2019: ನವದೆಹಲಿ: ಪರಿಶಿಷ್ಟ
ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯ ವಿಧಿಗಳನ್ನು ವಸ್ತುಶಃ ದುರ್ಬಲಗೊಳಿಸಿದ್ದ ೨೦೧೮ ಮಾರ್ಚ್ ೨೦ರ ತನ್ನ ಆದೇಶವನ್ನು ಸುಪ್ರೀಂಕೋರ್ಟ್ 2019 ಅಕ್ಟೋಬರ್ 01ರ ಮಂಗಳವಾರ ಹಿಂತೆಗೆದುಕೊಂಡಿತು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಂಆರ್ ಶಾ ಮತ್ತು ಬಿಆರ್
ಗವಾಯಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಹೋರಾಟ ರಾಷ್ಟ್ರದಲ್ಲಿ ಇನ್ನೂ ಮುಗಿದಿಲ್ಲ ಎಂದು ಹೇಳಿತು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜನರು ಈಗಲೂ ಅಸ್ಪೃಶ್ಯತೆ, ದೂಷಣೆ ಹಾಗೂ ಸಾಮಾಜಿಕ ಬಹಿಷ್ಕಾರದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪೀಠವು ಅಭಿಪ್ರಾಯಪಟ್ಟಿತು. ಸಂವಿಧಾನವು ೧೫ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರಿಗೆ ರಕ್ಷಣೆಯನ್ನು ಒದಗಿಸುತ್ತದೆ. ಆದರೆ ಸಾಮಾಜಿಕ
ದೂಷಣೆ ಮತ್ತು ತಾರತಮ್ಯವನ್ನು ಅವರು ಇನ್ನೂ ಎದುರಿಸಬೇಕಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯ ದುರ್ಬಳಕೆ ಮತ್ತು ತಪ್ಪು
ಪ್ರಕರಣಗಳನ್ನು ಹೂಡುವ ಬಗ್ಗೆ ಪ್ರಸ್ತಾಪಿಸಿದ ಪೀಠವು ’ಇದು ಜಾತಿ ವ್ಯವಸ್ಥೆಯಿಂದ ಆದದ್ದಲ್ಲ, ಮಾನವ ವೈಫಲ್ಯದಿಂದ
ಆದದ್ದು’ ಎಂದು
ಹೇಳಿತು. ಕಳೆದ ವರ್ಷ ಮಾರ್ಚ್ ೨೦ರಂದು ದ್ವಿಸದಸ್ಯ ಪೀಠವು ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಸೆಪ್ಟೆಂಬರ್ ೧೮ರ ವಿಚಾರಣೆ ಕಾಲದಲ್ಲಿ ಟೀಕಿಸಿ, ಸಂವಿಧಾನದ
ಆಶಯಕ್ಕೆ ವಿರುದ್ಧವಾಗಿ ತೀರ್ಪು ನೀಡಬಹುದೇ ಎಂದು ಪ್ರಶ್ನಿಸಿತ್ತು. ಕಾನೂನಿನ ವಿಧಿಗಳಿಗೆ ಸಂಬಂಧಿಸಿದಂತೆ ’ಸಮಾನತೆ
ತರುವ ಸಲುವಾಗಿ’ ತಾನು ಕೆಲವು ನಿರ್ದೇಶನಗಳನ್ನು ನೀಡಬಹುದು ಎಂಬ ಇಂಗಿತ ವ್ಯಕ್ತ ಪಡಿಸಿದ್ದ ಪೀಠ, ’ಸ್ವಾತಂತ್ರ್ಯ ಲಭಿಸಿದ ೭೦ಕ್ಕೂ ಹೆಚ್ಚು ವರ್ಷಗಳ ಬಳಿಕವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರು ತಾರತಮ್ಯ ಮತ್ತು ಅಸ್ಪೃಶ್ಯತೆಗಳಿಗೆ ಗುರಿಯಾಗುತ್ತಿದ್ದಾರೆ’ ಎಂದು
ಹೇಳಿತ್ತು. (ವಿವರಗಳಿಗಾಗಿಇಲ್ಲಿ ಕ್ಲಿಕ್ ಮಾಡಿರಿ)
