2019: ನವದೆಹಲಿ/ ಅಯೋಧ್ಯೆ:
ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿನ ’ರಾಮ್ ಕಿ ಪೈದಿ’2019 ಅಕ್ಟೋಬರ್ 26ರ ಶನಿವಾರ
ಬೆಳಕಿನ ಹಬ್ಬವಾದ ’ದೀಪೋತ್ಸವ’ದಲ್ಲಿ ೫ ಲಕ್ಷಕ್ಕೂ ಹೆಚ್ಚು
ಮಣ್ಣಿನ ಹಣತೆಗಳ ದೀಪಗಳ ಬೆಳಕಿನಲ್ಲಿ ಝಗಮಗಿಸಿತು. ಇದರೊಂದಿಗೆ ಹೊಸ ಗಿನ್ನೆಸ್ ವಿಶ್ವದಾಖಲೆಯೂ
ಸೃಷ್ಟಿಯಾಯಿತು. ರಾಜ್ಯದ ಬಿಜೆಪಿ
ಸರ್ಕಾರವು ಆಯೋಜಿಸಿದ ದೀಪೋತ್ಸವದ ಅಂಗವಾಗಿ ಅಯೋಧ್ಯೆಯನ್ನು ಝಗಮಗಿಸುವಂತೆ ಮಾಡಿದ ಈ ಸಂಭ್ರಮಕ್ಕೆ ಮುಖ್ಯಮಂತ್ರಿ
ಯೋಗಿ ಆದಿತ್ಯನಾಥ್ ಸಾಕ್ಷಿಯಾದರು. ಈ ವರ್ಷದ ದೀಪೋತ್ಸವದಲ್ಲಿ
ಫಿಜಿಯ ಸಚಿವೆ ವೀಣಾ ಭಟ್ನಾಗರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮೊದಲ ಹಣತೆಯನ್ನು ಬೆಳಗಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ರಾಜ್ಯ ಸರ್ಕಾರದ ಹಲವಾರು ಸಚಿವರು ಈ ಸಂದರ್ಭದಲ್ಲಿ ಹಾಜರಿದ್ದರು.
‘ಲಕ್ಷ ದೀಪೋತ್ಸವ’ವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ರಾಮ್ ಕಿ ಪೈದಿಯಲ್ಲಿ ಜಮಾಯಿಸಿದ್ದರು.
ಭಾರತೀಯ ಮೂಲದವರಾದ ಫಿಜಿಯ ಮಹಿಳೆಯರು, ಮಕ್ಕಳು ಮತ್ತು ದಾರಿದ್ರ್ಯ ನಿವಾರಣಾ ಸಹಾಯಕ ಸಚಿವೆ ವೀಣಾ ಭಟ್ನಾಗರ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶುಕ್ರವಾರ ಸಂಜೆಯೇ ಲಕ್ನೋ ತಲುಪಿದ್ದರು. ಈ ಸಂದರ್ಭದಲ್ಲಿ ಅವರು
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದರು. ೨೦೧೭ರ
ಮಾರ್ಚ್ ತಿಂಗಳಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದ ೭ ತಿಂಗಳ ಬಳಿಕ,
ಯೋಗಿ ಆದಿತ್ಯನಾಥ್ ಸರ್ಕಾರವು ೨೦೧೭ರ ಅಕ್ಟೋಬರಿನಲ್ಲಿ ಮೊತ್ತ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಆಚರಿಸಿತ್ತು. ಕಳೆದ ವರ್ಷವೂ ದೀಪೋತ್ಸವ ನಡೆದಿತ್ತು. ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜುಂಗ್-ಸೂಕ್ ಅವರು ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷ ೩೦೦,೧೫೨ ಹಣತೆಗಳನ್ನು ಬೆಳಗುವ ಮೂಲಕ ವಿಶ್ವದಾಖಲೆ ಸ್ಥಾಪಿಸಲಾಗಿತ್ತು. ಈ ವರ್ಷ ಈ
ದಾಖಲೆಯನ್ನು ಮುರಿದು ಹೊಸ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸುವ ಸಲುವಾಗಿ ಜಿಲ್ಲಾ ಆಡಳಿತವು ೫,೫೧,೦೦೦
ಮಣ್ಣಿನ ಹಣತೆಗಳನ್ನು ಬೆಳಗುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಯೋಜನೆಯ ಪ್ರಕಾರ ರಾಮ್ ಕಿ ಪೈದಿಯಲ್ಲಿ ಸುಮಾರು
