ನಾನು ಮೆಚ್ಚಿದ ವಾಟ್ಸಪ್

Friday, October 25, 2019

ಇಂದಿನ ಇತಿಹಾಸ History Today ಅಕ್ಟೋಬರ್ 25

2019: ನವದೆಹಲಿ: 90 ಸದಸ್ಯಬಲದ ಹರಿಯಾಣ ವಿಧಾನಸಭೆಯಲ್ಲಿ 10 ಸದಸ್ಯರನ್ನು ಹೊಂದಿರುವ ಜನನಾಯಕ ಜನತಾ ಪಕ್ಷ (ಜೆಜೆಪಿ)  ಹಾಗೂ 7 ಮಂದಿ ಪಕ್ಷೇತರರ ಬೆಂಬಲದೊಂದಿಗೆ ಎರಡನೇ ಅವಧಿಗೆ ಹರಿಯಾಣದ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕ ಮನೋಹರಲಾಲ್ ಖಟ್ಟರ್  2019 ಅಕ್ಟೋಬರ್ 25ರ ಶುಕ್ರವಾರ ಸಜ್ಜಾದರು. ಜೆಜೆಪಿ ನಾಯಕ ದುಷ್ಯಂತ ಚೌಟಾಲ ಜೊತೆಗೆ ಮೈತ್ರಿ ಸಾಧಿಸಿರುವ ವಿಷಯವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ದುಷ್ಯಂತ ಚೌಟಾಲ ಜೊತೆಗೇ ಪತ್ರಿಕಾಗೋಷ್ಠಿ ನಡೆಸಿದ ಶಾ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಹಾಗೂ ಪ್ರಾದೇಶಿಕ ಪಕ್ಷದಿಂದ  ಉಪ ಮುಖ್ಯಮಂತ್ರಿ ಇರುತ್ತಾರೆ ಎಂದು ಘೋಷಿಸಿದರು. ಇದಕ್ಕೆ ಮುನ್ನ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಶಾಸಕ ಅಭಯ್ ಚೌಟಾಲ, ಹರಿಯಾಣ ಲೋಕಹಿತ ಪಕ್ಷದ (ಎಚ್‌ಎಲ್‌ಪಿ) ಶಾಸಕ ಗೋಪಾಲ್ ಕಾಂಡ ಮತ್ತು ೭ ಮಂದಿ ಪಕ್ಷೇತರರ ಬೆಂಬಲದೊಂದಿಗೆ ಮತ್ತೆ ಹರಿಯಾಣದ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕ ಮನೋಹರ ಲಾಲ್ ಖಟ್ಟರ್ ಸಜ್ಜಾಗಿದ್ದರು. ಇದೇ ವೇಳೆಗೆ ತಮ್ಮ ಜನನಾಯಕ ಜನತಾ ಪಕ್ಷದ (ಜೆಜೆಪಿ) ನೂತನ ಶಾಸಕರ ಸಭೆ ನಡೆಸಿದ ಬಳಿಕ ’ಈಗಲೂ ಸ್ಥಿರ ಸರ್ಕಾರದ ಕೀಲಿ ಕೈ ಇರುವುದು ನಮ್ಮ ಕೈಯಲ್ಲೇ ಎಂಬುದಾಗಿ ಘೋಷಿಸಿರುವ ಜೆಜೆಪಿ ನಾಯಕ ದುಷ್ಯಂತ ಚೌಟಾಲ, ಚುನಾವಣೆಗೆ ಮುನ್ನ ನಾವು ಮುಂದಿಟ್ಟಿರುವ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಬೇಡಿಕೆ ಒಪ್ಪುವ ಯಾವುದೇ ಪಕ್ಷಕ್ಕೆ ನಮ್ಮ ಬೆಂಬಲ ಇದೆ ಎಂದು ಪ್ರಕಟಿಸಿದರು. ಬಳಿಕ ನಡೆದ ಬೆಳವಣಿಗೆಗಳಲ್ಲಿ ದುಷ್ಯಂತ ಚೌಟಾಲ ಬಿಜೆಪಿ ಜೊತೆಗೆ ಕೈಜೋಡಿಸುವ ನಿರ್ಧಾರ ಕೈಗೊಂಡರು.ದೆಹಲಿಯಲ್ಲಿ ಪಕ್ಷದ ವರಿಷ್ಠ ನಾಯಕರ ಜೊತೆ ಶುಕ್ರವಾರ ಸಮಾಲೋಚನೆ ನಡೆಸಿರುವ ಮನೋಹರ ಲಾಲ್ ಖಟ್ಟರ್ ಅವರು ಬೆಂಬಲ ನೀಡಲು ಮುಂದೆ ಬಂದಿರುವ ೭ ಮಂದಿ ಶಾಸಕರು ಮತ್ತು ಪಕ್ಷದ ನಾಯಕತ್ವದ ಜೊತೆಗೆ ಜಂಟಿ ಮಾತುಕತೆಗಳನ್ನು ನಡೆಸಿ ಚಂಡೀಗಢದಲ್ಲಿ ಶನಿವಾರ ಹಕ್ಕು ಮಂಡನೆಗೆ ಬೇಕಾದ ವಿಧಿ ವಿಧಾನಗಳನ್ನು ಪೂರೈಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ವೆಚ್ಚ ಇಲಾಖಾ ಕಾರ್ಯದರ್ಶಿ ಗಿರೀಶ ಚಂದ್ರ ಮುರ್ಮು ಅವರನ್ನು ಕೇಂದ್ರ ಸರ್ಕಾರವು 2019 ಅಕ್ಟೋಬರ್ 25 ಶುಕ್ರವಾರ ನೇಮಕ ಮಾಡಿತು. ಮಾಜಿ ರಕ್ಷಣಾ ಕಾರ್ಯದರ್ಶಿ ರಾಧಾ ಕೃಷ್ಣ ಮಾಥುರ್ ಅವರನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಯಿತು. ಜಮ್ಮು ಮತ್ತು ಕಾಶ್ಮೀರದ ಹಾಲಿ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರನ್ನು ಗೋವಾ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಯಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಎರಡು ತಿಂಗಳುಗಳ ಬಳಿಕ ಈ ಬದಲಾವಣೆಯನ್ನು ಕೇಂದ್ರವು ಮಾಡಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ/ ಮುಂಬೈ: ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ೨೪ ಗಂಟೆಗಳು ಕಳೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಹೂರ್ತ ಕೂಡಿ ಬಂದಿಲ್ಲ. ಅಧಿಕಾರ ಹಂಚಿಕೆಯಲ್ಲಿ ೫೦:೫೦ ಸೂತ್ರಕ್ಕಾಗಿ ಪಟ್ಟು ಹಿಡಿದಿರುವ ಮಿತ್ರ ಪಕ್ಷ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆಗೆ ಸಂಧಾನ ಮಾತುಕತೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮುಂದಾಗಿದ್ದು, ಬಿಜೆಪಿಯ ಸಖ್ಯ ಮುರಿದರೆ ಶಿವಸೇನೆಗೆ ಬೆಂಬಲ ನೀಡುವ ಇಂಗಿತವನ್ನು ಕಾಂಗ್ರೆಸ್ ವ್ಯಕ್ತ ಪಡಿಸಿದೆ. ಇದರೊಂದಿಗೆ ಮಹಾರಾಷ್ಟ್ರದ ರಾಜಕೀಯ 2019 ಅಕ್ಟೋಬರ್ 25 ಶುಕ್ರವಾರ ಹೊಸ ’ತಿರುವು (ಟ್ವಿಸ್ಟ್) ಪಡೆಯಿತು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸರಳ ಬಹುಮತ ಪಡೆದಿದ್ದರೂ, ಬಿಜೆಪಿಯ ಗಮನಾರ್ಹ ಸಂಖ್ಯೆಯಲ್ಲಿ  ಸ್ಥಾನಗಳನ್ನು ಕಳೆದು ಕೊಂಡಿರುವುದರ ಲಾಭ ಪಡೆದಿರುವ ಶಿವಸೇನಾ ಮುಖ್ಯಸ್ಥರು ಗುರುವಾರವೇ ’ತರಾತುರಿಯಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡುವುದಿಲ್ಲ. ಸರ್ಕಾರ ರಚನೆಗೆ ಮುನ್ನ ಬಿಜೆಪಿಯ ದೆಹಲಿ ವರಿಷ್ಠರ ಜೊತೆಗೆ ಮಾತುಕತೆ ನಡೆಸಬೇಕಾಗಿದೆ ಎಂದು ಹೇಳುವ ಮೂಲಕ ಮಿತ್ರ ಪಕ್ಷಕ್ಕೆ ಸಂದೇಶ ರವಾನಿಸಿದ್ದರು. ಈ ಮಧ್ಯೆ, ಬಿಜೆಪಿ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪಕ್ಷವು ಹಲವಾರು ಪಕ್ಷೇತರ ಶಾಸಕರ ಜೊತೆಗೆ ಸಂಪರ್ಕದಲ್ಲಿ ಇರುವುದಾಗಿ ಪ್ರಕಟಿಸಿದ್ದರು. ಬಿಜೆಪಿ ಸಂಸದೀಯ ಮಂಡಳಿಯು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಜೊತೆಗೆ ಮೈತ್ರಿ ಸರ್ಕಾರದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಲು ಈದಿನ ಅಧಿಕಾರ ನೀಡಿತು. ಹೀಗಾಗಿ ಉದ್ಧವ್ ಠಾಕ್ರೆ ಜೊತೆಗೆ ಅಮಿತ್ ಶಾ ಸಂಧಾನ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿದವು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ: ಹರಿಯಾಣದಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿಗೆ ಭೇಷರತ್ ಬೆಂಬಲ ಘೋಷಿಸಿದ್ದ ವಿವಾದಾತ್ಮಕ ಶಾಸಕ ಗೋಪಾಲ್ ಕಾಂಡಾ ಬೆಂಬಲ ಪಡೆಯಲು ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಂಡಾ ಅವರನ್ನು ಬದಿಗಿಟ್ಟು ೧೦ ಶಾಸಕರನ್ನು ಹೊಂದಿರುವ ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ಪಕ್ಷದ (ಜೆಪಿಪಿ) ಜೊತೆಗೆ ಮೈತ್ರಿಯನ್ನು ಪ್ರಕಟಿಸಬಹುದು ಎಂದು ಸುದ್ದಿ ಮೂಲಗಳು ತಿಳಿಸಿದವು.  ಹರಿಯಾಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣದ ಸೂಚನೆ ಸಿಗುತ್ತಿದ್ದಂತೆಯೇ ಗೋಪಾಲ್ ಕಾಂಡಾ ಮತ್ತು ಇನ್ನೊಬ್ಬ ಪಕ್ಷೇತರ ಶಾಸಕ  ಜೊತೆಗೆ ಬಿಜೆಪಿ ಸಂಸದರೊಬ್ಬರ ಜೊತೆಗೆ ದೆಹಲಿಗೆ ವಿಮಾನದಲ್ಲಿ ತೆರಳಿ ಬಿಜೆಪಿ ವರಿಷ್ಠರ ಜೊತೆಗೆ ಮಾತುಕತೆ ನಡೆಸಿದ್ದರು. ಉನ್ನತ ನಾಯಕರ ಜೊತೆಗಿನ ಮಾತುಕತೆಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಳ್ಳುತ್ತಿದ್ದಂತೆಯೇ, ಗೋಪಾಲ್ ಕಾಂಡಾ ಬೆಂಬಲ ಪಡೆಯುವ ಬಗ್ಗೆ ವಿರೋಧಿ ಕಾಂಗ್ರೆಸ್ ಮಾತ್ರವಲ್ಲದೆ ಪಕ್ಷದ ಒಳಗೂ ವಿರೋಧ ವ್ಯಕ್ತವಾಗತೊಡಗಿತ್ತು. 2019 ಅಕ್ಟೋಬರ್ 25 ಶುಕ್ರವಾರ ಬೆಳಗ್ಗೆ ಕಾಂಡಾ ಅವರು ತಮ್ಮ ಕುಟುಂಬವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಗೆ ಆಳವಾದ ಸಂಪರ್ಕವನ್ನು ಹೊಂದಿದೆ ಎಂದು ಹೇಳಿದ್ದಲ್ಲದೆ, ಇತರ ಏಳು ಪಕ್ಷೇತರ ಶಾಸಕರೂ ಬಿಜೆಪಿಗೆ ಭೇಷರತ್ ಬೆಂಬಲ ನೀಡುವರು ಎಂದು ಪ್ರಕಟಿಸಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಬ್ರೆಜಿಲ್: ಬ್ರೆಜಿಲ್ ಗೆ ಭೇಟಿ ನೀಡುವ ಚೀನಾ ಮತ್ತು ಭಾರತೀಯ ಪ್ರವಾಸಿಗರನ್ನು ಒಳಗೊಂಡಂತೆ ಉದ್ಯಮಿಗಳಿಗೆ ವೀಸಾ ಕಡ್ಡಾಯ ಇಲ್ಲ. ಕಳೆದ 10 ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿರುವ ಬೋಲ್ಸನಾರೊ 2019 ಅಕ್ಟೋಬರ್ 25 ಶುಕ್ರವಾರ ಕುರಿತಾಗಿ ಅಧಿಕೃತ ಘೋಷಣೆ ಮಾಡಿದ್ದು, ಅಭಿವೃದ್ಧಿ ಹೊಂದಿದ ದೇಶಗಳ ಪ್ರವಾಸಿಗರಿಗೆ ಹಾಗೂ ವ್ಯವಹಾರ  ನಿಮಿತ್ತ ಪ್ರಯಾಣ ಮಾಡುವವರಿಗೆ ವೀಸಾ ಇಲ್ಲದೇ ದೇಶಕ್ಕೆ ಪ್ರವೇಶಾತಿಯನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.  ವರ್ಷದ ಆರಂಭದಲ್ಲಿ ಅಮೆರಿಕ, ಕೆನಡಾ, ಜಪಾನ್ ಮತ್ತು ಆಸ್ಟ್ರೇಲಿಯಾದ ಪ್ರವಾಸಿಗರಿಗೆ ಹಾಗೂ ಉದ್ಯಮಿಗಳಿಗೆ ವೀಸಾ ಕಡ್ಡಾಯ ಪದ್ದತಿಯನ್ನು ಬ್ರೆಜಿಲ್ ಸರಕಾರ ಕೊನೆಗೊಳಿಸಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

ಮುಂಬೈ: ದ್ರೌಪದಿಯ ದೃಷ್ಟಿಕೋನದಿಂದಮಹಾಭಾರತ ನಿರ್ಮಾಣವಾಗಲಿದ್ದು, ನಟಿ ದೀಪಿಕಾ ಪಡುಕೋಣೆ ಕೇಂದ್ರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ನಿರ್ಮಾಪಕ ಮಧು ಮಂತೇನಾ ಅವರೊಂದಿಗೆ ಕೈಜೋಡಿಸಿದ್ದಾರೆ ಮತ್ತು ಚಿತ್ರವನ್ನು ಸಹ ನಿರ್ಮಿಸಲಿದ್ದಾರೆ.ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಜೀವನದಿಂದ ಪ್ರೇರಿತವಾದ "ಛಪಾಕ್" ಚಿತ್ರದೊಂದಿಗೆ ದೀಪಿಕಾ ನಿರ್ಮಾಪಕರಾಗಿದ್ದಾರೆ. ಅವರ ಎರಡನೆಯ ನಿರ್ಮಾಣವಾದ "ಮಹಾಭಾರತ" ದ್ರೌಪದಿಯ ಕಣ್ಣುಗಳ ಮೂಲಕ ಕಾಣಿಸಲಿದ್ದು, ಇದು ಪೌರಾಣಿಕ ಕಥೆಯನ್ನು ಹೊಸದಾಗಿ ತೆರೆಯಲಿದೆ."ದ್ರೌಪದಿಯ ಪಾತ್ರವನ್ನು ವಹಿಸುವುದಕ್ಕಾಗಿ ನಾನು ರೋಮಾಂಚನಗೊಂಡಿದ್ದೇನೆ ಮತ್ತು ಗೌರವಿಸಲ್ಪಟ್ಟಿದ್ದೇನೆ. ನಿಜವಾಗಿಯೂ  ಇದು ಜೀವಮಾನದ ಪಾತ್ರ ಎಂದು ನಾನು ನಂಬುತ್ತೇನೆ. ‘ಮಹಾಭಾರತಪೌರಾಣಿಕ ಕಥೆಗಳು ಮತ್ತು ಸಾಂಸ್ಕೃತಿಕ ಪ್ರಭಾವದ ಹಿನ್ನೆಲೆಯಲ್ಲಿ  ಜನಪ್ರಿಯವಾಗಿದೆ, ಜೀವನದ ಅನೇಕ ಪಾಠಗಳು ಸಹಮಹಾಭಾರತದಿಂದ ಹುಟ್ಟಿಕೊಂಡಿವೆ, ಆದರೆ ಅವೆಲ್ಲವೂ ಹೆಚ್ಚಾಗಿ ಅದರ ಪುರುಷರಿಂದ ಹುಟ್ಟಿಕೊಂಡವುಗಳು. ಪಾತ್ರವನ್ನು ಹೊಸ ದೃಷ್ಟಿಕೋನದಿಂದ ಹೇಳುವುದು ಆಸಕ್ತಿದಾಯಕವಷ್ಟೇ ಅಲ್ಲ ಮಹತ್ವ ಪೂರ್ಣ ಕೂಡಾ"ಎಂದು ದೀಪಿಕಾ ಹೇಳಿದ್ದಾರೆ.‘ಮಹಾಭಾರತವನ್ನು ಸರಣಿಗಳಾಗಿ ನಿರ್ಮಿಸಲಾಗುವುದು.  ಮೊದಲನೆಯದು 2021 ದೀಪಾವಳಿ ವೇಳೆಗೆ  ಬಿಡುಗಡೆಯಾಗಲಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)



No comments:

Post a Comment