ನಾನು ಮೆಚ್ಚಿದ ವಾಟ್ಸಪ್

Thursday, October 3, 2019

ಇಂದಿನ ಇತಿಹಾಸ History Today ಅಕ್ಟೋಬರ್ 03

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ್ದಕ್ಕೆ ಪ್ರತೀಕಾರದ ದಾಳಿ ನಡೆಸುವುದಾಗಿ ಜೈಶ್--ಮೊಹಮ್ಮದ್ (ಜೆಇಎಂ) ಬೆದರಿಕೆ ಹಾಕಿದ್ದನ್ನು ಅನುಸರಿಸಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶಾದ್ಯಂತ ೩೦ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು  2019 ಅಕ್ಟೋಬರ್ 03ರ ಗುರುವಾರ ಇಲ್ಲಿ ತಿಳಿಸಿದರು. ಇದರ ಜೊತೆಗೆ ನಾಲ್ವರು ಭಯೋತ್ಪಾದಕರು ಅಪಾರ ಶಸ್ತ್ರಾಸ್ತ್ರಗಳೊಂದಿಗೆ ದೆಹಲಿಗೆ ನುಗ್ಗಿದ್ದಾರೆ ಎಂಬ ಮಾಹಿತಿ ದೆಹಲಿ ಪೊಲೀಸರ ವಿಶೇಷ ಸೆಲ್ಗೆ  ಲಭಿಸಿದ್ದು, ರಾಜಧಾನಿಯಾದ್ಯಂತ ಜನನಿಬಿಡ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ  ಬೆಳಗ್ಗೆ ನಡೆದ ಸಭೆಯಲ್ಲೂ ಬಗ್ಗೆ ಚರ್ಚಿಸಲಾಗಿದೆ. ’ನಾವು ಕಟ್ಟೆಚ್ಚರದಿಂದ ಇದ್ದೇವೆ. ಸರ್ವ ರೀತಿಯ ಉಗ್ರ ನಿಗ್ರಹ ಕ್ರಮ ಕೈಗೊಳ್ಳಲಾಗಿದೆ. ಭಯ ಪಡಬೇಕಾದ ಅಗತ್ಯವಿಲ್ಲಎಂದು ಕೇಂದ್ರ ದೆಹಲಿ ಡಿಸಿಪಿ ಎಸ್.ರಾಂಧವ ಹೇಳಿದರು. ಜೈಶ್--ಮೊಹಮ್ಮದ್ ಸಂಘಟನೆಯ ಶಂಶೇರ್ ವಾನಿ ಎಂಬ ವ್ಯಕ್ತಿ ಹಿಂದಿಯಲ್ಲಿ ಟೈಪ್ ಮಾಡಲಾದ ಪತ್ರವೊಂದರಲ್ಲಿ ಬೆದರಿಕೆ ಹಾಕಿದ್ದಾನೆ ಎಂದು ನಾಗರಿಕ ವಿಮಾನಯಾನ ಭದ್ರತಾ ದಳದ (ಬ್ಯೂರೋ ಆಫ್ ಸಿವಿಲ್ ಏವಿಯೇಶನ್ ಸೆಕ್ಯುರಿಟಿ) ಅಧಿಕಾರಿಗಳು ಹೇಳಿದರು.  ‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸವಲತ್ತು ಒದಗಿಸಿದ್ದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ್ದಕ್ಕೆ ರಾಷ್ಟ್ರದ ಪ್ರಮುಖ ನಾಯಕರು, ರಾಜಕಾರಣಿಗಳನ್ನು ಗುರಿಯಾಗಿಟ್ಟುಕೊಂಡು ಸೇಡು ತೀರಿಸಲಾಗುವುದುಎಂದು ಪತ್ರದಲ್ಲಿ ಭಯೋತ್ಪಾದಕ ಸಂಸ್ಥೆ ಬೆದರಿಕೆ ಹಾಕಿತು. ಬೆದರಿಕೆ ಹಿನ್ನೆಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್ಎಫ್) ದೆಹಲಿ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ).
2019: ಜಮ್ಮು: ಎರಡು ತಿಂಗಳುಗಳಿಂದ ಬಂಧನದಲ್ಲಿ ಇರುವ ಕಾಶ್ಮೀರದ ನಾಯಕರನ್ನು ವಿಶ್ಲೇಷಣೆಯ ಬಳಿಕ ಒಬ್ಬರ ಬಳಿಕ ಒಬ್ಬರಂತೆ ಬಿಡುಗಡೆ ಮಾಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಸಲಹೆಗಾರರು  2019 ಅಕ್ಟೋಬರ್  03ರ ಗುರುವಾರ ಇಲ್ಲಿ ತಿಳಿಸಿದರು. ‘ಹೌದು, ವಿಶ್ಲೇಷಣೆಯ ಬಳಿಕ ಒಬ್ಬರ ಬಳಿಕ ಒಬ್ಬರಂತೆ ಅವರನ್ನು ಬಿಡುಗಡೆ ಮಾಡಲಾಗುವುದುಎಂದ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಸಲಹೆಗಾರ ಫರೂಖ್ ಖಾನ್ ಅವರು ಹೇಳಿದರು. ಜಮ್ಮು ಪ್ರದೇಶದ ನಾಯಕರನ್ನು ಬಿಡುಗಡೆ ಮಾಡಿದ ಬಳಿಕ ಕಾಶ್ಮೀರಿ ನಾಯಕರನ್ನು ಬಿಡುಗಡೆ ಮಾಡಲಾಗುವುದೇ ಎಂಬುದಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಖ್ ಅಬ್ದುಲ್ಲ ಮತ್ತು ಒಮರ್ ಅಬ್ದುಲ್ಲ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಜಮ್ಮು-ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸಿನ ನಾಯಕ ಸಜ್ಜದ್ ಗನಿ ಲೋನ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಆಗಸ್ಟ್ ೫ರಿಂದ ಗೃಹ ಬಂಧನದಲ್ಲಿ ಇದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯ ಚಟುವಟಿಕೆ ಹೆಚ್ಚಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾನ್ ಅವರುಯಾವುದೇ ಭಯೋತ್ಪಾದಕ ಹೆದರಿಕೆಗಾಗಿ ಇದನ್ನು ಮಾಡಿದ್ದಲ್ಲ. ಮುಂಜಾಗರೂಕತಾ ಕ್ರಮವಾಗಿ ಭದ್ರತಾ ಚಟುವಟಿಕೆಯನ್ನು ಹೆಚ್ಚಿಸಲಾಗಿದೆಎಂದು ಸ್ಪಷ್ಟ ಪಡಿಸಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ.)
2019: ನವದೆಹಲಿ:  ಮುಂದಿನ ತಿಂಗಳು ನಡೆಯಲಿರುವ ಕರ್ತಾರಪುರ ಸಾಹಿಬ್ ಕಾರಿಡಾರ್ ಉದ್ಘಾಟನಾ ಸಮಾರಂಭಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು, ಭಾರತದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪಾಲ್ಗೊಳ್ಳಲಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಂಬಂಧ ನೀಡಿರುವ ಆಹ್ವಾನವನ್ನು ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವೀಕರಿಸಿದ್ದಾರೆ. ಪಂಜಾಬ್ ರಾಜ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಅಮರೀಂದರ್ ಸಿಂಗ್ ಅವರು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿ ಮಾಡಿದ್ದರು. ಅಮರೀಂದರ್ ಸಿಂಗ್ ಅವರು ದೆಹಲಿಯಲ್ಲಿನ ಮನಮೋಹನ್ ಸಿಂಗ್ ಅವರ ಮನೆಗೆ ಭೇಟಿ ನೀಡಿ ನವೆಂಬರ್ ೯ರಂದು ಗಡಿಯಾಚೆ ನಡೆಯಲಿರುವ ಕರ್ತಾರಪುರ ಸಾಹಿಬ್ ಉದ್ಘಾಟನಾ ಸಮಾರಂಭದ ಸಲುವಾಗಿ ಶಸ್ತ್ರಧಾರಿ ಸಿಕ್ಖರಿಂದ ಕರ್ತಾರಪುರಕ್ಕೆ ಸಾಗಲಿರುವ ಮೊದಲ ಸರ್ವ ಪಕ್ಷಜಾಥಾದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಮಾಜಿ ಪ್ರಧಾನಿಯವರು ಆಹ್ವಾನವನ್ನು ಸ್ವೀಕರಿಸಿದರು ಎಂದು ಪಂಜಾಬ್ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ರವೀನ್ ಥುಕ್ರಾಲ್ ಅವರು ಟ್ವೀಟ್ ಮಾಡಿದರು. ಇದಕ್ಕೆ ಮೊದಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಬೇಕಾಗುತ್ತದೆ. ಶ್ರೀ ಗುರು ನಾನಕ್ ದೇವ್ ಅವರ ೫೫೦ನೇ ಪ್ರಕಾಶ ಪರ್ಬ್ ಅಂಗವಾಗಿ ಸುಲ್ತಾನಪುರ ಲೋಧಿಯಲ್ಲಿ ನಡೆಯಲಿರುವ ಮುಖ್ಯ ಸಮಾರಂಭದಲ್ಲೂ ಮನಮೋಹನ್ ಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರು ಹೇಳಿದರು. . (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ).
2019: ಪ್ಯಾರಿಸ್(ಫ್ರಾನ್ಸ್): ಪೊಲೀಸ್ ಕೇಂದ್ರ ಕಚೇರಿಗೆ ನುಗ್ಗಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಚೂರಿಯಿಂದ ಇರಿದು ಕೊಂದಿರುವ ಘಟನೆ ಫ್ರಾನ್ಸಿನ ಪ್ಯಾರಿಸ್ ನಗರದಲ್ಲಿ 2019 ಅಕ್ಟೋಬರ್ 03ರ ಗುರುವಾರ ನಡೆದಿದ್ದು,ಬಳಿಕ ಪೊಲೀಸ್ ಗುಂಡೇಟಿಗೆ ಹಂತಕ ಬಲಿಯಾದ  ಎಂದು ವರದಿ ತಿಳಿಸಿತು. ಕೇಂದ್ರ ಪ್ಯಾರಿಸ್ಸಿನ ಪೊಲೀಸ್ ಕೇಂದ್ರ ಕಚೇರಿಗೆ ನುಗ್ಗಿದ ಹಂತಕ ಪೊಲೀಸ್ ಅಧಿಕಾರಿಗಳನ್ನು ಇರಿದು ಹತ್ಯೆಗೈದ. ಆತ ಯಾವ ಕಾರಣಕ್ಕೆ ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ಬಹಿರಂಗಪಡಿಸಲಿಲ್ಲ. ಕೂಡಲೇ ನೋಟ್ರೆ-ಡಾಮೆ ಕ್ಯಾಥೆಡ್ರಲ್ ಹಾಗೂ ಇನ್ನಿತರ ಪ್ರಮುಖ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಾರ್ಯಾಚರಣೆ ನಡೆಸಿರುವುದಾಗಿ ಎಎಫ್ ಪಿ ವರದಿ ಮಾಡಿತು. ಕೋರ್ಟ್ ಯಾರ್ಡ್ ಬಿಲ್ಡಿಂಗ್ ಸಮೀಪ ಹಂತಕನನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದರು. ಘಟನೆಯಿಂದ ಕಂಗಾಲಾದ ಜನರು ಭೀತಿಗೊಳಗಾಗಿ ಕೂಗಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಎಎಫ್ ಪಿಗೆ ತಿಳಿಸಿದರು.


No comments:

Post a Comment