೪ ಲಕ್ಷ ಮತ್ತು ದೇಗುಲ ನಗರಿಯ ಇತರ ಕಡೆಗಳಲ್ಲಿ ಉಳಿದ ಹಣತೆಗಳನ್ನು ಬೆಳಗಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸರಳ ಬಹುಮತ ಪಡೆದಿದ್ದರೂ, ಶಿವಸೇನೆಯು ೫೦:೫೦ ಸೂತ್ರದಂತೆ
ಅಧಿಕಾರ ಹಂಚಿಕೆಗೆ ಬಿಗಿಪಟ್ಟು ಹಿಡಿದ ಪರಿಣಾಮವಾಗಿ ಸರ್ಕಾರ ರಚನೆ 2019 ಅಕ್ಟೋಬರ್ 26ರ ಶನಿವಾರವೂ
ಕಗ್ಗಂಟಾಗಿಯೇ ಮುಂದುವರೆಯಿತು. ಈ ಮಧ್ಯೆ ಬಿಜೆಪಿಯು
ಶಾಸಕಾಂಗ ಪಕ್ಷದ ಸಭೆಯನ್ನು ದೀಪಾವಳಿ ಹಬ್ಬ ಮುಗಿದ ಬಳಿಕ ಅಕ್ಟೋಬರ್ ೩೦ರಂದು ನಡೆಸಲು ತೀರ್ಮಾನಿಸಿತು. ಹೀಗಾಗಿ ’ಮಹಾಸರ್ಕಾರ ರಚನೆ’ಯ ಕಗ್ಗಂಟು ಇನ್ನೂ
೪ ದಿನ ವಿಸ್ತರಿಸಿದಂತಾಯಿತು. ೫೦:೫೦ ಸೂತ್ರದ ಪ್ರಕಾರ
ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಬಗ್ಗೆ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯಬೇಕು ಎಂದು ಶಿವಸೇನಾ ಶಾಸಕರು 2019 ಅಕ್ಟೋಬರ್ 26ರ ಶನಿವಾರ
ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಗ್ರಹಿಸಿದರು. ಆದರೆ ಅಂತಿಮ ನಿರ್ಧಾರವನ್ನು ಠಾಕ್ರೆ ಅವರಿಗೆ ವಹಿಸಿದರು. ಶಿವಸೇನೆಯ
ಕೆಲವು ಶಾಸಕರು ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಬೇಕು ಎಂಬ ಪ್ರಸ್ತಾಪವನ್ನು ಬೆಂಬಲಿಸಿದರು, ಆದಾಗ್ಯೂ ಸರ್ಕಾರ ರಚನೆ ಕುರಿತ ಅಂತಿಮ ನಿರ್ಧಾರವನ್ನು ಉದ್ಧವ್ ಠಾಕ್ರೆಯವರಿಗೆ ಬಿಟ್ಟರು ಎಂದು ವರದಿಗಳು ತಿಳಿಸಿದವು. ಚುನಾವಣೆಯಲ್ಲಿ ಗೆದ್ದಿರುವ ೫೬ ಮಂದಿ ಶಿವಸೇನಾ
ಶಾಸಕರು ಶನಿವಾರ ಮುಂಬೈಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಅವರ ಮಾತೋಶ್ರೀ ನಿವಾಸದಲ್ಲಿ ಭೇಟಿ ಮಾಡಿದರು ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರದ ಸಮಾನ ಹಂಚಿಕೆ ಒಪ್ಪಂದವನ್ನು
ಗೌರವಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯುವಂತೆ ಆಗ್ರಹಿಸಿದರು. ಈ ವರ್ಷ ಮೇ
ತಿಂಗಳಲ್ಲಿ ಲೋಕಸಭಾ ಚುನಾವಣೆ ಕಾಲದಲ್ಲಿ ಮೈತ್ರಿಕೂಟವು ಒಪ್ಪಿಕೊಳ್ಳಲಾಗಿತ್ತು ಎನ್ನಲಾಗಿರುವ ’ಮಹಾರಾಷ್ಟ್ರದಲ್ಲಿ ಅಧಿಕಾರದ ಸಮಾನ ಹಂಚಿಕೆ ಒಪ್ಪಂದ’ಕ್ಕೆ ಬದ್ಧವಾಗುವಂತೆ ಬಿಜೆಪಿಯನ್ನು ಆಗ್ರಹಿಸಬೇಕು ಎಂದು ಅವರು ಹೇಳಿದರು. ಬಿಜೆಪಿಯು ಒಪ್ಪಂದವನ್ನು ಗೌರವಿಸದೆ, ಅಕ್ಟೋಬರ್ ೨೧ರಂದು ನಡೆದ ಚುನಾವಣೆಯಲ್ಲಿ ವಿಧಾನಸಭೆಯ ೨೮೮ ಸ್ಥಾನಗಳ ಪೈಕಿ ಹೆಚ್ಚಿನ ಸ್ಥಾನಗಳಿಗೆ ಸ್ಪರ್ಧಿಸಿ, ಶಿವಸೇನೆಗೆ ಕೇವಲ ೧೨೪ ಸ್ಥಾನಗಳನ್ನು ಹೋರಾಟಕ್ಕಾಗಿ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯಬೇಕಾದ ಅಗತ್ಯ ಬಂದಿದೆ ಎಂದು ಸೇನಾ ಸಂಸತ್ ಸದಸ್ಯರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಹರಿಯಾಣ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರು ರಾಜ್ಯದಲ್ಲಿ
ಸರ್ಕಾರ ರಚಿಸುವಂತೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಶನಿವಾರ ಆಹ್ವಾನ ನೀಡಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕಾಂಗ ನಾಯಕ ಮನೋಹರ ಲಾಲ್ ಖಟ್ಟರ್ ಮುಖ್ಯಮಂತ್ರಿಯಾಗಿಯೂ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಷ್ಯಂತ ಚೌಟಾಲ ಅವರು ಉಪಮುಖ್ಯಮಂತ್ರಿಯಾಗಿಯೂ 2019 ಅಕ್ಟೋಬರ್ 27ರ ಭಾನುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ಪಕ್ಷದ (ಜೆಜೆಪಿ) ಬೆಂಬಲದೊಂದಿಗೆ ಬಿಜೆಪಿಯು ರಾಜ್ಯದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ ಬಳಿಕ ಈ ಸ್ವತಃ ಖಟ್ಟರ್
ಅವರು 2019 ಅಕ್ಟೋಬರ್ 26ರ ಶನಿವಾರ
ಈ ವಿಚಾರವನ್ನು ಪ್ರಕಟಿಸಿದರು. ‘ಹರಿಯಾಣ ರಾಜ್ಯಪಾಲರು ಭಾನುವಾರ ಸರ್ಕಾರ ರಚಿಸುವಂತೆ ನಮಗೆ ಆಹ್ವಾನ ನೀಡಿದ್ದಾರೆ’ ಎಂದು
ಖಟ್ಟರ್ ನುಡಿದರು. ದೀಪಾವಳಿ ಹಬ್ಬದ ದಿನವಾದ ಭಾನುವಾರ ಮಧ್ಯಾಹ್ನ ೨.೧೫ ಗಂಟೆಗೆ
ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಅವರು ನುಡಿದರು. ‘ಚೌಟಾಲ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ
ಸ್ವೀಕರಿಸುವರು. ಬಿಜೆಪಿಯ ೪೦, ಜೆಜೆಪಿಯ ೧೦ ಮತ್ತು ೭
ಮಂದಿ ಪಕ್ಷೇತರರು ಸೇರಿದಂತೆ ೫೭ ಶಾಸಕರು ಹರಿಯಾಣದಲ್ಲಿ
ಸರ್ಕಾರ ರಚನೆಗೆ ರಾಜ್ಯಪಾಲರ ಎದುರು ಹಕ್ಕು ಪ್ರತಿಪಾದನೆ ಮಾಡಿದ್ದಾರೆ’ ಎಂದು
ಖಟ್ಟರ್ ಹೇಳಿದರು. ‘ರಾಜ್ಯಪಾಲರು ಇದನ್ನು ಅಂಗೀಕರಿಸಿದ್ದು, ಭಾನುವಾರ ಸರ್ಕಾರ ರಚಿಸುವಂತೆ ನಮ್ಮನ್ನು ಆಹ್ವಾನಿಸಿದರು’ ಎಂದ
ಖಟ್ಟರ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ:
ಜಮ್ಮು-ಕಾಶ್ಮೀರದ ಶ್ರೀನಗರದ ಕರಣ್ ನಗರದಲ್ಲಿ 2019 ಅಕ್ಟೋಬರ್
26ರ ಶನಿವಾರ ಸಂಜೆ ಉಗ್ರರು ಕೇಂದ್ರೀಯಮೀಸಲು ಪಡೆಯ (ಸಿಆರ್ಪಿಎಫ್) ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ ಆರು ಸೈನಿಕರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು. ಸಿಆರ್ಪಿಎಫ್ನ 144ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ಸಂಜೆ 6.50ರ ಸಮಯದಲ್ಲಿ ಚೆಕ್ಪಾಯಿಂಟ್ ಬಳಿ ಸಿಆರ್ಪಿಎಫ್ ತಂಡದ ಮೇಲೆ ಈ ದಾಳಿ ನಡೆಯಿತು. ಗ್ರೆನೇಡ್ ಸ್ಫೋಟದಿಂದ ಸುತ್ತಮುತ್ತಲ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಉಗ್ರರ ದಾಳಿಗೆ ಭದ್ರತಾ ಪಡೆಯ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment