ನಾನು ಮೆಚ್ಚಿದ ವಾಟ್ಸಪ್

Thursday, October 17, 2019

ಇಂದಿನ ಇತಿಹಾಸ History Today ಅಕ್ಟೋಬರ್ 17

ನವದೆಹಲಿ: ದೆಹಲಿಯಿಂದ ಆಫ್ಘಾನಿಸ್ಥಾನದ ಕಾಬೂಲಿಗೆ  ೧೨೦ ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಪಾಕ್ ವಾಯುಪಡೆ  ಸೆಪ್ಟೆಂಬರ್ ೨೩ರಂದು ಅಡ್ಡಗಟ್ಟಿದ್ದ ಪ್ರಕರಣದ ತಡವಾಗಿ 2019 ಅಕ್ಟೋಬರ್  17ರ ಗುರುವಾರ ಬೆಳಕಿಗೆ ಬಂದಿತು. ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಅದನ್ನು ಪಾಕಿಸ್ತಾನದ ಗಡಿ ದಾಟುವವರೆಗೆ ಅದನ್ನು ಹಿಂಬಾಲಿಸಿದ್ದವು ಎಂದು ಮಾಧ್ಯಮವೊಂದು ವರದಿ ಮಾಡಿತು. ಸ್ಪೈಸ್ ಜೆಟ್ ಸಂಸ್ಥೆಯಬೋಯಿಂಗ್ ೭೩೭ ವಿಮಾನದಕರೆ ಸಂಕೇತ (ಕಾಲ್ ಸೈನ್) ವಿಚಾರದಲ್ಲಿ ಆದ ಗೊಂದಲದಿಂದಾಗಿ ಪಾಕ್ ವಾಯುಪಡೆ ತುರ್ತಾಗಿ ತನ್ನ ಯುದ್ಧ ವಿಮಾನಗಳನ್ನು ನಿಯೋಜಿಸಿತು ಎಂದು ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕರ ಕಚೇರಿ (ಡಿಜಿಸಿಎ) ಅಧಿಕಾರಿಗಳು ಹೇಳಿದರು. ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕ್ ವಾಯುಪಡೆಯ ಅತ್ಯಾಧುನಿಕ ಎಫ್-೧೬ ಯುದ್ಧವಿಮಾನಗಳು ಹಾರಾಟದ ಎತ್ತರ ತಗ್ಗಿಸುವಂತೆ ಸೂಚಿಸಿದವು. ನಂತರ ಸ್ಪೈಸ್ ಜೆಟ್ ವಿಮಾನದ ಪೈಲಟ್, ಇದು ವಾಣಿಜ್ಯ ವಿಮಾನ ಎಂದು ಪಾಕ್ ವಾಯುಪಡೆಯ ಪೈಲಟ್ಗಳಿಗೆ ಸ್ಪಷ್ಟಪಡಿಸಿದರು ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು. ಸ್ಪೈಸ್ ಜೆಟ್ ಪೈಲಟ್ ಸ್ಪಷ್ಟನೆಯ ಬಳಿಕ ವಿಮಾನಕ್ಕೆ ಹಾರಾಟ ಮುಂದುವರೆಸಲು ಪಾಕಿಸ್ತಾನ ಅನುಮತಿ ನೀಡಿತು. ಅಷ್ಟೇ ಅಲ್ಲ ವಿಮಾನವು ಪಾಕಿಸ್ತಾನದ ಗಡಿ ದಾಟುವವರೆಗೂ ಅದನ್ನು ಸುತ್ತುವರೆದಿತ್ತು ಎಂದು ಸುದ್ದಿ ಮೂಲಗಳು ಹೇಳಿವೆ. ಏನಿದ್ದರೂ ಘಟನೆಯ ಬಗ್ಗೆ ಸ್ಪೈಸ್ ಜೆಟ್  ಈವರೆಗೆ ಏನ್ನೂ ಹೇಳಿಲ್ಲ. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ: ರಾಜಕೀಯ ಮತ್ತು ಧಾರ್ಮಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ಅಯೋಧ್ಯಾ ರಾಮ ಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಮುಸ್ಲಿಂ ಕಕ್ಷಿದಾರರಲ್ಲಿ ಒಂದಾದ ಸುನ್ನಿ ವಕ್ಫ್ ಮಂಡಳಿಯ ವಕೀಲ ಶಾಹಿದ್ ರಿಜ್ವಿ ಅವರು ಸುಪ್ರೀಂಕೋರ್ಟಿನಿಂದ ನೇಮಕಗೊಂಡಿದ್ದ ತ್ರಿಸದಸ್ಯ ಸಂಧಾನ ಸಮಿತಿಯ ಮೂಲಕ ಹಿಂದೂಗಳಿಗೆ 2019 ಅಕ್ಟೋಬರ್ 16 ಬುಧವಾರ ರಾಜಿ ಪ್ರಸ್ತಾವ ಸಲ್ಲಿಸಿರುವುದನ್ನು 2019 ಅಕ್ಟೋಬರ್ 17 ಗುರುವಾರ ದೃಡ ಪಡಿಸಿದರು. ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದವನ್ನು ಬಗೆಹರಿಸಲು ಸುಪ್ರೀಂಕೋರ್ಟ್ ಪೀಠವು ನೇಮಕ ಮಾಡಿದ್ದ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಇಬ್ರಾಹಿಂ ಕಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಂಧಾನ ಸಮಿತಿಯ ಮೊಹರಾದ ಲಕೋಟೆಯಲ್ಲಿ ತನ್ನಇತ್ಯರ್ಥ ಪ್ರಸ್ತಾಪ ಒಳಗೊಂಡ ವರದಿಯನ್ನು ಹಿಂದಿನ ದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠಕ್ಕೆ ಸಲ್ಲಿಸಿತ್ತು. ಆಧ್ಯಾತ್ನಿಕ ಗುರು ಶ್ರೀ ಶ್ರೀ ರವಿಶಂಕರ ಮತ್ತು ಖ್ಯಾತ ಸಂಧಾನಕಾರ ವಕೀಲ ಶ್ರೀರಾಮ ಪಂಚು ಅವರು ಸಂಧಾನ ಸಮಿತಿಯ ಇತರ ಇಬ್ಬರು ಸದಸ್ಯರಾಗಿದ್ದಾರೆ. ಸಂಧಾನ ಪ್ರಸ್ತಾಪವು ಕೆಲವು ಹಿಂದೂಗಳು ಮತ್ತು ಮುಸ್ಲಿಮರ ನಡುವಣ  ಒಂದು ರೀತಿಯ ಇತ್ಯರ್ಥ ಎಂಬುದಾಗಿ ಮೂಲಗಳು ತಿಳಿಸಿದವು. ನ್ಯಾಯಾಲಯದ ಹೊರಗೆ, ಸಂಧಾನ ಸಮಿತಿಯ ಮುಂದೆ, ಕಕ್ಷಿದಾರರು ತಮ್ಮ ಸಲಹೆಗಳನ್ನು ಮುಂದಿಟ್ಟಿದ್ದಾರೆ. ನಾನು ಈಗ ಅವುಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಒಳ್ಳೆಯದು ಎಂದಿಗೂ ತಡವಾಗುವುದಿಲ್ಲ, ನೀವು ಕೆಲಸಗಳನ್ನು ಮಾಡಲು ಬಯಸಿದರೆ ಕೊನೆಯ ಕ್ಷಣದಲ್ಲಿಯೂ ಸಹ ನೀವು ಅವುಗಳನ್ನು ಮಾಡಬಹುದು ಎಂದು ಸುನ್ನಿ ವಕ್ಫ್ ಮಂಡಳಿಯ ಪರ ವಕೀಲ ಶಾಹಿದ್ ರಿಜ್ವಿ ಮಾಧ್ಯಮ ಒಂದರ ಜೊತೆಗೆ ಮಾತನಾಡುತ್ತಾ ತಿಳಿಸಿದರು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ: ಕರ್ನಾಟಕದ ಜಿಲ್ಲಾ ನ್ಯಾಯಾಧೀಶ ಪಿ. ಕೃಷ್ಣಭಟ್ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು.  ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರು ಮಾಡಿದ್ದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕಳೆದ ೪೪ ತಿಂಗಳುಗಳಿಂದ ಅವರ ಬಡ್ತಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ತಡೆ ಹಿಡಿದಿತ್ತು.  ಜಿಲ್ಲಾ ನ್ಯಾಯಾಧೀಶರ ವಿರುದ್ಧದ ಕಿರುಕುಳ ಆರೋಪವನ್ನು ಹಾಗೂ ಬಗ್ಗೆ ತನಿಖೆ ನಡೆಸಬೇಕೆಂಬ ಕೇಂದ್ರದ ಸಲಹೆಯನ್ನು ಕೊಲಿಜಿಯಂ  2019 ಅಕ್ಟೋಬರ್ 17ರ ಗುರುವಾರ ತಳ್ಳಿಹಾಕಿತು. ವಿಷಯವನ್ನು ಕೊಲಿಜಿಯಂಗೆ ಒಪ್ಪಿಸದೆ ಜಿಲ್ಲಾ ನ್ಯಾಯಾಧೀಶ ಪಿ. ಕೃಷ್ಣಭಟ್ ವಿರುದ್ಧ ತನಿಖೆಯನ್ನು  ನಡೆಸುವಂತೆ  ಕೋರುವ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ  ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಜೆ. ಚೆಲಮೇಶ್ವರ ಅವರು ಕೇಂದ್ರದ ಕಾನೂನು ಸಚಿವಾಲಯವನ್ನು ತರಾಟೆಗೆ ತೆಗೆದುಕೊಳ್ಳುವುದರೊಂದಿಗೆ ಪ್ರಕರಣವು ನ್ಯಾಯಾಂಗ ಮತ್ತು ಸರ್ಕಾರದ  ನಡುವೆ ಘರ್ಷಣೆಗೆ ಕಾರಣವಾಗಿತ್ತು. ನ್ಯಾಯಮೂರ್ತಿ ಚೆಲಮೇಶ್ವರ ಅವರು ೨೦೧೮ರಲ್ಲಿ ಬರೆದಿದ್ದ ಪತ್ರಕ್ಕೆ ಪ್ರತಿಯಾಗಿ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಅವರಿಗೆ ಪತ್ರ ಬರೆದು ಮಹಿಳಾ ನ್ಯಾಯಾಂಗ ಅಧಿಕಾರಿಯ ದೂರನ್ನು ಸಮರ್ಪಕವಾಗಿ ನಿಭಾಯಿಸಲಾಗಿಲ್ಲ ಎಂದು ಸೂಚಿಸಿದ್ದರು. ಏನಿದ್ದರೂ, ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಈಗ ಕೃಷ್ಣಭಟ್ ಅವರಿಗೆ ಬಡ್ತಿ ನೀಡುವುದರ ಪರ ಒಲವು ವ್ಯಕ್ತ ಪಡಿಸಿದ್ದು, ಬಡ್ತಿ ನೀಡುವಂತೆ  ಹಿಂದೆ ಮಾಡಿದ್ದ ತನ್ನ ಶಿಫಾರಸನ್ನು ಪುನರುಚ್ಚರಿಸುವ ಮೂಲಕ ಸರ್ಕಾರದ ಆಕ್ಷೇಪವನ್ನು  ತಳ್ಳಿಹಾಕಿತು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ:  ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಅಕ್ಟೋಬರ್ ೨೪ರವರೆಗೆ ವಶದಲ್ಲಿ ಇಟ್ಟುಕೊಂಡು ತನಿಖೆ ನಡೆಸಲು 2019 ಅಕ್ಟೋಬರ್ 17ರ ಗುರುವಾರ ಅನುಮತಿ ನೀಡಿದ ದೆಹಲಿ ನ್ಯಾಯಾಲಯವು ಅಲ್ಲಿಯವರೆಗೆ ಕಾಂಗ್ರೆಸ್ ನಾಯಕನನ್ನು ಜಾರಿ ನಿರ್ದೇಶನಾಲಯದ (ಇಡಿ) ವಶಕ್ಕೆ ಒಪ್ಪಿಸಿತು. ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಚಿದಂಬರಂ ಅವರನ್ನು ಪ್ರಶ್ನಿಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದರು ಮತ್ತು  ಜಾರಿ ನಿರ್ದೇಶನಾಲಯದ ವಶದಲ್ಲಿ ಇರುವಾಗ ಮನೆಯಲ್ಲೇ ತಯಾರು ಮಾಡಿದ ಆಹಾರ ನೀಡಲು, ಪಾಶ್ಚಾತ್ಯ ಶೌಚಾಲಯ ಬಳಕೆ ಮಾಡಲು ಮತ್ತು ಔಷಧಗಳನ್ನು ಪಡೆಯಲು ಅವಕಾಶ ನೀಡಿದರು. ತನಿಖಾ ಸಂಸ್ಥೆಯು ೭೪ರ ಹರೆಯದ ಹಿರಿಯ ಕಾಂಗ್ರೆಸ್ ನಾಯಕನನ್ನು ತನಿಖೆಯ ಸಲುವಾಗಿ ೧೪ ದಿನಗಳ ಕಾಲ ತನ್ನ ವಶಕ್ಕೆ ಒಪ್ಪಿಸುವಂತೆ ಕೋರಿತ್ತು. ನ್ಯಾಯಾಲಯವು ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ದಾಖಲಿಸಿದ ಪ್ರಕರಣದಲ್ಲಿ ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ಕೂಡಾ ಅಕ್ಟೋಬರ್ ೨೪ರವರೆಗೆ ವಿಸ್ತರಿಸಿತು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ:  ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ರಾಜ್ಯದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ದೆಹಲಿ ಹೈಕೋರ್ಟ್  2019 ಅಕ್ಟೋಬರ್ 17 ಗುರುವಾರ ಕಾಯ್ದಿರಿಸಿತು. ಉಭಯ ಕಡೆಯ ವಕೀಲರಿಂದ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ಅವರು ಜಾಮೀನು ಅರ್ಜಿ ಕುರಿತ ತೀರ್ಪನ್ನು ಕಾಯ್ದಿರಿಸಿದರು.  ಶಿವಕುಮಾರ್ ಅವರ ಜಾಮೀನು ಕೋರಿಕೆ ಅರ್ಜಿ ಮೇಲೆ ನಡೆದ ವಿಚಾರಣೆಯಲ್ಲಿ ಜಾರಿ ನಿರ್ದೇನಾಲಯದ (ಇಡಿ) ಪರವಾಗಿ ವಾದ ಮಂಡಿಸಿದ ವಕೀಲ ಕೆ.ಎಂ ನಟರಾಜ್ ಅವರು ಪ್ರಕರಣ ಗಂಭೀರವಾದುದಾಗಿದ್ದು, ಜಾಮೀನು ಸಿಕ್ಕಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ಪ್ರಕರಣ ಗಂಭೀರವಾಗಿದೆ, ಶಿವಕುಮಾರ್ ಅವರು ಅಕ್ರಮ ಆಸ್ತಿ ಗಳಿಕೆಯಲ್ಲಿ ವಿಶ್ವದಾಖಲೆ ಮಾಡಿದ್ದಾರೆ ಎಂದು ವಾದ ಮಂಡಿಸಿದ ನಟರಾಜ್, ಪ್ರಕರಣದ ಹಲವು ಆಯಾಮಗಳ ಕುರಿತಾದ ವಿವರಗಳನ್ನು ನ್ಯಾಯಮೂರ್ತಿಗಳ ಮುಂದೆ ತೆರೆದಿಟ್ಟರು. ಇದು ದೇಶದ ಆರ್ಥಿಕತೆಗೆ ಹೊಡೆತ ನೀಡಿದ ಪ್ರಕರಣವಾಗಿದ್ದು ಇದರಲ್ಲಿ ಆಳವಾದ ಷಡ್ಯಂತ್ರ ನಡೆದಿದೆ ಎಂದು ಅವರು ಹೇಳಿದರು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2019: ರಿಯಾದ್: ಮುಸ್ಲಿಂ ಪವಿತ್ರ ನಗರ ಮದೀನಾ ಬಳಿ ಖಾಸಗಿ ಬಸ್ಸೊಂದು ಭಾರೀ ವಾಹನವೊಂದಕ್ಕೆ (ಎಕ್ಸಕಾವೇಟರ್)  ಡಿಕ್ಕಿ ಹೊಡೆದ ಪರಿಣಾಮ 35 ವಿದೇಶಿಯರು  2019 ಅಕ್ಟೋಬರ್ 16ರ ಬುಧವಾರ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಸೌದಿ ಸರ್ಕಾರಿ ಮಾಧ್ಯಮ ತಿಳಿಸಿತು. ಪಶ್ಚಿಮ ಸೌದಿ ಅರೇಬಿಯಾ ನಗರದ ಬಳಿ "ಖಾಸಗಿ ಚಾರ್ಟರ್ಡ್ ಬಸ್  ಮತ್ತು ಭಾರೀ ವಾಹನ (ಲೋಡರ್)" ನಡುವೆ ಡಿಕ್ಕಿ ಸಂಭವಿಸಿದೆ ಎಂದು ಮದೀನಾ ಪೊಲೀಸರ ವಕ್ತಾರರು ಅಧಿಕೃತ ಸೌದಿ ಪತ್ರಿಕಾ ಸಂಸ್ಥೆಗೆ ತಿಳಿಸಿದರು. ಅಪಘಾತದಲ್ಲಿ ಸಿಕ್ಕಿಹಾಕಿಕೊಂಡವರು ಅರಬ್ ಮತ್ತು ಏಷ್ಯಾದ ಯಾತ್ರಿಕರು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದ ಬೆಂಕಿಯಿಂದ ಧಗದಗಿಸುತ್ತಿದ್ದ ಬಸ್ಸಿನ ಚಿತ್ರಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿದವು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)


No comments:

Post a Comment