2019: ಕೋಲ್ಕತ: ಅಸ್ಸಾಮಿನಲ್ಲಿ ಅನುಷ್ಠಾನಗೊಳಿಸಿರುವ ರೀತಿಯಲ್ಲೇ ಪಶ್ಚಿಮ ಬಂಗಾಳದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಜಾರಿ ಮಾಡಲಾಗುವುದು ಮತ್ತು ಪ್ರತಿಯೊಬ್ಬ ಅಕ್ರಮ ವಲಸಿಗನನ್ನೂ ದೇಶದಿಂದ ಹೊರಕ್ಕೆ ಅಟ್ಟಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ಅಕ್ಟೋಬರ್ 01ರ ಮಂಗಳವಾರ ಕೋಲ್ಕತದಲ್ಲಿ
ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರಚಂಡ ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರಿದ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ಗೃಹಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಶ್ಚಿಮ ಬಂಗಾಳಕ್ಕೆ ಇದೇ ಮೊದಲ ಭೇಟಿ ನೀಡಿರುವ ಅಮಿತ್ ಶಾ, ಕೋಲ್ಕತದ ನೇತಾಜಿ ಕ್ರೀಡಾಂಗಣದಲ್ಲಿ ಎನ್ಆರ್ಸಿ ಜಾಗರಣ ಅಭಿಯಾನವನ್ನು
ಉದ್ದೇಶಿಸಿ ಮಾತನಾಡಿದರು. ಪಶ್ಚಿಮಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪ್ರತಿಯೊಬ್ಬ ವಲಸಿಗರನ್ನು ಹೊರಹಾಕಲಾಗುವುದು ಎಂದು ಶಾ ಹೇಳಿದರು. ಆದರೆ
ರಾಜ್ಯದಲ್ಲಿ ಎನ್.ಆರ್.ಸಿ.ಯನ್ನು ಜಾರಿಗೊಳಿಸುವ
ಮೊದಲು ಹಿಂದೂ, ಸಿಖ್, ಜೈನ್ ಮತ್ತು ಬೌದ್ಧ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂಬ ಮಾಹಿತಿಯನ್ನೂ ಸಹ ಅಮಿತ್ ಶಾ
ಇದೇ ಸಂದರ್ಭದಲ್ಲಿ ನೀಡಿದರು. ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಎನ್.ಆರ್.ಸಿ. ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ, ಆದರೆ ಪ್ರತಿಯೊಬ್ಬ ಅಕ್ರಮ ವಲಸಿಗನನ್ನೂ ಈ ದೇಶದಿಂದ ಹೊರಹಾಕಲಾಗುವುದು
ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತಿದ್ದೇನೆ ಎಂದು ಅಮಿತ್ ಶಾ ಘೋಷಿಸಿದರು.ಈ
ಹಿಂದೆ ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರ್ಕಾರ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದ ಮಮತಾ ಬ್ಯಾನರ್ಜಿ ಅವರು ಅಕ್ರಮ ವಲಸಿಗರ ಗಡೀಪಾರಿಗೆ ಆಗ್ರಹಿಸಿದ್ದರು ಎಂಬ ವಿಚಾರವನ್ನು ಅಮಿತ್ ಶಾ ನೆನಪಿಸಿಕೊಂಡರು.. (ವಿವರಗಳಿಗಾಗಿಇಲ್ಲಿ ಕ್ಲಿಕ್ ಮಾಡಿರಿ)
2019: ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ 2019 ಅಕ್ಟೋಬರ್ 01ರ ಮಂಗಳವಾರ ನಡೆದು ಬಿಜೆಪಿಯ ಅಭ್ಯರ್ಥಿ ಎಂ ಗೌತಮ್ ಕುಮಾರ್ ಅವರು ನೂತನ ಮೇಯರ್ ಆಗಿಯೂ, ರಾಮಮೋಹನ್ ಅವರು ಉಪಮೇಯರ್ ಆಗಿಯೂ ಆಯ್ಕೆಯಾದರು. 129 ಮತ ಪಡೆಯುವ ಮೂಲಕ ಗೌತಮ್ ಕುಮಾರ್ ಸರಳ ಬಹುಮತ ಪಡೆದು ಆಯ್ಕೆಯಾದರು. ಅವರ ವಿರುದ್ಧ 110 ಮತಗಳು ಚಲಾವಣೆಗೊಂಡವು. ಕಾಂಗ್ರೆಸ್ ನ ಸತ್ಯನಾರಾಯಣ ಅವರ ಪರ 112 ಮತಗಳು ಚಲಾವಣೆಯಾದವು. ಹೀಗಾಗಿ ಮುಂದಿನ ಒಂದು ವರ್ಷಗಳ ಕಾಲ ಗೌತಮ್ ಕುಮಾರ್ ಮೇಯರ್ ಆಗಿ ಅಧಿಕಾರ ನಡೆಸಲಿದ್ದಾರೆ.ಬಿಬಿಎಂಪಿಯ ಉಪಮೇಯರ್ ಪಟ್ಟವೂ ಬಿಜೆಪಿ ಪಾಲಾಯಿತು. ಬೊಮ್ಮನಹಳ್ಳಿ ವಾರ್ಡಿನ ಬಿಜೆಪಿ ಸದಸ್ಯ ರಾಮಮೋಹನ್ ಅವರು ಉಪಮೇಯರ್ ಆಗಿ ಆಯ್ಕೆಯಾದರು. ರಾಮಮೋಹನ್ ಅವರ ಪರ 129 ಮತಗಳು ಮತ್ತು ವಿರುದ್ಧ 108 ಮತಗಳು ಚಲಾವಣೆಗೊಂಡವು. ಇವರ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ನ ಗಂಗಮ್ಮ ಪರ 116 ಮತಗಳು ಚಲಾವಣೆಗೊಂಡರೆ ವಿರುದ್ಧವಾಗಿ 120 ಮತಗಳು ಚಲಾವಣೆಯಾದವು.ಮೇಯರ್ ಸ್ಪರ್ಧೆಗೆ ಅಂತಿಮವಾಗಿ ಬಿಜೆಪಿಯಿಂದ ಜೋಗುಪಾಳ್ಯ ವಾರ್ಡ್ ನ ಗೌತಮ್ ಕುಮಾರ್ ಮತ್ತು ಕಾಂಗ್ರೆಸ್ ನಿಂದ ದತ್ತಾತ್ರೇಯ ವಾರ್ಡ್ ಕಾರ್ಪೋರೇಟರ್ ಸತ್ಯನಾರಾಯಣ ಕಣದಲ್ಲಿದ್ದರು. . (ವಿವರಗಳಿಗಾಗಿಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಗುರುನಾನಕ್
ಅವರ
೫೫೦ನೇ
ಜನ್ಮದಿನಾಚರಣೆಯ ಸಂದರ್ಭದಲ್ಲಿ ಕರ್ತಾರಪುರ ಕಾರಿಡಾರ್ ಉದ್ಘಾಟನಾ ಸಮಾರಂಭಕ್ಕೆ ಪಾಕಿಸ್ತಾನ ನೀಡಿದ ಆಹ್ವಾನವನ್ನು ಭಾರತದ ಮಾಜಿ ಪ್ರಧಾನಿ ಮನಮೋಹನ್
ಸಿಂಗ್ ಅವರು
ಸ್ವೀಕರಿಸುವುದಿಲ್ಲ
ಎಂದು ಕಾಂಗ್ರೆಸ್ ಮೂಲಗಳು 2019 ಅಕ್ಟೋಬರ್ 01ರ ಮಂಗಳವಾರ ದೃಢಪಡಿಸಿದವು. ನವೆಂಬರ್
೯ಕ್ಕೆ ನಿಗದಿಯಾಗಿರುವ ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲು ತಮ್ಮ ರಾಷ್ಟ್ರವು ತೀರ್ಮಾನಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ
ಅವರು ವಿಡಿಯೋ ಸಂದೇಶ ಒಂದರಲ್ಲಿ 2019 ಸೆಪ್ಟೆಂಬರ್ 30ರ ಸೋಮವಾರ
ತಿಳಿಸಿದ್ದರು. ‘ಕರ್ತಾರಪುರ ಕಾರಿಡಾರ್ ಉದ್ಘಾಟನೆಯು ದೊಡ್ಡ ಕಾರ್ಯಕ್ರಮವಾಗಿದ್ದು, ಪಾಕಿಸ್ತಾನವು ಇದಕ್ಕಾಗಿ ದೊಡ್ಡ ಪ್ರಮಾಣದ ಸಿದ್ಧತೆ ನಡೆಸುತ್ತಿದೆ. ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಮಂತ್ರಿಸಲು ನಾವು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಔಪಚಾರಿಕ ಪತ್ರವನ್ನು ಅವರಿಗೆ ಕಳುಹಿಸಲಿದ್ದೇವೆ. ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಗಾಗಿ ಕರ್ತಾರಪುರಕ್ಕೆ ಆಗಮಿಸುವ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ನಮಗೆ ಅತ್ಯಂತ ಸಂತಸವಿದೆ’
ಎಂದು ಖುರೇಶಿ ವಿಡಿಯೋದಲ್ಲಿ ತಿಳಿಸಿದ್ದರು. ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಿದೆ. ಈ ಕಾರಿಡಾರ್ ಭಾರತದ
ಸಿಖ್ ಯಾತ್ರಾರ್ಥಿಗಳಿಗೆ ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಗುರುನಾನಕ್ ಅವರ ಅಂತಿಮ ವಿಶ್ರಾಂತಿ ತಾಣಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ಖುರೇಶಿ ವಿಡಿಯೋದಲ್ಲಿ ಹೇಳಿದ್ದರು. . (ವಿವರಗಳಿಗಾಗಿಇಲ್ಲಿ ಕ್ಲಿಕ್ ಮಾಡಿರಿ)
2019:
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದತಿಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ.14ಕ್ಕೆ ಮುಂದೂಡಿತು. ಈದಿನ ಅರ್ಜಿಗಳ ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸಂವಿಧಾನ ಪೀಠ, ಅರ್ಜಿಗಳಿಗೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಆಡಳಿತಕ್ಕೆ 4 ವಾರಗಳ ಕಾಲಾವಕಾಶ ನೀಡಿತು. ಸರ್ಕಾರಕ್ಕೆ ಅಫಿದವಿತ್ ಸಲ್ಲಿಸಲು 2 ವಾರಕ್ಕಿಂತ ಹೆಚ್ಚು ಕಾಲಾವಕಾಶ ನೀಡಬಾರದು ಎಂಬ ಅರ್ಜಿದಾರರ ಮನವಿಯನ್ನು ಪೀಠ ತಿರಸ್ಕರಿಸಿತು. ಸರ್ಕಾರ ಪ್ರತಿ-ಅಫಿದವಿತ್ ಸಲ್ಲಿಸಿದ ಬಳಿಕ ಒಂದು ವಾರದೊಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಅರ್ಜಿದಾರ ರಿಗೂ ಸೂಚಿಸಿತು. ಅಲ್ಲದೆ, 370ನೇ ವಿಧಿಗೆ ಸಂಬಂಧಿಸಿ ಹೊಸದಾಗಿ ಯಾರೂ ಅರ್ಜಿ ಸಲ್ಲಿಸಬಾರದು ಎಂಬ ಆದೇಶವನ್ನೂ ನ್ಯಾಯಪೀಠ ನೀಡಿತು.
2019: ನವದೆಹಲಿ/ಜಮ್ಮು: ಸಶಸ್ತ್ರ ಭಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿಸಿ ಭಾರತದ ಮಣ್ಣಲ್ಲಿ ನೆತ್ತರ ಹೊಳೆ ಹರಿಸಲು ಪಾಕಿಸ್ತಾನ ಹವಣಿಸುತ್ತಿರುವ ನಡುವೆಯೇ ಅಂತಾರಾಷ್ಟ್ರೀಯ ಗಡಿಯಲ್ಲಿ ಬರೋಬ್ಬರಿ 20 ನುಸುಳು ಮಾರ್ಗಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಉಗ್ರರು ಒಳನುಸುಳಲು ಇದೇ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುವ ಕಾರಣ, ಈ ಎಲ್ಲ ಮಾರ್ಗಗಳಲ್ಲೂ ಬಹುಹಂತದ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿದವು. ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಈಗಾಗಲೇ ಸುಮಾರು 60 ಸಶಸ್ತ್ರ ಉಗ್ರರು ಭಾರತದೊಳಕ್ಕೆ ನುಸುಳಿದ್ದಾರೆ ಎಂದು ಹೇಳಲಾಗಿದ್ದು, ಇನ್ನೂ 20ರಷ್ಟು ನುಸುಳುಕೋರರು ದಕ್ಷಿಣ ಪೀರ್ ಪಾಂಚಾಲ್ ಪ್ರದೇಶದಲ್ಲಿ ನುಸುಳಲು ಸಿದ್ಧವಾಗಿದ್ದಾರೆ. ಇದರ ನಡುವೆಯೇ 20 ನುಸುಳು ಮಾರ್ಗಗಳು ಪತ್ತೆಯಾಗಿದ್ದು, ಉಗ್ರರು ದೇಶ ಪ್ರವೇಶಿಸದಂತೆ ತಡೆಯಲು ಈ ಎಲ್ಲ ಮಾರ್ಗಗಳಲ್ಲೂ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಮೂಲಗಳು ಹೇಳಿದವು. ಎಲ್ಲೆಲ್ಲಿವೆ ಈ ಮಾರ್ಗಗಳು?: ಕಥುವಾ, ಸಾಂಬಾ, ಜಮ್ಮು, ರಜೌರಿ, ಪೂಂಛ್, ಬಾರಾಮುಲ್ಲಾ, ಬಂಡಿಪೋರಾ ಮತ್ತು ಕುಪ್ವಾರಾ ಜಿಲ್ಲೆಗಳ ಎಲ್ಒಸಿ ಹಾಗೂ ಅಂತಾರಾಷ್ಟ್ರೀಯ ಗಡಿಗಳಲ್ಲಿ ಈ ನುಸುಳು ಮಾರ್ಗಗಳಿವೆ ಎಂದು ಮೂಲಗಳು ಹೇಳಿದವು. 2ರಿಂದ 3 ಹಂತದ ಭದ್ರತೆ: ನುಸುಳು ನಿಗ್ರಹ ವ್ಯವಸ್ಥೆ ಸೇರಿದಂತೆ ಎರಡರಿಂದ ಮೂರು ಹಂತದ ಭದ್ರತೆಯನ್ನು ಈ ಪ್ರದೇಶಗಳಲ್ಲಿ ಏರ್ಪಡಿಸಲಾಗಿದೆ. ಸೇನೆ ಮತ್ತು ಬಿಎಸ್ಎಫ್ನ ಭದ್ರತೆಯಲ್ಲದೆ, ಎಲ್ಒಸಿ ಮತ್ತು ಅಂತಾರಾಷ್ಟ್ರೀಯ ಗಡಿಯಾದ್ಯಂತ ಗ್ರಾಮ ರಕ್ಷಣಾ ಸಮಿತಿಗಳಿಗೆ ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿದವು.
ಇಂದಿನ ಇತಿಹಾಸ History Today ಅಕ್ಟೋಬರ್ 01 (2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment