2019: ಬೆಂಗಳೂರು: ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ (70) ವಯೋಸಹಜ ಅನಾರೋಗ್ಯದಿಂದ 2019 ಅಕ್ಟೋಬರ್ 11ರ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕದ್ರಿಯವರು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು, ಅದಕ್ಕೆ ಭಾರತೀಯ ಸಂಗೀತವನ್ನು ಕರಗತ ಮಾಡಿಸಿದವರಲ್ಲಿ ಕದ್ರಿ ಗೋಪಾಲನಾಥರು ಪ್ರಮುಖರು. ಬಾಲ್ಯದಿಂದಲೂ ಸಂಗೀತದಲ್ಲಿ ಒಲವು ಬೆಳೆಸಿಕೊಂಡ ಅವರಿಗೆ ತಂದೆಯೇ ಗುರುವಾಗಿದ್ದರು.ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಅರಸಿಬಂದಿದ್ದವು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಮಹಾಬಲಿಪುರಂ: ತಮಿಳುನಾಡಿನ ಮಹಾಬಲಿಪುರಂನ ೮ನೇ ಶತಮಾನದಷ್ಟು ಹಿಂದಿನ ದೇವಾಲಯ ಸಮುಚ್ಛಯದಲ್ಲಿ ಸುತ್ತಾಟ ನಡೆಸುವುದರೊಂದಿಗೆ ಚೀನೀ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅನೌಪಚಾರಿಕ ಶೃಂಗಸಭೆಗೆ 2019 ಅಕ್ಟೋಬರ್
11ರ ಶುಕ್ರವಾರ ಚಾಲನೆ
ನೀಡಿದರು. ಪ್ರಧಾನಿ
ಮೋದಿಯವರು ತಮಿಳುನಾಡಿನ ಪಾರಂಪರಿಕ ಉಡುಪಾದ ಬಿಳಿ ಅಂಗಿ (ಶರ್ಟ್) ಮತ್ತು ವೇಷ್ಠಿ ಹಾಗೂ ಹೆಗಲಿನ ಮೇಲೆ ಅಂಗವಸ್ತ್ರ ಧರಿಸಿದ್ದರೆ, ಕ್ಷಿ ಅವರು ಬಿಳಿ ಶರ್ಟ್ ಮತ್ತು ಕರಿಯ ಪ್ಯಾಂಟ್ ಧರಿಸಿ ಸಂಜೆ ೫ ಗಂಟೆಯಿಂದ ಸುಮಾರು
೪೫ ನಿಮಿಷಗಳ ಕಾಲ ದೇವಾಲಯ ಸಮುಚ್ಛಯದಲ್ಲಿ ಸುತ್ತಾಡಿದರು. ಚಾರಿತ್ರಿಕ ದೇಗುಲ ಸುತ್ತಾಟಕ್ಕೆ ಮುನ್ನ
ಉಭಯ ನಾಯಕರು ಹಸ್ತಲಾಘವ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಇದಕ್ಕೆ ಮುನ್ನ ಪ್ರಧಾನಿ
ಮೋದಿ ಅವರ ಜೊತೆಗೆ ಅನೌಪಚಾರಿಕ ಶೃಂಗಕ್ಕಾಗಿ ಆಗಮಿಸಿದ ಚೀನೀ ಅಧ್ಯಕ್ಷರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ಅನೌಪಚಾರಿಕ ಶೃಂಗಸಭೆಯಲ್ಲಿ ಕಾಶ್ಮೀರ ವಿಷಯದಲ್ಲಿ ಬಿಗಡಾಯಿಸಿರುವ ಬಾಂಧವ್ಯವನ್ನು ಮತ್ತು ಸಮತೋಲನಕ್ಕೆ ತರುವ ಯತ್ನ ನಡೆಯುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಯಿತು. ದೇಗುಲ ಸಮುಚ್ಛಯದಲ್ಲಿ ಮೋದಿ ಮತ್ತು ಕ್ಷಿ ಅವರು ಅರ್ಜುನನ ತಪಸ್ಸು, ಪಂಚರಥ ಮತ್ತು ಕರಾವಳಿ ದೇಗುಲ (ಶೋರ್ ಟೆಂಪಲ್) - ಈ ಮೂರು ತಾಣಗಳಿಗೆ
ಭಾಷಾಂತರಕಾರರು ಮತ್ತು ಭಾರತೀಯ ಪ್ರಾಕ್ತನ ಸಮೀಕ್ಷೆಯ ತಜ್ಞರೊಬ್ಬರನ್ನು ಮಾತ್ರ ತಮ್ಮ ಜೊತೆಗೆ ಇರಿಸಿಕೊಂಡು ಸುತ್ತಾಡಿದರು. ಭಾರತೀಯ ಪ್ರಾಕ್ತನ ಸಮೀಕ್ಷೆಗೆ ತಜ್ಞರು ಜಾಗತಿಕ ಪರಂಪರೆ ತಾಣದ ವಿವರಗಳನ್ನು ಉಭಯ ನಾಯಕರಿಗೆ ವಿವರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಫ್ರಾನ್ಸಿನಲ್ಲಿ ಡಸಾಲ್ಟ್ ಏವಿಯೇಷನ್ ಸಂಸ್ಥೆಯಿಂದ ತಾವು ಸ್ವೀಕರಿಸಿದ ಮೊದಲ ರಫೇಲ್ ಯುದ್ಧ ವಿಮಾನಕ್ಕೆ ’ಆಯುಧಪೂಜೆ’ ನೆರವೇರಿಸಿದ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವರ್ತನೆ ಬಗೆಗಿನ ಭಾರೀ ವಾಗ್ವಾದದ
ನಡುವೆಯೇ ಭಾರತಕ್ಕೆ ವಾಪಸಾಗಿರುವ ರಕ್ಷಣಾ ಸಚಿವರು ಟೀಕೆಗಳಿಗೆ ಪ್ರತ್ರಿಕ್ರಿಯಿಸಿ ’ನಾನು ಸೂಕ್ತ ಎಂಬುದಾಗಿ ಏನನ್ನು ನಂಬಿದ್ದೇನೋ ಅದನ್ನು ಮಾಡಿದ್ದೇನೆ’ ಎಂದು
2019 ಅಕ್ಟೋಬರ್
11ರ ಶುಕ್ರವಾರ ಸಮರ್ಥಿಸಿದರು. ‘ಯಾರಾದರೂ
ಒಬ್ಬರು ಪೂಜೆ ಮಾಡುವುದನ್ನು ಯಾರಾದರೂ ಆಕ್ಷೇಪಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ’ ಎಂದು
ಅವರು ನುಡಿದರು. ರಾಜನಾಥ್ ಸಿಂಗ್ ಅವರು ಪ್ರಾನ್ಸಿನ ಮೆರಿಗ್ನಾಕ್ನಲ್ಲಿ ವಿಜಯದಶಮಿಯ ದಿನ ೩೬ ಯುದ್ಧ ವಿಮಾನಗಳ
ಪೈಕಿ ಮೊದಲನೆಯ ವಿಮಾನವನ್ನು ಸ್ವೀಕರಿಸಿದ್ದರು. ಸಿಂಗ್ ಅವರು ವಿಮಾನಕ್ಕೆ ಓಂ ತಿಲಕವನ್ನು ಹಚ್ಚಿ
ಹೂ, ತೆಂಗಿನಕಾಯಿ ಸಮರ್ಪಿಸಿ ಆಯುಧ
ಪೂಜೆ ನೆರವೇರಿಸಿ ಬಳಿಕ ೩೫ ನಿಮಿಷಗಳ ಕಾಲ
ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಿಂಗ್ ಅವರ ಪೂಜೆಯನ್ನು ’ತಮಾಷೆ’ ಎಂಬುದಾಗಿ ಲೇವಡಿ ಮಾಡಿದ್ದರು. ಮಹಾರಾಷ್ಟ್ರ ಚುನಾವಣೆಯ ಹಿನ್ನೆಲೆಯಲ್ಲಿ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ರಫೇಲ್ ಆಯುಧ ಪೂಜೆಯ ಬಗ್ಗೆ ವ್ಯಂಗ್ಯವಾಡಿದ್ದರು ಮತ್ತು ತಮ್ಮ ಹೊಸ ಟ್ರಕ್ಗಳಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಕಟ್ಟಿ ಅವು ವಾಹನವನ್ನು ದುಷ್ಟರ ದೃಷ್ಟಿಯಿಂದ ರಕ್ಷಿಸುತ್ತವೆ ಎಂಬುದಾಗಿ ನಂಬುವ ಟ್ರಕ್ ಚಾಲಕರಿಗೆ ಕೇಂದ್ರ ಸಚಿವರನ್ನು ಹೋಲಿಸಿದ್ದರು. ತಮ್ಮ ಬಗ್ಗೆ ಬಂದಿರುವ ಹಲವಾರು ಟೀಕೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಮೃದು ಮಾತಿನ ಸಚಿವರು ’ಯಾವುದು ಸೂಕ್ತ ಎಂಬುದಾಗಿ
ನಾನು ನಂಬಿದ್ದೇನೋ ಅದನ್ನೇ ನಾನು ಮಾಡಿದ್ದೇನೆ. ಇದು ನಮ್ಮ ನಂಬಿಕೆ... ಮಹಾನ್ ಶಕ್ತಿಯೊಂದು ಇದೆ ಎಂದು ನಾನು ಬಾಲ್ಯದಿಂದಲೂ ನಂಬಿಕೊಂಡು ಬಂದಿದ್ದೇನೆ’ ಎಂದು
ಹೇಳುವ ಮೂಲಕ ತಮ್ಮ ವರ್ತನೆಯನ್ನು ಬಲವಾಗಿ ಸಮರ್ಥಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಓಸ್ಲೋ (ನಾರ್ವೆ):
ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರಿಗೆ ತಮ್ಮ ರಾಷ್ಟ್ರದ ಕಡುವಿರೋಧಿ ಎರಿಟ್ರಿಯಾ ಜೊತೆಗಿನ ಘರ್ಷಣೆಯನ್ನು ಕೊನೆಗೊಳಿಸುವಲ್ಲಿ ಮಾಡಿದ ಪ್ರಯತ್ನಗಳಿಗಾಗಿ ಪ್ರಸ್ತುತ ಸಾಲಿನ ನೊಬೆಲ್ ಶಾಂತಿ ಪಾರಿತೋಷಕವನ್ನು ಘೋಷಿಸಲಾಗಿದೆ ಎಂದು ನೊಬೆಲ್ ಸಮಿತಿಯು 2019 ಅಕ್ಟೋಬರ್ 11ರ ಶುಕ್ರವಾರ ಪ್ರಕಟಿಸಿತು. ‘ಶಾಂತಿ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಾಧನೆಗಾಗಿ ನಡೆಸಿದ ಪ್ರಯತ್ನಗಳಿಗಾಗಿ, ಅದರಲ್ಲೂ ನಿರ್ದಿಷ್ಟವಾಗಿ ನೆರೆಯ ಎರಿಟ್ರಿಯಾ ಜೊತೆಗಿನ ಗಡಿ ಘರ್ಷಣೆಯನ್ನು ಇತ್ಯರ್ಥ ಪಡಿಸಲು ನಡೆಸಿದ ನಿರ್ಣಾಯಕ ಉಪಕ್ರಕಮಕ್ಕಾಗಿ ಅಬಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ತೀರ್ಪುಗಾರರು ಹೇಳಿದರು. ೪೩ರ ಹರೆಯದ ಅಬಿ ಅವರು, ೨೦೧೮ರ ಏಪ್ರಿಲ್ನಲ್ಲಿ ಇಥಿಯೋಪಿಯಾದ ಪ್ರಧಾನಿಯಾದಂದಿನಿಂದ ತಮ್ಮ ದೇಶದ ಸಮಾಜದ ಚಲನಶೀಲತೆಯನ್ನು ಗಡಿಯಾಚೆಯವರೆಗೂ ಪುನರ್ರೂಪಿಸುವ ನಿಟ್ಟಿನ ನೀತಿಗಳನ್ನು ಜಾರಿಗೆ ತಂದಿದ್ದರು. ಪ್ರಧಾನಿಯಾಗಿ
ಪ್ರಮಾಣವಚನ ಸ್ವೀಕರಿಸಿದ ಕೇವಲ ೬ ತಿಂಗಳಲ್ಲಿ ಅಬಿ
ಅವರು ಕಡುವಿರೋಧಿ ಎರಿಟ್ರಿಯಾ ಜೊತೆಗೆ ಶಾಂತಿ ಸ್ಥಾಪನೆ ಮಾಡಿದರು ಮತ್ತು ಭಿನ್ನಮತೀಯರನ್ನು ಸೆರೆಮನೆಯಿಂದ ಬಿಡುಗಡೆ ಮಾಡಿ ಸರ್ಕಾರಿ ಕ್ರೂರತ್ವಕ್ಕಾಗಿ ಕ್ಷಮೆ ಯಾಚಿಸಿದರು ಮತ್ತು ತಮ್ಮ
ಪೂರ್ವಾಧಿಕಾರಿಗಳು ’ಭಯೋತ್ಪಾದಕರು’ ಎಂಬುದಾಗಿ
ಹಣೆಪಟ್ಟಿ ಹಚ್ಚಿ ದೇಶದಿಂದ ಗಡೀಪಾರು ಮಾಡಿದ್ದ ಸಶಸ್ತ್ರ ಗುಂಪುಗಳನ್ನು ಮರಳಿ ದೇಶಕ್ಕೆ ಬರುವಂತೆ ಸ್ವಾಗತಿಸಿದ್ದರು. ತೀರಾ ಇತ್ತೀಚೆಗೆ, ಮುಂದಿನ ಮೇ ತಿಂಗಳಿಗೆ ಚುನಾವಣೆ
ನಿಗದಿ ಪಡಿಸಿದ ಅವರು ಆರ್ಥಿಕತೆಯನ್ನು ಪುನರ್ರೂಪಿಸುವ ಬಗೆಗಿನ ತಮ್ಮ ದೃಷ್ಟಿಯನ್ನು ಪ್ರಕಟಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರನ್ನು ಬಂಧಿಸಿ ತನಿಖೆಗೆ ಗುರಿಪಡಿಸಲು ತಾನು ಬಯಸಿರುವುದಾಗಿ ಜಾರಿ ನಿರ್ದೇಶನಾಲಯವು ತಿಳಿಸಿದ್ದರ ಮೇರೆಗೆ ಕೇಂದ್ರದ ಮಾಜಿ ಹಣಕಾಸು ಸಚಿವರನ್ನು ಮುಂದಿನವಾರ ತನ್ನ
ಮುಂದೆ ಹಾಜರುಪಡಿಸುವಂತೆ ದೆಹಲಿಯ ವಿಶೇಷ ನ್ಯಾಯಾಲಯವು ತಿಹಾರ್ ಸೆರೆಮನೆ ಅಧಿಕಾರಿಗಳಿಗೆ 2019 ಅಕ್ಟೋಬರ್ 11ರ ಶುಕ್ರವಾರ ಆದೇಶ
ನೀಡಿತು. ಕೇಂದ್ರೀಯ ತನಿಖಾ ದಳವು (ಸಿಬಿಐ) ಎರಡು ವಾರಗಳ ಕಾಲ ಪ್ರಶ್ನಿಸಿದ ನಂತರ ಚಿದಂಬರಂ ಅವರನ್ನು ಆಗಸ್ಟ್ ೨೨ರಂದು ಬಂಧಿಸಿತ್ತು. ಬಳಿಕ ಅವರನ್ನು ತಿಹಾರ್ ಸೆರೆಮನೆಗೆ ಕಳುಹಿಸಲಾಗಿದ್ದು, ಅವರು ಅಂದಿನಿಂದ ಸೆರೆವಾಸದಲ್ಲಿದ್ದಾರೆ. ಶುಕ್ರವಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ವಿದೇಶಗಳಲ್ಲಿನ ನಕಲಿ ಕಂಪನಿಗಳ ವಿವರಗಳು ಮತ್ತು ೧೭ ಬ್ಯಾಂಕ್ ಖಾತೆಗಳನ್ನು
ಪಡೆಯಲು ಚಿದಂಬರಂ ಅವರನ್ನು ಕಸ್ಟಡಿ ತನಿಖೆಗೆ ಒಳಪಡಿಸಬೇಕಾಗಿದೆ ಎಂದು ಶುಕ್ರವಾರ ನ್ಯಾಯಾಲಯದಲ್ಲಿ ವಾದಿಸಿದರು. ಈ ಪ್ರಕರಣದಲ್ಲಿ ಕಸ್ಟಡಿ
ವಿಚಾರಣೆ ಅಗತ್ಯ ಎಂದು ಸುಪ್ರೀಂ ಕೋರ್ಟ್ ಸಹ ಅಭಿಪ್ರಾಯಪಟ್ಟಿದೆ ಎಂದು ಕೇಂದ್ರದ
ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ ಮೆಹ್ತ ನ್ಯಾಯಾಲಯಕ್ಕೆ ತಿಳಿಸಿದರು.
2019: ಮಾಸ್ಕೊ: 1960ರ ದಶಕದಲ್ಲಿಯೇ ಅಂತರಿಕ್ಷಯಾನ ಕೈಗೊಂಡು ಬಾಹ್ಯಾಕಾಶದಲ್ಲಿಮೊಟ್ಟ ಮೊದಲಬಾರಿಗೆ ನಡೆದಾಡಿದ (ಸ್ಪೇಸ್ವಾಕ್) ಹಿರಿಮೆ ಹೊಂದಿದ್ದ ಗಗನಯಾತ್ರಿ ಅಲೆಕ್ಸ್ ಲಿಯೋನೊವ್ (85) ಮಾಸ್ಕೊದಲ್ಲಿ 2019 ಅಕ್ಟೋಬರ್ 11ರ ಶುಕ್ರವಾರ ನಿಧನರಾದರು.
ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಾಸ್ಕೊದ ಬೊರ್ಡೆಂಕೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ರಷ್ಯಾದ ರಾಸ್ಕೊಮಾಸ್ ಸ್ಪೇಸ್ ಏಜೆನ್ಸಿ ತಿಳಿಸಿತು. ಅಂದಿನ ಸೋವಿಯತ್ ಒಕ್ಕೂಟವು 1965ರಲ್ಲಿ ವೊಸ್ಕ್ಹಾಡ್ 2 ಅಂತರಿಕ್ಷ ಯೋಜನೆ ಕೈಗೊಂಡಿತ್ತು. ಅದೇ ವರ್ಷದ ಮಾರ್ಚ್ 18ರಂದು ನೌಕೆಯಿಂದ ಹೊರಬಂದ ಲಿಯೋನೊವ್ ಸುಮಾರು 12 ನಿಮಿಷ ಸ್ಪೇಸ್ವಾಕ್ ಮಾಡಿದ್ದರು. ಇದೊಂದು ದಾಖಲೆಯಾಗಿ ಆಗ ವಿಶ್ವದಾದ್ಯಂತ ಗಮನ ಸೆಳೆದಿತ್ತು. ಲಿಯೋನೋವ್ ಮೂಲತಃ ರಷ್ಯಾದವರಾಗಿದ್ದರೂ, ಅಮೆರಿಕದಲ್ಲಿ ಕೂಡ ಗಣ್ಯ ವ್ಯಕ್ತಿ ಎನಿಸಿದ್ದರು.
No comments:
Post a Comment