ಥಾನದ ಸಂಸತ್ತಿನಲ್ಲಿ ಸ್ಪೀಕರ್ ಆಗಿ ದಾಖಲೆ ಮಾಡಿದರು. ಫಾಹ್ಮೀದಾ ಮಿರ್ಜಾ ಪಾಕಿಸ್ಥಾನ ಸಂಸತ್ತಿನಲ್ಲಿ ಮಹಿಳಾ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2008: ಕಾಮನ್ವೆಲ್ತ್ ಮಹಾಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿರಿಯ ಭಾರತೀಯ ರಾಜತಂತ್ರಜ್ಞ ಕಮಲೇಶ್ ಶರ್ಮಾ ಅವರು ಈದಿನ ಲಂಡನ್ನಿನಲ್ಲಿ ಅಧಿಕಾರ ವಹಿಸಿಕೊಂಡರು.

2007: ಆಸ್ಟ್ರೇಲಿಯಾದ ವೇಗಿ ಗ್ಲೆನ್ ಮೆಗ್ರಾತ್ ಅವರು ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸರದಾರ ಎನಿಸಿಕೊಂಡು ಹೊಸ ದಾಖಲೆ ನಿರ್ಮಿಸಿದರು. ಬಾಂಗ್ಲಾದೇಶ ವಿರುದ್ಧ ನಡೆದ ಸೂಪರ್ 8ರ ಹಂತದ ಪಂದ್ಯದಲ್ಲಿ ಮೊಹಮ್ಮದ್ ಆಶ್ರಫುಲ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಮೆಗ್ರಾತ್, 33ನೇ ವಿಶ್ವಕಪ್ ಪಂದ್ಯದಲ್ಲಿ ವಿಕೆಟ್ ಸಂಪಾದನೆಯನ್ನು 56ಕ್ಕೆ ಹೆಚ್ಚಿಸಿಕೊಂಡು ಪಾಕಿಸ್ಥಾನದ ವೇಗಿ ವಾಸಿಂ ಅಕ್ರಂ ಹೆಸರಿನಲ್ಲಿ ಇದ್ದ (38 ಪಂದ್ಯಗಳಿಂದ 55 ವಿಕೆಟ್) ದಾಖಲೆಯನ್ನು ಬದಿಗೊತ್ತಿದರು.

2007: ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ತಂತ್ರಜ್ಞಾನದ ಪ್ರಥಮ ಅನ್ವೇಷಕ ಎಲ್. ಬೇಕರ್ (90) ಅವರು ತಿರುವನಂತಪುರದಲ್ಲಿ ನಿಧನರಾದರು. ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮಿನಲ್ಲಿ 1917ರ ಮಾರ್ಚ್ 2ರಂದು ಜನಿಸಿದ ಬೇಕರ್ ಅಲ್ಲಿನ ಬರ್ಮಿಂಗ್ ಹ್ಯಾಮ್ ಸ್ಕೂಲ್ ಆಫ್ ಆರ್ಕಿಟೆಕ್ಟಿನಲ್ಲಿ ಕಲಿತು ಧರ್ಮ ಪ್ರಚಾರ ಕೆಲಸಕ್ಕಾಗಿ 1945ರಲ್ಲಿ ಭಾರತಕ್ಕೆ ಬಂದಿದ್ದರು. ಅನಂತರ ಇಲ್ಲಿಯೇ ನೆಲೆಸಿದ ಅವರಿಗೆ 1989ರಲ್ಲಿ ಈ ದೇಶದ ಪೌರತ್ವ ದೊರಕಿತ್ತು. ಕೆಳಮಧ್ಯಮ ಮತ್ತು ಬಡ ಮಧ್ಯಮ ಜನರಿಗೆ ಸೂಕ್ತವಾಗುವಂತಹ ಅತ್ಯಂತ ಕಡಿಮೆ ವೆಚ್ಚದ ಮತ್ತು ಉತ್ತಮ ಗುಣಮಟ್ಟದ ಮನೆ ನಿರ್ಮಾಣದ ವಿನ್ಯಾಸ ಮಾಡಿ ಬೇಕರ್ ಖ್ಯಾತಿ ಪಡೆದಿದ್ದರು.

2007: ತುಮಕೂರಿನ ಸಿದ್ದಗಂಗೆಯ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಅವರ ಜನ್ಮದಿನವಾದ ಈದಿನ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು `ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ವೀರಾಪುರ ಗ್ರಾಮದಲ್ಲಿ 1908ರಲ್ಲಿ ಏಪ್ರಿಲ್ 1ರಂದು ಜನಿಸಿದ ಶಿವಕುಮಾರ ಸ್ವಾಮೀಜಿ ಅವರು ಹೊನ್ನೇಗೌಡ - ಗಂಗಮ್ಮ ದಂಪತಿಯ 13ನೇ ಹಾಗೂ ಕೊನೆಯ ಪುತ್ರ. ತುಮಕೂರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ, ಆಗಿನ ಕಾಲದಲ್ಲೇ ಬಿ.ಎ. ಆನರ್ಸ್ ಪದವಿ ಪಡೆದ ಮೇಧಾವಿ. 3.3.1930ರಲ್ಲಿ ವಿರಕ್ತಾಶ್ರಮ ದೀಕ್ಷೆ ಪಡೆದ ಸ್ವಾಮೀಜಿ, 11.1.1941ರಂದು ಸಿದ್ದಗಂಗಾ ಮಠದ ಮುಖ್ಯಸ್ಥರಾದರು.

2007: ಭಾರಿ ಒತ್ತಡಕ್ಕೆ ಮಣಿದ ಫಿಡೆ (ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್) ಕೊನೆಗೂ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಗೆ ಸಲ್ಲಬೇಕಾದ ಗೌರವವನ್ನು ಕೊಟ್ಟಿತು. ಭಾರತದ ಆನಂದ್ ವಿಶ್ವ ಚೆಸ್ನ ನಂಬರ್ 1 ಆಟಗಾರ ಎಂದು ಫಿಡೆ ರ್ಯಾಂಕಿಂಗ್ ಸಮಿತಿಯ ಅಧ್ಯಕ್ಷ ಕ್ಯಾಸ್ಟ್ರೊ ಅಂಬುಡೊ ಖಚಿತಪಡಿಸಿದರು.

2007: ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ ಕೊಯಿರಾಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪುನಃ ಮಾವೋವಾದಿಗಳಿಂದ ಕೂಡಿದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾದರು.

2006: ಬಿಜೆಪಿ ಆಡಳಿತ ಇರುವ ಛತ್ತೀಸ್ ಗಢ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಹಾಗೂ ರಾಜಸ್ಥಾನ ಈ ಐದು ರಾಜ್ಯಗಳು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಪದ್ಧತಿ ಜಾರಿಗೊಳಿಸಿದವು. 22 ರಾಜ್ಯಗಳು ಕಳೆದ ವರ್ಷ ವ್ಯಾಟ್ ಪದ್ಧತಿ ಜಾರಿಗೆ ತಂದಿದ್ದು ತಮಿಳುನಾಡು ಮತ್ತು ಉತ್ತರ ಪ್ರದೇಶ ಹೊರತು ಪಡಿಸಿ ಉಳಿದ ಎಲ್ಲ ರಾಜ್ಯಗಳೂ ವ್ಯಾಟ್ ಪದ್ಧತಿ ಅಳವಡಿಸಿಕೊಂಡಂತಾಯಿತು.

2006: ಬ್ರೆಜಿಲ್ಲಿನ ಮೊತ್ತ ಮೊದಲ ಗಗನಯಾನಿ ಬ್ರೆಜಿಲ್ ವಾಯುಪಡೆ ಪೈಲಟ್ ಮಾರ್ಕೋಸ್ ಪಾಂಟೆಸ್, ರಷ್ಯ ಮತ್ತು ಅಮೆರಿಕದ ಗಗನಯಾನಿಗಳಾದ ಪಾವೆಲ್ ವಿನೊಗ್ರದೊವ್ ಹಾಗೂ ಜೆಫ್ರಿ ವಿಲಿಯಮ್ಸ್ ಅವರನ್ನು ಹೊತ್ತ ಸೋಯುಜ್ ಬಾಹ್ಯಾಕಾಶ ನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐ ಎಸ್ ಎಸ್) ತಲುಪಿತು. ಭೂಮಿಯಿಂದ ಹೊರಟ ಎರಡು ದಿನಗಳ ಹಿಂದೆ ಈ ಬಾಹ್ಯಾಕಾಶ ನೌಕೆ ಪಯಣ ಹೊರಟಿತ್ತು.

1943: ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಚಿತ್ರ ಕಲಾವಿದ ವಿ.ಬಿ. ಹಿರೇಗೌಡರ ಅವರು ಬಸವನಗೌಡ- ಗಂಗಮ್ಮ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದಲ್ಲಿ ಜನಿಸಿದರು. ಕುವೆಂಪು ವಿವಿ ಲಲಿತಾ ಕಲಾ ಆಧ್ಯಯನ ಮಂಡಳಿ ಅಧ್ಯಕ್ಷರಾಗಿ, ಸೆನೆಟ್ ಸದಸ್ಯರಾಗಿ, ಗುಲ್ಬರ್ಗ, ಬೆಂಗಳೂರು, ಮೈಸೂರು, ಕನ್ನಡ ವಿಶ್ವವಿದ್ಯಾಲಯಗಳ ಲಲಿತಕಲಾ ಅಧ್ಯಯನ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಹಿರೇಗೌಡರ ಅವರು 25ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನ, ರಾಷ್ಟ್ರೀಯ ಮಟ್ಟದ ಹಲವಾರು ಚಿತ್ರ ಪ್ರದರ್ಶನಗಳಲ್ಲಿ ಪಾಲ್ಗೊಂಡರು.

