ನಾನು ಮೆಚ್ಚಿದ ವಾಟ್ಸಪ್

Tuesday, October 29, 2019

ಇಂದಿನ ಇತಿಹಾಸ History Today ಅಕ್ಟೋಬರ್ 29

2019: ನವದೆಹಲಿ: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶರದ್  ಅರವಿಂದ ಬೋಬ್ಡೆ ಅವರನ್ನು 2019 ಅಕ್ಟೋಬರ್ 29 ಮಂಗಳವಾರ ನೇಮಕ ಮಾಡಲಾಗಿದ್ದು, 2019 ನವೆಂಬರ್ 18 ರಂದು ಮುಖ್ಯ ನ್ಯಾಯಮೂರ್ತಿಯಾಗಿ ಬೋಬ್ಡೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ನ್ಯಾಯಮೂರ್ತಿ ಅರವಿಂದ ಬೋಬ್ಡೆ ಅವರ ಹೆಸರನ್ನು ಉನ್ನತ ಹುದ್ದೆಗೆ ಶಿಫಾರಸು ಮಾಡಿದ್ದು, ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ನವೆಂಬರ್ 17ರಂದು ಹಾಲಿ ಸಿಜೆಐ ರಂಜನ್ ಗೊಗೋಯಿ ನಿವೃತ್ತರಾಗುತ್ತಿದ್ದಾರೆ. ನ್ಯಾಯಮೂರ್ತಿ ಬೋಬ್ಡೆ ಅವರು 47ನೇ  ಸಿಜೆಐ ಆಗಲಿದ್ದಾರೆ. ನ್ಯಾಯಮೂರ್ತಿ ಬೋಬ್ಡೆ ಅವರು 2021 ಏಪ್ರಿಲ್ 23ರಂದು ನಿವೃತ್ತರಾಗಲಿದ್ದಾರೆ. ಶರದ್ ಅರವಿಂದ ಬೋಬ್ಡೆ ಅವರು ಮಹಾರಾಷ್ಟ್ರದ ನಾಗಪುರದಲ್ಲಿ 1956 ಏಪ್ರಿಲ್ 24ರಂದು ಜನಿಸಿದ್ದರು ನಾಗಪುರ  ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ವರು, ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 2000 ಮಾರ್ಚ್ 29ರಂದು ಬಾಂಬೆ ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದರು. 2013 ಏಪ್ರಿಲ್  ತಿಂಗಳಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.(ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

2019: ಜಮ್ಮು: ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಅತಿಯಾಗಿದ್ದು, 2019 ಅಕ್ಟೋಬರ್ 29ರ ಮಂಗಳವಾರ ಸಂಜೆ ಜಮ್ಮು ಕಾಶ್ಮೀರದ ಕುಲಗಮ್  ಜಿಲ್ಲೆಯಲ್ಲಿ ಉಗ್ರರ ದಾಳಿಗೆ 5 ಮಂದಿ ಕಾಶ್ಮೀರೇತರ ಕಾರ್ಮಿಕರು ಸಾವನ್ನಪ್ಪಿದರು.  ದಾಳಿಯಲ್ಲಿ ಓರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದರು.  ಗಾಯಾಳುವನ್ನು ಪಶ್ಚಿಮ ಬಂಗಾಳ ಮೂಲದ ದಿನಗೂಲಿ ಕಾರ್ಮಿಕ ಜಹುರುದ್ದೀನ್ ಎಂದು ಗುರುತಿಸಲಾಗಿದ್ದು, ದಾಳಿ ನಡೆದಾಗ ಈತ ಕತ್ರಾಸು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಯಿತು.  ಐರೋಪ್ಯ  ಒಕ್ಕೂಟದ ಶಾಸನಕರ್ತರ ತಂಡವು ಜಮ್ಮು ಕಾಶ್ಮೀರಕ್ಕೆ ಆಗಮಿಸಿದ ದಿನವೇ ಉಗ್ರರ ದಾಳಿಗಳು ನಡೆದವು. ಈದಿನ ಸಂಜೆ ಪುಲ್ವಾಮಾದಲ್ಲಿ ಪರೀಕ್ಷಾ ಕೇಂದ್ರದ ಹೊರಗೆ ಉಗ್ರರು ಭದ್ರತಾ ಪಡೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ).

2019: ನವದೆಹಲಿ: ರಾಷ್ಟ್ರೀಯ ಸಿಎಸ್ಆರ್  ಚೊಚ್ಚಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ  ರಾಮನಾಥ ಕೋವಿಂದ್  ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾರಂಭದ ವೇಳೆಯಲ್ಲಿ ಕುಸಿದು ಬಿದ್ದ ಮಹಿಳಾ ಪೊಲೀಸ್ ಪೇದೆ ಒಬ್ಬರ ನೆರವಿಗೆ ಧಾವಿಸಿದ ಘಟನೆ 2019 ಅಕ್ಟೋಬರ್ 29ರ ಮಂಗಳವಾರ ಘಟಿಸಿತು. ಸಮಾರಂಭದಲ್ಲಿ ದೆಹಲಿ ಪೊಲೀಸ್  ಮಹಿಳಾ ಪೇದೆ ವಿಜ್ಞಾನ ಭವನದಲ್ಲಿ ವೇದಿಕೆ  ಮುಂದೆ ನಿಂತಿದ್ದರು.  ರಾಷ್ಟ್ರಗೀತೆ ನುಡಿಸುವಾಗ, ಹಠಾತ್ತನೆ ಮಹಿಳಾ ಪೇದೆಯ  ಪಾದ ತಿರುಚಿ ಆಕೆ ಕುಸಿದು ಬಿದ್ದರು.ಮತ್ತು ಕಾರ್ಪೆಟ್ ಮೇಲೆ ಕುಳಿತುಕೊಂಡರು.  ರಾಷ್ಟ್ರಗೀತೆ ಮುಗಿದ ಕೂಡಲೇ ಕೋವಿಂದ್ ಅವರು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂತು  ಮತ್ತು  ಬಳಿಕ ಭದ್ರತಾ ಸಿಬ್ಬಂದಿಯೊಂದಿಗೆ ವೇದಿಕೆಯಿಂದ ಕೆಳಗಿಳಿದು ಕುಸಿದು ಕುಳಿತಿದ್ದ ಮಹಿಳಾ ಪೇದೆಯತ್ತ ನೆರವಿಗಾಗಿ ಧಾವಿಸಿದರು.  ಅವರೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಪೇದೆಯ ಬಳಿಗೆ ಬಂದರು. ಮಹಿಳಾ ಪೇದೆಯೊಂದಿಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದ  ಕೋವಿಂದ್  ಆಕೆಗೆ  ಕುಡಿಯಲು ನೀರಿನ ಬಾಟಲ್ ನೀಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)
2019: ವಾಷಿಂಗ್ಟನ್: ನಿಮಗೆ ಗೊತ್ತಾ ? ಈ ಚಿತ್ರದಲ್ಲಿಇರುವುದು ಸಾಮಾನ್ಯ ನಾಯಿಯಲ್ಲ. ಈ ನಾಯಿಯ ಚಿತ್ರ ಟ್ವಿಟ್ಟರಿನಲ್ಲಿ ಲಕ್ಷಾಂತರ ಮಂದಿಯ ಗಮನ ಸೆಳೆಯಿತು.  ಈ ನಾಯಿಯ ಚಿತ್ರವಿದ್ದ ಟ್ವೀಟ್ಗೆ 37 ಸಾವಿರ ಮಂದಿ ಕಾಮೆಂಟ್ ಬರೆದಿದ್ದಾರೆ, 91 ಸಾವಿರ ಮಂದಿ ಇದನ್ನು ರಿಟ್ವೀಟ್ ಮಾಡಿದ್ದಾರೆ, 3.8 ಲಕ್ಷ ಮಂದಿಲೈಕ್’ ಕೊಟ್ಟಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿ  ಟ್ವೀಟ್ ಜನರ ಗಮನ ಸೆಳೆಯಿತು. ಈ ನಾಯಿಯ ಚಿತ್ರ ಟ್ವಿಟ್ಟರಿನಲ್ಲಿ ‘ವೈರಲ್’ ಆಗುತ್ತಿದ್ದಂತೆಯೇ ಹಲವು ತಮ್ಮ ಮನೆಗಳಲ್ಲಿನ ನಾಯಿಗಳ ಚಿತ್ರವನ್ನೂ ಇದೇ ರೀತಿಯಾಗಿ ಬರೆದು ಟ್ವೀಟ್ ಮಾಡಿದರು. ಈ ನಾಯಿಯ ಚಿತ್ರವನ್ನು ಮೊತ್ತ ಮೊದಲಿಗೆ ಟ್ವೀಟ್ ಮಾಡಿದವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ‘ಈ ನಾಯಿಯ ಹೆಸರನ್ನು ಹೇಳಲು ಸಾಧ್ಯವಿಲ್ಲ. ಆದರೆ ಇದು ಅತ್ಯದ್ಭುತ ಶ್ವಾನ. ವಿಶ್ವಕ್ಕೆ ಇದು ಕೊಟ್ಟಿರುವ ಕೊಡುಗೆ ಮಹತ್ತರವಾದದ್ದು’ ಎಂದು ಟ್ರಂಪ್ ಅವರು ಟ್ವೀಟ್ ಮಾಡಿದ ಬೆನ್ನಲ್ಲೇ  ಟ್ವೀಟಿಗರು ಇದನ್ನು ರಿಟ್ವೀಟ್, ಲೈಕ್ ಮಾಡುವ ಮೂಲಕ ಮತ್ತು ಅದರ ಬಗ್ಗೆ ಕಾಮೆಂಟ್ ಬರೆಯುವ ಮೂಲಕ ಅದನ್ನು ವೈರಲ್ ಮಾಡಿದರು. ಹೌದು, ಟ್ರಂಪ್ ಹೇಳಿರುವಂತೆ ಇದು ಸಾಮಾನ್ಯ ನಾಯಿಯಲ್ಲ. ಅಕ್ಟೋಬರ್ 26ರ ಶನಿವಾರ ಅಮೆರಿಕದ ಸಿರಿಯಾದಲ್ಲಿ ಕುಖ್ಯಾತ ಐಸಿಸ್ ಉಗ್ರ ಸಂಘಟನೆಯ ಸ್ಥಾಪಕ ಅಲ್ ಬಾಗ್ದಾದಿ ಹತ್ಯೆ ಕಾರ್ಯಾಚರಣೆ ನಡೆಸಿದರಲ್ಲ,  ಆ ಕಾರ್ಯಾಚರಣೆಯಲ್ಲಿ ಈ ನಾಯಿ ಪಾಲ್ಗೊಂಡಿತ್ತು. ಪಾಲ್ಗೊಂಡಿತ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಅಮೆರಿಕದ ಯೋಧರ ಕೈಯಿಂದ ತಪ್ಪಿಸಿಕೊಳ್ಳಲು ಸುರಂಗದೊಳಕ್ಕೆ ನುಗ್ಗಿದ್ದ ಬಗ್ದಾದಿಯನ್ನು ಬೆನ್ನಟ್ಟಿ ಸುರಂಗದ ಇನ್ನೊಂದು ಬದಿಯಿಂದ ತಪ್ಪಿಸಿಕೊಂಡು ಪರಾರಿಯಾಗದಂತೆ ತಡೆದಿತ್ತು. ಒಂದೆಡೆ ನಾಯಿಯ ಆರ್ಭಟ, ಮತ್ತೊಂದೆಡೆ ಮುನ್ನುಗ್ಗಿ ಬರುತ್ತಿದ್ದ ಅಮೆರಿಕದ ಯೋಧರು ಮಧ್ಯೆ ಸಿಕ್ಕಿಹಾಕಿಕೊಂಡ ಬಾಗ್ದಾದಿ  ತಾನು ಧರಿಸಿದ ಉಡುಪಿಗೇ ಕಟ್ಟಿಕೊಂಡಿದ್ದ ಬಾಂಬ್ ಸ್ಫೋಟಿಸಿ ತಾನು ಸಾಯುವುದರ ಜೊತೆಗೆ ತನ್ನ ಮೂವರು ಮಕ್ಕಳನ್ನೂ ಬಲಿತೆಗೆದುಕೊಂಡಿದ್ದ. ಸ್ಫೋಟದಲ್ಲಿ ಈ ನಾಯಿ ಕೂಡಾ ಗಾಯಗೊಂಡಿತ್ತು. ಆದರೆ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದು ಪುನಃ ಸೇನೆಯ ಸೇವೆಗೆ ಸಜ್ಜಾಗಿದೆ. ಪ್ರತಿಷ್ಠಿತ ಡೆಲ್ಟಾ ತುಕಡಿಯ ಈ ಶ್ವಾನದ ಹೆಸರನ್ನು ಭದ್ರತೆಯ ದೃಷ್ಟಿಯಿಂದ ಹೇಳಲು ಸಾಧ್ಯವಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)
2019: ಚೆನ್ನೈ: ತಮಿಳು ನಟ, ಹೆಸರಾಂತ ಮಿಮಿಕ್ರಿ ಕಲಾವಿದ ಮತ್ತು ಟಿವಿ ನಿರೂಪಕ ಮಾನೋ  2019 ಅಕ್ಟೋಬರ್ 29ರ ಮಂಗಳವಾರ ರಸ್ತೆ ಅಪಘಾತಕ್ಕೆ ಬಲಿಯಾದರು. ಮಾನೋ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಅಪ್ಪಳಿಸಿದ ಪರಿಣಾಮ ಮಾನೋ ಅವರು ಸ್ಥಳದಲ್ಲೇ ಮೃತರಾದರು. ಮಾನೋ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ರಾಮಚಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದೆ. 2010ರಲ್ಲಿ ತೆರೆಕಂಡಿದ್ದ ತಮಿಳು ಚಿತ್ರ ಪುಝಲ್ ನಲ್ಲಿ ಗಮನಾರ್ಹ ನಟನೆಯನ್ನು ಮಾಡಿದ್ದರು. ಬಳಿಕ ಅವರು ಟಿವಿ ನಿರೂಪಕರಾಗಿ, ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ, ಡ್ಯಾನ್ಸರ್ ಮತ್ತು ಮಿಮಿಕ್ರಿ ಕಲಾವಿದರಾಗಿಯೂ ಗಮನ ಸೆಳೆದಿದ್ದರು. .(ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)
2019: ಪಾಲಕ್ಕಾಡ್: ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರು ನಕ್ಸಲರನ್ನು ಗುಂಡಿನ ಘರ್ಷಣೆಯಲ್ಲಿ  ಕೊಂದ ಘಟನೆ ಕೇರಳದ ಪಾಲಕ್ಕಡ್ ಜಿಲ್ಲೆಯ ಮಂಜಕಟ್ಟಿ ಬೆಟ್ಟದಲ್ಲಿ ಘಟಿಸಿತು. ಗುಂಡಿನ ದಾಳಿಯಲ್ಲಿ ಹತರಾದ ನಕ್ಸಲರನ್ನು ಕೇರಳದಲ್ಲಿ ಸಿಪಿಐ (ಮಾಕ್ರ್ಸಿಸ್ಟ್) ಪಕ್ಷದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿದಳಂ ತಂಡದ ಸದಸ್ಯರಾದ ಶ್ರೀಮತಿ, .ಎಸ್.ಸುರೇಶ್ ಹಾಗೂ ಕಾರ್ತಿ ಎಂದು ಗುರುತಿಸಲಾಯಿತು. ನಕ್ಸಲ್ ನಿಗ್ರಹ ಪಡೆ ಮತ್ತು ಥಂಡರ್ ಬೋಲ್ಟ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗುಂಡಿನ ಘರ್ಷಣೆ ನಡೆಸಲಾಯಿತು. ನಾಲ್ವರು ನಕ್ಸಲರು ಪರಾರಿಯಾಗಿದ್ದಾರೆಂದು ತಿಳಿದುಬಂದಿತು. ಘಟನೆಯಲ್ಲಿ ಮೃತರಾದವರಲ್ಲಿ ಇಬ್ಬರು ರಾಜ್ಯದ ಚಿಕ್ಕಮಗಳೂರಿನವರು ಎಂದು ಹೇಳಲಾಯಿತು. ಶ್ರೀಮತಿ ಮತ್ತು ಸುರೇಶ್ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು ಹಲವಾರು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಮತ್ತೋರ್ವ ನಕ್ಸಲ್ ಕಾರ್ತಿ ತಮಿಳುನಾಡು ಮೂಲದವನು ಎಂದು ಹೇಳಲಾಯಿತು. ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದ ಶ್ರೀಮತಿ 2008ರಿಂದ ನಕ್ಸಲ್ ಚಟುವಟಿಕೆಯಲ್ಲಿದ್ದು, ಆಕೆಯ ಮೇಲೆ 12 ಪ್ರಕರಣಗಳು ದಾಖಲಾಗಿದ್ದವು. ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾಗಿದ್ದು, 2004ರಲ್ಲಿ ನಕ್ಸಲ್ ಗುಂಪಿಗೆ ಸೇರಿದ್ದ. ಪಾಲಕ್ಕಾಡಿನಲ್ಲಿ 2019 ಅಕ್ಟೋಬರ್ 28ರ ಸೋಮವಾರ ಗುಂಡೇಟಿಗೆ ಬಲಿಯಾದ ಸುರೇಶ್ ಮೇಲೆ 21 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ವರದಿಯಾಯಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)
2019: ಜಮ್ಮು:  ದಕ್ಷಿಣ ಕಾಶ್ಮೀರದ ಅನಂತ್ನಾಗ್ಜಿಲ್ಲೆಯ ಬಿಜ್​​ಬಿಹರಾ ಪ್ರದೇಶದಲ್ಲಿ 2019 ಅಕ್ಟೋಬರ್ 28 ಸೋಮವಾರ ಸಂಜೆ ಟ್ರಕ್ಚಾಲಕನನ್ನು ಹತ್ಯೆ ಮಾಡಿದ್ದ ಉಗ್ರನನ್ನು 2019 ಅಕ್ಟೋಬರ್ 29ರ ಮಂಗಳವಾರ  ನಡೆದ ಗುಂಡಿನ ಘರ್ಷಣೆಯಲ್ಲಿ ಸದೆಬಡಿಯಲಾಗಿದೆ ಎಂದು ಹಿರಿಯ ಪೊಲೀಸ್ಅಧಿಕಾರಿ ತಿಳಿಸಿದರು.  ಹತ್ಯೆಯಾದ ಉಗ್ರನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಬಂದೂಕುಧಾರಿಯಾಗಿದ್ದ ಉಗ್ರರು ಇಬ್ಬರು ಟ್ರಕ್ ಚಾಲಕರನ್ನು ಗುರಿಯಾಗಿಸಿದ್ದರು. ಅವರಲ್ಲಿ ಉಧಮ್ಪುರದ ನಾರಾಯಣ್ದತ್ಉಗ್ರರ ದಾಳಿಗೆ ಬಲಿಯಾಗಿದ್ದು, ಮತ್ತೊಬ್ಬ ಟ್ರಕ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ.  ಕಾಶ್ಮೀರೇತರರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದು, ಕಳೆದೆರಡು ವಾರದಲ್ಲಿ ಉಗ್ರರ ದಾಳಿಗೆ ಒಟ್ಟು 6 ಟ್ರಕ್ಚಾಲಕರು ಬಲಿಯಾಗಿದ್ದಾರೆಹಿಂದಿನ ದಿನ ಘಟನೆ ನಡೆದ ಬಳಿಕ ಸ್ಥಳದಲ್ಲಿ ಪೊಲೀಸರು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಓರ್ವ ಉಗ್ರನನ್ನು ಹೊಡೆದುರುಳಿಸಲಾಯಿತು. ನಾರಾಯಣ್ಸೋಮವಾರ ಸ್ಥಳೀಯ ಮಾರ್ಕೆಟ್ನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಹಣ್ಣಿನ ಮಾರ್ಕೆಟ್ಟಿಗೆ  ಸೇಬು ಹಣ್ಣುಗಳನ್ನು ಸಾಗಿಸುತ್ತಿದ್ದರು. ವೇಳೆ ಉಗ್ರರು ಆತನನ್ನು ಹತ್ಯೆ ಮಾಡಿದ್ದರು. ಹತ್ಯೆಯಾದ ಟ್ರಕ್ಚಾಲಕ ನಾರಾಯಣ್ ದತ್ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಚಾಲಕನ ಮೃತದೇಹವನ್ನು ಅವರ ಮನೆಗೆ ಕಳುಹಿಸಲಾಗಿತ್ತು..(ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)


No comments:

Post a Comment