1976: ಸ್ಟೀವ್ ಒಝ್ನಿಯಾಕ್ ಮತ್ತು ಸ್ಟೀವ್ ಜಾಬ್ಸ್ ಅವರು ಮೊತ್ತ ಮೊದಲ `ಏ(ಆ)ಪಲ್ 1' ಕಂಪ್ಯೂಟರ್ ಬಿಡುಗಡೆ ಮಾಡಿದರು. ಇದರೊಂದಿಗೆ `ಏ(ಆ)ಪಲ್' ಕಂಪ್ಯೂಟರುಗಳ ನಿರ್ಮಾಣ ಆರಂಭವಾಯಿತು. ಏ(ಆ)ಪಲ್ 1 ಕಂಪ್ಯೂಟರ್ ಮೊತ್ತ ಮೊದಲ ಸಿಂಗಲ್ ಸರ್ಕಿಟ್ ಬೋರ್ಡ್ ಕಂಪ್ಯೂಟರ್. ಅದರೆ ಬೆಲೆ 666.66 ಡಾಲರುಗಳಾಗಿದ್ದವು.

1955: ಜನರಲ್ ರಾಜೇಂದ್ರ ಸಿನ್ಹಜಿ ಭಾರತದ ಪ್ರಥಮ ಸೇನಾ ದಂಡ ನಾಯಕರಾದರು.

1954: ಏರ್ ಮಾರ್ಷಲ್ ಸುಬ್ರತೋ ಮುಖರ್ಜಿ ಭಾರತದ ಪ್ರಥಮ ವಾಯುಪಡೆ ಮುಖ್ಯಸ್ಥರಾದರು.

1941: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಅಜಿತ್ ವಾಡೇಕರ್ ಹುಟ್ಟಿದ ದಿನ. 1971ರಲ್ಲಿ ಇಂಗ್ಲೆಂಡಿನಲ್ಲಿ ಆ ದೇಶದ ವಿರುದ್ಧ ನಡೆದ ಪಂದ್ಯಗಳಲ್ಲಿ ಭಾರತಕ್ಕೆ ಮೊದಲ ಸರಣಿ ಜಯ ತಂದು ಕೊಟ್ಟ ಕ್ರಿಕೆಟ್ ಕ್ಯಾಪ್ಟನ್ ವಾಡೇಕರ್.

1936: ಬಿಹಾರಿನಿಂದ ಬೇರ್ಪಟ್ಟು ಒರಿಸ್ಸಾ ಭಾರತದ ಪ್ರತ್ಯೇಕ ರಾಜ್ಯವಾಯಿತು.

1935: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಭಾರತೀಯ ರಿಸರ್ವ್ ಬ್ಯಾಂಕ್) ಸ್ಥಾಪನೆಯಾಯಿತು. ಇದೇ ವರ್ಷ ಇಂಡಿಯನ್ ಪೋಸ್ಟಲ್ ಆರ್ಡರನ್ನು ಕೂಡಾ ಆರಂಭಿಸಲಾಯಿತು.

1883: ಲೋನ್ ಚಾನೆ (1883-1930) ಹುಟ್ಟಿದ ದಿನ. ಇವರು ಮೂಕಿ ಯುಗದ ಖ್ಯಾತ ಅಮೆರಿಕನ್ ಚಿತ್ರನಟ. ಇವರನ್ನು `ಸಹಸ್ರ ಮುಖಗಳ ಮನುಷ್ಯ' (ಮ್ಯಾನ್ ಆಫ್ ಥೌಸಂಡ್ ಫೇಸಸ್) ಎಂದು ಕರೆಯಲಾಗುತ್ತಿತ್ತು.

1578: ವಿಜ್ಞಾನಿ ವಿಲಿಯಂ ಹಾರ್ವೆ ಜನ್ಮದಿನ. ಹೃದಯವು ಪಂಪಿನಂತೆ ಕಾರ್ಯನಿರ್ವಹಿಸುತ್ತ ರಕ್ತಸಂಚಾರಕ್ಕೆ ನೆರವಾಗುತ್ತದೆ ಎಂದು ಈತ ಪತ್ತೆ ಹಚ್ಚಿ ಪ್ರದರ್ಶಿಸಿದ.

No comments:

Post a Comment